[ಇತ್ತೀಚೆಗೆ ನಿಧನರಾದ ಕನ್ನಡದ ಪ್ರಸಿದ್ಧ ವಿಜ್ಞಾನ ಲೇಖಕರಾದ, ಪ್ರಗತಿಪರ ಚಿಂತಕರಾದ ಪ್ರೊ. ಜೆ ಆರ್ ಲಕ್ಷಣ್ ರಾವ್ ರವರ ಬಗ್ಗೆ ಅವರ ಮಗಳ ಅನುಭವ ]
ಇದರೊಡನೆ ನೆನಪಾಗುವುದು ಅಣ್ಣ ನಮಗೆಲ್ಲ ತಂದು ಕೊಟ್ಟಿದ್ದ ಜಿ.ಪಿ.ರಾಜರತ್ನಂ ಅವರ ಪುಸ್ತಕ ‘ಮಕ್ಕಳ ಪದ್ಯಗಳು’, ರಷ್ಯ ಹಾಗೂ ಚೀನಾ ದೇಶದ ಪ್ರಕಟಣೆಯ ಮಕ್ಕಳ ಕತೆ ಪುಸ್ತಕಗಳು. ಇವಲ್ಲದೆ ವಿಜ್ಞಾನ, ಸಾಹಿತ್ಯ, ಕಲೆಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಸಾಮಾಜಿಕ ಮೌಲ್ಯಗಳನ್ನೊಳಗೊಂಡ ಪುಸ್ತಕಗಳು, ಬಗೆಬಗೆಯ ವಿಶ್ವಕೋಶಗಳು, ಹಾಗೂ ಹಲವಾರು ವೈಜ್ಞಾನಿಕ ಹಾಗೂ ವೈಚಾರಿಕ ನಿಯತಕಾಲಿಕಗಳನ್ನೊಳಗೊಂಡ ಗ್ರಂಥಭಂಡಾರ ಪುಟ್ಟ ಮನೆಯ ಪುಟ್ಟ ಕೋಣೆಯಲ್ಲಿ ಆಗಲೇ ಸ್ಥಾಪನೆಯಾಗಿತ್ತು. ಅದೇ ಅವರ ದೊಡ್ಡ ಆಸ್ತಿ. ಅಂತೆಯೇ ಅಣ್ಣ ನಮಗೆ ನೀಡಿದ ಅತ್ಯಮೂಲ್ಯ ಉಡುಗೊರೆಯೆಂದರೆ ಗ್ರಂಥ ಭಂಡಾರ ಮತ್ತು ಹಲವಾರು ಸಾಮಾಜಿಕ ಮೌಲ್ಯಗಳು.
ಇದೇ ಸಮಯದಲ್ಲಿ, ಅಂದರೆ ನನಗೆ ಏಳು ಎಂಟು ವರ್ಷವಾಗಿದ್ದಾಗ ನಾನು ಸಂಗೀತ ಕಲಿಯಬೇಕೆಂಬ ಆಸೆ ವ್ಯಕ್ತ ಪಡಿಸಿದಾಗ ಅಣ್ಣ ಅದಕ್ಕೆ ಕೂಡಲೇ ಏರ್ಪಾಡು ಮಾಡಿದರು. ಅಲ್ಲದೆ ಬೆಂಗಳೂರಿನಿಂದ ಒಳ್ಳೆಯ ತಂಬೂರಿ ತರಿಸಿಕೊಟ್ಟರು. ನನಗೆ ನೆನಪಿರುವಂತೆ ಅದಕ್ಕೆ ಆಗ ೧೩೦ ರೂಪಾಯಿಗಳಿದ್ದಿರಬೇಕು. ಅದು ಆಗಿನ ಕಾಲಕ್ಕೆ ಬಹಳ ದೊಡ್ಡ ಮೊತ್ತ. ಮುಂದೆ ಅಣ್ಣನಿಗೆ ವರ್ಗವಾಗಿ ನಾವೆಲ್ಲ ಮೈಸೂರಿಗೆ ಬಂದ ನಂತರವೂ ತಮ್ಮ ನಾಲ್ಕು ಮಕ್ಕಳಿಗೂ ಸಂಗೀತ ಕಲಿಸಲು ಏರ್ಪಾಡು ಮಾಡಿದರು. ಆಗಿನ ಕಾಲದಲ್ಲಿ ಕಾಲೇಜು ಅಧ್ಯಾಪಕರಿಗೆ ಸಿಗುತ್ತಿದ್ದ ವೇತನ ಅತಿ ಕಡಿಮೆ. ಆದರೆ ಮಕ್ಕಳ ಏಳಿಗೆಗಾಗಿ ಖರ್ಚು ಮಾಡಲು ಅಣ್ಣ ಹಿಂದು ಮುಂದು ನೋಡಲಿಲ್ಲ. ನಮ್ಮ ಮನೆಯಲ್ಲಿ ಬಟ್ಟೆ, ಒಡವೆಗಳಿಗೆ ಎಂದೂ ಪ್ರಾಶಸ್ತ್ಯವಿರಲಿಲ್ಲ. ನಮಗೆ ಎಂದೂ ಅದರ ಕೊರತೆ ಕಾಣಲೇ ಇಲ್ಲ.
ಮೈಸೂರಿನಲ್ಲಿ ನಡೆಯುವ ಸಂಗೀತ, ನೃತ್ಯ, ನಾಟಕಗಳು, ಸಾಹಿತ್ಯ ಚರ್ಚೆ, ಉಪನ್ಯಾಸಗಳು ಎಲ್ಲವಕ್ಕೂ ಅಣ್ಣ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದರು. ಸಂಜೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವಾಗಲೂ ಸಹ ಸಾಹಿತ್ಯ, ವಿಜ್ಞಾನಗಳನ್ನು ಕುರಿತ ಕ್ವಿಜ಼್ ನಡೆಯುತ್ತಿದ್ದವು.
ಅಣ್ಣನಿಗಿದ್ದ ವಿವಿಧ ಆಸಕ್ತಿ ಹಾಗೂ ಉತ್ತಮ ಮೌಲ್ಯಗಳಿಂದಾಗಿ ಅವರಿಗಿದ್ದ ಸ್ನೇಹಿತರು, ಒಡನಾಡಿಗಳು ಸಾಮಾನ್ಯರಲ್ಲ. ಹೀಗಾಗಿ ನಮಗೆ ಚಿಕ್ಕಂದಿನಿಂದಲೂ ಪರಿಚಯವಾದವರೆಂದರೆ ಪ್ರೊ. ಸತೀಶ್ ಧವನ್, ಅಮೂಲ್ಯ ರೆಡ್ದಿ, ಕುವೆಂಪು, ಪುತಿನ, ಎ.ಎನ್.ಮೂರ್ತಿರಾವ್, ಶಿವರಾಮ ಕಾರಂತರು, ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು ಇಂತಹ ಮಹಾನುಭಾವರೇ! ಇಂತಹ ಶ್ರೀಮಂತ ವಾತಾವರಣದಲ್ಲಿ ಬೆಳೆದ ಅದೃಷ್ಟ ನಮ್ಮದು.
ಅಣ್ಣನಿಗಿದ್ದ ವಿವಿಧ ಆಸಕ್ತಿ ಹಾಗೂ ಉತ್ತಮ ಮೌಲ್ಯಗಳಿಂದಾಗಿ ಅವರಿಗಿದ್ದ ಸ್ನೇಹಿತರು, ಒಡನಾಡಿಗಳು ಸಾಮಾನ್ಯರಲ್ಲ. ಹೀಗಾಗಿ ನಮಗೆ ಚಿಕ್ಕಂದಿನಿಂದಲೂ ಪರಿಚಯವಾದವರೆಂದರೆ ಪ್ರೊ. ಸತೀಶ್ ಧವನ್, ಅಮೂಲ್ಯ ರೆಡ್ದಿ, ಕುವೆಂಪು, ಪುತಿನ, ಎ.ಎನ್.ಮೂರ್ತಿರಾವ್, ಶಿವರಾಮ ಕಾರಂತರು, ವೀಣಾ ದೊರೆಸ್ವಾಮಿ ಅಯ್ಯಂಗಾರ್ಯರು ಇಂತಹ ಮಹಾನುಭಾವರೇ! ಇಂತಹ ಶ್ರೀಮಂತ ವಾತಾವರಣದಲ್ಲಿ ಬೆಳೆದ ಅದೃಷ್ಟ ನಮ್ಮದು.
ಒಳ್ಳೆಯದು ಕೆಟ್ಟದು ಎಂಬುದರ ಬಗ್ಗೆ ಅಣ್ಣ ನಮಗೆ ನೀತಿ ಕತೆಗಳನ್ನು ಎಂದೂ ಹೇಳಲಿಲ್ಲ. ಆದರೆ ವಿದ್ಯೆ, ಗುಣ, ನಡೆವಳಿಕೆಗಳಲ್ಲಿ ಶ್ರೀಮಂತಿಕೆಯನ್ನು ಮೆರೆದ ವ್ಯಕ್ತಿಗಳ ಬಗ್ಗೆ ಸಂತೋಷದಿಂದ ವಿವರಿಸುವುದರ ಮೂಲಕ, ಯಾವುದೇ ರೀತಿಯಲ್ಲಿ ಕೀಳಾಗಿ ನಡೆದುಕೊಂಡವರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದನ್ನು ಕೇಳುವ ಮೂಲಕ ಹಾಗೂ ಕೆಲವು ಕಷ್ಟದ ಸಂದರ್ಭಗಳನ್ನು ಅಣ್ಣ ಹೇಗೆ ಎದುರಿಸಿದರು ಎಂಬುದನ್ನು ನಾವೇ ಗಮನಿಸುವ ಮೂಲಕ ಒಳ್ಳೆಯದು ಕೆಟ್ಟದ್ದು ಎಂಬ ಬಗ್ಗೆ ನಮಗೆ ತಾನಾಗಿಯೇ ಅರಿವು ಉಂಟಾಯಿತು.
ಜಾತಿ ಮತ ಭೇದ ಅಣ್ಣನಿಗೆ ಕಿಂಚಿತ್ತೂ ಇರಲಿಲ್ಲ. ಅವೆಲ್ಲ ಕೇವಲ ಮಾನವನ ಸೃಷ್ಟಿ, ಜನಿಸಿದ ಮೇಲೆ ಪ್ರಪಂಚದಲ್ಲಿ ಎಲ್ಲರೂ ಸಮಾನರು ಎಂದು ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ಕಂಡುಕೊಂಡಿದ್ದರು. ಅಂತೆಯೇ ಎಲ್ಲ ಬಗೆಯ ಜನರೊಡನೆಯೂ ಅಣ್ಣನ ಒಡನಾಟವಿತ್ತು. ಅಣ್ಣನ ಈ ಭಾವನೆಗಳಿಗೆ ಅಮ್ಮನೂ ಒತ್ತು ನೀಡಿದ್ದರಿಂದ ನಮ್ಮ ಮನೆಯ ವಾತಾವರಣದಲ್ಲಿ ಜಾತಿ ಎಂಬ ಪದವನ್ನೇ ನಾವು ಕೇಳಿರಲಿಲ್ಲ. ನಾನು ಪ್ರೈಮರಿ ತರಗತಿಯಲ್ಲಿದ್ದಾಗ ಒಮ್ಮೆ ಶಾಲೆಯಿಂದ ಬಂದು, ‘ಅಣ್ಣ ನಾವು ಯಾವ ಜಾತಿ?’ ಎಂದು ಕೇಳಿದಾಗ ಅಣ್ಣನಿಗಾದ ಆಘಾತ ನನಗಿನ್ನೂ ನೆನಪಿದೆ. ಶಾಲೆಯಲ್ಲಿ ಯಾವುದೋ ದಾಖಲೆಗಾಗಿ ಕೇಳಿದ್ದರೆಂದು ತೋರುತ್ತದೆ, ಅದನ್ನು ನಾನು ಮುಗ್ಧಳಾಗಿ ಬಂದು ಕೇಳಿದ್ದೆ. ಹೀಗಾಗಿ ಜಾತಿ ಎಂಬುದೇನಿದ್ದರೂ ನಮಗೆ ಹೊರಗಿನಿಂದ ಪರಿಚಯವಾದ ಪದ.
ಇತರ ಜಾತಿ ಮತಗಳ, ವರ್ಗಗಳ ಅಥವಾ ಪ್ರಾಂತ್ಯಗಳ ಜನರ ಬಗ್ಗೆ ಸಾಮಾನ್ಯೀಕರಿಸಿ ಅವರು ಹಾಗೆ ಇವರು ಹೀಗೆ ಎಂದು ಹೀನಾಯವಾಗಿ ಮಾತನಾಡುವುದನ್ನು, ಯಾರದೇ ಬಗ್ಗೆ ಪೂರ್ವಗ್ರಹಗಳನ್ನಿಟ್ಟುಕೊಂಡು ಅವರನ್ನು ಕಡೆಗಾಣುವುದನ್ನು ಅಣ್ಣ ಸ್ವಲ್ಪವೂ ಸಹಿಸುತ್ತಿರಲಿಲ್ಲ.
ವಿಚಾರವಾದದಲ್ಲಿ ಸಂಪೂರ್ಣ ವಿಶ್ವಾಸ, ಭರವಸೆಗಳನ್ನಿಟ್ಟುಕೊಂಡಿದ್ದ ಅಣ್ಣ ಯಾವಾಗಲೂ ಹೇಳುತ್ತಿದ್ದುದೆಂದರೆ, ಕಿವಿಗೆ ಬೀಳುವ ಯಾವುದೇ ವಿಷಯವನ್ನು ತಾರ್ಕಿಕವಾಗಿ ಚಿಂತಿಸಿ ಸರಿಯೇ ತಪ್ಪೇ ಎಂಬ ಬಗ್ಗೆ ನೀವೇ ತೀರ್ಮಾನಕ್ಕೆ ಬರಬೇಕೇ ಹೊರತು ಅದನ್ನು ಕುರುಡು ಕುರುಡಾಗಿ ನಂಬಬಾರದು ಎಂದು.
ವೈಜ್ಞಾನಿಕ ಮನೋಭಾವದಿಂದಲೇ ಸಮಾಜ ಉದ್ಧಾರ ಸಾಧ್ಯ ಎಂದು ಬಲವಾಗಿ ನಂಬಿದ್ದ ಅಣ್ಣ ಅದರ ಬೆಳೆವಣಿಗೆಗಾಗಿ ಬಹಳ ಶ್ರಮಿಸಿದರು.
ಅಣ್ಣ ಸ್ವತಃ ನಾಸ್ತಿಕರಾಗಿದ್ದರು. ಮೂಢಾಚರಣೆ, ಕಂದಚಾರಗಳನ್ನು ಸಹಿಸುತ್ತಿರಲಿಲ್ಲ. ಇವುಗಳಿಂದ ಮುಗ್ಧ ಜನ ಅನಾವಶ್ಯಕ ಕಷ್ಟಕ್ಕೊಳಗಾಗುತ್ತಾರೆಂದು ಬಗ್ಗೆ ಅದರ ವಿರುದ್ಧ ಪ್ರಚಾರ ಮಾಡಿದರು. ಆದರೆ ಇತರರ ಭಾವನೆಗಳಿಗೆ ನೋವು ಉಂಟು ಮಾಡಬಾರದೆಂಬ ಮನೋಭಾವದಿಂದ ಅವರ ತಾಯಿ ಮತ್ತು ಅಕ್ಕಂದಿರ ಭಾವನೆಗಳನ್ನು ಗೌರವಿಸಿ ಕೆಲವು ಪೂಜೆಗಳನ್ನು ಅಣ್ಣ ಪಾಂಗತವಾಗಿ ಮಾಡಿದ್ದುಂಟು. ಅಕ್ಕಂದಿರು ಬದುಕಿರುವವರೆಗೂ ಅವರ ಸಮಾಧಾನಕ್ಕಾಗಿ ತಂದೆ ತಾಯಿಯರ ಶ್ರಾದ್ಧವನ್ನೂ ಮಾಡುತ್ತಿದ್ದರು. ತಮ್ಮ ನಂಬಿಕೆಯನ್ನು ಅವರು ಇತರರ ಮೇಲೆ ಹೇರಲಿಲ್ಲ. ನಂಬಿಕೆಯುಳ್ಳವರನ್ನು ಅನಾದರ ಮಾಡಲಿಲ್ಲ.
ಮಾರ್ಕ್ಸ್ ವಾದ ಹಾಗೂ ಎಡಪಂಥೀಯ ಕಲ್ಪನೆಗಳತ್ತ ಒಲವಿದ್ದ ಅಣ್ಣ ಸಮಾಜದಲ್ಲಿ ಯಾವುದೇ ರೀತಿಯ ಮೇಲುಕೀಳುಗಳಿರುವುದು ಜೀವನದ ಅನ್ಯಾಯ ಎಂದು ನಂಬಿದ್ದರು. ಹಣ ಎಂಬುದು ಜೀವನದಲ್ಲಿ ‘ಅವಶ್ಯಕ ಪಿಡುಗು’ ಎಂಬುದು ಅವರ ಸ್ಪಷ್ಟ ನಿಲುವು. ದೊಡ್ಡಸ್ತಿಕೆ, ಶ್ರೀಮಂತಿಕೆಯ ಪ್ರದರ್ಶನ ಅಣ್ಣನಿಗೆ ಬಹಳ ಕಸಿವಿಸಿ ಉಂಟು ಮಾಡುತ್ತಿತ್ತು. ಅಂತೆಯೇ ತಾವೂ ನಿರಾಡಂಬರ ಜೀವನ ನಡೆಸಿದರು.
ಇತ್ತೀಚೆಗೆ ಬ್ಯಾಂಕ್ ವ್ಯವಹಾರವನ್ನು ಅಮ್ಮನೇ ನಡೆಸುತ್ತಿದ್ದರು. ಈಗ ಎರಡು ಮೂರು ತಿಂಗಳ ಹಿಂದೆ ಪಾಸ್ ಬುಕ್ ಅಣ್ಣನ ಕೈಗೆ ಸಿಕ್ಕು ಅದನ್ನು ನೋಡುತ್ತಿದ್ದಂತೆ ಅಮ್ಮನನ್ನು ಕುರಿತು ‘ಶಾಂತ, ಇದೇನು ಇಷ್ಟೊಂದು ದುಡ್ಡು ಸೇರಿಕೊಂಡುಬಿಟ್ಟಿದೆ! ಇದರಲ್ಲಿ ಮೂರನೆ ಒಂದು ಭಾಗ charityಗೆ ಕೊಟ್ಟುಬಿಡೋಣ’ ಎಂದು ಉದ್ಗರಿಸಿದ್ದು ನೋಡಿದರೆ ಅವರಿಗೆ ಆ ವಯಸ್ಸಿನಲ್ಲಿಯೂ ಇದ್ದ presence of mind, ಅಸಹಾಯಕರ ಬಗ್ಗೆ ಮೊದಲಿನಿಂದಲೂ ಇದ್ದ ಕಾಳಜಿ ಎಷ್ಟೆಂದು ತಿಳಿಯುತ್ತದೆ.
ಹತ್ತು ವರ್ಷ ವಯಸ್ಸಿನಲ್ಲೇ ಬಾಲ ವಿಧವೆಯಾದ ತಮ್ಮ ದೊಡ್ಡಮ್ಮ ತಮ್ಮದೇ ಆದ ವೈಯಕ್ತಿಕ ಜೀವನವೊಂದಿದೆ ಎಂಬುದನ್ನೂ ಅರಿಯದೆ ಕುಟುಂಬದ ಎಲ್ಲರ ಸೇವೆಗಾಗಿಯೇ ತಮ್ಮ ಜೀವ ತೇಯ್ದು, ಮತ್ತೊಬ್ಬರ ಹಂಗಿನಲ್ಲೇ ಜೀವನ ನಡೆಸಿದ್ದನ್ನು ಕಂಡು ಕರುಳು ಮಿಡಿದ ಅಣ್ಣ, ಯಾವುದೇ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೊಬ್ಬಳು ಹೀಗೆ ವಂಚಿತಳಾಗಬಾರದೆಂದೂ, ಅವಳು ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಬೇಕೆಂದೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ಒತ್ತು ನೀಡಿದರು. ಐದಾರು ದಶಕಳಷ್ಟು ಹಿಂದಿನಿಂದಲೂ ಹಲವಾರು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ ಅವರು ಜೀವನದಲ್ಲಿ ಮುಂದೆ ಬರುವಲ್ಲಿ ನೆರವಾದರು. ಹೆಣ್ಣುಮಕ್ಕಳನ್ನು ಅಣ್ಣ ಬಹಳ ಗೌರವದಿಂದ ಕಾಣುತ್ತಿದ್ದರು. ಅವರೊಡನೆ ಮಾತನಾಡುವಾಗ, ‘ಅಮ್ಮ’ ಎಂದು ಸೇರಿಸಿಯೇ ಸಂಬೋಧಿಸುತ್ತಿದ್ದುದು.
ಅಮ್ಮ ಅಣ್ಣನಿಗೆ ನಾವು ಮೂವರು ಹೆಣ್ಣು ಮಕ್ಕಳು, ಒಬ್ಬನೇ ಗಂಡು ಮಗ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಗಂಡು ಮಕ್ಕಳಿಗೇ ಹೆಚ್ಚು ಪ್ರಾಶಸ್ತ್ಯವಷ್ಟೆ? ಆದರೂ ಒಮ್ಮೆಯಾದರೂ ಅಮ್ಮ ಅಣ್ಣನಲ್ಲಿ ಈ ಭಾವನೆಯನ್ನು ನಾವು ಕಾಣಲಿಲ್ಲ. ನಾಲ್ಕೂ ಮಕ್ಕಳನ್ನು ಸರಿ ಸಮಾನರಾಗಿ ಕಂಡರು.
ಜೀವನದಲ್ಲಿ ಏರುಪೇರುಗಳಿದ್ದೇ ಇರುತ್ತವೆ. ಕಷ್ಟ ಏನೇ ಬರಲಿ ಬಂದದ್ದನ್ನು ಬಂದಂತೆ ಎದುರಿಸಬೇಕು ಎಂಬುದು ಅಣ್ಣನ ನಿಲುವು. ತಾವು ಅದನ್ನು ಅಕ್ಷರಶಃ ಪಾಲಿಸಿದರು ಕೂಡ. ಎಂತಹ ಕಷ್ಟ ಪರಿಸ್ಥಿತಿ ಎದುರಾದರೂ ಆಶಾಭಾವ ಕಳೆದುಕೊಳ್ಳದಿರುವ ಗುಣ ಅಣ್ಣನ ನಾಲ್ಕು ಮಕ್ಕಳಿಗೂ ಬಂದಿರುವುದು ಅಣ್ಣನಿಂದಲೇ ಎಂಬ ಬಗ್ಗೆ ಎರಡು ಮಾತಿಲ್ಲ. ಎಂದೂ ಯಾವುದೇ ವಿಷಯಕ್ಕೆ ಅಣ್ಣ ಗೊಣಗಿದ್ದಿಲ್ಲ.
ನನ್ನ ೬೭ ವರ್ಷದ ಒಡನಾಟದಲ್ಲಿ ಅಣ್ಣ ಒಂದೇ ದಿನವಾದರೂ ಅಮ್ಮನ ಮೇಲೆ, ಮಕ್ಕಳ ಮೇಲೆ ರೇಗಿದ್ದು, ಗೊಣಗಿದ್ದು, ಸಹನೆ ಕಳೆದುಕೊಂಡಿದ್ದು ನಾನು ನೋಡಿಲ್ಲ. ನಾವು ಮಾಡಿದ್ದರಲ್ಲಿ ಏನಾದರೂ ಸರಿಯಿಲ್ಲವೆನಿಸಿದರೆ ಅದರ ಬಗ್ಗೆ ಚರ್ಚಿಸಿ ತೀರ್ಮಾನ ನಮಗೇ ಬಿಡುತ್ತಿದ್ದರೇ ಹೊರತು ತಮ್ಮ ಅಭಿಪ್ರಾಯವನ್ನು ಹೇರುತ್ತಿರಲಿಲ್ಲ. ತಮ್ಮೊಡನೆ ಭಿನ್ನಾಭಿಪ್ರಾಯ ಇರುವಂತಹವರನ್ನೂ ಸಹ ಅಣ್ಣ ಕಡೆಗಾಣಲಿಲ್ಲ. ಅವರಲ್ಲಿರುವ ಒಳಿತನ್ನು ಕಂಡರು.
ನನ್ನ ೬೭ ವರ್ಷದ ಒಡನಾಟದಲ್ಲಿ ಅಣ್ಣ ಒಂದೇ ದಿನವಾದರೂ ಅಮ್ಮನ ಮೇಲೆ, ಮಕ್ಕಳ ಮೇಲೆ ರೇಗಿದ್ದು, ಗೊಣಗಿದ್ದು, ಸಹನೆ ಕಳೆದುಕೊಂಡಿದ್ದು ನಾನು ನೋಡಿಲ್ಲ. ನಾವು ಮಾಡಿದ್ದರಲ್ಲಿ ಏನಾದರೂ ಸರಿಯಿಲ್ಲವೆನಿಸಿದರೆ ಅದರ ಬಗ್ಗೆ ಚರ್ಚಿಸಿ ತೀರ್ಮಾನ ನಮಗೇ ಬಿಡುತ್ತಿದ್ದರೇ ಹೊರತು ತಮ್ಮ ಅಭಿಪ್ರಾಯವನ್ನು ಹೇರುತ್ತಿರಲಿಲ್ಲ. ತಮ್ಮೊಡನೆ ಭಿನ್ನಾಭಿಪ್ರಾಯ ಇರುವಂತಹವರನ್ನೂ ಸಹ ಅಣ್ಣ ಕಡೆಗಾಣಲಿಲ್ಲ. ಅವರಲ್ಲಿರುವ ಒಳಿತನ್ನು ಕಂಡರು.
ಅಣ್ಣ ಮೊದಲಿನಿಂದಲೂ ಬಹಳ ಶಿಸ್ತಿನ, ಅಚ್ಚುಕಟ್ಟಿನ, ಸುವ್ಯವಸ್ಥಿತ ವ್ಯಕ್ತಿ. ಅವರ ಕೈಬರಹ ಅವರ ಚಿಂತನೆಯಂತೆಯೇ ಬಲು ಸ್ಪಷ್ಟ. ಪುಸ್ತಕ ಬರೆಯುವಾಗಲೂ ಅತಿಯಾಗಿ ಗೀಚಿ ಹಾಕಿದ್ದಿಲ್ಲ. ಅಮ್ಮನ ಕೈ ಬರಹ ಬಹಳ ಸುಂದರವಾಗಿರುವುದರಿಂದ ಮುದ್ರಣಾಲಯಕ್ಕೆ ಕಳುಹಿಸುವುದಕ್ಕಾಗಿ ಅಮ್ಮ ಅದರ ಉತ್ತಮ ಪ್ರತಿ ಬರೆದುಕೊಟ್ಟಿದ್ದುಂಟು. ತಮ್ಮ ಸಂಗ್ರಹದ ‘ಸೈಂಟಿಫ಼ಿಕ್ ಅಮೆರಿಕನ್’ ಮುಂತಾದ ನಿಯತಕಾಲಿಗಳನ್ನು ಬೈಂಡ್ ಮಾಡಿಸಿ ಜೋಡಿಸಿಟ್ಟಿರುತ್ತಿದ್ದರು. ಇವುಗಳಲ್ಲಿಯಾಗಲೀ, ತಮ್ಮ ಸಂಗ್ರಹದ ಇತರ ಪುಸ್ತಕಗಳಲ್ಲಾಲೀ, ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದ ಲೇಖನ ಯಾವ ಸಂಚಿಕೆಯಲ್ಲಿದೆ, ಯಾವ ಪುಟದಲ್ಲಿದೆ ಎಂಬುದನ್ನು ತಮ್ಮ ನೆನಪಿನ ಶಕ್ತಿಯೆಂದಲೇ ತೆಗೆದು ತೋರಿಸುತ್ತಿದ್ದರು. ಈ ಅಚ್ಚುಕಟ್ಟುತನ ಎಲ್ಲೆಡೆಯೂ ಎದ್ದು ಕಾಣಿಸುತ್ತಿತ್ತು. ಸುಮಾರು ತಮ್ಮ ೮೫ ವರ್ಷ ವಯಸ್ಸಿನವರೆಗೂ ತಮ್ಮ ಬಟ್ಟೆಗಳನ್ನು ತಾವೇ ಒಗೆದು ಅಚ್ಚುಕಟ್ಟಾಗಿ ಒಣಹಾಕಿ, ಮಡಿಚಿಟ್ಟುಕೊಳ್ಳುತ್ತಿದ್ದರು.
ನಿಸ್ವಾರ್ಥ ಸೇವೆ ಸಲ್ಲಿಸಿದ ಅಣ್ಣ ಬಿರುದು ಪ್ರಶಸ್ತಿಗಳಿಗಾಗಿ ಎಂದೂ ಹಂಬಲಿಸಲಿಲ್ಲ. ಅವು ತಮ್ಮನ್ನು ಅರಸಿಕೊಂಡು ಬಂದಾಗ ಬೀಗಲಿಲ್ಲ. ಅಣ್ಣನ ಜೊತೆ ಗಹನವಾಗಿ ಚರ್ಚಿಸಲು, ಹಲವಾರು ವಿಷಯಗಳನ್ನು ಕುರಿತಂತೆ ಸಲಹೆ ಕೇಳಲು ಅನೇಕ ಜನ ಬರುತ್ತಿದ್ದರು. ಯಾರೇ ಬರಲಿ ಅವರೊಡನೆ ಕುಳಿತು ಅಣ್ಣ ಸಹನೆಯಿಂದ ಚರ್ಚಿಸುತ್ತಿದ್ದರು. ಅನೇಕರಿಗೆ ಅನೇಕ ರೀತಿಯಲ್ಲಿ ನೆರವಾಗಿದ್ದರು. ಅಣ್ಣನ ಒಡನಾಟದಿಂದ ತಮ್ಮ ಜೀವನ ಹೇಗೆ ಅರ್ಥಪೂರ್ಣವಾಯಿತೆಂದು ಹೇಳುವವರು ಎಷ್ಟು ಮಂದಿಯೋ! ಯಾವ ರೀತಿಯ ಪ್ರತಿಫಲಾಪೇಕ್ಷೆಯೂ ಅಣ್ಣನಿಗಿರಲಿಲ್ಲ.
ಪ್ರಗತಿಪರ ಚಿಂತನೆ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ, ಮಹಿಳಾಪರ ಚಿಂತನೆ, ದೂರ ದೃಷ್ಟಿ, ವ್ಯಾಪಕ ಓದು, ಸ್ಪಷ್ಟ ಚಿಂತನೆ, ವೈಚಾರಿಕತೆ, ವಿಶ್ಲೇಷಣಾ ಚಾತುರ್ಯ, ವಿವಿಧ ವಿಷಯಗಳಲ್ಲಿ ಆಸಕ್ತಿ, ಸಂಸ್ಥಾಪನ ಶಕ್ತಿ, ವೈಜ್ಞಾನಿಕ ದೃಷ್ಟಿಕೋನ.... ಇತ್ಯಾದಿ ಗುಣಗಳು ಏಕೈಕ ವ್ಯಕ್ತಿಯಲ್ಲಿ ಇರಲು ಸಾಧ್ಯವೇ? ಇವೆಲ್ಲ ಅಣ್ಣನಲ್ಲಿ ಕಂಡುಬಂದ ಗುಣಗಳೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ತಮ್ಮ ಮೌಲ್ಯಗಳಲ್ಲಿ ಅಣ್ಣನಿಗೆ ವಿಶ್ವಾಸವಿತ್ತು. ತಮ್ಮ ನಂಬಿಕೆಗಳಲ್ಲಿ ದೃಢತೆ ಇತ್ತು. ತಮ್ಮ ಸಾವಿನ ನಂತರ ಯಾವ ವಿಧಿಗಳನ್ನೂ ಮಾಡಬಾರದೆಂದು ಬರೆದಿಟ್ಟಿದ್ದರು. ಅವರ ಇಚ್ಛೆ ನೆರವೇರಿತು. ಅಣ್ಣ ನುಡಿದಂತೆ ನಡೆದರು, ನಡೆದಂತೆ ನುಡಿದರು. ಅವರ ಗರಡಿಯಲ್ಲಿ ಬೆಳೆದರೂ ನಾವು ಕಲಿಯಬೇಕಾದ್ದು ಇನ್ನೂ ಬೇಕಾದಷ್ಟಿದೆ.
- ಬೃಂದಾ. ಎನ್. ರಾವ್