Pages

ಪುಸ್ತಕ ಪ್ರೀತಿ - ಮುಚ್ಚಿದ ಬಾಗಿಲು

ಸಲೆತ್ನಿಸು


ಮುಚ್ಚಿದ ಬಾಗಿಲು ತ್ರಿವೇಣಿಯವರ ಒಂದು ಮನೋವೈಜ್ಞಾನಿಕ ಕಾದಂಬರಿ. ಇದರಲ್ಲಿ ತ್ರಿವೇಣಿಯವರು ವ್ಯಕ್ತಿ ತನ್ನ ಮನಸ್ಸಿನ ಭಾವನೆಯನ್ನು ಹೊರಗೆ ಹಾಕದಿದ್ದರೆ ಮುಂದೊಂದು ದಿನ ಹೇಗೆ ಸಮಸ್ಯೆಗಳಾಗಿ ಕಾಡುತ್ತವೆ ಎಂಬುದನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ. ಅದನ್ನು ತೋರಿಸಲು ಅವರು ಹಲವಾರು ಘಟನೆಗಳನ್ನು ಚಿತ್ರಿಸಿದ್ದಾರೆ.

ಕಾದಂಬರಿಯ ನಾಯಕ ಒಬ್ಬ ಮನೋವೈದ್ಯ ಅವರ ಬಳಿ ಬರುವ ಮೊದಲ ರೋಗಿ ಓರ್ವ ಉಪಾಧ್ಯಾಯ. ಐದಾರು ತಿಂಗಳಿಂದ ಸೋಮಶೇಖರ್ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ, ಅಕ್ಕನ ಮಗಳೊಂದಿಗಿನ ಮದುವೆಯನ್ನು ಬೇಡ ಎನ್ನುತ್ತಿದ್ದಾನೆ, ಈ ಸಮಸ್ಯೆಗೆ ಪರಿಹಾರ ಹುಡುಕಿಕೊಡಿ ಎಂದು ಕೇಳಿಕೊಂಡರು ಅವನ ತಂದೆ.
ಅವನೊಂದಿಗೆ ಹಲವಾರು ದಿನಗಳ ಕಾಲ ಮಾತನಾಡಿದ ಮೇಲೆ ಅವನ ಮನದಲ್ಲಿದ್ದ ಆತಂಕವನ್ನು ಅರ್ಥ ಮಾಡಿಕೊಂಡರು. ಗಡ್ಡ ಮೀಸೆ ಬಾರದಿದ್ದರೆ ನೀನು ನಪುಂಸಕನೆಂದು ಅರ್ಥವಲ್ಲ ಎಂದು ತಿಳಿ ಹೇಳಿ ಸಮಸ್ಯೆಯನ್ನು ಬಗೆಹರಿಸಿದರು.
ಎರಡನೆಯ ಕೇಸ್ ನಲ್ಲಿ ವೈದ್ಯರ ಬಳಿ ಬಂದ ಸುಂದರರಾಜು ಉತ್ತಮ ವಿದ್ಯಾರ್ಥಿಯಾಗಿದ್ದು ಕಳೆದ ಎರಡು ಬಾರಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದನು. ಹುಡುಗನ ತಂದೆಯೊಡನೆ ಮಾತನಾಡಿದ ವೈದ್ಯರಿಗೆ ಸಮಸ್ಯೆ ಅರ್ಥವಾಯಿತು. ತಂದೆಯ ಸ್ನೇಹಿತರ ಸಹಾಯದಿಂದ ಬಿ.ಇ. ಸೇರಿದ್ದ ಅವನಿಗೆ ಪರೀಕ್ಷೆಯಾದ ತಕ್ಷಣ ಅವರ ಮಗಳೊಂದಿಗೆ ಮದುವೆ ಎಂದು ತೀರ್ಮಾನಿಸಲಾಯಿತು. ಆ ಹುಡುಗಿಯನ್ನು ಮದುವೆಯಾಗಲು ಸುಂದರರಾಜುವಿಗೆ ಇಷ್ಟವಿರಲಿಲ್ಲ. ವೈದ್ಯರೊಂದಿಗೆ ಮಾತನಾಡಿದ ನಂತರ ಅವನು ಆ ವಿಷಯವನ್ನು  ತಂದೆಗೆ ಮತ್ತು ತಂದೆಯ ಗೆಳೆಯರಿಗೆ ತಿಳಿಸಿ ಬಂದನು. ನಂತರ ಪರೀಕ್ಷೆಯಲ್ಲಿ ತೇರ್ಗಡೆಯಾದನು.
  ನಂತರದ ಕೇಸ್ ನಲ್ಲಿ ಕಪ್ಪಾಗಿ, ಗಿಡ್ಡವಾಗಿದ್ದು ಕನಕಳನ್ನು ಅವಳ ಅಜ್ಜಿ ಯಾವಾಗಲೂ ಮೂದಲಿಸುತ್ತಿದ್ದರು. ಬೇಸತ್ತ ಕನಕ 'ನೀನು ಸಾಯಬಾರದೆ' ಎಂದರೆ 'ಸತ್ತರೂ ನಿನ್ನನ್ನು ಬಿಡುವುದಿಲ್ಲ' ಎಂದು ಹೇಳಿದಳು. ಕೆಲವೇ ದಿನಗಳ ನಂತರ ಅಜ್ಜಿ ಮರಣಿಸಿದಳು. ಅಜ್ಜಿ ಹೇಳಿದ್ದನ್ನೇ ನೆನಪಿಸಿಕೊಳ್ಳುತ್ತಿದ್ದ ಕನಕ ನಿದ್ದೆ ಮಾಡಲು ಹಿಂಜರಿಯುತ್ತಿದ್ದಳು. ಇದರ ಬಗ್ಗೆ  ವೈದ್ಯರು ಸರಿಯಾದ ಸಲಹೆಯನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿದರು.
ಈ ಎಲ್ಲಾ ಕೇಸ್ ಗಳಲ್ಲಿ ಮನೆಯವರ ಸಹಕಾರದಿಂದ ಹೇಗೆ ಸಮಸ್ಯೆಯನ್ನು ಬಗೆಹರಿಸಬಹುದೆಂಬುದನ್ನು ತೋರಿಸಿಕೊಟ್ಟ ತ್ರಿವೇಣಿಯವರು ಶಾರದೆಯ ಕೇಸ್ ನಲ್ಲಿ ವಿಫಲವಾದದ್ದನ್ನು ತೋರಿಸಿದ್ದಾರೆ. ಶಾರದೆಯನ್ನು ಸದಾ ಗೋಳಾಡಿಸುತ್ತಿದ್ದ ಅವಳ ಗಂಡ ಜಯರಾಮ.  ನೊಂದ ಶಾರದೆ ಬಾಣಂತನದ ಸಮಯದಲ್ಲಿ ಮನೋವಿಕಲ್ಪಕ್ಕೆ ಗುರಿಯಾದಳು. ವೈದ್ಯರಿಗೆ ಸಮಸ್ಯೆ ಅರ್ಥವಾದರೂ ಸಹ ಆಕೆಯ ಗಂಡ ಸಹಕರಿಸದೆ ಇದ್ದದರಿಂದ ಅವಳು ಆಸ್ಪತ್ರೆಯಲ್ಲಿಯೇ ಉಳಿಯುವಂತಾಯಿತು.
ಹೀಗೆ  ಹಲವಾರು ಕೇಸ್ ಗಳ ಮೂಲಕ ವ್ಯಕ್ತಿಯ ದೇಹಕ್ಕೂ, ಮನಸ್ಸಿಗೂ, ಭಾವನೆಗಳಿಗೂ, ವರ್ತನೆಗಳಿಗೂ ಸಂಬಂಧವಿದೆಯೆಂಬುದನ್ನು ಅದ್ಭುತವಾಗಿ ತೋರಿಸಿಕೊಟ್ಟಿದ್ದಾರೆ. ದೇಹಕ್ಕೆ ಕಾಯಿಲೆ ಬಂದಾಗ ವೈದ್ಯರ ಬಳಿ ಹೋಗುವಂತೆ ಮನಸ್ಸಿಗೆ ಕಾಯಿಲೆ ಬಂದಾಗಲೂ ವೈದ್ಯರ ಬಳಿ ಹೋಗಬೇಕು ಎಂಬುದನ್ನು ಹೇಳುತ್ತಾರೆ. ಮಾನಸಿಕ ಆಸ್ಪತ್ರೆಗೆ ಹೋದವರೆಲ್ಲ ಹುಚ್ಚರು ಎಂದು ಪರಿಗಣಿಸುತ್ತಿದ್ದ ಅಥವಾ ಇಂತಹ ಕಾಯಿಲೆಗಳನ್ನು ದೇವರು ಮಾಟ ಮಂತ್ರ ಮುಂತಾದವುಗಳಿಂದ ಗುಣಪಡಿಸಲೆತ್ನಿಸುತ್ತಿದ್ದ ಕಾಲದಲ್ಲಿ ತ್ರಿವೇಣಿಯವರು ಈ ಕಾದಂಬರಿಯನ್ನು ಬರೆದಿರುವುದು ಶ್ಲಾಘನೀಯವೇ. ದೇಹಕ್ಕೆ ವೈದ್ಯರ ಅವಶ್ಯಕತೆ ಇದ್ದಂತೆ ಮನಸ್ಸಿಗೂ ಅವಶ್ಯಕ ಎಂದು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕತೆಗಾರ್ತಿ ಯಶಸ್ವಿಯಾಗಿದ್ದಾರೆ.
ತ್ರಿವೇಣಿಯವರ ಬರವಣಿಗೆಯ ಶೈಲಿ ಸುಂದರವಾಗಿದ್ದು, ಒಮ್ಮೆ ಕಾದಂಬರಿಯನ್ನು ಹಿಡಿದರೆ ಮುಗಿಯುವವರೆಗೂ ಪುಸ್ತಕವನ್ನು ಕೆಳಗಿಡದಂತೆ ಓದಿಸಿಕೊಂಡು ಹೋಗುತ್ತದೆ. 
- ವಿಜಯಲಕ್ಷ್ಮಿ  ಎಂ ಎಸ್   

ಕಾಮೆಂಟ್‌ಗಳಿಲ್ಲ: