Pages

ನಾಟಕ - ಅಗ್ನಿ ಪರ್ವತಗಳಲ್ಲಿ ಅರಳಿದ ಹೂಗಳು



(ಹಿನ್ನೆಲೆಯಲ್ಲಿ ದುಃಖಭರಿತ ಹಿಂದೂಸ್ಥಾನಿ ಸಂಗೀತದ ಆಲಾಪನೆ. ನಂತರ ಕೂಗಾಟ, ಕಿರುಚಾಟ, ಚೀತ್ಕಾರಗಳು ಕೇಳಿಬರುತ್ತವೆ. ಪೈಶಾಚಿಕ ನಗು, ಕೂಗು, ಆವರಿಸುತ್ತದೆ. ಒಟ್ಟಾರೆ ಗಲಭೆಯ ವಾತಾವರಣ)

ಧ್ವನಿ-1 : ಅವನನ್ನು ಬಿಡಬೇಡ ಕೊಲ್ಲು. (ಚೀತ್ಕಾರ)
ಧ್ವನಿ-2 : ಮೂರನೆ ಮನೆಗೆ ಮಾತ್ರ ಬೆಂಕಿ ಹಾಕಿ ಪೆಟ್ರೋಲ್ ಸುರಿರಿ. ಯಾರನ್ನೂ ಹೊರಗೆ ಬಿಡಬೇಡಿ. (ಕಿರುಚಾಟ, ಸುಡುವ ಶಬ್ಧ ಕೇಳಿಬರುತ್ತದೆ)
ಗುಂಪು-1: ಅದಲ್ಲ, ಅದಲ್ಲ. ಅದರ ಪಕ್ಕದ ಅಂಗಡಿ ಒಡಿ. ನುಗ್ರೋ, ಎಲ್ಲಾನೂ ಎತ್ಕೊಳ್ರೋ.
ಧ್ವನಿ-3 : ಏ.ಏ, ಅವನು ನಮ್ಮ ಕಡೆಯವನು. ನೀನು ಬಾರೋ, ಸಾಯಿಸೋ, ಹೇಡಿ, ಅವನನ್ನು ಕೊಲ್ಲು, ಇಲ್ಲಾಂದ್ರೆ.....
ಧ್ವನಿ-4 : ಏನೋ, ಕೊಲ್ಲಲ್ವಾ, ಇವನಿಗೇ ಚಾಕು ಹಾಕ್ರೋ. (ಚೀತ್ಕಾರ)
ಧ್ವನಿ-5 : ದಯವಿಟ್ಟು ನನ್ನ ಮಗಳಿಗೆ ಏನೂ ಮಾಡ್ಬೇಡಿ. ಬೇಕಿದ್ರೆ ನನ್ನನ್ನ ಸಾಯಿಸ್ಬಿಡಿ (ಹೆಣ್ಣಿನ ಕೂಗಾಟ). ಅಯ್ಯೋ ನಾನ್ಯಾಕೆ ಬದುಕಬೇಕು.
ಗುಂಪು-2: ಪೊಲೀಸ್. ಪೊಲೀಸ್.
ಧ್ವನಿ-3 : ಅವರೇನೂ ಮಾಡಲ್ಲ.
ಗುಂಪು-2: ಯೇ ಅಂಧರ್‍ಕಿ ಬಾತ್ ಹೈ, ಪೊಲೀಸ್ ಹಮಾರಾ ಸಾಥ್ ಹೈ.
ಧ್ವನಿ-2 : ಲಾಠಿ, ಕತ್ತಿ ತಗೊಳ್ಳಿ. ನೀನು ಇವರನ್ನ ಪಕ್ಕದ ಬೀದಿಗೆ ಕರ್ಕೊಂಡು ಹೋಗು. ನೀನು ಇವರನ್ನ ಬಜಾರ್‍ಗೆ ಕರ್ಕೊಂಡು ಹೋಗು. ತಗೋ, ಕಂಪೆನಿಗಳ ಲಿಸ್ಟ್.
(ವಿಚಿತ್ರವಾದ ಕೂಗುಗಳು, ಉನ್ಮಾದದ ನಗು, ಘೋಷಣೆಗಳು ಕೇಳಿ ಬರುತ್ತವೆ)
ಬಾಲಕ : (ಬಾಗಿಲು ತಟ್ಟುತ್ತಾ) ಫಾತಿಮಾ ಆಂಟಿ, ಫಾತಿಮಾ ಆಂಟಿ, ಬೇಗ ಓಡಿಹೋಗಿ. (ಉತ್ತರ ಬರುವುದಿಲ್ಲ)
ಬಾಲಕ : ರೆಹಮಾನ್, ರೆಹಮಾನ್ (‘ಓ’ ಎಂಬ ಶಬ್ದ ಮನೆಯಿಂದ ಕೇಳಿಬರುತ್ತದೆ). ಬೇಡ ಹೊರಗೆ ಓಡಿ ಹೋಗಿ. ಅವರು ಪೆಟ್ರೋಲ್ ಬಾಂಬ್ ಹಿಡ್ಕೊಂಡ್ ಬರ್ತಿದ್ದಾರೆ)
ರೆಹಮಾನ್: (ಒಳಗಿನಿಂದ) ಯಾರೋ, ಮೂರ್ತಿ?
ಮೂರ್ತಿ : ನನಗೂ ಗೊತ್ತಿಲ್ಲ. ಬೇಗ ಓಡಿ ಹೋಗಿ.
(ರೆಹಮಾನ್, ಫಾತಿಮಾ ಹೊರಗೆ ಓಡಿಹೋಗುತ್ತಾರೆ. ಕೈಯಲ್ಲಿ ಪುಟ್ಟ ಗಂಟು)
(ಹಿಂದೂಸ್ಥಾನಿ ಸಂಗೀತದ ಆಲಾಪನೆ ಕೇಳಿ ಬರುತ್ತದೆ)
ಭುಗಿಲೆದ್ದ ಕೋಮು ಗಲಭೆ, 64 ಬಲಿ, ಸತ್ತವರಲ್ಲಿ 10 ಎಳೆಯ ಕಂದಮ್ಮಗಳು. ನಿಲ್ಲದ ಹಿಂಸಾಚಾರ. ಮರೆತ ಮಾನವೀಯತೆ  ಮೆರೆದ ಪೈಶಾಚಿಕತೆ.
ದೃಶ್ಯ -2
(ಮನೆಯ ದೃಶ್ಯ. ಮನೆ ಹಿರಿಯ ಚಿಂತೆಯಿಂದ ಯೋಚಿಸುತ್ತಾ ಕುಳಿತಿದ್ದಾನೆ. ಹೆಂಡತಿಯೂ ಚಿಂತೆಯಲ್ಲಿ ಮುಳುಗಿದ್ದಾಳೆ. 14 ವರ್ಷದ ಬಾಲಕ ಕಿವಿ ಮುಚ್ಚುವಂತೆ ಬಟ್ಟೆ ಸುತ್ತಿಕೊಂಡು ತಂದೆಯ ತೊಡೆಯ ಮೇಲೆ ಮಲಗಿದ್ದಾನೆ. ಬಾಗಿಲು ಬಡಿಯುವ ಶಬ್ದ ಕೇಳುತ್ತದೆ. ಎಲ್ಲರೂ ಆತಂಕ, ಗಾಬರಿ, ಭಯದಿಂದ ಬಾಗಿಲು ಬಡಿಯುವ ಶಬ್ದ ಕೇಳುತ್ತದೆ. ಮತ್ತೆ ‘ದಡದಡ’ ಬಾಗಿಲು ಬಡೆಯುವ ಶಬ್ದ. ‘ಯಾರು’ ಎಂಬ ಕೂಗಿಗೆ ‘ಕಾಪಾಡಿ, ಕಾಪಾಡಿ’ ಎನ್ನುವ ಮಹಿಳೆಯ ಅಳುಧ್ವನಿ, ಮನೆಹಿರಿಯ ಮೊದಲು ಕಿಟಕಿಯ ಮೂಲಕ ನೋಡಿ ನಂತರ ಬಾಗಿಲು ತೆಗೆಯುತ್ತಾನೆ. ಹೊರಗೆ ಫಾತಿಮಾ, ರೆಹಮಾನ್‍ನನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದಾಳೆ. ಇಬ್ಬರೂ ಕ್ಷಣಕಾಲ ದಿಟ್ಟಿಸಿ ನೋಡುತ್ತಾರೆ. ಅಷ್ಟರಲ್ಲಿ ಚೀತ್ಕಾರದ ದನಿ ಬರುತ್ತದೆ.)
ಹಿರಿಯ : ಬೇಗ ಒಳಗಡೆ ಬನ್ನಿ. (ಇಬ್ಬರೂ ಒಳಗೆ ಬರುವರು, ಬಾಗಿಲು ಮುಚ್ಚುತ್ತಾನೆ. ಫಾತಿಮಾ ಮೂಲೆಯಲ್ಲಿ ನಿಂತುಕೊಂಡೇ ಅಳಲಾರಂಭಿಸುತ್ತಾಳೆ)
ಮಗು : ಏಯ್, ರೆಹಮಾನ್.
ಫಾತಿಮಾ : ಇವರು ಮನುಷ್ಯರಾ. ನಾನೇನು ಮಾಡಲಿ. ಎಲ್ಲಿಗೆ ಹೋಗ್ಲಿ. ಆ ಮಗೂಗೆ ಏನು ಕೊಡ್ಲಿ. ಅಲ್ಹಾ, ನಮಗ್ಯಾಕೆ ಇಂತ ಕಷ್ಟ ಕೊಟ್ಟೆ.
ಹಿರಿಯ : ಸಮಾಧಾನ ಮಾಡ್ಕೋಮ್ಮ. ಆಮೇಲೆ ಎಲ್ಲಾ ಸರಿಹೋಗುತ್ತೆ. ರಘು, ಹುಡುಗನಿಗೆ ಏನಾದರೂ ತಿನ್ನೋದಕ್ಕೆ ಕೊಡಪ್ಪಾ.
ಫಾತಿಮಾ: ಏನು ಸರಿಹೋಗುತ್ತೆ. 10 ವರ್ಷದ ಹಿಂದೆ ಹೇಗೋ ನೆಮ್ಮದಿಯಾಗಿ ಹಳ್ಳೀಲಿದ್ವಿ. ಆಗ್ಲೂ ಹೀಗೆ ಮಾಡಿದ್ರು. ಅಲ್ಲಿಂದ ಓಡ್ಸಿದ್ರು. ಇವರಪ್ಪ, ಇದು ನಾನು ಹುಟ್ಟಿದ ಜಾಗ, ಬಿಡಲ್ಲ ಅಂದದ್ದಕ್ಕೆ ಮನೆಗೆ ಬೀಗ ಹಾಕಿ ಹೊಡೆದ್ರು. ಜೀವ ಉಳಿದ್ರೆ ಯಾವತ್ತಾದ್ರೂ ಹೋಗೋಣ ಅಂದ್ಕೊಂಡಿದ್ರು. ಇಲ್ಲಿ, ಎಂಗಾದ್ರೂ ಜೀವನ ಮಾಡ್ಬಹುದು ಅಂತ ಬಂದ್ವಿ. ಓದ್ ವರ್ಷದ ಎಲೆಕ್ಷನ್‍ಗೂ ಮುಂಚೆ ಗಲಾಟೆ ಆಯ್ತು. ವ್ಯಾಪಾರಕ್ಕೆ ಅಂತ ಓಗಿದ್ದ ಇವ್ರಪ್ಪನ ಕೊಂದ್ರು. ಈ ಮಗೂಗೋಸ್ಕರ ಜೀವ ಇಟ್ಕಂಡು, ಅಲ್ಲಿ ಇಲ್ಲಿ ಕೆಲಸ ಮಾಡ್ಕೊಂಡು ಸಾಕ್ದೆ. ಇವತ್ತು ಎಲ್ಲಾನೂ ನಾಶನ ಮಾಡಿದ್ರು. ನೀವೇ ಹೇಳಿ. ನಾ ಏನ್ ಮಾಡ್ಲಿ. ಎಲ್ಲಿಗೆ ಹೋಗ್ಲಿ. ಇರೋದ್‍ಕಿಂತ ಸಾಯೋದೇ ವಾಸಿ.
ಹಿರಿಯ: ಸತ್ತು ಏನ್ ಮಾಡ್ತೀಯಮ್ಮ.
ಫಾತಿಮಾ: ಬದುಕಿದ್ ಏನ್ ಮಾಡ್ಲಿ. ಎಲ್ಲೋದ್ರು ರಾಕ್ಷಸರೇ ಜನ ಸಾಯೋದು. ಮನೆ ಹತ್ಕೊಳ್ಳೋದು, ಮನುಷ್ಯರನ್ನ ಜೀವಂತ ಸುಡೋದು. ಇದನ್ನೇ ನೋಡ್ತಾ, ನೋಡ್ತಾ, ನಾ ಹುಚ್ಚಿಯಾಗಿಬಿಡ್ತೀನಿ.
ಹಿರಿಯ: ಸಮಾಧಾನ ಮಾಡ್ಕೊಳಮ್ಮಾ. ಈ ಮಗನ ಭವಿಷ್ಯ ಬಗ್ಗೆ ಯೋಚನೆ ಮಾಡು 
ಫಾತಿಮಾ : ಅವನಿಗೆ ಇನ್ನೇನಿದೆ. ಇನ್ನೆಲ್ಲಾದ್ರೂ ಸಾಯೋಕೆ. ನಮ್ಮಂತವರನ್ನ ಬದುಕೋಕೆ ಬಿಡ್ತಾರಾ. ಎಲ್ಲೋದ್ರು ಅಷ್ಟೇ. ಎಲ್ಲಾ ರಾಕ್ಷಸರು. ಗರ್ಭಿಣಿ ಹೆಂಗಸ ಹೊಟ್ಟೆ ಸೀಳಿ ಮಗು ಎಳೆಯೋರಿಗೆ ನನ್ನ ಮಗ ಏನು?
ರೆಹಮಾನ್: (ಅಳುತ್ತಾ) ಅಮ್ಮೀ....
ಹಿರಿಯ : ಆ ಮಗು ಮುಂದೆ ಏನ್ ಮಾತಾಡ್ತೀಯ. ಪ್ರಪಂಚ ಎಲ್ಲಾ ಹೀಗೆ ಇಲ್ಲ. ಎಲ್ಲಾ ಕಡೆ ಒಳ್ಳೇ ಜನರೂ ಇದ್ದಾರೆ.
ಫಾತಿಮಾ : ಎಲ್ಲಿ, ಎಲ್ಲಿ ತೋರಿಸಿ, ನನಗೆ ತೋರಿಸಿ. ಆ ಒಳ್ಳೆಯವ್ರು ನನ್ನ ಮನೆ ಉಳಿಸಿದ್ರಾ. ಇವರಪ್ಪನ್ನ ಉಳಿಸಿದ್ರಾ. ಪಕ್ಕದ ಮನೆ ನೂರ್‍ಳನ್ನ ಉಳಿಸಿದ್ರಾ. ಎಲ್ಲಿ, ಅವರು ಎಲ್ಲಿದ್ದಾರೆ?
ಹಿರಿಯ : ನಾನು, ನೀನು ನೋಡಿರೊ ಪ್ರಪಂಚ ಚಿಕ್ಕದು. ಫಾತಿಮಾ, ಪ್ರಪಂಚ ಇದಕ್ಕಿಂತ ವಿಶಾಲವಾಗಿದೆ. ಬೇರೆಯವರಿಗೋಸ್ಕರ ಸಹಾಯ ಮಾಡೋ ಜನ, ಜೀವ ಕೊಡೋ ಜನಾನು ಇದ್ದಾರೆ.
ಫಾತಿಮಾ: ಎಲ್ಲಿದ್ದಾರೆ? ಹೇಳಿ ಅವರ್ಯಾಕೆ ಇಲ್ಲಿಲ್ಲ.
ಹಿರಿಯ: ಇದ್ದಾರೆ. ಇದ್ದಾರೆ, ತಮ್  ಜುಟ್ಟನ್ನ ಈ ನರರಾಕ್ಷಸರ ಕೈಗೆ ಕೊಟ್ಟು ಕುಳಿತಿದ್ದಾರೆ.
ಫಾತಿಮಾ: ಇಲ್ಲ, ಇಲ್ಲ, ನನಗೆ ನಂಬಿಕೆ ಬರ್ತಾ ಇಲ್ಲ.
ಹಿರಿಯ: ಹೌದು, ಊರಿಗೆ ಊರೇ ಹತ್ತಿ ಉರೀತಿರುವಾಗ, ಬೆಂಕಿಯ ಶಾಖಕ್ಕೆ ತಂಗಾಳಿ ಇದೆ ಅನ್ನೋದೇ ಮರೆತು ಹೋಗುತ್ತೆ. ಆದರೆ ಬೆಂಕೀನೆ ಸರ್ವಸತ್ಯ ಅಲ್ಲ. ಬೆಂಕಿ ಆರಲೇಬೇಕು. ತಂಗಾಳಿ ಬೀಸಲೇಬೇಕು. ಅದಕ್ಕೂ ಮುನ್ನ ಬೆಂಕೀನ ಆರಿಸೊ ಕೆಲಸ ನಾವು ಮಾಡಬೇಕು. ಕೇಳಮ್ಮ, ನನ್ನ ಜೀವನದಲ್ಲಿ ನೋಡಿದ ಒಂದು ಕಥೆ ಹೇಳ್ತೀನಿ.
ರಾಮಳ್ಳಿ ಅಂತ ಒಂದು ಸಣ್ಣ ಊರು. ಹೆಚ್ಚಿಗೆ ಬಡವರಿದ್ದ ಆ ಊರಲ್ಲಿ ಎಲ್ಲರೂ ಅನ್ಯೋನ್ಯವಾಗಿದ್ದರು. ಊರಿಗೆ ಸೂರ್ಯನ ಬೆಳಕು ಬೀರುವ ಸಮಯಕ್ಕೆ ಸರಿಯಾಗಿ ಸಂಗೀತದ ಸ್ವರ ಕೇಳಿಸುತ್ತಿತ್ತು. ಊರಿನ ಪುರೋಹಿತರ ಮಗಳು ಕಾತ್ಯಾಯಿನಿ ಬಹಳ ಚೆನ್ನಾಗಿ ಸಂಗೀತ ಕಲಿತಿದ್ದಳು. ನಮ್ಮೂರಿನ ಹಿರಿಯ ಮೌಲ್ವಿಯೊಬ್ಬರು ಅವಳ ಸಂಗೀತದಲ್ಲೇ ತಮ್ಮ ಎಷ್ಟೋ ಕಷ್ಟ, ದುಃಖಗಳನನು ಮರೀತಾ ಇದ್ರು. ಆ ಹುಡುಗಿ ಹಾಡೋದಿಕ್ಕೆ ಶುರು ಮಾಡಿದ್ರೆ.....
(ರಂಗ ನಿಧಾನವಾಗಿ ಕತ್ತಲಾಗುತ್ತೆ)
ದೃಶ್ಯ-3
(ಹಿನ್ನೆಲೆಯಲ್ಲಿ ಕರ್ನಾಟಕ ಸಂಗೀತದಲ್ಲಿ ಆಲಾಪನೆ. ರಂಗದ ಮೇಲೆ ನಿಧಾನವಾಗಿ ಬೆಳಕು ಬರುತ್ತದೆ)
ಹಾಡು. ದಯವಿಲ್ಲದ ಧರ್ಮ ಯಾವುದಯ್ಯ
ದಯವೇ ಧರ್ಮದ ಮೂಲವಯ್ಯ
(ಕಾತ್ಯಾಯಿನಿ ಈ ಹಾಡಿಗೆ ತಕ್ಕಂತೆ ಕೆಲವು ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದಾಳೆ. ಮೌಲ್ವಿ ನಿಧಾನವಾಗಿ ಬಂದು ಅಲ್ಲೇ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ)
ಕಾತ್ಯಾಯಿನಿ: (ಮೌಲ್ವಿಯನ್ನು ನೋಡಿ) ಯಾವಾಗ ಬಂದಿರಿ?
ಮೌಲ್ವಿ : ಈಗ ತಾನೆ ಬಂದೆ ಬೇಟಿ. ತಗೊ (ಪೊಟ್ಟಣವನ್ನು ಕೊಡುವನು)
ಕಾತ್ಯಾಯಿನಿ: ಏನಿದು?
ಮೌಲ್ವಿ: ಇವತ್ತು ಮೊಹರಂ ಕಡೇ ದಿನ ಅಲ್ವಾ. ಅದ್ಕೆ ಮಕ್ಕಳಿಗೆ ಭಟ್ಟರ ಹೋಟೆಲಿಂದ ಸಿಹಿ ತಂದೆ. ಹಾಂ. ಬೇಟಿ, ಮನಸಿಗ್ಯಾಕೋ ಬೇಸರ. ಮೊನ್ನೆ ಹಾಡ್ತಿದ್ಯಲ್ಲಾ ಆ ವಚನ ಹಾಡು.
ಕಾತ್ಯಾಯಿನಿ: (ತಂಬೂರಿಯನ್ನು ಸರಿಪಡಿಸಿಕೊಳ್ಳುತ್ತಾ ಹಾಡುವಳು)
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ತನ್ನ ಬಣ್ಣಿಸಬೇಡ ಇತರ ಹಳಿಯಲು ಬೇಡ (ವ್ಹಾ, ವ್ಹಾ, ಹಾಯ್ ಅಲ್ಲಾ)
ಅನ್ಯರಿಗೆ ಅಸಹ್ಯ ಪಡಬೇಡ ಇದೇ ಅಂತರಂಗ ಶುದ್ಧಿ
ಇದೇ ಬಹಿರಂಗ ಶುದ್ಧಿ ಇದೇ ಕೂಡಲ ಸಂಗಮದೇವನೊಲಿವ ಪರಿ ||ಕಳಬೇಡ||
(ವ್ಹಾ, ವ್ಹಾ, ವ್ಹಾ, ಹಾಯ್ ಸುಭಾನಲ್ಲಾ)
ಮೌಲ್ವಿ : ಬೇಟಿ, ನಿನ್ನ ಸಂಗೀತ ಇಲ್ದೆ ಇದ್ದಿದ್ರೆ, ಹಜ್ ಯಾತ್ರೆಗೆ ಕಾಯೋದ್ರಲ್ಲಿ ಹುಚ್ಚನಾಗ್ತಿದ್ದೆ.
ಕಾತ್ಯಾಯಿನಿ: ನಿಮಗೆ ಬೇಕಾದಷ್ಟು ಹಣ ಸೇರ್ತಾ.
ಮೌಲ್ವಿ : ಇನ್ನೂ ಇಲ್ಲಾ ಬೇಟಿ, ಆಂ, ಸೇರುತ್ತೆ ಬಿಡು. ಅಲ್ಲಾ ಕೈ ಬಿಡಲ್ಲ.
ಕಾತ್ಯಾಯಿನಿ: (ನಗುತ್ತಾ) ಹಾಗಿದ್ರೆ , ನಿಮ್ಮ ಮರ ಹೂ ಬಿಟ್ಟಿಲ್ಲ.
ಮೌಲ್ವಿ : ಬಿಡುತ್ತೆ ಬೇಟಿ ಬಿಡುತ್ತೆ. ಮರ ಹೂ ಬಿಡುತ್ತೆ. ನಾನು ಹಜ್‍ಗೆ ಹೋಗೇ ಹೋಗ್ತೀನಿ.
(ಅಷ್ಟರಲ್ಲಿ ನಾರಾಯಣ ಶಾಸ್ತ್ರಿಗಳು ಬರುತ್ತಾರೆ)
ನಾ.ಶಾಸ್ತ್ರಿ: ಕಾತ್ಯಾ, ಹೋಗಮ್ಮ. ತಿಂಡಿ, ತಿನ್ನು ಹೋಗು, ಹೊತ್ತಾಯ್ತು.
ಮೌಲ್ವಿ : ಅರೆ ಇನ್ನೂ ತಿಂಡಿ ತಿಂದಿಲ್ವಾ? ಹೋಗು ಬೇಟಿ. ಚಿಕ್ಕ ವಯಸ್ಸಲ್ಲಿ ತುಂಬಾ ಹಸಿದುಕೊಂಡು ಇರಬಾರದು. (ಕಾತ್ಯಾ ಒಳಗೆ ಹೋಗುತ್ತಾಳೆ) ಶಾಸ್ತ್ರಿ, ನಿನ್ನ ಮಗಳು ಅದೆಷ್ಟು ಚೆನ್ನಾಗಿ ಹಾಡ್ತಾಳೆ. ಅವಳ ಸಂಗೀತ ಕೇಳ್ತಾ ಇದ್ರೆ ನಾನು ಎಲ್ಲಿದೀನಿ ಅನ್ನೋದೆ ಮರೆತು ಹೋಗುತ್ತೆ.
ನ್ಯಾ.ಶಾಸ್ತ್ರಿ : ನಿನ್ನ ಸಂಗೀತದ ಹುಚ್ಚನ್ನ  ಅವಳಿಗೆ ಹಚ್ಚಿದೀಯ. ನಿನ್ನ ಪ್ರೋತ್ಸಾಹ ಇಲ್ಲದಿದ್ರೆ ಅವಳೆಲ್ಲಿ ಕಲೀತಾ ಇದ್ದಳು. ಅವಳು ಹಾಡೋದನ್ನ ಕೇಳೋದಕ್ಕೆ ನನಗೂ ಇಷ್ಟಾನೇ..... (ನಿಟ್ಟುಸಿರು ಬಿಡುತ್ತಾ) ಆದ್ರೆ  ಏನೂ ಮಾಡೋದು, ಸಂಗೀತ ಅವಳಿಗೆ ಮದುವೆ ಮಾಡೋದಿಲ್ವಲ್ಲಾ......
ಮೌಲ್ವಿ : ಯಾಕೆ ಯೋಚ್ನೆ ಮಾಡ್ತೀಯಾ. ಅಲ್ಹಾ ಯಾವತ್ತೂ ಬಡವರ ಕೈ ಬಿಡಲ್ಲ. ನಮ್ಮ ಬೇಟಿಗೆ ಬಂದು ಒಳ್ಳೆ ಗಂಡು ಸಿಕ್ಕೇ ಸಿಗುತ್ತೆ. ಮದುವೆ ಆಗೇ ಆಗುತ್ತೆ. 
ನ್ಯಾ. ಶಾಸ್ತ್ರಿ : ನೀನು ಹರಸಿದ ಹಾಗೇ ಆಗ್ಲಿ. ಈ ಜೀವ ಹೋಗೋದ್ರೊಳಗೆ ಅವಳ ಮದುವೆ ಆಗ್ಬಿಟ್ರೆ ಸಾಕು.
ಮೌಲ್ವಿ : ಛಿ, ಏನು ಮಾತು ಅಂತ ಆಡ್ತೀಯಾ
ನ್ಯಾ. ಶಾಸ್ತ್ರಿ : (ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಾ) ಅವಳಿಗೋಸ್ಕರಾನೆ ನಾನು ಜೀವ ಹಿಡಿದುಕೊಂಡಿದ್ದೀನಿ. ತಾಯಿ ಇಲ್ಲದ ತಬ್ಬಲಿ. ಬೆನ್ನಿನ ಹಿಂದೆ ಮುಂದೆ ಯಾರೂ ಇಲ್ಲ.
ಮೌಲ್ವಿ : ಹುಂ. ಒಂದು ರೀತೀಲಿ ನಾವಿಬ್ಬರದೂ ಒಂದೇ ಕಥೆ. ನೀನು ಮಗಳಿಗೋಸ್ಕರ ಜೀವ ಹಿಡ್ಕೊಂಡಿದೀಯ, ನಾನು ಹಜ್ ಯಾತ್ರೆಗೆ ಜೀವ ಹಿಡ್ಕೊಂಡಿದೀನಿ.
ಮೌಲ್ವಿ : ಇರಲಿ ಬಿಡು. ಹುಂ. ನಾನು ಯಾರನ್ನೋ ನೋಡಬೇಕು. ರಂಗಪ್ಪ ಹಳೇ ಬಾಕಿ ಕೊಡ್ತೀನಿ ಅಂದಿದಾನೆ. ಈ ಸಲ ಬೆಳೆ ಚೆನ್ನಾಗಿ ಆಗಿದ್ರೆ ಆಗ್ಲೇ ಹೋಗ್ತಿದ್ದೆ. (ಆಕಾಶ ನೋಡುತ್ತಾ) ಆದ್ರೆ, ಮಳೆ ಬರೋ ಹಾಗಿಲ್ಲ. ಸರಿ, ನಾ ಹೊರಟೆ.
(ಮೌಲ್ವಿ ಹೊರಡುತ್ತಾರೆ)
ದೃಶ್ಯ-4
(ಹಳ್ಳಿಯ ಹೋಟೆಲ್. ಇಬ್ಬರು ಯುವಕರು. ಇಸ್ಮಾಯಿಲ್, ಮಹೇಶ್-ಟೀ ಕುಡಿಯುತ್ತಾ ಕುಳಿತಿದ್ದಾರೆ. ಒಂದಿಬ್ಬರು ಟೀ ಕುಡಿಯುತ್ತಾ, ಬೀಡಿ ಸೇದುತ್ತಾ ಕುಳಿತಿದ್ದಾರೆ. ಅಲ್ಲಿಗೆ ಕೃಷ್ಣ ಬರುತ್ತಾನೆ.)
ಇಸ್ಮಾಯಿಲ್: ಹೋ, ಬಾರೋ ಕೃಷ್ಣ ಬೆಂಗ್ಳೂರಿಂದ ಯಾವಾಗ್ ಬಂದ್ಯೋ?
ಕೃಷ್ಣ : ರಾತ್ರಿ ಬಂದೆ.
ಮಹೇಶ್ : ಭಟ್ರೆ, ನಮ್ಮ ಕೃಷ್ಣಂಗೆ ಟೀ ಕೊಡಿ. 
ಕೃಷ್ಣ : ದಾಸಪ್ಪನವರ ಹಾಡು ಕೇಳಿ ಬಹಳ ದಿನಗಳಾಗಿತ್ತು.
ಕೃಷ್ಣ : ನಮ್ಮ ಭಟ್ರ ಟೀ ಕುಡ್ದು ಬಹಳ ದಿನ ಆಗಿತ್ತು. ಇಸ್ಮಾಯಿಲ್, ನಮ್ಮ ವಾಲಿಬಾಲ್ ಟೀಮ್ ಹೇಗಿದೆ. (ಇಸ್ಮಾಯಿಲ್ ತಲೆ ಕೆಳಗೆ ಹಾಕುವನು)
ಭಟ್ರು : (ಟೀ ಕೊಡುತ್ತಾ) ಚೆನ್ನಾಗಿದೀಯಾ, ಕೃಷ್ಣ.
ಕೃಷ್ಣ : ಚೆನ್ನಾಗಿದ್ದೀನಿ ಭಟ್ರೆ.
ಮಹೇಶ್ : ಕೃಷ್ಣ, ಈ ಸಲ ಟೂರ್ನಮೆಂಟ್‍ನಲ್ಲಿ ಫೈನಲ್‍ನಲ್ಲಿ ಸೋತುಬಿಟ್ವಿ.
ಇಸ್ಮಾಯಿಲ್: ಯುಗಾದಿ ಹಬ್ಬಕ್ಕೆ ಮಾತ್ರ ಬಿಡಬಾರದು. ಏನಾದ್ರು ಮಾಡಿ ಗೆಲ್ಲಲೇ ಬೇಕು. ಕೃಷ್ಣ, ನೀನು ಆ ಟೈಮಿಗೆ ಬರ್ತೀಯಲ್ಲಾ.
ಕೃಷ್ಣ : ಮತ್ತೇ, ಬಂದೇ ಬರ್ತೀನಿ.
ಇಸ್ಮಾಯಿಲ್ : ಹಾಂಗಾದ್ರೆ, ಪ್ರಾಕ್ಟೀಸ್ ಶುರು ಮಾಡೇ ಬಿಡೋಣ.
ಮಹೇಶ್ : ಸರಿ ಮತ್ತೇ. ಸಾಯಂಕಾಲಾನೇ ಎಲ್ಲಾ ಸೇರ್ಬೇಕು ಅಂತ ಹೇಳ್ಬಿಡು.
(ಅಷ್ಟರಲ್ಲಿ ಮೌಲ್ವಿ ಬರುತ್ತಾರೆ)
ಕೃಷ್ಣ : ನಮಸ್ಕಾರ, ಮೌಲ್ವಿ ಸಾಹೇಬರಿಗೆ
ಮೌಲ್ವಿ : ಅರೆ, ಕೃಷ್ಣಾ, ಯಾವಾಗ ಬಂದೇ ಬೇಟಾ.
ಕೃಷ್ಣ : ರಾತ್ರಿ ಬಂದೆ. ಚೆನ್ನಾಗಿದ್ದೀರಾ?
ಭಟ್ರು : ನಮ್ಮ ಮೌಲ್ವಿ ಸಾಹೇಬರಿಗೆ ಹಜ್ ಯಾತ್ರೆ ಒಂದು ಬಿಟ್ಟರೆ ಎಲ್ಲವೂ ಚೆನ್ನಾಗೇ ಇದೆ. (ಎಲ್ಲರೂ ನಗುವರು)
ಮೌಲ್ವಿ : ನಿಮಗೆಲ್ಲಾ ನಗು. ಅಲ್ಲಾ, ಮುಸಲ್ಮಾನನಾಗಿ ಹುಟ್ಟಿದ ಮೇಲೆ ಹಜ್ó ಯಾತ್ರೆ ಮಾಡ್ದೇ ಹೋದ್ರೆ, ಏನ್ ಪುಣ್ಯ ಬರುತ್ತೆ.
ಒಬ್ಬ : ಅದೇನೋ ಸರಿ, ಆದ್ರೆ ಹಜ್óಗೆ ಹಣ ಸೇರ್ಸೋ ಆತುರದಲ್ಲಿ ತಿನ್ನದೆ ಸತ್ತು ಹೋದ್ರೆ ಹೇಗೆ ಅಂತ, (ಎಲ್ಲರೂ ನಗುವರು)
ಮೌಲ್ವಿ : (ಸ್ವಲ್ಪ ಭಯದಿಂದ) ಇಲ್ಲ, ಇಲ್ಲ, ಹಜ್ó ಯಾತ್ರೆ ಮಾಡ್ದೆ ಸಾಯೋದಿಲ್ಲ, ಈ ಸಲ ಬೆಳೆ ಚೆನ್ನಾಗಿ ಬಂದ್ರೆ, ಈ ವರ್ಷಾನೆ ಹೋಗ್ತೀನಿ. ಏನ್ ಮಾಡೋದು? ಅಲ್ಹಾನ ಇಚ್ಛೆ ಏನಿದೆಯೋ? ಅವನಿಗೆ ಬೇಕೂ ಅಂದಾಗ ಕರೆಸ್ಕೊಳ್ತಾನೆ.
ಇನ್ನೊಬ್ಬ: ಅಲ್ಲಾ ಮೌಲ್ವಿಜೀ, ಈಗ ಹಜ್ ಗೆ ಹೋಗ್ದೇ ಇದ್ರೆ ಏನಾಗುತ್ತೆ? ಎಲ್ರೂ ಹೋಗೇ ಹೋಗ್ತಾರ!
ಮೌಲ್ವಿ: ಆ ಪ್ರಶ್ನೆನೇ ಇಲ್ಲಾ, ಬೇರೆಯವ್ರ ಕಥೆ ಏನಾದ್ರೂ ಆಗ್ಲಿ. ನನಗಂತೂ ಹಜ್ಜಿಗೆ ಹೋಗೋದೇ ಕಡೆ ಆಸೆ. ನಿಮಗೆಲ್ಲಾ ಕಾಶಿ ಹೇಗೋ, ಹಾಗೆ ನಮಗೆ ಹಜ್
ಭಟ್ರು : ಕಾಶೀ, ಹಜ್ ಒಂದೇ ಕಡೆ ಇದ್ದಿದ್ರೆ, ನಮ್ಮ ಶಾಸ್ತ್ರಿಗಳು, ಮೌಲ್ವಿ ಸಾಹೇಬ್ರು ಒಟ್ಟಿಗೆ ಪ್ರಯಾಣ ಬೆಳೆಸ್ತಾ ಇದ್ರೋ ಏನೋ. (ಎಲ್ಲರೂ ನಗುವರು)
ಒಬ್ಬ : ಅಂದಂಗೆ, ಶಾಸ್ತ್ರಿಗಳ ಮಗಳಿಗೆ ನಾಳೆ ನಿಶ್ಚಿತಾರ್ಥವಂತೆ.
ಮೌಲ್ವಿ : ಹೌದು, ಹುಡುಗ ಎಷ್ಟು ಒಳ್ಳೆಯವನು. ಬುದ್ಧಿವಂತ. ಪಾಪ, ಶಾಸ್ತ್ರಿ ಇದಕ್ಕೋಸ್ಕರಾನೇ ಜೀವ ಹಿಡ್ಕೊಂಡಿದ್ದ. ಎಲ್ಲಾ ಅಲ್ಹಾನ ದಯೆ.
ಭಟ್ರು : ಒಳ್ಳೇ ಹುಡುಗಿ. ಒಳ್ಳೇ ಕಡೆ ಸೇರಿದ್ರೆ ನಮಗೂ ಸಂತೋಷ.
ಮೌಲ್ವಿ : ಹಾಂ. ನಾನಿನ್ನು ಹೊರಡ್ತೀನಿ. (ಮೌಲ್ವಿ ಹೊರಡುವರು. ಹುಡುಗರೂ ಹೊರಡುವರು)
(ಸ್ವಗತ) ರಂಗಪ್ಪ ದುಡ್ಡು ಕೊಟ್ಟು, ಬೆಳೆ ಚೆನ್ನಾಗಿ ಬಂದ್ಬಿಟ್ರೆ ಸಾಕು. ಹಜ್óಗೆ ಹೋಗ್ಬಹುದು. ಆದ್ರೆ ಮಳೆ ಬರದೇ ಹೋದ್ರೆ ಏನ್ ಮಾಡೋದು. ಇಲ್ಲ, ಇಲ್ಲ. ಮಳೆ ಬಂದೇ ಬರುತ್ತೆ. ನನ್ ಮರದಲ್ಲಿ ಹೂ ಬಿಟ್ಟೇ ಬಿಡುತ್ತೆ. ನಾನು ಹಜ್ ಗೆ ಹೋಗೇ ಹೋಗ್ತಿನಿ.
ಹಾಡು: ಬರುವನು ವಸಂತ ತರುವನು ಸಂತಸ
ಒಣಗಿದ ರೆಂಬೆಗೆ ಚಿಗುರನು ತುಂಬುತ
ಬಾಡಿದ ಮುಖದೊಳು ಚಿಮ್ಮಿಸಿ ಸುಹಾಸ || ಬರುವನು ||
ದೃಶ್ಯ-5
(ಶಾಸ್ತ್ರಿಗಳ ಮನೆಯ ಮುಂಭಾಗ ನಿಶ್ಚಿತಾರ್ಥದ ಸಂಭ್ರಮ. ಮೌಲ್ವಿ, ಶಾಸ್ತ್ರಿಗಳು ಹೊರಗೆ ಕುಳಿತಿದ್ದಾರೆ. ಹುಡುಗರು ಓಡಾಡುತ್ತಿದ್ದಾರೆ)
ಕಾತ್ಯಾಯಿನಿ: (ಮೌಲ್ವಿಗೆ) ಹಣ್ಣು, ಎಲೆ ಅಡಿಕೆ ತಗೊಳ್ಳಿ.
ಮೌಲ್ವಿ : (ತೆಗೆದುಕೊಳ್ಳುತ್ತಾ) ಕುಳಿತಿಕೊ ಬೇಟಿ. ಇನ್ನೆಷ್ಟು ದಿನ ಇಲ್ಲಿರ್ತೀಯಾ?
ಕಾತ್ಯಾ: ಯಾಕೆ, ಬೇಗ ಕಳಿಸಬೇಕು ಅಂತಾನಾ?
ಮೌಲ್ವಿ : ಛೆ, ಛೆ, ಛೆ! ಇಲ್ಲಾ ಬೇಟಿ. ನೀನು ಹೋದ ಮೇಲೆ ಹೆಂಗೆ ಕಾಲ ಕಳೆಯೋದು ಅಂತಾನೆ ಯೋಚ್ನೆ. ಅದ್ರಲ್ಲೂ ಸಂಗೀತ ಕೇಳೋಕೆ ಯಾರ ಹತ್ತಿರ ಹೋಗಲಿ. ಎಲ್ಲಾ ಬಿಕೋ ಅನ್ಸುತ್ತೆ.
ಕಾತ್ಯಾ : (ಗದ್ಗದಿತಳಾಗಿ) ಅಲ್ಲಿಗೆ ಹೋದ ಮೇಲೆ ಸಂಗೀತ ಮುಂದುವರೆಸೋ ನಂಬಿಕೇನೇ ಇಲ್ಲ.
ಮೌಲ್ವಿ : ನನಗೆ ತುಂಬಾ ಕೇಳ್ಬೇಕು ಅನ್ಸಿದಾಗ ನಾನೇ ಅಲ್ಲಿಗೆ ಬಂದ್ಬಿಡ್ತೀನಿ.
(ಅಷ್ಟರಲ್ಲಿ ಹುಡುಗ, ಅವನ ತಂದೆ-ತಾಯಿ ಹೊರಡಲೆಂದು ಹೊರಕ್ಕೆ ಬರುವನು)
ನಾರಾಯಣಾಚಾರ್: ನಾವಿನ್ನು ಬರ್ತೀವಿ. ಸಮಯ ಆಯ್ತು. (ಮೌಲ್ವಿಗೆ) ನಮಸ್ಕಾರ (ಮೌಲ್ವಿ ಪ್ರತಿ ನಮಸ್ಕಾರ ಮಾಡುವರು) ಹಾಂ, (ಶಾಸ್ತ್ರಿಗೆ) ಸ್ವಲ್ಪ ಈ ಕಡೆ ಬನ್ನಿ. ನಾನು ಹೇಳಿದ್ದೆಲ್ಲಾ ಜ್ಞಾಪಕ ಇದೆಯೆಲ್ಲಾ? (ಅವರಿಬ್ಬರೂ ಮಾತನಾಡುತ್ತಾರೆ, ಎಲ್ಲರೂ ಹೊರಟ ಮೇಲೆ ಶಾಸ್ತ್ರಿಗಳು ಸ್ವಲ್ಪ ಚಿಂತಿತರಾಗಿರುವಂತೆ ಕಾಣುತ್ತಾರೆ)
ಕಾತ್ಯಾ: ಅಪ್ಪಾಜಿ ನಾನು ಒಳಗೆ ಹೋಗಿರ್ತೀನಿ. (ಕಾತ್ಯಾ ಒಳಗೆ ಹೋಗುವಳು)
ಮೌಲ್ವಿ: ಏನ್ ಶಾಸ್ತ್ರಿ, ಯೋಚ್ನೆ ಮಾಡ್ತಿದಿಯಾ. ಮಗಳು ಹೊರಟು ಹೋಗ್ತಾಳಂತ?
ಶಾಸ್ತ್ರಿ : (ನಿಟ್ಟುಸಿರು ಬಿಡುತ್ತಾ) ಚಿನ್ನ, ವಾಚು, ಸರ, ಬಟ್ಟೆ, ಎಲ್ಲಾ ಕೊಟ್ಟು, 20,000 ಹಣದ ಗಂಟು ಕೊಡ್ಬೇಕು. ಮದುವೆಯೇನೊ ಯುಗಾದಿ ಆದ ಮೇಲೆ. ಆದ್ರೆ, ಹೇಗಪ್ಪಾ ಎಲ್ಲಾನು ಹೊಂದಿಸೋದು ಅನ್ನೋದೆ ಯೋಚ್ನೆ ಆಗಿದೆ.
ಮೌಲ್ವಿ : ಯೋಚ್ನೆ ಮಾಡಿದ್ರೆ ಆಯ್ತದಾ? ಹುಟ್ಸಿದ್ ದೇವರು ಹುಲ್ ಮೇಯಿಸ್ತಾನಾ? ಎಲ್ಲಾ ಆಯ್ತದೆ ಬಿಡು.
ಶಾಸ್ತ್ರಿ : ಹಾಗೆ ಅಂದ್ಕೊಂಡು ಕುಳಿತ್ರೆ ಆಗುತ್ತಾ?
ಮೌಲ್ವಿ : ಯೋಚನೆ ಮಾಡ್ತಾ ಇದ್ರೆ ಆಯ್ತದಾ? ನೀನು ಹಿಂಸೆ ಮುಖ ಸಪ್ಪೆ ಮಾಡಿ ಕುಳಿತ್ರೆ, ಬೇಟಿ ಏನು ಅಂದ್ಕೊಳ್ತಾಳೆ.
ಶಾಸ್ತ್ರಿ : ವರದಕ್ಷಿಣೆ ವಿಷಯ ಅವಳಿಗಿನ್ನೂ ತಿಳಿಸೇ ಇಲ್ಲ.
ಮೌಲ್ವಿ : ಬೇಡ ಬಿಡು. ಆ ಮಗೂ ತಲೇಗ್ಯಾಕೆ ಯೋಚ್ನೆ ತುಂಬೋದು. ಹಾಂ. ನಾನಿನ್ನು ಹೊರಡ್ತೀನಿ. ಕೆರೆಗೆ ನೀರು ಬಿಟ್ಟಿದ್ದಾರಂತೆ. ಗದ್ದೆ ಕಡೆ ಹೋಗಿ ನೀರು ಬಿಟ್ಟು ಬಿರ್ತೀನಿ.
(ಮೌಲ್ವಿ ಹೊರಡುವನು)
ದೃಶ್ಯ-6
(ಹಿನ್ನೆಲೆಯಲ್ಲಿ ಮನೆ ಹಿರಿಯನ ಧ್ವನಿ)
ಧ್ವನಿ : ಹೀಗೇ ಐದಾರು ತಿಂಗಳು ಕಳೆಯಿತು. ಮೌಲ್ವಿಗೆ ತಕ್ಕ ಮಟ್ಟಿಗೆ ಬೆಳೆಯಾಗಿತ್ತು. ಅವರಿಗೆ ಕೊಡಬೇಕಾದ ಹಣ ಕೊಟ್ಟಿದ್ದ. ಆ ದಿನ ಬೆಳೆ ಮಾರಿದ ಹಣ ಮೌಲ್ವಿಯ ಕೈ ಸೇರಿತ್ತು. ಮೌಲ್ವಿ ಎಲ್ಲಾ ಹಣವನ್ನು ಎಣಿಸಿ ನೋಡಿದರೆ ಹಜ್ó ಯಾತ್ರೆಗೆ ಬೇಕಾಗುವಷ್ಟು ಹಣ ಸೇರಿತ್ತು. ಮೌಲ್ವಿಯ ಸಂತೋಷಕ್ಕೆ ಪಾರವೇ ಇಲ್ಲ. ಮತ್ತೆಮತ್ತೆ ಹಣ ಎಣಿಸಿದರು, ಕುಣಿದರು, ನಿಂತೆಡೆ ನಿಲ್ಲಲಾರದೇ ಹೋದರು.
ಹಾಡು:
(ಈ ಸಂತೋಷದ ವಿಷಯವನ್ನು ತಿಳೀಸಲು ಶಾಸ್ತ್ರಿಗಳ ಮನೆಗೆ ಓಡೋಡಿ ಬಂದರು. ಆದರೆ ಮನೆಯ ಮುಂದೆ ವಿಚಿತ್ರ ಮೌನವಿದೆ. ಒಳಗಡೆ ಏನೋ, ಜೋರಾಗಿ ಮಾತನಾಡುವ ಶಬ್ದ. ಮೌಲ್ವಿಗೆ ಭಯವಾಯಿತು ಏನಾಗಿದೆಯೋ ಎನ್ನುತ್ತಾ...)
(ಧ್ವನಿ ನಿಲ್ಲುತ್ತದೆ. ರಂಗದ ಮೇಲೆ ಬೆಳಕು ಮೌಲ್ವಿ ಬಾಗಿಲ ಹತ್ತಿರ ನಿಂತು)
ಮೌಲ್ವಿ : ಬೇಟಿ, ಬೇಟಿ (ಜೋರಾಗಿ) ಬೇಟಿ, ಶಾಸ್ತ್ರಿ....
(ಕಾತ್ಯಾಯಿನಿ ಕಣ್ಣೀರು ಸುರಿಸುತ್ತಲೇ ಬಿಡುವಳು)
ಅರೆ, ಏನಾಯ್ತು ಬೇಟಿ, ಯಾಕ್ ಅಳ್ತಿದೀಯಾ ಹೇಳು ಬೇಟಿ.
ಕಾತ್ಯಾ : ಅವರು, ವರದಕ್ಷಿಣೆ ಕೊಡ್ದೆ ಮದುವೇನೆ ಆಗಲ್ಲ ಅಂತೀದಾರೆ.
ಮೌಲ್ವಿ : ಹಾಂ, ಛೆ ಇದೇನಾಯ್ತು.
(ಅಷ್ಟರಲ್ಲಿ ನಾರಾಯಣಾಚಾರ್ ಹೊರಗೆ ಬರುತ್ತಾರೆ. ಮುಖ ಉಗ್ರಗೊಂಡಿದೆ. ಶಾಸ್ತ್ರಿಗಳು ದೈನ್ಯತೆಯಿಂದ ನಿಲ್ಲಿಸೋದಿಕ್ಕೆ ಪ್ರಯತ್ನ ಮಾಡ್ತಿದಾರೆ)
ನಾರಾಯಣಾಚಾರ್: (ಖಂಡಿತವಾದ ಸ್ವರದಲ್ಲಿ) ನಾನು ಕಟ್ಟುನಿಟ್ಟಿನ ಮನುಷ್ಯ. ಮಾತು ಅಂದ್ರೆ ಮಾತು. ಮದುವೆಗೆ ಇನ್ನೆರಡು ದಿನ ಇದೆ. ಇನ್ನೂ ಅಡ್ಜೆಸ್ಟ್ ಆಗಲ್ಲ ಅಂತಾನೆ ಇದೀರಲ್ರಿ.
ಶಾಸ್ತ್ರಿ : ದಯವಿಟ್ಟು ಸಮಾಧಾನ ಮಾಡ್ಕೊಳ್ಳಿ. ಬರಬೇಕಾದ ದುಡ್ಡು ಬಂದಿಲ್ಲ. ಮದುವೆಗೆ ಎಲ್ಲಾ ವ್ಯವಸ್ಥೆನೂ ಮಾಡಿದ್ದೀನಿ. ನಾನೇ ಖಂಡಿತ ಕೊಡ್ತೀನಿ. 
ನಾರಾಯಣಾಚಾರ್ : ಅದೆಲ್ಲಾ ಸಾಧ್ಯ ಇಲ್ಲ. ಏನೋ ಕಷ್ಟ ಅಂತ ನಾನೂ ಇಲ್ಲಿಯವರೆಗೆ ಸುಮ್ಮನೆ ಇದ್ದೆ. ನೀವು ಈ ರೀತಿ ಜನ ಅಂತ ಗೊತ್ತಿರಲಿಲ್ಲ.
ಶಾಸ್ತ್ರಿ : ಇಲ್ಲ. ನಾನು ಮೋಸ ಮಾಡಲ್ಲ. ಖಂಡಿತ ಕೋಡ್ತೀನಿ. ಮದುವೆ ನಿಂತುಹೋದ್ರೆ ನನ್ನ ಮಾನ, ಮರ್ಯಾದೆ ಮೂರು ಕಾಸಿಗೆ ಉಳಿಯೋಲ್ಲ. ದಯವಿಟ್ಟು ಕರುಣೆ ತೋರಿಸಿ.
ನಾರಾಯಣಾಚಾರ್: ಅದಕ್ಕೆ ನಾನೇನ್ರಿ ಮಾಡ್ಲಿ. ಅಷ್ಟು ಮರ್ಯಾದಸ್ಥರಾಗಿದ್ದರೆ ವರದಕ್ಷಿಣೆ ಕೊಟ್ಟು ಮಾತಾಡಬೇಕಿತ್ತು. ನಿಮ್ಮ ಜೊತೆ ಮಾತನಾಡುತ್ತಾ ಇರೋದಿಕ್ಕೆ ಸಮಯ ಇಲ್ಲ. ನಮ್ಮ ಹುಡುಗನಿಗೇನೂ ಬರ ಇಲ್ಲ.
ಶಾಸ್ತ್ರಿ : ಅಯ್ಯೋ, ದಯವಿಟ್ಟು ಹಾಗೆ ಮಾಡ್ಬೇಡಿ. ನಾನು ನೇಣು ಹಾಕೋ ಬೇಕಾಗುತ್ತೆ. ನಿಮ್ಮ ಕಾಲು ಕಟ್ಕೊಳ್ತೀನಿ.
ಕಾತ್ಯಾ : ಅಪ್ಪಾಜಿ, ಬೇಡ ಅಪ್ಪಾಜಿ. ಈ ಮದುವೆ ನಿಂತುಹೋದ್ರು ಸರಿಯೇ. ನೀನು ಯಾರ ಕಾಲನ್ನೂ ಹಿಡಿಬೇಡ.
ಶಾಸ್ತ್ರಿ : (ಕೋಪದಿಂದ ಗದರಿಸುವನು) ನೀನು ಸುಮ್ಮನಿರಮ್ಮ.
ಮೌಲ್ವಿ : ಬೇಟಿ ನೀನು ಒಳಗಡೆ ಹೋಗು. (ನಾರಾಯಣಾಚಾರ್ ಕಡೆ ನೋಡಿ) ಸ್ವಾಮಿ. ಅವರು ಬಡವರು. ಆದ್ರೆ ಸತ್ಯಕ್ಕೆ ಹೆದರೋವ್ರು. ಕಷ್ಟದಲ್ಲಿರೋದ್ರಿಂದ ಏನೋ ಹಣ ಹೊಂದಿಸಿಕೊಳ್ಳೋದಿಕ್ಕೆ ಆಗಿಲ್ಲ. ಮದುವೆ ನಿಲ್ಲೋ ಮಾತು ಬೇಡ.
ನಾರಾಯಣಾಚಾರ್ : ನೋಡ್ರಿ ನಾನೇನು ಭಿಕ್ಷೆ ಬೇಡೋಕೆ ಬಂದಿಲ್ಲ. ಕೊಟ್ಟ ಮಾತನ್ನು ಉಳಿಸ್ಕೋ ಬೇಕ್ರಿ.
ಮೌಲ್ವಿ : ಆ ಮಗು ಮುಖ ನೋಡಿ ಮದುವೆ ನಿಂತು ಹೋದ್ರೆ ಅವಳ ಭವಿಷ್ಯ ಏನು?
ನಾರಾಯಣಾಚಾರ್ : ಇಷ್ಟೆಲ್ಲಾ ಮಾತಾಡ್ತೀರಲ್ಲಾ, ನೀವು ಕೊಡ್ತೀರೇನ್ರಿ.
(ಎಲ್ಲರೂ ಕ್ಷಣಕಾಲ ಮಂಕಾಗುವರು. ಮೌಲ್ವಿಯ ಮುಖ ವಿವರ್ಣವಾಗುವುದು. ಒಮ್ಮೆ ಕಾತ್ಯಾಯಿನಿಯ ಮುಖವನ್ನು ಮತ್ತೊಮ್ಮೆ ದೂರದಲ್ಲೆಲ್ಲೊ ದೃಷ್ಟಿಯಿಟ್ಟು ನೋಡುವನು)
ಕಾತ್ಯಾ : ಯಾರೂ ಕೊಡೋದು ಬೇಡ. ಹಣಕ್ಕಾಗಿಯೇ ಮದುವೆ ಅನ್ನೋದಾದ್ರೆ, ನನಗೆ ಈ ಮದುವೆ ಬೇಡವೇ ಬೇಡ.
ಮೌಲ್ವಿ : (ಕೋಪದಿಂದ) ಬೇಟಿ! (ನಂತರ ಮೃದುವಾಗಿ) ಅªರು ಹೇಳೋದ್ರಲ್ಲೂ ಸತ್ಯ ಇದೆ ಬೇಟಿ. ಇಷ್ಟೊಂದು ಮಾತಾಡೋನು ನಾನು ಯಾಕೆ ಕೊಡಬಾರದು. (ಜೇಬಿನಿಂದ ದುಡ್ಡು ತೆಗೆಯುತ್ತಾ) ತೆಗೆದುಕೊಳ್ಳಿ. ಇದರಲ್ಲಿ 15,000 ಇದೆ. ಉಳಿದ ಹಣವನ್ನು ನಾಳೆ ಕೊಡ್ತೀನಿ.
ಕಾತ್ಯಾ-ಶಾಸ್ತ್ರಿ : ಬೇಡ, ಬೇಡ.
ಕಾತ್ಯಾ : ನೀವ್ಯಾಕೆ ಹಣ ಕೊಡಬೇಕು. ನನ್ನ ಸಂತೋಷಕೋಸ್ಕರ ನಿಮ್ಮ ಸಂತೋಷಾನ ಬಲಿ ಕೊಡಲಾರೆ.
ಮೌಲ್ವಿ : ಅರೆ ಬೇಟಿ ! ನನ್ನ ಸಂತೋಷಾನ ಎಲ್ಲಿ ಬಲಿ ಕೊಟ್ಟೆ.
ಕಾತ್ಯಾ : ಬೇಡ, ಅದು ನಿಮ್ಮ ಹಜ್ ಯಾತ್ರೆ ಹಣ. ನಿಮ್ಮ ಜೀವನದ ಕಡೇ ಆಸೆ.
ಮೌಲ್ವಿ : ಬೇಟಿ, ಹಜ್ ಹೋಗೋ ಪುಣ್ಯಕ್ಕಿಂತ, ನಿನ್ನ ಭವಿಷ್ಯ ಕಡಿಮೇನಾ. ಹಾಂ. ಹಾಂ. (ನಾರಾಯಣಾಚಾರ್‍ಗೆ) ನೀವು ತಗೊಳ್ಳಿ. ಚಿಕ್ಕ ಹುಡುಗಿ, ಏನೋ ಮನಸ್ಸಿಗೆ ಬಂದದ್ದೆಲ್ಲಾ ಹೇಳುತ್ತೆ. (ನಾರಾಯಣಾಚಾರ್ ಹಣ ತೆಗೆದುಕೊಳ್ಳುವನು. ಅದೇ ಸಮಯಕ್ಕೆ ಮದುಮಗ ಅಲ್ಲಿಗೆ ಬರುತ್ತಾನೆ). ಮುಂದಿನ ಕಾರ್ಯಗಳು ಬೇಗ ಆಗ್ಲಿ, ಶಾಸ್ತ್ರಿ ನಡಿ. ಮಾಡೋದಿಕ್ಕೆ ಬೇಕಾದಷ್ಟು ಕೆಲಸ ಇದೆ.
ಶಾಸ್ತ್ರಿ : ಬೇಡ, ಇದೆಲ್ಲಾ ಯಾಕೆ?
ಮೌಲ್ವಿ : (ಗದರಿಸುತ್ತಾ) ನಡೆಯಯ್ಯಾ, ನೀನು ಚಿಕ್ಕ ಮಕ್ಕಳ ಥರ ಆಡ್ತೀಯಲ್ಲಾ.
ಮದುಮಗ : ಬೇಡ ಮೌಲ್ವಿಯವರೇ. (ಎಲ್ಲರೂ ಆಶ್ಚರ್ಯದಿಂದ) ಅವನೆಡೆಗೆ ನೋಡುವರು. ಇನ್ನೊಬ್ಬರ ಆಸೆ, ಆಕಾಂಕ್ಷೆಗಳ ಸಮಾಧಿ ಮೇಲೆ ಸುಖ ಅನುಭವಿಸಬೇಕು ಅನ್ನೋ ಆಸೆ ನನಗಿಲ್ಲ. ಅಪ್ಪಾ, ಅವರ ದುಡ್ಡು ವಾಪಸ್ ಕೊಟ್ಬಿಡಿ.
ನಾರಾಯಣಾಚಾರ್ : ದೊಡ್ಡವರ ವಿಷಯದಲ್ಲಿ ನಿಂದೇನೋ ತಲೆಹರಟೆ. ಹೋಗೋ.
ಮೌಲ್ವಿ : ಬೇಟಾ. ನೀನೇನೂ ಯೋಚ್ನೆ ಮಾಡಬೇಡ. ನನ್ನ ಆಸೆ ನಿಜವಾಗ್ಲೂ ಇವತ್ತು ಪೂರ್ತಿಯಾಯಿತು.
ಮದುಮಗ : ಇಲ್ಲ ಮೌಲ್ವಿಯವರೇ, ನಾನು ಇಷ್ಟಪಟ್ಟಿದ್ದು ಹಣ ಅಲ್ಲ. ಕಾತ್ಯಾಯಿನಿಯನ್ನ.
ಮೌಲ್ವಿ : ತುಂಬ ಸಂತೋಷ, ತುಂಬಾ ಸಂತೋಷ ಬೇಟ. ಆ ಮಗೂನ ಚೆನ್ನಾಗಿ ನೋಡ್ಕೊ.
ಮದುಮಗ : ಕಾತ್ಯಾಯಿನಿ ನನಗೆ ಎಲ್ಲಾ ಹೇಳಿದಾಳೆ. ನಿಮ್ಮ ಹಜ್ó ಯಾತ್ರೆ ನಿಲ್ಲಿಸಿ, ನನ್ನ ಮದುವೆ ನಡೀಬೇಕು.
ಮೌಲ್ವಿ : ಅರೆ ಬೇಟಾ, ನನ್ನ ಹಜ್ ಯಾತ್ರೆ ಆಯ್ತು. ಇವತ್ತೊ ನಿಜವಾಗ್ಲೂ ನನ್ನ ಹಜ್ ಯಾತ್ರೆ ಆಯ್ತು. ಆದ್ರೆ ಬಹಳ ದೂರ ಹೋಗ್ದೆ, ಇಲ್ಲೇ ಮುಗಿಸ್ಬಿಟ್ಟ. ಇಂತ ಭಾಗ್ಯ ಯಾರಿಗಿದೆ.
ಮದುಮಗ : ಆದರೆ.........
ಮೌಲ್ವಿ : (ಸ್ವಲ್ಪ ಗಡುಸಾಗಿ) ಆದ್ರೆ ಗಿದ್ರೆ ಏನೂ ಇಲ್ಲ. ನನಗೆ ಒಂದೇ ಒಂದು  ಮಾತು ಕೊಡು. ಬೇಟಿನ ಚೆನ್ನಗಿ ನೋಡ್ಕೋ.
(ಮಧುಮಗನ ಕಣ್ಣಲ್ಲಿ ನೀರು. ಮೌಲ್ವಿಯ ಕೈ ಹಿಡಿದುಕೊಳ್ಳುತ್ತಾನೆ. ಏನೂ ಮಾತನಾಡುವುದಿಲ್ಲ)
ಮೌಲ್ವಿ : ಹಾಂ. ನಡೀರಿ, ನಡೀರಿ. ಮಾಡೋ ಕೆಲಸ ಬೇಕಾದಷ್ಟಿದೆ. ಶಾಸ್ತ್ರಿ, ನಡೀ ಯಾರ್ಯಾರಿಗೇ ಹೇಳ್ಬೇಕೋ ಹೇಳು ನಡೀ. ನಾನು ಮನೆಗೆ ಹೋಗಿ ಬರ್ತೀನಿ. (ಮೌಲ್ವಿ ಹೊರಡುವನು. ಮೌಲ್ವಿ ನಡಿಯುತ್ತಾ ಹೋಗುತ್ತಿರುತ್ತಾನೆ)
(ಸ್ವಗತ) ಹಾಯ್ ಅಲ್ಹಾ, ನಿನ್ನ ಮನಸ್ಸಲ್ಲಿ ಏನಿದೆಯೋ ಯಾರಿಗ್ಗೊತ್ತು..... ನನಗೆ ಆಗ್ತಾ ಇರೋ ಸಂತೋಷಾನಾ ತಡೆದುಕೊಳ್ಳೋಕೇ ಆಗ್ತಾ ಇಲ್ಲ. ಜೀವ ಹಗುರ ಆಗೋಗಿದೆ. ತೇಲಾಡೋ ಹಾಗಿದೆ. ಈ ಸಂತೋಷ ಹಜ್ ಗೆ ಹೋಗಿದ್ರೂ ಸಿಗ್ತಾ ಇರಲಿಲ್ವೋ ನೀನು! ಹಾಂ, ಇದೇ ನನ್ನ ಹಜ್ ಯಾತ್ರೆ. ಇದೇ ನನ್ನ ಹಜ್ ಯಾತ್ರೆ.
(ಮನೆ ಹತ್ತಿರ ಬರುತ್ತಾನೆ. ಮರದತ್ತ ಕಣ್ಣರಳಿಸಿ ನೋಡುತ್ತಾನೆ)
ಅರೆ! ನನ್ನ ಮರದ ತುಂಬಾ ಹೂವು.
ಹಾಡು:
(ರಂಗ ನಿಧಾನವಾಗಿ ಕತ್ತಲಾಗುತ್ತದೆ)

ದೃಶ್ಯ-7
(ಮನೆಯ ದೃಶ್ಯ. ಮನೆ ಹಿರಿಯ ಕನಸಿನಲ್ಲಿರುವಂತೆ ಕುಳಿತಿದ್ದಾನೆ. ಎಲ್ಲರ ಕಣ್ಣಲ್ಲೂ ನಿರು. ಫಾತಿಮಾ ಒಂದು ಮೂಲೆಯಲ್ಲಿ ಕುಳಿತಿದಾಳೆ. ಪಕ್ಕದಲ್ಲಿ ರೆಹಮಾನ್, ರಘು ಒಂದಷ್ಟು ತಿಂಡಿ ಹಿಡಿದುಕೊಂಡು ಬರುತ್ತಾನೆ)
ರಘು : (ರೆಹಮಾನ್ ಬಳಿ ಬಂದು) ರೆಹಮಾನ್, ತಗೋ.
(ರೆಹಮಾನ್ ಒಮ್ಮೆ ತಿಂಡಿಯತ್ತ ನೋಡಿ, ತಲೆಕೆಳಗೆ ಹಾಕುತ್ತಾನೆ)
ಮನೆಹಿರಿಯ : ತಗೋಪ್ಪ, ಸಂಕೋಚ ಮಾಡ್ಕೋಬೇಡ.
ರಘು : ತಗೊಳ್ಳೋ. ಆಟ ಆಡುವಾಗ ನನ್ನ ಹತ್ತಿರ ಕಿತ್ಕೊಂಡು ತಿನ್ತಾ ಇದ್ದೆ. ನಮ್ಮನೆ ತಿಂಡಿ ತುಂಬಾ ಇಷ್ಟ ಅಂರತ.
(ಫಾತಿಮಾ, ರೆಹಮಾನ್ ಇಬ್ಬರೂ ಮಾತನಾಡುವುದಿಲ್ಲ. ರಘು ಅವನ ಕೈಹಿಡಿದುಕೊಂಡು ತಿಂಡಿಯನ್ನು ಕೈಗೆ ಹಾಕುತ್ತಾನೆ. ಅವನನ್ನು ಕರೆದುಕೊಂಡು ಹೋಗಿ, ಸ್ವಲ್ಪ ಬದಿಯಲ್ಲಿ ಕೂರಿಸುತ್ತಾನೆ. ತಾನೂ ಜೊತೆಯಲ್ಲಿ ಕುಳಿತು ಒಟ್ಟಿಗೆ ತಿಂಡಿ ತಿನ್ನುತ್ತಾನೆ. ಏನೋ ಹೇಳುತ್ತಾನೆ. ರೆಹಮಾನ್ ಮುಖದಲ್ಲಿ ನಗು ಕಾಣಿಸುತ್ತದೆ)

-  ಎಸ್.ಎನ್.ಸ್ವಾಮಿ


ಕಾಮೆಂಟ್‌ಗಳಿಲ್ಲ: