ಜನರ ಬಳಿಗೆ ಹೋಗುವ ಬಗ್ಗೆ- ಸ್ಟಾನಿಸ್ಲಾವ್‍ಸ್ಕಿ
...ನಾವು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವದ ಗುಣ ಗಣನೆಗೆ ಬರುತ್ತದೆಯೋ ಹೊರತು ಪ್ರಭಾವ ಬೀರುವ ಶಕ್ತಿಯಲ್ಲ ಎನ್ನುವುದನ್ನು ಈಗ ಸ್ಪಷ್ಟವಾಗಿ ಗ್ರಹಿಸುತ್ತಿದ್ದೇವೆ: ಮೇಲುಮೇಲಿನ ಪರಿಣಾಮ ಬೀರುವುದು ರಂಗಭೂಮಿಯ ಉದ್ದೇಶವಲ್ಲ. ಸಾರ್ವಜನಿಕರು ಹುಯಿಲೆಬ್ಬಿಸುವಂತೆ, ಗದ್ದಲವೆಬ್ಬಿಸುವಂತೆ ಮಾಡುವುದಕ್ಕಿಂತ ಅವರು ಬಹಳ ದೀರ್ಘಕಾಲದ ಪ್ರಭಾವಕ್ಕೆ ಒಳಗಾಗುವಂತೆ, ಆ ಪ್ರಭಾವವು ಅವರ ಹೃದಯದಾಳಕ್ಕಿಳಿದು, ಬೇರುಬಿಟ್ಟು, ಅವರ ಜೀವನದ ಒಂದು ಭಾಗದಂತೆ ಸದಾಕಾಲ ಉಳಿಯುವಂತೆ ಮಾಡುವುದು ಹೆಚ್ಚು ಪ್ರಯೋಜನಕಾರಿ.
ರಂಗಭೂಮಿಯ ಪ್ರಭಾವಗಳು ಜೀವಂತ ಪ್ರಭಾವಗಳಾದರೆ, ನಾಟಕದೊಳಗಿನ ನಟರು ಜನರಿಗೆ ಹೆಚ್ಚು ಹತ್ತಿರವಾದರೆ, ಆತ್ಮೀಯ ಸ್ನೇಹಿತರಾದರೆ ಅದು ಪಾರವಿಲ್ಲದಷ್ಟು ಪ್ರಯೋಜನಕಾರಿಯಾಗುತ್ತದೆ. ಹಿಂದಿನ ಕಾಲದ ಮಹಾನ್ ನಟರೆಲ್ಲರೂ ಇಂತಹದೊಂದು ಸಂಬಂಧಕ್ಕೆ ಬರಲು ಬಯಸಿದರು. ಆ ಮಹಾನ್ ನಟರು ಬಿಟ್ಟುಹೋದ ಪರಂಪರೆಯನ್ನು ನಂತರ ಬಂದ ಜನಾಂಗಗಳು ಅರ್ಥಮಾಡಿಕೊಂಡಿರುವುದು ಮತ್ತು ಉಪಯೋಗಿಸುತ್ತಿರುವುದು ಅದೆಷ್ಟು ಅಲ್ಪವೆನ್ನುವುದನ್ನು ನೊಡಿದರೆ ಅವರು ಅದೆಷ್ಟು ನೊಂದುಕೊಳ್ಳುತ್ತಾರೆ !
ಜನರು ರಂಗಭೂಮಿಯಿಂದ ಏನನ್ನು ಬಯಸುತ್ತಾರೋ ಅದರಲ್ಲಿ ಬದಲಾವಣೆಗಳು ಬಹಳ ಬೇಗ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಜನರು ತುಂಬಾ ಸೂಕ್ಷ್ಮವಾಗಿದ್ದಾರೆ. ಅವರು ರಂಗದ ಮೇಲೆ ನಿಜವಾದ ಜೀವನವನ್ನು ನೋಡಲು ಬಯಸುತ್ತಾರೆ ಕೇವಲ ಅದರ ಬಾಹ್ಯ ಪ್ರದರ್ಶನವಲ್ಲ, ಬದಲಿಗೆ ಅದರ ಆಳವಾದ ಸಾರ, ನಿಜವಾದ ಭಾವನೆಗಳು, ಅದರ ನೈಜ ತರ್ಕ, ನಿಜವಾದ ಸಾಮಾನ್ಯ ಚಲನೆಗಳು. ನೀವು 'ವೈಚಾರಿಕ ಸಹಜತೆ' ಎಂದು ಕರೆಯಬಹುದಾದ ಈ ಆಂತರಿಕ ಜೀವಂತಿಕೆಯನ್ನು ಸಾಧಿಸಲು, ಒಂದು ಅತ್ಯಂತ ಪ್ರಮುಖವಾದ ನಿಬಂಧನೆಯಿದೆ: ನೀವು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ರಂಗದ ಮೇಲೆ ಜೀವಿಸಬಾರದು, ನೀವು ನಿಮಗಾಗಿಯೇ ಜೀವಿಸಬೇಕು.
ಒಬ್ಬ ನಟ ಕೇವಲ ಜನರಿಗೆ ಮನರಂಜನೆ ನೀಡುವುದಕ್ಕೆ ನಟಿಸುವುದು ಕಡಿಮೆಯಾದಷ್ಟು ಅವರೊಂದಿಗೆ ಅವನ ಸಂಬಂಧವು ಹೆಚ್ಚು ಗೌಪ್ಯವಾಗಿರುತ್ತದೆ ಮತ್ತು ವರ್ಣಿಸಲು ಸಾಧ್ಯವಾಗುವುದಿಲ್ಲ. ಅದು ಹೆಚ್ಚು ಆಪ್ತ ಮತ್ತು ಗಾಢವಾಗಿರುತ್ತದೆ.
ನಾವು ಯಾರ ಮನಸ್ಸನ್ನು ಗೆದ್ದಿದ್ದೇವೆಯೋ ಅವರು ನಮ್ಮಿಂದ ಮನರಂಜನೆ ಪಡೆದ ಜನರಷ್ಟೇ ಆಗದೆ, ಆಲೋಚಿಸುವ ಮತ್ತು ಭಾವನೆಗಳುಳ್ಳ ಮಾನವ ಜೀವಿಗಳಾದರೆ ಅದು ನಮ್ಮ ಅತ್ಯಂತ ಮುಖ್ಯವಾದ ಸಾಧನೆಯೆಂದೇ ಪರಿಗಣಿಸುತ್ತೇನೆ.
ಈ ಹದಿನೈದು ವರ್ಷಗಳಲ್ಲಿ ನಮ್ಮ ರಂಗಭೂಮಿಯು ಮಹೋನ್ನತವಾದ ಮತ್ತು ಸಂಕೀರ್ಣವಾದ ವಿಕಾಸದ ಹಾದಿಯನ್ನು ಸವೆಸಿ ಬಂದಿದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ನಾವು ನಮ್ಮ ಹುಡುಕಾಟದಲ್ಲಿ ನಿರ್ದಿಷ್ಟ ಕ್ಷೇತ್ರದಲ್ಲಿ ಒಂದು ಸುತ್ತು ಸುತ್ತಿ ಬಂದಿದ್ದೇವೆ...
ಏಕೆಂದರೆ, ನಾವು ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಸದಾ ಹುಡುಕಾಟದಲ್ಲಿದ್ದೇವೆ. ನಾವು ಸತ್ಯಕ್ಕಾಗಿ, ಉದಾತ್ತ ಭಾವನೆಗಳಿಗಾಗಿ ಹುಡುಕಾಟದಲ್ಲಿದ್ದೆವು; ಅವುಗಳನ್ನು ಒಂದು ವಾಸ್ತವವಾದಿ ರಂಗಭೂಮಿಯಲ್ಲಿ, ಒಂದು ಶೈಲೀಕೃತ ರಂಗಭೂಮಿಯಲ್ಲಿ ಹುಡುಕಿದೆವು. ...ನಮ್ಮ ಆರಂಭದ ಕಾಲಘಟ್ಟದ ಗುರುತಾಗಿರುವ ಬಾಹ್ಯ ವಾಸ್ತವವಾದದಿಂದ ಈಗ 'ವೈಚಾರಿಕ ವಾಸ್ತವವಾದ'ವೆಂದು ಕರೆಯಬಹುದಾದ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ.
ನಾವು ಹಾದುಬಂದ ಘಟ್ಟಗಳನ್ನು ಗುರುತಿಸಲು ನಮ್ಮ ನಾಟಕಗಳ ಲೇಖಕರ ಹೆಸರನ್ನು ಸೂಚಿಸಿದರೆ ಸಾಕಾಗುತ್ತದೆ.
1. ಅಲೆಕ್ಸಿ ಟಾಲ್‍ಸ್ಟಾಯ್: ಫ್ಯೂದೊರ್ ಇವಾನೊವಿಚ್: ನಾವು ಈ ನಾಟಕವನ್ನು ಅಪ್ಪಟ ವಾಸ್ತವವಾದಿ ದೃಷ್ಟಿಕೋನದಿಂದ ನೋಡಿದೆವು. ಆದರೆ ಈ ವಾಸ್ತವವಾದವು ಚರ್ವಿತಚರ್ವಣವಾಗಿದೆ, ತಥಾಕಥಿತ ನಟನೆ, ಅಪಾರ್ಥ ಮಾಡಿಕೊಂಡ ಹಳೆಯ 'ಪರಂಪರೆ'ಗಳ ವಿರುದ್ಧ ಪ್ರತಿಭಟನೆಯಾಗಿತ್ತು. ಅದು ಕಪಟ ರೊಮ್ಯಾಂಟಿಸಿಸಮ್‍ಗೆ ವಿರುದ್ಧವಾದ ಪ್ರತಿಕ್ರಿಯೆಯಾಗಿತ್ತು; ರಕ್ತಮಾಂಸ ತುಂಬಿಲ್ಲದ ಬರಿಯ ಪೊಳ್ಳು ತಂತ್ರಗಾರಿಕೆಯಿಂದ ತುಂಬಿದ ನಟನೆಗೆ ವಿರುದ್ಧವಾಗಿತ್ತು. ರಂಗಭೂಮಿಯ ಕಲೆಯು ಕೇವಲ ಒಂದು ಪಾತ್ರವನ್ನು ಪ್ರದರ್ಶಿಸುವ ಕಲೆಯಲ್ಲ, ಅದು ಅನುಭವಿಸುವ ಕಲೆಯಾಗಬೇಕು. ನೀವು ಪ್ರದರ್ಶನ ಕಲೆಯನ್ನು ಹೊಗಳಬಹುದು, ಆದರೆ ಅದರ ಮೇಲೇಯೇ ಆಧಾರವಾಗಿರಲು ಸಾಧ್ಯವಿಲ್ಲ... ಈ ಪ್ರಾತಿನಿಧಿಕ ಶೈಲಿಯ ತಥಾಕಥಿತ ನಟರ ವಿರುದ್ಧ ಜನಸಮಾನ್ಯರು ಈಗಾಗಲೇ ದಂಗೆಯೆದ್ದಿದ್ದಾರೆ. ಅವರದೇ ಜೀವನದ ತರ್ಕಗಳ ಮೇಲೆ ಆಧಾರಪಟ್ಟಿರುವ ನಿಜವಾದ ಭಾವನೆಗಳನ್ನು ನೋಡಲು ಜನ ಬಯಸುತ್ತಾರೆ.
2. ಆ್ಯಂಟನ್ ಚೆಖಾವ್: ನಮ್ಮ ವಿಕಾಸದಲ್ಲಿ ಚೆಖಾವ್ ಅವರದ್ದು ನಿರ್ಧಾರಕ ಪಾತ್ರ. ನಮಗೆ ಆರಂಭದಲ್ಲಿ, ಬಹುಶಃ ಸುಪ್ತಪ್ರಜ್ಞೆಯಲ್ಲಿ, ಅಂದರೆ ನಮಗರಿವಿಲ್ಲದೆಯೇ ಚೆಖಾವ್ ನಾಟಕಗಳಲ್ಲಿ ಪದಗಳ ಪದರದಡಿಯಲ್ಲಿ ಅಡಗಿದ 'ಜೀವ'ವನ್ನು, 'ಆಂತರಿಕ ಹರಿವ'ನ್ನು ಚಿತ್ರಿಸಲು ಸಾಧ್ಯವಾಯಿತು. ಏಕೆಂದರೆ ಚೆಖಾವ್ ಪಾತ್ರಗಳು ಕೆಲವು ಪದಗಳನ್ನು ಉಪಯೋಗಿಸುತ್ತವೆ. ಆದರೆ ಅವುಗಳು ತಮ್ಮ ಜೀವನ ಮತ್ತು ಭಾವನೆಗಳನ್ನು ಬಹಿರಂಗಗೊಳಿಸುವುದಿಲ್ಲ. ಈ ಪದಗಳ ಹಿಂದೆ 'ಮಾನವನ ಮಾಧುರ್ಯ'ವು ಅಡಗಿರುತ್ತದೆ. ಆದರೆ ನಾವೀಗ ಹೆಚ್ಚು ಸೂಕ್ಷ್ಮವಾಗಿ ಆಳವಾಗಿ ನಟಿಸುತ್ತೇವೆ. ಚೆಖಾವ್ ಎಂದಿಗೂ ನಮ್ಮ ನಾಟಕಕಾರರು.
3. ಮ್ಯಾಕ್ಸಿಂ ಗಾರ್ಕಿ: ಅವರು ನಮಗೆ ಅತ್ಯಂತ ಆತ್ಮೀಯರು; ಅದಕ್ಕೆ ಕಾರಣ ಅವರ ಬೋಧನೆಗಳು. ಅವರು ನಟನೆಯಲ್ಲಿ ಹೊಸ ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ.
4. ಹೆನ್ರಿಕ್ ಇಬ್ಸನ್ : ಅವರ ತತ್ವಶಾಸ್ತ್ರವು ನಮ್ಮನ್ನು ಆಕರ್ಷಿಸಿತು. ಇಬ್ಸನ್‍ರವರ ಕುತೂಹಲಕಾರಿ ಅಂಶವಾದ ಅವರ ವೈಚಾರಿಕಾ ಶಕ್ತಿ, ತರ್ಕಶಕ್ತಿಗಳನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸಿದೆವು.
5. ಕೆ. ಹಮ್ಸನ್: ಜೀವನದ ನಾಟಕ: ಶೈಲೀಕೃತ ರಂಗಭೂಮಿಯಲ್ಲಿ ಇದೊಂದು ಪ್ರಯೋಗ. 'ಮಹಾ ಪ್ರವಾಹಗಳು', ಆಂತರಿಕ ಭಾವನೆಗಳ ಬೃಹತ್ ಗಾತ್ರಗಳು 'ಜೀವನದ ನಾಟಕ'ದಲ್ಲಿರುವ ಅತ್ಯಂತ ಮುಖ್ಯವಾದ ಅಂಶಗಳು ಅದನ್ನು ಶೈಲೀಕರಣದ ಮಾರ್ಗದಲ್ಲಿ ಚಿತ್ರಿಸಲು ಪ್ರಯತ್ನಿಸಿದೆವು.
6. ಇವಾನ್ ತುರ್ಗೆನೆವ್: ಅವರ ಅಗಾಧ ಒಳಾರ್ಥಗಳಿಂದಾಗಿ ತುರ್ಗೆನೆವ್ ನಮಗೆ ಬಹಳ ಮುಖ್ಯ ಬರಹಗಾರರಾಗಿದ್ದರು. ಹೊರನೋಟದ ದೃಷ್ಟಿಯಿಂದ ಅದೆಷ್ಟು ಕಟ್ಟುನಿಟ್ಟಾಗಿ ಅವರ ನಾಟಕಗಳನ್ನು ಅಣಿಗೊಳಿಸಿದೆವು, ನಮ್ಮ ಆಂಗಿಕ ಅಭಿನಯವನ್ನು ಅದೆಷ್ಟು ಮಿತಗೊಳಿಸಿದೆವು ಎಂಬುದನ್ನು ನೆನಪಿಸಿಕೊಳ್ಳಿ... ಮತ್ತೆ ಹ್ಯಾಮ್‍ಸನ್ ಹಾಗೂ ತುರ್ಗೆನೆವ್ ನಡುವೆ ದಾಸ್ತೊಯೆವ್‍ಸ್ಕಿಯನ್ನು ಮಧ್ಯೆ ಸೇರಿಸುತ್ತೇನೆ; ದಾಸ್ತೊಯೆವ್‍ಸ್ಕಿ ನಟರಿಗೆ ಮೂಲಭೂತ ಗುಣಗಳನ್ನು, ಉದ್ವೇಗಗಳನ್ನು, 'ಜೀವನದ ನಾಟಕ'ದ ಉದ್ದಕ್ಕೂ ಹರಿಯುವ ಅದೇ ಭಾವೋದ್ವೇಗಗಳನ್ನು ತೋರಿಸುವ ಅವಕಾಶ ನೀಡುತ್ತಾರೆ.
7. ಮೋಲಿಯೇರ್: ಅವರ 'ಕಾಲ್ಪನಿಕ ನಿಷ್ಪ್ರಯೋಜಕ' ನಾಟಕದಲ್ಲಿ ಆಂತರಿಕ ಅನುಭವವನ್ನು, ಒಂದು ರೀತಿಯ 'ಆಂತರಿಕ ಸಂಗೀತದ ಪ್ರಸ್ತಾರ'ದ ರೀತಿಯನ್ನು ಸಾಧಿಸಲು ಪ್ರಯತ್ನಿಸಿದೆವು. ಹಾಗಿದ್ದಾಗ್ಯೂ ಅದನ್ನು ನಿರಂತರವಾದ ಜೀವನದ ಆಪ್ತ ಸಂಬಂಧದ ಮೇಲೆ ಆಧಾರವಾಗಿರಿಸಬೇಕಿತ್ತು.
ಕಾಲ್ಪನಿಕ ನಿಷ್ಪ್ರಯೋಜಕದಲ್ಲಿ ಬಳಸಿದ ಪ್ರಖ್ಯಾತ ವಾದ್ಯಕ್ಕಾಗಿ ನಮ್ಮನ್ನು ನಿಂದಿಸಿದರು; ಏಕೆಂದರೆ ಅದರಲ್ಲಿ ಜೀವನದ ದುರಂತದ, ಅದರ ನಿಜವಾದ ಸತ್ಯದ ವಿವರವನ್ನು ಜನರು ಗುರುತಿಸುವುದಿಲ್ಲ... ಏನೇ ಆಗಲಿ, ರಾಜನ ಪ್ರಶ್ನೆಗೆ ಮೋಲಿಯೇರ್ ಉತ್ತರ: ಅದೇ ಜೀವನ.
ಈ 'ಆಂತರಿಕ ಸಂಗೀತದ ಪ್ರಸ್ತಾರ'ವು ಅತ್ಯಂತ ಸ್ವಪ್ರೇರಣೆಯ ಮೇಲೆ, ಸಹಜವಾದ (ಸಹಜತೆಯ ಅರ್ಥದಲ್ಲಿ) ಭಾವನೆಗಳ ಮೇಲೆ ಆಧಾರವಾಗಿರಬೇಕು.
ನಾಟಕವನ್ನು ತಯಾರು ಮಾಡುತ್ತಿರುವ ನಿರ್ದೇಶಕನನ್ನು ರಸಾಯನತಜ್ಞನಿಗೆ ಹೋಲಿಸಬಹುದು. ಅವನ ಮುಂದೆ ಲೇಖಕ ಮತ್ತು ನಟರಿರುತ್ತಾರೆ. ಅವನು ಅವರಿಬ್ಬರ ನಿಜವಾದ ಸಾರವನ್ನು ಕಂಡು ಹಿಡಿದು, ಅವರನ್ನು ಒಂದು ರೀತಿಯ ಬಟ್ಟಿ ಇಳಿಸುವಿಕೆಗೆ ಹಾಕುತ್ತಾನೆ. ನಂತರ ಕಾಯುತ್ತಾನೆ. ಒಂದು ರೀತಿಯ ಸಮರಸ ಬರುವವರೆಗೆ, ದೀರ್ಘಕಾಲದವರೆಗೆ ಕಾಯುತ್ತಾನೆ. ಐದು ತಾಲೀಮುಗಳಲ್ಲಿ ನಾಟಕ ತಯಾರಾಗಬೇಕೆನ್ನುವ ಜನರು, ರಬ್ಬರ್ ಸ್ಟಾಂಪ್ ಮಾದರಿಯ ನಟನೆಯ ಬಗ್ಗೆ ಮಾತನಾಡುತ್ತಾರೋ ಹೊರತು, ಸೃಜನಶೀಲ ನಟನೆಯ ಬಗ್ಗೆ ಅಲ್ಲ.
ನಾವು ಆರು ತಿಂಗಳಿಗೇ ಹುಟ್ಟಿದ ಮಗುವಿಗೆ ಏನನ್ನುತ್ತೇವೆ ? ಅದನ್ನು ಪೂರ್ಣ ಬೆಳೆಯದ ಮಗುವೆನ್ನುತ್ತೇವೆ. ನಾಟಕವನ್ನು ಆತುರದಲ್ಲಿ ಪ್ರದರ್ಶಿಸಿದರೆ, ಅದನ್ನೂ ಹಾಗೆಯೇ ಕರೆಯುತ್ತೇವೆ. ಅದೂ ಸಹ ಪೂರ್ಣವಾಗಿ ಬೆಳೆಯದ ಮಗು...
ಆದರೆ ನಮ್ಮ ರಂಗಭೂಮಿಯ ನಿರ್ದೇಶಕರು ಸಹ ಇಡೀ ವಿಕಾಸವನ್ನು ಹಾದುಹೋಗಿದ್ದಾರೆ. ಹಿಂದಿನ ಕಾಲದಲ್ಲಿ ನಿರ್ದೇಶಕರಾದ ನಾವೇ ರಂಗಸಜ್ಜಿಕೆ, ಸೀನರಿ, ನಾಟಕ - ಎಲ್ಲವನ್ನು ಅಣಿಗೊಳಿಸಿ ನಟರಿಗೆ ಹೇಳುತ್ತಿದ್ದೆವು: “ಈ ರೀತಿ ನಟಿಸು.” ಈಗ ಅವರ ಅವಶ್ಯಕತೆಗಳನ್ನು ಮತ್ತು ಅವರಿಗೆ ಎಲ್ಲಕ್ಕಿಂತ ಹೆಚ್ಚಾಗಿ ಯಾವುದು ಅವರ ಮನಸೆಳೆಯುತ್ತಿದೆಯೆಂದು ಸರಿಯಾಗಿ ನಿರ್ಧರಿಸಿದ ನಂತರವೇ ನಟರಿಗೆ ಎಲ್ಲವನ್ನೂ ತಯಾರಿ ಮಾಡಿಕೊಡುತ್ತೇವೆ.
ನಾವು ಇಲ್ಲಿಗೆ ಬಂದು ತಲುಪಿದ್ದೇವೆ: ನಾವು “ವೈಚಾರಿಕ ವಾಸ್ತವವಾದ”ಕ್ಕೆ ಬಂದಿದ್ದೇವೆ.
ಸೂಕ್ತಿಗಳು:
ಮೇಲುಮೇಲಿನ ಪರಿಣಾಮ ಬೀರುವುದು ರಂಗಭೂಮಿಯ ಉದ್ದೇಶವಲ್ಲ. ಸಾರ್ವಜನಿಕರು ಹುಯಿಲೆಬ್ಬಿಸುವಂತೆ, ಗದ್ದಲವೆಬ್ಬಿಸುವಂತೆ ಮಾಡುವುದಕ್ಕಿಂತ ಅವರು ಬಹಳ ದೀರ್ಘಕಾಲದ ಪ್ರಭಾವಕ್ಕೆ ಒಳಗಾಗುವಂತೆ, ಆ ಪ್ರಭಾವವು ಅವರ ಹೃದಯದಾಳಕ್ಕಿಳಿದು, ಬೇರುಬಿಟ್ಟು, ಅವರ ಜೀವನದ ಒಂದು ಭಾಗದಂತೆ ಸದಾಕಾಲ ಉಳಿಯುವಂತೆ ಮಾಡುವುದು ಹೆಚ್ಚು ಪ್ರಯೋಜನಕಾರಿ.
ನಾವು ಯಾರ ಮನಸ್ಸನ್ನು ಗೆದ್ದಿದ್ದೇವೆಯೋ ಅವರು ನಮ್ಮಿಂದ ಮನರಂಜನೆ ಪಡೆದ ಜನರಷ್ಟೇ ಆಗದೆ, ಆಲೋಚಿಸುವ ಮತ್ತು ಭಾವನೆಗಳುಳ್ಳ ಮಾನವ ಜೀವಿಗಳಾದರೆ, ಅದು ನಮ್ಮ ಅತ್ಯಂತ ಮುಖ್ಯವಾದ ಸಾಧನೆಯೆಂದೇ ಪರಿಗಣಿಸುತ್ತೇನೆ.
- (ಅನುವಾದ - ಎಸ್.ಎನ್.ಸ್ವಾಮಿ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ