Pages

ಸರಣಿ ಲೇಖನ - 1 - ನಾನೇಕೆ ನಾಸ್ತಿಕ




[1930-31ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ದೇವರಲ್ಲಿ ನಂಬಿಕೆಯಿದ್ದ ಧರ್ಮನಿಷ್ಠ ವ್ಯಕ್ತಿ. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಅವರು ಮರಣದಂಡನೆಯ ಸೆಲ್ (condemned cell) ನಲ್ಲಿ ಹೇಗೋ ಭಗತ್‍ಸಿಂಗ್‍ರನ್ನು ಭೇಟಿ ಮಾಡುವುದರಲ್ಲಿ ಯಶಸ್ವಿಯಾದರು. ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ ಹೇಳಿದರು: “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ, ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಆ ಮಾತಿಗೆ ಉತ್ತರಿಸುತ್ತಾ ಭಗತ್‍ಸಿಂಗ್ ಈ ಉತ್ತರವನ್ನು ಬರೆದರು. ಅದನ್ನು ನಾವು ಇಲ್ಲಿ ಸರಣಿ ಲೇಖನವಾಗಿ ಪ್ರಕಟಿಸುತ್ತಿದ್ದೇವೆ]

ನಾನೇಕೆ ನಾಸ್ತಿಕ
ಹೊಸ ಪ್ರಶ್ನೆಯೊಂದು ಉದ್ಭವವಾಗಿದೆ. ಒಬ್ಬ ಸರ್ವಶಕ್ತ, ಸರ್ವಂತರ್ಯಾಮಿ ಮತ್ತು ಸರ್ವಜ್ಞನಾದ ದೇವರ ಅಸ್ತಿತ್ವದಲ್ಲಿ ನನಗೆ ನಂಬಿಕೆಯಿಲ್ಲದಿರುವುದಕ್ಕೆ ಜಂಭ ಕಾರಣವೇ? ಅಂತಹದೊಂದು ಪ್ರಶ್ನೆಯನ್ನು ಎಂದಾದರೂ ಎದುರಿಸಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದರೆ ನನ್ನ ಕೆಲವು ಸ್ನೇಹಿತರು – ಅವರನ್ನು ಸ್ನೇಹಿತರೆಂದು ಕರೆಯುವುದು ಅತಿಯಾಗದಿದ್ದರೆ - ನನ್ನ ಜೊತೆಯಿದ್ದ ಸ್ವಲ್ಪಕಾಲದ ಸಂಪರ್ಕದಿಂದ, ನಾನು ದೇವರ ಅಸ್ತಿತ್ವವನ್ನು ನಿರಾಕರಿಸುವುದು ಅತಿಯಾಯಿತು ಮತ್ತು ನನ್ನ ಅಪನಂಬಿಕೆಯು ಸ್ವಲ್ಪಮಟ್ಟಿಗೆ ಒಣಜಂಭದಿಂದ ಬಂದಿದೆಯೆಂದು ನಿರ್ಧರಿಸುತ್ತಿದ್ದಾರೆ. 

ಹೌದು, ಇದೊಂದು ಗಂಭೀರವಾದ ಸಮಸ್ಯೆ. ನಾನು ಮಾನವ ಸಹಜ ಸ್ವಭಾವಗಳನ್ನು ಮೀರಿದವನೆಂದು ಬಡಾಯಿ ಕೊಚ್ಚುವುದಿಲ್ಲ. ಅದಕ್ಕಿಂತ ಹೆಚ್ಚೇನೂ ಅಲ್ಲ. ಅದಕ್ಕಿಂತ ಹೆಚ್ಚಿನವನೆಂದು ಯಾರೂ ಹೇಳಿಕೊಳ್ಳಲಾರರು. ಈ ದೌರ್ಬಲ್ಯ ನನ್ನಲ್ಲೂ ಇದೆ. ಜಂಭವು ನನ್ನ ಸ್ವಭಾವದ ಒಂದು ಭಾಗ. ನನ್ನ ಕಾಮ್ರೇಡರ ನಡುವೆ ನನ್ನನ್ನು ನಿರಂಕುಶಾಧಿಕಾರಿಯೆಂದೂ ದೂಷಿಸಿದ್ದಾರೆ. ನಾನು ನನಗೇ ತಿಳಿಯದಂತೆ ನನ್ನ ಅಭಿಪ್ರಾಯಗಳನ್ನು ಇತರರ ಮೇಲೆ ಬಲವಂತವಾಗಿ ಹೇರಿ, ನನ್ನ ಪ್ರಸ್ತಾವನೆಗಳಿಗೆ ಒಪ್ಪಿಗೆ ಪಡೆಯುತ್ತೇನೆಂದು ಕೆಲವು ಸ್ನೇಹಿತರು ಆರೋಪಿಸಿದ್ದಾರೆ; ಅದೂ ಬಹಳ ಗಂಭೀರವಾಗಿ. ಅದು ಸ್ವಲ್ಪಮಟ್ಟಿಗೆ ಸತ್ಯ. ಅದನ್ನು ನಿರಾಕರಿಸುವುದಿಲ್ಲ. ಇದು ಅಹಂಕಾರಕ್ಕೆ ಎಡೆಮಾಡಿಕೊಡಬಹುದು. 

ಇತರ ಜನಪ್ರಿಯ ಪಂಥಗಳಿಗೆ ವಿರುದ್ಧವಾಗಿರುವ ನಮ್ಮ ಪಂಥದ ಬಗ್ಗೆ ನನಗೆ ಅಷ್ಟರಮಟ್ಟಿಗೆ ಜಂಭವಿದೆ. ಆದರೆ ಅದು ವೈಯಕ್ತಿಕವಲ್ಲ. ಅದು ನಮ್ಮ ಪಂಥದ ಬಗ್ಗೆಯಿರುವ ನ್ಯಾಯಬದ್ಧ ಹೆಮ್ಮೆ ಮಾತ್ರ, ಅದು ಜಂಭ ಅಲ್ಲ. ಜಂಭ ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಅಹಂಕಾರ’ವೆಂದರೆ ಯೋಗ್ಯತೆಯಿಲ್ಲದಿದ್ದರೂ ತನ್ನ ಬಗ್ಗೆ ತನಗೇ ಅತಿಯಾದ ಹೆಮ್ಮೆ. ಅಂತಹ ಯೋಗ್ಯತೆಯಿಲ್ಲದ ಹೆಮ್ಮೆ ನನ್ನನ್ನು ನಾಸ್ತಿಕತೆಗೆ ತಳ್ಳಿದೆಯೋ ಅಥವಾ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ನಂತರ ಹಾಗೂ ಸಾಕಷ್ಟು ಆಲೋಚನೆ ಮಾಡಿದ ಮೇಲೆ ದೇವರಲ್ಲಿ ಅಪನಂಬಿಕೆ ಬಂದಿತೋ, ಈ ಪ್ರಶ್ನೆಯನ್ನೇ ನಾನಿಲ್ಲಿ ಚರ್ಚಿಸಲು ಬಯಸುವುದು. ಮೊದಲಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ; ಅಹಂಭಾವ ಮತ್ತು ಜಂಭ – ಇವೆರೆಡೂ ವಿಭಿನ್ನ ವಿಷಯಗಳು.

ಮೊದಲನೆಯದಾಗಿ, ಅನುಚಿತವಾದ ಹೆಮ್ಮೆ ಅಥವಾ ಒಣಜಂಭವು ಒಬ್ಬ ವ್ಯಕ್ತಿ ದೇವರಲ್ಲಿ ನಂಬಿಕೆಯಿಡುವುದಕ್ಕೆ ಹೇಗೆ ಅಡ್ಡಿಯಾಗುತ್ತದೆಯೆಂದು ಅರ್ಥಮಾಡಿಕೊಳ್ಳಲು ಸಂಪೂರ್ಣವಾಗಿ ವಿಫಲನಾಗಿದ್ದೇನೆ. ಮಹಾನ್ ವ್ಯಕ್ತಿಯಾಗುವುದಕ್ಕೆ ನಿಜಕ್ಕೂ ಅತ್ಯಗತ್ಯವಾದ ಅಥವಾ ಅನಿವಾರ್ಯವಾದ ಗುಣಗಳನ್ನು ಹೊಂದಿರದಿದ್ದರೂ ಅಥವಾ ಅರ್ಹತೆಯಿಲ್ಲದಿದ್ದರೂ ಸ್ವಲ್ಪಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದ್ದರೆ, ಆಗ ನಾನು ನಿಜವಾದ ಮಹಾನ್ ವ್ಯಕ್ತಿಯ ಮಹಾನತೆಯನ್ನು ಗುರುತಿಸುವುದಕ್ಕೆ ನಿರಾಕರಿಸಬಹುದು. ಅದಷ್ಟನ್ನು ಅರ್ಥಮಾಡಿಕೊಳ್ಳಬಹುದು. ಆದರೆ ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಲು ಹೇಗೆ ಸಾಧ್ಯ? ಅದು ಎರಡು ರೀತಿಯಲ್ಲಿ ಸಾಧ್ಯವಿದೆ. 

ಒಂದೋ ಆತ ತನ್ನನ್ನು ದೇವರ ಶತ್ರುವೆಂದು ಯೋಚಿಸಲು ಶುರುಮಾಡಿರಬೇಕು ಅಥವಾ ತಾನೇ ದೇವರೆಂದು ನಂಬಲಾರಂಭಿಸಿರಬೇಕು. ಅವೆರಡೂ ಸಂದರ್ಭಗಳಲ್ಲೂ ನಿಜವಾದ ನಾಸ್ತಿಕನಾಗಲು ಸಾಧ್ಯವಿಲ್ಲ. ಅವನು ಮೊದಲನೆಯ ಸಂದರ್ಭದಲ್ಲಿ ತನ್ನ ಶತ್ರುವಿನ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಎರಡನೆಯ ಸಂದರ್ಭದಲ್ಲೂ ಸಹ, ಪ್ರಕೃತಿಯ ಚಲನವಲನಗಳನ್ನು ‘ತೆರೆಯ ಹಿಂದೆ’ ನಿರ್ದೇಶಿಸುವ ಪ್ರಜ್ಞಾವಂತ ಶಕ್ತಿಯ (conscious being) ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ. ಸ್ವತಃ ತನ್ನನ್ನೇ ಆ ಪರಮ ಪುರುಷ (supreme being) ಎಂದು ಭಾವಿಸುತ್ತಾನೋ ಅಥವಾ ಪ್ರಜ್ಞಾವಂತ ಪರಮ ಪುರುಷನು ತಾನಲ್ಲದೆ ಬೇರಾರೋ ಎಂದು ಆಲೋಚಿಸುತ್ತಾನೋ ಎನ್ನುವುದು ನಮಗೆ ಅಷ್ಟು ಮುಖ್ಯವಲ್ಲ. ಆದರೆ ಅದರ ಮೂಲವಿರುವುದೇ ಅಲ್ಲಿ. ಅದರಲ್ಲಿ ಆತನ ನಂಬಿಕೆಯಿದೆ. ಅವನು ಯಾವ ರೀತಿಯಲ್ಲೂ ನಾಸ್ತಿಕನಾಗಲು ಸಾಧ್ಯವಿಲ್ಲ. ಇದು ನನ್ನ ಅಭಿಪ್ರಾಯ. 

ನಾನು ಮೊದಲ ಗುಂಪಿಗಾಗಲಿ ಅಥವಾ ಎರಡನೆಯದಕ್ಕಾಗಲಿ ಸೇರಿದವನಲ್ಲ. ನಾನು ಆ ಸರ್ವಶಕ್ತ, ಪರಮ ಪುರುಷನ ಅಸ್ತಿತ್ವನ್ನೇ ನಿರಾಕರಿಸುತ್ತೇನೆ. ನಾನು ನಿರಾಕರಿಸುವುದೇಕೆ ಎಂಬುದನ್ನು ಆನಂತರ ಚರ್ಚಿಸುತ್ತೇನೆ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ - ನಾನು ನಾಸ್ತಿಕತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ‘ಜಂಭ’ ಪ್ರಚೋದನೆ ನೀಡಲಿಲ್ಲ. ನಾನು ಅವನ ಶತ್ರುವೂ ಅಲ್ಲ, ಅವತಾರವೂ ಅಲ್ಲ ಅಥವಾ ಸ್ವತಃ ನಾನೇ ಪರಮ ಪುರುಷನೂ ಅಲ್ಲ. ನನ್ನ ಈ ರೀತಿಯ ಚಿಂತನೆಗೆ ಜಂಭವು ಕಾರಣವಲ್ಲ ಎಂಬುದಂತೂ ನಿರ್ಧಾರವಾಯಿತು. ಈ ಆಪಾದನೆಯನ್ನು ತಪ್ಪೆಂದು ತೋರಿಸಲು ಸತ್ಯ ಸಂಗತಿಗಳನ್ನು ಪರಿಶಿಲಿಸೋಣ. 

ಈ ಸ್ನೇಹಿತರ ಪ್ರಕಾರ, ದೆಹಲಿ ಬಾಂಬ್ ಮತ್ತು ಲಾಹೋರ್ ಪಿತೂರಿ – ಇವೆರೆಡೂ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಬಹುಶಃ ಅರ್ಹವಲ್ಲದಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರಿಂದ ನನ್ನಲ್ಲಿ ಒಣಜಂಭ ಬೆಳೆದುಬಿಟ್ಟಿದೆ. ಸರಿ, ಅವರ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪರಿಶೀಲಿಸೋಣ. ನನ್ನ ನಾಸ್ತಿಕತೆ ಇತ್ತೀಚೆಗೆ ಹುಟ್ಟಿದ್ದಲ್ಲ. ನಾನು ಮೇಲೆ ತಿಳಿಸದ ಸ್ನೇಹಿತರಿಗೂ ಗೊತ್ತಿರದ, ಯಾರ ಗಮನಕ್ಕೂ ಬಾರದ ಯುವಕನಾಗಿದ್ದಾಗಲೇ ದೇವರಲ್ಲಿ ನಂಬಿಕೆಯಿಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ನಾಸ್ತಿಕತೆಗೆ ಕೊಂಡೊಯ್ಯುವ ಯಾವುದೇ ರೀತಿಯ ಅರ್ಹವಲ್ಲದ ಹೆಮ್ಮೆಯನ್ನು, ಕಡೇ ಪಕ್ಷ ಒಬ್ಬ ಕಾಲೇಜು ವಿದ್ಯಾರ್ಥಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಪ್ರೊಫೆಸರ್‍ಗಳಿಗೆ ಪ್ರಿಯನಾದ, ಇನ್ನು ಕೆಲವರು ಇಷ್ಟಪಡದ ವಿದ್ಯಾರ್ಥಿಯಾಗಿದ್ದರೂ ಸಹ, ನಾನು ಶ್ರಮಪಟ್ಟು ಓದುವ ಅಥವಾ ವ್ಯಾಸಂಗನಿಷ್ಠ ವಿದ್ಯಾರ್ಥಿಯಾಗಿರಲಿಲ್ಲ. ನನಗೆ ಜಂಭದಂತಹ ಭಾವನೆಗಳಲ್ಲಿ ತೊಡಗುವುದಕ್ಕೆ ಯಾವ ಅವಕಾಶಗಳೂ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ಮುಂದಿನ ಕೆರಿಯರ್ (career) ಬಗ್ಗೆ ಕೆಲವು ನಿರಾಶೆಯ ಸ್ವಭಾವಗಳಿದ್ದ, ಬಹಳ ಸಂಕೋಚದ ವಿದ್ಯಾರ್ಥಿಯಾಗಿದ್ದೆ. 

ಆ ದಿನಗಳಲ್ಲಿ ನಾನು ಪಕ್ಕಾ ನಾಸ್ತಿಕನಾಗಿರಲಿಲ್ಲ. ನಾನು ಯಾರ ಪ್ರಭಾವದಲ್ಲಿ ಬೆಳೆದನೋ ಆ ನನ್ನಜ್ಜ, ಸಂಪ್ರದಾಯಸ್ಥ ಆರ್ಯಸಮಾಜಿಯಾಗಿದ್ದರು. ಆರ್ಯಸಮಾಜಿಯಾದವರು ಏನಾದರೂ ಆಗಬಹುದು, ಆದರೆ ನಾಸ್ತಿಕರಾಗುವುದಿಲ್ಲ. ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಲಾಹೋರಿನ ಡಿಎವಿ ಶಾಲೆಗೆ ಸೇರಿದೆ ಮತ್ತು ಒಂದು ವರ್ಷ ಪೂರ್ತಿ ಅದರ ವಿದ್ಯಾರ್ಥಿ ನಿಲಯದಲ್ಲಿ ವಾಸ ಮಾಡಿದೆ. ಅಲ್ಲಿ ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆಗಳ ಜೊತೆಗೆ ಗಂಟೆಗಟ್ಟಲೆ ಗಾಯತ್ರಿ ಮಂತ್ರ ಪಠಿಸುತ್ತಿದ್ದೆ. 

ಆ ದಿನಗಳಲ್ಲಿ ನಾನು ನನ್ನ ತಂದೆಯೊಡನೆ ವಾಸ ಮಾಡಿದೆ. ಧರ್ಮಗಳ ಸಂಪ್ರದಾಯ ಬದ್ಧತೆಗೆ ಹೋಲಿಸಿದರೆ ಅವರೊಬ್ಬ ಉದಾರವಾದಿ. ಅವರ ಬೋಧನೆಗಳಿಂದಲೇ ನಾನು ನನ್ನ ಜೀವನವನ್ನು ಸ್ವಾತಂತ್ರ್ಯಕ್ಕೋಸ್ಕರ ಮುಡಿಪಾಗಿಡಬೇಕೆಂದು ಬಯಸಿದ್ದು. ಆದರೆ ಅವರು ನಾಸ್ತಿಕರಲ್ಲ. ಅವರು ಅಚಲ ದೈವಭಕ್ತರು. ನಾನು ಪ್ರತಿದಿನವೂ ಪ್ರಾರ್ಥನೆ ಸಲ್ಲಿಸುವಂತೆ ನನ್ನನ್ನು ಉತ್ತೇಜಿಸುತ್ತಿದ್ದರು. ಇದು ನಾನು ಬೆಳೆದು ಬಂದ ರೀತಿ. ‘ಅಸಹಕಾರ ಚಳುವಳಿ’ಯ ದಿನಗಳಲ್ಲಿ ನ್ಯಾಷನಲ್ ಕಾಲೇಜಿಗೆ ಸೇರಿದೆ. ಅಲ್ಲಿಯೇ ನಾನು ಉದಾರವಾಗಿ ಆಲೋಚಿಸಲು ಮತ್ತು ಧರ್ಮಗಳ ಸಮಸ್ಯೆಗಳ ಬಗ್ಗೆ, ದೇವರ ಬಗ್ಗೆಯೂ ಸಹ ಚರ್ಚಿಸಲು, ಟೀಕಿಸಲು ಆರಂಭಿಸಿದೆ. ಆದರೂ ನಾನು ನಿಷ್ಠಾವಂತ ದೈವಭಕ್ತನಾಗಿದ್ದೆ. ಉದ್ದ ಕೂದಲನ್ನು ಕತ್ತರಿಸದೆ, ಗಂಟುಕಟ್ಟದೆ ಕಾಪಾಡಿಕೊಂಡಿರಲು ಆರಂಭಿಸಿದ್ದೆ; ಆದರೆ ಸಿಖ್ ಧರ್ಮದ ಅಥವಾ ಬೇರಾವುದೇ ಧರ್ಮದ ಪುರಾಣ ಮತ್ತು ಸಿದ್ಧಾಂತಗಳಲ್ಲಿ ಯಾವತ್ತೂ ನಂಬಿಕೆಯಿರಲಿಲ್ಲ. ಆದರೆ ದೇವರ ಅಸ್ತಿತ್ವದಲ್ಲಿ ಗಾಢವಾದ ನಂಬಿಕೆಯಿತ್ತು.
(ಮುಂದುವರೆಯುತ್ತದೆ)  

-  ಎಸ್.ಎನ್.ಸ್ವಾಮಿ


ಕಾಮೆಂಟ್‌ಗಳಿಲ್ಲ: