ಮೋಹನ್ ತನ್ನ ಹೊಳೆಯುತ್ತಿರುವ ಸ್ಕೂಟರ್‍ಅನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿದ, ಕರ್ಚೀಫ್ ಹೊರತೆಗೆದು, ಕನ್ನಡಿಯನ್ನು ಒರೆಸಿ, ಸ್ಕೂಟರ್ ಹೊರತೆಗೆದು, ಸ್ಟಾರ್ಟ್ ಮಾಡಿ ಹಾರ್ನ್ ಮಾಡಿದ. ಅದು 24ನೇ ಫೆಬ್ರವರಿ. ಮೋಹನ ತನ್ನ ಹೊಸ ಸ್ಕೂಟರ್ ಮೇಲೆ ಪ್ರಥಮ ಬಾರಿಗೆ ಸವಾರಿ ಮಾಡಲಿದ್ದ.
ತಾರ ಮನೆಯಿಂದ ಹೊರಗೆ ಕಾಲಿಡುತ್ತಿದ್ದವಳು ಹಾಗೆಯೇ ನಿಂತುಬಿಟ್ಟಳು - ಅವಳಿಗೆ ಭೂಮಿ ಅದುರಿದಂತಾಯಿತು, ಎರಡು ಭಾಗವಾದಂತೆ, ಮನೆಯ ಮಾಡು ಚೂರುಚೂರಾಗಿ ಬಿದ್ದಂತೆನಿಸಿತು. ಅವಳ ತಲೆ ತಿರುಗಿತು, ಕಾಲುಗಳು ಅದುರಿದವು. ಬೆಳಗಿನಿಂದಲೂ ಕಾಡುತ್ತಿದ್ದ ಸಣ್ಣ ಕಿಬ್ಬೊಟ್ಟೆಯ ನೋವು ಅತ್ಯಂತ ತೀವ್ರವಾಯಿತು, ಹಾವಿನಂತೆ ಬೆಳೆಯಿತು ಮತ್ತು ಯಾವುದೊ ಬೇರೆ ಜೀವಿ ಗರ್ಭಕೋಶದಿಂದ ತನ್ನನ್ನು ತಾನೇ ಹೊರಹಾಕುತ್ತಿರುವಂತೆನಿಸಿತು. ಆ ನೋವಿನಿಂದಾಗಿ ಅವಳ ಇಡೀ ದೇಹದಲ್ಲಿ ಬೆವರೊಡೆಯಿತು ಅವಳ ಬಟ್ಟೆಗಳು ಸಂಪೂರ್ಣ ಒದ್ದೆಯಾದವು.
"ಅಮ್ಮಾ . . ." ಕಿರುಚಿದಳು, ಅಲ್ಲಿಯೇ ಬೀಳುತ್ತಿದ್ದವಳು ಬಾಗಿಲಿನ ನೆರವು ಪಡೆದುಕೊಂಡಳು. ಅವಳ ಅತ್ತೆ ಬಾಗಿಲ ಬಳಿ ಬಂದಿದ್ದವಳು ಅವಳನ್ನು ಹಿಡಿದುಕೊಂಡು ಗಾಬರಿಯಿಂದ "ಅಮ್ಮಾ, ಏನಾಯಿತು, ಏನಾಯಿತು?" ಎಂದು ಕೇಳಿದಳು. ತಕ್ಷಣವೇ ಏನಾಗಿದೆ ಎಂಬುದನ್ನು ಊಹಿಸಿ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡು ಒಳಗೆ ಕರೆದುಕೊಂಡುಹೋದಳು.
ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿದ ತಾರ ಬಲಹೀನಳಾಗಿದ್ದಳು, ಏನನ್ನೊ ಯೋಚಿಸುತ್ತಿದ್ದಳು. ರಕ್ತಸ್ರಾವ ಆಗುತ್ತಿದ್ದರೂ ಅವಳ ನೋವು ಕಡಿಮೆಯಾಗಿತ್ತು. ಮಹಿಳಾ ವೈದ್ಯೆ ಅವಳಿಗೆ ಗರ್ಭಪಾತ ಆಯಿತೆಂದು ದೃಢೀಕರಿಸಿದಳು. ವೈದ್ಯರ ಪ್ರಮಾಣಪತ್ರವೊಂದನ್ನು ಪಡೆದು, ರಜೆ ಚೀಟಿ ಬರೆದು, ಎರಡನ್ನೂ ತನ್ನ ಕಛೇರಿಗೆ ಕಳಿಸಿದಳು. ಗರ್ಭಪಾತವಾದ ನಂತರ ದೊರೆಯುವ 6 ವಾರಗಳ ರಜೆಗಾಗಿ ಸ್ಪಷ್ಟವಾಗಿ ಬರೆದಿದ್ದಳು.
ತಾರ 5 ಘಂಟೆಯಿಂದಲೇ ಬಾಗಿಲ ಬಳಿಯೇ ನೋಡುತ್ತಿದ್ದಳು. ಅವಳ ಗೆಳತಿ ಭಾರತಿ ಯಾವಾಗ ಬರುತ್ತಾಳೆ ಮತ್ತು ಯಾವಾಗ ಕಛೇರಿಯ ಸುದ್ದಿ ಕೊಡುತ್ತಾಳೆಂದು. ವಿವಿಧ ಆಲೋಚನೆಗಳು ಮುತ್ತಿದವು. ಅವಳ ಸಂಬಳವಾಯಿತೇ? ಅವಳು ತನ್ನ ಬದಲಿಗೆ ಭಾರತಿಗೆ ಅದನ್ನು ಸಂಗ್ರಹಿಸಲು ಅನುಮತಿ ನೀಡಿದ್ದಳು ಮತ್ತು ಭಾರತಿ ಆ ದುಡ್ಡನ್ನು ಕೊಡಲು ಬರುತ್ತಾಳೆಂಬುದು ಅವಳಿಗೆ ಖಚಿತವಾಗಿತ್ತು.
ಸುಸ್ತಾಗಿ, ತಾರ ಕಣ್ಣುಮುಚ್ಚಿದಳು. ಬೇರೆ ಬೇರೆ ಚಿತ್ರಗಳು ಮನದ ಮೇಲೆ ಮೂಡಿಬರಲಾರಂಭಿಸಿದವು. ಅವಳ ಕಛೇರಿಯ ಕೂರ್ಮಾರಾವ್, ರಾಮನಾಥಮ್, ರಂಗಾರಾವ್ ಮತ್ತು ಅವರ ಅಗಾಗ್ಗಿನ ಅನುಪಯುಕ್ತ ಹರಟೆ ಕೇಳಿಬರಲಾರಂಭಿಸಿತು. ಅದನ್ನು ನೆನಪಿಸಿಕೊಂಡು ಅವಳಿಗೆ ನೋವಿನಲ್ಲೂ ನಗು ಬಂದಿತು.
ಕಛೇರಿಯ ಎಲ್ಲಾ ಗಂಡಸರೂ ಕೆಲಸ ಮಾಡುವ ಹೆಣ್ಣುಮಕ್ಕಳನ್ನು ಟೀಕಿಸಲು ಅವರ ಮೇಲೆ ಹಾಸ್ಯ ಮಾಡಲು ಸಿದ್ಧರಿರುತ್ತಿದ್ದರು. "ನಾವು ಹೆಣ್ಣುಮಕ್ಕಳಾಗಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ನಾವು ತಿಂಗಳುಗಟ್ಟಲೆ ಸಂಬಳ ಸಮೇತ ರಜೆ ಅನುಭವಿಸಬಹುದಿತ್ತು, ವಿಶ್ರಾಂತಿ ತೆಗೆದುಕೊಳ್ಳಬಹುದಿತ್ತು ಎನ್ನುತ್ತಿದ್ದರು, ಯಾರಾದರೂ ಹೆಂಗಸರು ರಜೆ ತೆಗೆದುಕೊಂಡರೆ.
ತಾರಾಳಿಗೆ ಗಾಢ ನಿದ್ರೆ ಹತ್ತಿತು. 8 ಘಂಟೆಯ ನಂತರ ತಾರಳ ತಾಯಿ ವೈದೇಹಿ ಊಟ ತಂದರು. ತಾಯಿಯನ್ನು ನೋಡಿದ ಕೂಡಲೇ ತಾರ ಅತ್ತುಬಿಟ್ಟಳು. ವೈದೇಹಿ ಮಗಳನ್ನು ತಬ್ಬಿಕೊಂಡು ಸಮಾಧಾನ ಮಾಡಿದರು, "ಈಗೇನಾಯಿತು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಅದರ ಬಗ್ಗೆ ಯೋಚಿಸಬೇಡ ಬಿಡು."
"ನಿನಗಾಗಿ ಎಷ್ಟು ಕಾತರದಿಂದ ಕಾಯುತ್ತಿದ್ದೆ ಗೊತ್ತಾ?" ತಾರ ಕಣ್ಣೀರು ತುಂಬಿಕೊಂಡು ಹೇಳಿದಳು.
"ನಿನ್ನ ಪತ್ರ ನೆನ್ನೆಯಷ್ಟೇ ತಲುಪಿತು. ನೆನ್ನೆ ಮದ್ಯಾಹ್ನ ಹೊರಟೆ" ಉತ್ತರಿಸಿದರಾಕೆ.
ತಾರ ಎಂ ಎ (ಅರ್ಥಶಾಸ್ತ್ರ) ಚಿನ್ನದ ಪದಕ ತೆಗೆದುಕೊಂಡಿದ್ದ ಹುಡುಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾಗಿದ್ದಳು. ಅವಳ ತಂದೆ ರಮೇಶ್ ಬಾಬು ಅವಳಿಗೆ ಸಂದರ್ಶನದಲ್ಲಿ ಖಚಿತವಾಗಿ ಅಂಕಗಳು ಸಿಗುವಂತೆ ನೋಡಿಕೊಂಡಿದ್ದರು. ಆ ರೀತಿಯಾಗಿ ತಾರ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದ್ದಳು ಮತ್ತು ಮೋಹನ್ ನ ವರದಕ್ಷಿಣೆ ಪರೀಕ್ಷೆಯಲ್ಲಿ ಪಾಸಾಗಿ ಅವನ ಪತ್ನಿಯಾಗಿದ್ದಳು.
ಭಾರತಿ ಒಳಬರುತ್ತಾ ನುಡಿದಳು, "ಕ್ಷಮಿಸು ನೆನ್ನೆ ಬರಲಾಗಲಿಲ್ಲ. ನನ್ನ ಮಗನಿಗೆ ಬೆಳಿಗ್ಗೆಯಿಂದಲೂ ಜ್ವರವಿತ್ತು. ಮಧ್ಯಾಹ್ನ ಜ್ವರ ಹೆಚ್ಚಾಯಿತೆಂದು ಫೋನ್ ಬಂತು, ನಾನು ಮನೆಗೆ ಹೋದೆ. ಮೋಹನ್ ಬಂದು ನಿನ್ನ ಸಂಬಳ ತೆಗೆದುಕೊಂಡು ಹೋಗಿದ್ದರಿಂದ ನಾನು ಈವತ್ತು ಬಂದರೆ ಪರವಾಗಿಲ್ಲ ಎಂದುಕೊಂಡೆ."
ತಾರಳಿಗೆ ಸೈಲೆನ್ಸರ್ ಹಾಕಿದ ಪಿಸ್ತೂಲಿನಿಂದ ಯಾರೋ ನೇರವಾಗಿ ಎದೆಗೆ ಹೊಡೆದಂತಾಯಿತು. ಅದು ಕೇಳಿಸಲಿಲ್ಲ ಎಂದ ಮಾತ್ರಕ್ಕೆ ನೋವಾಗಲಿಲ್ಲ ಎಂದರ್ಥವಲ್ಲ. ಅವಳಿಗೆ ಭಾರತಿ ಹಿಂದಿನ ದಿನ ಬರಲಿಲ್ಲ ಎಂಬುದರ ಬಗ್ಗೆ ಬೇಸರವಿರಲಿಲ್ಲ. ಆದರೆ ಮೋಹನ ಅವಳ ಸಂಬಳ ತೆಗೆದುಕೊಂಡು ಒಮ್ಮೆಯೂ ಆಸ್ಪತ್ರೆಗೆ ಬರಲಿಲ್ಲ ಎಂಬುದು ನೋವಾಯಿತು.
ಭಾರತಿ ಕೇಳಿದಳು "ಮನೆಗೆ ಯಾವಾಗ ಹೋಗುತ್ತಿದ್ದೀಯ?"
"ಇನ್ನೊಂದು ಘಂಟೆಯಲ್ಲಿ."
"ಸರಿ ಹಾಗಾದರೆ ನಾನೂ ಸಹ ಒಂದು ತಿಂಗಳ ರಜೆ ತೆಗೆದುಕೊಂಡಿದ್ದೇನೆ."
"ಅಷ್ಟೊಂದು ದಿನ, ಯಾಕೆ ?"
"ನಮ್ಮಣ್ಣ 2 ವರ್ಷದಿಂದ ಬಾ, ಬಾ ಅಂತಾ ಪೀಡಿಸ್ತಾನೇ ಇದ್ದಾನೆ."
"ಹೋಗು, ಚೆನ್ನಾಗಿ ಕಾಲ ಕಳೆದುಬಾ."
"ಇದೋ, ನಿನ್ನ ಸಂಬಳದ ಚೀಟಿ. ಸರಿ ಹಾಗಿದ್ದರೆ ನಾನು ಹೊರಡುತ್ತೇನೆ." ಭಾರತಿ ಹೊರಟಳು.
ತಾರಳ ಮನಸ್ಸು ವಿಚಿತ್ರ ಭಯದಿಂದ ಮತ್ತು ಅವಮಾನದಿಂದ ತುಂಬಿತು.
"ಏನು ವಿಷಯ? ಅಷ್ಟು ಚಿಕ್ಕ ವಿಷಯ ಯಾಕೆ ದೊಡ್ಡದು ಮಾಡ್ತಾ ಇದ್ದೀಯ. ಯಾಕೆ, ನಾನು ನಿನ್ನ ಸಂಬಳ ತೆಗೆದುಕೊಂಡರೆ ಅದರಲ್ಲಿ ತಪ್ಪೇನು? ನಿನಗೇನು ಮುಜುಗರವೇ?"
"ಕನಿಷ್ಟ ಪಕ್ಷ ನೀನು ನನಗೆ ಹೇಳಬಹುದಿತ್ತಲ್ಲ?"
"ಈಗ ಹೇಳುತ್ತಿಲ್ಲವೇ."
"ಈಗ! ನಾನು ಕೇಳಿದ ನಂತರ, ಇಷ್ಟು ಮಾತುಗಳೆಲ್ಲ ಬಂದ ನಂತರ" ಬೇಸರದಿಂದ ನುಡಿದಳು.
"ಗಂಡ ಹೆಂಡತಿಯರಲ್ಲಿ ಪರಸ್ಪರ ಅರ್ಥಮಾಡಿಕೊಳ್ಳದ್ದಿದ್ದರೆ ಅದು ಸಮಸ್ಯೆ" ಎಂದ. "ನಾನು ಅದನ್ನೇ ಹೇಳುತ್ತಿರುವುದು" ಎಂದಳು ತಾರ.
ಮೋಹನ್ ಉತ್ತರಿಸಲಿಲ್ಲ. ತನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮೋಹನ್ ಅಲ್ಲಿಯೇ ಹೊರಗಡೆ ಬಿಟ್ಟು ಒಳಗೆ ಸಹ ಬರದೆ ಹಾಗೆಯೇ ಹೋಗಿ ಈಗ ಕಥೆ ಕಟ್ಟುತ್ತಿರುವುದನ್ನು ಕಂಡು ಕೋಪ ಮಾಡಿಕೊಂಡಳು.
ಪರಿಸ್ಥಿತಿ ಅರ್ಥಮಾಡಿಕೊಂಡ ವೈದೇಹಿ ಮಗಳನ್ನು ಬೈದಳು, "ಅವನಿಗೇನೋ ಕೆಲಸವಿತ್ತು ಎಂದು ಅವನು ಹಾಗೆಯೇ ಹೋದ, ಒಳಗೆ ಬಂದರೆ ಲೇಟಾಗಬಹುದು ಎಂದುಕೊಂಡು . ... ಈಗ ನಿನಗೇನಾಗಿದೆ, ಏನಾಗಿದೆ ಅಂತ ಇಷ್ಟು ಗಲಾಟೆ ಮಾಡಬೇಕು" ಅಳಿಯನನ್ನು ಸಮರ್ಥಿಸಿಕೊಂಡಳು.
ತಾರ ಆಫೀಸಿಗೆ ಹೋಗಲಾರಂಭಿಸಿದಳು. ರಜೆ ಮುಗಿದ ತಕ್ಷಣ. ತನ್ನ ಮೇಜಿನ ಮೇಲಿದ್ದ ಫೈಲ್ಸ್ ಮುಗಿಸಲು ಓವರ್ ಟೈಮ್ ಮಾಡಿದಳು.
ಆ ದಿನ ಸ್ವಲ್ಪ ಆಯಾಸ ಎನಿಸಿದ ಕೂಡಲೇ ಏನೋ ಲೆಕ್ಕ ಹಾಕಿದಳು. ತನ್ನ ತಿಂಗಳ ಮುಟ್ಟು ಇನ್ನು ಆಗಿಲ್ಲವೆಂದು ತಿಳಿದು, ಕಾರಣವೇನಿರಬಹುದೆಂದು ಆಶ್ಚರ್ಯಪಟ್ಟಳು. ಅತ್ತೆಗೆ ತಿಳಿಸಿದಳು.
"ಓ. . . ಆ ದಿನ ಅಷ್ಟೊಂದು ರಕ್ತ ಹೋಯಿತಲ್ಲ, ಅಲ್ಲದೆ ಅದು ಸ್ವಲ್ಪ ದಿನ ಹಾಗೆಯೇ. ಗಾಬರಿಪಡುವ ಅಗತ್ಯವಿಲ್ಲ" ಎಂದರು. 2 ವಾರಗಳ ನಂತರ ಸಹ ಮೈಯೆಲ್ಲಾ ಭಾರವೆನಿಸುತ್ತಿದ್ದರೆ ತಾರಾಗೆ ಪ್ರಶ್ನೆ ಮೂಡಿ ತನ್ನ ಡಾಕ್ಟರ್ ಬಳಿ ಹೋದಳು. ವೈದ್ಯೆ ತಾರ ಗರ್ಭಿಣಿ ಎನ್ನುವುದನ್ನು ಖಚಿತಪಡಿಸಿ ಮಾತ್ರೆಗಳನ್ನು ನೀಡಿದರು.
ತಾರಗೆ ಆಶ್ಚರ್ಯವೂ ಆಗಲಿಲ್ಲ, ಸಂತೋಷವೂ ಆಗಲಿಲ್ಲ.
"ಮೂರು ತಿಂಗಳೇ?" ಕೇಳಿದಳು.
"ಇಲ್ಲ ಹುಡುಗಿ, 5 ತಿಂಗಳಿಗಿಂತ ಜಾಸ್ತಿಯಾಗಿದೆ" ಅಂದರು.
"ಅದು ಹೇಗೆ ಸಾಧ್ಯ? ಮೂರು ತಿಂಗಳ ಹಿಂದೆ ನನಗೆ ಗರ್ಭಪಾತವಾಗಿತ್ತು."
"ಇಲ್ಲ ಅದು ಸರಿಯಲ್ಲ," ಎಂದು ನಗುತ್ತಾ ಇನ್ನು ನೀನು ಹೊರಡಬಹುದೆಂಬಂತೆ ಚೀಟಿಯನ್ನು ಕೈಗಿತ್ತರು.
ಮೋಹನ್ ಹಿಂದೆ ಸ್ಕೂಟರ್ ನಲ್ಲಿ ಕೂರುತ್ತಾ ತಾರ ನಿಧಾನವಾಗಿ ವಿಷಯ ತಿಳಿಸಿದಳು. "ಒಳ್ಳೆಯದೇ ಸಮಸ್ಯೆ ಏನು?" ಕೇಳಿದ ಮೋಹನ್.
"ಇಲ್ಲ ಏನೂ ಇಲ್ಲ, ಆಗ ನನ್ನನ್ನು ಪರೀಕ್ಷೆ ಮಾಡಿದವರು ಡಾ. ಲಲಿತ. ಅವರು ಅಮೇರಿಕಾಗೆ ಹೋಗುವ ತರಾತುರಿಯಲ್ಲಿದ್ದರು. ಅವರನ್ನು 2 ಬಾರಿ ಸಂಪರ್ಕಿಸಲು ಪ್ರಯತ್ನಿಸಿದೆ, ಸಿಗಲೇ ಇಲ್ಲ" ತಾರ ಶಾಂತವಾಗಿ ಹೇಳಿದಳು.
"ಈಗ ನಿನ್ನ ಸಮಸ್ಯೆ ಏನೆಂದು ನನಗರ್ಥವಾಗುತ್ತಿಲ್ಲ" ಸಿಟ್ಟಿನಿಂದಲೇ ಕೇಳಿದ ಮೋಹನ್. ಬೇಗ ಕೋಪ ಮಾಡಿಕೊಳ್ಳುವುದು ಮೋಹನನ ಜಾಯಮಾನವಾಗಿತ್ತು. ಜೊತೆಗೆ ಅದನ್ನು ತೋರಿಸಲು ದನಿ ಎತ್ತರಿಸುತ್ತಿದ್ದ. ತಾರ ತನ್ನನ್ನೇ ತಾನು ಸಂಭಾಳಿಸಿಕೊಂಡು "ಏನೂ ಇಲ್ಲ" ಎಂದಳು.
4 ದಿನಗಳ ನಂತರ ತಾರ ಭಾರತಿಯೊಂದಿಗೆ ಡಾ. ಮಹಾಲಕ್ಷ್ಮಿಯವರನ್ನು ನೋಡಲು ಹೋದಳು. ಅವರು ಹೋದಾಗ ವೈದ್ಯೆ ಖಾಲಿಯಾಗಿಯೇ ಇದ್ದರು. ಭಾರತಿಗೆ ಆಕೆ ಗೊತ್ತಿದ್ದರಿಂದ ಆಕೆ ಇವರೊಡನೆ ಮುಕ್ತವಾಗಿಯೇ ಮಾತನಾಡಿದರು. ತಾರಳನ್ನು ಪರೀಕ್ಷಿಸಿ, 5 ತಿಂಗಳು ತುಂಬಿದೆ ಎಂದರು ಮತ್ತು ಸೆಪ್ಟೆಂಬರ್ 20 ಜನನದ ದಿನಾಂಕ ಎಂದು ಕೊಟ್ಟರು. ತಾರ ನಿಧಾನವಾಗಿ ಅವರಿಗೆ ನಡೆದದ್ದೆಲ್ಲವನ್ನುವಿವರಿಸಿದಳು.
"ಓ, ಆ ರೀತಿ ಆಯಿತಾ? ಕೆಲವೊಮ್ಮೆ ಹಾಗಾಗುತ್ತದೆ. ಪಿಂಡ ಗರ್ಭಕೋಶದ ಮೂಲೆಯಲ್ಲಿ ಎಲ್ಲಿಯೋ ಉಳಿದುಕೊಂಡುಬಿಡುತ್ತದೆ. ಆ ಸಮಯದಲ್ಲಿ ಕೆಲವು ಹೆಂಗಸರು ಜಾಸ್ತಿ ರಕ್ತಸ್ರಾವ ಆಗುತ್ತದೆ. ಅದನ್ನು ನಾವು ಗರ್ಭಪಾತದ ನಂತರದ ರಕ್ತಸ್ರಾವ ಎಂದುಕೊಂಡರೆ ಇಂತಹ ಸಂದೇಹಗಳು ನಂತರ ಬರುತ್ತವೆ. ಆದರೆ ಪಿಂಡಕ್ಕೆ ಏನೂ ಆಗಿರುವುದಿಲ್ಲ. ಅದು ಸಾಮಾನ್ಯವಾಗಿಯೇ ಬೆಳೆದು ಮಗು ಹೊರಬರುವ ಸಾಧ್ಯತೆಗಳಿವೆ. ಅದೇ ಆಗಿರುವುದು." ಡಾ. ಮಹಾಲಕ್ಷಿಯವರ ನಿಷ್ಠೆ ಮತ್ತು ತಾಳ್ಮೆಯೊಂದಿಗೆ ಅವರ ಅನುಭವದ ಮೂಲಕ ಕಲಿಯುವವರಿಗೆ ಬಹಳ ಶ್ರದ್ಧೆಯಿಂದ ಕಲಿಸುತ್ತಿದ್ದರು.
ತಾರ 10ನೇ ತಾರೀಖಿನವರೆಗೆ ಕಛೇರಿಗೆ ಹೋಗಿ ನಂತರ ಮಾತೃತ್ವ ರಜೆಗೆ ಅರ್ಜಿ ಸಲ್ಲಿಸಿದಳು. ಆ ಘಳಿಗೆಯಲ್ಲಿ ಮಗುವಿನ ಆಗಮನದ ಬಗ್ಗೆ ಹೊರತುಪಡಿಸಿ ಅವಳು ಯಾವುದರ ಬಗ್ಗೆಯೂ ಅಲೋಚಿಸುವಂತಹ ಸ್ಥಿತಿಯಲ್ಲಿ ಇರಲಿಲ್ಲ.
ಮಗುವನ್ನು ತೊಟ್ಟಿಲಿಗೆ ಹಾಕುವ ದಿನ. ಎಲ್ಲಾ ಕಡೆಯ ಸಂಬಂಧಿಕರು ಬಂದಿದರು. ಮಗುವಿಗೆ ಭಾಗ್ಯಶ್ರೀ ಎಂದು ನಾಮಕರಣ ಮಾಡಲಾಗಿತ್ತು. ಮೋಹನ್ ಅತ್ತೆ ಮನೆಯವರು ತನಗೆ ಕೊಟ್ಟಿದ್ದ ಬಟ್ಟೆಗಳು ತನ್ನ ಸ್ಥಾನಮಾನಕ್ಕೆ ಸರಿಯಾದದ್ದೊ ಇಲ್ಲವೊ ಎಂಬುದನ್ನು ನೋಡುತ್ತಿದ್ದ.
ಊಟವಾದ ನಂತರ ಎಲ್ಲರೂ ಅಡಿಕೆ ಎಲೆ ಹಾಕಿಕೊಳ್ಳುತ್ತಾ ಪರಸ್ಪರರ ಯೋಗಕ್ಷೇಮದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆಗ ಪೋಸ್ಟ್ ಮ್ಯಾನ್ ಬಂದು ತಾರಗೆ ರಿಜಿಸ್ಟರ್ಡ್ ಅಂಚೆಯೊಂದನ್ನು ಕೊಟ್ಟ. ಒಂದು ಕ್ಷಣ ಮೌನ ಆವರಿಸಿತು. ಕಛೇರಿಯಿಂದ ಬಂದ ಪತ್ರದಲ್ಲಿ ಏನಿರಬಹುದೆಂದು ತಾರಳ ತಂದೆ ರಮೇಶ್ ಬಾಬು ಪತ್ರ ಒಡೆದು ಓದಿದರು ಮತ್ತು ಆಘಾತಕ್ಕೊಳಗಾದರು.
ಅದೊಂದು ಸಮಜಾಯಿಷಿ ಕೇಳಿದ ಪತ್ರವಾಗಿತ್ತು, ತಾರ ಹೇಗೆ 6 ವಾರಗಳ ವಿಶೇಷ ರಜೆ ತೆಗೆದುಕೊಂಡು, ಮತ್ತೆ ಕೇವಲ 5 ತಿಂಗಳ ನಂತರ ಮಾತೃತ್ವ ರಜೆ ತೆಗೆದುಕೊಂಡಳು ಎಂದು, ಸುಳ್ಳು ಪ್ರಮಾಣ ಪತ್ರಗಳನ್ನು ನೀಡುವ ಮೂಲಕ ವಿಭಾಗಕ್ಕೆ ಮೋಸ ಮಾಡಿದ್ದಾಳೆಂದು ಆರೋಪಿಸಲಾಗಿತ್ತು.
ಹಬ್ಬದ ವಾತಾವರಣ ಹೋಗಿ ಮೌನ ಆವರಿಸಿತು. ವಿಷಯಗಳನ್ನೆಲ್ಲಾ ತಿಳಿದ ರಮೇಶ್ ಬಾಬು ಕ್ರೋಧಗೊಂಡರು. ತಾರಳಿಗೆ ಎಲ್ಲವೂ ಕತ್ತಲೆ ಎನಿಸಿತು.
ರಮೇಶ್ ಬಾಬು ತಕ್ಷಣವೇ ಕಾರ್ಯಗತರಾದರು. ತಮ್ಮ ಮಗಳು ಕೆಲಸ ಕಳೆದು ಕೊಳ್ಳದಿರುವಂತೆ ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಲು ತೀರ್ಮಾನಿಸಿದರು. ಆದರೆ ಎಷ್ಟೇ ಪ್ರಯತ್ನಪಟ್ಟರು ಉನ್ನತ ಅಧಿಕಾರಿಗಳನ್ನು ಒಪ್ಪಿಸಲಾಗಲಿಲ್ಲ, ಅವರು ಅದನ್ನು ಯೋಜಿತ ಅಥವಾ ಬೇಕೆಂದು ಮಾಡದಿರುವ ತಪ್ಪೆಂದು ಅಂಗೀಕರಿಸಲು ಸಿದ್ಧರಿರಲಿಲ್ಲ.
"ವೈದ್ಯರ ಬಳಿಯಿಂದ ವಿಷಯ ಗೊತ್ತಾದ ತಕ್ಷಣ ನೀವು ಕಛೇರಿಗೆ ಯಾಕೆ ತಿಳಿಸಲಿಲ್ಲ ಅದನ್ನು ಬೇರೇ ರೀತಿಯ ವಿಶೇಷ ರಜೆಯೆಂದು ಏಕೆ ಪರಿವರ್ತಿಸಲಿಲ್ಲ, ಇದು ಉದ್ಯೋಗಿಯ ಕನಿಷ್ಟ ಜವಾಬ್ದಾರಿ. ಈ ಜವಾಬ್ದಾರಿಯನ್ನು ತೆಗೆದುಕೊಳ್ಳದಿರುವುದರಿಂದ ಮತ್ತು ಇಲಾಖೆಗೆ ಮೋಸ ಮಾಡಿರುವುದರಿಂದ ತೆಗೆದುಹಾಕುವುದು ಅನಿವಾರ್ಯ" ಎಂದರು.
ರಮೇಶ್ ಬಾಬು ಮೊದಲು ಪರೀಕ್ಷೆ ಮಾಡಿದ್ದ ಡಾ. ಲಲಿತಾರವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ತಪ್ಪನ್ನು ಲಿಖಿತ ರೂಪದಲ್ಲಿ ಒಪ್ಪಿಕೊಳ್ಳುವರೆಂದು ಭಾವಿಸುವುದು ತಮ್ಮ ಮೂರ್ಖತನವೆಂದು ತಿಳಿದುಕೊಂಡರು. ಆಕೆ ವಿದೇಶಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು. ಕೆಲವು ಅಧಿಕಾರಿಗಳು ಮತ್ತು ವಿಭಾಗದ ಮುಖ್ಯಸ್ಥರು ಈ ಕೇಸ್ ಅನ್ನು ಬಹಳ ಜಾಗರೂಕತೆಯಿಂದ ಸಿದ್ಧಪಡಿಸಿದ್ದರಿಂದ ರಮೇಶ್ ಬಾಬುರವರ ಯಾವ ಪ್ರಯತ್ನವೂ ಫಲಿಸಲಿಲ್ಲ. ತಾರಳನ್ನು ಕೆಲಸದಿಂದ ವಜಾ ಮಾಡಿದ ಪತ್ರ ಬಂತು.
ಆ ದಿನ ಮೋಹನ್ ಮನೆಗೆ ಬಂದು ತಾರಳನ್ನು ತರಾಟೆಗೆ ತೆಗೆದುಕೊಂಡ. "ನೀನು ಉದ್ಯೋಗಸ್ಥ ಮಹಿಳೆ ಎಂದು ಹೇಳುತ್ತಿರುತ್ತೀಯ, ನಿನಗೆ ಮೂಲ ನಿಯಮಗಳೇ ಗೊತ್ತಿಲ್ಲವಲ್ಲ. ಹೆಂಗಸರ ವಿರುದ್ಧ ಏನಾದರೂ ಮಾತನಾಡಿದರೆ ನಿನ್ನ ಅಹಂ ಮಧ್ಯ ಬರುತ್ತದೆ."
"ಆಗ ನಾನು ಬಹಳ ಗೊಂದಲಕ್ಕೊಳಗಾಗಿದ್ದೆ ನೆನಪಿಲ್ಲವೇ?" ಕೇಳಿದಳು.
"ಏನು ಪ್ರಯೋಜನ?" ವ್ಯಂಗ್ಯವಾಗಿ ಕೇಳಿದ.
"ಡಾ. ಮಹಾಲಕ್ಷ್ಮಿಯವರನ್ನು ನೋಡಲು ಕಾತರದಿಂದಿದ್ದೆ. ಆದರೆ ಇದನ್ನು ಆಫೀಸಿಗೆ ತಿಳಿಸಬೇಕೆಂದು ಹೊಳೆಯಲೇ ಇಲ್ಲ."
"ಅದನ್ನೇ ನಾನು ಕೇಳುತ್ತಿರುವುದು. ಅಷ್ಟೂ ನಿನಗೆ ತಿಳಿಯಲಿಲ್ಲವೇ?"
"ಹೌದು, ನಾನು ಒಪ್ಪಿಕೊಳ್ಳುತ್ತೇನೆ, ನನಗೆ ಹೊಳೆಯಲಿಲ್ಲ. ನೀನಾದರೂ ನನಗೆ ಹೇಳಬಹುದಿತ್ತಲ್ಲವೇ. ನಿನಗೆ ನಿಯಮಗಳು ಚೆನ್ನಾಗಿ ಗೊತ್ತಿತ್ತಲ್ಲವೇ?"
"ಓಹ್, ನನಗೆ ಮಾಡಲು ಬೇರಿನ್ನೇನೂ ಕೆಲಸವಿಲ್ಲವೇ? ಇಷ್ಟು ಸಣ್ಣ ವಿಷಯದ ಬಗ್ಗೆ ನಾನು ನಿನಗೆ ಹೇಳಬೇಕಿತ್ತೇ?"
"ಇದು ಸಣ್ಣ ವಿಷಯವಲ್ಲ, ಇದು ನನ್ನ ಕೆಲಸವನ್ನೇ ಕಿತ್ತುಕೊಂಡಿದೆ."
"ನಿನ್ನ ಕಛೇರಿಯಲ್ಲಿ ನೀನು ಏನು ಹೇಳಿರ್ತೀಯಾ ಅಂತಾ ನನಗೇನು ಗೊತ್ತು, ಕೇಳಿದರೆ, ನಿನ್ನ ಕೆಲಸದಲ್ಲಿ ಮಧ್ಯಪ್ರವೇಶಿಸುತ್ತಿರುವಂತೆ ನಿನಗನಿಸಬಹುದು...." "ನಡೆಯುತ್ತಿರುವುದನ್ನೆಲ್ಲ ನಾನು ನಿನಗೆ ಹೇಳುತ್ತಲೇ ಇದ್ದೇನೆ. ನೀನು ದಾರಿ ತೋರಿಸಬೇಕಿತ್ತು. ನನ್ನ ಗರ್ಭದ ಬಗ್ಗೆ ಸಹ ನಾನು ತಿಂಗಳ ವ್ಯತ್ಯಾಸದ ಬಗ್ಗೆ ನಿನಗೆ ಹೇಳಿರಲಿಲ್ಲವೇ?"
"ನನಗೆ ಗೊತ್ತಿಲ್ಲ, ನಾನು ಯಾಕೆ ನೆನೆಪಿಟ್ಟುಕೊಳ್ಳಬೇಕು. ನಿನ್ನ ಋತುಸ್ರಾವದ ಸಮಯವನ್ನು ನೆನಪಿಟ್ಟಿಕೊಳ್ಳುವುದು ಬಿಟ್ಟರೆ ನನಗೆ ಬೇರೆ ಕೆಲಸವಿಲ್ಲವೇ?"
ತಾರಳ ಕೋಪ ಏಕಾಏಕಿ ಗಗನ ಮುಟ್ಟಿತು. ಅವಳು ತನ್ನ ಗಂಡನ ಸಂಕುಚಿತ ಸ್ವಭಾವವನ್ನು ಅರಿತಿದ್ದು, ಅಂಗೀಕರಿಸಿದ್ದರೂ ಇಂತಹ ಮಾತುಗಳನ್ನು ಆಡುತ್ತಾನೆಂದು ಕನಸುಮನಸಿನಲ್ಲಿಯೂ ಭಾವಿಸಿರಲಿಲ್ಲ. ಅವಳ ಸಹನೆ ಅಂತ್ಯಕ್ಕೆ ಬಂದು ಮುಟ್ಟಿತ್ತು.
"ಹೌದು ನಿಜ, ನಿನಗೇಗೆ ಅದು ತಿಳಿದಿರಬೇಕು. ನಿನಗೆ ನನ್ನ ಸಂಬಳವನ್ನು ಎಣಿಸಿ ಜೇಬಿಗೆ ಹಾಕಿಕೊಳ್ಳುವುದು ಮಾತ್ರ ಗೊತ್ತು" ಎಂದಳು.
ತಾರಳ ಕಪಾಳಕ್ಕೆ ಏಟು ಬಿತ್ತು. ಇನ್ನೊಂದು ಬೀಳುವುದರಲ್ಲಿತ್ತು, ಅಷ್ಜ್ಟರಲ್ಲಿ ತಾರ ಅವನ ಕೈ ಹಿಡಿದು, ಕಣ್ಣಿಂದ ಬೆಂಕಿಯನ್ನು ಸುರಿಸುತ್ತಾ, "ಇನ್ನೊಂದು ಸಾರಿ ನನ್ನ ಮೇಲೆ ಕೈಮಾಡಿದರೆ ಅಷ್ಟೇ ನಿನ್ನ ಕಥೆ ಮುಗಿಯಿತು" ಎಂದಳು.
ಅವಳ ತಂದೆ, ಗಲಾಟೆ ಕೇಳಿ ಒಳಬಂದವರು, ಮಗಳನ್ನು ನಿಧಾನವಾಗಿ ಬೈದು, ಅಳಿಯನನ್ನು ಹೊರಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಮಾವ ಸಮಾಧಾನ ಮಾಡಲೆತ್ನಿಸಿದಷ್ಟೂ ಮೋಹನ್ ಕೋಪಗೊಳ್ಳುತ್ತಾ, ಕೆಂಪು ಮೋರೆ ಮಾಡಿಕೊಂಡು ಕೂಗಲಾರಂಭಿಸಿದ.
ರಮೇಶ್ ಬಾಬುರವರಿಗೆ ಮಗಳ ಪರಿಸ್ಥಿತಿಯನ್ನು ನೋಡಿ ಬೇಜಾರು ಮಾಡಿಕೊಳ್ಳುವುದೊ ಅಥವಾ ಅಳಿಯ ಕಿರುಚುತ್ತಿರುವ ಬಗ್ಗೆ ಬೇಸರ ಪಟ್ಟುಕೊಳ್ಳುವುದೊ ತಿಳಿಯಲಿಲ್ಲ.
"ನೋಡು, ಈಗ ಹೇಳುತ್ತಿದ್ದೇನೆ. ನನಗೆ ಕೆಲಸ ಮಾಡುವ ಹೆಂಡತಿ ಬೇಕಿದ್ದಳು, ಅದಕ್ಕೆ ನಿನ್ನನ್ನು ಮದುವೆ ಮಾಡಿಕೊಂಡೆ. ಇದು ನನ್ನ ಒಂದು ಕಂಡೀಷನ್ ಆಗಿತ್ತು. ಈಗ ಅವಳು ಕೆಲಸ ಕಳೆದುಕೊಂಡಿದ್ದಾಳೆ. ನಾನದಕ್ಕೆ ಜವಾಬ್ದಾರನಲ್ಲ. ಅವಳಿಗೆ ಕೆಲಸವಿಲ್ಲದಿದ್ದರೆ ನನಗೆ ಅವಳೊಂದಿಗೆ ಸಂಬಂಧ ಬೇಡ" ಕೂಗಿದ ಅಮಾನವೀಯತೆಯಿಂದ.
"ಮೋಹನ್ ಹೀಗೆ ಯಾಕೆ ಮಾತನಾಡುತ್ತಿದ್ದೀಯಾ, ನಾವು ಸಮಾಧಾನದಿಂದ ಯೋಚಿಸಬೇಕು, ಮುಖ್ಯವಾಗಿ ನಮಗೆ ಸಮಸ್ಯೆ ಇರಬೇಕಾದರೆ.... "
ಮೋಹನ್ ಮಧ್ಯದಲ್ಲಿಯೇ ಬಾಯಿ ಹಾಕಿ "ಅದೆಲ್ಲ ನನಗೆ ಗೊತ್ತಿಲ್ಲ. ನೀವು ಅದನ್ನು ಹೇಗೆ ಪರಿಹರಿಸುತ್ತೀರ, ಕೆಲಸ ಹೇಗೆ ವಾಪಸ್ ಪಡೆಯುತ್ತೀರ ನನಗೆ ಗೊತ್ತಿಲ್ಲ, ಕೆಲಸ ಕೊಡಿಸದಿದ್ದರೆ ನಿಮ್ಮ ಮಗಳನ್ನು ನಿಮ್ಮ ಮನೆಯಲ್ಲಿಯೇ ಇಟ್ಟುಕೊಳ್ಳಬಹುದು."
ರಮೇಶ್ ಬಾಬು ತಕ್ಶಣ ತಮ್ಮ ಸಮಾಧಾನಚಿತ್ತ ಕಳೆದುಕೊಂಡರು. ಆದರೆ ವರ್ಷಗಳ ಅನುಭವದಿಂದ ನಿಗ್ರಹಿಸಿದ್ದರು. ಅದು ಕೇವಲ ಮಗಳ ಕೆಲಸದ ಬಗ್ಗೆ ಮಾತ್ರವಲ್ಲದೆ ಅವಳ ವೈವಾಹಿಕ ಜೀವನ ಬಗ್ಗೆಯೂ ಎಂದು ಚಿಂತಿತರಾದರು. ಆದರೆ ತಾರ ಕಲ್ಲಿನಂತೆ ಇದ್ದಳು. ಮೋಹನ್ ಕಡೆ ಅವಳ ಕಣ್ಣುಗಳು ತಿರುಗಿದಾಗ ಅವಳ ಮುಖದಲ್ಲಿದ್ದ ಭಾವವನ್ನು ವಿವರಿಸುವುದು ಕಷ್ಟ.
ಅದು ಕೋಪವೇ ಅಸಹ್ಯವೇ. ಜೀವನದ ಸತ್ಯ ತಿಳಿದ ನಂತರ ಮೂಡುವ ಶಾಂತತೆಯೇ ಆದರೆ ಅವಳ ಕಂಗಳ ಒದ್ದೆಯಾಗಲಿಲ್ಲ. ಅಳುವ ಇಚ್ಛೆಯಿರಲಿಲ್ಲ.
ಬಣ್ಣದ ಬಟ್ಟೆಗಳಿಂದ ಅಲಂಕೃತವಾದ ಗೊಂಬೆಯಂತೆ ಬೆಳೆದಿದ್ದ ತಾರ, ಈಗ ಎಚ್ಚೆತ್ತುಕೊಂಡಿದ್ದಳು. ರಕ್ತಮಾಂಸವಿರುವ ವ್ಯಕ್ತಿಯಾಗಿ, ಆಲೋಚಿಸುವ ಹುಡುಗಿಯಾಗಿ, ತನ್ನ ಸ್ವಂತ ಇಚ್ಛೆ, ಅಇಚ್ಛೆಯಿರುವ ಹೆಣ್ಣಾಗಿ. ಬಾಲ್ಯದಿಂದಲೂ, ಅವಳಿಗೆ ತನ್ನ ತಾಯಿ ಹೇಳುವುದನ್ನು ವಿಧೇಯತೆಯಿಂದ ಕೇಳುವುದು, ತಾಯಿಯ ಯೋಚನಾ ರೀತಿಯನ್ನು ಅನುಸರಿಸುವುದಷ್ಟೇ ಗೊತ್ತಿತ್ತು. ಸ್ವಂತವಾಗಿ ಎಂದೂ ಆಲೋಚಿಸಿರಲಿಲ್ಲ. ಅಂತಹ ಅವಕಾಶವೇ ಬಂದಿರಲಿಲ್ಲ. ಬಟ್ಟೆ, ಮೇಕಪ್, ಒಡವೆ, ಫ್ಯಾಷನ್, ಬಂಧುಗಳು ಸ್ನೇಹಿತರು - ಎಲ್ಲವನ್ನೂ ತಾಯಿಯೇ ನಿರ್ದೇಶಿಸಿದ್ದಳು. ಅವಳ ವಿದ್ಯಾಭ್ಯಾಸ, ವಿಷಯಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ಸಂದರ್ಶನಗಳು - ತಂದೆಯಿಂದ ನಿರ್ದೇಶಿತವಾಗಿತ್ತ್ತು.
ತನ್ನ ವಲಯದಲ್ಲಿ ತಾನು ಉತ್ತಮಳಾಗಿರಬೇಕೆಂದು ಅರ್ಥಮಾಡಿಕೊಂಡಿದ್ದಳು. ಯಾವುದೇ ಸಮಸ್ಯೆಯಿಲ್ಲದೆ ಕಾನ್ವೆಂಟ್ ಶಿಕ್ಷಣ ಪೂರೈಸಿದ್ದಳು. ಕಾಲೇಜಿಗೆ ಸೇರಿಕೊಂಡ ನಂತರ ಸುಂದರ ಬಟ್ಟೆಗಳು, ವರ್ಗ, ಸ್ಥಾನಮಾನ ಎಂಬುದರ ಬಗ್ಗೆ ಅರ್ಥಮಾಡಿಕೊಂಡಿದ್ದಳು. ಅಂತಿಮ ಬಿ ಎ ನಲ್ಲಿದ್ದಾಗ ಅವಳ ಮದುವೆಯ ಬಗ್ಗೆ ಮಾತುಕತೆ ಆರಂಭವಾಗಿತ್ತು. ಇದೆಲ್ಲಾ ಸಹಜ ಎಂಬಂತೆ ಅವಳು ಅಂಗೀಕರಿಸಿದ್ದಳು.
ಅವಳ ತಾಯಿ, "ನೀನು ಈ ರೀತಿ ಮಾಡಿದರೆ ಯಾರೂ ನಿನ್ನನ್ನು ಮದುವೆಯಾಗುವುದಿಲ್ಲ" ಎಂದಾಗ ತಾರ ತಕ್ಷಣವೇ ತಿದ್ದಿಕೊಳ್ಳುತ್ತಿದ್ದಳು. ಒಳ್ಳೆಯ ಗಂಡು ಬೇಕೆಂದರೆ ಈ ರೀತಿ ನಡೆದುಕೊಳ್ಳಬೇಕೆಂದರೆ, ಹಾಗೆಯೇ ನಡೆದುಕೊಳ್ಳುತ್ತಿದ್ದಳು.
ಈ ದಿನಗಳಲ್ಲಿ ಕೇವಲ ಶಿಕ್ಷಣ ಇದ್ದರೆ ಸಾಲದು, ಒಳ್ಳೆಯ ಗಂಡು ಬೇಕೆಂದರೆ ಉದ್ಯೋಗ ಇರಬೇಕು, ಎಂದು ಅವಳಿಗೆ ಹೇಳಿದ್ದರಿಂದ ಅವಳು ಉದ್ಯೋಗ ಪಡೆಯಲು ಕಂಕಣಬದ್ಧಳಾದಳು, ಉದ್ಯೋಗ ಪಡೆದಳು. ಬಂದ ಹಣವನ್ನೆಲ್ಲ ಬ್ಯಾಂಕಿನಲ್ಲಿ ಹಾಕಿದಳು ಮತ್ತು ವರದಕ್ಷಿಣೆಗಾಗಿ ಕೂಡಿಟ್ಟಳು.
ಗಂಡನ ಬಗ್ಗೆ ಆಲೋಚಿಸಿದಾಗ, ಅವಳು ಅವನ ಎತ್ತರ, ರೂಪ, ಶಿಕ್ಷಣ, ಉದ್ಯೋಗ, ಸ್ಥಾನಮಾನ, ವರದಕ್ಷಿಣೆ, ಉಡುಗೊರೆ, ಮದುವೆಯಲ್ಲಿ ಕೊಡುವ ವಸ್ತುಗಳು ಇತ್ಯಾದಿಗಳ ಬಗ್ಗೆ ಆಲೋಚಿಸಿದಳೇ ಹೊರತು ಆ ಮನುಷ್ಯನ ಬಗ್ಗೆ ಅಲ್ಲ - ಅವನ ಭಾವನೆಗಳು, ಅವನ ಆಲೋಚನಾ ರೀತಿ, ಸಮಾನತೆ, ಪ್ರೀತಿ ಇತ್ಯಾದಿಗಳ ಬಗೆಗಿನ ಅವನ ವಿಚಾರಗಳ ಬಗ್ಗೆ ಅಲ್ಲ.
ಜನ 'ಹುಡುಗ ಒಳ್ಳೆಯವನು, ಬುದ್ಧಿವಂತ ಎಂದು ಕೊಟ್ಟ ಪ್ರಮಾಣಪತ್ರದ ಬಗ್ಗೆ ಕೇಳಿದಳು.
ಯಾವುದು ಉತ್ತಮ? ಅವನು ಬುದ್ಧಿವಂತನಾದರೆ, ಹೇಗಿದ್ದಾನೆ? ತಾರ ಇದರ ಬಗ್ಗೆ ಆಲೋಚಿಸಿರಲಿಲ್ಲ.
ಅವಳ ತಾಯ್ತಂದೆಯರ ಪ್ರಕಾರ, ಮೋಹನ್ ಅತ್ಯಂತ ಅರ್ಹ ವರನಾಗಿದ್ದ.
ತಾರಳಿಗೆ ಏನು ಬೇಕು ಎಂದು ಅರಿಯುವ ಪರಿಸ್ಥಿತಿಯಲ್ಲಿ ಇರಲಿಲ್ಲ.
ಈಗಷ್ಟೇ ತಾರ ತನ್ನ ಕಳೆದುಹೋದ ತನ್ನತನದ ಬಗ್ಗೆ/ವ್ಯಕ್ತಿತ್ವದ ಬಗ್ಗೆ ಅರಿತುಕೊಳ್ಳಲಾರಂಭಿಸಿದ್ದಳು. ಗಾಢವಾದ ಅಸಂತೃಪ್ತಿ ಆಕೆಯ ಮನಸ್ಸನ್ನು ತಿನ್ನಲಾರಂಭಿಸಿತು.
ರಮೇಶ್ ಬಾಬು ಅವಳ ಮನಸ್ಸಿಗೆ ಬಂದರು. ಅವರ ಅಭಿಪ್ರಾಯದಲ್ಲಿ, ಆಫೀಸಿನಲ್ಲಿ ಕೆಲವು ಜನ, ಮಹಿಳಾ ಉದ್ಯೋಗಿಗಳ ಬಗ್ಗೆ ಅಸೂಯೆ ಇದ್ದವರು, ಈ ಕೇಸ್ ಅನ್ನು ದೊಡ್ಡದಾಗಿ ಮಾಡಿ ಅವಳ ವಿರುದ್ಧ ಕೇಸ್ ಹಾಕಿದ್ದರು. ತಾರ ಇಲಾಖೆಗೆ ಮೋಸಮಾಡಿದ್ದಳೆಂದು, ವಿಶೇಷ ರಜೆಯನ್ನು ತೆಗೆದುಕೊಂಡಿದ್ದಳೆಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದರು, (ಈ ದಿನಗಳಲ್ಲ್ಲಿ ನೂರು ರೂಪಾಯಿ ಕೊಟ್ಟು ಸುಳ್ಳು ವೈದ್ಯಕೀಯ ಪ್ರಮಾಣಪತ್ರವನ್ನು ತರುವುದೇನು ಕಷ್ಟವಲ್ಲ)
ಇದೆಲ್ಲವನ್ನು ಸರಿಪಡಿಸುವುದು, ಎಲ್ಲರನ್ನೂ ಒಪ್ಪಿಸುವುದು, ಅವರನ್ನು ಕೇಳಿಕೊಳ್ಳುವುದು, 25000 ಖರ್ಚು ಮಾಡುವುದು, ಹೊಸ ಉದ್ಯೋಗ ಪಡೆಯುವುದು, 6 ವರ್ಷಗಳ ಸೇವೆಯನ್ನು ಕಳೆದುಕೊಳ್ಳುವುದು - ರಮೇಶ್ ಬಾಬು ಅಂತಹ ಚಾಲಾಕಿ ಮನುಷ್ಯನಿಗೂ ಒಂದು ವರ್ಷವಿಡಿಯಿತು.
ದಿನಗಳು, ವಾರಗಳಾಗಿ, ತಿಂಗಳುಗಳಾಗಿ ಬದಲಾಗುತ್ತಿದ್ದಂತೆ, ತಾರಳ ಯೋಚನೆಗಳು ತೀವ್ರವಾದವು.
ಮೋಹನ್ ಆ ವರ್ಷದಲ್ಲಿ ತಾರಳನ್ನು ನೋಡಲು ಬಂದದ್ದು 2-3 ಬಾರಿಯಷ್ಟೇ. ಕೇವಲ ಏಕ ಪದದಲ್ಲಿ ಅವರ ಸಂಭಾಷಣೆ ನಡೆದಿತ್ತು. ಅವನು ಅವಳನ್ನು ತನ್ನ ಮನೆಗೆ ಕರೆಯಲಿಲ್ಲ. ಅವಳೂ ಸಹ ಅಲ್ಲಿಗೆ ಹೋಗಲು ಆಸಕ್ತಿ ತೋರಿಸಲಿಲ್ಲ.
ಆ ದಿನ, ರಮೇಶ್ ಬಾಬು ತುಂಬಾ ಉತ್ಸಾಹದಿಂದ, ಆಟೋದಿಂದ ಜಿಗಿದು ಮನೆಯೊಳಗೆ ನುಗ್ಗಿದರು. "ತಾರ, ಅಮ್ಮಾ, ತಾರ, ತಾಯಿ" ಅವರ ದನಿಯಲ್ಲಿ ಉತ್ಸಾಹ, ಸಂತೋಷ ಎರಡೂ ಇದ್ದು, ದೇವಸ್ಥಾನದ ಗಂಟೆಯಂತೆ ಕೇಳಿಬಂತು. ವೈದೇಹಿ ಆತುರವಾಗಿ ಹೊರಬಂದರು.
"ವೈದೇಹಿ ನಮ್ಮ ಕಷ್ಟಗಳೆಲ್ಲ ಮುಗಿದವು. ಇಲ್ಲಿ ನೋಡು ತಾರಳ ನೇಮಕಾತಿ ಪತ್ರ" ರೂಮಿನಲ್ಲಿ ಓದುತ್ತಿದ್ದ ತಾರ, ಹಾಲಿಗೆ ಓಡಿಬಂದಳು.
"ಅಮ್ಮ, ಇಲ್ಲಿ ನೋಡು, ನಿನ್ನ ನೇಮಕಾತಿ ಪತ್ರ."
ಆತುರದಿಂದ ತೆಗೆದುಕೊಂಡಳು. ತುಂಬಿ ಬಂದ ಕಣ್ಣೀರಿನಿಂದಾಗಿ ನೋಟ ಮಂಜಾಯಿತು.
"ನಾಳೆ ಒಳ್ಳೆಯ ದಿನ, ಯಾಕೆ ಸೇರಿಕೊಳ್ಳಬಾರದು?"
"ಆಯ್ತು ಅಪ್ಪ" ಅವಳ ದನಿ ನಡುಗಿತು. ಅವಳ ದನಿ ನೋವಿನಿಂದ ಕೂಡಿತ್ತು.
ಅವಳ ತಾಯ್ತಂದೆಯರಿಗೆ ಅದರ ಕಾರಣ ತಿಳಿದಿತ್ತು ನಿಟ್ಟುಸಿರಿಟ್ಟರು.
ವೈದೇಹಿ ತಮ್ಮ ಅಳಿಯ ಮನೆಗೆ ಬಂದಾಗ ಆತ್ಮೀಯತೆಯಿಂದ ಬರಮಾಡಿಕೊಂಡರು. ರಮೇಶ್ ಬಾಬು ಕೂಡ ಅಳಿಯನನ್ನು ಗೌರವದಿಂದ ಆಹ್ವಾನಿಸಿ, ಉತ್ಸಾಹದಿಂದ ಮಾತನಾಡತೊಡಗಿದರು.
ತಾರ ಮನೆಗೆ ಬಂದಳು.
"ತಾರ, ಇಂದು ಒಳ್ಳೆಯ ದಿನವಂತೆ. ಅಮ್ಮ ಹೇಳಿದಳು. ನಮ್ಮ ಮನೆಗೆ ಹೋಗೋಣ."
ರಮೇಶ್ ಬಾಬು ಮುಖ ಸಂತೃಪ್ತಿ ವ್ಯಕ್ತಪಡಿಸಿದರೆ, ವೈದೇಹಿಯ ಮುಖ ನಿರಾಳತೆಯನ್ನು ತೋರಿಸಿತು.
"ನಾನು ಬರುವುದಿಲ್ಲ" ತಾರ ಉತ್ತರಿಸಿದಳು. ಅವಳ ದನಿಯಲ್ಲಿ ಕೋಪವಿರಲಿಲ್ಲ. ಆದರೆ ಅದರಲ್ಲಿದ್ದ ದೃಢತೆಯಿಂದಾಗಿ ಆ ದನಿ ಜೋರಾಗಿ, ಸ್ಪಷ್ಟವಾಗಿ ಕೇಳಿಸಿತು.
ರಮೇಶ್ ಬಾಬು ಮತ್ತು ವೈದೇಹಿ ಒಂದು ಕ್ಷಣ ದಂಗಾದರು. ಮೋಹನನ ಮುಖ ತನ್ನ ಬಣ್ಣ ಕಳೆದುಕೊಂಡಿತು.
"ಏನಮ್ಮ ಇದು.... " ತಾರ ಅವರಿಗೆ ಪೂರ್ಣಗೊಳಿಸಲು ಬಿಡಲಿಲ್ಲ.
"ಅಪ್ಪ, ಅದಷ್ಟೇ. ನೀವು ನನಗೊಂದು ಉದ್ಯೋಗ ಕೊಡಿಸಿ ನನ್ನ ಜೀವನಕ್ಕೆ ದಾರಿ ತೋರಿಸಿದ್ದೀರಿ. ಈ ಋಣವನ್ನು ನನ್ನ ಜೀವನಪರ್ಯಂತ ತೀರಿಸಲಾರೆ. ಆದರೆ ಈ ಮನುಷ್ಯನ ಜೊತೆ ಬದುಕಲು ಮಾತ್ರ ಒತ್ತಾಯಿಸಬೇಡಿ."
"ತಾರ. . ." ಅವಳ ತಾಯಿ ಏನೋ ಹೇಳಲು ಹೊರಟರು.
ಮೋಹನ್ ಹಿಸ್ಟೀರಿಕ್ ಆಗಿ ನಕ್ಕನು, ಕಳ್ಳ ಕದಿಯುತ್ತಿದ್ದಾಗ ಸಿಕ್ಕಿಬಿದ್ದಂತೆ. "ನಾನು ಕೋಪದಲ್ಲಿ ಹೇಳಿದ ಮಾತನ್ನು ಬಹುಶಃ ಅವಳು ಗಂಭೀರವಾಗಿ ತೆಗೆದುಕೊಂಡಿದ್ದಾಳೆ. ಆದರೆ ಗಂಡ ಹೆಂಡತಿಯರ ನಡುವೆ . . ."
"ನಿಲ್ಲಿಸು, ಸಾಕು. ಇನ್ನೇನೂ ಮಾತನಾಡಬೇಡ. ನಾನು ನಿನ್ನ ಜೊತೆ ಬರುವುದಿಲ್ಲ. ನಾನು ನಿನ್ನ ಜೊತೆ ಬದುಕುವುದಿಲ್ಲ."
"ನಿನ್ನ ಬಗ್ಗೆ ನೀನು ಏನು ತಿಳಿದುಕೊಂಡಿದ್ದೀಯ?"
"ನಾನು ಏನು ಯೋಚಿಸುತ್ತಿದ್ದೇನೆ ಎಂಬುದು ನಿನಗೆ ಸಂಬಂಧವಿಲ್ಲದ್ದು. .. . ನೀನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ಇಲ್ಲದಿದ್ದರೆ ನಾನೇ ಸಲ್ಲಿಸುತ್ತೇನೆ."
ತಾರ ತನ್ನ ರೂಮಿನೊಳಕ್ಕೆ ಹೋಗಿ ಚಿಲಕ ಹಾಕಿಕೊಂಡಳು.
(ಅನುವಾದ - ಸುಧಾ ಜಿ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ