Pages

ಲೇಖನ - ರಷ್ಯಾ ಕ್ರಾಂತಿ

 ಜಗತ್ತಿನ ಪ್ರಗತಿಪರ ಹೋರಾಟಗಳಿಗೆ ಸ್ಫೂರ್ತಿ ನೀಡಿದ 
ರಷ್ಯಾ ಕ್ರಾಂತಿಗೆ ನೂರು ವರ್ಷ
1917ರ ನವೆಂಬರ್ 7ರಿಂದ 17ರ ವರೆಗೆ (ಝಾರನ ರಷ್ಯಾದಲ್ಲಿ ಚಾಲ್ತಿಯಲ್ಲಿದ್ದ ಹಳೆಯ ಜ್ಯೂಲಿಯನ್ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 25ರಿಂದ) ನಡೆದ ರಷ್ಯಾದ ಮಹಾನ್ ಕ್ರಾಂತಿ 20ನೇ ಶತಮಾನದ ಅತ್ಯಂತ ಮಹತ್ವದ ಘಟನೆಗಳಲ್ಲೊಂದು ಎಂಬುದು ಯಾರೂ ಅಲ್ಲಗಳೆಯಲಾಗದ ಸಂಗತಿ. 1917ರ ಫೆಬ್ರವರಿ ತಿಂಗಳಲ್ಲಿ ಝಾರ್ ದೊರೆಯ ಆಡಳಿತವನ್ನು ಅಂತ್ಯಗೊಳಿಸಿ, ಬಂಡವಾಳಶಾಹಿಗಳ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ನಂತರ ನವೆಂಬರ್ ತಿಂಗಳಲ್ಲಿ, ಅದನ್ನೂ ಕೊನೆಗೊಳಿಸಿ ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಹೀಗೆ 1917ರಲ್ಲಿ ರಷ್ಯಾ ಎರಡು ಕ್ರಾಂತಿಗಳಿಗೆ ಸಾಕ್ಷಿಯಾಯಿತು.
ಕಾರ್ಲ್‍ಮಾಕ್ರ್ಸ್ ಅವರು “ತತ್ವಜ್ಞಾನಿಗಳು ಇದುವರೆಗೆ ಜಗತ್ತನ್ನು ವ್ಯಾಖ್ಯಾನಿಸಲು ಯತ್ನಿಸಿದರು, ಆದರೆ ಪ್ರಶ್ನೆಯಿರುವುದು ಜಗತ್ತನ್ನು ಬದಲಾಯಿಸುವ ಕುರಿತು” ಎಂದು ಹೇಳಿದ್ದರು. ಕಾರ್ಲ್‍ಮಾರ್ಕ್ಸ್ ಅವರ ಚಿಂತನೆಗಳನ್ನು ಆಧರಿಸಿ ರಷ್ಯಾದಲ್ಲಿ ಶೋಷಣೆರಹಿತ ಸಮಾಜ ಕಟ್ಟುವ ಪ್ರಯೋಗದಲ್ಲಿ ಯಶಸ್ವಿಯಾದವರು ವಿ.ಐ.ಲೆನಿನ್. ರಷ್ಯಾದಲ್ಲಿ ಕೈಗಾರಿಕಾ ಕಾರ್ಮಿಕರು ಮತ್ತು ಬಡ ರೈತರ ಮೈತ್ರಿಯನ್ನು ರೂಪಿಸಿ ಸಮಾಜವಾದಿ ರಾಜ್ಯವನ್ನು ಕಟ್ಟಿದ್ದು ಬೊಲ್ಷೆವಿಕ್ ಪಕ್ಷ.
ಝಾರನ ರಷ್ಯಾದಲ್ಲಿ ರೈತರ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ 1877ರಿಂದ 1914ರವರೆಗೆ ರಷ್ಯಾದಲ್ಲಿ ವಾಸವಿದ್ದು, ಅಲ್ಲಿ ಪ್ರಾಧ್ಯಾಪಕರಾಗಿ, ಪತ್ರಕರ್ತರಾಗಿ ಕೆಲಸ ಮಾಡಿದ್ದ ಡಾ.ಇ.ಜೆ.ಡಿಲ್ಲೊನ್ ಅವರು 1918ರಲ್ಲಿ ಬರೆದ ‘ಎಕ್ಲಿಪ್ಸಸ್ ಆಫ್ ರಷ್ಯಾ’ ಕೃತಿಯನ್ನು ನೋಡಿದರೆ ತಿಳಿಯುತ್ತದೆ. ಅವರು ಹೀಗೆ ಬರೆಯುತ್ತಾರೆ “ರಷ್ಯನ್ ರೈತ ... ಚಳಿಗಾಲದಲ್ಲಿ ಆರು ಗಂಟೆಗೆ, ಕೆಲವೊಮ್ಮೆ ಐದು ಗಂಟೆಗೇ ಮಲಗುತ್ತಾನೆ. ಏಕೆಂದರೆ ಕೃತಕ ಬೆಳಕಿಗಾಗಿ ಇಂಧನವನ್ನು ಕೊಳ್ಳಲು ಆತನಲ್ಲಿ ಹಣವಿಲ್ಲ. ಆತನಿಗೆ ತಿನ್ನಲು ಮಾಂಸವಿಲ್ಲ, ಮೊಟ್ಟೆಯಿಲ್ಲ, ಬೆಣ್ಣೆಯಿಲ್ಲ, ಹಾಲಿಲ್ಲ, ಕೋಸೂ ಇಲ್ಲ, ಖಾಲಿ ಸುಟ್ಟ ಬ್ರೆಡ್ ಮತ್ತು ಆಲೂಗಡ್ಡೆಯಯಲ್ಲಿ ಆತ ದಿನದೂಡುತ್ತಾನೆ.... ಮಂಚೂರಿಯನ್ ಯುದ್ಧದಲ್ಲಿ ಜಪಾನೀಯರು ಕ್ರಿಮಿಗಳ ರೂಪ ತಳೆದು ರಷ್ಯನ್ ಸೈನಿಕರ ಬೂಟುಗಳೊಳಗೆ ಸೇರಿ ಅವರ ಕಾಲುಗಳನ್ನು ತಿಂದು ಸಾಯಿಸಿದ್ದೇ ಅವರ ಗೆಲುವಿಗೆ ಕಾರಣವೆಂದು ರಷ್ಯನ್ ರೈತರು ನಂಬುತ್ತಾರೆ... ಅವರು ಮಾಟಗಾತಿಯರನ್ನು ಖುಷಿಯಿಂದ ಸುಡುತ್ತಾರೆ.. ವಿಧೇಯರಲ್ಲದ ಹೆಂಡತಿಯನ್ನು ನಗ್ನಗೊಳಿಸಿ ಗಾಡಿಗೆ ಕಟ್ಟಿ ಹಳ್ಳಿಯಿಡೀ ಎಳೆದಾಡಿ ಚಾಟಿಯೇಟು ನೀಡುತ್ತಾರೆ”. ಇಂತಹ ಮಧ್ಯಕಾಲೀನ ಧೋರಣೆಯ ರೈತರನ್ನು ಕ್ರಾಂತಿಯ ಅಸ್ತ್ರವನ್ನಾಗಿ ರೂಪಿಸಿದ್ದು ಬೊಲ್ಷೆವಿಕ್ ಪಕ್ಷದ ಹೆಗ್ಗಳಿಕೆ.
ಅದೇ ಡಾ.ದಿಲ್ಲೊನ್ ಅವರು 1928ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಬದಲಾವಣೆಗೆ ಬೆರಗಾಗುತ್ತಾರೆ. ಅಲ್ಲಿನ ರೈತ ಕಾರ್ಮಿಕರ ಬದುಕಿನ ಚಿತ್ರಣವನ್ನು ಅವರು “ರಷ್ಯಾ ಟುಡೇ ಆಂಡ್ ಟುಮಾರೋ” ಕೃತಿಯಲ್ಲಿ ದಾಖಲಿಸಿದ್ದಾರೆ. 1930ರಲ್ಲಿ ಸೋವಿಯತ್ ಒಕ್ಕೂಟಕ್ಕೆ ಭೇಟಿ ನೀಡಿದ್ದ ಕವಿ ರವೀಂದ್ರನಾಥ ಟಾಗೋರರು ತಮ್ಮ ‘ಲೆಟರ್ಸ್ ಫ್ರಮ್ ರಷ್ಯಾ’ ಕೃತಿಯಲ್ಲಿ “ಕೇವಲ 10 ವರ್ಷಗಳಲ್ಲಿ ಲಕ್ಷಾಂತರ ಜನರನ್ನು ಅಜ್ಞಾನ ಮತ್ತು ಅಧಃಪತನಗಳ ಕತ್ತಲೆಯಿಂದ ಘನತೆ-ಗೌರವಗಳ ಬೆಳಕಿನೆಡೆಗೆ ಸೋವಿಯತ್ ಒಕ್ಕೂಟ ಮುನ್ನಡೆಸಿದ್ದನ್ನು ನಾನು ಕಣ್ಣಾರೆ ನೋಡಿರದಿದ್ದರೆ, ನಂಬುವುದೇ ಅಸಾಧ್ಯವಾಗುತ್ತಿತ್ತು. ರಷ್ಯಾಗೆ ಭೇಟಿ ನೀಡಿರದಿದ್ದರೆ, ನನ್ನ ಜೀವನದ ತೀರ್ಥಯಾತ್ರೆ ಅಪೂರ್ಣವಾಗುತ್ತಿತ್ತು.” ಎಂದು ಬರೆದರು.
1917ರ ನವೆಂಬರ್‍ನಲ್ಲಿ ಅಧಿಕಾರ ಕೈವಶವಾಗುತ್ತಿದ್ದಂತೆ ಹೊಸ ಸರ್ಕಾರ ಹಲವಾರು ಡಿಕ್ರಿಗಳನ್ನು ಜಾರಿಗೊಳಿಸುತ್ತದೆ. ದೇಶದ ಎಲ್ಲ ಭೂಮಿ ಸರ್ಕಾರದ ಆಸ್ತಿ ಎಂದು ಘೋಷಿಸಲಾಯಿತು, ಶಿಕ್ಷಣ ಮೂಲಭೂತ ಹಕ್ಕು ಎಂದು ಘೋಷಿಸಲಾಯಿತು. ಗಣಿಗಳು, ದೊಡ್ಡ ಕೈಗಾರಿಕೆಗಳು ಸರ್ಕಾರದ ಆಸ್ತಿಯೆಂದು ಪರಿಗಣಿಸಲಾಯಿತು. ಗಂಡು-ಹೆಣ್ಣು ಸಮಾನವೆಂದು ಘೋಷಿಸಿದ್ದೇ ಅಲ್ಲದೆ 1918ರ ಕರಡು ಸಂವಿಧಾನದಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕನ್ನೂ ನೀಡಲಾಯಿತು. ಅತಿ ಹಳೆಯ ಪ್ರಜಾತಂತ್ರ ಇಂಗ್ಲೆಂಡ್, ಅತಿ ದೊಡ್ಡ ಪ್ರಜಾತಂತ್ರ ಅಮೆರಿಕಾ ಅಥವಾ ಅತ್ಯಂತ ತೀವ್ರವಾದ ವೈಚಾರಿಕ ಸಂವಾದ ಹುಟ್ಟುಹಾಕಿದ ಫ್ರೆಂಚ್ ಜನತಂತ್ರಗಳು ಮಹಿಳೆಯರಿಗೆ ಆ ನಂತರ ಮತದಾನದ ಹಕ್ಕನ್ನು ನೀಡಿದವು ಎಂಬುದನ್ನು ಗಮನಿಸಬೇಕು. ವೇಶ್ಯಾವಾಟಿಕೆಯ ಪಿಡುಗನ್ನು ಸಂಪೂರ್ಣವಾಗಿ ತೊಡೆದು ಹಾಕಿ ಅವರಿಗೆ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡಲಾಯಿತು. 1935ರ ಹೊತ್ತಿಗೆ ಶಿಕ್ಷಣ ಮತ್ತು ಆರೋಗ್ಯ ರಂಗಗಳಲ್ಲಿ ಮೂರನೇ ಎರಡರಷ್ಟು ಹುದ್ದೆಗಳಲ್ಲಿ ಮಹಿಳೆಯರು ಕೆಲಸಮಾಡುತ್ತಿದ್ದರು ಎಂಬುದು ಈ ಘೋಷಣೆಯ ಯತಾರ್ಥತೆಯನ್ನು ತೋರಿಸುತ್ತದೆ.
1929 ಮತ್ತು 1934ರ ಮೊದಲ ಎರಡು ಪಂಚವಾರ್ಷಿಕ ಯೋಜನೆಗಳ ಮುಕ್ತಾಯದ ಕಾಲಕ್ಕೆ ಸೋವಿಯತ್ ಒಕ್ಕೂಟ ಸಂಪೂರ್ಣವಾಗಿ ಅಧುನಿಕ ಕೈಗಾರಿಕಾ ರಾಷ್ಟ್ರವಾಗಿ ಹೊರಹೊಮ್ಮಿತ್ತು. 1938ರಲ್ಲಿ ಭಾರತೀಯ ಕೈಗಾರಿಕೆಗಳ ಸಮಸ್ಯೆಗಳ ಕುರಿತು ಮಾತನಾಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು “(ಪ್ರಥಮ) ಮಹಾಯುದ್ಧಕ್ಕೆ ಮುನ್ನ ರಷ್ಯಾವು ಭಾರತಕ್ಕಿಂತ ಉತ್ತಮವಾಗಿರಲಿಲ್ಲ. ಅದೊಂದು ಕೃಷಿ ಪ್ರಧಾನ ದೇಶವಾಗಿತ್ತು. ಜನಸಂಖ್ಯೆಯ ಸುಮಾರು ಶೇ.70ರಷ್ಟು ಮಂದಿ ರೈತರಾಗಿದ್ದು, ನಮ್ಮ ದೇಶದ ರೈತರಷ್ಟೇ ದಾರಿದ್ರ್ಯದ, ಶೋಚನೀಯ ಪರಿಸ್ಥಿತಿ ಅವರದ್ದಾಗಿತ್ತು. ಕೈಗಾರಿಕೆಗಳು ಹಿಂದುಳಿದಿದ್ದವು, ವಿದ್ಯುಚ್ಛಕ್ತಿ ಒಂದು ಐಷಾರಾಮವಾಗಿತ್ತು. ತನ್ನ ಶಕ್ತಿ ಸಂಪನ್ಮೂಲಗಳ ಬಗ್ಗೆ ತಿಳುವಳಿಕೆ ಇಲ್ಲದ, ತಜ್ಞರು-ತಂತ್ರಜ್ಞರು ಇಲ್ಲದ ಪರಿಸ್ಥಿತಿ ಇತ್ತು. ಆದರೆ ಕೇವರ ಹದಿನಾರು ವರ್ಷಗಳಲ್ಲಿ ಅರೆ ಹೊಟ್ಟೆಯ ರೈತ ಸಮುದಾಯದಿಂದ ಹೊಟ್ಟೆ-ಬಟ್ಟೆಗೆ ಸಾಕಷ್ಟಿರುವ ಕೈಗಾರಿಕಾ ಕಾರ್ಮಿಕ ಸಮುದಾಯವಾಗಿ ಅದು ಬೆಳೆದಿದೆ” ಎಂದು ಹೇಳಿದ್ದರು.
ಕೃಷಿಯನ್ನು ಸಾಮುದಾಯಿಕ ಒಡೆತನಕ್ಕೆ ತಂದು ಆಧುನಿಕರಣಗೊಳಿಸಲಾಯಿತು. ಇದರಿಂದ ಜೀವನದ ಗುಣಮಟ್ಟದಲ್ಲಿ ಕೃಷಿಕರಿಗೂ, ಕೈಗಾರಿಕಾ ಕಾರ್ಮಿಕರಿಗೂ ಹೆಚ್ಚಿನ ಅಂತರವಿರಲಿಲ್ಲ. ಇಂತಹ ಕೃಷಿ ಫಾರ್ಮ್‍ಗಳಲ್ಲಿ ಶಾಲೆ, ಆಸ್ಪತ್ರೆ, ರಂಗಮಂದಿರ, ತರಬೇತಿ ಕೇಂದ್ರ, ಪ್ರಯೋಗಾಲಯ, ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ರೈತರಿಗೆ ಆಧುನಿಕ ತಂತ್ರಜ್ಞಾನದಲ್ಲೂ ತರಬೇತಿ ನೀಡಲಾಗುತ್ತಿತ್ತು. ಯಂತ್ರೋಪಕರಣಗಳ ಬಳಕೆ ಮಾತ್ರವಲ್ಲದೆ ವಿಮಾನಗಳ ಚಾಲನೆಯನ್ನೂ ಈ ರೈತರು ಕಲಿಯಲು ಅವಕಾಶವಿತ್ತು ಎಂಬುದನ್ನು ಅಮೆರಿಕನ್ ಪತ್ರಕರ್ತೆ ಅನ್ನಾ ಲೂಯಿ ಸ್ಟ್ರಾಂಗ್ ದಾಖಲಿಸಿದ್ದಾರೆ.
ಹೀಗೆ ಅಜ್ಞಾನಿಗಳು, ಮದ್ಯವ್ಯಸನಿಗಳಾಗಿದ್ದ ಬಡ ರೈತ-ಕಾರ್ಮಿಕರು ಸುಶಿಕ್ಷಿತ ಆಧುನಿಕ ನಾಗರಿಕರಾಗಿ ಕೆಲವೇ ವರ್ಷಗಳಲ್ಲಿ ಪರಿವರ್ತನೆಯಾಗಿದ್ದಕ್ಕೆ ಸಮಾಜವಾದಿ ವ್ಯವಸ್ಥೆಯೇ ಕಾರಣ. ಇದರಿಂದ ಭಯಗ್ರಸ್ತರಾದ ಯುರೋಪು ಮತ್ತು ಅಮೆರಿಕಾದ ಬಂಡವಾಳಶಾಹಿ ಜನತಂತ್ರಗಳು ತಮ್ಮ ದೇಶದ ಕಾರ್ಮಿಕರಿಗೂ ಅನಿವಾರ್ಯವಾಗಿ ಕೆಲವೊಂದು ಸವಲತ್ತುಗಳನ್ನು ನೀಡಬೇಕಾಯಿತು. ಇಲ್ಲಿಂದ ಜನತಂತ್ರಗಳಲ್ಲಿ ‘ಕಲ್ಯಾಣ ರಾಜ್ಯ’ದ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು.
ಭಾರತವೂ ಸೇರಿದಂತೆ ಜಗತ್ತಿನ ಶೋಷಿತರು, ಮರ್ದಿತರಿಗೆ ರಷ್ಯಾದ ಕ್ರಾಂತಿ ಸ್ಫೂರ್ತಿಯನ್ನು ನೀಡಿತ್ತು. ಭಗತ್ ಸಿಂಗ್, ನೇತಾಜಿಯಂತಹ ಕ್ರಾಂತಿಕಾರಿಗಳು ಭಾರತದಲ್ಲಿ ಸಮಾಜವಾದ ತರಬೇಕೆಂದು ಬಯಸಿದ್ದರು. ಐನ್‍ಸ್ಟೈನ್, ಚಾರ್ಲಿ ಚಾಪ್ಲಿನ್, ರೋಮಾ ರೋಲಾ, ಬರ್ನಾರ್ಡ್ ಶಾ, ಪಾಲ್ ರೋಬ್‍ಸನ್, ನೆರುಡಾ, ಜೆ.ಡಿ.ಬರ್ನಾಲ್ ಮೊದಲಾದ ವಿವಿಧ ಕ್ಷೇತ್ರಗಳ ದಿಗ್ಗಜರು ಸಮಾಜವಾದವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದರು. ಕುವೆಂಪು, ಕಯ್ಯಾರ ಕಿಞ್ಞಣ್ಣ ರೈಯಂತಹ ಕವಿಗಳು ಲೆನಿನ್ ಬಗ್ಗೆ ಪದ್ಯ ಬರೆದರು.
ಆದರೆ 1950ರ ದಶಕದ ನಂತರ ಜಗತ್ತಿನ ಕಮ್ಯುನಿಸ್ಟ್ ಚಳವಳಿಯಲ್ಲಿ ಕಾಣಿಸಿಕೊಂಡ ಗೊಂದಲಗಳು ಮತ್ತು ಸ್ಟಾಲಿನ್ ಅವರ ಮರಣಾನಂತರ ಸೋವಿಯತ್ ಒಕ್ಕೂಟ ಪಾಲಿಸಿದ ಮಾರ್ಕ್ಸ್ವಾದಕ್ಕೆ ವಿರುದ್ಧವಾದ ನೀತಿಗಳು ಅಂತಿಮವಾಗಿ ಅದರ ಪತನಕ್ಕೆ ಕಾರಣವಾಯಿತು. 1991ರಲ್ಲಿ ಸೋವಿಯತ್ ಒಕ್ಕೂಟದಲ್ಲಿ ಪ್ರತಿಕ್ರಾಂತಿಯಾದ ನಂತರ ರಷ್ಯಾದಲ್ಲಿ ಕಾರ್ಮಿಕರ ಪರಿಸ್ಥಿತಿ ಏನಾಗಿದೆ ಎಂಬುದು ಅಂಗೈ ಹುಣ್ಣಿನಂತೆ ನಿಚ್ಚಳವಾಗಿದೆ. 1990ರಲ್ಲಿದ್ದ ಕೈಗಾರಿಕಾ ಉತ್ಪಾದನೆಯ ಮಟ್ಟಕ್ಕೆ ರಷ್ಯಾ ಇನ್ನೂ ತಲಪಿಲ್ಲ. ಪ್ರತಿಕ್ರಾಂತಿಯ ನಂತರ ಸಂಘಟಿತ ವಲಯಗಳಲ್ಲಿ 70ಲಕ್ಷ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಅವರ ಜೀವನಮಟ್ಟ ಕುಸಿಯಿತು. 1991ರಲ್ಲಿ ಸರಾಸರಿ ಜೀವಿತಾವಧಿ ಗಂಡಸರಲ್ಲಿ 74 ಮತ್ತು ಮಹಿಳೆಯರಲ್ಲಿ 64 ವರ್ಷವಿದ್ದರೆ, 1994ರಲ್ಲಿ ಅದು ಗಂಡಸರಲ್ಲಿ 71ವರ್ಷ ಮತ್ತು ಮಹಿಳೆಯರಲ್ಲಿ 57ವರ್ಷಕ್ಕೆ ಕುಸಿಯಿತು. ಇಡೀ ದೇಶದ ಆಡಳಿತದ ನಿಯಂತ್ರಕವಾಗಿದ್ದ ಕಾರ್ಮಿಕ ವರ್ಗ ಇಂದು ಸಮಯಕ್ಕೆ ಸರಿಯಾಗಿ ಸಂಬಳ ಸಿಗದೆ ಮುಷ್ಕರ ಹೂಡಬೇಕಾಗಿ ಬಂದಿದೆ. 2002ರಲ್ಲಿ ಕಾರ್ಮಿಕ ಮುಷ್ಕರಗಳನ್ನು ತಡೆಯಲು ಹೊಸ ಕಾಯಿದೆಯನ್ನೂ ಜಾರಿಗೆ ತರಲಾಯಿತು. ಸ್ವತಂತ್ರ ಕಾರ್ಮಿಕ ಸಂಘಗಳನ್ನು ಕಟ್ಟುವ ಹಕ್ಕನ್ನು, ಮುಷ್ಕರ ಮಾಡುವುದನ್ನು ಕಾನೂನುಬಾಹಿರಗೊಳಿಸಲಾಗಿದೆ. ಹಾಗಿದ್ದೂ ಜೀವನದ ಪರಿಸ್ಥಿತಿಗಳು ಕಾರ್ಮಿಕರನ್ನು ಮುಷ್ಕರದತ್ತ ತಳ್ಳುತ್ತವೆ. 2010ರಲ್ಲಿ ನಡೆದ ಮುಷ್ಕರಗಳಲ್ಲಿ ಶೇ.91ರಷ್ಟು ಕಾನೂನುಬಾಹಿರವಾಗಿದ್ದವು. ರಷ್ಯಾದ ಕಾರ್ಮಿಕರು ಮತ್ತೆ ಲೆನಿನ್-ಸ್ಟಾಲಿನರ ಭಾವಚಿತ್ರಗಳೊಂದಿಗೆ ಹೋರಾಟಗಳಿಗೆ ಧುಮುಕಿದ್ದಾರೆ.
ಜಾಗತಿಕವಾಗಿ ಕೂಡ ಬಂಡವಾಳಶಾಹಿ ದೇಶಗಳು ‘ಕಲ್ಯಾಣ ರಾಜ್ಯ’ ಪರಿಕಲ್ಪನೆಯನ್ನು ಕೈಬಿಟ್ಟಿವೆ. ಉದಾರೀಕರಣ-ಖಾಸಗೀಕರಣವೇ ಸರ್ಕಾರಗಳ ಮಂತ್ರವಾಗಿವೆ. ಎಂಟು ಗಂಟೆ ದುಡಿತದ ಅವಧಿ ಎಂಬುದು ಕೇವಲ ಕಾನೂನು ಪುಸ್ತಕದ ಬದನೆಕಾಯಿಯಾಗಿದೆ. ಗುತ್ತಿಗೆ ನೌಕರಿ ಮಾಮೂಲಾಗಿದೆ. ಶಿಕ್ಷಣ, ಆರೋಗ್ಯಗಳು ಕೊಳ್ಳುವ ಸರಕುಗಳಾಗಿ ಬಡವರಿಗೆ ಗಗನಕುಸುಮಗಳಾಗಿವೆ. ಆರ್ಥಿಕ ಕುಸಿತ ಮತ್ತು ಉದ್ಯೋಗನಾಶ ಸಾರ್ವತ್ರಿಕಗೊಂಡಿದೆ. ಕಾರ್ಮಿಕರ ಹಕ್ಕುಗಳ ಹನನ ನಡೆಯುತ್ತಿದೆ.
ಜಗತ್ತಿನ ಪ್ರಪ್ರಥಮ ಸಮಾಜವಾದಿ ವ್ಯವಸ್ಥೆಯ ಸಾಧನೆಗಳು ಮತ್ತು ಅದರ ಪತನದ ನಂತರ ಜಾಗತಿಕವಾಗಿ ಕಾರ್ಮಿಕರ ದುಸ್ಥಿತಿಗಳನ್ನು ಅವಲೋಕಿಸಿದರೆ ನಾವು ಸೂಕ್ತ ಪಾಠಗಳನ್ನು ಕಲಿಯಬಹುದು.
 - ಬಿ.ರವಿ
(ಕೃಪೆ - ಆಂದೋಲನ ಪತ್ರಿಕೆ, ಮೈಸೂರು)

ಕಾಮೆಂಟ್‌ಗಳಿಲ್ಲ: