(ಗುಜರಾತ್ ನಲ್ಲಿ ಶಿಕ್ಶಣತಜ್ಞರಾದ ಗಿಜುಭಯ್ ಬಧೇಕಾರವರು ನಡೆಸಿದ ಸ್ವಂತ ಪ್ರಯೋಗದ ಆಧಾರದ ಮೇಲೆ ಅವರು ಈ ಕಾದಂಬರಿಯನ್ನು ರಚಿಸಿದ್ದಾರೆ)
ಒಬ್ಬ ಉತ್ಸಾಹಿ ಯುವ ಶಿಕ್ಷಣತಜ್ಞ ತಾನು ಅರಿತ ಸತ್ಯಾಂಶಗಳನ್ನು ಪ್ರತ್ಯಕ್ಷವಾಗಿ ಅನುಭವಿಸಿ ದೃಢೀಕರಿಸಲು ನಾಲ್ಕನೇ ತರಗತಿಯ ಶಿಕ್ಷಕರಾಗಿ, ಒಂದು ಶಾಲೆಗೆ ಬರುತ್ತಾರೆ. ಬಲು ಆತ್ಮವಿಶ್ವಾಸದಿಂದ ಮೊದಲ ದಿನವೇ ಮಕ್ಕಳನ್ನು ತನ್ನ ಕೌಶಲ್ಯದಿಂದ ಮೋಡಿಗೊಳಿಸುತ್ತೇನೆ ಎಂದುಕೊಂಡು ತರಗತಿ ಪ್ರವೇಶಿಸುತ್ತಾರೆ. ಅಲ್ಲಿ ಕುಳಿತಿದ್ದ ಮಕ್ಕಳ ತುಂಟ ವರ್ತನೆ ಕಂಡು ಅವರ ಜಂಘಾಬಲವೇ ಉಡುಗಿಹೋಗುತ್ತದೆ. ಇದ್ದಬದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿಕೊಂಡು, ‘ಈಗ ಶಾಂತಿಯ ಆಟ ಆಡೋಣವೆಂದು, ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚಿ, ಕತ್ತಲೆ ಮಾಡಿ, ‘ಓಂ ಶಾಂತಿ’ ಎಂದು ಹೇಳಿಕೊಡುತ್ತಾರೆ. ಮಕ್ಕಳೆಲ್ಲಾ ಕತ್ತಲಲ್ಲಿ ‘ಹಾಂ, ಹೂ, ಓಂ ಎನ್ನುತ್ತಾ ಗದ್ದಲ ಮಾಡಿ ಜೋರಾಗಿ ಚಪ್ಪಾಳೆ ತಟ್ಟಿ ನಕ್ಕುಬಿಡುತ್ತಾರೆ. ಬೇಸತ್ತ ಯುವಕ ಮಕ್ಕಳಿಂದ ಮುಕ್ತಿ ಪಡೆಯಲು ರಜೆ ಘೋಷಿಸಿಬಿಡುತ್ತಾರೆ. ಅಂದು ತನಗಾದ ಅವಮಾನದಿಂದ ದಿನವೆಲ್ಲಾ ಅಶಾಂತಿಯಿಂದಲೇ ಕಳೆಯುತ್ತಾರೆ.
ಇದೇ ಯುವಕ ಮುಂದೆ ಒಂದು ವರುಷದೊಳಗೆ, ಆ ಮಕ್ಕಳನ್ನೇ ತನ್ನ ಸಹನೆ ಮತ್ತು ಪ್ರೀತಿಯಿಂದ ತನ್ನೆಡೆಗೆ ಸೆಳೆದುಕೊಂಡು, ಅವರಲ್ಲಿ ಕಲಿಕೆಯ ಬಗ್ಗೆ ನಿಜವಾದ ಆಸಕ್ತಿ ಮೂಡಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆ ಮಕ್ಕಳಿಗೆ ಸಭ್ಯತೆ ಹಾಗೂ ಸ್ವಚ್ಛತೆಯನ್ನು ಕಲಿಸುತ್ತಾರೆ. ಮಕ್ಕಳಲ್ಲಿ ಶಾಲೆಗೆ ಬರುವುದೆಂದರೆ, ಕಲಿಯುವುದೆಂದರೆ ಆಸಕ್ತಿದಾಯಕವಾದದ್ದು ಎಂಬ ಧೋರಣೆಯನ್ನು ಬೆಳೆಸುತ್ತಾರೆ.
ಈ ರೋಚಕ ಕಥೆಯೇ “ಹಗಲುಗನಸು”. ಆ ಉತ್ಸಾಹಿ ತರುಣನೇ ಗುಜರಾತಿನ ಭಾವ್‍ನಗರದ ಮಹಾನ್ ಶಿಕ್ಷಣತಜ್ಞ ಗಿಜುಭಾಯಿ ಬಢೇಕಾ. ಮಾಂಟೆಸ್ಸೊರಿ ಶಿಕ್ಷಣದಿಂದ ಪ್ರೇರಿತರಾದ ಇವರು ಅದೇ ಶಿಕ್ಷಣ ಪದ್ಧತಿಯನ್ನು, ಇಲ್ಲಿನ ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ಅಳವಡಿಸಿಕೊಂಡರು. ಮಕ್ಕಳನ್ನು ಹೊಡೆಯದೆ, ಅವಾಚ್ಯ ಶಬ್ದಗಳಿಂದ ಬೈಯ್ಯದೆ, ಕ್ರೂರವಾದ ಶಿಕ್ಷೆಯ ಪದ್ಧತಿಯನ್ನು ಉಪಯೋಗಿಸದೆ, ಮಕ್ಕಳಿಗೆ ಶಿಕ್ಷಣ ನೀಡಬಹುದೆಂಬುದನ್ನು ಕೇವಲ ಲೇಖನದ ಮೂಲಕ ತೋರಿಸದೆ, ವಾಸ್ತವವಾಗಿ ಮಾಡಿ ತೋರಿಸಿದ್ದೇ ಇವರ ವಿಶಿಷ್ಠತೆ. ಮಕ್ಕಳಿಗೆ ಶಿಕ್ಷಕ/ಶಿಕ್ಷಕಿ ಆಸಕ್ತಿದಾಯಕವಾಗಿ ವಿಷಯಗಳನ್ನು ಹೇಳುತ್ತಾ ಹೋದರೆ ಮಕ್ಕಳು ಖಂಡಿತವಾಗಿ ಕಲಿಯುತ್ತಾರೆ ಎಂಬುದನ್ನು ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದ್ದಾರೆ. ಈ ಕಥೆಯಲ್ಲಿ ‘ಲಕ್ಷಿಶಂಕರ ಬಾಬು’ ಎಂಬ ಪಾತ್ರದ ಮೂಲಕ ಬಢೇಕಾ ಕಥೆಯನ್ನು ಹೇಳಿದ್ದಾರೆ. ಶಿಕ್ಷಕರನ್ನು ಮಾತ್ರವಲ್ಲ ಯಾರನ್ನು ಬೇಕಾದರೂ ಹಿಡಿದಿಟ್ಟು ಓದಿಸಿಕೊಂಡು ಹೋಗುವ ಶಕ್ತಿ ಈ ಕಥೆಗಿರುವ ಇನ್ನೊಂದು ವೈಶಿಷ್ಠ್ಯ. ಕಪಾಳಕ್ಕೆ ಹೊಡೆದೇ ಕಲಿಸುತ್ತಿದ್ದ ಶಿಕ್ಷಕರು, ಕಂಠಪಾಠವೇ ಕಲಿಸುವ ಉತ್ತಮ ವಿಧಾನ ಎಂಬಂತಿದ್ದ ಶಾಲಾ ವಾತಾವರಣದಲ್ಲಿ ಲಕ್ಷಿಶಂಕರರು ಶಾಲೆಗೆ ಬಂದ ಮರುದಿನವೇ ತಮ್ಮ ಪ್ರಯೋಗಗಳ ಮೂಲಕ ತರಗತಿಯಲ್ಲಿ ಕ್ರಾಂತಿಯನ್ನುಂಟುಮಾಡುತ್ತಾರೆ. ಹಳೆಯ ಶಿಕ್ಷಣ ಪದ್ಧತಿಯಿಂದ ಜಡ್ಡು ಹಿಡಿದುಹೋಗಿದ್ದ ಮಕ್ಕಳನ್ನು, ಕಥೆ ಹೇಳುವುದರ ಮೂಲಕ, ಪದ್ಯಗಳನ್ನು ಹಾಡುವುದರ ಮೂಲಕ, ಆಟಗಳನ್ನು ಆಡಿಸುವುದರ ಮೂಲಕ ಕ್ರಿಯಾಶೀಲ ಮಕ್ಕಳನ್ನಾಗಿಸಿ ಒಂದು ಪವಾಡವನ್ನೇ ಸೃಷ್ಠಿಸುತ್ತಾರೆ. ಶಾಲೆಗಳಲ್ಲಿ ಎಂದೂ ಕಾಣದ ಈ ಹೊಸ ಪದ್ಧತಿಗಳನ್ನು ಕಂಡು ಎಲ್ಲರೂ ನಕ್ಕು ವ್ಯಂಗ್ಯವಾಡುತ್ತಾರೆ. ಇವನೊಬ್ಬ ಮೂರ್ಖನೆಂದು ಮೂದಲಿಸುತ್ತಾರೆ. ಇದಾವುದರಿಂದಲೂ ವಿಚಲಿತರಾಗದೆ ಲಕ್ಷಿಶಂಕರರು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಾರೆ.
ಎಷ್ಟು ಹೇಳಿದರೂ ಸ್ವಚ್ಛತೆಯ ಬಗ್ಗೆ ಗಮನ ಕೊಡದ ಪೋಷಕರ ಸಭೆ ಕರೆದು ಸ್ವಚ್ಛತೆಯಿಂದಾಗುವ ಲಾಭದ ಬಗ್ಗೆ ಹೇಳಿದಾಗಲೂ ಏನೂ ಪ್ರಯೋಜನವಾಗದೆ ಇದ್ದಾಗ ತಾವೇ ಕನ್ನಡಿ, ಖಾದಿ ವಸ್ತ್ರ, ಬಾಚಣಿಗೆ, ಉಗುರು ಕತ್ತರಿಸಲು ಕತ್ತರಿಯನ್ನು ಕೊಂಡು ತಂದು ಶಾಲೆಯಲ್ಲಿ ಇಡುತ್ತಾರೆ. ಪ್ರತಿನಿತ್ಯ ಕೈಕಾಲು ತೊಳೆದು, ಕೂದಲು ಬಾಚಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು, ತಮ್ಮ ಮುದ್ದಾದ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತಾರೆ. ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಂಡು ಸಂತೋಷ ಪಡುತ್ತಿದ್ದ ಮಕ್ಕಳು ದಿನಾಲೂ ಅದನ್ನೇ ಮುಂದುವರೆಸುತ್ತಾರೆ.
ಒಮ್ಮೆ ಶಾಲೆಯಲ್ಲಿ ನಿರ್ದೇಶಕರ ಆಗಮನಕ್ಕಾಗಿ ಪೂರ್ವಸಿದ್ಧತೆಗಳು ನಡೆಯುತ್ತಿದ್ದವು. ಮಕ್ಕಳಿಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಹಾಗೆಯೇ 4ನೆಯ ತರಗತಿಯ ಸುಂದರ ಮಕ್ಕಳನ್ನು ಕಳಿಸಬೇಕೆಂದು ಮುಖ್ಯೋಪಾಧ್ಯಾಯರು ಆಜ್ಞೆ ಮಾಡಿದರು. ಈ ವಿಧಾನದಿಂದ ಅಸಮಾಧಾನಗೊಂಡ ಲಕ್ಷಿಶಂಕರರು ತಮ್ಮ ಮಕ್ಕಳನ್ನು ಕಳಿಸಿಕೊಡಲು ಒಪ್ಪಲಿಲ್ಲ. ಬಿಸಿಬಿಸಿ ಮಾತುಗಳಾಗಿ ದೂರು ಮೇಲಧಿಕಾರಿಯವರೆಗೂ ಹೋಗುತ್ತದೆ. ಕೋಪಗೊಂಡ ಅಧಿಕಾರಿಯ ಬಳಿ ಲಕ್ಷಿಶಂಕರರು ಶಾಂತವಾಗಿಯೇ ಈ ರೀತಿ ಉತ್ತರಿಸುತ್ತಾರೆ, “ನೋಡಿ ಸ್ವಾಮಿ, ಮಕ್ಕಳಿರುವುದು ಇನ್ನೊಬ್ಬರನ್ನು ಸಂತಸ ಪಡಿಸಲಿಕ್ಕಲ್ಲ. ನಿಮ್ಮ ಪ್ರಕಾರದ ‘ನೋಡಲು ಸುಂದರ ಮಕ್ಕಳನ್ನು’, ಅವರಿಗೆ ಸಂಬಂಧವೇ ಇರದ ವಿಷಯಗಳಲ್ಲಿ ತರಬೇತಿ ನೀಡಲೋಸುಗ ಅವರಿಗೆ ಹೊಡೆದು, ಬಡಿದು ಕಲಿಸುತ್ತಾರೆ. ಮಕ್ಕಳು ಭಾವವಿಲ್ಲದ ಗೊಂಬೆಗಳಂತೆ ವೇದಿಕೆ ಮೇಲೆ ಸುಳ್ಳು ಪ್ರದರ್ಶನ ಕೊಡುತ್ತಾರೆ. ನಿರ್ದೇಶಕರೂ ಸುಳ್ಳು ಪ್ರಶಸ್ತಿ ನೀಡುತ್ತಾರೆ. ನಿರ್ದೇಶಕರನ್ನು ಮೋಸಗೊಳಿಸುವುದು ನನಗಿಷ್ಟವಿಲ್ಲ. ಜೊತೆಗೆ ನನ್ನ ಎಲ್ಲಾ ಮಕ್ಕಳು ಸುಂದರರೇ. ಅವರಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ನಾನು ಹೇಗೆ ಆಯ್ಕೆಮಾಡಲಿ? ಬೇಕಿದ್ದರೆ ನಾನು ನನ್ನ ತರಗತಿಯ ಎಲ್ಲಾ ಮಕ್ಕಳಿಂದ ಒಂದು ಕಾರ್ಯಕ್ರಮವನ್ನು ಏರ್ಪಡಿಸುವೆ”.
ಕಾರ್ಯಕ್ರಮದ ದಿನದಂದು ಇತರೆ ತರಗತಿಗಳ ಮಕ್ಕಳ ಯಾಂತ್ರಿಕ ಪ್ರದರ್ಶನ ಮುಗಿದ ನಂತರ, ನಿರ್ದೇಶಕರು ಯಾಂತ್ರಿಕ ನಗು ಬೀರಿ ಎಲ್ಲಾ ಮಕ್ಕಳನ್ನೂ, ಶಾಲೆಯನ್ನೂ ಹೊಗಳುತ್ತಾರೆ. ಆದರೆ ಕೊನೆಯಲ್ಲಿ ಲಕ್ಷಿಶಂಕರರು ತಮ್ಮ ಮಕ್ಕಳೊಂದಿಗೆ, ಯಾವುದೇ ಅಭ್ಯಾಸವಿಲ್ಲದೆ, ಪ್ರತಿನಿತ್ಯ ತಾವಾಡುತ್ತಿದ್ದ ನಾಟಕಗಳಲ್ಲಿ ಒಂದನ್ನು ಆರಿಸಿಕೊಂಡು, ಆಡಂಬರವಿಲ್ಲದೆ, ನೈಜ ಅಭಿನಯದಿಂದ ಪ್ರೇಕ್ಷಕರನ್ನೆಲ್ಲಾ ಚಕಿತಗೊಳಿಸುತ್ತಾರೆ. ಯಾವುದೇ ಭಯವಿಲ್ಲದೆ, ಸಹಜವಾಗಿ ಅಭಿನಯಿಸಿದ ಮಕ್ಕಳನ್ನು ನಿರ್ದೇಶಕರು ಮನಸಾರೆ ಹೊಗಳಿ ಲಕ್ಷಿಶಂಕರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇಂಗ್ಲೆಂಡಿನವರಾದ ಆ ನಿರ್ದೇಶಕರು “ಇಂದು ನನ್ನ ತಾಯ್ನಾಡಿನ ಮಾಂಟೆಸ್ಸೊರಿ ಮಾದರಿಯ ಶಾಲೆಯನ್ನು ನೆನಪಿಸಿದಿರಿ” ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.
1 ಕಾಮೆಂಟ್:
ಆಸಕ್ತಿದಾಯಕ ವಿಷಯ. ಪುಸ್ತಕ ಎಲ್ಲಿ ಸಿಗುತ್ತದೆ
ಕಾಮೆಂಟ್ ಪೋಸ್ಟ್ ಮಾಡಿ