Pages

ಲಘುಬರಹ - 'ಗೊಮಟಗಿರಿಯೂ..... ಲವಿಂಗ್ ಹ್ಯಾಟೂ.....'



 ಬಂಧುಗಳ ಮನೆಯಿಂದ ಹೊರಡುವ ಹೊತ್ತಾಯ್ತು... ನಮ್ಮನ್ನು ಬೀಳ್ಗೊಡಲು ಎಲ್ಲರೂ ಮುಂಬಾಗಿಲೆಡೆಗೆ ಬಂದ್ರು... ಅಷ್ಟೇ! ಅಲ್ಲಿನ ದೃಶ್ಯ ನೋಡಿ ನನ್ನೆದೆ ಧಸಕ್ಕನೆ ಕುಸಿಯಿತು. ಅವ್ಯಕ್ತ ಬೇಸರ ಹಾಗೂ ಅದ ವ್ಯಕ್ತಪಡಿಸಲಾಗದ ಅನಿವಾರ್ಯತೆಯ ತೊಳಲಾಟದಿಂದ ಮುಖ ಕಪ್ಪಿಟ್ಟು ಹೋಯ್ತು....!???. ಒಂದು ಕ್ಷಣ ಹೇಗೆ ಪ್ರತಿಕ್ರಯಿಸಬೇಕು ಅಲ್ಲಲ್ಲಾ!... ಸ್ಪಂಧಿಸುವುದೆಂದು ತಿಳಿಯದೇ ಪತಿರಾಯನ ಮುಖ ನೋಡಿದೆ. ನನ್ನ ದುಗುಡ, ದುಮ್ಮಾನ ಮನದ ಹೋಯ್ದಾಟ, ಇನ್ನೂ ಏನೇನೋ...?ಗ್ರಹಿಸಿದ ಅವರು ಕೂಡ ' ಏನು ಮಾಡಲಿ ನಾನೂ... ಏನು ಹೇಳಲಿ...' ಎಂದು ವರನಟನಷ್ಠೇ ಭಾವುಕರಾಗಿ ಮೌನವಾಗಿ ಹಾಡುತ್ತಿರುವಂತೆ ಭಾಸವಾಗುತ್ತಿತ್ತು.

"ಪ್ರತಿಕ್ರಯಿಸುವುದಕ್ಕಿಂತ ಸ್ಪಂಧಿಸುವುದನ್ನು ಕಲಿಯಿರಿ" ಎಂದು ಆಗಾಗ್ಗೆ ಪುಕ್ಕಟೆಯಾಗಿ ಸಲಹೆ ಕೊಡುವ ನನಗೆ ಸ್ಪಂಧಿಸುವುದು ಭಾಷಣ ಬಿಗಿಯುವಷ್ಟು ಸುಲಭವಲ್ಲ ಎಂಬುದು ನಿಜ ಅರ್ಥದಲ್ಲಿ ವೇದ್ಯವಾಗಿ ಹೋಯ್ತು... ಮತ್ತೇನು ಮಾಡುವುದು ಕೂಡ ಸಾಧ್ಯವಿರದಂತಹ ಇಕ್ಕಟ್ಟಿನ ಸಂದರ್ಭವದು... ಮನ ಒಪ್ಪದ ನೋವಿನ ಸಂಗತಿಯಾದರೂ ಒಪ್ಪಲೇ ಬೇಕಾದ, ಒಪ್ಪಿ ಜೀರ್ಣಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸಂಗತಿಯದು... ನಿಜಕ್ಕೂ ಹೇಳುವೆ ದೇಹಕ್ಕೆ ಆಗುವ ಪೆಟ್ಟು ಮನಕ್ಕೇನೂ ಘಾಸಿ ಮಾಡದು ಎಂಬ ಮಾತು ಅನುಭವಕ್ಕೆ ದಕ್ಕಿತು. ಜೊತೆಗೆ ನನ್ನ ಉಪದೇಶಗಳು ನನ್ನನ್ನೇ ಈಟಿ, ಭರ್ಜಿ...ಇನ್ನೂ ಯಾವ್ಯಾವುದರಲ್ಲಿ ಸಾಧ್ಯವೋ ಅದರಲ್ಲೆಲ್ಲಾ ಇರಿದಂತಾಗಲಾರಂಭಿಸಿತು....!?

ಮನ ಚೀರಿ ರಂಪಾಟ ಮಾಡುತ್ತಿತ್ತು. ಮನದ ಹೋಯ್ದಾಟ ನಿಯಂತ್ರಿಸಲು ಹೆಣಗಾಡುತ್ತಿದ್ದೆ. ಸತ್ಯವಾಗಿಯೂ ಆ ದೃಶ್ಯ ಅಷ್ಟು ತಟ್ಟಿತ್ತು ಮನವನ್ನು. ಇಷ್ಟವಾಗುವ ಮೊದಲ ನೋಟ, ಮೊದಲ ಪ್ರೀತಿ, ಮೊದಲ ವಸ್ತು ಯಾರಾದರೂ ಏಕಾಏಕಿ ಕಸಿದುಕೊಂಡರೆ/ ನಮ್ಮೆದುರೇ ಅಂಕೆಗೆ ನಿಲುಕುವ ಮೊದಲೇ ಬೇರೆಯವರ ಪಾಲಾದರೆ ಸಹಿಸಲಸಾಧ್ಯ...!!!
ನನಗಂತೂ ನೇರವಾಗಿ ಎದೆಗೆ ಮೊಂಡು ಭರ್ಜಿಯನ್ನು ಬಲವಂತವಾಗಿ, ಬಲವಾಗಿ ತೂರಿಸಿದರೆ ಹೇಗಾಗಬಹುದೋ ಅಷ್ಟು ನೋವಾಗುತ್ತಿತ್ತು ಮನಕ್ಕೆ. ರಕ್ತವಿಲ್ಲ, ಕಣ್ಣೀರಿಲ್ಲ ಆದರೂ ಮನದ ಹೋಯ್ದಾಟ, ಒತ್ತಡ, ಕಸಿವಿಸಿ... ಹೇಳತೀರದು. ಅಯ್ಯೋ...! 'ಮೂಕ ಹಕ್ಕಿಯು ಹಾಡುತಿದೆ... ಹಾಡುತಿದೆ... ಭಾಷೆಗು ನಿಲುಕದ... ಭಾವ ಗೀತೆಯ ಹಾಡುತಿದೆ.. ಹಾ....ಡಿ ಹಾ...ಡಿ...' ಮನದಲ್ಲಿ ಹಾಡುತ್ತಾ, ರೋಧಿಸುತ್ತಾ ಮೌನಕ್ಕೆ ಶರಣು ಹೊಡೆದು ಮೌನದರಸಿಯಾದೆ...ದುಗುಡದಿಂದಲೇ ಅದರೊಂದಿಗೆ ಬೆಸೆದ ಸವಿ ನೆನಪುಗಳಿಗೆ ಮನ ಜಾರಿತು...

ಅಂದು ಭಾನುವಾರ 22/10/17 ಬಂಧುವಿನ ಸೀಮಂತ ಕಾರ್ಯದಲ್ಲಿ ಪಾಲ್ಗೊಳ್ಳಲು ಹೊರಟಿದ್ದೆವು. ಹೇಗೂ ಹೋಗ್ತಾ ಇರೋದು ಶ್ರವಣಬೆಳಗೊಳಕ್ಕೆ ಹಾಗೆ ಗೊಮ್ಮಟ ಗಿರಿಯ   ಶ್ರವಣಪ್ಪನಿಗೊಂದು ನಮಸ್ಕಾರ ಹಾಕಿಯೇ ಬಿಡುವ ಎಂದು ಏಕಪಕ್ಷೀಯವಾಗಿ ನಿರ್ಧರಿಸಿ ಬಿಟ್ಟಿದ್ದೆ....!? ಇಂದು ಗೊಮ್ಮಟ ಗಿರಿ ಹತ್ತುವ, ದೇಹಕ್ಕೆ ವ್ಯಾಯಾಮ ಆಗುತ್ತೆ ಅನ್ನೋ ನಯವಾದ ವಿವರಣೆಯೊಂದಿಗೆ ಪೀಠಿಕೆ ಹಾಕಿದೆ. ಪಾಪ! ಪತಿರಾಯ ಇಲ್ಲವೆನ್ನಲಾದೀತೇ...!? 'ಸರಿ' ಎಂದರು. ಏನೋ ಒಂಥರಾ ಖುಷಿ ನನಗೆ. ಬಾಲ್ಯದಲ್ಲಿ , ಬಹುಷಃ ಎಂಟನೆಯ ತರಗತಿ ಇರಬಹುದು ಅಪ್ಪ, ಅಮ್ಮ , ತಂಗಿ ಹಾಗೂ ಸಹೋದರರೊಂದಿಗೆ ಹಾಸನದಲ್ಲಿದ್ದಾಗ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಹೋದದ್ದು. ಇನ್ನೂ ನೆನಪು ಬಹಳ ತಾಜ ತಾಜ ಇದೆ. ಬೆಳಿಗ್ಗೆ 9 ರ ಸಮಯದಲ್ಲಿ ಕೋತಿಗಳಿಗಿಂತ ಒಂದು ಕೈ ಮುಂದಾಗಿ ಸರಸರನೆ ಚಂಗನೆ ಎರಡೆರಡು, ಕೆಲವೊಮ್ಮೆ ಮೂರ್ಮೂರು ಮೆಟ್ಟಿಲುಗಳನ್ನು ಹಾರುತ್ತಾ, ಆಗಾಗ್ಗೆ ಎಡುವುತ್ತಿದ್ದರೂ ನಾ ಮುಂದು ತಾ ಮುಂದು ಎಂದು ಓಡೋಡುತ್ತಾ ಮೆಟ್ಟಿಲುಗಳನ್ನು ಏರಿದ್ದು...., ತುದಿ ತಲುಪಿ ಹೋ...! ಎಂದು ಚೀರುತ್ತಾ ಹಿಂದೆ ತಿರುಗಿ ನೋಡಿ ತಲೆ ಗಿರ್ರೆಂದದ್ದು... ಆಮೇಲೆ ಎಲ್ಲಿ ಸೋದರರಿಗೆ ತಿಳಿದು ಅಣಕಿಸುವರೋ ಎಂದು ಕಂಬ ಹಿಡಿದು ತೀವ್ರ ವೇಗವಾಗಿ ಡವಗುಟ್ಟುವ ಹೃದಯ ಬಡಿತ ಮರೆ ಮಾಚುತ್ತಾ, ಥರಗುಟ್ಟುತ್ತಿದ್ದ ಕಾಲುಗಳನ್ನು ಗೊಮ್ಮಟ ಗಿರಿಯನ್ನೇ ಅದುಮಿ ಬಿಡುವಂತೆ ಮೆಟ್ಟಿ ನಿಂತದ್ದು.... ಎಲ್ಲವೂ ಕಾರಿನಲ್ಲಿ ಹೋಗುತ್ತಲೇ ಮೆಲುಕು ಹಾಕಿ ರಸಾಸ್ವಾಧನೆ ಮಾಡುತ್ತಿದ್ದಾಗಲೇ ಪತಿರಾಯನ ಮಾತಿನಿಂದ ಎದೆಯೊಡೆಯುವಂತಾಗಿ ಇಹಕ್ಕೆ ಎಳೆದು...ಇಲ್ಲ... ದೂಡಿಬಿಟ್ಟಿತು ನನ್ನ ಪ್ರಪಾತಕ್ಕೆ...

ಬಹುಷಃ ನಾವು ಶ್ರವಣಬೆಳಗೊಳ ತಲುಪುವ ವೇಳೆಗೆ ಬಿಸಿಲೇರಿರುತ್ತೆ! ಒಂದು ಕೆಲಸ ಮಾಡುವ ಮೇಲುಕೋಟೆ ನೋಡಿ ಹೋಗುವ ಎಂದು ಬಹಳ ಗಂಭೀರವಾದ ದೃಢ ಧ್ವನಿಯಲ್ಲಿ ಕಾರು ಚಾಲನೆ ಮಾಡುತ್ತಲೇ ಘೋಷಣೆ ಮಾಡಿಬಿಟ್ಟರು. ಆಗ ಕಾರು ಮೇಲುಕೋಟೆಯ ಬೆಟ್ಟದಡಿಯಲ್ಲಿ ಹಾವಿನಂತೆ ಸುರುಳಿ ಸುರುಳಿಯಂತೆ ಬಳಸುವ ಸೂಕ್ಷ್ಮ ತಿರುವುಗಳಲ್ಲಿ ನುಸುಳುತ್ತಿತ್ತು. 'ನಿನ್ನ ಇತ್ತೀಚೆಗೆ ನೋಡಿದ್ನಲ್ಲ ತಂದೆ ಇಷ್ಟು ಶೀಘ್ರವಾಗಿ ಯಾಕಯ್ಯ ಕರೆಸ್ಕೋತಿದ್ದೀಯಾ' ಅಂದ್ಕೋತಾ ಕಿಟಕಿಯಿಂದ ನೋಡಿದೆ....ಚೆಲುವ ನಾರಾಯಣ ಸ್ವಾಮಿ ಕೈ ಬೀಸಿ 'ಬಾ ಇಂದು ನನ್ನ ಸನ್ನಿಧಾನವೇ ಗತಿ' ಎಂದು ಅಣಕಿಸಿದಂತಾಯ್ತು...!

ಅವರ ಮಾತಿನಲ್ಲಿ ತರ್ಕವಿತ್ತು, ಅರ್ಥವೂ ಇತ್ತು... ಇವರು ಯಾವಾಗಲೂ ಹೀಗೆ ಏನೇ ಹೇಳಿದರೂ ಒಪ್ಪಿಕೊಳ್ಳಲೇ ಬೇಕು ಹಾಗೆ ಸಕಾರಣದೊಂದಿಗೆ ಹೇಳುತ್ತಾರೆ. ಆದರೀಗ ಮೆಚ್ಚಿಕೊಳ್ಳಲೋ ಗುದ್ದಾಡಲೋ ಗೊತ್ತಾಗಲಿಲ್ಲ... ಕ್ಷಣ ಮಾತ್ರದಲ್ಲಿ ಮನದಲ್ಲಿ ನೆಡೆಯುತ್ತಿದ್ದ ಯುದ್ಧ ನಿಗ್ರಹಿಸಿ 'ಸರಿ' ಎಂದುಸುರಿ ಬರುತ್ತಿದ್ದ ನಿರಾಸೆಯ ನಿಟ್ಟುಸಿರನ್ನು ನಿಧಾನವಾಗಿ ಹೊರಹಾಕಿದೆ... 'ಮಾನವನೊಂದು ಬಗೆದರೆ ದೈವವೊಂದು ಬಗೆವುದೆಂಬ' ಮಾತು ನೆನಪಾಗಿ ' ಇಂದು ಎನಗೆ ಗೋವಿಂದ... ನಿನ್ನಯ ಪಾದ...' ಎಂದು ಗುನುಗ ತೊಡಗಿದೆ...

ಅರೇ... ಏನಿದು? ಏನಚ್ಚರಿ!? ಕಾರು ಮೇಲುಕೋಟೆ ಹಾದಿಗೆ ತಿರುಗದೆ ಬಲ ಮಗ್ಗುಲಿಗೆ ತಿರುಗಿತು... ಆಹಹಾ...! ಎಂಥಾ ಮಜ... ಏಳನೇ ತರಗತಿಯಲ್ಲಿ ಕಾಲಿಗೆ ತೊಡರುತ್ತಿದ್ದ ಉದ್ದನ್ನ ಲಂಗ ಎತ್ತಿ ಹಿಡಿದು ಗೆಳೆಯನ ಕೈ ಹಿಡಿದು ನರ್ತನ ಮಾಡಿದಷ್ಟು ಖುಷಿಯಾಗಿ, ಮನಕ್ಕೆ ರಂಗೆರಚಿದಂತಾಯ್ತು...! ಗಂಡನಿಗಷ್ಟು ತಿಳಿಯದೇ 'ಸರಿ' ಎಂದುಸುರಿದ ರೀತಿಯಲ್ಲಿರುವ ಭಾವ ಯಾವುದೆಂದು...!? ಹಾಗೇ ಒಂದೆರಡು ಮುತ್ತುಗಳನ್ನು ಹಾರಿಸಿ ಬಿಟ್ಟೆ... ಹೊರಗೆ ಹೋಗುವ ಸಾಧ್ಯತೆ ಇರಲಿಲ್ಲ ಕಿಟಕಿ ಗಾಜುಗಳು ಮುಚ್ಚಿದ್ದು 'ಎಸಿ' ಚಾಲನೆಯಲ್ಲಿತ್ತು...!
ಅವರಿಗರಿವಿಲ್ಲದೇ ಅವು ಅವರ ಸ್ಪರ್ಶಿಸುವುದ ನೋಡುತ್ತಾ ಹವಾನಿಯಂತ್ರಿತ ವಾಹನದಲ್ಲೂ ಬೆಚ್ಚಗಿನ ಸುಖಾನುಭವದಿಂದ ಪುಳಕಿತಳಾದೆ... 'ಸ್ವರ್ಗಕ್ಕೆ ಮೂರೇ ಗೇಣು' ಎಂದಾಗ ಆಗುವ ಅನುಭವ ಇದೇ ಏನೋ...!...?

ಶ್ರವಣಪ್ಪನ ಪುರ ಕ್ಷಣ ಮಾತ್ರದಲ್ಲಿ ತಲುಪಿದಷ್ಟು ಸುಖವಾದ ಪ್ರಯಾಣ ಆಯ್ತೀಗ ಮನ ಹಗುರವಾಗಿದ್ದದ್ದಕ್ಕೆ...! ಗೋಮಟಗಿರಿ ಏರುವುದು, ಅದೂ ಮನದರಸನೊಡನೆ... ಯಾರ, ಯಾವ ಅಡೆತಡೆಯೂ ಇರದೇ...! ಓಹ್! ಎಂಥಾ ಮಧುರ ಅನುಭವ. ಎಲ್ಲವೂ ಹೊಸತರಂತೆ ಭಾಸವಾಗ ತೊಡಗಿತು. ಬೆಟ್ಟದ ತಪ್ಪಲಿನಲ್ಲಿ ಸುತ್ತಲೂ ನೂರಾರು ಜನರಿದ್ದರೂ ನಾವಿಬ್ಬರೇ ಇರುವ ಭಾವ ಬಹು ಸೊಗಸಾಗಿತ್ತು. 'ಮನ ಮಂಡಿಗೆ ಮೆಲ್ಲುತ್ತಿತ್ತು' ನಾವು ಹೇಗೆ ಹತ್ತಬಹುದು ಮೆಟ್ಟಿಲುಗಳನ್ನು ಎಂದು ಕಲ್ಪನೆ ಮಾಡಿಕೊಳ್ಳುತ್ತಾ... ಮದುವೆಯಾದ ಹೊಸತರಲ್ಲೂ ಹೀಗೆ ಅನಿಸಿರಲಿಲ್ಲವಲ್ಲಾ ಎಂದಚ್ಚರಿಯಾಯಿತು... ಅಥವಾ ಕಳೆದು ಹೋಗುತ್ತಿರುವ ವಯಸ್ಸಿನ ಪ್ರಭಾವವೇ ಎಂಬ ಭಾವ ಮನದಲ್ಲಿ ಸುಳಿ ಸುಳಿದು ಕಾಡತೊಡಗಿತು... ಛೇ...ಇಲ್ಲ ...ಇಲ್ಲ... ನಮಗೇನಂಥಾ ವಯಸ್ಸಾಗಿರುವುದು ಎಂದುಕೊಳ್ಳುತ್ತಾ ಸತ್ಯ ಮರೆ ಮಾಡುತ್ತಾ ಮನ ಹಗುರವಾಗಿಸುತಾ ಸಂತೈಸಿಕೊಳ್ಳುತ್ತಾ ಕಟು ಸತ್ಯಕ್ಕೆ ಮಿಂಚಿನಂತೆ ತೆರೆ ಎಳೆದು ಗೆಲುವಿನ ಹುಸಿ ನಗೆ ಸೂಸಿದೆ...

ಗೊಮ್ಮಟ ಗಿರಿ ಹತ್ತುವ ಮುನ್ನ ನೀ ತಲೆ ಎತ್ತುವುದಸಾಧ್ಯ ಎಂಬಂತೆ ಭಾಸ್ಕರ ಜವ್ವನಿಗನಾಗಿ ಮೆರೆಯುತ್ತಿದ್ದ! ನೇರವಾಗಿ ಕಿರಣಗಳನ್ನು ಪ್ರಕರವಾಗಿ ಹೊರ ಹೊಮ್ಮಿಸುತ್ತಾ ಗಹಗಹಿಸುತ್ತಿದ್ದ. ನಾ ಮೂತಿ ಊದಿಸುತ್ತಾ... ಓಹೋ!... ಇರು ತಡೆಯುವೆ ನಿನ್ನ! ನಾನೇನು ಕಡಿಮೆಯೇ? ಎಂದು ಅವನ ವಿರಾಟ ರೂಪಕ್ಕೆ ಸವಾಲು ಹಾಕಲು ಸಜ್ಜಾದೆ!. ಪತಿರಾಯನೆಡೆಗೆ ತಿರುಗಿ ' ಟೋಪಿ ಹಾಕಿಕೊಳ್ಳುವ ಎಂದೆ '. ಸರಿಯಾಗಿ ಕೇಳಿಸಿಕೊಳ್ಳದ ಇವರು ಮಖವನ್ನು ಏನು ಹೇಳಿದೆ ಎಂಬ ಭಾವದಲಿ ನಿರುಕಿಸಿದರು. ಅಯ್ಯೋ...! ನಮಗೆ ನಾವೇ ಟೋಪಿ ಹಾಕಿಕೊಳ್ಳುವುದೇ...!? ಎಂದುಕೊಳ್ಳುತ್ತಾ...ನನ್ನ ಮಾತಿಗೆ ನಾನೇ ನಗುತ್ತಾ 'ಹ್ಯಾಟು' ತೆಗೆದುಕೊಳ್ಳುವ ಎಂದೆ. ಏನನ್ನುವರು ಎಂದುಕೊಳ್ಳುವ ಮೊದಲೇ 'ಸರಿ' ಎಂದು ಅಂಗಡಿಯೆಡೆಗೆ ಮುಖ ಮಾಡಿದರು. ನಾ ಬಾಲಂಗೋಚಿಯಾದೆ!..
ಈ 'ಹ್ಯಾಟು' ಪದ ಬಲು ಪ್ರಿಯವಾಯ್ತು. ಟೋಪಿ ಕೂಡ ಸುಂದರವಾದ ಪದ. ಆದರೆ ಜನ ಅದನ್ನ ಹೇಗ್ಹೇಗೋ ಬಳಸಿ ಇಂದು ಟೋಪಿ ಹಾಕುವುದು, ಹಾಕಿಸಿಕೊಳ್ಳುವುದು, ಕೊಳ್ಳುವುದು ಪರಿಹಾಸ್ಯದ ಹಾಗೂ ಮುಜುಗರ ತರುವ ಸಂಗತಿಯಾಯ್ತಲ್ಲಾ ಎಂದು ಮುಲುಕಿದೆ....

ಅಂಗಡಿ ಮುಂದೆ ಬರ್ತಿದ್ದಂತೆ ಒಂದು ಪ್ರಕಾರದ 'ಟೋಪಿ' ಅಯ್ಯಯ್ಯೋ... ಅಲ್ಲ...! 'ಹ್ಯಾಟು' ಹೌದು ನನ್ನ ಪ್ರೀತಿಯ ಹ್ಯಾಟೊಂದು ಮನ ಸೆಳೆಯಿತು. 'ಹ್ಯಾಟು' ಎಂದು ಹೇಳುವುದೇ ಎಷ್ಟು ಸುಖವಾಗಿದೆ ಎಂದುಕೊಳ್ಳುತ್ತಲೇ ಮನ ಸೆಳೆದ ಹ್ಯಾಟನ್ನು ಕೈ ಚಾಚಿ ಎತ್ತಿಕೊಂಡೇಬಿಟ್ಟೆ! ಬೆಲೆ ಕೇಳುವ ವ್ಯವಧಾನವೂ ಇಲ್ಲ! ? ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಕಿರೀಟಧಾರಣೆ ಆಗುವಾಗ ಜವಾಬ್ದಾರಿಯ ಒತ್ತಡಕ್ಕೆ ಎದೆ ಗಟ್ಟಿ ಮಾಡಿಕೊಂಡಿದ್ದಿರಬಹುದು ಆದರೆ ನಾನು ಮಾತ್ರ ಮಹದಾನಂದದಿಂದ ಕಿರೀಟ ಧರಿಸಿಯೇ ಬಿಟ್ಟಿದ್ದೆ...!

ಅಳ್ಳಕವಾದ ಬುರುಡೆ ಹಿಡಿಸುವ ಭಾಗ ಪುಟ್ಟದೊಂದು ಗುಂಡಿಯಂತೆ ಕಾಣ್ತು...! ನನ್ನ ಬುರುಡೆಯೇನು ಪುಟ್ಟದೇ...? ತಕ್ಕುದಾಗೆ ಇದೆ... ಏ... ಇಲ್ಲ... ನನಗಾಗೆ ಹೇಳಿ ಮಾಡಿಸಿದಂತೆ ಇದೆ...ಬೀಗಿದೆ...! ಖುಷಿಯಿಂದ ಉಬ್ಬಿದೆ!...ಅದರ ಸುತ್ತಲೂ ಇದ್ದ ಬುರುಡೆಯಂತಹ ವೃತ್ತಾಕಾರದ ಹರವು ಮತ್ತೂ ಚೆಂದವಾಗಿ ಹ್ಯಾಟಿಗೆ ಮೆರುಗು ನೀಡಿತ್ತು. ಕಮಲದ ಹೂವಿನ ಸುತ್ತಾ ಹಾಸಿ ನಿಂತಂತಿರುವ ಎಲೆಗಳರಡಿದ ಮೋಹಕ ದೃಶ್ಯ ನೆನಪಾಗಿ ಮನಕ್ಕೆ ಮುದ ನೀಡಿತು. ಮನ ಮೆಚ್ಚಿತ್ತು. ಅಳ್ಳಕವಾದ ಹ್ಯಾಟಿನ ಭಾಗ ಸುತ್ತಾ ಆವರಿಸಿರುವ ಭಾಗವೀಗ ಶನಿಗ್ರಹದ ಸುತ್ತಲಿನ ಗ್ರಹದ ಸುತ್ತಲಿನ ಉಂಗುರದಂತೆ ಕಂಡು ಒಮ್ಮೆಲೇ ನಭಕ್ಕೆ ಜಿಗಿದುಬಿಟ್ಟೆ. ಇದರ ನಯವಾದ ಸ್ಪರ್ಶ, ತೆಳು ಸಿಮೆಂಟ್ ಬಣ್ಣಕ್ಕೆ ತುಸು ಹೆಚ್ಚು ಬಿಳುಪೆನುವ ನೈಲಾನ್ ದಾರಗಳನ್ನು ಹೊಂದಿಸಿ ಹೆಣೆದ ಶೈಲಿ ಚಿತ್ತಾಕರ್ಷಕವಾಗಿತ್ತು. ತುಂಬಾ ಸುಂದರವಾದ ಹ್ಯಾಟೇ ಇದು ಅನಮಾನವೇ ಇಲ್ಲ! ಮನ ಸೋತು ಶರಣಾಯ್ತು... ಕೆನ್ನೆಗೆ ಮುತ್ತಿಡುವಂತೆ ಹಾಗೂ ಹ್ಯಾಟು ಶಿರದಿಂದ ಜಾರದಂತೆ ಬಂಧಿಸುವ ಚಪ್ಪಟೆಯಾಕಾರದ ರಬ್ಬರ್ ದಾರವನ್ನು ಪದೇ ಪದೇ ಮುಟ್ಟಿ ನೋಡಿದೆ!... ಚಿಕ್ಕ ವಯಸ್ಸಿನಲ್ಲಿ ರಬ್ಬರ ಎಷ್ಟು ಹಿಗ್ಗುವುದೆಂದು ಎಳೆದೆಳೆದು ಒಮ್ಮೆಲೆ ಬಿಟ್ಟು ಚುರ್ ಚುರ್ರೆನ್ನುವಂತ ಉರಿ ಅನುಭವಿಸಿದ ನೆನಪು ನುಗ್ಗಿ ಬಂತು... ಎಲ್ಲದರೂ ಉಂಟೇ!? ಈಗ ಹಾಗೆ ಮಾಡುವುದುಂಟೆ!? ಇನಿಯನ ಕರಗಳು ಕೆನ್ನೆ ಬಳಸಿ ಹಿಡಿದಂತೆ ಕಪೋಲಗಳನ್ನು ಅಪ್ಪಿಬಿಟ್ಟಿತ್ತು ರಬ್ಬರ್ ಪಟ್ಟಿ!...ಹಾಗೇ ಜಂಗಮವಾಣಿಯನ್ನೇ ದರ್ಪಣವಾಗಿಸಿ 'ದರ್ಪಣ  ಸುಂದರಿಯಾದೆ'...! 

ಅರೇ!...ಏನಿದು? ಶಿರದ ಬಲಭಾಗದಲ್ಲಿ ಅಳ್ಳಕವಾದ ಬುರುಡೆಯ ಪಾತ್ರೆಯ ಪಕ್ಕದಲ್ಲಿ ಹರಡಿದ ಭಾಗದಲ್ಲಿಯೇ ತುಸು ಕೆಳಗೆ ನೇತಾಡುವಂತೆ ಎರಡು ಬಲು ಚಂದದ ಟೇಪುಗಳು... ಚೆಲುವೆಯ ಮುಂಗುರುಳು ಅಂಕೆಯಿರದೆ ಹಾರಾಡುತ್ತ ಪಡ್ಡೆಗಳ ಚಿತ್ತ ಸ್ವಾಸ್ಥ್ಯ ಕೆಡಿಸುವಂತೆ ನನ್ನ ಮನ ಕೆಣಕಿದವು...!? ಏನು ಸೊಗಸು!? ಚಿಕ್ಕವಳಿದ್ದಾಗ ಅಮ್ಮ ಕಟ್ಟಿದ ಟೇಪು ಉದ್ದಕ್ಕೆ ಇದ್ದು ಹಾರಾಡುತ್ತಿದ್ದುದು ನೆನೆದು ಕಣ್ಣಾಲಿ ತುಂಬಿತು... ಮನದಲ್ಲೇಳುತ್ತಿದ್ದ ಭಾವಾಲಾವಕ್ಕೆ ತಂಪೆರೆಯುವಂತೆ ಟೇಪಿನ ಇನ್ನೊಂದು ತುದಿಗೆ ಮೆತ್ತಿಸಿದ್ದ ಗುಲಾಬಿ ಬಣ್ಣದ ಹತ್ತಿಯಂತೆ ಮೃದುವಾದ ' ಹೂ ' ನಿಂದ ಹ್ಯಾಟು ಮತ್ತಷ್ಟು ಆಕರ್ಷಕವಾಗಿ ಕಂಡು ಮನ ಮರುಳಾಗಿ ಮಂತ್ರಮುಗ್ದವಾಯ್ತು. ನಾನು ನನ್ನ ಹ್ಯಾಟಿನ ಮೋಹದಲ್ಲಿ ಪ್ರಮಪಾಶಕ್ಕೆ ಸಿಲುಕಿದ ಪ್ರೇಮಿಯಂತೆ ಪ್ರೇಮಾಯಣದಲ್ಲಿ ವಿಹರಿಸುತ್ತಿದ್ದಾಗ, ಪತಿರಾಯ 'ಏನು ಇದಕ್ಕೆ ನೂರು ರೂ ನಾ!? ಎಂದದ್ದು ಕರ್ಕಶವಾಗಿ ಕಿವಿ ತೂರಿ ಭೂಮಿಗಿಳಿದು ಹೋದೆ. ಹ್ಯಾಟು ಮಾತ್ರ ಶಿರವನ್ನಲಂಕರಿಸಿಯೇ ಇತ್ತು. ಕರಗಳು ಮೃದುವಾಗಿ ಸ್ಪರ್ಶಿಸುತ್ತಿದ್ದವು. ಒಮ್ಮೆಲೇ ತನಗಿಷ್ಟವಾದ ಗೊಂಬೆ ಕಳೆದುಕೊಳ್ಳುವ ಭೀತಿಯಿಂದ ನರಳುವ ಮಗುವಿನಂತಾದೆ!...

ಚೌಕಾಸಿ ನೆಡೆದಂತೆಲ್ಲಾ ನನ್ನ ಆತಂಕ ಹೆಚ್ಚಾಗ್ತಿತ್ತು. ನನ್ನ   'ಲವಿಂಗ್  ಹ್ಯಾಟು' ಅಂಗಡಿಯವನಿಗೆ ಕೊಡಬೇಕೆ ವಾಪಸ್ಸು!? ಊಹು...! ಸುತ್ರಾಮ್ ಸಾಧ್ಯವಿಲ್ಲ!... ಯಾವುದೇ ಕಾರಣಕ್ಕೂ ಇಲ್ಲ...! ನನಗಂತೂ  'ಲವ್ ಅಟ್ ಫಸ್ಟ್ ಸೈಟು ' ಅಂದ್ಹಾಗೆ ಆಗ್ಬಿಟ್ಟಿದೆ...! ನಿಜ ಹೇಳ್ತೀದ್ದೀನಿ ನನ್ನ ಪತಿರಾಯ ನನ್ನ ನೋಡೋಕೆ ಮೊದಲ ಸಲ ಬಂದಾಗಲೂ 'ಲವ್ ಅಟ್ ಫಸ್ಟ್ ಸೈಟ್' ಅಂತ ಏನೂ ಆಗಿರ್ಲಿಲ್ಲ...!? ಯಾಕೇಂದ್ರೆ ನೋಡೋಕೆ ಬಂದಾಕ್ಷಣ ಮದುವೆ ಆಗುತ್ತೆ ಅಂತ ಏನು ಗ್ಯಾರಂಟಿ ಇಲ್ವಲ್ಲಾ...!?...
ಅಂಗಡಿಯವ ಅಳೆದು ಸುರಿದು ಹತ್ತು ರೂ ಬಿಟ್ಟ ಅಬ್ಬಬ್ಬಾ ! ' ಫುಲ್ ನೈಂಟೀಗೆ ' ಹ್ಯಾಟು ನನ್ನ ಒಡೆತನಕ್ಕೆ ಬಂತು!. ಮದುವೆ ಆದಾಗ ನನ್ನ ಪತಿಯ ಮೇಲಾದ ಲವ್ವಿಗಿಂತ ದುಪ್ಪಟ್ಟು ಲವ್ವಾಗೋಯ್ತು ನಂಗೀಗ ಅವರ ಮೇಲೆ...! ಅಯ್ಯೋ ! ಇದೇನಿದು!? ಇವರು ತಮಗೆ ಹ್ಯಾಟು ಕೊಳ್ಳದೇ ಹಾಗೇ ಹೊರಟ್ರು?  ಪತಿ ಕಡೆ ನೋಡಿ ಯಾಕೆ ಅಂದೆ? 'ಏ ನಂಗ್ಯಾಕೆ ಬೇಡ ಅಂದ್ರು' ತಣ್ಣಗೆ... ಥೇಟ್ ಮಕ್ಕಳಿಗೆ ಕೇಳಿದ್ದು ಕೊಡಿಸಿ ತನಗಾಸೆ ಇದ್ದರೂ ತನ್ನವರ ಸುಖ ನೋಡಿ ತನ್ನಿರವ ಮರೆವ ಅಪ್ಪನಂತೆ ಕಂಡ್ರು ನಂಗೆ. ಮನ ತುಂಬಿ ಬಂದು ಗಂಟಲುಬ್ಬಿ ಹೋಯ್ತು... ಮನದಲ್ಲೇ ಅಪ್ಪಿ ಮುದ್ದಾಡಿದೆ. ಅಯ್ಯೋ... ನನ್ ಲವ್ವೇ...ಎಂಥಾ ತ್ಯಾಗ...

ಮೆಟ್ಟಿಲು ಹತ್ತಲು ಮೊದಲು ಮಾಡಿದಾಗ ತಲೆಯ ಮೇಲಿದ್ದ ಹ್ಯಾಟು ಕೇವಲ ಹ್ಯಾಟಾಗಿರಲಿಲ್ಲ...! ನನ್ನೊಲುಮೆಯ ಪತಿಯ ಪ್ರೀತಿಯ ಸಂಕೇತವಾಗಿತ್ತು!. ಈಗಂತೂ ಮೃದುವಾಗಿ ಎಚ್ಚರಿಕೆಯಿಂದ ಸವರುತ್ತಾ ಸರಿಯಿದ್ದರೂ ಮತ್ತೊಮ್ಮೆ ಮಗದೊಮ್ಮೆ ಸರಪಡಿಸಿಕೊಂಡೆ...!? ಗೊಮ್ಮಟ ಗಿರಿಯ ಮೆಟ್ಟಿ ನಿಲ್ಲುವ ತವಕದಿಂದ ಹತ್ತಲಾರಂಭಿಸಿದೆ. ಏಳೆಂಟು ಮೆಟ್ಟಿಲು ಹತ್ತಿದ್ದೆನೋ ಇಲ್ಲವೋ ಕಾಲಿನ ರಕ್ಷಾ ಕವಚವಾದ ಕಾಲು ಚೀಲದಿಂದಾಗಿ ಹಿಡಿತ ಸಿಗದೆ ಜಾರುವಂತೆ ಭಾಸವಾಯಿತು. ಅಯ್ಯೋ...! ಇದು ಬೇರೆ ಜಾರುತ್ತಲ್ಲಪ್ಪಾ ಎಂದು ಮೆಲುವಾಗಿ ಗೊಣಗಿದೆ. ' ಬಿಚ್ಚಿಬಿಡು' ಎಂದರವರು ಮಹದಾಜ್ಞೆ ಎಂದು ಬಿಚ್ಚಿದೆ!. ಎಲ್ಲಿರಿಸುವುದು ಎಂದು ನಾ ಯೋಚಿಸುವ ಮೊದಲೇ ಕೈ ಚಾಚಿ ತೆಗೆದುಕೊಂಡು ಪ್ಯಾಂಟಿನ ಜೇಬಿಗಿಳಿಸಿಯೇ ಬಿಟ್ಟರು!.?. ಲವ್ವಂತೂ ಪ್ರೇಮ ಗಂಗೆಯಂತೆ ಪ್ರವಹಿಸಿ ಉಕ್ಕುಕ್ಕಿ ಹರಿಯಿತು... ಸಾರ್ವಜನಿಕ ಸ್ಥಳವಾದ್ದರಿಂದ ಕತ್ತಿಗೆ ಜೋತು ಬೀಳಲಿಲ್ಲ ಅಷ್ಟೇ....

ಉತ್ಸಾಹದ ಚಿಲುಮೆಯಂತೆ ಮೆಟ್ಟಿಲೇರತೊಡಗಿದೆ ವಯಸ್ಸಿನ ಪ್ರಭಾವ ಚೆನ್ನಾಗಿಯೇ ಆಗ ಹತ್ತಿತು. ಆಧುನಿಕ ತಂತ್ರಗಳಿಂದ ಎಷ್ಟು ಮುಚ್ಚಿಟ್ಟರೇನಂತೆ ಅಸಲಿಯತ್ತು ಹಣಕಿ ಹಾಕಹತ್ತಿತೀಗ... ಒಪ್ಪದ ಮನ ಗಿಂಜಾಡುತ್ತಿತ್ತು...! ಪತಿರಾಯ ಅಭಯ ಹಸ್ತ ಚಾಚಿ ಕೈ ಹಿಡಿದಾಗ ಉರಿ ಬಿಸಿಲಿನಲ್ಲೂ ಕರ ಸ್ಪರ್ಶ ಎಲ್ಲವ ಮರೆಸಿತ್ತು!. ಸುಧಾರಿಸುತ್ತಾ, ಆಗಾಗ್ಗೆ ನಿಲ್ಲುತ್ತಾ, ಏದುಸಿರು ಬಿಡುತ್ತಲೇ ಏರ ತೊಡಗಿದೆ. ಧಾರಾಕಾರವಾಗಿ ಕಾವೇರಿ ತಲಕಾವೇರಿಯ ಪುಷ್ಕರಣಿಯಲ್ಲಿ ಬುಳುಬುಳನೆ ಮೇಲೆದ್ದು ಉಕ್ಕಿ ಹರಿವಂತೆ ದೇಹದಾದ್ಯಂತ ಬೆವರು ನಿಯಂತ್ರಣವಿಲ್ಲದೇ ಪ್ರವಹಿಸುತ್ತಾ, ಉಟ್ಟ ಬಟ್ಟೆ ಬಿಗಿದಪ್ಪತೊಡಗಿತು!. ಕೈ ಹಿಡಿದು ಬಹು ಎಚ್ಚರಿಕೆಯಿಂದ ಆರೋಹಣ ಮಾಡಿಸುತ್ತಿದ್ದ ಪತಿಯೆಡೆಗೆ ಅಬಿಮಾನದಿಂದ ನೋಡಿದೆ!. ಕ್ಷಣವಷ್ಟೇ ಆ ಭಾವ...! ಮರುಕ್ಷಣವೇ ಹೊಟ್ಟೆ ಕಿಚ್ಚಿನ ನಂಜು ತಾಗಿ ಬಿಟ್ಟಿತು...! ಮನದ ವಿಕೃತಿ ನೆನೆದು ಅಚ್ಚರಿ ಕೂಡ ಆಯ್ತು...!? 

ಸಪೂರ ದೇಹ, ಸೂರ್ಯ ಅಷ್ಟು ಪ್ರಖರವಾಗಿದ್ದರೂ ಹನಿ ಬೆವರೂ ಕೂಡ ಬಾರದೆ ಅತಿ ಸಹಜವಾಗಿ ಮೆಟ್ಟಿಲೇರುತ್ತಾ ಕೆಂಪಗೆ ಹೊಳೆಯುತ್ತಿದ್ದರವರು!!!!??... ನಾನೋ ಸುಟ್ಟ ಬದನೆ ಕಾಯಿಯಂತಾಗಿದ್ದೆ!  ಮೊದಲೇ ಎಣೆಗೆಂಪು ಮುಖ ಈಗ ಮತ್ತೂ ಕಪ್ಪಾಗತೊಡಗಿತು ಹಾಟಿನಿಂದ ತೂರಿ ಬರುತ್ತಿದ್ದ ಶಾಖಕ್ಕೆ....

ಏರಿದೆವು , ಏರಿದೆವು... ಏರಿಯೇ ಬಿಟ್ಟೆವು...! ಗೊಮ್ಮಟ ಗಿರಿ ಮೆಟ್ಟಿ ನಿಂತು ತಲೆ ನೋಡಿದರೂ ತುದಿ ತೋರದ ಆಜಾನುಬಾಹು, ಸುಂದರ ಪುರುಷ ಸಿಂಹ  ಸ್ಥಿರವಾಗಿ ನೆಲೆ ನಿಂತ ಭಂಗಿ ಕಂಡು 'ಮಗುವಿನ ಮೊಗ ಕಂಡೊಡನೆ ಎಲ್ಲ ಮರೆತು ಖುಷಿಯ ಪುತ್ಥಳಿಯಾಗುವ ತಾಯಂತಾದೆ' ಸಾರ್ಥಕವಾಯಿತು ಕೆಲ ಹೊತ್ತಿನ ಹಿಂದಿನ ಪ್ರಾಯಾಸದ  ಪಯಣದ ಆಯಾಸವೆಲ್ಲಾ ಕ್ಷಣದಲ್ಲಿ   ಮರೆಯಾಗಿ ಹೊಯ್ತು...!

ಕಣ್ತುಂಬಿಕೊಂಡು ಮನದಲ್ಲೇ ವಂದಿಸಿ, ಒಂದಿಷ್ಟು ವಿರಮಿಸಿ, ಅಭ್ಯಾಸ ಬಲದಿಂದಾಗಿ ಒಂದೆರಡು ನಿಮಿಷ ಧ್ಯಾನಿಸಿ ಅವರೋಹಣಕ್ಕೆ ಅಣಿಯಾದೆವು. ' ಬರೀ ಸಪ್ತಪದಿ ಏಕೆ ಶತಪದಿ ತುಳಿವ ಇಂದು' ಎಂದು ಕಿರು ನಗೆ ತುಳುಕಿಸುತ್ತಾ ಪತಿ ಬಿಟ್ಟ  ಬಾಣಕ್ಕೆ ಮಾರುತ್ತರವೆಂಬಂತೆ ನಸು ನಕ್ಕು ಕರ ಹಿಡಿದು  ಮತ್ತೊಮ್ಮೆ ಒಟ್ಟೊಟ್ಟಿಗೆ ಹೆಜ್ಜೆ ಹಾಕತೊಡಗಿದೆವು!. ಪೌರೋಹಿತ್ಯವಿಲ್ಲದ ಶತಪದಿ ಆರಂಭವಾಯ್ತು. ತಪ್ಹೆಜ್ಜೆ ಇರಿಸಿದ ನನಗೆ ಥಾರ್ನಡೈಕ್ನ 'ಪ್ರಯತ್ನ ದೋಷ ಕಲಿಕೆ' ನೆನಪಾಗಿ ತಪ್ಹೆಜ್ಜೆ ಸರಿಪಡಿಸಿ ಸಾಫಲ್ಯ ಕಲಿಕೆ ಕರಗತಮಾಡಿಕೊಂಡು ಅಡೆತಡೆಗಳ ನಿವಾರಿಸುತ್ತಾ ಮುಂದುವರೆದೆವು. ಪ್ರೌಢ ಪ್ರಣಯ ಸೊಗಸಾಗಿ ನೆಡೆಯಿತು. ಹತ್ತುವಾಗಿನ ಪ್ರಾಯಾಸ ಕಾಡಲೇ ಇಲ್ಲ!!!. ಧುಮ್ಮಕ್ಕಿ ಹರಿಯುವ ಜಲದಾರೆಯಂತೆ ದುಡುದುಡು ಓಡೋಡುತ್ತಲೇ ಇಳಿಯುತ್ತಿದ್ದೆವು. ನನ್ನ ಪ್ರಥಮ ಪ್ರೇಮ ಪುತ್ಥಳಿಯನ್ನು ಆಗಾಗ್ಗೆ ಸವರಿ ಸಂಭ್ರಮಿಸುವುದನ್ನು ಮಾತ್ರ ಮರೆಯಲಿಲ್ಲ. ಮನೋ ವಿಜ್ಞಾನಿ ಜೆರೂಮ್ ಎಸ್. ಬ್ರೂನರ್ ಮಾತು ಅಕ್ಷರಶಃ ನಿಜವಾಗಿತ್ತು!!!. ನನ್ನ ಹ್ಯಾಟು ಕ್ರಿಯಾತ್ಮಕ ಹಂತ ದಾಟಿ ಬಿಂಬವಾಗಿ ಪ್ರೇಮ ಸಂಕೇತವಾಗಿ ಶಿರವೇರಿ ಕುಳಿತಿತ್ತು...

ಬೆಟ್ಟವಿಳಿದು ಗೊಮ್ಮಟ ಗಿರಿಯ ಪಾದದಿಂದಲೇ ಮತ್ತೊಮ್ಮೆ ಕಾಣದ ಗೊಮ್ಮಟನನ್ನು ತಿರುತಿರುಗಿ ನೋಡುತ್ತಲೇ ಸೊಗಸಾದ,ರುಚಿಯಾದ ಒಣ ಹಣ್ಣುಗಳಿಂದ ಅಲಂಕೃತವಾದ ಕೋನ್ ಐಸ್ ಕ್ರೀಮ್ ಮೆಲ್ಲುತ್ತಾ ಗೊಮ್ಮಟ ಗಿರಿಗೆ ವಿದಾಯ ಹೇಳಿ ಕಾರೇರಿ, ಬಹು ಅಕ್ಕರೆಯಿಂದ ಮೂರು ಜನ ಆಸೀನರಾಗುವ ಹಿಂಬದಿ ಆಸನದಲ್ಲಿ ನನ್ನ ಹ್ಯಾಟನ್ನು ಬಹು ಕಕ್ಕುಲತೆಯಿಂದ ಇರಿಸಿದೆ. ನಂತರ ಬಂಧುಗಳ ಮನೆಗೆ ಹೋಗಿ ಅಲ್ಲಿನ ಕಾರ್ಯಕ್ರಮ ಮುಗಿಸಿ ಅವರ ಮನೆಯಿಂದ ಹೊರಡುವಾಗ ಈ ಅಚಾತುರ್ಯ ಕೈ ಮೀರಿ ನೆಡೆದು ಹೋಗಿತ್ತು....

ಏನೆಂದು ಬಣ್ಣಿಸಲಿ!?!... ನನ್ನ ಮನ ಸೆಳೆದು ಒಂದಷ್ಟು ಸಮಯ ನನ್ನನ್ನಗಲದಂತೆ ಒಡನಾಡಿಯಾಗಿ ಶಿರವೇರಿ ನಾ ನಲುಗದಂತೆ ಕಾಪಾಡಿದ್ದ ನನ್ನ ಪ್ರೇಮ ಪುತ್ಥಳಿ ಬಂಧುಗಳ ಮಗುವಿನ ಪಾಲಾಗಿತ್ತು...!!!...??? ಏನು ಮಾಡುವುದು? ಹೇಗೆ ಸಹಿಸಲಿ ವೇದನೆಯನ್ನು? ಏಕೆ ಹೀಗಾಯ್ತು?...ಒಂದು ಮಗುವಿನಿಂದ ಪ್ರೇಮ ಭಂಗ! ಅದೂ ಅದರ ಸಹಜ ಆಸೆಯಿಂದ ಆಗಬೇಕೆ? ಅಯ್ಯೋ...! ದುರ್ವಿಧಿಯೇ ನೀನೇಕೆ ಇಷ್ಟು ಕ್ರೂರಿಯಾದೆ? ನಿನಗದು ಕೇವಲ ಹ್ಯಾಟಿರಬಹುದು !!!? ನನಗೆ ಮೊದಲ ಪ್ರೇಮ, ಪತಿಯ ತ್ಯಾಗದ ಸಂಕೇತ...! ಈಗಂತೂ ನನ್ನಲ್ಲಿನ 'ಇದ್' ಸಿಗ್ಮಂಡ ಫ್ರಾಯ್ಡ್ ಹೇಳಿದ್ದಕ್ಕಿಂತ ಭಯಂಕರವಾಗಿ ರುದ್ರ ನರ್ತನ ಮಾಡತೊಡಗಿತು... ಆದರೂ ನಾನು 'ಪ್ರತಿಕ್ರಿಯಿಸಲಿಲ್ಲ ಸ್ಪಂಧಿಸಿದೆ'... ಮಗುವಿನ ಕೆನ್ನೆ ಸವರುವಂತೆ 'ಹ್ಯಾಟು' ಸವರಿದೆ... ದೂರ ಸರಿವ ಪ್ರೇಮಿಯನ್ನು ಕಣ್ತುಂಬಿಕೊಂಡೆ... ಮಗುವಿನ ಕೈ ಸೇರಿ ಅದಕಾಗುವ ಸ್ಥಿತಿ ನೆನೆದು ಪರಿತಪಿಸಿ, ನಿಟ್ಟುಸಿರಿಟ್ಟು ಕಾರಿನೊಳಗೆ ತೂರಿಕೊಂಡೆ... ಬಂಧುಗಳಿಗೆ ಕೈ ಬೀಸಿ ಭಾರವಾದ ಹೃದಯ ಹೊತ್ತು ನಮ್ಮೂರಿನೆಡೆಗೆ ಪಯಣಿಸುವಾಗ ಹೀಗಾಗುವುದೆಂದು ಗೊತ್ತಿದ್ದರೆ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು... ಎಂದು ಗೊಣಗೊಣ ಶೋಕಾಚರಣೆ ಮಾಡುತ್ತಲೇ ಮನೆ ಸೇರಿ ಮನೆ ಮಂದಿಗೆಲ್ಲಾ ನನ್ನ ದುಗುಡ ಹಂಚಿ ಸುದ್ದಿ ಮಾಡುತ್ತಲೇ ಹಗುರಾಗಲು ಯತ್ನಿಸ ಹತ್ತಿದೆ....!....?....!.... 


  - ಡಾ. ಸುವರ್ಣ 

ಕಾಮೆಂಟ್‌ಗಳಿಲ್ಲ: