ಆಲೂರು ವೆಂಕಟರಾಯರು
ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿ,ಕನ್ನಡಿಗರನ್ನು ಜಾಗೃತಗೊಳಿಸಿ ಭವ್ಯ ಕರ್ನಾಟಕದ ಕನಸ್ಸನ್ನು ಕಂಡು ಸಾಕಾರಗೊಳಿಸಿದ ಆಲೂರು ವೆಂಕಟರಾಯರು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು.
ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಮ್ಮ. ಇವರ ವಂಶಜರಿಗೆ ಆಲೂರು ಜಹಗೀರಾಗಿ ಬಂದಿದ್ದರಿಂದ ಆಲೂರು ಎಂಬುದು ಇವರ ಮನೆತನದ ಹೆಸರಾಗಿದೆ. ಇವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಈ ಸಮಯದಲ್ಲಿ ಹಲವು ಚಳವಳಿಗಳಲ್ಲಿಯೂ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರುಗಳಿಂದ ಪ್ರಭಾವಿತಗೊಂಡಿದ್ದರು. ಇದೇ ಅವರ ಮುಂದಿನ ಹೋರಾಟಕ್ಕೆ ನಾಂದಿಯಾಯಿತು. ನಂತರ ಇವರು ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಸಹಪಾಠಿ ವಿನಾಯಕ ದಾಮೋದರ ಸಾವರಕರ ಮತ್ತು ಅವರ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತರ ಒಡನಾಟದಿಂದ ಇವರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಂಡಿತು. ಅಲ್ಲದೆ ಗೋಖಲೆ,ರಾಜವಾಡ, ಮೊದಲಾದವರುಗಳಿಂದ ಸ್ಫೂರ್ತಿಗೊಂಡಿದ್ದರು. ತಿಲಕರ ಒಡನಾಟ ಮತ್ತು ಅವರ ಉಗ್ರಲೇಖನಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಆ ಸಮಯದಲ್ಲಿ ವೆಂಕಟರಾಯರಿಗೆ ಕರ್ನಾಟಕತ್ವದ ಕಲ್ಪನೆ ಇನ್ನೂ ಬಂದಿರಲಿಲ್ಲ. ಆದರೂ ಅವರಲ್ಲಿ ಕನ್ನಡಾಭಿಮಾನವಿತ್ತು. ಅಂದು ಕರ್ನಾಟಕವು ಮಹಾರಾಷ್ಟ್ರದ ಒಂದು ಅಂಗವಾಗಿತ್ತು. ಅವರು ಓದುತ್ತಿದ್ದ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ಇರಲಿಲ್ಲ. ಇದಕ್ಕಾಗಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಧಾರವಾಡದಿಂದ ಕನ್ನಡ ಪುಸ್ತಕಗಳನ್ನು ತರಿಸಲಾಯಿತು. 1903 ರಲ್ಲಿ ಬಿ.ಎ ಪದವಿ ಮುಗಿಸಿದರು.
ಕಾಲೇಜು ಶಿಕ್ಷಣ ಮುಗಿಸಿದ ವೆಂಕಟರಾಯರು ಒಮ್ಮೆ ಹಂಪೆಗೆ ಹೋಗಿದ್ದರು. ಅಲ್ಲಿನ ಅವಶೇಷಗಳು ಅವರ ಮೇಲೆ ತುಂಬಾ ಪರಿಣಾಮ ಬೀರಿದವು. " ಆ ದಿವಸ ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು ಚಲನಚಿತ್ರ ಪಟದಲ್ಲಿ ವಿದ್ಯುತ್ ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು.ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಕೊಟ್ಟಿತು.ಹೃದಯ ಸಮುದ್ರವು ಅಲ್ಲೋಲಕಲ್ಲೋಲವಾಯಿತು.ಆ ದಿವಸವು ನನ್ನ ಜೀವನಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಎಂದು ತಮ್ಮ ಅಂದಿನ ಅನುಭವವನ್ನು ಸ್ವತಃ ಅವರೇ ಹೇಳಿದ್ದಾರೆ. ಅಂದಿನಿಂದ ಅವರ ಕನ್ನಡಾಭಿಮಾನ ಹೆಚ್ಚಾಗಿ, ಕರ್ನಾಟಕದ ಗತವೈಭವವನ್ನು ಕನ್ನಡಿಗರ ಮುಂದಿಟ್ಟು ಅವರನ್ನು ಎಚ್ಚರಗೊಳಿಸಬೇಕೆಂದು ದೃಢಸಂಕಲ್ಪ ಮಾಡಿದರು. ನಂತರ ಕಾನೂನು ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ 1905 ರಲ್ಲಿ ಮುಗಿಸಿದರು. ನಂತರದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಇಟಲಿಯ ಮ್ಯಾಝಿನಿಯಿಂದ ಪ್ರಭಾವಿತರಾದ ಇವರು ಅವನ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ " ಇಟಲಿಯು ಪರದಾಸ್ಯದಲ್ಲಿ ತೊಳಲುತ್ತ ಸೂತಕಾವಸ್ಥೆಯಲ್ಲಿರುವಾಗ ತರುಣರು ನಗು ಮೊಗದಿಂದ ನಲಿದಾಡುವುದೆಂದರೇನು?" ಎಂಬ ವಾಕ್ಯದಿಂದ ಪ್ರಚೋದನೆಗೊಂಡ ವೆಂಕಟರಾಯರು ತಮ್ಮ ವಕೀಲಿವೃತ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು.
ಅಂದು ಜನರಲ್ಲಿ ರಾಷ್ಟ್ರೀಯತೆ,ರಾಷ್ಟ್ರಾಭಿಮಾನಗಳನ್ ನು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಯೇ ವೆಂಕಟರಾಯರು ಸಹ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಇಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ಇಂಗ್ಲಿಷ್ ರ ಗುಲಾಮಗಿರಿಯಿಂದ ಹೊರಬರಲು ಸ್ವಾವಲಂಬನೆಯನ್ನು ಕಲಿಸಲಾಗುತ್ತಿತ್ತು. ಈ ಶಾಲೆಯಲ್ಲಿ ದೀಪದಕಡ್ಡಿ ತಯಾರಿಕೆ,ಗೇಣಿಗೆ,ಚಿತ್ರಕಲೆ,ಮರಗೆ ಲಸ, ಮುದ್ರಣಕಲೆ ಮೊದಲಾದ ಸ್ವಯಂ ಉದ್ಯೋಗ ತರಬೇತಿಯನ್ನು ಕೊಡಲಾಗುತ್ತಿತ್ತು. ಆದರೆ ಸರ್ಕಾರದ ನೀತಿ ಮತ್ತು ಹಣದ ಅಭಾವದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ವೆಂಕಟರಾಯರು ರಾಷ್ಟ್ರೀಯ ಚಳವಳಿಯ ಜೊತೆಯಲ್ಲೇ ಕನ್ನಡಭಾಷೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದರು. ವೆಂಕಟರಾಯರು ನೇತೃತ್ವದಲ್ಲಿ 1936 ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ವಿಜಯನಗರ ಸ್ಥಾಪನೆ ಷಡಶತಮಾನೋತ್ಸವವು ಹಂಪೆಯಲ್ಲಿ ನಡೆಯಿತು. ಇದರಲ್ಲಿ ಐತಿಹಾಸಿಕ ಸಮ್ಮೇಳನ, ವಸ್ತು ಪ್ರದರ್ಶನ, ಸಂಗೀತಕಛೇರಿಗಳು,ನಾಟಕ ಪ್ರದರ್ಶನಗಳು ಮೊದಲಾದ ಕಾರ್ಯಕ್ರಮಗಳು ನಡೆದವು.
ಕರ್ನಾಟಕದಲ್ಲಿ ಒಂದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂಬುದು ವೆಂಕಟರಾಯರು ಕನಸ್ಸಾಗಿತ್ತು. ಆದರೆ ಅದು ನೆರವೇರದೆ 1914 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.
ಕರ್ನಾಟಕತ್ವದ ಪರಿಕಲ್ಪನೆ ಹೊಂದಿದ್ದ ವೆಂಕಟರಾಯರಿಗೆ ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಪರಿಷತ್ತು ಇರಬೇಕೆಂದು ಅವರ ನಿಲುವಾಗಿತ್ತು. ಅದುವರೆವಿಗೂ ಕರ್ನಾಟಕದ ಉತ್ತರ ಭಾಗ ದಕ್ಷಿಣ ಮಹಾರಾಷ್ಟ್ರವಾಗಿತ್ತು ,ದಕ್ಷಿಣ ಭಾಗ ಮೈಸೂರಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಪರಿಷತ್ತು ಬೇಕೆಂದು ಇವರು ವಾದಿಸುತ್ತಿದ್ದರು. ಪರಿಣಾಮವಾಗಿ 1920 ರಲ್ಲಿ ಧಾರವಾಡದಲ್ಲಿ ವಿ಼. ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಪರಿಷತ್ತಿನ ಅಧಿವೇಶನ ನಡೆಯಿತು. ಇದೇ ಇಂದಿನ ಕೆ.ಪಿ.ಸಿ.ಸಿ.
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಇತಿಹಾಸವನ್ನು ತಿಳಿಯಬೇಕಾದರೆ ಒಂದು ಪ್ರತ್ಯೇಕ ಸಂಶೋಧನ ಮಂಡಳಿಯ ಅವಶ್ಯಕತೆಯಿದೆ ಎಂದ ವೆಂಕಟರಾಯರು 1914 ರಲ್ಲಿ ಮಂಡಳಿಯೊಂದನ್ನು ಸ್ಥಾಪಿಸಿದರು. ಜೊತೆಗೆ ಎಲ್ಲೆಡೆ ಕಾಣ ಬರುತ್ತಿದ್ದ ಶಿಲಾಶಾಸನಗಳಲ್ಲಿನ ಲಿಪಿಗಳಿಂದಲೂ ಸಹ ಇತಿಹಾಸವನ್ನು ತಿಳಿಯಬಹುದೆಂದು ಮನಗಂಡ ವೆಂಕಟರಾಯರು ಅವುಗಳ ಅಧ್ಯಯನಕ್ಕಾಗಿ " ಸರ್ವೇಕ್ಷಣ ಯೋಜನೆ" ಯನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ಉತ್ತಮ ಗ್ರಂಥಗಳ ಕೊರತೆಯಿರುವುದನ್ನು ಅರಿತ ವೆಂಕಟರಾಯರು ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಆಯೋಜಿಸಿದರು. ಅದರಲ್ಲಿ ಎಲ್ಲರೂ ' ಕರ್ನಾಟಕ ಗ್ರಂಥಮಾಲೆ ' ಎಂಬ ಹೆಸರಿನಿಂದ ಪ್ರಕಟಿಸಬೇಕೆಂದು ಅಂಗೀಕರಿಸಲಾಯಿತು. ಎರಡನೇ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇದರ ಫಲವಾಗಿ 1915 ರಲ್ಲಿ " ಕರ್ನಾಟಕ ಸಾಹಿತ್ಯ ಪರಿಷತ್ತು " ಸ್ಥಾಪನೆಯಾಯಿತು.ಇದು ವೆಂಕಟರಾಯರ ಮಹತ್ಕಾರ್ಯಗಳಲ್ಲಿ ಒಂದಾಗಿದೆ. ಇದೇ ಈಗಿನ ಕನ್ನಡ ಸಾಹಿತ್ಯ ಪರಿಷತ್ತು.
1905 ರಲ್ಲಿ " ವಿದ್ಯಾವರ್ಧಕ ಸಂಘ" ಕ್ಕೆ ಸೇರಿ, ಮೂಲಕ ವೆಂಕಟರಾಯರು ಕನ್ನಡದ ಅಭ್ಯಾಸವನ್ನು ಪ್ರಾರಂಭಿಸುವುದರ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.
" ವಾಗ್ಭೂಷಣ " ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡಿದರು. ಇವರ ಮೊದಲ ಕೃತಿ " ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರು" ಇದರಿಂದ ಪ್ರೇರಣೆಗೊಂಡ ಶಾಂತಕವಿ ವಿಜಯ ವಿದ್ಯರಣ್ಯ ಕೀರ್ತನೆಯನ್ನು ಬರೆದರು.
1912 ರಲ್ಲಿ ವೆಂಕಟರಾಯರು " ಕರ್ನಾಟಕದ ಗತವೈಭವ " ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಕನ್ನಡಿಗರ ಪ್ರಾಚೀನ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. " ನಿಮ್ಮ ನಿರಭಿಮಾನದ ಮುಸುಕನ್ನು ಹಾರ ಹಿಡೆಯಲಿಕ್ಕೆ ನೀವು ಇತಿಹಾಸದ ಶರಣು ಹೋಗಿರಿ " ಎಂದು ಕನ್ನಡಿಗರಿಗೆ ಇತಿಹಾಸವನ್ನು ತಿಳಿಸುವ ಉದ್ದೇಶದಿಂದಲೇ ಈ ಕೃತಿಯನ್ನು ಬರೆದಿರುವುದಾಗಿ ಸ್ವತಃ ವೆಂಕಟರಾಯರೇ ಹೇಳಿದ್ದಾರೆ. ಇದಲ್ಲದೆ " ಕರ್ನಾಟಕದ ವೀರರತ್ನಗಳು" "ಕರ್ನಾಟಕದ ಸೂತ್ರಗಳು" ಮತ್ತು " ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆದು ಕನ್ನಡಿಗರು ಸ್ಫೂರ್ತಿಗೊಳ್ಳುವಂತೆ ಮಾಡಿದರು.
ಇಂಗ್ಲಿಷ್ ನ ಸ್ಪೆನ್ಸರನ Education ಮತ್ತು ಅರಿಸ್ಟಾಟಲ್‌ನ Data of ethics, J.S. ಮಿಲ್ ನ Liberty ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು.
ಗಾಂಧಿಚರಿತೆ,ಮ್ಯಾಝಿನಿ ಚರಿತೆ, ಅರವಿಂದರ ಪತ್ರ, ಅರವಿಂದರ ರಾಜಕಾರಣ, ಚಳವಳಿಗಳ ಆತ್ಮ ಇವುಗಳನ್ನು ಭಾಷಾಂತರಿಸಿದರು.ಹಾಗು ವಿವೇಕಾನಂದರ " ಪೂರ್ವ ಮತ್ತು ಪಶ್ಚಿಮ, ಭಕ್ತಿಯೋಗವನ್ನು ಭಾಷಾಂತರಿಸಿದರು.
ರಾಷ್ಟ್ರೀಯತ್ವದ ಅರಿವು ಮೂಡಿಸಲು " ರಾಷ್ಟ್ರೀಯತ್ವದ ಮೀಮಾಂಸೆ" ಯನ್ನು ಬರೆದರು.ಇದಲ್ಲದೆ ' ನವಜೀವನ ಗ್ರಂಥಮಾಲೆ' ಯನ್ನು ಆರಂಭಿಸಿದರು. ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಹೋಗಲಾಡಿಸಲು " ಕನ್ನಡಿಗರ ಭ್ರಮನಿರಸನ" ಎಂಬ ನಾಟಕವನ್ನು ಬರೆದರು. ತಿಲಕರ " ಗೀತಾರಹಸ್ಯ" ವನ್ನು ಕನ್ನಡಕ್ಕೆ ಭಾಷಾಂತರಿಸಿದರು. ಅಲ್ಲದೆ ಗೀತಾಪ್ರಕಾಶ,ಗೀತಾಸಂದೇಶ,ಗೀತಾಪ್ರಭಾ ವ ಭಾಗ 1,2 ನ್ನು ಬರೆದರು. ದ.ರಾ.ಬೇಂದ್ರೆಯವರ " ಕೃಷ್ಣಕುಮಾರಿ" ಕವನ ಸಂಕಲನವನ್ನು ಪ್ರಕಟಿಸಿದರು.
ಕರ್ನಾಟಕದ ಏಕೀಕರಣವೇ ಇವರ ಗುರಿಯಾಗಿದ್ದು,1922 ರಲ್ಲಿ "ಜಯಕರ್ನಾಟಕವೇ ನಮ್ಮ ಮಂತ್ರಘೋಷ" ಎಂಬ ಘೋಷಣೆಯೊಂದಿಗೆ "ಜಯ ಕರ್ನಾಟಕ " ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಸಾಹಿತ್ಯ, ಕಲೆ,ವಿಮರ್ಶೆ, ಧರ್ಮ,ತತ್ವಜ್ಞಾನ,ವಿಜ್ಞಾನ, ರಾಜಕಾರಣ,ಸಣ್ಣಕತೆ, ಕವಿತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಲೇಖನಗಳು ಪ್ರಕಟವಾಗುತ್ತಿದ್ದವು. ಇದಲ್ಲದೆ ವೆಂಕಟರಾಯರು ಹಲವು ಪತ್ರಿಕೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕರ್ನಾಟಕ ಪತ್ರ,ಕರ್ನಾಟಕ ವೃತ್ತ,ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಸ್ವಲ್ಪದಿನ ಕರ್ಮವೀರ ಪತ್ರಿಕೆಯನ್ನು ನಡೆಸಿದರು.
ವೆಂಕಟರಾಯರು ತಮ್ಮ ಜೀವನದ ಅನುಭವಗಳ ಬಗ್ಗೆ " ಜೀವನ ಸ್ಮೃತಿ ಗಳು " ಎಂಬ ಆತ್ಮಚರಿತೆಯನ್ನು ಬರೆದಿದ್ದಾರೆ.
ವೆಂಕಟರಾಯರು ಕರ್ನಾಟಕತ್ವದ ಪರಿಕಲ್ಪನೆಯೊಂದಿಗೆ ರಾಷ್ಟ್ರಾಭಿಮಾನವೂ ಮಿಳಿತವಾಗಿತ್ತು." ಕರ್ನಾಟಕ್ಕಾಗಿ ಕೆಲಸ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ.ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕ ಎಂದರೆ ಅದೊಂದು ಕಿರಣ ಕಾಜು (focusing lens) ಅದರೊಳಗಿನಿಂದ ನನಗೆ ಭರತಭೂಮಿಯೇ ಏಕೆ ಇಡೀ ವಿಶ್ವವೇ ಕಾಣುತ್ತದೆ.ವಿಶ್ವದ ಕಿರಣಗಳು ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ,ಅಂತರ್ಯಾಮಿಯಾಗಿ ವೆ" ಎಂದು ಹೇಳಿರುವುದರಲ್ಲಿ ಅವರ ರಾಷ್ಟ್ರಾಭಿಮಾನವನ್ನು ಕಾಣಬಹುದು. ಕನ್ನಡಿಗರಲ್ಲಿ ಸ್ಫೂರ್ತಿ ತರಲು ಹಲವಾರು ಉತ್ಸವಗಳನ್ನು ನಡೆಸಿ ಕನ್ನಡ ಪ್ರಚಾರವನ್ನು ಮಾಡುತ್ತಿದ್ದರು.
ಹೀಗೆ ಕನ್ನಡ ನಾಡು ನುಡಿಗಾಗಿ ಇವರ ಆರು ದಶಕಗಳ ಹೋರಾಟದ ಫಲವಾಗಿ 1956 ನವೆಂಬರ್ 1ರಂದು ಏಕೀಕೃತ ಕರ್ನಾಟಕ ಉದಯವಾಯಿತು. ವೆಂಕಟರಾಯರ ಕನಸು ನನಸಾಯಿತಾದರೂ ಕರ್ನಾಟಕ ಎಂದು ಕರೆಯಲಿಲ್ಲವೆಂದು ಬೇಸರವೂ ಆಯಿತು. ಆದರೂ " ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಡಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ,ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ ಎಂದು ಹರಸುತ್ತೇನೆ" ಎನ್ನುವುದನ್ನು ನೋಡಿದರೆ ಅವರ ಕರ್ನಾಟಕದ ಮೇಲಿನ ಅಭಿಮಾನ ತಿಳಿಯುತ್ತದೆ.
ಕನ್ನಡ ನಾಡು ನುಡಿಗಾಗಿ ಅವಿರತವಾಗಿ ಸೇವೆ ಸಲ್ಲಿಸಿದ ವೆಂಕಟರಾಯರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ,ಗೌರವಿಸಿದವು.
1921 ರಲ್ಲಿ ಅಲಸೂರು ಪೇಟೆಯಲ್ಲಿ ಮಾನಪತ್ರದೊಂದಿಗೆ " ದೇಶಸೇವಾ ಧುರೀಣ ಮತ್ತು ಸ್ವಭಾಷಾ ರಕ್ಷಕ " ಎಂಬ ಬಿರುದನ್ನು ನೀಡಲಾಯಿತು.
1930 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಮಾಡುವುದರ ಮೂಲಕ ಅವರ ಹೋರಾಟಕ್ಕೆ ಗೌರವ ತೋರಿಸಿದರು.
1941 ರಲ್ಲಿ ಹೈದರಾಬಾದಿನ ಕನ್ನಡಿಗರು " ಕರ್ನಾಟಕ ಕುಲ ಪುರೋಹಿತರು " ಎಂಬ ಬಿರುದು ನೀಡಿ ಸನ್ಮಾನಿಸಿದರು.
1961 ರಲ್ಲಿ ಬೆಂಗಳೂರು ನಗರಸಭೆ ಮಾನಪತ್ರ ನೀಡಿ ಸನ್ಮಾನಿಸಿತು.
ಹೀಗೆ ನಾಡಸೇವೆಯೊಂದಿಗೆ ದೇಶಸೇವೆಯನ್ನು ಮಾಡುತ್ತಾ ತಮ್ಮ ಜೀವಮಾನವಿಡೀ ಹೋರಾಡಿ ತನು ಮನ ಧನವನ್ನು ಅರ್ಪಿಸಿದ. ವೆಂಕಟರಾಯರು 1964 ಫೆಬ್ರವರಿ 25 ರಂದು ನಿಧನರಾದರು. " ಕರ್ನಾಟಕ ದೇವಿಯ ಮಂದಿರದಲ್ಲಿ ಉರಿಯುತ್ತಿರುವ ಹೂ ಬತ್ತಿ" ಎಂದ ವೆಂಕಟರಾಯರು ತಮ್ಮ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನದಲ್ಲಿ ನಂದಾದೀಪವಾಗಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೆಂಕಟರಾಯರು " ಕನ್ನಡ ಕುಲದ ಪುರೋಹಿತ" ರೇ ಹೌದು.
- ವಿಜಯಲಕ್ಷ್ಮಿ ಎಂ ಎಸ್