Pages

ಕಥೆ: "ಕಣ್ತೆರೆಸಿದ ಕಿರಿಯ"

    


ಮನೋಜ ಅಂದು ಮನೆಗೆ ಬಂದವನೇ ಏರುಧ್ವನಿಯಲ್ಲಿ "ಅಮ್ಮಾ, ಅಮ್ಮ" ಎಂದು ಕೂಗಿದ. 
ಒಳಗೆ ಅಡಿಗೆ ಮಾಡುತ್ತಿದ್ದ ಅನ್ನಪೂರ್ಣಮ್ಮ "ಏನೋ ಮನೋಜ, ಹಾಗೆ ಕೂಗಿಕೊಳ್ತಾ ಇದ್ದೀಯಾ, ಏನಾಯ್ತು?" ಎಂದು ಕೇಳಿದರು. 
ಅದಕ್ಕವನು, ಅಮ್ಮ, ನೋಡು ನೀನು ನನ್ನನ್ನು ಅಪ್ರಯೋಜಕ ಎನ್ನುತ್ತಿದ್ದೆಯಲ್ಲಾ, ಒಂದು ಒಳ್ಳೆಯ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡೆ. ಈಗ ಹೇಳು ನೋಡೋಣ" ಎಂದ. 
ಅನ್ನಪೂರ್ಣಮ್ಮನವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸದಾಶಿವರಾಯರು ತೀರಿಕೊಂಡ ಮೇಲೆ ಅವರ ಪೆನ್ಷನ್ ನಲ್ಲಿ ತಮ್ಮ ಇಬ್ಬರೂ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದರು. ಮಗ ಮನೋಜನನ್ನು ಇಂಜಿನಿಯರಿಂಗ್ ಮಾಡಿಸಿದರು. ಆದರೆ ಮನೋಜ ಸ್ವಲ್ಪ ಬೇಜವಾಬ್ದಾರಿ, ಉಡಾಫೆ ಸ್ವಭಾವದವನು. ಬುದ್ಧಿ ಇದ್ದರೂ ಉಪಯೋಗಿಸಿಕೊಳ್ಳಲು ಸೋಮಾರಿತನ. ಮಕ್ಕಳು ದೊಡ್ಡವರಾದಂತೆ ಪೆನ್ಷನ್‍ನಲ್ಲಿ ಮನೆ ನಿಭಾಯಿಸಲು ಕಷ್ಟವಾಗುತ್ತಿತ್ತು. ಹಾಗಾಗಿ ಅನ್ನಪೂರ್ಣಮ್ಮ ಹಲವಾರು ಬಾರಿ ಹೇಳಿ ಹೇಳಿ ಸಹನೆ ಮೀರಿದಾಗ ಒಮ್ಮೊಮ್ಮೆ ಅಪ್ರಯೋಜಕ ಎಂದಿದ್ದರು. ಇಂತಹ ಸಂದರ್ಭದಲ್ಲಿ ಮನೋಜನಿಗೆ ಕೆಲಸ ದೊರೆತದ್ದು ಒಂದು ಆಸರೆಯಾಯಿತು ಎಂದುಕೊಂಡರು ಅನ್ನಪೂರ್ಣಮ್ಮ. 
ಆದರೆ ಮನೋಜ ಕೆಲಸಕ್ಕೆ ಹೋಗಲು ಶುರುಮಾಡಿದ ಎರಡು ತಿಂಗಳಲ್ಲೇ ತನ್ನ ದರ್ಪವನ್ನು ತಾಯಿ, ತಂಗಿಯರ ಮೇಲೆ ತೋರಿಸಲಾರಂಭಿಸಿದ. 
ಎಂದಿನಂತೆಯೇ ಅಂದು ಕೆಲಸಕ್ಕೆ ಹೋಗುವಾಗ ತಡವಾಗಿ ಎದ್ದು "ಅಮ್ಮಾ ಸ್ನಾನಕ್ಕೆ ನೀರು ರೆಡಿ ಮಾಡು, ಆಶಾ ನನ್ನ ಶರ್ಟ್ ಐರನ್ ಮಾಡಿ, ಶೂ ಪಾಲಿಶ್ ಮಾಡಿಡೇ" ಎಂದು ಆಜ್ಞಾಪಿಸತೊಡಗಿದ. 
ಅನ್ನಪೂರ್ಣಮ್ಮ "ಏನೋ ಮನು, ನಾನು ತಿಂಡಿ ಮಾಡ್ತಿರ್ತೀನಿ, ಆಶಾ ಹತ್ತನೇ ತರಗತಿ, ಓದುತ್ತಿರುತ್ತಾಳೆ, ನಿನ್ನ ಕೆಲಸ ನೀನೇ ಮಾಡಿಕೊಳ್ಳೋಕೆ ಆಗೋಲ್ವೇನೋ?" ಕೇಳಿದರು. 
ಅದಕ್ಕೆ ಅವನು, “ನಾನು ಮಾಡ್ಕೋಬೇಕಾ? ನೀವು ಮಾಡಿದರೆ ತಪ್ಪೇನು? ನಾನು ತಂದುಹಾಕೋಲ್ವಾ? ಅದಕ್ಕಿಂತ ನಿಮಗೇನು ಕೆಲಸ" ಎಂದು ವಾದಿಸಿದ. 
ಇದರಿಂದ ಅನ್ನಪೂರ್ಣಮ್ಮನವರಿಗೆ ತುಂಬಾ ನೋವಾಯಿತು. ತನ್ನನ್ನು 20 ವರ್ಷ ನೋಡಿಕೊಂಡಿದ್ದ ತನ್ನ ಗಂಡನೇ ಒಂದು ದಿನ ನನ್ನೊಂದಿಗೆ ಹೀಗೆ ಮಾತನಾಡಿದವರಲ್ಲ, ಈಗ ಮಗನಿಂದ ಈ ರೀತಿ ಮಾತು ಕೇಳಬೇಕಾಯಿತಲ್ಲ ಎಂದು ನೊಂದುಕೊಂಡರು. 
ಮರುದಿನ ಬೆಳಿಗ್ಗೆ, ಮನೋಜ ಆಫೀಸಿಗೆ ರೆಡಿಯಾಗುತ್ತಿದ್ದಾಗ ಅನ್ನಪೂರ್ಣಮ್ಮನವರು ತಿಂಡಿ ತಟ್ಟೆ ಅವನಿಗೆ ನೀಡಿ, ಬಹಳ ಸಂಕೋಚದಿಂದ "ಮನೋಜ, ನನಗೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ. ಎಲ್ಲವೂ ಮಂಜುಮಂಜಾಗಿದೆ, ಅಕ್ಕಿ ಆರಿಸೋಕೂ ಹಾಕ್ತಿಲ್ಲ, ಪೇಪರ್ ಓದ್ಲಿಕ್ಕೂ ಆಗ್ತಿಲ್ಲ, ಅದಕ್ಕೆ ಸಂಜೆ ಬೇಗ ಬರ್ತೀಯಾ, ಆಸ್ಪತ್ರೆಗೆ ಹೋಗೋಣ" ಎನ್ನುತ್ತಲೇ, ಮನೋಜ, "ನೀನು ಪೇಪರ್ ಓದಿ ಯಾವ ದೇಶಾನೂ ಆಳಬೇಕಿಲ್ಲಮ್ಮ, ಸುಮ್ಮನೆ ವೇಸ್ಟ್ ಖರ್ಚು, ಅಕ್ಕಿ ಆರಿಸೋಕೇ ಆಶಾಗೆ ಹೇಳು" ಎಂದುಬಿಟ್ಟ,. ಅನ್ನಪೂರ್ಣಮ್ಮನವರಿಗೆ ಕಣ್ಣಲ್ಲಿ ನೀರು ತುಂಬಿಕೊಂಡಿತು. "ಆಯ್ತಪ್ಪ" ಎಂದು ಒಳಹೋದರು. 
ಸಂಜೆ ಮನೋಜ ಆಫೀಸಿನಿಂದ ಬರುವಾಗ ತನಗಾಗಿ 1000 ರೂ ನೀಡಿ ಹೊಸ ಶೂ ತಂದ.  ಇದನ್ನು ಕಂಡು ದಂಗಾದ ಆಶಾ "ಏನಣ್ಣಾ ನೀನು ಬೆಳಿಗ್ಗೆ ಅಮ್ಮನಿಗೆ ಕಣ್ಣು ಚೆಕ್ ಮಾಡಿಸೋಕೆ ಅದು ವೇಸ್ಟ್ ಖರ್ಚು ಅಂತ ಬೈದುಬಿಟ್ಟೆ. ಈಗ ಮಾತ್ರ ನಿನಗೆ ಇಷ್ಟು ಬೆಲೆ ಬಾಳುವ ಶೂ ಅನ್ನು ತಂದಿದ್ದೀಯ, ಅದೂ ನಿನ್ನ ಬಳಿ ಈಗಾಗಲೇ ಒಂದು ಹೊಸ ಶೂ ಇದ್ದೂ ಕೂಡ" ಎಂದಳು. 
ಅದಕ್ಕೆ ಮನೋಜ ಮುಖ ಕೆಂಪಗೆ ಮಾಡಿಕೊಂಡು, "ನನ್ನ ಹಣ ನನ್ನಿಷ್ಟ, ನಿನಗೇನು ಹೋಗೆ" ಎಂದು ಗದರಿಬಿಟ್ಟ. 
ಅಲ್ಲಿಂದ, ನೇರ ತನ್ನ ಸ್ನೇಹಿತನನ್ನು ಭೇಟಿಯಾಗಲು ಪಾರ್ಕಿಗೆ ಬಂದು ಬೆಂಚೊಂದರ ಮೇಲೆ ಕುಳಿತ. ಅಷ್ಟರಲ್ಲಿ ಅಲ್ಲಿಗೆ 12 ವರ್ಷದ, ಹರಕಲು ಶರ್ಟಿನ, ತುಂಡು ನಿಕ್ಕರಿನ, ಕಾಲಿಗೆ ಚಪ್ಪಲಿಯಿಲ್ಲದ ಒಬ್ಬ ಹುಡುಗ “ಗರಂ ಗರಂ ಕಳ್ಳೆಕಾಯಿ ಸರ್, ಒಂದು ಪೊಟ್ಟಣ 2 ರೂ ಸರ್, ಎಂದ. ಮನೋಜ ‘ಬೇಡ’ ಎಂದ. 
ಅದಕ್ಕವನು, “ ತುಂಬಾ ಚೆನ್ನಾಗಿದೆ ಸರ್, ಕಾಯಿ ಕೆಟ್ಟಿದ್ರೆ ವಾಪಸ್ ಕೊಡಿ ಸರ್, ಒಂದು ಪೊಟ್ಟಣ ತಗೊಳ್ಳಿ ಸರ್’ ಅಂದ. 
ಮನೋಜ "ಒಂದು ಸಾರಿ ಹೇಳಲಿಲ್ಲವಾ, ಬೇಡ ಅಂತಾ, ಹೋಗೊ" ಎಂದು ರೇಗಿಬಿಟ್ಟ. ಆ ಹುಡುಗ ಹೆದರಿ, ಪೆಚ್ಚುಮೋರೆ ಹಾಕಿಕೊಂಡು ಅಲ್ಲೇ ಒಂದು ಕಡೆ ಕೂತ. 
ಕೂತವನೇ ತನ್ನ ಜೇಬಿನಿಂದ ಮೋಟು ಪೆನ್ಸಿಲ್, ಹರಕಲು ಕಾಗದ ತೆಗೆದು ಏನೋ ಲೆಕ್ಕ ಹಾಕತೊಡಗಿದ. ಇದನ್ನು ಕಂಡ ಮನೋಜ, 'ಎಲಾ ಇವನಾ ಚೋಟುದ್ದ ಇದಾನೆ, ಏನೋ ಲೆಕ್ಕ ಹಾಕ್ತಿದ್ದಾನಲ್ಲ' ಎಂದುಕೊಂಡು ಕುತೂಹಲದಿಂದ "ಏ ಹುಡುಗ ಬಾರೋ ಇಲ್ಲಿ" ಎಂದು ಕೂಗಿದ. 
ಅದಕ್ಕವನು ಸಂತೋಷದಿಂದ "ಬಂದೆ ಸರ್, ಕಳ್ಳೆಕಾಯಿ ಬೇಕೆ" ಎಂದು ಓಡಿ ಬಂದ. “ಏನೋ ಅದು ಲೆಕ್ಕ ಹಾಕ್ತಿದ್ದೆ” ಎಂದು ಕೇಳಿದಾಗ, ಅವನು ನಾಚಿಕೆಯಿಂದ "ಏನು ಇಲ್ಲ ಸರ್" ಎಂದ. 
"ಪರವಾಗಿಲ್ಲ ಹೇಳೋ." 
ಆಗ ಆ ಹುಡುಗ, “ಸರ್ ನೆನ್ನೆ ನಮ್ಮಮ್ಮ ದೇವಸ್ಥಾನಕ್ಕೆ ಹೋಗುವಾಗ ಕಾಲಿಗೆ ಮುಳ್ಳು ಚುಚ್ಚಿ ತುಂಬಾ ನೋವಾಗಿದೆ. ಅವಳ ಚಪ್ಪಲಿ ಪೂರ್ತಿ ಸವೆದುಹೋಗಿ, ಕಿತ್ತುಹೋಗಿದೆ. ಅಮ್ಮ ಸಂಕೋಚದಿಂದ ನನ್ನನ್ನು ಕೇಳಲೇ ಇಲ್ಲ. ಅದಕ್ಕೆ ನಾನು ಅವಳಿಗೆ ಹೊಸ ಚಪ್ಪಲಿ ಕೊಡಿಸೋಣ ಅಂತ 20 ರೂ ಕೂಡಿಸ್ತಾ ಇದ್ದೀನಿ. ಬೆಳಿಗ್ಗೆ ಒಂದು ಘಂಟೆ ಮುಂಚೆ ಬಂದು ಕಳ್ಳೆಕಾಯಿ ಮಾರ್ತಾ ಇದ್ದೀನಿ. 18 ರೂ ಆಗಿದೆ. ಇನ್ನು ಒಂದು ಪೊಟ್ಟಣ ಮಾರಿದರೆ 20 ರೂ ಆಗುತ್ತೆ. ಅದಕ್ಕೆ ನಿಮ್ಮನ್ನು ತುಂಬಾ ಪೀಡಿಸಿದೆ. ಕ್ಷಮಿಸಿ ಸರ್” ಅಂದ. 
ಅದಕ್ಕೆ ಮನೋಜ “ಯಾಕೆ ನಿಮ್ಮ ತಂದೆ ಇಲ್ವಾ”, ಕೇಳಿದ. ಅದಕ್ಕೆ ಹುಡುಗ “ಇಲ್ಲ ಸರ್, ನಾನು ಚಿಕ್ಕವನಿದ್ದಾಗ ನನ್ನ ತಂದೆ ನಮ್ಮನ್ನು ಬಿಟ್ಟು ಹೋಗಿಬಿಟ್ಟ. ನನ್ನ ತಾಯಿ ಮತ್ತು ನನ್ನ ತಮ್ಮನನ್ನು ನಾನೇ ನೋಡಿಕೊಳ್ತೀನಿ ಸರ್”, ಎಂದು ಹೆಮ್ಮೆಯಿಂದ ಹೇಳಿ, ಅಲ್ಲಿಂದ ಹೊರಟ.
ಇದನ್ನು ಕೇಳಿದ ಮನೋಜ ನಾಚಿಕೆಯಿಂದ ತಲೆತಗ್ಗಿಸಿದ. ಅವನಿಗಾದ ದುಃಖಕ್ಕೆ ಪಾರವೇ ಇರಲಿಲ್ಲ. ಆ ಪುಟ್ಟ ಹುಡುಗನ ಎದುರು ತಾನು ಬಹಳ ಸಣ್ಣವ ಎನಿಸಿಬಿಟ್ಟಿತು. ಬೆಳಿಗ್ಗೆ ತಾನು ಅಮ್ಮನೊಂದಿಗೆ ವರ್ತಿಸಿದ ರೀತಿ ನೆನಪಾಗಿ ಕಣ್ಣಲ್ಲಿ ನೀರು ತುಂಬಿತು. ತಕ್ಷಣ ಆ ಹುಡುಗನನ್ನು ಕರೆದು 2 ಪೊಟ್ಟಣ ಕಳ್ಳೆಕಾಯಿ ಕೊಂಡು ‘ಥ್ಯಾಂಕ್ಸ್ ಪುಟ್ಟಾ’ ಎಂದು ಅಲ್ಲಿಂದ ನೇರ ಮನೆಗೆ ಓಡಿದ. 
ರೂಪಶ್ರೀ.ವಿ.ಬಿ


ಕಾಮೆಂಟ್‌ಗಳಿಲ್ಲ: