Pages

ಕಥೆ - ಆಸರೆ



“ಅತ್ತೆ ಇಲ್ಲಿಗೇ ಬರುವರಂತೆ, ನಮ್ಮ ಜೊತೆಯೇ ಇರ್ತಾರಂತೆ” ಸುನಿಲ್ ಹೇಳಿದಾಗ ಕರುಣಾಗೆ ನಂಬಲು ಸಾಧ್ಯವಾಗಲಿಲ್ಲ. 
“ಏನು ಅಮ್ಮ ಇಲ್ಲಿ, ನಮ್ಮ ಜೊತೆ. .. . ನೀನೇನೋ ನನಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತಿದ್ದೀಯಾ.” 
“ಇಲ್ಲಮ್ಮ ನಿಜವಾಗಿ ಬಂದಿರ್ತಾರಂತೆ.”
“ಅಮ್ಮ ಯಾವ ಮಗಳ ಮನೆಯಲ್ಲಿಯೂ ಇರುವುದಿಲ್ಲ. ಅಂತಾದ್ದರಲ್ಲಿ ಈಗ ತನ್ನ ಮನೆಯಲ್ಲಿ...” 
ಈ ಬಗ್ಗೆ ಅಮ್ಮನೊಂದಿಗೆ ಅವಳು ಎಷ್ಟೋ ಬಾರಿ ಜಗಳವಾಡಿದ್ದಳು. ಅಮ್ಮನದ್ದು ಒಂದೇ ಉತ್ತರ. “ನಾನು ಯಾರ ಮನೆಗೂ ಬಂದಿರುವಳಲ್ಲ. ನೀವೇ ಬೇಕಾದರೆ ನನ್ನ ಜೊತೆ ಬಂದಿರಿ.”
ತನ್ನೊಂದಿಗೆ ಬರುವಂತೆ ಮಾಡಲು ಯತ್ನಿಸಿ ಕರುಣಾ ಸೋತು ಸುಮ್ಮನಾಗಿದ್ದಳು. ಮತ್ತೆ ಈಗ?
ಕರುಣಾ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಮದುವೆಯಾಗಿ ಕೇವಲ 2 ವರ್ಷವಾಗಿತ್ತು. ಪತಿ ಸುನಿಲ್ ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್‍ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಮದುವೆಯಾದ ಮೇಲೆ ಕರುಣಾ ತಾಯಿಗೆ ತನ್ನ ಮನೆಗೆ ಬಂದಿರುವಂತೆ ಕೇಳಿಕೊಂಡಿದ್ದಳು. ಆದರೆ ತಾಯಿ ಒಪ್ಪಿರಲಿಲ್ಲ. 
ಕರುಣಾಗೆ ಚಿಕ್ಕಂದಿನಿಂದಲೂ ತಾಯಿ ಅರ್ಥವಾಗೇ ಇರಲಿಲ್ಲ. ಕರುಣಾ ಹೆಚ್ಚು ತಂದೆಯ ಜೊತೆಯೇ. ತಾಯಿ ತನ್ನ ಜೊತೆ ಇಲ್ಲವೇನೋ ಎಂಬಂತೆಯೇ ಬೆಳೆದಳು.
ತಂದೆ ತೀರಿಕೊಂಡ ನಂತರವಂತೂ ಕರುಣಾಗೆ ಅನಾಥಪ್ರಜ್ಞೆ ಕಾಡಲಾರಂಭಿಸಿತ್ತು. ಅದೆಲ್ಲಾ ಸ್ವಲ್ಪ ಮರೆಯುವಷ್ಟರಲ್ಲಿಯೇ ಅವಳಿಗೆ ಬೆನ್ನುಮೂಳೆಯಲ್ಲಿ ಸಮಸ್ಯೆಯಾಗಿ 6 ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳಬೇಕೆಂದು ವೈದ್ಯರು ಹೇಳಿದ್ದರು. 
ಮನೆಯಲ್ಲಿಯೇ ಇರುವಂತಹವರು ಯಾರಾದರೂ ಸಿಗುತ್ತಾರಾ ಎಂದುಕೊಂಡು ವಿಚಾರಿಸಿದಾಗ ಸರಿಯಾದಂತಹವರು ಯಾರೂ ಸಿಗಲಿಲ್ಲ. ಸಿಕ್ಕವರು ಸಿಕ್ಕಾಪಟ್ಟೆ ಹಣ ಕೇಳಿದರು. ಹಣ ಕೊಟ್ಟರೂ ಚೆನ್ನಾಗಿರುವವರು ಸಿಗುತ್ತಾರೆಂಬ ಭರವಸೆ ಇರಲಿಲ್ಲ. ಏನು ಮಾಡುವುದೆಂದು ಯೋಚಿಸಿ ಯೋಚಿಸಿ ದಂಪತಿಗಳಿಬ್ಬರೂ ಚಿಂತಿತರಾಗಿದ್ದರು.
ಹಾಗೂ ಒಮ್ಮೆ ಸುನಿಲ್ “ನಿಮ್ಮ ಅಮ್ಮನನ್ನು ಕೇಳಬಾರದೆ” ಎಂದಿದ್ದ. 
“ಬೇಡಪ್ಪ, ಅಮ್ಮ ಖಡಾಖಂಡಿತವಾಗಿ ಬರಲ್ಲ. ಸುಮ್ನೆ ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳುವುದು ಯಾಕೆ?”
ಸರಿ ಆ ಚರ್ಚೆ ಅಲ್ಲಿಗೆ ನಿಂತಿತ್ತು. ಸುನಿಲ್ ಸಧ್ಯಕ್ಕೆ ರಜೆ ಹಾಕಿ ಮನೆಯಲ್ಲಿದ್ದ. 
ಬೆಳಿಗ್ಗೆ ಹೊರಗೆ ಹೋಗಿ ಬರುತ್ತೇನೆಂದವನು ಬಂದ ತಕ್ಷಣ ಅಮ್ಮ ಬರುತ್ತಾರಂತೆ ಎಂಬ ಸುದ್ದಿಯನ್ನು ಕೊಟ್ಟಿದ್ದ.
“ನನಗೆ ಬೆಳಿಗ್ಗೆಯೇ ಅತ್ತೆಯಿಂದ ಫೋನ್ ಕಾಲ್ ಬಂತು. ನಾನು ಅಲ್ಲಿಗೆ ಹೋದೆ. ನಿನಗೆ ಹೇಳಬೇಡ ಎಂದಿದ್ದರು. ಹಾಗಾಗಿ ಹೇಳಲಿಲ್ಲ. ಅಲ್ಲಿ ಹೋದಮೇಲೆ ನಡೆದಿದ್ದಿಷ್ಟು.” ವರದಿ ಒಪ್ಪಿಸಿದ.
“ಸುನಿಲ್, ನಿನಗೇನೂ ಅಭ್ಯಂತರ ಇಲ್ಲದಿದ್ದರೆ ನಾನೇ ಅಲ್ಲಿ ಬಂದು ಇರ್ತೀನಪ್ಪ” ಯಾವ ಪೀಠಿಕೆಯೂ ಇಲ್ಲದೆ ನೇರವಾಗಿ ಮಾತಿಗಿಳಿದಿದ್ದರು. ಸುನಿಲ್‍ಗೆ ಒಂದು ಕ್ಷಣ ತನ್ನ ಕಿವಿಯನ್ನು ತಾನೇ ನಂಬಲಾಗಲಿಲ್ಲ. 
ಸುನಿಲ್‍ಗೆ ತಂದೆ, ತಾಯಿ ಇಬ್ಬರೂ ಇಲ್ಲದ್ದರಿಂದ ಕರುಣಾಳ ತಾಯ್ತಂದೆಯನ್ನೇ ‘ಅಪ್ಪಾಜಿ, ಅಮ್ಮ’ ಎಂದು ಸಂಬೋಧಿಸುತ್ತಿದ್ದ. ಅವರಿಬ್ಬರು ತನ್ನ ಮೆಲೆ ಇಟ್ಟಿದ್ದ ಪ್ರೀತಿಯಿಂದ ಅವರ ಬಗ್ಗೆ ಅಪಾರವಾದ ಗೌರವ ಬೆಳೆಸಿಕೊಂಡಿದ್ದ.
“ಅಮ್ಮ, ಇದೇನು ಹೀಗೆ ಹೇಳ್ತಾ ಇದ್ದೀರಾ? ನೀವು ಬಂದಿರ್ತೀರಾ ಎಂದರೆ ನನಗೆ ಅದಕ್ಕಿಂತ ಹೆಚ್ಚಿನ ಸಂತೋಷ ಇನ್ನಾವುದಿದೆ? ಈಗ ಸಮಸ್ಯೆ ಬಂದಿದೆ ಎಂದಲ್ಲ, ನೀವು ಯಾವಾಗಲೂ ನಮ್ಮ ಜೊತೆ ಇದ್ದರೂ ನಮ್ಮಿಬ್ಬರಿಗೂ ಬಹಳ ಸಂತೋಷ. ಆದರೆ ನೀವು ಯಾರ ಮನೆಯಲ್ಲಿಯೂ ಇರುವುದಿಲ್ಲವಲ್ಲ?”
“ಹೌದಪ್ಪ ಆದರೆ ಏನು ಮಾಡುವುದು, ಈಗಿರುವ ಪರಿಸ್ಥಿತಿಯಲ್ಲಿ.”
“ಯಾರಾದರೂ ಸಿಗುತ್ತಾರೇನೋ ನೋಡ್ತಿದ್ದೀವಮ್ಮ”
“ಯಾರಾದರೂ ಸಿಕ್ಕಿದರೆ ಕೆಲಸ ಮಾಡಿಕೊಡಬಹುದು, ಆದರೆ ಅಕ್ಕರೆಯಿಂದ ನೋಡಿಕೊಳ್ತಾರಾ?”
ಅಷ್ಟೆಲ್ಲ ನಾವು ಕೇಳಲಿಕ್ಕಾಗುತ್ತಾ ಅಮ್ಮ, ಯಾರೊ ಒಬ್ಬರು ಅವಳ ಜೊತೆ ಇದ್ದರೆ ನನಗೆ ಸಮಾಧಾನ.”
“ಹಾಗಲ್ಲಪ್ಪ, ಅವಳು ಚೆನ್ನಾಗಿದ್ದಾಗಿನ ಪರಿಸ್ಥಿತಿ ಬೇರೆ. ಈಗಿನ ಪರಿಸ್ಥಿತಿ ಬೇರೆ. ಜೊತೆಗೆ ಅವಳಿಗೆ ಚಿಕ್ಕಂದಿನಿಂದ ನಾನೇನೂ ಹೆಚ್ಚಿಗೆ ಮಾಡಲು ಹೋಗಿಲ್ಲ. ಹುಡುಗಿಯಾಗಿದ್ದಾಗಿನಿಂದಲೂ ಅವಳು ಬಹಳ ಧೈರ್ಯಶಾಲಿ, ಆರೋಗ್ಯವಂತಳು. ಅವಳು ಯಾವಾಗಲೂ ಖಾಯಿಲೆ ಬೀಳಲಿಲ್ಲ. ನಾನು ಅವಳನ್ನು ನೋಡಿಕೊಳ್ಳುವ ಅವಶ್ಯಕತೆ ಬರಲಿಲ್ಲ. ಜೊತೆಗೆ, ಅವಳು ಶಾಲಿನಿ ಮೀರಾರಂತೆ ಹೆದರಿಕೆ ಸ್ವಭಾವದವಳಲ್ಲ. ಎಲ್ಲವನ್ನೂ ಒಬ್ಬಳೇ ನಿಭಾಯಿಸುತ್ತಿದ್ದಳು. ಎಲಾ ಇಕ್ಕಟ್ಟಿನ ಸಮಯದಲ್ಲಿಯೂ ನನಗೆ, ನಿಮ್ಮ ಮಾವನವರಿಗೆ ಆಸರೆಯಾಗಿ ನಿಂತಿದ್ದಾಳೆ. ನಿಮ್ಮ ಮಾವ ಆಸ್ಪತ್ರೆಗೆ ಸೇರಿದಾಗ ಅವಳಿನ್ನೂ ಪಿಯುಸಿ ಓದುತ್ತಿದ್ದಳು. ಎಲ್ಲವನ್ನೂ ಒಬ್ಬಳೇ ಹೇಗೆ ನಿಭಾಯಿಸಿದಳು ಗೊತ್ತಾ? ಅವರು ಹೋದಾಗಲೂ ನೋಡಿದ್ದೀಯಲ್ಲ ಹೇಗೆ ನನ್ನ ಜೊತೆಯೇ ಇದ್ದಳು ಎಂದು. ಎಲ್ಲರೂ ಅವರವರ ದುಃಖದಲ್ಲಿ ಮುಳುಗಿಹೋಗಿದ್ದರು. ವಾಸ್ತವವಾಗಿ ಎಲ್ಲರಿಗಿಂತ ಅವರ ಹತ್ತಿರ ಹೆಚ್ಚು ಸಲಿಗೆ, ಪ್ರೀತಿ ಇವಳಿಗೆ. ಆದರೆ ಆ ಸಮಯದಲ್ಲಿ ಎಲ್ಲಾ ಕಾರ್ಯಗಳ ಜವಾಬ್ದಾರಿ ವಹಿಸಿಕೊಂಡಳು. ನನ್ನ ಬಗ್ಗೆ ಎಷ್ಟು ಕಾಳಜಿ ವಹಿಸಿದಳು. ಇಷ್ಟು ದಿನ ಅವಳಿಗೆ ಯಾರ ಆಸರೆ, ನೆರವು ಬೇಕಿರಲಿಲ್ಲ. ಆದರೆ ಅವಳು ಈಗಿರುವ ಪರಿಸ್ಥಿತಿಯಲ್ಲಿ ಅವಳನ್ನು ಹೇಗೆ ಒಬ್ಬಂಟಿಯಾಗಿ ಬಿಡಲಿ ಹೇಳು” ಮಾತನಾಡುತ್ತಲೇ ಕಣ್ಣೀರಿಟ್ಟರು.
“ಅಮ್ಮಾ ದಯವಿಟ್ಟು ಅಳಬೇಡಿ. ಆದರೂ ನಿಮಗೆ ಬೇರೆ ಮನೆಯಲ್ಲಿರುವುದು ಕಷ್ಟವಾಗುತ್ತದೆ. ನೀವು ಅವಳ ಜವಾಬ್ದಾರಿ ತೆಗೆದುಕೊಳ್ಳುವುದಾದರೆ ನಾವೇ ಅಲ್ಲಿಗೆ ಬಂದುಬಿಡುತ್ತೇವೆ.”
“ಬೇಡಪ್ಪ ಈಗಿರುವ ಪರಿಸ್ಥಿತಿಯಲ್ಲಿ ಅವಳನ್ನು ಅಲ್ಲಿಂದ ಇಲ್ಲಿಗೆ ಕರೆತರುವುದು ಬೇಡ. ಗಾಡಿಯಲ್ಲಿ ಓಡಾಡಬೇಡಿ ಎಂದು ಹೇಳಿದ್ದಾರಲ್ಲ. ಜೊತೆಗೆ ನಿಮ್ಮ ಆಫೀಸಿಗೂ ದೂರವಾಗುತ್ತೆ.”
“ಅದೇನೂ ಪರವಾಗಿಲ್ಲಮ್ಮ, ನಾನು ಹೇಗೋ ಹೊಂದಾಣಿಕೆ ಮಾಡಿಕೊಳ್ತೀನಿ. ನೀವು ಅವಳ ಜೊತೆ ಇರ್ತೀರಾ ಎಂದ್ರೆ ನಾನು ಯಾವುದೇ ಟೆನ್ಷನ್ ಇಲ್ಲದೆ ಆಫೀಸಿಗೆ ಹೋಗಿ ಬರಬಹುದು.”
“ಬೇಡಪ್ಪ. ಅನವಶ್ಯಕವಾಗಿ ನೀವು ಅಷ್ಟು ದೂರ ಯಾಕೆ ಓಡಾಡಬೇಕು. ಅಷ್ಟೇ ಅಲ್ಲ, ಅವಳು ಯಾವಾಗಲೂ ‘ಅಮ್ಮ, ನಮ್ಮ ಮನೆಯಲ್ಲಿ ಬಂದಿರು’ ಅಂತಿದ್ದಳು. ಈ ರೀತಿಯಲ್ಲಾದರೂ  ಅವಳ ಆಸೆ ನೆರವೇರುತ್ತದಲ್ಲ.”
ಸುನಿಲ್ ಸಂತೋಷಕ್ಕೆ ಪಾರವೇ ಇರಲಿಲ್ಲ. “ಅಮ್ಮ, ನಾನು ಸಂಜೆಯೇ ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ರೆಡಿಯಾಗಿರಿ” ಎಂದು ಹೇಳಿ ಬಂದಿದ್ದ.
ಕೇಳಿ ಕರುಣಾಗೆ ಶಾಕ್ ಆಯಿತು. ಆಗಲೇ ಅವಳಿಗೆ ತನ್ನಮ್ಮನ ಬಗ್ಗೆ ಗೊತ್ತಾಗಿದ್ದು. ಇಷ್ಟು ದಿನ ತಾನಂದುಕೊಂಡಂತೆ ಅಮ್ಮನಿಗೆ ನನ್ನ ಬಗ್ಗೆ ಪ್ರೀತಿ ಇಲ್ಲವೆಂದಲ್ಲ. ಆದರೆ ತಾಯಿ ಯಾವಾಗಲೂ ತನ್ನ ಅಸಹಾಯಕ ಮಕ್ಕಳಿಗೆ ಹೆಚ್ಚು ಬೆಂಬಲವಾಗಿ ನಿಲ್ಲುವಳು. ಅವಶ್ಯ ಬಿದ್ದ ಯಾವ ಮಕ್ಕಳಿಗೂ ತಾಯಿಯ ಆಸರೆ ಸಿಗದೇ ಹೋಗದು ಎಂಬ ಸತ್ಯ ಕರುಣಾಗೆ ನಿಚ್ಚಳವಾಗಿ ಕಂಡುಬಂದಿತು. ಅವಳ ಮುಖದ ಮೇಲಿದ್ದ ನೋವು ಮರೆತುಹೋಗಿ ಮುಗುಳ್ನಗು ಮೂಡಿತು.
    - ಸುಧಾ ಜಿ     

ಕಾಮೆಂಟ್‌ಗಳಿಲ್ಲ: