Pages

ಪ್ರಸ್ತುತ - ಕಸಿದ ಯೌವನದ ಕಸಿ, ಕುಸಿಯುತ್ತಿರುವ ಮಾಯಾಲೋಕ


ನಮ್ಮ ಮಧ್ಯಮ ವರ್ಗದ ಬಹು ಪಾಲು (ಸಾಮಾನ್ಯ) ಜನರಿಗೆ ಯಾವಾಗಲೂ ಮೇಲೇರುವ ಹಂಬಲ. ಅವರಿಗಿರುವುದು ಕೆಲವೇ ಆಸೆಗಳು. ಸುಮಾರು 1990 ದಶಕದವರೆಗೂ ಅವರಲ್ಲಿದ್ದ ಕನಸು. ಜೀವನ ಶೈಲಿ - ದಿನವೆಲ್ಲಾ ದುಡಿ, ಸಂಜೆ ವಿಶ್ರಮಿಸು, ಸಂಸಾರದ ಜೊತೆ ಸಮಯ ಕಳಿ, ಒಂದಷ್ಟು ಹಣ ಉಳಿಸು, ಮನೆ ಕಟ್ಟು, ಸಮಾಜಕ್ಕಾಗಿ ಜೀವನಕ್ಕಾಗಿ ಏನನ್ನಾದರೂ ಮಾಡು, ಸೇವೆ ಮುಗಿದು ರಿಟೈರ್ ಆಗುವ ಮೊದಲು ಒಂದು ಮನೆ ಕಟ್ಟು, ಮಕ್ಕಳನ್ನು ಓದಿಸಿ ಕೆಲಸಕ್ಕೆ ಸೇರಿಸು, ಅವರಿಗೆ ಮದುವೆ ಮಾಡಿಸು, ವಯಸ್ಸಾದ ತಂದೆತಾಯಿಯರನ್ನು ನೋಡಿಕೋ.. . ಇತ್ಯಾದಿ. ದಶಕಗಟ್ಟಲೇ ಇದು ಹಾಗೇ ನಡೆದುಬಂದಿತ್ತು. ಆದರೆ 1990ರ ದಶಕದಲ್ಲಿ ವಿಶ್ವದಾದ್ಯಂತ ಹಲವಾರು ಬದಲಾವಣೆಗಳಾದವು. ಭಾರತದಲ್ಲಿ ಕೂಡ ಹೊಸತನದ ಗಾಳಿ ಬೀಸಿತು. ನಮ್ಮ ಸರ್ಕಾರಗಳು ‘ಸ್ವರ್ಗವನ್ನೇ ಭೂಮಿಗೆ ತರುತ್ತೇವೆ’ ಎಂದು ಹೇಳುತ್ತಾ ಹೊಸ ಹೊಸ ಆರ್ಥಿಕ ನೀತಿಗಳನ್ನು ತಂದರು. ವಿದೇಶಗಳ ಬಂಡವಾಳಿಗರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡರು. ‘ಉದಾರೀಕರಣ, ಖಾಸಗೀಕರಣ,  ಜಾಗತೀಕರಣ’ದ ಮಂತ್ರ ಘೋಷ ಎಲ್ಲೆಡೆ ಕೇಳಿಸಲಾರಂಭಿಸಿತು. 

ಈ ಹೊಸ ಆರ್ಥಿಕ ನೀತಿಗಳು ಜಾರಿಯಾದ ನಂತರ ಸಮಾಜದಲ್ಲಿ ಹಲವಾರು ಬದಲಾವಣೆಗಳು ಬಂದವು.  ಆರ್ಥಿಕವಾಗಿ ಸಾಮಾಜಿಕವಾಗಿ ಸಾಕಷ್ಟು ಅಲ್ಲೋಲ ಕಲ್ಲೋಲ- ರೈತರ ಆತ್ಮಹತ್ಯೆ, ಹಣದುಬ್ಬರ, ಬೆಲೆ ಏರಿಕೆ, ಜೀವನದಲ್ಲಿ ಅಭದ್ರತೆ, ಬಡವ ಶ್ರೀಮಂತರ ಮಧ್ಯೆ ಹೆಚ್ಚಿದ ಕಂದರ- ಇವೆಲ್ಲಾ ಕೂಡ ಆಯಿತು.

ಆದರೆ ಅದೇ ಸಮಯಕ್ಕೆ ಈ ಅವಧಿಯಲ್ಲಿ ನಮ್ಮ ಮಧ್ಯಮ ವರ್ಗದ ಒಂದು ಭಾಗದ ಯುವಜನರಲ್ಲಿ ಒಂದು ಕನಸು ಬೇರೂರಿಬಿಟ್ಟಿತು. ಅದೆಂದರೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೇಗಾದರೂ ಸೀಟು ಗಿಟ್ಟಿಸಿಕೊಂಡು, ಆ ನಂತರ ಐಟಿ ಕ್ಷೇತ್ರದಲ್ಲಿ ಒಳ್ಳೆ ‘ಕೈ ತುಂಬಾ’ ಸಂಬಳ ಸಿಗುವ ಕೆಲಸಕ್ಕೆ ಸೇರಿ, ವಿದೇಶ ಪ್ರಯಾಣ, ಒಂದೆರಡು ಮನೆ ಕೊಂಡುಕೊಳ್ಳುವುದು, ಆಧುನಿಕ ಜೀವನಕ್ಕೆ ಬೇಕಾದ ಎಲ್ಲಾ ಸೌಕರ್ಯಗಳು, ಮನೆಯಲ್ಲಿ ಎರಡು ಕಾರುಗಳು, ತನ್ನಂತಹುದೇ ಉದ್ಯೋಗವಿರುವ ಹೆಂಡತಿ, ಮಕ್ಕಳಿಗೆ ಅಂತರ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಣ,ರಜಕ್ಕೆ ಯಾವುದಾದರೂ ಹೊರದೇಶಕ್ಕೆ ಪ್ರಯಾಣ. ಕೆಲವು ವರ್ಷ ಚೆನ್ನಾಗಿ ದುಡಿದುಬಿಟ್ಟರೆ ಆ ನಂತರ ಆರಾಮವಾಗಿದ್ದುಬಿಡುವುದು. 
ಭಾರತದಲ್ಲಿ ಐಟಿ ಕ್ಷೇತ್ರ ಬಹು ಬೇಗ ಬೆಳೆಯಿತು, ಲಕ್ಷಾಂತರ ಮಂದಿ ಯುವಜನರನ್ನು ಆಕರ್ಷಿಸಿತು. ಅವರನ್ನು ಮೆರುಗಿನ ಲೋಕಕ್ಕೆ ಕೊಂಡೊಯ್ದಿತು. ಐಟಿಯವರ ಸಂಬಳ (ರೂಪಾಯಿ ಲೆಕ್ಕದಲ್ಲಿ) ಹೆಚ್ಚು, ಅದನ್ನು ಖರ್ಚು ಮಾಡಬೇಕಾದರೆ ದಾರಿ ಕೂಡ ಅದೇ ಕಲ್ಪಿಸಿಕೊಟ್ಟಿತು. ಝಗಝಗಿಸುವ ಬಹುಮಹಡಿ ಕಟ್ಟಡಗಳು, ಹೆಚ್ಚಿದ ಕಾರುಗಳು, ಶುಕ್ರವಾರ, ಶನಿವಾರ, ಭಾನುವಾರ- ಪಬ್ಬುಗಳು, ಊರ ಹೊರಗೆ ರಿಸಾರ್ಟುಗಳು, ನಗರದ ತುಂಬಾ ಮಾಲ್‍ಗಳು, ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ಗಳು, ಇನ್ನು ಎಲ್ಲೆಂದರಲ್ಲಿ ಪಿಜಾ ಮಾರುವ ಅಂತರರಾಷ್ಟ್ರೀಯ ಕಂಪನಿಗಳು, ಹಾಗೂ ನಿಮ್ಮಲ್ಲಿ ತಕ್ಷಣಕ್ಕೆ ದುಡ್ಡಿಲ್ಲದಿದ್ದರೆ ಕ್ರೆಡಿಟ್ ಕಾರ್ಡ್ ರೂಪದಲ್ಲಿ ಸಾಲ- ಅಂತೂ ಕೊಳ್ಳುತ್ತಲೇ ಇರಬೇಕು. ನೀವು ಅಂಗಡಿಗೆ ಬರುವುದಿಲ್ಲವೇ? ನಾವೇ ನಿಮ್ಮಲ್ಲಿಗೆ ಎಲ್ಲಾ ಅಂಗಡಿಗಳನ್ನೂ ಕೊಂಡು ತರುತ್ತೇವೆ, ನೀವು ಗುಂಡಿ ಒತ್ತಿ - ಕುಳಿತಲ್ಲೇ ವ್ಯಾಪಾರ ಮಾಡಿ - ಹೀಗೆ ನಮ್ಮಲ್ಲಿ ಒಂದು ಹೊಸ ಕೊಳ್ಳುಬಾಕ ಸಂಸ್ಕೃತಿಯೇ ಸೃಷ್ಟಿಯಾಯಿತು. ಜೀವನ ವಿಧಾನ, ಜೀವನ ಧೋರಣೆಯೇ ಬದಲಾಗಿ ಹೋಯಿತು.
ಆದರೆ ಅದು ಬದಲಾಗಲಾರಂಭಿಸಿದಾಗ ಬಹಳಷ್ಟು ಜನ ತಂದೆ ತಾಯಂದಿರಿಗೆ ಇದು ಸಂತಸದ ಜೊತೆಗೆ ಆತಂಕವನ್ನೂ ಕೂಡ ತಂದಿತ್ತು. ಹಗಲು ರಾತ್ರಿ ಎಂಬ ವ್ಯತ್ಯಾಸ ಹೋಗಿ, ಹಗಲೆಲ್ಲಾ ನಿದ್ದೆ ರಾತ್ರಿಯೆಲ್ಲಾ ಕೆಲಸ, ಆಫೀಸಿಗೆ ಹೋಗಿ ಕೆಲಸ ಮಾಡುವ ಬದಲು, ಆಫೀಸನ್ನೇ ಫೋನು, ಲ್ಯಾಪ್‍ಟಾಪ್‍ಗಳಲ್ಲಿ ಮನೆಗೆ ತರುವುದು, ಸದಾ ಆತುರ ಅಥವಾ ಕೆಲಸದ ಒತ್ತಡ, ಅಂತೂ ಇಲಿಯೋಟ (ರ್ಯಾಟ್ ರೇಸ್)ದಲ್ಲಿ ಸಿಕ್ಕಿಹಾಕಿಕೊಂಡ ತಮ್ಮ ಮಕ್ಕಳನ್ನು ನೋಡಿ ಖುಷಿ ಪಡಬೇಕೋ, ಹೆಮ್ಮೆ ಪಡಬೇಕೋ, ಆತಂಕ ಪಡಬೇಕೋ ಎಂದು ತೋಚದೆ ಅದನ್ನು ಕಾಲದ ಬದಲಾವಣೆ ಎಂದು ಸ್ವೀಕರಿಸಿದರು. “ಅಂತೂ ಮಕ್ಕಳು ಚೆನ್ನಾಗಿದ್ದರೆ ಸಾಕು. ಜೀವನ ಭದ್ರವಾಗಿದೆಯಲ್ಲಾ!” ಎಂದು. 
ಸ್ವಲ್ಪ ಮಟ್ಟಿಗೆ, ಕೆಲವರ ಮಟ್ಟಿಗೆ ಇದಾದದ್ದೂ ನಿಜ. ಕಳೆದ ಎರಡು ದಶಕಗಳಲ್ಲಿ ಈ ಕ್ಷೇತ್ರ ಹತ್ತು ಲಕ್ಷ ಉದ್ದಯೋಗಗಳನ್ನು ಸೃಷ್ಟಿಸಿತು. ಅಂದರೆ ಜೊತೆ ಜೊತೆಗೇ ಅತಿ ಹೆಚ್ಚಿನ ಲಾಭ ಕೂಡ ಕಳಿಸಿತು. 2001 ರಲ್ಲಿ 10 ಬಿಲಿಯನ್ ಡಾಲರುಗಳಿದ್ದ ಈ ಕ್ಷೇತ್ರ ಈಗ 150 ಬಿಲಿಯನ್ ಡಾಲರ್ ಗಳ ಉದ್ಯಮವಾಗಿ ಬೃಹದಾಕಾರವಾಗಿ ಬೆಳೆದಿದೆ. ಉದ್ಯೋಗಾಕಾಂಕ್ಷಿಗಳು ಕಂಪೆನಿಗಳಿಗೆ ಕೆಲಸ ಹುಡುಕಿಕೊಂಡು ಹೋಗುವ ಬದಲಿಗೆ ಕಂಪೆನಿಗಳೇ ಕಾಲೇಜು ಕ್ಯಾಂಪಸ್ಸಿಗೆ ಇಂಟರ್‍ವ್ಯೂ ಎಂದು ಬಂದು ಕೆಲವರನ್ನು ಆಯ್ದು ಕೊಂಡು ಹೋಗುವುದು, ಆ ನಂತರ ಟ್ರೈನಿಂಗ್, ಕೆಲಸ, ವಿದೇಶ ಪ್ರಯಾಣ- ಹೀಗೆ ಎಲ್ಲವೂ ಪೂರ್ವ ನಿಗದಿತವೋ ಎಂಬಂತೆ ನಡೆದುಹೋಗುತ್ತಿತ್ತು. 

ಆದರೆ ನೀರಿನ ಮೇಲೆ ಗುಳ್ಳೆ ಎಷ್ಟು ಕಾಲ ಇದ್ದೀತು? ಅದೀಗ ಒಡೆಯುತ್ತಿದೆ. ಜೊತೆಗೆ ನಮ್ಮ ಮಧ್ಯಮ ವರ್ಗದವರ ಕುಟುಂಬಗಳಲ್ಲಿ ಅದರಲ್ಲೂ ಐಟಿ ಉದ್ಯೋಗದಲ್ಲಿ ಸ್ವಲ್ಪ ಕಾಲ 5- 10 ವರ್ಷ ಕೆಲಸ ಮಾಡಿ ಅನುಭವವಿರುವವರು, ಮಧ್ಯಮ ಮಟ್ಟದ ಐಟಿ ಉದ್ಯೋಗಿಗಳು, ಮ್ಯಾನೇಜರ್ ಹಂತದವರು. ಇದೀಗ ಇವರು ನಿಂತ ನೆಲ ಅಲ್ಲಾಡುತ್ತಿದೆ, ಇವರಲ್ಲಿ ಆತಂಕ ಮೂಡಿದೆ, ಮುಂದೇನು ಎಂಬ ಅಭದ್ರತೆ ಕಾಡುತ್ತಿದೆ. ಇದಕ್ಕೆಲ್ಲಾ ಕಾರಣ ಒಂದು ವರ್ಷದಿಂದ ನಡೆಯುತ್ತಿರುವ ವಿದ್ಯಮಾನಗಳು.
ಕಾಲದೊಂದಿಗೆ ತಂತ್ರಜ್ಞಾನ ಬೆಳೆದಂತೆ ಯಂತ್ರಗಳು ಮಾನವರನ್ನು ಕೆಲಸದಿಂದ ಹೊರದಬ್ಬಿ ತಾವೇ ಆ ಜಾಗವನ್ನು ಆಕ್ರಮಿಸುತ್ತಾ ಬರುತ್ತವೆ. ಈಗ ಆಗುತ್ತಿರುವುದೂ ಅದೇ. ಐಟಿ ಕ್ಷೇತ್ರದಲ್ಲಿ ಬಹಳ ವೇಗವಾಗಿ ಸ್ವಯಂಚಲೀಕರಣ (ಆಟೊಮೇಷನ್) ಬರುತ್ತಿದೆ, ಜೊತೆಗೆ ಮಾನವನ ಅಗತ್ಯವನ್ನೇ ಅಲ್ಲಗಳೆಯುವ ಯಂತ್ರಗಳ ಕೃತಕ ಬುದ್ಧಿವಂತಿಕೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್), ಕ್ಲೌಡ್ ಕಂಪ್ಯೂಟಿಂಗ್- ಹೀಗೆ ಹೊಸ ಬದಲಾವಣೆಗಳು ಬಂದಿವೆ. ಜೊತೆಗೆ ಅಮೇರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಹೊಸ ನೀತಿಗಳನ್ನು ತಂದಿದ್ದು, ಭಾರತೀಯ ಕೆಲಸಗಾರರು ಅಲ್ಲಿಗೆ ಹೋಗಿ ಕೆಲಸ ಮಾಡುವುದಕ್ಕೆ ತಡೆಯೊಡ್ಡಿದ್ದಾರೆ. ವೀಸಾಗಳು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಇನ್ನು ಭಾರತೀಯ ಐಟಿ ಕ್ಷೇತ್ರ ಉತ್ಪಾದನೆಗಿಂತಲೂ ಸೇವೆಗಳ ಮೇಲೆಯೇ ಆಧಾರಿತವಾಗಿ ಬೆಳೆದಿತ್ತು. ಈಗ ಅಮೇರಿಕಾ ಮಾತ್ರವಲ್ಲ ಯೂರೋಪಿನಲ್ಲೂ, ನ್ಯೂಜೀಲೆಂಡ್, ಸಿಂಗಪೂರ್ ಮುಂತಾದ ಸುಮಾರು ದೇಶಗಳಲ್ಲಿ ಕೂಡ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಾರಣ ಅವರ ದೇಶಗಳಲ್ಲಿ ನಿರುದ್ಯೋಗ ಸಮಸ್ಯೆಯ ವಿರುದ್ಧ ಅಲ್ಲಿನ ಯುವ ಜನ ಬಂಡೇಳುತ್ತಿದ್ದಾರೆ. ಅವರನ್ನು ಸುಮ್ಮನಾಗಿಸಲು ವಲಸೆ ಕಾರ್ಮಿಕರನ್ನು, ವಿದೇಶಿ ಕಾರ್ಮಿಕರನ್ನು ತಮ್ಮ ದೇಶದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ, ಸ್ಥಳೀಯರನ್ನೇ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಭಾರತವೂ ಸೇರಿದಂತೆ ಇತರರನ್ನೂ ಕೂಡ ಅಲ್ಲಿಗೆ ಹೋಗದಂತೆ ತಡೆಯುವ ನೀತಿಗಳನ್ನು ತರುತ್ತಿದ್ದಾರೆ. 
ಇನ್ನು ಕಾಲೇಜುಗಳಿಗೆ ಹೋಗಿ ‘ಕೆಲಸ ಕೊಡುತ್ತೇವೆ’ ಎನ್ನುತ್ತಿದ್ದ ಕಂಪೆನಿಗಳು (ಇದರ ಅರ್ಥ ಅಷ್ಟೊಂದು ಹೊಸ ಉದ್ಯೋಗಗಳು ಸೃಷ್ಟಿಯಾದವೆಂದಲ್ಲ. ಸುಮಾರು ಅಷ್ಟು ಜನ ಬಿಟ್ಟುಹೋಗಿ ಖಾಲಿ ಹುದ್ದೆಗಳಿವೆ ಎಂದು ಕೂಡ ಅರ್ಥ ಮಾಡಿಕೊಳ್ಳಬೇಕು). ಈಗ ಹೋಗುವುದನ್ನು ಕಡಿಮೆಗೊಳಿಸುತ್ತಾ ಬಂದಿದ್ದಾರೆ ಮಾತ್ರವಲ್ಲ, ತಾವಾಗಿ ಆಫರ್ ಲೆಟರ್ (ನಮಗೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುವ ಆಸಕ್ತಿಯಿದೆ) ಕೊಟ್ಟ ನಂತರ ಕಾಲ್ ಲೆಟರ್ (ಕೆಲಸಕ್ಕೆ ಸೇರುವ ದಿನಾಂಕ ಸೂಚಿಸಿ ಪತ್ರ) ಕೂಡ ನೀಡಿಲ್ಲ. ಕೆಲವು ಕಡೆಯಂತೂ ಈ ರೀತಿಯಾಗಿ ಕಾಯುತ್ತಾ ಕುಳಿತು ಕಡೆಗೆ ಇಲ್ಲೂ ಇಲ್ಲ, ಅಲ್ಲೂ ಇಲ್ಲ ಎಂಬ ಸ್ಥಿತಿ ತಲುಪಿ ಇಂತಹ ಕಂಪೆನಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿದ ವರದಿಗಳೂ ಇವೆ.  

ಯುವಜನರಲ್ಲಿ ಕನಸಿನ ಬೀಜ ಬಿತ್ತಿದ್ದ ಈ ಕ್ಷೇತ್ರದ ದೈತ್ಯರೆನಿಸಿಕೊಂಡ ಕಾಗ್ನಿಸೆಂಟ್ ಟೆಕ್ನಾಲಜಿ ಸರ್ವಿಸಸ್, ವಿಪ್ರೋ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಹೆಚ್‍ಸಿಎಲ್, ಕ್ಯಾಪ್‍ಜೆಮಿನಿ- ಮುಂತಾದ ದೊಡ್ಡ  ಕಂಪೆನಿಗಳೂ ಸೇರಿ ಒಟ್ಟು 1.24 ಮಿಲಿಯನ್ ಉದ್ಯೋಗಗಳಿರುವ ಈ ಕ್ಷೇತ್ರದಲ್ಲಿ (ಕೇವಲ ಬೆಂಗಳೂರು ಒಂದರಲ್ಲೇ 200,000 ಐಟಿ ಉದ್ಯೋಗಿಗಳಿದ್ದಾರೆ). ಮೊನ್ನೆ ಮಾರ್ಚಿ 2017 ರವರೆಗೂ ದೇಶದಾದ್ಯಂತ ಈ ಕ್ಷೇತ್ರದಲ್ಲಿ 39 ಲಕ್ಷ ಉದ್ಯೋಗಗಳಿದ್ದು ಅದಕ್ಕೆ ಇನ್ನೂ 1.5 ಲಕ್ಷ ಸೇರ್ಪಡೆಯಾಗಬೇಕಿತ್ತು. ಆದರೆ ಪರಿಸ್ಥಿತಿ ಅದಕ್ಕೆ ತೀರ ಪ್ರತಿರುದ್ಧವಾಗಿದೆ. ಈಗಿನ ವಿದ್ಯಮಾನದ ಪ್ರಕಾರ 2017 ರಲ್ಲಿ ಶೇ.4.5 ಉದ್ಯೋಗ ಕಡಿತವಾಗಲಿದ್ದು  ಈ ವರ್ಷದಲ್ಲಿ 56,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಅಂದಾಜಿದೆ. ಇನ್ನೂ ಇತ್ತೀಚಿನ ವರದಿಗಳ ಪ್ರಕಾರ 2020ರಷ್ಟರಲ್ಲಿ ವರ್ಷಕ್ಕೆ 175,000- 200,000 ಉದ್ಯೋಗಗಳು ಪ್ರತಿವರ್ಷ ಮಾಯವಾಗಲಿವೆ ಎಂದು ಕೂಡ ಹೇಳಲಾಗುತ್ತಿದೆ. ಈಗಾಗಲೇ ಕಾಗ್ನಿಸೆಂಟ್, ಇನ್ ಫೋಸಿಸ್ ಮುಂತಾದವರು ಸೇರಿ ಒಟ್ಟು 15,000 ಜನರನ್ನು ಮನೆಗೆ ಕಳಿಸಿದ್ದಾರೆ. ಡಿಎಕ್ಸ್‍ಸಿ  ಟೆಕ್ನಾಲಜಿ ತನ್ನ 17000 ಉದ್ಯೋಗಿಗಳಲ್ಲಿ 10,000 ಜನರನ್ನು ಮನೆಗೆ ಕಳಿಸಲಿದೆ. (ಲೈವ್ ಮಿಂಟ್ ಪತ್ರಿಕೆ)ಸ್ನ್ಯಾಪ್ ಡೀಲ್ ಎಂಬ ಕಂಪೆನಿಯು ಈಗಾಗಲೇ ತನ್ನ ಉದ್ಯೋಗಿಗಳಲ್ಲಿ ಶೇ.80 ರಷ್ಟು ಜನರನ್ನು ತೆಗೆದುಹಾಕಿದೆ ಎಂಬ ವರದಿಯಿದೆ. ಮಾಧ್ಯಮದ ವರದಿಗಳ ಪ್ರಕಾರ ಮುಂಬರುವ 5 ವರ್ಷಗಳಲ್ಲಿ 2.2 ಲಕ್ಷ ಅಥವಾ ಹೆಚ್ಚು ಎಂಜಿನಿಯರ್‍ಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. 

ಇನ್ನು ಕೆಲಸ ಕಳೆದುಕೊಳ್ಳುತ್ತಿರುವವರು ಮೊನ್ನೆ ಮೊನ್ನೆ ಕೆಲಸಕ್ಕೆ ಸೇರಿ ಇನ್ನೂ ಟ್ರೈನಿಂಗ್ ಹಂತದಲ್ಲಿರುವವರಲ್ಲ, ಇವರೆಲ್ಲಾ ಸಾಕಷ್ಟು ಅನುಭವಸ್ಥರು. 5- 10 ವರ್ಷ ಈ ಕ್ಷೇತ್ರದಲ್ಲಿ ಕೆಲಸ ಮಾಡಿದವರು. ಇವರೆಲ್ಲಾ ಬಡ್ತಿ ಹಾಗೂ ವಾರ್ಷಿಕ ವೇತನ ಹೆಚ್ಚಳಕ್ಕೆ ಅರ್ಹರಾಗಿದ್ದವರು. ಇನ್ನು ಇವರನ್ನು ಕಳಿಸಿಕೊಡುವಾಗ ಮೇಲಧಿಕಾರಿಗಳು ಇವರಿಗೆ ಕೊಡುವ ವಾದ - ನಿಮ್ಮಲ್ಲಿ ದಕ್ಷತೆಯಿಲ್ಲ, ನೀವು ಅಪೇಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ, ನಿಮ್ಮ ಕೆಲಸ ತೃಪ್ತಿಕರವಾಗಿಲ್ಲ. ನೀವು ‘ಅಂಡರ್ ಪರ್ಮಾಮರ್ಸ್’. ಹಾಗಾಗಿ ನೀವು ಇಲ್ಲಿ ಮುಂದುವರೆಯಲು ಲಾಯಕ್ಕಿಲ್ಲ. ಇದರಿಂದಾಗಿ ಆಗುತ್ತಿರುವ ಪರಿಣಾಮ - ತಮ್ಮ 30 ರ ವಯಸ್ಸಿನಲ್ಲಿರುವ ಈ ಹಂತದ ಉದ್ಯೋಗಿಗಳು ಇಷ್ಟು ವರ್ಷ ಹಗಲು ರಾತ್ರಿಯೆನ್ನದೇ ತಮ್ಮ ಸರ್ವಸ್ವವನ್ನೂ ಬಲಿಕೊಟ್ಟು ಈ ಕಂಪೆನಿಗಳಿಗೆ ಲಾಭ ತಂದು ಕೊಟ್ಟಿದ್ದಕ್ಕೆ ಇವರಿಗೆ ಕನಿಷ್ಠ ನಿವೃತ್ತಿ ವೇತನ ಅಥವಾ ಇತ್ಯಾದಿ ಸೌಲಭ್ಯ, ಪರಿಹಾರ ಕೂಡ ಕೊಟ್ಟು ಕಳಿಸುತ್ತಿಲ್ಲ.(ಇವರನ್ನು ಕಂಪೆನಿಗಳು ತಾವಾಗಿ ಕಿತ್ತು ಹಾಕುವುದಿಲ್ಲ. ಘನತೆಯಿಂದ ಹೋಗಬೇಕಾದರೆ ನಿಮ್ಮ ರಾಜೀನಾಮೆ ಕೊಡಿ ಇಲ್ಲದಿದ್ದರೆ ನಾವೇ ನಿಮ್ಮನ್ನು ತೆಗೆದು ಹಾಕಿದ್ದೇವೆಂದು ಪತ್ರಕೊಡಬೇಕಾಗುತ್ತಿದೆ ಎಂದು ನಯವಾಗಿ ಹೊರದಬ್ಬಲಾಗುತ್ತಿದೆ) ಹೋಗಲಿ ಬೇರೆಡೆ ಹೋಗೋಣ ಎಂದರೆ ಅವರಿಗೆ ವಾರ್ಷಿಕ 12-18 ಲಕ್ಷ ಆದಾಯ ತರುವ ಅಂತಹದೇ ಕೆಲಸ ಮತ್ತೆ ಸಿಗುವ ಖಾತ್ರಿಯಿಲ್ಲ, ಮಾತ್ರವಲ್ಲ, ಎಲ್ಲೆಡೆಯೂ ಅವರಂತಹವರೇ ಸಿಗುತ್ತಿದ್ದಾರೆ, ಅವರ ಪರಿಸ್ಥಿತಿಯೂ ಇದೇ ಆಗಿದೆ. ಇನ್ನೊಂದು ವಿಷಯವೆಂದರೆ- ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು- ತಾಯ್ತನದಿಂದಾಗಿ ಹೆರಿಗೆರಜೆಗೆ ಹೋದವರಿಗೆ ಮರಳಿ ಬಂದಾಗ- ಇವರು ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದೋ ಪ್ರಜಾಕ್ಟುಗಳು ಬರುತ್ತಿಲ್ಲ ಎಂದೋ ಸಬೂಬು ಹೂಡಿ ಅವರೇ ಬಿಡುವಂತೆ ಮಾಡಲಾಗುತ್ತಿದೆ. ಪರಿಸ್ಥಿತಿ ಹೇಗಾಗಿದೆಯೆಂದರೆ ಕೆಲವರಂತೂ ಈ ಆತಂಕ, ಒತ್ತಡವನ್ನು ತಡೆಯಲಾರದೆ ಭವಿಷ್ಯ ಹೇಳುವವರ, ವಾಸ್ತು ತಜ್ಞರ ಮುಂದೆ ಕೈ ಚಾಚಿ ನಿಂತು ‘ಮುಂದೆ ಹೇಗೆ?’ ಎಂದು ಕೇಳುತ್ತಿದ್ದಾರೆ. (ವಿಜ್ಞಾನ ಓದಿ ಈ ಸ್ಥಿತಿ ತಲುಪಬೇಕಾದರೆ ಅವರ ಮಾನಸಿಕ ಸ್ಥಿತಿ ಹೇಗಿದೆಯೆಂದು ನಾವೇ ಲೆಕ್ಕ ಹಾಕಿಕೊಳ್ಳಬಹುದು)
ಈ ಕ್ಷೇತ್ರ ಕುಸಿಯುತ್ತಿದೆ ಎಂಬುದು ಈಗ ಖಾತ್ರಿಯಾಗುತ್ತಿದೆ. ಜೊತೆಗೆ  ಇತರ ಕ್ಷೇತ್ರಗಳೂ ಇದೇ ರೀತಿ ಸ್ವಯಂಚಾಲೀಕರಣ (ಆಟೋಮೇಷನ್), ಹಾಗೂ ಉನ್ನತ ತಾಂತ್ರಿಕತೆಯನ್ನುಪಯೋಗಿಸಿಕೊಂಡು ತಮ್ಮಲ್ಲಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿವೆ. ಬಿಪಿಓಗಳು, ಕಾಲ್ ಸೆಂಟರ್‍ಗಳು, ಲೆಕ್ಕಪತ್ರ ಪರಿಶೋಧಕರು, ಅಕೌಂಟಿಂಗ್ ಕ್ಷೇತ್ರ, ರಿಟೇಲ್ ಕ್ಷೇತ್ರ, ಹೀಗೆ ಇನ್ನೂ ಹಲವು ಕ್ಷೇತ್ರಗಳು ಅದೇ ದಾರಿಯಲ್ಲೇ ಸಾಗುತ್ತಿವೆ.

ಹೀಗೇಕೆ? 
ಯಾವುದೇ ಸಮಾಜದಲ್ಲೂ ಜ್ಞಾನ ತಂತ್ರಜ್ಞಾನ ಬೆಳೆಯುತ್ತಾ ಹೋದಂತೆ ಉತ್ಪಾದನೆ ಕೂಡ ಬೆಳೆಯಲು ಸದಾವಕಾಶ ದೊರಕುತ್ತದೆ. ಉತ್ಪಾದನೆ ಹೆಚ್ಚಿದಂತೆ ಜನರ ಬೇಡಿಕೆಗಳ ಪೂರೈಕೆ ಕೂಡ ಸುಲಭವಾಗಿ ಆಗುತ್ತದೆ. 

ಆದರೆ ನಮ್ಮದು ಬಂಡವಾಳಶಾಹಿ ಆರ್ಥಿಕತೆ. ಇಲ್ಲಿ ಬಂಡವಾಳ ಹೂಡಿದವನು ತನ್ನ ಕೆಳಗೆ ಇತರರನ್ನು ಕೆಲಸಕ್ಕಿಟ್ಟುಕೊಂಡು ಗರಿಷ್ಠ ಲಾಭವನ್ನು ಅರಸುತ್ತಾ ಹೋಗುತ್ತಾನೆ. ಹಾಗೆಯೇ ನಮ್ಮ ದೇಶಕ್ಕೆ ವಿದೇಶಿ ಕಂಪೆನಿಗಳು ತಮ್ಮ ಅವಶ್ಯಕತೆಗಾಗಿ ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಯಲು ಸಿದ್ಧರಿರುವ, ಹಾಗೂ ಅಗತ್ಯ ಕೌಶಲ್ಯ ಹಾಗೂ ತಂತ್ರಜ್ಞಾನದ ಅರಿವಿರುವವರನ್ನು ಅರಸಿ ಬಂದರು. ಆಗಿನ್ನೂ ಐಟಿ ಕ್ಷೇತ್ರ ತೆರೆದುಕೊಳ್ಳುತ್ತಿದ್ದ ಸಮಯ. ಹಾಗಾಗಿ ನಮ್ಮಲ್ಲಿ ಇಂಗ್ಲೀಷ್‍ನಲ್ಲಿ ವ್ಯವಹರಿಸಬಲ್ಲ, ತಕ್ಕ ಮಟ್ಟಿಗೆ ತಮ್ಮ ಅಗತ್ಯಕ್ಕೆ ಅನುಸಾರವಾಗಿ ಕೆಲಸ ಮಾಡಬಲ್ಲವರನ್ನು ಈ ಕಂಪೆನಿಗಳು ಕೆಲಸಕ್ಕೆ ತೆಗೆದುಕೊಂಡವು. ರೂಪಾಯಿ ಲೆಕ್ಕದಲ್ಲಿ ಅವರು ಕೊಡುವ ಸಂಬಳ ಹೆಚ್ಚಿರುತ್ತಿತ್ತು. ಆದರೆ ನಮ್ಮ ಯುವಜನರ ಶ್ರಮದಿಂದ ಅವರಿಗೆ ಬರುತ್ತಿದ್ದ ಲಾಭಕ್ಕೆ ಹೋಲಿಸಿದರೆ ಅದು ಏನೇನೂ ಅಲ್ಲ. ಈ ಉದ್ಯೋಗಗಳ ಇನ್ನೊಂದು ಆಯಾಮವನ್ನು ಬಹಳಷ್ಟು ಜನ ಗಣನೆಗೆ ತೆಗೆದುಕೊಂಡಿಲ್ಲ. ಅದೆಂದರೆ ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಆರೋಗ್ಯದ ಮೇಲಾದ ಪರಿಣಾಮ, ಸತತ ಒತ್ತಡದಿಂದಾಗಿ ಅವರ ಜೀವನದಲ್ಲಿ ಆಗುತ್ತಿದ್ದ ಏರುಪೇರುಗಳು, ಪ್ರತಿ ಬಾರಿ ಪರ್ಫಾಮೆನ್ಸ್ ರಿವ್ಯೂ (ಕೆಲಸದಲ್ಲಿ ನೈಪುಣ್ಯ) ನಡೆದಾಗಲೂ ‘ನಾಳೆ ತನ್ನ ಕೆಲಸ ಇರುತ್ತದೋ ಇಲ್ಲವೋ’ ಎಂಬ ಅನಿಶ್ಚಿತತೆ, ಆತಂಕ, ಸದಾ ಕೆಲಸದ ಒತ್ತಡದಿಂದ ಇರುವ ಕಾರಣ ಮಾನವ ಸಂಬಂಧಗಳಲ್ಲಿ ಬರುತ್ತಿದ್ದ ಬಿರುಕುಗಳು, ಹೆಚ್ಚಿದ ಮಾನಸಿಕ ಖಾಯಿಲೆಗಳು, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಗಳು- ಈ ಟೆಕಿಗಳ ಭಾವನಾತ್ಮಕ ಜೀವನ (ಎಮೊಷನಲ್ ಲೈಫ್) ಬಹಳಷ್ಟು ಹದಗೆಟ್ಟಿತ್ತು ಎಂಬುದಕ್ಕೆ ಅವರ ಮಧ್ಯೆ ಗಣನೀಯವಾಗಿ ಹೆಚ್ಚುತ್ತಿರುವ  ವಿವಾಹ ವಿಚ್ಛೇದನದ ಅಂಕಿ ಸಂಖ್ಯೆಗಳೇ ಹೇಳುತ್ತವೆ.. ಹೀಗೆ ಈ ಐಟಿ ಜೀವನದ ಕರಾಳ ಮುಖದ ಬಗ್ಗೆ ಯಾರೂ ಹೆಚ್ಚು ಮಾತನಾಡುತ್ತಿರಲಿಲ್ಲ. ಏಕೆಂದರೆ ಆ ಮಾಯಾಜಗತ್ತಿಗೆ ಕಾಲಿಟ್ಟವರು ಅಲ್ಲಿ ಕೆಳಗೆ ಕತ್ತಲೆಯಿದೆ ಎಂದು ಒಪ್ಪಿಕೊಂಡರೆ ಸಮಾಜ ಅವರು ‘ಸೋತಿದ್ದಾರೆ' ಎಂದು ಹೇಳಿಬಿಡುತ್ತದೇನೋ ಎಂಬ ಭಯ. ಹಾಗಾಗಿ ತಮ್ಮ ಜೀವನ ಅತ್ಯಂತ ಸುಖಕರವಾಗಿದೆ ಎಂದು ಬಿಂಬಿಸಿ (ಫೇಸ್ ಬುಕ್, ವಾಟ್ಸ್ಯಾಪ್ ಗಳಿರುವುದೇ ಈ ಕೆಲಸಕ್ಕೆ ಎಂಬಂತೆ) ಸಂತೋಷದ ಮುಖವಾಡ ಧರಿಸಿ ಓಡಾಡುತ್ತಿದ್ದವರಿಗೆ ಈಗ ನಿಜ ಸ್ಥಿತಿಯನ್ನು ಹೇಳಿಕೊಳ್ಳಲೇ ಬೇಕಾದ ಅನಿವಾರ್ಯ ಬಂದಿದೆ.

ಹೀಗೆ ಲಾಭದ ದೃಷ್ಟಿಯಿಂದ ನೋಡಿದಾಗ ಮಾಲೀಕ ಯಾವುದೇ ತೊಂದರೆ ಇಲ್ಲದೆ ತನ್ನ ಕೆಲಸ (ಉತ್ಪಾದನೆ) ಬೇಗ ಆಗಬೇಕು ಎಂದು ಆಲೋಚಿಸುತ್ತಿರುತ್ತಾನೆ. ಯಂತ್ರಗಳೇ ಆ ಕೆಲಸವನ್ನು ಬೇಗ ಮಾಡಿದರೆ? ಅವು ಸುಸ್ತಾಗುವುದಿಲ್ಲ, ರಜೆ, ವೇತನ ಹೆಚ್ಚಳ ಕೇಳುವುದಿಲ್ಲ, ವಿಶ್ರಮಿಸುವುದಿಲ್ಲ. ಹೀಗೆಂದು ಯೋಚನೆ ಮಾಡುತ್ತಾನೆ. ಹಾಗಾಗಿ ಅವನಿಗೆ ಮನುಷ್ಯರಿಗಿಂತ ಯಂತ್ರಗಳೇ ಆ ಕೆಲಸವನ್ನು ಮಾಡಲು ಸಾಧ್ಯವಾದರೆ ಅವನು ಅದನ್ನೇ ಅಳವಡಿಸಿಕೊಳ್ಳುತ್ತಾನೆ. ಹಾಗಾಗಿ ನಿರ್ದಯವಾಗಿ ಜನರನ್ನು ಹೊರದಬ್ಬುತ್ತಾನೆ.

ಈ ಐಟಿ ಕ್ಷೇತ್ರದ ಇನ್ನೊಂದು ಸಮಸ್ಯೆಯೆಂದರೆ, ಇದು ಯಾವುದೇ ಉತ್ಪಾದನೆಯಲ್ಲಿ ತೊಡಗಿರಲಿಲ್ಲ.ಭಾರತದಲ್ಲಿ ಈ ಉದ್ಯಮ ಸಂಪೂರ್ಣವಾಗಿ ವಿದೇಶಗಳ ವ್ಯಾಪಾರದ ಮೇಲೆ ಅವಲಂಬಿತವಾಗಿತ್ತು. ಅಲ್ಲದೆ ಇದು ಕೇವಲ ಸೇವಾವಲಯಕ್ಕೇ ಹೆಚ್ಚು ಸೀಮಿತವಾಗಿತ್ತು.  ಹಾಗಾಗಿ ಎಂದಿಗೂ ಇದು ಅಭದ್ರ ನೆಲೆಯ ಮೇಲೆಯೇ ನಿಂತಿತ್ತು. ವಿದೇಶಗಳಲ್ಲಿ ಆರ್ಥಿಕತೆ ನಡುಗಿದರೆ ಅದರ ಅನುಭವ ಇಲ್ಲೂ ಆಗುತ್ತಿತ್ತು ಎನ್ನುವುದಕ್ಕೆ 2007- 08 ರಲ್ಲಿ ಕಾಣಿಸಿದ ಆರ್ಥಿಕ ಕುಸಿತ ಒಂದು ಜ್ವಲಂತ ಉದಾಹರಣೆ.  ಈಗ ಪ್ರಸಕ್ತ ಪರಿಸ್ಥಿತಿಯಲ್ಲೂ ಕೂಡ ಅದೇ ಕಾಣಿಸಿಕೊಳ್ಳುತ್ತಿದೆ. ಅಮೇರಿಕಾ, ಯೂರೋಪು ದೇಶಗಳ ಆರ್ಥಿಕತೆಗಳು ಬಿಕ್ಕಟ್ಟಿನಲ್ಲಿವೆ, ಕೆಲವೆಡೆ ಅವು ದಿವಾಳಿಯ ಅಂಚಿನಲ್ಲಿವೆ. ಅಲ್ಲಿನ  ಜನ ಸರ್ಕಾರಗಳ ವಿರುದ್ಧ ದಂಗೇಳುತ್ತಿದ್ದಾರೆ, ಅವರನ್ನು ತಣಿಸಲು ಆ ಸರ್ಕಾರಗಳು ತಮ್ಮ ದೇಶದಲ್ಲಿರುವ ಉದ್ಯೋಗಗಳನ್ನು ಹೊರ ದೇಶದವರಿಗೆ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿ ನಮ್ಮಲ್ಲಿ ಐದು ಜನ ಮಾಡುವ ಕೆಲಸವನ್ನು ಒಂದು ರೋಬೊಟ್ ಮಾಡಲು ಸಾಧ್ಯವಾದರೆ ಆಗ ಯಂತ್ರವನ್ನೇ ಉಪಯೋಗಿಸಲಿಚ್ಛಿಸುತ್ತಾರೆ. ಭಾರತದಲ್ಲಿ ಈಗ ಬಂದಿರುವ ಸ್ಥಿತಿ ಇದು. 

ಇದರ ಜೊತೆಗೆ ತಂತ್ರಜ್ಞಾನ ಮುಂದುವರೆದಿದೆ ಆದರೆ ಅದಕ್ಕೆ ಹೊಂದಿಕೊಳ್ಳಲು ನಮ್ಮ ಜನರಿಗೆ ಸಾಕಷ್ಟು ಸಿದ್ಧತೆಯಿಲ್ಲ, ಹಾಗಾಗಿ ಬದಲಾದ ಸನ್ನಿವೇಶದಲ್ಲಿ ಈ ಉದ್ಯೋಗಿಗಳಿಗೆ ಮತ್ತೆ ತರಬೇತಿ ನೀಡುವುದಕ್ಕೆ ಹಣ, ಸಮಯ ಏಕೆ ವೆಚ್ಚ ಮಾಡಬೇಕು? ಬೇಕಾದರೆ ಅವರೇ ಇತರೆಡೆ ತಮ್ಮದೇ ಖರ್ಚಿನಲ್ಲಿ, ಕಂಪೆನಿಯ ಸಮಯ ಉಪಯೋಗಿಸದೇ, ತಮ್ಮ ಬಿಡುವಿನಲ್ಲಿ ಹೋಗಿ ಕಲಿಯಲಿ ಎಂಬುದು ಕಂಪೆನಿಗಳ ಧೋರಣೆ. ಇಷ್ಟೇ ಅಲ್ಲ, ಸ್ವಲ್ಪ ಅನುಭವವಿರುವ ಈ ಎಂಜಿನಿಯರ್ ಗಳು ಈಗ 30 ರ ಆಸುಪಾಸಿನಲ್ಲಿರುವವರು, ಅವರು ಬದಲಾವಣೆಗೆ ಬೇಗ ಒಗ್ಗಿಕೊಳ್ಳುವರೇ, ಅವರು ಒಗ್ಗಿಕೊಳ್ಳುವ ವರೆಗೂ ಕಾದರೆ ತಮ್ಮ ಲಾಭಕ್ಕೆ ಕುತ್ತು- ಇದು ಕಂಪೆನಿಗಳ ಲೆಕ್ಕಾಚಾರ. 

ಇನ್ನೊಂದು ಪ್ರಮುಖ ಅಂಶವೆಂದರೆ- ಈ ಕಂಪೆನಿಗಳು ಈವರೆಗೂ ಕ್ಯಾಂಪಸ್ ಇಂಟರ್‍ವ್ಯೂ ಗಳನ್ನು ನಡೆಸುತ್ತಿದ್ದದ್ದು ವಿದ್ಯಾರ್ಥಿಯುವಜನರ ಮೇಲಿನ ಪ್ರೀತಿಯಿಂದಾಗಿ ಯಂತೂ ಅಲ್ಲವೇ ಅಲ್ಲ. ಈ ಉದ್ಯಮ ಬೆಳೆಯುವ ಹಂತದಲ್ಲಿದ್ದಾಗ ಇದರ ಹೊಟ್ಟೆಗೆ ಬಹಳಷ್ಟು ಜನ ಬೇಕಾಗಿದ್ದರು. ಆದರೆ ನಮ್ಮ ಸರ್ಕಾರಗಳ ಅಲ್ಪ ದೃಷ್ಟಿಯ ನೀತಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳ ಮಹದಾಸೆಗಳಿಂದಾಗಿ ಎಲ್ಲೆಲ್ಲೂ ಎಂಜಿನಿಯರಿಂಗ್ ಕಾಲೇಜುಗಳು ತೆರೆದುಕೊಂಡವು. 2006-07 ರಲ್ಲಿ 1511 ಎಂಜಿನಿಯರಿಂಗ್ ಕಾಲೇಜುಗಳು ಇದ್ದದ್ದು 2014-15 ರ ಹೊತ್ತಿಗೆ ಈ ಸಂಖ್ಯೆ 3345ಕ್ಕೆ ಏರಿತ್ತು. ಪ್ರತಿ ವರ್ಷ ಕಡಿಮೆ ಎಂದರೆ 8 ರಿಂದ 10  ಲಕ್ಷ ಎಂಜಿನಿಯರುಗಳು, (ಹಾಗೂ 1.2 ಕೋಟಿ ಇತರ ಪದವೀಧರರು) ಕಾಲೇಜುಗಳಿಂದ ಹೊರಬೀಳುತ್ತಾರೆ. ಈಗ ಈ ಕಂಪೆನಿಗಳಿಗೆ ಸುಲಭವಾಗಿ ಜನ ಸಿಗಲಾರಂಭಿಸಿದರು.ಒಬ್ಬ ಬಿಟ್ಟು ಹೋದರೆ ಅವನ ಬದಲಿಗೆ ಲಕ್ಷ ಜನ ಕಾದಿರುತ್ತಾರೆ. ಹಾಗಾಗಿ ಅವರು ಉದ್ಯೋಗಿಗಳನ್ನು ತೆಗೆದುಹಾಕುವಾಗ- “ಇವನನ್ನು ಇಟ್ಟುಕೊಳ್ಳುವುದಕ್ಕಿಂತ, ಇವನ ಬದಲಿಗೆ ಹೊಸಬನನ್ನು ತೆಗೆದುಕೊಂಡರೆ, ಅವನಿಗೆ ಕಡಿಮೆ ಸಂಬಳ ನೀಡಿ ಇನ್ನೂ ಹೆಚ್ಚಿನ ಕೆಲಸ ತೆಗೆದುಕೊಳ್ಳಬಹುದು. ಅಲ್ಲದೆ ಅವನು ಹೊಸಬನಾಗಿರುವುದರಿಂದ ಅವನಿಗೆ ತರಬೇತಿ ನೀಡುವುದು ಕೂಡ ಹೆಚ್ಚು ಸುಲಭ, ಏಕೆಂದರೆ ಕಡಿಮೆ ವಯಸ್ಸಿನವರು ಬದಲಾವಣೆಗೆ ಬೇಗ ಹೊಂದಿಕೊಳ್ಳುತ್ತಾರೆ”  ಎಂದು ಯೋಚಿಸುತ್ತಾರೆ. ಅಧಿಕ ಪೂರೈಕೆ, ಕಡಿಮೆ ಬೇಡಿಕೆಯ ಕಾರಣ ಎಂಜಿನಿಯರುಗಳಿಗೆ ಈಗ ಬೆಲೆಯೇ ಇಲ್ಲದಂತಾಗಿದೆ. 

ಇನ್ನು ಈ ಸಮಸ್ಯೆ ಕೇವಲ ಐಟಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲೆಡೆ ಯಂತ್ರೀಕರಣ ಹೆಚ್ಚುತ್ತಿದ್ದು ಇದು ಈಗಾಗಲೇ ತನ್ನ ಪ್ರಭಾವವನ್ನು ಬೀರಲಾರಂಭಿಸಿದೆ- ಈಗಾಗಲೇ ಜೂನ್ 2016ರಿಂದ  ಬಿಪಿಓ ಗಳಲ್ಲಿ  16000 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಉತ್ಪಾದನಾ ಕ್ಷೇತ್ರದಲ್ಲಿ ಎಲ್ ಎಂಡ್ ಟಿ ಯಲ್ಲಿ 2016 ರಿಂದ ಇಲ್ಲಿವರೆಗೂ 6 ತಿಂಗಳಲ್ಲಿ 14,000, ಟಾಟಾ ಮೋಟರ್ಸ್ ನಲ್ಲಿ ಮ್ಯಾನೇಜರ್ ಮಟ್ಟದಲ್ಲಿದ್ದ 1,500 ಉದ್ಯೋಗಿಗಳು, ಮಾರುತಿ ಸುಜುಕಿಯಲ್ಲಿ (ಹರಿಯಾಣದ ಮನೇಸಾರ್ ನಲ್ಲಿ) 7,000 ಕಾರ್ಮಿಕರಿದ್ದರೆ, 1,100ರೊಬೊಟ್‍ಗಳು ಕೆಲಸಕ್ಕಿವೆ  ಇಷ್ಟು ಮಾತ್ರವಲ್ಲ, ಆ ಉದ್ಯೋಗಗಳೇ ಮಾಯವಾಗಿವೆ. ಐಟಿ ಆಧಾರಿತ ಇತರ ಸೇವೆಗಳ ಮೇಲೆ ಇದರ ಪ್ರಭಾವ ಬೀರಲಿದೆ. ಇನ್ನು ಜವಳಿ, ಆಹಾರ ಸಂಸ್ಕರಣೆ ಉದ್ಯಮದಲ್ಲಿ ಕೂಡ ಹೆಚ್ಚಿನ ಯಂತ್ರೀಕರಣ ಬರಲಿದೆ. 2017 ರಲ್ಲಿ 8600  ರಿಟೇಲ್ ಮಳಿಗೆಗಳು ಮುಚ್ಚಿಹೋಗಲಿವೆ. ಕಳೆದ ಜುಲೈ -ಸೆಪ್ಟೆಂಬರ್ 2016 ರಿಂದ ಈಗಾಗಲೇ 16,000 ಉದ್ಯೋಗಗಳು ಹೋಗಿವೆ. ಹೀಗೆ ಐಟಿ ಮತ್ತಿತರ ಸಂಬಂಧಿತ ಕ್ಷೇತ್ರಗಳಲ್ಲಿ ಒಟ್ಟು 60 ಲಕ್ಷ ಉದ್ಯೋಗಿಗಳಿದ್ದು ಅದರಲ್ಲಿ ಈ ವರ್ಷ 15 ಲಕ್ಷ ಜನ  ಕೆಲಸ ಕಳೆದುಕೊಳ್ಳಲಿದ್ದಾರೆ. 

ವಿಶ್ವ ಬ್ಯಾಂಕ್ ಹೇಳುವ ಪ್ರಕಾರ ಭಾರತದಲ್ಲಿ ಸಧ್ಯಕ್ಕಿರುವ ಉದ್ಯೋಗಗಳಲ್ಲಿ ಶೇ.69 ಉದ್ಯೋಗಗಳು ತಂತ್ರಜ್ಞಾನದಿಂದಾಗಿ ಬದಲಾಗಲಿವೆ ಅಥವಾ ಮಾಯವಾಗಲಿವೆ.  ಕೆಲವು ಸಮೀಕ್ಷೆಗಳ ಪ್ರಕಾರ 2021 ರ ಹೊತ್ತಿಗೆ ಇಡೀ ವಿಶ್ವದಲ್ಲಿ ಹೆಚ್ಚಿದ ತಂತ್ರಜ್ಞಾನದಿಂದಾಗಿ ಮಾಯವಾಗಲಿರುವ ಪ್ರತಿ 10 ಉದ್ಯೋಗಗಳಲ್ಲಿ 4 ಭಾರತದಲ್ಲಿರುತ್ತವೆ. ಇನ್ನು ಮುಂದೆ ಮಧ್ಯಮ ವರ್ಗದ ಉದ್ಯೋಗಗಳು- ಅಂದರೆ ‘ಬಿಳಿ ಕಾಲರ್’ ಉದ್ಯೋಗಗಳು ಮಾಯವಾಗಲಿವೆ. ಐಟಿ, ಆರ್ಥಿಕ ಸೇವೆಗಳು, ಟಿಲಿಕಾಂ ಒಟ್ಟು ಸೇರಿ 60 ಲಕ್ಷ ಉದ್ಯೋಗಗಳಿದ್ದು ಅದರಲ್ಲಿ ಬಹಳ ಜನರ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಬರುವ ವರ್ಷಗಳಲ್ಲಿ ನಿರುದ್ಯೋಗ ಮತ್ತು ಶಿಕ್ಷಣದ ಸಾಲಗಳಿಂದಾಗಿ ಯುವಜನರ ಬದುಕು ಕಷ್ಟವಾಗಲಿದೆ ಎಂದೂ ಕೂಡ ಹೇಳುತ್ತಿವೆ. ಜೊತೆಗೆ ಸಾಮಾಜಿಕ ಅಸಮತೋಲನ ಕೂಡ ಹೆಚ್ಚಲಿದೆ ಎಂದು ಕೂಡ ಹೇಳುತ್ತಿವೆ. 

2020ರ ಹೊತ್ತ್ತಿಗೆ ಇಡೀ ವಿಶ್ವದಲ್ಲೇ ಅತಿ ಹೆಚ್ಚು ಜನ 30 ರ ವಯಸ್ಸಿನ ಯುವಕರು ಭಾರತದಲ್ಲಿರಲಿದ್ದಾರೆ, ಇದು ‘ಡೆಮಾಗ್ರೆಫಿಕ್ ಡಿವಿಡೆಂಡ್’ – ಅಂದರೆ ಜನಸಂಖ್ಯಾ  ಲಾಭ- ಎಂದು ಕೆಲ ವರ್ಷಗಳಿಂದ ಹೇಳಲಾಗುತ್ತಿದೆ.  ಆದರೆ ನಿಜ ಸ್ಥಿತಿ ನೋಡಿದರೆ ಈ ಯುವಕರ ಮುಂದೆ ಎಂತಹ ಭವಿಷ್ಯವಿದೆ ಎನ್ನುವುದು ಕೂಡ ಈಗ ಸ್ಪಷ್ಟವಾಗುತ್ತಿದೆ. ಹಾಗಾದರೆ ಯುವಜನರ ಇದನ್ನೆಲ್ಲಾ ತಮ್ಮ ಹಣೆಬರಹ ಎಂದು ಇದನ್ನೆಲ್ಲಾ ಒಪ್ಪಿಕೊಳ್ಳುತ್ತಾರೋ ಅಥವಾ ಇದೆಲ್ಲದರ ಮಧ್ಯೆ ಭೂತಾಕಾರವಾಗಿ ಬೆಳೆದು ಇನ್ನೂ ಹೆಚ್ಚು ಬೆಳೆಯುತ್ತಿರುವ ಈ ಸಮಸ್ಯೆಗೆ ಪರಿಹಾರವಿಲ್ಲದ ಸರ್ಕಾರಗಳ ವಿರುದ್ಧ ಸಿಡಿದೇಳುತ್ತಾರೋ, ಎಂಬುದು ನಮ್ಮ ಮೇಲೆ ಅವಲಂಬಿತವಾಗಿದೆ. ವಿಶ್ವದಾದ್ಯಂತ ಯುವಜನರು ಇಂತಹ ಸಮಸ್ಯೆಗಳ ವಿರುದ್ಧ ಹೋರಾಟಕ್ಕಿಳಿದಿದ್ದಾರೆ, ಇನ್ನು ನಮ್ಮ ಯುವಜನರು  ಹಿಂದಿರಲಾದೀತೆ? ******

- ಡಾ.ಸುಚೇತಾ ಪೈ


ಕಾಮೆಂಟ್‌ಗಳಿಲ್ಲ: