Pages

ಅನುವಾದಿತ ಕವಿತೆ - ಬಡವನ ಸೇವೆ ಭಗವಂತನ ಸೇವೆ


     ಬಡವನ ಸೇವೆ ಭಗವಂತನ ಸೇವೆ
(ರವೀಂದ್ರನಾಥ ಟಾಗೋರ್ ರವರ  True Worship of God is to Serve the Poor  ಕವನದ ಸರಳಾನುವಾದ)
ನೀನಾರ ಧ್ಯಾನವನು ಗೈಯುತಿಹೆ ಮೂಲೆಯೊಳು
ಮುಚ್ಚಿದಾ ಕಿಟಕಿಗಳ ಗುಡಿಯೊಳಗೆ ಒಂಟಿಯೊಳು?    
ಬಿಸುಡಲ್ಲಿ ಮಣಿಸರವ, ಗೀತೆಗಳ ಪಠನೆಯ
ಕಣ್ತೆರೆದು ನೋಡೆದುರು, ದೇವ ಗುಡಿಯೊಳಗಿಲ್ಲ||

ಗಟ್ಟಿನೆಲವನು ಬಿಡದೆ ಸತತ ಉಳುವವನಾ
ಕಲ್ಲನೊಡೆಯುತೆ ನುಣುಪುದಾಂ ಮಾಡುವನಾ;
ಮನದೊಳಗೆ ಅನವರತ ನೆಲೆಸಿರುವನು.
ಧೂಳಿನರಿವೆಯೊಳು ದೇವ ದುಡಿಯುತಿರೆ,
ಇಳಿ ಬಿಸುಟು, ನಿಲುವಂಗಿ, ಧೂಳಿನೊಳಗೆ||

ಜಗದ ಸೃಷ್ಟಿಯ ದೇವ ಬಿಡದೆ ಹೊತ್ತಿರುವಲ್ಲಿ
ಮುಕ್ತಿಯೆಂಬುದ ನೀನದೆಲ್ಲಿ ಪಡೆಯುವೆ ಮನುಜಾ?
ನಲವಿಂದ ದೇವ ತಾ ದುಡಿಯುತಿಹನು ;
ದುಡಿವರೊಳು ಅನವರತ ಬೆರೆತಿರುವನು||

ಜಪವ ಮಂತ್ರಗಳ ನಿಲಿಸಿ ಹೊರಗೆ ಬಾ;
ಧೂಪ ಪುಷ್ಪಗಳನಿರಿಸಿ ಹೊರಗೆ ಬಾ;
ಮಡಿಯರಿದರೇನಂತೆ? ಕೊಳಕಾದರೇನಂತೆ?
ನೋಡವನ ದುಡಿಮೆಯೊಳು, ನಿನ್ಹಣೆಯ ಬೆವರಿನೊಳು||

- ಗಂಗಾಧರಯ್ಯ ಜಿ

ಕಾಮೆಂಟ್‌ಗಳಿಲ್ಲ: