"ಇಂಗ್ಲಿಷ್ ಸಮಾಜವಾದದ ಪಿತಾಮಹ" ಮತ್ತು "ಸಹಕಾರ ಚಳುವಳಿಯ ಪ್ರವರ್ತಕ"ರೆನಿಸಿಕೊಂಡ, ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ ಶ್ರಮಿಕವರ್ಗದವರ ಆಶಾಕಿರಣವಾಗಿ ಬಂದ ರಾಬರ್ಟ್ ಓವೆನ್ ವೇಲ್ಸ್ ನ್ಯೂಟೌನ್ ಎಂಬ ಹಳ್ಳಿಯಲ್ಲಿ 1771 ಮೇ 14 ರಂದು ಜನಿಸಿದರು. ತಂದೆ ಕುದುರೆಯ ಜೀನಿನ ಮತ್ತು ಕಬ್ಬಿಣದ ಉಪಕರಣಗಳ ತಯಾರಕನಾಗಿದ್ದರು. ಮಗನ ವಿದ್ಯೆಯಲ್ಲಿನ ಆಸಕ್ತಿಯನ್ನು ಕಂಡು ಶಾಲೆಗೆ ಸೇರಿಸಿದರು. ಮೂರು ವರ್ಷ ಓದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದನು. ಮುಂದೆ ಓದಲು ಅವಕಾಶವಿರಲಿಲ್ಲ. ಆದರೆ ಆತನ ಗ್ರಹಣ ಶಕ್ತಿಯನ್ನು ನೋಡಿದ ಉಪಾಧ್ಯಾಯರು ಅವನನ್ನು ಸಹಾಯಕ ಉಪಾಧ್ಯಾಯನಾಗಿ ಕೆಲಸ ಮಾಡುವಂತೆ ಹೇಳಿದರು. ಓವೆನ್ ತನ್ನ ಬಾಲ್ಯದಲ್ಲೇ ಉಪಾಧ್ಯಾಯನಾಗಿ ಎರಡು ವರ್ಷ ಕೆಲಸ ಮಾಡಿದನು. ಆ ಸಮಯದಲ್ಲಿ ಅನೇಕ ಗ್ರಂಥಗಳನ್ನು ಓದಿ ಜ್ಞಾನವನ್ನು ವೃದ್ಧಿಪಡಿಸಿಕೊಂಡನು. ನಂತರ ತಂದೆ ತಾಯಿಗೆ ನೆರವಾಗಲು ಓವೆನ್ ಕೆಲಸಕ್ಕೆ ಸೇರಿದನು.
ಆದರೆ ಇನ್ನೂ ಹೆಚ್ಚಿನ ವಿಷಯಗಳ ಅರಿವಿಗಾಗಿ ಪುಟ್ಟ ಹಳ್ಳಿಯನ್ನು ಬಿಟ್ಟು ಅಣ್ಣನಿದ್ದ ವಿಶಾಲವಾದ ಲಂಡನ್ ಗೆ ಹೋಗಿ ಜವಳಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲೂ ಸಹ ವಿರಾಮದ ಸಮಯದಲ್ಲಿ ಮಾಲೀಕನಿಂದ ಗ್ರಂಥಗಳನ್ನು ತೆಗೆದುಕೊಂಡು ಓದುತ್ತಿದ್ದನು. ಆದರೆ ಇಲ್ಲಿಂದಲೂ ಹೆಚ್ಚಿನ ಅವಕಾಶಕ್ಕಾಗಿ ದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ಮ್ಯಾಂಚೆಸ್ಟರ್ ನಗರಕ್ಕೆ ಬಂದರು. ಇಲ್ಲಿ ಜೋನ್ಸ್ ಎಂಬುವವನ ಪರಿಚಯವಾಯಿತು. ಸ್ವತಂತ್ರ ಜೀವನದ ಕನಸು ಕಾಣುತ್ತಿದ್ದ ಓವೆನ್ ಇವನೊಂದಿಗೆ ಪಾಲಿದಾರನಾಗಿ ಪುಟ್ಟ ಕಾರ್ಖಾನೆಯೊಂದನ್ನು ಪ್ರಾರಂಭಿಸಿ ಔದ್ಯೋಗಿಕ ರಂಗಕ್ಕೆ ಕಾಲಿರಿಸಿದರು. ಆದರೆ ಜೋನ್ಸ್ ನ ದುರಾಸೆಯಿಂದ ಪಾಲುದಾರಿಕೆಯನ್ನು ಬಿಟ್ಟು ತಮ್ಮದೇ ಆದ ಪುಟ್ಟ ಕಾರ್ಖಾನೆಯನ್ನು ಸ್ಥಾಪಿಸಿದರು.
ಫ್ರಾನ್ಸ್ ಕ್ರಾಂತಿಯ ಸಮಯವಾದ್ದರಿಂದ ವ್ಯಾಪಾರಿಗಳು ವಿದೇಶದಲ್ಲಿ ತಮ್ಮ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿ ತಮ್ಮ ದೇಶದಲ್ಲೇ ಪ್ರಾರಂಭಿಸಲಾರಂಬಿಸಿದರು. ಈ ಸಮಯದಲ್ಲಿ ಓವೆನ್ ಆಧುನಿಕ ಕಾರ್ಖಾನೆಯೊಂದರ ಮ್ಯಾನೇಜರ್ ಆದರು. ಅಲ್ಲಿ ಹಲವು ಸುಧಾರಣಿಯೊಂದಿಗೆ ಉತ್ತಮ ನೂಲನ್ನು ತಯಾರಿಸಿದನು. ಇದು ಅಪಾರ ಬೇಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ಗಳಿಸಿತು. ಇದರಿಂದ ಸಂತಸಗೊಂಡ ಮಾಲೀಕ ಆ ನೂಲಿಗೆ ಓವೆನ್ ಹೆಸರಿನ ಮುದ್ರೆಯನ್ನು ಹಾಕಲು ಪ್ರಾರಂಭಿಸಿದನು. ನಂತರ ಓವೆನ್ ಚಾರ್ಲ್ಸ್‌ಟನ್ ಟ್ವಿಸ್ಟ್ ಕಂಪನಿ ಪಾಲುದಾರರಾಗಿ ಕೆಲಸ ಪ್ರಾರಂಭಿಸಿದರು. ಈ ಕಂಪನಿಯಿಂದ ಓವೆನ್ ಅದೃಷ್ಟ ಬದಲಾಯಿತು. ಇಲ್ಲಿಯೂ ಸಹ ಮತ್ತೊಂದು ಹೊಸ ನೂಲನ್ನು ಉತ್ಪಾದಿಸಿ ಅಧಿಕ ಲಾಭವನ್ನು ಪಡೆದರು. ತಮ್ಮ ಸಾಮಾಜಿಕ ಸ್ಥಾನಮಾನದ ಬಗ್ಗೆ ಓವೆನ್ ಯಾವತ್ತೂ ಯೋಚಿಸಿರಲಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದಿದ್ದ ಅವರು ಯಾವಾಗಲೂ ದುಡಿಯುವ ವರ್ಗದವರೊಂದಿಗೆ ಓಡಾಡುತ್ತಿದ್ದರು. ಕ್ರಮೇಣ ಮ್ಯಾಂಚೆಸ್ಟರ್ ನಗರದ " ಲಿಟರರಿ ಅಂಡ್ ಫಿಲಾಸಫಿಕ್ ಸೊಸೈಟಿ" ಯ ಸದಸ್ಯನಾದರು. ಅಲ್ಲಿ ಅನೇಕ ಗಣ್ಯರ ಪರಿಚಯವಾಯಿತು.
ಚಾರ್ಲ್ಟನ್ ಕಂಪನಿ ಬೆಳೆದಂತೆ ತನ್ನ ವ್ಯಾಪಾರ ಕೇಂದ್ರವನ್ನು ಹೊರಗಡೆಗೂ ವಿಸ್ತರಿಸಲು ಆಲೋಚಿಸುತ್ತಿತ್ತು. ಇದಕ್ಕಾಗಿ ಓವೆನ್ ಗ್ಲಾಸ್ಗೋ ನಗರದ ನ್ಯೂ ಲಾನಾರ್ಕ್ ಹಳ್ಳಿಯಲ್ಲಿನ ಗಿರಣಿಯೊಂದನ್ನು ನೋಡಿದರು. ಚಾರ್ಲ್ಸ್‌ಟನ್ ಕಂಪನಿ ಆ ಗಿರಣಿಯನ್ನು ಕೊಂಡು ನ್ಯೂ ಲಾನಾರ್ಕ್ ಟ್ವಿಸ್ಟ್ ಎಂಬ ಹೆಸರಿನಿಂದ ತನ್ನ ಕೆಲಸವನ್ನು ಆರಂಭಿಸಿತು. ಓವೆನ್ ರನ್ನು ರೆಸಿಡೆಂಟ್ ಮ್ಯಾನೇಜರ್ ಆಗಿ ನೇಮಕ ಮಾಡಲಾಯಿತು. ನಂತರ ಓವೆನ್ ಟೇಲ್ ಎಂಬುವವರನ್ನು ವಿವಾಹವಾದರು.
ಓವೆನ್ ಗಿರಣಿಯಲ್ಲಿ ದುಡಿಯುವ ಶ್ರಮಿಕರ ಸ್ಥಿತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ ಹಲವು ಸುಧಾರಣೆಗಳನ್ನು ತರುವುದರ ಮೂಲಕ ಶ್ರಮಿಕರ ಸಾಮಾಜಿಕ ಸ್ಥಿತಿಯನ್ನು ಉತ್ತಮಗೊಳಿಸಿ, ಉತ್ಪಾದನೆಯನ್ನು ಹೆಚ್ಚಿಸಲು ಆಲೋಚಿಸಿದರು. ಮಾಲೀಕರು ಯಂತ್ರಗಳ ಯೋಗಕ್ಷೇಮವನ್ನಷ್ಟೇ ನೋಡುತ್ತಿದ್ದರೆ ವಿನಃ ಜೀವಂತ ಯಂತ್ರಗಳ ಅಂದರೆ ಶ್ರಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಓವೆನ್ ಮೊದಲು ಎಲ್ಲೆಲ್ಲೂ ಸ್ವಚ್ಛತೆ ಮತ್ತು ಸುವ್ಯವಸ್ಥೆಯನ್ನು ಜಾರಿಗೆ ತಂದರು. ನ್ಯಾಯಬೆಲೆ ಅಂಗಡಿಯನ್ನು ಪ್ರಾರಂಭಿಸಿ ಶ್ರಮಿಕರ ಹಣ ಉಳಿತಾಯವಾಗುವಂತೆ ಮಾಡಿದರು. ಅವರ ದುಡಿಮೆಯ ಅವಧಿಯನ್ನು 14 ಘಂಟೆಯಿಂದ 10 ಘಂಟೆಗೆ ಇಳಿಸುವಂತೆ ಮಾಡಿದರು. ಮದ್ಯದಂಗಡಿಯನ್ನು ಮುಚ್ಚಿ ಆಟದ ಮೈದಾನವನ್ನು ನಿರ್ಮಸಿದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಿದರು. ಈ ಎಲ್ಲಾ ಸುಧಾರಣೆಗಳಿಂದ ಕಂಪನಿಯ ಉತ್ಪಾದನೆ ಹೆಚ್ಚಾಗಿ ಅಧಿಕ ಲಾಭ ಬಂದಿತು. ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಲಾಭದ ಹಣವನ್ನು ಶ್ರಮಿಕರ ಹಿತಕ್ಕಾಗಿಯೇ ಬಳಸಿದರು. ಓವೆನ್ ಶ್ರಮಿಕರ ಸಂಬಳವನ್ನು ಹೆಚ್ಚಿಸಿದರು, ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು. ವಯಸ್ಕರಿಗಾಗಿ ರಾತ್ರಿ ಶಾಲೆಗಳನ್ನು, ಆಸ್ಪತ್ರೆಗಳನ್ನು ತೆರೆದರು.
ಈ ರೀತಿ ಓವೆನ್ ಎಲ್ಲವನ್ನೂ ಸುಧಾರಿಸುತ್ತಿರುವಾಗಲೇ 1806 ರಲ್ಲಿ ಅಮೆರಿಕ ಮತ್ತು ಬ್ರಿಟನ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅಮೆರಿಕದ ಹತ್ತಿಗೆ ಬ್ರಿಟನ್ ಆಮದಾಗದಂತೆ ಪ್ರತಿಬಂಧ ಹೇರಿತು. ಇದರಿಂದ ಹತ್ತಿಯ ಬೆಲೆ ದಿಢೀರನೆ ಹೆಚ್ಚಿತು. ಆದರೆ ಓವೆನ್ ತನಗೆ ಕಷ್ಟವಾದರೂ, ಗಿರಣಿಯಲ್ಲಿ ಕೆಲಸವನ್ನು ನಿಲ್ಲಿಸಿದ್ದರೂ, ಶ್ರಮಿಕರಿಗೆ ಸಂಬಳವನ್ನು ಕೊಟ್ಟರು. ಇದರಿಂದ ಶ್ರಮಿಕರ ಒಲವು ಓವನ್ ಗೆ ದೊರೆಯಿತು.
ಓವೆನ್ ತನ್ನ ಗಿರಣಿಯೊಂದರ ಶ್ರಮಿಕರ ಸ್ಥಿತಿ ಸುಧಾರಿಸಿದರೆ ಸಾಲದು, ಇಡೀ ವಿಶ್ವದ ಶ್ರಮಿಕರ ಸ್ಥಿತಿ ಸುಧಾರಿಸಬೇಕು ಎಂಬ ಆಶಯವನ್ನು ಹೊಂದಿದ್ದರು. "ಮಾನವನ ಗುಣಕ್ಕೆ ಹುಟ್ಟು ಕಾರಣವಲ್ಲ, ಅವನ ಬೆಳೆಯುವ, ಜೀವನ ನಡೆಸುವ ವಾತಾವರಣ ಕಾರಣ ಒಳ್ಳೆಯ ವಾತಾವರಣ ಸೃಷ್ಟಿಸುವುದರ ಮೂಲಕ ಇಡೀ ಮಾನವಕುಲವನ್ನು ಉತ್ತಮಗೊಳಿಸಬಹುದು. ಉತ್ತಮ ಜೀವನಕ್ರಮಕ್ಕೆ ಶಿಕ್ಷಣ ಮುಖ್ಯ" ಎಂದು ತಿಳಿದ ಓವೆನ್ ನವೀನ ಮಾದರಿಯ ಶಿಶುವಿಹಾರಗಳನ್ನು ಪ್ರಾರಂಭಿಸಲು ಆಲೋಚಿಸಿದರು. "ಮಕ್ಕಳ ಭಾವನೆ ಮತ್ತು ಅವರಲ್ಲಿರುವ ಪ್ರತಿಭೆಗಳನ್ನು ಕುರಿತು ಅವರಿಗೆ ಶಿಕ್ಷಣ ನೀಡಬೇಕು. ಮಕ್ಕಳಿಗೆ ಹೆದರಿಕೆಯನ್ನುಂಟು ಮಾಡುವ ಶಿಕ್ಷಣಕ್ಕೆ ಬದಲಾಗಿ ಅವರಲ್ಲಿ ಕ್ರಿಯಾಶೀಲತೆ, ನಿರ್ಭಯ, ಆತ್ಮವಿಶ್ವಾಸ ನೀಡುವಂತಹ ಶಿಕ್ಷಣವನ್ನು ಕೊಡಬೇಕು. ಇದರಿಂದ ಮುಂದೆ ಆ ಮಕ್ಕಳು ಉತ್ತಮ ಪ್ರಜೆಯಾಗುತ್ತಾರೆ" ಎಂಬುದು ಓವೆನ್ ರ ಅಭಿಪ್ರಾಯವಾಗಿತ್ತು. ಓವೆನ್ ತಮ್ಮ ಮಕ್ಕಳಿಗೂ ಇದೇ ರೀತಿಯ ಶಿಕ್ಷಣವನ್ನು ನೀಡುತ್ತಿದ್ದರು. ಅವರನ್ನು ಸ್ನೇಹಿತರಂತೆ ನೋಡುತ್ತಿದ್ದರು. ಅವರು ಹಠ ಮಾಡಿದರೆ ಪ್ರೀತಿಯಿಂದಲೇ ಅವರು ಮನವನ್ನು ಬದಲಾಯಿಸುತ್ತಿದ್ದರು. ಈ ರೀತಿಯ ಮನಃಪರಿವರ್ತನಗೆ ವಿದ್ಯೆಯೇ ಪರಿಹಾರ ಎನ್ನುತ್ತಿದ್ದರು. "ವ್ಯಕ್ತಿಯ ವ್ಯಕ್ತಿತ್ವ ಬಾಲ್ಯದಿಂದಲೇ ವಿಕಸನಗೊಳ್ಳುತ್ತದೆ. ಬಾಲ್ಯದಲ್ಲಿ ಮಕ್ಕಳ ಕುತೂಹಲ ಆಸಕ್ತಿ, ಇವುಗಳನ್ನು ಸರಿಯಾದ ಮಾರ್ಗದಲ್ಲಿ ತಣಿಸಬೇಕು. ಮಕ್ಕಳಿಗೆ ಓದು ಬರಹ ಕಲಿಸಬಹುದು, ಆದರೆ ಅವರ ಮನದಲ್ಲಿ ಮೂಡುವ ಅಸೂಯೆ, ದ್ವೇಷ, ಸುಳ್ಳು ಮೊದಲಾದವು ಹಾಗೆ ಉಳಿಯಬಹುದು. ಇಂತಹ ಗುಣಗಳಿಂದ ಅವರಲ್ಲಿ ಸಮಾಜ ವಿರೋಧಿ ಪ್ರವೃತ್ತಿ ಉಂಟಾಗುತ್ತದೆ. ಶಿಕ್ಷಣ ಕೊಡಿಸುವುದರಿಂದ ಈ ದೋಷವನ್ನು ಹೋಗಲಾಡಿಸಬಹುದು. ಅವರಲ್ಲಿ ಪ್ರೀತಿ, ಸಹೋದರತೆ, ಸಹಕಾರ ಮನೋಭಾವನೆಯನ್ನು ರೂಪಿಸಿ ಓರ್ವ ಉತ್ತಮ ಪ್ರಜೆಯನ್ನು ಸಮಾಜಕ್ಕೆ ನೀಡಬಹುದು"
ಎಂಬುದು ಓವೆನ್ ರ ವಿಚಾರಧಾರೆಯಾಗಿತ್ತು.
ಆದರೆ ಶಿಕ್ಷಣದಲ್ಲಿನ ಈ ಸುಧಾರಣೆಗಳನ್ನು ತರಲು ಕಂಪನಿಯು ಒಪ್ಪಲಿಲ್ಲ. ಇದರಿಂದ ಓವೆನ್ ಆ ಗಿರಣಿಯನ್ನು ಬೇರೆ ಪಾಲುದಾರರೊಡಗೂಡಿ ಕೊಂಡರು. ಆದರೆ ಅವರು ಸಹ ಇವರ ಕ್ರಾಂತಿಕಾರಿ ಸುಧಾರಣೆಗಳನ್ನು ಒಪ್ಪದೆ, ವಿರೋಧಿಸಿದರು. ಆದರೂ ಧೃತಿಗೆಡದ ಓವೆನ್ "ಗಿರಣಿಯನ್ನು ನೀವೇ ತೆಗೆದುಕೊಳ್ಳಿ ಅಥವಾ ನನಗೆ ಬಿಟ್ಟುಕೊಡಿ" ಎಂದರು. ನಂತರ ಹರಾಜಿನ ಮೂಲಕ ಹೊಸ ಪಾಲುಗಾರರ ಸಹಾಯದಿಂದ ಓವೆನ್ ಗಿರಣಿಯನ್ನು ಪಡೆದುಕೊಂಡರು.
ಓವೆನ್ ಶಿಶುವಿಹಾರಗಳನ್ನು ಪ್ರಾರಂಭಿಸಿ ಜಾತಿ ಮತ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಪ್ರವೇಶ ಕಲ್ಪಿಸಿಕೊಟ್ಟರು.
ಹೀಗೆ ತಮ್ಮ ಕ್ರಾಂತಿಕಾರಿ ಸುಧಾರಣೆಗಳಿಂದ ಓವೆನ್ ನ್ಯೂಲಾನಾರ್ಕ್ ನ್ನು ಒಂದು ಮಾದರಿ ಗ್ರಾಮವನ್ನಾಗಿ ಮಾಡಿದರು. ಹೀಗಿರುವಾಗಲೇ 1815 ರಲ್ಲಿ ಐರೋಪ್ಯ ಆಮದುಗಳು ನಿಂತು ಬ್ರಿಟನ್ ನಲ್ಲಿ ಮತ್ತೆ ಗಿರಣಿಗಳು ಪ್ರಾರಂಭವಾಗಿ, ಎಲ್ಲರಿಗೂ ಉದ್ಯೋಗಾವಕಾಶಗಳು ದೊರಕಿದವು. ಬ್ರಿಟನ್ನಿನ ಉತ್ಪಾದನಾ ಶಕ್ತಿ ಹೆಚ್ಚಿತು. ವ್ಯವಸಾಯ ಪ್ರಧಾನವಾಗಿದ್ದ ಬ್ರಿಟನ್ ಕೈಗಾರಿಕಾ ಪ್ರಧಾನವಾದ ರಾಷ್ಟ್ರವಾಗಿ ರೂಪುಗೊಂಡಿತು. ಪರಿಣಾಮವಾಗಿ ಹಣದುಬ್ಬರ, ಕಾಳಸಂತೆ, ಕೃತಕ ಅಭಾವಗಳ ನಡುವೆ ಶ್ರಮಜೀವಿಗಳು ಸಿಲುಕಿದರು. ತನ್ನ ದೇಶದಲ್ಲಿನ ದುಸ್ಥಿತಿಯನ್ನು ಕಂಡು ಓವೆನ್ "ಸಹಕಾರ ಗ್ರಾಮ" ಎಂಬ ಪರಿಹಾರವನ್ನು ಸೂಚಿಸಿದರು.
ಓವೆನ್ ರ ಸಹಕಾರ ಗ್ರಾಮದ ಪರಿಕಲ್ಪನೆ ಈ ರೀತಿಯಿದೆ.
"ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಮಾನವ ಜೀವನ. ಎಲ್ಲರ ಅಭಿವೃದ್ಧಿಗಾಗಿ ದುಡಿಮೆ ಅವಶ್ಯಕ. ಯಂತ್ರ ಶಕ್ತಿ ಮಾನವ ಕುಲಕ್ಕೆ ವರವಾಗಬೇಕೆ ಹೊರತು ಶಾಪವಾಗಬಾರದು. ಎರಡರ ನಡುವೆ ಸಾಮರಸ್ಯ ಇರಬೇಕು. ಆದರೆ ಪೈಪೋಟಿಯ ಈ ಜಗತ್ತಿನಲ್ಲಿ ಇದು ಸಾಧ್ಯವಿಲ್ಲ. ಸಂಪತ್ತಿನ ಗಳಿಕೆಯಲ್ಲಿನ ನೀತಿಯನ್ನು ಅದರ ಹಂಚಿಕೆಯಲ್ಲಿ ಅನುಸರಿಸುತ್ತಿಲ್ಲ. ಇದೇ ಸಮಾಜದ ದುಸ್ಥಿತಿಗೆ ಕಾರಣ. ಎಲ್ಲರೂ ಸಹಕಾರ ಮನೋಭಾವನೆಯನ್ನು ತಾಳಬೇಕು. 'ಒಬ್ಬ ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ' ಎಂದು ಸಹೋದರರಂತೆ ಜೀವನ ನಡೆಸಬೇಕು. ದೊಡ್ಡ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬದಲಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಜೆಗಳು ಜೀವನ ನಡೆಸಲು ವ್ಯವಸಾಯ, ಕೈಗಾರಿಕೋದ್ಯಮ, ವಾಣಿಜ್ಯ ಇವುಗಳೆಲ್ಲವನ್ನು ಸಮತೋಲನವಾಗಿ ಒಳಗೊಂಡ ಸಹಕಾರಿ ಗ್ರಾಮಗಳು ನಿರ್ಮಾಣವಾಗಬೇಕು. ಈ ಬಗೆಯ ಗ್ರಾಮಗಳನ್ನು ನಿರ್ಮಿಸಲು ಸರ್ಕಾರ ಮತ್ತು ಸಾರ್ವಜನಿಕರು ನೆರವಾಗಬೇಕು."
ಸರ್ಕಾರದ ಮುಂದೆ ಈ ವಿಚಾರವನ್ನಿಟ್ಟಾಗ, ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಓವೆನ್ ಸಹಕಾರ ವಿಚಾರವಾಗಿ ಭಾಷಣ ಮಾಡುತ್ತಿರುವಾಗಲೇ ಕುಸಿದು 1858 ನವೆಂಬರ್ 17 ರಂದು ಸಾವನ್ನಪ್ಪಿದರು.
ಹೀಗೆ ಹಂತಹಂತವಾಗಿ ಮೇಲೇರಿದ ಓವೆನ್ ತಮ್ಮ ಸಹಕಾರಿ ತತ್ವಗಳಿಂದಾಗಿ ಕ್ರಾಂತಿಯನ್ನುಂಟು ಮಾಡಿ ದುರ್ಬಲರ ಭವಿಷ್ಯಜ್ಯೋತಿಯಾಗಿ ಸಹಕಾರಿ ಚಳವಳಿಯ "ಮೊದಲ ಸಹಕಾರಿ ಪುರುಷ" ಎನಿಸಿಕೊಂಡಿದ್ದಾರೆ.
- ವಿಜಯಲಕ್ಷ್ಮಿ ಎಂ. ಎಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ