Pages

ಅನುಭವ - ನರಸೀಪುರದೆಡೆಗೆ ಬಸ್ಸಾಯಣ...


ಬೆಳಂಬೆಳಿಗ್ಗೆ 6.30ಕ್ಕೆ ಜಂಗಮವಾಣಿ ಒಂದೇ ಸಮನೆ ಉಲಿಯಲಾರಂಬಿಸಿತು. ಪತಿ ಹಾಗೂ ನನ್ನ ಶೈಕ್ಷಣಿಕ ಕೂಸು ಗುರುವಿನೊಂದಿಗೆ ಕಪ್ಪು ಚಾ ಆಸ್ವಧಿಸುವ ಸಮಯವದು. ಇದ್ಯಾರಿದು? ಎನ್ನುತ್ತಲೇ ಜಂಗಮವಾಣಿಯ ಲಯಬದ್ದ ರಿಂಗಣಿಸುವೆಕೆ ಕೇಳುತ್ತಾ, ಅದರ ಬೆಳಕಿನಾಟ ನೋಡುತ್ತಲೇ ಅಚ್ಚರಿಯಿಂದ ನನ್ನ ಪ್ರೀತಿಯ ಶೈಕ್ಷಣಿಕ ಕೂಸು ಮಹೇಂದ್ರನ ಕರೆ ಸ್ವೀಕರಿಸಿದೆ.

ಅವ ಮಾತಿಗೆ ಮೊದಲೇ ಕ್ಷಮೆ ಯೋಚಿಸುತ್ತಾ ಮಂಡ್ಯದಿಂದ ಆತುರಾತುರವಾಗಿ ಹೊರ್ಟಬಿಟ್ವಿ' ಸಂತೆ ಮರ ಹಳ್ಳಿ' ಗೆ ಅಂದ!. ಇದೇನಿದು!? ಮನೆ ಬಿಟ್ಟು ದಿಕ್ಕು ದೆಸೆ ಇಲ್ದವರು ಓಡೋದಂಗೆ ಹೋಗ್ತಿದ್ದಾರಲ್ಲಾ !ಅನ್ಸಿದ್ರೂ, ವಿಷಯ ಗ್ರಹಿಸ್ದೆ. ನಿತ್ಯ ಬಸ್ಸಿನ ನಿರಂತರ ಓಡಾಟದಿಂದ ಮುಕ್ತಿ ಪಡೆಯಲು ಈ ತರಾತುರಿಯ ಹೊರಡುವಿಕೆ ಅಂತ!.
ಸರಿ ಮಾರಾಯ ಮೊದಲೇ ಹೇಳಿದ್ರೆ ನಾನು ಬರ್ತಿದ್ನಲ್ಲೋ ಇಂದು ನಿರ್ಬಂಧಿತ ರೆಜೆ ಹಾಕಿದ್ದೆ ಅಂದೇ. ಅವ್ನು ಹಿಂದೂ ಮುಂದು ನೋಡ್ದೇ ಬಂದ್ಬಿಡಿ ಮತ್ತೆ ಅಂದ!. ಮಗನ ಬೇಡಿಕೆ ಬಿಡಲಾದೀತೇ? ಹೊರಟೇಬಿಟ್ಟೆ. 10.15ಕ್ಕೆ ನನ್ನ ಮಗ 'ವರು' ದ್ವಿಚಕ್ರ ವಾಹನದಲ್ಲೇರಿಸಿಕೊಂಡು ಬಸ್ಸ ನಿಲ್ದಾಣಕ್ಕೆ ಬಿಟ್ಟು ಹೊರಟ.
ಟಿ ನರಸೀಪುರಕ್ಕೆ ಬಸ್ಸಿನಲ್ಲಿ ನನ್ನ ಮೊದಲ ಪ್ರಯಾಣವಿದು ಏನೋ ಗಲಿಗಲಿ. ಅಲ್ಲಿ ನಿಂತ ಬಸ್ಸು ನಿರ್ವಾಹಕರನ್ನು ಕೇಳಿದೆ ಟಿ ನರಸೀಪುರಕ್ಕೆ ತಡೆ ರಹಿತ/ಸೀಮಿತ ನಿಲುಗಡೆಯ ಬಸ್ಸುಗಳುಂಟೇ? ಅವರುಗಳು ಪ್ರಾಣಿ ನೋಡಿದಂತೆ ನೋಡಿದ್ರು!?. ಇಲ್ಲಿಂದ ಈಗ ಅಲ್ಲಿಗೆ ಎಲ್ಲವೂ 'ಕೈ ತೋರಿದಲ್ಲಿ ನಿಲ್ಲುವ ವಾಹನಗಳೇ' ಮೇಡಂ!. ಏನೋ ಕಳ್ಕೊಂಡ್ಹಾಗೆ ಹೌದಾ...! ರಾಗ ಎಳೆಯುತ್ತಾ ಎಷ್ಟೋತ್ತಿಗೆ ತಲುಪುತ್ತೆ? ನನ್ನ ಈ ಮತ್ತೊಂದು ಪ್ರಶ್ನೆಗೆ ಒಬ್ಬ ನಿರ್ವಾಹಕರು ಕಂಡೂ ಕಾಣದಂತೆ ನಗುತ್ತಾ 'ನಾವೇ ಬರೋದು!(ಮಹಾರಾಜರ ವಂಶಸ್ಥರಂತೆ ಅವರನ್ನವರು ಗೌರವಿಸಿಕೊಳ್ಳುತ್ತಾ!) ಅದೇ ನಮ್ಮ ರಥ ಹೋಗಿ ಮೇಡಂ ಬೇಗ ಹತ್ಕೊಳ್ಳಿ! ಇನ್ನೇನ್ ಬಂದ್ಬಿಟ್ವಿ! ಹನ್ನೆರಡುವರೇಗೆಲ್ಲಾ ಅಲ್ಲಿರ್ತೀವಿ! ಅಂದ್ರು. ಅಯ್ಯಪ್ಪಾ! ಸುಮಾರು ನಲವತ್ತು ಕಿ ಮೀ ದೂರ ಹೋಗೋಕೆ ಹೆಚ್ಚು ಕಮ್ಮಿ ಎರಡು ಕಾಲು ಗಂಟೇನಾ! ಮುಖ ಬಾಡೋಯ್ತು. 
ಅಲ್ಲಿದ್ದ ಬಸ್ಸ ಚಾಲಕರೊಬ್ಬರು ನನ್ನ ಮುಖ ಓದಿದವರಂತೆ ಬಹಳ ಆಪ್ತವಾಗಿ ಮೇಡಂ ಮೈಸೂರಿನ ಮೂಲಕ ಕೂಡ ಹೋಗಬಹುದು ಅಲ್ಲಿ ನೀವು ಕೇಳಿದಂತೆ ಬಸ್ಸುಗಳು ಇರ್ತಾವೆ ಆದರೆ ಇಷ್ಟೇ ಸಮಯ ಆಗುತ್ತೆ ಮತ್ತೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂಗೆ ಆಗುತ್ತೆ ಸುಮ್ನೆ ಅಷ್ಟೆಲ್ಲಾ ಸುತ್ತಾಟ ಯಾಕೆ ಬನ್ನಿ ಹತ್ತಿ ಅಂದ್ರು. ಪ್ರೀತಿಯ ಅಪ್ಪಣೆ ಮೀರುವುದುಂಟೇ ಏರಿಯೇಬಿಟ್ಟೆ ಕೆಂಪು ಬಸ್ಸು. ಒಳಗೆ ಅಲ್ಲಿ ಇಲ್ಲಿ ಸೀಟಿಗೊಂದರಂತೆ ಆಳಿದ್ರು. ಮೂರು ಜನ ಕೂರುವ ಸೀಟಿನಲ್ಲಿ ಬಾಗಿಲ ಎದುರಿಗಿದ್ದ ಆಸನದಲ್ಲಿ ಚಂದದ ಹುಡುಗಿಯೊಬ್ಬಳಿಗೆ ಮುಗುಳುನೆಗೆ ಬೀರುತ್ತಾ ಬರುವರೇ ಎನ್ನುತ್ತಲೇ ಧಸಕ್ಕನೆ ಕುಳಿತೆ. ಇಲ್ಲ ಎಂದು ನಕ್ಕಳು ನಾ ನಗಲಿಲ್ಲ. ಕಾರಿನ ಸೀಟಿನಲ್ಲಿ ಕೂರುವುದು ಅಭ್ಯಾಸವಾಗಿದ್ದುದ್ದು ಇತ್ತೀಚಿನ ವರ್ಷಗಳದ್ದಾದರೂ ವರ್ಷಗಳಿಂದೆಂಬಂತೆ ಒಗ್ಗಿ ಹೋಗಿತ್ತು. ಅದಕ್ಕೆ ಕುಕ್ಕರಿಸಿದಂತೆ ಕುಳಿತು ಸೀಟಿಗೆ ಬಡಿದುಕೊಂಡಿದ್ದೆ ನಚ್ಚಗಾಗಿತ್ತು!!!.
  ಆರಂಭವಾಗಿತ್ತು ನಿಲುಗಡೆ ಬಸ್ಸಿನಲ್ಲಿ ನಿರಂತರ ಪಯಣ. ಕುಲುಕುತ್ತಾ , ನಲಿಯುತ್ತಾ , ಬಳುಕುತ್ತಾ ಹೊರಟ ಬಸ್ಸು ಬರುಬರುತ್ತಾ ಪ್ರಯಾಣಿಕರಿಂದ ತುಂಬಿಕೊಳ್ಳುತ್ತಾ ಗಜ ಗಾಂಭೀರ್ಯದಿಂದ 'ನಿದಾನ ಪ್ರಧಾನ' ಎಂಬಂತೆ ಚಲಿಸಲುಧ್ಯುಕ್ತವಾದದ್ದು ಕಂಡು ಕಂಗಾಲಾದೆ. ಗಾಬರಿಗೆ ನಾ ಓಡಾಡುತ್ತಿದ್ದ ಏರಿಯಾಗಳ ಗುರುತೇ ಸಿಗದಂತಾಯ್ತು!. ನಿರ್ವಾಹಕರು ಕೆಲವು ಪ್ರಯಣಿಕರ ಉಭಯ ಕುಶಲೋಪರಿ ವಿಚಾರಿಸುತ್ತಲೇ ಬಳಿ ಸಾರಿ ಎಲ್ಲಿಗೆ ಮೇಡಂ ಎಂದು ಕೇಳಿದರು ಪರಿಚಯದ ನೆಗೆ ಬೀರುತ್ತಾ!. ನಾನು ಪೆದ್ದು ಪೆದ್ದಾಗಿ ವಿಚಾರಿಸಿದ ಮಾತ್ರಕ್ಕೆ ಇಷ್ಟೋಂದು ಪರಿಚಯದ ನಡವಳಿಕೆಯೇ?! ಎಂದಚ್ಚರಿಗೊಳ್ಳುತ್ತಾ ಮೆಲು ದನಿಯಲ್ಲಿ ಗಿಜಿಗುಟ್ಟುವ ಬಸ್ಸಿನಲ್ಲಿ ಟಿ ನರಸೀಪುರಕ್ಕೆ ಒಂದು ಟಿಕೀಟು ಎನ್ನುತ್ತಾ ನೂರರ ನೋಟು ಚಾಚಿದೆ. ಕೊಡದೇ ಹೋದರೆ ಎಂಬಂತೆ ಎರಡು ಬೆರಳುಗಳಿಂದ ನನ್ನ ಕೈಯಿಂದ ಸರಕ್ಕನೆ ಎಳೆದುಕೊಂಡ ನೊಟನ್ನು ಪುಣ್ಯಾತ್ಮ!. ಚೀಟಿ ಹರಿದು ಅದರ್ಹಿಂದೆ ವೈಧ್ಯರ ಸಹಿಯಂತೆ ಗೀಚಿ ಕೈಗಿತ್ತರು. ನೋಡಿದೆ ಪದೇ ಪದೇ ನೋಡಿದೆ!. ದರ ಅರವತ್ತಾರು!? ಅಲ್ಲಾ ಕೇವಲ ನಲವತ್ತಾರು ಕಿ. ಮೀ ಸಾಗಲು ಅದೂ ಕೈದೋರಿದಲ್ಲಿ ನಿಲ್ಲುವ ಸರ್ಕಾರಿ ಬಸ್ಸಿನಲ್ಲಿ ಇಷ್ಟೋಂದು ದರವೇ!?!. ಏನೋ ತಪ್ಪಾಗಿದೆ ಎಂದು ಮನ ಹೇಳ ಹತ್ತಿತು ಸಾಮಾನ್ಯ ಜ್ಞಾನ ಬಾವುಟ ಹಾರಿಸಿ ಬಿಟ್ಟಿತ್ತು!!!.
  ಕೇಳುವ ಎಂದು ನಿರ್ವಾಹಕರ ಮುಖ ನೋಡಿದೆ ಅವರು ನನ್ನ ಪಕ್ಕದವರನ್ನ ಬಿಟ್ಟು ಅವರ ಪಕ್ಕದವರನ್ನ ಕೇಳ ಹತ್ತಿದ್ರು. ನನ್ನ ಪಕ್ಕದ ಹುಡುಗಿ ಗೊಂದಲಗೊಂಡಂತೆ ಅವಳ ಊರಿಗೆ ಟಿಕೀಟು ಕೇಳಿದ್ಲು ಅಯ್ಯೋ! ನಿಮಗೂ ಸೇರಿಸಿ ಇವರಿಗೆ ಕೊಟ್ಬಿಟ್ನಲ್ಲಾ ಅಂದ್ರು!?. ಇದೊಳ್ಳೆ ಕಥೆ ಆಯ್ತಲ್ಲಾ ಅಂತ ಬೆಸ್ತುಬಿದ್ದು ಮುಖ ನೋಡಿದೆ. ನಿರ್ವಾಹಕರು ಇರಲಿ ಬಿಡಿ ಮೇಡಂ! ಇದು ಮೊದಲ ನಿಲುಗಡೆ ಅಲ್ವಾ ನಾನ್ ಸರಿ ಮಾಡ್ತೀನಿ! ನೀವೇನ್ ಯೋಚ್ನೆ ಮಾಡ್ಬೇಡಿ ಅಂದ್ರು. ಆತ ಹೇಳಿದ ರೀತಿ ಹೇಗಿತ್ತು ಅಂದ್ರೆ ಏನೋ ನಾನೇ ಸರಿಯಾಗಿ ಹೇಳದೇ ತಪ್ಪು ಮಾಡಿ ರಶೀದಿ ಹರಿಸಿರುವಂತೆ. ಮೆಲು ದನಿಯಲ್ಲಿ ನಾನು ಒಂದು ಎಂದು ಹೇಳಿದೆ ಎಂದೆ!. ಆತ ದೊಡ್ಡದಾಗಿ ನಗುತ್ತಾ, ತನ್ನ ತಪ್ಪು ಮುಚ್ಚಿಕೊಳ್ಳುತ್ತಾ ' ಏನಾಗೊಲ್ಲ ಬಿಡಿ! ಹೀಗೆಲ್ಲಾ ಆಗುತ್ತೆ! ಅಂತ ಸಮಾಧಾನ ಮಾಡಿದ್ರು. ಒಳ್ಳೆ ತಪ್ಪು ಮಾಡದೇ ಇದ್ರೂ ಗಾಬರಿಯಾದ ಮಗುವನ್ನ ರಮಿಸಿದಂತೆ!?.
  ಬಸ್ಸು ಉಳ್ಳಾಡುತ್ತಾ, ಅಲ್ಲಲ್ಲೇ ನಿಲ್ಲುತ್ತಾ, ಜಾಗವಿಲ್ಲದಿದ್ರೂ ಒಳಗೆ ತೂರುತ್ತಿದ್ದ ಜನರನ್ನು ಉದರದೊಳಗೆ ತುರುಕಿಸಿಕೊಳ್ಳುತ್ತಾ
'ಭೂಮಿಯ ಭರಿಸುವ ಸಾಮರ್ಥ್ಯ ಮೀರಿದರೂ ತಡೆದುಕೊಳ್ಳುತ್ತಿಲ್ಲವೇ!?' ಹಾಗೆ ತುಂಬಿದ ಬಸುರಿಯಂತೆ ಸಂವೃದ್ಧಿಯ ಸಂಕೇತವಾಗಿತ್ತು. ಆಗಲೇ ಮುಂದಿನ ಸೀಟಿನಲ್ಲಿದ್ದ ಹೆಣ್ಣು ಮಗಳು ಅಣ್ಣ ಒಂದು ಟಿ ನರಸೀಪುರಕ್ಕೆ ಅಂದ್ಲು ಸ್ಪಷ್ಟವಾಗಿ. ಹಾ! ಸಿಕ್ಕಿಬಿಟ್ಟಿತು ನಿಧಿ! ನಿರ್ವಾಹಕರ ಮುಖ ಅರಳಿ ಹೋಯ್ತು. ನೋಡಿದ್ರಾ! ನಾ ಏನ್ ಹೇಳಿದ್ದೆ!? ನೋಡಿ ಅಡ್ಜಸ್ಟ ಆಗೋಯ್ತು ಅಂದ್ರು!? ತನ್ನ ಭವಿಷ್ಯ ಗೊತ್ತಿರದ ಜ್ಯೋತಿಷಿ ಘೋಷಿಸುವಂತೆ!?!. ನನ್ನ ತೋರಿಸಿ, ಅವ್ರಗೆ ಎರಡು ಟಿಕೀಟ್ ಕೊಟ್ಟಿದ್ದೀನಿ ಆಮೇಲೆ ಚಿಲ್ಲರೆ ಕೊಡ್ತೀನಿ ಅಂತ ಮುಂದೋದ್ರು. ಆ ಹೆಣ್ಣು ಮಗಳು ಕಣ್ಣಲ್ಲೇ ಸನ್ನೆ ಮಾಡಿ ಕೊಟ್ಟಿದ್ದಾರ ಅಂತ ಕೇಳಿದ್ರು ನಾನು ಪೆಚ್ಚಾಗಿ ನಗಲಾರದಂತೆ ನಕ್ಕೆ. ಮಾಹಿತಿ ಸಂವಹನ ಪಾಠ ಮಾಡುವ ನಾನು ಸೋತಿದ್ದೆ!?!.
ಬಸ್ಸು ಎಲ್ಲರನ್ನೂ ಎಳೆಯುತ್ತಾ , ಉರುಳುತ್ತಾ ನಿಧಾನವಾಗಿ ಚಲಿಸುತ್ತಿದ್ದರೂ ನನ್ನ ಮನ ಮಾತ್ರ ಎಲ್ಲೆಲ್ಲೋ ಶರವೇಗದಲ್ಲಿ ಓಡಾಡ್ತಾ ದಿಕ್ಕು ದೆಸೆ ಕಳ್ಕೊಂಡಿತ್ತು!?. ಹಳ್ಳಿಗರು ಅವರ ಕಥೆಗಳನ್ನ ಬೇರೆಯವರ ಕಿವಿಗೆ ಅಪ್ಪಳಿಸುವಂತೆ ಬಸ್ಸಿನ ಶಬ್ದಕ್ಕಿಂತಲೂ ಜೋರಾಗಿ ಅರಚುತ್ತಿದ್ದರು!!!. ಅಲ್ಲಿ ರಾಮಾಯಣ, ಮಹಾಭಾರತ , ನೋವಿತ್ತು , ನಲಿವಿತ್ತು , ಕಾಲೇಜು ಲಲನೆಯರ ಕಿಲಕಿಲ ನಗೆ , ಚಿಗುರು ಮೀಸೆ ಹೊತ್ತ ಗಂಡ್ಹೈಳ್ಳ ಕೀಟಲೆಗಳೆಲ್ಲವೂ ಇತ್ತು. ಪ್ರಯಾಣದಲ್ಲಿ ಸದಾ ಮುಖಕ್ಕೆ ಪುಸ್ತಕ ಹಿಡಿವ ನಾನು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾ ಬಿಟ್ಟ ಕಣ್ಣು ಬಿಟ್ಟಂತೆ ಕುಳಿತೆ. ತರಗತಿಯ ಸಿದ್ಧಾಂತದ ಪಾಠಕ್ಕೂ ಇಲ್ಲಿನ ಜೀವನ ದರ್ಶನಕ್ಕೂ ಎಷ್ಟೋಂದು ಅಂತರ! ಬೆರಗಿನಿಂದ ನೋಡ ಹತ್ತಿದೆ.
  ಅಷ್ಟರಲ್ಲೇ ಕಿಟಕಿ ಹಾಕಿ ಕುಳಿತ ಅದರೊಡತಿಗೆ ತೆಗಿಯವ್ವ ಅಂತ ಮನವಿ ಮಾಡಿದೆ. 'ಅವ್ವ ಗಾಳಿ ಶಾನೆ ಬೀಸ್ತದೆ ' ಅಂದ್ರು. ತೆಗೀದಿದ್ರೆ ನಾ ತಿಂದದ್ದೆಲ್ಲಾ ಆಚೆ ಹಾಕ್ಬಿಡ್ತೀನಿ ಅಂದೆ. ಬಿನ್ ಲಾಡೆನ್ ಪೆಂಟಾಗನ್ ಹೊಡೆದುರುಳಿಸ್ತೀನಿ ಅಂದಂಗೆ!?. ' ಅಯ್ಯಾ ತಗವ್ವ ತಾಯಿ' ಅಂತ ಒಂಚೂರು ತೆಗದ್ರು. ಉಫ್ ನಮ್ಮವ್ವ ತಣ್ಗಿರು ಅಂದೆ ಮನದಾಗೆ. ಅದೆಲ್ಲೆಲ್ಲಿದ ಬರ್ತಿತ್ತೋ ಕಾಣೆ!? ಅದೇನು ಬೆವರೋ , ದೇಹ ಓದುತ್ತಿದ್ದ ಪೀಪಿಯೋ!? ಉಸಿರು ಕಟ್ತಿತ್ತು. ಕೋಪ , ಬೇಸರ ಎರಡೂ ಆಯ್ತು. ಅದೇನ್ ಜನಾನೋ ಅಂದ್ಕೊಂಡೆ!?. ಅಷ್ಟರಲ್ಲೇ ಪಕ್ಕದ ದ್ವಿ ಆಸನದಲ್ಲಿದ್ದ ಹಿರಿಯರು ಮುಂದಿನ ಆಸನದಲ್ಲಿದ್ದವರಿಗೆ ಕೂಗಿ ಹೇಳಿದ್ರು " ಗದ್ದೆ ಕಡೀಂದ ಇಂಗೇ ಬಂದ್ಬುಟ್ಟೆ ಕನವ್ವ , ನಮ್ಮ ಚಿಕ್ಕವ್ನ ಮಗಳ ಗಂಡನ ಮಾವನವ ಶವಕ್ಕೆ ಓಗ್ಬೇಕು" . ಹಳ್ಳಿಗರ ಕಮಟು ವಾಸನೆಗೆ ಕಾರಣ ಹೊಳೆದ್ಹೋಯ್ತು!. ಆದ್ರೆ ಮನ ಮುದುಡಿ ತುಲನೆಗೆ ಬಿತ್ತು!?. ಹತ್ತಿರದ ಸಂಬಂಧಿಕರು ವಿಧಿವಶರಾದ ಸುದ್ದಿ ಬಂದ್ರೂ ಕಾರಣ ಮುಂದಿಟ್ಟು ಮುಖ ನೋಡಲು ಹೋಗದೇ ಅನುಕೂಲವಾದಾಗ ಹೋಗುವ  ಅನುಕೂಲ ಸಿಂಧು ಸ್ವಭಾವದ ನಮ್ಮಂಥವರ ಮುಂದೆ ಆ ಹಿರಿಯ ಜೀವ ಬೃಹತ್ತಾಗಿ ಬೆಳೆದಂತೆ ಕಂಡು ಕುಬ್ಜಳಾದೆ!?.
   ಅಂತೂ ಇಂತು ಟಿ... ನರಸೀಪುರ ತಲುಪಿದೆ. ಅಲ್ಲಿಂದ ' ಸಂತೇ ಮರ ಹಳ್ಳಿ'ಗೆ ಹೋಗಬೇಕಿತ್ತು. ಇಳಿದು ಎತ್ತ ಹೋಗುವುದೆಂದು ನೋಡುತ್ತಾ ನಿಂತೆ. ಅದು ಸರ್ಕಾರಿ ಹಾಗೂ ಸಾವಕಾರಿ ಬಸ್ಸುಗಳ ಸಹಕಾರದ ಸಂಗಮದಂತಿತ್ತು. ಬಸ್ಸುಗಳು ರೊಯ್ಯನೆ ಬರುತ್ತಿದ್ದರೂ ಪೈಪೋಟಿ ಇದ್ದರೂ ತೊಂದರೆ ಆಗದಂತೆ ಚಲಿಸುತ್ತಿದ್ದವು. ಆಂಗ್ಲ ಭಾಷಾ ಸಿನಿಮಾಗಳಲ್ಲಿ ಬಾಹ್ಯಾಕಾಶದಲ್ಲಿ ಹಾರುವ ತಟ್ಟೆಗಳು ಡಿಕ್ಕಿ ಹೊಡೆಯುವಂತೆ ಬಂದರೂ ಸರಕ್ಕನೆ ಹಾರಿ ಹೋಗುವಂತೆ ಚತುರತೆಯಿಂದ ಚುರುಕಾಗಿ ಚಲಿಸುತ್ತಿದ್ದುದ ಅಚ್ಚರಿಯಿಂದ ನೋಡುತ್ತಾ ಮೈ ಮರೆತೆ.
  ಮೇಡಂ, ಜಾಮರಾಜ ನಗರಕ್ಕೆ ಹೋಗುವ ಬಸ್ಸ್ ಎಲ್ಲಿ ಬರುತ್ತೆ,? ಅಂತ ಹಿಂದಿನಿಂದ ಹೆಣ್ಣುಮಗಳು ಕೇಳಿದ್ರು. ನಿರ್ವಾಹಕರ ದೆಸೆಯಿಂದ ಒಂದೇ ಟಿಕೀಟಿನಲ್ಲಿ ಪ್ರಯಾಣಿಸಿದ್ದ ಹೆಣ್ಣುಮಗಳು. ನಾನೇ ಏನೂ ಗೊತ್ತಿಲ್ಲದೆ ಅಬ್ಬೇಪ್ಪಾರಿ ನಿಂತಂಗೆ ನಿಂತಿದ್ದೀನಿ ಈಯಮ್ಮ ನನ್ನ ಕೇಳ್ತಾರಲ್ಲ ಅಂತ ಒಳಗೊಳಗೆ ನಕ್ಕೆ!?. ತಕ್ಷಣ ನನ್ನಲ್ಲಿನ ನಾಯಕಿ ಜಾಗೃತವಾಗಿ ಬಿಟ್ಲು!. ಬಹಳ ತಿಳಿದವಳಂತೆ ಬಿನ್ನಿ ಕೇಳುವ ಎಂದು ಪಾದರಸದಂತೆ ಹೊರಟೆ.
ಅಲ್ಲಿ ಇಬ್ಬರು ನಿರ್ವಾಹಕರು ಜೋರು ಧ್ವನಿಯಲ್ಲಿ ಮಾತಾಡ್ತಿದ್ರು. ನಾನೆಂಥ ತಿಕ್ಕಲು ಅಂದ್ರೆ, ಹೋಗಿ ಅವ್ರ ಮುಂದೆ ನಿಂತು ಸರ್ ಸಂತೆ ಮರ ಹಳ್ಳಿಗೆ ಹೋಗುವ ಬಸ್ಸ್ ಯಾವ ಕಡೆ ಬರುತ್ತೆ ಅಂತ ಕೇಳ್ದೆ!?. ನನ್ನ ಹಿಂದೆ ಹಿಂಬಾಲಕಿ ಇದ್ರಲ್ಲಾ ಒಂಥರಾ ಗತ್ತು!. ಆದ್ರೂ ಒಳಗೊಳಗೆ ಅಳುಕು ಅವರಿರೋ ಸ್ಥಿತೀಲಿ ಏನಂತಾರೋ ಅಂತ. ಯಾಕೇಂದ್ರೆ ಇಬ್ಬರ ಮಾತುಕತೆಯಲ್ಲಿ ಕಾವು ಜೋರಾಗೆ ಇತ್ತು!. 
  ಅವ್ರು ಗಲಿಬಲಿಯಾದ್ರು, ಆದ್ರೂ ಇಬ್ಬರೂ ನಿಂತಿದ್ದ ಬಸ್ಸ್ ಬಳಸಿಕೊಂಡು ಬಂದು, ನೋಡಿ ಮೇಡಂ ಅಲ್ಲಿ ಆ ಕಂಬ ಇದ್ಯಲ್ಲಾ ಅಲ್ಲೇ ನಿಂತ್ಕಳಿ ಅಲ್ಲಗೇ ಬಂದು ತುಂಬಿಸ್ಕಂಡ ಹೋಯ್ತಾವೆ! ಅಂದ್ರು. ನಾವೇನ್ ಪ್ರಾಣಿಗಳಾ? ತುಂಬಿಸ್ಕಳಕ್ಕೆ ಅಂತ ಪ್ರಶ್ನೆ ಕಾಡ್ತು ಆದ್ರೆ ಆ ಸ್ಥಿತಿಯಲ್ಲೂ ಸಹಾಯ ಮಾಡಿದ ಅವರ ಸಮಯ ಪ್ರಜ್ಞೆಗೆ ವಂದಿಸಿ ನನ್ನ ಹಿಂಬಾಲಕಿಯೊಂದಿಗೆ ಕಂಬದೆದುರು ಕಂಬವಾದೆ!.
  ಐದು ನಿಮಿಷ ಆಯ್ತು ತರ್ಕ ವಿತರ್ಕ ಆರಂಭ ಆಯ್ತು. ಅಕಸ್ಮಾತ್ ಬಸ್ಸ್ ಬೇರೆ ಕಡೆ ನಿಂತು ಹಂಗೇ ಹೋಗ್ಬಿಟ್ರೆ ಅಥವಾ ಮಾತಿನ ಬಿರುಸಿನಲ್ಲಿ ಅವರು ಸರಿಯಾಗಿ ಹೇಳಿಲ್ದಿದ್ರೆ ಅಂತ ಏನೋ ಅಸ್ಥಿರ ಭಾವ ಕಾಡೋಕೆ ಆರಂಭ ಆಯ್ತು. ತಥ್ ಹಾಳಾದ್ ಅನುಮಾನವೇ ಅಂತ ತಲೆ ಕೊಡವಿ ನಿಂತೆ. ಆದ್ರೆ ಅದು ಗುಂಗಿ ಹುಳ ಕೊರ್ದಂಗೆ ಕೊರೆಯೋದು ತಡ್ಕೊಳ್ಳೊಕೆ ಆಗ್ಲಿಲ್ಲ ಸರಿ  ಒಂದೇ ಪ್ರಶ್ನೆ ಅಕ್ಕ ಪಕ್ಕದವರಿಗೆ ಕೇಳೋಕೆ ಮೊದಲು ಮಾಡಿದೆ!. ಎಲ್ಲಾ ಅದದೇ ಉತ್ತರ ಹೇಳ್ತಿದ್ರು. ನಿಧಾನ ಪ್ರಧಾನ ಎಂದು ತತ್ವ ಹೇಳುವ ನಾನು  ಐದು ನಿಮಿಷದಲ್ಲಿ ತಾಳ್ಮೆ ಕಳೆದುಕೊಂಡಿದ್ದೆ ಹುಚ್ಚು ಅನುಮಾನಗಳಿಂದಾಗಿ.
ಆಗ ನನ್ನ ಗಾಬರಿ ಗಮನಿಸಿದ ದಪ್ಪ ಮೀಸೆಯ ಆಸಾಮಿಗೆ ಇದು ಹೊಸ ಪೂಜಾರಿ ಅಂತ ಗೊತ್ತಾಗಿರ್ಬೇಕು! ಸುಮ್ಕಿರವ್ವಾ ಇಲ್ಲಿಗೇ ಬತ್ತದೆ ಕನಾ! ಅದ್ಯಾಕಾಪಾಟಿ ಕೇಳ್ತೀವ್ರಲ್ಲಾ ಅಂದ್ರು!. ಅದೇನ್ ಸಮಾಧಾನ ಮಾಡಿದ್ರೋ ಆಡ್ಕಂಡ್ರೋ ಗೊತ್ತಾಗ್ಲಿಲ್ಲ ನನ್ನ ತವಕದಲ್ಲಿ ಅದು ಸಹ್ಯವಾಗಿರಲಿಲ್ಲ!. ಆಗ್ಲೇ ಜೆಟ್ ವಿಮಾನ ರನ್ವೇನಲ್ಲಿ ನುಗ್ಗಿದಂಗೆ MPK ಬಸ್ಸು ಜರ್ರಂತ ಗಪ್ಪನೆ ನಿಲ್ತು. ಇದೇಯಾ ಬಂತು ನೋಡ್ರಿ ಓಡ್ರಿ ಅಂದ್ರು ಮೀಸೆ ಮಾಮ. ನಾನು ಒಂದು ಹೆಜ್ಜೆ ಮುಂದಿಡೋವಸ್ಟರಲ್ಲಿ ಹಿಂಬಾಲಕಿ ಬಸ್ ಬಾಗಿಲತ್ರ ನಿತ್ಕೊಂಡು ಬನ್ನಿ ಮೇಡಂ ಅಂದ್ರು. ನಾನು ಕಕ್ಕಾಬಿಕ್ಕಿ ಛೇ ಇವರಿಗಿರುವ ಚುರುಕುತನ ನಂಗಿಲ್ವಲ್ಲಾ!?. ಮತ್ತೊಮ್ಮೆ ಅರಿವಾಯ್ತು ಅನುಭವದ ಪಾಠದ ಮುಂದೆ ಪುಸ್ತಕದ ಪಾಠ ಶರಣು ಶರಣಾರ್ಥಿ ಅಂತ!.
MPK ಏರಿದ್ದಯ್ತು ಅಯ್ಯಯ್ಯೋ ಇಲ್ಲ ಇಲ್ಲ ತೂರ್ಕಂಡಿದ್ದಾಯ್ತು! ಹಿಂಬಾಲಕಿ ಕೈ ತೋರ್ಸಿದ್ರು ಆಸನದ ಕಡೆಗೆ. ಅದೊಳ್ಳೆ ಭಾರತದ ಕ್ರಿಕೆಟ್ ಕ್ಷೇತ್ರ ರಕ್ಷಕ ತಾನು ಆರಾಮ್ವಾಗಿ ನಿಂತು ಮತ್ತೊಬ್ಬರಿಗೆ ಅತ್ತ ಓಡಿ ಹಿಡಿ ಚಂಡು ಅಂದ್ಹಾಗೆ!. ನೋಡ್ದೆ ಎರಡು ಆಸನದ ಮಧ್ಯೆ ಕಡ್ಡಿ ಪೈಲ್ವಾನ್ ವಿರಾಜಮಾನರಾಗಿದ್ದಾರೆ! ಹಿಂದಿನಿಂದ ಯಾರೋ ತಳ್ಳಿದಂಗೆ ಜಬರ್ದಸ್ತು ನುಗ್ಗಿದ್ರು ಮುಗ್ಗರಿಸಿ ಗಾಬರಿಯಲ್ಲಿ ಬರ್ತಾರಾ? ಅಂತ ಮೂರ್ಖ ಪ್ರಶ್ನೆ ನಂದು ತುಂಬೋಗ್ತಿರೋ ಬಸ್ನಲ್ಲಿ!?. ಅವ ಮೇಲಿಂದ ಕೆಳಗೆ ನೋಡಿ ಸರಿದ್ರು ಕಿಟಕಿ ಕಡೆಗೆ. ಮುಜುಗರದಿಂದ ಮುದುಡಿ ಕುಳಿತೆ. ನಿಂತಿರುವ ಪ್ರಯಾಣಿಕರೆಡೆಗೆ ನನ್ನ ಕಾಲುಗಳಿತ್ತು, ಪೈಲ್ವಾನ್ ಮತ್ತು ನನ್ನ ನಡುವೆ ಅಂತರವಿತ್ತು (ಪೂರ್ವಾನುಭವಗಳು ಇತ್ತಲ್ಲಾ ಅದಕ್ಕೆ ಮುನ್ನೆಚ್ಚರಿಕೆ!) ಕಡ್ಡಿ ಪೈಲ್ವಾನ್ ಆಣತಿ ಇತ್ರು, ಕಾಲು ಸೀಟ್ ಒಳೀಕಾಕ್ಕಳಿ ಮೇಡಂ ನಿಲ್ಲೋರ್ಗೆ ಜಾಗ ಆಗ್ಲೀ...! ಅಂದ್ರು. ಅಪ್ಪಣೆ ತಂದೆ! ಅನ್ಕೊಂಡು ಕುಳಿತೆ ಅಂತರ ಮಾತ್ರ ಹಾಗೇ ಇತ್ತು!. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಹೆಂಗಸು ಎನೋ ಹೇಳಿದ್ರು...ಏನು ಅಂತ ಕೇಳೋ ಮುನ್ನ ಅವರ ದಪ್ಪ ಬ್ಯಾಗು ನಾನು ಕುಳಿತ ಆಸನದ ಕೆಳಗಿನ ಭಾಗಕ್ಕೆ ತೂರಿಕೊಂಡಿತ್ತು!?. ಅಬ್ಬಬ್ಬಾ! ನನ್ನ ಅನುಮತಿಯೇ ಬೇಡವಾಯ್ತಲ್ಲಾ? ಅಂತ ಖೇದ ನನಗೆ. ಅಕೆಯ ಮಗ ಪಕ್ಕದಲ್ಲಿ ಹೊರಬರುವ ಸಿಂಬಳ ಆಗಾಗ್ಗೆ ಜೋರಾಗಿ ಒಂದಾದ್ಮೇಲೆ ಒಂದ್ರಂಗೆ ಒಳಗೆಳೀತಿದ್ದಾನೆ!. ಕಾಲು ಕೊಕ್ಕರಿಸಿ ದೇಹ ಮುದುಡಿ ಸಿಂಬಳಕ್ಕೆದರಿದ ನನ್ನ ಆತಂಕ ಯಾರೀಗ್ಹೇಳ್ಲಿ?!. ಈಗಂತೂ ಇಳಿಯೋದು ಯಾವಾಗಪ್ಪಾ ಅನ್ನೋ ಸ್ಥಿತಿಯಾಗೋಯ್ತು!!!...
   ವಿಚಿತ್ರ ಆತಂಕದಲ್ಲಿ ಸಂತೇ ಮರ ಹಳ್ಳಿಯಲ್ಲಿ ಮಹೇಂದ್ರನ ಮನೆ ತಲುಪುವಷ್ಟರಲ್ಲಿ ಹತ್ತು ಜನ್ಮಕ್ಕಾಗುವಷ್ಟು ಅನುಭವವಾಗಿತ್ತು!?. ಅವ ನನ್ ಮುಖ ನೋಡಿ ನಗ್ತ ಹೇಳ್ದಾ ಎಂಗೆ ಮೇಡಂ ನಮ್ಮೂರು...? ಇದೇ ಸ್ವರ್ಗ ನಮಗೀಗ ಗೊತ್ತಾ!? ಅಂತ ಗೇಲಿ ಬೇರೆ ಮಾಡ್ದ!. ಅಯ್ಯೋ! ಸುಮ್ನಿರು ಮಾರಾಯ! ಈಗ ಪುನಃ ಹೇಗೆ ? ಅನ್ನೋ ಚಿಂತೆ?! ಭಯಾನಕವಾಗಿ ಕಾಡ್ತಿದೆ ಅಂದೆ. ಏನೂ ಯೋಚನೆ ಮಾಡ್ಬೇಡಿ ಇಲ್ಲಿಂದ ನೇರ ಟಿ ಎನ್ ಪುರಕ್ಕೆ ನನ್ನ ರಥದಲ್ಲಿ ಕರೆದೊಯ್ತೀನಿ. ಆಗ ಒಂದು ಪ್ರಾಯಾಸದ ಪ್ರಯಾಣ ತಪ್ಪುತ್ತೆ ಅಂದ. ಸಧ್ಯ ಹೋದ ಜೀವ ಬಂದಂತಾಯ್ತು. ಅವರ ಮನೆಗೆ ಹೋಗಿ ಎಲ್ಲರನ್ನೂ ಮಾತಾಡಿಸಿ, ತುಸು ಹೊತ್ತಿದ್ದು, ಅವನ ಕಾಲೇಜಿನವರ ಪ್ರೀತಿ ವಿಶ್ವಾಸ ಅನುಭವಿಸಿ, ದ್ವಿಚಕ್ರ ವಾಹನ ಏರಿ ಹೊರಟ್ವಿ. ದೂರ ಆದ್ರೂ ಪರವಾಗಿಲ್ಲ ಹೀಗೇ ಹೋಗ್ಬಿಬಹುದಿತ್ತು ಅನ್ನಿಸಿದ್ದಂತೂ ಅಕ್ಷರಷಃ ಸತ್ಯ!!!
  ಟಿ ನರಸೀಪುರದ ಖಾನಾವಳಿಯಲ್ಲಿ ಪಟ್ಟಾಗಿ ಮಗ ಊಟ ಮಾಡಿಸಿದ. ನಂತರ ಪುನಃ  ಓಡಿ ಹೋಗುವಂತೆ ಜೀಕುತ್ತಿದ್ದ ಸಾವ್ಕಾರಿ ಬಸ್ಸಿನೋಳಗೆ ತೂರಿದೆ. ಅಭ್ಯಾಸವಾಗಿತ್ತು!?. ನಿರ್ವಾಹಕರು ಎಲ್ಲಿ ಒಬ್ಬ ಗ್ರಾಹಕರು ಇಳಿದು ಬಿಡುವರೋ ಎಂಬಂತೆ ಆಸನದಲ್ಲಿ ಕುಳಿತ ಕಾಲೇಜು ತರುಣಿಯನ್ನು ಮುಂದೆ ಆಸನ ಹಂಚಿಕೊಂಡು ಕೂರುವಂತೆ ಹೇಳಿ ನಂಗೆ ಒಂದು ಪೂರ್ಣ ಆಸನ ಮಂಜೂರು ಮಾಡಿದ್ರು. ಅಧಿಕಾರಿಗಳು ಉಳ್ಳವರಿಗೆ ಕರೆದು ಮಣೆ ಹಾಕುವ ಹಾಗೆ!?.
  ಮತ್ತೊಂದು ಪ್ರಯಾಣ ವಾಪಸ್ ಮಂಡ್ಯಾಕ್ಕೆ! ಖುಷಿ ನನಗೆ ನನ್ನೂರಿಗೆ ಬರ್ತಿದ್ದೀನಲ್ಲ ಅಂತ. ತವರಿಗೆ ಓಡಿ ಬರುವ ಮಗಳಂತಾಗಿದ್ದೆ!. ಕಿಟಕಿ ಪಕ್ಕ ಕುಳಿತಿದ್ದೆ. ಸಂಜೆ ನಾಲ್ಕರಲ್ಲೂ ಸೂರ್ಯನಿಗೆ ಏರು ಯವ್ವನ! ಆಹಹಾ! ಮುಖ ಮೈ ಉರೀತಿತ್ತು. ಪಕ್ಕದಲ್ಲಿದ್ದವರು ಇಳಿದ್ರು. ನಂತರ ಕಣ್ಣು ಅರೆಬರೆ ಬಿಡುತ್ತಿದ್ದ ಹಳ್ಳಿಗ ಕೊಂಚ ದಪ್ಪಗಿದ್ರು. ಹಾಸುಗೆ ಮೇಲೆ ಹಾಸುಗೆ ಹಾಸುವಂತೆ ಕುಳಿತ್ರು!. ತಕ್ಷಣ ನಾನು ಮುದುರಿ ಕುಳಿತೆ. ನನ್ನ ಮನ ಓದಿದವರಂತೆ ಅವರೂ ಕೂಡ ದೂರ ಸರಿದು ಕುಳಿತ್ರು, ನೆಮ್ಮದಿ ಆಯ್ತು!. ಆ ಕ್ಷಣ ಮತ್ತೊಂದು ತಂಗುದಾಣ ಬಂತು. ಒಂದು ಅಜ್ಜಿ ಮೊಮ್ಮಗಳ ಜೊತೆ ನಿಧಾನಕ್ಕೆ ಮುಂದೋಗುತ್ತಿದ್ದ ಬಸ್ಸಿಗೆ ಹತ್ತಿದ್ರು. ಎರಡು ಹಂತ ಹತ್ತಿದರೋ ಇಲ್ಲವೋ ಅಯ್ಯೋ ಕಾಸು ತಂದಿಲ್ಲ ಕನ್ರಣ್ಣ ! ಮಗಾ ಬಂದ್ಬುಡು ಬಿರ್ನೆ ಅಂತ ಮೊಮ್ಮೊಗಳನ್ನ ಕೂಗ್ತಾನೆ ಹಿಂದಕ್ಕೆ ಹೆಜ್ಜೆ ಇಟ್ಟೇ ಬಿಡ್ತು ಬೀಳ್ತೀನಿ ಅನ್ನೋ ಭಯಾನೂ ಇಲ್ಲಂದಂಗೆ.ಹಿಂದ್ಹಿಂದಕ್ಕೆ ರಪ್ಪನೆ ಬಿದ್ಹೋಯ್ತು! ನಾವೆಲ್ಲಾ ಅಯ್ಯೋ ಅಂತ ಚೀರಿದ್ವಿ ಚಾಲಕನ ಸಮಯ ಪ್ರಜ್ಞೆ ಕೊಂಡಾಡ್ಬೇಕು ತಕ್ಷಣ ಗಪ್ಪ ಅಂತ ಬಸ್ ನಿಲ್ಸದ. ಆ ಅಜ್ಜಿ ಪುಟಿದೆದ್ದ ಚಂಡಿನಂಗೆ ಚಂಗನೆದ್ದು ಹೊರ್ಟೇ ಹೋಯ್ತು!. ನಾನಿನ್ನೂ ಆ ಭಯದಿಂದ ಹೊರ್ಗೆ ಬಂದಿರ್ಲಿಲ್ಲ ನಡುಗ್ತಿದ್ದೆ. ಎಷ್ಟು ಗಟ್ಟಿಗಿದ್ದಾರೆ ಹಳ್ಳಿಗರು ಈರ್ಷೆ ಆಯ್ತು. ನಂಗೇನಾದ್ರು ಆ ಅಜ್ಜಿಗೆ ಆದಂಗೆ ಆಗಿದಿದ್ರೆ ನಾಲ್ಕು ಜನ ಹೊತ್ಕೊಂಡು ಹೋಗ್ಬೇಕಿತ್ತೋನೋ ಅಂತ ಅನಿಸಿ ನಕ್ಕೆ!?.
ಅವರುಗಳ ಮುಗ್ಧತೆ, ದೈರ್ಯ, ಸಮಯಸ್ಪೂರ್ತಿ , ಹುಂಬತನ ತುಂಬಾ ಖಷಿಯಾಯ್ತು. ಮುಂದೆ ಒಬ್ಬ ಹೆಣ್ಣು ಮಗಳು ಹತ್ಕೊಂಡ್ಳು.  ಗರ್ಭವತಿ ಇರ್ಬೇಕು ಅನ್ನಿಸಿ ಆಸನ ಬಿಟ್ಟುಕೊಡುವ ಅನ್ನಿಸ್ತು. ಆದ್ರೆ ಕಿಟಕಿಯ ಪಕ್ಕ ಇದ್ದ ನಾನು ಎದ್ದು ಇನ್ನೂ ಇಬ್ಬರನ್ನ ಏಳಿಸಿ ಸೀಟುಕೊಡಬೇಕು ಅನ್ನುವ ಯೋಚನೆಗೆ ಬಿದ್ದೆ. ಆಮೇಲೆ ಇವರಿಗೆ ಹೇಳುವ  ಅಂತ ತಿರುಗಿದೆ ಅಷ್ಟರಲ್ಲಿ ಕಾಲೇಜು ಹುಡುಗ ಆಸನ ಬಿಟ್ಟುಕೊಟ್ಟ ನಂಗೆ ಯಾರೋ ಎನತ್ರಲ್ಲೋ ಹೊಡೆದಂಗ್ಹಾಯ್ತು?.
  ಹೀಗೆ ವಿವಿಧ ಅನುಭವಗಳನ್ನ ತುಂಬಿಸ್ಕೊಡ್ತಾ ಖಾಸಗೀ ಬಸ್ಸು ಅಲ್ಲಲ್ಲಿ ನಿಂತರೂ ಸುಂಟರ ಗಾಳಿಯಂತೆ ಮುನ್ನುಗ್ಗುತ್ತಾ ಮಂಡ್ಯಾ ತಲುಪಿಯೇ ಬಿಟ್ಟಿತು!.ನಿಲ್ದಾಣಕ್ಕೆ ಮೊದಲೇ ಗಣಪತಿ ಉತ್ಸವದಿಂದಾಗಿ ಬಸ್ಸು ಮಂದಗತಿಯಲ್ಲಿ ಚಲಿಸ ಹತ್ತಿತು. ಸರಿ ಮನೆಗೆ ಹತ್ತಿರದಲ್ಲೇ ಇಳಿದು ಬಿಡುವೆ ಎಂದು ನಿರ್ವಾಹಕರಿಗೆ ತಿಳಿಸಿ ಇಳಿಯಲು  ಬಸ್ಸಿನ ಎರಡನೇ ಮೆಟ್ಟಲಿಗಿಳಿದು ಕಾಲು ಇನ್ನೇನು ಕೆಳಗಿಡಬೇಕು ಅಷ್ಟರಲ್ಲೇ ಉತ್ಸವದಲ್ಲಿ ಹುಚ್ಬಂದಂಗೆ ಕುಣೀತಿದ್ದ ಪಡ್ಡೆ ಹುಡುಗ ಯಾಕ್ ಮೇಡಂ ಕೈ ಕಾಲು ನೆಟ್ಗಿರಾದು ಬ್ಯಾಡ್ವಾ? ಇಳಿಬ್ಯಾಡಿ ಸುಮ್ಕಿರಿ ಅಂತ ಗದರ್ದಂಗೆ ವದರ್ದಾ! . ಬೆಪ್ಪಾದೆ. ಅಜ್ಜಿ ನೆನಪಾದ್ಲು! ಕಲ್ಲಾದೆ!?. ಇಪ್ಪನಾಲ್ಕು ವರ್ಷ ಊದಿದ್ದೆಲ್ಲಾ ನನ್ನ ಅಣಕಿಸ್ದಂಗಾಯ್ತು!?. ನಂಗೇ ಗೊತ್ತಿಲ್ದಂಗೆ ಎರ್ಡ ಕಂಬಾನು ಹಿಡಿದು ಕಂಬಕ್ಕಿಂತ ಗಟ್ಟಿಯಾಗಿ ನಿಂತ್ಕೊಂಡೆ!.
  ಮೇಡಂ ಇದ್ಯಾಕೆ ಇಳೀರಿ ಅಂತ ಹಿಂದಿನವರು ಕೂಗಿದಾಗ್ಲೇ ಗೊತ್ತಾಗಿದ್ದು  ಬಸ್ಸು ನಿಲ್ದಾಣ ತಲುಪಿದೆ ಅಂತ. ಅಬ್ಬಬ್ಬಾ! ಟಿ... ನರಸೀಪುರವೇ ಅಂದ್ಕೊಳ್ತಾ ಅದೇನನ್ನಿಸ್ತೋ ಚಂಗನೆ ನೆಗ್ದೆ!.  ಬಸ್ಸಿಗೊಂದು ಸಲಾಮು ಹೊಡೆಯೋವಷ್ಟರಲ್ಲಿ ನನ್ನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ದಂಡು ಓ ಮೇಡಂ ಏನಿಲ್ಲಿ? ಅಂತ ಸುತ್ಕೊಂಡ್ವು . ಸಂಕೋಚ  ಮುಜುಗರ ಎರಡೂ ಒಟ್ಟೋಟ್ಟಿಗೆ ಆಯ್ತು. ನನ್ನ ಶೈಕ್ಷಣಿಕ ಕೂಸುಗಳನ್ನ ಕಂಡಾಕ್ಷಣ ಆಯಾಸ ಎಲ್ಲಾ ಮರ್ತಹೋಯ್ತು! . ಸದಾ ಗರಿಗರಿ ಸುಕ್ಕುಬಾರದ ಹತ್ತಿ ಸೀರೆಯಲ್ಲಿ ಶಿಸ್ತಾಗಿರುವ ನಾನಿಂದು ಕೆದರಿದ ಕೂದಲು, ಮುದುಡಿದ ಸೀರೆಯಲ್ಲಿ ಕಂಗಾಲಾದ ಮುಖ ಭಾವದಲ್ಲಿದ್ದದ್ದಕ್ಕೆ ಒಂಥರಾ ಮುಜುಗರ ಕಾಡ್ತು. ಆದರೆ ಮಕ್ಕಳಿಗೆ ಅದಾವುದರ ಪರಿವೆಯೇ ಇಲ್ಲ. ಅವರುಗಳ ಪ್ರೀತಿಯ ಮಾತಿನಿಂದ ಮುಜುಗರ ಹೆಚ್ಚು ಹೊತ್ತು ಉಳಿಯಲಿಲ್ಲ. ಸುಮ್ನೆ ನಾವೇ ವಿಪರೀತ ಕಲ್ಪನೆ ಮಾಡ್ಕೋತಿವೇನೋ ಅನ್ನಿಸಿ ನಕ್ಕೆ. ಬರ್ತೇವೆ ಮೇಡಂ ಅಂತ ಕೈ ಬೀಸಿ ಬಸ್ಸಿನೊಳಗೆ ತೂರಿಕೊಳ್ಳುತ್ತಿದ್ದ ಆ ಹೆಣ್ಣು ಕೂಸುಗಳನ್ನ ನೋಡಿ ಚಿಂತಿತಳಾದೆ. ಒಂದು ದಿನಕ್ಕೇ ಇಂತಹ ಪ್ರಯಾಣದಿಂದ ನಂಗೀಗತಿ ಇನ್ನು ಈ ಮಕ್ಕಳ ಗತಿಯೇನು ಅಂತ ಪ್ರಶ್ನೆ ಮನಸ್ಸಿಗೆ ಬಂತು. ಥಾರ್ನ ಡೈಕ್ ನ ಅಭ್ಯಾಸ ನಿಯಮ ನೆನಪಾಯ್ತು! ಹಾಗೆಯೇ ಜೀವನದ ಅನಿವಾರ್ಯತೆ ಕಲಿಸುವ  ಪಾಠವೂ ನೆನಪಾಯ್ತು, ನನ್ನ ಪೆದ್ದುತನದ ಪ್ರಶ್ನೆಗೆ ನಕ್ಕು ಚಿಂತೆಗಳನ್ನು ಕೊಡವಿ ಲಗುಬಗನೆ ಮನೆ ಕಡೆ ಹೆಜ್ಜೆ ಹಾಕತೊಡಗಿದೆ....

- ಡಾ. ಸುವರ್ಣ    

ಕಾಮೆಂಟ್‌ಗಳಿಲ್ಲ: