Pages

ಸ್ತ್ರೀದನಿ - ಏನು ಮಾಡಲಿ?


 ಜೀವನ ಒಂದು ನಾಟಕ ರಂಗ 
ನಾ ಪಾತ್ರಧಾರಿ, ಆವ ಸೂತ್ರದಾರ 
ಅವನಿಚ್ಛೆಯೇ ಅಂತಿಮ 
ಏನಾದರಾಗಲೀ ನಾ ಸಂಪೂರ್ಣ ಸೋತು ಶರಣಾದೆ ಬದುಕಿನ ಬವಣೆಗಳಿಗೆ!!!
ಕ್ಷಮಿಸಿ, ಕೇವಲ ಮನದ ತಳಮಳ ಬೇಗೆಯನ್ನು ನನ್ನೊಳಗೆ ನುಂಗಿಕೊಳ್ಳೋದ್ರಿಂದ ಏನು ಪ್ರಯೋಜನವಿಲ್ಲ. ಬಹುಶಃ ನನ್ನ ಜೀವನದ ಸಂಕಷ್ಟಗಳ ಸರಮಾಲೆಯನ್ನು ನಿಮ್ಮ ಮುಂದೆ ಬಚ್ಚಿಡೋದಕ್ಕಿಂತ ಬಿಚ್ಚಿಟ್ಟರೆ, ಮುಂದಿನ ಕೆಲವು ದಿನಗಳಾದ್ರು ಜೀವನದ ಜೊತೆ ಹೋರಾಟ ನಡೆಸಿ ಬದುಕಬಹುದೇನೋ?
ಅಂದ ಹಾಗೆ, ನಾನು ಶಿವಾನಿ. ಓದಿದ್ದು ೮ನೇ ತರಗತಿ. ಬಡ ಹಳ್ಳಿ ಕುಟುಂಬ. ಸೇರಿದ್ದು ನಾದಿನಿ, ಓರಗಿತ್ತಿ, ಭಾವ, ಅತ್ತೆ ಮಾವ ಇರುವ ಮನೆಗೆ. ಅಲ್ಲಿ ನನಗೆ ಸಿಕ್ಕಿದ್ದು ಕಿರುಕುಳ, ಗುಲಾಮಗಿರಿಯ ಕೆಲಸ. ಹೀಗಾಗಿ ನೊಂದು ಗಂಡನೊಂದಿಗೆ, ಮನೆ ಬಿಟ್ಟು ಬೆಂಗಳೂರಿನ ಮಾಯಾನಗರಿಗೆ ಬಂದಿಳಿದು, ಬದುಕಿ ಸಾಧಿಸಬೇಕೆಂಬ ಛಲದಿಂದ ಇದ್ದ ಸ್ವಲ್ಪ ಅಲ್ಪ ಒಡವೆ ಮಾರಿ ಒಂದು ಸಣ್ಣ ಅಂಗಡಿ ಹಾಕಿಕೊಟ್ಟೆ. ಅದೃಷ್ಟವಶಾತ್ ನಾವು ತುಂಬಾ ಹಣ ಸಂಪಾದಿಸಿ ಒಳ್ಳೆಯ ಸ್ಥಾನ ಗಳಿಸಿದೆವು. ನನಗೆ ಅಷ್ಟೊತ್ತಿಗೆ ಎರಡು ಮಕ್ಕಳು. ಹೀಗೆ ಕಾಲಚಕ್ರ ಉರುಳುತ್ತಾ ನನ್ನ ಗಂಡ ಜೂಜಿನ ಸಹವಾಸಕ್ಕೆ ಬಿದ್ದ. ವಿರೋಧಿಸಿದ ನನ್ನನ್ನು ಮನೆಯಿಂದ ಹೊರಹಾಕಿಬಿಟ್ಟ. ನಾನು ಮಕ್ಕಳ ಸಮೇತ ಹೊರಬಿದ್ದೆ. ಅವನ ಕ್ರೂರತೆಗೆ ನನ್ನ ಹೃದಯ ಛಿದ್ರವಾಯಿತು. ಛಲದಿಂದ ನಾನು ಗಟ್ಟಿ ನಿರ್ಧಾರ ಮಾಡಿ ಕೂಡಿಟ್ಟ ಅಲ್ಪಸ್ವಲ್ಪ ಹಣದಿಂದ ಬೇರೆ ಅಂಗಡಿ ವ್ಯಾಪಾರ ಶುರು ಮಾಡಿದೆ. ೧೦ನೇ ತರಗತಿ ಪರೀಕ್ಷೆ ಬರೆದೆ. ಆದರೆ ದಿನೇದಿನೇ ಪದೇಪದೇ ನನ್ನ ಗಂಡನ ದ್ವೇಷ ನನ್ನ ಬದುಕನ್ನು ನಿರ್ನಾಮಗೊಳಿಸಿಬಿಟ್ಟಿತು. ನನ್ನ ಅಂಗಡಿಯನ್ನು ನಾಶಮಾಡಿದ. ಅವನಿಂದ ತುಂಬಾ ದೂರ ಹೋದೆ. ಅಲ್ಲಿ ಬಾಡಿಗೆ ಮನೆಯಲ್ಲಿ ನನ್ನ ಅಸಹಾಯಕತೆಯನ್ನು ಮನೆಯ ಮಾಲೀಕ, ರೌಡಿಗಳು ದುರುಪಯೋಗ ಪಡಿಸಿಕೊಳ್ಳಲೆತ್ನಿಸಿದರು. 
ತವರಿಗೆ ಹೋಗಲು ನನ್ನ ತಂದೆ ತಾಯಿಯರಿಲ್ಲ. ಅಣ್ಣ, ಅಕ್ಕಂದಿರು ತಂತಮ್ಮ ಕುಟುಂಬದ ತಾಪತ್ರಯದಲ್ಲಿದ್ದಾರೆ. ಸ್ವತಂತ್ರವಾಗಿ ಬದುಕುವ ಛಲವಿದ್ದರೂ ನನ್ನ ಗಂಡನಂತಹ ಹೇಡಿ, ಸಮಾಜದ್ರೋಹಿ ಗಂಡಸಿನಿಂದ ಆಗುತ್ತಿರುವ ದೌರ್ಜನ್ಯ ಹಾಗೂ ಗಂಡಿಲ್ಲದ ಹೆಣ್ಣನ್ನು ಸಮಾಜ ನೋಡುತ್ತಿರುವ ರೀತಿ - ಈ ಎರಡರ ನಡುವೆ ನನಗೆ ಹಾಗೂ ಮಕ್ಕಳಿಗೆ ಸಾವೊಂದೇ ಪರಿಹಾರ ಅನ್ನೋದು ನನ್ನ ಮನಸ್ಸಿಗೆ ಬಂದಿರುವ ಏಕೈಕ ನಿರ್ದಾರ. ಹೇಳಿ ನಾನು ಆತ್ಮಹತ್ಯೆಗೆ ಶರಣಾಗಲೋ? ಅಥವಾ ಬದುಕನ್ನು ಎದುರಿಸಲೋ? ಎದುರಿಸುವುದಾದರೆ ಅದು ಹೇಗೆ? ಇದೇನಾ ಹೆಣ್ಣಿಗೆ ಸಮಾಜ ಕೊಡುವ ಬಹುಮಾನ?.... 
ನಾನು ಶಿವಾನಿ ನಿಮ್ಮ ಉತ್ತರದ ನಿರೀಕ್ಷೆಯಲ್ಲಿದ್ದೇನೆ  . . . . .  
- ಜಮುನಾ ವಿ 

ಕಾಮೆಂಟ್‌ಗಳಿಲ್ಲ: