'ತೇರಿ ವಿಠೋಬಸೆ ಮೇರಿ ಕ್ಯಾ ಲೇನಾದೇನಾ. ಬ್ಹೇಸ್ ಪಡಿ ಹೆ ದೂದ್ ಸೆ ಮೇರೆ ಬಚ್ಚೋಕಾ ದೇಖಬಾಲ್ ಹೋತಾಹೆ. ಮೇನಹಿ ಆವೂಂಗಿ' ಎಂದ ದಡ್ಡ ಕೋಡಿ ತುಕಾರಮನ ಹೆಂಡ್ತಿ, ಪುಷ್ಪಕ ವಿಮಾನಬಂದರು ಹೋಗಲಿಲ್ಲ ಕೋಡಿ. ಅಂತ ಮುತ್ಯಾ ಕತಿ ಹೇಳ್ತಿದ್ದರ ನಗ್ತಿದ್ವಿ.
ಎಂಥ ಹುಚ್ಚ ಇರ್ತಾವು ಹೆಣ್ಣಮಕ್ಕಳು ಅಂದಾಗ, ಖರೆ ವಿಮಾನದಾಗ ಗಂಡನ ಕೂಡೆ ಹೋಗದ ಬಿಟ್ಟು, ಎಮ್ಮಿದ ಸಗಣಿ ಎತ್ತೋದರಾಗ ಏನ ಸುಖ ಕಾಣ್ತಿದ್ದಾಳು, ಅಳೋ ಕೂಸಿನ ನಡಕ ಏನ ಸುಖಪಟ್ಟಾಳು ಅಂತ ಮನಸಿಗೆ ಅನಿಸಿದ್ದು ಸುಳ್ಳಲ್ಲ.
ಯಾಕಂದ್ರ ಅಜ್ಜನಂಗ ಯೋಚನಿ, ಅಪ್ಪನಂಗ ಯೋಚನಿ ಮಾಡ್ತಿದ್ದ ಕಾಲ. ಅವ್ವ ಹೇಳೋದು, ಮಾತಾಡೋದು ಯೋಚನಿ ಮಾಡೋದು ಎಲ್ಲಾ ತಪ್ಪು, ಅರ್ಥ ಇಲ್ಲದ್ದು. ಒಂದಕ್ಕು ಲಾಭಂತು ಇಲ್ಲ. ನಷ್ಟ ಅಂದ್ರ ಅಕಿ ಬದುಕನ್ನ ಕಳಕೋತ ಹೋದದ್ದಷ್ಟೆ ಬಂತು. ಅಪ್ಪ, ಅಜ್ಜ ಇಬ್ಬರ ಖರೆ. ಅವರಷ್ಟ ಕರೆಕ್ಟ್ ಯೋಚನಿ ಮಾಡ್ತಾರ.
ಅವರಂಗ ನಾ ಶಾಣ್ಯಕಿ ಆಗಬೇಕು ಅಂತ ಬೆಳದಕಿ ನಾ. ಆದರ ಆದದ್ದು ಮತ್ತ ಅಮ್ಮನಂಗ ಯೋಚನಿ ಮಾಡೋದ.
ಕೂಸು ಕುನ್ನಿ ಬಿಡಲಿಕ್ಕೆ ಗಂಡಿಗಷ್ಟ ಸಾಧ್ಯ. ಅವ ಏನ ಹೋತ್ತಾನ ಹೆತ್ಯಾನ, ಅತ್ತಾಗ ಹಾಲ ಹಾಕ್ಯಾನ, ಎದೆಯಾನ ಜೀವ ಹರಸಿ, ಮೈ ಹಂಚಿ ಬೆಳದ ಕೂಸು ಹೊರಗ ಒಗಿಯೋ ಕಸದ್ಹಾಂಗ ಸಂಸಾರ ಒಗದ ಹೋಗ್ಲಿಕ್ಕೆ ಅವಂಗಷ್ಟ ಸಾಧ್ಯ, ನನಗಲ್ಲ, ಎಂದಿರಬಹುದಾದ ತುಕಾರಾಮನ ಹೆಂಡ್ತಿ ಹ್ಹಂಗ ಇರೋ ಮಂದಿ.
ಅವ್ವನು ಆಕಿ ಹಂಗ ಸಗಣಿ ಹಾಲು ಕಾಣದಿದ್ದರ ಏನಾತು ಎಲ್ಲರು ತುಕಾರಾಮನ ಹೆಂಡತಿ ಕುಲದವರು. ಸಗಣಿ ಬಳದು, ಹಾಲಕರದು, ಹುಲ್ಲಹಾಕಿ, ನಾಕ ಮಂದಿ ಕೆಳಗ ದಗದ ಮಾಡಿ ಬಾಳ್ವೆ ದೂಕ್ತಿವೆ ಹೊರತು ವಿಠೋಬ ಅಂತ ಬದುಕ ಬಿಟ್ಟು ಬರೋರಲ್ಲ. ನಮಗ ಹಾಲು ಕೋಡೋ ಎಮ್ಮಿನ ವಿಠೋಬ. ಹಾಲು ಕುಡುದು ನಗೋ ಕೂಸ ವಿಠೋಬ. ಹೊತ್ತಿಗೆ ತಿಂದುಂಡು ಹರಸೋ ಅತ್ತಿ ಮಾವ, ಅಪ್ಪ ಅಮ್ಮನ ವಿಠೋಬ ರುಕ್ಮಾಯಿ.
ಆಧುನಿಕ ಮಠದ ಮಂದಿ ಕರೆಯೋ ಹಂಗ ನಿತ್ಯನಾರಕಿಗಳು, ಅಂದರ್ರ ಇರೋ ಕಷ್ಟದಾಗ ಸುಖ ಅಂದುಕೊಂಡು ಬಾಳುವ ಸಂಸಾರಿಗಳೋ, ನಾವಂತು ಬದುಕನ್ನ ಪ್ರೀತಿಸೋ ಮಂದಿ.
ಬೆಳೆಯಾಗ ಕಳೆ ಬಂದ್ಹಾಂಗ ತ್ರಾಸು ಅಂಬೋವು. ಕಳೆನ ಕಿತ್ತು ಎತ್ತಿಗೆ ಹಾಕಿ ಉಳುಮೆ ಮಾಡ್ತೀವಿ, ಇಲ್ಲ ಆಕಳಿಗೆ ಹಾಕಿ ಹಾಲ ಕಾಣ್ತೀವಿ. ನಾವು ಅಂಜೋಮಂದಿ ಅಲ್ರಿ. ಬದುಕ ನಮ್ಮ ದೇವರು. ಮಕ್ಕಳ ನಮ್ಮ ಸುಖಗಳು. ಮಂದೀನ ನಮ್ಮ ಬಂಧುಗಳು.
ನೀವೇನಂತೀರಿ?
- ಸವಿತಾ ರವಿಶಂಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ