ದೆಹಲಿಯಲ್ಲಿ ದುಡಿಯುತ್ತ ಒಟ್ಟಿಗಿರುವ ಮೂವರು ಗೆಳತಿಯರು - ಮೀನಲ್ (ತಾಪ್ಸಿ ಪನ್ನು), ಫಲಕ್ (ಕೀರ್ತಿ ಕುಲ್ಹಾರಿ) ಮತ್ತು ಆಂಡ್ರಿಯಾ (ಆಂಡ್ರಿಯಾ ತಾರಿಯಾಂಗ್). ಮೂವರೂ ಆಧುನಿಕ ಸಮಾಜದ ಸ್ವತಂತ್ರ ಯುವತಿಯರು. ಮೀನಲ್ ಈವೆಂಟ್ ಮ್ಯಾನೇಜರ್ ಅದರೆ, ಫಲಕ್ ಕಾರ್ಪೋರೆಟ್
ಕಂಪನಿಯ ಉದ್ಯೋಗಿ, ಆಂಡ್ರಿಯಾ ನೌಕರಿಯಲ್ಲಿರುವ ಮೇಘಾಲಯದ ಹುಡುಗಿ. ಒಂದು ರಾತ್ರಿ ಸೂರಜ್ ಕುಂಡ್ ನಲ್ಲಿ ರಾಕ್ ಸಂಗೀತ ಸಭೆಗೆ ಹೋಗಿ, ತಮಗೆ ಪರಿಚಿತನಿದ್ದ ಸ್ನೇಹಿತನ ಗೆಳೆಯರೊಂದಿಗೆ ಅವರ ಒತ್ತಾಯದ ಮೇರೆಗೆ ರೆಸಾರ್ಟ್ ಗೆ ಊಟಕ್ಕೆ ಹೋಗುತ್ತಾರೆ. ಒಟ್ಟಿಗೆ ಕುಳಿತು ಮಧ್ಯ ಸೇವಿಸುತ್ತಾರೆ, ಒಂದೆರಡು ನಾನ್-ವೆಜ್ ಜೋಕ್ ಗಳನ್ನು ಹಂಚಿಕೊಳ್ಳುತ್ತಾರೆ. ಹುಡುಗರಲ್ಲಿ ಒಬ್ಬನು ಮೀನಲ್ ಳನ್ನು ಲೈಂಗಿಕವಾಗಿ ಅತಿಕ್ರಮಿಸಲು ಪ್ರಯತ್ನಿಸಿದಾಗ ಅವಳು ಬೇಡ ಎಂದು ಪ್ರತಿರೋಧಿಸುವಳು. ಆವಳ ಪ್ರತಿರೋಧವನ್ನು ಲೆಕ್ಕಿಸದೇ ರಾಜ್ವೀರ್ ಮುಂದುವರಿದಾಗ ಒಂದು ಬಾಟಲ್ ತೆಗೆದು ಅವನ ತಲೆಗೆ ಹೊಡೆಯುತ್ತಾಳೆ.
ಅನಿರುದ್ಧ ರಾಯ್ ಚೌಧುರಿ ನಿರ್ದೇಶನದ 'ಪಿಂಕ್' ಒಂದು ಸ್ತರದಲ್ಲಿ ಈ ಘಟನೆಯ ಪರಾಮರ್ಶೆ ಎನ್ನಬಹುದು. ಘಟನೆಯ ನಂತರ ಹುಡುಗಿಯರ ಮೇಲೆ ನಡೆವ ಹಲ್ಲೆಗಳು, ಅವರನ್ನು ಮಾನಸಿಕವಾಗಿ ದುರ್ಬಲಗೊಳಿಸುವ ಪ್ರಯತ್ನಗಳು, ಹುಡುಗಿಯರನ್ನೇ ಆರೋಪಿಗಳಾಗಿಸಿ ನ್ಯಾಯಲಯಕ್ಕೆ ಕರೆತರುವುದು ಹಾಗೂ ನ್ಯಾಯಾಲಯದಲ್ಲಿ ನಡೆವ ವಾದ-ವಿವಾದಗಳು. ಆದರೆ ಮತ್ತೊಂದು ಸ್ತರದಲ್ಲಿ ಈ ಸಿನಿಮಾ ನಮ್ಮ ಸಂಕುಚಿತ ಸಾಮಾಜಿಕ ಆಲೋಚನೆಯನ್ನು ಪ್ರಶ್ನಿಸುವ ದಿಟ್ಟ ಪ್ರಯತ್ನ. ಬೇರೊಬ್ಬರು ತೊಟ್ಟ ಉಡುಗೆತೊಡುಗೆಗಳಿಂದ, ಅವರ ವೈಯಕ್ತಿಕ ಸಂಬಂಧಗಳಲ್ಲಿನ ಘರ್ಷಣೆಗಳಿಂದ, ವ್ಯಕ್ತಿ ಹೀಗೆ ಎಂದು ಪೂರ್ವನಿರ್ಧಾರಿತ ಅಭಿಪ್ರಾಯಗಳನ್ನು, ಪೂರ್ವಾಗ್ರಹಗಳನ್ನು ಬೆಳೆಸಿಕೊಳ್ಳುವ, ಅವರ ಚಾರಿತ್ರ್ಯವನ್ನು ಅಳೆವ ನಮ್ಮ ಆಲೋಚನೆಯ ಪರಿಯನ್ನು ಸಿನಿಮಾ ಸೂಕ್ಷ್ಮವಾಗಿ ಪ್ರಶ್ನಿಸುತ್ತದೆ.
ಹುಡುಗಿಯರ ಪರ ವಕೀಲನಾಗಿ ದೀಪಕ್ ಸೆಹಗಲ್ (ಅಮಿತಾಭ್ ಬಚ್ಚನ್) ಕೇಳುವ ಪ್ರಶ್ನೆಗಳು, ಮಂಡಿಸುವ ವಾದ ಸಿನಿಮಾದ ಹೈಲೈಟ್. ಹೆಣ್ಣಿನ ಕನ್ಯತ್ವ ಅವಳ ಸ್ವತಂತ್ರ ಆಯ್ಕೆ, ಆಕೆಯ ಕನ್ಯತ್ವಕ್ಕೂ ಚಾರಿತ್ರ್ಯದ ಪಾವಿತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ. ಹೆಣ್ಣೊಬ್ಬಳು ಬೇಡ ಎಂದರೆ ಅದು ಬೇಡವೆಂದೇ ಅರ್ಥ, ಇದಕ್ಕೆ ಯಾವುದೇ ವ್ಯಾಖ್ಯಾನ ಅಥವಾ ವಿವರಣೆ ಬೇಕಿರುವುದಿಲ್ಲ. ಅವಳ ನಿರಾಕರಣೆಯ ಆಯ್ಕೆಯನ್ನು ಗೌರವಿಸುವಲ್ಲಿ ಅವಳ ಚಾರಿತ್ರ್ಯದ ಕುರಿತಾದ, ಪಾವಿತ್ರ್ಯದ ಕುರಿತಾದ ಇತರೇ ಯಾವುದೇ ಪ್ರಶ್ನೆಗಳು - ಅಭಿಪ್ರಾಯಗಳು ಅಪ್ರಸ್ತುತವೆಂದು ನೇರವಾಗಿ, ಸ್ಪಷ್ಟವಾಗಿ, ದಿಟ್ಟವಾಗಿ ಸಿನಿಮಾ ವಾದಿಸುತ್ತದೆ.
ಹಣ ಪಡೆದು ದೈಹಿಕ ಸಂಬಂಧದಲ್ಲಿ ತೊಡಗುತ್ತಿದ್ದರೆಂದು ಅಪವಾದ ಹೊರಿಸಿ, ಅದನ್ನು ಸಾಬೀತು ಪಡೆಸಲು ಹೊರಟಾಗ ಫಲಕ್ "ಹೌದು, ಹಣ ಪಡೆದಿದ್ದೆವು, ಆದರೆ ಹಣ ಪಡೆದ ನಂತರವೂ ಬೇಡವೆನ್ನುವ ಸ್ವಾತಂತ್ರ್ಯವಿಲ್ಲವೇ?" ಎಂದು ಕೇಳುವಲ್ಲಿ ಒಬ್ಬ ವ್ಯಕ್ತಿಯ ಸಮ್ಮತಿಯಿಲ್ಲದೆ ಅವರ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದು ಸರಿಯೇ ಎಂಬ ಅತ್ಯಂತ ಪ್ರಸ್ತುತ ಪ್ರಶ್ನೆಯಿದೆ. ಈ ಬಗೆಯ ಮತ್ತಷ್ಟು ಪ್ರಸ್ತುತ ಪ್ರಶ್ನೆಗಳನ್ನು ಕೇಳುವ ಸಿನಿಮಾ ನಮ್ಮ ಆಲೋಚನೆಗಳಲ್ಲಿರುವ ಸಂಕುಚಿತತೆಯನ್ನು ಸೂಕ್ಷ್ಮವಾಗಿ ತಿವಿಯುವಲ್ಲಿ ಯಶಸ್ವಿಯಾಗುತ್ತದೆ.
ಸಿನಿಮಾದ ಮತ್ತೊಂದು ಸನ್ನಿವೇಶದಲ್ಲಿ ಪಾರ್ಕಿನಲ್ಲಿ ಮೀನಲ್ ದೀಪಕ್ ಸೆಹಗಲ್ ನ್ನೊಂದಿಗೆ ನಡೆದು ಬರುವಾಗ, ಎದುರಾದವರು ಸೂರಜ್ ಕುಂಡ್ ಹಗರಣದವಳು ಇವಳೇ ಅಲ್ಲವೇ ಎಂದು ಮಾತಾಡಿಕೊಳ್ಳುವಾಗ ಮೀನಲ್ ಜನರಿಗೆ ತನ್ನ
ಗುರುತು ಸಿಗಬಾರದು ಎಂದು ಜರ್ಕಿನ್ ನ ಕ್ಯಾಪ್ ಅನ್ನು ತಲೆಗೇರಿಸಿಕೊಳ್ಳುತ್ತಾಳೆ. ಆದರೆ ನಂತರ ಸದ್ದಿಲ್ಲದೆ ಅದನ್ನು ಹಿಂದೆ ತಳ್ಳಿ ತಪ್ಪು ಅವಳದಲ್ಲ, ತಲೆಮರೆಸಿಕೊಂಡು ಬದುಕಬೇಕಿಲ್ಲ ಎಂದು
ಮಾತಿಲ್ಲದೆ ಸಾಂಕೇತಿಕವಾಗಿ ಹೇಳುವಲ್ಲಿ ಚಿತ್ರಕಥೆ ಬರೆದವನ ಹಿಡಿತ ಕಾಣಸಿಗುತ್ತದೆ. ಬಾಡಿಗೆ ಮನೆಯ ಮಾಲಿಕ ಹುಡುಗಿಯರೊಡನೆ ನಡೆದುಕೊಳ್ಳುವ ಪರಿಯಲ್ಲಿರುವ ಸಭ್ಯತೆ ಹಾಗು ನೆರೆಹೊರೆಯವರ ಕಣ್ನೋಟಗಳಲ್ಲಿರುವ ವಿಕೃತತೆಯ ನಡುವಿನ ಕಾಂಟ್ರಾಸ್ಟ್ ಸಿನಿಮೀಯವೆನಿಸದೆ ನೈಜವೆನಿಸುವಂತೆ ಚಿತ್ರೀಕರಿಸಿರುವುದು ನಿರ್ದೇಶಕನ ಕೈಚಳಕಕ್ಕೆ ಹಿಡಿದ ಕನ್ನಡಿಯಾಗಿದೆ.
ಹಾಗೆಯೇ ಸಾಕ್ಷಿಯೊಬ್ಬನ ವರ್ತನೆ ಕುರಿತು ದೀಪಕ್ - "I object to this awkward performance. He is overacting." ಎನ್ನುವಲ್ಲಿನ ವ್ಯಂಗ್ಯ ಚೂಪಾಗಿದೆ. ಪೂರ್ವೋತ್ತರದವರ ಕುರಿತು ಸಮಾಜದಲ್ಲಿರುವ ಪೂರ್ವಗ್ರಹಿಕೆಯತ್ತ ಕೂಡ ಸಿನಿಮಾ ಪ್ರಶ್ನೆಗಳನ್ನು ಒಡ್ಡುತ್ತದೆ. ಇಷ್ಟೆಲ್ಲಾ ಸಂಕೀರ್ಣ ವಿಷಯಗಳನ್ನು ಒಟ್ಟಿಗೆ ಬಿಗಿಯಾಗಿ ಕಟ್ಟಿಕೊಡುವಲ್ಲಿ ಸಿನಿಮಾದ ಗೆಲುವಿದೆ.
ನಟನೆಯಲ್ಲಿ ನೈಜತೆಯನ್ನು ಬಹುತೇಕ ಎಲ್ಲರೂ ಕಾಪಾಡಿಕೊಂಡಿರುವಂತೆನಿಸುತ್ತದೆ. ಸಂಗೀತ ಕಥೆಗೆ ತಕ್ಕಂತಿದ್ದು, ಇಬ್ಬರು ಪಾಕಿಸ್ತಾನಿ ಗಾಯಕಿಯರಿಂದ ಎರಡು ಹಾಡುಗಳನ್ನು ಹಾಡಿಸಿದ್ದಾರೆ. ಸಿನಿ ಮಾಧ್ಯಮದಲ್ಲಿ ಪಾಕಿಸ್ತಾನ ಮೂಲದ ಕಲಾವಿದರನ್ನು ತೊಡಗಿಸಿಕೊಳ್ಳುವುದರ ವಿರುದ್ಧ ಅಸಹಿಷ್ಣುತೆಯ ಗದ್ದಲ ಕೇಳಿಬರುತ್ತಿರುವ ಸಮಯದಲ್ಲಿ ಇದು ಮತ್ತೊಂದು ಶ್ಲಾಘನೀಯ ಪ್ರಯತ್ನ.
ಪ್ರೌಢಪ್ರೇಕ್ಷಕರೆಲ್ಲರೂ ನೋಡಲೇಬೇಕಾದ ಚಿತ್ರ ಎಂದರೆ ಅತಿಶಯೋಕ್ತಿಯಾಗದೆನಿಸುತ್ತದೆ.
- ಮಂಜುನಾಥ್ ಎ ಎನ್
1 ಕಾಮೆಂಟ್:
ತುಂಬಾಒಳ್ಳೆಯ ವಿಮರ್ಶೆ
ಕಾಮೆಂಟ್ ಪೋಸ್ಟ್ ಮಾಡಿ