Pages

ವ್ಯಕ್ತಿ ಪರಿಚಯ - ಸರಸ್ವತಿಬಾಯಿ ರಾಜವಾಡೆ


 ತಮ್ಮದೇ ಆದ ವಿಶಿಷ್ಟ ರೀತಿಯಲಿ ಮಹಿಳೆಯರಿಗೆ ಸಂಬಂಧಿಸಿದಂತಹ ವಿಷಯಗಳನ್ನು 'ಗಿರಿಬಾಲೆ, ವೀಣಾಪಾಣಿ, ಯು.ಸರಸ್ವತಿ ಮತ್ತು ವಿಶಾಖಾ' ಎಂಬ ಹೆಸರುಗಳಿಂದ ಬರೆಯುತ್ತಿದ್ದ ಸರಸ್ವತಿಬಾಯಿಯವರು ಹುಟ್ಟಿದ್ದು ದಕ್ಷಿಣ ಕನ್ನಡದ ಉಡುಪಿ ಬಳಿಯ ಬಳಂಜಾಲದಲ್ಲಿ 1913 ಅಕ್ಟೋಬರ್  3 ರಂದು. 
ತಂದೆ ನಾರಾಯಣರಾವ್, ತಾಯಿ ಕಮಲಾಬಾಯಿ. ತಂದೆ ಹರಿಕಥೆಯನ್ನು ಹೇಳುತ್ತಿದ್ದುದಲ್ಲದೆ ಪದ್ಯಗಳನ್ನು ರಚಿಸಿ ಹಾಡುತ್ತಿದ್ದರು. ತಂದೆಯ ಈ ಗುಣ ಸರಸ್ವತಿಯಲ್ಲೂ ಬೆಳೆದು ಬಂದಿತು. ಅಪ್ಪನಿಗೆ ಬೇಡದ ಮಗುವಾಗಿ ಅಂದರೆ  ಪತ್ನಿ ಗರ್ಭಿಣಿ ಎಂದು ತಿಳಿಯುತ್ತಲೇ ಗರ್ಭಪಾತ ಮಾಡಿಸಲು ಒಪ್ಪದ ಮಡದಿಯನ್ನು ಬಿಟ್ಟು ಹೋದರು ನಾರಾಯಣರಾವ್. ಇಂತಹ ಪರಿಸ್ಥಿತಿಯಲ್ಲಿ ಸರಸ್ವತಿಗೆ ತಾಯಿಯ ಪ್ರೀತಿಯಿಂದ ಸಿಗಲಿಲ್ಲ. ಅಜ್ಜಿಯ ಆರೈಕೆಯಲ್ಲಿ ಬೆಳೆದಳು.

ಬಡತನದ ಕಾರಣ ಸರಸ್ವತಿ ಐದು ವರ್ಷದ ಬಾಲಕಿಯಾಗಿರುವಾಗಲೇ ಹೂ ಮಾರಲು ಹೋಗುತ್ತಿದ್ದರು. ಓದಲು ಇವರಿಗೆ ಮೊದಲಿನಿಂದಲೂ ಆಸಕ್ತಯಿತ್ತು.ಶಾಲೆಗೆ ಸೇರಿಸಿದರಾದರೂ ವಿದ್ಯೆ ಕಲಿಯುವಲ್ಲಿ ವಿಫಲರಾದರು. ನಂತರ ಇವರ ಊರಿಗೆ ನಾಟಕ ಮಂಡಳಿ ಬಂದಿತ್ತು ನಾಟಕವನ್ನು ನೋಡಲು ಹೋಗಿದ್ದ ಸರಸ್ವತಿಯನ್ನು ನೋಡಿದ ಪ್ರೊಪ್ರೈಟರ್ ನಾಟಕದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು.ಕೊಟ್ಟ ಅವಕಾಶವನ್ನು ಉಪಯೋಗಿಸಿಕೊಂಡು ಇವರು ಚೆನ್ನಾಗಿ ಅಭಿನಯಿಸಿದರು. ಇವರ ಅಭಿನಯವನ್ನು ಕಂಡ ಎಲ್ಲರೂ ಹೊಗಳಿದರು. ನಂತರ ಮುಂಬಯಿಗೆ ಹೋಗಿ ಸಂಗೀತವನ್ನು ಕಲಿತರು. ಕಾರ್ಯಕ್ರಮವನ್ನು ನೀಡುತ್ತಿದ್ದರು. ಆದರೆ ಮುಂಬಯಿಯ ವಾತಾವರಣ ಇವರಿಗೆ ಒಗ್ಗದ ಕಾರಣ ಮತ್ತೆ ತಮ್ಮೂರಿಗೆ ಹಿಂತಿರುಗಿದರು.

ಬಡತನದಿಂದ ಬಳಲುತ್ತಿದ್ದು ಸರಸ್ವತಿಯವರು ಚಿಕ್ಕ ವಯಸ್ಸಿನಲ್ಲಿ ದೇವರಿಗೆ "ನನಗೆ ಕಲೆಕ್ಟರ್ ಗಂಡನನ್ನು  ಕೊಡು" ಎಂದು ಪತ್ರ ಬರೆದಿದ್ದರಂತೆ. ಕಾಕತಾಳೀಯವಾಗಿ ಇವರ 15 ನೇ ವಯಸ್ಸಿನಲ್ಲಿ  51 ವಯಸ್ಸಿನ ರಾಯಶಾಸ್ತ್ರಿ ರಾಜವಾಡೆ ಎಂಬುವರೊಂದಿಗೆ ವಿವಾಹವಾಯಿತು. ರಾಯಶಾಸ್ತ್ರಿಯವರು ತಂಜಾವೂರಿನಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿದ್ದರು. ವಿವಾಹ ನಂತರ ತಂಜಾವೂರು ಆಮೇಲೆ ಸಿಂಗಪುರಕ್ಕೆ ಗಂಡನೊಂದಿಗೆ ಬಂದರು.ಚೆಲುವೆಯಾಗಿದ್ದ ಇವರನ್ನು ಪತಿ ಎಲ್ಲೂ ಹೊರಗೆ ಕರೆದುಕೊಂಡು ಹೋಗುತ್ತಿರಲಿಲ್ಲ. ಹೆಚ್ಚು ಕಡಿಮೆ ಗೃಹಬಂಧನದಲ್ಲಿಯೇ ಇದ್ದರು. ಆ ಸಮಯದಲ್ಲಿ ಸರಸ್ವತಿಯವರು ಮನೆಗೆ ಬರುತ್ತಿದ್ದ ಪತ್ರಿಕೆಗಳನ್ನು ಓದುತ್ತಿದ್ದರು. ಅಲ್ಲದೆ ಮನೆಗೆಲಸದವನಿಂದ ತಮಿಳು ಭಾಷೆಯನ್ನು ಕಲಿತರು. ಜೊತೆಗೆ ಮನೆಯಲ್ಲಿದ್ದ ಗ್ರಂಥಗಳನ್ನು ಓದುತ್ತಿದ್ದರು. ಹಾಗೆ ಓದುತ್ತಾ ತಾನೇಕೆ ಬರೆಯಲು ಪ್ರಯತ್ನಿಸಬಾರದೆಂದು ಮೊದಲ ಕತೆಯನ್ನು  ತಮಿಳು ಭಾಷೆಯಲ್ಲಿ ಬರೆದರು.ನಂತರ ಕನ್ನಡದಲ್ಲಿ " ನನ್ನ ಅಜ್ಞಾನ " ಎಂಬ ಕಥೆಯನ್ನು ಬರೆದರು.ಇದು ಕಂಠೀರವ ಪತ್ರಿಕೆಯಲ್ಲಿ ಪ್ರಕಟಗೊಂಡು ಬಹುಮಾನವನ್ನು ಪಡೆಯಿತು. ಇದರಿಂದ ಬರೆಯುವುದನ್ನು ಮುಂದುವರಿದರು. ಪತಿ ಬರೆಯುವುದನ್ನು ಪ್ರೋತ್ಸಾಹಿಸಿದರು. ನಂತರ ಸರಸ್ವತಿಯವರು S.S.L.C ಪರೀಕ್ಷೆಯನ್ನು ಬರೆದು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ನಂತರದಲ್ಲಿ ಹಿಂದಿ ರಾಷ್ಟ್ರಭಾಷಾ ವಿಶಾರದನಾದ ಪರೀಕ್ಷೆಗಳನ್ನು ಪಾಸು ಮಾಡಿದರು. ಒಟ್ಟಾರೆ ಸರಸ್ವತಿಯವರು ಹಿಂದಿ,ತಮಿಳು,ಸಂಸ್ಕೃತ,ಇಂಗ್ಲಿಷ್, ಮರಾಠಿ ಭಾಷೆಗಳನ್ನು ಕಲಿತರು.ಹೀಗಿರುವಾಗಲೇ ಇವರು 28 ವರ್ಷದಲ್ಲಿ ಪತಿಯನ್ನು  ಕಳೆದುಕೊಂಡು ವಿಧವೆಯಾದರು. ನಂತರ ಇವರು ಬೆಂಗಳೂರಿನಲ್ಲಿ ಸ್ವಲ್ಪ ಕಾಲವಿದ್ದು ಉಡುಪಿಯಲ್ಲಿ ನೆಲೆಸಿದರು.
  1929 ರಲ್ಲಿ ಬರೆಯಲು ಪ್ರಾರಂಭಿಸಿದ ಇವರು ಸುಮಾರು 65 ಕಥೆಗಳನ್ನು ಬರೆದಿದ್ದಾರೆ. ಇವರ ಕಥೆಗಳು  "ತಾಯಿನಾಡು,ಕಂಠೀರವ,ಅಂತರಂಗ,ಸುಬೋಧ,ಧರ್ಮಬೋಧ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಪ್ರಕಾಶ ಎಂಬ ಹಿಂದಿ ನಾಟಕವನ್ನು ಅನುವಾದಿಸಿದರು. 1938ರಲ್ಲಿ ಪ್ರಕಟಗೊಂಡ ಇವರ "ಆಹುತಿ ಇತ್ಯಾದಿ ಕಥೆಗಳು" ಪ್ರಥಮ ಕಥಾಸಂಕಲನವನ್ನು ದಿ ಹಿಂದೂ ಪತ್ರಿಕೆಯಲ್ಲಿ " ಸಣ್ಣ ಕಥೆಗಳ ಅವಭಿಷಕ್ತ ರಾಣಿ" ಎಂದು ವಿಮರ್ಶಕರು ಹೊಗಳಿ ಬರೆದಿದ್ದಾರೆ. " ಕದಂಬ ಮತ್ತು ಪ್ರೇಮವಿವಾಹ" ಇವರ ಇತರ ಕಥಾಸಂಕಲನಗಳು. " ವಿಮಲೆ" ಎಂಬ ಕಾದಂಬರಿಯನ್ನು ಬರೆದಿದ್ದಾರೆ.
1946 ರಲ್ಲಿ "ಕಥಾವಳಿ" ಎಂಬ ಪತ್ರಿಕೆಯ ವನಿತಾ ವಿಭಾಗದ ಇವರ ಸಂಪಾದಕೀಯದಲ್ಲಿ "ಅಕ್ಕನ ಓಲೆ ಎಂಬ ಅಂಕಣವನ್ನು ಪ್ರಾರಂಭಿಸಿದರು. ಇದರಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಉತ್ತರಿಸುತ್ತಿದ್ದರು. " ಚಾರುಚಯನ" ಎಂಬ ಅಂಕಣದಲ್ಲಿ ಉದಯೋನ್ಮುಖ ಲೇಖಕಿಯೇ ಕಥೆ ಕವನಗಳನ್ನು ಪ್ರಕಟಿಸಿ,ಅವರಿಗೆ ಪ್ರೋತ್ಸಾಹ ನೀಡುತ್ತಿದ್ದರು.
1951ರಲ್ಲಿ" ನಿಸರ್ಗ" ಎಂಬ ಆರೋಗ್ಯ ಪತ್ರಿಕೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ನಿಸ್ಸಂಕೋಚವಾಗಿ ತಮ್ಮ ನಿಜವಾದ ಹೆಸರಿನಿಂದಲೇ ಬರೆಯುತ್ತಿದ್ದರು. 
ಇವರು ಹಲವಾರು ಕವಿತೆಗಳನ್ನು ಬರೆದಿದ್ದಾರೆ.ಇವರ " ಕಲಿಯೋಣ " ಮೊದಲ ಕವನವು 1948 ರಲ್ಲಿ ಕರಾವಳಿಯಲ್ಲಿ ಪ್ರಕಟವಾಯಿತು.  ಇದರಲ್ಲಿ " ಚೇತರಸಿ ಭಗಿನಿಯರೇ,ಸಾಕಿನ್ನು ತೂಕಡಿಸಿ ಕ್ರೀತದಾಸಿಯರಾಗಿ ಬಾಳಿದುದು ಸಾಕಾಯ್ತು" ಎಂದು ಮಹಿಳೆಯರನ್ನು  ಜಾಗೃತಿಗೊಳಿಸಲು ಬರೆದಿದ್ದರು. ಇದಲ್ಲದೆ ಇವರು ನಾಟಕಗಳನ್ನು ಬರೆದಿದ್ದಾರೆ. " ಪರಿಣಯ " ಎಂಬ ಮರಾಠಿ ಪ್ರಹಸನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
1951ರಲ್ಲಿ "ಸಾರ್ಥಕ ಜೀವನ" ಎಂಬ ನಾಟಕವನ್ನು ಬರೆದರು.1957 ರಲ್ಲಿ " ಬಿರುಗಾಳಿ " ಎಂಬ ಮತ್ತೊಂದು ಮರಾಠಿ ನಾಟಕವನ್ನು ಅನುವಾದಿಸಿದರು." ಸಹೋದರ,ಸಂತ ಮೀರ, ಸಂಸಾರ,ಡೆಪ್ಯುಟಿ ಕಲೆಕ್ಟರ್ ಮೊದಲಾದ ನಾಟಕಗಳನ್ನು ಬರೆದಿದ್ದಲ್ಲದೆ ಅಭಿನಯಿಸಿದ್ದಾರೆ.1953ರಲ್ಲಿ " ಸುಪ್ರಭಾತ" ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಮಹಿಳೆಯರಿಗೆ ಆಧ್ಯತೆ ನೀಡಿದ್ದರು. ಇವರು 50 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ.
ಸರಸ್ವತಿಯವರು ಸಾಹಿತ್ಯ ಸೇವೆಯಲ್ಲದೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಉಡುಪಿಯಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಹಾಯ ಮಾಡಿದರು. ನಂತರ ಇವರ ಒಲವು ಆಧ್ಯಾತ್ಮಿಕದತ್ತ ಹರಿಯಿತು. ಕೃಪಾಂತರಂಗ ಭಾಗ 1ಮತ್ತು ಭಾಗ 2 , ಸ್ತವನಾಂಜಲಿ, ಶ್ರೀಶಾರದಾಂಬೆ ಭಕ್ತಿ ಗೀತೆಗಳು, ಶ್ರೀಶಾರದಾದೇವಿ ಮಹಿಮೆಗಳು ಮೊದಲಾದ ಕೃತಿಗಳನ್ನು ಬರೆದರು. 1976 ರಲ್ಲಿ ಚಿಟ್ಪಾಡಿಯ ಶಾರದಾಂಬ ದೇವಾಲಯವನ್ನು  ಜೀರ್ಣೋದ್ಧಾರ ಮಾಡಿಸಿದರು.
ಹೀಗೆ ಸಮಾಜದಲ್ಲಿನ ಮಹಿಳೆಯರ ವಿಭಿನ್ನ ಕಥಾವಸ್ತುಗಳನ್ನು ವಿಶಿಷ್ಟ ರೀತಿಯಲ್ಲಿ ಬರೆದ ಸರಸ್ವತಿಯವರು 1994 ರ ಏಪ್ರಿಲ್ 23 ರಂದು ಚಿರನಿದ್ರೆಗೆ ಜಾರಿದರು.
ಇವರ ಸಾಹಿತ್ಯ ಕೃಷಿಗೆ 1988 ರಲ್ಲಿ ಅಖಿಲ ಕರ್ನಾಟಕ ಲೇಖಕಿಯರು ಸಂಘ ತಮ್ಮ 2 ನೇ ಸಮ್ಮೇಳನದಲ್ಲಿ ಗೌರವಿಸಿತು.1994 ರಲ್ಲಿ ಅನುಪಮ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು.
   -  ವಿಜಯಲಕ್ಷ್ಮಿ ಎಂ ಎಸ್  

ಕಾಮೆಂಟ್‌ಗಳಿಲ್ಲ: