[ಪರ್ಸಿವಲ್ ವೈಲ್ಡ್ ರವರ "ಅವರ್ ಆಫ್ ಟ್ರುಥ್" (Hour of Truth) ನಾಟಕದ ಅನುವಾದ]
ಪಾತ್ರಗಳು:
ರಾಬರ್ಟ್ ಬಾಲ್ಡ್ವಿನ್
ಮಾರ್ಥಾ – ಆತನ ಪತ್ನಿ
ಜಾನ್ – ಆತನ ಮಗ
ಈವಿ - ಆತನ ಮಗಳು
ಮಾರ್ಷಲ್ - ನ್ಯಾಷನಲ್ ಬ್ಯಾಂಕ್ ನ ಅಧ್ಯಕ್ಷರು
[ಅದು ಸುಡು ಬೇಸಿಗೆಯ ಮಧ್ಯಾಹ್ನ. ನೆತ್ತಿಯ ಮೇಲಿನ ಸೂರ್ಯ ಮತ್ತು ಕೆಳಗೆ ಕಾದ ನೆಲ ಎರಡೂ ನಿರ್ದಯಿಗಳು. ದೂರದಲ್ಲಿ ಕಾಣುತ್ತಿರುವ ಮೋಡಗಳು ಧಗೆಯ ಶಮನದ ಆಸೆಯನ್ನು ನೀಡುತ್ತಿವೆ. ಒಂದು ಸಣ್ಣ ಮನೆಯ ಕಿಟಕಿಯ ಬಳಿ ಬಾಲ್ಡ್ವಿನ್ಮನೆಯವರು ತಮ್ಮ ಹಿರಿಯನ ಬರುವಿಕೆಗೆ ಕಾಯುತ್ತಿದ್ದಾರೆ.
27 ವರ್ಷದ ಯುವಕ ಜಾನ್ ತತ್ವಜ್ಞಾನಿಯಂತೆ ಕುಳಿತಿದ್ದಾನೆ, ಈ ದಿನಕ್ಕೆ ಏನೂ ವಿಶೇಷ ಮಹತ್ವವಿಲ್ಲ ಎಂಬಂತೆ. ಆದರೆ ಆತನ ತಾಯಿ ಅರ್ಧ ಘಂಟೆಯಿಂದ ಹಾಗೆಯೇ ಕುಳಿತಿದ್ದಾಳೆ. ಮಗಳು ತನ್ನ ಉದ್ವಿಗ್ನತೆಯನ್ನು ಮುಚ್ಚಿಡಲು ಯಾವುದೇ ಯತ್ನವನ್ನು ಮಾಡುವುದಿಲ್ಲ.
ಅಲ್ಲೊಂದು ರೀತಿಯ ಬಿಗುವಾದ ಮೌನವಿದೆ. ಆದರೆ ಯಾರೊಬ್ಬರೂ ಆ ಮೌನವನ್ನು ಮುರಿಯಲೆತ್ನಿಸುವುದಿಲ್ಲ. ಹತ್ತು ನಿಮಿಷಗಳಲ್ಲಿ ಮಗಳು ಹತ್ತನೆಯ ಬಾರಿಗೆ ಕಿಟಕಿಯ ಬಳಿ ಹೋಗಿ ರಸ್ತೆಯತ್ತ ನೋಡುತ್ತಿದ್ದಾಳೆ]
ಮಾರ್ಥಾ – ಈಗಾಗಲೇ ಅವರು ಮನೆಯಲ್ಲಿರಬೇಕಿತ್ತು.
ಈವಿ - ಹೌದಮ್ಮಾ.
ಮಾರ್ಥಾ – ಅವರು ತಮ್ಮ ಕೊಡೆಯನ್ನು ಮರೆತಿಲ್ಲ ಅಂದ್ಕೊಂಡಿದ್ದೀನಿ. ಅವರಿಗೆ ಇದರ ಬಗ್ಗೆ ಎಲ್ಲ ಬಹಳ ಮರೆವು.
ಈವಿ - ಹೌದಮ್ಮಾ.
ಮಾರ್ಥಾ – ಮಳೆ ಬರೋಹಾಗಿದೆ ಈವಿ, ನಿನಗೆ ಹಾಗನಿಸೋಲ್ಲವಾ? (ಉತ್ತರಕ್ಕೆ ಕಾಯದೆ ಅವಳು ಕಿಟಕಿಯ ಹತ್ತಿರ ಹೋಗಿ ಕಳವಳದಿಂದ ಹೊರನೋಡುತ್ತಾಳೆ) ಮೋಡ ಕವಿದಿದೆ. (ಅಲ್ಲಿಂದ ಈ ಕಡೆ ಬರುತ್ತಾಳೆ. ಅಷ್ಟರಲ್ಲಿ ಮಿಂಚು ಕಾಣಿಸುತ್ತದೆ. ಜಾನ್ ನಿಧಾನವಾಗಿ ಎದ್ದು ಮಧ್ಯದಲ್ಲಿರುವ ಟೇಬಲ್ ಬಳಿ ಬಂದು ಪುಸ್ತಕವೊಂದರ ಹಾಳೆಗಳನ್ನು ತಿರುಗಿಸಲಾರಂಭಿಸುತ್ತಾನೆ. ತಾಯಿ ಆತನೆಡೆಗೆ ತಿರುಗುತ್ತಾಳೆ.) ಜಾನ್, ನಿಮ್ಮ ತಂದೆಯ ರೂಮಿಗೆ ಓಡಿಹೋಗಿ ಕಿಟಕಿಗಳು ಮುಚ್ಚಿವೆಯಾ ನೋಡಿ ಬಾ. ಹೋಗಪ್ಪಾ, ಒಳ್ಳೆಯ ಹುಡುಗ ನೀನು.
ಜಾನ್ - ಸರಿ (ಹೋಗುವನು)
ಈವಿ - (ಸ್ವಲ್ಪ ತಡೆದು) ಅಮ್ಮಾ, (ಉತ್ತರವಿಲ್ಲ) ಅಮ್ಮಾ! (ತಾಯಿ ನಿಧಾನವಾಗಿ ತಿರುಗುವಳು) ಗ್ರೇಷಮ್ ಗೆ ಅಪ್ಪನಿಂದ ಏನು ಬೇಕಾಗಿತ್ತು? ಅಪ್ಪಾ ಏನಾದರೂ ತಪ್ಪು ಮಾಡಿದರಾ?
ಮಾರ್ಥಾ – (ಹೆಮ್ಮೆಯಿಂದ) ನಿಮ್ಮ ತಂದೆಯೇ? ಇಲ್ಲ, ಈವಿ.
ಈವಿ - ಹಾಗಾದರೆ ಗ್ರೇಷಮ್ ಅಪ್ಪಂಗೆ ಹೇಳಿಕಳಿಸಿದ್ದಾದರೂ ಏಕೆ?
ಮಾರ್ಥಾ – ಅವರೊಂದಿಗೆ ಏನೋ ಮಾತನಾಡೋಕೆ.
ಈವಿ - ಯಾವುದರ ಬಗ್ಗೆ? ಗ್ರೇಷಮ್ ರನ್ನು ಬಂಧಿಸಲಾಗಿದೆ. ನಾಳೆ ಅವರ ವಿಚಾರಣೆ ನಡೆಯಲಿದೆ. ಅವರಿಗೆ ಅಪ್ಪನಿಂದ ಏನು ಬೇಕಾಗಿರಬಹುದು?
ಮಾರ್ಥಾ - ನಿಮ್ಮ ತಂದೆ ಸಾಕ್ಷಿ ನೀಡಬೇಕಾಗಿದೆ.
ಈವಿ - ಹೌದು, ಆದರೆ ಅವರು ಸಾಕ್ಷಿ ಹೇಳೋದು ಗ್ರೇಷಮ್ ವಿರುದ್ಧ. ಹೀಗಿರೋವಾಗ ಗ್ರೇಷಮ್ ಅವರನ್ನೇಕೆ ನೋಡಬೇಕು ಅಂತ ಬಯಸ್ತಾನೆ?
ಮಾರ್ಥಾ - ನನಗದು ಗೊತ್ತಿಲ್ಲ ಈವಿ. ನಿಮ್ಮ ತಂದೆ ವ್ಯವಹಾರದ ವಿಷಯದ ಬಗ್ಗೆ ಹೆಚ್ಚೇನೂ ಹೇಳೋದಿಲ್ಲ ಅನ್ನೋದು ನಿನಗೆ ಗೊತ್ತು. (ಸ್ವಲ್ಪ ತಡೆದು) ಪತ್ರಿಕೆಗಳಲ್ಲಿ ನೋಡೋವರೆಗೆ ಆ ಬ್ಯಾಂಕಿನಲ್ಲಿ ಏನೋ ಸವಸ್ಯೆಯಾಗಿದೆ ಅನ್ನೋದೇ ನನಗೆ ಗೊತ್ತಿರಲಿಲ್ಲ. ನನ್ನ ಹಣವನ್ನು ಅಲ್ಲಿಂದ ತೆಗೆ ಅಂತ ಸಹ ನಿಮ್ಮ ತಂದೆ ನನಗೆ ಹೇಳಲಿಲ್ಲ. ಹಾಗೆ ಮಾಡಿದರೆ ತಾನು ಗ್ರೇಷಮ್ ಗೆ ನಿಷ್ಠನಾಗಿರುವುದಿಲ್ಲ ಎಂದುಕೊಂಡರು (ಈವಿ ತಲೆದೂಗುತ್ತಾಳೆ) ನನಗೇ ಅನುಮಾನ ಬಂದಾಗ ಅವರಿಷ್ಟಕ್ಕೆ ವಿರುದ್ಧವಾಗಿ ಆ ಹಣವನ್ನು ವಾಪಸ್ಸು ಪಡೆದುಕೊಂಡೆ.
ಈವಿ - (ಸ್ವಲ್ಪ ತಡೆದು) ಇದರಲ್ಲಿ ಅಪ್ಪನ ಕೈ ಏನಾದರೂ....... (ಪೂರ್ಣಗೊಳಿಸಲು ಇಚ್ಛಿಸುವುದಿಲ್ಲ)
ಮಾರ್ಥಾ - ಬ್ಯಾಂಕ್ ದಿವಾಳಿತನಕ್ಕಾ? ನಿನಗೆ ಅವರ ಬಗ್ಗೆ ಚೆನ್ನಾಗಿ ಗೊತ್ತಲ್ಲವೇ, ಈವಿ?
ಈವಿ - ಅವರಿಗೆ ಏನು ನಡೆಯುತ್ತಿದೆ ಎಂಬುದು ಗೊತ್ತಿರಲಿಲ್ಲವೇ? ಪತ್ರಿಕೆಯವರು ಏನು ಹೇಳುತ್ತಿದ್ದಾರೆ ಎಂದು ನಿನಗೆ ಗೊತ್ತು.
ಮಾರ್ಥಾ - ಪತ್ರಿಕೆಯವರು ನಿಮ್ಮ ತಂದೆಯ ಬಗ್ಗೆ ನ್ಯಾಯಯುತವಾಗಿ ನಡೆದುಕೊಳ್ಳುತ್ತಿಲ್ಲ ಈವಿ .
ಈವಿ - ಬಹುಶಃ ಇಲ್ಲ. ಆದರೆ ಅಪ್ಪನಿಗೆ ಅವರ ಬ್ಯಾಂಕಿನ ವ್ಯವಹಾರದ ಬಗ್ಗೆ ಏನೂ ತಿಳಿಯಲಿಲ್ಲ ಎನ್ನುವುದಾದರೆ, ಅಪ್ಪ ಒಬ್ಬ ಮೂರ್ಖರಾಗಿರಬೇಕು ಎಂದರು. ಅಪ್ಪನಿಗೆ ಮತ್ತು ಗ್ರೇಷಮ್ ರಿಗೆ ಮಾತ್ರ ಈ ಬಗ್ಗೆ ತಿಳಿದಿರಲು ಸಾಧ್ಯ ಎಂದರು. ಅಪ್ಪ ಏಕೆ ಈ ವ್ಯವಹಾರವನ್ನು ತಡೆಯಲಿಲ್ಲ ಅಂತ ಪ್ರಶ್ನಿಸಿದರು.
ಮಾರ್ಥಾ - ನಿಮ್ಮ ತಂದೆ ಗ್ರೇಷಮ್ ರ ಆಜ್ಞೆನ ಪಾಲಿಸಿದ್ರು.
ಈವಿ - (ತಿರಸ್ಕಾರದಿಂದ) ಗ್ರೇಷಮ್ ರ ಆಜ್ಞೆ! ಅಪ್ಪ ಅದನ್ನು ಅನುಸರಿಸಲೇ ಬೇಕಿತ್ತೇನು?
ಮಾರ್ಥಾ – (ಸ್ವಲ್ಪ ತಡೆದು) ಈವಿ, ನಿಮ್ಮ ತಂದೆ ತಮ್ಮ ಇಡೀ ಜೀವನದಲ್ಲಿ ಯಾವುದೇ ತಪ್ಪನ್ನು – ಅವರಿಗೆ ಅದು ತಪ್ಪು ಅಂತ ತಿಳಿದೂ ತಿಳಿದೂ ಮಾಡಿದ್ದಾರೆ ಅಂತ ನಾನು ನಂಬೋದಿಲ್ಲ. ಆಕಸ್ಮಿಕವಾಗಿ ಅವರಿಗೆ ಗ್ರೇಷಮ್ ಏನು ಮಾಡುತ್ತಿದ್ದಾರೆ ಅನ್ನೋದು ಗೊತ್ತಾಯಿತು.
ಈವಿ - ನಿನಗೆ ಹೇಗೆ ಗೊತ್ತು?
ಮಾರ್ಥಾ - ನನಗೆ ಗೊತ್ತಿಲ್ಲ. ಆದರೆ ಊಹಿಸಬಲ್ಲೆ. ಅವರು ಏನೋ ಹೇಳಿದರು (ಕಾತರದಿಂದ) ನೋಡು ಈವಿ, ಅವರು ಯಾವ ತಪ್ಪನ್ನೂ ಮಾಡಿರೋಕೆ ಸಾಧ್ಯವಿಲ್ಲ. ಪೊಲೀಸಿನೋರು ಅವರ ಮೇಲೆ ಕಾನೂನು ರೀತ್ಯಾ ಅಪವಾದ ಹೊರಿಸಿಲ್ಲ
ಈವಿ - (ನಿಧಾನವಾಗಿ) ಇಲ್ಲ. ಅವರು ಅಪ್ಪನ ಮೇಲೆ ಅಪವಾದ ಹೊರಿಸಿಲ್ಲ. ಏಕೆ ಅಂದ್ರೆ ಅಪ್ಪಾ ಗ್ರೇಷಮ್ ವಿರುದ್ಧ ಸಾಕ್ಷಿ ಹೇಳಬೇಕು ಅಂತ ಅವರು ಇಷ್ಟ ಪಡ್ತಾರೆ. ಹಾಗಾಗಿ ನಾವು ಅದರಿಂದ ಸಮಾಧಾನ ಪಟ್ಕೊಳ್ಳೋಕ್ಕಾಗಲ್ಲ.
(ಜಾನ್ ಹಿಂತಿರುಗುವನು)
ಮಾರ್ಥಾ – (ಆ ಅವಕಾಶವನ್ನು ಉಪಯೋಗಿಸಿಕೊಂಡು) ಕಿಟಕಿಗಳು ತೆರೆದಿದ್ದವೇ ಜಾನ್?
ಜಾನ್ – (ತಟಕ್ಕನೆ) ಕಿಟಕಿ ಮುಚ್ಚಿದ್ದೇನೆ? (ಟೇಬಲ್ ಬಳಿ ಹೋಗಿ ಮತ್ತೆ ಪುಸ್ತಕವನ್ನು ನೋಡಲಾರಂಭಿಸುತ್ತಾನೆ) ಅಮ್ಮಾ....... ನೋಡಿಲ್ಲಿ...... ಆ ಗ್ರೇಷಮ್ ಗೆ ಅಪ್ಪನಿಂದ ಏನಾಗಬೇಕು?
ಈವಿ - (ತಲೆಯಾಡಿಸುತ್ತಾ) ನಾನೂ ಅದೇ ಪ್ರಶ್ನೆ ಕೇಳ್ತಿದೀನಿ.
ಮಾರ್ಥಾ - ನನಗೆ ಗೊತ್ತಿಲ್ಲ ಜಾನ್ .
ಜಾನ್ - ನೀನು ಅವರನ್ನು ಕೇಳಲಿಲ್ಲವೇ? (ತಾಯಿ ಉತ್ತರ ನೀಡುವುದಿಲ್ಲ) ಏನು?
ಮಾರ್ಥಾ - ನಾನು ಅವರನ್ನು ಕೇಳಿದೆ. ಅವರೇನೂ ಹೇಳಲಿಲ್ಲ ಜಾನ್ . (ಕಳವಳದಿಂದ) ನಿಮ್ಮ ತಂದೆಗೆ ಬ್ಯಾಂಕಿನ ಅವ್ಯವಹಾರದ ಬಗ್ಗೆ ತಿಳಿದಿತ್ತು ಅಂತ ನನಗನ್ನಿಸೊಲ್ಲ.
ಜಾನ್ – (ಒಂದು ಕ್ಷಣದ ಯೋಚನೆಯ ನಂತರ) ನೆನ್ನೆ ನಾನು ಅಸಿಸ್ಟೆಂಟ್ ಕ್ಯಾಷಿಯರ್ ಜೊತೆ ಮಾತನಾಡುತ್ತಿದ್ದೆ.
ಈವಿ - ಡೊನೊವನ್ ಜೊತೆಗಾ?
ಜಾನ್ - ಹೌದು. ಅವರನ್ನು ನಾನು ಅಥ್ಲೆಟಿಕ್ ಕ್ಲಬ್ ನಲ್ಲಿ ನೋಡಿದೆ. ಬ್ಯಾಂಕ್ ದಿವಾಳಿಯಾಗೋವರೆಗೂ ಈ ವ್ಯವಹಾರದಲ್ಲಿ ಏನಾದರೂ ತಪ್ಪಿದೆ ಅಂತ ಯಾರಿಗೂ ಗೊತ್ತಿರಲಿಲ್ಲವಂತೆ. ಡೊನೊವನ್ ಅಲ್ಲಿ 8 ವರ್ಷದಿಂದ ಇದ್ದಾರೆ. ತನ್ನ ಜೀವನ ಸುಭದ್ರವಾಗಿದೆ ಅಂತ ಅವನೂ ಭಾವಿಸಿದ್ದ. ಅದರ ಆಧಾರದ ಮೇಲೆಯೇ ಮದುವೆಯಾಗಿದ್ದ. ಆದರೆ ಇದ್ದಕ್ಕಿದ್ದಂತೆ ಈ ಸುದ್ಧಿ- ಬರಸಿಡಿಲು ಬಂದು ಎರಗಿದ ಹಾಗೆ!
ಈವಿ - ಅಪ್ಪಾ?
ಜಾನ್ – ಅಪ್ಪನಿಗೆ ಗೊತ್ತಿದ್ದಿರಬೇಕು ಎಂದು ಆತ ಹೇಳ್ತಾನೆ. ಆದರೆ ಬೇರೆ ಯಾರಿಗೂ ಗೊತ್ತಿರಲಿಲ್ಲ ಅಂತ ಆಣೆ ಹಾಕ್ತಾನೆ. ನೋಡು, ಅಪ್ಪಾ ಬೇರೆಯವರೆಲ್ಲರಿಗಿಂತ ಗ್ರೇಷಮ್ ಗೆ ಹತ್ತಿರವಾಗಿದ್ರು. ಅದು ಅವರನ್ನು ಒಳ್ಳೆಯ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಸಿದೆ.
ಮಾರ್ಥಾ – ಏನು ಹಾಗೆಂದರೆ, ಜಾನ್?
ಜಾನ್ – ಗ್ರೇಷಮ್ ವಿರುದ್ಧ ಅಪ್ಪ ಒಬ್ಬರೇ ಸಾಕ್ಷಿ. ಮತ್ತು ನಾನು ಅವರ ಹೆಸರನ್ನು ಹೊತ್ತವನು- ಜಾನ್ ಗ್ರೇಷಮ್ ಬಾಲ್ಡ್ವಿನ್- ನಿಮ್ಮ ಸೇವೆಯಲ್ಲಿ!
ಮಾರ್ಥಾ - ನಿಮ್ಮ ತಂದೆ ಅವರ ಕರ್ತವ್ಯ ಮಾಡುತ್ತಾರೆ, ಜಾನ್, ಅದರ ಫಲಿತಾಂಶ ಏನೇ ಆಗಿರಲಿ.
ಜಾನ್ – (ತಟಕ್ಕನೆ) ಅದು ನನಗೆ ಗೊತ್ತು. ಆದರೆ ಯಾವುದು ಸರಿ ಎಂಬುದರ ಬಗ್ಗೆ ನನಗೆ ಖಚಿತವಾಗಿ ಗೊತ್ತಿಲ್ಲ. (ಅವನೆಡೆಗೆ ಪ್ರಶ್ನಾರ್ಥಕವಾಗಿ ನೋಡುತ್ತಾರೆ) ಜಾನ್ ಗ್ರೇಷಮ್ 20 ವರ್ಷಗಳಲ್ಲಿ ಶ್ರೀಮಂತನಾಗಿದ್ದಾನೆ. ಆದರೆ ಅವರ ಕಾರ್ಯದರ್ಶಿಯಾಗಿ ದುಡಿದ ಇವರು ವರ್ಷಕ್ಕೆ 5000 ವಷ್ಟೇ ಪಡೆಯುತ್ತಿದ್ದರು.
ಮಾರ್ಥಾ - ನಿಮ್ಮ ತಂದೆ ಅದರ ಬಗ್ಗೆ ಯಾವಾಗಲೂ ದೂರಿಲ್ಲ.
ಜಾನ್ – ಅದೇ ದುರದೃಷ್ಟಕರ. ಅವರು ಯಾರನ್ನೂ ದೂರಿಲ್ಲ. ಸರಿ. ನಾಳೆ ಅವರಿಗೆ ಅವಕಾಶ ಸಿಗುತ್ತದೆ. ಅವರು ಕಟಕಟೆಯಲ್ಲಿ ನಿಲ್ಲುತ್ತಾರೆ. ಅವರ ಸಾಕ್ಷ್ಯದ ನಂತರ ಜಾನ್ ಗ್ರೇಷಮ್ ನನ್ನು ಅವ್ರು ಯಾರಿಗೂ ಹಾನಿಮಾಡಲಾಗದ ಜಾಗಕ್ಕೆ ಸ್ವಲ್ಪ ದಿನ ತಳ್ಳುತ್ತಾರೆ. ತನ್ನ ಕೆಲಸಗಾರರಿಗೆ ಕಡಿಮೆ ಸಂಬಳ ನೀಡುವುದರಲ್ಲಿ ಸಂತೃಪ್ತನಾಗಿರಲಿಲ್ಲ; ಅವರ ಠೇವಣಿಗಾರರನ್ನು ಸಹ ಮೋಸಗೊಳಿಸಬೇಕಿತ್ತಾ! ಅವರಿಗೆ ತಕ್ಕ ಶಾಸ್ತಿ ಇದು!
ಮಾರ್ಥಾ – (ಅಂಜಿಕೆಯಿಂದ) ನೀನೀ ರೀತಿ ಮಾತನಾಡುವುದು ನಿನ್ನ ತಂದೆಗೆ ಇಷ್ಟವಾಗುತ್ತದೆಂದು ನನಗನಿಸುವುದಿಲ್ಲ.
ಜಾನ್ – (ತಿರಸ್ಕಾರದಿಂದ ಭುಜಗಳನ್ನು ಕುಣಿಸುವನು)
ಮಾರ್ಥಾ - ನಿಮ್ಮ ತಂದೆಗೆ ಗ್ರೇಷಮ್ ವಿರುದ್ಧ ಏನೂ ಆರೋಪವಿಲ್ಲ. ಅವರು ಸತ್ಯವನ್ನು ಹೇಳುತ್ತಾರೆ - ಸತ್ಯವನ್ನು ಮಾತ್ರ ಹೇಳುತ್ತಾರೆ.
ಜಾನ್ – ಅವರೇನು ಸುಳ್ಳು ಹೇಳುತ್ತಾರೆಂದು ನಾನು ಭಾವಿಸಿದ್ದೇನೆ ಎಂದು ಕೊಂಡೆಯಾ? ಅಪ್ಪಾ ಹೇಳುವುದಿಲ್ಲ! ಅವರು ಸತ್ಯವನ್ನೇ ಹೇಳುತ್ತಾರೆ - ಸತ್ಯವನ್ನು ಮಾತ್ರ – ಅಷ್ಟೇ ಸಾಕು!
ಈವಿ - (ಕಿಟಕಿಯ ಹತ್ತಿರದಿಂದ ) ಅಪ್ಪಾ ಬರುತ್ತಿದ್ದಾರೆ!
(ಹೊರಗಡೆ ಬಾಗಿಲಿನ ಕೀಲಿಯನ್ನು ತಿರುಗಿಸಿದ ಶಬ್ಧವಾಗುತ್ತದೆ. ಈವಿ ಬಾಗಿಲಿನ ಹತ್ತಿರ ಓಡುತ್ತಾಳೆ)
ಮಾರ್ಥಾ – ಈವಿ! ನೀನಿಲ್ಲೇ ಇರು. ಮೊದಲು ನಾನು ಮಾತನಾಡುತ್ತೇನೆ. (ಆತುರದಿಂದ ಹೊರಹೋಗುತ್ತಾಳೆ. ಜಾನ್ ಮತ್ತು ಈವಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತರೆ)
ಜಾನ್ – ಗ್ರೇಷಮ್ ಅವರಿಗೆ ಏನು ಹೇಳಬಹುದೆಂಬುದೇ ಆಶ್ಚರ್ಯ. (ಈವಿ ಭುಜವನ್ನು ಹಾರಿಸುತ್ತಾಳೆ. ಜಾನ್ ಕಿಟಕಿಯತ್ತ ತೆರಳುತ್ತನೆ) ಮಳೆ ಬರಲಾರಂಭಿಸುತ್ತದೆ.
ಈವಿ - ಹೌದು. (ಸ್ವಲ್ಪ ಕಾಲ ಏನೂ ಸದ್ದಿಲ್ಲ. ಇದ್ದಕ್ಕಿದ್ದಂತೆ ಜಾನ್ ಬಾಗಿಲನ್ನು ತೆರೆಯುತ್ತಾನೆ)
ಜಾನ್ - ಹಲೋ ಅಪ್ಪಾ!
ಬಾಲ್ಡ್ವಿನ್– (ಒಳಗೆ ಬರುತ್ತಾನೆ. ಮಾರ್ಥಾ ಹಿಂಬಾಲಿಸುತ್ತಾಳೆ) ಹೇಗಿದ್ದೀಯಾ? ನನ್ನ ಹುಡುಗ? (ಜಾನ್ ನೊಂದಿಗೆ ಕೈಕುಲುಕುತ್ತಾನೆ) ಈವಿ !
ಮಾರ್ಥಾ – ರಾಬರ್ಟ್, ನಿನ್ನ ಶೂಸ್ ಒದ್ದೆಯಾಗಿಲ್ಲ ತಾನೆ?
ಬಾಲ್ಡ್ವಿನ್– (ತಲೆಯಾಡಿಸುತ್ತಾ) ಇಲ್ಲ. ನಾನು ಕಾರಿನಲ್ಲಿ ಬಂದೆ. ನನ್ನ ಮೇಲೆ ಒಂದು ಹನಿಯೂ ಇಲ್ಲ. ನೋಡು? (ಕುರ್ಚಿಯ ಮೇಲೆ ಕೂರುತ್ತಾನೆ. ಅಸಹನೀಯ ಮೌನ ಆವರಿಸುತ್ತದೆ)
ಜಾನ್ – ಅಪ್ಪಾ, ಈಗ ನೀವೇನಾದರೂ ಹೇಳಬೇಕಾದ ಸಮಯ ಬಂದಿದೆ ಅನಿಸೋದಿಲ್ವಾ?
ಬಾಲ್ಡ್ವಿನ್ – ಏನಾದರೂ ಹೇಳಬೇಕು? ನನಗೇನೂ ಅರ್ಥವಾಗುತ್ತಿಲ್ಲ, ಜಾನ್.
ಜಾನ್ – ಜನ ನಿಮ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಹಲವಾರು ವಿಷಯಗಳನ್ನು......
ಬಾಲ್ಡ್ವಿನ್– ಯಾವ ರೀತಿಯ ವಿಷಯಗಳನ್ನು, ಜಾನ್?
ಜಾನ್ - ನೀವೇ ಊಹಿಸಬಹುದು, ಕೊಳೆತ ವಿಚಾರಗಳು. ಅದನ್ನು ನನಗೆ ವಿರೋಧಿಸಲಾಗಲ್ಲ.
ಬಾಲ್ಡ್ವಿನ್– ಏಕೆ, ಜಾನ್?
ಜಾನ್ – ಏಕೆಂದರೆ, ನನಗೆ ಗೊತ್ತಿರಲಿಲ್ಲ.
ಬಾಲ್ಡ್ವಿನ್- ನಿನಗದರ ಬಗ್ಗೆ ತಿಳಿದಿರಬೇಕಿತ್ತೇ? ನಿನ್ನ ತಂದೆಯ ಬಗ್ಗೆ ನಿನಗೆ ತಿಳಿದಿದೆ ಎಂಬುದೇ ಸಾಲದಾಗಿತ್ತೇ?
ಜಾನ್ – (ಸ್ವಲ್ಪ ತಡೆದು) ದಯವಿಟ್ಟು ಕ್ಷಮಿಸಿ ಅಪ್ಪಾ.
ಬಾಲ್ಡ್ವಿನ್- ಬ್ಯಾಂಕ್ ದಿವಾಳಿಯಾಗುತ್ತಿದೆ, ಎಲ್ಲವೂ ಮುಳುಗಿಹೋಗುತ್ತಿದೆ ಎನ್ನುವ ಎರಡು ದಿನಗಳ ಮುಂಚೆ ನನಗೆ ಗ್ರೇಷಮ್ ಮಾಡಿದ್ದರ ಬಗ್ಗೆ ತಿಳಿಯಿತು. (ಸ್ವಲ್ಪ ತಡೆಯುತ್ತಾನೆ. ಎಲ್ಲರೂ ಗಾಢವಾಗಿ ಕೇಳುತ್ತಿದ್ದಾರೆ) ಅದನ್ನೆಲ್ಲಾ ಸರಿಮಾಡಬೇಕೆಂದು ನಾನು ಹೇಳಿದೆ. ಆದರೆ ಅವನು ಸಾಧ್ಯವಿಲ್ಲ ಎಂದು ಹೇಳಿದ........
ಈವಿ - (ತಂದೆ ಮುಂದುವರೆಸದಿದ್ದರಿಂದ) ನಂತರ ಏನಾಯಿತು?
ಬಾಲ್ಡ್ವಿನ್– ಎಲ್ಲವನ್ನೂ ಸರಿಪಡಿಸಲು ಸಾಧ್ಯವಾದದ್ದನ್ನೆಲ್ಲಾ ಮಾಡಬೇಕೆಂದು ಹೇಳಿದೆ. ಅದರಲ್ಲಿ ಮೊದಲ ಕೆಲಸ ಬ್ಯಾಂಕ್ ಅನ್ನು ಮುಚ್ಚುವುದಾಗಿತ್ತು. ಆದರೆ ಅವನಿಗೆ ಅದನ್ನು ಮಾಡಲಿಷ್ಟವಿರಲಿಲ್ಲ.
ಮಾರ್ಥಾ – ಆದರೆ ಅವರು ಅದನ್ನು ಮುಚ್ಚಿದರು!
ಬಾಲ್ಡ್ವಿನ್- ನಾನೇ ಅವನಿಂದ ಮಾಡಿಸಿದೆ. ಅವನಿಗೆ ಕೋಪ ಬಂದಿತ್ತು. ಬಹಳ ಕೋಪ ಬಂದಿತ್ತು. ಆದರೆ ಚಾವಟಿ ನನ್ನ ಕೈಯಲ್ಲಿತ್ತು.
ಈವಿ - ಪತ್ರಿಕೆಗಳು ಈ ಬಗ್ಗೆ ಬರೆದಿಲ್ಲ.
ಬಾಲ್ಡ್ವಿನ್– ಅವರಿಗೆ ಹೇಳಬೇಕಾದ ಅವಶ್ಯಕತೆ ಇದೆ ಎಂದು ನನಗನಿಸಲಿಲ್ಲ.
ಜಾನ್ – ಆದರೆ ಈ ಮಧ್ಯದಲ್ಲಿ ನಿಮ್ಮ ಹೆಸರು ಮರೆಯಲ್ಲಿರುವಂತೆ ನೋಡಿಕೊಂಡಿರಿ.
ಬಾಲ್ಡ್ವಿನ್– ಅದು ನಾಳೆ ಸ್ಪಷ್ಟವಾಗುತ್ತದೆ, ಅಲ್ಲವೇ? (ಸ್ವಲ್ಪ ತಡೆಯುತ್ತಾನೆ) ಇಂದು ಗ್ರೇಷಮ್ ನನಗೆ ಹೇಳಿಕಳಿಸಿದ್ದ. ವಿಚಾರಣೆ ಇನ್ನು 24 ಘಂಟೆಗಳಲ್ಲಿ ಆರಂಭವಾಗುತ್ತದೆ. ಅವನ ವಿರುದ್ಧ ನಾನೊಬ್ಬನೇ ಸಾಕ್ಷಿ. ಅವನು ಕೇಳಿದ – ಏನೆಂದು ಊಹಿಸಿ ನೋಡೋಣ........
ಜಾನ್ – (ಕೋಪದಿಂದ) ಅವನ ಜೀವವನ್ನು ಉಳಿಸಲು ನೀವು ಸುಳ್ಳು ಹೇಳಬೇಕಾಗಿತ್ತು ಅಲ್ಲವೇ? ಪ್ರಮಾಣ ಮಾಡಿ ಸುಳ್ಳು ಹೇಳಬೇಕಾಗಿತ್ತು?
ಬಾಲ್ಡ್ವಿನ್– ಅದೇನು ಅವಶ್ಯಕತೆಯಿರಲಿಲ್ಲ ಜಾನ್ . ನನಗೆ ಮಂದ ನೆನಪಿನ ಸಮಸ್ಯೆ ಎಂದಷ್ಟೇ ಹೇಳಬೇಕಾಗಿತ್ತು. ನನಗೆ ಗೊತ್ತಿರುವುದನ್ನೆಲ್ಲಾ ಹೇಳಿದರೆ ಜಾನ್ ಗ್ರೇಷಮ್ ಜೈಲಿಗೆ ಹೋಗುತ್ತಾನೆ. ಭೂಮಿಯ ಯಾವುದೇ ಶಕ್ತಿ ಅದನ್ನು ತಡೆಯಲಾರದು. ಆದರೆ ಅವನಿಗೆ ನಾನು ಕೆಲವು ವಿಷಯಗಳನ್ನು – ಕೆಲವು ಅವಶ್ಯಕ ವಿಷಯಗಳನ್ನು ಮರೆಯಬೇಕಾಗಿದೆ. ಅವರು ನನ್ನನ್ನು ಪ್ರಶ್ನಿಸಿದಾಗ ನಾನು “ನನಗೆ ನೆನಪಿಲ್ಲ” ಎನ್ನಬಹುದು. ಅವರೇನು ನನಗೆ ನೆನಪಿದೆ ಎಂದು ಸಾಬೇತುಗೊಳಿಸಲಾರರು. ಅಲ್ಲಿದೆ ನೋಡು ವಿಷಯ.
ಜಾನ್ – ಅದು ಸುಳ್ಳಲ್ಲವೇ ಅಪ್ಪಾ!
ಬಾಲ್ಡ್ವಿನ್– (ಮುಗುಳ್ನಗುತ್ತಾ) ಖಂಡಿತ. ಆದರೆ ಇಂತಹುದು ಪ್ರತಿದಿನವೂ ನಡೆಯುಇತ್ತದೆ. ಅವರು ನನ್ನನ್ನೇನೂ ಮಾಡಲಾರರು. ಅವನನ್ನು ಶಿಕ್ಷಿಸದೆ ಇರಲಾರರು.
ಮಾರ್ಥಾ – ಎಷ್ಟು ಧೈರ್ಯ ಅವರಿಗೆ. ನಿಮ್ಮನ್ನು ಆ ರೀತಿ ಮಾಡಲು ಕೇಳಬೇಕೆಂದರೆ ಎಷ್ಟು ಧೈರ್ಯ...........
ಈವಿ - ನೀವೇನು ಹೇಳಿದಿರಿ ಅಪ್ಪಾ?
ಬಾಲ್ಡ್ವಿನ್– (ಮುಗುಳ್ನಕ್ಕು ಜಾನ್ ಕಡೆಗೆ ನೋಡಿ) ನೀನೇನು ಹೇಳುತ್ತಿದ್ದೆ?
ಜಾನ್ - ಹಾಳಾಗಿ ಹೋಗು ಎನ್ನುತ್ತಿದ್ದೆ.
ಬಾಲ್ಡ್ವಿನ್– (ತಲೆದೂಗುತ್ತಾ) ನಾನೂ ಅದನ್ನೇ ಮಾಡಿದೆ.
ಜಾನ್ - ಬೇಷ್ ಅಪ್ಪಾ!
ಮಾರ್ಥಾ – (ತನ್ನಷ್ಟಕ್ಕೆ ತಾನೇ) ನನಗೆ ಗೊತ್ತಿತ್ತು! ನನಗೆ ಗೊತ್ತಿತ್ತು!
ಬಾಲ್ಡ್ವಿನ್– ಆದರೆ ಜಾನ್, ನಾನು ನಿನ್ನ ಪದಗಳನ್ನು ಬಳಸಲಿಲ್ಲ. ಅವನು ನನಗೆ ತುಂಬಾ ಹಳೆಯ ಸ್ನೇಹಿತ. ಆದರೆ ನಾನು ಯಾವುದೇ ಮುಲಾಜಿಟ್ಟುಕೊಳ್ಳಲಿಲ್ಲ. ನನ್ನ ಮನಸ್ಸಿನಲ್ಲಿರುವುದು ಆತನಿಗೆ ಅರ್ಥವಾಯಿತು. .
ಈವಿ - ನಂತರ ಏನು ಹೇಳಿದರು?
ಬಾಲ್ಡ್ವಿನ್- ಹೇಳಲು ಹೆಚ್ಚಿಗೇನೂ ಇರಲಿಲ್ಲ. ಆತನಿಗೇನೂ ಆಶ್ಚರ್ಯವಾಗಲಿಲ್ಲ. 35 ವರ್ಷಗಳಿಂದ ಅವನು ನನ್ನನ್ನು ನೋಡಿದ್ದಾನೆ. (ಹೆಮ್ಮೆಯಿಂದ) ನನ್ನನ್ನು ಅಷ್ಟು ದಿನಗಳಿಂದ ತಿಳಿದ ಯಾರಿಗೇ ಆಗಲಿ ನಾನು ನನ್ನ ಪ್ರಜ್ಞೆಯೊಂದಿಗೆ ಚೌಕಾಸಿ ಮಾಡುತ್ತೇನೆಂದು ಖಂಡಿತ ನಿರೀಕ್ಷಿಸಲಾರರು. ಜಾನ್ ಗ್ರೇಷಮ್ ಅಲ್ಲದೆ ಇನ್ನಾರೇ ಆಗಿದ್ದರೂ ಅವರ ಮುಖದ ಮೇಲೆ ಹೊಡೆಯುತ್ತಿದ್ದೆ. ಆದರೆ ಜಾನ್ ಗ್ರೇಷಮ್ ಮತ್ತು ನಾನು ಚಿಕ್ಕಂದಿನಿಂದ ಒಟ್ಟಿಗಿದ್ದವರು. ಜೊತೆ ಜೊತೆಗೆ ದುಡಿದವರು. ಆತ ಸ್ವಂತ ವ್ಯವಹಾರ ಆರಂಭಿಸಿದಾಗಿನಿಂದಲೂ ನಾನವನ ಜೊತೆ ಇದ್ದೆ. ಆದರೆ ಅವನು ಹತಾಶನಾಗಿದ್ದಾನೆ. ಅವನಿಗೆ ತಾನೇನು ಮಾಡುತ್ತಿದ್ದೇನೆಂದು ಸಹ ಗೊತ್ತಾಗುತ್ತಿಲ್ಲ. ಇಲ್ಲದಿದ್ದರೆ ಅವನು ನನಗೆ ಹಣದ ಆಮಿಷ ಒಡ್ಡುತ್ತಿರಲಿಲ್ಲ.
ಜಾನ್ – (ಕೋಪದಿಂದ) ಹಣ ನೀಡಲು ಬಂದರೇ, ಅಪ್ಪಾ?
ಬಾಲ್ಡ್ವಿನ್– ಆತ ಆ ಹಣವನ್ನು ತುರ್ತು ಅವಶ್ಯಕತೆಗೆಂದು ತೆಗೆದಿಟ್ಟಿದ್ದ. ಅವರು ಅವನನ್ನು ಶಿಕ್ಷಿಸದೆ ಇದ್ದರೆ ಅವನು ಅದನ್ನು ನನಗೆ ಕೊಡುತ್ತಾನೆ. ಕಾನೂನು ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾನು ನಾಳೆ ಸಂಜೆಯವರೆಗೂ ಬದುಕಿದ್ದರೆ ಖಂಡಿತ ಅವನನ್ನು ಶಿಕ್ಷಿಸುತ್ತಾರೆ. (ನಿಟ್ಟುಸಿರಿಡುವನು) ಅವನಿಗೆ ಶಿಕ್ಷೆಯಾಗುವಲ್ಲಿ ನನ್ನದೇನೂ ಭಾಗವಿಲ್ಲ ಎಂಬುದು ಆ ಭಗವಂತನೇ ಬಲ್ಲ....... ( ಅರ್ಧಕ್ಕೆ ನಿಲ್ಲಿಸುವನು. ಈವಿ ಆತನ ಕೈ ಮುಟ್ಟುವಳು) ಯುವಕನಾಗಿ, ಮುದುಕನಾಗಿ ನಾನವನಿಗೆ, ಅವನೊಂದಿಗೆ ನನ್ನ ಜೀವನದ ಅಮೂಲ್ಯ ಭಾಗವನ್ನು ಕಳೆದಿದ್ದೇನೆ. ನಾನವನಿಗೆ ನಿಯತ್ತಾಗಿದ್ದೆ. ನಾನವನಿಗೆ ಎಂದೂ ನಿಯತ್ತಾಗಿದ್ದೆ. ಆದರೆ ಜಾನ್ ಗ್ರೇಷಮ್ ಪ್ರಾಮಾಣಿಕತೆ ತೊರೆದರೆ ನನ್ನ ಅವನ ನಡುವೆ ಸಂಬಂಧ ಕಡಿದುಹೋಗುತ್ತದೆ!
ಮಾರ್ಥಾ – (soಜಿಣಟಥಿ ಅಳುತ್ತ) ರಾಬರ್ಟ್! ರಾಬರ್ಟ್!
ಬಾಲ್ಡ್ವಿನ್– ಜೀವಿಸಲು ನನಗೆ ಕೆಲವೇ ವರ್ಷಗಳು ಉಳಿದಿವೆ, ಅದನ್ನು ನಾನು ಹಿಂದೆ ಬದುಕಿದ್ದ ಹಾಗೆಯೇ ಕಳೆಯುವೆ. ನಾನು ನನ್ನ ಸಮಾಧಿಗೆ ಸ್ವಚ್ಛವಾಗಿಯೇ ತೆರಳುವೆ.
(ಎದ್ದು ಕಿಟಕಿಯ ಬಳಿ ಹೋಗಿ ಹೊರನೋಡುವನು) ಮಳೆ ನಿಂತಿದೆಯಲ್ಲವೇ?
ಈವಿ - (ತಂದೆಯ ಹಿಂದೆ ಹೋಗಿ ಆತನ ಕೈ ಹಿಡಿಯುತ್ತಾ) ಹೌದು ಅಪ್ಪಾ.
ಬಾಲ್ಡ್ವಿನ್- ನಾಳೆ ಸುಂದರ ದಿನವಾಗಿರುತ್ತದೆ. (ಸ್ವಲ್ಪ ಕಾಲ ಮೌನ)
ಜಾನ್ – ಅಪ್ಪಾ!
ಬಾಲ್ಡ್ವಿನ್– ಏನು?
ಜಾನ್ – ಗ್ರೇಷಮ್ ನಿಮಗೆಷ್ಟು ಕೊಡುತ್ತೇನೆ ಎಂದರು?
ಬಾಲ್ಡ್ವಿನ್– (ಸರಳವಾಗಿ) ಒಂದು ಲಕ್ಷ ಡಾಲರ್ ಗಳು.
ಈವಿ - ಏನು?
ಮಾರ್ಥಾ – ರಾಬರ್ಟ್!
ಬಾಲ್ಡ್ವಿನ್– ಯಾರಿಗೂ ತಿಳಿಯದಂತೆ ಅದನ್ನು ನನಗಾಗಿ ತೆಗೆದಿಟ್ಟಿದ್ದ. ಅದು ತನ್ನ ಸ್ವಂತ ಲಾಭದಿಂದ, ಠೇವಣಿದಾರರ ದುಡ್ಡಿನಿಂದಲ್ಲವೆಂದು ಹೇಳುತ್ತಿದ್ದಾನೆ. ಅದರಲ್ಲೇನೋ ವ್ಯತ್ಯಾಸವಿರುವಂತೆ.
ಈವಿ - (ಹಿಪ್ನಟಿಸಂಗೆ ಒಳಗಾದಂತೆ) ನಿಮಗೆ ಒಂದು ಲಕ್ಷ ಡಾಲರ್ ಕೊಡುತ್ತೇನೆ ಎಂದು ಹೇಳಿದರೇ?
ಬಾಲ್ಡ್ವಿನ್– (ಅವಳ ಆಶ್ಚರ್ಯದಿಂದ ನೋಡಿ ಮುಗುಳ್ನಗುತ್ತಾ) ನನ್ನ “ಹೌದು” ಎಂಬ ಒಂದೇ ಪದದಿಂದ ಅದನ್ನು ನನ್ನದಾಗಿಸಿಕೊಳ್ಳಬಹುದಿತ್ತು. ಅಥವಾ ತಲೆ ಅಲ್ಲಾಡಿಸಿದ್ದರೂ ಆಗಿತ್ತು ಅಥವಾ ಬರಿಯ ಕಣ್ಣೋಟದಲ್ಲೇ..........
ಜಾನ್ – ಅವರು ಏನು ಹೇಳ ಬಯಸಿದರು ಎಂಬುದು ನಿಮಗೆ ಹೇಗೆ ಗೊತ್ತಾಯಿತು?
ಬಾಲ್ಡ್ವಿನ್– ಅವನ ಮಾತೇ ಸಾಕು.
ಜಾನ್ – ಈಗಲೂ?
ಬಾಲ್ಡ್ವಿನ್– ಅವನು ನನ್ನೊಂದಿಗೆ ಯಾವತ್ತೂ ಸುಳ್ಳು ಹೇಳಿಲ್ಲ. (ಸ್ವಲ್ಪ ತಡೆಯುತ್ತಾನೆ) ನನ್ನ ನೋಟದಿಂದ ಏನನ್ನೋ ಅರ್ಥಮಾಡಿಕೊಂಡಿರಬೇಕು. ಅದನ್ನವನು ಗಮನಿಸಿದ. ಒಂದು ಡ್ರಾ ಹೊರತೆಗೆದು ಒಂದು ಲಕ್ಷವನ್ನು ತೋರಿಸಿದ.
ಜಾನ್ - ನೋಟಿನ ರೂಪದಲ್ಲಿಯೇ?
ಬಾಲ್ಡ್ವಿನ್- ಹೌದು 1000 ಬಿಲ್ ಗಳ ರೂಪದಲ್ಲಿ. ಅವೆಲ್ಲಾ ನಿಜವಾದವು. ನಾನೇ ಪರೀಕ್ಷಿಸಿದೆ.
ಈವಿ - (ನಿಧಾನವಾಗಿ) ಅದಕ್ಕೆ ಅವನಿಗೆ ನೀವು “ನನಗೆ ನೆನಪಿಲ್ಲ” ಎಂದು ಹೇಳಬೇಕು.
ಬಾಲ್ಡ್ವಿನ್– (ಮುಗುಳ್ನಗುತ್ತಾ ) ಹೌದು. ಕೇವಲ ಎರಡು ಪದಗಳು ಮಾತ್ರ.
ಜಾನ್ – ಆದರೆ ನೀವದನ್ನು ಮಾಡುವುದಿಲ್ಲ?
ಬಾಲ್ಡ್ವಿನ್– (ತಲೆಯಾಡಿಸುತ್ತ) ಅವನ್ನು ಹೇಳಲು ಹೊರಟರೆ ಆ ಎರಡು ಪದಗಳು ನನ್ನ ಗಂಟಲು ಕಟ್ಟಿಸುತ್ತವೆ. ಬೇರೆ ಇನ್ನಾರಿಗೊ ಬಹುಶಃ ಸುಲಭವಾಗಬಹುದು. ಆದರೆ ನನಗೆ? ನನ್ನ ಇಡೀ ಗತಕಾಲ ಎದ್ದುನಿಂತು ನನ್ನ ಮುಖದ ಮೇಲೆ ಹೊಡೆಯುತ್ತಿತ್ತು. ಅಂದರೆ ಪ್ರಪಂಚಕ್ಕೆ ನಾನು ಇಷ್ಟು ದಿನವೂ ಸುಳ್ಳಿನ ಆಧಾರದ ಮೇಲೆಯೇ ಬದುಕುತ್ತಿದ್ದೀನಿ ಎಂಬುದನ್ನು ತೋರಿಸುತ್ತಿತ್ತು. ನಾನು ಭಾವಿಸಿದಂತೆ ನಾನು ಗೌರವಾನ್ವಿತ ವ್ಯಕ್ತಿಯಾಗಿರುತ್ತಿರಲಿಲ್ಲ. ಜಾನ್ ಗ್ರೇಷಮ್ ದುಡ್ಡು ನೀಡಿದಾಗ ನಾನು ಕೋಪಗೊಂಡೆ. ಆದರೆ ನಾನದನ್ನು ತಿರಸ್ಕರಿಸಿದಾಗ, ಅವನು ಆಶ್ಚರ್ಯ ವ್ಯಕ್ತಪಡಿಸಲಿಲ್ಲ. ಆಗ ನಾನು ಸಂತುಷ್ಟಗೊಂಡೆ. ಅದು ನನಗೆ ನೀಡಿದ ಪ್ರಶಂಸೆಯಾಗಿತ್ತು. ನಿಮಗೆ ಆ ರೀತಿ ಅನಿಸುವುದಿಲ್ಲವೇ?
ಜಾನ್ – (ನಿಧಾನವಾಗಿ) ಬಹಳ ದುಬಾರಿ ಪ್ರಶಂಸೆ.
ಬಾಲ್ಡ್ವಿನ್– ಏನು?
ಜಾನ್ - ನಿಮ್ಮಿಂದ ಒಂದು ಲಕ್ಷ ಡಾಲರ್ ವೆಚ್ಚಮಾಡಿಸಿದ ಪ್ರಶಂಸೆ.
ಬಾಲ್ಡ್ವಿನ್– ಒಂದು ಲಕ್ಷ ಡಾಲರ್ ಬೆಲೆ ಆ ಪ್ರಶಂಸೆಗಿದೆ. ನನ್ನ ಇಡೀ ಜೀವನದಲ್ಲಿ ಖರ್ಚು ಮಾಡಲು ನನ್ನಲಿ ಎಂದೂ ಅಷ್ಟು ಹಣವಿರಲಿಲ್ಲ. ಜಾನ್, ಆದರೆ ನನ್ನ ಬಳಿ ಅದು ಇದ್ದರೆ, ಇದಕ್ಕಿಂತಲೂ ಒಳ್ಳೆಯ ರೀತಿಯಲ್ಲಿ ಖರ್ಚು ಮಾಡುವ ರೀತಿ ನನಗಂತೂ ಗೊತ್ತಿಲ್ಲ.
ಜಾನ್ – (ನಿಧಾನವಾಗಿ) ಹೌದು. ಹಾಗೆಯೇ ಮಾಡುತ್ತಿದ್ದಿರಿ.
ಮಾರ್ಥಾ – (ಸ್ವಲ್ಪ ತಡೆದು) ಠೇವಣಿದಾರರು ತುಂಬಾಲ್ಡ್ವಿನ್ಕಳೆದುಕೊಳ್ಳುವರೇ ರಾಬರ್ಟ್.
ಬಾಲ್ಡ್ವಿನ್– (ಒತ್ತಿ ಹೇಳುವನು) ಠೇವಣಿದಾರರು ಒಂದು ಸೆಂಟ್ ಅನ್ನೂ ಕಳೆದುಕೊಳ್ಳುವುದಿಲ್ಲ.
ಈವಿ - (ಆಶ್ಚರ್ಯಚಕಿತಳಾಗಿ) ಆದರೆ ಪತ್ರಿಕೆಗಳು........
ಬಾಲ್ಡ್ವಿನ್– (ಮಧ್ಯ ಪ್ರವೇಶಿಸಿ) ಅವರು ಏನನ್ನಾದರೂ ಬರೆಯಲೇಬೇಕಿತ್ತು. ಅವರು ಊಹಿಸಿಕೊಂಡರು. ಆದರೆ ನನಗೆ ಗೊತ್ತು. ನಾನು ಹೇಳುತ್ತಿದ್ದೇನೆ.
ಮಾರ್ಥಾ - ಹಾಗೆ ಎಂದು ನೀವೆಂದೂ ಹೇಳಿಲ್ಲ.
ಬಾಲ್ಡ್ವಿನ್– ಗ್ರೇಷಮ್ ಹೇಳಲಿ ಎಂದು ಬಿಟ್ಟೆ. ಅದು ನಾಳೆ ಹೊರಬರುತ್ತದೆ.
ಜಾನ್ - ನಾಳೆ ಏತಕ್ಕೆ? ಮುಂಚೆಯೇ ನೀವೇಕೆ ಹೇಳಲಿಲ್ಲ? ಪತ್ರಿಕೆಯವರು ನಿಮ್ಮನ್ನು ಹಲವಾರು ಬಾರಿ ಕೇಳಿದ್ದಾರೆ.
ಬಾಲ್ಡ್ವಿನ್– ಉತ್ತರ ಹೇಳಲೇ ಬೇಕೆಂಬ ಅಗತ್ಯವೇನೂ ಇರಲಿಲ್ಲ, ಜಾನ್ .
ಜಾನ್ – ಅದು ನಿಮ್ಮ ನಿಜವಾದ ಕಾರಣವಲ್ಲ. ನಿಜವಾಗಿಯೂ ಅದೇ ಕಾರಣವೇ ಅಪ್ಪಾ? ಪತ್ರಿಕೆಯವರು ಬರೆಯುತ್ತಾರೆಂದು ನಿಮಗೆ ಗೊತ್ತಿತ್ತು. (ಬಾಲ್ಡ್ವಿನ್ಉತ್ತರಿಸುವುದಿಲ್ಲ. ಇದ್ದಕ್ಕಿದ್ದಂತೆ ಏನೋ ಅರ್ಥವಾದಂತೆ ಜಾನ್ ನ ಮುಖ ಬೆಳಗುತ್ತದೆ) ಗ್ರೇಷಮ್ ತಾವೇ ಹೇಳಲೆಂದು ಬಿಟ್ಟಿರಿ. ಏಕೆಂದರೆ ಅದು ಅವರ ಪರವಾಗಿರುತ್ತದೆ! ಅಲ್ಲವೇ?
ಬಾಲ್ಡ್ವಿನ್- ಹೌದು...... ಬ್ಯಾಂಕ್ ದಿವಾಳಿತನದಿಂದಲೂ ನಾವು ಸ್ವಲ್ಪ ಉಳಿಸಲು ಸಾಧ್ಯವಾಯಿತು. ನಾನು ಊಹಿಸಿದ್ದಕ್ಕಿಂತಲೂ ಹೆಚ್ಚಿತ್ತು, ಎರಡು ಪಟ್ಟು. ಗ್ರೇಷಮ್ ಬಳಿ ಇರುವುದೂ ಸೇರಿದರೆ ಸರಿಹೋಗುತ್ತದೆ.
ಈವಿ - ಆ ಒಂದು ಲಕ್ಷ ಬಿಟ್ಟರೂ? (ಬಾಲ್ಡ್ವಿನ್ಉತ್ತರಿಸುವುದಿಲ್ಲ)
ಜಾನ್ – (ಒತ್ತಾಯಿಸುತ್ತ) ಗ್ರೇಷಮ್ ನಿಮಗಾಗಿ ತೆಗೆದಿಟ್ಟಿರುವ ಹಣವನ್ನು ಬಿಟ್ಟರೂ?
ಬಾಲ್ಡ್ವಿನ್- ಹೌದು. ಇಂದಿನವರೆಗೆ ಆ ಒಂದು ಲಕ್ಷ ಇದೆಯೆಂದು ನನಗೆ ಗೊತ್ತಿರಲಿಲ್ಲ. ಗ್ರೇಷಮ್ ನನಗೆ ಹೇಳಿರಲಿಲ್ಲ. ಅದಿಲ್ಲದೆಯೇ ನಾವು ಹೊಂದಿಸಿದೆವು.
ಈವಿ - ಓಹೋ!
ಜಾನ್ - ನೀವು ಸಮಸ್ಯೆಗೆ ಪರಿಹಾರ ಕಂಡುಹಿಡಿದಿರುವಿರಿ?
ಬಾಲ್ಡ್ವಿನ್- ಬಹಳ ಸುಲಭವಾಗಿ (ಮುಗುಳ್ನಗುವನು) ಮಾರ್ಷಲ್ ಮತ್ತೆ ಸಂಘಟಿಸಲು ಆರಂಭಿಸುವರು. ನ್ಯಾಷನಲ್ ಬ್ಯಾಂಕ್ ನ ಮಾರ್ಷಲ್. ಎಲ್ಲವೂ ಇಷ್ಟು ಚೆನ್ನಾಗಿದೆ ಎಂಬುದರ ಬಗ್ಗೆ ಆತನಿಗೆ ಸ್ವಲ್ಪವೂ ಗೊತ್ತಿಲ್ಲ. (ಮೌನ)
ಜಾನ್ – ಅವರು ಗ್ರೇಷಮ್ ನನ್ನು ಶಿಕ್ಷಿಸುವರಲ್ಲವೇ?
ಬಾಲ್ಡ್ವಿನ್- ಬಹುಶಃ.
ಜಾನ್ – ಏತಕ್ಕಗಿ?
ಬಾಲ್ಡ್ವಿನ್- ಬ್ಯಾಂಕ್ ನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ----
ಜಾನ್ – (ಮಧ್ಯಪ್ರವೇಶಿಸಿ) ಓಹ್, ಅದು ನನಗೆ ಗೊತ್ತು. ಆದರೆ ಆತ ಯಾವ ಅಪರಾಧ ಮಾಡಿದ್ದಾರೆ?
ಬಾಲ್ಡ್ವಿನ್- ಬ್ಯಾಂಕ್ ದುಡ್ಡನ್ನು ದುರುಪಯೋಗ ಪಡಿಸಿಕೊಂಡಿರುವುದು ಅಪರಾಧವೇ.
ಜಾನ್ – ಯಾರೂ ಏನೂ ಕಳೆದುಕೊಳ್ಳದಿದ್ದರೆ?
ಬಾಲ್ಡ್ವಿನ್– ಆದರೂ ಅದು ಅಪರಾಧವೇ?
ಜಾನ್ – ಅದಕ್ಕಾಗಿ ಅವರನ್ನು ಶಿಕ್ಷಿಸಲಿರುವರು!
ಬಾಲ್ಡ್ವಿನ್– ಅವನನ್ನು ಹಾಗೆಯೇ ಬಿಡಲಾರರು ಜಾನ್, ಆತ ತುಂಬಾ ಪ್ರಮುಖ ವ್ಯಕ್ತಿ.
ಜಾನ್ - ನಿಮಗೆ ಅದು ಸರಿಯೆನಿಸುತ್ತಾ ಅಪ್ಪಾ?
ಬಾಲ್ಡ್ವಿನ್- ನನ್ನ ಅಭಿಪ್ರಾಯಕ್ಕೆ ಬೆಲೆ ಇಲ್ಲ ಜಾನ್ .
ಜಾನ್ – ಆದರೆ ನಿಮಗೇನನಿಸುತ್ತದೆ?
ಬಾಲ್ಡ್ವಿನ್- ನನಗೆ - ನನಗೆ ಆತನನ್ನು ಕಂಡರೆ ಅಯ್ಯೋ ಎನಿಸುತ್ತದೆ.
ಜಾನ್ – (ನಿಧಾನವಾಗಿ) ಅದು ಕೇವಲ ಟೆಕ್ನಿಕಾಲಿಟಿ ಅಷ್ಟೇ ಅಪ್ಪಾ. ಯಾರೂ ಒಂದು ಸೆಂಟನ್ನೂ ಕಳೆದುಕೊಳ್ಳುವುದಿಲ್ಲ. ಆದರೆ ಗ್ರೇಷಮ್ ಗೆ ಬಹಳ ಕಷ್ಟವಾಗುತ್ತದೆ.
ಬಾಲ್ಡ್ವಿನ್– (ಸ್ವಲ್ಪ ತಡೆದು) ಹೌದು ಜಾನ್ .
ಈವಿ - (ಅಂಜಿಕೆಯಿಂದ) ನೀವು ಅವನನ್ನು ಬಿಟ್ಟುಬಿಟ್ಟರೆ, ಅದೇನು ಅಷ್ಟು ಭಯಾನಕ ವಿಷಯವೇ?
ಬಾಲ್ಡ್ವಿನ್– (ಮುಗುಳ್ನಗುತ್ತ) ನನಗೆ ಆ ರೀತಿ ಮಾಡಲು ಸಾಧ್ಯವಾಗಿದ್ದರೆ ಎನಿಸುತ್ತೆ. ಆದರೆ ನಾನೇನೂ ನ್ಯಾಯಾಧೀಶನಲ್ಲವಲ್ಲ.
ಈವಿ - ಅಲ್ಲ. ಆದರೆ.......
ಬಾಲ್ಡ್ವಿನ್– ಆದರೆ ಏನು?
ಈವಿ - ನೀವೊಬ್ಬರೇ ಆತನ ವಿರುದ್ಧ ಸಾಕ್ಷಿ.
ಬಾಲ್ಡ್ವಿನ್– (ಆಶ್ಚರ್ಯಚಕಿತನಾಗಿ) ಈವಿ!
ಜಾನ್ – ಅವಳ ಮಾತು ಸರಿಯಾಗಿದೆ ಅಪ್ಪಾ!
ಬಾಲ್ಡ್ವಿನ್- ನೀನೂ ಅದೇ ರೀತಿ ಹೇಳುವೆಯಾ ಜಾನ್?
ಜಾನ್ – ಜಾನ್ ಗ್ರೇಷಮ್ ನನ್ನು ಜೈಲಿನಲ್ಲಿ ಹಾಕಿದರೆ, ಅದು ಎಂತಹ ಅಸಹ್ಯ ಸಂಗತಿ...... ನಿಮ್ಮ ಮಗನಿಗೆ ಅವರ ಹೆಸರಿಟ್ಟು ನಂತರ..... ನನಗೆ – ಜಾನ್ ಗ್ರೇಷಮ್ ಬಾಲ್ಡ್ವಿನ್ಬಹಳ ಚೆನ್ನಾಗಿರುತ್ತದೆ ಅಲ್ಲವೇ?
ಮಾರ್ಥಾ – (ಸ್ವಲ್ಪ ತಡೆದು) ರಾಬರ್ಟ್, ನೀವು ಮೊದಲು ಹೇಳಿದ್ದನ್ನು ನಾನು ಅರ್ಥಮಾಡಿಕೊಂಡೆನೆಂದು ನನಗೆ ಖಚಿತವಾಗಿಲ್ಲ. ಗ್ರೇಷಮ್ ಗಾಗಿ ನೀವೇನು ಮಾಡಬೇಕೆಂದು ಅವರು ಬಯಸಿದರು.
ಬಾಲ್ಡ್ವಿನ್– ಅವನನ್ನು ನಾಳೆ ಬಿಡುಗಡೆಗೊಳಿಸಬೇಕೆಂದು.
ಮಾರ್ಥಾ - ನಿಮಗೆ ಅದನ್ನು ಮಾಡಲು ಸಾಧ್ಯವಿದೆಯೇ?
ಬಾಲ್ಡ್ವಿನ್- ಹೌದು.
ಮಾರ್ಥಾ - ಹೇಗೆ?
ಬಾಲ್ಡ್ವಿನ್– ವಿಚಾರಣೆಯಲ್ಲಿ ನನಗೆ ಭಯಾನಕ(ಕ್ಲಿಷ್ಟ) ಪ್ರಶ್ನೆಗಳನ್ನು ಹಾಕಿದಾಗ “ನನಗೆ ನೆನಪಿಲ್ಲ” ಎಂದು ಹೇಳುವುದರಿಂದ.
ಮಾರ್ಥಾ – ಓಹ್! ಅಂದರೆ ನಿಮಗೆ ಎಲ್ಲವೂ ನೆನಪಿದೆ?
ಬಾಲ್ಡ್ವಿನ್- ಹೌದು. ಎಲ್ಲವು.
ಜಾನ್ – ಅವರು ಏನನ್ನು ಕೇಳಿದರೂ?
ಬಾಲ್ಡ್ವಿನ್- ನೆನಪು ತರಿಸಿಕೊಳ್ಳಬಹುದು. ನನ್ನ ಬಳಿ ನೋಟ್ಸ್ ಇದೆ.
ಜಾನ್ – ಆದರೆ ನೋಟ್ಸ್ ಇಲ್ಲದೆ ನಿಮಗೆ ನೆನಪಿರಲಾರದು?
ಬಾಲ್ಡ್ವಿನ್- ಹಾಗಂದರೆ ಏನು, ಜಾನ್ ?
ಜಾನ್ – (ಉತ್ತರ ಹೇಳದೆ) ವಾಸ್ತವಿಕವಾಗಿ ನೀವು ಎಲ್ಲದಕ್ಕೂ ನಿಮ್ಮ ನೋಟ್ಸ್ ಅನ್ನು ನಂಬಬೇಕಾಗುತ್ತದೆ. ಅಲ್ಲವೇ?
ಬಾಲ್ಡ್ವಿನ್- ಪ್ರತಿಯೊಬ್ಬರೂ ಸಹ ಅದನ್ನೇ ಮಾಡುವುದು.
ಜಾನ್ - ಹಾಗಾದರೆ “ನನಗೆ ನೆನಪಿಲ್ಲ” ಎಂದರೆ ಅದು ಸತ್ಯಕ್ಕೆ ದೂರವೇನೂ ಆಗುವುದಿಲ್ಲ ಅಲ್ಲವೇ?
ಮಾರ್ಥಾ – ಗ್ರೇಷಮ್ ನಿಮ್ಮಿಂದ ಹೆಚ್ಚೇನೂ ಬಯಸುತ್ತಿಲ್ಲ ಎನಿಸುತ್ತೆ.
ಬಾಲ್ಡ್ವಿನ್– ಮಾರ್ಥಾ
ಮಾರ್ಥಾ – ರಾಬರ್ಟ್, ನಾನೂ ನಿಮ್ಮಷ್ಟೇ ಗೌರವಾನ್ವಿತಳು........
ಬಾಲ್ಡ್ವಿನ್– ಅದು ಹೇಳದೆಯೇ ತಿಳಿಯುತ್ತೆ ಮಾರ್ಥಾ .
ಮಾರ್ಥಾ – ನಿಮ್ಮ ಹಳೆಯ ಸ್ನೇಹಿತನನ್ನು ಜೈಲಿಗೆ ಕಳಿಸುವುದು ಸರಿ ಎಂದು ನನಗನಿಸುವುದಿಲ್ಲ (ಮಾತನಾಡುತ್ತಲೇ ಕೈಮೇಲೆ ಎತ್ತುವಳು) ಈಗ ಮಧ್ಯದಲ್ಲಿ ಮಾತನಾಡಬೇಡಿ! ನಾನೂ ಯೋಚಿಸುತ್ತಿದ್ದೇನೆ. ಜಾನ್ ಗೆ ಹೆಸರಿಟ್ಟಾಗ ಗ್ರೇಷಮ್ ಅವನ ಧರ್ಮಪಿತನಾಗಿ ನಿಂತಾಗ ನಮಗೆಷ್ಟು ಹೆಮ್ಮೆಯಿತ್ತು! ನಾವು ಚರ್ಚಿನಿಂದ ಹಿಂತಿರುಗಿ ಬಂದಾಗ ನೀವು ಹೇಳಿದಿರಿ – ನೀವೇನು ಹೇಳಿದಿರಿ ಎಂದು ನಿಮಗೆ ನೆನಪಿದೆಯೇ?
ಬಾಲ್ಡ್ವಿನ್ – ಇಲ್ಲ. ಏನದು?
ಮಾರ್ಥಾ – “ಮಾರ್ಥಾ, ನಮ್ಮ ಮಗ ಅವನಿಗೆ ನಾವು ಕೊಟ್ಟಿರುವ ಹೆಸರಿಗೆ ತಕ್ಕವನಾಗಿರಲಿ,” ಎಂದಿರಿ! ಅದು ನಿಮಗೆ ನೆನಪಿದೆಯೇ?
ಬಾಲ್ಡ್ವಿನ್ - ಹೌದು, ಅಸ್ಪಷ್ಟವಾಗಿ.
ಜಾನ್ - ಹಾ! ಬರಿ ಅಸ್ಪಷ್ಟವಾಗಿಯೇ ಅಪ್ಪಾ?
ಬಾಲ್ಡ್ವಿನ್ - ಹಾಗಂದರೇನು ಜಾನ್?
ಮಾರ್ಥಾ : (ಜಾನ್ ಗೆ ಉತ್ತರಿಸಲು ಅವಕಾಶ ನೀಡುವುದಿಲ್ಲ) ಜಾನ್ ಗ್ರೇಷಮ್ ನ ಹೆಸರು - ನಮ್ಮ ಮಗನ ಹೆಸರು - ನಿಮ್ಮಿಂದಾಗಿ ದುಃಖಕ್ಕೆ ಒಳಗಾಗಬೇಕೆಂದರೆ ಅದು ಬಹಳ ದುಃಖದಾಯಕ ರಾಬರ್ಟ್.
ಬಾಲ್ಡ್ವಿನ್ – (ಸ್ವಲ್ಪ ತಡೆದು) ಮಾರ್ಥಾ , ಹಾಗಾದರೆ ನಾನು ಲಂಚವನ್ನು ಒಪ್ಪಿಕೊಳ್ಳಬೇಕೆಂದು ಹೇಳುತ್ತಿದ್ದೀಯಾ?
ಈವಿ - ಅದನ್ನು ಲಂಚವೆಂದು ಏಕೆ ಕರೆಯುತ್ತೀಯಾ ಅಪ್ಪಾ?
ಬಾಲ್ಡ್ವಿನ್ – (ಕಹಿಯಾಗಿ) ಏಕಲ್ಲ? ಗ್ರೇಷಮ್ ಅದಕ್ಕೆ ಇನ್ನು ಸುಂದರವಾದ ಹೆಸರನ್ನು ಕೊಟ್ಟಿದ್ದ. ನನಗೆ ಇಷ್ಟು ದಿನ ಕಡಿಮೆ ವೇತನ ನೀಡಿದೆ ಎಂದು ಹೇಳಿದ. ನಿನಗೆ ಗೊತ್ತು ಬ್ಯಾಂಕ್ ದಿವಾಳಿಯಾದಾಗ ನನಗೆ ವರ್ಷಕ್ಕೆ 5000 ಮಾತ್ರ ಸಿಗುತ್ತಿತ್ತು.......
ಜಾನ್ – (ಅಸಹನೀಯತೆಯಿಂದ) ಹೌದು, ಹೌದು!
ಬಾಲ್ಡ್ವಿನ್ - ನನಗೆ ಅವನು ಕೊಟ್ಟ ವೇತನ ಮತ್ತು ಎಷ್ಟು ಬೆಲೆಯುಳ್ಳವನಾಗಿದ್ದೆ ಎಂಬುದರ ವ್ಯತ್ಯಾಸವೇ ಈ ಒಂದು ಲಕ್ಷ ಎಂದು ಹೇಳಿದ.
ಮಾರ್ಥಾ – ಅದೂ ಸತ್ಯವೇ. ನೀವು ಅವನಿಗೆ ನಂಬಿಕರ್ಹವಾಗಿ ಕೆಲಸ ಮಾಡಿದ್ದೀರಿ.
ಬಾಲ್ಡ್ವಿನ್ – ಆತ ನನಗೆ ಕೊಡಬೇಕಾದದ್ದನ್ನು ಕೊಟ್ಟಿದ್ದರೆ, ನಾನೇ ಈಗ ಅಷ್ಟು ಹಣ ಕೂಡಿಸಲಾಗುತ್ತಿತ್ತು ಎಂದ.
ಜಾನ್ – ಅದೂ ನಿಜವೇ, ಅಲ್ಲವೇ ಅಪ್ಪಾ?
ಬಾಲ್ಡ್ವಿನ್ – ಯಾರಿಗೆ ಗೊತ್ತು? ನನ್ನ ಸಂಬಳ ಜಾಸ್ತಿ ಮಾಡೆಂದು ನಾನೇನು ಅವನನ್ನು ಯಾವತ್ತೂ ಕೇಳಲಿಲ್ಲ. ಆತ ಹೆಚ್ಚಿಸಿದರೂ ಅದು ಅವನಿಚ್ಛೆಯಿಂದಲೇ. (ಮೌನವಿದೆ. ಸುತ್ತಲೂ ನೋಡುವನು) ನೀನೇನು ಅಂದುಕೊಳ್ಳುತ್ತಿ ಈವಿ?
ಈವಿ - (ಹಿಂಜರಿಕೆಯಿಂದಲೇ) ನಾಳೆ ನೀವು ಕಟಕಟೆಯನ್ನು ಹತ್ತಿದಾಗಲೇ..?
ಬಾಲ್ಡ್ವಿನ್ - ಹೌದು.
ಈವಿ - ಜಾನ್ ಗ್ರೇಷಮ್ ನನ್ನು ಜೈಲಿಗೆ ಹಾಕಿದರೆ ಜನ ಏನೆನ್ನುವರು?
ಬಾಲ್ಡ್ವಿನ್ - ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎನ್ನುವರು ಈವಿ . ಇದಕ್ಕಿಂತ ಹೆಚ್ಚೇನೂ ಅಲ್ಲ.
ಈವಿ - ಹಾಗನ್ನುವರೇ?
ಬಾಲ್ಡ್ವಿನ್ – ಏಕೆ, ಇನ್ನೇನು ಹೇಳಬೇಕು?
ಈವಿ - ನನಗೆ ಹಾಗನಿಸುವುದಿಲ್ಲ. ಇತರ ಜನರು ನಿಮ್ಮ ಆತ್ಮೀಯ ಸ್ನೇಹಿತನಿಗೆ ದ್ರೋಹ ಬಗೆ ಎಂದುಕೊಳ್ಳುತ್ತಾರೆ.
ಬಾಲ್ಡ್ವಿನ್ - ನೀನೂ ಅವರಂತೆಯೇ ಭಾವಿಸುವುದಿಲ್ಲವಲ್ಲ ಈವಿ?
ಈವಿ - ಜನರಿಗೆ ತಾವು ದುಡ್ಡನ್ನು ಕಳೆದುಕೊಳ್ಳುವುದಿಲ್ಲ ಎಂದು ಗೊತ್ತಾದಾಗ, ಜಾನ್ ಗ್ರೇಷಮ್ ಅವರ ಪ್ರತಿಯೊಂದು ಸೆಂಟನ್ನು ಕೊಡುವೆನೆಂದು ಹೇಳಿದಾಗ ಅವರಿಗೆ ಗ್ರೇಷಮ್ ಜೈಲಿಗೆ ಹೋಗುವುದು ಇಷ್ಟವಾಗುವುದಿಲ್ಲ. ಅವರ ಬಗ್ಗೆ ಕರುಣೆ ತೋರುತ್ತಾರೆ.
ಬಾಲ್ಡ್ವಿನ್ - ಹೌದು. ಹಾಗೆಯೇ ಆಗುತ್ತದೆ. ಹಾಗೆಯೇ ಆಗಲಿ.
ಜಾನ್ – ಆದರೆ ಅವರನ್ನು ಜೈಲಿಗೆ ಕಳಿಸಲು ಸಹಾಯ ಮಾಡಿದ ವ್ಯಕ್ತಿಯನ್ನು ಜನರು ಸರಿಯಾಗಿ ನೋಡಲಾರರು.
ಮಾರ್ಥಾ - ನೀವು ನಿಮ್ಮ ಆತ್ಮೀಯ ಸ್ನೇಹಿತನಿಗೆ ಮೋಸ ಮಾಡಿದಿರಿ ಎಂದುಕೊಳ್ಳುತ್ತರೆ.
ಜಾನ್ - ನಾಳೆ ನೀವು ಕೋರ್ಟಿನಲ್ಲಿ ನೋಟ್ಸ್ ತೆಗೆದರೆ, ಅವರನ್ನು ಜೈಲಿಗೆ ಖಚಿತ! (ತಿರಸ್ಕಾರದಿಂದ ಮಾತನ್ನು ಅಲ್ಲಿಗೆ ನಿಲ್ಲಿಸುವನು)
ಈವಿ - ಗ್ರೇಷಮ್ ನಿಜವಾಗಲೂ ಯಾವ ತಪ್ಪನ್ನು ಮಾಡಿಲ್ಲ.
ಜಾನ್ – ಅದು ಕೇವಲ ಟೆಕ್ನಿಕಾಲಿಟಿಯಷ್ಟೇ. ಯಾರೂ ಒಂದು ಸೆಂಟನ್ನು ಕಳೆದುಕೊಳ್ಳುವುದಿಲ್ಲ. ಯಾರಿಗೂ ಅವನನ್ನು ಶಿಕ್ಷಿಸುವುದು ಬೇಕಿಲ್ಲ.
ಈವಿ - ನಿಮ್ಮೊಬ್ಬರನ್ನು ಬಿಟ್ಟು ಅಪ್ಪಾ!
ಜಾನ್ – ಹೌದು. ನಿಮ್ಮ ಮಗನಿಗೆ ಯಾರ ಹೆಸರನ್ನಿಟ್ಟಿರೋ ಅವರನ್ನೇ ನೀವು ಜೈಲಿಗೆ ಕಳಿಸಲು ಸಿದ್ಧರಾಗಿರುವಿರಿ!
ಮಾರ್ಥಾ – (ಸ್ವಲ್ಪ ತಡೆದು) ಕರುಣೆ ತೋರಬೇಕೆಂಬುದು ನನ್ನ ಅಭಿಮತ, ರಾಬರ್ಟ್.
ಬಾಲ್ಡ್ವಿನ್ – ಕರುಣೆ ತೋರುವುದೇ?
ಮಾರ್ಥಾ – ಗ್ರೇಷಮ್ ನಿಮ್ಮ ಜೊತೆ ಯಾವಾಗಲೂ ಒಳ್ಳೆಯವರಾಗಿಯೇ ಇದ್ದರು.
(ಮತ್ತೆ ಮೌನ. ವಿಚಿತ್ರವಾಗಿ ಒಬ್ಬರು ಈವಿನ್ನೊಬ್ಬರನ್ನು ನೋಡಲು ನಿರಾಕರಿಸುತ್ತಾರೆ) ಹಾ! ಈಗೇನು ಮಾಡುವೆ, ರಾಬರ್ಟ್?
ಬಾಲ್ಡ್ವಿನ್ – ಏನು ನಿನ್ನ ಮಾತಿನರ್ಥ?
ಮಾರ್ಥಾ - ಬ್ಯಾಂಕ್ ಮುಚ್ಚಿದಾಗಿನಿಂದ ನಿಮಗೆ ಉದ್ಯೋಗವಿಲ್ಲ.
ಬಾಲ್ಡ್ವಿನ್ – (ಭುಜ ಹಾರಿಸುತ್ತಾ) ಓಹೋ, ನನಗೆ ಕೆಲಸ ಸಿಗುತ್ತದೆ.
ಮಾರ್ಥಾ – (ತಲೆಯಲ್ಲಾಡಿಸುತ್ತಾ) ಈ ವಯಸ್ಸಿನಲ್ಲಿ?
ಬಾಲ್ಡ್ವಿನ್ – ಅವರು ಮನುಷ್ಯನನ್ನು ನೋಡುತ್ತಾರೆ.
ಮಾರ್ಥಾ - ಹೌದು, ಇದನ್ನೇ ಒಂದು ತಿಂಗಳ ಕೆಳಗೆ ಹೇಳಿದ್ದಿರಿ.
ಜಾನ್ – ಡೊನೋವನ್ ನಿಂದ ನನಗೆ ಗೊತ್ತಾಗಿದ್ದೇನೆಂದರೆ –
ಬಾಲ್ಡ್ವಿನ್ – (ತ್ವರಿತವಾಗಿ) ಏನು ಗೊತ್ತಾಯಿತು?
ಜಾನ್ – ಆತ ನ್ಯಾಷನಲ್ ಬ್ಯಾಂಕಿಗೆ ಹೋಗಿದ್ದಾನೆ, ಗೊತ್ತಿರಬೇಕಲ್ಲವೇ?
ಬಾಲ್ಡ್ವಿನ್ - ಹೌದು, ಆತ ಪುನರ್ ಸಂಘಟನೆಯಲ್ಲಿ ಸಹಾಯ ಮಾಡುತ್ತಿದ್ದಾನೆ.
ಜಾನ್ – ಅವರು ನಿಮ್ಮನ್ನು ಅಲ್ಲಿ ತೆಗೆದುಕೊಳ್ಳಲಾರರು –
ಬಾಲ್ಡ್ವಿನ್ – ಅವರಲ್ಲಿ ಈಗಾಗಲೇ ಸಾಕಷ್ಟು ಜನ ಇದ್ದಾರೆ. ಅವರು ನನಗೆ ಗುಮಾಸ್ತನ ಕೆಲಸ ಕೊಡಲಾಗಲಿಲ್ಲ.
ಜಾನ್ – ಅದು ಅವರು ನಿಮಗೆ ಹೇಳಿದ್ದು,
ಬಾಲ್ಡ್ವಿನ್ – ಅದು ನಿಜವಲ್ಲವೇ?
ಜಾನ್ – (ತಲೆಯಲ್ಲಾಡಿಸುತ್ತಾ) ಜಾನ್ ಗ್ರೇಷಮ್ ನಷ್ಟೇ ತಪ್ಪಿತಸ್ಥನಾಗಿರುವ ಮಾರ್ಥಾನುಷ್ಯನನ್ನು ಕೆಲಸಕ್ಕೆ ತೆಗೆದುಕೊಳ್ಳಲಾರೆನೆಂದು ಆ ಬ್ಯಾಂಕಿನ ಅಧ್ಯಕ್ಷ ಮಾರ್ಷಲ್ ಹೇಳಿದರು.
ಬಾಲ್ಡ್ವಿನ್ – ಆದರೆ ನಾನು ತಪ್ಪಿತಸ್ಥನಲ್ಲವಲ್ಲ!
ಜಾನ್ – ಯಾರಿಗೆ ಗೊತ್ತು ಅದು?
ಬಾಲ್ಡ್ವಿನ್ - ನಾಳೆ ಪ್ರತಿಯೊಬ್ಬರಿಗೂ ತಿಳಿಯುತ್ತದೆ.
ಜಾನ್ – ಆದರೆ ಅವರು ನಿಮ್ಮನ್ನು ನಂಬುವರೇ? ನೀವು ನಿಮ್ಮ ಜೀವವನ್ನು ರಕ್ಷಿಸಿಕೊಳ್ಳಲೆತ್ನಿಸುತ್ತಿರುವಿರಿ ಎಂದುಕೊಳ್ಲಲಾರರೇ?
ಬಾಲ್ಡ್ವಿನ್ - ಬ್ಯಾಂಕ್ ದಿವಾಳಿತನದ ಬಗ್ಗೆ ನನಗೆ ಎರಡು ದಿನಗಳ ಮೊದಲಷ್ಟೇ ತಿಳಿಯಿತು.
ಜಾನ್ – ಅದನ್ನು ನಂಬುವವರು ಯಾರು?
ಬಾಲ್ಡ್ವಿನ್ – ಅವರು ನಂಬಲೇಬೇಕಾಗುತ್ತದೆ!
ಜಾನ್ – ಯಾವ ರೀತಿ ನಂಬಿಸುವಿರಿ? ನೀವು ಎಲ್ಲಿ ಹೋದರೂ ಈ ವಿಷಯ ನಿಮಗೆ ವಿರುದ್ಧವಾಗಿ ಹೋಗುತ್ತದೆ, ಅಪ್ಪಾ. ನೀವು ಗ್ರೇಷಮ್ ವಿರುದ್ಧ ಸಾಕ್ಷಿ ಹೇಳುವುದರಿಂದ ಪರಿಸ್ಥಿತಿಯೇನೂ ಬದಲಾಗುವುದಿಲ್ಲ. ನಿಮಗೇನಾದರೂ ಕೆಲಸ ಸಿಕ್ಕರೆ ಅದು ಅವರೊಂದಿಗೆ ಮಾತ್ರ! (ಈ ವಿಚಾರ ಬಾಲ್ಡ್ವಿನ್ನನ್ನು ಚಕಿತಗೊಳಿಸುತ್ತದೆ. ಅಚ್ಚರಿಯನ್ನೂ ವ್ಯಕ್ತ ಪಡಿಸುತ್ತಾನೆ)
ಗ್ರೇಷಮ್ ಜೈಲಿಗೆ ಹೋಗದಿದ್ದರೆ ವ್ಯಾಪಾರ ಶುರುಮಾಡುತ್ತಾರೆ ಅಲ್ಲವೇ? ನಿಮಗೆ ಆಗ ಪಾಲುದಾರರ ಸ್ಥಾನಕ್ಕಿಂತ ಕಡಿಮೆಯದೇನನ್ನೂ ನೀಡಲು ಸಾಧ್ಯವಿಲ್ಲ.
ಬಾಲ್ಡ್ವಿನ್ - ಪಾಲುಗಾರಿಕೆಯೇ?
ಜಾನ್ (ಅರ್ಥಪೂರ್ಣವಾಗಿ) ಒಂದು ಲಕ್ಷ ಬಂಡವಾಳದೊಂದಿಗೆ ನೀವು ವ್ಯಾಪಾರದಲ್ಲಿ ತೊಡಗಬಹುದು ಅಪ್ಪಾ.
ಬಾಲ್ಡ್ವಿನ್ – ಜಾನ್!
ಜಾನ್ - ಬಂಡವಾಳ ಲೆಕ್ಕಕ್ಕೆ ಬರುವುದಿಲ್ಲಬಿಡಿ. ಅದರ ಜೊತೆಗೆ ನಿಮ್ಮ ಬಗ್ಗೆ ಅವರು ಕೃತಜ್ಞತೆಯನ್ನು ಹೊಂದಿರುತ್ತಾರೆ. (ಮೌನವಿದೆ)
ಮಾರ್ಥಾ – ಒಂದು ಲಕ್ಷವೆಂದರೆ ನಮಗೆ ಬಹಳ ಹೆಚ್ಚಿನದೆ ರಾಬರ್ಟ್. ನಿಮಗೆ ತಕ್ಷಣ ಕೆಲಸ ಸಿಗದಿದ್ದರೆ ಜಾನ್ ನಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ.
ಜಾನ್ – ವಾರಕ್ಕೆ 60 ಡಾಲರ್ ಗಳು ಅಪ್ಪಾ.
ಈವಿ - ಅದು ಬಹಳ ಕಾಲ ನಡೆಯುವುದಿಲ್ಲ.
ಮಾರ್ಥಾ – ಜಾನ್ ಮೇಲೆ ಹೇರುವುದೂ ಸರಿಯಿಲ್ಲ.
ಜಾನ್ – (ಕೋಪದಿಂದ) ನನ್ನ ಬಗ್ಗೆ ಏನೂ ಚಿಂತಿಸಬೇಡಿ. (ಈವಿ ಅಳಲಾರಂಭಿಸುತ್ತಳೆ) ನೋಡಿ ಅಪ್ಪಾ, ನೀವು ಪತ್ರಿಕೆಯವರಿಗೆ ಏನನ್ನೂ ಹೇಳಿಲ್ಲ. ನಾಳೆಯೂ ನೀವು ಏನೂ ಹೇಳದಿದ್ದರೆ ನಿಮ್ಮ ಸ್ನೇಹಿತನ ಜೊತೆ ನೀವಿದ್ದಿರಿ ಎಂಬುದನ್ನು ಬಿಟ್ಟರೆ ಇನ್ನೇನೂ ಅಲ್ಲ. ಅದೇ ಸರಿ. ಅಷ್ಟನ್ನೇ ಆತ ನಿಮಗೂ ಮಾಡುತ್ತಾನೆ.
ಬಾಲ್ಡ್ವಿನ್ – (ಮನವಿ ಮಾಡುವ ರೀತಿಯಲ್ಲಿ ಎಲ್ಲರ ಮುಖ ನೋಡುತ್ತಾನೆ. ಅವರು ವಿಮುಖರಾಗಿದ್ದಾರೆ. ಆಗ) ನಿಮಗೆ - ನಿಮಗೆ ನಾನು ಈ ಹಣವನ್ನು ತೆಗೆದುಕೊಳ್ಳಬೇಕಾಗಿದೆ? (ಉತ್ತರವಿಲ್ಲ) ಒಬ್ಬರಾದರೂ ‘ಹೌದು’ ಎನ್ನಿ (ಉತ್ತರವಿಲ್ಲ) ಅಥವಾ ‘ಇಲ್ಲ’ (ದೀರ್ಘ ಮೌನ. ಅಂತಿಮವಾಗಿ) ನಾನು ಗ್ರೇಷಮ್ ಜೊತೆ ಪಾಲುಗಾರಿಕೆಗೆ ಹೋಗಲಾರೆ.
ಮಾರ್ಥಾ – (ತ್ವರೆಯಾಗಿ) ಏಕೆ?
ಬಾಲ್ಡ್ವಿನ್ – ಜನ ಅವನನ್ನು ನಂಬುವುದಿಲ್ಲ.
ಜಾನ್ - ಹಾಗಿದ್ದಲ್ಲಿ ನೀವು ಬೇರೆಯವರೊಂದಿಗೆ ಹೋಗಬಹುದು ಅಪ್ಪಾ. ಒಂದು ಲಕ್ಷ ತುಂಬಾಲ್ಡ್ವಿನ್ದೊಡ್ಡ ಮೊತ್ತ.
ಬಾಲ್ಡ್ವಿನ್ – (ಕಿಟಕಿಯ ಬಳಿ ಹೋಗಿ ಹೊರನೋಡುವನು) ಈ ದಿನ ಬರುತ್ತದೆಂದು ನಾನೆಂದೂ ಭಾವಿಸಿರಲಿಲ್ಲ. ನನಗೆ ಗೊತ್ತು - ನನಗೆ ಗೊತ್ತು - ಪರವಾಗಿಲ್ಲ ....... ಈ ಹಣವನ್ನು ನಾನು ತೆಗೆದುಕೊಂಡರೆ ಅಗೌರವದ ಕೆಲಸ ಮಾಡುತ್ತಿದ್ದೇನೆಂದು ನನಗೆ ಗೊತ್ತು. ನಿಮಗೂ ಗೊತ್ತು! ನೀನು, ನೀನು ಮತ್ತು ನೀನು! ಎಲ್ಲರೂ ! ಬನ್ನಿ, ಒಪ್ಪಿಕೊಳ್ಳಿ!
ಜಾನ್ – (ದೃಢವಾಗಿ) ಯಾರಿಗೂ ಇದರ ಬಗ್ಗೆ ಗೊತ್ತಾಗುವುದಿಲ್ಲ.
ಬಾಲ್ಡ್ವಿನ್ – ಆದರೆ ನಮ್ಮೊಳಗೆ ಜಾನ್! ಪ್ರಪಂಚಕ್ಕೆ ನಾವು ಏನೇ ಆದರೂ ನಮ್ಮೊಳಗೆ ನಾವು ಪ್ರಾಮಾಣಿಕರಾಗಿರಬೇಕಲ್ಲವೇ, ನಮ್ಮ ನಾಲ್ವರೊಳಗೆ? (ಆತನ ನೋಟ ಜಾನ್ ನಿಂದ ಈವಿ ಯತ್ತ ಹೊರಳುತ್ತದೆ. ಅವಳು ತಲೆ ಬಾಗಿಸಿರುವಳು. ಹೆಂಡತಿ ತಲೆ ಬಾಗಿಸಿ ಕಸೂತಿ ಹಣೆಯುವುದರಲ್ಲಿ ತೊಡಗಿರುವಳು. ಆತ ಮಾರ್ಥಾಳ ತಲೆ ಎತ್ತಿ ಅವಳನ್ನೇ ದೃಷ್ಟಿಸುವನು. ನೋಡಿ ನಡುಗುವನು) ಮೋಸಗಾರರು! ಸುಳ್ಳರು! ಗೋಮುಖವ್ಯಾಘ್ರರು! ಕಳ್ಳರು! ನಾನೇನೂ ನಿಮಗಿಂತ ಹೆಚ್ಚೇನೂ ಅಲ್ಲ. ನಾವು ನಮ್ಮ ಆತ್ಮಗಳನ್ನು ನೋಡಿಕೊಂಡಿದ್ದೇವೆ. ಅವು ದೂರದವರೆಗೆ ದುರ್ನಾತ ಹೊಡೆಯುತ್ತವೆ! ಏಕೆ? ಯಾರೊಬ್ಬರೂ ಉತ್ತರ ನೀಡುತ್ತಿಲ್ಲ?
ಮಾರ್ಥಾ – (ಕೆಳಧ್ವನಿಯಲ್ಲಿ) ಅದೇನು ತಪ್ಪಲ್ಲ ರಾಬರ್ಟ್.
ಬಾಲ್ಡ್ವಿನ್ – ಅದು ಸರಿಯಲ್ಲ.
ಜಾನ್ – (ನೇರವಾಗಿ ಎದುರಿಸುತ್ತಾ) ಒಂದು ಲಕ್ಷವೆಂದರೆ ಬಹಳ ದೊಡ್ಡ ಮೊತ್ತ ಅಪ್ಪಾ.
ಬಾಲ್ಡ್ವಿನ್ – (ನಿಧಾನವಾಗಿ ತಲೆಯಾಡಿಸುತ್ತಾ) ಈಗ ನೀನು ನನ್ನನ್ನು ನೇರವಾಗಿ ನೋಡಬಗುದು ಮಗು, ಸಾಧ್ಯವಿಲ್ಲವೇ?
ಜಾನ್ – ( ಅಲುಗಾಡದೆ) ಅಪ್ಪಾ, ನೀವೇಕೆ ತಿರಸ್ಕರಿಸಿದಿರಿ? ನಾವೇನು ಹೇಳುತ್ತೇವೆ ಎಂದು ಹೆದರಿಕೆಯಿತ್ತಲ್ಲವೇ ನಿಮಗೆ?
ಬಾಲ್ಡ್ವಿನ್ – (ದೀರ್ಘಮೌನದ ನಂತರ) ಹೌದು ಜಾನ್ .
ಜಾನ್ – ಈ ಬಗ್ಗೆ ಯಾರೊಬ್ಬರಿಗೂ ತಿಳಿಯುವುದಿಲ್ಲ.
ಬಾಲ್ಡ್ವಿನ್ - ನಮ್ಮ ನಾಲ್ವರನ್ನು ಬಿಟ್ಟು.
ಜಾನ್ - ಹೌದು – ಅಪ್ಪಾ. (ಇದ್ದಕ್ಕಿದ್ದಂತೆ ದೂರವಾಗುವರು. ಈವಿ ಮೌನವಾಗಿ ಅಳುತ್ತಿದ್ದಾಳೆ. ಮಾರ್ಥಾ ಕಡಿಮೆ ಭಾವೋದ್ವೇಗ ಉಳ್ಳವಳಾದ್ದರಿಂದ ತನ್ನ ಮೂಗನ್ನು ಸ್ವಚ್ಛ ಮಾಡಿಕೊಳ್ಳುತ್ತಾ ಕಸೂತಿ ಹಣೆಯುವುದರಲ್ಲಿ ಮಗ್ನಳಾಗಿದ್ದಾಳೆ. ಜಾನ್ ಇನ್ನೇನು ಮಾಡಲು ಉಳಿದಿಲ್ಲವೆಂಬಂತೆ ಕಿಟಕಿಯಾಚೆ ನೋಡುತ್ತಾನೆ. ಬಾಲ್ಡ್ವಿನ್ ಒಲೆಯ ಹತ್ತಿರ ಬಂದು ಮುಷ್ಠಿಯನ್ನು ಸಡಿಲಗೊಳಿಸುತ್ತಾ ಮತ್ತೆ ಬಿಗಿಯುತ್ತಾ ನಿಂತಿದ್ದಾನೆ) ಯಾರೋ ಬರುತ್ತಿದ್ದಾರೆ.
ಮಾರ್ಥಾ – (ತಲೆ ಎತ್ತುತ್ತಾ) ಯಾರದು?
ಜಾನ್ - ನನಗೆ ಕಾಣಿಸುತ್ತಿಲ್ಲ. (ಆಕಸ್ಮಿಕ ಗ್ರಹಿಕೆಯಿಂದ) ಮಾರ್ಷಲ್ ರವರಿದ್ದಂತಿದೆ.
ಬಾಲ್ಡ್ವಿನ್ – ಮಾರ್ಷಲ್ ರವರೇ? (ಕರೆಗಂಟೆಯ ಸದ್ದು ಕೇಳಿಸುತ್ತದೆ. ಬಾಗಿಲು ಕಾಣಿಸುವ ಕಿಟಕಿಯ ಬಳಿ ಹೋಗುತ್ತಾನೆ) ಹೌದು, ಮಾರ್ಷಲ್ ರವರೇ!
ಮಾರ್ಥಾ - ನ್ಯಾಷನಲ್ ಬ್ಯಾಂಕ್ ನ ಅಧ್ಯಕ್ಷರು?
ಬಾಲ್ಡ್ವಿನ್ - ಹೌದು. ಅವರಿಗೆ ಇಲ್ಲೇನು ಕೆಲಸವಿದೆ?
ಈವಿ - ಅವರನ್ನು ಒಳಗೆ ಕರೆಯಲೇ ಅಪ್ಪಾ?
ಬಾಲ್ಡ್ವಿನ್ – ಖಚಿಡಿತವಾಗಿ (ಈವಿ ಹೊರಹೋಗುತ್ತಾಳೆ)
ಮಾರ್ಥಾ – (ಬೇಗನೆ ಬಾಲ್ಡ್ವಿನ್ಬಳಿ ಹೋಗುತ್ತಾಳೆ) ರಾಬರ್ಟ್! ನೀವೇನು ಹೇಳುತ್ತೀರಾ ಎಂಬುದರ ಬಗ್ಗೆ ಹುಷಾರಾಗಿರಿ. ನಾಳೆ ನೀವು ಸಾಕ್ಷ್ಯ ಹೇಳಬೇಕಾಗಿದೆ.
ಬಾಲ್ಡ್ವಿನ್ – (ಉದ್ವಿಗ್ನತೆಯಿಂದ) ಹಾ! ಆಯ್ತು.
ಮಾರ್ಥಾ – ಅವರೇ ಮಾತಾಡಲಿ. ನೀವೇನು ಹೇಳಬೇಡಿ. (ಈವಿ ಒಳಬರುವಳು. ಮಾರ್ಷಲ್ ಬರುವರು)
ಮಾರ್ಷಲ್–ಮದ್ಯಾಹ್ನವನ್ನು ಮನೆಯಲ್ಲಿಯೇ ಕಳೆಯುತ್ತಿರುವಿರಾ?
ಹೇಗಿದ್ದೀರಿ ಶ್ರೀಮತಿ ಬಾಲ್ಡ್ವಿನ್ (ಕೈ ಕುಲುಕುವನು) ನೀವು ಬಾಲ್ಡ್ವಿನ್?
ಮಾರ್ಥಾ - ನಾವು ಈಗಷ್ಟೇ ಹೊರ ಹೊರಟಿದ್ದೆವು. ಬಾ ಈವಿ .
ಮಾರ್ಷಲ್ – ಓಹ್! ನೀವು ನನ್ನಿಂದಾಗಿ ಹೊರಹೋಗಬೇಕಾಗಿಲ್ಲ. ನಾನು ಹೇಳಬೇಕಾದದ್ದನ್ನು ನೀವೂ ಕೇಳಬಹುದು. (ಬಾಲ್ಡ್ವಿನ್ಕಡೆಗೆ ತಿರುಗುವನು) ಬಾಲ್ಡ್ವಿನ್ , ನಿಮಗೇನಾದರೂ ಈ ವಾರದಲ್ಲಿ ನ್ಯಾಷನಲ್ ಬ್ಯಾಂಕ್ ಬಳಿ ಬರಬೇಕೆಂದೆನಿಸಿದರೆ ನಿಮಗಾಗಿ ಒಂದು ಕೆಲಸ ಕಾದಿರುತ್ತದೆ.
ಬಾಲ್ಡ್ವಿನ್ – (ಸಿಡಿಲುಹೊಡೆದವನಂತೆ) ನಿಜವಾಗಿಯೂ ಹೇಳುತ್ತಿದ್ದೀರಾ ಮಾರ್ಷಲ್?
ಮಾರ್ಷಲ್ – (ಮುಗುಳ್ನಗುತ್ತಾ) ಇಲ್ಲದಿದ್ದರೆ ನಾನು ಇಲ್ಲಿಯವರೆಗೂ ಬರಬೇಕಾಗಿರಲಿಲ್ಲ. (ಗಂಭೀರವಾಗಿ ಮುಂದುವರೆಸುವರು) ಇಂದು ನಾನು ಗ್ರೇಷಮ್ ನನ್ನು ಭೇಟಿಯಾಗಲು ಹೋಗಿದ್ದೆ. ನಿನಗೆ ಅವನು ತೋರಿಸಿದ ಆಮಿಷದ ಬಗ್ಗೆ ಹೇಳಿದ. ಆದರೆ ನೀನು ತಪ್ಪು ಎಂದು ಭಾವಿಸಿದ್ದನ್ನು ನೀನು ಎಷ್ಟೇ ಹಣ ನೀಡಿದರೂ ಮಾಡುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ಬಾಲ್ಡ್ವಿನ್, ನಿನ್ನ ಬಗ್ಗೆ ಆತ ಸರ್ವೋಚ್ಛ ಪ್ರಶಂಸೆಯನ್ನು ಮಾಡಿದ. ನೀನು ಅವನ ವಿರುದ್ಧ ಸಾಕ್ಷಿ ಹೇಳಲು ಕಟಕಟೆಯನ್ನು ಹತ್ತುವ ಬದಲಿಗೆ ಆತನೇ ತಪ್ಪೊಪ್ಪಿಕೊಂಡ.
ಬಾಲ್ಡ್ವಿನ್ – ( ಕುರ್ಚಿಯಲ್ಲಿ ಕುಸಿಯುತ್ತ) ತಪ್ಪೊಪ್ಪಿಕೊಂಡ!
ಮಾರ್ಷಲ್ – ಇಡೀ ಕಥೆಯನ್ನು ಹೇಳಿದ (ಮಾರ್ಥಾಳ ಕಡೆಗೆ ತಿರುಗಿ) ನಾಳೆ ಪ್ರತಿಯೊಬ್ಬರೂ ಏನು ಹೇಳುತ್ತಿರುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ನಿಮ್ಮ ಪತಿಯ ಬಗ್ಗೆ ನನಗೆ ಎಷ್ಟು ಗೌರವವಿದೆ ಎಂಬುದನ್ನು ಮಾತ್ರ ಹೇಳಬಲ್ಲೆ! ಎಷ್ಟು ಪ್ರಾಮಾಣಿಕವಾಗಿ...................
ಮಾರ್ಥಾ – (ಆತನ ಕೈಯನ್ನು ಹಿಡಿದುಕೊಳ್ಳುತ್ತಾ) ದಯವಿಟ್ಟು! ದಯವಿಟ್ಟು! ಅವರು ಅಳುತ್ತಿರುವುದು ಕಾಣಿಸುತ್ತಿಲ್ಲವೇ?
ಇಂಗ್ಲಿಷ್ ನಿಂದ ಅನುವಾದ - ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ