Pages

ಪುಸ್ತಕ ಪ್ರೀತಿ - ಮೂಕಹಕ್ಕಿಯ ಹಾಡು




ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮುಖ್ತರ್ ಮಾಯಿರವರ ಆತ್ಮಕಥನವನ್ನು ಕನ್ನಡಕ್ಕೆ ಅನುವಾದಿಸಿರುವವರು ಡಾ ಎನ್ ಜಗದೀಶ್ ಕೊಪ್ಪ. ಮೂಕಹಕ್ಕಿಯ ಹಾಡು ಎಂದು ಮುದ್ರಿತವಾಗಿರುವ ಈ ಪುಸ್ತಕದಲ್ಲಿ ಹೆಣ್ಣುಮಗಳೊಬ್ಬಳ ಹೋರಾಟದ ಕಥೆ ಅಡಗಿದೆ. ಡಾ ಜಗದೀಶ್ ಕೊಪ್ಪ ರವರು ಬಹಳ ಸರಳವಾಗಿ ಇದನ್ನು ಅನುವಾದಿಸಿದ್ದಾರೆ. 

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೀರ್ವಾಲ ಹಳ್ಳಿಯಲ್ಲಿ ಗುಜಾರ್ ಎಂಬ ಕೆಳಜಾತಿಯ ಬುಡಕಟ್ಟು  ಜನಾಂಗದಲ್ಲಿ ಗುಲಾಂ ಫರೀದ್ ಗುಜಾರರ ಮೊದಲ ಮಗಳಾಗಿ ಮುಖ್ತರ್ ಜನಿಸಿದಳು. ಬಾಲ್ಯದಿಂದಲೂ ಮುಗ್ಧೆಯಾಗಿ ಬೆಳೆದಿದ್ದ ಈಕೆಗೆ ಸಿಟ್ಟು ಮತ್ತು ಕಣ್ಣೀರು ಎಂಬುದೆ ತಿಳಿದಿರಲಿಲ್ಲ. ಒಮ್ಮೆ ತಮ್ಮ ಮತ್ತು ತಂಗಿಯ ಜಗಳದಿಂದ ಬೆಚ್ಚಿದ ಕೋಳಿಮರಿಯು ಭಯದಿಂದ ಒಲೆಯ ಬೆಂಕಿಗೆ ಹಾರಿಬಿದ್ದದ್ದನ್ನು ಕಂಡು ಮುಖ್ತರ್ ಇಡೀ ರಾತ್ರಿ  ಅತ್ತಿದ್ದಳು. ಅನಕ್ಷರಸ್ಥೆಯಾದರೂ ಕುರಾನ್ ಗ್ರಂಥದ ಶ್ಲೋಕಗಳನ್ನು ಬಾಯಿಪಾಠ ಮಾಡಿದ್ದ ಕಾರಣ "ಒಂದು ಜೀವವನ್ನು ಸೃಷ್ಟಿಸಲಾರದ ನಮಗೆ ಇನ್ನೊಂದು ಜೀವವನ್ನು ಕೊಲ್ಲುವ ಹಕ್ಕಿಲ್ಲ" ಎಂದು ತಿಳಿದಿದ್ದಳು.
  ಚಿಕ್ಕಂದಿನಿಂದಲು ಮನೆಕೆಲಸ ಮಾಡಿಕೊಂಡು ಹಿರಿಯರಿಗೆ ಗೌರವ ನೀಡುತ್ತ ಬೆಳೆದ ಮುಖ್ತರ್ ಮನೆಯವರು ನೋಡಿದ ಪೋಲಿಯೋ ಪೀಡಿತ ವರನ ಜೊತೆ ಮದುವೆಯಾದಳು. ನಂತರ ಗಂಡನ ಮನೆಗೆ ಬಂದು ಸೋಮಾರಿ ಗಂಡನೊಂದಿಗೆ ಇರಲಾರದೆ ತೌರುಮನೆಗೆ ಬಂದುಬಿಟ್ಟಳು. ನಂತರ ವಿಚ್ಛೇದನೆಯು ಆಯಿತು. ಮಕ್ಕಳಿಗೆ ಕುರಾನ್ ನನ್ನು ಕಂಠಪಾಠ ಮಾಡಿಸುತ್ತಾ ಮನೆಯವರೊಂದಿಗೆ  ಕೃಷಿ  ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತಿದ್ದಳು ಮುಖ್ತರ್.
ಹೀಗಿರುವಾಗ ಇವಳ ಹನ್ನೆರಡು ವರ್ಷದ ಸೋದರ ಶಕುರ್ ಒಂದು ದಿನ ಹೊಲದಿಂದ ಹಿಂದಿರುಗುವಾಗ ಜಮೀನಿನಲ್ಲಿ ಕಬ್ಬಿನ ಜಲ್ಲೆಯನ್ನು ಮುರಿದಿದ್ದ ಮತ್ತು ಜಮೀನ್ದಾರರ ಮಗಳು ಸಲ್ಮಾಳನ್ನು ಸೋದರಿಯೆಂಬಂತೆ ಗೌರವದಿಂದ ಮಾತನಾಡಿಸಿದ್ದನು. ಆದರೆ ಇದು ಜಮೀನ್ದಾರ ಕುಟುಂಬದವರಿಗೆ ದೊಡ್ಡ ಅಪರಾಧವಾಗಿ ಕಂಡಿತು. ಭಯದಿಂದ ಕಾಣೆಯಾಗಿದ್ದ ಅವನನ್ನು ಸೇವಕರು ಹಿಡಿದುಕೊಂಡು ಚಿತ್ರಹಿಂಸೆಯನ್ನು ನೀಡಿ ನಂತರ ಪೊಲೀಸ್ ಠಾಣೆಗೆ ಒಪ್ಪಿಸಿದರು. ಇಂತಹ ಸಮಯಗಳಲ್ಲಿ ಗ್ರಾಮಮಟ್ಟದಲ್ಲಿದ್ದ "ಜಿರ್ಗ"ಎಂಬ ನ್ಯಾಯ ಪಂಚಾಯಿತಿ ನ್ಯಾಯತೀರ್ಮಾನ ಮಾಡುತ್ತಿದ್ದವು. ಇವುಗಳ ತೀರ್ಮಾನವೇ ಅಂತಿಮವಾಗಿರುತ್ತಿತ್ತು. ಈ ಪ್ರಕರಣದಲ್ಲು ಅಷ್ಟೇ. ಶಕುರ್ ಜಮೀನ್ದಾರರ ಮಗಳನ್ನು ಮಾತನಾಡಿಸಿದ್ದರಿಂದ ಆ ತಪ್ಪಿಗಾಗಿ ಅವನ ಸೋದರಿ ಜಮೀನ್ದಾರರ ಮನೆಗೆ ಹೋಗಬೇಕಾಗಿತ್ತು. ಮೀರ್‍ವಾಲ ಗ್ರಾಮದ ಮಸ್ತೋಯ್ ಕುಟುಂಬದವರು ಅತ್ಯಂತ ಕ್ರೂರಿಗಳು,  ದರ್ಪ,  ಹಿಂಸೆ, ದೌರ್ಜನ್ಯ ಮತ್ತು ಕ್ರೌರ್ಯಗಳಿಗೆ ಹೆಸರಾಗಿದ್ದರು. ಇವರ ಈ ಕೃತ್ಯಗಳಿಗೆ ಪೋಲಿಸರು ಕುರುಡರಂತಾಗಿದ್ದರು. ಇವರು ಕೆಳವರ್ಗದ ಮಹಿಳೆಯರ ಮೇಲೆ ನಡೆಸುತ್ತಿದ್ದ ಅತ್ಯಾಚಾರ ಹೊರಜಗತ್ತಿಗೆ ಕಾಣುತ್ತಿರಲ್ಲ. ಧರ್ಮದ ಹೆಸರಿನಲ್ಲಿ ನಡೆಸುತ್ತಿದ್ದ ಕೃತ್ಯಗಳಿಗೆ ಎಲ್ಲರೂ ಅಸಹಾಯಕರಾಗಿದ್ದರು. ಮುಖ್ತರ್ ವಿಷಯದಲ್ಲೂ ಅಷ್ಟೇ, ಅವಳ ಅಪ್ಪ ಎಷ್ಟೇ ಬೇಡಿಕೊಂಡರೂ ಕರುಣೆ ತೋರಲಿಲ್ಲ. ಜಿರ್ಗ ನ್ಯಾಯ ಪಂಚಾಯಿತಿ  ನೀಡಿದ ತೀರ್ಮಾದಂತೆ ಶಕುರ್ ಸೋದರಿ ಮುಖ್ತರ್ ಮೇಲೆ ಅತ್ಯಾಚಾರ ಮಾಡುವಂತೆ ತೀರ್ಮಾನ ನೀಡಿತ್ತು.
2002 ಜೂನ್ 2 ರಂದು ಏನೂ ಅರಿಯದ ಮುಗ್ಧೆ ಮುಖ್ತರ್ ಕುರಾನ್ ಗ್ರಂಥವನ್ನು ಎದೆಗಪ್ಪಿಕೊಂಡು ತಂದೆ, ಚಿಕ್ಕಪ್ಪ ಹಾಗೂ ಮೌಲ್ವಿ ಮೊದಲಾದವರೊಂದಿಗೆ ಜಮೀನ್ದಾರರ ಮನೆ ಕಡೆಗೆ ನಡೆದಳು. ಅಲ್ಲಿ ಮಸ್ತೋಯ್ ಸಮುದಾಯದ ಎಲ್ಲರೂ ಸೇರಿದ್ದರು. ಅವರೆಲ್ಲರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಮುಖ್ತರ್ ಕೈಯಿಂದ ಕುರಾನ್ಅನ್ನು ಕಿತ್ತೊಗೆದು, ಅವಳ ಮೇಲೆ ಸರದಿಯಂತೆ ಅತ್ಯಾಚಾರವನ್ನು ಮಾಡಿದರು. ಅನಿರೀಕ್ಷಿತ ಆಘಾತದಿಂದ ಮುಖ್ತರ್ ಕುಸಿದಳು. ಇಡೀ ರಾತ್ರಿ  ಹಾಗೆಯೇ ಬಿದ್ದಿದ್ದ ಅವಳನ್ನು ಮಾರನೆ ದಿನ ಕತ್ತಲು ತುಂಬಿದ್ದ ಕುದುರೆ ಲಾಯದೊಳಕ್ಕೆ ಎಳೆದುಕೊಂಡು ಹೋಗಿ ಕೂಡಿ ಹಾಕಿದರು. ಅಲ್ಲಿ ಮತ್ತೆ ನಾಲ್ವರು ಅವಳ ಮೇಲೆ ಅತ್ಯಾಚಾರ ಮಾಡಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೂ ಆಕೆ ಆ ನಾಲ್ವರ ಮುಖಗಳನ್ನು ಮರೆಯುವಂತಿರಲಿಲ್ಲ. ಸತತ 24 ಘಂಟೆಗಳ ಬಂಧನ, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ನಂತರ ಅವಳನ್ನು ಹೊರಗೆ ಕಳುಹಿಸಿದರು.
ಅಲ್ಲಿಂದ ಮನೆಗೆ ಬಂದವಳೆ ರೋಧಿಸುತ್ತಿದ್ದ ಅಮ್ಮನ ತೆಕ್ಕೆಗೆ ಸೇರಿದಳು. ನಿರ್ಜೀವ ಶವದಂತಾಗಿದ್ದ ಅವಳಲ್ಲಿ ಅಳಲು ಕಣ್ಣೀರು ಸಹ ಬರುತ್ತಿರಲಿಲ್ಲ. ಮೂರು ದಿನಗಳ ಕಾಲ ಊಟ, ತಿಂಡಿ, ನೀರು ಎಲ್ಲವನ್ನು ತ್ಯಜಿಸಿದ್ದ ಅವಳನ್ನು ಎಲ್ಲರೂ ಸಮಾಧಾನ ಮಾಡುತ್ತಿದ್ದರೂ ಆತ್ಮಹತ್ಯೆಯೊಂದೆ ನನ್ನ ಮುಂದಿರುವ ದಾರಿ ಎಂದು ತಾಯಿಗೆ ವಿಷವನ್ನು ತಂದುಕೊಡುವಂತೆ ಕೇಳುತ್ತಿದ್ದಳು. 
ಎಲ್ಲರೂ ನೀಡಿದ ಸಮಾಧಾನದಿಂದ ಚೇತರಿಸಿಕೊಂಡ ಮುಖ್ತರ್ ಮನದಲ್ಲಿ ಜಮೀನ್ದಾರರ ವಿರುದ್ಧ ಹೋರಾಡಬೇಕೆಂಬ ಭಾವನೆ ಚಿಗುರಿತು. ಇದೇ ಸಮಯಕ್ಕೆ ಸರಿಯಾಗಿ ಮುಖ್ತರ್ ವಿಷಯವು  ಪತ್ರಿಕೆಗಳಲ್ಲಿ ಪ್ರಚಾರವಾಗಿ ಇಡೀ ಪಾಕಿಸ್ತಾನದಲ್ಲಿ ಸುದ್ದಿಯಾಯಿತು. ನಂತರ ಮುಖ್ತರ್ಗೆ ಪೋಲಿಸ್ ಠಾಣೆಯಿಂದ ಕರೆ ಬಂದಿತು. ಠಾಣೆಗೆ ಹೋದ ಅವರನ್ನು ಸರಿಯಾಗಿ ನಡೆಸಿ ಕೊಳ್ಳಲಿಲ್ಲ. ಸುದ್ದಿ ತಿಳಿದ ಪತ್ರಕರ್ತರು ಠಾಣೆಗೆ ಬಂದು ಮುಖ್ತರ್ ಳನ್ನು ಪ್ರಶ್ನಿಸಿದರು. ಅವರುಗಳಿಗೆ ಮುಖ್ತರ್ ಯಾವುದೇ ಭಾವನೆಗಳಿಲ್ಲದೆ ಎಲ್ಲವನ್ನು  ತಿಳಿಸಿದಳು. ಇದರಿಂದ ನ್ಯಾಯ ಸಿಗುತ್ತದೆಯೆಂಬುದು ಅವಳ ಉದ್ದೇಶವಾಗಿರಲಿಲ್ಲ. ಬದಲಾಗಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ತಿಳಿಯಲಿ ಎಂಬುದು ಇವಳ ಉದ್ದೇಶವಾಗಿತ್ತು. ಅಪ್ಪನ ಬೆಂಬಲದಿಂದ ಜಮೀನ್ದಾರರು ನೀಡುತ್ತಿದ್ದ ಬೆದರಿಕೆಗಳ ನಡುವೆಯೂ ಮುಖ್ತರ್ ಲಿಖಿತ ದೂರನ್ನು ನೀಡಲು ನಿರ್ಧರಿಸಿದಳು. ಆ ಮೂಲಕ ಮೇಲ್ವರ್ಗದ ಜನರ ವಿರುದ್ಧ ಬಂಡಾಯದ ಬಾವುಟದ ಹಾರಿಸಿದಳು. ಆದರೆ ಅನಕ್ಷರಸ್ಥೆಯಾದ ಅವಳನ್ನು ವಂಚಿಸಿ ತಪ್ಪು ಮಾಹಿತಿಗಳಿದ್ದ ಪತ್ರಕ್ಕೆ ಹಾಗೂ ಖಾಲಿ ಹಾಳೆಯೊಂದರ ಮೇಲೆ ಪೊಲೀಸರು ಹೆಬ್ಬೆಟ್ಟಿನ ಮುದ್ರೆಯನ್ನು ಒತ್ತಿಸಿಕೊಂಡರು.  
ನಂತರ ಇವಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅವಳನ್ನು ಹಲವಾರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವಿಚಾರಣೆ ಪ್ರಾರಂಭವಾಯಿತು. ಸಹೃದಯಿ ನ್ಯಾಯಾಧೀಶರು, “ನಾನು ನಿನ್ನ ತಂದೆಯ ಸಮಾನ, ಎಲ್ಲವನ್ನೂ ಹೇಳು” ಎಂದಾಗ ಮುಖ್ತರ್ ಆ ಘಟನೆಯನ್ನು ಸವಿಸ್ತಾರವಾಗಿ ಹೇಳಿದಳು. ಎಲ್ಲವನ್ನೂ ಕೇಳಿದ ನ್ಯಾಯಾಧೀಶರು “ಹೋರಾಟವನ್ನು ಕೈಬಿಡಬೇಡಿ, ಸ್ಥೈರ್ಯದಿಂದ ಮುಂದುವರೆಸಿ” ಎಂದು ಧೈರ್ಯ ತುಂಬಿದರು. ನಂತರ ಮಾಧ್ಯಮದವರ ಜೊತೆ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರು, ಮಹಿಳಾ ಹಕ್ಕುಗಳ ಕಾರ್ಯಕರ್ತರು, ಇವಳ ಗ್ರಾಮಕ್ಕೆ ಬಂದು ಹೋರಾಟಕ್ಕೆ ಬೆಂಬಲವನ್ನು ಸೂಚಿಸಿ ಸರ್ಕಾರವನ್ನು ಆರೋಪಿ ಸ್ಥಾನದಲ್ಲಿರಿಸಿದರು. 
ವಿಚಾರಣೆ ಮುಗಿಯುವ ಮುನ್ನವೇ ಎಚ್ಚರಗೊಂಡ ಸರ್ಕಾರ ಅವಳಿಗೆ ಪರಿಹಾರವಾಗಿ 5 ಲಕ್ಷ ಮೌಲ್ಯದ ಚೆಕ್ ಅನ್ನು ನೀಡಲು ಮುಂದೆಬಂದಿತು. ಮುಖ್ತರ್ ಅದನ್ನು ನಿರಾಕರಿಸಿ “ನನ್ನ ಈ ಪರಿಸ್ಥಿತಿಗೆ ಅನಕ್ಷರತೆಯೇ ಕಾರಣ, ದಯಮಾಡಿ ನನಗೆ ಹಣ ಬೇಡ, ನನ್ನ ಹಳ್ಳಿಗೆ ಶಾಲೆ ಬೇಕು” ಎಂದು ಉತ್ತರಿಸಿದಳು. ಸರ್ಕಾರ ಅದಕ್ಕೆ ಒಪ್ಪಿಗೆಯನ್ನು ನೀಡಿ ಶಾಲೆಯನ್ನು ಮಂಜೂರು ಮಾಡಿದ್ದೇ ಅಲ್ಲದೇ ಹಣವನ್ನು ಸಹ ನೀಡಿತು.
ಜೊತೆಗೆ, ಸರ್ಕಾರ ಅತ್ಯಾಚಾರಿಗಳು ಮತ್ತು ನ್ಯಾಯಪಂಚಾಯತಿ ಸದಸ್ಯರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿತು. ಇದರ ವಿಚಾರಣೆಗಾಗಿ ಡೇರಾ ಘಾಸಿ ಖಾನ್ ನಗರದಲ್ಲಿ ವಿಶೇಷ ಮತ್ತು ತ್ವರಿತಗತಿಯ ನ್ಯಾಯಾಲಯವನ್ನು ಸ್ಥಾಪಿಸಿತು. 2002 ಜುಲೈನಲ್ಲಿ ವಿಚಾರಣೆ ಪ್ರಾರಂಭವಾಯಿತು. ವಾದವಿವಾದಗಳ ನಡುವೆ ವಿಚಾರಣೆ ಅಂತ್ಯಗೊಂಡು ನ್ಯಾಯಾಧೀಶರು ತೀರ್ಪು ಬರೆಯುವ ಮುನ್ನ ಪೊಲೀಸರು ನೀಡಿದ ದಾಖಲೆಗಳನ್ನು ಪರಿಶೀಲಿಸಿದರು. ಮುಖ್ತರ್ ಹೇಳಿದ ಹೇಳಿಕೆಗಳಿಗೂ, ಅಲ್ಲಿದ್ದ ಹೇಳಿಕೆಗೂ ವ್ಯತ್ಯಾಸ ಇದ್ದುದ್ದರಿಂದ ಪೊಲೀಸ್ ಅಧಿಕಾರಿಯನ್ನು ಕರೆಸಿ ಛೀಮಾರಿ ಹಾಕಿ ಜೈಲಿಗೆ ಕಳಿಸುವುದಾಗಿ ಹೇಳಿದರು. 
2002 ಆಗಸ್ಟ್ 31 ರಂದು ತೀರ್ಪು ಹೊರಬಿದ್ದಿತು. ಅದರಂತೆ ಅತ್ಯಾಚಾರಿ ಜಮೀನುದಾರ ಮತ್ತು ಅವನ ಮೂವರು ಸಹಚರರಿಗೆ ಹಾಗೂ ನ್ಯಾಯಪಂಚಾಯಿತಿಯ ಇಬ್ಬರು ವ್ಯಕ್ತಿಗಳಿಗೆ ತಲಾ 50000 ರೂಪಾಯಿ ಜುಲ್ಮಾನೆ ಮತ್ತು ಮರಣದಂಡನೆ ನೀಡಲಾಯಿತು. ಉಳಿದ ನ್ಯಾಯಪಂಚಾಯಿತಿ ಸದಸ್ಯರಿಗೆ ಮುಂದೆ ಸಭೆ ನಡೆಸಿದರೆ ‘ಭಯೋತ್ಪಾದನೆ ನಿಗ್ರಹ ಕಾಯ್ದೆ’ಯಡಿ ಬಂಧಿಸಿ ಶಿಕ್ಷೆ ವಿಧಿಸುವುದಾಗಿ ಹೇಳಿ ಬಿಡುಗಡೆ ಮಾಡಲಾಯಿತು. ಈ ತೀರ್ಪಿನಿಂದ ನೈತಿಕವಾಗಿ ಕುಗ್ಗಿಹೋಗಿದ್ದ ಮುಖ್ತರ್ ಳಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚಿತು. 
2005ರಲ್ಲಿ ಮೊದಲ ಬಾರಿಗೆ ಇವಳನ್ನು ಸ್ಪೇನ್ ದೇಶದ ಮಹಿಳಾ ಸಂಘಟನಾ ಸಂಸ್ಥೆಯೊಂದು ಅಂತರರಾಷ್ಟ್ರೀಯ ಮಹಿಳಾ ಸಮಾವೇಶಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನ ನೀಡಿತು. ಅಲ್ಲಿ ಮಹಿಳೆಯರ ಮೇಲಿನ ದೌರ್ಜನಗಳ ವಿರುದ್ಧ ವಿಷಯ ಪ್ರಸ್ತಾಪಿಸಲು ಅನೇಕ ದೇಶಗಳಿಂದ ಮಹಿಳೆಯರು ಬಂದಿದ್ದರು. ಎಲ್ಲವನ್ನೂ ಕೇಳಿದ ಮುಖ್ತರ್ ಳಿಗೆ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಮೃಗಗಳಂತೆ ವರ್ತಿಸುವ ಪುರುಷರಲ್ಲಿ ಬದಲಾವಣೆ ತರಲು ಗಂಡುಮಕ್ಕಳಿಗೂ ಶಿಕ್ಷಣ ನೀಡಬೇಕೆಂದು ನಿಶ್ಚಯಿಸಿದಳು. 
ಜಮೀನುದಾರರು ಸಲ್ಲಿಸಿದ್ದ ಮೇಲ್ಮನವಿಯ ಹಿನ್ನೆಲೆಯಲ್ಲಿ ಲಾಹೋರ್ ಹೈಕೋರ್ಟ್‍ನಲ್ಲಿ ಐವರನ್ನು ಬಂಧಮುಕ್ತಗೊಳಿಸಿ, ಒಬ್ಬನಿಗೆ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿತು. ಇದರ ವಿರುದ್ಧ ಮಾನವ ಹಕ್ಕುಗಳ ಕಾರ್ಯಕರ್ತರು “ಇಂದು ಪಾಕಿಸ್ತಾನದ ಕರಾಳ ದಿನ ಮತ್ತು ಮಹಿಳೆಯರ ಸಾರ್ವಭೌಮ ಹಕ್ಕುಗಳು ಮಣ್ಣುಪಾಲಾದ ದಿನ” ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. 
ಮುಖ್ತರ್ ಮತ್ತು ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆ ಸಮಯದಲ್ಲಿ ಕೆನಡಾದ ರಾಯಭಾರಿ ಮಾರ್ಗರೆಟ್ ಹಬರ್ ಮುಖ್ತರ್ ಳನ್ನು ಭೇಟಿಯಾದಳು. ‘ಮುಖ್ತರ್ ಮಾಯಿ ಮಹಿಳೆಯರ ಹಕ್ಕುಗಳಿಗಾಗಿ ನಡೆಸಿರುವ ಹೋರಾಟ ಜಗತ್ತಿನ ಗಮನ ಸೆಳೆದಿದೆ, ಪಾಕಿಸ್ತಾನದ ಪುರುಷ ಜಗತ್ತು ಮಹಿಳೆಯರಿಗೆ ಸೃಷ್ಟಿಸಿದ ಶರಪಂಜರವನ್ನು ಮುರಿದುಹಾಕಿದ್ದಾಳೆ” ಎಂದರು. 
ಆ ಮಧ್ಯೆಯೇ ಅವಳು ಗೃಹಸಚಿವರನ್ನು ಭೇಟಿಯಾಗಿ ತನಗೆ ಜೀವಬೆದರಿಕೆಯಿದೆಯಾದ್ದರಿಂದ, ರಕ್ಷಣೆ ನೀಡಬೇಕೆಂದು ಕೇಳಿಕೊಂಡಳು. ಆದರೆ ಅವಳಿಗೆ ಅಲ್ಲಿಯೂ ನ್ಯಾಯ ಸಿಗಲಿಲ್ಲ. ಅವಳ ಮೇಲೆ ಕೇಸ್ ಹಿಂಪಡೆಯುವಂತೆ ತೀವ್ರ ಒತ್ತಡ ಹೇರಲಾಯಿತು. ರಕ್ಷಣೆ ನೀಡುವ ಹೆಸರಿನಲ್ಲಿ ಅವಳನ್ನು ಗೃಹಬಂಧನದಲ್ಲಿರಿಸಲಾಯಿತು. ಜೊತೆಗೆ ಅವಳು ವಿದೇಶಗಳಿಗೆ ಹೋದರೆ ತಮ್ಮ ದೇಶದ ಮಾನ ಹರಾಜಾಗುವುದೆಂಬ ಭಯದಿಂದ ಅವಳ ಪಾಸ್‍ಪೋರ್ಟ್ ಮತ್ತು ವೀಸಾ ಮುಟ್ಟುಗೋಲು ಹಾಕಿಕೊಂಡರು.
2005 ಅಕ್ಟೋಬರ್‍ನಲ್ಲಿ ಪಾಕಿಸ್ತಾನದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿತು. ಆ ಸಮಯದಲ್ಲಿ ಅಂತರರಾಷ್ಟ್ರೀಯ ನೆರವು ಬೇಕಿತ್ತು. ಇದೇ ಸಮಯದಲ್ಲಿ “ಏಷ್ಯನ್ ಅಮೇರಿಕನ್ ನೆಟ್‍ವರ್ಕ್” ಎಂಬ ಸಂಸ್ಥೆಯು ಮುಖ್ತರ್‍ಳನ್ನು ವರ್ಷದ ಮಹಿಳೆಯೆಂದು ಆಯ್ಕೆ ಮಾಡಿತು. ಇದರಿಂದ ವಿದೇಶಿ ಪ್ರವಾಸಕ್ಕಿದ್ದ ನಿರ್ಬಂಧವನ್ನ್ನು ಸರ್ಕಾರ ತೆಗೆದುಹಾಕಬೇಕಾಗಿ ಬಂತು. ಹೋದೆಡೆಯೆಲ್ಲಾ ಮುಖ್ತರ್ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಳು. ಸಹಾಯದ ಮಹಾಪೂರವೇ ಹರಿದುಬಂದಿತು. ಒಬ್ಬ ಅನಕ್ಷರಸ್ಥ ಮಹಿಳೆ ತಾನು ಏನೆಲ್ಲ ಕಷ್ಟ ಅನುಭವಿಸಿದರು, ತನ್ನ ದೇಶದ ಜನತೆಗೆ ನೆರವಾದಳು.
ಕಾನೂನಿನ ಹೋರಾಟದ ಜೊತೆಜೊತೆಗೆ ವಿದ್ಯೆ ಕಲಿತ ಆಕೆ, 2007ರಲ್ಲಿಯೇ ಆಕೆಯ ಮತ್ತು ಕುಟುಂಬದವರ ಜೀವಕ್ಕೆ ಬೆದರಿಕೆಯಿದ್ದರೂ “ಮುಖ್ತರ್ ಮಾಯಿ ಮಹಿಳಾ ಕಲ್ಯಾಣ ಸಂಘಟನೆ”ಯನ್ನು ಆರಂಭಿಸಿದಳು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ, ಆ ಮೂಲಕ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ತೊಡಗಿದಳು. ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿ ಬೆಳೆದಳು. ಅವಳು ಸ್ಥಾಪಿಸಿರುವ ಸಂಘಟನೆ ಸಮುದಾಯದಲ್ಲಿಯೂ ಮಹಿಳಾ ಹಕ್ಕುಗಳ ಬಗ್ಗೆ ಅರಿವನ್ನು ಮೂಡಿಸಲೆತ್ನಿಸುತ್ತಿದೆ. ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿದೆ. ಜೊತೆಗೆ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಆಶ್ರಯ, ವೈದ್ಯಕೀಯ ನೆರವು ಮತ್ತು ಕಾನೂನಾತ್ಮಕ ನೆರವನ್ನು ನೀಡುತ್ತಿದೆ. 
ಸತತವಾಗಿ 6 ವರ್ಷಗಳ ಕಾಲ ನಡೆದ ವಿಚಾರಣೆ 2011ರ ಏಪ್ರಿಲ್ 20ರಂದು ಮುಗಿಯಿತು. ತೀರ್ಪಿನಲ್ಲಿ ಒಬ್ಬನಿಗೆ ಮಾತ್ರ ಜೀವಾವಧಿ ಶಿಕ್ಷೆ ಎತ್ತಿಹಿಡಿದು, ಉಳಿದವರನ್ನು ಖುಲಾಸೆಗೊಳಿಸಿತು. ಇದರಿಂದ ಹತಾಶಳಾದರೂ ಧೃತಿಗೆಡದ ಮುಖ್ತರ್ ತನ್ನ ದೇಶದ ಮಹಿಳಾ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರೆಸಿದ್ದಾಳೆ. ಮರುವಿವಾಹವಾದ ಆಕೆಗೆ, ಆಕೆಯ ಪತಿ ಸಹ ಅವಳ ಇನ್ನಿತರ ಕುಟುಂಬ ಸದಸ್ಯರಂತೆ, ಹೋರಾಟದಲ್ಲಿ ಜೊತೆಯಿದ್ದಾನೆ ಎನ್ನುವುದು ಹರ್ಷದಾಯಕ ವಿಷಯವಾಗಿದೆ.

ಕಥೆ - ಸ್ಫೂರ್ತಿ

             

     ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮೈಸೂರಿಗೆ ಹೋಗುವ ರೈಲಿಗಾಗಿ ಕಾಯುತ್ತಾ ಕುಳಿತಿದ್ದೆ. ರೈಲು ಬಂತು, ನನ್ನ ಲಗೇಜನ್ನು ತೆಗೆದುಕೊಂಡು ರೈಲಿನಲ್ಲಿ ಹತ್ತಿ ಕುಳಿತೆ. ನಾನು ಹತ್ತಿದ ಬೋಗಿಯಲ್ಲಿ ಶಾಲೆಯ ಮಕ್ಕಳೂ ಹತ್ತಿದರು. ಅವರನ್ನು ಮೈಸೂರಿನ ಪ್ರವಾಸಕ್ಕೆಂದು ಕರೆದೊಯ್ಯುತ್ತಿದ್ದರು. ಮಕ್ಕಳ ಮುಖದಲ್ಲಿ ಉತ್ಸಾಹ ತುಂಬಿತ್ತು. ಅವರನ್ನು ನಿಯಂತ್ರಣದಲ್ಲಿಡುವಲ್ಲಿ ಶಿಕ್ಷಕರು ಮಗ್ನರಾಗಿದ್ದರು. ನನ್ನ ಮುಂದೆ ಇಬ್ಬರು ಪುಟ್ಟ ಗೆಳತಿಯರು ಮಾತಿನಲ್ಲಿ ತೊಡಗಿದ್ದರು. ಆ ಪುಟಾಣಿಗಳನ್ನು ನೋಡಿ ನನ್ನ ಬಾಲ್ಯದ ನೆನಪಾಗಿ ಸಂತೋಷದಿಂದ ಮನ ಹಿಗ್ಗಿತು ಹಾಗೆಯೇ ದುಃಖದಿಂದ ಕಣ್ಣು ತುಂಬಿತು.
     ನಮ್ಮದು ಮೈಸೂರಿನ ಟಿ. ನರಸೀಪುರದ ಬಳಿಯ ಒಂದು ಹಳ್ಳಿ. ನಮ್ಮ ಮನೆಯ ಪಕ್ಕದಲ್ಲಿದ್ದ ಹೇಮಾ ನನ್ನ ಆತ್ಮೀಯ ಗೆಳತಿ. ನಾವಿಬ್ಬರೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು. ನಮ್ಮೂರಿನಲ್ಲಿದ್ದದ್ದು ಏಕೋಪಾಧ್ಯಾಯ ಶಾಲೆ. ನಾವು 5ನೇ ತರಗತಿ ಓದುತ್ತಿದ್ದಾಗ ಒಂದು ದಿನ ಕಿರುಪರೀಕ್ಷೆ ಅಂಕಗಳನ್ನು ಕೊಟ್ಟರು. ಅತ್ಯಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೊಡೆದರು. ಅದರಲ್ಲಿ ಹೇಮಾಳೂ ಒಬ್ಬಳು. ಅಂದು ಹೇಮಾಗೆ ಜ್ವರವಿತ್ತು. ನೋವಿನಂದ ಮತ್ತು ಅವಮಾನದಿಂದ ಹೇಮಾ ಅಳುತ್ತಲೇ ಮನೆಗೆ ಬಂದಳು. ನಾನೆಷ್ಟೇ ಸಮಾಧಾನ ಪಡಿಸಿದರೂ ಅವಳು ಸುಮ್ಮನಾಗಲಿಲ್ಲ.
ಮಾರನೇ ದಿನ ಶಾಲೆಗೆ ಹೊಗಲು ತಯಾರಾಗಿ, ಹೇಮಾಳ ಮನೆಗೆ ಹೋದೆ. ಹೇಮಾಗೆ ಹುಷಾರಿಲ್ಲವೆಂದು, ಅವಳು ಶಾಲೆಗೆ ಬರುವುದಿಲ್ಲವೆಂದು ಅವಳ ತಾಯಿ ಹೇಳಿದರು. ಶಾಲೆಯಲ್ಲಿ ಎಲ್ಲರೂ ಶಿಕ್ಷಕರು ಹೊಡೆದದ್ದರಿಂದಲೇ ಹೇಮಾಗೆ ಹುಷಾರಿಲ್ಲವೆಂದು ಹೇಳಿದರು. ಅಂದಿನಿಂದ ಶಿಕ್ಷಕರೆಂದರೆ ಭಯಪಡುತ್ತಿದ್ದೆ.
     15 ದಿನಗಳಾದರೂ ಹೇಮಾ ಸುಧಾರಿಸಿಕೊಳ್ಳಲಿಲ್ಲ. ನನಗೆ ಹೇಮಾಳಿಲ್ಲದೆ ಒಂಟಿ ಎನಿಸುತ್ತಿತ್ತು.  ಇದಕ್ಕೆಲ್ಲಾ ಆ ಶಿಕ್ಷಕರೇ ಕಾರಣವೆಂದು ಅವರಿಗೆ ಮನದಲ್ಲಿ ಶಾಪ ಹಾಕುತ್ತಿದ್ದೆ.
ಒಂದು ದಿನ ಶಾಲೆಯಿಂದ ಮನೆಗೆ ಬಂದಾಗ ಹೇಮಾಳ ಮನೆಯ ಮುಂದೆ ತುಂಬಾ ಜನ ನೆರೆದಿದ್ದರು. ಏನಾಗಿದೆ ಎಂದು ಅರ್ಥವಾಗದೆ ಮನೆಯ ಒಳಗೆ ಹೋದೆ. ಹೇಮಾಳ ಅಮ್ಮ ಅಳುತಿದ್ದರು. ನಮ್ಮಮ್ಮ ಅಲ್ಲಿಯೇ ಇದ್ದರು. ಒಂದೆಡೆ ಹೇಮಾಳನ್ನು ಮಲಗಿಸಿದ್ದರು. ಹೂವಿನ ಹಾರಗಳನ್ನು ಹಾಕಿದ್ದರು. ನನಗೆ ವಿಚಿತ್ರವೆನಿಸಿತು. ಅಮ್ಮನ ಕೇಳಿದೆ. ಅಮ್ಮ ಹೇಮಾಳನ್ನು ದೇವರು ಕರೆದೊಯ್ದನೆಂದು ಹೇಳಿ ಅತ್ತುಬಿಟ್ಟರು. ನನಗೇನು ಅರ್ಥವಾಗಲಿಲ್ಲ. ಸ್ವಲ್ಪಹೊತ್ತಿನ ನಂತರ ಹೇಮಾಳನ್ನು ಹೊತ್ತು ಅವರ ತೋಟಕ್ಕೆ ಕರೆದೊಯ್ದರು. ಅಲ್ಲಿ ತೋಡಿದ್ದ ಗುಂಡಿಯೊಳಗೆ ಹೇಮಾಳನ್ನು ಮಲಗಿಸಿದರು ಮಣ್ಣು ಹಾಕಿದರು. ಅದನ್ನು ನೋಡಿ ನನಗೆ ಭಯವಾಗಿ ಅಮ್ಮನನ್ನು ಏಕೆ ಹಾಗೆಲ್ಲಾ ಮಾಡುತ್ತಿದ್ದಾರೆಂದು ಕೇಳಿದೆ. ಅಮ್ಮ ಏನೂ ಉತ್ತರಿಸದೆ ನನ್ನನ್ನು ಅಪ್ಪಿ ಕಣ್ಣೀರಿಟ್ಟರು. ಆ ವಯಸ್ಸಿನಲ್ಲಿ ಅದೇನೆಂದು ತಿಳಿಯದೆ ಹೋದರೂ ಇನ್ನು ಮುಂದೆ ಹೇಮಾ ನನ್ನ ಜೊತೆ ಇರುವುದಿಲ್ಲವೆಂದು ತಿಳಿದು ಜೋರಾಗಿ ಅತ್ತೆ.
     ಹೇಮಾಳ ಜ್ವರಕ್ಕೆ ಕಾರಣವಾಗಿದ್ದ ಶಿಕ್ಷಕರ ಬಗ್ಗೆ ನನಗೆ ತುಂಬಾ ಕೋಪ ಬಂದು, ನಾನು ಶಾಲೆಗೆ ಹೋಗಲು ನಿರಾಕರಿಸಿದೆ. ಒಂದು ವಾರದ ನಂತರ ಅಪ್ಪ ಎರಡೇಟು ಹಾಕಿ ಶಾಲೆಗೆ ಕಳಿಸಿದರು. ಬಲವಂತವಾಗಿ ಶಾಲೆಗೆ ಹೋದರು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಹೀಗೆಯೆ ಪರೀಕ್ಷೆಗಳು ಮುಗಿದು ರಜೆ ಆರಂಭವಾಯಿತು. ಮತ್ತೆ ಶಾಲೆ ಶುರುವಾಯಿತು, ಆದರೂ ನಾನಿನ್ನೂ ಆ ಶಾಕ್ ನಿಂದ ಹೊರಬಂದಿರಲಿಲ್ಲ.
     ಶಾಲೆಯಲ್ಲಿದ್ದ ಹಳೆಯ ಮೇಷ್ಟ್ರು ಬದಲಿಗೆ ಹೊಸ ಮೇಷ್ಟು ಬಂದಿದ್ದರು. ಆದರೆ ನನಗೆ ಅವರೇನೋ ಬೇರೆಯವರಂತಲ್ಲ ಎನಿಸಿತ್ತು. ಶಾಲೆಯಲ್ಲಿ ಮಕ್ಕಳೊಂದಿಗೆ ಬೆರೆಯುತ್ತಿದ್ದರು. ಬೆತ್ತ ಮೇಜಿನ ಮೇಲಿರುತ್ತಿತ್ತೇ ಹೊರತು ಅವರೆಂದೂ ಅದನ್ನು ಹೊಡೆಯಲು ಬಳಸುತ್ತಿರಲಿಲ್ಲ. ನನ್ನ ವರ್ತನೆಯ ಬಗ್ಗೆ ನಮ್ಮ ತಂದೆತಾಯಿಯರೊಂದಿಗೆ ಮಾತನಾಡಿದ ಅವರು ನನ್ನನ್ನು ಬಹಳ ಆತ್ಮೀಯತೆಯಿಂದ ಮಾತನಾಡಲಾರಂಭಿಸಿದರು. ಕ್ರಮೇಣವಾಗಿ ನಾನು ಅವರೊಂದಿಗೆ ಬೆರೆಯಲಾರಂಭಿಸಿ, ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲಾರಂಭಿಸಿದೆ.
     ಒಂದು ದಿನ ಅವರು ನನ್ನನ್ನು ಕರೆದು ಹೇಮಾಳ ಬಗ್ಗೆ ವಿಚಾರಿಸಿದರು. ಅದಕ್ಕುತ್ತರವಾಗಿ, ನಾನು ಶಿಕ್ಷಕರು ಹೊಡೆದದ್ದರಿಂದ ಹೇಮಾಳ ಜ್ವರ ಜಾಸ್ತಿಯಾಗಿ ಅವಳು ದೇವರ ಬಳಿ ಹೋದಳು ಎಂದು ಹೇಳಿ ಅಳತೊಡಗಿದೆ. ಅದಕ್ಕವರು ನನ್ನನ್ನು ಸಮಾಧಾನ ಮಾಡಿ ಹೇಮಾ ಸತ್ತದ್ದು ಶಿಕ್ಷಕರು ಹೊಡೆದದ್ದರಿಂದಲ್ಲ, ಅವಳಿಗೆ ಮಲೇರಿಯಾ ಬಂದಿತ್ತು. ಸರಿಯಾದ ಜೌಷಧಿ ಸಿಗದೆ ಅವಳು ತೀರಿಕೊಂಡಳು. ಅವಳನ್ನು ನೆನಪಿಸಿಕೊಂಡು ಕೊರಗುತ್ತಾ ಇರದೆ, ದೊಡ್ಡ ಡಾಕ್ಟರ್ ಆಗಿ ಇದೇ ಹಳ್ಳಿಯಲ್ಲಿ ಕೆಲಸ ಮಾಡು ಎಂದು ಹುರಿದುಂಬಿಸಿದರು. ಅಂದು ಅವರ ಮಾತಿನಿಂದ ಪಡೆದ ಸ್ಫೂರ್ತಿಯೇ ನನ್ನನ್ನು ಸಂಪೂರ್ಣವಾಗಿ ಬದಲಾಯಿಸಿತು.
ಅಂದ ಹಾಗೆ, ನನ್ನ ಹೆಸರನ್ನು ನಿಮಗೆ ತಿಳಿಸಲಿಲ್ಲ ಅಲ್ವಾ/ ನನ್ನ ಹೆಸರು ಸ್ಪೂರ್ತಿ. ನಾನು ಈಗ ವೈದ್ಯಕೀಯ ಪದವಿಯನ್ನು ಮುಗಿಸಿಕೊಂಡು ನಮ್ಮ ಹಳ್ಳಿಯಲ್ಲಿ ಕ್ಲಿನಿಕ್ ತೆಗೆಯಲು ಹೋಗುತ್ತಿದ್ದೇನೆ. ನನಗಾಗಿ ನನ್ನ ಅಪ್ಪ, ಅಮ್ಮ ಮತ್ತು ನೆಚ್ಚಿನ ಗುರುಗಳು ಕಾಯುತ್ತಿದ್ದಾರೆ. ಹೋಗಿ ಬರಲೇ?
-     ಲಕ್ಷ್ಮಿ.ವಿ       

ಅನುವಾದಿತ ಕಥೆ - “ಮೂರ್ಖ ಮತ್ತು ಮಹಾಮೂರ್ಖ”

ಶಮಾ ಫತೇಹ್ ಅಲಿಯವರ ಹಿಂದಿ ಭಾಷೆಯ “ಮೂರ್ಖ ಮತ್ತು ಮಹಾಮೂರ್ಖ”   ಕಥೆಯ ಅನುವಾದ] 


     1964ರಲ್ಲಿ ಅಲಿಬಾಗ್‍ನ ಸುತ್ತಮುತ್ತಲಿನ ಹೊಲಗಳಲ್ಲಿ ಅಡ್ಡಾಡುತ್ತಿರುವಾಗ ನಿಮಗೊಂದು ವಿಚಿತ್ರವಾದ ದೃಶ್ಯ ಕಾಣಸಿಗುತ್ತದೆ. ಕನ್ನಡಕ ಧರಿಸಿದ್ದ, ಅಚ್ಚಬಿಳಿ ಗಡ್ಡವಿದ್ದ ಸಣಕಲು ವೃದ್ಧನೊಬ್ಬ ಶಿಸ್ತಿನ ಸಿಪಾಯಿಯಂತೆ ಅತ್ತಿಂದಿತ್ತ, ಇತ್ತಿಂದತ್ತ ಪೆರೇಡ್ ಮಾಡುತ್ತಿದ್ದ. ಆತನ ಹಿಂದೆ ಚಿಕ್ಕಮಕ್ಕಳ ಒಂದು ಸೈನ್ಯ ಹೊರಟಿತ್ತು. ಆ ವ್ಯಕ್ತಿ ಥೇಟ್ ಜನರಲ್ ನಂತೆ ಆಗೊಮ್ಮೆ ಈಗೊಮ್ಮೆ ದುರ್ಬೀನು ಹಿಡಿದು ನಾಲ್ಕು ದಿಕ್ಕುಗಳಿಗೂ ದೃಷ್ಟಿ ಹಾಯಿಸುತ್ತಿದ್ದ. 
ಅನಿಲ್, ಹರೀಶ್, ಅಹಮದ್, ಶೀಲಾ ಮತ್ತು ಕಿರಣ್, ರವಿ ಸಲೀಮ್ ಮಾಮುವಿನ ಹಿಂದೆ ಕರ್ತವ್ಯನಿಷ್ಠೆಯಿಂದ ಹೋಗುತ್ತಿದ್ದರಲ್ಲದೆ ಪ್ರಪಂಚದಲ್ಲೇ ಅತ್ಯುತ್ತಮವಾದ ಕಾರ್ಯವೊಂದನ್ನು ಮಾಡುತ್ತಿದ್ದೇವೆಂಬ ಗಾಂಭೀರ್ಯ ಎದ್ದುತೋರುತ್ತಿತ್ತು. ಗಿಡಗಳಲ್ಲಿ, ಪೊದೆಗಳಲ್ಲಿ ಇಣುಕುತ್ತಾ, ಏನೋ ಕಂಡಂವರಂತಾಗಿ, ಮರುಕ್ಷಣವೇ ದುರ್ಬೀನು ಕಸಿದುಕೊಂಡು ಕುತೂಹಲದಿಂದ ವೀಕ್ಷಿಸುತ್ತಿದ್ದರು. 


    ಅಲ್ಲೇ ಪಕ್ಕದ ಒಂದು ಪೊದೆಯಿಂದ ಪಟಪಟ ಅಂತ ಹಕ್ಕಿಯೊಂದು ಹಾರಿಹೋಯಿತು. ಒಂದೇ ಸಮನೆ ಮಕ್ಕಳು ಅದರ ಹೆಸರನ್ನೇ ಕೂಗತೊಡಗಿದರು. “ಧುಮರಿ” ಎಂದು ಅನಿಲ್, “ಚಿಲ್ ಚಿಲ್” ಎಂದು ಶೀಲಾ, “ಬ್ಯಾಬ್ಲರ್” ಎಂದು ಹರೀಶ್. 
“ಬ್ಯಾಬ್ಲರ್ ಹಕ್ಕಿಯನ್ನೇ ನೋಡಿಲ್ವೇನೋ ದಡ್ಡ” ಎಂದು ಹರೀಶ ಅನಿಲ್ ನನ್ನು ಮೂದಲಿಸಿದ. 
ಅದಕ್ಕೆ ಅನಿಲ್, “ಓಹೋ, ಇಂಗ್ಲಿಷ್ ಹೆಸರು ಹೇಳಿದ ಮಾತ್ರಕ್ಕೆ ಹಿಂದಿ ಪದ ತಪ್ಪಾಗಿ ಬಿಡುತ್ತದೇನು” ಎಂದ. 
ಹರೀಶ “ಅಯ್ಯೊ ದಡ್ಡ, ಮೂರ್ಖ” ಎಂದ. 
ಅನಿಲ್ “ನೀನೆ ದಡ್ಡರಿಗೆಲ್ಲ ದಡ್ಡ, ಮಹಾ ಮೂರ್ಖ, ಶತಮೂರ್ಖ” ಎಂದ. ಶುರುವಾಯಿತು ಯುದ್ಧ. ಸಲೀಮ್ ಮಾಮು ಮತ್ತು ಮಕ್ಕಳಂತೂ ಈ ದೃಶ್ಯದಿಂದ ಮಜಾ ತೆಗೆದುಕೊಳ್ಳುತ್ತಿದ್ದರು. ಕೊನೆಗೂ ತಮ್ಮ ಯುದ್ಧವನ್ನು ಮುಗಿಸಿದ ಪೋರರು ಧೂಳು ಕೊಡವಿ ಟೋಪಿ ಸರಿಮಾಡಿಕೊಂಡರು. 
     ಇಷ್ಟು ಬೇಗ ಯುದ್ಧ ಮುಗಿದಿದ್ದರಿಂದ ಬೇಸರಗೊಂಡ ಕಿರಣ್ ಸುಮ್ಮನಿರಲಾರದೆ ಹರೀಶ್‍ನನ್ನು ಕೆಣಕಿದ. “ಆಯ್ತು, ಅನಿಲ್ ಮೂರ್ಖ, ದಡ್ಡನಾದರೆ, ನೀನೇನು? ನಿನ್ನ ಪ್ರಕಾರ ಧುಮುರಿ ಬೇರೆ, ಚಿಲ್ ಚಿಲ್ ಬೇರೆ, ಬ್ಯಾಬ್ಲರ್ ಬೇರೇನಾ? ಪ್ರಶ್ನಿಸಿದ.
 ಅದಕ್ಕೆ ಅಹಮದ್ ಶಾಲೆಯಲ್ಲಿ ಉತ್ತರಿಸುವಂತೆ ಕೈ ಮೇಲಕ್ಕೆತ್ತಿ “ಒಂದೇ, ಎಲ್ಲಾ ಒಂದೇ, ಮೂರೂ ಹೆಸರುಗಳೂ ಒಂದೆ, ನಾನು ಪುಸ್ತಕದಲ್ಲಿ ಓದಿದ್ದೇನೆ" ಎಂದ.
ಅದಕ್ಕೆ ರವಿ “ಓಹೋ ಹಾಗಾದರೆ ಮೂರ್ಖ, ಮಹಾಮೂರ್ಖ ಇಬ್ಬರೂ ಸಮಾನರೇ?” ಛೇಡಿಸಿದ. 
ಅದಾಗಲೇ ನಾಚಿಕೆಯಿಂದ ತಲೆತಗ್ಗಿಸಿದ್ದ ಅನಿಲ್ ಮತ್ತು ಹರೀಶನನ್ನು ಕಂಡು “ಹೋಗ್ಲಿ ಬಿಡಿ, ಇನ್ನು ವಾದ ಸಾಕು,. ಎಲ್ಲರ ಉತ್ತರವೂ ಸರಿಯೇ. ಕೇವಲ ಬೇರೆ ಬೇರೆ ಹೆಸರಿಗಾಗಿ ಜಗಳವಾಯಿತು” ಎಂದಳು ದೊಡ್ಡ ಮನಸ್ಸಿನ ಶೀಲಾ. ಇದುವರೆಗೂ ಸುಮ್ಮನಿದ್ದ ಸಲೀಮ್ ಮಾಮು ಇದ್ದಕ್ಕಿದ್ದಂತೆ ಗಂಭೀರ ಸ್ವರದಲ್ಲಿ,  “ಮಕ್ಕಳೇ, ಎಷ್ಟೋ ಬಾರಿ ಕೇವಲ ಹೆಸರಿಗಾಗಿಯೇ ಜಗಳಗಳಾಗುತ್ತವೆ” ಎಂದರು. ಇಷ್ಟೊತ್ತು ನಡೆದ ಜಗಳ ಕೇವಲ ಸಣ್ಣ ಹೆಸರಿಗಾಗಿಯೇ ಎಂದು ಮಕ್ಕಳೆಲ್ಲಾ ಯೋಚಿಸುತ್ತಿರುವಾಗಲೇ ಆಕಾಶದಲ್ಲಿ ಒಂದು ಸಣ್ಣ ಬಿಂದುವಿನ ಕಡೆ ಬೆರಳು ತೋರಿಸುತ್ತಾ ರವಿ, “ಅಲ್ಲಿ ನೋಡಿ, ಪಕ್ಷಿಯೊಂದು ಹಾರುತ್ತಿದೆ” ಎಂದ. ಆ ಹಕ್ಕಿ ಹತ್ತಿರ ಬರುತ್ತಿದ್ದಂತೆಯೇ ಗಡಚಿಕ್ಕುವ ಶಬ್ದ ಕೇಳಿಬಂತು. ಅದು ವಿಮಾನವೆಂದು ತಿಳಿಯಿತು. ಮಕ್ಕಳೆಲ್ಲಾ ಅದನ್ನೇ ಮಿಕಮಿಕಾಂತ ನೋಡುತ್ತಿದ್ದರು. 
ಅಹಮದ್ ನಂತೂ ಎವೆಯಿಕ್ಕದೆ ನೋಡುತ್ತಾ, “ಇದು ಬಾಂಬರ್ ವಿಮಾನವಾಗಿರಬಹುದೇ” ಎಂದನು. 
“ಖಂಡಿತ ಅದು ಪಾಕಿಸ್ತಾನದ ಬಾಂಬರ್ ವಿಮಾನವೇ. ಎಲ್ಲರೂ ಇದ್ದಲ್ಲಿಯೇ ಮಲಗಿಬಿಡಿ, ಮೊದಲೇ ಯುದ್ಧದ ಸಮಯ. ಸುಮ್ಮನೆ ಏಕೆ ತೊಂದರೆಗೆ ಸಿಕ್ಕಿಕೊಳ್ಳುವುದು” ಎಂದರು ಸಲೀಮ್ ಮಾಮು. ಎಲ್ಲರೂ ಸದ್ದಿಲ್ಲದೆ ಪೊದೆಗಳಡಿಯಲ್ಲಿ ಅಡಗಿಕೊಂಡರು. ವಿಮಾನದ ಸದ್ದು ದೂರವಾಗುತ್ತಿದ್ದಂತೆಯೇ, ನಿರಾತಂಕದಿಂದ ತಲೆ ಎತ್ತಿದ ರವಿ ಕುತೂಹಲ ತಾಳಲಾರದೆ ಪ್ರಶ್ನಿಸಿದ. “ಈಗ ಪಾಕಿಸ್ತಾನದ ಜೊತೆ ನಡೆಯುತ್ತಿರುವ ಯುದ್ಧವೂ ಸಹ ಕೇವಲ ಹೆಸರಿಗಾಗಿಯೇನು, ಸಲೀಮ್ ಮಾಮು”. 
ಮಕ್ಕಳೆಲ್ಲಾ ಮುಸಿಮುಸಿ ಎಂದು ನಕ್ಕುಬಿಟ್ಟರು. ಈ ಮಾತು ಕೇಳಿ ಸಲೀಮ್ ಮಾಮುಗೆ ಹೊಸ ವಿಷಯ ಹೊಳೆದಂತಾಯಿತು. ನಂತರ "ಹೌದು, ನಿಜವಾಗಿ ಹೇಳಬೇಕೆಂದರೆ, ಹೆಸರಿಗಾಗಿಯೆ ಮೊದಲಿನಿಂದಲೂ ಪಾಕಿಸ್ತಾನದ ಜೊತೆ ಅರ್ಥವಿಲ್ಲದ ಯುದ್ಧ ನಡೆಯುತ್ತಿದೆ" ಎಂದರು. 
ಅನಿಲ್ ಬೇಸರದಿಂದ, “ಎಂತಹ ಮೂರ್ಖತನ, ಇದರಿಂದಲೇ ಅಪ್ಪ ಯುದ್ಧದಲ್ಲಿ ಸೆಣೆಸಾಡುವಂತಾಗಿದೆ” ಎಂದ. 
“ಹೌದು ಮೂರ್ಖರು, ಮಹಾಮೂರ್ಖರು” ಕಿರಣ ದನಿಗೂಡಿಸಿದ. 
     ಪೀ.....ಪೀ.....ಎಂದು ಜೋರಾಗಿ ಹಾರ್ನ್ ಮಾಡಿಕೊಂಡು ಬರುತ್ತಿದ್ದ ಜೀಪೊಂದು ಶಬ್ದಮಾಡುತ್ತಾ ಜೋರಾಗಿ ಬ್ರೇಕ್ ಹಾಕಿತು. ಪೊಲೀಸ್ ಅಲ್ಲಿಂದಲೇ “ಯಾರೋ ನೀವು, ಅಲ್ಲೇ ನಿಂತುಕೊಳ್ಳಿ, ದುರ್ಬೀನು ಹಿಡಿದು ಓಡಾಡಲು ನಿಮಗೆ ಯಾರು ಅಪ್ಪಣೆ ಕೊಟ್ಟರು” ಎಂದು ಹತ್ತಿರ ಬಂದ. 
ಲಾಠಿ ಹಿಡಿದಿದ್ದ ಪೊಲೀಸ್, ಮಾಮುವಿನ ಬಳಿ ಬಂದು, “ಏನಯ್ಯಾ, ನೀನು ಮಾಡುತ್ತಿರುವ ಕೆಲಸ? ದುರ್ಬೀನು ಹಿಡಿದು ಮಕ್ಕಳಿಗೆ ಏನು ಟ್ರೈನಿಂಗ್ ಕೊಡುತ್ತಿದ್ದೀಯಾ? ಅದೂ ಈ ಯುದ್ಧದ ಸಮಯದಲ್ಲಿ, ಈ ರೀತಿ ಓಡಾಡಬಾರದು ಎಂದು ಗೊತ್ತಿಲ್ವೇ?” ಪಶ್ನಿಸಿದ. 
ಉತ್ತರವಾಗಿ ಮಾಮು “ಹೌದು ಸರ್ ಗೊತ್ತು, ಆದರೆ ..” ಎನ್ನುತ್ತಿದ್ದಂತೆಯೇ ಪೊಲೀಸ್, "ಆದರೆ ಏನು, ನನಗೆ ತಿಳಿಯಲ್ಲ ಅನ್ಕೊಂಡೇನು? ಈ ಮಕ್ಕಳಿಗೆ  ಗೂಢಚಾರಿ ತರಬೇತಿ ನೀಡ್ತಾ ಇದ್ದೀಯಾ? ಯಾರು ನೀನು, ನಿನ್ನ ಹೆಸರೇನು?” ಕೇಳಿದ. 
ಅಹಮದ್ ಟೀಚರ್‍ ಉತ್ತರ ಹೇಳಿದರೆ ಕಷ್ಟದಿಂದ ಬೇಗ ಪಾರಾಗಬಹುದು ಎಂದುಕೊಂಡು, ತಕ್ಷಣವೇ “ಅವರ ಹೆಸರು ಸಿಲೀಮಿಲಿ ಮಾಮು” ಎಂದು ಬಡಬಡಿಸಿದ. 
ಧೀರೆ ಶೀಲಾ ಅವನನ್ನು ತಡೆದು, “ಏಯ್ ಸುಮ್ನಿರೊ, ಅವರಿಗೆ ನಿಜವಾದ ಹೆಸರು ಹೇಳಬೇಕು” ಎಂದಳು. 
ಅಹಮದ್, ಹಾಗಾದ್ರೆ, ಇದು ನಿಜವಾದ ಹೆಸರಲ್ವೇನು” ಕೇಳಿದ. 
“ನನ್ನ ಹೆಸರು ಅಲಿ”. 
“ಅಲಿ! ಶುದ್ಧ ಪಾಕಿಸ್ತಾನಿ ಹೆಸರು. ನನ್ನ ಸಂಶಯ ನಿಜ. ನೀನು ದುರ್ಬೀನು ಹಿಡಿದು ಮಕ್ಕಳಿಗೆ ಟ್ರೈನಿಂಗ್ ಕೊಡುತ್ತಿರುವಾಗಲೇ ಅಂದುಕೊಂಡೆ, ನಡೀರಿ ಪೊಲೀಸ್  ಸ್ಟೇಷನ್‍ಗೆ” ಎಂದು ಗದರಿದ.   
ಮಕ್ಕಳೆಲ್ಲಾ ದಂಗಾದರು. ಅಹಮದ್ ‘ಓ’ ಎಂದು ಅಳಲು ಶುರುಮಾಡಿದ. 
ಶೀಲಾ “ಏನೂ ಆಗುವುದಿಲ್ಲ, ಸುಮ್ಮನಿರು” ಎಂದು ಸಮಾಧಾನ ಪಡಿಸಿದಳು. ಹರೀಶ್ ಮತ್ತು ಅನಿಲ್ ಏನಾದರೊಂದು ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಮುಂದಾದರೂ ಅವರಿಗೆ ಧೈರ್ಯ ಸಾಕಾಗಲಿಲ್ಲ. 
“ಜೈಲಿನಲ್ಲಿ ಹಾಕಿ ನಮ್ಮನ್ನೆಲ್ಲಾ ಚಚ್ತಾರೆ" ಎಂದು ಅಹ್ಮದ್ ಅಳತೊಡಗಿದ. ಅವನನ್ನು ಸುಮ್ಮನಿರೆಂದು ಗದರಿದ ಪೊಲೀಸ್ ಒಂದು ನೋಟ್ ಬುಕ್ ತೆಗೆದು “ಪೂರ್ತಿ ಹೆಸರೇನು” ಎಂದ. 
ಮಾಮು ಸ್ಥಿರವಾಗಿ ನಿಂತು “ಡಾ|| ಸಲೀಂ ಅಲಿ ಎಂದು ಉತ್ತರಿಸುತ್ತಿದ್ದಂತೆಯೇ ಬರೆದುಕೊಳ್ಳುತ್ತಿದ್ದ ಪೊಲೀಸ್ “ಏನು ಡಾ|| ಸಲೀಮ್ ಅಲಿ, ಆದರೆ ಅವರು ಪಕ್ಷಿಪ್ರೇಮಿಯಲ್ವೇ, ಏನಾದ್ರೂ ಎಡವಟ್ಟಾಯ್ತಾ” ಎಂದು ತುಸು ಆಲೋಚಿಸಿ ಹಿಡಿದ್ದಿದ್ದ ಪುಸ್ತಕವನ್ನು ತಕ್ಷಣ ಕೆಳಗೆ ಬಿಟ್ಟು ಡಾ|| ಸಲೀಮ್ ಅಲಿ ಎಂದು ಅವರನ್ನು ಗಬಕ್ಕನೇ ತಬ್ಬಿಕೊಂಡ. 

“ಸರ್ ಎಷ್ಟು ದಿನದಿಂದ ನನಗೊಂದು ಹಕ್ಕಿ ಚಿಂತೆಗೆಡಿಸಿದೆ. ನಾನು ಹೋದ ಕಡೆಯೆಲ್ಲಾ ಅದನ್ನು ನೋಡ್ತೀನಿ. ಆದ್ರೆ ಅದರ ಹೆಸರೇ ಗೊತ್ತಿಲ್ಲ, ದಯವಿಟ್ಟು ಅದು ಯಾವ ಹಕ್ಕಿಯೆಂದು ಹೇಳಿ. ಸ್ವಲ್ಪ ದೊಡ್ಡದಾದ ಪಾದ, ಕೊಕ್ಕು ಉದ್ದ್ದವಾಗಿದೆ, ಸಿಕ್ಕಸಿಕ್ಕವರನ್ನೆಲ್ಲ ಕೇಳಿ ಕೇಳಿ ಸಾಕಾಗಿದೆ.” 
ಸಲೀಮ್ ಅವರು “ಅದರ ಕೊಕ್ಕಿನ ಮೇಲೆ ಕೆಂಪು ಗೆರೆ ಇದೆಯೇ?" ಕೇಳಿದರು.  
"ಹಾ ಅದೇ ಹಕ್ಕಿ, ಎಲ್ಲಾ ಕಡೆ ಕಾಣುತ್ತೆ. ಡಿಡ್ ಯೂ ಡೂ ಇಟ್ ಎಂದು ಕೂಗುತ್ತೆ ಅಲ್ವಾ?” ಕೇಳಿದರು. 
“ಹೌದು, ಹೌದು ಹೋದಲೆಲ್ಲಾ ಹೀಗೆ ಕೂಗುತ್ತೆ.” 
“ಅದನ್ನು ‘ಡಿಡಿ ಯೂ ಡೂ ಇಟ್’ ಎನ್ನುತ್ತಾರೆ” ಎಂದ ಹರೀಶ್. 
ಕಿರಣ್ “ಟಿಟಹರಿ ಅಂತಾನೂ ಕರೀತಾರೆ”. 
ಅನಿಲ್ – “ಅಥವಾ ಫಿರ್‍ಜರ್ದಿ ಎಂತಲೂ ಕರೀತಾರೆ. 
ಶೀಲಾ- ರೆಡ್ ವಾಯ್ಲೆಂಡ್ ವೈಪ್‍ವಿಂಗ್ ಅಂತಲೂ ಕರೀತಾರೆ. 
ರವಿ “ಹೌದು ಕೇವಲ ಶತಮೂರ್ಖರು ಮಾತ್ರ ಈ ಹೆಸರಿನಿಂದ ಕರೀತಾರೆ” ಅಂದ. ಶುರುವಾಯಿತು ನೋಡಿ ಮತ್ತೊಂದು ಮಹಾಯುದ್ಧ!!       
ಉಷಾಗಂಗೆ

ಭಾರತ ಸ್ವಾತಂತ್ರ್ಯ ಸಂಗ್ರಾಮದ ಧ್ರುವತಾರೆ ಶಹೀದ್ ಭಗತ್‍ಸಿಂಗ್ – 7



(ಕಳೆದ ಸಂಚಿಕೆಯಿಂದ ಮುಂದುವರೆದಿದೆ)





ಕ್ರಾಂತಿಕಾರಿಗಳು ಅಸೀಮ ದೇಶಭಕ್ತರು, ಕೊಲೆಗಡುಕರಲ್ಲ
ಭಗತ್‍ಸಿಂಗ್‍ರು ಆಶಿಸಿದಂತೆ ಅವರ ಈ ಹೇಳಿಕೆಯ ಬಗ್ಗೆ ಇಡೀ ದೇಶದಲ್ಲಿ ಚರ್ಚೆ ಆರಂಭವಾಯಿತು. ಕ್ರಾಂತಿಯ ಬಗ್ಗೆ, ಕ್ರಾಂತಿಕಾರಿಗಳ ಬಗ್ಗೆ, ಅವರ ತ್ಯಾಗದ ಬಗ್ಗೆ, ಸ್ವಾತಂತ್ರ್ಯ ಗಳಿಸುವ ವಿಧಾನದ ಬಗ್ಗೆ, ಚರ್ಚೆಗಳು ಆರಂಭವಾದವು. ಕ್ರಾಂತಿಕಾರಿಗಳು ಬಯಸಿದಂತೆ ಜನತೆ ಅವರನ್ನು ಕೊಲೆಗಡುಕರೆಂದು, ಭಯೋತ್ಪಾದಕರೆಂದು, ಉಗ್ರವಾದಿಗಳೆಂದು ಪರಿಗಣಿಸದೆ, ಬದಲಿಗೆ ಕ್ರಾಂತಿಕಾರಿಗಳನ್ನು ಅಪಾರವಾದ ದೇಶಪ್ರೇಮವುಳ್ಳ, ಎಂತಹುದೇ ತ್ಯಾಗಕ್ಕೂ ಸಿದ್ಧರಿರುವ ಅಸೀಮ ದೇಶಪ್ರೇಮಿಗಳೆಂದು ಪರಿಗಣಿಸಿದರು.

ತೀರ್ಪು

ವಿಚಾರಣೆ ಎಂಬ ನಾಟಕ ಮುಗಿದು ಜಡ್ಜ್ ಮೊದಲೇ ಸಿದ್ಧವಿದ್ದ ತೀರ್ಪನ್ನು ಓದಿದನು. ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಭಗತ್ ಮತ್ತು ದತ್ ಇಬ್ಬರೂ ಎಂದಿನಂತೆ ಅಂದೂ ಸಹ ಹಸನ್ಮುಖರಾಗಿಯೇ ಇದ್ದರು. ಅವರ ಆಪ್ತರೆಲ್ಲರೂ ಮೇಲ್ಮನವಿ ಸಲ್ಲಿಸುವಂತೆ ಹೇಳಿದರು. ಆದರೆ ಅವರಿಗೆ ಇಷ್ಟವಿರಲಿಲ್ಲ. ಏಕೆಂದರೆ ಬ್ರಿಟಿಷ್ ನ್ಯಾಯಾಲಯದ ಬಗ್ಗೆ ಅವರಿಗೆ ಯಾವುದೇ ನಂಬಿಕೆ ಇರಲಿಲ್ಲ. ಆದರೂ ಸಹ ಕೆಳಗಿನ ನ್ಯಾಯಾಲಯವನ್ನು ತಮ್ಮ ವಿಚಾರಗಳನ್ನು ಜಗತ್ತಿಗೆ ಸಾರಲು ಹೇಗೆ ವೇದಿಕೆಯನ್ನಾಗಿ ಬಳಸಿಕೊಂಡಿದ್ದರೋ ಹಾಗೆಯೇ ಮೇಲಿನ ನ್ಯಾಯಾಲಯವನ್ನು ಬಳಸಿಕೊಳ್ಳಬಹುದು ಎಂದೆನಿಸಿ ಮೇಲ್ಮನವಿಯನ್ನು ಸಲ್ಲಿಸಿದರು. ಈಗಾಗಲೇ ಅವರು ತಮ್ಮ ವಾದದ ವೈಖರಿಯಿಂದ ಭಾರತಕ್ಕೆ ಮಾತ್ರವಲ್ಲದೇ ಜಗತ್ತಿಗೇ ಭಾರತದ ಕ್ರಾಂತಿಕಾರಿಗಳ ಉದಾತ್ತ ಧ್ಯೇಯದ ಬಗ್ಗೆ ಮನದಟ್ಟು ಮಾಡಿದ್ದರು. ಜನತೆ ಅವರಿಂದ ಗಾಢವಾಗಿ ಪ್ರೇರೇಪಿತರಾಗಿದ್ದರು. ಎಲ್ಲೆಡೆ ಭಗತ್ ಮತ್ತು ದತ್‍ರ ಹೆಸರುಗಳು ರಾರಾಜಿಸಿದವು. ಯುವಜನತೆ ಅವರ ಆರಾಧಕರಾದರು. ಪ್ರತಿಯೊಬ್ಬ ದೇಶಪ್ರೇಮಿ ಮಾತೆ ತನ್ನ ಮಕ್ಕಳೂ ಸಹ ಅವರಂತೆಯೇ ಆಗಬೇಕೆಂದು ಆಶಿಸಿದಳು. ವಿದೇಶಗಳಲ್ಲಿಯೂ ಈ ಮೊಕದ್ದಮೆಯ ವಿಚಾರ ಚರ್ಚೆಗೆ ಗ್ರಾಸವಾಯಿತು. ಆದ್ದರಿಂದಲೇ ಬ್ರಿಟಿಷ್ ಸರ್ಕಾರ ಅವರ ಮೇಲ್ಮನವಿಯನ್ನು ತಿರಸ್ಕರಿಸಿತು. ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲು ಅವಕಾಶ ನೀಡಬಾರದೆಂದು ನಿರ್ಧರಿಸಿತು.

ಜೈಲಿನಲ್ಲಿ ಪ್ರತಿಭಟನೆ –ಆಮರಣಾಂತ ಉಪವಾಸ ಮುಷ್ಕರ
ಭಗತ್‍ಸಿಂಗ್‍ರು ಜೈಲಿನಲ್ಲಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಬಹಳ ಹೀನವಾಗಿ ನಡೆಸಿಕೊಳ್ಳಲಾಗುತ್ತಿತ್ತು. ಅದರಲ್ಲೂ ಕ್ರಾಂತಿಕಾರಿಗಳನ್ನು ಕಳ್ಳಕಾಕರಿಗಿಂತ ತುಚ್ಛವಾಗಿ ಕಾಣಲಾಗುತ್ತಿತ್ತು. ಸರಿಯಾದ ಆಹಾರವನ್ನು ನೀಡುತ್ತಿರಲಿಲ್ಲ. ಎಷ್ಟೋ ಬಾರಿ ಬ್ರೆಡ್‍ಅನ್ನು ಪ್ರಾಣಿಗಳಿಗೆ ಎಸೆದಂತೆ ಎಸೆಯಲಾಗುತ್ತಿತ್ತು. ಅಶ್ಲೀಲ ಭಾಷೆಯನ್ನು ಬಳಸಲಾಗುತ್ತಿತ್ತು. ಅವರಿಗೆ ಕನಿಷ್ಟ ಅವಶ್ಯಕತೆಗಳನ್ನೂ ಸಹ ಒದಗಿಸಿರಲಿಲ್ಲ. ಪ್ರಶ್ನಿಸಿದರೆ ಅಮಾನವೀಯವಾದ ಹಿಂಸೆಗೆ ಒಳಪಡಿಸಲಾಗುತ್ತಿತ್ತು.

ಭಗತ್ ಇದನ್ನು ವಿರೋಧಿಸಿ ಸಿಡಿದು ನಿಲ್ಲುವ ತೀರ್ಮಾನವನ್ನು ಮಾಡಿದರು. ಆಮರಣಾಂತ ಉಪವಾಸ ಮುಷ್ಕರದ ಮೂಲಕ ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಲು ಮತ್ತು ಜನತೆಗೆ ತಮ್ಮ ಹೋರಾಟದ ವಿಚಾರಗಳನ್ನು ತಲುಪಿಸಲು ಸಜ್ಜಾದರು.  ಜೂನ್ 17ರಂದು ಅವರು ಜೈಲ್ ಮುಖ್ಯಸ್ಥರಿಗೆ ಒಂದು ಪತ್ರ ಬರೆದು ತಮ್ಮ ಬೇಡಿಕೆಗಳನ್ನು ಮಂಡಿಸಿದರು. “ನಾವು ರಾಜಕೀಯ ಖೈದಿಗಳು. ನಮಗೆ ಸರಿಯಾದ ಆಹಾರವನ್ನು ನೀಡಬೇಕು. ನಮ್ಮನ್ನು ಯಾವುದೇ ಅಗೌರವವಾದ ಕೆಲಸ ಮಾಡುವಂತೆ ಒತ್ತಾಯಿಸಬಾರದು. ಓದಲು ಪುಸ್ತಕ ಬರೆಯುವ ಸಾಮಗ್ರಿಗಳನ್ನು ಒದಗಿಸಬೇಕು. ಸಮಾಚಾರ ಪತ್ರಿಕೆಯನ್ನು ಕೊಡಬೇಕು. ಸರಿಯಾದ ಶೌಚಾಲಯ, ಬಟ್ಟೆಗಳನ್ನು ಒದಗಿಸಬೇಕು. ಯೂರೋಪಿಯನ್ನರು ತಮ್ಮ ಸ್ವಾರ್ಥಕ್ಕಾಗಿ ಕಳ್ಳತನ ಮಾಡಿ, ಸಿಕ್ಕಿಬಿದ್ದರೆ ಅವರಿಗೆ ನೀವು ಎಲ್ಲಾ ಉತ್ತಮ ಸೌಲಭ್ಯ ನೀಡುತ್ತೀರಿ. ಉತ್ತಮ ವಾತಾವರಣ, ಕೋಣೆ, ಆಹಾರ ಬಟ್ಟೆ, ನೀಡುತ್ತೀರಿ. ಆದರೆ ನಮಗೆ, ರಾಜಕೀಯ ಖೈದಿಗಳಿಗೆ ನೀವು ಅಂತಹ ಕನಿಷ್ಟ ಅವಶ್ಯಕತೆಗಳಿಂದಲೂ ಸಹ ವಂಚಿಸುತ್ತೀರಿ.”
ಜೈಲಿನ ಅಧಿಕಾರಿಗಳು ಯಾವುದೇ ಉತ್ತರವನ್ನು ನೀಡಲ್ಲಿಲ್ಲ.ಆದ್ದರಿಂದ ಅವರು ಉಪವಾಸ ಮುಷ್ಕರವನ್ನು ಆರಂಭಿಸಲು ನಿರ್ಧರಿಸಿದರು. ಭಗತ್‍ಸಿಂಗ್‍ರನ್ನು ಲಾಹೋರ್ ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಯಿತು. ಅಲ್ಲಿ ಎಲ್ಲಾ ಕ್ರಾಂತಿಕಾರಿಗಳೊಡಗೂಡಿ ಮುಷ್ಕರವನ್ನು ಆರಂಭಿಸಿದರು. ಜನತೆಗೆ ಈ ವಿಷಯ ತಿಳಿದಾಗ ಎಲ್ಲೆಡೆ ಸರ್ಕಾರದ ನೀತಿಯನ್ನು ವಿರೋಧಿಸಿ, ವ್ಯಾಪಕವಾದ ಪ್ರತಿಭಟನೆಗಳು ಆರಂಭವಾದವು. ಮೋತಿಲಾಲ್ ನೆಹರು, ಜಿನ್ನಾ ಈ ಬಗ್ಗೆ ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು. ಈ ಮುಷ್ಕರ ಇಡೀ ದೇಶದಲ್ಲಿ ಎಲ್ಲರ ಗಮನ ಸೆಳೆದು, ಚರ್ಚೆಗಳು ಪ್ರಾರಂಭವಾದವು. ಬಹಳಷ್ಟು ಸಾರ್ವಜನಿಕರು ತಾವೂ ಉಪವಾಸ ಮಾಡುತ್ತಾ ಕ್ರಾಂತಿಕಾರಿಗಳಿಗೆ ಬೆಂಬಲ ಸೂಚಿಸಿದರು. ಹಲವಾರು ಪತ್ರಿಕೆಗಳು ಪ್ರತಿನಿತ್ಯ ಕ್ರಾಂತಿಕಾರಿಗಳ ಆರೋಗ್ಯದ ಬಗ್ಗೆ ವರದಿ ನೀಡಲಾರಂಭಿಸಿದವು. ಜಲಿಯನ್‍ವಾಲಾಬಾಗಿನಲ್ಲಿ ನಡೆದ ಒಂದು ಬೃಹತ್ ಪ್ರತಿಭಟನೆಯಲ್ಲಿ “ಕ್ರಾಂತಿಕಾರಿಗಳಿಗೆ ಏನಾದರೂ ಅಪಾಯವಾದರೆ, ಸರ್ಕಾರವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಲಾಹೋರಿನಲ್ಲಿ ಹತ್ತು ಸಾವಿರ ಜನರ ಪ್ರತಿಭಟನೆ ನಡೆಯಿತು. ಜೂನ್ 21 ರಂದು ದೇಶದಾದ್ಯಂತ ‘ಭಗತ್‍ಸಿಂಗ್ ದಿನ’ ಎಂದು ಆಚರಿಸಲಾಯಿತು.

ಜೈಲಿನಲ್ಲಿ ಕಿರುಕುಳ - ಸಂಗಾತಿಗಳ ಬಗ್ಗೆ ಕಾಳಜಿ
ಭಗತ್‍ಸಿಂಗ್‍ರು ಯಾವಾಗಲೂ ತಮ್ಮ ಸಂಗಾತಿಗಳ ನಡುವೆ0iÉುೀ ಇದ್ದು, ಅವರನ್ನು ಹುರಿದುಂಬಿಸುತ್ತಿದ್ದರು. ಅವರೊಂದಿಗೆ ಕ್ರಾಂತಿಯ ಬಗ್ಗೆ, ಸಮಾಜವಾದದ ಬಗ್ಗೆ ಚರ್ಚಿಸುತ್ತಿದ್ದರು. ಎಲ್ಲರೂ ಸೇರಿ ಕೆಲವೊಮ್ಮೆ ಘೋಷಣೆಗಳನ್ನು ಕೂಗುತ್ತಿದ್ದರು. ಕೆಲವೊಮ್ಮೆ ಕ್ರಾಂತಿಗೀತೆಗಳನ್ನು ಹಾಡುತ್ತಿದ್ದರು. ಉಪವಾಸವಿದ್ದರೂ ಅವರ ಉತ್ಸಾಹವನ್ನು ಕಂಡು ಇತರ ಖೈದಿಗಳು, ಅಧಿಕಾರಿಗಳು ದಂಗಾದರು.
ಬ್ರಿಟಿಷ್ ಸರ್ಕಾರ ಈ ಉಪವಾಸ ಮುಷ್ಕರಕ್ಕೆ ಬಗ್ಗಲಿಲ್ಲ. ಬದಲಿಗೆ ಮುಷ್ಕರವನ್ನು ಮುರಿಯಲು ಅಮಾನುಷವಾದ ತಂತ್ರಗಳನ್ನು ಬಳಸಿತು. ಕ್ರಾಂತಿಕಾರಿಗಳನ್ನು ಬಹಳ ಅಮಾನವೀಯವಾಗಿ ನಡೆಸಿಕೊಳ್ಳಲಾಯಿತು. ಗಂಟೆಗಟ್ಟಲೆ ಅವರನ್ನು ಸರಳುಗಳಿಂದ ಹೊಡೆಯಲಾಗುತ್ತಿತ್ತು. ಇಲ್ಲವೇ ಮಂಜುಗಡ್ಡೆಯ ಮೇಲೆ ಮಲಗಿಸಲಾಗುತ್ತಿತ್ತು. ಬಾಂಬೆಯ “ಯಂಗ್ ಲಿಬರೇಟರ್” ಎಂಬ ಪತ್ರಿಕೆ, “ಅಧಿಕಾರಿಗಳ ಬರ್ಬರತೆಗೆ ಮತ್ತು ಕಾನೂನುಬಾಹಿರ ವರ್ತನೆಗೆ ಮಿತಿಯೇ ಇಲ್ಲ. ಲಾಹೋರ್ ಖೈದಿಗಳಿಗೆ ನೀಡುತ್ತಿರುವಂತಹ ಶಿಕ್ಷೆಯನ್ನು ಬಹುಶಃ ಮಧ್ಯಯುಗದ ಬರ್ಬರರೂ, ನಿರಂಕುಶಾಧಿಕಾರಿಗಳೂ ಸಹ ನೀಡುತ್ತಿರಲಿಲ್ಲವೇನೋ!”, ಎಂದು ಬರೆಯಿತು. ನೀರಿನ ಗಡಿಗೆಗಳ ಬದಲಿಗೆ ಹಾಲಿನ ಗಡಿಗೆಗಳನ್ನಿಟ್ಟರು. ಮೂಗಿನ ಮೂಲಕ ಕೊಳವೆ ತೂರಿಸಿ ಆಹಾರವನ್ನು ಹಾಕಲೆತ್ನಿಸಿದರು. ಕ್ರಾಂತಿಕಾರಿಗಳು ಇದಾವುದಕ್ಕೂ ಬಗ್ಗಲಿಲ್ಲ. ಆಗ ಸರ್ಕಾರ ಮಾತಿಗಷ್ಟೇ ‘ಆಯಿತು’ ಎಂದು ಹೇಳಿತು. ಆದರೆ ಭಗತ್‍ಸಿಂಗ್ ಸರ್ಕಾರದ ಆದೇಶ ಗೆಜೆಟ್‍ನಲ್ಲಿ ಪ್ರಕಟವಾಗುವವರೆಗೂ ತಾವು ಉಪವಾಸವನ್ನು ಕೈಬಿಡಲು ಅಂಗೀಕರಿಸುವುದಿಲ್ಲ ಎಂದು ಘೋಷಿಸಿದರು. ಸರ್ಕಾರ ಮುಷ್ಕರವನ್ನು ಮುರಿಯಲು ಭಗತ್ ಮತ್ತು ದತ್‍ರಿಗೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧವಿತ್ತು. ಆದರೆ ಅವರಿಬ್ಬರು ಅದನ್ನು ನಿರಾಕರಿಸಿದರು. ಭಗತ್ ತಾವು ವಿಶೇಷವೆಂದು ಯಾವತ್ತೂ ಭಾವಿಸಿರಲಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಸಾವಿರಾರು ಜನರಲ್ಲಿ ತಾವೂ ಸಹ ಒಬ್ಬರು ಎಂಬುದು ಅವರ ಭಾವನೆಯಾಗಿತ್ತು. ಭಗತ್ ಮತ್ತು ಅವರ ಸಂಗಾತಿಗಳ ನಡುವೆ ಇದ್ದ ಅಪಾರ ವಾತ್ಸಲ್ಯದ ಬಗ್ಗೆ ಕಟುಕ ಬ್ರಿಟಿಷ್ ಸರ್ಕಾರಕ್ಕೆ ಏನು ಗೊತ್ತಿತ್ತು!

ಜತಿನ್ ದಾಸ್‍ರ ಬಲಿದಾನ

ಉಪವಾಸ ಮುಷ್ಕರದಲ್ಲಿದ್ದ ಜತಿನ್‍ದಾಸ್‍ರ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿತು. ಜೈಲು ಸಮಿತಿ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತು. ಸರ್ಕಾರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತೇವೆಂದು ಹೇಳಿತು. ಜತಿನ್ ದಾಸ್ ತಾವೊಬ್ಬರೇ ಹೊರಬರಲು ಸಿದ್ಧರಿರಲಿಲ್ಲ. ಔಷಧಿಯನ್ನು ಸಹ ಸೇವಿಸಲು ಅವರು ಒಪ್ಪಲಿಲ್ಲ. ಒಮ್ಮೆ ಮಾತ್ರ ಭಗತ್‍ರ ಮಾತಿಗೆ ಬೆಲೆ ಕೊಟ್ಟು ಔಷಧಿ ಸೇವಿಸಿದರು. ಆದರೆ ಅವರ ಆರೋಗ್ಯ ಹದಗೆಡುತ್ತಾ ಹೋಯಿತು. ಆದರೂ ಬ್ರಿಟಿಷ್ ಸರ್ಕಾರ ಬಗ್ಗಲಿಲ್ಲ. ಸೆಪ್ಟೆಂಬರ್ 13ರಂದು, 63 ದಿನಗಳ ಉಪವಾಸ ಮುಷ್ಕರದ ನಂತರ ಅವರು ಹುತಾತ್ಮರಾದರು. ಕ್ರಾಂತಿಕಾರಿಗಳು ಎಂತಹ ತ್ಯಾಗವನ್ನಾದರೂ ಮಾಡಬಲ್ಲರು ಎಂಬುದನ್ನು ಜತಿನ್ ಜಗತ್ತಿಗೆ ಸಾರಿದರು. ಎಲ್ಲಾ ದೇಶಪ್ರೇಮಿ ಜನರ ಮನೆಗಳಲ್ಲಿ ಕ್ರಾಂತಿಕಾರಿಗಳ ಭಾವಚಿತ್ರಗಳು ಕಾಣಿಸಿಕೊಂಡವು. ಮೋತಿಲಾಲ್ ನೆಹರೂ, “ಅವರ ಅಪ್ರತಿಮ ಸಾಹಸ ಸ್ವಾತಂತ್ರ್ಯವನ್ನು ಹತ್ತಿರಗೊಳಿಸಿದೆ” ಎಂದು ಹೊಗಳಿದರು. ಉಪವಾಸ ಮುಷ್ಕರದ ಸಾಧನವನ್ನು ತಾವು ಕಾಂಗ್ರೆಸ್ಸಿಗರಿಗಿಂತ ತೀವ್ರವಾಗಿ ಮಾಡಬಲ್ಲೆವೆಂಬುದನ್ನು ಕ್ರಾಂತಿಕಾರಿಗಳು ಗಾಂಧೀಜಿಯವರಿಗೆ ತೋರಿಸಿಕೊಟ್ಟರು. ದೇಶವೆಲ್ಲಾ ಈ ಬಗ್ಗೆ ಮಾತನಾಡುತ್ತಿದ್ದರೂ, ಜಗತ್ತೇ ಅವರನ್ನು ಕೊಂಡಾಡುತ್ತಿದ್ದರೂ, ಗಾಂಧೀಜಿಯವರು ಕ್ರಾಂತಿಕಾರಿಗಳ ಉಪವಾಸ ಮುಷ್ಕರದ ಬಗ್ಗೆ ಏನೂ ಮಾತನಾಡದಿದ್ದದ್ದು ವಿಪರ್ಯಾಸವೇ ಸರಿ!

ನನ್ನ ಮಗನೂ ಜತಿನನಂತಾಗಲಿ’
ಭಗತ್‍ರಿಗೆ ಜತಿನ್‍ದಾಸ್‍ರ ಸಾವು ಹೇಳಲಸದಳವಾದ ವೇದನೆಯನ್ನು ಉಂಟುಮಾಡಿತು. ಕಲ್ಕತ್ತಾದಿಂದ ಜತಿನ್‍ದಾಸ್‍ರ ಮನವೊಲಿಸಿ ಎಚ್.ಎಸ್.ಆರ್.ಎಗೆ ಕರೆದುಕೊಂಡು ಬಂದಿದ್ದವರು ಭಗತ್. ಭಾವುಕ ಜೀವಿಯಾದ ಅವರು ಎಲ್ಲರ ಎದುರಿಗೆ ಬಹಿರಂಗವಾಗಿ ಅತ್ತುಬಿಟ್ಟರು. ಅದರೂ ಕ್ರಾಂತಿಯ ಪಥದಲ್ಲಿ ಇಂತಹುದ್ದನ್ನೆಲ್ಲಾ ಸಹಿಸಿಕೊಳ್ಳಬೇಕೆಂಬುದು ಅವರಿಗೆ ಅರ್ಥವಾಗಿತ್ತು. ಜತಿನ್‍ದಾಸ್‍ರ ಸಾವಿನಿಂದ ಇಡೀ ದೇಶ ದಿಗ್ಭ್ರಾಂತವಾಯಿತು. ಬ್ರಿಟಿಷ್ ಸರ್ಕಾರ ಅಷ್ಟು ಕ್ರೂರವಾಗಿ ನಡೆದುಕೊಳ್ಳುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಆ ಸಾವಿನ ನೋವಿನಲ್ಲಿಯೂ ಜನರು ಬ್ರಿಟಿಷ್ ಸರ್ಕಾರಕ್ಕೆ ಸೆಡ್ಡು ಹೊಡೆದು ಗೆದ್ದ ಧೀರನನ್ನು ಕಂಡಿತು. ಶವವನ್ನು ಹೊತ್ತ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿದರು. 


ಲಾಹೋರಿನಿಂದ ಜತಿನ್‍ದಾಸ್‍ರ ಮೃತದೇಹವನ್ನು ಕೊಂಡೊಯ್ದ ರೈಲು ಕಲ್ಕತ್ತಾ ತಲುಪುವವರೆಗೂ ಮಾರ್ಗಮಾಧ್ಯದಲ್ಲಿನ ಎಲ್ಲಾ ರೈಲ್ವೆ ನಿಲ್ದಾಣದಲ್ಲಿಯೂ ಅಸಂಖ್ಯಾತ ಜನ ಈ ಯೋಧನಿಗೆ ನಮನ ಸಲ್ಲಿಸಿದರು. ಕಲ್ಕತ್ತಾದ ಹೌರಾ ನಿಲ್ದಾಣದಲ್ಲಿ 6 ಲಕ್ಷ ಜನ ಕಾಯುತ್ತಿದ್ದರು. ಅಲ್ಲಿಂದ ಹೊರಟ ಮೆರವಣಿಗೆಯಲ್ಲಿ ಎಲ್ಲಾ ಕಡೆಗಳಿಂದಲೂ ಜನ ಸೇರುತ್ತಲೇ ಹೋದರು. ದಾರಿಯುದ್ದಕ್ಕೂ ಗೋಡೆಗಳ ಮೇಲೆ “ನನ್ನ ಮಗನೂ ಜತಿನ್‍ದಾಸ್‍ನಂತಾಗಲಿ,” ಎನ್ನುವ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಜತಿನ್‍ದಾಸ್‍ರ ಸಾವು ಕ್ರಾಂತಿಕಾರಿಗಳನ್ನು ಇನ್ನಷ್ಟು ವಜ್ರಕಾಯರನ್ನಾಗಿಸಿತು.

ಕಾಂಗ್ರೆಸ್ ಮಾತಿಗೆ ಮನ್ನಣೆ
ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಗೊತ್ತುವಳಿಯ ಕಾರಣದಿಂದಾಗಿ ಭಗತ್ ಮತ್ತು ದತ್ ತಮ್ಮ ಉಪವಾಸ ಮುಷ್ಕರವನ್ನು ಹಿಂತೆಗೆದುಕೊಂಡರು. ಕಾಂಗ್ರೆಸ್‍ನ ಬಗ್ಗೆ ಅವರಿಗೆ ಭಿನ್ನಾಭಿಪ್ರಾಯಗಳಿದ್ದರೂ, ಸ್ವಾತಂತ್ರ್ಯಕ್ಕಾಗಿನ ಕಾಂಗ್ರೆಸ್‍ನ ಹೋರಾಟವನ್ನು ಅವರು ಗೌರವಿಸಿದ್ದರು. ಆದ್ದರಿಂದಲೇ ಕಾಂಗ್ರೆಸ್ ನ ನಾಯಕರ ಮಾತಿಗೆ ಬೆಲೆ ಕೊಟ್ಟು ಮುಷ್ಕರವನ್ನು ಹಿಂತೆಗೆದುಕೊಂಡರು. ಇದು ಕ್ರಾಂತಿಕಾರಿಗಳ ಉದಾತ್ತತೆಯನ್ನು ತೋರಿಸುತ್ತದೆ. 1929ರ ಅಕ್ಟೋಬರ್ 5ರಂದು ಅಂದರೆ ಉಪವಾಸದ 116ನೇ ದಿನ ಮುಷ್ಕರವನ್ನು ನಿಲ್ಲಿಸಿದರು. ಅವರು ಐರಿಷ್ ಕ್ರಾಂತಿಕಾರಿಯ 97ದಿನಗಳ ವಿಶ್ವದಾಖಲೆಯನ್ನು ಮುರಿದಿದ್ದರು, ದಾಖಲೆ ಸೃಷ್ಟಿಸಲು ಅಲ್ಲ ಬದಲಿಗೆ ಒಂದು ಉನ್ನತವಾದ ಧ್ಯೇಯಸಾಧನೆಗಾಗಿ. ಆದರೆ ಅದೂ ಸಹ ತಾತ್ಕಾಲಿಕವೆಂದು, ಸರ್ಕಾರ ಅವರ ಹಕ್ಕುಗಳನ್ನು ನೀಡುವವರೆಗೆಂದು ಅವರು ಸ್ಪಷ್ಟಗೊಳಿಸಿದ್ದರು. ಈ ವಿಷಯ ವಿದೇಶಗಳಲ್ಲಿಯೂ ಮುಖ್ಯವಾಗಿ ಲಂಡನ್ನಿನಲ್ಲಿ ಹರಡಿತು. ಎಲ್ಲೆಡೆಯಿಂದಲೂ ಎಚ್.ಎಸ್.ಆರ್.ಎ ಗೆ ಬೆಂಬಲ ದೊರೆಯಲಾರಂಭಿಸಿತು. ಕೆನಡಾ, ಜಪಾನ್, ಅಮೇರಿಕಾ ಮುಂತಾದ ಕಡೆಗಳಲ್ಲಿದ್ದ ಭಾರತೀಯರು ಹಣ ಕಳಿಸಲಾರಂಭಿಸಿದರು.

ಸ್ಯಾಂಡರ್ಸ್ ಕೊಲೆ ಮೊಕದ್ದಮೆ
ಈ ಮಧ್ಯೆಯೇ, ಅವರ ಮೇಲೆ ಇನ್ನೊಂದು ಮೊಕದ್ದಮೆಯನ್ನು ಸರ್ಕಾರ ಹೂಡಿತು. ಅದು ಸ್ಯಾಂಡರ್ಸ್ ಕೊಲೆ ಮೊಕದ್ದಮೆ. ಈ ಬಗ್ಗೆ ಭಗತ್‍ಸಿಂಗ್‍ರು ಚಿಂತಿಸಲಿಲ್ಲ. ಈ ಮೊದಲೇ ಅವರು ಎಲ್ಲಕ್ಕೂ ಸಜ್ಜಾಗಿ ಬಂಧನಕ್ಕೊಳಗಾಗಿದ್ದರು. ಜೈಗೋಪಾಲ್, ಫಣೀಂದ್ರ ಘೋಷ್ ಮತ್ತು ಹಂಸ್‍ರಾಜ್‍ವೋರಾ ಎಂಬ ಮೂವರು ಪೊಲೀಸರ ಆಮೀಷಕ್ಕೆ ಬಲಿಯಾಗಿ ಸರ್ಕಾರದ ಪರ ಸಾಕ್ಷಿದಾರರಾಗಿಬಿಟ್ಟಿದ್ದರು. ಅವರು ಪೊಲೀಸರಿಗೆ ಕ್ರಾಂತಿಕಾರಿಗಳೆಲ್ಲರ ಬಗ್ಗೆ ಮಾಹಿತಿ ನೀಡಿದ್ದರು. ಬಹಳಷ್ಟು ಕ್ರಾಂತಿಕಾರಿಗಳನ್ನು ಬಂಧಿಸಲಾಗಿತ್ತು.

ಕ್ರಾಂತಿಕಾರಿ ಪ್ರಚಾರಕ್ಕಾಗಿ ನ್ಯಾಯಾಲಯದ ಬಳಕೆ
ಇತ್ತ ವಿಚಾರಣೆ ಏಕಮುಖವಾಗಿದೆ ಎಂದು, ಅದು ಕೇವಲ ನಾಟಕವೆಂದು, ಆರೋಪಿಗಳು ಮತ್ತು ಅವರ ವಕೀಲರು ಏನೇ ಹೇಳಿದರೂ ಅದನ್ನು ನ್ಯಾಯಾಲಯ ಕೇಳುವುದಿಲ್ಲವೆಂದು, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಲಾಗಿದೆಎಂದು ದು, ಭಗತ್ ಮತ್ತು ಕೆಲವರನ್ನು ಖಂಡಿತವಾಗಿಯೂ ಗಲ್ಲಿಗೆ ಹಾಕುವ ತೀರ್ಮಾನವನ್ನು ಬ್ರಿಟಿಷ್ ಸರ್ಕಾರ ಈಗಾಗಲೇ ಕೈಗೊಂಡಿದೆ ಎಂದು ಕ್ರಾಂತಿಕಾರಿಗಳಿಗೆ ಮನದಟ್ಟಾಗುತ್ತಾ ಹೋಯಿತು. ಅವರೂ ಸಹ ವಿಚಾರಣೆಯನ್ನು ನಿರ್ಲಕ್ಷಿಸಲು ತೀರ್ಮಾನಿಸಿದರು. ಆದ್ದರಿಂದ ಅವರು ಕೆಲವು ದಿನ ವಿಚಾರಣೆಗೆ ನ್ಯಾಯಾಲಯದ ಮುಂದೆ ಹಾಜರಾಗಲು ನಿರಾಕರಿಸಿದರು. ಕೆಲವು ದಿನ ಕೇವಲ ಘೋಷಣೆಗಳನ್ನು ಮಾತ್ರ ಕೂಗಿದರು. ದೇಶಪ್ರೇಮಿ ಗೀತೆಗಳನ್ನು ಹಾಡಲು ಕೆಲವು ದಿನಗಳನ್ನು ಬಳಸಿಕೊಂಡರು. ಇನ್ನೂ ಕೆಲವು ದಿನ ಸ್ವಾತಂತ್ರ್ಯ ಮತ್ತು ಕ್ರಾಂತಿಯ ಮೂಲಕ ಮಾತ್ರ ಈ ದೇಶದ ಉದ್ಧಾರ ಸಾಧ್ಯವೆಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದರು. ವಿವರಣೆಯನ್ನು ಬಹುತೇಕ ಬಾರಿ ನೀಡುತ್ತಿದ್ದದ್ದು ಭಗತ್ ಎಂದು ಪುನಃ ಹೇಳಬೇಕಿಲ್ಲವಷ್ಟೆ! ಆ ಉದ್ದೇಶಕ್ಕಾಗಿಯೇ ಅಲ್ಲವೆ ಅವರು ಬಂಧನಕ್ಕೊಳಗಾಗಿದ್ದು. ವಿಚಾರಣೆಯ ದಿನಗಳಂದು ಶಾಲಾಕಾಲೇಜುಗಳಿಂದ ವಿದ್ಯಾರ್ಥಿಗಳು ತಂಡೋಪತಂಡವಾಗಿ ಕೋರ್ಟ್ ಮುಂದೆ ಹಾಜರಾಗುತ್ತಿದ್ದರು. ಕ್ರಾಂತಿಕಾರಿಗಳ ದನಿಗೆ ತಮ್ಮ ದನಿಗೂಡಿಸುತ್ತಿದ್ದರು. ಕ್ರಾಂತಿಕಾರಿಗಳ ಅಚ್ಚುಮೆಚ್ಚಿನ ಗೀತೆ ಇದು -
“ಬಲಿದಾನದ ಉತ್ಕಟೇಚ್ಛೆ ತುಡಿಯುತ್ತಲಿದೆ ನಮ್ಮ ಮನದಲ್ಲೀಗ,
  ಕಟುಕನ ಕೈಯಲ್ಲಿನ ಶಕ್ತಿಯನು ನಾವು ನೋಡಬೇಕೀಗ”.
(ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ,
ದೇಖ್‍ನಾ ಹೈ ಜೋರ್ ಕಿತನಾ ಬಾಜೂ ಯೇ ಖಾತಿಲ್ ಮೇ ಹೈ)

ನ್ಯಾಯದ ಅಪಹಾಸ್ಯ
ಒಂದು ದಿನ ಭಗತ್‍ರ ವಕೀಲರಾದ ದುನಿಚಂದ್‍ರನ್ನು ನ್ಯಾಯಾಲಯದೊಳಗೆ ಬರಲು ಬಿಡಲಿಲ್ಲ. ವಿಶ್ವದ ಯಾವುದೇ ನ್ಯಾಯಾಲಯದಲ್ಲಿ ಈ ರೀತಿ ನಡೆದಿರಲಿಕ್ಕಿಲ್ಲ! ಆದ್ದರಿಂದ ಭಗತ್ ಮತ್ತು ಅವರ ಸಂಗಾತಿಗಳು ನ್ಯಾಯಾಲಯಕ್ಕೆ ಬಹಿಷ್ಕಾರ ಹಾಕಲು ಮತ್ತು ಉಪವಾಸ ಮುಷ್ಕರವನ್ನು ಪುನಃ ಕೈಗೆತ್ತಿಕೊಳ್ಳಲು ನಿರ್ಧರಿಸಿದರು. ಸರ್ಕಾರ ಖೈದಿಗಳಿಗೆ ಕೆಲವು ಸೌಕರ್ಯಗಳನ್ನು ನೀಡಿದ್ದರೂ, ಕ್ರಾಂತಿಕಾರಿಗಳ ಎಲ್ಲಾ ನ್ಯಾಯಯುತವಾದ ಬೇಡಿಕಗಳಿಗೆ ಮನ್ನಣೆ ನೀಡಿರಲಿಲ್ಲ.
“ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ ಈ ನಾಟಕವನ್ನು ನೋಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ಸೌಲಭ್ಯ ನಮಗೆ ಸಿಗುತ್ತಿಲ್ಲ. ನಮಗೆ ಪತ್ರಿಕೆಗಳನ್ನೂ, ಸಹ ನೀಡಲಾಗುತ್ತಿಲ್ಲ. ಹಾಗಾಗಿ ಈ ಸಮಸ್ಯೆಗಳನ್ನು ಪರಿಹರಿಸಿದರೆ, ನಾವು ನ್ಯಾಯಾಲಯಕ್ಕೆ ಹಾಜರಾಗುತ್ತೇವೆ,” ಎಂದು ಹೇಳಿಕೆಯನ್ನು ನೀಡಿದರು. ಫೆಬ್ರವರಿ 19ರಂದು ಸರ್ಕಾರ ಪತ್ರಿಕಾ ಹೇಳಿಕೆಯನ್ನು ನೀಡಿ ಆಶ್ವಾಸನೆ ನೀಡಿತು. ಆದರೆ ಉಪವಾಸ ಮುಷ್ಕರ ಹಿಂತೆಗೆದುಕೊಂಡ ತಕ್ಷಣ ತನ್ನ ಆಶ್ವಾಸನೆಯಿಂದ ಹಿಂದೆ ಸರಿಯಿತು. ಜಗತ್ತಿನಲ್ಲೆಲ್ಲೂ ಇಷ್ಟು ನಾಚಿಕೆಗೆಟ್ಟ  ಸರ್ಕಾರವಿರಲಾರದು!
      
ಟ್ರಿಬ್ಯೂನಲ್‍ನ ರಚನೆ
1930ರ ಮೇ 1ರಂದು ವಿಚಾರಣೆಯ ನಾಟಕ ಮುಗಿಯಿತು. ತೀರ್ಪು ನೀಡಲು ವೈಸ್‍ರಾಯ್ ಇರ್ವಿನ್ ಮೂವರು ನ್ಯಾಯಾಧೀಶರನ್ನೊಳಗೊಂಡ ಒಂದು ಟ್ರಿಬ್ಯುನಲ್ ರಚಿಸಿದ. ಈ ಟ್ರಿಬ್ಯುನಲ್‍ಗೆ ಆರೋಪಿಗಳು ಹಾಜರಿಲ್ಲದಿದ್ದರೂ, ತೀರ್ಪು ನೀಡುವ ಅಧಿಕಾರವನ್ನು ಕೊಡಲಾಯಿತು. ತನ್ನ ವಿರುದ್ಧ ದನಿ ಎತ್ತುವವರನ್ನು ನಿರ್ದಾಕ್ಷಿಣ್ಯವಾಗಿ ದಮನಗೊಳಿಸಲು ತಾನು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆಂಬುದನ್ನು ಬ್ರಿಟಿಷ್ ಸರ್ಕಾರ ಈ ಮೂಲಕ ತೋರಿಸಿಕೊಟ್ಟಿತು. 1930ರ ಮೇ 5 - ಟ್ರಿಬ್ಯುನಲ್‍ನ ಮೊದಲ ದಿನ ಭಗತ್‍ಸಿಂಗ್ ತಮ್ಮ ಸಂಗಾತಿಗಳ ಪರವಾಗಿ ಈ ಕೆಳಕಂಡ ಹೇಳಿಕೆಯನ್ನು ನೀಡಿದರು - “ನಮಗೆ ನಿಮ್ಮ ಬಗ್ಗೆ ವೈಯಕ್ತಿಕ ದ್ವೇಷವೇನೂ ಇಲ್ಲ. ನಾವು ಭಯ ಮತ್ತು ದ್ವೇಷದಿಂದ ಮುಕ್ತರು. ನೀವು ನಿಮ್ಮ ಕೆಲಸ ಮಾಡುತ್ತಿದ್ದೀರಿ. ನಮ್ಮ ಮೇಲಿನ ದೌರ್ಜನ್ಯ ನಮ್ಮಲ್ಲಿ ಕಹಿಯನ್ನೇನೂ ಮೂಡಿಸಿಲ್ಲ.” ಈ ರೀತಿ ಹೇಳುವ ಮೂಲಕ ಕ್ರಾಂತಿಕಾರಿಗಳು ಉದಾತ್ತತೆಯನ್ನು ಮೆರೆದಿದ್ದಾರೆ.
18 ಜನ ಆರೋಪಿಗಳು ಘೋಷಣೆಗಳನ್ನು ಕೂಗಿದರು ಮತ್ತು ‘ಸರ್ಫರೋಷಿ ಕೀ ತಮನ್ನ’ ಹಾಡನ್ನು ಹಾಡಿದರು. ನಂತರ ರಾಜಗುರು ಟ್ರಿಬ್ಯುನಲ್‍ನ ರಚನೆ ನ್ಯಾಯಬದ್ಧವಲ್ಲವೆಂದು, ಅದರ ನ್ಯಾಯಬದ್ಧತೆಯ ಬಗ್ಗೆ ತೀರ್ಮಾನವಾಗುವವರೆಗೂ ಅದನ್ನು ಮುಂದೂಡಬೇಕೆಂದು ಹೇಳಿದರು. ಜೆ.ಎನ್. ಸನ್ಯಾಲ್‍ರವರು ಎದ್ದು ನಿಂತು, “ಬ್ರಿಟಿಷರು ಅದೆಷ್ಟು ಭಾರತೀಯರ ಕೊಲೆಯನ್ನು ಮಾಡಿದ್ದಾರೆಂದರೆ ನಾವು ಬಯಸಿದರೂ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾರೆವು. ಒಂದು ದೇಶದ ಜನತೆಯನ್ನು ಪರಾಧೀನತೆಗೆ ಒಳಪಡಿಸುವುದೇ ಅತ್ಯಂತ ಹೇಯ ಅಪರಾಧ. ಬ್ರಿಟಿಷರು ಆ ಅಪರಾಧವನ್ನು ಮಾಡಿದ್ದಾರೆ. ಅದರೊಂದಿಗೆ ತಮ್ಮ ರಾಕ್ಷಸೀ ಶಕ್ತಿಯೊಂದಿಗೆ ಸ್ವಾತಂತ್ರ್ಯದ ಹೋರಾಟವನ್ನು ಹೊಸಕಿಹಾಕಲೆತ್ನಿಸುತ್ತಿದ್ದಾರೆ. ಆದ್ದರಿಂದ ಬ್ರಿಟಿಷರೇ ಆರೋಪಿಗಳು, ನಾವಲ್ಲ. ನಾವು ಭಾರತದ ಗೌರವ, ಘನತೆಯ ರಕ್ಷಕರು.” ಅವರಿಗೆ ಮಾತನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ. ಆದ್ದರಿಂದ ಎಲ್ಲಾ ಕ್ರಾಂತಿಕಾರಿಗಳು ಈ ನಾಟಕದ ವಿಚಾರಣೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಸಾರಿದರು. ಬಹುತೇಕ ಭಾರತೀಯ ವಕೀಲರೂ ಸಹ ಅಲ್ಲಿಗೆ ಹಾಜರಾಗುವುದನ್ನು ನಿಲ್ಲಿಸಿದರು. ಆದರೆ ಟ್ರಿಬ್ಯುನಲ್ ಮಾತ್ರ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತನ್ನ ಕಾರ್ಯ ಮುಂದುವರೆಸಿತು. ಎಷ್ಟಾದರೂ ಆ ಟ್ರಿಬ್ಯುನಲ್ ಸಹ ನಾಚಿಕೆಗೆಟ್ಟ ಸರ್ಕಾರದ ಭಾಗವಲ್ಲವೇ!

ಸುಳ್ಳು ಸಾಕ್ಷಿಗಳ ಆಧಾರದ ಮೇಲಿನ ತೀರ್ಪು
ಸರ್ಕಾರಿ ದಾಖಲೆ ಮತ್ತು ಸಾಕ್ಷಿಗಳು ಸುಳ್ಳೆಂದು ಸಾಬೀತಾಗಿತ್ತು. ಮೂವರು ಮುಖ್ಯ ಸರ್ಕಾರಿ ಸಾಕ್ಷಿದಾರರ ಹೇಳಿಕೆಗಳು ಒಂದಕ್ಕೊಂದು ವಿರುದ್ಧವಾಗಿದ್ದವು. ಆರೋಪಿಗಳನ್ನು ಗುರುತಿಸದೇ, ಆರೋಪಿಗಳ ಪಟ್ಟಿಯನ್ನು ತಯಾರಿಸಲಾಯಿತು. ಈ ರೀತಿ ನಡೆದದ್ದು, ಬಹುಶಃ ವಿಶ್ವದ ಇತಿಹಾಸದಲ್ಲೇ ಮೊದಲೇನೋ! ಯಾವುದೇ ಸಾಕ್ಷಿಯಿಲ್ಲದೆ, ಆಧಾರವಿಲ್ಲದೆ, ದಾಖಲೆಯಿಲ್ಲದೆ ಬ್ರಿಟಿಷ್ ನ್ಯಾಯಾಲಯ 1930ರ ಅಕ್ಟೋಬರ್ 7ರಂದು ತೀರ್ಪನ್ನು ಹೊರಹಾಕಿತು. ಭಗತ್‍ಸಿಂಗ್, ರಾಜಗುರು, ಸುಖದೇವ್‍ರಿಗೆ ಗಲ್ಲುಶಿಕ್ಷೆಯನ್ನು ವಿಧಿಸಲಾಗಿತ್ತು. ಉಳಿದವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಮೂವರನ್ನು ಮಾತ್ರ ಬಿಡುಗಡೆಗೊಳಿಸಲಾಯಿತು.

ಭಗತ್‍ಸಿಂಗ್, ರಾಜಗುರು, ಸುಖದೇವ್ ನಗುನಗುತ್ತಲೇ ಶಿಕ್ಷೆಯನ್ನು ಸ್ವೀಕರಿಸಿದರು. ಜಗತ್ತನ್ನೇ ಗೆದ್ದೆವೇನೋ ಎಂಬ ಮುಖಭಾವ ಎದ್ದು ಕಾಣುತ್ತಿತ್ತು. ಮದನ್‍ಲಾಲ್ ಧಿಂಗ್ರಾ ಹೇಳಿದಂತೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ಉತ್ತಮ ಅವಕಾಶ ತಮಗೆ ದೊರೆಯಿತೆಂದು ಕುಣಿದಾಡಿಬಿಟ್ಟರು. ಉಳಿದವರು ತಮಗೆ ಆ ಅವಕಾಶ ಸಿಗಲಿಲ್ಲವೆಂದು ನೊಂದುಕೊಂಡರು. ಎಂತಹ ದಿಟ್ಟತನ! ಎಂತಹ ಅಪ್ರತಿಮ ತ್ಯಾಗ! 
ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಉತ್ಸಾಹ
ಇಷ್ಟೊತ್ತಿಗಾಗಲೇ ಭಗತ್‍ಸಿಂಗ್ ಭಾರತದ ಯುವಜನತೆಯ ಆರಾಧ್ಯ ದೈವವಾಗಿಬಿಟ್ಟಿದ್ದರು. ಅಸಹಕಾರ ಚಳುವಳಿಯ ನಂತರ ಕ್ಷೀಣವಾಗಿದ್ದ ಸ್ವಾತಂತ್ರ್ಯ ಚಳುವಳಿಗೆ ಈ ವಿಚಾರಣೆ ಹೊಸ ಜೀವವನ್ನು ಕೊಟ್ಟಿತ್ತು. ನೇತಾಜಿಯವರು “ಇಂದು ಇಡೀ ದೇಶವನ್ನು ಆವರಿಸಿಕೊಂಡಿರುವ ಕ್ರಾಂತಿಯ ಸ್ಪೂರ್ತಿಯ ಸಂಕೇತ ಭಗತ್‍ಸಿಂಗ್. ಆ ಸ್ಫೂರ್ತಿ ಹೊತ್ತಿಸಿರುವ ಜ್ವಾಲೆ ಎಂದಿಗೂ ಆರಿಹೋಗುವುದಿಲ್ಲ,” ಎಂದು ಘೋಷಿಸಿದರು. ಯುವ ಕಾಂಗ್ರೆಸ್ಸಿಗರು, ಕಾಂಗ್ರೆಸ್ಸಿನ ಹಿರಿಯ ನಾಯಕರ ಮೇಲೆ ಒತ್ತಡವನ್ನು ಹೇರಿ “ಸಂಪೂರ್ಣ ಸ್ವರಾಜ್ಯದ ಗೊತ್ತುವಳಿ”ಯನ್ನು ಅಂಗೀಕರಿಸುವಂತೆ ಮಾಡಿದ್ದರು. ಬಂಗಾಳದಿಂದ ಪಂಜಾಬಿನವರೆಗೂ ಕ್ರಾಂತಿಕಾರಿಗಳು ಉತ್ಸಾಹದಿಂದ ಚಟುವಟಿಕೆಗಳನ್ನು ಆರಂಭಿಸಿದ್ದರು. ಭಗತ್‍ಸಿಂಗ್‍ರವರ ಯೋಜನೆ ಯಶಸ್ವಿಯಾಗಿತ್ತು.

ಶಿಕ್ಷೆಯನ್ನು ವಿರೋಧಿಸಿ ಜನತೆಯ ಆಕ್ರೋಶ
ಭಗತ್‍ಸಿಂಗ್, ರಾಜಗುರು, ಸುಖದೇವ್‍ರಿಗೆ ನೀಡಿದ ಶಿಕ್ಷೆಯನ್ನು ಕೇಳಿ ಜನತೆಗೆ ಬರಸಿಡಿಲು ಎರಗಿದಂತಾಯಿತು. ದೇಶದಾದ್ಯಂತ ಹರತಾಳ, ಪ್ರತಿಭಟನಾ ಮೆರವಣಿಗೆಗಳು ನಡೆದವು. ಪೆÇಲೀಸರ ನಿಷೇದಾಜ್ಞೆಯನ್ನೂ ಉಲ್ಲಂಘಿಸಿ, ನೂರಾರು ಪ್ರತಿಭಟನೆಗಳು ನಡೆದವು. ಪೆÇಲೀಸರ ಅಮಾನುಷವಾದ ಲಾಠಿ ಪ್ರಹಾರಕ್ಕೂ ಜಗ್ಗದೆ, ಸ್ತ್ರ್ರೀ-ಪುರುಷರೆನ್ನದೆ, ಜನತೆ ಎಲ್ಲೆಡೆ ಸಾವಿರಸಾವಿರ ಸಂಖ್ಯೆಯಲ್ಲಿ ಈ ತೀರ್ಪನ್ನು ವಿರೋಧಿಸಿದರು. ವಿದ್ಯಾರ್ಥಿಗಳು ಶಾಲಾಕಾಲೇಜುಗಳನ್ನು ತೊರೆದರು. ಲಾಹೋರಿನಲ್ಲಿ ಎರಡು ಲಕ್ಷ ಜನರ ಪ್ರತಿಭಟನಾ ಮೆರವಣಿಗೆ ನಡೆಯಿತು.


ಎಚ್.ಎಸ್.ಆರ್.ಎಯ ಇತರ ಕ್ರಾಂತಿಕಾರಿಗಳು ಇವರನ್ನು ಜೈಲಿನಿಂದ ತಪ್ಪಿಸಲು ವಿಫಲಯತ್ನ ನಡೆಸಿದರು. ತಯಾರಿಯ ಸಮಯದಲ್ಲಿಯೇ ಭಗವತೀಚರಣ್ ವೋರಾ ಮಡಿದರು. 



ದೇಶದ್ರೋಹಿಯೊಬ್ಬನ ಕಾರಣದಿಂದ ಚಂದ್ರಶೇಖರ ಆಜಾದ್ ಧೀರೋದಾತ್ತವಾಗಿ ಒಂದು ಇಡೀ ಪೆÇಲೀಸ್ ಬೆಟಾಲಿಯನ್‍ಅನ್ನು ಎದುರಿಸುತ್ತಾ, ಹುತಾತ್ಮರಾದರು. 

ಆದರೆ ಭಗತ್‍ಸಿಂಗ್‍ರಿಗೆ ತಪ್ಪಿಸಿಕೊಳ್ಳಲು ಯಾವುದೇ ಇಚ್ಛೆ ಇರಲಿಲ್ಲ. ಹಾಗಿದ್ದಲ್ಲಿ ಅಸೆಂಬ್ಲಿಯಲ್ಲಿ ಬಾಂಬ್ ಹಾಕಿದ ನಂತರ ತಪ್ಪಿಸಿಕೊಂಡು ಹೋಗಬಹುದಿತ್ತು. ಆದರೆ ಅವರಿಗೆ ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಿಂತ, ತಮ್ಮ ಜೀವತ್ಯಾಗದಿಂದ ದೇಶದಲ್ಲಾಗುವ, ಮುಖ್ಯವಾಗಿ ಯುವಜನತೆಯಲ್ಲಾಗುವ ಪರಿವರ್ತನೆ ಮುಖ್ಯವಾಗಿತ್ತು. ತಮ್ಮ ತ್ಯಾಗ-ಬಲಿದಾನಗಳಿಂದ ದೇಶದ ಸ್ವಾತಂತ್ರ್ಯವನ್ನು ತ್ವರಿತಗೊಳಿಸುವುದು ಬೇಕಿತ್ತು. ಒಂದು ಜೀವದ ಬಲಿದಾನದಿಂದ ಅಸಂಖ್ಯಾತ ಯುವಜನ ಪ್ರೇರೇಪಿತರಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕುತ್ತಾರೆ ಎಂಬುದು ಅವರ ಸದೃಢವಾದ ನಂಬಿಕೆಯಾಗಿತ್ತು. ಅವರ ನಂಬಿಕೆ ಅದೆಷ್ಟು ಸತ್ಯವಾಗಿತ್ತು ಅವರ ಬಲಿದಾನವಾದ ಕೇವಲ 16 ವರ್ಷಗಳ ನಂತರ ನಮಗೆ ಸ್ವಾತಂತ್ರ್ಯ ದೊರಕಿತು. 

(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
  - ಸುಧಾ ಜಿ      

ಅಂತರರಾಷ್ಟ್ರೀಯ ಮಹಿಳಾ ದಿನ



ಮಹಿಳಾ ದಿನ

ಮಹಿಳಾ ದಿನದಂದು
ಕೇಳಿದರು ನಮ್ಮನ್ನು
ನಿಮಗೇಕೆ ಈ ದಿನ?
ಶಿಕ್ಷಣವಿದೆ, ಉದ್ಯೋಗವಿದೆ
ಸುಖೀ ಕುಟುಂಬವಿದೆ
ಮತ್ತೇಕೆ ಈ ಆಚರಣೆ?
ಇನ್ನೇಕೆ ಈ ಪ್ರತಿಭಟನೆ?

ಉತ್ತರಿಸಿದಳು ಒಬ್ಬಾಕೆ
ನಮ್ಮೆಲ್ಲರ ಪ್ರತಿನಿಧಿಯಾಗಿ
ನಿಜ, ನೀವು ಹೇಳುತ್ತಿರುವುದು
ಅಕ್ಕರೆಯ ತಂದೆ ಕೊಡಿಸಿದ ಶಿಕ್ಷಣ
ಸ್ವಸಾಮರ್ಥ್ಯದಿಂದ ಪಡೆದ ಉದ್ಯೋಗ
ಪ್ರೀತಿಯಿಂದ ಗೌರವಿಸುವ ಸಂಗಾತಿ
ಮಮತೆದಿಂದ ಕಾಣುವ ಸ್ನೇಹಿತರು
ಎಲ್ಲವೂ, ಎಲ್ಲರೂ ಇದ್ದಾರೆ ನಿಜ;


ಆದರೂ ಸಮಾಜದಲ್ಲಿ ನಮಗೆ ನಿಜ ಸಮಾನತೆ ಇದೆಯೇ?
ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆಯೇ?
ಆಕಾಶಕ್ಕೇರುವ ಕನಸುಗಳ ನನಸಾಗಿಸಲು ಆಗಿದೆಯೇ?
ವಿಭಿನ್ನ ರಂಗಗಳಲ್ಲಿ ಸಾಮರ್ಥ್ಯ ತೋರಿಸುವ ಅವಕಾಶವಿದೆಯೇ?
ನಿರ್ಭಯವಾಗಿ ಹೊರಗಡೆ ಓಡಾಡುವ ವಾತಾವರಣವಿದೆಯೇ?
ಕಛೇರಿಯಲಿ ವಕ್ರನೋಟಗಳ ಹಾವಳಿಯಿಂದ ಮುಕ್ತಿಯಿದೆಯೇ?
ಬೀದಿಕಾಮಣ್ಣರ ಕಾಟದಿಂದ ವಿಮುಕ್ತಿಯಿದೆಯೇ?

ಇಷ್ಟು ಮಾತ್ರವಲ್ಲ
ಈ ದಿನದ ಆಚರಣೆಗೆ
ಇದೆ ಇನ್ನೊಂದು ದೊಡ್ಡ ಕಾರಣ -


ನಮಗಿರುವುದೆಲ್ಲವೂ
ನಮ್ಮೆಲ್ಲ ಸೋದರಿಯರಿಗೆ ಸಿಕ್ಕಿದೆಯೇ?
ಶಿಕ್ಷಣ, ಕೆಲಸ, ಸ್ಥಾನಮಾನ ದೊರೆತಿದೆಯೇ?
ಕುಡುಕ ಗಂಡನಿಂದ, ಅವನ ಹೊಡೆತಗಳಿಂದ ಮುಕ್ತಿ ಪಡೆದಿರುವಳೇ?
ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಾವು ನಿಂತಿದೆಯೇ?
ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತಿಹಳೇ?
ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆಯೇ?
ಹೆಣ್ಣುಭ್ರೂಣವೆಂದಾಗ ಉಳಿಸಿಕೊಳ್ಳುವ ಅಧಿಕಾವಿದೆಯೇ?

ಅವರಿಗಾಗಿ ದನಿ ಎತ್ತದಿದ್ದರೆ
ನಮ್ಮ ಶಿಕ್ಷಣದ ಉಪಯೋಗವೇನು ?
ಅವರಿಗಿಲ್ಲದ್ದು ನಮಗೆ ದೊರೆತರೆ
ಸಮಾಜಕ್ಕೆ ಪ್ರಯೋಜನವೇನು?
ಬೆಸೆದಿದೆ ನಮ್ಮೆಲ್ಲರ ಬಾಳು
ಒಂದೇ ವಸ್ತ್ರದ ಎಳೆಗಳ ತೆರದಿ
ವಿಮುಕ್ತಿ ದೊರೆವುದು ಕೇಳು
ಎಲ್ಲರಿಗೂ, ಒಟ್ಟಿಗೆ, ಒಂದೇ ಸಮಯದಿ
ಬಟ್ಟೆಯ ಪ್ರತಿ ನೂಲು
ಗಟ್ಟಿಗೊಳ್ಳಲೇಬೇಕು
ಅದುವರೆಗೂ ಹೋರಾಟ
ಸಾಗುತ್ತಿರಲೇಬೇಕು! !

             


- ಸುಧಾ ಜಿ       

ಕವನ - ಎದ್ದೇಳು ಫೀನಿಕ್ಸ್ ಪಕ್ಷಿಯಂತೆ


ಗೆಳತಿ ಹೇಳಿದೆ ನೀನು
ವಿವಾಹವಾದ ಮೇಲೆ
ಬದಲಿಸಿದೆ ಹೆಸರನ್ನು
ಮರೆತೆ ಗೆಳತಿಯರನ್ನು
ದೂರಸರಿಸಿದೆ ತಾಯ್ತಂದೆಯರನ್ನು
ತೊರೆದೆ ಆಸೆಆಕಾಂಕ್ಷೆಗಳನ್ನು
ಕಳೆದುಕೊಂಡೆ ಅಸ್ತಿತ್ವವನ್ನೇ ಎಂದು.

ಕೇಳುತ್ತಿರುವೆ ನಾ ಗೆಳತಿ
ಅನ್ಯಮಾರ್ಗವಿರಲಿಲ್ಲವೇ ಸಖಿ?
ಅಂಗೀಕರಿಸಿದೆ ಏಕೆ ಬದಲಿಸಲು ಹೆಸರ?
ಒಪ್ಪಿದೆ ಏಕೆ ಮರೆಯಲು  ಗೆಳತಿಯರ?
ಅನುಮೋದಿಸಿದ್ದೇಕೆ ಸರಿಸಲು ಹೆತ್ತವರ?
ಸಮ್ಮತಿಸಿದ್ದೇಕೆ ತೊರೆಯಲು ಮನಸಿನಾಸೆಗಳ?
ಕಳೆದುಕೊಳ್ಳುತ್ತಿರುವಾಗ ಅಸ್ತಿತ್ವವನ್ನೇ
ಮೌನವಾಗಿ ತಳ್ಳಿದ್ದೇಕೆ ಭಾವನೆಗಳನ್ನೇ?

ಗೆಳತಿ ಕಾಲ ಮಿಂಚಿಲ್ಲವಿನ್ನೂ
ಗೋರಿಗೆ ಕಾಲಿಡುವ ಮುನ್ನ
ಮತ್ತೆ ಎದ್ದುನಿಲ್ಲುವ ಅವಕಾಶವಿದೆ
ಇನ್ನೂ ಸಾಧಿಸಲು ಸಮಯವಿದೆ
ಉಳಿಸಿಕೊಳ್ಳಲು ಹೆಸರ
ಆರಿಸಿಕೊಳ್ಳಲು ಗೆಳತಿಯರ
ನೋಡಿಕೊಳ್ಳಲು ತಾಯ್ತಂದೆಯರ
ಕೈಗೊಳ್ಳಲೊಂದು ವೃತ್ತಿಯ
ಕೈಬಿಡದಿರಲು ಆಸೆಯ
ಮರಸ್ಥಾಪಿಸಲು ಮರೆತ ಅಸ್ತಿತ್ವವ
ಬೆಳೆಸಿಕೊಳ್ಳಲು ನಮ್ಮ ವ್ಯಕ್ತಿತ್ವವ

ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!!
- ಸುಧಾ ಜಿ    

ಕವನ - ಇರಲಿ ಪೂರ್ತಿ ಹರುಷ



(ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬರೆದಿರುವುದು)  

ಯಾರಿಗೆ ಬೇಕು?
ಯಾತಕೆ ಬೇಕು?
ಈ ಒಂದು ದಿನದ ಸಂತೋಷ?
ವರುಷ ಪೂರ್ತಿಯೂ
ಸಿಗದೇ ಇರುವ
ದಿನನಿತ್ಯವೂ
ಕಾಣದೇ ಹೋಗುವ
ಸಂಭ್ರಮದ ಸಂತೋಷ.

ಬರಲಿ ನಮಗೆ
ಮನ ತುಂಬುವ
ನಿತ್ಯ ಸಂತೋಷ
ಸಿಗಲಿ ನಮಗೆ
ಪ್ರತಿ ದಿನವೂ
ಖುಷಿ ಹರುಷ


- ಶೀಬಾ.

ಅನುವಾದಿತ ಕವಿತೆ - ಝರಿ





(Alfred Tennyson ರವರ  THE BROOK ಕವನ)

ಪೊದೆಯಿಂದೆಡ ತಾಕುವ ಜಲಪಕ್ಷಿಯ ತೆರದೊಳು,
ನಾನೊಮ್ಮೆಯೆ ನಪಾತ ಮಾಡುತ ಬರುತಿಹೆನು.
ಥಳಥಳಿಸುತ ಜುಣುಜುಣುಗುತ ಮೇಲಿನ ಪೊದೆಯೊಳು
ಕಣಿವೆಯನತಿವೇಗದಿ ಸೇರಲು ಬರುತಿಹೆನು|| ....1

ಗಿರಿಗಳು ಮುವ್ವತ್ತು ಭರದಲಿ ಇಳಿಯುವೆ
ಗಿರಿಶಿಖರದ ನಡುವೆಯೊಳ್ಜಾರುವೆನು.
ಹಳ್ಳೀಯಿಪ್ಪತೋದೇ ನಗರವ ದಾಟುವೆನು,
ಮತ್ತೊಂದೈವತ್ಸೇತುವೆಯಲಿ ನಾ ತೂರುವೆನು|| ....2

ಮಾದೇಗೌಡನ ಬಯಳೊಳು ಹರಿಯುತ,
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನ್ವರತಾ ನಾ ಹರಿಯುವೆನು||....3

ಮುಮ್ಮಡೆ ವೇಗದಿ ಹರಿಯುತಲೊಂಂಎ 
ನಿನಾದಗೈಯುವೆ, ಕಲ್ಲಿನೊಳು.
ಬುದ್ಬುದಗೈಯುವೆ ಕೊಲ್ಲಿಯ ಸುಳಿಯೊಳ್-
ಗುಗುಳ ನಾದವ ಬೆಣಚಿನೊಳು||  .....4

ಸವೆಸುವೆ ಬಾಗಿದ ತೀರವ ಕೊರೆಯುತ;
ಉಳುಮೆಯ ಬಯಲಲಿ ಹರಿಯುವೆನು.
ಮೋಹಿನಿ ನೆಲೆಸಿಹ ನಾಡಿನ ಕಳೆಯನು
ನಯವಾಗರಿಯುತ ತೊಳೆಯುವೆನು||....5

ಜುಳುಜುಳು ನಾದದಿ ಮೊರೆಯುತ ಹರಿವೆನು
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....6

ಸುತ್ತುವೆ ಒಳಗಡೆ, ಸುತ್ತುವೆನೊರಗಡೆ
ವಿಕಸಿಸುತಾ ನಾ ತೇಲುವೆನು.
ಅಲ್ಲಲ್ಲಿರುತಿಹ ಕೊಬ್ಬಿದ ಮೀನ್ಗಳ
ಉಲ್ಲಾಸದಾಟ ನೋಡುವೆನು||   .....7

ಪಯಣದ ವೇಳೆಯೊಳ್ ತೆಳಪೊರೆಯಾಗಿ,
ಬಿಳಿನೊರೆ ತೇಲುವುದಲ್ಲಲ್ಲಿ;
ಥಳಥಳ ಹೊಳೆಯುವ ಜಲ್ಲಿಯು ಬಾಗಿ
ಅಳುವೆಯೊ? ಜೊನ್ನದ ರೀತಿಯಲಿ:-||  ....8

ಕೊಚ್ಚುವೆನೆಲ್ಲವ, ಜೊತೆಯೊಳು ಹರಿಯುತ
ಕಡೆಯೊಳು ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....9

ಹರಿಯುವೆ, ಅರಿಯದೆ ಹಸುರಿನ ಬಯಲಿಗೆ;
ಜಿನುಗುವೆ ಮಂಜಿನ ಮುಸುಕಿನೊಳು;
ಪ್ರೇಯಸಿಯೊಂದಿಗೆ ನಲ್ಲನ ನಲವಿಗೆ
ಚಲಿಸುವೆ, ಬೆಳೆದಿಹ ಹಸುರಿನೊಳು.||  ....10

ಜಾರುವೆ, ಜಿನುಗುವೆ, ಮಬ್ಬಿನೊಳ್ ಮಿಣುಕುವೆ;
ಕಟ್ಟಿಹ ನೊರೆಯನು ಕರಗಿಸುವೆ.
ಕಿರಣದಿ ಹೊಳೆಯುವ ಮರಳಿನ ಗುಡ್ಡೆಯ
ಎದುರಲಿ, ಬಲೆಯೊಳು ನರ್ತಿಸುವೆ||.....11

ಬಾನಿನ ಚಂದಿಅರ ತಾರೆಯ ತಳದಲಿ;
ಅಡವಿಯೊಳ್ ಕಲರವಗೈಯುವೆನು.
ಕಲ್ಲರಳಡ್ಡಿಯ ಬಿಡಿಸಲು, ಬೆಳೆಯುತ
ತುದಿಯಲೆ ಸುತ್ತುತಲಲೆಯುವೆನು||   ....12

ಕಡೆಯಲಿ ಹೊರಳುತ ಬಾಗುತ ಹರಿಯುತ
ಕಡೆಯೊಳು, ನದಿಯನು ಸೇರುವೆನು.
ಜನತೆಯು ಬರುವುದು, ಜನತೆಯು ನಡೆವುದು
ಅನವರತಾ ನಾ ಹರಿಯುವೆನು||....13

(ಅನುವಾದ  - ಗಂಗಾಧರಯ್ಯ ಜಿ)
  
  
                                ಬ್ರಿಟಿಷ್ ಕವಿ ಆಲ್ಫ್ರೆಡ್ ಟೆನ್ನಿಸನ್     

ನಾಟಕ - ಧನಿಯರ ಸತ್ಯನಾರಾಯಣ

                                    
                                                                                                                                                                      (ಕೊರಡ್ಕಲ್ ಶ್ರೀನಿವಾಸರಾವ್ ರವರ "ಧನಿಯರ ಸತ್ಯನಾರಾಯಣ" ಎಂಬ ಕಥೆಯನ್ನು ನಾಟಕ ರೂಪದಲ್ಲಿ ನೀಡುತ್ತಿದ್ದೇವೆ. ನಾಟಕದ ರೂಪಕ್ಕಿಳಿಸಿದವರು ಸುಧಾ ಜಿ)

ಆರು ವರ್ಷದ ಹುಡುಗ. ಬಾಳೆಯ ಕಂದು ಹೊತ್ತು ಕಷ್ಟಪಟ್ಟು ತರುತ್ತಿದ್ದಾನೆ. ಹೊರಲಾರದ ಹೊರೆ. ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ವರ್ಗಾಯಿಸುತ್ತಿದ್ದಾನೆ. ಬೆವರುತ್ತಿದ್ದಾನೆ. ಬಿಗಿಯಾಗಿ ಹಿಡಿದರೆ ಜಜ್ಜಿಹೋಗುತ್ತದೇನೊ, ಸಡಿಲವಾಗಿ ಹಿಡಿದರೆ ಜಾರಿ ಬಿದ್ದು ಸುಳಿ ಮುರಿಯುತ್ತದೇನೊ ಎಂದು ಜಾಗರೂಕತೆಯಿಂದ ಹಿಡಿದಿದ್ದಾನೆ.
ತಾಯಿ: ಹೀಗೆ ಹಿಂದೆ ಬಿದ್ದರೆ ಮನೆ ಯಾವಾಗ ಸೇರುವುದು? ಹೊತ್ತು ಇಳಿಯುವುದೂ ಕಾಣುವುದಿಲ್ಲವೇ? ಬೇಡಾ ಬೇಡಾ ಅಂದ್ರೂ ಕೇಳದೆ ಹೊತ್ತೆ. ಯಾವ ಕರ್ಮಕ್ಕೆ ಅದು. ತೆಗೆದತ್ತ ಒಗೆ. ಬೇಗ ಮುಂದೆ ಬಂದರೆ ಸರಿ. ಇಲ್ಲದಿದ್ದರೆ ನಾನೇ ಅದನ್ನು ಎಳೆದು ಬಿಸಾಡುತ್ತೇನೆ. (ಅವಳ ಕೈಯಲ್ಲೂ ತಾಯಿ ಮನೆಯಿಂದ ತಂದ ಸಾಮಾನು, ಕಂಕುಳಲ್ಲಿ ಒಂದು ಮಗು ಇದೆ).
ಬೂದ: ಇಲ್ಲಮ್ಮಾ ಭಾರ ಏನಿಲ್ಲ. ನೋಡು, ಬೇಗ ಬೇಗ ಬರ್ತಾ ಇದ್ದೀನಿ. 
ತುಕ್ರಿ: ಅಣ್ಣ ಇಲ್ಲಿ ಕೊಡು (ಸ್ವಲ್ಪ ದೂರ ತಾನು ಕಷ್ಟಪಟ್ಟು ಹೊರುವಳು.)
ಬೂದ: ಅಮ್ಮಾ, ಅಜ್ಜಿ ಹೇಳಿದ್ದಾಳೆ. ಇದನ್ನು ನೆಟ್ಟರೆ ಬಾಳೆಹಣ್ಣು ಗೊನೆ ಸಿಗುತ್ತದಂತಮ್ಮಾ. (ತಾಯಿ ಏನೂ ಮಾತನಾಡದೆ ಸುಮ್ಮನೆ ನಡೆಯುತ್ತಿದ್ದಾಳೆ).
ತುಕ್ರಿ: ಅಮ್ಮಾ, ಅಜ್ಜಿ ಕೊಟ್ಟ ಬಾಳೆಹಣ್ಣು ಎಷ್ಟು ಚೆನ್ನಾಗಿತ್ತು. ನಾಕೇ ನಾಕು ನಂಗೆರಡು, ಅಣ್ಣನಿಗೆರಡು. ಗೊನೇಪೂರ್ತಿ ಆ ಕಾಡ, ನಾಗಿ ತಿಂದುಬಿಟ್ರಂತೆ. ಅದಕ್ಕೆ ಮಾವ ಇದನ್ನು ಕೊಟ್ಟದ್ದು.
ತಾಯಿ: ಸರಿ ಸರೆ, ಬೇಗ ಬೇಗ ನಡೀರಿ. ಬಾಳೆಹಣ್ಣು ಬಿಟ್ರೆ ನಂಗೂ ಸಂತೋಷನೇ. (ಮಕ್ಕಳ ಬಯಕೆಗೆ ತಾಯಿ ಇಲ್ಲವೆನ್ನಲಾರಳು)
ಮನೆ ತಲುಪಿದ ತಕ್ಷಣ ಅಪ್ಪನನ್ನು ಸಮೀಪಿಸಿದ ಮಕ್ಕಳು
ತುಕ್ರಿ: ಅಪ್ಪಾ ನೋಡಿಲ್ಲಿ ನಾವೇನು ತಂದಿದ್ದೀವಿ?
ತೌಡ: ಏನ್ರೋ ಅದು?
ಬೂದ: ಬಾಳೆ ಕಂದು ಅಪ್ಪಾ.
ತೌಡ: ಯಾಕ್ರೋ?
ತುಕ್ರಿ: ಅಪ್ಪಾ ಇದನ್ನು ನೆಟ್ರೆ ನಮಗೆ ಬೇಕಾದಷ್ಟು ಬಾಳೆಹಣ್ಣು ಸಿಗುತ್ತಂತಪ್ಪಾ.
ತೌಡ : ಇದನ್ನಿಲ್ಲಿ ನೆಟ್ರೆ ಧನಿಗಳ ದನಗಳು ನುಗ್ಗೋದಿಲ್ವೇನ್ರೋ. ಅದನ್ನ ನಾವು ಓಡಿಸೋಕಾಗುತ್ತಾ? ಬೇಡ ಬಿಡ್ರೋ.
ತುಕ್ರಿ : ಅಪ್ಪಾ ಅಪ್ಪಾ ಬಾಳೆಹಣ್ಣೂ ಅಪ್ಪಾ.
ತೌಡ : (ಮಕ್ಕಳ ಬಯಕೆ ತೀರಿಸಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ, ಸಿಟ್ಟಿನಿಂದ ಏ ಬೇಡ ಅಂತಾ ಒಂದ್ಸಾರಿ ಹೇಳದ್ರೆ ಕೇಳ್ಬೇಕು. ಇಷ್ಟು ದಿನ ಇಲ್ಲೇನಾದ್ರೂ ನೆಟ್ಟಿದ್ವಾ? ನೆಟ್ಟಿದ್ರೂ ಉಳ್ಕೊಂದೈತಾ?
ತಾಯಿ: ಏನೋ ಪಾಪ ಮಕ್ಕಳು ಅಷ್ಟು ಆಸೆ ಪಡ್ತಾ ಇದ್ದಾವೆ. ನಮಗಂತೂ ಬಾಳೆಹಣ್ಣು ಕೊಂಡ್ಕೊಡೋಕೆ ಆಗಲ್ಲ. ಆ ಕಟ್ಟಿಗೆ ಸುತ್ತ ಕಟ್ಟಿ ಒಂಚೂರು ನೆಟ್ಕೊಡಿ.
ತೌಡ : ಆ ಕಟ್ಟಿಗೆ ಒಲೆ ಉರಿಸೋಕೆ ಬೇಡ್ವಾ?
ತಾಯಿ: ಹೇಗೊ ಮಾಡ್ಕೊಂಡ್ರಾಯ್ತು. ಅವಕ್ಕೆ ಯಾಕೆ ನಿರಾಸೆ, ಮಾಡ್ಕಡಿ.
ತೌಡ : ಸರಿ, ಅದನ್ನು ಅಲ್ಲಿ ಇಡ್ರೊ. ಬೆಳಗ್ಗೆ ಎದ್ದು ನೆಟ್ಕೊಡೀನಿ.

ಮಾರನೆ ದಿನ ತೌಡ ಬಾಳೆಕಂದು ನೆಡುತ್ತಾನೆ. ಮಕ್ಕಳು ಸಂತೋಷದಿಂದ ದಿನಾ ಬೆಳಗಾದರೆ ಅದನ್ನು ಮೊದಲು ನೋಡಲು ಬರುತ್ತಾರೆ. ಕೆರೆಯಿಂದ ನೀರು ಹೊತ್ತು ತಂದು ಆರೈಕೆ ಮಾಡುತ್ತಾರೆ. ಅದರೊಂದಿಗೆ ಆ ಮಕ್ಕಳ ಬೆವರೆಷ್ಟು ಸುರಿದಿತ್ತೋ, ಗಿಡ ಬೆಳೆಯಿತು. ಹೂವು ಬಿಟ್ಟಿತು. ಬೆರಳು ಬಿಟ್ಟಿತು. ಬೆರಳುಗಳು ಬಲಿತ ತೋರಕಾಯಿಗಳಾದವು, ಹಣ್ಣುಗಳಾಗುವುದನ್ನು ಎಲ್ಲರೂ ಕಾಯುತ್ತಿದ್ದರು. 
ಬೂದ : (ಗಿಡವನ್ನು ನೋಡುತ್ತಾ) ಅಮ್ಮಾ ಬಾಳೆ ಹಣ್ಣಾಗೋದು ಯಾವಾಗಮ್ಮಾ?
ತಾಯಿ: ಇನ್ನೆರಡು ದಿನ ತಡೀ ಮಗಾ. ಹಣ್ಣು ತಿನ್ನೋವ್ರಂತೆ. 
(ಬೂದ, ತುಕ್ರಿ, ದೂಮ ಖುಷಿಯಿಂದ ಕುಣಿಯಲಾರಂಭಿಸುವರು. ಅಷ್ಟರಲ್ಲಿ ಧಣಿಗಳು ಕಾಣಿಸಿಕೊಳ್ಳುವರು. ತಾಯಿ ಮಕ್ಕಳನ್ನು ಕರೆದುಕೊಂಡು ಒಳಹೋಗುವಳು).
ಧಣಿ : ತೌಡ , ಆ ಗೇಣಿ ಬಾಕಿ ಎರಡು ರೂಪಾಯಿ ಯಾವಾಗ ಕೊಡೋದು? ಅದೇನು ನಿನ್ನ ತೋಟವೆಂದು ಕೊಂಡಿದ್ದೀಯಾ?
ತೌಡ : (ದೀನತೆಯಿಂದ) ಈ ಮಳೆಗಾಲ ಸಾಗಲಿ, ಕಬ್ಬು ಹೂಡುವ ಕಾಲದಲ್ಲಿ ಹೇಗಾದರೂ ದುಡಿದು ಉಳಿಸಿ ಕೊಡುತ್ತೇನೆ ಧಣಿ.
ಧಣಿ : (ಕೋಪದಿಂದ) ಯಾವಾಗ ಕೇಳಿದರೂ ಇಂದಿಲ್ಲ ಮುಂದೆ ಎಂದೆನ್ನುವ ನಿನ್ನ ರೋಗ ಇದ್ದದ್ದೇ. ಆ! ಪರ್ವಾಗಿಲ್ವೆ (ಬಾಳೆಗಿಡದ ಕಡೆ ನೋಡಿ) ಒಳ್ಳೆ ಗೊನೇನೆ ಬಿಟ್ಟಿದೆ.
ತೌಡ : ಹೌದು ಧಣಿ. ಮಕ್ಕಳು ಆಸೆಯಿಂದ ನೆಟ್ಕಂಡವ್ರೆ.
ಧಣಿ: ಒಳ್ಳೇದು. ಒಳ್ಳೇದು. ನಾಡಿದ್ದು ಹುಣ್ಣೀಮೆ. ನಮ್ಮಲ್ಲಿ ಸತ್ಯನಾರಾಯಣ ಪೂಜೆ ಇದೆ. ನಾಳೆಯೇ ಕಡಿದಿಟ್ಟರೆ ನಾಡಿದ್ದಿಗೆ ಹಣ್ಣಾಗುತ್ತೆ. ಹುಣ್ಣಿಮೆ ಬೆಳಿಗ್ಗೆ ತಂದ್ಕೊಟ್ಟುಬಿಡು. ತಿಳಿತಾ?
ತೌಡ : (ಬರಸಿಡಿಲು ಬಡಿದವನಂತೆ) ಆ!
ಧಣಿ : ಯಾಕೊ ಹೇಳಿದ್ದು ಅರ್ಥಾ ಆಗಿಲ್ವಾ?
ತೌಡ : (ಅಂಜುತ್ತಾ) ಮಕ್ಕಳು ಆಸೆಯಿಂದ ಬೆಳೆಸಿದ್ದು. ಕೆಳಗಿನ ಒಂದೆರಡು ಚಿಪ್ಪಾದರೂ ಮಕ್ಕಳಿಗೆ............
ಧಣಿ: ಮಕ್ಕಳಿಗೆ ರಸಬಾಳೆ ಹಣ್ಣೊ, ಮಣ್ಣೊ! ದೇವರ ಬಾಯಿಗೆ ಬೀಳಲಿ! ಮಕ್ಕಳ ಮೈಕೈಗೆ ಸುಖ ಕೊಡುತ್ತಾನೆ. ಅದು ಬಿಟ್ಟು ಹೀಗೆಲ್ಲ ಮಾಡೋದ್ರಿಂದ್ಲೆ ನಿತ್ಯ ದರಿದ್ರ ತಪ್ಪೋಲ್ಲ ನಿಮಗೆ. (ಹೊರಡುತ್ತ) ನೆನಪಿದೆ ತಾನೆ ನಾಡಿದ್ದು...
ಮರುದಿನ ತೌಡ ಗೊನೆ ಕಡಿದ. ಮಕ್ಕಳು ಸಂತೋಷದಿಂದ ಕುಣಿದರು. ಹೆಂಡತಿಗೆ ಮಾತ್ರ ವಿಷಯ ತಿಳಿಸಿದ್ದ ತೌಡ. ಒಂದು ಗೋಣಿಚೀಲಕ್ಕೆ ಹಾಕಿದ್ದ. ಹಣ್ಣಾದಾಗ ನೋಡೋಣ ಎಂದು ಅವರಿಗೆ ಹೇಳಿದ್ದ. 
ಹುಣ್ಣಿಮೆಯ ದಿನ. ಬೂದ ಎದ್ದು ಬಂದು ಬಾಳೆಗೊನೆ ಇಟ್ಟಿದ್ದ ಜಾಗ ನೋಡಿ ಗಾಬರಿಯಿಂದ 
ಬೂದ : ಅಮ್ಮ, ಅಮ್ಮಾ ಬಾಳೆಗೊನೆ ಎಲ್ಲಮ್ಮಾ ಕಾಣ್ತಾನೇ ಇಲ್ಲ. 
ತುಕ್ರಿ : ಅಮ್ಮಾ ಎಲ್ಲೋಯ್ತಮ್ಮಾ?
ತಾಯಿ : (ದುಃಖವನ್ನು ಮರೆಮಾಚಿ) ಆ ಕಾಳಬೆಕ್ಕು ಬಂದು ತಿಂದೋಯ್ತು.
ದೂಮ: ಆ ಕಾಳ ... ಬೆಕ್ಕು.. ಸತ್ತೇ ಹೋಗ್ಲಿ.
(ಮೂವರು ದುಃಖ ತಡೆಯಲಾರದೆ ಅಳತೊಡಗಿದರು)
ಬೂದ /ತುಕ್ರಿ : ಅಮ್ಮಾ ನಿಜ ಹೇಳಮ್ಮ. ಬೆಕ್ಕು ಬಾಳೆಹಣ್ಣು ಎಲ್ಲಮ್ಮ ತಿನ್ನುತ್ತೆ. ಗೊನೆ ಹೇಗಮ್ಮಾ ಹೊತ್ಕೊಂಡು ಹೋಯ್ತು?
ತಾಯಿ: ಧಣಿಯೋರ ಮನೇಲಿ ಸತ್ಯನಾರಾಯಣ ಪೂಜೆಯಂತೆ. ಅವರು ಕೇಳಿದ್ರಂತೆ ಅಪ್ಪಾ ತಕೊಂಡು ಹೋದ್ರು.
ಬೂದ : ಅಮ್ಮಾ ದೇವ್ರು ಬಾಳೆಹಣ್ಣು ತಿನ್ನುತ್ತಾರಾ? 
ತುಕ್ರಿ : ಅಷ್ಟೂ ತಿಂತಾರಾ ಅಮ್ಮಾ ದೇವ್ರು?
ತಾಯಿ : ಹೋಗ್ಲಿ ಬಿಡಿ. ಇನ್ನೂ 2 – 3 ಕಂದುಗಳಿವೆ. ಯಾವುದಾದರೊಂದು ಬೇಗ ದೊಡ್ಡದಾಗಿ ಗೊನೆ ಹಾಕುತ್ತೆ. ಅದು ಪೂರಾ ನಿಮಗೆ. 
(ಅವರ ಅಳುಮೊರೆ ನೋಡಲಾರದೆ ಒಳಗೆ ಹೋದಳು).
ಬೂದ, ತುಕ್ರಿ ಸ್ವಲ್ಪ ಹೊತ್ತು ಅಲ್ಲಿಯೇ ಅಳುತ್ತಾ ಕುಳಿತರು. ಇದ್ದಕ್ಕಿದ್ದಂತೆ
ಬೂದ : ಬಾ ತುಕ್ರಿ, (ಬಾಳೆಕಂದುಗಳಿರುವತ್ತ ಓಡಿದ. ತುಕ್ರಿ ಅವನನ್ನು ಹಿಂಬಾಲಿಸಿದಳು. ಬೂದ ಬಾಳೆಕಂದುಗಳನ್ನು ಮುರಿಯುತ್ತಾ ಅಳುತ್ತಾ) ಇ ಇ ಇ ಇವು ಗೊನೇ ಹಾಕೋದೂ ಬೇಡಾ! ಆ ಆ ಆ ಸತ್ ನಾರ್ಣಾ..... ತಿತಿತ್ತಿನೋದು ಬೇಡಾ. (ಸೀಳಿ ಮುರಿದು ಹಾಕಿ ಅವುಗಳ ಮೇಲೆ ನರ್ತನ ಮಾಡುತ್ತಿದ್ದಾನೆ. ಅಲ್ಲೆಲ್ಲಾ ಕೆಸರೇಳುತ್ತಿದೆ. ತುಕ್ರಿಯೂ ಕುಣಿಯುತ್ತಿದ್ದಾಳೆ. ಎಂತಹ ಆವೇಶ! ಅದೆಂತಹ ನೃತ್ಯ! 
   - ಕೊರಡ್ಕಲ್ ಶ್ರೀನಿವಾಸರಾವ್

ಅನುಭವ - ಎನ್ ಎಸ್ ಎಸ್ ಕ್ಯಾಂಪ್



ಪ್ರಿಯ ಗೆಳೆಯರೆ, ನಾವು ಸಮಾಜ ಕಾರ್ಯ ವಿಭಾಗದಿಂದ ಪ್ರತಿ ವರ್ಷ ಹಳ್ಳಿಗಳಲ್ಲಿ ಸೇವಾ ಶಿಬಿರ ಹಮ್ಮಿಕೊಳ್ಳುತ್ತೇವೆ. 23/2/2017- 3/3/2017 ವರೆಗೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಟೈಗರ್ ರಿಸರ್ವ್ ನಡುವೆ ಇರುವ ಸೋಲಿಗರ ಪೋಡು ಬೆಡಗುಲಿಯಲ್ಲಿ ನಡೆಯಿತು. ಈ ಊರಿಗೆ ಇರುವುದೇ ಎರಡು ಖಾಸಗಿ ಬಸ್ ಗಳು. ಮಧ್ಯಾಹ್ನ ೧-೩೦ ಮತ್ತು ೨-೩೦ ಕ್ಕೆ.  ಎರಡೂ ಬಸ್ ಗಳು ರಾತ್ರಿ ಬೆಡಗುಲಿಯಲ್ಲಿಯೇ ಉಳಿದು ಮರುದಿನ ಹಿಂದಿರುಗುತ್ತವೆ. ಟೈಗರ್ ರಿಸರ್ವ್ ಆಗಿರುವುದರಿಂದ 
ಅರಣ್ಯ ಇಲಾಖೆಯ ಅನುಮತಿಯಿಲ್ಲದೆ ಯಾವುದೇ ಖಾಸಗಿ ವಾಹನಗಳು ಸಂಚರಿಸುವಂತಿಲ್ಲ. ಮತ್ತು ರಾತ್ರಿ ೬-೦೦ ರಿಂದ ಬೆಳಿಗ್ಗೆ ೬-೦೦ರವರೆಗೆ ಯಾವ ವಾಹನಗಳು ಸಂಚರಿಸುವಂತಿಲ್ಲ.
ಈ ಬಾರಿಯ ಶಿಬಿರ ಒಂದು ಮರೆಯಲಾರದ ಅನುಭವ. ನಿಮ್ಮೆಲ್ಲರೊಡನೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ. ಬೆಡಗುಳಿಗೆ ತೆರಳಲು ನಮಗೆ ಈ ಬಾರಿ ಕಾಲೇಜಿನ ವಾಹನ ತೆಗೆದುಕೊಂಡು ಹೋಗಲು ಪರವಾನಗಿ ಇರಲಿಲ್ಲ. ಹುಡುಗರನ್ನು 23ರಂದು ಕಳುಹಿಸಿದ್ದೆವು. ಅವರು ಪ್ರಯಾಣ ಕಷ್ಟವಾಗಿತ್ತು, ತುಂಬಾ ರಷ್ ಇತ್ತು ಎಂದು ತಿಳಿಸಿ, ಖಾಸಗಿ ಬಸ್ ಮಾಲೀಕರಾದ ಫರೂಖ್ ಅವರ ನಂಬರ್ ಕೊಟ್ಟು, ಸಾಧ್ಯವಾದರೆ ಸೀಟ್ ರಿಸರ್ವ್ ಮಾಡಿಸಿಕೊಳ್ಳಿ ಎಂದು ಸೂಚನೆ ಕೊಟ್ಟರು. ಅಂತೆಯೇ ನಾವು, ಬಸ್ ಮಾಲೀಕರೆಗೆ ಫೋನಾಯಿಸಿ ನಾವು 15 -ಜನ - 13 ಹುಡುಗಿಯರು, ನಾನು ಮತ್ತು ಪ್ರೇಮಜ್ಯೋತಿ ಬಸ್ ಹತ್ತಿ ಸೀಟ್ ಪಡೆದು ನಿಟ್ಟುಸಿರಿಟ್ಟೆವು.  ಬಸ್ ಪುಣಜನೂರು ದಾಟಿ ಬೆಟ್ಟ ಅರ್ಧ ಹತ್ತಿತ್ತು. ಕಾಡಿಗೆ ಬೆಂಕಿ ಬಿದ್ದಿದ್ದರಿಂದ ಮುಂದೆ ಹೋಗಲಾಗದು ಎಂದು ಅರಣ್ಯ ಇಲಾಖೆ ಜೀಪ್ ನಮ್ಮ ಬಸ್ ನಿಲ್ಲಿಸಿತು. ಇಳಿದು ನೋಡಿದೆ. ಬೆಂಕಿ ಶಬ್ದ ಕಿವಿಗೆ ಅಡಚುತ್ತಿದೆ! 2 ಕಿಮಿ ಬಸ್ ರಿವರ್ಸ್ ಬಂದು ನಿಂತಿತು. ನಂತರ ಪುಣಜನೂರು ಗೇಟ್ ಬಳಿ ಕಾಯುತ್ತಾ ನಿಂತೆವು. 7 ಗಂಟೆ ಹೊತ್ತಿಗೆ, ಬಸ್ ಡ್ರೈವರ್ ಎಲ್ಲರಿಗೂ ಟೀ ತಂದು ಕೊಟ್ಟರು. ರಾತ್ರಿ 9 ಗಂಟೆಗೆ ಬಸ್ ಬಿಡುವುದಿಲ್ಲ ಅಂತ ತಿಳಿಯಿತು. ನಮ್ಮ ಪರಿಸ್ಥಿತಿ ದೇವರಿಗೇ "ಪ್ರೀತಿ" ಶಿವರಾತ್ರಿಯ ಆ ರಾತ್ರಿ ಮರೆಯಲಾಗದು. ಅತ್ತ ಬೆಡಗುಲಿಯಿಂದ ಹುಡುಗರು ಊಟಕ್ಕೆ ಅನ್ನ ಎಷ್ಟು ಮಾಡಿಸಲಿ ಎಂದರೆ ಇತ್ತ ನಮ್ಮ ಎರಡನೇ ಬ್ಯಾಚ್ ಶಾಂತರಾಜು ಜೀಪಿನಲ್ಲಿ ಬಂದು ಚಾಮರಾಜನಗರಕ್ಕೆ ಎಲ್ಲರನ್ನು  ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ನಗರಕ್ಕೆ ಹಿಂತಿರುಗಿದರೆ ಮತ್ತೆ ಬರಲು ಆಗುವುದೋ ಇಲ್ಲವೋ ಎಂಬ ತುಮುಲ. ಆಪದ್ಬಾಂಧವರಾಗಿ ಬಂದವರು ಬಸ್ ಮಾಲೀಕ ಫರೂಕ್ ಮತ್ತು ಚಾಲಕ ರಾಮಣ್ಣನವರು. "ಹೆದರಬೇಡಿ. ನಿಮ್ಮನ್ನು ಬೆಡಗುಲಿಗೆ ತಲಪಿಸುವ ಜವಾಬ್ದಾರಿ ನಮ್ಮದು" ಎಂದರು. ನಮಗೆಲ್ಲರಿಗೂ ಬಿಸಿ ಅನ್ನ ಸಾಂಬಾರ್ ರಾಮಣ್ಣನವರು ತಮ್ಮ ಮನೆಯಿಂದ ಮಾಡಿಸಿ ತಂದರು. 5-6 ತಟ್ಟೆ ಇತ್ತು. ಕುಡಿಯುವ ನೀರೂ ತಂದಿದ್ದರು. ಎಲ್ಲ ಹುಡುಗಿಯರಿಗೂ ಕೈ ತುತ್ತು ಊಟ! ನಂತರ ಮಲಗಲು, ಅಲ್ಲೆ ಇದ್ದ BSNL compound ಒಳಗೆ ಗೇಟ್ ಲಾಕ್ ಮಾಡಿಸಿ ನಮಗೆ ಮಲಗಲು ಅನುವು ಮಾಡಿದರು. ಆಕಾಶವೇ ಹೊದಿಕೆ. ನಕ್ಷತ್ರದ ಬೆಳಕು. ಮುಚ್ಚಿದ BSNL. ಬೀದಿ ದೀಪದ ಬೆಳಕು. ನಾನು ಏನು ಹೇಳಿದರೂ ok ಅಂದ ಹುಡುಗಿಯರು. ಅಲ್ಲೇ ಮಲಗಿದೆವು. 4 ಗಂಟೆಗೆ ಕೊರೆಯುವ ಛಳಿ. ಕಾಡಿನ ಬೆಂಕಿ ಎಲ್ಲ ಬೆಟ್ಟಗಳ ಮೇಲೆ, ಹೊಗೆ ಹಾಗು ಬೂದಿ ಹಾರಿಬರುತ್ತಿತ್ತು. ಮೈಸೂರಿಗೆ 6 ಗಂಟೆಗೆ ಹಿಂತಿರುಗುವುದು ಎಂದು ನಿಶ್ಚಯಿಸಿ್ದೆ. 5.45ಕ್ಕೆ ಬಸ್ ಮೇಲೆ ಬಿಡುವುದಾಗಿ ಹೇಳಿದರು. 6.40 ಬಸ್ ಪ್ರಯಾಣ ಆರಂಭ. 7.45 ಬೆಡಗುಲಿ ತಲಪಿದೆವು! ಹೀಗೆ ಆರಂಭ ಆದ ಶಿಬಿರ ಇಂದು ಸುಗಮವಾಗಿ ಮುಗಿಯಿತು. ನನ್ನ ಮಾತುಗಳು ಇನ್ನೂ ಮುಗಿಯುತ್ತಿಲ್ಲ. ಸಾಧ್ಯವಾದರೆ ರಾತ್ರಿ ಎಷ್ಟು ಹೊತ್ತಿಗಾದರೂ ಕರೆತರಲು ಸಿದ್ಧರಾಗಿ ನಿದ್ರೆ ಮಾಡದೇ ಕಾದ ಶಾಂತರಾಜು, ಅವರಿಗೆ ಸಹಕರಿಸಲು ಸಿದ್ಧರಾಗಿ ನಿಂತಿದ್ದ ಚಾಮರಾಜನಗರದ ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶರವರು, ಆ ಬೆಂಕಿ ನಡುವೆ ಬೆಟ್ಟದ ಕೆಳಗೆ ಬರಲು ಸಿದ್ದವಿದ್ದ ನಮ್ಮ ಹುಡುಗರು, ನಮಗಾಗಿ ಕೋಳಿ ಪಾಳ್ಯದಲಿ ರೂಮ್ ಮಾಡಲು ಪ್ರಯತ್ನಿಸಿದ tvs estate ನೌಕರರು, ನಮ್ಮ ರಕ್ಷಣೆಗೆ ನಿಂತ ಇಡೀ ಬಸ್ ನ ಸೋದರ ಸೋದರಿಯರು. ಇವರೆಲ್ಲರಿಗಾಗಿ ನನ್ನದಲ್ಲದ ಆದರೆ ನನ್ನ ಹೃದಯಕ್ಕೆ ಹತ್ತಿರವಾದ ಸಾಲುಗಳು,  "ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ.."

- ಡಾ ಸುಮನಾ ಮೂರ್ತಿ