Pages

ಅನುವಾದಿತ ಕಥೆ - ಭಯಂಕರಿ ಮಿಸ್



[ಆಧಾರ: ಇಂಗ್ಲೀಷ್ ಮೂಲ - 
ಅರ್ಥರ್ ಕವನಾಗ್ ಅವರ ಮಿಸ್ ಆವ್‍ಫುಲ್ (Miss Awful)]

ಆ ವೃತ್ತಾಂತ ಶುರುವಾದದ್ದು ಹೀಗೆ- ಒಂದು ಮಧ್ಯಾಹ್ನ ಶ್ರೀನಿವಾಸ್ ರಾವ್ ಅವರ ಮನೆಯಲ್ಲಿ ಎಲ್ಲರೂ ಊಟಕ್ಕೆ ಕುಳಿತಿದ್ದರು. ಮನೆಯಲ್ಲಿ ಎಲ್ಲರಿಗಿಂತ ಸಣ್ಣವನು ಎಂಟು ವರ್ಷದ ಪ್ರವೀಣ. ಅಂದು ಸಂಜೆ ಮನೆಯಲ್ಲಿದ್ದು ಹೋಂವರ್ಕ್ ಮಾಡುವ ಬದಲು ತಾನು ತಂದೆಯ ಜೊತೆ ಕಬ್ಬನ್ ಪಾರ್ಕಿಗೆ ಹೋಗಬಹುದೆಂದು ತಂದೆಯನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದನು. 
ಅವನ ವಾದ ಹೀಗಿತ್ತು- ತನ್ನ ಕ್ಲಾಸ್ ಟೀಚರ್ ರೂಪಾ ಮಿಸ್ ಅವರ ಮನೆಯಲ್ಲಿ ಏನೋ ತೊಂದರೆಯಿದ್ದ ಕಾರಣ ಅವರು ಹೈದರಾಬಾದಿಗೆ ಹೋಗಬೇಕಾಗಿ ಬಂದದ್ದರಿಂದಾಗಿ, ಮರುದಿನ ರೂಪಾ ಮಿಸ್ಸು ಶಾಲೆಗೆ ಬರುವುದಿಲ್ಲವೆಂದೂ, ಅವರಿಲ್ಲದಾಗ ಕ್ಲಾಸಿನಲ್ಲಿ ತಾನಿರಲಿ ಬಿಡಲಿ, ಹೋಂವರ್ಕ್ ಮಾಡಿರಲಿ ಬಿಡಲಿ, ಯಾರಿಗೆ ಗೊತ್ತಾಗುತ್ತಿತ್ತು? ಹಾಗಾಗಿ ಪಾರ್ಕಿಗೆ ಹೋಗುವುದೇ ಸರಿ.
“ಏನು, ಇನ್ನೊಂದು ಸಲ ಹೇಳು!” ಆರನೇ ಕ್ಲಾಸಿನಲ್ಲಿ ಓದುತ್ತಿದ್ದ ಅವನ ಅಕ್ಕ ಪ್ರೇರಣಾ ಬಾಯಿ ಹಾಕಿದಳು. ಮುಂದುವರೆದು “ಮೂರನೇ ಕ್ಲಾಸಿಗೇ ಇಷ್ಟೆಲ್ಲಾ ಮಾತಾಡ್ತೀಯಾ? ನೀನು ಹೇಳಿದ್ದರಲ್ಲಿ ಯಾವ ಅರ್ಥವೂ ಇಲ್ಲ”  
ಪ್ರವೀಣನಿಗೆ ಅವಮಾನವೆನಿಸಿತಾದರೂ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಈ ಅಕ್ಕಾನೇ ಹೀಗೆ. ಜೀವನದಲ್ಲಿ ಅವನು ಅವಳನ್ನು ಸಹಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ, ಸಿಂಹಗಳ ಜೊತೆ, ಹಾವುಗಳ ಜೊತೆ, ಅದೂ ವಿಷಪೂರಿತ ಹಾವುಗಳ ಜೊತೆ ಬದುಕು ನಡೆಸಲೇ ಬೇಕಾದ ಪರಿಸ್ಥಿತಿ. ಯಾವತ್ತಿನಂತೆ ಕುರ್ಚಿಯ ಕಾಲುಗಳಿಗೆ ತನ್ನ ಕಾಲನ್ನು ಸುತ್ತಿಕೊಂಡು ಕುರ್ಚಿಯ ತುದಿಯಲ್ಲಿ ಅಸ್ಥಿರವಾಗಿ ಕುಳಿತ ಪ್ರವೀಣ್ ಮುಂದುವರೆಸಿದ.
“ರೂಪಾ ಮಿಸ್ ವಾಪಸ್ಸು ಬರುವವರೆಗೂ ಅವರ ಜಾಗದಲ್ಲಿ ಇನ್ನೊಬ್ಬರು ಮಿಸ್ ಬರುತ್ತಾರೆ. ರೂಪಾ ಮಿಸ್ ನಿನ್ನೆ ಹೈದರಾಬಾದಿಗೆ ಹೋಗಿಬಿಟ್ಟರು. ಅವರು ಹೋದ ಬಸ್ಸು ಆಕ್ಸಿಡೆಂಟ್ ಆಗದೇ ಇರಲಿನಪ್ಪ.” 
ಪ್ರವೀಣನ ತಾಯಿ ಮೆದುವಾಗಿ ಅವನ ಕೈ ಮೇಲೆ ತಟ್ಟಿದರು. ಎಂಟು ವರ್ಷದ ಉತ್ಸಾಹದ ಚಿಲುಮೆಗಳಾದ, ತುಂಟತನ ತುಂಬಿದ ಯಾವುದೇ ಹುಡುಗರಂತೆಯೇ ಅವನೂ ಇದ್ದ. ಆದರೆ ಆ ವಯಸ್ಸಿನಲ್ಲೇ ಅವನಿಗೆ ಒಂದು ಮೃದುವಾದ ಅಂತಃಕರಣ ಇತ್ತು. ಇತರರ ಬಗ್ಗೆ ಚಿಂತಿಸುವ, ಅವರಿಗಾಗಿ ಮಿಡಿಯುವ ಮೃದು ಮನಸ್ಸು ಅದು. ತಾನು ಪ್ರತಿನಿತ್ಯ ಶಾಲೆಗೆ ಹೋಗುವಾಗ ಮನೆ ಹಿಂದಿನ ರಸ್ತೆಯಲ್ಲಿ ಆಟದ ಸಾಮಾನು ಮಾರುವವನು ಒಂದು ದಿನ ಕಂಡಿಲ್ಲವಾದರೆ ಅವನಿಗೇನೋ ಪ್ರಾಣಾಪಾಯ ಒದಗಿದೆಯೆಂದೇ ಅವನ ತಲೆತುಂಬಾ ಚಿಂತೆ ಆವರಿಸುತ್ತಿತ್ತು. ಅವರ ಪಕ್ಕದ ಮನೆಯ ಶಾಂಭವಿ ಆಂಟಿಯನ್ನು ಆಸ್ಪತ್ರೆಗೆ ಸೇರಿಸಿದ್ದಾಗ ಅವರು ಡಿಸ್ಚಾರ್ಜ್ ಆಗಿ ಹೊರಬರುವವರೆಗೂ ಅವನ ದುಗುಡ ತುಂಬಿದ ಪ್ರಶ್ನೆಗಳಿಗೆ ಕೊನೆಯೇ ಇರಲಿಲ್ಲ. ಇತ್ತೀಚೆಗೆ ಒಂದು ರಾತ್ರಿ ಬೆಕ್ಕೊಂದು ಬಂದು ಅವರ ಮನೆಯ ಅಟ್ಟದಲ್ಲಿ ಜಾಗ ಹುಡುಕಿಕೊಂಡು ಬೀಡು ಬಿಟ್ಟಿತ್ತು. ಅದಕ್ಕೆ ಅವನು ತಟ್ಟೆಯಲ್ಲಿ ಹಾಲು ತೆಗೆದುಕೊಂಡು ಹೋಗಿಕೊಟ್ಟಿದ್ದೇನು, ಅದು ಒಂದು ನಿಮಿಷ ಕಾಣಿಸದಿದ್ದರೆ, “ಅದು ಓಡಿ ಹೋಯಿತೇ? ಅದಕ್ಕೆ ಮನೆ ಇದೆಯೇ?” ಎಂಬ ಚಿಂತೆ.     
ತಾಯಿ ಕಲ್ಪನಾ ಅವನಿಗೆ ಭರವಸೆ ನೀಡಿದಳು, “ನೀನು ನೋಡು ನೋಡುತ್ತಿರುವ ಹಾಗೇ ನಿನ್ನ ರೂಪಾ ಮಿಸ್ ಹುಷಾರಾಗಿ ವಾಪಸು ಬಂದು ಬಿಡ್ತಾರೆ ನೋಡು. ನಿನಗೆ ಅವರ ಬಗ್ಗೆ ಅಷ್ಟೊಂದು ಕಾಳಜಿ ಇರೋದು ಒಳ್ಳೇದೇ ಬಿಡು.”
ಪ್ರವೀಣನಿಗೆ ಸಮಾಧಾನವೆನಿಸಿತು. “ಅಮ್ಮಾ ನಂಗೆ ರೂಪಾ ಮಿಸ್ ಅಂದ್ರೆ ತುಂಬಾ ಇಷ್ಟ. ಅವರಿದ್ದರೆ ಮಜಾನೋ ಮಜಾ ಇರತ್ತೆ. ಹೋದ ವಾರ ಏನಾಯ್ತು ಗೊತ್ತಾ? ಆಕಾಶಂಗೆ ಬೆಂಚ್ ಮೇಲೆ ಕೂತುಕೊಂಡು ಬೋರ್ ಅನ್ನಿಸ್ತು. ಅದಕ್ಕೆ ಅವನು ಬರೀ ನೆಲದ ಮೇಲೇ ಮಲಗಿಕೊಂಡು ಬಿಟ್ಟ.”
ಶ್ರೀನಿವಾಸ್ ರಾವ್ ಊಟವಾದ ನಂತರ ದಿವಾನಿನ ಮೇಲೆ ತೂಕಡಿಸುತ್ತಾ ಒರಗಿಕೊಂಡಿದ್ದವರು ಇದ್ದಕ್ಕಿದ್ದಂತೆ ಎದ್ದು ಕೂತು “ಏನು? ಏನು ಮಾಡಿದ?” ಎಂದರು
ಪ್ರವೀಣ “ಊಂ, ಅವನು ಬರೀ ನೆಲದ ಮೇಲೆ ಮಲಗಿಕೊಂಡು ಬಿಟ್ಟ. ಆಮೇಲೆ ನಾವೆಲ್ಲರೂ ಕೂಡ ಹಾಗೇ ಮಾಡಿದ್ವಿ. ಎಲ್ಲರೂ ಬೆಂಚಿನ ಕೆಳಗಡೆ ಬರೀ ನೆಲದ ಮೇಲೆ ಮಲಗಿಕೊಂಡು ಬಿಟ್ಟಿವಿ. ಆಗ ರೂಪಾ ಮಿಸ್ ಏನು ಮಾಡಿದ್ರು ಗೊತ್ತಾ?”
ಪ್ರೇರಣಾ ಮಧ್ಯದಲ್ಲಿ ಬಾಯಿ ಹಾಕಿದಳು. “ಅಮ್ಮಾ ನೋಡಿದ್ಯಾ ತಟ್ಟೆಲಿರೋ ಒಂದು ತರಕಾರಿ ಮುಟ್ಟಿಲ್ಲ.”
ಇದ್ಯಾವುದನ್ನೂ ಲಕ್ಷಿಸದ ಪ್ರವೀಣ್ ಮುಂದುವರೆಸಿದ “ಮಿಸ್ಸು ಕೂಡ ನಮ್ಮ ಥರಾನೇ. ಅವರು ಕೂಡ ಬರೀ ನೆಲದ ಮೇಲೆ ಮಲಗಿಕೊಂಡು “ಆಯ್ತು ಈಗ ಎಲ್ಲರೂ ರೆಸ್ಟ್ ತೊಗೊಳ್ಳೋಣ” ಅಂತ ಹೇಳಿದ್ರು. ಅವತ್ತು ನಾವು ಜಾಸ್ತಿ ಆಟಾನೂ ಆಡಿರಲಿಲ್ಲ, ಆದರೂ ನಮಗೆಲ್ಲ ಮಲಗಕ್ಕೆ ಬಿಟ್ರು. ಅದಕ್ಕೇ ನಂಗೆ ನಂ ಸ್ಕೂಲ್ ಅಂದ್ರೆ ಅಷ್ಟು ಇಷ್ಟ. ಅಲ್ಲಿ ಮಕ್ಕಳಿಗೆ ಯಾವ ಕಷ್ಟಾನೂ ಕೊಡಲ್ಲ. ಸ್ಕೂಲಂದ್ರೆ ಮಜಾನೋ ಮಜಾ”
“ಹೂಂ ಮಜಾ. ಸ್ಕೂಲಿರೋದು ಮಜಾ ಮಾಡಕ್ಕೆ ಅಲ್ಲ. ಮಜಾ ಮಾಡಕ್ಕೆ ಪಾರ್ಕಿದೆ. ಆ ತಲೇಲಿ ಏನಾದರು ಕೆಲಸಕ್ಕೆ ಬರೋದು ತುಂಬಲಿ ಅಂತ ಸ್ಕೂಲಿಗೆ ಕಳಿಸೋದು” ಪ್ರೇರಣಾ ಹೇಳಿದಳು.
ಶ್ರೀನಿವಾಸ್ ರಾವ್ ಮತ್ತೆ ಕೇಳಿದರು “ಏನು, ರೂಪಾ ಮಿಸ್ಸು ಕೂಡ ನೆಲದ ಮೇಲೆ ಮಲಗಿಕೊಂಡ್ರಾ?” ಅವರು ಆ ಮಿಸ್ಸನ್ನು ಒಮ್ಮೆ ಭೇಟಿ ಮಾಡಿದ್ದರು. ತಮ್ಮ ಜವಾಬ್ದಾರಿ ನಿಭಾಯಿಸಬಲ್ಲ ನೈಪುಣ್ಯ ಅವರಲ್ಲಿದೆ ಎನಿಸಿದ್ದರೂ, ಅವರು ಏನೋ ಸ್ವಲ್ಪ ವಿಲಕ್ಷಣ ಎನ್ನಿಸಿತ್ತು. ಇಷ್ಟು ದೊಡ್ಡ ಹೆಂಗಸು ಮಕ್ಕಳ ಜೊತೆ, ಅವರು ಮಾಡಿದಂತೆ ನೆಲದ ಮೇಲೆ ಮಲಗುವುದು ಏಕೋ ಸರಿಯೆನಿಸಲಿಲ್ಲ. “ಸರಿ, ಆಮೇಲೆ ಎಲ್ಲರೂ ಏನು ಮಾಡಿದ್ರಿ?” ಶ್ರೀನಿವಾಸ್ ರಾವ್ ಕೇಳಿದರು. 
“ಊಂ” ಪ್ರವೀಣ ಮುಂದುವರೆಸಿದ. “ನಾವೆಲ್ಲ ಹಾಗೇ ಸ್ವಲ್ಪ ಹೊತ್ತು ಮಲಗಿಕೊಂಡಿದ್ವಿ. ಆಮೇಲೆ ಎಲ್ಲರೂ ಮೆಕ್ಸಿಕನ್ ಹ್ಯಾಟ್ ಡಾನ್ಸ್ ಮಾಡಿದ್ವಿ. ಅದೆಷ್ಟು ಮಜಾ ಇತ್ತು ಗೊತ್ತಾ?”
“ಒಂದೊಂದು ಸಲ ಹಾಗಿರತ್ತೇನೋ, ಆದರೆ ಪ್ರತಿದಿನ ಹೀಗೆ ಮಜಾನೇ ಮಾಡ್ತಾ ಇರಲ್ಲ ಅಂದುಕೊಂಡಿದೀನಿ” ಸ್ವಲ್ಪ ಆತಂಕದಲ್ಲೇ ಕಲ್ಪನಾ ಹೇಳಿದಳು. ಹಾಗೇ ಅಡಿಗೆ ಮನೆಯಿಂದ ಹೋಳಿಗೆ ತಂದು ಟೇಬಲ್ಲಿನ ಮೇಲಿಟ್ಟಳು. ಪ್ರವೀಣ ಹೇಳಿದ್ದರಲ್ಲಿ ನಿಜಾಂಶ ಇತ್ತು. ಡ್ರೀಮ್ ಸ್ಕೂಲ್ ಇದ್ದದ್ದೇ ಹಾಗೆ. 
ಆ ಶಾಲೆಯ ಬಗ್ಗೆ ಅವಳಿಗೆ ಬೇಸರವೇನಿರಲಿಲ್ಲ. ಮನೆಗೆ ಹತ್ತಿರವಿದ್ದ ಸಣ್ಣ ಸ್ಕೂಲದು. ಅಲ್ಲಿ ಮಕ್ಕಳಿಗೆ ಸ್ವಲ್ಪ ಹೆಚ್ಚೇ ಸಲಿಗೆ ಸಿಗುತ್ತಿತ್ತಾದರೂ, ಮಕ್ಕಳ ಮುಖದಲ್ಲಿದ್ದ ಸಂತೋಷ, ಅಲ್ಲಿ ಟೀಚರುಗಳು ಮಕ್ಕಳ ಬಗ್ಗೆ ತೋರಿಸುತ್ತಿದ್ದ ಪ್ರೀತಿ ಅವಳಿಗಿಷ್ಟವಾಗಿತ್ತು. ಸೇಂಟ್ ಮೇರೀಸ್ ಕಾನ್ವೆಂಟಿನ ಭಾಗವಾಗಿದ್ದ ಆ ಸ್ಕೂಲು ಮನೆಗೆ ಬಹಳ ಹತ್ತಿರವಿತ್ತು. ಅಲ್ಲಿ ಪಾಠ ಚೆನ್ನಾಗಿ ಮಾಡುತ್ತಿದ್ದರು, ಸ್ಕೂಲಿನಿಂದ ಮರಳುವಾಗ ಮಕ್ಕಳು ಇನ್ನೂ ಉತ್ಸಾಹ ತುಂಬಿಕೊಂಡೇ ಬರುತ್ತಿದ್ದರು ಎಂಬ ಕಾರಣಕ್ಕೇ ಅವರು ಪ್ರವೀಣನನ್ನು ಅಲ್ಲಿ ಸೇರಿಸಿದ್ದರು. ನಿಜ ಅವನು ಅಲ್ಲಿ ಕಲಿಕೆಯಲ್ಲಿ ಹೆಚ್ಚು ಮುಂದುವರೆದಿರಲಿಲ್ಲ. ಅವನ ಕಾಗುಣಿತ, ಸ್ಪೆಲ್ಲಿಂಗ್ಸ್ ಮಾತ್ರ ಸುಧಾರಿಸುವಂತೇ ಕಾಣುತ್ತಿರಲಿಲ್ಲ. ಡ್ರೀಮ್‍ಸ್ಕೂಲ್ ತನ್ನಲ್ಲಿ ಬರುವ ಮಕ್ಕಳಿಗೆ ಸಂತೋಷಕರ ವಾತಾವರಣ ಕಲ್ಪಿಸಿತ್ತು ನಿಜ, ಆದರೆ, ಅಲ್ಲಿ ಪಾಠ ಕೂಡ ಸ್ವಲ್ಪ ಸ್ಟ್ರಿಕ್ಟ್ ಆಗಿದ್ದರೆ, ಎಂದು ಅನ್ನಿಸಿದ್ದುಂಟು.…
ಪ್ರವೀಣನಿಗೆ ಪಲ್ಯ- ತರಕಾರಿ ನೋಡಿದಾಗ ಊಟದಲ್ಲಿದ್ದ ನಿರಾಸಕ್ತಿ ಹೋಗಿ, ಹೋಳಿಗೆ ನೋಡಿದ ಕ್ಷಣ ಉತ್ಸಾಹ ಹೆಚ್ಚಿತು. “ಹಾಗಾದ್ರೆ, ಅಪ್ಪಾ ಸಾಯಂಕಾಲ ಕಬ್ಬನ್ ಪಾರ್ಕಿಗೆ ಕರಕೊಂಡು ಹೋಗ್ತೀಯಾ ಅಲ್ಲಪ್ಪಾ? ನಾನು ಇನ್ನು ಕನ್ನಡ, ಇಂಗ್ಲೀಷ್ ಹೋಂ ವರ್ಕ್ ಮಾತ್ರ ಬರೆಯೋದು ಬಾಕಿ ಇದೆ. ಹೇಗೂ ಮಿಸ್ ಬರಲ್ಲ, ಬರೀದೇ ಇದ್ದರೂ ನಡಿಯತ್ತೆ, ಪರವಾಗಿಲ್ಲ.” ತಾಯಿ ಏನಾದರೂ ಹೇಳುವ ಮೊದಲೇ ಊಟ ಮುಗಿಸಿ ಕೈತೊಳೆದುಕೊಂಡು ವಾರ್ಡ್ ರೋಬಿನತ್ತ ಧಾವಿಸಿದ ಅವನು ಮತ್ತೆ ತಂದೆಯ ಮುಂದೆ ಬೇಡಿಕೆಯಿಟ್ಟಾಗಿತ್ತು. “ಅಲ್ವಾ, ಹೋಗಬಹುದಲ್ಲಪ್ಪ?” 
“ಹೋಗಬಹುದು ಅಂತ ನಾನು ಹೇಳಿದ್ನಾ? ನಿನ್ನನ್ನ ಕಬ್ಬನ್ ಪಾರ್ಕಿಗೆ ಕರಕೊಂಡು ಹೋಗ್ತೀನಿ ಅಂತಾನೂ ನಾನು ಹೇಳಿಲ್ಲ” ಶ್ರೀನಿವಾಸ್ ರಾವ್ ಹೇಳಿದರು. ಆದರೆ ಇದ್ದಕ್ಕಿದ್ದಂತೆ ಅವರ ದೃಷ್ಟಿ, ತಮ್ಮ ಹೊಟ್ಟೆಯ ಮೇಲೆ ಹರಿಯಿತು. ಸ್ವಲ್ಪ ನಡೆದರೆ ವಾಸಿ ಎನ್ನಿಸಿತು. ದಿವಾನದ ಮೇಲಿನಿಂದ ಎದ್ದು, “ಸರಿ ಕರಕೊಂಡು ಹೋಗ್ತೀನಿ, ಆದರೆ, ಬಂದ ತಕ್ಷಣ ರೂಂಗೆ ಹೋಗಿ ಕನ್ನಡ, ಇಂಗ್ಲೀಷ್ ಹೋಂ ವರ್ಕ್ ಮುಗಿಸಬೇಕು” ಎಂದರು.
“ಅಪ್ಪಾ, ಥ್ಯಾಂಕ್ಸ್ ಅಪ್ಪಾ. ನಾವು ಮೊದಲು ಪುಟಾಣಿ ಎಕ್ಸ್ ಪ್ರೆಸ್‍ನಲ್ಲಿ ಹೋಗ್ತೀವಿ ಅಲ್ವಾಪ್ಪ?”
“ಇಲ್ಲಾ, ನಾವು ಮೊದಲು ಅಕ್ವೇರಿಯಂ ನೋಡಕ್ಕೆ ಹೋಗೋದು” ಎಂದಳು ಪ್ರೇರಣಾ.
ಹೋಗುವ ಸಂತೋಷದಲ್ಲಿ ತೇಲುತ್ತಿದ್ದ ಪ್ರವೀಣನಿಗೆ ಅವಳ ಜೊತೆ ತರ್ಕ ಮಾಡುವ ಮನಸ್ಸಿರಲಿಲ್ಲ. ಬೀರುವಿನಿಂದ ಜೀನ್ಸ್ ಪ್ಯಾಂಟನ್ನು ಎಳೆದು ಹಾಕುತ್ತಾ “ಊಂ ನಾಳೆ ನಮಗೆ ಬರೋ ಹೊಸ ಮಿಸ್ಸು ಅದು ಹೇಗೆ ಇರ್ತಾರೋ. ಅಪ್ಪಾ ನಿನ್ನ ಶೂ ತಂದು ಕೊಡಲಾ ಅಪ್ಪಾ?” 
ಅದಾದ ನಂತರ ಅವನು ಆ ಹೊಸ ಮಿಸ್ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಸಂಜೆಯ ಸಂತೋಷದ ಕ್ಷಣಗಳಲ್ಲಿ ಅವನಿಗೆ ಅದೆಲ್ಲ ಈಗ ಬೇಕಿರಲಿಲ್ಲ. 
ಸೋಮವಾರ ಸ್ಕೂಲು ಎಂದಿನಂತಿತ್ತು. ಎಲ್ಲಾ ಸ್ಕೂಲುಗಳಲ್ಲಿರುವಂತೆ ಯಾವತ್ತಿನ ಸೋಮವಾರದಂತೆಯೇ ಇತ್ತು. ಪ್ರವೀಣ ತಾಯಿಯ ಜೊತೆ ಸ್ಕೂಲಿಗೆ ಹೆಜ್ಜೆ ಹಾಕುವ ವೇಳೆಗೆ ಪ್ರೇರಣಾ ತಾನು ಹೋಗುವ ಶ್ರೀ ವಿದ್ಯಾಮಂದಿರಕ್ಕೆ ಆಗಲೇ ಹೋಗಿ ಆಗಿತ್ತು. ಪ್ರವೀಣನಿಗೆ ಟ್ರಾಫಿಕ್ ಇದ್ದಾಗ ರಸ್ತೆ ದಾಟಲು ಬರುವುದಿಲ್ಲವೆಂಬ ಆತಂಕದಲ್ಲಿ ಕಲ್ಪನಾಳೇ ಅವನನ್ನು ಸ್ಕೂಲಿಗೆ ಬಿಟ್ಟು ಬರುತ್ತಿದ್ದಳು. ಸ್ಕೂಲಿನ ಗೇಟ್ ಬಳಿ ಬರುತ್ತಿದ್ದಂತೆಯೇ ಅವನು ಅವಳನ್ನು ಬಿಟ್ಟು ಜಿಗಿದು ಓಡಿದನು. ಅದಾಗಲೇ ಸ್ಕೂಲಿನ ರಸ್ತೆಯಲ್ಲಿದ್ದ ಎಲ್ಲಾ ಫುಟ್ ಪಾತುಗಳ ತುಂಬಾ ಸ್ಕೂಲ್ ಮಕ್ಕಳು ತಮ್ಮ ಭಾರದ ಬ್ಯಾಗುಗಳನ್ನು ಹೊತ್ತುಕೊಂಡು ಹೋಗುತ್ತಿದ್ದರೆ, ಅವರ ಮಧ್ಯೆ ತೂರಿಕೊಂಡು ತನಗೆ ಬೇಕಾದ ವೇಗದಲ್ಲಿ ಓಡಲು ಪ್ರವೀಣನಿಗೆ ಸ್ವಲ್ಪ ಕಷ್ಟವೇ ಆಯಿತು. 
ಅವನು ಹಾಗೆ ಅವಸರ ಪಡಲು ಅವನಿಗೆ ಕಾರಣವಿತ್ತು. ಅವನು ಸ್ಕೂಲಿಗೆ ಬೇಗ ಹೊರಡುತ್ತಿದ್ದುದೇ ಆ ಕಾರಣಕ್ಕೆ. ಬೆಳಿಗ್ಗೆ 8.45 ಕ್ಕೆ ಬೆಲ್ ಹೊಡೆಯುವ ಮೊದಲು, ಆಟವಾಡಲು ಅವನ ಬತ್ತಳಿಕೆಯಲ್ಲಿ ಎಲ್ಲಾ ಸಿದ್ಧತೆಯಿತ್ತು. ಬ್ಯಾಗಿನಲ್ಲಿ ಕ್ರಿಕೆಟ್ ಕಾರ್ಡ್ಸ್ ಇದ್ದವು. ಅವುಗಳನ್ನು ಸ್ನೇಹಿತರ ಜೊತೆ ವಿನಿಮಯ ಮಾಡಿಕೊಳ್ಳುವುದಿತ್ತು, ಗಾಳಿ ಪಟ ಬಿಡಲು ದಾರದುಂಡೆ ಸಿದ್ಧವಾಗಿತ್ತು, ವಾಶ್ ರೂಮಿನಲ್ಲಿ ಗೋಡೆಯ ಮೇಲೆಲ್ಲ ನೀರೆರಚಲು ಚಿಕ್ಕ ವಾಟರ್‍ಗನ್ ಕೂಡ ಇತ್ತು, ಅದಲ್ಲದೇ ಬರೀ ಗಲಾಟೆ ಮಾಡಲು ಒಂದು ಪೋಲೀಸ್ ವಿಷಲ್. ಆ ಮಕ್ಕಳ ಗುಂಪಿನಲ್ಲಿ ತನ್ನ ಕ್ಲಾಸಿನ ಸ್ನೇಹಿತರ ಹೆಸರನ್ನು ಕೂಗುತ್ತಾ ಅವನು ಓಡಿದ- “ಏ ಆಕಾಶ್, ಹೇ ಶರನ್, ಕಾರ್ತಿಕ್, ಅರುಣ್ - ಕ್ರಿಕೆಟ್ ಕಾರ್ಡ್ಸ್ ತಂದಿದೀರಲ್ವೇನ್ರೋ?”  
ಆ ಸ್ಕೂಲಿನಲ್ಲಿ ಎಲೆಕ್ಟ್ರಾನಿಕ್ ಬೆಲ್ಲಿನ ಸದ್ದು – ಮಕ್ಕಳಿಗೆ ಖುಷಿಯಾಗುವಂತೆ ಐಸ್ ಕ್ಯಾಂಡಿಯವನ ಗಾಡಿಯ ಬೆಲ್ಲಿನಂತೆ ಶಬ್ದ ಬರುತ್ತಿತ್ತು - 8.45ಕ್ಕೆ ಸ್ಕೂಲಿನ ಬೆಲ್ ಹೊಡೆಯುವ ಹೊತ್ತಿಗೆ ಪ್ರವೀಣ ಒಮ್ಮೆ ದಾರದುಂಡೆ ಬಿಚ್ಚುವುದು ಹೇಗೆ ಎಂದು ತೋರಿಸಿ, ಗಾಳಿಪಟಕ್ಕೆ ತನ್ನ ಪುಸ್ತಕದ ಒಂದು ಪೇಜ್ ಹರಿದು, ಇಬ್ಬರು ಗೆಳೆಯರ ಜೊತೆ ಕ್ರಿಕೆಟ್ ಕಾರ್ಡ್ಸ್ ವಿನಿಮಯ ಮಾಡಿಕೊಂಡು, ಒಂದು ಜಂಪ್ ಜಂಪ್ ಆಟ ಆಡಿ ಆಗಿತ್ತು. 
ಬೆಲ್ ಒತ್ತುತ್ತಿದ್ದ ನ್ಯಾನಿ ಮಿಸ್ ಈ ಮಕ್ಕಳ ಗಮನ ಸೆಳೆಯಲೆಂದು ಇನ್ನೂ ಒಂದಷ್ಟು ಹೊತ್ತು ಅದನ್ನು ಅದುಮಿಕೊಂಡೇ ನಿಲ್ಲಬೇಕಾಗಿ ಬಂದಿತ್ತು. ಮಕ್ಕಳೆಲ್ಲಾ ಮೆಟ್ಟಿಲ ಮೇಲೆ ಜಿಗಿಯುತ್ತಾ ಕಾರಿಡಾರಿನ ತುಂಬಾ ತುಂಬಿಕೊಂಡು ತಮ್ಮ ತರಗತಿಗಳಿದ್ದ ದಿಕ್ಕಿನಲ್ಲಿ ಹೋಗಲಾರಂಭಿಸಿದರು. ಪ್ರವೀಣನ ಕ್ಲಾಸಿನ ಹುಡುಗರು ಪೂರ್ತಿ ಹುಮ್ಮಸ್ಸಿನಲ್ಲಿದ್ದರು. ಆಕಾಶ್, ಶರನ್, ಕಾರ್ತಿಕ್, ಶ್ರೇಯಸ್, ಉಲ್ಲಾಸ್ ಅವರ ಹಿಂದೆ ತಮ್ಮದೇ ಲೋಕದಲ್ಲಿ ತೇಲುತ್ತಾ ಜೋರಾಗಿ ನಗುತ್ತಾ ಸಾಗಿದ ಹುಡುಗಿಯರು.  
ಸಾಲಿನಲ್ಲಿ ಎದುರಿಗಿದ್ದ ಮಕ್ಕಳು ಕ್ಲಾಸಿನ ಹೊಸ್ತಿಲ ಬಳಿ ಬಂದಾಗಲೇ ಮೂರನೇ ಕ್ಲಾಸಿನ ಮಕ್ಕಳಿಗೆ ತಮಗೆ ಕಾದಿರುವ ಗಂಡಾಂತರದ ಅರಿವಾಗಲಿಲ್ಲ. ಹಿಂದೆ ನಿಂತಿದ್ದವರು ಕುತೂಹಲ ತಾಳಲಾರದೆ ಮುನ್ನುಗ್ಗಲಾರಂಭಿಸಿದರು. ಒಳಗೆ ನೋಡಿದರೆ, ಇಷ್ಟು ದಿನ ಅರ್ಧ ವೃತ್ತಾಕಾರದಲ್ಲಿರುತ್ತಿದ್ದ ಡೆಸ್ಕುಗಳೆಲ್ಲಾ ( ರೂಪಾ ಮಿಸ್ ಯಾವಾಗಲೂ, ಕಾಡಿನ ಮಧ್ಯೆ ಬೆಂಕಿ ಕಾಯಿಸಿಕೊಂಡು ಅದರ ಸುತ್ತ ಕೂತಿದ್ದೇವೆ ಎಂದು ಹೇಳುತ್ತಿದ್ದರು) ಉದ್ದಕ್ಕೆ ಜೋಡಿಸಲ್ಪಟ್ಟಿದ್ದವು. “ಅಯ್ಯೋ, ಡೆಸ್ಕುಗಳನ್ನೆಲ್ಲಾ ಉದ್ದುದ್ದಾ ಜೋಡಿಸಿದ್ದಾರೆ ಅನ್ನಿಸತ್ತೆ - ಥೂ, ಚೆನ್ನಾಗೇ ಇಲ್ಲ” ಗುಂಡುಗುಂಡಗೆ ಕೆಂಪಗಿದ್ದ ಅನನ್ಯ ರಾಗ ತೆಗೆದಳು. 
ಪ್ರವೀಣನಿಗೆ ಅವಳು ಅಡ್ಡಲಾಗಿ ನಿಂತಿದ್ದಳು. ಅನನ್ಯ ಸ್ವಲ್ಪ ವಿಚಿತ್ರ ಹುಡುಗಿ. ಸಣ್ಣ ವಯಸ್ಸಿನವಳಾದರೂ ಬೇಡದ್ದು ಮಾತನಾಡಲು ಕಮ್ಮಿ ಇರಲಿಲ್ಲ. “ಹೇ ಮಳೆ ಬರ್ತಾ ಇದೆ ಕಣ್ರೋ” ಎಂದು ಕೂಗಿಬಿಡುತ್ತಿದ್ದಳು. ಆ ಹುಡುಗರೋ ಮೊದಲೇ ಪುಂಡರು. ಹೋ ಎಂದು ಕಿಟಕಿ ಕಡೆ ಓಡುತ್ತಿದ್ದರು. ಅಥವಾ “ಹೇ, ಬನ್ರೋ, ಊಟಕ್ಕೆ ಬೆಲ್ ಹೋಡೀತು” ಎಂದು ಉದ್ಗಾರ ತೆಗೆದುಬಿಡುತ್ತಿದ್ದಳು. ಡೆಸ್ಕುಗಳನ್ನು ಸಾಲಿನಲ್ಲಿ ಜೋಡಿಸಿದ್ದು, ಸರಿ “ಯಾಕೆ?” ಎನ್ನುವ ಪ್ರಶ್ನೆ ಪ್ರವೀಣನನ್ನು ಹೆಚ್ಚು ಕಾಡಲಾರಂಭಿಸಿತು. ಯೋಚಿಸುತ್ತಾ ನಿಂತ ಅವನಿಗಾಗಿಯೇ ಹೇಳಿದ ಉತ್ತರ ಎಂಬಂತೆ ಯಾರೋ ಎರಡು ಕೈ ಸೇರಿಸಿ ಚಪ್ಪಾಳೆ ಹೊಡೆದದ್ದು ಕಿವಿಗೆ ಗುಡುಗಿನಂತೆ  ಅಪ್ಪಳಿಸಿತು. 
ಎಲ್ಲರಿಗಿಂತ ಮುಂದೆ ನಿಂತಿದ್ದ ಆಕಾಶ್ ಕ್ಲಾಸಿನ ಹೊಸ್ತಿಲಲ್ಲಿ ನಿಂತು “ ಏನೋ ಇದು ಏನೇನೋ ಆಗಿ ಬಿಟ್ಟಿದೆ” ಎಂದು ಉದ್ಗರಿಸಿದ. 
ಎನೋ ಗುಡುಗಿದ ಸದ್ದು - “ಏನಿದು? ಏನಿದೆಲ್ಲಾ” ಇನ್ನೇನು ಹೊಡೆದೇ ಬಿಡುವರೇನೋ, ಬೈಯಲ್ಲಿಕ್ಕೇ ಮಾಡಿಸಿದ್ದೇನೋ ಎಂಬಂತಹ ದನಿ. “ನೀವೆಲ್ಲಾ ಏನು ದನಗಳ ದೊಡ್ಡಿಯಲ್ಲಿದೀರಾ, ಸ್ಕೂಲಿನಲ್ಲಿದೀರಾ? ಏನದು ಬಾಯಿ ತೆಕ್ಕೊಂಡು ಹಾ ಅಂತ ನೋಡ್ತಾ ನಿಂತಿದ್ದೀರಾ? ಸಾಲಾಗಿ ಬನ್ನಿ! ಸಾಲಾಗಿ, ಸಾಲಾಗಿ” 
ಗುಡುಗಿನಂತೆ ಎಲ್ಲಾ ತಲೆಗಳೂ ದನಿ ಬಂದತ್ತ ತಿರುಗಿದವು. 
ಬಿಟ್ಟ ಬಾಯಿ ಬಿಟ್ಟು ನೋಡುತ್ತಾ ನಿಂತರು. ಡ್ರೀಮ್ ಸ್ಕೂಲಿನ ಮೂರನೇ ಕ್ಲಾಸಿನ ಮಕ್ಕಳಿಗೆ ಕ್ಯೂ ನಿಂತು ಯಾವತ್ತೂ ಅಭ್ಯಾಸವಿದ್ದಿಲ್ಲ.  ಆದರೆ ಅವರಿಗೆ ಆಘಾತವೆನಿಸಲು ಬೇರೆ ಕಾರಣವಿತ್ತು. ಆ ಭಯಂಕರ ಬೈಯುವ ದನಿಯಲ್ಲಿ ಆಜ್ಞೆ ಮಾಡುತ್ತಿದ್ದವರನ್ನು ನೋಡಿದಾಗ ಅವರಿಗೆಲ್ಲಾ ತಾವು ಇನ್ನೇನು ಮುಳುಗಿ ಸಾಯಲಿದ್ದೇವೆ ಎಂಬ ಅನುಭವ. 
ಯಾವಾಗಲೂ ಚೂಡಿದಾರ್, ಶೂಸ್ ಹಾಕಿಕೊಂಡು ಬಂದು ನಗುತ್ತಾ ನಿಂತಿರುತ್ತಿದ್ದ ರೂಪಾ ಮಿಸ್ ಜಾಗದಲ್ಲಿ ಒಳ್ಳೆ ಸ್ಕೇಲಿನಂತೆ ನೆಟ್ಟಗೆ ಉದ್ದಕಿದ್ದ, ಅರೆ ಮಾಸಿದ ಸಿಲ್ಕ್ ಸೀರೆಯುಟ್ಟು ಒಂದು ಸಾಧಾರಣ ಚಪ್ಪಲಿ ಹಾಕಿಕೊಂಡ ಈಕೆ ಒಂದು ಕೈಯಲ್ಲಿ ಒಂದು ಕುಂಡದಲ್ಲಿ ಸಣ್ಣ ಗಿಡ, ಹಾಗೂ ಇನ್ನೊಂದು ಕೈಯಲ್ಲಿ ರೂಪಾ ಮಿಸ್ ಕ್ಲಾಸಿಗೆ ತರುತ್ತಿದ್ದ ಕ್ಲಾಸಿನ ರೆಜಿಸ್ಟರ್ ಇಟ್ಟುಕೊಂಡು ನಿಂತಿದ್ದಳು. ಆ ಸಣ್ಣ ಉದ್ದನ ದೇಹದ ಮೇಲೆ ದಪ್ಪ ಕನ್ನಡಕ. ಕೂದಲು ಒಳ್ಳೆ ಮಾಟಗಾತಿಯ ಹಾಗೆ ಎಲ್ಲಾ ಹಣ್ಣಾಗಿತ್ತು. ಅದನ್ನು ಗಂಟು ಕಟ್ಟಿಕೊಂಡಿದ್ದಳು. ಅವಳ ಕಣ್ಣು ನೋಡಿದರೆ ಅವಳು ರಾಕ್ಷಸಿಯೇ ಇರಬೇಕು ಎಂದೆನಿಸುವಂತಿದ್ದಳು. ಕಥೆಪುಸ್ತಕಗಳಲ್ಲಿ, ಸಿನಿಮಾ ಸೀರಿಯಲ್ ಗಳಲ್ಲಿ ನೋಡಿದ ಭಯಂಕರ ರಾಕ್ಷಸಿಯಂತೆಯೇ ಇದ್ದಾಳೆನಿಸಿತು, ಪ್ರವೀಣನಿಗೆ. ಆಕೆಯನ್ನು ನೋಡಿ ಭಯಭೀತನಾದ ಪ್ರವೀಣ ಉಗುಳು ನುಂಗಿಕೊಂಡನು.   
ಮತ್ತೆ ಗುಡುಗು. “ಎಲ್ಲರೂ ಕ್ಯೂನಲ್ಲಿ ನಿಲ್ಲಿ. ಎಲ್ಲಿ, ಬಾಯ್ಸ್ ಒಂದು ಕಡೆ, ಗರ್ಲ್ಸ್  ಒಂದು ಕಡೆ.” ಅವರನ್ನು ತಿವಿದು, ಹಿಂದಕ್ಕೆ ತಳ್ಳಿ, ಮುಂದಕ್ಕೆಳೆದು, ಅಂತೂ ಆ ಆಕಾರವಿಲ್ಲದ ಗುಂಪಿಗೆ ಒಂದು ಕ್ಯೂನ ಆಕಾರ ತಂದು ನಿಲ್ಲಿಸಿ, ಮೂಗಿನ ಮೇಲೆ ಕನ್ನಡಕ ಸರಿ ಮಾಡಿಕೊಂಡು ಒಮ್ಮೆ ನಿಟ್ಟಿಸಿ ನೋಡಿದಳು. “ನಾನು ಇಡೀ ಜನ್ಮದಲ್ಲೇ ಇಷ್ಟು ಕೆಟ್ಟ ಕ್ಯೂ ನೋಡಿಲ್ಲ. ಸರಿ, ಒಳಗೆ ನಡೆಯಿರಿ” ಎಂದು ಗುಡುಗಿದಳು. ಅವಳು ಚಪ್ಪಾಳೆ ಹೊಡೆದು ಅವರನ್ನು ಕ್ಲಾಸಿಗೆ ಕಳಿಸುತ್ತಿದ್ದರೆ, ಅವರು ಸ್ತಂಭೀಭೂತರಾಗಿ ಮಾತಿಲ್ಲದೆ ಒಳಕ್ಕೆ ನಡೆದರು. ಒನ್, ಟೂ, ಥ್ರೀ,. . . . ಎಲ್ಲಿ, ಒನ್, ಟೂ, ಥ್ರೀ, ಹುಡುಗರೆಲ್ಲಾ ಈ ಕಡೆ ಗೋಡೆ ಕಡೆ, ಹುಡುಗಿಯರೆಲ್ಲಾ ಕಿಟಕಿ ಕಡೆ ನಿಮ್ಮ ಡೆಸ್ಕಿನ ಹತ್ತಿರ ನಿಂತುಕೊಳ್ಳಿ. ಎಲ್ಲರೂ ಯೂನಿಫಾರಂ ಸರಿಮಾಡಿಕೊಳ್ಳಿ, ಸ್ವೆಟರ್ ಬಿಚ್ಚಿ. ಹೇ, ನೀನು, ಏನು ಹ್ಯಾ ಅಂತ ನೋಡ್ತಾ ನಿಂತಿದ್ದೀಯಲ್ಲ, ಏನು ನಿನ್ನ ಹೆಸರು?”
“ಇಂ, ಇಂ, ಇಂ..” ಆ ಹುಡುಗಿ ತೊದಲಲಾರಂಭಿಸಿದಳು.
“ಜೋರಾಗಿ ಮಾತಾಡು, ಗಂಟಲಲ್ಲೇ ಮಾತಾಡುವವರು ನನಗೆ ಇಷ್ಟವಾಗುವುದಿಲ್ಲ.”
“ಇಂಚರ ಪಟೇಲ್.”
“ಸರಿ. ಇಂಚರಾ ಪಟೇಲ್, ಇನ್ನು ಮುಂದೆ ನೀನು ಸ್ವೆಟರ್ ಮಾನಿಟರ್. ಎಲ್ಲರ ಸ್ವೆಟರ್ ತೊಗೊಂಡು, ನೀಟಾಗಿ ಮಡಚಿ ಕೊನೇ ಬೆಂಚಿನ ಮೇಲಿಡಬೇಕು. ಏನು ಕೇಳಿಸಿತಾ? ಅರ್ಥ ಆಯಿತಾ? ಹಾಗೆ ನನ್ನನ್ನೇ ನೋಡ್ತಾ ನಿಂತುಕೋಬೇಡಾ.” 
ಯಾವಾಗಲೂ ಲೈಫ್ ಬಾಯ್‍ನ ಬಂಟಿಯಂತೆ ಸ್ಲೋ ಆಗಿರುತ್ತಿದ್ದ ಇಂಚರ ಇಂದು ಕಾಂಪ್ಲಾನ್ ಹುಡುಗಿಯಂತೆ ಚುರುಕಾಗಿ ಕ್ಲಾಸು ತುಂಬಾ ಓಡಾಡಿ 8-10 ಸ್ವೆಟರುಗಳನ್ನು ಸಂಗ್ರಹಿಸಿ ಎಲ್ಲವನ್ನೂ ಜೋಡಿಸಿಟ್ಟಳು. 
ಈ ಹೊಸ ಮಿಸ್ ಈಗ ಮತ್ತೆ ಜೋರಾಗಿ “ಎಲ್ಲರೂ ಬೆಂಚಿನ ಮೇಲೆ ನೆಟ್ಟಗೆ ಕುಳಿತುಕೊಳ್ಳಿ. ಎಲ್ಲರೂ ಡೆಸ್ಕಿನ ಮೇಲೆ ಕೈ ಇಟ್ಟುಕೋಬೇಕು.” ಆಕೆ ಮಾತನಾಡಿದರೆ, ದೊಡ್ಡ ನಾಯಿಯೊಂದು ಭಯಂಕರ ಬೊಗಳಿದಂತಿತ್ತು. ಎಲ್ಲರೂ ತಕ್ಷಣ ಆಕೆ ಹೇಳಿದಂತೆ ಮಾಡಿದರು.  ಆಕೆ ಎರಡು ಬಾರಿ ಕ್ಲಾಸಿನ ಉದ್ದಗಲಕ್ಕೂ ನಡೆದು, ಕಿಟಕಿಯ ಮೇಲಿಟ್ಟಿದ್ದ ಕುಂಡದಲ್ಲಿದ್ದ ಗಿಡ ತೋರಿಸಿ ಹೇಳಿದಳು “ಮಕ್ಕಳು ಮತ್ತೆ ಸಣ್ಣ ಗಿಡಗಳು, ಯಾವಾಗಲೂ ಕ್ಲಾಸಿನಲ್ಲಿ, ಒಳಗಡೆನೇ ಇರಬೇಕು.”…ಒಮ್ಮೆ ಇಡೀ ಕ್ಲಾಸಿನ ಮೇಲೆ ಕಣ್ಣಾಡಿಸಿ “ಯಾಕೆ ಅಂತ ಯಾರಾದ್ರೂ ಹೇಳ್ತೀರಾ?”
ತರಗತಿಯಲ್ಲಿ ಮೌನ ಆವರಿಸಿತು. ಒಬ್ಬಿಬ್ಬರಿಗೆ ನಗು ಉಕ್ಕಿ ಬರುತ್ತಿತ್ತಾದರೂ ಅದನ್ನು ತಡೆದುಕೊಂಡಂತಿತ್ತು. 
“ಸರಿ, ನಾನೇ ಹೇಳ್ತೀನಿ. ಗಿಡಗಳು, ಮಕ್ಕಳು, ಎರಡೂ ಜೀವಿಗಳು. ಸರಿಯಾಗಿ ಪೋಷಣೆ ಮಾಡಿದರೆ ಮಾತ್ರವೇ ಅವು ಸರಿಯಾಗಿ ಬೆಳೆಯಬಲ್ಲವು. ಮತ್ತೆ ಒತ್ತಿ ಹೇಳ್ತೀನಿ- ಸರಿಯಾಗಿ. ಸರಿಯಾಗಿ. ಅವರು ಹೇಳಿದ್ದಕ್ಕೆಲ್ಲಾ ಹೂಂ ಅಂತ, ಅವರು ಕೇಳಿದ್ದನ್ನೆಲ್ಲಾ ಒಪ್ಪುತ್ತಾ, ಅತಿ ಮುದ್ದು ಮಾಡೋದಲ್ಲಾ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ, ಅಂತ ಹೇಳ್ತಾರಲ್ಲ, ಹಾಗೆ.” ಮತ್ತೊಮ್ಮೆ ಸೀರೆ ಸರಿಪಡಿಸಿಕೊಳ್ಳುತ್ತಾ ಕೈಯಲ್ಲಿ ಒಂದು ಸ್ಕೇಲು ಹಿಡಿದು ಇಡೀ ಕ್ಲಾಸಿನುದ್ದಗಲಕ್ಕೂ ಒಂದು ಸುತ್ತು ಹಾಕಿದಳಾಕೆ. ನಾನು “ಬನಶಂಕರಿ ಮಿಸ್ಸು. ಬ  ನ   ಶಂ  ಕ   ರಿ ಮಿಸ್ಸು. ಗೊತ್ತಾಯ್ತಾ?” ಎಂದು ಸ್ಪಷ್ಟವಾಗಿ ಮತ್ತೆ ಕೂಗಿ ಹೇಳಿ, “ ನಾನು ಪ್ರಶ್ನೆ ಕೇಳಿದಾಗ, ಮಿಸ್ ಅಂತ ಹೇಳಬೇಕು. ತಿಳಿಯಿತಾ?” ………
ಕೊನೇ ಬೆಂಚಿನ ಮೇಲೆ ಕೂತಿದ್ದ ಆಕಾಶನಿಗೆ ಅದು ಸರಿಯಾಗಿ ಕೇಳಿಸಲಿಲ್ಲ, ಪಕ್ಕದಲ್ಲಿದ್ದ ಪ್ರವೀಣನನ್ನು ಕೇಳಿದನು. “ಏನೋ ಅವರ ಹೆಸರು? ನಂಗೆ ಸರಿಯಾಗಿ ಕೇಳಿಸಲಿಲ್ಲ”
ಬನಶಂಕರಿ ಮಿಸ್ಸು ತಮ್ಮ ಡೆಸ್ಕಿನ ಮೇಲೆ ಸ್ಕೇಲಿನಿಂದ ಕುಟ್ಟುತ್ತಾ, “ಯಾರದು ಹಿಂದೆ ಮಾತನಾಡುತ್ತಾ ಇರೋದು? ಕೇಳಿಸ್ತಾ?” ಎಂದು ಒಮ್ಮೆ ಗದರಿದಳು. ಆ ನಂತರ ಗಂಟಲು ಸರಿಮಾಡಿಕೊಂಡು “ನಾನು ರಿಟೈರ್ ಆಗೋದಿಕ್ಕೆ ಮುಂಚೆ ನಲವತ್ತಾ ಆರು ವರ್ಷ ಹುಡುಗ-ಹುಡುಗಿಯರಿಗೆ ಪಾಠ ಮಾಡಿದ್ದೇನೆ. ನನಗೆ ಯಾರೂ ಮೋಸ ಮಾಡಕ್ಕೆ ಆಗಲ್ಲ. ಹಾಗಾಗಿ ಯಾರೂ ಕೂಡ ತಂಟೆ ಮಾಡೋ ಪ್ರಯತ್ನಾನೂ ಪಡಬೇಡಿ.  ರೂಪಾ ಮಿಸ್ಸು, ವಾಪಸ್ಸು ಬರೋದು ಎಷ್ಟು ದಿನ ಆಗತ್ತೋ ಗೊತ್ತಿಲ್ಲಾ. ಅವರು ಬರೋವರೆಗೂ ನಾನೇ ನಿಮಗೆ ಟೀಚರ್, ನಿಮ್ಮ ಇನ್ ಚಾರ್ಜ್” ತನ್ನ ಕೈಗಳನ್ನು ಮುಂದೆ ಬೆಸೆದುಕೊಂಡು, ತನ್ನ ಅನುಭವಸ್ಥ ಕಣ್ಣುಗಳಿಂದ ಒಮ್ಮೆ ಇಡೀ ಕ್ಲಾಸಿನ ಮೇಲೆ ದೃಷ್ಟಿ ಹಾಯಿಸಿದಳು. 
“ನೀವೆಲ್ಲಾ ಎಷ್ಟು ಬುದ್ಧಿವಂತರು ಅಂತ ನನಗೆ ಗೊತ್ತಿಲ್ಲಾ. ಅದಕ್ಕೇ ಈಗ ನಿಮ್ಮ ಶನಿವಾರದ ಹೋಂವರ್ಕ್  ಮೇಲೆ ಕಣ್ಣಾಡಿಸೋಣ. ನೀವೆಲ್ಲಾ ಅದನ್ನ ಮುಗಿಸಿದೀರಾ ಅಂದುಕೊಂಡಿದೀನಿ. ರೂಪಾ ಮಿಸ್ ನಿಮಗೆ ಕೊಟ್ಟ ಹೋಂವರ್ಕ್ ಏನು ಅಂತ ನಂಗೆ ಕೊಟ್ಟು ಹೋಗಿದಾರೆ. ನೀವೆಲ್ಲಾ ಅದನ್ನ ಬರೆದುಕೊಂಡು ಬಂದಿದೀರಾ ಅನ್ನಿಸತ್ತೆ. ಎಲ್ಲಿ ಎಲ್ಲರೂ ನಿಮ್ಮ ನಿಮ್ಮ ಪುಸ್ತಕ ತೆಗೀರಿ. ಅಲ್ಲಿ ಇಲ್ಲಿ ನೋಡೋದಲ್ಲಾ. ತಕ್ಷಣ ತೆಗೀಬೇಕು. ಎಲ್ಲಿ, ಬಿ ರೆಡಿ.”
ಕೊನೇ ಬೆಂಚಿನಲ್ಲಿದ್ದ ಪ್ರವೀಣನಿಗೆ ತಲೆ ಧಿಂ ಎಂದಿತು. ಆ ಸಿಲ್ಕ್ ಸೀರೆಯುಟ್ಟ ರಾಕ್ಷಸಾಕೃತಿಯನ್ನು ಬಾಯ್ದೆರೆದು ನೋಡುತ್ತಾ ಸುಮ್ಮನಿದ್ದು ಬಿಟ್ಟನು. ಎಲ್ಲರೂ ಬ್ಯಾಗಿನಿಂದ ಪುಸ್ತಕ ತೆಗೆದ ಶಬ್ದ ಕೇಳಿಸುತ್ತಿದ್ದರೆ, ತಾನೇನು ಮಾಡಬೇಕೋ ತೋಚದಂತಾಯಿತು. ಹಿಂದಿನ ದಿನ ಕಬ್ಬನ್ ಪಾರ್ಕಿನಿಂದ ಬರುತ್ತಿದ್ದಂತೆ, ತನ್ನ ರೂಮಿಗೆ ಹೋಗಿದ್ದನು. ಆದರೆ ಹೋಂವರ್ಕ್ ಮುಗಿಸಿರಲಿಲ್ಲ. ಆ ಸಿಲ್ಕ್ ಸೀರೆ ಕ್ಲಾಸಿನ ತುಂಬಾ ಓಡಾಡಿ ಎಲ್ಲರ ಪುಸ್ತಕಗಳನ್ನು ಪರೀಕ್ಷಿಸುತ್ತಿದ್ದರೆ ಅವನು ದಂಗಾಗಿ ನೋಡುತ್ತಾ ಇದ್ದುಬಿಟ್ಟನು. ಆಕೆ ತನ್ನ ಹೆಸರು ಏನೆಂದು ಹೇಳಿದ್ದರು? ಭಯಂಕರಿ… ಹೂಂ. ಭಯಂಕರಿ. ಭಯಂಕರಿ ಮಿಸ್. ತುಟಿ ಕಚ್ಚಿಕೊಳ್ಳುತ್ತಾ ಅವರು ಬರೆಯಿಟ್ಟಂತೆ ನುಡಿದ ಮಾತುಗಳನ್ನು ಕೇಳಿದನು.  
“ಒಳ್ಳೆ ಕೋಳಿಮರಿ ಪೇಜಿನ ತುಂಬಾ ಓಡಾಡಿಸಿದ ಹಾಗಿದೆ. ಇದನ್ನ ಅಕ್ಷರ ಅಂತಾರಾ?” ಪರ್ ಪರ್ - ಯಾರದೋ ಪುಸ್ತಕದ ಪೇಜು ಹರಿದಂತಾಯಿತು. “ಮತ್ತೆ ಬರಿ. ಇದನ್ನ ಓದಿದವರೂ ಪೆದ್ದರಾಗಿಬಿಡ್ತಾರೆ.” ಹಾಗೇ ಮುಂದೆ ಹೋಗಿ “ಏನಿದು ಬರೀ ತಪ್ಪು ಬರಿದಿದ್ದೀಯಲ್ಲಾ? ಒಳ್ಳೆ ಸರ್ಕಸಿದ್ದ ಹಾಗಿದೆ. ಇದು ಒಂದು ಬರವಣಿಗೇನಾ?”  
“ಬರೀ ತಪ್ಪು” ಅವನಿಗೆ ತನಗೇನು ಕೇಳಬೇಕಾಗಬಹುದೋ ಗೊತ್ತಿತ್ತು. ಆ ಸಿಲ್ಕ್ ಸೀರೆ ತನ್ನ ದಿಕ್ಕಿನಲ್ಲಿ ಬರುವುದು ಅವನಿಗೆ ಕಾಣಿಸುತ್ತಿತ್ತು. ಇನ್ನು ಮೂರು ಡೆಸ್ಕುಗಳು. ಆಮೇಲೆ ತನ್ನ ಸರದಿ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರವೀಣ ತನ್ನ ಪುಸ್ತಕ ತೆರೆದನು. ಅದು ಕೈಜಾರಿ, ನೆಲದ ಮೇಲೆ ಬಿದ್ದು ಶಬ್ದವಾಯಿತು. ಜೊತೆಗೆ ಬೇರೆ ಪುಸ್ತಕಗಳು, ಪೆನ್ಸಿಲ್ಲುಗಳು, ಕ್ರಿಕೆಟ್ ಕಾರ್ಡ್ಸ್, ವಾಟರ್ ಗನ್, ಪೋಲೀಸ್ ವಿಶಲ್, ದಾರದ ಉಂಡೆ- ಎಲ್ಲಾ.
“ಆಹಾ ಹಾ. ನಾವು ಇಲ್ಲಿ ಸ್ಕೂಲಿಗೆ ಬರೋದು ಬರೀ ಆಟ ಆಡಕ್ಕೆ ಅಲ್ಲಾ?” ಅವನತ್ತ ಮುನ್ನುಗ್ಗಿದವಳೇ ಅವನ ಮೇಲೆ ಒಂದು ಕಣ್ಣಿಟ್ಟೇ ಬೆಂಚಿನ ಕೆಳಗೆ ಬಗ್ಗಿ ಕಣ್ಣು ಕುಕ್ಕುತ್ತಿದ್ದ ಆ ಅನಿಷ್ಟ ವಸ್ತುಗಳನ್ನು ಎತ್ತಲ್ಲಾರಂಭಿಸಿದಳು. 
ಒಂದು ವಾರ ಕಳೆಯುವುದರೊಳಗೆ ಕಲ್ಪನಾಗೆ ತನ್ನ ಮಗನಲ್ಲಿ ಏನೋ ಸಂಪೂರ್ಣ ಬದಲಾವಣೆ ಎದ್ದು ಕಾಣುತ್ತಿತ್ತು. ಆ ತಂಟೆಕೋರ ಹುಡುಗ ಯಾವುದೋ ಆಳದ ಬಾವಿಯಲ್ಲಿ ಸಿಕ್ಕಿಹಾಕಿಕೊಂಡ ಹಾಗಿತ್ತು. ಈಗ ಸದಾ ಅವಸರದಲ್ಲಿರುತ್ತಿದ್ದ, ಒತ್ತಡಕ್ಕೆ ಸಿಲುಕಿದ ಪ್ರಾಣಿಯಂತೆ, ನಿಮಿಷಕ್ಕೊಮ್ಮೆ ತನ್ನ ಹಿಂದೆ ಯಾರೋ ಬರುತ್ತಿದ್ದಾರೇನೋ ಎಂಬಂತೆ ಮತ್ತೆ ಮತ್ತೆ ತಿರುಗಿ ನೋಡುತ್ತಿದ್ದ. ಆ ಮುಂದಿನ ಸೋಮವಾರವೇ ಅವರಿಗೆ ಅವನ ಆತಂಕದ ಕಾರಣವೇನೆಂಬುದರ ಕುರುಹು ಸಿಕ್ಕಿತು. ಅಂದು ಮಧ್ಯಾಹ್ನ ಮೂರು ಘಂಟೆಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಬಂದ ಇತರ ತಾಯಂದಿರ ಜೊತೆ ಹರಟುತ್ತಾ ಕುಳಿತಿದ್ದಳು. ಯಾವ ಆತಂಕವಿಲ್ಲದೆ ಆ ತಾಯಂದಿರು ಕಟ್ಟೆಗಳ ಮೇಲೆ ಆರಾಮವಾಗಿ ಕುಳಿತು ಅದೂ ಇದೂ ಹರಟುತ್ತಾ ಕುಳಿತಿದ್ದರು.    
ಆ ಘಂಟೆಯ ಶಬ್ದ ಕೇಳುತ್ತಿದ್ದಂತೆ ಒಬ್ಬ ತಾಯಿ “ಆ ಮುದ್ದು ಐಸ್ ಕ್ರೀಮ್ ಗಾಡಿ ಘಂಟೆ” ಎಂದು ಮುಂದುವರೆದು, “ನಿಮಗೆಲ್ಲಾ ಹೇಳಿದೀನಾ, ನಮ್ಮ ಪ್ರಕೃತಿ ಕ್ಲಾಸಿನಲ್ಲಿ ಬರೋ ಶುಕ್ರವಾರ ಒಂದು ಗ್ರಹಚಾರ ಕಾದಿದೀಯಂತೆ. ಮತ್ತೇ ಇಷ್ಟು ದೊಡ್ಡ ಬೆಂಗಳೂರು ಬ್ಯುಸಿ ಸಿಟಿಯಲ್ಲಿ. . . ”
ಅಂದು ಬೆಲ್ ಹೊಡೆದು ತುಂಬಾ ಹೊತ್ತಿನ ನಂತರ, ಎಲ್ಲ ಕ್ಲಾಸಿನ ಮಕ್ಕಳೂ ಹೊರಕ್ಕೆ ಓಡಿಯಾದ ಮೇಲೆ ಕ್ಲಾಸಿನಿಂದ ಹೊರಕ್ಕೆ ಬಂದವರು ಮೂರನೇ ಕ್ಲಾಸಿನ ಮಕ್ಕಳು. ಅವರೇ ಕೊನೇಯವರು. ಅಷ್ಟು ಮಾತ್ರವಲ್ಲ, ಯಾವಾಗಲೂ ತಂಟೆಮಾಡುತ್ತಿದ್ದ ಮಕ್ಕಳು ಏಕೋ ಬಹಳ ಮೆತ್ತಗಾಗಿ ಬಿಟ್ಟಿದ್ದರೆನ್ನಬೇಕು. ಕೆಲವರಂತೂ ತಲೆಸುತ್ತು ಬಂದವರಂತೆ, ಇನ್ನೂ ಕೆಲವರು ಯಾವುದೋ ಲೋಕದಲ್ಲಿ ಕಳೆದು ಹೋದವರಂತೆ. ಪ್ರವೀಣ ಮಾತ್ರ ತನ್ನನ್ನು ಏನೂ ಕೇಳಬಾರದೆಂದು ಅಂಗಲಾಚುವ ಕಣ್ಣುಗಳಿಂದ ತಾಯಿಯತ್ತ ನೋಡುತ್ತಾ ಅವಳ ಕೈಹಿಡಿದು ‘ಮಾತನಾಡಬಾರದು’ ಎಂಬ ಸನ್ನೆ ಮಾಡಿ ಅವಳನ್ನು ದೂರಕ್ಕೆ ಎಳೆದು ಕೊಂಡು ಹೋದನು. ಸ್ವಲ್ಪ ದೂರ ಹೋದ ಮೇಲೇ ಅವನು ಮಾತನಾಡಲು ಬಾಯಿ ತೆರೆದದ್ದು. 
“ಅಮ್ಮಾ ನಮಗೆ ಹೊಸ ಮಿಸ್ಸು ಬಂದಿಲ್ಲಮ್ಮ. ಯಾರೋ ರಾಕ್ಷಸಿ ಬಂದಿದಾಳೆ” ಕಣ್ಣು ಹಿರಿದಾಗಿಸಿ ಮಾತನಾಡಿದನು. “ಅಮ್ಮಾ ನಮಗೆ ಮಿಸ್ ಬದಲಿಗೆ ಒಬ್ಬರು ರಾಕ್ಷಸಿ ಬಂದಿದಾರೆ. ನಿಜವಾಗ್ಲೂ ಅಮ್ಮ" ನಂತರ ತಡೆದು, ಆಕೆಯನ್ನು ತಾನು ಅವಳು ಎಂದು ಕರೆಯಬಾರದೆಂದು, ಸ್ವಲ್ಪ ಯೋಚಿಸಿ “ಅವರು ಥೇಟ್ ಆ ರಾ ರಾ ನಾಗವಲ್ಲಿ ತರಹಾನೇ ಇದಾರೆ. ದೊಡ್ಡ ದೊಡ್ಡ ಕಣ್ಣು. .. ಮತ್ತೆ ಅವರು ಆಟದ ಸಾಮಾನು ಕದೀತಾರಮ್ಮ. ಊಂ. ನಿಜವಾಗಲೂ” ಅವನ ದನಿಯಲ್ಲಿ ಸಿಟ್ಟು, ದುಃಖ ಎರಡೂ ಒಟ್ಟೊಟ್ಟಿಗೇ ಕಾಣಿಸಿಕೊಂಡಿದ್ದವು. 
“ಬೈ ಚಾನ್ಸ್ ಬ್ಯಾಗಿನಲ್ಲಿ ಪುಸ್ತಕದ ಮಧ್ಯೆ ಆಟದ ಸಾಮಾನುಗಳಿದ್ದರೆ, ಅದನ್ನೆಲ್ಲಾ ಕದೀತಾರಮ್ಮ. ನಾನೂ ಅವರಿಗೆ ಚೆನ್ನಾಗಿ ಆಟ ಆಡಿಸ್ತೀನಿ. ಇನ್ನು ಮುಂದೆ ನಾನು ಸ್ಕೂಲಿಗೆ ಬರೋವಾಗ ಆಟದ ಸಾಮಾನೇ ತರೋದಿಲ್ಲ” ಎಂದು ಕೂಗಾಡಿದನು. “ನಾವೆಲ್ಲ ಮಕ್ಕಳು, ಅವರ ಪ್ರಕಾರ ಏನಂತೆ ಗೊತ್ತಾ? ನಾವೆಲ್ಲಾ ಗಿಡಗಳಂತೆ. “ ಅಮ್ಮಾ ಗಿಡಗಳಂತೆ ನಾವು. ಆ ಮಿಸ್ ಹೆಸರು ಏನು ಗೊತ್ತಾ? ಭಯಂಕರಿ ಅಂತ.”
ಅವನ ಒದ್ದಾಟ ನೋಡಲಾರದೇ ಅವನ ತಾಯಿ, ಮನೆಗೆ ಹೋಗುವುದು ಬಿಟ್ಟು, ಬೇಕ್ ಮನ್ ಪೇಸ್ಟ್ರೀಸ್ ಬಳಿ ನಿಂತು, ಅವನ ಪ್ರಿಯವಾದ ಸ್ಟ್ರಾಬೆರಿ ಕೇಕ್ ಕೊಡಿಸಲು ಮುಂದಾದರು. “ಅಮ್ಮಾ ಕೇಕು ತಿನ್ನಕ್ಕೆ ಟೈಂ ಎಲ್ಲಿದೇಮ್ಮಾ?” ಎಂದು ದೈನ್ಯವಾಗಿ ಕೇಳಿದನು. “ನಂಗೆ ಎಷ್ಟೊಂದು ಹೋಂವರ್ಕ್ ಇದೆ ಗೊತ್ತಾ? ಪನಿಷ್ ಮೆಂಟ್ ಹೋಂವರ್ಕ್. ಹತ್ತು ಪದಗಳು, ಹತ್ತುಸಲ, ಅದೂ ಕನ್ನಡ. ಆ ರಾಕ್ಷಸಿ ಕೊಟ್ಟಿದ್ದ ಡಿಕ್ಟೇಷನ್- ಏನು ಉತ್ತಕನನ ಅಂತೆ, ಏನೋ ಹೇಳಿದರು. ಅದರಲ್ಲಿ ನಾನು ತಪ್ಪು ಮಾಡಿದೆ ಅಂತ ನಂಗೆ ಪನಿಷ್ ಮೆಂಟ್. ಮತ್ತೆ ಇಂಗ್ಲೀಷ್ ಸ್ಪೆಲ್ಲಿಂಗ್ಸ್ ಕೂಡ” “ಉಕ್ತಲೇಖನ, ಹತ್ತು ಪದಗಳು, ಹತ್ತುಸಲ?” ಕಲ್ಪನಾ ಪುನರುಚ್ಛರಿಸಿದಳು. “ಟೆಸ್ಟಿನಲ್ಲಿ ಎಷ್ಟು ಪದಗಳಿದ್ದವು?”
“ಹತ್ತು. ನಂದು ಎಲ್ಲಾ ಹತ್ತೂ ತಪ್ಪಾಗಿತ್ತು.”
ಮಂಗಳವಾರ, ಬೇರೆಲ್ಲಾ ತಾಯಂದಿರಿಗಾದಂತೆಯೇ, ಕಲ್ಪನಾಗೂ ಆಶ್ಚರ್ಯ ಕಾದಿತ್ತು. ಡ್ರೀಮ್ ಸ್ಕೂಲಿನ ಮೂರನೇ ತರಗತಿಯ ಮಕ್ಕಳೆಲ್ಲಾ ಸೈನಿಕರಂತೆ ಸಂಯಮದಿಂದ ಮೆಟ್ಟಲಿಳಿದು ಬರುತ್ತಿದ್ದದ್ದನ್ನು ಕಂಡು ಎಲ್ಲರೂ ದಂಗಾದರು. ಟಕ್ ಟಕ್ ಟಕ್ ಮಕ್ಕಳು ಈಚೆ ಆಚೆ ತಿರುಗದೆ ಕೆಳಗಿಳಿದು ಬರುತ್ತಿದ್ದರು. ಅವರ ಹಿಂದೆ ಮೆಟ್ಟಿಲುಗಳ ಮೇಲೆ ಎತ್ತರದಲ್ಲಿ ನಿಂತಿದ್ದ ಸಿಲ್ಕ್ ಸೀರೆಯುಟ್ಟ ವಯಸ್ಸಾದ ಹೆಂಗಸೊಬ್ಬರು- “ಒನ್, ಟೂ, ತ್ರೀ, ಒನ್, ಟೂ, ತ್ರೀ,” ಎಂದು ಕೂಗುತ್ತಾ ಕೊನೆಗೆ ಚಪ್ಪಾಳೆ ತಟ್ಟಿ ಇನ್ನು ಹೋಗಬಹುದು ಎಂದು ಆಜ್ಞೆ ಕೊಟ್ಟಂತೆ, ಮಕ್ಕಳು ಕ್ಯೂನಿಂದ ಹೊರನಡೆದರು. ಕೆಳಗೆ ನೆರೆದಿದ್ದ, ಬಾಯ್ಬಿಟ್ಟು ನೋಡುತ್ತಿದ್ದ ತಾಯಂದಿರನ್ನು ಒಮ್ಮೆ ನೋಡಿ, “ನಿಮ್ಮಲ್ಲಿ ಆಕಾಶ್ ಪ್ರಸಾದ್ ತಾಯಿ ಇದೀರಾ? ಯಾರು, ಆಕಾಶ್ ಪ್ರಸಾದ್ ತಾಯಿ?”
“ನಾನು, ಅರ್ಚನಾ ಪ್ರಸಾದ್, ಆಕಾಶ್ ತಾಯಿ” ಎಂದು ಅಂಜುತ್ತಾ ಒಬ್ಬಾಕೆ ಕೈ ಎತ್ತಿದಾಗ ಬನಶಂಕರಿ ಮಿಸ್ ಸೀದಾ ಅವರತ್ತ ನಡೆದರು. ಉಳಿದ ತಾಯಂದಿರೆಲ್ಲಾ ಮೂಕರಂತೆ ನೋಡುತ್ತಾ ನಿಂತಿದ್ದರು. 
“ನೋಡಿ ಮಿಸೆಸ್ ಅರ್ಚನಾ ಪ್ರಸಾದ್ ಅವರೇ, ನಿಮ್ಮ ಮಗ ಸಮಾಜದಲ್ಲಿ ಒಬ್ಬ ನಾಲಾಯಕ್ ಆಗಿ ಬೆಳೆಯೋ ಭಯ ಇದೆ.” ಆಕೆ ಆಡಿದ ಮಾತುಗಳು ರಸ್ತೆಯ ಕೊನೆಯವರೆಗೂ  ಪ್ರತಿಧ್ವನಿಸಿದಂತಿತ್ತು. “ಟಿವಿ ನೋಡೋದು ಬಹಳ ಮುಖ್ಯ ಅಂತ ನಿಮಗೆ ಅನಿಸಿದರೆ ಪರವಾಗಿಲ್ಲ ಬಿಡಿ. ಅವನು ತಾನು ಪ್ರತಿದಿನ ಮೂರು ಘಂಟೆಗಳ ಕಾಲ ಟಿವಿ ನೋಡ್ತೀನಿ ಅಂತ ತಪ್ಪೊಪ್ಪಿಕೊಂಡಿದಾನೆ.” 
“ಇಲ್ಲಾ ಮಿಸ್, ಅವನು ಹೋಂವರ್ಕ್ ಮುಗಿಸಿದ ಮೇಲೇನೇ ಟಿವಿ ನೋಡೋದು.”
“ನೋಡಿ ಅರ್ಚನಾ ಪ್ರಸಾದ್ ಅವರೇ, ಅವನು ಹೋಂವರ್ಕ್ ಮುಗಿಸುವುದಿಲ್ಲ. ಸುಮ್ಮನೆ ಏನೋ ಬರೆದ ಹಾಗೆ ಮಾಡಿ, ಬರೀ ತಪ್ಪು ತಪ್ಪು ಬರೆದು ತರುತ್ತಾನೆ. ಅವನು ಹೋಂವರ್ಕ್ ಮಾಡುವಾಗ ನೀವು ಸ್ವಲ್ಪ ಗಮನ ಕೊಟ್ಟರೆ ಚೆನ್ನಾಗಿರತ್ತೆ. ಆಯ್ತು ಇನ್ನು ಹೋಗಿ ಬನ್ನಿ ಮಿಸೆಸ್ ಪ್ರಸಾದ್.” 
ಒಮ್ಮೆ ಅವರನ್ನು ದಿಟ್ಟಿಸಿ ನೋಡಿ ತಲೆಯಾಡಿಸಿ, ಬನಶಂಕರಿ ಮಿಸ್ ಮುಂದೆ ನಡೆದೇ ಬಿಟ್ಟರು. ಅಲ್ಲಿ ನೆರೆದಿದ್ದ ತಾಯಂದಿರಿಗೆ ಈ ಆಘಾತದಿಂದ ಸುಧಾರಿಸಿಕೊಳ್ಳಲು ಒಂದು ಇಡೀ ನಿಮಿಷ ಬೇಕಾಯಿತು. ಶರತ್ ತಾಯಿಯಂತೂ, ಇಂದೇ ಶಾಲಾ ಹೆಡ್ ಮಾಸ್ತರರಾದ ಫಾದರ್ ಲೋಬೋ ಬಳಿ ಹೋಗಿ, ಸ್ವಲ್ಪ ದಿನದ ಮಟ್ಟಿಗೆ ಮಾತ್ರವಾಗಿದ್ದರೂ ಸರಿ, ಇಂತಹ ಹೆಂಗಸನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರ ವಿರುದ್ಧ ಪ್ರತಿಭಟನೆ ಸೂಚಿಸಬೇಕೆಂದು ತೀರ್ಮಾನಿಸಿದರು. ಆಕೆಗೆ ಕೆಲವರ ಬೆಂಬಲ ಕೂಡ ಸಿಕ್ಕಿತು. ಆದರೆ ಇದೆಲ್ಲಾ ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಆದ್ದರಿಂದ ಸಹಿಸಿದರಾಯಿತು ಎಂದು ನಿರ್ಧರಿಸಿದರು. ಸುದೀಪ್ ಶರ್ಮಾ ತಾಯಿ, ಕುಮುದಿನಿ ಅಂತೂ ಅಲ್ಲಿಂದ ನಿರ್ಗಮಿಸುತ್ತಿದ್ದ ಆ ಬನಶಂಕರಿ ಮಿಸ್ಸನ್ನು ನೋಡುತ್ತಾ, “ನಾನು ಇವರನ್ನು ಎಲ್ಲೋ ನೋಡಿದ್ದೇನೆ. ನಂಗೆ ಇವರು ಖಂಡಿತಾ ಗೊತ್ತು”ಎಂದು ದೃಢವಾಗಿ ತಲೆಯಲ್ಲಾಡಿಸಿದರು. 
ಮಾರನೇ ದಿನ, ಪ್ರವೀಣ ಶಾಲೆಗೆ ಹೋಗಲು ನಿರಾಕರಿಸಿದ. “ನನ್ನ ಶೂಗೆ ಪಾಲಿಷ್ ಇಲ್ಲ” ಎಂದು ಅಳಲಾರಂಭಿಸಿದ. “ಮಿಸ್‍ಗೆ ತೃಪ್ತಿಯಾಗೋ ತರಹ ಪಾಲಿಷ್ ಇಲ್ಲ. ಅದು ಕನ್ನಡಿ ತರಹ ಮಿರುಗಬೇಕಂತೆ. ಪಾಲಿಷ್ ಎಲ್ಲಿ? ನನ್ನ ಶೂ ಪಾಲಿಷ್ ಆಗೋವರೆಗೂ ನಾನು ಸ್ಕೂಲಿಗೆ ಹೋಗಲ್ಲಾ.”
"ಪ್ರವೀಣ, ನೀನು ನಿನ್ನೇನೇ ಇದರ ಬಗ್ಗೆ ಯೋಚಿಸಿದ್ದರೆ?” ಎಂದಳು ಕಲ್ಪನಾ.
“ನೀನೂ ಮಿಸ್ ತರಹಾನೇ ಮಾತಾಡ್ತೀಯ. ನಾನು ಪಾಲಿಷ್ ಹಾಕಿಕೊಂಡು ಹೋಗಲಿಲ್ಲಾಂದ್ರೆ ಅವರು ಕೂಡ ಹಾಗೇ ಹೇಳ್ತಾರೆ.” ತಾನು ಹೇಗೆ ಹಾಗೂ ಯಾವಾಗ ಆ ಬನಶಂಕರಿ ಮಿಸ್ ತರಹ ಆದೆನಪ್ಪಾ ಎಂದು ಕಲ್ಪನಾ ಅವತ್ತಿನ ದಿನವೆಲ್ಲಾ ತಲೆ ಕೆಡಿಸಿಕೊಂಡಳು. ತಲೆಯಲ್ಲಿ ಇನ್ನೂ ಆ ಪ್ರಶ್ನೆಗೆ ಉತ್ತರ ಹುಡುಕುತ್ತಿದಾಗಲೇ ಅವಳು ಡ್ರೀಮ್ ಸ್ಕೂಲಿನ ಹೊರಗಡೆ ಬೇರೆ ತಾಯಂದಿರ ಜೊತೆ  ಬಂದು ನಿಂತಿದ್ದಳು.  ಇಂದು ಮೂರನೇ ಕ್ಲಾಸಿನ ಮಕ್ಕಳೆಲ್ಲಾ ಮೆಟ್ಟಿಲಿಳಿದು ಶಿಸ್ತಿನಿಂದ ಬರುತ್ತಿದ್ದುದನ್ನು ನೋಡಿದಾಗ ಅವಳಿಗೆ ಅದು ಆಕರ್ಷಕವಾಗಿ ಕಂಡಿತು. ಇಂದು ಆ ಮಿಸ್ ಅದೇನೋ ಹೊಸದಾಗಿ ಘೋಷಿಸುವಂತಿತ್ತು.  ಮೆಟ್ಟಿಲಿಳಿದು ಕೆಳಗೆ ಬಂದ ಮಕ್ಕಳು ಇಬ್ಬದಿಯಲ್ಲಿ ನಿಂತಾಗ ಮಧ್ಯದಲ್ಲಿ ಗಸ್ತು ಹೋಗಿ ಬಂದು ಆ ಮಿಸ್ ಮಕ್ಕಳ ಮುಂದೆ ನಿಂತು ದ್ವನಿಯೆತ್ತಿ ಘೋಷಿಸಿದರು. “ಮಕ್ಕಳೇ ನಾಳೆ ಬರುವಾಗ ಎಲ್ಲರೂ ಪೆನ್ ತರಬೇಕು.”
ಆ ಗುರುವಾರ ಕುಮುದಿನಿಗೆ ಕೊನೆಗೂ ಆ ಬನಶಂಕರಿ ಮಿಸ್ಸನ್ನು ತಾನು ಎಲ್ಲಿ ನೋಡಿದ್ದೇನೆಂಬುದು ನೆನಪಾಯಿತು. ತಾನು ಆಕೆಯಿಂದ ಅಪೇಕ್ಷಿಸಲಾರದ ಶುಭವಾರ್ತೆ ಕೇಳಿದ್ದಕ್ಕೇ ಇರಬೇಕು, ಅವಳ ಮೆದುಳು ಚುರುಕಾಗಿ ಕೆಲಸ ಮಾಡಿತ್ತು. 
 “ಮಿಸೆಸ್ ಶರ್ಮಾ ಅವರೇ, ನಿಮ್ಮ ಮಗ ಮುಂದೆ ಬರ್ತಾ ಇದಾನೆ ಅಂತ ಹೇಳಕ್ಕೆ ನನಗೆ ಖುಷಿಯಾಗತ್ತೆ” ಬನಶಂಕರಿ ಮಿಸ್ ಹತ್ತಿರ ಬಂದು ಹೇಳಿದ್ದರು- “ಸೋಮವಾರ ಉಲ್ಲಾಸನ ಬರವಣಿಗೆ ಕೋಳಿಕಾಲು ತರಹ ಇತ್ತು, ಆದರೆ ಇವತ್ತು ಅವನು ಎಷ್ಟು ಚೆನ್ನಾಗಿ ಬರೆದಿದ್ದಾನೆ ಅಂದರೆ ತುಂಬಾ ಖುಷಿಯಿಂದ ಅವನಿಗೆ ನಾನು ಏ ಗ್ರೇಡ್ ಕೊಟ್ಟೆ.”
ಸೀರೆಯ ಸೆರಗನ್ನು ಸರಿಪಡಿಸಿಕೊಂಡು ನಿರ್ಗಮಿಸುತ್ತಿದ್ದ ಆಕೃತಿ ಮಾತ್ರ ಕಂಡಿತು.   ಆಕೆ ಜನಸಾಗರದ ಮಧ್ಯೆ ಮಾಯವಾಗುವವರೆಗೂ ಕಾಯುತ್ತಿದ್ದ ಕುಮುದಿನಿ ಉದ್ಗರಿಸಿದಳು “ಆಕೆ ಯಾರು ಅಂತ ನಂಗೆ ಗೊತ್ತು. ಅವರನ್ನ ಹಿಂದೆ ಎಲ್ಲೋ ನೋಡಿದೀನೆ ಅನ್ನಿಸುತ್ತಿತ್ತು. ಅದೇ ಆ ಮಂತ್ರಿ ಮಾಲ್‍ನಿಂದ ಆಚೆಗೆ ಹಳೇ ಕಾಲದ ಮನೆಗಳಿದಾವಲ್ಲಾ, ರಾಜಾಜಿನಗರದಲ್ಲಿ, ಶ್ರೀರಾಮಪುರದಲ್ಲಿ, ನೆನಪಿದೀಯಾ, ಹೋದ ವರ್ಷ ರಸ್ತೆ ಅಗಲ ಮಾಡಕ್ಕೆ ಅಂತ ಬಿಲ್ಡಿಂಗ್‍ಗಳನ್ನ  ಜೆಸಿಬಿ ತೊಗೊಂಡು ಬಂದು ನೆಲಸಮ ಮಾಡಿದ್ದರಲ್ಲಾ?" ಈಗ ಎಲ್ಲಾ ತಾಯಂದಿರಿಗೂ ಕುತೂಹಲ ಮೂಡಿತು. ಕುಮುದಿನಿಯನ್ನು ಸುತ್ತುವರೆದು ನಿಂತರು.  "ಈ ಬನಶಂಕರಿ ಮಿಸ್ಸು ಕೂಡ ಆ ಮನೆಗಳಲ್ಲಿದ್ದವರು." ಕುಮುದಿನಿ ಮುಂದುವರೆಸಿದಳು. "ಅವರು ಅವರ ತಾತನ ಕಾಲದಿಂದಲೂ ಅದೇ ಮನೇಲಿ ಇದ್ದು ಬೆಳೆದವರು. ನಾನು ಈ ಜಾಗ ಬಿಟ್ಟು ಕದಲಲ್ಲಾ ಅಂತ ಹೇಳಿದರು. ಕೋರ್ಟ್ ಆರ್ಡರ್ ಬಂದಾಗ ಅವರು ನಿಜವಾಗಲೂನೂ ಬೀದಿಗೆ ಬಂದರು. ಅವರು ರಸ್ತೆ ಪಕ್ಕ ಅವರ ಮನೆ ಸಾಮಾನುಗಳ ಮಧ್ಯೆ, ಅವರ ಗಿಡ ಇಟ್ಟುಕೊಂಡು ಕೂತಿದ್ದರು. ಅವರು ಹಾಗೆ ಕೂತಿದ್ದ ಫೋಟೋ ಪೇಪರಿನಲ್ಲಿ ಬಂದಿತ್ತು. ವಯಸ್ಸಾಗಿರೋ ರಿಟೈರ್ಡ್‍ಟೀಚರ್- ಮದುವೆಯಾಗಿರಲಿಲ್ಲ…ಕೊನೆಗೆ ಯಾರೋ ಪಾಪ ವಾಸಕ್ಕೆ ಅಂತ ಒಂದು ರೂಂ ಹುಡುಕಿಕೊಟ್ಟರು. ಈ ವಯಸ್ಸಿನಲ್ಲಿ ಆ ತರಹ ಅವರು ಬೀದಿಗೆ ಬಂದಿದ್ದು, ಪಾಪ ಅನ್ನಿಸ್ತು. ಪಾಪ ಅವರಿಗೆ ಮನೆಯಿಂದ ಎಬ್ಬಿಸಿದ ಮೇಲೆ ಆ ಗಿಡಗಳನ್ನ ಇಟ್ಟುಕೊಳ್ಳಕ್ಕೆ ಅವರಿಗೆ ಎಲ್ಲೂ ಜಾಗ ಇರಲಿಲ್ಲ."
ಸ್ಕೂಲಿನಿಂದ ಮನೆಗೆ ಹೋಗುವಾಗ ಅಂದಿನ ದಿನ ಮಿಸ್ ಕೊಟ್ಟಿದ್ದ ಕಾಟವನ್ನು ಸವಿವರವಾಗಿ ಹೇಳುತ್ತಾ ಪ್ರವೀಣ್ ಕೇಳಿದ “ಅಮ್ಮಾ ಇವತ್ತು ಪ್ರಜ್ವಲ್ ಸಿಂಹಾ ಒಂದು ಕೆಟ್ಟ ಪದ ಉಪಯೋಗಿಸಿದ್ದಕ್ಕೆ ಭಯಂಕರಿ ಮಿಸ್ಸು ಅವನಿಗೆ ಇಡೀ ದಿನ ಮೂಲೆನಲ್ಲಿ ನಿಂತುಕೊಳ್ಳಕ್ಕೆ ಹೇಳಿದ್ರು. ಅಮ್ಮಾ ಏ ವಿ, ಏವಿಕ್, ಏವಿಕೇಷನ್- ಎವಿ, ಎವಿಕ್, ಎವಿಕ್  ಷನ್ ಅಂದರೇನಮ್ಮ? ಹಾಗಂದರೇನು?” 
ಎವಿಕ್ಷ್‍ನ್ ಅಂದರೆ ಯಾರನ್ನಾದ್ರೂ ಬಲವಂತ ಮಾಡಿ ಪೋಲೀಸರು, ಲಾಯರ್ ಗಳು ಬಂದು ಮನೆ ಖಾಲಿ ಮಾಡು ಅಂತ ಹೇಳಿ ಮನೆಯಿಂದ ಹೊರ ಕಳಿಸೋದು. ಮನೆ ಓನರ್ ಗೆ ನೋಟಿಸ್ ಬಂದರೆ, ಅವರ ಮನೇಲಿ ಇರೋವ್ರು ಮನೆ ಬಿಡಬೇಕಾಗತ್ತೆ.”
“ಅಂದರೆ, ಆ ರಾಕ್ಷಸೀನ, ಮನೆಯಿಂದ ಒದ್ದು ಓಡಿಸಿದ್ರು, ಹೊರಗಡೆ ಓಡಿಸಿದ್ರು, ಅಂತಾನಾ?"
ಕಲ್ಪನಾ ಮನೆಯ ಗೇಟ್ ಹತ್ತಿರ ಬರುತ್ತಿದ್ದಂತೆ ಹೇಳಿದಳು “ ಹಾಗೆಲ್ಲಾ ಅವರ ಬಗ್ಗೆ ಮಾತನಾಡಬೇಡಾ. ಅದು ಅವರಿಗೆ ಅಗೌರವ ಸೂಚಿಸತ್ತೆ. ಟೀಚರ್ಸ್ ಬಗ್ಗೆ ಯಾವಾಗಲೂ ರೆಸ್ಪೆಕ್ಟ್ ಇರಬೇಕು, ಹಾಗೇ ಮಾತಾಡಬಾರದು. ನಾನು ನಿಮ್ಮಪ್ಪ ನಿನ್ನ ವಿಷಯದಲ್ಲಿ ಸ್ವಲ್ಪ ಜಾಸ್ತಿನೇ ಸಲಿಗೆ ಕೊಟ್ಟು ತಪ್ಪು ಮಾಡಿದೀವಾ ಅನ್ನಿಸತ್ತೆ.”
“ಏ, ನಾವು ಅವರಿಗೆ ಇನ್ನೂ ಕೆಟ್ಟ ಕೆಟ್ಟ ಬೈಗುಳ ಹೆಸರು ಇಟ್ಟಿದ್ದೀವಿ. ನೀನು ಅವುನ್ನ ಕೇಳಬೇಕು ಅಷ್ಟೆ.  ಅವರು ನಮಗೆ ಕೊಟ್ಟಿದ್ದ ಕಾಟಕ್ಕೆ ಅವರಿಗೆ ಏನು ಮಾಡಬೇಕು ಅಂತ ಇದೀವಿ ಗೊತ್ತಾ?” ತಾಯಿ ಬಾಗಿಲಿನ ಬೀಗ ತೆಗೆಯುತ್ತಿದ್ದಂತೆ ಅವನು ತನ್ನ ಮಾತು ಅರ್ಧಕ್ಕೆ ನಿಲ್ಲಿಸಿದ. “ಬೆಕ್ಕು ಅಲ್ಲಿ ಮಲಗ್ತಾ ಇತ್ತು, ನಿಂಗೆ ನೆನಪಿದೀಯಾ ಅಮ್ಮಾ?” ಎಂದು ಒಂದು ಮೂಲೆ ತೋರಿಸಿದ. ಇದ್ದಕ್ಕಿದ್ದ ಹಾಗೆ ಅವನ ಮುಖ ಗಂಭೀರವಾಯಿತು. ಮುಖದಲ್ಲಿ ಚಿಂತೆ ಕಾಣಿಸಿತು. ಅಮ್ಮಾ ಪಾಪ ಆ ಬೆಕ್ಕು ಎಲ್ಲಿಗೆ ಹೋಯಿತೋ. ಬಹುಶಃ ಅದಕ್ಕೂ ನೋಟಿಸ್ ಕೊಟ್ಟು ಓಡಿಸಿಬಿಟ್ಟರೇನೋ.”
ಮತ್ತೆ ಇನ್ನೊಂದು ಶುಕ್ರವಾರ ಬಂದಿತು. ಊಟಕ್ಕೆ ಮುಂಚೆ ಬನಶಂಕರಿ ಮಿಸ್ ಕ್ಲಾಸನ್ನು ಉದ್ದೇಶಿಸಿ ಹೇಳಿದರು, “ರೂಪಾ ಮಿಸ್ ಸೋಮವಾರ ವಾಪಸ್ಸು ಬರ್ತಾರೆ ಅಂತ ನಿಮಗೆಲ್ಲಾ ತಿಳಿಸಕ್ಕೆ ನಂಗೆ ಖುಷಿಯಾಗ್ತಾ ಇದೆ. ಇವತ್ತು ಮಧ್ಯಾಹ್ನ ನನ್ನ ಲಾಸ್ಟ್ ಕ್ಲಾಸ್.” ಕ್ಲಾಸಿನಲ್ಲಿ ಗುಸುಗುಸು. ಅವರು ಸದ್ದು ಎಂದು ಹೇಳುವಂತೆ, ಕೈ ಎತ್ತಿದರು.  “ಅಂದರೆ ಅರ್ಥ, ಇವತ್ತು ಶಿಸ್ತು ಕಡಿಮೆ ಆಗತ್ತೆ ಅಂತ ಅಲ್ಲ, ಆದರೆ ನಾನು ನಿಮಗೆ ಒಂದು ಕಥೆ ಓದಿ ಹೇಳಬಹುದು. ನನ್ನ ಹುಡುಗರು ಯಾವಾಗಲೂ ಇಷ್ಟ ಪಡುತ್ತಿದ್ದ ತೆನಾಲಿ ರಾಮನ ಕಥೆಗಳನ್ನು ಓದಿ ಹೇಳಬಹುದು. ನಲವತ್ತಾರು ವರ್ಷ ನನ್ನ ವಿದ್ಯಾರ್ಥಿಗಳು ಇಷ್ಟ ಪಟ್ಟಿದ್ದು. . . ನಿತಿನ್ ಭೋಂಸ್ಲೆ ನೆಟ್ಟಗೆ ಕೂತುಕೋ, ನನ್ನ ಕ್ಲಾಸಿನಲ್ಲಿ ಯಾರಾದರೂ ನಿದ್ದೆ ಮಾಡೋದು ನಂಗೆ ಇಷ್ಟ ಆಗಲ್ಲ ಅಂತ ನಿಮಗೆ ಗೊತ್ತಲ್ಲವಾ?” ರೂಪಾ ಮಿಸ್ ಸೋಮವಾರ ವಾಪಸ್ಸು ಬರುತ್ತಾರೆಂದು ಹೇಳಿದ್ದು ತಪ್ಪಾಯಿತು, ಇನ್ನೇನು ಭಯಂಕರಿ ಮಿಸ್ ಕಾಟ ಸಹಿಸಿಕೊಳ್ಳಲು ಒಂದೆರಡು ಘಂಟೆಗಳು ಮಾತ್ರ ಉಳಿದಿದ್ದವು. ಊಟದ ವಿರಾಮಕ್ಕೆ ಮೊದಲೇ ಕ್ಲಾಸಿನಲ್ಲಿ ಸವಾಲೊಡ್ಡುವ ಎದೆಗಾರಿಕೆ ಹೊಕ್ಕಿಬಿಟ್ಟಿತ್ತು. ಎಲ್ಲರೂ ನೆಟ್ಟಗೆ ಕುಳಿತಿದ್ದರು, ಆದರೆ ಪೂರ್ತಿಯಾಗಿ ಅಲ್ಲ. ಉಲ್ಲಾಸ್ ತನ್ನ ಪೆನ್ಸಿಲ್ ಬಾಕ್ಸನ್ನು ಕೆಳಗೆ ಬೀಳಿಸಿಕೊಂಡನು, ಅದನ್ನು ಎತ್ತಿಕೊಳ್ಳಲು ಅಪ್ಪಣೆ ಕೇಳಲಿಲ್ಲ. 
ಬನಶಂಕರಿ ಮಿಸ್, “ಹೀಗೇಕೆ ಮಾಡಿದೆ?” ಎಂದು ಗದರಿದಾಗ, “ಅದಕ್ಕೇ? ಏನಾಯಿತೀಗ?”
ಭಯಂಕರಿ ಮಿಸ್ ಸೆಟೆದು ನಿಂತು “ಏನಂದೆ?” ಎಂದರು.
ಉಲ್ಲಾಸ್ ತನ್ನತ್ತ ದುರುಗುಟ್ಟಿ ನೋಡುತ್ತಿದ್ದ ಬನಶಂಕರಿ ಮಿಸ್ಸನ್ನು ತಾನೂ ದುರುಗುಟ್ಟಿ ನೋಡಿ, “ಅದಕ್ಕೇ ಎನಂತೀಗ, ಅಂತ ಕೇಳಿದೆ” ಎಂದ.
ಉಲ್ಲಾಸ್ ಈ ರೀತಿ ಉದ್ಧಟತನ್ದಿಂದ ಮಾತಾಡಿದ್ದು ಕೇಳಿ ಪ್ರವೀಣನಿಗೆ ‘ಎಂತಹ ಸೊಕ್ಕು ಇವನಿಗೆ’ ಎನ್ನಿಸಿತು. ಆದರೆ ಅವನಿಗೆ ಉಲ್ಲಾಸನ ಧಿಮಾಕಿಗಿಂತ, ಭಯಂಕರಿ ಮಿಸ್ ಸುಮ್ಮನಿದ್ದದ್ದು ಇನ್ನೂ ಹೆಚ್ಚಿನ ಆಶ್ಚರ್ಯ ಎನ್ನಿಸಿತು. ಅವರು ಅವನನ್ನು ಗದರಲಿಲ್ಲ. ಅವರ ಕಣ್ಣಲ್ಲಿ ಒಂದು ವಿಚಿತ್ರ ನೋಟ ಕಂಡಿತು, ಆ ನಂತರ ಅವರು ತಮ್ಮ ಪಾಠವನ್ನು ಹಾಗೇ ಮುಂದುವರೆಸಿದರು. ಉಲ್ಲಾಸ್ ಮತ್ತೆ ಎರಡನೇ ಬಾರಿ ಅದೇ ರೀತಿ ಪೆನ್ಸಿಲ್ ಬಾಕ್ಸನ್ನು ಬೀಳಿಸಿ ಅದನ್ನೆತ್ತಿಕೊಂಡಾಗ ಅವರು ಏನೂ ಹೇಳಲೇ ಇಲ್ಲ. ಊಟದ ವಿರಾಮಕ್ಕೆ ಮತ್ತೆ ಬೆಲ್ ಹೊಡೆದದ್ದೇ ತಡ, ಹುಡುಗರು ಮಿಸ್ ಅನುಮತಿಯನ್ನೂ ಕೇಳದೆ ಒಬ್ಬರನ್ನೊಬ್ಬರು ತಳ್ಳಿಕೊಂಡು ಹೊರಕ್ಕೆ ನುಗ್ಗಿದರು.   ಅಂದು ಊಟದ ಸಮಯ, ಊಟ ಮಾಡುತ್ತಾ ಆ ಮೂರನೆಯ ಕ್ಲಾಸಿನ ಮಕ್ಕಳು ಈ ಭಯಂಕರಿ ಮಿಸ್ಸಿಗೆ ಹೇಗೆ ಪಾಠ ಕಲಿಸಬೇಕೆಂಬುದನ್ನು ಬಿಟ್ಟು ಇನ್ನೇನನ್ನೂ ಮಾತನಾಡಲಿಲ್ಲ. ಅಲ್ಲಿ ಚರ್ಚೆಯಲ್ಲಿ ಬಂದ ಸಲಹೆಗಳು ಅದೆಷ್ಟು ಸೃಜನಶೀಲವಾಗಿದ್ದವು, ಅದೆಂತಹ ಎದೆಗಾರಿಕೆ, ಕಲ್ಪನಾಶೀಲತೆ ಬೇಕಾದ ಕೃತ್ಯಗಳು.
“ನಾವು ಅವರನ್ನು ಚೆನ್ನಾಗಿ ಹೊಡೆದುಬಿಡಬಹುದು” ಎಂದ ಅಕ್ಷಯ ಭಟ್. “ಅವರು ರಸ್ತೆಯ ಕೊನೆವರೆಗೂ ನಡೆದುಹೋಗುವವರೆಗೆ ಕಾದು, ಆಮೇಲೆ ಅವರಿಗೆ ಕಲ್ಲು ತೆಗೆದುಕೊಂಡು ಹೊಡೆಯಬಹುದು.” 
“ಇಲ್ಲ ಕಣೋ, ನಾವು ಹಾಗೆಲ್ಲಾ ಮಾಡಿದ್ರೆ, ಪೋಲೀಸರು ನಮ್ಮನ್ನ ಬಂದು ಕರಕೊಂಡು ಹೋಗಿಬಿಡ್ತಾರೆ.” ಎಂದ ಕಾರ್ತಿಕ್.
“ಏ ಇಲ್ಲಾ ಕಣ್ರೋ, ನಂಗೆ ಇನ್ನೂ ಒಂದು ಐಡಿಯಾ ಬಂದಿದೆ “ ಎಂದ ಅರುಣ್. “ನಾವು ಮೇಲೆ ನಮ್ಮ ಕ್ಲಾಸಿಗೆ ಹೋಗಿ ಅಲ್ಲಿ ಬಾಗಿಲಿಗೆ ಒಂದು ದಾರ ಕಟ್ಟೋಣ, ಅವರು ಅದರಿಂದ ಎಡವಿ ಕೆಳಗೆ ಬಿದ್ದು ಗೋಣು ಮುರ್ಕೋತಾರೆ.” 
“ಇಲ್ಲಾ ಕಣೋ, ಪಾಪ ಅವರಿಗೆ ತುಂಬಾ ವಯಸ್ಸಾಗಿದೆ. ನಾವು ಅವರಿಗೆ ಆ ತರಹ ಏಟಾಗೋ ಹಾಗೆ ಮಾಡಬಾರದು” ಎಂದು ಅಡ್ಡ ಬಂದ ವಿವೇಕ್. 
ನಿಜ ಬೇಕೆಂದರೆ ಆ ಗಿಡದ ವಿಷಯ ಪ್ರಸ್ತಾಪಿಸಿದವರು ಹುಡುಗಿಯರೇ ಎಂದು ಹೇಳಬೇಕು. ಅವರು ಯಾವಾಗಲೂ ಪ್ರೀತಿಯಿಂದ ನೋಡೋ ಆ ಮುದ್ದು ಗಿಡ ಇದೀಯಲ್ಲ, ಯಾವಾಗಲೂ ಅದಕ್ಕೆ ನೀರುಣಿಸಿದಿಯಾ, ಬಿಸಿಲು ಬೀಳ್ತಾ ಇದೀಯಾ ಅಂತಾನೇ ಯೋಚಿಸ್ತಿರ್ತಾರಲ್ಲ, ನಾವು ಅದರ ಎಲ್ಲಾ ಎಲೆಗಳನ್ನು ಕಿತ್ತುಬಿಡಬೇಕು, ಅವರಿಗೆ ಮಾಡಿ ತೋರಿಸಬೇಕು, ಬುದ್ಧಿ ಕಲಿಸಬೇಕು.” 
ಪ್ರವೀಣ ತನ್ನ ಕುರ್ಚಿಯನ್ನು ಹಿಂದಕ್ಕೆ ತಳ್ಳಿ ಎದ್ದು ನಿಂತ. “ನಾವು ಹಾಗೆ ಮಾಡಲ್ಲ” ಎಂದ. ತಾನು ಅದೇಕೆ ಹಾಗೆ ಹೇಳಿದೆನೆಂದು ಅವನಿಗೆ ತನಗೇ ಗೊತ್ತಾಗಲಿಲ್ಲ. ತನ್ನ ಮನಸ್ಸಿನಲ್ಲಿದ್ದ ಭಾವನೆಗಳನ್ನು ಹೇಳಿಕೊಳ್ಳಲಾಗಲಿ, ಅರ್ಥ ಮಾಡಿಸಲಾಗಲಿ ಅವನಿಗೆ ಸಾಧ್ಯವಾಗಲಿಲ್ಲ. “ಹೋಗಲಿ ಬಿಡ್ರೋ, ಅದನ್ನೆಲ್ಲಾ ಮರೆತುಬಿಡೋಣ, ಅದನ್ನ ಇಲ್ಲಿಗೆ ಬಿಟ್ಟುಬಿಡೋಣ.” 
“ಆ ಗಿಡ, ಆ ಗಿಡ” ಇಂಚರ ಚಪ್ಪಾಳೆ ತಟ್ಟುತ್ತಾ ಕೂಗಿದಳು. 
ಮಧ್ಯಾಹ್ನದ ವೇಳೆಯ ಕ್ಲಾಸಿನಲ್ಲಿ ಆ ಮಕ್ಕಳು ಕುಳಿತಿದ್ದ ರೀತಿ ಇನ್ನೂ ಕೆಟ್ಟದಾಗಿತ್ತು. “ಹೂ, ಈ ಒಂದು ವಾರ ನಾವು ನಿಜವಾಗಿಯೂ ತುಂಬಾ ಕೆಲಸ ಮಾಡಿದ್ದೇವೆಂದೇ ಹೇಳಬೇಕು” ಎಂದರು ಬನಶಂಕರಿ ಮಿಸ್. ಮನೆಯಿಂದ ತಂದಿದ್ದ ಆ ಮಾಸಿದ ಹಳೇ ಕಥೆ ಪುಸ್ತಕವನ್ನು ತೆರೆದು ಮೊದಲನೇ ಅಧ್ಯಾಯ ಓದಲು ಶುರು ಮಾಡಿದರು.       “ತೆನಾಲಿ ರಾಮನ ಈ ಕಥೆ ನಿಮಗೆಲ್ಲರಿಗೂ ಕೇಳಿ ಗೊತ್ತಿರಬೇಕು ಅಂದುಕೊಂಡಿದೀನಿ…. . . . .ಇವೆಲ್ಲ ಅದ್ಭುತ ಪಾತ್ರಗಳಿರುವ ಕಥೆ.”
“ಇಲ್ಲಾ ಗೊತ್ತಾಗಾಕಿಲ್ಲ “ ಎಂದ ಸಿದ್ಧಪ್ಪ. 
“ಗೊತ್ತಾಗಾಕಿಲ್ಲ ! ಏನದು, ಭಾಷೆ?”
“ಗೊತ್ತಾಗಾಕಿಲ್ಲ, ಅಂದರೆ ಗೊತ್ತಾಗಾಕಿಲ್ಲ” “ಆಗಾಕಿಲ್ಲ, ಆಗಾಕಿಲ್ಲ” ಎಲ್ಲರೂ ದನಿಗೂಡಿಸಿದರು.
ತಮ್ಮ ಮಾಸಿದ ಪುಸ್ತಕವನ್ನು ಕೆಳಗಿಟ್ಟು ಬನಶಂಕರಿ ಮಿಸ್ ಗಡುಸಾಗಿ, “ಇಲ್ಲಾ ಮಕ್ಕಳೇ ನೀವು ಹೀಗೆ ಮಾಡಬಾರದು. ನಿಮಗೆಲ್ಲಾ ಸ್ಕೂಲಿಗೆ ಹೋಗೋ ಅವಕಾಶ ಸಿಕ್ಕಿದೆ, ಅದನ್ನ ನೀವು ಈ ರೀತಿಯಾಗಿ ಮೂದಲಿಸಬಾರದು. ನಿಮ್ಮ ವಯಸ್ಸಿನ ಸಾವಿರಾರು ಮಕ್ಕಳಿಗೆ ಶಾಲೆಗೆ ಹೋಗುವ ಭಾಗ್ಯವೇ ಇಲ್ಲ, ಗೊತ್ತಾ ನಿಮಗೆ?” ಅವರ ತುಟಿಗಳು ಅದುರುತ್ತಿದ್ದವು. “ಶಿಕ್ಷಣ ಒಂದು ಅಮೂಲ್ಯವಾದ ಉಡುಗೊರೆ. ನೀವು ಅದರ ಒಂದು ಕ್ಷಣವನ್ನೂ ವೇಸ್ಟ್ ಮಾಡಬಾರದು.” ಒಮ್ಮೆ ಕ್ಲಾಸಿನಲ್ಲಿದ್ದ ಎಲ್ಲಾ ಮಕ್ಕಳ ಮೇಲೆ ದೃಷ್ಟಿ ಹರಿಸಿ ನೋಡಿದರು. “ನಮಗೆ ಏನಾದರೂ ಉಡುಗೊರೆ ಸಿಕ್ಕಿದಾಗ ನಾವೂ ಅಂತಹ ಉಡುಗೊರೆಯನ್ನು ಬೇರೆಯವರಿಗೆ ಕೊಡದೇ ಹೋಗಬಾರದು. ಪ್ರಪಂಚ ತುಂಬಾ ಕೆಟ್ಟದು. ಅವರ ಮೂಗಿನ ಮೇಲೆ ಅವರ ಕನ್ನಡಕ ಅದರುತ್ತಿತ್ತು. ಪ್ರಪಂಚ ಆಟದ ಮೈದಾನವಲ್ಲ, ಪಾಠಗಳು ಆಟದ ಸಾಮಾನುಗಳ ತರಹ ಅಲ್ಲ. ಅದನ್ನು ನಾವು ಹಾಳು ಮಾಡಿ ಬಿಸಾಡಬಾರದು. ನಾನು ಈ ಒಂದು ವಾರ ಏನಾದ್ರೂ ತುಂಬಾ ಸ್ಟ್ರಿಕ್ಟ್ ಆಗಿದ್ದರೆ ಅದು ನಿಮ್ಮ ಒಳ್ಳೇದಕ್ಕೇ. ಪ್ರಪಂಚಕ್ಕೆ ಒಳ್ಳೇ ನಾಗರೀಕರು ಬೇಕಾಗಿದ್ದಾರೆ. ನೀವು ಒಂದೇ ಒಂದು ಇಂಚಾದರೂ ಬೆಳೆಯಲು ಸಾಧ್ಯವಾದರೆ, ನಿಮ್ಮಲ್ಲಿ ಒಬ್ಬರಾದರೂ….” 
ಅವರು ಮಾತನ್ನು ನಿಲ್ಲಿಸಿದರು. ಮುಂದೆ ಅವರ ನಾಲಿಗೆ ಹೊರಳಲಿಲ್ಲ. ಬಾಯಿಂದ ಮಾತೇ ಹೊರಡಲಿಲ್ಲ. ಅವರು ಇಲ್ಲಿವರೆಗೂ ಗಮನಿಸದೇ ಹೋಗಿದ್ದ, ಕಿಟಕಿಯ ಮೇಲಿಟ್ಟಿದ್ದ ಕುಂಡದಲ್ಲಿದ್ದ ಗಿಡದತ್ತ ತದೇಕಚಿತ್ತದಿಂದ ನೋಡುತ್ತಿದ್ದರು. ಅದರ ಎಲೆಗಳನ್ನೆಲ್ಲ ಕಿತ್ತು ಗಿಡ ಬೋಡಾಗಿ ನಿಂತಿತ್ತು. “ನೋಡಿ,” ಒಂದು ನಿಮಿಷದ ನಂತರ ಬನಶಂಕರಿ ಮಿಸ್ ಹೇಳಿದರು “ನಾನು ಏನು ಹೇಳುತ್ತಿದ್ದೇನೆಂದು ನಿಮಗೆ ಅರ್ಥವಾಯಿತೇ? ನೀವು ನಿಜವಾಗಲೂ ವಿದ್ಯಾವಂತರು ಅನ್ನಿಸಿಕೊಳ್ಳಲು ನಾಗರೀಕರಾಗಿರಬೇಕು. ಇಲ್ಲಿ ನೋಡಿ, ಇದಕ್ಕೆ ತದ್ವಿರುದ್ಧವಾಗಿರುವುದು ನಡೆದಿದೆ.” ಅವರು ಎಲೆಕಿತ್ತ ಆ ಬೋಡು ಗಿಡದ ರೆಂಬೆಗಳನ್ನು ಎತ್ತಿ ತೋರಿಸಿದರು. “ಹಿಂಸೆ, ಧ್ವಂಸಕೃತ್ಯ” ಈಗ ಕ್ಲಾಸಿನತ್ತ ತಿರುಗಿದರು. ಕನ್ನಡಕದ ಹಿಂದೆ ಅವರ ಮಂಜಾದ ಕಣ್ಣುಗಳು ಕಳೆಗುಂದಿದ್ದವು. “ಇದಕ್ಕೆ ಯಾರು ಜವಾಬ್ದಾರರೋ, ನಾನು ನಿಮ್ಮನ್ನು ಇಷ್ಟೇ ಕೇಳಿಕೊಳ್ಳುತ್ತೇನೆ, ದಯವಿಟ್ಟು ಇದರ ಬಗ್ಗೆ ನಿಮಗೆ ವ್ಯಥೆಯಾಗಬೇಕು.” ಅವರು ಮತ್ತೆ ತಮ್ಮ ಕುರ್ಚಿಯತ್ತ ನಡೆದಾಗ, ಅವರ ಉದ್ದನ ಬೆನ್ನು ಇನ್ನೂ ನೆಟ್ಟಗೆ ಉದ್ದವಾದಂತೆನಿಸಿತು, ಆದರೆ ಅವರು ಅಲ್ಲಿವರೆಗೂ ನಡೆಯಲು ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡರು.    
ಅಂದು ಮಧ್ಯಾಹ್ನ ಕ್ಲಾಸು ಮುಗಿದಾಗ ಸಾಲು ನಿಲ್ಲುವುದಿರಲಿಲ್ಲ.  ಮಕ್ಕಳೆಲ್ಲಾ ಹೋಗಬಹುದೆಂದು ಹೇಳಿ ಆಕೆ ತಮ್ಮ ಡೆಸ್ಕಿನ ಬಳಿಯೇ ಕುಳಿತರು. ಮಕ್ಕಳೆಲ್ಲಾ ಹೊರಕ್ಕೋಡಿದರು, ಕೆಲವರಿಗೆ ಪಶ್ಚಾತಾಪವೆನಿಸಿತ್ತು. ಕೆಲವರು ಮೌನವಾಗಿದ್ದರು. ಇನ್ನು ಕೆಲವರು, ಖುಷಿಯಿಂದ ಹೊರಕ್ಕೋಡಿದರು. ಪ್ರವೀಣ್ ರಾವ್ ಮಾತ್ರ ಅಲ್ಲಿಯೇ ಉಳಿದುಕೊಂಡನು. 
ಅವನು ಕಿಟಕಿಯ ಬಳಿ ನಿಂತು ಆ ಬೋಳು ಗಿಡವನ್ನು ಸವರುತ್ತಾ ನಿಂತುಕೊಂಡನು. ಬನಶಂಕರಿ ಮಿಸ್ ತಮ್ಮ ಡೆಸ್ಕಿನಲ್ಲಿದ್ದ ಸಾಮಾನನ್ನು ಖಾಲಿ ಮಾಡುತ್ತಿದ್ದರು. ಪುಸ್ತಕಗಳು, ಬುಕ್ ಪ್ಯಾಡ್ ಗಳು, ಹಾಗೂ ಮ್ಯಾಪುಗಳಿದ್ದ ಒಂದು ಫೈಲ್ ಇದ್ದವು. ಜೊತೆಗೆ ಅವನ ವಾಟರ್ ಗನ್, ಕ್ರಿಕೆಟ್ ಕಾರ್ಡ್ಸ್, ದಾರದ ಉಂಡೆ. “ಬಾ ತೊಗೋ” ಎಂದರು.  ಪ್ರವೀಣ ಅವರ ಡೆಸ್ಕಿನತ್ತ ಹೋಗಿ ಅವರು ಕೊಟ್ಟ ವಸ್ತುಗಳನ್ನು ನಿರ್ವಿಕಾರವಾಗಿ ಜೇಬಿಗೆ ಹಾಕಿಕೊಂಡನು. ತನ್ನ ಶರ್ಟಿನ ಮೇಲೆ ಕೈ ಉಜ್ಜುತ್ತಾ ನಿಂತುಕೊಂಡನು.
“ಏನು ಬೇಕಿತ್ತು?” ಬನಶಂಕರಿ ಮಿಸ್ ಕೇಳಿದರು.
ಪ್ರವೀಣ ಸ್ವಲ್ಪ ಹಿಂದೆ ಬಂದು, ಶಿಸ್ತಿನಿಂದ ಪಕ್ಕದಲ್ಲಿ ಕೈಯಿಟ್ಟುಕೊಂದು, ತಲೆ ಎತ್ತಿ, ಒಂದೇ ಉಸಿರಿನಲ್ಲಿ “ಎಫ್ ಎಲ್ ಓ ಡಬಲ್ಯೂ ಈ ಆರ್ ಫ್ಲವರ್” ಎಂದನು. ಇನ್ನೂ ಹಾಗೇ ಸಿಪಾಯಿಯಂತೆ ನಿಂತು ಕಣ್ಣು ತುಂಬಿ ಬರುತ್ತಿದ್ದ ಬನಶಂಕರಿ ಮಿಸ್ ನತ್ತ ನೋಡಿ ಮತ್ತೆ ಇನ್ನೊಂದು ಸ್ಪೆಲ್ಲಿಂಗ್ – “ಬಿ ಇ ಎ ಯೂ ಟಿ ಐ ಎಫ್ ಯೂ ಎಲ್- ಬ್ಯೂಟಿಫುಲ್” ಎಂದನು.
ಅಷ್ಟೇ. ನಂತರ ಕ್ಲಾಸಿನಿಂದ ಹೊರಕ್ಕೆ ನಡೆದುಬಿಟ್ಟನು. 

ಡಾ.ಸುಚೇತಾ ಪೈ



ಕಾಮೆಂಟ್‌ಗಳಿಲ್ಲ: