Pages

ಸಿನಿಮಾ ವಿಮರ್ಶೆ - ಮುನ್ನುಡಿ


ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಂಡಾಯ ಸಾಹಿತ್ಯವನ್ನಾಧರಿಸಿ ನಿರ್ಮಿಸಿದ ಅತ್ಯುತ್ತಮವಾದ ಚಲನಚಿತ್ರಗಳಲ್ಲಿ “ಮುನ್ನುಡಿ” ಎಂಬ ಚಲನಚಿತ್ರವೂ ಒಂದು. ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಬಂದಿದೆ. ಈ ಸಿನಿಮಾದಲ್ಲಿನ ರುಖಿಯಾಳ ಪಾತ್ರಕ್ಕಾಗಿ ‘ತಾರ' ರವರಿಗೆ ‘ಅತ್ಯುತ್ತಮ ನಟಿ’ ಎಂದು ರಾಷ್ಟ್ರ ಪ್ರಶಸ್ತಿ ದೊರೆಯಿತು. ಈ ಸಿನಿಮಾದ ನಿರ್ದೇಶಕರು ಪಿ.ಶೇಷಾದ್ರಿ. ಈ ಸಿನಿಮಾ ಕೇರಳದ ಮುತ್ತುಛೇರ ಎಂಬ ಕುಗ್ರಾಮದಲ್ಲಿ ಶೋಷಣೆಗೊಳಗಾದ ಹೆಣ್ಣುಮಕ್ಕಳ ನಿಜಜೀವನದ ಕಥೆಯನ್ನಾಧರಿಸಿದೆ.
ಮುಸ್ಲಿಮರೇ ಪ್ರಮುಖರಾಗಿರುವ ಆ ಹಳ್ಳಿಯಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿರುತ್ತದೆ. ಇಲ್ಲಿ ಒಬ್ಬ ಸಾಹುಕಾರ ಟಿಂಬರ್ ವ್ಯಾಪಾರಿಯಾಗಿದ್ದು ತನ್ನ ಮರದ ದಿಮ್ಮಿಗಳನ್ನು ಅರಬ್ಬೀ ದೇಶಕ್ಕೆ ಸಮುದ್ರದ ಮೂಲಕ ಸಾಗಿಸುತ್ತಾ ಇರುತ್ತಾನೆ. ಅರಬ್ಬಿಯಿಂದ ಬರುವ ವ್ಯಾಪಾರಿಗಳನ್ನು ಆಕರ್ಷಿಸಲು ಆ ಹಳ್ಳಿಯ ಬಡ ಹೆಣ್ಣುಮಕ್ಕಳನ್ನು ಜೀವನವನ್ನೇ ಪಣಕ್ಕಿಡುತ್ತಿರುತ್ತಾನೆ. ವ್ಯಾಪಾರಕ್ಕೆಂದು ಬೇರೆಡೆ ಹೋಗುವ ಮುಸ್ಲಿಮರು ತಾತ್ಕಾಲಿಕ ವಿವಾಹವನ್ನು ಮಾಡಿಕೊಳ್ಳುವ ಪದ್ಧತಿಯನ್ನು, ಅದರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಚಿತ್ರಣವನ್ನು, ಅಂತಿಮವಾಗಿ ಆ ಹೆಣ್ಣುಮಕ್ಕಳೇ ಈ ಪದ್ಧತಿಯ ವಿರುದ್ಧ ಸಿಡಿದೇಳುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಬಡತನ ಕಿತ್ತು ತಿನ್ನುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಬಣ್ಣದ ಮಾತುಗಳನ್ನಾಡಿ ಮದುವೆಯ ಆಸೆ ತೋರಿಸಿ ಅರಬ್ಬಿಯವರೊಂದಿಗೆ ಮದುವೆ ಮಾಡಿಸುತ್ತಾರೆ. ಇಷ್ಟವಿದ್ದರೆ ಹಿಂತಿರುಗುವಾಗ ಅವರನ್ನು ಕೊಂಡೊಯ್ಯುವುದಾಗಿ, ಇಲ್ಲದಿದ್ದರೆ ಅವರಿಗೆ ತಲಾಖ್ ನೀಡಿ ಜೊತೆಗೆ  ಮೆಹರ್‍ನ್ನು ನೀಡಿ ಹೋಗುವರೆಂದು ಹೇಳಿ ಒಪ್ಪಿಸುತ್ತಾರೆ. ಈ ಕಾರ್ಯದಲ್ಲಿ ಹಸನಬ್ಬ ಹೆಣ್ಣುಮಕ್ಕಳನ್ನು ಒಪ್ಪಿಸಿ ಸಾಹುಕಾರನ ಹತ್ತಿರ ಕಮೀಷನ್ ಪಡೆದು ಜೀವನ ನಿರ್ವಹಿಸುತ್ತಿರುತ್ತಾನೆ. ಆದರೆ ಯಾವ ಅರಬ್ಬಿಯೂ ಮದುವೆಯಾದವರನ್ನು ವೀಸಾ ಮಾಡಿಸಿ ಕೊಂಡೊಯ್ಯುವ ಉದ್ದೇಶವಿಟ್ಟುಕೊಳ್ಳದೇ ಅವರನ್ನು 3 ತಿಂಗಳಕಾಲ ಬಳಸಿಕೊಂಡು ನಂತರ ವಿಚ್ಛೇದನ ನೀಡಿ ಅದಕ್ಕೆ ಸ್ವಲ್ಪ ಮೆಹರ್ ಹಣ ನೀಡಿ ಹಿಂತಿರುಗುತ್ತಿದ್ದರು.
ಈ ಅನಿಷ್ಟ ಪದ್ಧತಿಗೆ ರುಖಿಯಾ ಎಂಬಾಕೆ ಬಲಿಯಾಗುತ್ತಾಳೆ. ಆ ಅರಬ್ಬಿ ಆಕೆಯನ್ನು ವಿವಾಹವಾಗಿ, 3 ತಿಂಗಳು ಸಂತೋಷವಾಗಿ ಕಾಲಕಳೆಯುತ್ತಾನೆ. ಸಂತೋಷದ ವಿಷಯವೆಂದರೆ ಎಲ್ಲ ಅರಬ್ಬಿಯವಂತೆ ಹೀನವಾಗಿ ವರ್ತಿಸದೆ, ಬಲಾತ್ಕರಿಸದೆ, ಅವಳನ್ನು ಪ್ರೀತಿಸುತ್ತಾನೆ. ಅವಳ ಮನಸ್ಸನ್ನು ಅರಿತು ಅವಳೊಂದಿಗೆ ಮೃದುವಾಗಿ ವರ್ತಿಸುತ್ತಾನೆ. ರುಖಿಯಾಳು ಸಹ ಅವನ ಪ್ರೀತಿಗೆ ಸೋತು ಅವನೊಂದಿಗೆ ಸಂತೋಷದಿಂದಿರುತ್ತಾಳೆ. ಆ ಅರಬ್ಬಿ ಹಿಂತಿರುಗುವ ಸಮಯ ಬಂದಾಗ ತಲಾಖನ್ನು ನೀಡದೆ, ಮತ್ತೆ ಬಂದು ವೀಸಾ ಮಾಡಿಸಿ ತನ್ನೊಂದಿಗೆ ಕರೆದೊಯ್ಯುತ್ತೇನೆಂದು ಮಾತು ಕೊಟ್ಟು ಹೋಗುತ್ತಾನೆ. ಅವನನ್ನು ನಂಬಿದ್ದ ಗರ್ಭಿಣಿ ರುಖಿಯಾ ಅವನ ಬರುವಿಗಾಗಿ ಕಾದು ಕಾದು ಸೊರಗುತ್ತಾಳೆ. ಪುಟ್ಟ ಮಗುವಾದ ಮೇಲೆ, ಹಸನಬ್ಬ ಮತ್ತೆ ಮದುವೆಯಾಗಲು ಸೂಚಿಸಿದರು, ಅದನ್ನು ಒಪ್ಪದೆ ಆ ಅರಬ್ಬಿಗೆ ಕಾಯುತ್ತಿರುತ್ತಾಳೆ.
ಸಿನಿಮಾ ಆರಂಭವಾದಾಗ ರುಖಿಯಾಳಿಗೆ ಬೆಳೆದ ಮಗಳಿರುತ್ತಾಳೆ. ರುಖಿಯಾ ತನ್ನ ಮಗಳಿಗಾಗಿ ಜೀವನ ಸಾಗಿಸುತ್ತಾ, ಹಸನಬ್ಬನ ಕಣ್ಣುಗಳಿಂದ ಅವಳನ್ನು ಸದಾ ರಕ್ಷಿಸಲು ಹೆಣಗಾಡುತ್ತಿರುತ್ತಾಳೆ.
ಆ ಹಳ್ಳಿಯಲ್ಲಿರುವ ಯುವಕರ ಗುಂಪು ಇಂತಹ ಮದುವೆಗಳನ್ನು ವಿರೋಧಿಸುತ್ತಾ, ಈ ನೀಚ ಪದ್ಧತಿಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುತ್ತದೆ. ಅದರಲ್ಲಿ ಇಂತಹುದೇ ತಾತ್ಕಾಲಿಕ ಮದುವೆಗೆ ಬಲಿಯಾದ ಒಬ್ಬ ಯುವತಿಯ ತಮ್ಮನೂ ಇರುತ್ತಾನೆ. ಉದ್ಯೋಗವಿಲ್ಲದೆ ಮನೆಗೆ ಭಾರವಾಗಿ ಬೇಸತ್ತಿದ್ದ ತಮ್ಮನಿಗೆ ವೀಸಾ ಕೊಡಿಸಿ ದುಬಾಯ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಬಳಸಿಕೊಂಡಿರುತ್ತಾರೆ. ಮೋಸ ಹೋದ ಅಕ್ಕ - ತಮ್ಮ ಹಸನಬ್ಬನ ವಿರುದ್ಧ ಕಿಡಿಕಾರುತ್ತಿರುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾಹುಕಾರನಿಗೆ ಹೆಣ್ಣುಮಕ್ಕಳೇ ಸಿಗದಂತಾಗುತ್ತಾರೆ. ಆಗ ಒರ್ವ ವ್ಯಕ್ತಿ ಪಕ್ಕದ ಹಳ್ಳಿಯ ತನ್ನ ನಾದಿನಿ ಅಮೀನ ಎಂಬ ಹೆಣ್ಣನ್ನು ಹಣಕ್ಕಾಗಿ ಹಸನಬ್ಬನಿಗೆ ಒಪ್ಪಿಸಿ  ಓರ್ವ ಮುದುಕ ವ್ಯಾಪಾರಿಗೆ ವಿವಾಹ ಮಾಡುತ್ತಾರೆ. ಆ ಮುಗ್ಧ ಹೆಣ್ಣು ಅವನ ಅತ್ಯಾಚಾರಕ್ಕೆ ಬಲಿಯಾಗಿ ರಾತ್ರೋ ರಾತ್ರಿ ಮಾಯವಾಗುತ್ತಾಳೆ. ಮರುದಿನ ಗಲಾಟೆಗೈದ ವ್ಯಾಪಾರಿ ತನ್ನ ಹಣ ವಾಪಸ್ಸು ನೀಡಿರೆಂದು ಸಾಹುಕಾರನ ಮೇಲೆ ಉರಿದು ಬೀಳುತ್ತಾನೆ. ಆಗ ಇವರ ಕೆಟ್ಟ ಕಣ್ಣು ರುಖಿಯಾಳ ಮಗಳ ಮೇಲೆ ಬೀಳುತ್ತದೆ. ರುಖಿಯಾ ಒಪ್ಪದಿದ್ದಾಗ ಸಾಹುಕಾರ ಅವಳನ್ನು ಬೆದರಿಸುತ್ತಾನೆ. ವಧುವಿನ ಒಪ್ಪಿಗೆಯನ್ನು ಪಡೆಯದೆ ಧರ್ಮಕ್ಕೆ ವಿರುದ್ಧವಾಗಿ ನಿಖಾಹ್ ಮಾಡಲು ದಿನವನ್ನು ನಿರ್ಧರಿಸುತ್ತಾರೆ.
ಇತ್ತ ಉದ್ಯೋಗವಿಲ್ಲದೆ ಕೊರಗುತ್ತಿದ್ದ ತಮ್ಮನನ್ನು ಕಂಡು ಹಲಬುತ್ತಿದ್ದ ಅಕ್ಕನಿಗೆ ಹಸನಬ್ಬ ವೀಸಾ ತಂದು ಕೊಡುತ್ತಾನೆ. ತಮ್ಮನ ಭವಿಷ್ಯತ್ತಿಗಾಗಿ ಅಕ್ಕ ಮತ್ತೊಮ್ಮೆ ನಿಖಾಹ್‍ಗೆ ಒಪ್ಪಿಕೊಳ್ಳುತ್ತಾಳೆ. ಈ ಪದ್ಧತಿಯನ್ನು ಕಂಡು ಉರಿದುಬೀಳುತ್ತಿದ್ದ ತಮ್ಮನೂ ಅಸಹಾಯಕತೆಯಿಂದ ತನ್ನ ಅಕ್ಕನ ಈ ನಿರ್ಧಾರವನ್ನು ಸಮ್ಮತಿಸುತ್ತಾನೆ. ಉಳಿದ ಯುವಕರ ಗುಂಪು ರುಖಿಯಾಳಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಬೇಡೆಂದು ಸಲಹೆ ನೀಡಲು ಬರುತ್ತಾರೆ. ಅದಕ್ಕೆ ರುಖಿಯಾ ‘ನನ್ನ ಮಗಳನ್ನು ನಿಮ್ಮಲ್ಲಿ ಯಾರದರೊಬ್ಬರು ಮದುವೆಯಾಗುವಿರಾ?’ ಎಂದು ಕೇಳಿದಾಗ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಾರೆ. ಆ ಸಮಾಜದಲ್ಲಿ ಅರಬ್ಬಿಯವರೊಂದಿಗೆ ವಿಚ್ಛೇದನ ಪಡೆದ ಹೆಂಗಸರನ್ನು, ಅವರ ಮಕ್ಕಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ. ಇನ್ನು ದೂರದ ಗಂಡುಗಳಿಗೆ ವರದಕ್ಷಿಣೆ ನೀಡಲು ಇವರ ಬಳಿ ಹಣವಿರುತ್ತಿರಲಿಲ್ಲ. ಈ ಯುವಕರ ನಿಲುವು ನೋಡಿದ ರುಖಿಯಾ ವ್ಯಂಗ್ಯದಿಂದ ನಗೆಯಾಡುತ್ತಾಳೆ. ಈ ಪದ್ಧತಿಯನ್ನು ತೊಡೆದುಹಾಕಲು ನಿಂತವರೇ ಆ ಹೆಣ್ಣುಮಕ್ಕಳಿಗೆ ಬಾಳು ನೀಡುವ ಮನಸ್ಸು ಹೊಂದದಿರುವುದನ್ನು ಮತ್ತು ಸಮಾಜದ ನಿಂದೆಗೆ ಹೆದರುವುದನ್ನು ಕಂಡು ರುಖಿಯಾ ಅಣಕಿಸುತ್ತಾಳೆ.
ರುಖಿಯಾ ಮಗಳ ಮದುವೆ ದಿನ ಬರುತ್ತದೆ. ಮನೆಯಲ್ಲಿ ಇಬ್ಬರೂ ಅಳುತ್ತಾ ಕೂತಿರುವಾಗ ಊರಿನ ಜನರೆಲ್ಲ ನದಿಯ ಕಡೆಗೆ ಓಡುತ್ತಿರುವುದನ್ನು ಕಂಡು ರುಖಿಯಾ ಅವರ ಹಿಂದೆ ಹೋಗಿ ನೋಡಿದಾಗ ಮಾಯವಾಗಿದ್ದ ಅಮೀನಳ ಶವವನ್ನು ತೀರಕ್ಕೆ ಸಾಗಿಸುತ್ತಿರುವುದನ್ನು ಕಂಡು ದಿಗ್ಭ್ರಾಂತಳಾಗುತ್ತಾಳೆ. ಅವಳ ಕೊಳೆತ ಶವವನ್ನು ಕಂಡು ರುಖಿಯಾ ಮಗಳು ಗೆಳತಿಗೆ ಒದಗಿದ ಸ್ಥಿತಿ ಕಂಡು ಚೀರುತ್ತಾ ‘ನನಗೆ ನಿಖಾಹ್ ಬೇಡಮ್ಮ’ ಎಂದು ಗೋಳಾಡುತ್ತಾಳೆ. ಮಗಳನ್ನು ತಬ್ಬಿ ಹಿಡಿದು ರುಖಿಯಾ ಒಂದು ನಿರ್ಧಾರಕ್ಕೆ ಬರುತ್ತಾಳೆ.
ಸೀದ ನಿಖಾಹ್ ನಡೆಯುತ್ತಿದ್ದ ಸಾಹುಕಾರನ ಮನೆಗೆ ಹೋಗಿ ‘ನಿಲ್ಲಿಸಿ’ ಎಂದು ಕೂಗುತ್ತಾಳೆ. ಅವಳನ್ನು ತಡೆಯಲು ಬಂದ ಹಸನಬ್ಬನನ್ನು ದೂರ ತಳ್ಳಿ ಅಲ್ಲೇ ಇದ್ದ ಮಚ್ಚನ್ನು ಕೈಯಲ್ಲಿ ಹಿಡಿದು ಚಂಡಿಯಂತೆ ಅಬ್ಬರಿಸುತ್ತಾ ಅಮೀನಳಿಗೆ ಮಾಡಿದ ಅನ್ಯಾಯಕ್ಕಾಗಿ ಬೈಯುತ್ತಾಳೆ. ಇದನ್ನು ಕೇಳಿದ ಹಸನಬ್ಬ ತಲೆತಗ್ಗಿಸುತ್ತಾನೆ. ‘ಇನ್ನು ಮುಂದೆ ಇಂತಹ ನಿಖಾಗಳನ್ನು ಮಾಡಿದ್ದೀರೆಂದರೆ ನಿಮ್ಮನ್ನು ಕೊಚ್ಚಿ ಹಾಕುತ್ತೇನೆಂದು’ ರುಖಿಯಾ ಎಚ್ಚರಿಸಿದ ರೀತಿಗೆ ಸಾಹುಕಾರನೂ ಸೇರಿದಂತೆ ಎಲ್ಲರೂ ಅವಳ ಆವೇಶವನ್ನು ಕಂಡು ಹೆದರಿ ಸುಮ್ಮನಾಗುತ್ತಾರೆ.
ಯಾವಾಗಲೂ ತೆರೆಯ ಹಿಂದೆ ನಿಂತು ತನ್ನಪ್ಪನ ಪಾಪಕೃತ್ಯವನ್ನು ಕೇಳಿಸಿಕೊಳ್ಳುತ್ತಾ ದುಃಖಿಸುತ್ತಿದ್ದ ಸಾಹುಕಾರನ ಮಗಳು ರುಖಿಯಾಳ ನಿರ್ಧಾರ ಕೇಳಿ ಅತ್ಯಾನಂದದಿಂದ ತೆರೆಯನ್ನು ಸರಿಸಿ ಅವಳಲ್ಲಾದ ಸಂತೋಷವನ್ನು ವ್ಯಕ್ತಪಡಿಸುತ್ತಾಳೆ. ಈ ದೃಶ್ಯವು ಕೊನೆಯಲ್ಲಿ ಅರ್ಥಪೂರ್ಣವಾಗಿದ್ದು ಹೆಣ್ಣು ಮಕ್ಕಳ ಕಷ್ಟಗಳು ಪರಿಹಾರವಾದವೆಂದು ನಮಗೆ ಮನವರಿಕೆಯಾಗುತ್ತದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹೆಣ್ಣನ್ನು ಭೋಗದ ವಸ್ತುವನ್ನಾಗಿ ಬಳಸಿ ಬಿಸಾಡುವ ಪದ್ಧತಿಯನ್ನು ತೊಲಗಿಸಿ, ಅದಕ್ಕೆ ಅಂತ್ಯ ಹಾಡಿ ಹೊಸ ಜೀವನಕ್ಕೆ ಮುನ್ನುಡಿ ಬರೆಯುತ್ತಾಳೆ ಈ ರುಖಿಯಾ.
ಇಂದಿಗೂ ಧರ್ಮದ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರಗಳು ನೂರಾರು. ಅಮಾಯಕ ಹೆಣ್ಣು ಮಕ್ಕಳ ಬಾಳು ಕಾಮಾಂಧ ಪುರುಷರಿಗೆ ಬಲಿಯಾಗುವುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಿದೆ. ಹೆಣ್ಣು ಮಕ್ಕಳು ಸಮಯ ಬಂದಾಗ ಸಮಸ್ಯೆಯನ್ನೆದುರಿಸಲು ಸಿದ್ಧರಾಗಬೇಕೆಂದು ಮನಸ್ಸಿಗೆ ನಾಟುವಂತೆ ಈ ಚಿತ್ರೀಕರಿಸಿದ್ದಾರೆ. ‘ಮುನ್ನುಡಿ’ - ಎಲ್ಲರೂ ಅಗತ್ಯವಾಗಿ ನೋಡಲೇಬೇಕಾದಂತಹ ಸಿನಿಮಾ.

- ಉಷಾಗಂಗೆ     

ಕಾಮೆಂಟ್‌ಗಳಿಲ್ಲ: