Pages

ಅನುವಾದಿತ ಕವಿತೆ - ಹಿಡಿಯದ ದಾರಿ

(ರಾಬರ್ಟ್ ಫ್ರಾಸ್ಟ್ ರಚನೆಯ ‘ರೋಡ್ ನಾಟ್ ಟೇಕನ್’ ಕವನದ ಅನುವಾದ)
ಹಸಿರು ಕಾಡಿನ ದಾರಿ ಕವಲೊಡೆದಿತ್ತು 
ಎರಡನೂ ಹಿಡಿಯಲಾರೆನೆಂಬ ನೋವಿನಲಿ
ಒಂಟಿ ಪಯಣಿಗನಂತೆ ನಿಂತೆನಲ್ಲಿ,
ನೆಟ್ಟೆ ನೋಟವನು ಒಂದು ದಾರಿಯ ಕಡೆಗೆ
ದೃಷ್ಟಿ ಚಾಚುವವರೆಗೆ, ಪೊದೆಯೊಳಗೆ ಬಾಗಿ ಕರಗಿದವರೆಗೆ

ಈ ಇನ್ನೊಂದು ದಾರಿಗೂ ಕಣ್ಣ ನೆಡಬೇಕಲ್ಲ
ಇನ್ನೂ ಸವೆಯದ ಹುಲ್ಲುಹಾಸಿನ ಹಾದಿಯಿದು
ನೋಡಲೇ ಬೇಕಿದೆ ಇದರ ಕಡೆಗೆ, ಹಾಗೆಂದು
ಈ ದಾರಿಯತ್ತ ಹರಿಸಿದ ಚಿತ್ತ ಕಡಿಮೆಯಿಲ್ಲ

ಮುಂಜಾವಿನಲಿ ಎರಡೂ ದಾರಿಗಳ ಮೇಲೆ 
ಎಲೆಗಳ ಹಾಸು, ಹೆಜ್ಜೆ ಗುರುತೇ ಇಲ್ಲ 
ಮೊದಲ ದಾರಿ ಇನ್ನೊಂದು ಬಾರಿ ತುಳಿದೇನು
ಹಿಡಿದ ದಾರಿ ಎತ್ತ ಒಯ್ಯಲಿದೆಯೆಂದು ತಿಳಿದೇನು
ಮತ್ತೊಮ್ಮೆ ಮರಳಿ ಬರಲಾಗುವುದೇನು

ನಿಡಿದಾದ ಉಸಿರು ಇದನು ಹೇಳುವ ಮುನ್ನ 
ವರುಷ ವರುಷಗಳ ಹಿಂದೊಮ್ಮೆ
ಕವಲೊಡೆದು ನಿಂತಿತ್ತ್ತು ಕಾನನದ ದಾರಿ
ಹಿಡಿದೆ ನಾನಾಗ ಸವೆಯದ ಹಾದಿ
ಅದುವೇ ಇಂದಿನ ಎಲ್ಲ ಭಿನ್ನತೆಗೆ ದಾರಿ



(ಅದೇ ಕವಿತೆಯ ಭಾವಾನುವಾದ)
ಸವೆಯದ ಹಾದಿ

ಜೀ-
ವನದ ಹಾದಿಯಲ್ಲಿ
ಆಗಾಗ ಧುತ್ತೆಂದು ತೋರುವ
ಕವಲು
ಇಬ್ಬದಿಗೂ ಕಾಲು ಹಾಕ-
ಲಾಗದ ನೋವು.

ಒಂದು-
ಎಲ್ಲರೂ ನಡೆದ ಹಳೆಯ ಹಾದಿ
ಕಾಣುವ ದೂರದ ನೋಟ.
ಇನ್ನೊಂದು-
ಕಲ್ಲು ಹುಲ್ಲು ಮುಳ್ಳುಗಳ
ಸವೆಯದ ದಾರಿ 
ಗಮ್ಯ ಅಗೋಚರ.

ಯಾವುದ ಹಿಡಿಯಲಿ
ಎಲ್ಲಿ ನಡೆಯಲಿ
ಮುನ್ನಡೆದ ಮೇಲೆ ಮರಳಿ
ಅದೇ ಕವಲು ಎಲ್ಲಿ?

ಸವಕಲು ದಾರಿ ಇರಲಿ
ಸವಾಲು ಬಯಸದ ಬಾಳಿಗೆ
ನಮಗಿರಲಿ ತುಳಿಯದ 
ಹೊಸ ಹಾದಿಯೊಂದೆ 
ಇದೇ ತರಲಿದೆ 
ಬದಲಾವಣೆಯ ಮುಂದೆ.

- ಬಿ.ರವಿ 


ಕಾಮೆಂಟ್‌ಗಳಿಲ್ಲ: