Pages

ಕಥೆ - ಅಂಗುಲಿಮಾಲ



ಅಂದು ಸಂಜೆ ಬೇಸರದಿಂದ ಹೊರಗೆ ಕುಳಿತಿದ್ದೆ. ಬೆಳಿಗ್ಗೆ ಟೀಚರ್ ಮಾಡಿದ ಅಂಗುಲಿಮಾಲನ ಪಾಠ ನನ್ನ ಮನಸ್ಸನ್ನು ಕದಡಿತ್ತು. ಪಾಠವನ್ನು ಆರಂಭಿಸಿ ಅಂಗುಲಿಮಾಲನ ಚಿತ್ರಣವನ್ನು ನೀಡುವಷ್ಟರಲ್ಲಿ ಬೆಲ್ ಹೊಡೆದಿತ್ತು, ಪಾಠ ಅರ್ಧಕ್ಕೆ ನಿಂತುಹೋಗಿತ್ತು.
ಅದೇಕೊ ಏನೊ ಆ ವ್ಯಕ್ತಿಯ ಬಗ್ಗೆ ಬಹಳ ಅಸಹ್ಯವೆನಿಸಿತು. ಮನುಷ್ಯರ ಹೆಬ್ಬೆರಳುಗಳನ್ನು ಕಡಿದು ಮಾಲೆಯನ್ನು ಹಾಕಿಕೊಂಡ ಆತ ಅದೆಂಥ ಕಟುಕ ಎನಿಸಿತು.
ಟೀ ಕೂಡ ಕುಡಿಯಬೇಕೆನಿಸಿರಲಿಲ್ಲ. ವಾಕಿಂಗ್ ಹೋಗಿದ್ದ ತಾತ ಬಂದು ಎದುರಿಗೆ ನಿಂತು, “ಏನಾಯ್ತು ನನ್ನ ಪುಟ್ಟಿಗೆ?” ಕೇಳಿದರು.
ತಾತನ ಜೊತೆ ನನ್ನ ಬಾಂಧವ್ಯ ಬಹಳ ಗಾಢ. ನನಗಷ್ಟೆ ಅಲ್ಲ ಅವರು ಇಡೀ ಹಳ್ಳಿಗೆ, ಅಷ್ಟೇಕೆ ಹತ್ತಾರು ಹಳ್ಳಿಗಳಿಗೆ ಬೇಕಾದವರು.
ನನ್ನ ಕಷ್ಟದುಃಖಗಳನ್ನೆಲ್ಲಾ ನಾನು ಹಂಚಿಕೊಳ್ಳುತ್ತಿದ್ದದ್ದು ತಾತನ ಜೊತೆಯೇ. ಹಾಗಾಗಿ ತಾತ ಕೇಳಿದ್ದೆ ಸಾಕೆನ್ನುವಂತೆ ನನ್ನ ಮನಸ್ಸಿನ ಭಾವನೆಗಳೆಲ್ಲಾ ಹೊರಬಂದವು.
“ತಾತ, ಇವತ್ತು ಅಂಗುಲಿಮಾಲ ಪಾಠ ಮಾಡಿದ್ರು. ನಿನಗ್ಗೊತ್ತಾ ಅವನ ಬಗ್ಗೆ. ಛೀ, ಥೂ ಅಂಥಾ ಪಾಠ ಯಾಕಾದ್ರೂ ಇಡ್ತಾರೋ. ನೆನಸಿಕೊಂಡರೆ ಅಸಹ್ಯ ಅನ್ನಿಸ್ತಾ ಇದೆ.”
ತಾತ ನಗುತ್ತಾ, “ಪಾಠ ಪೂರ್ತಿ ಆಗಿಲ್ಲ ಅನಿಸುತ್ತೆ” ಎಂದರು.
ಆಶ್ಚರ್ಯವಾಯಿತು ನನಗೆ. “ನಿನಗೆ ಹೇಗೆ ಗೊತ್ತು ತಾತ?”
“ಹೇಗೆ ಗೊತ್ತು ಅಂದ್ರೆ......” ಸ್ವಲ್ಪ ತಡೆದು, “ನಿನ್ನ ಈ ತಾತ ಕೂಡ ಒಂದು ರೀತಿಯ ಅಂಗುಲಿಮಾಲನಾಗಿದ್ದ” ಹೇಳಿದರು.
ಶಾಕ್ ಹೊಡೆದಂತಾಯಿತು. “ತಾತ, ನೀನು....ಅಂಗುಲಿಮಾಲ.....ಸಾಧ್ಯವೇ ಇಲ್ಲ......ನಮ್ಮ ಪಾಠದಲ್ಲಿ ಬರೋ ಅಂಗುಲಿಮಾಲ ಯಾರು ಗೊತ್ತಾ......ನಿನಗೆ ಗೊತ್ತಿಲ್ಲ ಅನಿಸುತ್ತೆ.”
“ಬೆರಳನ್ನು ಕಡಿದು ಮಾಲೆ ಹಾಕಿಕೊಂಡವನಲ್ಲವೇ?”
“ತಾತ...ನೀನು.....ಕನಸಿನಲ್ಲಿಯೂ ನಾನು ಊಹಿಸಿಕೊಳ್ಳಲಾರೆ. ನಿನ್ನಷ್ಟು ಒಳ್ಳೆಯವರು.......” ತಾತನನ್ನು ಅಪ್ಪಿಕೊಂಡು ಅತ್ತುಬಿಟ್ಟೆ.
ನನ್ನನ್ನು ಸಮಾಧಾನ ಮಾಡುತ್ತಾ ತಾತ, “ನಾನು ಹೇಳ್ತಾ ಇರೋದು ಈಗಿನ ನಿಮ್ಮ ತಾತನ ಬಗ್ಗೆ ಅಲ್ಲಮ್ಮ. ಸುಮಾರು 45-50 ವರ್ಷಗಳ ಹಿಂದಿನ ಮಾತು.”
“ಹಾಗಂದ್ರೆ ಏನು ತಾತ?”
ತಾತ ಮಾತು ಶುರುಮಾಡುವಷ್ಟರಲ್ಲಿ ಅಮ್ಮ ಊಟಕ್ಕೆ ಕರೆದಳು. “ಅಮ್ಮ, ಪ್ಲೀಸ್, ಸ್ವಲ್ಪ ಹೊತ್ತಾದ ಮೇಲೆ ಬರ್ತೀವಿ” ಎಂದೆ.
“ನೀನು ಯಾವಾಗ ಬೇಕಾದ್ರೂ ಊಟ ಮಾಡು. ಆದ್ರೆ ತಾತನನ್ನು ಕಳಿಸು. ಅವರು ಔಷಧಿ ತೆಗೆದುಕೊಬೇಕು.”
ಒಲ್ಲದ ಮನಸ್ಸಿನಿಂದಲೇ ಊಟಕ್ಕೆ ಕುಳಿತೆ. ಊಟ ಮುಗಿಸಿ ಬರೋವರೆಗೆ ಆ ವಿಷಯವೇ ಕೊರೆಯುತ್ತಿತ್ತು.
“ತಾತ ನಿದ್ರೆ ಮಾಡಲಿ ಬಿಡು” ಎಂದು ಅಮ್ಮ ಹೇಳುತ್ತಿದ್ದರೂ ಕೇಳದೆ ತಾತನ ಕೈ ಹಿಡಿದುಕೊಂಡೇ ಅವರ ರೂಮಿಗೆ ಹೋದೆ.
ಛೇರಿನ ಮೇಲೆ ಕುಳಿತುಕೊಂಡು ತಾತ, “ಈಗ ಹೇಳು ಅಂಗುಲಿಮಾಲನ ಬಗ್ಗೆ ನಿನಗೇನನಿಸಿತು?”
“ಅಬ್ಬಾ, ಎಂಥಾ ರಾಕ್ಷಸ? ಅದಕ್ಕೂ ನಿಮಗೂ ಸಂಬಂಧವಿದೆ ಎಂದು ಹೇಳಿರದಿದ್ದರೆ ನಾನು ಖಂಡಿತಾ ಆ ಪಾಠವನ್ನೇ ಮರೆತುಬಿಡಲು ತಯಾರಿದ್ದೆ.”
ಉತ್ತರಿಸಿ ಅವರ ಮುಖವನ್ನು ನೋಡಿದೆ. ಅವರು ಯಾವುದೋ ಲೋಕಕ್ಕೆ ಹೋದಂತಿತ್ತು. ಅವರ ಯೋಚನೆಗೆ ಭಂಗ ತರಲು ನಾನಿಚ್ಛಿಸಲಿಲ್ಲ. ಆದರೆ ಕುತೂಹಲ ತಡೆದುಕೊಳ್ಳಲಾಗದೆ, “ತಾತ, ತಾತ” ಎಂದೆ.
“ಆ....ಪುಟ್ಟಿ.....” ಈ ಲೋಕಕ್ಕೆ ಬರುತ್ತಾ ತಾತ, “ಅದು 1942ರ ಕಥೆ. ನನಗಾಗ 20 ವರ್ಷಗಳು. ನಾನು ಜೈಲಿನಲ್ಲಿದ್ದೆ” ಆರಂಭಿಸಿದರು.
“ಅರೆ, ತಾತ ನೀನು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ದೆಯಾ? 42ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ನಡೆಯಿತಂತೆ. ಏನೇನು ಮಾಡಿದೆ ತಾತ? ಇಷ್ಟು ದಿನ ಮತ್ತೆ ನನಗೆ ಹೇಳಿರಲೇ ಇಲ್ಲ. ನಾಳೇನೇ ನನ್ನ ಗೆಳತಿಯರಿಗೆ, ಮಿಸ್‍ಗೆ ಹೇಳ್ತೀನಿ” ಎಂದೆ ಉತ್ಸಾಹದಿಂದ.
‘ಇಲ್ಲಮ್ಮ, ಆಗ ನಾನು ಜೈಲಿಗೆ ಹೋಗಿದ್ದು ಕೊಲೆ ಮಾಡಿದ್ದರಿಂದ.” ಸಹಜವಾಗಿಯೇ ನುಡಿದರು.
ಆಘಾತವಾಯಿತು.
“ಆಶ್ಚರ್ಯವಲ್ಲವೇ? ಆದರೆ ಪೂರ್ತಿ ಕೇಳು.” ಹಾಗೆಯೇ ಗತಕ್ಕೆ ಇಳಿದುಹೋದರು.
“ಆಗ ನಾವು ಈಗಿನಂತೆ ಸ್ಥಿತಿವಂತರಾಗಿರಲಿಲ್ಲ. ಇರುವ ಜಮೀನನ್ನು ಅಪ್ಪ ಊರಿನ ಜಮೀನುದಾರನ ಹತ್ತಿರ ಅಡವಿಟ್ಟಿದ್ದರು. ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಬೆಳೆದು ಕೊನೆಗೆ ಆ ಜಮೀನುದಾರ ಜಮೀನನ್ನು ನುಂಗಿದ್ದೂ ಅಲ್ಲದೆ ಯಾರಾದರೂ ಜೀತ ಮಾಡಿದ್ರೆ ಮಾತ್ರ ಸಾಲ ತೀರುತ್ತೆ ಅಂದ. ಅಪ್ಪನಿಗೆ ವಯಸ್ಸಾಗಿತ್ತು. ಮನೆ ಹಿರಿಮಗ ನಾನು. ಇನ್ನೇನು ಮಾಡುವುದು? ನಾನೇ ಜೀತಕ್ಕೆ ಸೇರಿದೆ.”
“ಆ ಜಮೀನುದಾರ ಎಂಥಾ ಕಟುಕ ಅಂದ್ರೆ, ಎಷ್ಟೋ ಬಾರಿ ಇಡೀ ದಿನ ಏನೂ ತಿನ್ನಲು ಕೊಡದೆ ಕತ್ತೆ ತರಹ ದುಡಿಸಿಕೊಳ್ತಿದ್ದ. ನನಗಾಗ ಇನ್ನೂ 16 ವರ್ಷ. ಕಟ್ಟುಮಸ್ತಾಗಿದ್ದೆ. ಹೇಗೋ ದಿನಾ ತಳ್ತಿದ್ದೆ, ಮನೆಯವರ ಕಷ್ಟ ನೋಡ್ಬೇಕಲ್ಲಾ?”
“ಆದ್ರೆ ಒಂದಿನ ಆ ಜಮೀನುದಾರ ನನ್ನ ತಪ್ಪೇನೂ ಇಲ್ಲದೇನೆ ಚಾಟೀಲಿ ಹೊಡೆಯಲಾರಂಭಿಸಿದ. ನನಗೆ ಮೊದಲೇ ಮುಂಗೋಪ. ನಾನೂ ಸಿಟ್ಟಿನ ಭರದಲ್ಲಿ ಮರ ಕಡಿಯುತ್ತಿದ್ದ ಮಚ್ಚಿನಿಂದಲೇ ಹೊಡೆದುಬಿಟ್ಟೆ. ಅವನು ಅಲ್ಲೇ ಸತ್ತು ಬಿದ್ದ.”
“ನೀನು ಮಾಡಿದ್ದು ಸರೀನೇ ತಾತ” ಅಂದೆ ನಾನು.
“ನಾನೂ ಹಾಗೆ ಅಂದ್ಕೊಂಡೆ. ಎಲ್ಲರೂ ಓಡಿಹೋಗು ಅಂದ್ರು. ನಾನೇನೂ ಬೇಕೂ ಅಂತಾ ಹೊಡೀಲಿಲ್ಲವಲ್ಲ ಅಂದ್ಕೊಂಡು ಅಲ್ಲೇ ನಿಂತೆ. ಪೋಲಿಸರು ಅರೆಸ್ಟ್ ಮಾಡಿದ್ರು. ವಿಚಾರಣೆ ಅನ್ನೋ ನಾಟಕ ನಡೀತು. ಜಮೀನುದಾರ ನಮಗೆ ಮಾಡಿದ ಅನ್ಯಾಯದ ಬಗ್ಗೆ ಆ ಜಡ್ಜ್ ಕೇಳಲೇ ಇಲ್ಲ. 5 ವರ್ಷ ಜೈಲಲ್ಲಿರಬೇಕು ಅಂತ ತೀರ್ಪು ಓದೇ ಬಿಟ್ರು.”
ಮುಂದಕ್ಕೆ ಹೇಳಲು ಬಿಡದೆ ನಾನು, “ಬೇಡ ತಾತ. ಇನ್ಮುಂದೆ ಕಥೆ ಬೇಡ. ನೀನು ಜೈಲಿನಲ್ಲಿ ಕಷ್ಟ ಪಟ್ಟಿದ್ದನ್ನು ನಾನು ಕೇಳಲಾರೆ. ನೀನು ಏನೇ ಮಾಡಿದ್ರೂ ನನ್ನ ಪ್ರೀತಿಯ ತಾತಾನೇ. ಅದೆಲ್ಲಾ ಬೇಡ. ಪ್ಲೀಸ್, ಬೇಡ ತಾತ” ಎಂದೆ.
“ಭಯಾ ಆಯ್ತಾ ಪುಟ್ಟಿ? ಅದಕ್ಕೆ ಇಷ್ಟು ದಿನ ಹೇಳಿರಲಿಲ್ಲ. ಆದ್ರೆ ಇಷ್ಟು ಕೇಳಿದ ಮೇಲೆ ಮುಂದಿನ ಕಥೆ ನೀನು ಕೇಳಲೇ ಬೇಕು. ಆಗ್ಲೆ ನಿನಗೆ ಅಂಗುಲಿಮಾಲನ ಬಗ್ಗೆ ಅರ್ಥ ಆಗೋದು” ಬೆನ್ನು ನೇವರಿಸುತ್ತಾ ಹೇಳಿದರು ತಾತ.
“ಬೇಡ ತಾತ, ಆ ಅಂಗುಲಿಮಾಲ ಢಕಾಯಿತ. ಸುಮ್ ಸುಮ್‍ನೆ ಎಲ್ಲರನ್ನೂ ಸಾಯಿಸ್ತಿದ್ದ. ನೀನು ಹಾಗಲ್ಲ. ನೀನು ನನ್ನ ಒಳ್ಳೆ ತಾತ.”
“ಪುಟ್ಟಿ ಅಂಗುಲಿಮಾಲನಾಗಿದ್ದ ತಾತ, ಈಗ ನಿನ್ನ ಮುಂದೆ ಇರೋ ತಾತ ಇಬ್ಬರೂ ಬೇರೆಬೇರೆ.”
“ಮತ್ತೆ ಅಷ್ಟೊತ್ತಿಂದ ನೀವೇ ಅಂತಾ ಹೇಳಿದ್ರಿ?”
“ವ್ಯಕ್ತಿ ಒಬ್ನೆ. ಆದ್ರೆ ಮನಸ್ಸು, ಅಂತರಾತ್ಮ ಬೇರೆ ಬೇರೆ.”
“ತಾತ ನೀನು ಒಗಟೊಗೊಟಾಗಿ ಮಾತಾಡ್ತಾ ಇದ್ದೀಯಾ.”
“ಕೊಲೆ ಮಾಡಿದ್ದು ನಿನ್ನ ತಾತಾನೇ. ಆಗ ಹಳ್ಳಿ ಜನ ನನ್ನ ಕಂಡ್ರೆ ಹೆದರಿ ನಡುಗ್ತಾ ಇದ್ರು. ಈಗ ಅದೇ ಹಳ್ಳಿ ಜನ ನನ್ನ ಪ್ರೀತಿಸ್ತಾರೆ.”
“ಅದ್ ಹೇಗೆ ತಾತ?”
“ಅದನ್ನೇ ಹೇಳೋಕೆ ಹೊರಟಿದ್ದೆ ಪುಟ್ಟಾ. ಆಮೇಲೇನಾಯ್ತು ಅಂದ್ರೆ....” ತಾತಾ ಮತ್ತೆ ಗತಕ್ಕೆ ಇಳಿದರು.
“ಮೊದಲೇ ಒರಟ ನಾನು. ಜೈಲಿಗೋದ್ಮೇಲೆ ಇನ್ನಷ್ಟು ಒರಟನಾದೆ. ಇಲ್ದೆ ಇದ್ರೆ ಆ ಪೋಲಿಸ್ನೋರ ಹತ್ತಿರ, ಆ ಕಳ್ಳಕಾಕರ ಮಧ್ಯೆ ಬದುಕೋಕೆ ಸಾಧ್ಯಾನೇ ಇರ್ಲಿಲ್ಲ. ಎಲ್ರೂ ನನ್ನ ಕಂಡ್ರೆ ಹೆದರ್ತಿದ್ರು. ಯಾರೂ ನನ್ನ ತಂಟೆಗೆ ಬರುತ್ತಿರಲಿಲ್ಲ. ನಾನು ಯಾರ ಜೊತೇನೂ ಮಾತಾಡ್ತಾ ಇರ್ಲಿಲ್ಲ. ಯಾರಾದ್ರೂ ಮಾತ್ನಾಡದ್ರೆ ಸಿಟ್ಟು ಬರ್ತಿತ್ತು. ಅವರಿಗೆ ಏಟು ಬೀಳ್ತಿತ್ತು. ಹೀಗೆ ಒಂದು ವರ್ಷ ಕಳೀತು.”
“ಆಗ ನಮ್ಮ ಜೈಲಿಗೆ ಸುಮಾರು ನನ್ನ ವಯಸ್ಸಿನವನೊಬ್ಬ ಬಂದ. ಅವ್ನು ನಮ್ಮ ತರಹ ಇರ್ಲಿಲ್ಲ. ನೋಡೋದಿಕ್ಕೆ ಒಳ್ಳೆ ಶ್ರೀಮಂತರ ಮನೆಯ ವಿದ್ಯಾವಂತ ಹುಡುಗನಂತೆ ಕಂಡ. ವಿಚಿತ್ರ ಅನಿಸಿದರೂ ನಾನೇನೂ ತಲೆಕೆಡಿಸಿಕೊಳ್ಳಲಿಲ್ಲ.
“ಸ್ವಲ್ಪ ದಿನ ಆದ ನಂತರ ಅವನ ಬಗ್ಗೆ ಬೇಡವೆಂದರೂ ಸುದ್ದಿ ಕಿವಿಗೆ ಬಿತ್ತು. ‘ಆತ ಕ್ರಾಂತಿಕಾರಿ ಅಂತೆ, ಬ್ರಿಟಿಷರನ್ನು ಓಡಿಸಿ ಭಾರತಕ್ಕೆ ಸ್ವಾತಂತ್ರ್ಯ ಬೇಕು ಅಂತಾ ಹೋರಾಟ ಮಾಡ್ತಾ ಇದ್ದಾನಂತೆ ಎಂದು.”
“ಅಷ್ಟು ದಿನ ಅಂತಹವರ ಬಗ್ಗೆ ಕೇಳಿದ್ದೆ. ಆದ್ರೆ ನೋಡಿರಲಿಲ್ಲ. ಕುತೂಹಲದಿಂದ ಅವನನ್ನು ಗಮನಿಸಿದೆ. ಬಹಳ ಪ್ರಸನ್ನ ಮುಖ. ಯಾವಾಗಲೂ ಹಸನ್ಮುಖಿ. ಆತ ಸಿಟ್ಟು ಮಾಡಿಕೊಂಡಿದ್ದೆ ನಾನು ನೋಡಲಿಲ್ಲ. ಅವನು ಎಲ್ಲರೊಂದಿಗೂ ಮಾತನಾಡುತ್ತಿದ್ದ. ಬಹುಬೇಗ ಎಲ್ಲರ ಸ್ನೇಹ ಸಂಪಾದಿಸಿ ಎಲ್ಲರಿಗೂ ಅಣ್ಣನಾಗಿಬಿಟ್ಟ.”
“ಆತ ನನ್ನ ಬಳಿಯೂ ಬಂದ. ಆದ್ರೆ ನಾನು ಮಾತನಾಡಲಿಲ್ಲ. ನನಗೆ ಯಾರೂ ಬೇಕಿರಲಿಲ್ಲ. ನನಗೆ ಯಾರ ಬಗ್ಗೆ ನಂಬಿಕೆಯೂ ಇರಲಿಲ್ಲ.”
“ಇತರರು ಅವನಿಗೆ ನನ್ನ ಬಗ್ಗೆ ‘ಅವನು ಒರಟ. ಅವನ ಸ್ನೇಹ ಬೇಡ. ಅವನು ಏನು ಮಾಡೋಕೂ ಹೇಸೋನಲ್ಲ’ ಎಂದು ಹೇಳಿದ್ದನ್ನು ಕೇಳಿದೆ.”
ಆ ವಿಚಿತ್ರ ವ್ಯಕ್ತಿ ಮಾತ್ರ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ನನ್ನ ಬಳಿಗೆ ಬಂದ. ಒಮ್ಮೆ ನನಗೆ ಸಿಟ್ಟು ತಡೆಯಲಾಗಲಿಲ್ಲ. ಹೊಡೆದೇಬಿಟ್ಟೆ. ತುಟಿಯಿಂದ ರಕ್ತ ಸೋರಲಾರಂಭಿಸಿತು. ಅವನ ಸ್ನೇಹಿತರು ನನ್ನನ್ನು ಹೊಡೆಯಲು ಬಂದರೆ ಅವನೇ ತಡೆದ. ಏನೂ ಮಾತನಾಡದೆ ಹೊರಟುಹೋದ.”
“ನನಗ್ಯಾಕೋ ಒಂಥರಾ ಅನಿಸಿತು. ಇಂಥಾ ಮನುಷ್ಯನನ್ನು ನಾನು ಎಲ್ಲಿಯೂ ಕಂಡಿರಲಿಲ್ಲ. ನನಗೆ ಯಾರಾದ್ರೂ ಹೊಡೆದಿದ್ರೆ ಅವನ ಕೊಲೆ ಆಗೋಗ್ತಿತ್ತು. ಆದ್ರೆ ಆ ಮನುಷ್ಯ.... ಮೊದಲನೇ ಬಾರಿ ನನ್ನ ಒರಟುತನದಿಂದ ನಂಗೇ ಬೇಜಾರಾಯ್ತು.”
“ಎರಡು ಮೂರು ದಿನ ಆತನ ಕಣ್ತಪ್ಪಿಸಿ ಓಡಾಡಿದೆ. ಆದ್ರೆ ನಾಲ್ಕನೇ ದಿನ ಆತ ನೇರವಾಗಿ ನನ್ನೆದುರಿಗೆ ಬಂದ. ಆ ಗಾಯ ಇನ್ನೂ ಇತ್ತು. ಒಂದು ರೀತಿ ಕಸಿವಿಸಿ ನನ್ನೊಳಗೆ. ಆದ್ರೆ, ಆಹಾ... ಆ ವಿಚಿತ್ರ ವ್ಯಕ್ತಿ ಮುಗುಳ್ನಕ್ಕ. ನನಗೆ ಗೊತ್ತಿಲ್ಲದಂತೆ ನಾನೂ ಮುಗುಳ್ನಕ್ಕೆ. ಆಮೇಲೆ ಒಂದು ಕ್ಷಣಾನೂ ಅಲ್ಲಿ ನಿಲ್ಲದೆ ಓಡಿಹೋದೆ.”
“ಮಾರನೇ ದಿನವೂ ಅದೇ ರೀತಿ ನಡೆಯಿತು. ಅದಾದ ಮೇಲೆ ನಾನೂ ಮುಗುಳ್ನಗುತ್ತಿದ್ದೆ. ಆದ್ರೆ ಮಾತನ್ನು ಮಾತ್ರ ಆಡುತ್ತಿರಲಿಲ್ಲ. ಅದೇನೋ ಒಂದು ರೀತಿ ಕೆಟ್ಟ ಹಟ.”
ಒಂದು ವಾರ ಕಳೆದ ನಂತರ ಆತ ನೇರವಾಗಿ ನನ್ನ ಬಳಿ ಬಂದು ಕುಳಿತುಕೊಂಡ. ನನಗೆ ಗಾಬರಿಯಾಯಿತು. ಆತ ತನ್ನಲ್ಲಿದ್ದ ಪಗಡೆ ಹಾಸನ್ನು ಹಾಸುತ್ತಾ, “ನೀನೇನೋ ಆಟದಲ್ಲಿ ಪ್ರಚಂಡನಂತೆ, ಬರ್ತೀಯಾ ಆಟಕ್ಕೆ?” ಸವಾಲೆಸೆದ.
“ಅರೆ, ಎಂಥೆಂಥವರ ಜೊತೆ ಆಡಿ ಗೆದ್ದಿದ್ದೀನಿ. ನೀನ್ಯಾವ ಮಹಾ? ಬಾ ನೋಡೆ ಬಿಡೋಣ” ಸವಾಲನ್ನು ಅಂಗೀಕರಿಸಿ ದಾಳಗಳನ್ನು ಎಸೆದೆ.
“ಆಟದಲ್ಲಿ ಗೆದ್ದಿದ್ದು ನಾನೇ. ಆದರೆ ಅವನೇನೂ ಸಾಮಾನ್ಯ ಆಟಗಾರನಾಗಿರಲಿಲ್ಲ. ಆಟವಾದ ಮೇಲೆ ಅವನು, ‘ಎಲ್ಲರು ಹೇಳಿದ್ದು ನಿಜಾನೇ. ನಿಜಕ್ಕೂ ನೀನು ಪ್ರಚಂಡ. ಇನ್ನು ಮುಂದೆ ನೀನೇ ನನ್ನ ಗುರು’ ಎಂದ. ನನಗೆ ಹೆಮ್ಮೆಯೆನಿಸಿತು. ಹೀಗೆ ದಿನನಿತ್ಯ ನನ್ನ ಅವನ ಭೇಟಿ ಆರಂಭವಾಯಿತು.” 
“ಒಂದು ದಿನ ಆಟವಾಡುತ್ತಿರುವಾಗ ಆತ ನನ್ನ ಕಥೆ ಕೇಳಿದ. ಒಂದು ರೀತಿಯ ಅವಮಾನದಿಂದಲೇ ನಡೆದದ್ದನ್ನು ಹೇಳಿದೆ.”
“ಭೇಷ್, ಎಂಟೆದೆಯ ಭಂಟ ನೀನು” ಎಂದ. ತಮಾಷೆ ಮಾಡುತ್ತಿದ್ದಾನೇನೋ ಎಂದುಕೊಂಡ್ರೆ, ಇಲ್ಲಾ ನಿಜವಾಗಿ ಹೇಳಿದ್ದ. ನನಗೆ ಬಹಳ ಆಶ್ಚರ್ಯವಾಯಿತು. ಮೊಟ್ಟಮೊದಲ ಬಾರಿ ಯಾರೋ ನನ್ನ ಕೆಲಸವನ್ನು ಮೆಚ್ಚಿಕೊಂಡಿದ್ದರು. ಆತ ನನ್ನ ಆತ್ಮೀಯ ಅನಿಸಿತು.”
“ಕ್ರಮೇಣ ಆತ ನನಗೆ ಹತ್ತಿರದವನಾಗಿ ಬಿಟ್ಟ. ನಾನು ಅವನನ್ನು ಅಣ್ಣ ಎಂದು ಕರೆಯಲಾರಂಭಿಸಿದೆ. ಹೀಗೆ ಒಂದು ದಿನ ಮಾತನಾಡುತ್ತಿರುವಾಗ, ಅಣ್ಣ ಸ್ವಾತಂತ್ರ್ಯ ಹೋರಾಟದಲ್ಲಿ ಪೋಲಿಸರ ಗುಂಡಿಗೆ ಬಲಿಯಾದ ಬಾಲಕನ ಬಗ್ಗೆ ಹೇಳುತ್ತಿದ್ದ. ನನಗೆ ಸಿಟ್ಟು ತಡೆದುಕೊಳ್ಳಲಾಗಲಿಲ್ಲ. ‘ಅಣ್ಣ ಆ ಪುಟ್ಟ ಮಗುವನ್ನು ಕೊಂದವರು ಯಾರು ಅಂತಾ ಹೇಳು, ನಾನು ಅವರ್ನ ಕೊಚ್ಚಿಹಾಕ್ತೀನಿ’ ಅಂದೆ. ‘ನಿಜವಾಗ್ಲೂ?’ ‘ನಿನ್ನ ಮೇಲಾಣೆ’ ಖಚಿತವಾಗಿ ಹೇಳಿದೆ.’ ‘ಹಾಗಾದ್ರೆ ನನ್ನ ಜೊತೆ ಸೇರ್ತೀಯಾ?’ ಗಾಬರಿಯಾಗುವ ಸರದಿ ನನ್ನದಾಯಿತು.
‘ಅಣ್ಣ, ನಾನು......ಕೊಲೆಗಾರ.....?’ ‘ಗಾಬರಿಯಾಗಬೇಡ.’ ‘ಮತ್ತೆ...... ನಾನು...... ನಿನ್ನ ಜೊತೆ......?’ ‘ಹೌದು ಶಂಕ್ರೂ, ನಿನ್ನ ಆವೇಶ ನಮಗೆ ಬೇಕು. ಆದ್ರೆ ಒಬ್ಬ ಬ್ರಿಟಿಷ್ ವ್ಯಕ್ತಿಯನ್ನ, ಒಬ್ಬ ಜಮೀನುದಾರನನ್ನ ಕೊಂದ್ರೆ ಏನೂ ಪ್ರಯೋಜನವಿಲ್ಲ. ಅವರ ಇಡೀ ಗುಂಪುಗುಂಪನ್ನೇ ನಾಶಮಾಡಬೇಕು.’ ಎಂದ.
‘ಗುಂಪುಗುಂಪನ್ನೆ.....ನಾನೊಬ್ನೆ.....?’ ಗೊಂದಲದಿಂದ ಕೇಳಿದೆ. 
‘ಇಲ್ಲ ಶಂಕ್ರೂ ನೀನೊಬ್ನೆ ಅಲ್ಲ. ನಿನ್ನಂತೋರು, ನನ್ನಂತೋರು ಸಾವಿರಾರು ಜನ ಇದ್ದಾರೆ. ಎಲ್ರೂ ಸೇರ್ಕೊಂಡ್ರೆ ಆ ಫರಂಗಿಯೋರ್ನ ಹೊಡೆದೋಡಿಸೋದು ಏನೂ ಕಷ್ಟವಿಲ್ಲ. ಅವರು ಹೊರಟು ಹೋದ್ರೆ ಈ ಜಮೀನ್ದಾರ್ರೂ, ಮಾಲೀಕರೂ ಯಾರೂ ಇರೋದಿಲ್ಲ. ಆಗ ನಮ್ಮ ದೇಶ ಸ್ವರ್ಗ ಆಗುತ್ತೆ. ಎಲ್ರೂ ಕಷ್ಟಪಟ್ಟು ದುಡೀತಾರೆ, ಹಂಚ್ಕೊಂಡು ಬದುಕ್ತಾರೆ.’ ಅಣ್ಣ ಆವೇಶದಿಂದ ಮಾತನಾಡಿದ್ದನ್ನು ನಾನು ಆವತ್ತೆ ನೋಡಿದ್ದು. ಅಣ್ಣ ಹೇಳಿದ್ದು ಸರಿ ಅನಿಸಿತು.”
“ಅಣ್ಣ, ಆದ್ರೆ ನಾನು ಕೊಲೆಗಾರ.... ನನ್ನನ್ನು ನಿಮ್ಮ ಜೊತೆ ಸೇರಿಸ್ಕೋತೀರಾ?’ ಅನುಮಾನದಿಂದಲೇ ಕೇಳಿದೆ. ಒಂದು ಕ್ಷಣವೂ ಹಿಂದೆ ಮುಂದೆ ನೋಡದೆ ‘ಖಂಡಿತ’ ಎಂದ. ‘ಹಿಂದೆ ನಡೆದ್ದದ್ದನ್ನು ಮರೆತುಬಿಡು. ಈಗ ನೀನು ಬದಲಾಗಿದ್ದೀಯಾ. ಯೋಚಿಸುವ ಶಕ್ತಿ ಇದೆ. ನೀನು ಖಂಡಿತ ನಮ್ಮ ಜೊತೆ ಬರಬಹುದು.’ 
“ಆ ಘಳಿಗೆ ನನ್ನ ಬದುಕಿಗೆ ಹೊಸ ತಿರುವನ್ನು ನೀಡಿತು. ಬುದ್ಧನ ಜೊತೆ ಸೇರಿ ಅಂಗುಲಿಮಾಲ ಬದಲಾದಂತೆ ಅಣ್ಣನ ಜೊತೆ ಸೇರಿ ನಾನೂ ಬದಲಾಗಿಬಿಟ್ಟೆ. ಸ್ವಲ್ಪ ದಿನಗಳ ನಂತರ ಅಣ್ಣನ ಬಿಡುಗಡೆಯಾಯಿತು. ಹೋಗುವ ಮುಂಚೆ ನನಗೆ ಅವನ ವಿಳಾಸ ಕೊಟ್ಟು, ‘ನಿನಗೆ ನಮ್ಮೊಂದಿಗೆ ಸೇರಲು ಯಾವಾಗಲೂ ಸ್ವಾಗತ’ ಎಂದು ಹೇಳಿ ಹೋದ. 
“ಅಣ್ಣನ ಮಾತನ್ನು ಕೇಳಿದ ನಂತರ ಅವನ ಜೊತೆ ಸೇರಬೇಕೆಂದು ತೀರ್ಮಾನ ಮಾಡಿದೆ. ಅದಾದ ಮೇಲೆ ನನ್ನ ನಡತೆ ಪೂರ್ತಿ ಬದಲಾಗಿಹೋಯಿತು. ಒಳ್ಳೆಯ ನಡತೆ ಎಂದು ನನ್ನನ್ನು 1945 ರಲ್ಲಿಯೇ ಬಿಟ್ಟುಬಿಟ್ಟರು.”
“ಹೊರಗೆ ಬಂದ ಮೇಲೆ ನಾನು ಮಾಡಿದ ಮೊದಲ ಕೆಲಸ ಅಣ್ಣನನ್ನು ಹುಡುಕಿದ್ದು. ಅವನ ಗುಂಪಿನಲ್ಲಿ ನಾನೂ ಸೇರಿಕೊಂಡೆ.”
“ಎಲ್ಲಿ ಕೆಲಸ ಮಾಡಲಿ ಎಂದು ಕೇಳಿದ್ದಕ್ಕೆ ನಿಮ್ಮ ಹಳ್ಳಿಗೆ ಹೋಗು ಎಂದ. ನನಗೆ ತಕ್ಷಣ ನೆನಪಿಗೆ ಬಂದದ್ದು ಅಂಗುಲಿಮಾಲನ ಕಥೆಯೇ. ಬುದ್ಧ ಕೂಡ ಅಂಗುಲಿಮಾಲನಿಗೆ, ಅವನು ಬೌದ್ಧ ಭಿಕ್ಷುವಾದ ನಂತರ ನಿನ್ನ ಹಳ್ಳಿಗೆ ಹೋಗು ಎಂದಿದ್ದ.”
“ಅಣ್ಣ ಊರ ಜನರಿಗೆ ನನ್ನ ಮೇಲೆ ಸಿಟ್ಟಿದೆ, ಭಯವಿದೆ. ನನ್ನ ಮಾತನ್ನ ಯಾರು ಕೇಳ್ತಾರೆ ಕೇಳಿದೆ. ಶಂಕ್ರೂ ನೀನೀಗ ಬದಲಾಗಿದ್ದೀಯಾ. ನೀನು ಹಳ್ಳಿಗೆ ಹೋಗು. ತಾಳ್ಮೆಯಿಂದ ಕೆಲಸ ಮಾಡು. ಜಯ ಸಿಗುತ್ತೆ.” ವಿಶ್ವಾಸ ತುಂಬಿ ಕಳಿಸಿದ.
“ಮೊದಮೊದಲು ಅಂಗುಲಿಮಾಲನಿಗೆ ಆದ ಅನುಭವವೇ ನನಗೂ ಆಯಿತು. ದೆವ್ವದ ಬಾಯಲ್ಲಿ ವೇದ ಬರುವಂತೆ ನಿನ್ನ ಬಾಯಲ್ಲಿ ಸ್ವಾತಂತ್ರ್ಯದ ಮಾತು ಎಂದು ವ್ಯಂಗ್ಯವಾಡಿದರು, ಬೈದರು, ಹೊಡೆದರು. ಆದರೆ ನಾನು ಹೆದರಲಿಲ್ಲ, ಹಿಂಜರಿಯಲಿಲ್ಲ. ಅಣ್ಣನ ಮಾತಿನಂತೆ ನಡೆದುಕೊಂಡೆ.” 
“ಕ್ರಮೇಣ ಜನ ನಾನು ಬದಲಾಗಿದ್ದನ್ನು ಗುರುತಿಸಿದರು. ನನ್ನ ಮಾತುಗಳನ್ನು ಕೇಳಲಾರಂಭಿಸಿದರು. ಮೆಚ್ಚಿಕೊಂಡಿದ್ದೇ ಅಲ್ಲದೆ ನಾಯಕನ ಸ್ಥಾನವನ್ನೂ ಕೊಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಆ ಜನರ ನಾಯಕತ್ವ ವಹಿಸಿಕೊಂಡೆ. ಸ್ವಾತಂತ್ರ್ಯ ಬಂದ ನಂತರವೂ ಸಹ, ಅವತ್ತಿನಿಂದ ಇವತ್ತಿನವರೆಗೂ ಹಳ್ಳಿಯ ಜನರಿಗೆ ನನ್ನ ಕೈಲಾದದ್ದನ್ನು ಮಾಡುತ್ತಲೇ ಬಂದಿದ್ದೇನೆ.”
ಕಥೆ ಮುಗಿಯಿತೆಂಬಂತೆ ಮಾತನ್ನು ನಿಲ್ಲಿಸಿದರು. ಆದರೂ ತಾತ ಇನ್ನೂ ಈ ಲೋಕಕ್ಕೆ ಬಂದಿರಲಿಲ್ಲ. ತಾತ ಹೇಳಿದ್ದನ್ನು ನನಗಿನ್ನೂ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲಾಗಿರಲಿಲ್ಲ. “ಅಬ್ಬಾ, ಎಂಥಾ ವ್ಯಕ್ತಿತ್ವ ತಾತ ನಿಂದು” ಎನ್ನುತ್ತಾ “ತಾತ ಈಗ ಆ ಅಣ್ಣ ಎಲ್ಲಿದ್ದಾರೆ?” ಕೇಳಿದೆ.
“ಅಣ್ಣ ಕಳೆದ ವರ್ಷವೇ ತೀರಿಕೊಂಡರು ಪುಟ್ಟಿ. ಕೊನೆ ಘಳಿಗೆಯವರೆಗೂ ಜನರೊಂದಿಗೆ ಅವರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುತ್ತಾ ಕಾಲ ಕಳೆದರು. ಜನರ ಹೋರಾಟ ಕಟ್ಟುತ್ತಲೇ ಇದ್ದರು. ಆ ದಿವ್ಯ ಚೇತನದ ಮುಂದೆ ನಾವೆಷ್ಟು?”
ತಾತನದೇ ಭವ್ಯ ವ್ಯಕ್ತಿತ್ವ ಎಂದುಕೊಂಡ ನಾನು ಆ ವ್ಯಕ್ತಿಯ ಅತ್ಯದ್ಭುತ ವ್ಯಕ್ತಿತ್ವವನ್ನು ಅಳೆಯದಾದೆ!!
(ಸತ್ಯಕಥೆಯನ್ನು ಆಧರಿಸಿ ಬರೆದ ಕಥೆಯಿದು)
- ಸುಧಾ ಜಿ


ಕಾಮೆಂಟ್‌ಗಳಿಲ್ಲ: