"ಬ್ರಿಟಿಷರು ಬಿಟ್ಟು ಹೋದ ಭಾರತಕ್ಕಿಂತಲೂ ನಾವಿಂದು ಸ್ವತಂತ್ರ ಭಾರತ ಸರಿ, ಆದರೆ ನಮ್ಮ
ಸಂವಿಧಾನ ಶಿಲ್ಪಿಗಳು ಕಂಡ ಕನಸಿನ ಭಾರತದಷ್ಟು ಸ್ವತಂತ್ರ ಭಾರತವಲ್ಲ"
- ೬೯ ವರ್ಷಗಳ ಸ್ವಾತಂತ್ರ್ಯವನ್ನು ಅವಲೋಕಿಸುತ್ತ ಸ್ವಾತಂತ್ರ್ಯ ದಿನದಂದು "ದಿ ಇಂಡಿಯನ್ ಎಕ್ಸ್ಪ್ರೆಸ್"ನಲ್ಲಿ ರಾಮಚಂದ್ರ ಗುಹಾ
ರಾಜಕೀಯ ಸ್ವಾತಂತ್ರ್ಯ
ಪ್ರಜಾಪ್ರಭುತ್ವದ ಉತ್ತಮ ನಿದರ್ಶನಗಳಲ್ಲಿ ಭಾರತ ವಿಶ್ವಕ್ಕೆ ಮಾದರಿ. ಇಷ್ಟು ಸಂಪತ್ಭರಿತ ವೈವಿಧ್ಯಗಳನ್ನು ಒಂದು ಸಂಯುಕ್ತ ಪ್ರಜಾಪ್ರಭುತ್ವ ರಾಷ್ಟ್ರದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿದ್ದು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಹಿರಿ ಸಾಧನೆ. ೭೩ನೇ ಹಾಗು ೭೪ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪಂಚಾಯತ್ ರಾಜ್ ಹಾಗು ನಗರಪಾಲಿಕ ವ್ಯವಸ್ಥೆ ಜಾರಿಗೆ ತಂದು ಸ್ವಯಂ ಆಡಳಿತ ಎಂಬುದು ಕೇವಲ ಒಂದು ಆದರ್ಶ ಪರಿಕಲ್ಪನೆ ಆಗಿರದೆ ನಮ್ಮ ದಿನನಿತ್ಯ ಜೀವನದ ವಾಸ್ತವಿಕತೆಯಾಯಿತು. ೨೦೦೫ರ ಮಾಹಿತಿ ಹಕ್ಕು ಕಾಯ್ದೆ, ೨೦೦೯ರ ಶಿಕ್ಷಣ ಹಕ್ಕು ಕಾಯ್ದೆ ಮುಂತಾದವು ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವೆಡೆಗೆ ಕಂಡ ಕನಸುಗಳು. ಆದರೆ ಇವುಗಳನ್ನು ಅನುಷ್ಠಾನಗೊಳಿಸುವ ಪರಿ, ನಾಗರೀಕರಾಗಿ ಹಲವು ಹಕ್ಕುಗಳನ್ನು ನಾವು ದುರುಪಯೋಗಗೊಳಿಸಿಕೊಳ್ಳುವ ಪರಿ ಆ ಕನಸಿನ ಈಡೇರಿಕೆಗೆ ಮುಳ್ಳಾಗಿವೆ.
ರಕ್ತಸಿಕ್ತ ವಿಭಜನೆ ಸ್ವಾತಂತ್ರ್ಯ ಸಿರಿಯ ಕಹಿ ಅವಳಿ. ವಿಭಜನೆಯ ವೈಷಮ್ಯದಿಂದ ಇಂದಿಗೂ ನಾವು ಸ್ವತಂತ್ರರಾಗಿಲ್ಲ. ಅಭಿಪ್ರಾಯಗಳ ಹಾಗು ಆಚರಣೆಗಳ ವಿಮರ್ಶೆ ಹಾಗು ಟೀಕೆಗೆ ನಾವು ತೆರೆದುಕೊಂಡಿಲ್ಲ. "ಪ್ರಜಾಪ್ರಭುತ್ವದಲ್ಲಿ ಅಸಮ್ಮತಿಯು ವಿಶ್ವಾಸವ ದೃಡೀಕರಿಸುವ ಕ್ರಿಯೆ" ಎಂಬ ಫುಲ್ ಬ್ರೈಟ್ ನ ವ್ಯಾಖ್ಯಾನದ ಪರಿಗಣನೆಯಲ್ಲಿ ಅಸಮ್ಮತಿಯನ್ನು ಸಹಿಸದ ನಾವು ಸ್ವತಂತ್ರ ಪ್ರಜಾಪ್ರಭುತ್ವವೇ ಎಂಬ ಪ್ರಶ್ನೆ ಕಾಡುತ್ತದೆ. ೭೦ ವರ್ಷಗಲ್ಲಿ ಒಂದು ಪ್ರೌಢ ಪ್ರಜಾಪ್ರಭುತ್ವವಾಗುವ ಬದಲು ಕ್ಷುಲ್ಲಕ ವಿಚಾರಗಳಿಗೆ, ಅವೈಜ್ಞಾನಿಕ ನಂಬಿಕೆಗಳಿಗೆ, ಧಾರ್ಮಿಕ ಆಚರಣೆಗಳಿಗೆ ಬಲಿಯಾದ ಅರಾಜಕತೆಯಾಗಿದ್ದೇವೆ.
ಆರ್ಥಿಕ ಸ್ವಾತಂತ್ರ್ಯ
ಹೆಚ್ಚಿರುವ ಅವಕಾಶಗಳು, ಬಲಿಷ್ಟಗೊಂಡಿರುವ ಆರ್ಥಿಕ ವ್ಯವಸ್ಥೆ, ಜಾಗತಿಕ ಸರಬರಾಜು ಸರಪಳಿಯಲ್ಲಿ ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ-ಮಾನಗಳಿಸಿಕೊಂಡಿರುವ ಹೆಗ್ಗಳಿಕೆ, ಬಾಹ್ಯಾಕಾಶ ಸಂಶೋಧನೆ ಎಂತಹ ಕ್ಲಿಷ್ಟ ಕ್ಷೇತ್ರದಲ್ಲಿ ದೇಶಿಯ ಸ್ವಾವಲಂಭನೆ ಗಿಟ್ಟಿಸಿಕೊಂಡಿರುವಿಕೆ ಶ್ಲಾಗನೀಯವೇ ಸರಿ. ಆದರೆ ಮತ್ತೊಂದೆಡೆ ಆರ್ಥಿಕ ಅಸಮಾನತೆ ಉಲ್ಬಣಗೊಳ್ಳುತ್ತಿದೆ. ನಗರ ಹಾಗು ಗ್ರಾಮೀಣ ಪ್ರದೇಶಗಳ ನಡುವಿನ ಕಂದಕ ಇನ್ನಷ್ಟು ಆಳ ಹಾಗು ವಿಸ್ತಾರಗೊಳ್ಳುತ್ತಿದೆ. ನಗರ ಪ್ರದೇಶದಲ್ಲಿ ಕೂಡ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಸಮ್ಮಿಲನಗೊಂಡಿರುವವರ ಆದಾಯ ಹಾಗು ಜೀವನ ಗುಣಮಟ್ಟಕ್ಕೂ ಹಾಗು ಆ ವ್ಯವಸ್ಥೆಯಲ್ಲಿ ಅಡಕಗೊಳ್ಳಲು ವಿಫಲವಾಗಿರುವವರ ಆದಾಯ ಹಾಗು ಜೀವನ ಗುಣಮಟ್ಟಕ್ಕೂ ಹೆಚ್ಚಿನ ಅಂತರವಿದೆ. ಅಪಾಯಕಾರಿ ಬೆಳವಣಿಗೆ ಎಂದರೆ ಈ ಅಂತರ ದಿನೇ ದಿನೇ ಬೆಳೆಯುತ್ತಿದೆ.
ಸಾಮಾಜಿಕ ಸ್ವಾತಂತ್ರ್ಯ
"ಧರ್ಮ-ಜಾತಿ ವ್ಯವಸ್ಥೆ" ಹಾಗು "ಪುರುಷ ಪ್ರಧಾನತೆ" ನಮ್ಮ ಸಮಾಜದ ಅವಳಿ ಪೂರ್ವಾಗ್ರಹಗಳು. ಸ್ವಾತಂತ್ರ್ಯ ಪೂರ್ವದ ದಿನಗಳಿಂದಲೂ ಸಮಾನ ಸಮಾಜದ ಕನಸ್ಸಿಗೆ ಮುಳ್ಳಾಗಿದ್ದ ಇವು ಇಂದಿಗೂ ಮುಳ್ಳಾಗಿಯೇ ಉಳಿದಿವೆ. ಅಲ್ಲಲ್ಲಿ ಬದಲಾವಣೆಯ, ಪ್ರಗತಿಯ ಘಟನೆಗಳು ಗಮನಕ್ಕೆ ಬಂದರೂ ನಾವಿನ್ನೂ ಬಹುಪಾಲು ಪೂರ್ವಾಗ್ರಹಗಳ ಕರಿಛಾಯೆಯಲ್ಲೇ ಕೊರಗುತ್ತಿರುವ ಸಮಾಜ. ೧೮೫೭ರಲ್ಲಿ ಹಸು ಮತ್ತು ಹಂದಿಯ
ಕೊಬ್ಬಿನಿಂದ ಶುರುವಾದ ಹೋರಾಟ ಇನ್ನೂ ಬಗೆಹರಿದಿಲ್ಲ. ಇಂದಿಗೂ ಹಸು - ಹಂದಿಗಳ ನೆಪದಲ್ಲಿ
ನಮ್ಮವರನ್ನು ನಾವು ಕೊಲ್ಲುವ ಕ್ರೌರ್ಯದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಅಥವಾ ಆ
ಸ್ವಾತಂತ್ರ್ಯವ ಬಹುಶಃ ನಾವೇ ದಕ್ಕಿಸಿಕೊಂಡಿಲ್ಲ.
National Crime Records Bureau (NCRB) ಯ ೨೦೧೪ರ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ದಿನ ಸರಾಸರಿ ೯೩ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಕೌಟುಂಬಿಕ ಹಿಂಸೆಯ ವಿವಿಧ ಬಗೆಗಳು ನಮ್ಮ ದಿನ ನಿತ್ಯದ ಜೀವನದ ಅವಿಭಾಜ್ಯ ಅಂಗವೇ ಆಗಿವೆ. UNICEFನ ೨೦೧೨ರ ತರುಣರ ಜಾಗತಿಕ ವರದಿಯ ಪ್ರಕಾರ ಭಾರತದಲ್ಲಿ ಶೇಕಡ ೫೭ರಷ್ಟು ಹುಡುಗರು ಹಾಗು ೫೩ರಷ್ಟು ಹುಡುಗಿಯರು ಗಂಡ ಹೆಂಡತಿಯನ್ನು ದೈಹಿಕವಾಗಿ ಶಿಕ್ಷಿಸುವುದು ಸರಿಯೆಂದು ಅಭಿಪ್ರಾಯ ಪಡುತ್ತಾರೆ.ಇಂತಹ ಹಲವು ಅಂಕಿಅಂಶಗಳು ನಮ್ಮ ಸಾಮಾಜಿಕ ಸಂಕುಚಿತತೆಗೆ ಹಿಡಿದ ಕನ್ನಡಿ.
ಸಾಂಸ್ಕೃತಿಕ ಸ್ವಾತಂತ್ರ್ಯ
ಹತ್ತು ಹಲವು ಬಗೆಯ ಸಂಸ್ಕೃತಿಗಳಿಗೆ ತವರೂರು ಭಾರತ ಆದರೆ ವಿವಿಧ ಸಂಸ್ಕೃತಿಗಳು ಸಹಿಷ್ಣುತೆಯಿಂದ ಸಹಬಾಳ್ವೆಗೆಯ್ಯಲು ನಮ್ಮಲ್ಲಿ ಸ್ವತಂತ್ರ ಅವಕಾಶವಿದೆ. ನಾಸ್ತಿಕರಿಂದ ಹಿಡಿದು ಬೇರೆ ಬೇರೆ ನಂಬಿಕೆಯ ಆಸ್ತಿಕರೆಲ್ಲರಿಗೂ ಭಾರತ ಆಸರೆ ನೀಡಿದೆ. ನಮ್ಮ ಸಂಸ್ಕೃತಿಯನ್ನೇ ವಿಮರ್ಶೆಯ ವಸ್ತುವನ್ನಾಗಿಸಿ, ಪರೀಕ್ಷಿಸಿ, ಖಂಡಿಸುವ ಸ್ವಾತಂತ್ರ್ಯ ನಮ್ಮ ವಿದ್ವಾಂಸರಿಗಿದೆ. ಆದರೆ ಇತ್ತೀಚಿನ ವರ್ಷಗಲ್ಲಿ ಕಲ್ಬುರ್ಗಿ, ದಾಬೋಲ್ಕರ್ ಮುಂತಾದವರ ಕೊಲೆಗಳು ಈ ಬಗೆಯ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಕಸಿದುಕೊಳ್ಳುವಂತೆ ಕಾಣುತ್ತಿವೆ.
ಸ್ವಾತಂತ್ರ್ಯ ಎಂಬುದು ಕೇವಲ ಒಮ್ಮೆಗಳಿಸಿ ಮರೆತುಬಿಡುವುದಲ್ಲ. ಪ್ರತಿದಿನ, ಪ್ರತಿಕ್ಷಣ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ಹಕ್ಕುಗಳಿಗಾಗಿ ಒತ್ತಾಯ ಮಾಡುವ ನಾವು ಕರ್ತವ್ಯ ಹಾಗು ಜವಾಬ್ದಾರಿಗಳನ್ನು ಅರಿತು ಸಂಯುಕ್ತ ಜಾತ್ಯತೀತ ಸ್ವತಂತ್ರ ಪ್ರಜಾಪ್ರಭುತ್ವದಲ್ಲಿ ಸುಲಭ ಮಾರ್ಗೋಪಾಯಗಳು ಸರಳಸಾಧ್ಯವಲ್ಲ ಎಂಬುದನ್ನು ಅರಿಯಬೇಕು. ಅದರ ಸಂಕೀರ್ಣತೆಯನ್ನು ಗಮನದಲ್ಲಿರಿಸಿಕೊಂಡು ನಾಗರೀಕ ಕರ್ತವ್ಯಗಳನ್ನು ನೆರವೇರಿಸಿ ಪ್ರೌಢ ಆರೋಗ್ಯಕರ ಸದೃಢ ಸ್ವತಂತ್ರ ಪ್ರಜಾಪ್ರಭುತ್ವವನ್ನು ಬೆಳೆಸಿ ಅದರಲ್ಲಿ ಸಕ್ರಿಯವಾಗಿ ಭಾಗಿಯಾಗುವ.
- ಮಂಜುನಾಥ್ ಎ ಎನ್
1 ಕಾಮೆಂಟ್:
The article raises serious questions. All of us are to rethink about this.
ಕಾಮೆಂಟ್ ಪೋಸ್ಟ್ ಮಾಡಿ