1.ರಜೆ ಕಳೆದು ಶಾಲೆಯ ಪುನರಾರಂಭವೆಂದು ಅವಳಿಗೆ ಖುಷಿಯೋ ಖುಷಿ- ಸಂಭ್ರಮ, ಸಡಗರ. ಅಂದಿನಿಂದ ಶಾಲೆಯ ಮುಂದೆ ಕಡಲೆಕಾಯಿ ಮಾರಿ ತನ್ನ ಮಕ್ಕಳಿಗೆ ಊಟ ಕೊಡಬಹುದೆಂಬ ಸಂತಸ.
2.ಆಕೆ ಒಬ್ಬ ಖ್ಯಾತ ಕಲಾವಿದೆ. ಕಟ್ಟುನಿಟ್ಟಿನ ಶಿಸ್ತುಗಾತಿ ತಾಯಿ. ತನ್ನ ಮಗ ಉದ್ದ ಗೆರೆಗಳನ್ನು ಸೊಟ್ಟಗೆ ಎಳೆದದ್ದಕ್ಕೆ ಸದಾ ಬಯ್ಯುತ್ತಿದ್ದವಳು ಇಂದು ಮಾತ್ರ ಅವನು ಸೊಟ್ಟಗಿನ ಗೆರೆ ಮಾತ್ರ ಬರೆಯಲಪ್ಪ ಎಂದು ಕಾಯುತ್ತಿದ್ದಳು, ಸಾಯುತ್ತಿದ್ದ ಮಗ ವೆಂಟಿಲೇಟರಿನಲ್ಲಿ ಉಸಿರಾಡುತ್ತಿದ್ದಂತೆ ಅವನ ಇಸಿಜಿಯ ಗೆರೆಯನ್ನೇ ನೋಡುತ್ತಿದ್ದಳಾಕೆ
3.ಅವರು ಅವನ ಅಪ್ಪನನ್ನು ಕರೆದುಕೊಂಡು ಹೋದರು, ಅವನಉ ಮರಳಿದಾಗ ಬರಿಯ ಒಂದು ಬಾವುಟವಾಗಿದ್ದ
4. “ನನ್ನೆಲ್ಲಾ ಆಟಿಕೆಗಳು ಇನ್ನು ನಿನ್ನವೇ” – ಅಣ್ಣ ಸಾಯುವಾಗ ಬರೆದ ಪತ್ರದಲ್ಲಿ ತಮ್ಮನಿಗೆ ಹೇಳಿದ್ದ
5.ಎಲ್ಲರೂ ಪ್ರವಾಹದ ಜೊತೆ ಈಜುತ್ತಾರೆ, ಆದರೆ ಅದರ ವಿರುದ್ಧ ಈಜಿದವರು ಗುರುತಿಸಲ್ಪಡುತ್ತಾರೆ.” ಇದನ್ನು ನಾನು ಪೋಲೀಸರಿಗೆ ವಿವರಿಸುವ ಮುನ್ನವೇ ಅವರು ನನಗೆ ಫೈನ್ ಕಟ್ಟಲು ಹೇಳಿದರು.
6.ಅವರ ಪ್ರೀತಿ ಅನನ್ಯವಾದುದು. ಅವನು ಅವಳನ್ನು ಒದ್ದಾಗಲೆಲ್ಲಾ ಆಕೆಗೆ ಬಹಳ ಸಂತೋಷವಾಗುತ್ತಿತ್ತು. ಅವನು ಇನ್ನಷ್ಟು ಒದೆಯಲಿ ಎಂದು ಮನಸು ಹಂಬಲಿಸುತ್ತಿತ್ತು, ಅವನ ಮೇಲೆ ಅವಳಿಗೆ ಪ್ರೀತಿ ಹೆಚ್ಚುತ್ತಿತ್ತು. ಅವನು ಬಂದ ತಕ್ಷಣ ಅವನನ್ನು ಅಪ್ಪಿಕೊಳ್ಳಬೇಕೆಂದು ಅವಳ ಬಹಳ ಕಾತುರದಿಂದ ಅವನು ಬೇಗ ಹುಟ್ಟಲಿ ಎಂದು ಕಾಯುತ್ತಿದ್ದಳು.
7. 25 ನೇ ವಯಸ್ಸಿಗೆ ನಾನು ಒಂದು ಮಗುವಿನ ತಾಯಿಯಾದೆ, 27 ಕ್ಕೆ ಇಬ್ಬರು ಮಕ್ಕಳ ತಾಯಿಯಾದೆ, ಈಗ 55 ಕ್ಕೆ ನಾನು ಮತ್ತೆ ತಾಯಾಗಿದ್ದೇನೆ. ನನ್ನ ಮಗ ಮದುವೆ ಮಾಡಿಕೊಂಡು ಹೆಂಡತಿಯನ್ನು ಮನಗೆ ಕರೆತಂದಿದ್ದಾನೆ.
8. “ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈ ಹುಡುಗ ಅದೆಷ್ಟು ಅದೃಷ್ಟಶಾಲಿ” ಎಂದರು ನೆರೆಹೊರೆಯವರು. ಅಲ್ಲಿ ದೂರದಲ್ಲೆಲ್ಲೋ ಹುಟ್ಟುವ ಮೊದಲೇ ಮಣ್ಣಿನಲ್ಲಿ ಹೂತುಹೋಗಿದ್ದ ಅವನ ಮೂರು ಅಕ್ಕಂದಿರ ಭ್ರೂಣಗಳು ಕಣ್ಣೀರಿಟ್ಟವು.
9. “ನಾನು ಉದ್ಯೋಗದಲ್ಲಿ ಏರದಂತೆ ನನಗಡ್ಡ ಬಂದೆ, ನಾನು ಮುಖ್ಯಸ್ಥೆಯಾಗಬೇಕಿತ್ತು” ಎಂದು ಮನಸ್ಸಿನಲ್ಲೇ ಶಪಿಸಿಕೊಂಡಳವಳು. ಆ ಪುಟ್ಟ ಕೈಗಳು ಅವಳ ಬೆರಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಎಲ್ಲಾ ಸಿಟ್ಟು ಅಸಮಾಧಾನಗಳನ್ನು ಮರೆತುಬಿಟ್ಟಳು. ಅವಳು ತಾಯಿಯಾಗಿದ್ದಳು.
10. ಸಮುದ್ರದ ದಂಡೆಯ ಮೇಲೆ ಬರಿಗಾಲಿನಲ್ಲಿ ನಿಂತಿದ್ದ ಆ ಬಾಲಕ ಒಂದೇ ವಾಕ್ಯವನ್ನು ಪುನರಾವರ್ತಿಸುತ್ತಲೇ ಇದ್ದ-“ನೀವು ಸಾವಿರ ಬಾರಿ ನನ್ನ ಕಾಲು ಮುಟ್ಟಿದರೂ ನಾನು ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ನನ್ನ ಅಪ್ಪ ಅಮ್ಮನನ್ನು ನನ್ನಿಂದ ದೂರಕ್ಕೆ ಕೊಂಡೊಯ್ದು ಬಿಟ್ಟಿದ್ದೀರಿ”
- (ಅನಾಮಿಕ ಇಂಗ್ಲಿಷ್ ಬರಹಗಾರರ ಪುಟ್ಟ ಕಥೆಗಳ ಅನುವಾದ:
ಡಾ.ಸುಚೇತಾ ಪೈ)
1 ಕಾಮೆಂಟ್:
ಚೆನ್ನಾಗಿವೆ
ಕಾಮೆಂಟ್ ಪೋಸ್ಟ್ ಮಾಡಿ