ಚೆನ್ನಮ್ಮ ನಿಯತ್ತಿನ ಹೆಂಗಸು. ಬಂಗಾರದ ಕೆಲಸ ಮಾಡುವ ಸತ್ಯಮ್ಮನ ಮನೆಯಲ್ಲಿ ದಿನಾ ಪಾತ್ರೆ ಉಜ್ಜಿ, ನೆಲ ಒರೆಸಿ, ಬಟ್ಟೆ, ನೀರು, ಕಸ –ಒಂದಲ್ಲ, ಎರಡಲ್ಲ. ಅಂಗಡಿಗೆ ಹೋಗಿ ಬರೋದ್ರಿಂದ ಹಿಡಿದು ಅಟ್ಟದ ಧೂಳು ಹೊಡೆಯುವ ಎಲ್ಲಾ ಕೆಲಸಗಳನ್ನೂ ಚೆನ್ನಮ್ಮನೇ ಮಾಡುತ್ತಿದ್ದಳು.
8 ಮಕ್ಕಳ ತಾಯಿಯಾದ ಅವಳು, ಅದರಲ್ಲಿ 4 ಮಕ್ಕಳ ಸಾವನ್ನು ಕಣ್ಣಾರೆ ನೋಡಿದ್ದ ನತದೃಷ್ಟೆ ಕೂಡ. ಯಾರ ಪ್ರೀತಿಯನ್ನೂ ಪಡೆದುಕೊಂಡು ಬಂದಿಲ್ಲದ ಅವಳಿಗೆ ಕುಡುಕ ಗಂಡನ ಹಿಂಸೆಯೂ ದಿನಚರಿಯಂತೆ ನಡೆಯುತ್ತಿತ್ತು. ಮೊದಲು ಒಂದು ಹೊತ್ತು ಊಟಕ್ಕೂ ಹೆಣಗಾಡುತ್ತಿದ್ದ ಚೆನ್ನಮ್ಮನಿಗೆ ಸತ್ಯಮ್ಮನ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ, ಅವಳ ಹಸಿವಿನ ಬಾಧೆ ತೀರಿತು. ಮಕ್ಕಳು ಎರಡೊತ್ತು ತಿಂದು ಚೆನ್ನಗಾದವು. ಸತ್ಯಮ್ಮ ನೀಡುತ್ತಿದ್ದ ಹಳೆಯ ಬಟ್ಟೆಗಳು ಮಕ್ಕಳ ಮತ್ತು ಚೆನ್ನಮ್ಮನ ಮೈಮುಚ್ಚಿದವು. ಇದರಿಂದ ಚೆನ್ನಮ್ಮನ ನಿಷ್ಠೆ, ಶ್ರಮ ಸತ್ಯಮ್ಮನಿಗಾಗಿ ಇಮ್ಮಡಿಸಿತು.
ಸತ್ಯಮ್ಮನೆ ಬರುಬರುತ್ತಾ ಚೆನ್ನಮ್ಮನ ಪ್ರಾಮಾಣಿಕತೆಗೆ ಬೆರಗಾಗಿ ಮನೆಯ ಜವಾಬ್ದಾರಿಯನ್ನು ಪೂರ್ಣವಾಗಿ ಕೊಟ್ಟುಬಿಟ್ಟು ದೇವರ ಮನೆಯಲ್ಲಿ ಪೂಜೆ, ಧ್ಯಾನವೆಂದು ಕೂರುತ್ತಿದ್ದಳು. ಒಮ್ಮೊಮ್ಮೆ ಎಲ್ಲಾ ಚೆನ್ನಮ್ಮನಿಗೆ ಬಿಟ್ಟು ತವರಿಗೆ ವಾರಗಟ್ಟಲೆ ಹೊರಟುಬಿಡುತ್ತಿದ್ದಳು. ವಂಚನೆ, ಸುಳ್ಳು, ಕಳ್ಳತನ ಏನೂ ಅದರಿಂದ ಚೆನ್ನಮ್ಮ ತನ್ನ ಒಡತಿಯ ನಂಬಿಕೆಗೆ ಅನುಗುಣವಾಗಿ ಮನೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಳು. ಸತ್ಯಮ್ಮನ ಮಕ್ಕಳ ಪಾಲನೆಯನ್ನು ಹೆಚ್ಚಾಗಿ ಚೆನ್ನಮ್ಮನೇ ನೋಡಿಕೊಳ್ಳುತ್ತಿದ್ದಳು.
ಇನ್ನು ಸತ್ಯಮ್ಮನ ಗಂಡ ಬಂಗಾರದ ಅಂಗಡಿಯ ವ್ಯವಹಾರದಲ್ಲಿಯೇ ಹಗಲು ರಾತ್ರಿ ಕಳೆಯುತ್ತಿದ್ದನು. ಬೆಳಿಗ್ಗೆ ಚೆನ್ನಮ್ಮ ಮನೆಗೆ ಬಂದರೆ ನಿರುಮ್ಮಳನಾಗಿ ಅಂಗಡಿಗೆ ಹೊರಟುಬಿಡುತ್ತಿದ್ದನು. ಸಂಜೆ ಆತ ಬರುವವರೆಗೂ ಇದ್ದು, ಚೆನ್ನಮ್ಮ ಉಳಿದ ಅಡುಗೆ ತೆಗೆದುಕೊಂಡು ಹಿಂತಿರುಗುತ್ತಿದ್ದಳು. ಇವಳ ಈ ಮಾತ್ರದ ನೆಮ್ಮದಿಯನ್ನು ಸಹಿಸದ ನಾದಿನಿಯರು ಬೆಳಿಗ್ಗೆಯಿಂದ ರಾತ್ರಿವರೆಗೂ ‘ಇವಳಿಗೇನು ಅಲ್ಲಿ ಕೆಲಸ’ ಎಂದು ಜರೆದರೂ, ಅವಳ ನಡತೆ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಿದರೂ, ಆ ನೋವನ್ನು ನುಂಗಿ ತನ್ನ ಮಕ್ಕಳ ಹಸಿವು ನೀಗಿಸಿದ ಆ ಮನೆಯ ಋಣವನ್ನು ಮರೆಯದೆ ತನ್ನ ಸರ್ವಸ್ವವೂ ಸತ್ಯಮ್ಮನಿಗಾಗಿಯೇ ಎಂದು ಭಾವಿಸಿದಳು.
ಹೀಗಿರುವಾಗ ಒಂದು ದಿನ ಊರಿಗೆ ಹೊರಟಾಗ ಆಕೆಯ ಗಂಡ ಮನೆಯಲ್ಲಿ ಬಂಗಾರದ ತಾಳಿಬೊಟ್ಟುಗಳ ಲೆಕ್ಕ ಹಾಕಿ, ಹತ್ತತ್ತು ಬೊಟ್ಟುಗಳನ್ನು ಗಂಟು ಹಾಕಿ, ಅಲ್ಲೇ ರೂಮಿನ ಬೀರುವಿನಲ್ಲಿಟ್ಟು ಬೀಗ ಹಾಕಲು ಮರೆತು ಅಂಗಡಿಗೆ ಹೋದ. ಎಂದಿನಂತೆ ಚೆನ್ನಮ್ಮ ಕೆಲಸಕ್ಕೆ ಬಂದು ಹೋದಳು. ರಾತ್ರಿ ಮನೆಗೆ ಬಂದು ಬೀರುವಿಗೆ ಬೀಗ ಹಾಕದುದನ್ನು ನೋಡಿ ಗಾಬರಿಯಿಂದ ಮತ್ತೆ ತಾಳಿ ಬೊಟ್ಟುಗಳ ಗಂಟುಗಳನ್ನು ಎಣಿಸಿದ. ಅದರಲ್ಲಿ ಒಂದು ಗಂಟು ಕಾಣೆಯಾಗಿದ್ದುದ್ದನ್ನು ನೋಡಿ ಅವಾಕ್ಕಾದ. ರಾತ್ರಿಯೆಲ್ಲಾ ಚಿಂತಿಸಿ, ಮರುದಿನ ಚೆನ್ನಮ್ಮನನ್ನು ಅನುಮಾನದಿಂದ ಪ್ರಶ್ನಿಸಿದ. ತನಗೇನೂ ತಿಳಿದಿಲ್ಲವೆಂದು ಹೇಳಿದರೂ ಆತ ಪೂರ್ತಿ ನಂಬಲಾರದೆ ಹೋದ. ಕೊನೆಗೆ ‘ಹೋಗಲಿ ಬಿಡು ಅನ್ಯಾಯದಿಂದ ಸಂಪಾದಿಸಿದ ಸಂಪತ್ತು ಬಹು ಕಾಲ ನಿಲ್ಲದು’ ಎಂದುಬಿಟ್ಟ.
ಇದನ್ನು ಕೇಳಿ ಅರಗಿಸಿಕೊಳ್ಳಲಾಗದ ಚೆನ್ನಮ್ಮ “ಸ್ವಾಮಿ ನಾನು ಬಡವಳೆ ನಿಜ. ಒಂದು ಹೊತ್ತಿನ ಊಟಕ್ಕೆ ಇನ್ನೊಬ್ಬರ ಮನೆ ಬಚ್ಚಲು ಗುಡಿಸುವೆನಾದರು ಅನ್ನ ನೀಡೋ ಮನೆಗೆ ಅನ್ಯಾಯ ಮಾಡೋವಷ್ಟು ಕೀಳು ಹೆಂಗಸು ನಾನಲ್ಲ. ಕಳ್ಳತನ ಮಾಡೊ ಬುದ್ಧಿ ಇದ್ದಿದ್ರೆ ನಿಮ್ಮನೆ ಮುಸುರೆ ಕೆಲಸಕ್ಕೆ ಯಾಕ್ ಬರ್ತಿದ್ದೆ. ಇಷ್ಟು ವರ್ಷ ನಿಮ್ಮನೆಗೆ ದುಡಿದದ್ದಕ್ಕೆ ನೀವು ನನ್ ಮೇಲೆ ಇಟ್ಟಿರೊ ನಂಬಿಕೆ ಇದೇನ ಸ್ವಾಮಿ?" ಎಂದು ಗದ್ಗದಿತಳಾದಳು.
ಆಗ ಆತ ಸ್ವಲ್ಪವೂ ಯೋಚಿಸದೆ “ಈ ಮನೆಗೆ ಬೇರೆಯವರು ಯಾರ್ ಬರ್ತಾರೆ. ನೆನ್ನೆ ತಾನೆ ಇದ್ದ ಗಂಟು ಈಗಿಲ್ಲ ಅಂದ್ರೆ ಏನರ್ಥ?” ಎಂದುಬಿಟ್ಟನು. ಇನ್ನು ಮಾತಾಡಿ ಪ್ರಯೋಜನವಿಲ್ಲೆಂದು, ನಂಬಿಕೆ ಇಲ್ಲದ ಕಡೆ ಒಂದು ಘಳಿಗೆಯೂ ನಿಲ್ಲಬಾರದೆಂದು, ಕಣ್ಣೀರಿಡುತ್ತಾ ಹೊರಟುಬಿಟ್ಟಳು.
ಕೆಲದಿನಗಳ ನಂತರ ಹಿಂತಿರುಗಿ ಬಂದ ಸತ್ಯಮ್ಮನಿಗೆ ವಿಷಯ ತಿಳಿದು ಗಂಡನ ಮೇಲೆ ಕೂಗಾಡಿದಳು. “ನೀವೇ ಎಲ್ಲೊ ಇಟ್ಟು ಮರೆತ್ತಿದ್ದೀರ, ನಮ್ಮ ಚೆನ್ನಮ್ಮ ಅಂತಹವಳಲ್ಲ, ಅವಳನ್ನು ಅನುಮಾನಿಸಲು ನಿಮಗೆ ಮನಸಾದರೂ ಹೇಗೆ ಬಂತು?” ಎಂದು ರೇಗಿದಳು. ತಕ್ಷಣವೇ ಚೆನ್ನಮ್ಮನ ಮನೆಗೆ ಬಂದು ಏನು ಹೇಳಿದರೂ ಕೇಳದೆ ಚೆನ್ನಮ್ಮನನ್ನು ಮನೆಗೆ ಕರೆದುಕೊಂಡು ಹೋದಳು.
ಮೊದಲಿನಂತಲ್ಲದಿದ್ದರೂ ಚೆನ್ನಮ್ಮ ಸತ್ಯಮ್ಮನಿಗಾಗಿ ಅರೆಮನಸ್ಸಿನಿಂದ ಕೆಲಸಕ್ಕೆ ಹೋಗುತ್ತಿದ್ದಳು. ಏಕೆಂದರೆ ಆಕೆಯ ಗಂಡನಲ್ಲಿ ಇನ್ನು ಅನುಮಾನ ಹೋಗದಿರುವುದನ್ನು ಗಮನಿಸಿದ್ದಳು.
ಒಂದು ದಿನ ದೀಪಾವಳಿ ಹಬ್ಬಕ್ಕೆಂದು ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಚೆನ್ನಮ್ಮನಿಗೆ ಮಲಗುವ ಕೋಣೆಯ ದೊಡ್ಡ ಮಂಚವನ್ನು ಕದಲಿಸಲಾಗಲಿಲ್ಲ. ಕೊನೆಗೆ ಗಂಡ ಹೆಂಡತಿ ಇಬ್ಬರೂ ಕೈಹಾಕಿದರು. ಮಂಚ ಜರುಗಿದ ಕೂಡಲೇ ಯಾವುದೋ ವಸ್ತು ಬಿದ್ದು ಠಣ್ ಎಂಬ ಶಬ್ದವಾಯಿತು. ಏನೆಂದು ನೋಡಿದರೆ, ಅಂದು ಮಾಯವಾಗಿದ್ದ ತಾಳಿಬೊಟ್ಟುಗಳ ಗಂಟು. ಮಂಚ ಮತ್ತು ಗೋಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಆ ಗಂಟು ಕೆಳಗೆ ಬಿದ್ದು ಎಲ್ಲರ ಮುಂದೆ ಚೆನ್ನಮ್ಮ ನಿರ್ದೋಷಿ ಎಂದು ಸಾರಿತು.
ಅಂದು ಸತ್ಯಮ್ಮನ ಗಂಡ ತನ್ನ ತಪ್ಪಿನ ಅರಿವಾಗಿ ತಲೆತಗ್ಗಿಸಿದನು. ವಿಚಾರಿಸದೆ ತನ್ನ ಅಜಾಗ್ರತೆಯಿಂದ ಆಗಿದ್ದ ಪ್ರಮಾದವನ್ನು, ಏನು ಅರಿಯದ ಚೆನ್ನಮ್ಮನನ್ನು ವೃಥಾ ಅನುಮಾನಿಸಿದಕ್ಕೆ ನಾಚಿದನು. ತಕ್ಷಣವೇ ಚೆನ್ನಮ್ಮನಿಗೆ ಕೈ ಮುಗಿದು ಕ್ಷಮೆ ಕೇಳಿದನು.
ಇದನ್ನು ನೋಡಲಾಗದೆ ಚೆನ್ನಮ್ಮ, “ನೀವು ದೊಡ್ಡವರು, ನನಗೆ ಅನ್ನ ನೀಡೋ ದೇವರು, ನನಗೆ ಕೈಮುಗೀಬೇಡಿ. ನನ್ನ ಮಕ್ಕಳು ನಿಮ್ಮಿಂದ ಹೊಟ್ಟೆ ತುಂಬಾ ಊಟ ಮಾಡ್ತಾ ಇದ್ದಾರೆ. ನಿಮಗೆ ನಾನು ಎಷ್ಟು ಮಾಡಿದರೂ ಕಡಿಮೇನೆ” ಎಂದಳು.
ಆಕೆಯ ವಿನಯ, ಸ್ವಾಮಿಭಕ್ತಿ ನೋಡಿ ಇಬ್ಬರ ಕಣ್ಣಲ್ಲೂ ನೀರಾಡಿತು. ಮಕ್ಕಳು ಅಂದ ತಕ್ಷಣ ಏನನಿಸಿತೋ ಏನೋ ಆತ ‘ನಾಳೆ ಅವರನ್ನು ಬೆಳಿಗ್ಗೆಯೇ ಕರೆದುಕೊಂಡು ಬಾ’ ಎಂದನು.
ಮರುದಿನ ಸತ್ಯಮ್ಮ ಮತ್ತು ಆಕೆಯ ಗಂಡ ಆ ಮಕ್ಕಳನ್ನು ಹತ್ತಿರದ ಶಾಲೆಗೆ ಸೇರಿಸಿ ಚೆನ್ನಮ್ಮನಿಗೆ ಕೃತಜ್ಞತೆ ಸಲ್ಲಿಸಿದರು. ತನ್ನ ಮಕ್ಕಳನ್ನು ಶಾಲೆಗೆ ಕಳಿಸಲಾಗುತ್ತಿಲ್ಲವಲ್ಲ ಎಂದು ಮರುಗುತ್ತಿದ್ದ ಆಕೆಗೆ ಅವರ ಉಪಕಾರಕ್ಕೆ ಹೇಗೆ ಧನ್ಯವಾದ ಸಲ್ಲಿಸಬೇಕೋ ತಿಳಿಯದೆ ಕಾಲಿಗೆ ಬೀಳಹೋದಳು. ಅಷ್ಟರಲ್ಲೇ ಅವಳನ್ನು ಹಿಡಿದೆತ್ತಿದ ಸತ್ಯಮ್ಮ, “ನೀನು ಮಾಡುತ್ತಿರುವ ಸೇವೆಗೆ ನಿನ್ನ ಪ್ರಾಮಾಣಿಕತೆಗೆ ಇದು ಏನೇನೂ ಅಲ್ಲ ತಾಯಿ” ಎಂದು ಗಂಡಹೆಂಡತಿಯರಿಬ್ಬರೂ ಕಣ್ತುಂಬಿಕೊಂಡರು.
- ಉಷಾಗಂಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ