-೧-
ದೇಹ ಶೀಲ
ದೇಹ - ಶೀಲ ಎಂಬ ಭಿನ್ನ ಅಂಶಗಳು ಒಂದರೊಳಗೊಂದು ಮೇಳೈಸಿಕೊಂಡಿದ್ದು ವಿಚಿತ್ರ. ಸಮಾಜದ ವ್ಯವಸ್ಥೆಯಲ್ಲಿ ಸ್ತ್ರೀ ಪುರುಷ ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಹೆಣಗಾಡುತ್ತಿರುವುದಕ್ಕೆ ಬಹುಶಃ ಕಾರಣ. ಮಹಾ ಮಹಾಕಾವ್ಯಗಳ ರಚನೆಗೆ ಕಾರಣ ಈ ಎರಡು ಅಂಶಗಳೇ.
ದೇಹದ ಭಾಷೆ, ನಡವಳಿಕೆ, ಅಪೇಕ್ಷೆ ಬೇರೆ. ಕಾಲದ ಜೊತೆ ಸಾಗುವಂಥದ್ದು. ಶೀಲ ಭಾವದ ಭಾಷೆ ವಾತಾವರಣದಲ್ಲಿ ಒಂದೇ ಎಂಬ ರೀತಿಯಲ್ಲಿ ರೂಪಿತವಾದರು, ಗಂಡಿಗೆ ಸ್ವಚ್ಛಂದ, ಸ್ವತಂತ್ರವಾಗಿ ಬೆಳೆದರೆ ಹೆಣ್ಣಿಗೆ ಕಣ್ಗಾವಲು. ದೇಹವೆಂಬುದು ಲೈಂಗಿಕ ಸೀಮಿತತೆಯಲ್ಲಿ ರೂಪಿತಗೊಂಡಿತು.
ಉದಾಹರಣೆಗೆ ಲಕ್ಷ್ಮಣ ಸೀತೆಯ ಬೆರಳಿನ ಕಾಲುಂಗರ ಮಾತ್ರ ನೋಡಿದ್ದ ಎಂದು ಹೇಳುವುದು, ಸೀತೆ ರಾವಣನ ಹೆಬ್ಬೆರಳನ್ನು ಮಾತ್ರ ನೋಡಿದ್ದೆ ಎನ್ನುವಂತದ್ದು ಕಂಡಾಗ ಒಬ್ಬ ಪುರುಷನನ್ನ, ಸ್ತ್ರೀಯನ್ನ ನೋಡಿಲ್ಲ ಎಂಬುದು ಪವಿತ್ರ, ಪಾವಿತ್ಯ ಹೇಗಾಗುತ್ತದೆ ಅಥವಾ ಕೇವಲ ಗೌರವ ಎನ್ನುವುದು ಎಷ್ಟರ ಮಟ್ಟಿಗೆ ಸರಿ? ಎಷ್ಟು ಔಚಿತ್ಯ ಎಂದು ಯೋಚಿಸಿದರೆ ಕಸಿವಿಸಿಗೆ ಒಳಗಾಗುತ್ತೇವೆ.
ಮನುಷ್ಯನ ಕಣ್ಣು ಬಹಳ ಸ್ಪಷ್ಟ. ವ್ಯಕ್ತಿಯೋರ್ವನ ಕಾಮಭಾವ ಅತ್ಯುತ್ತಮವಾಗಿ ಅಭಿವ್ಯಕ್ತಿಸುವ ಹಾಗು ನಿರ್ಲಿಪ್ತನಂತೆ ನಟಿಸುವ ರೀತಿಗಳನ್ನು ಕಣ್ಣುಗಳು ಮಾತ್ರ ಪಟಕ್ಕಂತ ಹಿಡಿದು ಅಂತರ್ ಭಾವಕ್ಕೆ ಮನದಟ್ಟು ಮಾಡಿಸುತ್ತದೆ. ಅರಿಯಲು ಸಾಧ್ಯವಿಲ್ಲ ಎಂದವರಿಗೆ ನನ್ನಲ್ಲಿ ಉತ್ತರವಿಲ್ಲ. ಆದರೆ ಪರಪುರುಷ, ಸ್ತ್ರೀ ನೋಡುವುದೆ, ಮಾತಾಡುವುದೇ ಅಪರಾಧ, ನೋಡದಿರುವುದು ಪಾವಿತ್ರ್ಯ ಕಲ್ಪನೆಯೆ ಸರಿಯಾದುದಲ್ಲ.
ಸಮಾಜ ಗಂಡು ಹೆಣ್ಣು ರಚನೆಯಿಂದ ಬೆಳೆಯಲ್ಪಟ್ಟಿದೆ. ಆದರೆ ಇವರನ್ನು ಸಂಭಾಳಿಸುವ ಕ್ರಮ ಇವತ್ತಿನ ಈ ಕ್ರಮಗಳು ಎಷ್ಟು ಸರಿಯಾದುದು? ಅಂದರೆ ಕೇವಲ ದೇಹ ಭಾಷೆಯಿಂದ ನೋಡುವ ಕ್ರಮ ಹಾಗು ದೇಹಭಾಷೆಯ ಹಿನ್ನಲೆಯಲ್ಲಿ ಶೀಲ ಎಂಬ ಕಲ್ಪನೆ ನೋಡುವ ಕ್ರಮ ಯೋಚಿಸಬೇಕಾದುದು. ಶೀಲ ಕಲ್ಪನೆ ಸಮಾಜದಲ್ಲಿ, ಕುಟುಂಬದಲ್ಲಿ ಹೆಣ್ಣು ಗಂಡುಗಳ ಸಂಬಂಧ ಸರಳ ಸುಂದರವಾಗಿರಲಿ ಬದ್ಧನಿಷ್ಟವಾಗಿರಲಿ ಎಂದು ರಚಿತವಾದದ್ದು ಎಂದು ಹೇಳಿದರೆ ನಿಜವಾಗಲು ಸರಿ. ಆದರೆ ಇಂದು ಇವುಗಳೆ ಅನುಮಾನ, ಇಬ್ಬರ ಜೀವನ್ಮರಣ ಪ್ರಶ್ನೆಗಳಿಗೆ, ಒಬ್ಬರಿನ್ನೊಬ್ಬರು ಕೊಲ್ಲುವ ಕ್ರಿಯೆಗಳಿಗೆ ಕಾರಣವಾಗುತ್ತಿರುವುದು ಕಾಣುತ್ತಿದ್ದೇವೆ. ಹೆಚ್ಚುಹೆಚ್ವು ಅನುಮಾನ ಪ್ರವೃತ್ತಿಯವರಾಗಿ ಬದಲಾಗಲು ನಿಷ್ಠೆಯ ಭಾಗವಾಗಿ, ಬಂಧನವಾಗಿ ಬದಲಾಗಿರುವ ಈ 'ದೇಹ ಶೀಲ' ಅಂಶಗಳೆ ಕಾರಣ.
(ಮುಂದುವರೆಯುತ್ತದೆ)
- ಸವಿತಾ ರವಿಶಂಕರ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ