ಬಸ್‍ನಲ್ಲಿ ಕಿಟಕಿಯ ಪಕ್ಕ ಸೀಟು ಸಿಕ್ಕಾಗ ಬಹಳ ಸಂತೋಷವಾಗಿತ್ತು ಪ್ರಿಯಾಳಿಗೆ. ಬಸ್ ಇನ್ನೇನು ಹೊರಡುವುದರಲ್ಲಿದ್ದಾಗ ಸುಮಾರು 17 -18 ರ ಹುಡುಗನೊಬ್ಬ ಅವಳ ಪಕ್ಕ ಬಂದು ಕುಳಿತುಕೊಂಡ. ನೋಡಲು ಬಹಳ ವಿಚಿತ್ರವಾಗಿದ್ದ. ಉದ್ದುದ್ದ ಕೂದಲು, ಒಂದು ಕಿವಿಗೆ ಓಲೆ, ಕೈಯಲ್ಲೊಂದು ದಪ್ಪದ ಕಬ್ಬಿಣದ ಕಡಗ, ಕಿವಿಗೆ ಇಯರ್ ಫೋನ್.
ಕಾಲೇಜಿನಲ್ಲಿ ಅಧ್ಯಾಪಕಿಯಾಗಿದ್ದ ಅವಳಿಗೆ ಇದೆಲ್ಲಾ ಏನೂ ಹೊಸದಾಗಿರಲಿಲ್ಲ. ಕಂಡಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ಅವಳಿಗೆ ಅರ್ಥವಾಗಿದ್ದು ಆ ಹುಡುಗ ಕೂಡ ದಾವಣಗೆರೆಗೆ ಎಂದು. ಅವಳಿಗೆ ಸಮಸ್ಯೆಯೊಂದು ಪರಿಹಾರವಾದಂತೆನಿಸಿತು.
ಪರ್ಸ್‍ನಿಂದ ತನ್ನಕ್ಕನ ಮನೆಯ ವಿಳಾಸವಿದ್ದ ಚೀಟಿಯನ್ನು ತೋರಿಸಿ “ಈ ವಿಳಾಸ ಎಲ್ಲಿ ಬರುತ್ತೆ?” ಎಂದು ಕೇಳಿದಳು.
ಅದನ್ನು ನೋಡಿ ಆ ಹುಡುಗ ಮುಖ ಸಿಂಡರಿಸಿಕೊಂಡು, “ನಂಗೊತ್ತಿಲ್ಲ” ಎಂದ.
‘ಗೊತ್ತಿಲ್ಲ ಎಂದರಾಗುತ್ತಿತ್ತು, ಮುಖವೇಕೆ ಸಿಂಡರಿಸಿಕೊಳ್ಳಬೇಕು’ ಎಂದುಕೊಂಡು “ಹೋಗಲಿ ಬಿಡಪ್ಪಾ” ಎಂದಳು.
ಅಕ್ಕನ ಮನೆಗೆ ಫೋನ್ ಮಾಡಿದಾಗ ಅಕ್ಕನ ಮಗ ಸಂಜಯ್ ಮನೆಗೆ ಬಂದಿದ್ದಾನೆಂದು, ಅವನೇ ಬಂದು ಕರೆದುಕೊಂಡು ಹೋಗುತ್ತಾನೆ ಎಂದಾಗ ಪ್ರಿಯಾ ನಿರಾತಂಕವಾಗಿ ‘ಅಂಕಲ್ ಟಾಮ್ಸ್ ಕ್ಯಾಬಿನ್’ ಪುಸ್ತಕ ಓದಲು ಶುರುಮಾಡಿದಳು.
ಒಂದು-ಒಂದೂವರೆ ಘಂಟೆಯಾದ ಮೇಲೆ ಇದ್ದಕ್ಕಿದ್ದಂತೆ ಎಚ್ಚರವಾಯಿತು ಪ್ರಿಯಾಳಿಗೆ. ಓದುತ್ತಾ ಓದುತ್ತಾ ಹಾಗೆಯೇ ನಿದ್ದೆ ಹೋಗಿದ್ದಳವಳು. ಏನದು ಸದ್ದು ಎಂದು ನೋಡಿದಾಗ ಆ ಹುಡುಗ ಇಯರ್ ಫೋನ್ ತೆಗೆದು ಲೌಡ್ ಸ್ಪೀಕರ್ ಆನ್ ಮಾಡಿದ್ದ. ಸ್ವಲ್ಪ ಕಸಿವಿಸಿ ಆದರೂ ತೋರಿಸಿಕೊಳ್ಳದೆ, “ನೋಡಪ್ಪಾ, ನಿನಗೆ ಹಾಡು ಕೇಳಬೇಕೆನಿಸಿದರೆ ಇಯರ್ ಫೋನ್ ಹಾಕಿಕೊಂಡು ಕೇಳು, ಇತರರಿಗೆ ಕಷ್ಟವಾಗುತ್ತೆ” ಎಂದಳು.
ತಕ್ಷಣವೇ ಆ ಹುಡುಗ ಲೌಡ್ ಸ್ಪೀಕರ್ ಆಫ್ ಮಾಡಿದ. ಪ್ರಿಯಾ “ಥ್ಯಾಂಕ್ಸ್” ಎಂದಳು. ಹುಡುಗ ಗಲಿಬಿಲಿಗೊಳಗಾದವನಂತೆ ಕಂಡು ಬಂದ.
“ಥ್ಯಾಂಕ್ಸ್ ಏಕೆ ಹೇಳಿದಿರಿ” ಕೇಳಿದ.
“ನಾನು ಕೇಳಿದ ತಕ್ಷಣ ನೀನು ಆಫ್ ಮಾಡಿದ್ದಕ್ಕೆ” ಎಂದಳು. ಅಷ್ಟು ಹೊತ್ತಿನ ಪ್ರಯಾಣದಲ್ಲಿ ಮೊದಲಬಾರಿಗೆ ಮುಗುಳ್ನಕ್ಕ, ಅದೂ ಸಂಕೋಚದಿಂದ.
ಪ್ರಿಯಾ ತನ್ನ ಓದನ್ನು ಮುಂದುವರೆಸಿದಳು. ಸ್ವಲ್ಪ ಹೊತ್ತಿಗೆ ಮಗುವೊಂದು ಅಳಲಾರಂಭಿಸಿತು. ಅದರ ತಾಯಿ ಅದನ್ನು ಸಮಾಧಾನ ಮಾಡತೊಡಗಿದಳು. ಎಷ್ಟು ತಾಳ್ಮೆಯಿಂದ ಆ ಮಗುವನ್ನು ಸಮಾಧಾನ ಮಾಡಿದಳೆಂದರೆ ಕೆಲವೇ ನಿಮಿಷಗಳಲ್ಲಿ ಮಗು ನಗುತ್ತಾ ಆಟವಾಡಲಾರಂಭಿಸಿತು.
ಪಕ್ಕದಲ್ಲಿ ಕುಳಿತಿದ್ದ ಹುಡುಗ ಇಯರ್ ಫೋನ್ ತೆಗೆದು ಪಕ್ಕಕ್ಕಿಟ್ಟು ಒಂದು ರೈಟಿಂಗ್ ಪ್ಯಾಡ್ ತೆಗೆದುಕೊಂಡ. ಆಶ್ಚರ್ಯವೆನಿಸಿತು ಪ್ರಿಯಾಳಿಗೆ. ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿಗೆ ಪುಸ್ತಕ ತರುವುದೇ ಕಷ್ಟ, ಅಂತಹದ್ದರಲ್ಲಿ..... ಕುತೂಹಲ ತಡೆಯಲಾಗದೆ ಅವನ ಕಡೆ ನೋಡಿದಳು.
ಅವನು ಬಹಳ ತನ್ಮಯತೆಯಿಂದ ಏನೋ ಬರೆಯುತ್ತಿದ್ದ. ಕೇವಲ 15 ನಿಮಿಷದಲ್ಲಿ ಕವನವೊಂದು ರೆಡಿಯಾಗಿತ್ತು. ಕುತೂಹಲ ತಡೆಯಲಾಗದೆ ಓದೇಬಿಟ್ಟಳು. ಕವನ ಅದ್ಭುತವಾಗಿತ್ತು. ಅನುಭವವುಳ್ಳ ಕವಿ ಬರೆದ ಹಾಗಿತ್ತು. ತನಗೇ ಗೊತ್ತಿಲ್ಲದೆ, “ವಾಹ್, ಅದ್ಭುತ” ಎಂದಳು.
ಆಗಲೇ ಅವನು ತಲೆ ಎತ್ತಿ ನೋಡಿದ. ಕಣ್ಣಲ್ಲಿ ಆಶ್ಚರ್ಯವಿತ್ತು.
“ಸಾರಿನಪ್ಪಾ, ಓದಬಾರದಾಗಿತ್ತು. ಆದರೆ ಕುತೂಹಲ ತಡೆಯಲಾರದೆ ಓದಿಬಿಟ್ಟೆ. ಈಗನಿಸುತ್ತಿದೆ, ಓದದೇ ಇದ್ದಿದ್ದರೆ ನಷ್ಟವಾಗುತ್ತಿತ್ತು. ಎಂತಹ ಉತ್ತಮ ಕವಿತೆ. ಎಷ್ಟು ವರ್ಷದಿಂದ ಬರೆಯುತ್ತಿದ್ದೀಯಾ? ಒಳ್ಳೆ ನುರಿತ ಕವಿಯಂತೆ ಬರೆದಿದ್ದೀಯಾ” ಎಂದಳು.
“ನಿಜವಾಗಿಯೂ ಚೆನ್ನಾಗಿದೆಯಾ?” ಕೇಳಿದ.
“ಹೌದಪ್ಪಾ ನಿಜಕ್ಕೂ ಚೆನ್ನಾಗಿದೆ. ಈಗಷ್ಟೇ ಕಣ್ಮುಂದೆ ನಡೆದ ಒಂದು ಘಟನೆಯ ಬಗ್ಗೆ ಇಷ್ಟು ಚೆನ್ನಾಗಿ ಬರೆದಿದ್ದೀಯಾ ಎಂದರೆ ನೀನು ಸಾಮಾನ್ಯನಲ್ಲಪ್ಪ” ಎಂದಳು.
ಹೆಮ್ಮೆಯಿಂದ ಅವನ ಮುಖ ಅರಳಿತು. ನಕ್ಕಾಗ ಬಹಳ ಚೆನ್ನಾಗಿ ಕಾಣುತ್ತಿದ್ದ. ಕೆನ್ನೆಯ ಮೇಲೆ ಮೂಡಿದ್ದ ಗುಳಿ ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತು.
“ಆದರೆ ಹೆಸರೇಕೆ ಇಟ್ಟಿಲ್ಲ” ಕೇಳಿದಳು.
“ಅಮ್ಮನ ಪ್ರೀತಿಗೆ ‘ಮ’ ಅಕ್ಷರದಿಂದ ಯಾವುದಾದರೂ ಪದವಿದೆಯೇ ಎಂದು ಹುಡುಕುತ್ತಿದ್ದೇನೆ” ಎಂದ.
ತಕ್ಷಣವೇ ಅವಳು “ಮಮತೆ” ಎಂದಳು. ಅವನದನ್ನು ಪೇಪರ್ ಮೇಲೆ ಬರೆದ – ‘ಮಾತೆಯ ಮಮತೆ’.
“ಥ್ಯಾಂಕ್ಸ್ ಆಂಟಿ” ಎಂದ. ಮೊದಲ ಬಾರಿಗೆ ಅವನು ಆಂಟಿ ಎನ್ನುವ ಪದ ಬಳಸಿದ್ದ.
ಅವಳು ಅದನ್ನು ಗಮನಿಸಿದರೂ ಗಮನಿಸದಂತೆ “ಪರವಾಗಿಲ್ಲ ಬಿಡಪ್ಪಾ” ಎಂದಳು.
ಸ್ವಲ್ಪ ಹೊತ್ತಿನ ನಂತರ ಅವನು ಮಾತಿಗಾರಂಭಿಸಿದ. “ಆಂಟಿ ನಿಮಗೆ ಕವಿತೆ ಎಂದರೆ ಇಷ್ಟವೇ?”
“ಹೌದಪ್ಪಾ. ಬಹಳ ಇಷ್ಟ. ಆದರೆ ನಿನ್ನಂತೆ ಬರೆಯಲು ಬರುವುದಿಲ್ಲ.”
ಸಂಕೋಚದಿಂದ “ಅಯ್ಯೋ, ಇಲ್ಲ ಆಂಟಿ. ನೀವೊಬ್ಬರೇ ಆ ರೀತಿ ಹೇಳಿರುವುದು” ಎಂದ.
“ಇಲ್ಲಪ್ಪ, ನಿಜವಾಗಲೂ ಚೆನ್ನಾಗಿದೆ. ನೀನು ಹೀಗೇ ಮುಂದುವರೆದರೆ ಉತ್ತಮ ಕವಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.”
“ಅಷ್ಟು ಖಚಿತವಾಗಿ ಹೇಗೆ ಹೇಳ್ತೀರಿ?” ಕೇಳಿದ.
“ಏಕೆಂದರೆ ನಾನು ಕಾಲೇಜಿನಲ್ಲಿ ಕನ್ನಡ ಕವಿತೆಗಳನ್ನು ಹೇಳಿಕೊಡುವ ಶಿಕ್ಷಕಿಯಾದ್ದರಿಂದ.”
“ಹೌದಾ ಆಂಟಿ, ಮತ್ತೆ ಇಂಗ್ಲೀಷ್ ಪುಸ್ತಕ ಓದುತ್ತಿದ್ದೀರಾ?”
“ಏಕೆ ಕನ್ನಡ ಶಿಕ್ಷಕಿಯಾದರೆ ಇಂಗ್ಲಿಷ್ ಓದಬಾರದಾ?”
“ಹಾಗೇನಿಲ್ಲ ಆಂಟಿ” ಸ್ವಲ್ಪಹೊತ್ತು ಮೌನವಾಗಿದ್ದು, ನಂತರ “ಆಂಟಿ ನಿಜಕ್ಕೂ ನಾನು ಉತ್ತಮ ಕವಿಯಾಗ್ತೀನಾ?” ಕೇಳಿದ.
“ನೂರು ಪರ್ಸೆಂಟ್” ಹೇಳಿದಳು. ಆಗ ಅವನ ಕಂಗಳಲ್ಲಿ ಹೊಳೆದ ಕಾಂತಿಯನ್ನು ಕಂಡು ಚಕಿತಳಾದಳು.
ಇನ್ನೇನು ದಾವಣಗೆರೆ ಹತ್ತಿರ ಬಂದಾಗ ಅವನು “ಆಂಟಿ, ನನ್ನ ಹೆಸರು ಧನುಷ್. ನಾನು, ನಿಮ್ಮ ಅಕ್ಕನ ಮಗ ಕಾರ್ತಿಕ್ ಒಂದೇ ಕ್ಲಾಸಿನಲ್ಲಿ ಓದ್ತೀವಿ. ನಮ್ಮ ಮನೆಯ ಪಕ್ಕವೇ ಅವರ ಮನೆ ಇರುವುದು. ನಾನೇ ಕರ್ಕೊಂಡು ಹೋಗ್ತೀನಿ” ಎಂದ.
“ಬೇಡಪ್ಪ, ಕಾರ್ತಿಕ್‍ನ ಅಣ್ಣ ಸಂಜಯ್ ಬರ್ತಾ ಇದ್ದಾನೆ. ಥ್ಯಾಂಕ್ಸ್” ಎಂದಳು.
ಬಸ್ ಇಳಿದಾಗ ಸಂಜಯ್ ಕಾರ್ ತಂದಿದ್ದ. ಅದನ್ನು ನೋಡಿ ಪ್ರಿಯಾ, “ಧನುಷ್, ನೀನೂ ನನ್ನ ಜೊತೆ ಬಾ” ಎಂದಳು.
ಆದರೆ ಅವನು, “ಇಲ್ಲ ಆಂಟಿ, ನನ್ನ ಗೆಳೆಯ ಬರ್ತಾನೆ. ನೀವು ಹೋಗಿ” ಎಂದ. ಸಂಜಯ್ ಧನುಷ್‍ನನ್ನು ನೋಡಿದ ತಕ್ಷಣ ಮುಖ ಸಿಂಡರಿಸಿಕೊಂಡಿದ್ದನ್ನು ಪ್ರಿಯಾ ಗಮನಿಸಿದ್ದಳು. ಆದ್ದರಿಂದ ಒತ್ತಾಯಿಸಲಿಲ್ಲ.
ದಾರಿಯಲ್ಲಿ ಸಂಜಯ್, “ಅವನ ಹತ್ತಿರ ಏಕೆ ಮಾತಾಡಿದ್ರಿ ಆಂಟಿ, ಅವನೊಬ್ಬ ವೇಸ್ಟ್ ಫೆಲೊ. ನಮ್ಮ ಕಾರ್ತಿಕ್ ಕ್ಲಾಸ್‍ನವನೇ. 10ನೇ ತರಗತಿಯವರೆಗೂ ಚೆನ್ನಾಗಿಯೇ ಓದಿದ. 90% ಮೇಲೆ ಬಂದಿತ್ತು. ಪಿಯುಸಿಗೆ ಹೋಗಿ ಏನಾಯ್ತೊ ಗೊತ್ತಿಲ್ಲ. ಓದುವುದನ್ನೂ ಬಿಟ್ಟ. ಈಗ ನೋಡಿದಿರಲ್ಲ ಅವನ ಅವತಾರಾನಾ. ಓದುವುದಿಲ್ಲ, ಬರೆಯುವುದಿಲ್ಲ. ಪ್ರಥಮ ಪಿಯುಸಿ 40% ತಗೊಂಡು ಹೇಗೊ ಪಾಸಾದ. ಅದಕ್ಕೆ ಈಗ ನಾವು ಕಾರ್ತಿಕ್‍ನಿಗೆ ಕೂಡ ಮಾತನಾಡಲು ಬಿಡುವುದಿಲ್ಲ” ಕೇಳಿ ದಂಗಾದಳು ಪ್ರಿಯಾ.
ಅಷ್ಟು ಸುಂದರ ಕವಿತೆಯನ್ನು ರಚಿಸುವ ಹುಡುಗ ಓದುವುದಿಲ್ಲ, ತಿರುಗುತ್ತಾನೆ, ತಂದೆ-ತಾಯಿಯರನ್ನೂ ಗೌರವಿಸುವುದಿಲ್ಲ ಎಂದರೆ ನಂಬುವುದಾದರೂ ಹೇಗೆ? ಏನೋ ಸಮಸ್ಯೆಯಿರಬೇಕು ಎಂದುಕೊಂಡಳು.
ನಂತರ ಮಾತು ಅಕ್ಕ-ಭಾವ, ಮನೆ ಇತ್ಯಾದಿ ಕಡೆ ಹೊರಳಿತು. ಮನೆಗೆ ಬಂದು ಊಟ ಮಾಡಿ ರೆಸ್ಟ್ ತಗೊಂಡು ಸಂಜೆ ವಾಕಿಂಗ್ ಹೋಗುವುದೆಂದು ಹೊರಟಳು. ಅಕ್ಕನಿಗೆ ಏನೊ ಕೆಲಸವಿದ್ದುದ್ದರಿಂದ ತಾನೇ ಹತ್ತಿರದ ಪಾರ್ಕಿಗೆ ಹೋಗುವೆನೆಂದು ಹೊರಟಳು.
ಮನೆಯಿಂದ ಹೊರಟಾಗ ಪಕ್ಕದ ಮನೆಯ ಕಾಂಪೌಂಡ್‍ನಲ್ಲಿ ಧನುಷ್ ಕಾಣಿಸಿಕೊಂಡ. “ಹಾಯ್” ಎಂದಳು. ಅವನು ಸಂಕೋಚದಿಂದಲೇ “ಹಲೊ ಆಂಟಿ” ಎಂದು ಒಳಗೆ ಹೊರಟುಹೋದ. ಸ್ವಲ್ಪ ದೂರ ಹೋಗುತ್ತಿದ್ದ ಹಾಗೆ ಯಾರೋ ‘ಆಂಟಿ’ ಎಂದು ಕರೆದ ಹಾಗಾಯಿತು. ಈ ಊರಿನಲ್ಲಿ ಯಾರಪ್ಪಾ ಎಂದು ತಿರುಗಿನೋಡಿದರೆ ಧನುಷ್ ಓಡೋಡಿ ಬರುತ್ತಿದ್ದ, ನಿಂತಳು.
“ಮನೆಯ ಹತ್ತಿರ ಮಾತನಾಡಿಸಿದರೆ ಸರಿಯಾಗಿ ಮಾತಾಡಲಿಲ್ಲ” ಆಕ್ಷೇಪಿಸಿದಳು.
“ಹಾಗಲ್ಲ ಆಂಟಿ, ನಿಮ್ಮ ಮನೆಯವರಿಗೆ ನನ್ನ ಕಂಡರೆ ಆಗುವುದಿಲ್ಲ. ಅವರು ನಿಮಗೆ ಏನಾದರೂ ಅಂತಾರೇನೋ ಅಂತ ಮಾತನಾಡಲಿಲ್ಲ. ನಿಮಗೆ ಕೂಡ ಏನು ಹೇಳಿರ್ತಾರೊ. ನೀವು ಮಾತಾಡ್ತೀರೊ ಇಲ್ಲವೊ ಎಂದುಕೊಂಡೆ. ಆದರೆ ನೀವು ಹಾಯ್ ಎಂದಾಗ ತುಂಬಾ ಸಂತೋಷ ಆಯಿತು. ಅದಕ್ಕೆ ಬಂದೆ.”
ಪಾರ್ಕಿಗೆ ಹೋಗಿ ವಾಕಿಂಗ್ ಮಾಡುತ್ತಲೇ, “ನಮ್ಮ ಮನೆಯವರಿಗೆ ನಿನ್ನನ್ನು ಕಂಡರೆ ಏಕೆ ಆಗುವುದಿಲ್ಲ” ಕೇಳಿದಳು.
“ನಾನು ಓದುವುದಿಲ್ಲ, ಹೀಗೆ ತಿರುಗ್ತೀನಿ ಎಂದು.”
ಅಲ್ಲಿಯೇ ಬೆಂಚಿನ ಮೇಲೆ ಕುಳಿತು, “ಯಾಕೆ ಧನುಷ್, ಅಷ್ಟು ಉತ್ತಮ ಕವಿತೆಯನ್ನು ಬರೆಯುವವನು, ಓದಲ್ಲ ಎಂದರೆ ಹೇಗೆ?” ಕೇಳಿದಳು.
“ಅದೊಂದು ದೊಡ್ಡ ಕಥೆ.”
“ಸರಿ ಶುರು ಮಾಡು.”
“ಆಂಟಿ ಇವತ್ತು ಲೇಟಾಗುತ್ತೆ. ನಾಳೆ ಬೆಳಗ್ಗೆ ಹೇಳ್ತೀನಿ.”
“ನಾಳೆ ನಾನು ಹರಿಹರ ನೋಡಲು ಹೋಗ್ತಿದ್ದೀನಿ, ಸಂಜೆ ಎಷ್ಟೊತ್ತಾಗುತ್ತೋ?”
“ಆಂಟಿ ನಾನೂ ನಿಮ್ಮ ಜೊತೆ ಬರ್ತೀನಿ.”
“ಕಾಲೇಜಿಲ್ವಾ?”
“ಇದೆ ಆಂಟಿ. ಆದ್ರೆ ಹೋಗೊಲ್ಲ.”
“ಯಾಕೆ? ನನಗದು ಇಷ್ಟವಾಗೋಲ್ಲ.”
“ಪ್ಲೀಸ್ ಆಂಟಿ. ಇಷ್ಟು ದಿನದಲ್ಲಿ ನನಗೆ ಯಾರೊಂದಿಗೂ ನನ್ನ ಸಮಸ್ಯೆ ಹೇಳಿಕೊಳ್ಳಬೇಕು ಎನಿಸಿರಲಿಲ್ಲ. ಆದ್ರೆ ನೀವು ಮಾತನಾಡುವ ಧಾಟಿ ನೋಡಿದ್ರೆ ನನ್ನ ಸಮಸ್ಯೆ ಅರ್ಥ ಮಾಡಿಕೊಳ್ತೀರಾ ಅನಿಸುತ್ತೆ. ಪ್ಲೀಸ್ ಆಂಟಿ.” ‘ನೋಡೋಣ ಅವನ ಸಮಸ್ಯೆ ಏನಿರಬಹುದೆಂದೆನಿಸಿ, “ಸರಿ ಹಾಗೆ ಮಾಡು. ಬೆಳಗ್ಗೆ 9.30ಕ್ಕೆ ಮನೆ ಬಿಡ್ತೀನಿ” ಎಂದಳು.
“ಆಂಟಿ, ಮನೆ ಹತ್ತಿರ ಬೇಡ. ಬಸ್‍ಸ್ಟಾಪ್‍ನಲ್ಲಿ 10ಕ್ಕೆ ಇರ್ತೀನಿ.”
ಸರಿ ಎಂದು ವಾಪಾಸ್ಸಾಗುತ್ತಾ, ಇನ್ನೇನು ಮನೆ ಬಂತು ಎನ್ನವ ಕ್ರಾಸ್‍ನಲ್ಲಿ “ಆಂಟಿ ನೀವು ಹೋಗಿ ನಾನು ಬರ್ತೀನಿ” ಎಂದು ಹೊರಟುಹೋದ.
ಮನೆಗೆ ಹಿಂತಿರುಗಿದಾಗ ಭಾವ ಬಂದಿದ್ದರು. ಎಲ್ಲರೂ ಮಾತನಾಡುತ್ತಾ, ಊಟ ಮಾಡಿದ ನಂತರ ಹರಿಹರಕ್ಕೆ ಹೋಗುವ ಪ್ಲಾನ್ ತಿಳಿಸಿದೆ. ಭಾವ “ಅಯ್ಯೋ, ನನಗೆ ರಜಾ ಇಲ್ವಲ್ಲಮ್ಮಾ” ಎಂದರು.
“ಪರವಾಗಿಲ್ಲ ಭಾವ. ನನ್ನ ಗೆಳತಿಯೊಬ್ಬಳು ಅಲ್ಲಿಯೇ ಲೆಕ್ಚರರ್. ಅವಳಿಗೆ ಫೋನ್ ಮಾಡಿದ್ದೇನೆ. ಬಸ್ ಸ್ಟಾಪ್‍ಗೆ ಬರುತ್ತಾಳೆ.”
ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಧನುಷ್ ಬಸ್‍ಸ್ಟಾಂಡ್‍ನಲ್ಲಿ ಕಾಯುತ್ತಿದ್ದ. ಬಸ್ ಹೊರಟ ಮೇಲೆ “ಈಗ ಹೇಳು ನಿನ್ನ ಕಥೆ” ಎಂದಳು.
ಸಂಕೋಚದಿಂದಲೇ ಆರಂಭಿಸಿದ. “ಆಂಟಿ ಎಲ್ಲರೂ ಇಂಜಿನಿಯರ್, ಡಾಕ್ಟರ್ ಆಗಬೇಕೇ? ಇಲ್ಲದಿದ್ದರೆ ಅವರಿಗೇನೂ ಬೆಲೆ ಇರುವುದಿಲ್ಲವೇ?” ಕೇಳಿದ.
“ಯಾರಪ್ಪಾ ಹೇಳಿದ್ದು, ಹಾಗೆ ಅಂತಾ. ನಾನೇ ಇಲ್ಲವಾ ಕನ್ನಡ ಮೇಡಮ್” ನಕ್ಕಳು.
“ನೀವೊಬ್ರು ಹೀಗೆ ಹೇಳ್ತೀರಾ ಆಂಟಿ. ಆದ್ರೆ ಎಲ್ಲರೂ ಹೇಳೋದು ಬೇರೆ.”
“ಬಿಡಿಸಿ ಹೇಳು.”
“ಆಂಟಿ ನನಗೆ ಈ ಬರೆಯೋ ಹವ್ಯಾಸ 6ನೇ ಕ್ಲಾಸಿನಂದಲೂ ಇದೆ. 10ನೇ ಕ್ಲಾಸಿನಲ್ಲಿ 94% ತೆಗೆದೆ. ಆಮೇಲೆ ಪಿಯುಸಿ ಆರ್ಟ್ಸ್s ತೆಗೆದುಕೊಂಡು ಕನ್ನಡ ಮೇಜರ್ ತೆಗೆದುಕೊಳ್ಳಬೇಕು, ಕನ್ನಡ ಎಮ್.ಎ ಮಾಡಬೇಕು ಎಂದುಕೊಂಡೆ. ಅದಕ್ಕೆ ಮನೆಯಲ್ಲಿ ಎಲ್ಲರೂ ಒಂದೇ ಸಮನೆ ಬೈದರು. ಆಗುವುದಾದರೆ ಇಂಜಿನಿಯರ್ ಆಗಲೇಬೇಕು. ಅದು ಬೇಡ ಅಂದ್ರೆ ಡಾಕ್ಟರ್ ಆಗು ಅಂದ್ರು. ನನಗೆ ಎರಡೂ ಇಷ್ಟವಿರಲಿಲ್ಲ. ದೊಡ್ಡ ರಾದ್ಧಾಂತವಾಯಿತು.”
“ಕೊನೆಗೆ ಅಪ್ಪ ಅಮ್ಮ ಪಟ್ಟು ಹಿಡಿದು ಪಿಯುಸಿ ಸೈನ್ಸ್‍ಗೆ ಸೇರಿಸಿದರು. ನಾನು ಅಸಹಾಯಕನಾಗಿದ್ದೆ. ನೀನು ಕೇಳಿದ್ದನ್ನೆಲ್ಲಾ ತೆಗೆಸಿಕೊಡ್ತೀವಿ. ಆದ್ರೆ ಪಿಯುಸಿ 95% ತೆಗೆದು ಇಂಜಿನಿಯರ್ ಆಗು ಎನ್ನುವುದು ಅವರ ಜಪ. ನಾನೇನು ಮಾಡಲಿ. ಅವರ ಮೇಲೆ ಕೋಪ ಬಂತು. ಹೇಗೆ ತೀರಿಸಿಕೊಳ್ಳಲಿ? ಅದಕ್ಕೆ ಈ ರೀತಿಯಾದೆ. ಅವರ ಮೇಲೆ ಸೇಡು ತೀರಿಸಿಕೊಳ್ತಿದ್ದೀನಿ. ಅವರು ಏನೇನು ಮಾಡಬಾರದು ಎಂದು ಹೇಳ್ತಾರೊ ಅದೆಲ್ಲವನ್ನೂ ನಾನು ಮಾಡ್ತಾ ಇದ್ದೀನಿ. ಈ ಕೂದಲು ನೋಡಿ, ಇದು ನನಗೇ ಇಷ್ಟ ಇಲ್ಲ. ಆದ್ರೆ ಅವರಿಗೆ ಕೋಪ ಬರಲಿ ಎಂದೇ ಈ ರೀತಿ ಮಾಡ್ತೀನಿ.”
ಆವೇಶದಿಂದ ಅವನ ಮುಖ ಕೆಂಪಾಗಿ ಹೋಗಿತ್ತು. ಆ ಮುಗ್ಧ ಮುಖದ ಹಿಂದೆ ಇಷ್ಟು ನೋವಿತ್ತೆಂದು ಅರಿತಾಗ ಆಘಾತವಾಗಿತ್ತು ಪ್ರಿಯಾಳಿಗೆ. ಏನು ಹೇಳುವುದು ಎನ್ನುವಷ್ಟರಲ್ಲಿ ಬಸ್ ಹರಿಹರ ತಲುಪಿತ್ತು.
ಬಸ್‍ಸ್ಟಾಂಡ್‍ನಲ್ಲಿ ಗೆಳತಿ ಅನುಪಮಾ ಕಾಯುತ್ತಿದ್ದಳು. ಇವಳನ್ನು ಮಾತನಾಡಿಸಿದ ಅನುಪಮಾ ಪಕ್ಕದಲಿದ್ದ ಹುಡುಗನನ್ನು ನೋಡಿ, “ಅಕ್ಕನ ಮಗನಾ” ಕೇಳಿದಳು.
“ಅಲ್ಲ, ನನ್ನ ಪುಟ್ಟ ಸ್ನೇಹಿತ” ಎಂದು ಹೇಳಿ ಬಸ್ ಕಥೆಯನ್ನು ಹೇಳಿದ್ದಷ್ಟೇ ಅಲ್ಲದೆ “ಇವನು ಬಹಳ ಉತ್ತಮ ಕವಿ” ಎಂದು ಪರಿಚಯಿಸಿದಳು.
ಧನುಷ್‍ಗೆ ಎಷ್ಟು ಸಂತೋಷವಾಗಿತ್ತೆಂದರೆ ಮಾತೇ ಹೊರಡಲಿಲ್ಲ. ಮೂವರು ಹೋಟೆಲ್‍ಗೆ ಹೋಗಿ ತಿಂಡಿ ತಿಂದು, ದೇವಸ್ಥಾನ, ಹೊಳೆ ಎಲ್ಲವನ್ನೂ ನೋಡಿದರು. ಅನುಪಮಾ ಬೇಗ ಊಟ ಮುಗಿಸಿ ಕ್ಲಾಸ್ ಇದೆ ಎಂದು ಹೇಳಿ ಹೊರಟುಹೋದಳು. ಹೋಗುತ್ತಿರುವಾಗ “ನಿನ್ನ ಕವನಗಳನ್ನು ಕಳಿಸಪ್ಪಾ. ನಾನೂ ಓದ್ತೀನಿ. ಹಾಗೆ ಪೇಪರ್‍ಗೂ ಕೊಡು, ಪ್ರಕಟಿಸು” ಎಂದು ಹೇಳಿ ಅವನ ಬೆನ್ನು ತಟ್ಟಿ ಹೋದಳು. ಧನುಷ್ ಮುಖ ಸಂತಸದಿಂದ ಉಬ್ಬಿಹೋಗಿತ್ತು.
“ಈಗ ಹೇಳು, ಡಾಕ್ಟರ್, ಇಂಜಿನಿಯರ್ ಆದ್ರೆ ಮಾತ್ರ ಗೌರವಿಸ್ತಾರಾ?”
“ಇಲ್ಲ ಆಂಟಿ, ಆದ್ರೆ ಅಪ್ಪ-ಅಮ್ಮ.......?”
“ಅವರಿಗೆ ಹೇಳುವುದು ನಂತರ. ಆದ್ರೆ ಅದಕ್ಕಾಗಿ ನಿನ್ನ ಮೇಲೆ ನೀನೇ ಸೇಡು ತೀರಿಸಿಕೊಳ್ಳುತ್ತಿದ್ದೀಯಲ್ಲಾ?”
“ನನ್ನ ಮೇಲೆ ನಾನಾ? ಅದು ಹೇಗೆ ಆಂಟಿ?”
“ಮತ್ತಿನ್ನೇನು, ಈ ಕೂದಲು ನಿನಗಿಷ್ಟವಿಲ್ಲ, ಈ ಓಲೆ, ಈ ಕಡಗ, ಅದು ಬಿಡು, ಚೆನ್ನಾಗಿ ಓದುವ ನೀನು ಈಗ 40% ತೆಗೆದು ಎಲ್ಲರೂ ಛೀ ಎನ್ನುವ ಮಟ್ಟಕ್ಕೆ ಬಂದಿದ್ದೀಯಾ ಎಂದರೆ....”
“ಅಂದರೆ 90% ತೆಗೆದರೆ ಮಾತ್ರ ಎಲ್ಲರೂ ನನ್ನನ್ನು ಗೌರವಿಸಬೇಕೇ?”
“ಖಂಡಿತ ಆ ರೀತಿ ಅಲ್ಲ. ಆದ್ರೆ ನಿನ್ನ ಸಾಮರ್ಥ್ಯ ಹಾಳಾಗ್ತಾ ಇದ್ದರೆ ಎಲ್ಲರೂ ಅದನ್ನೇ ಬೆಟ್ಟು ಮಾಡಿ ತೋರಿಸ್ತಾರೆ. ನಿನ್ನ ಸಾಧನೆಯನ್ನು ತೋರಿಸಬೇಕೆ ಹೊರತು ನಿನ್ನ ಸಾಮರ್ಥ್ಯ ಹಾಳುಮಾಡಿಕೊಳ್ಳಬಾರದು.”
“ಹಾಗಿದ್ದರೆ ನಾನು ಏನು ಮಾಡಬೇಕು?”
“ನೀನು ಪಿಯುಸಿ ಸೈನ್ಸ್ ತೆಗೆದುಕೊಂಡಿದ್ದೀಯಾ. ನಿನಗೆ ಓದುವುದೇನೂ ಕಷ್ಟವಲ್ಲ. ಚೆನ್ನಾಗಿ ಓದು. ನಿನ್ನ ಕವಿತೆಯ ಬರವಣಿಗೆಯನ್ನೂ ಮುಂದುವರೆಸು. ಕವನಗಳನ್ನು ಪತ್ರಿಕೆಗೆ ಕಳಿಸು. ನಿನ್ನ ಮನೆಯವರಿಗೆ ಆ ರೀತಿ ತೋರಿಸು.”
“ಇಲ್ಲ ಆಂಟಿ. ನಾನು 50% ತೆಗೆದ್ರೂ ದುಡ್ಡು ಕೊಟ್ಟಾದ್ರೂ ಇಂಜಿನಿಯರಿಂಗ್ ಸೇರಿಸ್ತಾರೆ.”
“ಆ ಬಗ್ಗೆ ನೀನೇನೂ ಯೋಚ್ನೆ ಮಾಡಬೇಡ. ನಾನು ನಿನ್ನ ತಂದೆ-ತಾಯಿಯರ ಹತ್ತಿರ ಮಾತಾಡ್ತೀನಿ. ಆದ್ರೆ ನಿನ್ನ ವ್ಯಕ್ತಿತ್ವವನ್ನು ನೀನು ಹಾಳು ಮಾಡಿಕೊಳ್ಳಬೇಡ.”
“ಇಲ್ಲ ಆಂಟಿ. ನೀವು ಹೇಗೆ ಹೇಳಿದ್ರೆ ಹಾಗೆ ಮಾಡ್ತೀನಿ.”
“ಆ ರೀತಿ ಹೇಳುವುದೂ ಸರಿಯಲ್ಲ ಧನುಷ್. ನೀನು ಯೋಚಿಸಿ ನಿರ್ಧಾರ ತೆಗೆದುಕೊ.”
“ಸರಿ ಆಂಟಿ” ಎಂದು ಬಿಲ್ಲು ಕೊಡಲು ಕೈಗೆತ್ತಿಕೊಂಡ.
“ಅದೆಲ್ಲಾ ನೀನು ದುಡಿಯಲು ಶುರು ಮಾಡಿದ ಮೇಲೆ” ಎನ್ನುತ್ತಾ ತಾನೇ ಬಿಲ್ಲು ನೀಡಿದಳು ಪ್ರಿಯಾ.
“ಆಂಟಿ ನೀವು ಎಲ್ಲರಿಗಿಂತ ಬಹಳ ಭಿನ್ನ” ಎಂದ. ನಕ್ಕಳು ಪ್ರಿಯಾ. ಇಬ್ಬರೂ ಮನೆಯವರೆಗೂ ಜೊತೆಯಾಗಿಯೇ ಬಂದರು. ಧನುಷ್ ಬೇಡವೆಂದರೂ ಪ್ರಿಯಾ ಕರೆದುಕೊಂಡು ಬಂದಳು.
ಅಕ್ಕ ಅದನ್ನು ಕಂಡು ಅಸಮಾಧಾನದಿಂದಲೇ “ನಿನಗೆ ಎಲ್ಲಿ ಸಿಕ್ಕಿದ ಅವನು?” ಎಂದಳು.
“ನನ್ನೊಂದಿಗೆ ಹರಿಹರಕ್ಕೆ ಬಂದಿದ್ದ.”
ಹೌಹಾರಿದಳು ಅಕ್ಕ. “ಏನಾಯ್ತೆ ನಿನಗೆ? ಅದೂ ಅವನ ಜೊತೆ......”
“ಅಕ್ಕ ನಾನು ಒಬ್ಬ ಶಿಕ್ಷಕಿ ಎನ್ನುವುದನ್ನು ಮರೆಯಬೇಡ. ಧನುಷ್ ಬಹಳ ಒಳ್ಳೆಯ ಹುಡುಗ.”
“ಹೌದಮ್ಮ ಹೌದು, ನೀನೊಬ್ಬಳೇ ಹೇಳಬೇಕು” ವ್ಯಂಗ್ಯವಾಡಿದಳು.
“ಅಲ್ಲಕ್ಕ ಕಾರ್ತಿಕ್‍ನೇ ಹೀಗೆ ವರ್ತಿಸಿದ ಎಂದುಕೊ ಆಗ ಏನು ಮಾಡ್ತಿದ್ದೆ?”
“ನಾನಾ? ಅವನ ಕಾಲು ಮುರಿದು ಮನೆಯಲ್ಲಿ ಕೂರಿಸ್ತಿದ್ದೆ” ಆಶ್ಚರ್ಯಚಕಿತಳಾಗಿ ನೋಡಿದಳು ಪ್ರಿಯಾ. ವಿದ್ಯಾವಂತೆಯಾದ ತನ್ನಕ್ಕ ಮಾತನಾಡಿದ ರೀತಿ ಅವಳಿಗೆ ಸರಿಯೆನಿಸಲಿಲ್ಲ.
ಮಾರನೆ ದಿನ ಬೆಳಗ್ಗೆ ಧನುಷ್ ಮನೆಗೆ ಹೋಗಲೆಂದು ಹೊರಗೆ ಬಂದವಳಿಗೆ ಧನುಷ್ ಕಾಣಿಸಿದಾಗ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೇರ್ ಕಟ್ ಮಾಡಿಸಿದ್ದ, ಕಿವಿಯಲ್ಲಿ ಓಲೆ, ಕೈಯಲ್ಲಿ ಕಡಗವಿರಲಿಲ್ಲ. ನೂರಾರು ಜೇಬಿದ್ದ ಪ್ಯಾಂಟ್‍ಗೆ ಬದಲಾಗಿ ನೀಲಿಯ ಜೀನ್ಸ್ ಪ್ಯಾಂಟ್ ಹಾಕಿ ಅದೇ ಬಣ್ಣದ ಟೀಶರ್ಟ್ ಹಾಕಿದ್ದ.
“ವಾಹ್, ಏನು ಬದಲಾವಣೆ” ಎಂದಳು.
“ಚೆನ್ನಾಗಿದ್ದೀನಾ ಆಂಟಿ?” ಹತ್ತಿರ ಬಂದ.
“ನಿಜಕ್ಕೂ ಚೆನ್ನಾಗಿದೆ.”
ಗೇಟಿನ ಹತ್ತಿರ ಇವಳನ್ನು ಕಂಡ ಧನುಷ್ ತಾಯಿ, “ಓಹ್ ನೀವೇನಾ ಕಾರ್ತಿಕ್‍ನ ಚಿಕ್ಕಮ್ಮ, ಬನ್ನಿ ಒಳಗೆ” ಎಂದರು.
ಒಳಗೆ ಹೋಗುತ್ತಲೇ “ಕುಳಿತುಕೊಳ್ಳಿ, ಟೀ ಮಾಡಿಕೊಂಡು ಬರ್ತೀನಿ ಇರಿ” ಎಂದರು.
“ಬೇಡ ಬನ್ನಿ, ನಿಮ್ಮ ಹತ್ತಿರ ಸ್ವಲ್ಪ ಮಾತನಾಡಬೇಕು” ಎಂದಳು.
“ಆಂಟಿ, ನಾನು ಟೀ ಮಾಡ್ಕೊಂಡು ಬರ್ತೀನಿ” ಅಂದ ಧನುಷ್.
ಪ್ರಿಯಾಳ ಮುಖದ ಮೇಲಿನ ಗಾಬರಿಯನ್ನು ಗಮನಿಸಿ, “ಆಂಟಿ, ಗಾಬರಿಯಾಗಬೇಡಿ. ನಾನು ಬಹಳ ಚೆನ್ನಾಗಿ ಟೀ ಮಾಡ್ತೀನಿ” ಎಂದು ಒಳಗೆ ಹೋದ. ಸಂಜಯ್ ತಾಯಿಯ ಕಣ್ಣಲ್ಲಿ ಸಂತಸ ಕಂಡಳು ಪ್ರಿಯಾ.
ಅವನ ತಾಯಿ ಹೆಚ್ಚು ಓದಿದಂತೆ ಕಾಣಲಿಲ್ಲ. ಒಬ್ಬನೇ ಮಗ. ಅವನದ್ದೇ ಚಿಂತೆಯಲ್ಲಿ ಸೊರಗಿದಂತಿತ್ತು. “ನಿಮಗೆ ತುಂಬಾ ಥ್ಯಾಂಕ್ಸ್. ನಿಮ್ಮಿಂದಲೇ ಅವನಲ್ಲಿ ಈ ಬದಲಾವಣೆ” ಎಂದರು.
ಪ್ರಿಯಾ ನೇರವಾಗಿ ವಿಷಯಕ್ಕೆ ಬಂದಾಗ, “ಓದಿನ ಬಗ್ಗೆ ನನಗೆ ಅಷ್ಟೆಲ್ಲಾ ತಿಳಿಯದಮ್ಮಾ. ಎಲ್ಲಾ ನೆಂಟರಿಷ್ಟರ ಮಕ್ಕಳು ಇಂಜಿನಿಯರಿಂಗ್ ಓದುತ್ತಿರುವಾಗ, ಅದೂ ಇವನಿಗಿಂತ ಕಡಿಮೆ ಅಂಕಗಳನ್ನು ತೆಗೆದುಕೊಂಡವರು, ನಮಗೂ ಅದೇ ಆಸೆಯಾಯ್ತು. ಆದ್ರೆ ಅದರಿಂದ ನನ್ನ ಮಗ ಹೀಗಾಗ್ತಾನೆ ಅಂತ ತಿಳ್ಕೊಂಡಿರಲಿಲ್ಲ” ಎಂದರು.
ಧನುಷ್ ಟೀ ಮಾಡಿಕೊಂಡು ಬರುವಷ್ಟರಲ್ಲಿ ತಾಯಿಯ ಮುಖ ಪೂರ್ಣ ಅರಳಿತ್ತು. “ತುಂಬಾ ಚೆನ್ನಾಗಿದೆ ಧನು” ಎಂದಾಗ ತಲೆಯೆತ್ತಿ ನೋಡಿದ ಧನುಷ್ ಅಮ್ಮನ ಬಳಿ ಇದ್ದ ಪೇಪರ್ ಗಮನಿಸಿದ. ಏನೆಂದು ನೋಡಿದರೆ ಅದು ಅವನದ್ದೇ ಕವನ ‘ಮಾತೆಯ ಮಮತೆ’ಯಾಗಿತ್ತು. ಅದನ್ನು ಪ್ರಿಯಾ ಇಟ್ಟುಕೊಂಡಿದ್ದಳು. ಅಮ್ಮನ ಹೊಗಳಿಕೆ ಕೇಳಿ ಧನುಷ್‍ಗೆ ಖುಷಿಯನ್ನು ತಡೆದುಕೊಳ್ಳಲಾಗದೆ ಹತ್ತಿರ ಬಂದು ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಅಳಲಾರಂಭಿಸಿದ.
“ಅಮ್ಮಾ ನನ್ನನ್ನು ಕ್ಷಮಿಸಿಬಿಡು. ನಿನಗೆ ತುಂಬಾ ನೋವು ಕೊಟ್ಟಿದ್ದೇನೆ. ಇನ್ನೆಂದೂ ಹಾಗೆ ಮಾಡಲಾರೆ” ಎಂದ. ಅದನ್ನು ಕೇಳಿ ಆಕೆಯೂ ಅತ್ತರು.
“ಧನುಷ್, ನೀನು ಏನೇ ಓದಿದರೂ ಓದಿಸಲು ಅಮ್ಮ ತಯಾರಾಗಿದ್ದಾರೆ. ಈಗ ನೀನೂ ಸಹ ನಿನ್ನ ಸಾಮರ್ಥ್ಯವನ್ನು ತೋರಿಸು” ಎಂದಳು.
ಮಾರನೇ ದಿನ ಬಸ್ ಹತ್ತಿಸಲು ಧನುಷ್ ಬಂದಿದ್ದ. “ಆಂಟಿ, ಇನ್ನೂ ಸ್ವಲ್ಪ ದಿನ ಇರಬೇಕಿತ್ತು” ಎಂದ.
“ಮತ್ತೆ ಬರ್ತೀನಿ, ಅಷ್ಟರಲ್ಲಿ.........”
“ಗೊತ್ತು, ಗೊತ್ತು ಆಂಟಿ.”
ಊರಿಗೆ ಬಂದ ನಂತರವೂ ಪ್ರತಿನಿತ್ಯ ಫೋನ್ ಮಾಡುತ್ತಿದ್ದ. ಪತ್ರ ಬರೆದು ತನ್ನ ಕವನಗಳನ್ನು ಕಳಿಸುತ್ತಿದ್ದ. ಧನುಷ್‍ನ ತಾಯಿಯೂ ಫೋನ್ ಮಾಡುತ್ತಿದ್ದರು. ಪಿಯುಸಿಯಲ್ಲಿ ಅವನಿಗೆ 96% ಬಂದಿತ್ತು. ಅವನು ಬಿಎಗೆ ಸೇರಿ ಮೇಜರ್ ಕನ್ನಡ ತೆಗೆದುಕೊಂಡ.
ಅದೊಂದು ದಿನ ಪ್ರಿಯಾಗೆ ಪಾರ್ಸಲ್ ಬಂದಿತ್ತು. ಕಳಿಸಿದವರ ವಿಳಾಸವಿರಲಿಲ್ಲ. ಬಿಚ್ಚಿ ನೋಡಿದರೆ ಕವನ ಸಂಕಲನ. 5 ಪುಸ್ತಕಗಳಿದ್ದವು. ‘ಯಾರದಪ್ಪ’ ಎಂದು ನೋಡಿದರೆ ಹೆಸರೇನೋ ಇತ್ತು. ‘ಯಾರೋ ಗೊತ್ತಿಲ್ಲವಲ್ಲ’ ಎಂದುಕೊಂಡು ಪುಟ ತಿರುವಿಹಾಕಿದಳು. ಅರ್ಪಣೆ ಎನ್ನುವ ಕಡೆಯಲ್ಲಿ ‘ಜೀವ ಕೊಟ್ಟ ತಾಯಿಗೆ’ ಮತ್ತು ಅದರ ಕೆಳಗೆ ‘ದಾರಿ ತೋರಿದ ತಾಯಿಗೆ’ ಎಂದಿತ್ತು. ತಕ್ಷಣವೇ ಮಿಂಚೊಂದು ಸುಳಿದು ಬೆನ್ನುಡಿಯನ್ನು ನೋಡಿದರೆ ಅಲ್ಲಿ ಕವಿಪರಿಚಯದಲ್ಲಿ ಧನುಷ್‍ನ ಫೋಟೋ ಇತ್ತು. ಪ್ರಿಯಾಳ ಸಂತೋಷಕ್ಕೆ ಎಣೆಯೇ ಇರಲಿಲ್ಲ. ತಕ್ಷಣವೇ ಧನುಷ್‍ಗೆ ಫೋನ್ ಮಾಡಲು ಮೊಬೈಲ್ ಕೈಗೆತ್ತಿಕೊಂಡಳು.
- ಸುಧಾ ಜಿ