ಪ್ರೀತಿಯ ಶಿಕ್ಷಕರೇ,
ಕೇವಲ ಕಲಿಸುವ ಯಂತ್ರವಾಗದಿರಿ,
ಮಾನವರಾಗಲು ಪ್ರಯತ್ನಿಸಿ.
ವಿಷಯವನ್ನಷ್ಟೇ ಕಲಿಸಬೇಡಿ, ಬದುಕನ್ನೂ ಕಲಿಸಿಕೊಡಿ.
ನೀವು ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ನೋಡಿರಿ
ಕೇವಲ ನಿಮ್ಮ ಪುಸ್ತಕದ ಸಂಖ್ಯೆಯಾಗಿ ಅಲ್ಲ ಎಂಬುದನ್ನು ನಾ ಮನಗಾಣಬೇಕು.
ಪರೀಕ್ಷೆಗೆ ನಾ ಮಾಡುವ ಪ್ರಯತ್ನಗಳಿಂದ ನನ್ನನ್ನು ತೀರ್ಮಾನಿಸಿ
ಅದರಲಿ ಬರುವ ಅಂಕಗಳಿಂದಲ್ಲ.
ನನ್ನ ಸಾಮರ್ಥ್ಯ ಅಥವಾ ಪ್ರತಿಭೆಗೆ ಮೀರಿದ್ದನ್ನು ನನ್ನಿಂದ ಆಶಿಸಬೇಡಿ
ಆದರೆ ಕಾಲಕಾಲಕ್ಕೆ ಪ್ರೋತ್ಸಾಹ ನೀಡಿ.
ಶಾಲೆ ಮತ್ತು ಓದು ಜೀವನದ ಅತ್ಯಂತ ಉನ್ನತ ಸಂತೋಷವೆಂದು
ನಾನು ಪರಿಗಣಿಸಬೇಕೆಂದು ಆಶಿಸಬೇಡಿ.
ಕನಿಷ್ಟ ಪಕ್ಷ ನನಗಂತೂ ಆ ರೀತಿ ಇಲ್ಲ.
ನೀವು ಕಲಿಸುವ ವಿಷಯಗಳನ್ನೆಲ್ಲಾ ನಾನು ಇಷ್ಟಪಡಬೇಕೆಂದು ಆಶಿಸಬೇಡಿ,
ಬೇರೆ ವಿಷಯಗಳು ಹೆಚ್ಚು ಆಸಕ್ತಿದಾಯಕವಾಗಿರಬಹುದೂ ಕೂಡಾ
ಬಹುಶಃ ನನಗಂತೂ ಆ ರೀತಿಯೇ ಇದೆ.
ನಾನೇ ಆಲೋಚಿಸಲು, ಅಳೆಯಲು, ಸಹಾಯ ಮಾಡಿ,
ಕೇವಲ ಸಿದ್ಧಪಡಿಸಿದ ಉತ್ತರಗಳನ್ನು ಬಾಯಿಪಾಠ ಮಾಡಲಲ್ಲ.
ನಾನೇ ಉತ್ತರಗಳನ್ನು ಹುಡುಕಲು ನೆರವಾಗಿ,
ಅದು, ಇಬ್ಬರಿಗೂ ತ್ರಾಸದಾಯಕವಾಗಿದ್ದರೂ ಸಹ.
ನಾನು ಗಂಭೀರವಾಗಿ ಕೇಳುವ ಪ್ರಶ್ನೆಗಳನ್ನು ಕೇಳಿಸಿಕೊಳ್ಳಿ
ಅವು ಎಷ್ಟೇ ಮೂರ್ಖತ್ವದ ಮಾತುಗಳೆನಿಸಿದರೂ.
ನೀವು ಕೇಳಿಸಿಕೊಂಡರೆ,
ನಾನೂ ಸಹ ಕೇಳಿಸಿಕೊಳ್ಳಲು ಕಲಿಯಬಹುದು.
ನೀವು ನ್ಯಾಯಯುತವಾಗಿದ್ದರೆ ನನ್ನೊಂದಿಗೆ ಬಿಗಿಯಾಗಿಯೇ ಇರಿ.
ಹೊರಗಿನಿಂದ ನಾನದರ ವಿರುದ್ಧ ಬಂಡಾಯವೆದ್ದರೂ ಸಹ
ಅದು ನನಗೆ ಅವಶ್ಯವೆಂದು ಗೊತ್ತು.
ನನ್ನನ್ನು ಪರಿಹಾಸ್ಯ ಮಾಡಬೇಡಿ, ಮುಖ್ಯವಾಗಿ
ನನ್ನ ಸಹಪಾಠಿಗಳ ಮುಂದೆ- ನೋವಾಗುತ್ತದೆ.
ನಿಮಗೆ ಎದುರುತಿರುಗುವಂತೆ ಮಾಡುತ್ತದೆ.
ಖಾಸಗಿಯಾಗಿ ನಿಜವಾದ ಭಾವನೆಯಿಂದ ನೀವಾಡುವ ಒಂದು ಹಿತನುಡಿ,
ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ನನಗೆ ಕರುಣೆ ತೋರಿಸಬೇಡಿ, ವಿಶೇಷವಾಗಿ ಇತರರ ಮುಂದೆ.
ನಾನಷ್ಟು ಯಶಸ್ವಿಯಾಗದಿದ್ದರೆ, ನಿಮ್ಮ ಕರುಣೆ ಮುಜುಗರವೆನಿಸುತ್ತದೆ.
ತರಗತಿಯಲ್ಲಿ ಇನ್ನೊಬ್ಬ ವಿದ್ಯಾರ್ಥಿಯನ್ನು ನನಗೆ ಉದಾಹರಣೆಯೆಂದು ತೋರಿಸಬೇಡಿ.
ನಾನು ಆಕೆಯನ್ನು ಮತ್ತು ನಿಮ್ಮನ್ನಿಬ್ಬರನ್ನೂ ದ್ವೇಷಿಸಬಹುದು.
ನಾನೊಂದು ವೇಳೆ ಚೆನ್ನಾಗಿ ಮಾಡಿದರೂ,
ಇತರರಿಗೆ ನನ್ನನ್ನು ಮಾದರಿಯಾಗಿ ತೋರಿಸಬೇಡಿ.
ನನಗೆ ಬಹಳ ಮುಜುಗರವಾಗುತ್ತದೆ.
ಆದರೆ ಆಗಾಗ ನನಗೆ ಸಲ್ಲಬೇಕಾದ ಶಬಾಶ್ ನೀಡಿದರೆ
ಅದು ಸ್ವಾಗತಾರ್ಹ.
ನೆನಪಿಡಿ ನೀವು ನಮ್ಮಂತೆ ಒಮ್ಮೆ ವಿದ್ಯಾರ್ಥಿಯಾಗಿದ್ದಿರಿ.
ನಿಮಗೆ ಯಾವಾಗಲೂ ಅತಿ ಹೆಚ್ಚಿನ ಅಂಕಗಳೇ ಬರುತ್ತಿತ್ತೇ?
ನೀವು ಏನನ್ನು ಮರೆಯುತ್ತಿರಲಿಲ್ಲವೇ?
ದಯವಿಟ್ಟು ನಿರಂತರವಾಗಿ ಓದುತ್ತಿರಿ,
ಯಾಂತ್ರಿಕವಾಗಿ 20 ವರ್ಷಗಳ ಹಿಂದೆ ಬರೆದ
ಅದೇ ಹಳದಿ ಬಣ್ಣಕ್ಕೆ ತಿರುಗಿರುವ ಟಿಪ್ಪಣಿಯನ್ನು
ಯಾಂತ್ರಿಕವಾಗಿ ತರಗತಿಯಲ್ಲಿ ಬಳಸಬೇಡಿ.
ಪದೇ ಪದೇ ನಿಮಗೆ ವಂದನೆ ಎನ್ನಬೇಕೆಂದು ನಿರೀಕ್ಷಿಸಬೇಡಿ.
ನನ್ನಲ್ಲಿ ಕೃತಜ್ಞತೆ ಇದೆ, ಆದರೆ ಅದನ್ನು ಪದಗಳಲ್ಲಿ
ವ್ಯಕ್ತಪಡಿಸುವುದು ನನಗೆ ಕಷ್ಟಕರ.
ಮತ್ತೆ. . . . . . ನಿಮಗೆ ನನ್ನ ಕೃತಜ್ಞತೆಗಳು
ನಿಮ್ಮ ಪ್ರೀತಿಯ ವಿದ್ಯಾರ್ಥಿ
- ಅನಾಮಿಕ
(ಇಂಗ್ಲಿಷ್ ನಿಂದ ಅನುವಾದ
ಡಾ. ಸುಧಾ ಜಿ)
1 ಕಾಮೆಂಟ್:
ಇ೦ದಿನ ಶಿಕ್ಷಣ ಪದ್ದತಿಗೆ, ವಿದ್ಯಾರ್ಥಿಗಳ ಮನೋಭಾವಕ್ಕೆ, ಶಿಕ್ಷಕರ ಆದ್ಯತೆಗೆ ತಕ್ಕ ಕವನವಿದು. ವಾಸ್ತವವೇ! ಆದರೆ, ಅ೦ಕಗಳ ಪೈಪೋಟಿಯಲ್ಲಿರುವ ಸಮಯದಲ್ಲಿ ಇ೦ತಹ ಕವನಗಳನ್ನು ಓದುವವರಾದರೂ ಇದ್ದರೆ ಸಾಕು. ಹೆಚ್ಚಿನೆ ನಿರೀಕ್ಷೆ ಅನವಶ್ಯಕ.
ಕಾಮೆಂಟ್ ಪೋಸ್ಟ್ ಮಾಡಿ