ಬಂಗಾಳದ ಸುಪ್ರಸಿದ್ಧ ಲೇಖಕರಾದ ಶರತ್ಚಂದ್ರ ಚಟರ್ಜಿಯವರ ಹೆಸರು ಕನ್ನಡಿಗರಿಗೆ ಸುಪರಿಚಿತವಾಗಿದೆ. ಅವರ ಎಲ್ಲಾ ಕಾದಂಬರಿಗಳನ್ನು ಮತ್ತು ಕಥೆಗಳನ್ನು ಕನ್ನಡದ ಬೇರೆ ಬೇರೆ ಬರಹಗಾರರು ಹಲವಾರು ದಶಕಗಳ ಹಿಂದೆಯೇ ಅನುವಾದಿಸಿದ್ದಾರೆ. ಸ್ತ್ರೀಯರ ಸಮಸ್ಯೆಗಳ ಬಗ್ಗೆ ಮಾರ್ಮಿಕವಾಗಿ ಚಿತ್ರಿಸಿರುವ ಶರತ್‍ರನ್ನು ಸ್ತ್ರೀವಾದಿ ಬರಹಗಾರರೆನ್ನಲಾಗಿದೆ. ಬಂಗಾಳದ ಸ್ವಾತಂತ್ರ್ಯಪೂರ್ವ ದಿನಗಳ ಸಾಮಾಜಿಕ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಲು ತಮ್ಮ ಲೇಖನಿಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿದ ಶರತ್‍ರು ಭಾರತದ ನವೋದಯ ಚಳುವಳಿಯ ಪ್ರಮುಖ ವ್ಯಕ್ತಿಗಳಲ್ಲೊಬ್ಬರು. ವ್ಯಕ್ತಿಗಳ ಪಾತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಅರ್ಥೈಸಿ, ಅದಕ್ಕೆ ತಕ್ಕಂತೆ ಅದನ್ನು ಚಿತ್ರಿಸುವ ಅವರ ಶೈಲಿ ಅದ್ಭುತವಾದದ್ದು, ಅನನ್ಯವಾದದ್ದು. ಅವರ ಕಾದಂಬರಿಗಳನ್ನು ಒಮ್ಮೆ ಕೈಗೆತ್ತಿಕೊಂಡರೆ ಅದನ್ನು ಮುಗಿಸುವವರೆಗು ಕೆಳಗಿಳಿಸುವ ಮನಸ್ಸಾಗುವುದಿಲ್ಲ. ಜೊತೆಗೆ, ಕಾದಂಬರಿ ಮುಗಿಸಿದ ನಂತರ ವ್ಯಕ್ತಿಯನ್ನು ಅದರ ಬಗ್ಗೆ ವಿಚಾರ ಮಾಡುವಂತೆ, ಅದರಲ್ಲಿ ಬರುವ ಉತ್ಕೃಷ್ಟ ಪಾತ್ರಗಳಲ್ಲಿ ತಾವು ಒಂದಾಗುವಂತೆ ಮಾಡುತ್ತದೆ.
ಪ್ರಸ್ತುತ ಕಾದಂಬರಿ “ವೈಕುಂಠನ ಉಯಿಲು” ವ್ಯಕ್ತಿಗಳ ನಡುವಿನ ಮಧುರ ಸಂಬಂಧಗಳ, ಸರಸ-ವಿರಸಗಳ, ನೋವು-ನಲಿವುಗಳ, ವೇದನೆ-ಸಂವೇದನೆಗಳ, ಅದರಲ್ಲೂ ತಾಯಿ-ಮಗನ, ಮಲತಾಯಿ-ಮಲಮಗನ, ಅಣ್ಣ-ತಮ್ಮನ, ಮತ್ತು ಗಂಡ-ಎರಡನೆಯ ಹೆಂಡತಿಯ ನಡುವಿನ ಆಂತರಿಕ ಭಾವನೆಗಳ ವ್ಯಕ್ತಿಚಿತ್ರಣದ ಪ್ರತಿಬಿಂಬವಾಗಿದೆ.
ಶರತ್‍ರು ಈ ಕಾದಂಬರಿಯಲ್ಲಿ ಬಹಳ ಸೊಗಸಾಗಿ ವೈಕುಂಠ ಮಜುಮದಾರನ ಹಾಗೂ ಆತನ ಸಂಸಾರದ ಎಳೆಎಳೆಯನ್ನು ಬಿಚ್ಚಿಟ್ಟಿದ್ದಾರೆ. ವೈಕುಂಠ ಮಜುಮದಾರನಿಗೆ ಇಬ್ಬರು ಗಂಡುಮಕ್ಕಳು. ಒಬ್ಬ ಗೋಕುಲ, ಮತ್ತೊಬ್ಬ ವಿನೋದ. ಭವಾನಿ ವೈಕುಂಠನಿಗೆ ಎರಡನೆ ಪತ್ನಿಯಾಗಿದ್ದು, ಗೋಕುಲನ ತಾಯಿ ತೀರಿಕೊಂಡಾಗ ಆಕೆಯನ್ನು ಮಗನ ಯೋಗಕ್ಷೇಮಕ್ಕಾಗಿ ವಿವಾಹವಾಗಿದ್ದ. ಅವನು ಯಾವ ಉದ್ದೇಶವಿಟ್ಟುಕೊಂಡು ಮರು ವಿವಾಹವಾಗಿದ್ದನೋ ಅದು ಫಲಿಸಿತ್ತು. ಭವಾನಿ ಎಂದೂ ಗೋಕುಲನಿಗೆ ಮಲತಾಯಿಯ ರೀತಿ ಆರೈಕೆ ಮಾಡಿರಲಿಲ್ಲ. ತನ್ನ ಮಗನಿಗಿಂತ ಹೆಚ್ಚಾಗಿಯೆ ಪ್ರೀತಿ ವಾತ್ಸಲ್ಯ ತೋರುತ್ತಿದ್ದಳು.
ಗಂಡ ಬಹಳ ಕಷ್ಟಪಟ್ಟು ಸಾಕಷ್ಟು ಆಸ್ತಿ ಸಂಪಾದಿಸಿದ್ದನು. ಗೋಕುಲ ಓದಿನಲ್ಲಿ ಹಿಂದೆ ಇದ್ದ. ವಿನೋದ ಬಹಳ ಮುಂದೆ. ಹಿರಿಯ ಮಗ ಅನುತ್ತೀರ್ಣನಾದಾಗ ಗೋಕುಲನ ಶಾಲಾ ಮಾಸ್ತರರು ಬಂದು ತಾಯಿಯ ಮುಂದೆ ವಿನೋದನನ್ನು ಹೊಗಳಿ, ಗೋಕುಲನನ್ನು ತೆಗಳುತ್ತಾರೆ. ತಾಯಿ ಗೋಕುಲನನ್ನು ತನ್ನ ಎದೆಗವಚಿಕೊಂಡು ‘ಮುಂದಿನ ವರ್ಷ ಚೆನ್ನಾಗಿ ಓದುತ್ತಾನೆ ಬಿಡಿ,’ ಎನ್ನುತ್ತಾಳೆ. ಮಲತಾಯಿ ಎಲ್ಲಿಯಾದರೂ ಇಷ್ಟೊಂದು ಪ್ರೀತಿಸಲು ಸಾಧ್ಯವೇ ಎಂದುಕೊಂಡ ಮಾಸ್ತರರು, “ಅಲ್ಲಮ್ಮ, ನಿಮ್ಮ ಹುಡುಗ ಎಷ್ಟು ದಡ್ಡ ಎಂದರೆ ಎಲ್ಲರೂ ಕಾಪಿ ಮಾಡುತ್ತಿದ್ದರು. ನಾನು ಸನ್ಹೆ ಮಾಡಿ ಅವನಿಗೆ ಹೇಳಿದೆ. ಆದರೂ ಅವನು ಆ ಕೆಲಸ ಮಾಡಲಿಲ್ಲ, ದಡ್ಡ” ಎಂದರು. ತಾಯಿ ಗೋಕುಲನನ್ನು ಆ ಬಗ್ಗೆ ಕೇಳಿದಾಗ “ಪರೀಕ್ಷೆಯ ಹಿಂದಿನ ದಿನವೇ ಹೆಡ್ ಮಾಸ್ಟರ್ ಬಂದು ಕಾಪಿ ಮಾಡುವುದು ತಪ್ಪು ಎಂದು ಹೇಳಿದ್ದರಮ್ಮ, ಅದಕ್ಕೆ ಮಾಡಲಿಲ್ಲ” ಎಂದು ಮುಗ್ಧವಾಗಿ ಉತ್ತರಿಸಿದ. ಹೊರಗಿನಿಂದಲೇ ತಂದೆ ಇದೆಲ್ಲವನ್ನು ಕೇಳುತ್ತಿದ್ದರು.
ಆ ರಾತ್ರಿಯೇ ವೈಕುಂಠ ತನ್ನ ಹೆಂಡತಿಯ ಹತ್ತಿರ ಮಾರನೆ ದಿನದಿಂದ ಗೋಕುಲನನ್ನು ಅಂಗಡಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಭವಾನಿ “ಇಲ್ಲ ಬಿಡಿ ಈ ಬಾರಿ ಅವನು Sಂಡಿತ ಚೆನ್ನಾಗಿ ಓದಿ ಪಾಸಾಗುತ್ತಾನೆ” ಎಂದಳು. ಅದಕ್ಕೆ ವೈಕುಂಠ “ನಿನ್ನ ಕಿರಿಯ ಮಗ ಚೆನ್ನಾಗಿ ಓದಬಹುದು, ಆದರೆ ಅವನು ನಿನ್ನನ್ನು ನೋಡಿಕೊಳ್ಳುತ್ತಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇವನಂತೂ ನಿನ್ನನ್ನು, ಅವನ ತಮ್ಮನನ್ನು ಕೈಬಿಡುವುದಿಲ್ಲವೆಂದು ನನಗೆ ಗೊತ್ತಿದೆ” ಎನ್ನುತ್ತಾನೆ. ಭವಾನಿ “ವ್ಯಾಪಾರದಲ್ಲಿ ಮೋಸ ಮಾಡುತ್ತಾರೆ, ಇವನಂತೂ ಮೊದಲೇ ಅಷ್ಟು ಬುದ್ಧಿವಂತನಲ್ಲ, ಹೇಗೋ ಏನೋ” ಎಂದಾಗ, ವೈಕುಂಠ “ನಿನ್ನ ಮಗ ಈ ಚಿಕ್ಕ ವಯಸ್ಸಿನಲ್ಲಿಯೀ ಎಂತಹ ಆಮಿಷದಿಂದ ಪಾರಾಗಿದ್ದಾನೆ ಎಂದು ನಿನಗೆ ತಿಳಿಯದು. ಬೇರೆಯವರು ಮೋಸ ಮಾಡಿದರೆ ಸ್ವಲ್ಪ ನಷ್ಟವಾಗುತ್ತೆ ನಿಜ, ಆದರೆ ಇವನಂತೂ ಯಾರಿಗೂ ಮೋಸ ಮಾಡುವವನಲ್ಲ. ಹಾಗಾಗಿ ವ್ಯಾಪಾರದ 14 ಆಣಿ ಕಲಿತಿದ್ದಾನೆ, ಇನ್ನು ಉಳಿದ 2 ಆಣೆ ನಾನು ಹೇಳಿಕೊಡುತ್ತೇನೆ” ಎಂದು ಅಂಗಡಿಗೆ ಕರೆದುಕೊಂಡು ಹೋದ. ಗೋಕುಲ ಹಿಂದಿನ ರಾತ್ರಿಯೇ ಈ ಬಾರಿ ಚೆನ್ನಾಗಿ ಓದುತ್ತೇನೆಂದು ಪ್ರಮಾಣ ಮಾಡಿಕೊಂಡಿದ್ದ. ಆದರೆ ತಂದೆ ಕರೆದ ತಕ್ಷಣ ಎದುರಾಡದೆ ತಂದೆಯ ಜೊತೆ ಅಂಗಡಿಗೆ ಹೋದ.
ಕೆಲವೇ ವರ್ಷಗಳಲ್ಲಿ ವ್ಯಾಪಾರದಲ್ಲಿ ಪಳಗಿದ ಗೋಕುಲ ಅಂಗಡಿಯನ್ನು ಸುಧಾರಿಸಿದ. ತಮ್ಮ ಎಂ.ಎ ಪದವಿಗೆ ಕಲ್ಕತ್ತಾಗೆ ತೆರಳಿದ. ಗೋಕುಲನ ತಂದೆ ವಯಸ್ಸಾಗಿ ಹಾಸಿಗೆ ಹಿಡಿದರು. ವಿನೋದನಿಗೆ ವಿಚಾರ ಮುಟ್ಟಿದರೂ ಅವನು ಹಿಂತಿರುಗಲಿಲ್ಲ. ಆಗ ಚಿಂತಾಕ್ರಾಂತನಾದ ವೈಕುಂಠ ಹೆಂಡತಿಯನ್ನು ಕುರಿತು ಹಿರಿಯವನಿಗೆ ಸಂಪೂರ್ಣ ಆಸ್ತಿ ನೀಡುವಂತೆ ಉಯಿಲು ಬರೆಯುವ ಉದ್ದೇಶ ತಿಳಿಸಿ, ಮುಂದೆ ತಾನು ಸತ್ತಾಗ ಇವನೇ ನಿನ್ನನ್ನು ಮತ್ತು ತನ್ನ ತಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವನು. ವಿನೋದ ಕೆಟ್ಟ ಚಟಗಳಿಗೆ ಬಲಿಯಾಗಿದ್ದು ಆಸ್ತಿಯನ್ನು ಹಾಳು ಮಾಡುತ್ತಾನೆಂದು ಹೇಳಿ, ಆಕೆಯ ಸಾಕ್ಷಿಯೊಂದಿಗೆ ಉಯಿಲು ಬರೆದು ತೀರಿಕೊಂಡನು.
ಭವಾನಿ ತುಂಬಾ ಸಹೃದಯಿ, ವಾತ್ಸಲ್ಯಮಯಿ, ಶಾಂತಸ್ವಭಾವ ಹಾಗೂ ಸಹನಶೀಲಳು. ಗಂಡನ ಸಾವಿನಿಂದ ಆಘಾತಕ್ಕೊಳಗಾದಳು. ಜೊತೆಗೆ ತನ್ನ ಮಗ ಎಲ್ಲಿ ಹುಡುಕಿದರೂ ಸಿಗ¯ಲ್ಲ ಮತ್ತು ಮನೆಗೂ ಬರಲಿಲ್ಲ ಎಂದು ಚಿಂತಾಕ್ರಾಂತಳಾದಳು. ತಮ್ಮ ಬರಲಿಲ್ಲವೆಂದು ವ್ಯಾಕುಲಗೊಂಡ ಗೋಕುಲ ದಿನೇ ದಿನೇ ಕೋಪಿಷ್ಟನಾಗುತ್ತಾ ಹೋದ. ಊರಿನವರ ಚುಚ್ಚು ಮಾತುಗಳಿಂದ ತಮ್ಮನ ಆಸ್ತಿಯನ್ನು ಕಸಿದುಕೊಂಡ ಕಳ್ಳ, ವಂಚಕನೆಂದು ಬೆರಳು ಮಾಡಿ ತೋರಿಸಿದಾಗ ತಾಯಿಯ ಮೇಲೆ ಎಗರಾಡುತ್ತಿದ್ದನು. “ನೀನೇಕೆ ಉಯಿಲಿಗೆ ಸಹಿ ಮಾಡಿದೆ. ಈಗ ನೋಡು ತಮ್ಮ ಮುನಿಸಿಕೊಂಡು ಅದಕ್ಕಾಗಿಯೇ ಬರುತ್ತಿಲ್ಲ” ಎನ್ನುತ್ತಿದ್ದನು.
ಹೇಗೋ ಏನೋ ತಂದೆಯ ಶ್ರಾದ್ಧಕ್ಕೆಂದು ವಿನೋದ ಮನೆಗೆ ಹಿಂದಿರುಗುತ್ತಾನೆ. ಆದರೆ ಮನೆಯಲ್ಲಿ ಆಳುಕಾಳುಗಳು ಬಿಟ್ಟು ಅವನನ್ನು ಯಾರೂ ಮಾತನಾಡಿಸಲಿಲ್ಲ. ತುಂಬಾ ಬೇಸರದಿಂದ ಕೋಣೆಯಲ್ಲಿ ಕುಳಿತಿರುವಾಗ ಗೋಕುಲ ಅವನೆಡೆಗೆ ಬಂದು ಆಳುಗಳಿಗೆ ಹೇಳುತ್ತಾನೆ- “ನನ್ನ ತಮ್ಮ ಯಾರೂ ಓದದ್ದನ್ನು ಓದಿ ಮೆಡಲ್ ಪಡೆದಿದ್ದಾನೆ. ಅವನು ಬರೀ ಇಂಗ್ಲೀಷ್‍ನಲ್ಲೇ ಮಾತನಾಡುತ್ತಾನೆ. ನೋಡು ಅವನು ಓದಿ ಓದಿ ಬಡವನಾಗಿದ್ದಾನೆ ಅವನಿಗೆ ಎಣ್ಣೆ, ನೀರು, ತುಪ್ಪ ಬೇಕಾದ ಹಣ್ಣು ಹಂಪಲುಗಳ ಊಟ ಮಾಡಿ ಬಡಿಸು. ನಂತರ ಶ್ರಾದ್ಧಕ್ಕೆ ಬೇಕಾದ ಸಕಲ ಸಿದ್ಧತೆಗಳು ಅವನೇ ನೋಡಿಕೊಳ್ಳಲಿ. ತಗೋ, ಈ ಕಬ್ಬಿಣದ ಪೆಟ್ಟಿಗೆ ಬೀಗದ ಕೈ ಕೊಡು” ಎಂದು ಹೇಳಿ ಕಣ್ಣಲ್ಲಿ ಮಿಂಚಿ ಮರೆಯಾದ ಭಾಷ್ಪದೊಂದಿಗೆ ತೆರಳಿ ಬಿಡುತ್ತಾನೆ. ಇದು ಗೋಕುಲನಿಗೆ ಅವನ ತಮ್ಮನ ಮೇಲೆ ಇದ್ದ ಆಂತರಿಕ ಪ್ರೀತಿಗೆ ಸಾಕ್ಷಿ.
ಆದರೆ ವಿನೋದ ಆ ಜವಾಬ್ದಾರಿ ವಹಿಸಲು ನಿರಾಕರಿಸಿದಾಗ ಮತ್ತೆ ಗೋಕುಲ ಕೋಪಗೊಳ್ಳುತ್ತಾನೆ. ಹಾಗೆ ದಿನಗಳು ಉರುಳಿದಂತೆ ಶ್ರಾದ್ಧಕ್ಕೆಂದು ಬಂದ ಗೋಕುಲನ ಮಾವ ಹಾಗೂ ವಿನೋದನ ಮೇಷ್ಟ್ರು ದಯಾಳ್ ಬ್ಯಾನರ್ಜಿ ಇಬ್ಬರ ಕಿವಿ ಊದುತ್ತಾರೆ. ಅದರಲ್ಲೂ ವಿನೋದ ಗೋಕುಲನ ಮೇಲೆ ದಾವೆ ಹಾಕಲು ಪ್ರೇರೇಪಿಸುತ್ತಾನೆ.
ಗೋಕುಲನ ಮಾವ ಅಂಗಡಿಯಲ್ಲಿದ್ದ ಬಹಳ ಹಳೆಯ ನಂಬಿಕಸ್ತ ಆಳನ್ನು ತೆಗೆದುಹಾಕಿ ಅಂಗಡಿಯನ್ನು ಆಕ್ರಮಿಸಿಕೊಳ್ಳುತ್ತಾನೆ. ಆ ಆಳು ತಾಯಿಯ ಬಳಿ ಹೋದಾಗ ತಾಯಿ ಗೋಕುಲನ ಬಳಿ ಬಂದು, “ಆಳು ಚಕ್ರವರ್ತಿ ಅಂಗಡಿಗೆ ಹೋಗಲಿ. ಬೀಗದ ಕೈ ಮತ್ತು ಲೆಕ್ಕದ ಪುಸ್ತಕ ಕೊಡು. ಬೀಗರು ಕಾರ್ಯಕ್ರಮಕ್ಕೆ ಬಂದವರು ಅದನ್ನು ಮುಗಿಸಿಕೊಂಡು ಹೋಗಲಿ, ನಮ್ಮ ವ್ಯವಹಾರದಲ್ಲಿ ತಲೆ ಹಾಕುವುದು ಬೇಡ” ಎಂದು ಹೇಳಿದ ತಕ್ಷಣ ತಾಯಿಯ ಆಜ್ಞೆಯನ್ನು ಪಾಲಿಸುತ್ತಾನೆ. ಹೆಂಡತಿ ಎಷ್ಟೇ ಗೋಳಾಡಿದರೂ ತಾಯಿಯ ಮಾತನ್ನು ಧಿಕ್ಕರಿಸುವುದಿಲ್ಲ.
ಆದರೆ ಸಂದರ್ಭಗಳು ಬಹಳ ವಿಚಿತ್ರ ರೀತಿಯಲ್ಲಿ ಬೆಳೆದು ಗೋಕುಲನ ಮಾವ ತಾಯಿ ಮಗನನ್ನು ಮನೆಯಿಂದ ಓಡಿಸುವಂತೆ ತಿಳಿಸಿ ಸಫಲನಾಗುತ್ತಾನೆ. ಈ ಮಧ್ಯೆ ವಿನೋದ ತಾಯಿಯನ್ನು ಮನೆ ಮಾಡಿ ಕರೆದೊಯ್ಯುವಾಗ ಗೋಕುಲನ ಹೃದಯ ಹಿಂಡಿ ಹಿಪ್ಪೆಯಾಗಿ ಛಿಧ್ರವಾಗುತ್ತದೆ. ತಾಯಿಯನ್ನು ಕಳುಹಿಸಲಾಗದೆ ಪ್ರತಿದಿನ ಒಂದೊಂದೆ ಕಾರಣ ಒಡ್ಡುತ್ತಾ, ಏಕಾದಶಿ, ದ್ವಾದಶಿ, ತ್ರಯೋದಶಿ, ಎಂದು ಮುಂದೂಡುತ್ತಿರುತ್ತಾನೆ. ಇದೆಲ್ಲಾ ಅವನು ತನ್ನ ತಾಯಿಯ ಮೇಲಿನ ಅಕ್ಕರೆಯಿಂದ ಮಾಡುತ್ತಿದ್ದ ಪರಿ.
ಆದರೆ ವಿನೋದ ತಾಯಿಯನ್ನು ಕರೆದುಕೊಂಡು ಬೇರೆ ಮನೆಗೆ ಹೋದಾಗ, ಒಂದು ದಿನ ಅಲ್ಲಿಗೆ ಹೋದ ಗೋಕುಲ ತಮ್ಮನಿರುವುದು ಗೊತ್ತಿಲ್ಲದೆ ಕೆಲಸದವಳೊಂದಿಗೆ, “ಅಪ್ಪನ ನಿಜವಾದ ಉಯಿಲು ಅಮ್ಮನನ್ನು ಕೊನೆಯವರೆಗೂ ನಾನು ನೋಡಿಕೊಳ್ಳಬೇಕೆಂದು. ಈ ಆಸ್ತಿಯಲ್ಲ. ನನ್ನ ತಮ್ಮ ಯಾವಾಗ ಸರಿ ಹೋಗುತ್ತಾನೋ, ಯಾವಾಗ ಅವನಿಗೆ ಆಸ್ತಿಯನ್ನು ಕೊಡುತ್ತೇನೋ ಎಂದು ಕಾದಿದ್ದೇನೆ,” ಎನ್ನುತ್ತಾನೆ.
ಒಮ್ಮೆ ಆಳು ಚಕ್ರವರ್ತಿ ಬಂದಾಗ ವಿನೋದ ಅವನನ್ನು ಗೋಕುಲನ ಮಾವನ ದರ್ಬಾರು ಹೇಗೆ ನಡೆಯುತ್ತಿದೆ ಎಂದು ಕೇಳುತ್ತಾನೆ. ಅದಕ್ಕೆ ಆಳು “ಎಲ್ಲಿ ಚಿಕ್ಕರಾಯರೇ, ಅಮ್ಮಾವ್ರು ಹೇಳಿದ ಮೇಲೆ ಅವರು ಅಂಗಡಿಯ ಕಡೆ ಬರುವಂತಿಲ್ಲ. ಎಲ್ಲಾ ನಾನೇ ನೋಡಿಕೊಳ್ಳುತ್ತಿದ್ದೇನೆ” ಎನ್ನುತ್ತಾನೆ.
ಎಲ್ಲರೂ ಒಂದು ದಿನ ಒಟ್ಟಾಗಿ ಸೇರಿದ್ದಾಗ ಊರಿನ ಕೆಲವು ಹಿರಿಯರೆಲ್ಲಾ ವಿನೋದನನ್ನು ಆಸ್ತಿ ಕೇಳುವಂತೆ ಪ್ರಚೋದಿಸುತ್ತಾರೆ. ಗೋಕುಲ ಆಸ್ತಿಯನ್ನು ಲಪಟಾಯಿಸಿರುವನೆಂಬ ಊರವರ ಆರೋಪದಿಂದ ವ್ಯಗ್ರಗೊಂಡ ಗೋಕುಲ ಹೀಗೆನ್ನುತ್ತಾನೆ, “ಹೇ! ನೀನು ನನ್ನ ಕಾಲು ಮುಟ್ಟಿ ಪ್ರಮಾಣ ಮಾಡಿ ಹೇಳು, ನಿನಗೆ ನಾನು ಮೋಸ ಮಾಡುತ್ತಿರುವೆನೆಂದು, ನಾನು ಈ ಕ್ಷಣವೇ ಎಲ್ಲಾ ಆಸ್ತಿಯನ್ನು ನಿನಗೊಪ್ಪಿಸುತ್ತೇನೆ.”
ವಿನೋದ ನಿಧಾನವಾಗಿ ಬಂದು ಅಣ್ಣನ ಕಾಲು ಮುಟ್ಟಿ “ಹೌದಣ್ಣ, ಇಂತಹ ಸಮಯ ಮತ್ತೆ ಬಾರದು. ನಾನು ನಿನ್ನ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ, ಇನ್ನೆಂದೂ ಮದ್ಯವನ್ನು ಮುಟ್ಟುವುದಿಲ್ಲ” ಎನ್ನುತ್ತಾನೆ.
ಕೌಟುಂಬಿಕ ಸಂಬಂಧಗಳು ಹಾಳಾಗುತ್ತಿರುವ ಈ ದಿನಗಳಲ್ಲಿ ಈ ಪುಸ್ತಕ ನಮ್ಮ ಕಣ್ಣನ್ನು ತೆರೆಸುತ್ತದೆ. ಅಣ್ಣತಮ್ಮಂದಿರ ಮಧುರ ಸಂಬಂಧ, ಮಲತಾಯಿ - ಮಲಮಗನ ನಡುವೆ ಇರುವ ಪ್ರೀತಿಯನ್ನು ನಮ್ಮ ಮುಂದಿರಿಸುತ್ತದೆ.
ಕೇವಲ ಪದವಿಗಳನ್ನು ಪಡೆದರೆ ಸಂಸ್ಕೃತಿಯನ್ನು ಪಡೆಯಲಾಗುವುದಿಲ್ಲವೆಂದು ವಿನೋದನ ಪಾತ್ರದ ಮೂಲಕ, ಅವಿದ್ಯಾವಂತನಾದರೂ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬಹುದೆಂಬುದನ್ನು ಗೋಕುಲನ ಮೂಲಕ ಚಿತ್ರಿಸಿದ್ದಾರೆ. ಆದರೆ ವಿದ್ಯೆಯ ಮಹತ್ವವನ್ನು ಎತ್ತಿಹಿಡಿಯಲು ಗೋಕುಲನ ಮೂರ್ಖತನವನ್ನು ತೋರಿಸುತ್ತಾರೆ.
ಹೆಂಡತಿಗಾಗಿ ತಾಯ್ತಂದೆಯರನ್ನು ದೂರಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹೆಂಡತಿ, ಮಾವನ ಮಾತನ್ನು ಕೇಳದೆ ತಾಯಿಯ ಮಾತಿಗೆ ಮನ್ನಣೆ ನೀಡುವ ಗೋಕುಲ ನಮ್ಮ ಮುಂದೆ ಆದರ್ಶವಾಗಿ ನಿಲ್ಲುತ್ತಾನೆ.
ಯಾವತ್ತಿಗೂ ಒಳ್ಳೆಯತನವೇ ರಾರಾಜಿಸುತ್ತದೆ ಎಂಬುದನ್ನು ಅಮೋಘವಾಗಿ ಚಿತ್ರಿಸಿರುವ ಶರತ್‍ರ ಕಾದಂಬರಿಯನ್ನು ನಮಗೆ ಓದಲು ಅವಕಾಶವಾಗುವಂತೆ ಕನ್ನಡಕ್ಕೆ ಅನುವಾದ ಮಾಡಿರುವ ಹೆಚ್.ಕೆ. ವೇದವ್ಯಾಸಾಚಾರ್ಯರವರನ್ನು ನಾವು ಅಭಿನಂದಿಸಲೇಬೇಕು. ಆ ಸವಿಯನ್ನು ಸವಿಯಲು ನಾವೆಲ್ಲರೂ ಒಮ್ಮೆಯಾದರೂ ಆ ಕಾದಂಬರಿಯನ್ನು ಓದಲೇಬೇಕು.
ಕಥೆ ಸರಳವಾದರೂ ಅದನ್ನು ಓದುಗರಿಗೆ ಒಂದಷ್ಟು ನಗೆ, ಒಂದಷ್ಟು ನೋವು ದು:ಖಗಳೊಂದಿಗೆ ಲೇಖಕರು ಮೂಡಿಸಿರುವ ರೀತಿ, ಬಳಸಿರುವ ಭಾಷೆಗೆ ನನ್ನ ಮೆಚ್ಚುಗೆ, ಅಭಿನಂದನೆ ಇದೆ. ನಿಮ್ಮದು .........? ಓದಿ ಉತ್ತರಿಸಿ.
- ಜಮುನಾ ವಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ