ಭೂಮಿ ಮೇಲೆ ಹುಟ್ಟಿದ ಪ್ರತಿ ಜೀವಿಯು ಎರಡು ಪ್ರಕಾರದ ಕ್ರಿಯೆ ಅಥವಾ ಕಾರ್ಯಗಳಲ್ಲಿ ತೊಡಗುತ್ತವೆ. ಒಂದು, ಸಹಜ, ಸ್ವಾಭಾವಿಕ ಅಥವಾ ಜೈವಿಕ ಕ್ರಿಯೆ. ಇನ್ನೊಂದು ಉದ್ದೇಶ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುವ ಕ್ರಿಯೆ. ಸಹಜ ಕ್ರಿಯೆಯ ಉಳಿವಿಗಾಗಿ ನಡೆಯುವಂತದ್ದು ಉಸಿರಾಟ, ಜೀವ ರಕ್ಷಣೆ, ಲೈಂಗಿಕ ಕ್ರಿಯೆ, ಸಂತಾನೊತ್ಪತ್ತಿ, ಆಹಾರ ಅರಸುವಿಕೆ ಮತ್ತು ಸೇವನೆ ಇವು ಬದುಕಲು ಅನಿವಾರ್ಯವಾಗಿ ಮಾಡಲೆ ಬೇಕಾದಂತಹ ಕಾರ್ಯಗಳು. ಅತ್ಯಂತ ಸಣ್ಣ ಕೀಟದಿಂದ ಹಿಡಿದು ಆನೆ, ತಿಮಿಂಗಿಲದಂತಹ ಬೃಹತ್ ಗಾತ್ರದ ಪ್ರಾಣಿಗಳು ಈ ಕ್ರಿಯೆಗಳನ್ನು ಮಾಡಲೇಬೇಕು. ಪ್ರಾಣಿ ಜೀವಿಯಾದ ಮಾನವರು ಈ ಸಹಜ ಕ್ರಿಯೆಗಳೊಂದಿಗೆ ಪ್ರಜ್ಞಾ ಪೂರ್ವಕವಾಗಿ, ಉದ್ದೇಶಪೂರ್ವಕವಾಗಿ ಕೆಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಮಾನವರ ಸಂಖ್ಯೆ, ಅಗತ್ಯಗಳು ಹೆಚ್ಚಾದಂತೆ, ವಿಚಾರ ಮಾಡುವ ಶಕ್ತಿ, ಭೌದ್ಧಿಕತೆ ಅಧಿಕವಾದಂತೆ ಎರಡನೆ ಪ್ರಕಾರದ ಕ್ರಿಯೆ ಹೆಚ್ಚು ಸಂಕೀರ್ಣವಾಗುತ್ತಾ ಹೋದವು. ಈ ಕ್ರಿಯೆಗಳಿಗೆ ಕೆಲಸ, ಕಾರ್ಯ, ಉದ್ಯೋಗ, ಶ್ರಮ, ಕೆಮೆ, ಬದುಕು, ದುಡಿಮೆ, ಕೂಲಿ, ಕಾಯಕ ಮುಂತಾದ ಪದಗಳನ್ನು ಬಳಸಲಾಗುತ್ತದೆ. ಭೌದ್ಧಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಇದನ್ನು ಪರಿಕಲ್ಪನೆಯಾಗಿ ಬಳಸಲಾಗುತ್ತದೆ. ಜೀವದ ಉಳಿವಿಗಾಗಿ,ಜೀವನೋಪಯಕ್ಕಾಗಿ, ಉದ್ದೇಶಪೂರ್ವಕವಾಗಿ ಏನನ್ನಾದರು ಪಡೆಯಲು ದೇಹ ಮತ್ತು ಮನಸ್ಸನ್ನು ಬಳಸಿಕೊಂಡು ಮಾಡುವ ಯಾವುದೇ ಕ್ರಿಯೆ ‘ಕೆಲಸ’ ‘ದುಡಿಮೆ’ ‘ಶ್ರಮ’ ಅಂತ ಅನಿಸಿಕೊಳ್ಳುತ್ತದೆ. ಇದು ಅತ್ಯಂತ ಮಹತ್ವಪೂರ್ಣವಾದ ಪರಿಕಲ್ಪನೆಯಾಗಿದೆ. ಇಡಿ ಸಮಾಜ, ಆರ್ಥಿಕತೆ ನಿಂತಿರುವುದೇ ಜನರ ದುಡಿಮೆ ಮೇಲೆ. ಸಮಾಜದ ಚುಕ್ಕಾಣಿಯಾಗಿರುವ ಈ ‘ದುಡಿಮೆ’ ‘ಶ್ರಮ’ದ ಪರಿಕಲ್ಪನೆಗಳನ್ನು ಸರಳವಾಗಿ, ಆಳವಾಗಿ ವಿವಿಧ ಆಯಾಮಗಳಲ್ಲಿ ಅರ್ಥಮಾಡಿಕೊಳ್ಳುವುದು ತುಂಬ ಅವಶ್ಯಕ.
ಇಡಿ ಜಗತ್ತೆ ದುಡಿಮೆ ಮೇಲೆ ನಿಂತಿದೆ. ಅದು ಕಾಲದಿಮದ ಕಾಲಕ್ಕೆ, ಸಮಾಜದಿಂದ ಸಮಾಜಕ್ಕೆ, ಪ್ರದೇಶದಿಂದ ಪ್ರದೇಶ, ದೇಶದಿಂದ ದೇಶಕ್ಕೆ ಭಿನ್ನವಾಗಿರುವುದು ಕಂಡುಬರುತ್ತದೆ. ಆಯಾ ಪ್ರದೇಶ, ಭೌಗೋಳಿಕ ಪರಿಸ್ಥಿತಿ, ಸಂಪನ್ಮೂಲಗಳ ಲಭ್ಯತೆ, ಜನರ ಸಾಮಥ್ರ್ಯ, ನಂಬಿಕೆ, ಆಡಳಿತ ವ್ಯವಸ್ಥೆಗಳಿಗೆ ಅನುಗುಣವಾಗಿ ದುಡಿಮೆಯು ರೂಪುಗೊಳ್ಳುತ್ತದೆ.
ವಿವಿಧ ಆಯಾಮಗಳಲ್ಲಿ ಈ ದುಡಿಮೆ/ಶ್ರಮದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಮಹಿಳಾ ಅಧ್ಯಯನವನ್ನು ‘ಮಹಿಳಾ ದುಡಿಮೆ’ಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ನನಗೆ ದುಡಿಮೆ ಪರಿಕಲ್ಪನೆ ಬೇರೆ ಬೇರೆ ಆಯಾಮಗಳಲ್ಲಿ ವಿಶೇಷವಾಗಿ ಜಂಡರ್, ಬಡತನ, ಸಾಮಥ್ರ್ಯ, ಸಂಭಾವನೆ, ಗುರುತಿಸುವಿಕೆ ಮನ್ನಣೆ, ಸ್ವರೂಪ, ಸ್ಥಾನ, ಕೊಡುಗೆಗಳ ಹಿನ್ನೆಲೆಯಲ್ಲಿ ತುಂಬಾ ಚಿಂತಿಸುವಂತೆ ಮಾಡುತ್ತದೆ. ಇವುಗಳಲ್ಲಿ ನನ್ನನ್ನು ವಿಶೇಷವಾಗಿ ಕಾಡಿಸುವುದು ಜಂಡರ್ ಮತ್ತು ದುಡಿಮೆಯ ಸ್ವರೂಪ. ನನ್ನ ದಿನ ನಿತ್ಯ ಜೀವನದಲ್ಲಿ ಸುತ್ತಮುತ್ತಲಿನ ಜನರ ದುಡಿಮೆಯನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವಂತೆ ಮಾಡುತ್ತದೆ.
ಪ್ರಸ್ತುತ ಲೇಖನದಲ್ಲಿ ದುಡಿಮೆಯ ಸ್ವರೂಪ ಅದು ಜನರ ಮೇಲೆ ಸಮಾಜದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಕುರಿತು ಚರ್ಚಿಸಲು ಪ್ರಯತ್ನಿಸುತ್ತೇನೆ. ಇದು ಸಂಪೂಣ್ವಾಗಿ ನನ್ನ ವೈಯಕ್ತಿಕ ಅಭಿಪ್ರಾಯ ಹಾಗೂ ವಿಚಾರಧಾರೆ. ದುಡಿಮೆ ಪರಿಕಲ್ಪನೆಯನ್ನು ಸರಳಗೊಳಿಸಿಕೊಳ್ಳಲು ಅದನ್ನು ಎರಡು ಪ್ರಕಾರವಾಗಿ ವಿಂಗಡಿಸಿಕೊಳ್ಳಬಹುದು.
1. ದೈಹಿಕ ಶ್ರಮ ಮತ್ತು 2. ಭೌದ್ಧಿಕ ಶ್ರಮ/ಕೆಲಸ.
ದೈಹಿಕ ಶ್ರಮವು ದೇಹದ ಅಂಗಾಂಗಳನ್ನು (ಕೈಯಿ, ಬೆರಳು, ಕಾಲು, ಭುಜ, ಬೆನ್ನು, ತಲೆ) ಹೆಚ್ಚಾಗಿ ಬಳಸಿಕೊಂಡು ಮಾಡುವಂತಹ ಕೆಲಸ. ಇದು ಪ್ರಕೃತಿಗೆ ಹತ್ತಿರವಾಗಿ, ವಿವಿಧ ರೀತಿಯ ಸಲಕರಣೆ, ಉಪಕರಣಗಳನ್ನು ಬಳಸಿಕೊಂಡು ಮಾಡುವಂತಹ ಕೆಲಸಗಳಾಗಿರುತ್ತವೆ. ಈ ಕೆಲಸಗಳು ಕಣ್ಣಿಗೆ ಕಾಣುತ್ತವೆ. ಕೆಲಸದ ಪರಿಣಾಮವಾಗಿ ವಸ್ತುಗಳ ಉತ್ಪಾದನೆ ಅಥವಾ ಕಣ್ಣಿಗೆ ಗೊಚರವಾಗುವಂತಹ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಭೌದ್ಧಿಕ ಕೆಲಸಗಳಲ್ಲಿ ಶರೀರದ ಬಳಕೆಗಿಂತ ಮಾನಸಿಕ ಅಂದರೆ ಮೆದುಳನ್ನು ಹೆಚ್ಚಾಗಿ ಬಳಸಿಕೊಂಡು ಮಾಡುವಂತಹ ಕೆಲಸಗಳಾಗಿರುತ್ತವೆ. ಇಲ್ಲಿ ಗ್ರಹಿಕೆ, ಆಲೋಚನೆ ಕ್ರಮ ಮತ್ತು ಶಕ್ತಿ, ನೆನಪಿನ ಶಕ್ತ್ತಿ, ಯೋಚನಾ ಸಾಮಥ್ರ್ಯ, ದೂರದೃಷ್ಟಿ, ತರ್ಕ, ವಿಶ್ಲೇಷಣಾ ಗುಣಗಳು ಮೂಖ್ಯವಾಗುತ್ತವೆ. ದೇಹದ ಅಂಗಾಗಳು ಹೆಚ್ಚು ಕಡಿಮೆ ಸ್ಥಿರತೆಯಲ್ಲಿದ್ದು ಮೆದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿಯೂ ಕೆಲವು ಕೆಲಸಗಳು ದೈಹಿಕ ಮತ್ತು ಭೌದ್ಧಿಕ ಶ್ರಮಗಳೆರಡನ್ನೂ ಬೇಡುತ್ತವೆ. ಉದಾಹರಣೆಗೆ ಶಾಲಾ ಶಿಕ್ಷಕರ ಕೆಲಸಕ್ಕೆ ದೈಹಿಕ ಮತ್ತು ಭೌದ್ಧಿಕ ಶ್ರಮಗಳೆರಡು ಬೇಕಾಗುತ್ತದೆ.
ಎರಡೂ ಪ್ರಕಾರದ ಕೆಲಸಗಳು ಸಮಾಜದ ಆರ್ಥಿಕತೆಯ ಉಳಿವಿಗೆ, ಮುನ್ನಡೆಗೆ ಅಗತ್ಯವಿದ್ದರೂ ಅತ್ಯಂತ ಮುಖ್ಯವಾದದು ದೈಹಿಕ ಶ್ರಮ ಎಂದು ನನ್ನ ಅನಿಸಿಕೆ. ನಮ್ಮ ಉಳಿವಿಗಾಗಿ ಮಾಡಬೇಕಾದಂತಹ ಕೆಲಸಗಳೆಲ್ಲದಕ್ಕೂ ದೈಹಿಕ ಅಂಗಾಂಗಳ ಬಳಕೆ ಅತ್ಯಗತ್ಯ. ಉದಾ: ಆಹಾರ ಬೆಳೆಯಲು, ಸಂಗ್ರಹಿಸಲು, ಆಹಾರವನ್ನು ಬೇಯಿಸಿ ತಿನ್ನಲು, ಇತರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ದೇಹ ಮುಖ್ಯ. ದೈಹಿಕ ಕೆಲಸಗಳನ್ನು ಮಾಡದಿದ್ದರೆ ಬದುಕಲೇ ಸಾಧ್ಯವಿಲ್ಲ. ಇಷ್ಟು ಮಹತ್ವವುಳ್ಳ ಕೆಲಸಗಳನ್ನು ಹಾಗೂ ಮಾಡುವವರನ್ನು ಸಮಾಜ ಯಾವ ದೃಷ್ಟಿಕೋನದಿಂದ ನೋಡುತ್ತದೆ, ಹೇಗೆ ನಡೆಸಿಕೊಳ್ಳುತ್ತದೆ, ಅವುಗಳಿಗೆ ನೀಡುವ ಮೌಲ್ಯವೆಷ್ಟು ಅನ್ನುವುದನ್ನು ಚಾರಿತ್ರಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಮನೋವೈಜ್ಞಾನಿಕ ನೆಲೆಯಲ್ಲಿ ಅರ್ಥಮಾಡಿಕೊಳ್ಳೋಣ.
ಭಾರತೀಯ ಸಮಾಜದಲ್ಲಿ ದುಡಿಮೆಯನ್ನು ‘ವರ್ಣಾಶ್ರಮ ಧರ್ಮ’ದ ಪರಿಕಲ್ಪನೆಯೊಳಗೆ ವಿವರಿಸಿಕೊಳ್ಳಲಾಗುತ್ತದೆ. ಸಮಾಜದ ಎಲ್ಲಾ ಕೆಲಸಗಳನ್ನು ಎಲ್ಲರು ಮಾಡಲಗುವುದಿಲ್ಲ. ಕೆಲಸದ ಹಂಚಿಕೆ ಅನಿವಾರ್ಯ. ಅದಕ್ಕೆ ಆಧಾರ ನೀಡುವ ವರ್ಣಾಶ್ರಮ ಧರ್ಮವು ಪ್ರಶ್ನಾರ್ಹವಾಗಿದೆ. ದೇವರ ಶರೀರದ ವಿವಿಧ ಭಾಗಗಳಿಂದ ಹುಟ್ಟಿ ಬಂದ ಜನರು ಎಂಬ ಗುಂಪುಗಳ ವಿಂಗಡಣೆಯ ಪೌರಾಣಿಕತೆಯು ಅವೈಜ್ಞಾನಿಕವಾಗಿದ್ದು ವಾಸ್ತವಕ್ಕೆ ದೂರವೆನಿಸುತ್ತದೆ. ಯಾವುದೋ ಒಂದು ವರ್ಗ ತನ್ನ ಅನುಕೂಲ ಲಾಭಕ್ಕಾಗಿ ಮಾಡಿಕೊಂಡ ವ್ಯವಸ್ಥೆಯೆಂದು ಸೂಚಿತವಾಗುತ್ತದೆ. ಇದೇ ವರ್ಣಾಶ್ರಮ ವ್ಯವಸ್ಥೆ ಹೆಚ್ಚು ಸಂಕುಚಿತವಾಗಿ ಕಠಿಣವಾಗಿ ಜಾತಿ ಪದ್ದತಿಯಾಗಿ ಮಾರ್ಪಾಡಾಯಿತು. ಇವತ್ತು ಈ ಜಾತಿ ಪದ್ಧತಿ ನಮ್ಮ ದೇಶದ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಭಿವೃದ್ಧಿಯ ಮೇಲೆ ಅಗಾಧ ಹಿಡತವನ್ನು ಹೊಂದಿ ಪರಿಣಾಮವನ್ನು ಬೀರುತ್ತ್ತಿದೆ. ವರ್ಣಾಶ್ರಮವು ಸಾಮಥ್ರ್ಯನುಸಾರವಾಗಿ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದರೂ ಯಾರು ವರ್ಣದಲ್ಲಿ ಹುಟ್ಟುತ್ತಾರೋ ಆ ವರ್ಣದ ವೃತ್ತಿಯನ್ನು ಅನುಸರಿಸಬೇಕೆಂದು ಹೇಳುತ್ತದೆ. ಬುದ್ದಿ ಪರಾಕ್ರಮ ಸಂಪತ್ತು ಮತ್ತು ಪರಿಶ್ರಮಗಳ ಆಧಾರದ ಮೇಲೆ ಗುಂಪು ಮಾಡಲಾಗಿದೆ ಯಾವ ಗುಂಪು ಮೇಲು ಕೀಳಲ್ಲ, ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ವಿಭಾಗ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ವರ್ಣಾಶ್ರಮ ವ್ಯವಸ್ಥೆಯೆ ಜಾತಿ ಪದ್ದತಿಯಾಗಿ ಪರಿರ್ವನೆಗೋಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಜಾತಿ ಪದ್ದತಿಯಲ್ಲಿ ಒಮ್ಮೆ ಒಬ್ಬ ವ್ಯಕ್ತಿ ಒಂದು ಜಾತಿಯಲ್ಲಿ ಹುಟ್ಟಿದ ನಂತರ ಬೇರೆ ಜಾತಿಗೆ ಹೋಗಲು, ಸೇರಲು ಸಾಧ್ಯವಿಲ್ಲ ಎಂದು ಹೇಳಿದಾಗ ಅದು ಜಾತಿಯ ವೃತಿಗೂ ಅನ್ವಯಿಸಿ ಸಾಮಥ್ರ್ಯಕ್ಕನುಗುಣಕ್ಕಿಂತ ಹುಟ್ಟಿನ ಆಧಾರದ ಮೇಲೆಯೇ ಕೆಲಸಗಳು ಹಂಚಿಕೆಯಾಗುವಂತಾಯಿತು. ಜಾತಿ ಅಥವಾ ಹುಟ್ಟು ಅಥವಾ ಸಾಮಥ್ರ್ಯ ಅಥವಾ ಸಮಾಜದ ಅವಶ್ಯಕತೆಗೆ ತಕ್ಕಂತೆ ಕೆಲಸಗಳ ಹಂಚಿಕೆಯಾಗಲಿ, ಆದರೆ ಕೆಲಸಗಳಿಗೆ ನೀಡುವ ಮಾನ್ಯತೆ, ಸಂಭಾವನೆ, ನೋಡುವ ದೃಷ್ಟಿಕೋನ ವಿಭಿನ್ನವಾಗಿದ್ದು ಶ್ರೇಣಿಕೃತದಿಂದ ಕೂಡಿದೆ. ಬಹುಶಃ ಇದೇ ಮುಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲವೆಂದು ನನ್ನ ಭಾವನೆ. ಕೆಲವು ಕೆಲಸಗಳನ್ನು ಶ್ರೇಷ್ಠವೆಂದು, ಮೌಲ್ಯವುಳ್ಳದೆಂದು ಪರಿಗಣಿಸಿ ಅವುಗಳಿಗೆ ಹೆಚ್ಚಿನ ಮನ್ನಣೆ ಸಂಭಾವನೆ ನೀಡಲಾಗುತ್ತದೆ. ಸಹಜವಾಗಿ ಆಯಾ ಕೆಲಸ ಮಾಡುವ ವ್ಯಕ್ತಿಯ ಸ್ಥಾನ, ಘನತೆ, ಅನುಕೂಲ, ಲಾಭಗಳೂ ವ್ಯತ್ಯಾಸವಾಗಿ ಇಡೀ ಸಮಾಜವು ಅಸಮಾನತೆಯಿಂದೂ ರೂಪುಗೊಳ್ಳುವಂತೆ ಮಾಡುತ್ತದೆ.
ಈ ವರ್ಣಾಶ್ರಮ, ಜಾತಿ ಹಾಗೂ ಕೆಲಸಗಳ ಹಂಚಿಕೆ ವ್ಯವಸ್ಥೆಯು ಭಾರತದ ಇತಿಹಾದಲ್ಲಿ ರಾಜಾಡಳಿತ, ಉಳಿಗಮಾನ್ಯ, ಜಮೀನ್ದಾರಿ ಹಾಗೂ ಬ್ರಿಟೀಷರ ಆಡಳಿತದಲ್ಲಿ ಮುಂದುವರೆಯಿತು. ಕೈಗಾರಿಕರಣ, ನಗರೀಕರಣ, ತಂತ್ರಜ್ಞಾನ ಬೆಳವಣಿಗೆ ಹಾಗೂ ಆಧುನೀಕರಣದ ಸಂದರ್ಭಗಳಲ್ಲಿ ಕೆಲಸಗಳು ವಿವಿಧ ಸ್ವರೂಪಗಳನ್ನು ಪಡೆದವು. ಅದೆಷ್ಟೆ ಮುಂದುವರೆದರೂ ದೈಹಿಕ ಶ್ರಮದ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಯಂತ್ರೋಪಕರಣಗಳು ಬಂದರೂ ಕೆಲವು ಕೆಲಸ ಮಾಡುವ ಜನರ ಗುಂಪಿನಲ್ಲಿ ವ್ಯತ್ಯಾಸಗಳಾಗಿಲ್ಲ. ಅದರಲ್ಲಿ ತೊಡುಗುವ ಜನರ ಸಂಖ್ಯೆ ಹೆಚ್ಚಾಗುತ್ತನೆ ಇದೆ. ಭೌದ್ಧಿಕ ಶ್ರಮಗಳು ಅತಿ ವೇಗವಾಗಿ ಬದಲಾವಣೆ ಹೊಂದುತ್ತಿದ್ದು, ಅದರಲ್ಲಿ ತೊಡಗುವ ಜನರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ. ಕೆಲವು ಗುಂಪಿನ ಜನರಿಗೆ ಸೀಮಿತವಾಗಿದೆ.
ವರ್ಣಾಶ್ರಮ ಧರ್ಮವನ್ನು ವಿರೋಧಿಸಿದ ಗೌತಮ ಬುದ್ದ ಸಾಮನ್ಯ ಜನರು ಬದುಕಿನ ಅವಶ್ಯಕವಾದ ಕೆಲಸಗಳನ್ನು ಮಾಡಬೇಕೆಂದು ಹೇಳುತ್ತಾ ತತ್ವಶಾಸ್ತ್ರ, ಮಾನವೀಯತೆ ಹಾಗೂ ಆಧ್ಯಾತ್ಮಿಕ ಅಂಶಗಳಿಗೆ ಹೆಚ್ಚು ಒತ್ತು ನೀಡಿದ ಬೌದ್ಧ ಭಿಕ್ಷುಗಳಿಗೂ ಅಗತ್ಯವಾದಷ್ಟು ಆಹಾರವನ್ನು ಭಿಕ್ಷೆ ಬೇಡಿ ಆಹಾರ ಸಂಗ್ರಹಿಸಿ ಸರಳಜೀವನ ನಡೆಸಬೇಕು. ಧರ್ಮ ಪ್ರಚಾರದಂತಹ ಕಾರ್ಯಗಳಲ್ಲಿ ತೊಡಗಬೇಕೆಂದು ಉಪದೇಶಿಸಿ ಪರೋಕ್ಷವಾಗಿ ದುಡಿಮೆಯನ್ನು ಸಮಾನತೆಯ ನೆಲೆಯಲ್ಲೆ ನೋಡಿದ, ಎಲ್ಲೂ ತಾರತಮ್ಯ ತೋರಲಿಲ್ಲ.
ಇತಿಹಾಸದಲ್ಲಿ ಮೊಟ್ಟ ಮೊದಲಿಗೆ ದೈಹಿಕ ದುಡಿಮೆಗೆ ಮನ್ನಣೆ, ಗುರುತಿಸುವಿಕೆ ತಂದು ಕೊಟ್ಟವನು ಬಸವಣ್ನ. ‘ಕಾಯಕವೇ ಕೈಲಾಸ’, ‘ಪ್ರತಿಯೊಬ್ಬರು ದುಡಿದು ಬದುಕಬೇಕು’, ‘ಬದುಕಲು ಅವಶ್ಯವಿರುವಷ್ಟು ಮಾತ್ರ ಸಂಭಾವನೆ ಪಡೆಯಬೇಕು ಅದನ್ನು ಹಂಚಿಕೊಂಡು ತಿನ್ನಬೇಕೆಂಬ’ ತತ್ವಗಳನ್ನು ಪ್ರತಿಪಾದಿಸಿ ದೈಹಿಕ ಶ್ರಮದ ಮೌಲ್ಯವನ್ನು ಎತ್ತಿಹಿಡಿದ. ಆದರೆ ಮಧ್ಯ ಯುಗದಲ್ಲಿ ಮುಂದುವರೆದ ರಾಜಾಡಳಿತ, ಊಳಿಗಮಾನ್ಯ ಪದ್ಧತಿ ದುಡಿಮೆಯ ಶ್ರೇಣೀಕೃತ ಸ್ವರೂಪವನ್ನು ಮತ್ತೆ ಸ್ಥಾಪಿಸಿತು. ಭಕ್ತಿ ಪರಂಪರೆಯ ವಿಚಾರಧಾರೆಯು ಜನರ ನಡುವೆ, ದೇವರ ಭಕ್ತರ ನಡುವೆ, ದುಡಿಮೆ ಸ್ಥಾನ, ಅಂತಸ್ತುಗಳ ನಡುವೆ ಸಮಾನತೆಯ ತತ್ವನ್ನು ಸಾರುವುದರ ಮೂಲಕ ದೈಹಿಕ ಶ್ರಮದ ಮಹತ್ವವನ್ನು ಎತ್ತಿ ಹಿಡಿಯಿತು.
ಚಟುವಟಿಕೆಗಳು ನಮ್ಮ ಮಾನಸಿಕ ಸ್ಥಿತಿ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತದೆ. ದುಡಿಮೆಯಿಲ್ಲದ ಆದಾಯ ಸಂಪತ್ತಿನ ಸಂಗ್ರಹ ಪಾಪ ಹಾಗು ಸ್ವಾವಲಂಬನೆ ತತ್ವ ಜೀವನದ ಗುರಿ ಎಂದು ಹೇಳುವುದರ ಮೂಲಕ ಗಾಂಧೀಜಿಯವರು ದೈಹಿಕ ಶ್ರಮದ ಮಹತ್ವವನ್ನು ಪ್ರತಿಪಾದಿಸಿದರು. ಬ್ರಿಟೀಷರು ಆಡಳಿತದಲ್ಲಿ ಆರ್ಥಿಕತೆಯ ಬೆಳವಣಿಗೆ, ಅದರ ಸ್ವರೂಪದಲ್ಲಿನ ಬದಲಾವಣೆ, ಪಾಶ್ಚಿಮಾತ್ಯಕರಣ, ಕೈಗಾರೀಕರಣ, ತಂತ್ರಜ್ಞಾನಗಳ ಆವಿಷ್ಕಾರ ದೈಹಿಕ ಮತ್ತು ಬೌದ್ಧಿಕ ಶ್ರಮ ವಿಭಜನೆಯನ್ನು ವಿಸ್ತಾರಗೊಳಿಸಿತು. ಈ ಅವಧಿಯಲ್ಲಿ ಸೇವಾ ವಲಯ ಹುಟ್ಟಿಕೊಂಡು ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮಗಳ ಅಂತರವನ್ನು ಹೆಚ್ಚಿಸಿತು. ಆದರೂ ಆಡಳಿತ ಮತ್ತು ಜನರ ಜೀವನ ಸುಧಾರಣೆಯ ದೃಷ್ಟಿಯಿಂದ ದುಡಿಮೆ ಪರಿಕಲ್ಪನೆಯನ್ನಾಗಿ ರೂಪಿಸಲು ವೈಜ್ಞಾನಿಕವಾಗಿ ಆರ್ಥಿಕ ಮತ್ತು ಅಬಿವೃದ್ಧಿ ದೃಷ್ಟಿಯಿಂದ ಅಳೆಯಲು ಪ್ರಂiÀತ್ನಿಸಿತು. ಹೀಗೆ ಮಾಪನ ಮಾಡುವ ಸಂದರ್ಭದಲ್ಲೆ ದೈಹಿಕ ಮತ್ತು ಬೌದ್ಧಿಕ ಶ್ರಮದ ವಿಭಜನೆ ಖಚಿತತೆಯನ್ನು ಪಡೆದುಕೊಂಡಿತು.
ಕೆಲಸದ ಸ್ವರೂಪಕ್ಕೆ ತಕ್ಕಂತೆ ವಿಭಜನೆ ಮಾಡುವುದರಲ್ಲಿ ತಪ್ಪಿಲ್ಲ. ವಿಭಜಿಸಿದ ನಂತರ ಅವುಗಳ್ನನು ಮೌಲ್ಯೀಕರಿಸುವುದರಲ್ಲಿ ತಾರತಮ್ಯ ತೋರುವುದು ತಪ್ಪು. ದೈಹಿಕ ಮತ್ತು ಬೌದ್ಧಿಕ ಶ್ರಮಗಳ ನಡುವಿನ ಭಿನ್ನತೆಗಳನ್ನು ಒಪ್ಪಿಕೊಂಡರೂ ಅವುಗಳ ಮಹತ್ವವನ್ನು ಪರಿಗಣಿಸಿ ಆದಷ್ಟು ತಾರತಮ್ಯವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.
ಯಾವ ಹಂತದಲ್ಲಿ, ಏಕೆ ದೈಹಿಕ ಶ್ರಮದ ಕೆಲಸಗಳು ಬೌದ್ಧಿಕ ಕೆಲಸಗಳಿಗಿಂತ ಕೀಳಾಗಿಸಲ್ಪಟ್ಟಿತು. ಬೌದ್ಧಿಕ ಕೆಲಸಗಳು ಏಕೆ ಶ್ರೇಷ್ಠವೆನಿಸಿಕೊಂಡು ಹೆಚ್ಚು ಮನ್ನಣೆ, ಸಂಭಾವನೆ ಪಡೆಯುವಂತಾಯಿತು? ಆರ್ಥಿಕ ಹಿನ್ನೆಲೆಯಲ್ಲಿ ನೋಡಿದರೆ ವಸ್ತು ವಿನಿಮಯ, ಸ್ವಾವಲಂಬಿ, ಸರಳ ಬದುಕು, ಕೃಷಿ ಸಮಾಜ, ಹಣದ ಬಳಕೆಗೂ ಮುನ್ನ ಬಹುಶಃ ಕೆಲಸಗಳ ನಡುವೆ ವ್ಯತ್ಯಾಸವಿರಲಿಕ್ಕಿಲ್ಲ. ಜನಸಂಖ್ಯೆ ಏರಿಕೆ, ಅವಶ್ಯಕತೆ ಗೆ ತಕ್ಕಂತೆ ಉತ್ಪಾದನೆ ಜಾಸ್ತಿಯಾಗಿ, ಹಣದ ಬಳಕೆ, ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆ, ಕೈಗಾರಿಕರಣಗಳು ಕೆಲಸದ ಪ್ರಕಾರ, ಸ್ವರೂಪವನ್ನು ಬದಲಾಯಿಸಿದವು. ದುಡಿಮೆಗಳ ಮೌಲ್ಯ ಮಾಪನ, ಗುರುತಿಸುವಿಕೆ, ಸಂಭಾವನೆ ನಿಗದಿ ಮಾಡುವುದರಲ್ಲಿ, ಗೌರವ ಮನ್ನಣೆ ನೀಡುವುದರಲ್ಲಿ ತಾರತಮ್ಯ ಮೂಡಿಬಂದವು. ದೈಹಿಕ ಶ್ರ ಮತ್ತು ಭೌಧ್ದಿಕ ಶ್ರಮ ವೆಂಬ ಎರಡು ಪ್ರಕಾರದ ವಿಭಾಗಗಳು ಹುಟ್ಟಿಕೊಡವು.
ದೈಹಿಕ ಶ್ರಮದ ಲಕ್ಷಣವೆಂದರೆ ಇದನ್ನು ಮಾಡುವವರ ಸಂಖ್ಯೆ ಹೆಚ್ಚು, ಅವಲಂಬಿಸುವವರ (ಗ್ರಾಹಕರು) ಪ್ರಮಾಣವು ಹೆಚ್ಚು. ಆದರೆ ಬೌದ್ಧಿಕ ಕೆಲಸಗಳನ್ನು ಮಾಡುವವರ ಸಂಖ್ಯೆ ತುಂಬ ಕಡಿಮೆ, ಅದರ ಉಪಯೋಗ (ಗ್ರಾಹಕರು) ಪಡೆಯುವವರ ಸಂಖ್ಯೆಯೂ ಕಡಿಮೆ.
ದೈಹಿಕ ಶ್ರಮದಲ್ಲಿ ಕೆಲಸ ಮಾಡುವವರ ಸಂಖ್ಯೆ ಅತ್ಯಧಿಕವಾಗಿರುವುದನ್ನು ಅಗಲವಾದ ತಳಯಿರುವುದು ಸೂಚಿಸುತ್ತದೆ. ಇಲ್ಲಿ ಸ್ವ ಉದ್ಯೋಗದಲ್ಲಿ ತೊಡಗಿರುವವರು, ಕೂಲಿಕಾರ್ಮಿಕರು, ಮನೆಗೆಲಸ ಮಡುವವರು, ಗೃಹಕೃತ್ಯಗಳು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ದುಡಿಮೆಗಳು ಸೇರಿವೆ. ಕೆಲವು ಕೆಲಸಗಳಲ್ಲಿ ದೈಹಿಕ ಮತ್ತು ಬೌದ್ಧಿಕ ಕೆಲಸಗಳೆರಡೂ ಸೇರಿರುತ್ತವೆ. ಬೌದ್ಧಿಕ ಕೆಲಸಗಾರರ ಸಂಖ್ಯೆ ಕಡಿಮೆಯಿದ್ದು ಸಂಘಟಿತ ವಲಯದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಸಾಮಾನ್ಯವಾಗಿ ಆರ್ಥಿಕತೆಯನ್ನು ವಿಂಗಡಿಸುವ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳೆಲ್ಲದರಲ್ಲಿ ಎರಡು ಪ್ರಕಾರದ ಕೆಲಸಗಳು ನಡೆಯುತ್ತವೆ. ಕೃಷಿಯಲ್ಲಿ ದೈಹಿಕ ಶ್ರಮದ ಕೆಲಸ ಹೆಚ್ಚಾಗಿದ್ದರೂ, ಕೃಷಿಕಗೆ ಸಂಬಂಧಿಸಿದ ಸಂಶೋಧನೆ, ಬೋಧನೆ, ಜ್ಞಾನ, ಮಾಹಿತಿ ವರ್ಧನೆಯ ಕೇಂದ್ರವಾದ ವಿಶ್ವವಿದ್ಯಾಲಯ ಅಥವಾ ಸರ್ಕಾರ ಸಂಸ್ಥೆಗಳು ಬೌದ್ಧಿಕ ಶ್ರಮಾಧಾರಿತವಾಗಿರುತ್ತವೆ.
ಕೈಗಾರಿಕೆಯಲ್ಲಿ ಬಂಡವಾಳ ಹೂಡುವಿಕೆ, ಜಮೀನು ಹೊಂದುವಿಕೆ, ಸಂಘಟನಾ ಕಾರ್ಯಗಳು ಬೌದ್ಧಿಕ ಶ್ರಮವೆನಿಸಿದರೆ ವಸ್ತುಗಳ ಉತ್ಪಾದನೆಯು ದೈಹಿಕ ಶ್ರಮವಾಗಿರುತ್ತದೆ. ಸೇವಾ ವಲಯದಲ್ಲಿ ಹೆಚ್ಚಾಗಿ ಬೌದ್ಧಿಕ ಶ್ರಮವನ್ನು ಆಧರಿಸಿಯೇ ನಡೆಯುತ್ತಿರುತ್ತದೆ. ಇನ್ನು ವಿವಿಧ ಕೆಲಸಗಳಿಗೆ ಸಂಭಾವನೆ ಅಥವಾ ವೇತನ ನಿಗದಿಪಡಿಸುವ ಪ್ರಕ್ರಿಯೆಯನ್ನು ಗಮನಿಸಿದರೆ, ನಿಗದಿಪಡಿಸುವ ಅಧಿಕಾರ ಸರ್ಕಾರ, ಬಂಡವಾಳ ಹೂಡುವವರು ಮತ್ತು ಜಮೀನುದಾರರ ಕೈಯಲ್ಲಿ ಇರುತ್ತದೆ. ಸರ್ಕಾರ ಸಂವಿಧಾನದ ತತ್ವ ,ಸವಲತ್ತು ಆಶೋತ್ತರಗಳನ್ನು ಆಧರಿಸಿ ವೇತನವನ್ನು ನಿಗದಿಪಡಿಸಬೇಕು. ಅಸಮಾನತೆಯನ್ನು ಹೋಗಲಾಡಿಸುವ, ಸಮಾನತೆಯನ್ನು ಎತ್ತಿ ಹಿಡಿಯುವ ತತ್ವಗಳು ಸಂವಿಧಾನದಲ್ಲಿವೆ. ಅದರ ಜೊತೆಯಲ್ಲೆ ಕೆಲಸಕ್ಕೆ ತಕ್ಕಂತೆ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನದ ಸವಲತ್ತುಗಳೂ ಇವೆ. ಆದರೆ ಕೆಲಸಕ್ಕೆ ತಕ್ಕಂತೆ ಮತ್ತು ಸಮಾನ ಕೆಲಸವನ್ನು ಅಳೆಯುವವರು ಯಾರು ? ಹೇಗೆ ಅಳೆಯುತ್ತಾರೆ? ಸಹಜವೋ? ಉದ್ದೇಶ ಪೂರ್ವಕವೋ? ಈ ಸ್ಥಾನದಲ್ಲಿರುವವರು ಕೆಲವೇ ವರ್ಗದವರು. ಅವರೂ ಬೌದ್ಧಿಕ ಕೆಲಸಗಳಲ್ಲಿ ತೊಡಗಿರುವಂತವರು. ಸಂವಿಧಾವನ್ನು ಆಧರಿಸಿದ್ದರೂ ಬೇರೆ ಬೇರೆ ಕಾರಣ/ಸಕಾರಣ/ತರ್ಕಬದ್ಧ/ ತರ್ಕರಹಿವಾಗೋ ದೈಹಿಕ ಮತ್ತು ಭೌದ್ಧಿಕ ಕೆಲಸಗಳ ಸಂಭಾವನೆ ಅಥವಾ ವೇತನದ ವ್ಯತ್ಯಾಸವಿರುವುದು ಕಂಡುಬರುತ್ತದೆ. ವ್ಯತ್ಯಾಸವಿದ್ದರೂ ತರ್ಕಬದ್ದವಾಗಿದ್ದರೆ, ವೈಜ್ಞಾನಿಕವಾಗಿದ್ದರೆ ಒಪ್ಪಿಕೊಳ್ಳಬಹುದು. ಇಲ್ಲಿ ಬರುವ ಸಮಸ್ಯೆ ಎರಡರ ನಡುವಿನ ವ್ಯತ್ಯಾಸ ಅಂತರ ಎಷ್ಟಿದೆ ಅನ್ನುವುದು, ಯಾಕಿದೆ ಅನ್ನುವುದು, ಅಂತರವನ್ನು ಸೃಷ್ಟಿಸುವವರು ಯಾರು? ಅನ್ನುವುದು.
ನನ್ನ ಅನಿಸಿಕೆ ಏನೆಂದರೆ ನಮ್ಮಲ್ಲಿ ಆದಾಯ ಮತ್ತು ಸಂಪತ್ತಿನ ಹಂಚಿಕೆಯಲ್ಲಿ ಕಂಡುಬರುವ ಅಗಾಧವಾದ ಅಂತರಕ್ಕೆ ದೈಹಿಕ ಮತ್ತು ಭೌದ್ಧಿಕ ಶ್ರಮವನ್ನು ಅಳೆಯುವಲ್ಲಿ, ಮೌಲ್ಯೀಕರಿಸಿ ಸಂಭಾವನೆ ನಿಗದಿ ಮಾಡುವುದರಲ್ಲಿ ತೋರುವ ತಾರತಮ್ಯವೇ ಕಾರಣ. ಮಿದುಳಿನ ಶಕ್ತಿಯ ಬುದ್ದಿಯನ್ನು ಹೆಚ್ಚಾಗಿ ಬಳಸಿ ಮಾಡುವ ಕೆಲಸಗಳು ಶ್ರೇಷ್ಠ, ಇವುಗಳನ್ನು ಹೊಂದಿರುವವರ ಸಂಖ್ಯೆ ಕಡಿಮೆ. ಸಮಾಜಕ್ಕೆ ಇವರ ಕೊಡುಗೆ ತುಂಬಾ ಮುಖ್ಯ. ಇವರಿಂದಲೆ ಸಮಾಜ ನಡೆಯುವುದು ಎಂಬ ಸುಳ್ಳು ನಂಬಿಕೆಯನ್ನು ಬೆಳೆಸಲಾಗಿದೆ. ವಾಸ್ತವದಲ್ಲಿ ಸಮಾಜ, ಅದರ ಉಳಿವು ಅಳಿವು ನಿಂತಿರುವುದೇ ದೈಹಿಕ ಶ್ರಮದ ಮೇಲೆ ಮನೆಯ ಕೆಲಸಗಳಿಂದ ಹಿಡಿದು ಹೊರಗಿನ ಅಂದರೆ ಸಾರ್ವಜನಿಕ ಕೆಲಸಗಳಲ್ಲಿ ಬಹುಪಾಲು ಪಡೆಯುವುದು ದೈಹಿಕ ಕೆಲಸಗಳು. ಪುರಸಭೆ ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಂದ ಹಿಡಿದು ಗ್ರಾಮದ ನಗರದ ಮೂಲಕಾರ್ಯ ಹಾಗೂ ಮೂಲಸೌಕರ್ಯಗಳ ಕೆಲಸಗಳೆಲ್ಲವು ದೈಹಿಕ ಶ್ರಮದಿಂದ ಮಾಡುವಂತವು. ಒಂದು ದಿನ ಮನೆಯ ಮತ್ತು ಹೊರಗಿನ ದೈಹಿಕ ಶ್ರಮದ ಕೆಲಸಗಳು ನಿಂತು ಹೋದರೆ ಕಲ್ಪನೆಯನ್ನು ಮಾಡಿಕೊಳ್ಳಲಾಗುವುದಿಲ್ಲ. ಮನೆಯಲ್ಲಿ ಅಡುಗೆ ಮಾಡದಿದ್ದರೆ, ಪಾತ್ರೆ ಬಟ್ಟೆ ತೊಳೆಯದಿದ್ದರೆ, ಕಸಗುಡಿಸದಿದ್ದರೆ ನಡೆಯುವುದಿಲ್ಲ. ಆಫೀಸಿನಲ್ಲಿ ಸ್ವಬಾಗಿಲು ತೆಗೆಯುವುದರಿಂದ ಹಿಡಿದು ಸ್ವಚ್ಛ ಮಾಡುವ, ಕಡತಗಳನ್ನು ಕೊಂಡೊಯ್ಯುವ, ಕಾಫಿ ತಿಂಡಿ ತಂದು ಕೊಡುವ ಕೆಲಸಗಳು ದಿನನಿತ್ಯ ನಡೆಯಲೆ ಬೇಕು. ಆದರೆ ಸಭೆ ನಡೆಸಯವ, ಫೈಲ್ ನಿರ್ವಹಣೆ, ಲೆಕ್ಕಚಾರಗಳು, ಆಡಳಿತ ನಿರ್ವಹಣೆ, ಆದೇಶ ನೀಡುವಂತಹ ಕೆಲಸಗಳನ್ನು ಮಾಡದೆ ಮುಂದೆ ಹಾಕಿದರೂ ವ್ಯತ್ಯಾಸ ಕಂಡುಬರುವುದಿಲ್ಲ. ಒಂದೆರಡು ದಿನ ಸೇವಾಧರಿತ ಅಥವಾ ಬೌದ್ಧಿಕ ಕೆಲಸಗಳು ನಡೆಯದಿದ್ದರೂ ಸಮಾಜ ಮುಳುಗಿಹೋಗುವುದಿಲ್ಲ. ಶಾಲಾ ಕಾಲೇಜುಗಳಿಗೆ, ಕಛೇರಿಗಳಿಗೆ ಸೇವಾ ಸಂಸ್ಥೆಗಳಿಗೆ ಏನೊ ಕಾರಣದಿಂದ ರಜೆ ಘೋಷಿಸಿದರೆ ತುಂಬ ವ್ಯತ್ಯಾಸವಾಗುವುದಿಲ್ಲ. ಬೌದ್ಧಿಕ ಕೆಲಗಳನ್ನು ಮುಂದೂಡಬಹುದು. ಆದರೆ ದೈಹಿಕ ಶ್ರಮದ ಕೆಲಸಗಳನ್ನು ಮುಂದೂಡಲಾಗುವುದಿಲ್ಲ.
ನಾನು ಗಮನಿಸಿದಂತೆ ದೈಹಿಕ ಶ್ರಮದ ಕೆಲಸಗಳು ಸಮರ್ಪಕವಾಗಿ ನಡೆದುಕೊಂಡು ಹೋಗುತ್ತಿರುವವರೆಗೆ ಸಮಸ್ಯೆಯಿರುವುದಿಲ್ಲ. ದೈಹಿಕ ಶ್ರಮಿಕರು ಕೆಲಸ ನಿಲ್ಲಿಸಿದರೆ ಆರ್ಥಿಕತೆ ಅಲ್ಲೋಲಕಲ್ಲೋಲವಾಗುತ್ತದೆ. ಇಷ್ಟು ಮಹತ್ವದಿಂದ ಕೂಡಿದ್ದರೂ ಈ ಕೆಲಸಗಳನ್ನು ಕೀಳಾಗಿ ನೋಡುವುದು, ಕಡಿಮೆ ವೇತನ ನೀಡುವುದನ್ನು ನೋಡಿದರೆ ಆಶ್ಚರ್ಯ ಮತ್ತು ವಿಷಾದನೀಯವೆನಿಸುತ್ತದೆ.
ಒಟ್ಟಿನಲ್ಲಿ ನಾನಿಲ್ಲಿ ಹೇಳಲಿಕ್ಕೆ ಹೊರಟಿರುವುದು, ಯಾವುದೇ ಸಮಾಜ ಸುಲಲಿತವಾಗಿ ನಡೆದುಕೊಂಡು ಹೋಗಲು ದೈಹಿಕ ಶ್ರಮ ಮತ್ತು ಬೌದ್ಧಿಕ ಶ್ರಮ ಎರಡು ಅವಶ್ಯಕವಿದ್ದರೂ ದೈಹಿಕ ಶ್ರಮದ ಅಗತ್ಯ ಹೆಚ್ಚಿದೆ. ಆದುದರಿಂದ ಎರಡಕ್ಕೂ ಸಮಾನ ಗೌರವ ದೊರಕಬೇಕು. ಅವುಗಳಿಗೆ ನಿಗದಿ ಮಾಡುವ ವೇತನದಲ್ಲಿ ತುಂಬಾ ವ್ಯತ್ಯಾಸ ಅಥವಾ ಅಂತರವಿರಬಾರದು. ಅಭಿವೃದ್ಧಿ ದೇಶಗಳ ಅಭಿವೃದ್ಧಿಗೆ ಮುಖ್ಯವಾದ ಕಾರಣ ಅಲ್ಲಿ ಶ್ರಮದ ಘನತೆಯನ್ನು ಎತ್ತಿ ಹಿಡಿಯಲಾಗುತ್ತದೆ. ಅಂದರೆ ದೈಹಿಕ ಶ್ರಮದ ಕೆಲಸಗಳಿಗೂ ಉತ್ತಮ ಸಂಭಾವನೆ ನೀಡಲಾಗುತ್ತದೆ. ಇದರಿಂದ ಕೆಲಸಗಳಲ್ಲಿ ಉತ್ತಮ ಗುಣಮಟ್ಟವನ್ನು ಕಾಣಬಹುದು. ಉನ್ನತ ಹುದ್ದೆಗಳಿಗೆ ಅತಿಯಾದ ಮನ್ನಣೆ, ಅತಿ ಹೆಚ್ಚಿನ ವೇತನ ನಿಗದಿಪಡಿಸುವುದು, ಕೆಳಸ್ತರದ ಹುದ್ದೆಗಳಿಗೆ (ಇವು ಹೆಚ್ಚಾಗಿ ದೈಹಿಕ ಶ್ರಮದಿಂದ ಕೂಡಿರುತ್ತವೆ) ಅತಿ ಕಡಿಮೆ/ಹೆಚ್ಚು ಅಂತರದಲ್ಲಿ ವೇತನ ನಿಗದಿಪಡಿಸುವುದರಿಂದ ವರ್ಗಗಳ ನಡುವೆ ಅಂತರ ಹೆಚ್ಚಾಗುತ್ತದೆ. ನಮ್ಮ ಕಾರ್ಯನೀತಿ ಸಂವಿಧಾನದ ಸವಲತ್ತುಗಳೆ ಅಂತರವನ್ನು ಸೃಷ್ಠಿಮಾಡುವಂತಿದ್ದರೆ, ಸಂಪತ್ತು ಆದಾಯ ಸಂಗ್ರಹಣೆ, ಅಸಮಾನ ಹಂಚಿಕೆಯನ್ನು ತಡೆಯಲು ಹೇಗೆ ಸಾಧ್ಯ? (ಉದಾ: ಸರ್ಕಾರಿ ವಲಯದಲ್ಲೆ ಉನ್ನತ ಹುದ್ದೆಗಳ ವೇತನಕ್ಕೂ, ತಾತ್ಕಾಲಿಕ, ದಿನಗೂಲಿ ನೌಕರರ ವೇತನದಲ್ಲಿ ಅಗಾಧವಾದ ಅಂತವಿದೆ. ಅಲ್ಲದೆ ಕನಿಷ್ಟ ವೇತನ ನಿಗದಿಪಡಿಸಿರುವಲ್ಲಿಯೂ ಸಾಕಷ್ಟು ಅಂತರವನ್ನು ಕಾಪಾಡಿಕೊಂಡು ಬಂದಿರುವುದನ್ನು ಕಾಣುತ್ತೇವೆ).
ಇದಕ್ಕೊಂದೇ ದಾರಿ. ದೈಹಿಕ ಮತ್ತು ಬೌದ್ಧಿಕ ಶ್ರಮದ ಮೌಲೀಕರಣದಲ್ಲಿ ಸುಧಾರಣೆಯಾಗಿ ಅವುಗಳ ನಡುವಿನ ಘನತೆ, ಸಂಭಾವನೆ ನೀಡುವುದರಲ್ಲಿ ಸಂಪೂರ್ಣ ಸಮಾನತೆ ತರಲಾಗದಿದ್ದರೂ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನೀತಿಗಳು ರೂಪುಗೊಳ್ಳಬೇಕು. ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ವಿಶೇಷ ಗಮನ ನೀಡಿ ಸಂವಿಧಾನದ ಆಶೋತ್ತರಗಳಿಗೆ ಅನುಗುಣವಾಗಿ ಸಂಘಟಿತ ವಲಯದ ಸವಲತ್ತುಗಳು ಅವರಿಗೂ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿದ್ದರೂ ರಾಜಕೀಯ, ಅಧಿಕಾರಶಾಹಿಯ ರಾಜಕಾರಣದಿಂದ ಎಲ್ಲವೂ ಅನುಷ್ಠಾನಗೊಳ್ಳುತ್ತಿಲ್ಲ. ಶ್ರಮಿಕ ವರ್ಗದವರ ಸಂಘಟನೆ, ಹೋರಾಟದಿಂದ ಈ ಸುಧಾರಣೆಯನ್ನು ನಿರೀಕ್ಷಿಸೋಣ ಎಂದರೆ ಖಾಸಗೀಕರಣದ ಕಾರ್ಯನೀತಿಯು ಜನರು ಸಂಘಟಿತರಾಗುವುದನ್ನು ತಡೆಯುತ್ತದೆ. ಜೊತೆಗೆ ಜನರ ಮನಸ್ಸನ್ನು ಧರ್ಮ, ಕೋಮುವಾದ, ಮೂಢನಂಬಿಕೆ, ಅಂತರ್‍ಜಾಲ, ಮೊಬೈಲ್, ಸಿನಿಮಾ, ಟಿ.ವಿ ಕಾರ್ಯಕ್ರಮಗಳು, ಜೀವನವನ್ನು ಎಂಜಾಯ್ ಮಾಡಬೇಕು ಎಂಬ ಮನೋಭಾವ, ಶ್ರೀಮಂತಿಕೆಯ ಪ್ರದರ್ಶನಗಳು ಜನರನ್ನು ದಿಕ್ಕುತಪ್ಪಿಸಿ ತಮ್ಮ ಬೇಡಿಕೆಗಳಿಗೆ ಹೋರಾಡದಂತೆ ಮಾಡುತ್ತಿವೆ. ಇದರ ನಡುವೆಯು ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಾ ಜನರನ್ನು ಸಂಘಟಿಸಲು ಪ್ರಯತ್ನಿಸುವ ಜನರನ್ನು ಯಾವುದಾದರು ನೆಪದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ. ರಾಜಕೀಯ ತಂತ್ರ, ಧಾರ್ಮಿಕ ನಂಬಿಕೆ ಹಾಗೂ ಅಧಿಕಾರಿಶಾಹಿಯ ಹಿಡಿತ ಬಲಗೊಳ್ಳುತ್ತಿರುವ ಹೊತ್ತಿನಲ್ಲಿ ಶ್ರಮಿಕರ ಕೂಗು ಕೇಳಿಸದಂತಾಗುತ್ತಿದೆ. ಸಮವಿಧಾನದ ಸವಲತ್ತುಗಳನ್ನು ಗಾಳಿಗೆ ತೂರುವ ಪ್ರಯತ್ನಗಳು ನಡೆಯುತ್ತಿವೆ. ಇಷ್ಟೆಲ್ಲ ನಡೆಯುತ್ತಿದ್ದರೂ, ಇತಿಹಾಸದಲ್ಲಿ ಜನರ ಸಂಘಟನಾ ಹೋರಾಟಕ್ಕೆ ಯಶಸ್ಸು ದೊರಕಿರುವುದರ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಶ್ರಮಿಕ ವರ್ಗದವರು ಹೋರಾಟವನ್ನು ಗಟ್ಟಿಕೊಳಿಸಿಕೊಂಡು ಮುಂದುವರೆಯುವುದಾದರೆ ಎಲ್ಲಾ ಬೇಡಿಕೆಗಳಲ್ಲದಿದ್ದರೂ ಕೆಲವು ಸುಧಾರಣೆಗಳನ್ನು ತರಲು ಸಾಧ್ಯವಾಗಬಹುದು. ರೈತರು, ಕಾರ್ಮಿಕರು, ಮಹಿಳೆಯರು, ಪರಿಸರವಾದಿಗಳು, ಪ್ರಗತಿಪರ ಚಿಂತಕರು, ದಲಿತರು ಹಾಗೂ ವಿದ್ಯಾರ್ಥಿಗಳು ಒಗ್ಗೂಡಿದರೆ ರಾಜಕೀಯ, ಧಾರ್ಮಿಕ ಹಿಡಿತ ಹಾಗೂ ಅಧಿಕಾರಿಶಾಹಿಯ ಪ್ರಾಬಲ್ಯವನ್ನು ನಿಯಂತ್ರಿಸಿ ಸಮಾನತೆ, ಹಕ್ಕು, ಸ್ವಾತಂತ್ರ್ಯ ಹಾಗೂ ಮಾನವೀಯತೆಯಿಂದ ಕೂಡಿದ ಸಮಾಜವನ್ನು ಕಟ್ಟಬಹುದು. ಈ ಗುಂಪುಗಳ ಒಗ್ಗೂಡುವಿಕೆಯು ಅತಿಯಾದ ಆದರ್ಶದ ಕಲ್ಪನೆ ಎನಿಸಬಹುದು. ಆದರೆ ಆದರ್ಶದ ಬೆನ್ನು ಹತ್ತಿದ್ದರೆ ಕೆಲವೊಂದು ಗುರಿಗಳನ್ನಾದರೂ ಸಾಧಿಸಬಹುದು. ಎಲ್ಲಿಯವರೆಗೆ ದೈಹಿಕ ಶ್ರಮಕ್ಕೆ ಮನ್ನಣೆ ಸೂಕ್ತ ಸಂಭಾವನೆ ದೊರಕುವುದಿಲ್ಲವೊ ಅಲ್ಲಿಯವರೆಗೆ ಕೆಲಸಗಳಲ್ಲಿ ಗುಣಮಟ್ಟ ಕಾಪಾಡುವುದಕ್ಕಾಗಲಿ, ವರ್ಗ ಅಂತರ, ಅದಾಯ ಸಂಪತ್ತುಗಳ ಸಂಗ್ರಹವನ್ನು ತಡಯಲಾಗುವುದಿಲ್ಲ. ವಿಷಾದಸ ಸಂಗತಿಯೆಂದರೆ ಬಹುಜನರು ಎರಡೂ ಶ್ರಮಗಳ ನಡುವೆ ಅಂತರವಿರುವುದನ್ನೆ ಸಮರ್ಥಿಸುತ್ತಾರೆ ಪ್ರೋತ್ಸಾಹಿಸುತ್ತಾರೆ. ಈ ಮನೋಭಾವವನ್ನು ಹೋಗಲಾಡಿಸುವ ಅಗತ್ಯವಿದೆ.
- ಹೇಮಲತ ಎಚ್.ಎಮ್
ಮಹಿಳಾ ಅಧ್ಯಯನ ವಿಭಾಗ
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ
ಮಂಡ್ಯ ಹೊರಾವರಣ ಕೇಂದ್ರ. ಬಿ.ಹೊಸೂರು ಕಾಲೋನಿ, ಮಂಡ್ಯ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ