Pages

ಅನುವಾದ - ಮಹಿಳೆಯರ ಮತದಾನದ ಹಕ್ಕು ಪುರುಷರಿಗೇಕೆ ಬೇಕು




ಮಹಿಳೆಯರಿಂದ ಬರುವ ಅಪಾಯವು ಮನೆಯ ಹೊಸ್ತಿಲ ಬಳಿಗೆ ಬಂದಿದೆಯೆಂದು ತುಂಬಾ ಜನ ಹೇಳುತ್ತಿದ್ದಾರೆ. ಅದು ಸತ್ಯವೆನ್ನುವುದರಲ್ಲಿ ನನಗೆ ಸ್ವಲ್ಪವೂ ಸಂದೇಹವಿಲ್ಲ. ಅದು ಈಗಾಗಲೇ ಮನೆಯೊಳಗೆ ಹೊಕ್ಕಿದೆಯೆಂದು ನನ್ನ ಶಂಕೆ. ಅದನ್ನು ದೊಡ್ಡ ಸಂಖ್ಯೆಯ ಗಂಡಸರು ಊಟ ಮಾಡುವಾಗ ಎದುರಿಸುತ್ತಿರುವುದಂತೂ ಖಂಡಿತ. ಅವರು ಎಷ್ಟೇ ಕಿವುಡರಂತೆ ನಟನೆ ಮಾಡಿದರೂ, ಅದರ ಮಾತುಗಳನ್ನು ಕೇಳದೇ ಬೇರೆ ದಾರಿಯಿಲ್ಲ.
ಮಹಿಳೆಯರು ತಮ್ಮ ‘ಪವಿತ್ರ ಹಕ್ಕುಗಳು’, ‘ಬದಲಾಗದ ಹಕ್ಕುಗಳು’, ‘ಪರಭಾರೆ ಮಾಡಲಾಗದ ಹಕ್ಕುಗಳು’ ಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಪದಗುಚ್ಛಗಳು ನಾವು ಬಯಸಿದಂತೆ ಸೂಕ್ಷ್ಮಸಂವೇದಿಯಾಗುತ್ತಿಲ್ಲ. ಅದರ ಬಗ್ಗೆ ಯಾರಾದರೂ ಯೋಚಿಸಲು ಶುರು ಮಾಡಿದರೆ, ಪವಿತ್ರ, ಬದಲಾಗದ, ಪರಭಾರೆ ಮಾಡಲಾಗದ ಹಕ್ಕುಗಳು ಎನ್ನುವಂತದ್ದು ಏನೂ ಇಲ್ಲ. ನಾವು ಕೇಳಿದುದನ್ನು ಸರಿಯಾಗಿ ಬಳಸಿಕೊಳ್ಳುವಷ್ಟು ಗಟ್ಟಿಯಾದಾಗ ದೊರಕುವಂತದ್ದೇ ಹಕ್ಕುಗಳು. ಈಗ ಪುರುಷರು ಪವಿತ್ರ, ಬದಲಾಗದ, ಪರಭಾರೆ ಮಾಡಲಾಗದ ಹಕ್ಕುಗಳೆಂದು ಕರೆಯುವುದನ್ನು ಪಡೆಯಲು ಅವರು ನೂರಾರು ವರ್ಷಗಳನ್ನು ತೆಗೆದುಕೊಂಡರು ಮತ್ತು ಸಾಕಷ್ಟು ಬೆವರು ಸುರಿಸಿದರು. ಇಂದು ಮಹಿಳೆಯರು ಯಾವ ಹಕ್ಕುಗಳನ್ನು ಕೇಳುತ್ತಿದ್ದಾರೆಂದರೆ, ಮುಂದೊಂದು ದಿನ ಅದನ್ನು ಪ್ರಶ್ನೆ ಮಾಡುವಷ್ಟು ಯಾರೂ ಮೂರ್ಖರಾಗುವುದಿಲ್ಲ.
ವಿಷಯಗಳು ಅರ್ಥವಾಗುವಷ್ಟು ಬುದ್ಧಿಯಿರುವವರಿಗೆ ತಮ್ಮ ದೀರ್ಘಕಾಲದ ಶತ್ರು ಮತ್ತು ಹೊಸ ಯುಗದ ಪ್ರಶ್ನಿಸುವ ಮನಸ್ಸು ಮುಂದೆ ಬರುತ್ತಿದ್ದಂತೆಯೇ, ಅದರ ಮುಂದೆ ನಮ್ಮ ಹಳೆಯ ವಿಚಾರಗಳು ಮೂಲೆ ಗುಂಪಾಗಿರುವುದು ಮತ್ತು ಸಂಪ್ರದಾಯಗಳು ದಿಕ್ಕಾಪಾಲಾಗಿರುವುದು ತಿಳಿದಿದೆ. ನಾವು ಹೊಸ ಪರಿಸ್ಥಿತಿಗಳು ಮತ್ತು ಹೊಸ ವಿಚಾರಗಳ ಬೆಳಕಿನಲ್ಲಿ ಮಾನವನ ವ್ಯವಹಾರಗಳನ್ನು ಸರಿಯಾಗಿ ಪರಿಶೀಲಿಸುವ ಕಾಲ ಬಂದಿದೆ ಮತ್ತು ಈ ಸಂಶೋಧನೆಯಲ್ಲಿ ಪುರುಷ ಸಹಜವಾಗಿ ಮನುಕುಲದ ಗಮ್ಯಸ್ಥಾನದ ಯಜಮಾನನೆನ್ನುವ ಸಂಪ್ರದಾಯಕ್ಕೇ ಮೊದಲ ಹೊಡೆತ ಬೀಳುವುದು.
ನಮ್ಮ ಪ್ರಪಂಚದಲ್ಲಿ ಸಾಕಷ್ಟು ವಿಷಯಗಳಲ್ಲಿ ತಪ್ಪುಗಳಿವೆ ಎಂಬುದು ಮಂಕುದಿಣ್ಣೆಗೂ ಕಾಣತ್ತದೆ. ಹಳೆಯ ರೀತಿನೀತಿಗಳೇ ಹಳ್ಳ ಹಿಡಿಯುತ್ತಿರುವುದು. ನಮ್ಮಲ್ಲಿ ಜಾಣ್ಮೆಯ ಮಾರ್ಗ ಮತ್ತು ನಿಯಂತ್ರಣಗಳ ಕೊರತೆಯಿದೆ. ನಮ್ಮ ಮುಂದಿರುವ ಅವಕಾಶಗಳು ಮತ್ತು ಅನುಕೂಲಗಳಿಂದ ಹೆಚ್ಚಿನದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾವು ಜೀವನದ ಯೋಜನೆಯನ್ನು ರೂಪಿಸಬೇಕು ಮತ್ತು ಆ ಕೆಲಸಕ್ಕೆ ಹೊಸ ಸಲಕರಣೆಗಳ ಅಗತ್ಯವಿದೆ. ಇಂದಿನ ಅರಾಜಕ ಪರಿಸ್ಥಿತಿಗೆ, ಪ್ರಪಂಚವು ಕೇವಲ ಅರ್ಧ ಭಾಗದವರಿಂದ ಹೇಗೋ ಹೆಣಗಲು ಪ್ರಯತ್ನಿಸುತ್ತಿರುವುದು ಮುಖ್ಯ ಕಾರಣಗಳಲ್ಲಿ ಒಂದಿರಬಹುದು. ಪ್ರಪಂಚವನ್ನು ಮನುಕುಲಕ್ಕೆ ಒಂದು ಸಭ್ಯ ಮನೆಯನ್ನಾಗಿ ಮಾಡಲು ಉಪಯೋಗಿಸಿಕೊಳ್ಳಬೇಕಾಗಿದ್ದ ಮಹಿಳೆಯರ ಶಕ್ತಿಯನ್ನು ವ್ಯರ್ಥ ಮಾಡುತ್ತಿರುವುದನ್ನು ನೋಡುತ್ತಿದ್ದೇವೆ. ಸಂತೋಷವಾಗಿ ಮತ್ತು ಸುಖವಾಗಿ ಬದುಕಲು ಇರುವ ಸಮಸ್ಯೆಯನ್ನು ಬಗೆಹರಿಸಲು ಮಹಿಳೆಯರ ಮತಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ನೋಡೋಣ.
ಮಹಿಳೆಯರು ಮತದಾನ ಮಾಡಿದಾಗ ಪುರುಷರಿಗೆ ಮಹಿಳೆಯರ ಆಕಾಂಕ್ಷೆಗಳ ಬಗ್ಗೆ ಊಹಿಸುವ, ಅದೂ ತಪ್ಪಾಗಿ ಊಹಿಸುವ ಅಗತ್ಯ ಬರುವುದಿಲ್ಲ.  ತಮ್ಮ ಹಿತಕ್ಕೆ ವಿರುದ್ಧವಾಗಿರುವ ಪುರುಷ ಮಾಡಿದ ಕಾನೂನುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸ್ತ್ರೀಯರಿಗೆ ಸಾಧ್ಯವಾಗುತ್ತದೆ.  ಪುರುಷರಿಗೆ ಸ್ತ್ರೀಯರ ಬಗ್ಗೆಯಿರುವ ಉದಾರತೆಯ ಗುಣವು ಅವನು ಸ್ತ್ರೀಯರೊಂದಿಗೆ ಮಾನವೀಯವಾಗಿ ನಡೆದುಕೊಳ್ಳುವಂತೆ ಮತ್ತು ಅವಳ ಹಕ್ಕುಗಳನ್ನು ರಕ್ಷಿಸುವಂತೆ ಮಾಡುತ್ತದೆಯೆಂದು ಕೆಲವರು ಕಲ್ಪಿಸಿಕೊಳ್ಳಲು ಇಷ್ಟಪಡುತ್ತಾರೆ. ಕೆಲವು ಪುರಷರು ಮಹಿಳೆಯರನ್ನು ರಕ್ಷಿಸುವುದೇನೋ ನಿಜ. ಎಲ್ಲಾ ಮಹಿಳೆಯರಿಗೂ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು ಈ ಫ್ಯೂಡಲ್ ಜವಾಬ್ದಾರಿಯಿಂದ ಪುರುಷನನ್ನು ಮುಕ್ತಗೊಳಿಸುವ ಹಕ್ಕಿದೆಯೆಂದು ಒತ್ತಾಯಿಸುತ್ತೇವೆ.
ರಾಜಕೀಯ ಅಧಿಕಾರವು ರಾಜ್ಯದ ವ್ಯವಹಾರಗಳನ್ನು ರೂಪಿಸುತ್ತದೆ ಮತ್ತು ಮನುಷ್ಯರ ನಡುವೆ ದಿನನಿತ್ಯದ ಪರಸ್ಪರ ಸಂಬಂಧಗಳನ್ನು ನಿರ್ಧರಿಸುತ್ತದೆ. ಮತದಾನದ ಹಕ್ಕಿರುವ ನಾಗರಿಕನು ತನ್ನ ಭವಿಷ್ಯದ ಯಜಮಾನ. ಈ ಶಕ್ತಿಯಿರದ ಮತ್ತು “ಸಹಜ ರಕ್ಷಕರು” ಇಲ್ಲದ ಮಹಿಳೆಯರು ಪುರುಷ ನಿರ್ಮಿತ ಕಾನೂನಿನ ಕೃಪಾಕಟಾಕ್ಷದಲ್ಲಿರಬೇಕು. ಮತ್ತೆ ಈ ಕಾನೂನುಗಳು ಸಾಮಾನ್ಯವಾಗಿ ಮಹಿಳೆಯರಿಗೆ ಅನ್ಯಾಯ ಮಾಡುವುದನ್ನು ನಮ್ಮ ಅನುಭವವು ಹೇಳುತ್ತದೆ. ತಮ್ಮನ್ನು ನೋಡಿಕೊಳ್ಳಲು ತಂದೆ ಮತ್ತು ಗಂಡ ಇರುವ ಮಹಿಳೆಯರನ್ನು ರಕ್ಷಿಸಲು ಮಾಡಿರುವ ಕಾನೂನುಗಳು ದುಡಿಯುವ ಮಹಿಳೆಯನ್ನು ರಕ್ಷಿಸುವುದಿಲ್ಲ; ಅವರಿಗೆ ರಾಜ್ಯದ ಪೊಲೀಸ್ ಏಕಮಾತ್ರ ರಕ್ಷಕ.
ಕೆಲವು ರಾಜ್ಯಗಳಲ್ಲಿ ಮಹಿಳೆಯರ ಸಂಬಳವು ಅವರ ತಂದೆ ಅಥವಾ ಗಂಡನಿಗೆ ಸೇರುತ್ತದೆ. ಅವರು ಆಸ್ತಿಯನ್ನು ಹೊಂದುವಂತಿಲ್ಲ. ಈ ಪ್ರಜ್ಞಾವಂತ ಪ್ರಜಾತಂತ್ರದ ಕೆಲವು ಭಾಗಗಳಲ್ಲಿ ತಂದೆ ಮಗನ ಏಕೈಕ ಮಾಲೀಕ. ಅವನು ಇನ್ನೂ ಹುಟ್ಟದ ಮಗುವಿಗೆ ಉಯಿಲಿನಲ್ಲಿ ಏನೂ ಕೊಡದೆ ಬಿಡಬಹುದು ಎಂದು ಕೇಳಿದ್ದೇನೆ. ಕಾನೂನು ರಚಿಸುವವರ ಅಂಗಳದಲ್ಲಿ ಮಹಿಳೆಯರ ಧ್ವನಿ ಅಡಗಿಸಲಾಗಿದೆ ಎನ್ನುವುದಕ್ಕೆ ಒಪ್ಪಿಗೆಯ ವಯಸ್ಸು (ಮದುವೆ, ಮತ್ತೊಂದಕ್ಕೆ) ಕುರಿತು ಇರುವ ಶಾಸನವೇ ಸಾಕ್ಷಿ. ಪುರುಷರು ತಮ್ಮ “ಸಹಜ ಅವಲಂಬಿತ”ರನ್ನು ಕಾಪಾಡಲು ಸಮಯವಿಲ್ಲದಷ್ಟು ಕಾರ್ಯನಿರತರಾಗಿರುವುದು ದುಡಿಯುವ ಮಹಿಳೆಯರನ್ನು ಕಾಡುವ ಕಾನೂನುಗಳಿರುವುದೇ ಸಾಕ್ಷಿ.
ಆರ್ಥಿಕ ತುರ್ತುಗಳು ಮಹಿಳೆಯರನ್ನು ಮತದಾನ ಕೇಳುವಂತೆ ಮಾಡಿವೆ. ಎಲ್ಲಾ ಬಾಲ್ಯಗಳನ್ನು ತರಬೇತುಗೊಳಿಸುವ ಬಹುಮುಖ್ಯವಾದ ಸಾರ್ವಜನಿಕ ಕಾರ್ಯವನ್ನು ದೊಡ್ಡ ಸಂಖ್ಯೆಯ ಮಹಿಳೆಯರಿಗೆ ನೀಡಲಾಗಿದೆ. ಹಾಗಿದ್ದರೂ ಕೂಡ, ತಮ್ಮ ಸಂಬಳದಲ್ಲಿ ಶಿಕ್ಷಕರಿಯರಿಗೆ ಸಭ್ಯ ಜೀವನ ನಡೆಸುವುದು ಕಷ್ಟ. ಈ ಅತಿಯಾಗಿ ದುಡಿದವರಿಗೆ, ಕಡಿಮೆ ಸಂಬಳ ಪಡೆದವರಿಗೆ ಮತದಾನದ ಹಕ್ಕು ಬಿಟ್ಟು ಬೇರಾವ ಪರಿಹಾರವಿದೆ? ಅವರನ್ನು ರಾಜಕೀಯವಾಗಿ ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ.
ಇತ್ತೀಚಿಗೆ, ನ್ಯೂಯಾರ್ಕ್‍ನಲ್ಲಿ ಮಹಿಳೆಯರ ಸಂಘವೊಂದು ಶಾಸಕಾಂಗವು ಕ್ಷೇಮಾಭಿವೃದ್ಧಿಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಬಯಸಿತು. ಇಂತಹ ಮಸೂದೆಯ ಬಗ್ಗೆ ವರದಿ ಒಪ್ಪಿಸಬೇಕಾಗಿದ್ದ ಸಮಿತಿಯ ಅಧ್ಯಕ್ಷರಿಗೆ ಸುಮಾರು 5,000 ಮಹಿಳೆಯರ ಸಹಿಯಿದ್ದ ಹಕ್ಕೊತ್ತಾಯದ ಮನವಿಯನ್ನು ಸಲ್ಲಿಸಿದರು. ಮಸೂದೆಯು ಉತ್ತಮವಾಗಿದೆ, ಅದು ಅಂಗೀಕಾರವಾಗಲೇಬೇಕೆಂದು ಅಧ್ಯಕ್ಷರು ಹೇಳಿದರು. ಮಹಿಳೆಯರು ಸಾಕಷ್ಟು ಸಮಯ ಕಾದ ಮೇಲೆ, ಮಸೂದೆಯ ಗತಿಯೇನಾಯಿತೆಂದು ತಿಳಿದುಕೊಳ್ಳಲು ಮನವಿಯನ್ನು ಕಳುಹಿಸಿದರು. ಅಧ್ಯಕ್ಷರು ಮಸೂದೆಯ ಬಗ್ಗೆ ನನಗೇನೂ ಗೊತ್ತಿಲ್ಲವೆಂದು ಹೇಳಿದರು. ಆಗ 5,000 ಮಹಿಳೆಯರ ಸಹಿಯಿದ್ದ ಮನವಿ ನೀಡಿದ್ದನ್ನು ನೆನಪಿಸಿದರು. ಆಗ ಅಧ್ಯಕ್ಷರು ಉತ್ತರಿಸಿದರು: “ಹೋ, ಅದಾ! 5,000 ಸಾವಿರ ಮಹಿಳೆಯರ ಸಹಿಯಿರುವ ಮನವಿಗೆ ಸಹಿ ಹಾಕಿದ ಕಾಗದದಷ್ಟೂ ಬೆಲೆಯಿಲ್ಲ. ಕೇವಲ 5 ಪುರುಷರ ಸಹಿ ತನ್ನಿ. ನಾವು ಏನನ್ನಾದರೂ ಮಾಡುತ್ತೇವೆ.” ನಾವು ಇದೊಂದೇ ಕಾರಣಕ್ಕಾಗಿ ಮತದಾನವನ್ನು ಕೇಳುತ್ತೇವೆ - ನಮಗೆ ಐವರು ಪುರುಷರಿಗಿಂತ ಐದು ಸಾವಿರ ಮಹಿಳೆಯರು ಹೆಚ್ಚೆಂದು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.
ಮತದಾನ ಬಯಸುವವರಲ್ಲಿ ಹೆಚ್ಚಿನ ಮಹಿಳೆಯರು ಸಂಬಳಕ್ಕಾಗಿ ದುಡಿಯುವವರು. ಕೈಗಾರಿಕಾ ಪ್ರಪಂಚದಲ್ಲಿ ಕೈಗಳಿಂದ ಬಳಸುವ ಸಾಧನಗಳ ಜಾಗದಲ್ಲಿ ವಿದ್ಯುತ್ ಚಾಲಿತ ಸಾಧನಗಳು ಬಂದ ಮೇಲೆ ಮಹತ್ತರ ಬದಲಾವಣೆಗಳಾಗಿವೆ. ಪುರುಷರು ಮತ್ತು ಮಹಿಳೆಯರು ಹೊಸ ಉತ್ಪಾದನೆ ಮತ್ತು ವಿತರಣೆಯ ವ್ಯವಸ್ಥೆಗೆ ತಮ್ಮನ್ನೇ ಒಗ್ಗಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಹಿಂದೆ ಯಾವಾಗಲೂ ಶೋಷಿಸದ ರೀತಿಯಲ್ಲಿ ಪುರುಷರ ಮತ್ತು ಮಹಿಳೆಯರ ಶ್ರಮವನ್ನು ಶೋಷಿಸಲು ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಬದಲಾವಣೆಯಿಂದ ಬಂದಿರುವ ಬದುಕುಳಿಯುವ ಹೋರಾಟದಲ್ಲಿ ಮಹಿಳೆಯರು ಮತ್ತು ಮಕ್ಕಳು ಪುರುಷರಿಗಿಂತ ಹೆಚ್ಚು ಸಂಕಷ್ಟಕ್ಕೊಳಗಾಗಿದ್ದಾರೆ. ನಿಜ, ಆರ್ಥಿಕ ಒತ್ತಡವು ಹಲವಾರು ಮಹಿಳೆಯರು ತಮ್ಮ ಲೈಂಗಿಕತೆಯನ್ನು ಬಿಕರಿಗಿಡುವಂತೆ ಮಾಡಿದೆ.
ಹಾಗಿದ್ದರೂ ಕೂಡ, ಮಹಿಳೆಯರಿಗೆ ತಾವು ಬದುಕುತ್ತಿರುವ ಮತ್ತು ದುಡಿಯುತ್ತಿರುವ ಪರಿಸ್ಥಿತಿಯ ಬಗ್ಗೆ ಹೇಳಲು ಏನೂ ಇರುವುದಿಲ್ಲ. ಅಸಹಾಯಕರಾದ, ನಿರ್ಲಕ್ಷಿತರಾದ ಅವರು ದುರ್ಗತಿ ಮತ್ತು ಅವನತಿಗೆ ತಳ್ಳುವ ಕಷ್ಟಗಳನ್ನು ಸಹಿಸಿಕೊಳ್ಳಲೇಬೇಕು. ಅವರು ಕ್ರೌರ್ಯ ಮತ್ತು ದೇಹ ಹಾಗೂ ಮೆದುಳಿನ ಬೆಳವಣಿಗೆಯನ್ನು ಕುಂಠಿತಗೊಳಿಸಿ ಅಕಾಲಿಕ ಮರಣ ಅಥವಾ ಅಕಾಲಿಕ ವೃದ್ದಾಪ್ಯವನ್ನು ತರುವ ಪ್ರಕ್ರಿಯೆಯ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಕೈಯೆತ್ತುವುದಿಲ್ಲ.
ದುಡಿಯುವ ಮಹಿಳೆಯ ಅಸಹಾಯಕತೆಯಿಂದ ದುಡಿಯುವ ಪುರುಷರು ಕಷ್ಟ ಅನುಭವಿಸುತ್ತಾರೆ. ಅವರು ಸರಿಯಾದ ಕಾನೂನುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲಾಗದ ಮಹಿಳೆಯರೊಂದಿಗೆ ಒಂದೇ ಕಛೇರಿಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಸ್ಪರ್ಧೆಗಿಳಿಯಬೇಕು. ಅವರು ಮನೆಯೆಂದು ಕರೆಯುವ ನೈರ್ಮಲ್ಯವಿಲ್ಲದ ಕೋಣೆಗಳಲ್ಲಿ ಕೆಲಸ ಮಾಡುವ, ರಾತ್ರಿಯ ಹೊತ್ತು ಒಂದು ಕಾಲಲ್ಲಿ ತೊಟ್ಟಿಲನ್ನು ತೂಗುತ್ತಾ ಮಂದ ಬೆಳಕಿನಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಸ್ಪರ್ಧೆ ನಡೆಸಬೇಕು. ಎಲ್ಲಾ ಕಾರ್ಮಿಕರ ಹಿತದೃಷ್ಟಿಯಿಂದ ಈ ಮೂರ್ಖತನದ, ಏಕಮುಖದ ಏಕಬಲ ವ್ಯವಸ್ಥೆಯನ್ನು ಕೊನೆಗಾಣಿಸಬೇಕು.
ಪುರುಷರು ಮಾಡಿದ ಕಾನೂನುಗಳು ಮಹಿಳೆಯರ ದೇಹ ಮತ್ತು ಮನಸ್ಸುಗಳೆರಡನ್ನೂ ಆಳುತ್ತವೆ. ಪುರುಷರು ನೋಡಿಕೊಳ್ಳುವ ಶಾಲೆಗಳನ್ನು ಹೇಗೆ ನಡೆಸುತ್ತಾರೆಂದರೆ, ಅಲ್ಲಿ ಮಹಿಳೆಯರ ಆದರ್ಶಗಳನ್ನು ಘೋರ ರೂಪಗಳಿಗೆ ತಕ್ಕಂತೆ ತಿರುಚುತ್ತಾರೆ. ಸರ್ಕಾರಗಳು ಮತ್ತು ಶಾಲೆಗಳು ಯುದ್ಧ ಯಾವಾಗ ಬೇಕಾದರೂ ಸಂಭವಿಸಬಹುದೆಂಬ ಸಾರ್ವಜನಿಕ ಆಕ್ರಮಣಕಾರಿ ಅಭಿಪ್ರಾಯವನ್ನು ಹುಟ್ಟು ಹಾಕುತ್ತವೆ ಮತ್ತು ಪೋಷಿಸುತ್ತವೆ. ಪುರುಷ ಬರೆದ ಇತಿಹಾಸ, ಕಟ್ಟುಕಥೆ ಮತ್ತು ಕಾವ್ಯಗಳು ಯುದ್ಧವನ್ನು ವೈಭವೀಕರಿಸುತ್ತವೆ. ದೇಶದ ಬಗ್ಗೆ ಪ್ರೀತಿಯೆಂದರೆ ನಗಾರಿಗಳು, ಬಾವುಟಗಳು ಮತ್ತು ದೇಶದ ಆಳ್ವಿಕರಿಗಾಗಿ ಜೀವ ಕೊಡಲು ತಯಾರಿರುವ ಯುವಜನರು ಎಂದು ಸೂಚಿಸುವ ದೇಶಪ್ರೇಮಕ್ಕೆ ಪರಿವರ್ತಿಸಲಾಗಿದೆ. ನಮ್ಮ ಶಾಲೆಗಳು ಅಂತಹ ವಿಚಾರಗಳು ಪ್ರಚಲಿತವಾಗಿರುವಂತೆ ಮಾಡುತ್ತಿರುವವರೆಗೂ ಯುದ್ಧಗಳು ಮುಂದುವರೆಯುತ್ತಿರುತ್ತವೆ.
ಮಹಿಳೆಯರಿಗೆ ನೋವನ್ನು ಅನುಭವಿಸುವ ಮತ್ತು ಬಲಿದಾನ ಮಾಡುವ ಅರ್ಥದಲ್ಲಿ ಮಾನವ ಜೀವನದ ಬೆಲೆ ಗೊತ್ತು; ಆದರೆ ಪುರುಷರಿಗೆ ಅದು ಯಾವತ್ತೂ ಗೊತ್ತಾಗುವುದಿಲ್ಲ. ಮಹಿಳೆಯರು ಯುದ್ಧವನ್ನು ತಡೆಯಲು ಮತ್ತು ಯುದ್ಧವನ್ನು ಸಾಧ್ಯಗೊಳಿಸುವ ವಿಚಾರಗಳನ್ನು ನಾಶ ಮಾಡಲು ಮತದಾನವನ್ನು ಬಳಸಿಕೊಳ್ಳುತ್ತಾರೆಂಬುದು ನನ್ನ ನಂಬಿಕೆ. ಶಿಕ್ಷಣವು ತಮ್ಮ ಪುರುಷತ್ವದ ಆದರ್ಶಗಳಲ್ಲಿ ಮಿಲಿಟರಿಯ ಅಂಶವನ್ನು ವೈಭವೀಕರಿಸಲು ಕಲಿಸಿದ್ದರೂ ಸಹ, ಯಾರು ತನ್ನ ದೇಶಕ್ಕಾಗಿ ಬಾಳುತ್ತಾರೋ ಮತ್ತು ಅದಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಾರೋ ಅವರು ದೇಶವನ್ನು ಅತ್ಯುತ್ತಮವಾಗಿ ಪ್ರೀತಿಸುತ್ತಾರೆ ಎಂಬ ಜ್ಞಾನೋದಯಕ್ಕೆ ಅವರು ತೆರೆದುಕೊಳ್ಳುತ್ತಾರೆ. ಅವರು ಯುದ್ಧದ ಧೀರರಿಗಿಂತ ಹೆಚ್ಚಾಗಿ ಶಾಂತಿಯ ಧೀರರಿಗೆ ಗೌರವ ಸಲ್ಲಿಸುವುದನ್ನು ಮಕ್ಕಳಿಗೆ ಕಲಿಸುತ್ತಾರೆ.
ಮತದಾನದ ಹಕ್ಕಿರುವ ಪುರುಷರಿಗಿಂತ ಮಹಿಳೆಯರೇ ಈಗಲೂ ಶಾಲೆಗಳು, ಹಾಲು ಸರಬರಾಜು ಮತ್ತು ಉತ್ತಮ ಗುಣಮಟ್ಟದ ಆಹಾರಕ್ಕೆ ಸಂಬಂಧಪಟ್ಟ ಸಾಮಾಜಿಕ ಶಾಸನ ಮತ್ತು ಕಾನೂನುಗಳಿಗಾಗಿ ಕೆಲಸ ಮಾಡುತ್ತಿರುವವರು. ಮೂಲಭೂತವಾಗಿ, ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮಾಜ ಜೀವಿ. ಪುರುಷ ಹೆಚ್ಚು ವ್ಯಕ್ತಿ ಕೇಂದ್ರೀತವಾಗಿದ್ದರೆ, ಆಕೆ ಇಡೀ ಕುಟುಂಬದ ಕಾಳಜಿ ವಹಿಸುತ್ತಾಳೆ. ಆತನಲ್ಲಿ ಸಾಮಾಜಿಕ ಪ್ರಜ್ಞೆ ಅಷ್ಟೊಂದು ಬಲವಾಗಿರುವುದಿಲ್ಲ. ಹಲವಾರು ಪ್ರಶ್ನೆಗಳನ್ನು – ಮಹಿಳೆಯರು ಕೆಲಸ ಮಾಡುವ ಕಡೆ ಸುರಕ್ಷತೆ ಮತ್ತು ಸಣ್ಣ ಮಕ್ಕಳ ಹಕ್ಕುಗಳಂತಹ ಪ್ರಶ್ನೆಗಳನ್ನು ಮಹಿಳೆಯರ ಸಾಮಾಜಿಕ ಅನುಭವದ ಸಹಾಯದಿಂದ ಬಗೆಹರಿಸಬಹುದು.
ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲು ವಿರೋಧಿಸುವ ವಾದಗಳಿಗೆ ಅವಳಲ್ಲಿರುವ ವಿಶಿಷ್ಟ ಜ್ಞಾನ ಮತ್ತು ಸಾಮಥ್ರ್ಯಗಳನ್ನೇ ಆಧಾರ ಮಾಡಿಕೊಳ್ಳಲಾಗಿದೆ. ತಾಯ್ತನದ ಉದ್ದೇಶಗಳಿಗೆ ಮಹಿಳೆ ರೂಪಿತವಾಗಿದ್ದಾಳೆಂಬುದು ನಿರ್ವಿವಾದ ಸತ್ಯ. ಹಾಗೆಯೇ ಪುರಷನು ತಂದೆಯ ಉದ್ದೇಶಗಳಿಗೆ ರೂಪಿತನಾಗಿದ್ದಾನೆ. ಆದರೆ ಅದರಿಂದಾಗಿ ಆತ ನಾಗರಿಕನಾಗಲು ಅಸಮರ್ಥನೆಂದು ಯಾರೂ ಯೋಚಿಸುವುದಿಲ್ಲ. ಪುರುಷ ಮತ್ತು ಮಹಿಳೆಯರ ನಡುವೆ ಮೂಲಭೂತ ವ್ಯತ್ಯಾಸಗಳಿದ್ದರೆ, ವ್ಯತ್ಯಾಸವಿದೆಯೆಂದು ಹೇಳುವುದಕ್ಕೆ ನಾನಂತೂ ದೂರ, ಆಗ ಆಕೆಯ ಮಾತನ್ನೂ ಕೇಳಬೇಕೆಂಬುದು ಇನ್ನೂ ಹೆಚ್ಚು ವಿವೇಕವಾಗುತ್ತದೆ.
ನನ್ನ ಕಡೆಯಿಂದ, ಜನಾಂಗದ ದುರ್ಬಲ ಅರ್ಧಭಾಗವನ್ನು ವಿಮೋಚನೆಗೊಳಿಸಲು ಪುರುಷನ ದೀನರಕ್ಷಕನ ಗುಣವೇ ಕಾರಣವಾಗಬೇಕೆಂದೇ ನಾನು ಯೋಚಿಸುತ್ತೇನೆ. ಆತನಿಗೆ ಮತದಾನದ ಹಕ್ಕು ಸಿಗುವಾಗ ಅದನ್ನು ತನ್ನ ಪ್ರೀತಿಯ ಸಂಗಾತಿಯೊಂದಿಗೆ ಹಂಚಿಕೊಳ್ಳಬೇಕೆಂಬುದು ಮನಸಿಗೆ ಬರದೇ ಹೋದ್ದದ್ದು ವಿಚಿತ್ರವೆನ್ನುವುದಂತೂ ಸತ್ಯ. ಮತದಾನದ ಪ್ರಶ್ನೆಯಲ್ಲಿ ಆತನಿಗೆ ಆಕೆಯ ಬಗ್ಗೆಯಿರುವ ಧೋರಣೆಯಲ್ಲಿ ನನಗೆ ದಬ್ಬಾಳಿಕೆಯಿರುವ ಅನುಮಾನ ಕಾಣುತ್ತದೆ. ಹಾಗಾದರೆ ಈ ದಬ್ಬಾಳಿಕೆಯು ದೀನರಕ್ಷಕನ ಮುಖವಾಡವನ್ನು ಹಾಕಿಕೊಂಡಿದೆಯೇ? ದಯವಿಟ್ಟು ನನ್ನನ್ನು ತಪ್ಪರ್ಥ ಮಾಡಿಕೊಳ್ಳಬೇಡಿ. ನಾನು ದೀನರಕ್ಷಣೆಯನ್ನು ನಿಂದಿಸುತ್ತಿಲ್ಲ. ಅದರಲ್ಲೇನಿದೆ – ಅದೊಂದು ಸುಂದರವಾದ ವಿಷಯ. ಆದರೆ ಅದು ಸಾಕಷ್ಟಿಲ್ಲದಿರುವುದೆ ಸಮಸ್ಯೆ. ಮಹಿಳೆಯರು ಗಳಿಸಿಕೊಂಡಿರುವ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳೆಲ್ಲವೂ ಪ್ರತಿಯೊಂದು ಕಡೆಯಲ್ಲೂ ಸೆಣಸಾಟದಿಂದ ವಿಜಯ ಸಾಧಿಸುವ ಗತಿಯಲ್ಲಿ ಪಡೆದದ್ದು.
ಹಾಗಾಗಿ, ಪುರುಷರ ದೀನರಕ್ಷಣೆಯು ವಿಫಲವಾಗಿರುವುದರಿಂದ, ನಾವು ಸ್ವಲ್ಪ ಅವಸರ ಮಾಡಬೇಕು ಮತ್ತು ನಮಗಾಗಿ ನಾವೇನು ಮಾಡಿಕೊಳ್ಳಬೇಕೆಂದು ನೋಡಬೇಕು; ನಮಗೆ ಮತದಾನದ ಹಕ್ಕು ಪುರುಷರಿಗೆ ಬೇಕು. ಮೊಟ್ಟಮೊದಲಿಗೆ, ನಾವು ಸಂಘಟಿತರಾಗಬೇಕು. ಒಂದು ರಾಜಕೀಯ ಅಂಶವಾಗಿ ನಮ್ಮನ್ನು ನಾವು ಎಷ್ಟು ಆಕ್ರಮಣಶೀಲರನ್ನಾಗಿ ಮಾಡಿಕೊಳ್ಳಬೇಕೆಂದರೆ, ನಾವು ಯಾವುದರ ಕೆಳಗೆ ಬದುಕುತ್ತಿದ್ದೇವೆಯೋ ಆ ಕಾನೂನುಗಳಿಗೆ ಮಾರ್ಗದರ್ಶನ ನೀಡಲು ಮತ್ತು ರೂಪಿಸಲು ನಮ್ಮ ಧ್ವನಿಯನ್ನು ನಮ್ಮ ಸಹಜ ರಕ್ಷಕರು ನಿರಾಕರಿಸಲು ಅಸಾಧ್ಯವಾಗಬೇಕು.
ತಮ್ಮ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಕೆಲಸ ಮಾಡುವವರೆಗೂ, ನಾವು ಬಂಡವಾಳವಾದದ ಅಂತ್ಯ ಮತ್ತು ಪ್ರಜಾತಂತ್ರದ ವಿಜಯವನ್ನು ಕಾಣಲು ಸಾಧ್ಯವಿಲ್ಲ. ಎಲ್ಲರ ಸ್ವಾತಂತ್ರ್ಯಕ್ಕಾಗಿ ನಡೆಯುವ ನಮ್ಮ ಹೋರಾಟದಲ್ಲಿ ಮತದಾನವು ಹಲವಾರು ಆಯುಧಗಳಲ್ಲಿ ಒಂದೇ ಒಂದು ಎಂಬುದು ನನಗೆ ಮನವರಿಕೆಯಾಗಿದೆ. ಆದರೆ ಪ್ರತಿಯೊಂದು ಮಾರ್ಗವೂ ಅಮೂಲ್ಯವಾದದ್ದು; ಮತದಾನದ ಹಕ್ಕಿನೊಂದಿಗೆ ಮಹಿಳೆಯರು ಮತ್ತು ಪುರುಷರು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವಗಳ ಯುಗಯುಗದ ಕನಸು ನನಸಾಗುವ ದಿನವನ್ನು ಬೇಗನೆ ತರುತ್ತಾರೆ.

 ಮೂಲ: ಹೆಲೆನ್ ಕೆಲರ್
(ನ್ಯೂಯಾರ್ಕ್, ‘ಕಾಲ್’, ಅಕ್ಟೋಬರ್ 15, 1915)
ಅನುವಾದ: ಎಸ್.ಎನ್.ಸ್ವಾಮಿ 

ಕಾಮೆಂಟ್‌ಗಳಿಲ್ಲ: