Pages

ಕವನ - ನಾನೂ ಹಾರಬೇಕಮ್ಮಾ






ನಾನೂ ಹಾರಬೇಕಮ್ಮಾ
ಹಾರುವಿಯಂತೆ ಸ್ವಲ್ಪ ತಾಳು
ನಾನೂ ಹಾರಬೇಕಮ್ಮಾ
ಹಾರುವ ಮೊದಲು ತಿನ್ನುವಿಯಂತೆ
ಇಗೋ ಸ್ವಲ್ಪ ಕಾಳು
ನಾನೂ ಹಾರಬೇಕಮ್ಮಾ
ಹಾರಲು ಪುಕ್ಕ ಬಲಿಯಬೇಕು
ನಾನೂ ಹಾರಬೇಕಮ್ಮಾ
ಹಾರಲು ರೆಕ್ಕೆ ಬಡಿಯಬೇಕು
ನಾನೂ ಹಾರಬೇಕಮ್ಮಾ
ಹಾರುವಿಯಂತೆ, ಸ್ವಲ್ಪ ತಾಳು

ಇಷ್ಟು ದಿನ ಕಾದಿದ್ದಾಯಿತು, 
ತಂದ ಕಾಳು ತಿಂದದ್ದಾಯಿತು
ರೆಕ್ಕೆ ಪುಕ್ಕಗಳೂ ಬಲಿತದ್ದಾಯಿತು
ಗೂಡಿನಲ್ಲೇ ರೆಕ್ಕೆ ಬಡಿದದ್ದಾಯಿತು
ನಾನೂ ಹಾರುತ್ತೇನಮ್ಮಾ
ಹಾರುವಿಯಂತೆ, ಸ್ವಲ್ಪ ತಾಳು

ಗಿಡುಗ ಬಂದರೆ?
ಹಾರುತ್ತೇನಮ್ಮಾ ಕಾಡಿನತ್ತ
ಮಳೆ ಬಂದರೆ?
ಸ್ವಲ್ಪ ತೊಯ್ದು ಓಡುತ್ತೇನಮ್ಮಾ ಗೂಡಿನತ್ತ
ಬಿಸಿಲು ಬಂದರೆ
ಹಾರುತ್ತೇನಮ್ಮಾ ನೆರಳಿನತ್ತ
ಹಾರಿ ಸುಸ್ತಾಗಿ ಹಸಿವಾದರೆ
ಹಾರುತ್ತೇನಮ್ಮಾ, ಹಣ್ಣಿನತ್ತ
ಹಾರುತ್ತೀಯಂತೆ ಸ್ವಲ್ಪ ತಾಳು

ಇಷ್ಟು ಕಾಲ ತಾಳಿದ್ದಾಯಿತು,
ಗಿಡುಗ ಬಂದಾಗ ಓಡಿದ್ದಾಯಿತು,
ಮಳೆಯಲ್ಲಿ ತೊಯ್ದು ಗೂಡು ಸೇರಿದ್ದಾಯಿತು
ಬಿಸಿಲಿನಲ್ಲಿ ನೆರಳಿನೆಡೆ ಓಡಿದ್ದಾಯಿತು
ಹಸಿದಾಗ ಹಣ್ಣು ತಿಂದಿದ್ದಾಯಿತು
ಹಾರಿಬಿಡುತ್ತೇನಮ್ಮಾ
ಹಾರಿ ಬಿಡುವಿಯಂತೆ ಸ್ವಲ್ಪ ತಾಳು



ನಾನು ಹಾರುತ್ತಿದ್ದೇನಮ್ಮಾ
ಹಾರಿ ಬಿಟ್ಟೆಯಾ?
ಹೌಹಾರಬೇಡಮ್ಮಾ, ನಾನು ಹಾರುತ್ತಿದ್ದೇನೆ
ನನ್ನ ಕೇಳದೆ ಹೋಗಿಬಿಟ್ಟೆಯಾ?
ಬಿಸಿಲಿನಲ್ಲಿ ಬಾಡಿಬಿಟ್ಟೆಯಾ?
ನೀರಿನಲ್ಲಿ ಜಾರಿಬಿಟ್ಟೆಯಾ?
ಕಾಳು ತಿನ್ನಲು ಮರೆತುಬಿಟ್ಟೆಯಾ?
ಸುಸ್ತಾಗಿ ಮಲಗಿಬಿಟ್ಟೆಯಾ?

ಇಲ್ಲಮ್ಮಾ ನಾನು ಹಾರುತ್ತಿದ್ದೇನೆ
ಏರುತ್ತಿದ್ದೇನಮ್ಮಾ
ರೆಕ್ಕೆ ಬಿಚ್ಚಿ ಹಾರುತ್ತಿದ್ದೇನೆ
ಕೊಕ್ಕು ಬಡಿದು ತಿನ್ನುತ್ತಿದ್ದೇನೆ
ಬೆಳಕಿನಲ್ಲಿ ಓಡುತ್ತಿದ್ದೇನೆ
ಕಾಡು ಸುತ್ತಿ ನೋಡುತ್ತಿದ್ದೇನೆ
ಆಕಾಶದ ತುಂಬಾ ಹಾರುತ್ತಿದ್ದೇನೆ

ಹಾರಿ ಹೋದೆಯಾ?
ಮತ್ತೆ,  ಭಯಾ?

ಭಯವೇತಕಮ್ಮಾ
ಕಾಳು ಕೊಟ್ಟಿದ್ದೀಯೆ
ಬಾಳು ಕೊಟ್ಟಿದ್ದೀಯೆ
ಭಯವೇತಕಮ್ಮಾ?
ಭಯವೇತರದಮ್ಮಾ?
ಗಿಡುಗ ಬಂದರೆ ಓಡಬೇಕೆಂದೆ, ಓಡುತ್ತಿದ್ದೇನೆ
ಹಸಿವಾದರೆ ತಿನ್ನಬೇಕೆಂದೆ, ತಿನ್ನುತ್ತಿದ್ದೇನೆ
ಮಳೆ ಬಂದರೆ ತೊಯ್ಯಬಾರದೆಂದೆ, ಗೂಡು ಸೇರಿದ್ದೇನೆ
ಬಿಸಿಲಾದರೆ ನೆರಳು ಹುಡುಕಬೇಕೆಂದೆ, ಹುಡುಕಿಕೊಂಡಿದ್ದೇನೆ

ನಾನು ಹಾರಿಬಿಟ್ಟೆನಮ್ಮಾ
ರೆಕ್ಕೆ ಬಿಚ್ಚಿ ಆಕಾಶದ ತುಂಬಾ ಹಾರಿಬಿಟ್ಟಿದ್ದೇನಮ್ಮಾ
ರೆಕ್ಕೆ ಬಡಿದು ಹಾರಿದ್ದೇನೆ
ನೀಲಾಕಾಶ ನೋಡಿದ್ದೇನೆ
ಮೀನು ಹಿಡಿದು ತಂದಿದ್ದೇನೆ
ಹುಳು ಹುಡುಕಿ ತಿಂದಿದ್ದೇನೆ
ಗೂಡು ಕಟ್ಟಿಕೊಂಡಿದ್ದೇನೆ
ಹಾರಿಬಿಟ್ಟೆನಮ್ಮಾ, ನಾನು ಹಾರಿ ಬಂದಿದ್ದೇನೆ.

ಹಾರಿ ಹೋದೆಯಾ?
ನನ್ನ ಬಿಟ್ಟು ಹೊರಟು ಹೋದೆಯಾ?

ಹಾರಿ ಬಂದಿದ್ದೇನಮ್ಮಾ, 
ಆದರೆ ನಿನ್ನ ಬಿಟ್ಟು ಬಂದಿಲ್ಲ
ಹಾರಿ ಬಂದಿದ್ದೇನಮ್ಮಾ 
ಆದರೆ ನಿನ್ನ ಮರೆತು ಬಂದಿಲ್ಲಾ
ಹಾರಿ ಬಂದಿದ್ದೇನಮ್ಮಾ
ನಿನ್ನ ಬೆಚ್ಚನಪ್ಪುಗೆಯ ನೆನಪಿನಲ್ಲಿ 
ಚಳಿ ಮರೆತಿದ್ದೇನೆ
ನೀನಿತ್ತ ಕಾಳು ತಿಂದೇ
ಇಷ್ಟು ಬೆಳೆದಿದ್ದೇನೆ
ನೀನಿತ್ತ ಮುತ್ತು ನೆನೆದು
ಮನಸ್ಸಿನಲ್ಲೇ ನಲಿದಿದ್ದೇನೆ
ಹಾರಿ ಬಂದಿದ್ದೇನಮ್ಮಾ, ನಾನು 
ಆದರೆ, 
ಜೊತೆಗೆ ನಿನ್ನನ್ನೂ ಕರೆತಂದಿದ್ದೇನೆ.


-ಡಾ.ಸುಚೇತಾ ಪೈ

ಕಾಮೆಂಟ್‌ಗಳಿಲ್ಲ: