[ಒಂದೇ ದೇಶದವರಾದ ನಾವು ಒಂದಾಗಿ ಬದುಕಿ ನಮ್ಮ ನೈಜ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುವುದನ್ನು ಬಿಟ್ಟು ಜಾತಿ, ಭಾಷೆ, ಧಾರ್ಮ, ಜನಾಂಗ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಹೊಡೆದಾಡುತ್ತಿದ್ದೇವೆ. ಇದರಿಂದ ಸಮೃದ್ಧ ದೇಶದ ಅಭಿವೃದ್ಧಿಗೆ, ಎಲ್ಲ ಸಮುದಾಯದವರ ಬೆಳವಣಿಗೆಗೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ.
ನಮ್ಮ ಸಮಾಜದಲ್ಲಿ ಒಂದೆಡೆ ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಭಾಷೆಯೇ ಶ್ರೇಷ್ಠ ಎನ್ನುವುದು ಒಂದು ಗುಂಪಾದರೆ, ಇನ್ನೊಂದು ಗುಂಪು "ಮಾನವ ಜಾತಿ ತಾನೊಂದೆ ವಲಂ" ಎಂದು ಪ್ರತಿಪಾದಿಸುತ್ತಿದೆ. ಇಂದು ನಾವು ಎಲ್ಲಾ ವಿಭಜಕ ಗೋಡೆಗಳನ್ನು ಕೆಳಗುರುಳಿಸಿ ಒಟ್ಟಾಗದಿದ್ದರೆ ಬದುಕು ದುರ್ಭರವಾಗುತ್ತದೆ. "ವಿಶ್ವಮಾನವ"ರಾಗಲು ಕರೆಕೊಟ್ಟ ಮಹನೀಯರ ಲೇಖನ, ಕವನ, ಕಥೆಗಳನ್ನು ಇಲ್ಲಿ ಓದುಗರ ಪರಾಮರ್ಶೆಗೆ ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಪ್ರಖ್ಯಾತ ಕವಿಗಳಾದ ಸಿದ್ಧಯ್ಯಪುರಾಣಿಕರ ‘ಸಲಾಮ್ ಸಾಬ್’ ಕವಿತೆ. ಅವರಿಗೆ ನಮ್ಮ ತುಂಬುಹೃದಯದ ಧನ್ಯವಾದಗಳು]
‘ಸಲಾಮ್ ಸಾಬ್’ - ಕಾವ್ಯಾನಂದ (ಸಿದ್ಧಯ್ಯ ಪುರಾಣಿಕರು)
ನಡುಹಗಲು! ಕಡುಬೇಸಿಗೆಯ ಸೂರ್ಯ ನಡುನೆತ್ತಿಗೇರಿರಲು
ಪೊಡವಿ ತಲ್ಲಣಿಸುತಿದೆ! ತಿರೆಗೆ ಜ್ವರ ಬಂದಂತೆ
ಬಿರುಬಿಸಿಲ ಉರಿಹೆಚ್ಚಿ ಉಗಿ ಕಾರುತಿದೆ ನೆಲವು!
ತನಗೆ ತಂಪನು ನೀಡೆ ಗಾಳಿಯೂ ಗೋಳಿಟ್ಟು
ತರುಗಳನು ಬೇಡುತಿದೆ ಆಗಾಗ ಕೆಣಕೆಣಕಿ!
ಬಿಸಿಲುಗುದುರೆಗಳೇರಿ ವಸುಧೆಯೊಡಲಿಂದೊಗೆದ
ಬಿಸಿಯುಸಿರು ಓಡುತಿದೆ ಮೋಡಗಳ ಮೊರೆ ಹೋಗಲು!
ಹೊಗೆಬಂಡಿಯೋಡುತಿದೆ ದಿಗಿಲುಗೊಂಡವರಂತೆ
ಉಗಿಯ ಬಿಸುಪಿಮ್ಮಡಿಸೆ ಹಗಲುಗುಳ್ವ ಕಿಚ್ಚಿನಲಿ!
ನಾನಿಳಿದ ನಿಲ್ದಾಣವೊಂದು ಹಂಚಿನ ಕೋಣೆ
ನಾಲ್ಕು ಜನರೊಮ್ಮೆಗೇ ನಿಂತುಕೊಳ್ಳಲು ಬರದು
ಮಗ್ಗಲಿನ ತಗಡುಮನೆಯರೆಗಾವುನೆರಳಿನಲಿ
ಉಸ್ಸೆಂದು ಹೊರಳುತಿವೆ ಜೀವಿಗಳು ನಾಲ್ಕಾರು!
ಸನಿಹದಲ್ಲಿ ಮರವಿಲ್ಲ ನಿಲ್ಲೆ ನೆರಳಿನಿಸಿಲ್ಲ
ಊರಿಹುದು ದೂರದಲಿ ದಾರಿ ತಿಳಿಯದು ನನಗೆ
ಏನು ಮಾಡುವುದೆಂದು ಜಾನಿಸುತ ನಿಂತಿರಲು
ಕಿವಿಯ ಕೊರೆಯುತ ಹೊಕ್ಕು ಎದೆಯನಡುಗಿಸಿತೊಂದು
ಕರುಣಕ್ರಂದನ - “ಸಲಾಮ್ ಸಾಬ್”!
ಹಿಂತಿರುಗಿ ನೋಡಿದೆನು, ಹೆದರಿ ಹೌಹಾರಿದೆನು!
ದೈನ್ಯತೆಯ ನಿಟ್ಟುಸಿರೆ ನರನಾಗಿ ನಿಂತಂತೆ
ದಾರಿದ್ರ್ಯದುಮ್ಮಳವೆ ಮೈದಾಳಿತೆಂಬಂತೆ
ಅಳಲ ಚೀತ್ಕಾರವೇ ಚರ್ಮ ತೊಟ್ಟಿರುವಂತೆ
ಕನಿಕರದ ಕಣ್ಣೀರೆ ಕೈಕಾಲು ತಳೆದಂತೆ
ಕರುಳುಗಳ ಕಲಮಲವೆ ಕಾಯವನು ಪಡೆದಂತೆ
ಎಲುವು ತೊಗಲುಗಳಲ್ಲಿ ಎಂತೆಂತೊ ಜೀವವನು
ಬಲುಮೆಯಿಂದಲಿ ಹಿಡಿದು ಉಸಿರಬಲೆಯಲಿ ಬಿಗಿದು
ಬಾಯ್ಬಿಡುತ ನಿಂತಿತ್ತು ನರನ ಆಕೃತಿಯೊಂದು!
ನರನೆನಲೊ ನೆರಳೆನೆಲೊ ಅರೆಜೀವ ಹಾರಿರುವ
ಬರಿಕಳೇಬರವೆನಲೊ ನಿಟ್ಟುಸಿರ ತಿದಿಯೆನಲೊ?
ತಳದಿಂದ ತಲೆವರೆಗೆ ಕಣ್ಣಿಟ್ಟು ನೋಡಿದರೆ
ಮಧ್ಯದಲಿ ಕಾಣುವುದು ಛಿದ್ರವಸ್ತದ ತುಂಡು!
ತಲೆಯ ಕಾಯುವರಾರು? ಕರುಣೆ ಬಂದಿತೊ ಏನೊ
ನರೆಗೂದಲೆಂಬುವಕೆ - ಮುಚ್ಚಿಹವು ತಲೆ ಕೆನ್ನೆ!
ಹೆಗಲಿನಲಿ ಹರುಕೊಲ್ಲಿ ಬಗಲಿನಲಿ ಆನುಗೋಲ್
ಎಡಗೈಯೊಳಿದೆ ಪಾತ್ರೆ ಬಲಗೈಗೆ ಹಣೆಯು -
“ಸಲಾಮ್ ಸಾಬ್, ಸಲಾಮ್ ಸಾಬ್!”
ಬೆವರು ಬತ್ತಿಹ ಕಾಯ ಹೊಲಸು ಮೆತ್ತಿಹ ಮೈಯು
ಹಿಂಡಿದಂತಿಹ ಚರ್ಮ ಖಂಡವಂಟದ ಎಲುವು
ಕಾಂತಿಯಿಂಗಿದ ಕಣ್ಣು ಚಿಂತೆಯಡಸಿದ ಹಣೆಯು
ಹಸಿದು ಕುಸಿದಿಹ ಹೊಟ್ಟೆ ಮುರಿದು ಬಾಗಿದ ಬೆನ್ನು
ನರೆತು ನಡುಗುವ ತಲೆಯು ಬರತು ಅಂಟಿಹ ಜಿಹ್ವೆ
ಬಿಸಿಲನಣಕಿಸಿನಿಂತು ನಿರುಕಿಸುತಲಿಹ ಜೀವಿ
ಭಾರತದ ಬಡತನದ ಬಾವುಟದ ಚಿತ್ರದೊಲು!
ಅಳಲು ಕರುಣೆಗೆ ಬರೆದ ಜೀವಂತ ಪತ್ರದೊಲು!
ಸಲಾಮ್ ಸಾಬ್ ! ಸಲಾಮ್ ಸಾಬ್!
ಕಂಡೊಡನೆ ಕಲ್ಲೆದೆಯ ಕರಗಿಸುವ ಕನಿಕರವು
ಕಲಕಿದರು ಎದೆಯನ್ನು ಕನಲಿ ನುಡಿಯಿತು ಬುದ್ಧಿ:
“ಇವ ತುರುಕ - ಭಾರತದ ಅರಮನೆಯ ಮುರುಕ!
ಇವ ಮ್ಲೇಂಛ-ಭಾರತದ ಹಂಚೆ ಹೂಡಿಹ ಸಂಚ!
ಹಾವ್ಗೆ ಹಾಲೆರೆಯದಿರು - ಸಾಯಲಿವರೀ ರೀತಿ!”
ಎಂದು ಗುಡುಗಿದ ದನಿಗೆ, “ಕನಲದಿರು ಬುದ್ಧಿಯೇ,
ಭಾರತದ ವೈರಿಗಳು ಬಡ ತುರುಕರಲ್ಲ, ಸಿರಿ
ತಲೆಗೇರಿ ಕುಣಿಯುತಿಹ ಸ್ವಾರ್ಥಿಗಳು ಕೆಲವು ಜನ!
ಕೆಡುಕರವರೀ ಪಾಪ ಬಡ ಜನಕೆ ಮೃತ್ಯುವೆ?”
ಬೆಚ್ಚಿದೆನು ಮನದಲ್ಲಿ! ನಿಶ್ಚಯವು ಈ ಮಾತು-
ಬಡ ತುರುಕ ಬೇಡುವುದು ಅನ್ನ- ಅಲ್ಲ ಪಾಕಿಸ್ತಾನ!
ಇವರೊಡನೆ ದ್ವೇಷವೆ? ನಾಲ್ಕಾಣಿಯನ್ನಿತ್ತೆ.
“ಸಲಾಮ್ ಸಾಬ್!” ಅವನ ಹಿಗ್ಗನು ಕಂಡು
ಹಿಗ್ಗಿತೆನ್ನೆದೆ! ಹೊಟ್ಟೆ ತುಂಬುಣ್ಣುವನು ಹಸಿದ ಜೀವಿ?
ಹುಟ್ಟಿನೊಳಗಿರಬಹುದು ಹಸಿದ ಹೊಟ್ಟೆಯಲಿ ಕುಲವುಂಟೆ?
ವೇಷದೊಳಗಿರಬಹುದು ಹೃದಯಭಾಷೆಯಲಿ ಕುಲವುಂಟೆ?
ಜಡ ತನುವಿಗಿರಬಹುದು ಬಡತನಕೆ ಕುಲವುಂಟೆ?
ಕರಿಬಿಳಿಯ ವರ್ಣವಿರೆ ಕರುಣಕ್ಕೆ ಕುಲವುಂಟೆ?
ಸಲಾಮ್ ಸಾಬ್! ಸಲಾಮ್ ಸಾಬ್!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ