Pages

ಕಥೆ - ವಿಸ್ಮರಣೆ


ರಾತ್ರಿ ಏಳು ಗಂಟೆಯಾಗಿತ್ತು. ನನ್ನ ಮೇಜಿನ ಮೇಲಿದ್ದ ಒಂದೆರಡು ಲೇಖನಗಳ ಮೇಲೆ ಕಡೆಯ ಬಾರಿ ಕಣ್ಣಾಡಿಸಿ ಪ್ರಕಟಣೆಗೆ ಕಳುಹಿಸೋಣ ಎಂದುಕೊಂಡು ಅವುಗಳನ್ನು ಕೈಗೆತ್ತಿಕೊಂಡಿದ್ದೆ. ಆಗಲೇ ನನ್ನ ಆಫೀಸಿನ ಹೊರಭಾಗದಲ್ಲಿ ಯಾರೋ ಕಾಯುತ್ತಿದ್ದದ್ದು ನನ್ನ ಗಮನಕ್ಕೆ ಬಂತು. ಆತ ಒಬ್ಬ ವಯಸ್ಸಾದ ವ್ಯಕ್ತಿ. ತುಂಬ ಚಡಪಡಿಕೆಯಿಂದ ಕಾಯುತ್ತಿದ್ದಂತೆ ಕಾಣುತ್ತಿತ್ತು. ಕ್ಷಣಕ್ಕೊಮ್ಮೆ ತನ್ನ ಗಡಿಯಾರದ ಕಡೆ ಆತ ದೃಷ್ಟಿ ಹಾಯಿಸುತ್ತಿದ್ದ. ಕೂಡಲೇ ನನ್ನ ಇಂದಿನ ಭೇಟಿಗಳ ವಿವರ ನೋಡಿದೆ. 7.30 ಕ್ಕೆ ಒಂದು ಭೇಟಿ ನಿಗದಿಯಾಗಿತ್ತು. ಪ್ರಾಯಶ: ಈತನೊಂದಿಗೇ ಇರಬೇಕು. ಸರಿ, ಅಷ್ಟರಲ್ಲಿ ನನ್ನ ಕೈಯಲ್ಲಿದ್ದ ಕೆಲಸ ಮುಗಿಸಿಬಿಡುತ್ತೇನೆ ಎಂದು ಮತ್ತೆ ಕಾರ್ಯಮಗ್ನನಾದೆ. 
ಕರೆಕಳಿಸಿದೊಡನೆ ಆ ವೃದ್ಧರು ಒಳಬಂದು ಸೌಜನ್ಯದ ನಗೆಯೊಂದಿಗೆ 'ನಾನು ಡಾ. ರಾವ್, ವಿಶ್ರಾಂತ ಕೃಷಿ ವಿಜ್ಞಾನಿ’ ಎಂದು ತಮ್ಮನ್ನು ಪರಿಚಯಿಸಿಕೊಂಡರು. ಅವರು ಆಸೀನರಾದ ಮೇಲೆ ನಾನು ಕೇಳಿದೆ. "ನೀವು ಕಾಯುತ್ತಿದ್ದ ರೀತಿ ನೋಡಿದರೆ ನಿಮಗೆ ತುಂಬ ಅವಸರದ ಕೆಲಸವಿದೆಯೇನೋ ಅನಿಸುತ್ತಿತ್ತು."
"ಹಾಗೇನಿಲ್ಲ. ನನ್ನ ಹೆಂಡತಿ ಆಸ್ಪತ್ರೆಯಲ್ಲಿದ್ದಾಳೆ. ಅವಳನ್ನು ನೋಡಲು ಹೋಗಬೇಕಿತ್ತು. ತಡವಾದೀತೇನೋ ಅನಿಸಿತು ಅಷ್ಟೇ..’’ ಸರಿ. ಅವರನ್ನು ಬೇಗ ಕಳುಹಿಸಿಕೊಡೋಣ ಎಂದು ಅವರು ಬಂದ ಕೆಲಸದ ಬಗ್ಗೆ ವಿಚಾರಿಸಿದೆ. ಆಧುನಿಕ ಕೃಷಿ ವಿಧಾನಗಳ ಬಗ್ಗೆ ತಾವು ಬರೆದಿದ್ದ ಲೇಖನವೊಂದನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾದೀತೇ ಎಂದು ವಿಚಾರಿಸಲು ಬಂದಿದ್ದರವರು. ಅವರ ಲೇಖನದ ಹಸ್ತಪ್ರತಿಯನ್ನು ಸ್ವೀಕರಿಸಿ, ಆ ಲೇಖನದ ವ್ಯಾಪ್ತಿಯ ಬಗ್ಗೆ ಅವರಿಂದಲೇ ಕೆಲ ವಿವರಗಳನ್ನು ಕೇಳಿ ತಿಳಿದುಕೊಂಡೆ. ಮುಂದಿನ ವಾರ ಲೇಖನದ ಪ್ರಕಟಣೆಯ ಬಗ್ಗೆ ತಿಳಿಸುತ್ತೇನೆ ಎಂದು ಅವರೊಂದಿಗೆ ಭೇಟಿಯನ್ನು ಕೂಡ ನಿಗದಿ ಮಾಡಿದೆ. ನನ್ನನ್ನು ವಂದಿಸಿ ತಮ್ಮ ಗಡಿಯಾರದ ಕಡೆ ಮತ್ತೊಮ್ಮೆ ಕಣ್ಣು ಹಾಯಿಸಿ ಅವರು ಹೊರಡಲು ಸನ್ನದ್ಧರಾದರು. 
ಸ್ವಲ್ಪ ಔಪಚಾರಿಕವಾಗಿಯೇ ನಾನು ಕೇಳಿದ್ದೆ. "ನಿಮ್ಮ ಪತ್ನಿ ಆಸ್ಪತ್ರೆಯಲ್ಲಿದ್ದಾರೆ ಎಂದಿರಲ್ಲ, ಏನಾಗಿದೆ ಅವರಿಗೆ?’’ 
"ಅವಳಿಗೆ ಈಗ್ಗೆ ಸುಮಾರು ಎರಡು ವರ್ಷಗಳಿಂದ alzhiemer (ವಿಸ್ಮರಣೆ) ಖಾಯಿಲೆ ಇದೆ. ಅಂದಿನಿಂದಲೂ ಚಿಕಿತ್ಸೆ ನಡೆಯುತ್ತಲೇ ಇದೆ’’ 
"ಓಹೋ ಪಾಪ, ನಿಮ್ಮನ್ನು ಕಾಯುತ್ತಾ ಇರತ್ತಾರೇನೋ ಅಲ್ಲವೇ?’’ 
"ಛೇ, ಇಲ್ಲ. ಈ ರೋಗ ಬಂದಾಗಿನಿಂದ ಅವಳು ನನ್ನ ಗುರುತೇ ಹಿಡಿಯೋದಿಲ್ಲ. alzhiemer ಲಕ್ಷಣಾನೇ ಅದು ಅಲ್ಲವೇ?’’ ನನಗೆ ಆಶ್ಚರ್ಯವಾಯಿತು. 
"ಹಾಗಿದ್ದೂ ನೀವು ಅವರನ್ನು ಭೇಟಿಯಾಗಲು ತಡವಾದೀತೇನೋ ಎಂದು ಚಡಪಡಿಸುತ್ತಿದ್ದಿರಲ್ಲ?!’’ 
"ಅವಳು ರಾತ್ರಿ ಎಂಟಕ್ಕೆ ಸರಿಯಾಗಿ ಊಟ ಮಾಡುತ್ತಾಳೆ. ಅವಳೊಂದಿಗೆ ಊಟ ಮಾಡುವುದು ನನ್ನ ಅಭ್ಯಾಸ. ಸಾಮಾನ್ಯವಾಗಿ ನಾನದನ್ನು ತಪ್ಪಿಸುವುದಿಲ್ಲ.’’ 
"ನೀವ್ಯಾರೆಂದು ಆಕೆಗೆ ಮರೆತೇಹೋಗಿದ್ದರೂ ಸಹಾ..!” ನನ್ನ ಉದ್ಗಾರಕ್ಕೆ ಡಾ.ರಾವ್ ಮುಗುಳ್ನಕ್ಕರು. 
"ಹೌದು. ಆಕೆಗೆ ನನ್ನ ಗುರುತು ಮರೆತುಹೋಗಿದೆ ನಿಜ. ಆದರೆ ನನಗೆ ಆಕೆ ನನ್ನ ಪ್ರೀತಿಯ ಪತ್ನಿ ಎಂದು ತಿಳಿದಿದೆಯಲ್ಲ..! ಸುಮಾರು ಐವತ್ತು ವರ್ಷ  ಅವಳೊಂದಿಗೆ ಅನ್ಯೋನ್ಯ ಜೀವನ ನಡೆಸಿದ್ದೇನೆ ನಾನು.."  
ಫಕ್ಕನೆ ನನ್ನ ಕಣ್ಣು ಮಂಜಾಯಿತು. ಅವರು ಹೊರಹೋಗುತ್ತಿದ್ದದ್ದನ್ನು ನಿಟ್ಟಿಸುತ್ತಿರುವಂತೆಯೇ ಇಂದೇನಾಗಿದ್ದೇವೆ, ನಾಳೆ ಏನಾಗಲಿದ್ದೇವೆ ಎಂಬುದರ ಪರಿವೆಯೇ ಇಲ್ಲದೆ ಎರಡು ಜೀವಗಳನ್ನು ಬೆಸೆಯಬಹುದಾದ ನಿಷ್ಕಳಂಕ ಪ್ರೀತಿಯ ಗಾಢತೆ ನನ್ನನ್ನೂ ಆವರಿಸಿಕೊಳ್ಳುತ್ತಿದೆ ಎಂದೆನಿಸತೊಡಗಿತು.
- ಡಾ. ಸುಧಾ,
ಭೌತಶಾಸ್ತ್ರ ವಿಭಾಗ ಕುವೆಂಪು ವಿವಿ
ಶಿವಮೊಗ್ಗ


ಕಾಮೆಂಟ್‌ಗಳಿಲ್ಲ: