Pages

ವ್ಯಕ್ತಿ ಪರಿಚಯ - ಡಾ. ಎಚ್ ನರಸಿಂಹಯ್ಯ


ಡಾ. ಎಚ್ ನರಸಿಂಹಯ್ಯ 
"ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ವಿದ್ಯಾರ್ಥಿಯಾಗಿದ್ದಾಗ ನನ್ನ ಉಳಿವಿಗಾಗಿ, ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕೆಂಬ ಹಠ, ಕಾಲೇಜು ಸೇರಿದಾಗ ಸ್ವಾತಂತ್ರ್ಯ ಚಳವಳಿಗಳಲ್ಲಿಯ ಹೋರಾಟ, ಅರ್ಥವಿಲ್ಲದ ನಂಬಿಕೆ, ಸಂಪ್ರದಾಯ, ಮೂಢನಂಬಿಕೆಗಳ, ಪವಾಡಪುರುಷರ ವಿರುದ್ಧ ಹೋರಾಟ ಹೀಗೆ ನನ್ನ ಜೀವನವೆಲ್ಲಾ ಹೋರಾಟವೇ ಆಯಿತು. ನಾನು ಜೀವನದಲ್ಲಿ ಒಂಟಿ, ಹೋರಾಟದಲ್ಲಿ ಒಂಟಿ" ಹೀಗೆ ತಮ್ಮ ಜೀವನದ ಬಗ್ಗೆ ಹೇಳಿಕೊಂಡಿರುವವರು ಛಲವಾದಿ, ವಿಚಾರವಾದಿ, ಶಿಕ್ಷಣತಜ್ಞರು ಚಿಂತಕರಾದ ಡಾ.ಹೆಚ್. ನರಸಿಂಹಯ್ಯನವರು.
ನರಸಿಂಹಯ್ಯನವರು ಹುಟ್ಟಿದ್ದು ಜೂನ್ 6, 1920 ರಂದು ಗೌರಿಬಿದನೂರಿನ ಹೊಸೂರಿನ ಬಡಕುಟುಂಬದಲ್ಲಿ. ತಂದೆ ಹನುಮಂತಪ್ಪ ಮತ್ತು ತಾಯಿ ವೆಂಕಟಮ್ಮ. ಇವರ ಶಿಕ್ಷಣ ಪ್ರಾರಂಭವಾದದ್ದು ಸ್ವಗ್ರಾಮದಲ್ಲಿ. ಶಾಲೆಯಲ್ಲಿ ಪಠ್ಯದ ಜೊತೆಗೆ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ, ಜಾತೀಯತೆ, ಅಸ್ಪೃಶ್ಯತೆ ಮೊದಲಾದವುಗಳ ಬಗ್ಗೆ ಶಿಕ್ಷಕರು ತಿಳಿಸುತ್ತಿದ್ದದ್ದು ಇವರ ಮೇಲೆ ಪ್ರಭಾವ ಬೀರಿತ್ತು. ಇವರು ಗಾಂಧೀಜಿಯವರ ಸರಳಜೀವನದಿಂದ ಪ್ರಭಾವಿತರಾಗಿದ್ದರು.
ಮುಂದಿನ ವಿದ್ಯಾಭ್ಯಾಸಕ್ಕಾಗಿ ತಮ್ಮ ನೆಚ್ಚಿನ ಶಿಕ್ಷಕರ ಸಹಾಯದಿಂದ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಹೀಗೆ ಪ್ರಾರಂಭವಾದ ಇವರ ನ್ಯಾಷನಲ್ ಸ್ಕೂಲಿನೊಂದಿಗಿನ ಸಂಬಂಧ ಕೊನೆಯವರೆಗೂ ಮುಂದುವರಿದಿತ್ತು. ವಿದ್ಯಾರ್ಥಿನಿಲಯದಲ್ಲಿದ್ದುಕೊಂಡು ಅಲ್ಲಿನ ಕೆಲಸಗಳನ್ನು ಮಾಡುತ್ತಾ ತಮ್ಮ ಓದನ್ನು ಮುಗಿಸಿದರು. ನಂತರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಇಂಟರ್ ಮೀಡಿಯೆಟ್ ಕಾಲೇಜಿಗೆ ಸೇರಿದರು. ಆ ಸಮಯದಲ್ಲಿ ಇವರ ಬಳಿ ಹಣವಿಲ್ಲದ ಕಾರಣ ಶಾಲೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಇವೆಲ್ಲದರ ನಡುವೆಯೂ ನರಸಿಂಹಯ್ಯನವರು ರಾಜ್ಯಕ್ಕೆ ಹನ್ನೊಂದನೆಯವರಾಗಿ ತೇರ್ಗಡೆಯಾದರು.
ನಂತರ ಇವರು ಬಿ ಎಸ್ ಸಿ(ಫಿಸಿಕ್ಸ್) ಆನರ್ಸ್ಗೆ ಸೇರಿದರು. ಎರಡೂವರೆ ವರ್ಷ ಮುಗಿದಿದ್ದ ಇವರ ವಿದ್ಯಾಭ್ಯಾಸ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳವಳಿಗೆ ಇಳಿದಿದ್ದರಿಂದ ಅಲ್ಲಿಗೆ ನಿಂತಿತು. ದೇಶದೆಲ್ಲೆಡೆಯಲ್ಲೂ " ಮಾಡು ಇಲ್ಲವೆ ಮಡಿ" ಚಳುವಳಿಯು ನಡೆಯುತ್ತಿತ್ತು. ಹಲವಾರು ನಾಯಕರುಗಳನ್ನು ಬಂಧಿಸಲಾಗಿತ್ತು. ಕಾಲೇಜುಗಳು ಚಳವಳಿಯ ಕೇಂದ್ರಗಳಾಗಿದ್ದವು. ನರಸಿಂಹಯ್ಯನವರನ್ನು ಎಚ್ಚರಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ಗೆ "ನಿಮ್ಮ ಕೆಲಸವನ್ನು ನೀವು ಮಾಡಿ, ನನ್ನ ಕೆಲಸವನ್ನು ನಾನು ಮಾಡುತ್ತೇನೆ" ಎಂದು ಉತ್ತರ ಕೊಟ್ಟಿದ್ದರಿಂದ ಅವರನ್ನು ಬಂಧಿಸಲಾಯಿತು. ಕ್ಷಮಾಪಣೆ ಪತ್ರವನ್ನು ಬರೆದು ಕೊಟ್ಟರೆ ಬಿಡುತ್ತೇವೆ ಎಂದಾಗ ಒಪ್ಪದ ಇವರನ್ನು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಯಿತು. ಸುಮಾರು ನಾಲ್ಕು ತಿಂಗಳ ಕಾಲದ ನಂತರ ಬಿಡುಗಡೆ ಮಾಡಿದರು. ಆದರೂ ಚಳವಳಿ ಮುಗಿಯುವವರೆಗೂ ಕಾಲೇಜಿಗೆ ಹೋಗುವುದಿಲ್ಲವೆಂದು ಕೊಂಡಿದ್ದ ಇವರು ಗಾಂಧೀಜಿಗೆ ಬೆಂಬಲ ಸೂಚಿಸುತ್ತ "ಇಂಗ್ಲಿಷರಿಗೆ ಧಿಕ್ಕಾರ" ಎಂದು ಘೋಷಣೆಯನ್ನು ಕೂಗುತ್ತಾ ಮೆರವಣಿಗೆ ಹೊರಟ ಇವರನ್ನು ಮತ್ತೆ ಬಂಧಿಸಲಾಯಿತು. ಈ ಬಾರಿ ಮೂರು ತಿಂಗಳ ನಂತರ ಸೆರೆಮನೆಯಿಂದ ಹೊರ ಬಂದರು. 

ನಂತರ ಗಾಂಧೀಜಿ ಮೊದಲಾದ ನಾಯಕರುಗಳ ಬಿಡುಗಡೆಯಾಗಿ ಚಳವಳಿ ಮುಕ್ತಾಯಗೊಂಡಾಗ ಇವರು ಮತ್ತೆ ತಮ್ಮ ವಿದ್ಯಾಭ್ಯಾಸವನ್ನು  ರಾಮಕೃಷ್ಣ ಆಶ್ರಮದಲ್ಲಿದ್ದುಕೊಂಡು  ಮುಂದುವರಿಸಿದರು. ಅಲ್ಲಿ  ಗುರು ತ್ಯಾಗೀಶಾನಂದರೊಡನೆ  ಮೌಢ್ಯತೆಯ ಬಗ್ಗೆ ವಿಚಾರ ವಿನಿಮಯ ಮಾಡುತ್ತಿದ್ದರು. ಬಿ ಎಸ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವಂತೆ ಗುರುಗಳು ಹೇಳಿದರೂ ಒಪ್ಪದ ಇವರು 1946ರಲ್ಲಿ ನ್ಯಾಶನಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು.
ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಮೈಸೂರು ಚಲೋ ಚಳವಳಿ ಪ್ರಾರಂಭವಾಯಿತು. ಮತ್ತೊಮ್ಮೆ ಅವರಲ್ಲಿನ ರಾಷ್ಟ್ರಪ್ರೇಮ ಜಾಗೃತಗೊಂಡು ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಇಳಿದರು. ನರಸಿಂಹಯ್ಯನವರು "ಇನ್ ಕಿಲಾಬ್" ಎಂಬ ಕೈ ಬರಹದ ಪತ್ರಿಕೆಯನ್ನು ಪ್ರಾರಂಭಿಸಿ ಸುಮಾರು 37 ಸಂಚಿಕೆಗಳನ್ನು ಪ್ರಕಟಿಸಿದರು. ನಂತರ ಕಾಂಗ್ರೆಸ್ ಮತ್ತು ಸರ್ಕಾರದ ನಡುವಿನ ಒಪ್ಪಂದದಿಂದಾಗಿ ಚಳವಳಿ ಮುಕ್ತಾಯವಾಯಿತು. ಇವರ ರಾಜೀನಾಮೆ  ಅಂಗೀಕಾರವಾಗದ ಕಾರಣ ಮತ್ತೆ ತಮ್ಮ ಅಧ್ಯಾಪಕ ವೃತ್ತಿ ಯನ್ನು ಮುಂದುವರಿಸಿದರು. ನಂತರ ಉನ್ನತ ವಿದ್ಯಾಭ್ಯಾಸವನ್ನು ಅಮೆರಿಕಾದಲ್ಲಿ ಮುಗಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು. ಮತ್ತೊಮ್ಮೆ ಅಮೆರಿಕಾ ದೇಶಕ್ಕೆ ಸಂದರ್ಶಕ ಪ್ರಾಧ್ಯಾಪಕರಾಗಿ ಹೋಗಿ ಬಂದರು.
ನರಸಿಂಹಯ್ಯನವರು ಶಿಕ್ಷಣರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ನ್ಯಾಷನಲ್ ಸ್ಕೂಲಿನಿಂದ ತಮ್ಮ ವಿದ್ಯಾಯಾನವನ್ನು ಪ್ರಾರಂಭಿಸಿ ಆ ಕಾಲೇಜಿನ ಪ್ರಾಂಶುಪಾಲರಾಗಿ ಕಾಲೇಜಿನಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣರಾದರು. ನ್ಯಾಷನಲ್ ಕಾಲೇಜಿನಲ್ಲಿ ಸಹಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು.
ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಇವರು ನ್ಯಾಷನಲ್ ಕಾಲೇಜಿನಲ್ಲಿ "ಬೆಂಗಳೂರು ಸೈನ್ಸ್ ಫೋರಂ" ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಇಲ್ಲಿ ತಂತ್ರಜ್ಞಾನ, ವೈದ್ಯಕೀಯ, ಮನಶಾಸ್ತ್ರ ಮೊದಲಾದವುಗಳ ಬಗ್ಗೆ  ಉಪನ್ಯಾಸಗಳನ್ನು ನೀಡಲಾಗುತ್ತಿತ್ತು.
ವಿದ್ಯಾರ್ಥಿಗಳಿಗೆ ನೀತಿ ಹಾಗೂ ಆರೋಗ್ಯದ ಬಗ್ಗೆ ಅರಿವು ನೀಡುವ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ  ಲೈಂಗಿಕ ಶಿಕ್ಷಣವನ್ನು ನೀಡುವ ಹೊಸ ಪ್ರಯೋಗವನ್ನು ಜಾರಿಗೆ ತಂದರು.
ಇವರ ಮತ್ತೊಂದು ಪ್ರಯೋಗವೆಂದರೆ ಪರೀಕ್ಷಾ ಮೇಲ್ವಿಚಾರಕರಿಲ್ಲದೆ ಪರೀಕ್ಷೆಗಳನ್ನು  ನಡೆಸಿದ್ದು. ವಿದ್ಯಾರ್ಥಿಗಳು ಸಮಾಜಸೇವೆಯಲ್ಲಿ ತೊಡಗುವಂತೆ ಪ್ರೋತ್ಸಾಹಿಸಲು ಇವರು ಹಲವಾರು ಶಿಬಿರಗಳನ್ನು ನಡೆಸಿದರು. ನರಸಿಂಹಯ್ಯನವರು ನ್ಯಾಷನಲ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷತೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳು ಪ್ರಾರಂಭವಾದವು. ವಿಶೇಷವೆಂದರೆ ಆ ಸಂಸ್ಥೆಗಳಲ್ಲಿ ವಂತಿಗೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ.
ನರಸಿಂಹಯ್ಯನವರು ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಮ್ಮೆ ಬೇಸಿಗೆಯಲ್ಲಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪಾನಕವನ್ನು ಕುಡಿಯಲು ನೀಡಿದ್ದರು. ಇವರಿಗೆ ಕನ್ನಡ ನಾಟಕಗಳಲ್ಲಿ ತುಂಬಾ ಆಸಕ್ತಿಯಿತ್ತು. ಇವರು ಪ್ರಿನ್ಸಿಪಾಲರಾಗಿದ್ದಾಗ ಕಾಲೇಜಿನಲ್ಲಿ ಇಂಟರ್ ಸೆಕ್ಷನ್ ನಾಟಕ ಸ್ಪರ್ಧೆಯನ್ನು ಪ್ರಥಮ ಬಾರಿಗೆ ಪ್ರಾರಂಭಿಸಿದರು. ಇವರು ವಿದ್ಯಾರ್ಥಿಗಳೊಂದಿಗೆ ಹಾಕಿ ಮತ್ತು ಬ್ಯಾಸ್ಕೆಟ್ ಬಾಲ್ ಆಟಗಳನ್ನು ಆಡುತ್ತಿದ್ದರು.
   ನರಸಿಂಹಯ್ಯನವರು ಬಾಲ್ಯದಿಂದಲೂ ಸ್ವತಂತ್ರವಾಗಿ ಆಲೋಚಿಸುವ ಗುಣವನ್ನು  ಹೊಂದಿದ್ದರು. ಇವರ ತಂದೆ ತೀರಿಹೋದಾಗ ತಮ್ಮ ತಲೆಗೂದಲನ್ನು ತೆಗೆಸಿಕೊಳ್ಳಲು ಒಪ್ಪಲಿಲ್ಲ. ಇವರ ಮೂಢನಂಬಿಕೆಗಳ ವಿರುದ್ಧ ಬರೆದಿರುವ ಲೇಖನಗಳು " ತೆರೆದ ಮನ" ಎಂಬ ಪುಸ್ತಕದಲ್ಲಿ ಪ್ರಕಟವಾಗಿದೆ. ಇವರು ಜ್ಯೋತಿಷ್ಯ ಮತ್ತು ಪವಾಡಪುರುಷರ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಒಮ್ಮೆ ಸಾಯಿಬಾಬರಿಗೆ "ನೀವು ಗಾಳಿಯಿಂದ ವಸ್ತುಗಳನ್ನು ಸೆಳೆದು ಕೊಡುವಂತಹ ಪವಾಡಗಳನ್ನು ಮಾಡುತ್ತಿರುವುದೇ ಹೌದಾದಲ್ಲಿ ನನಗೆ ಶೂನ್ಯದಿಂದ ಕುಂಬಳಕಾಯಿಯನ್ನು ಸೃಷ್ಟಿಸಿಕೊಡಿ" ಎಂದು ಸವಾಲನ್ನು ಹಾಕಿದ್ದರು.
ಇವರು ಶಿಕ್ಷಣಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು  ಕಂಡ ಸರ್ಕಾರ ಇವರನ್ನು 1972 ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಾಗಿ ನೇಮಕ ಮಾಡಿತು. ನಂತರ ನಾಗರಬಾವಿಯಲ್ಲಿ ಪ್ರಾರಂಭವಾಗಿದ್ದ ಶಿಕ್ಷಣ ಸಂಸ್ಥೆಯ ಕಟ್ಟಡಗಳ ನಿರ್ಮಾಣವನ್ನು ತ್ವರಿತಗೊಳಿಸಿ ನಾಗರಬಾವಿಯನ್ನು 'ಜ್ಞಾನಭಾರತಿ"ಯನ್ನಾಗಿ ಮಾಡಿದರು. ಇವರು ಉಪಕುಲಪತಿಗಳಾದ ನಂತರ ಮೌಢ್ಯತೆಯ ವಿರುದ್ಧ ಜನರನ್ನು ಜಾಗೃತಗೊಳಿಸಲು ವಿಶ್ವವಿದ್ಯಾನಿಲಯದ ವತಿಯಿಂದ "ಪವಾಡ ಮತ್ತು ಪರೀಕ್ಷಿಸಿ ನೋಡಬಹುದಾದ ಮೂಢನಂಬಿಕೆಗಳ ಸಮಿತಿ"ಯನ್ನು  ನೇಮಕ ಮಾಡಿದರು. ಈ ಸಮಿತಿಯು ಪವಾಡಪುರುಷರು ನಡೆಸುತ್ತಿದ್ದ ಪವಾಡಗಳನ್ನು ಬಯಲು ಪಡಿಸಿತು. 1980 ರಲ್ಲಿ ಇವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾದರು.
ಇವರು ತಮ್ಮ ಸೇವೆ ಮತ್ತು ಸಾಧನೆಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದರು. 1969ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿತು. ಕೇಂದ್ರ ಸರ್ಕಾರ "ಪದ್ಮಭೂಷಣ" ಪ್ರಶಸ್ತಿಯನ್ನು ನೀಡಿತು. 1990ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ ನ್ನು ಪಡೆದುಕೊಂಡರು. ಗುಲ್ಬರ್ಗ. ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನ್ನ ನೀಡಿ ಗೌರವಿಸಿತು. ಹಿಂದುಳಿದವರು ಏಳ್ಗೆಗಾಗಿ ದುಡಿದವರಿಗೆ ನೀಡುತ್ತಿದ್ದ ದೇವರಾಜ್ ಅರಸ್ ಪ್ರಶಸ್ತಿಯನ್ನು 1994 ರಲ್ಲಿ ಪಡೆದರು. ಇವರ ಮೌಢ್ಯತೆಯ ವಿರುದ್ಧ ನಡೆಸಿದ ಹೋರಾಟಕ್ಕಾಗಿ ಅಮೆರಿಕದ ಪ್ರಕೃತ್ಯತೀತವಾದ ಘಟನೆಗಳನ್ನು ವೈಜ್ಞಾನಿಕವಾಗಿ ಸಂಶೋಧಿಸುವ ಸಮಿತಿಯಿಂದ ಫೆಲೋಶಿಪ್ ನ್ನು ಪಡೆದ ಭಾರತದ ಏಕೈಕ ವ್ಯಕ್ತಿ ನರಸಿಂಹಯ್ಯನವರು. 1942 ರಲ್ಲಿ ನಡೆದ ಕ್ವಿಟ್ ಇಂಡಿಯ ಚಳವಳಿಯಲ್ಲಿ ಭಾಗವಹಿಸಿದ್ದರಿಂದ ಸರ್ಕಾರ ತಾಮ್ರಪತ್ರವನ್ನು ನೀಡಿತು.
1992 ರಲ್ಲಿ ಇವರ " ತೆರೆದ ಮನ" ಎಂಬ ಪತ್ತಿಕಾಲೇಖನಗಳ ಸಂಗ್ರಹವು ಪ್ರಕಟವಾಯಿತು. 1995 ರಲ್ಲಿ ಇವರ ಆತ್ಮಕಥೆ "ಹೋರಾಟದ ಹಾದಿ" ಪ್ರಕಟವಾಯಿತು.
ಮೌಢ್ಯತೆಯ ವಿರೋಧಿಯಾಗಿದ್ದ ಇವರು  "ಯಾವ ಧಾರ್ಮಿಕ ಅಂತ್ಯ ಸಂಸ್ಕಾರದಲ್ಲೂ ನನಗೆ ನಂಬಿಕೆಯಿಲ್ಲ ಮತ್ತು ನಾನು ಸತ್ತಾಗ ನಮ್ಮ ಯಾವ ಸಂಸ್ಥೆಗೂ ರಜ ಕೊಡಕೂಡದು" ಎಂದು ಉಯಿಲನ್ನು ಬರೆದಿದ್ದ ನರಸಿಂಹಯ್ಯನವರು ಜನವರಿ 31, 2005 ರಲ್ಲಿ ಇಹಲೋಕ ತ್ಯಜಿಸಿದರು.
  ಹುಟ್ಟಿನಿಂದಲೂ ಬಡತನದಲ್ಲೇ ಇದ್ದ ನರಸಿಂಹಯ್ಯನವರು ದುಡಿಯುವಾಗಲೂ ಸಹ ತಮ್ಮ ಗಳಿಕೆಯ ಹಣವನ್ನೆಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೀಡುತ್ತಿದ್ದು ಸರಳ ಜೀವನವನ್ನು ನಡೆಸಿ ಎಲ್ಲರಿಗು ಆದರ್ಶಪ್ರಾಯರಾಗಿದ್ದಾರೆ.
 - ವಿಜಯಲಕ್ಷ್ಮಿ  ಎಂ ಎಸ್

ಕವನ - ಅವಳು


ಇಂದು ಮುಂಜಾವಿನಲಿ
ಅವಳ ನೋಡಿದ ಕ್ಷಣದಿಂದ
ಬರೆಯಬೇಕೆನಿಸಿದೆ...
ಅವಳ ಬಗ್ಗೆ...,
ಅವಳ ಮಾತು,
ನೋಟ.......,
ಇವೆಲ್ಲದರ ಬಗ್ಗೆ!!
ತಡೆಯದಾಗಿದೆ ಮನಸು
ಹಾಕಲೇಬೇಕು ಹೊರಗೆ
ಮನದ ಮಾತುಗಳ..
ಎಂದಿನಂತೆ ಇಂದೂ,
ಎದ್ದೆ, ಸ್ನಾನ, ತಿಂಡಿ.
ಹೊರಬಿದ್ದೆ.....,
ಆದರೆ,
ಅವಳ ಚಿತ್ರಣ,
ಕಣ್ಣ ತುಂಬಿದೆ.
ಆಡಿದ ಮಾತು
ಎದೆಯ ಮೇಲಿದೆ.
ಅವಳ ನಾ ನೋಡಿದಾಗ
ನಾ ದಿನವೂ ನೋಡುತಿದ್ದ
ಮನೆಗೆ ಹೋದಳು.
ಹತ್ತಿರವಾಗುತಿದ್ದಂತೆ
ನಾನಲ್ಲಿಗೆ
ಗೇಟು ದಾಟಿ
ಹತ್ತಿರ ಬಂದಳು
ಅವಳ ನೋಡಿದೆ
ನೋಡಿಯೂ ನೋಡದಂತೆ!!
ಬಲಗೈಯಲ್ಲಿ
ಪುಟ್ಟ ಪ್ಲಾಸ್ಟಿಕ್ ಹಾಳೆಯ ಗಂಟು.
ಅದರ ಮೇಲೆ
ಮಾಸಿದ ಇಪ್ಪತ್ತರ ನೋಟು.
ಎಡಗೈಯಲ್ಲಿ
ಊರುಗೋಲು.
ಮಾಸಿಹೋಗಿತ್ತು
ಅವಳಂತೆ..,
ಅವಳ ಬಟ್ಟೆ, ನೋಟದಂತೆ!!
ಬೆನ್ನ ಮೇಲೆ,
ಭಾರವಿಲ್ಲದಿದ್ದರೂ
ಹೊರಲಾರದೆ ಹೊತ್ತ
ಬಟ್ಟೆ ಗಂಟು
ಬಾಗಿದ ಸೊಂಟ
ಮೈ ಹಣ್ಣುಹಣ್ಣಾಗಿ
ಸುಕ್ಕುಗಟ್ಟಿತ್ತು...
ಕೈ ಚಾಚುವಳೇನೋ...,
ಎಂದುಕೊಂಡೆ.
ಇಲ್ಲ!! ಚಾಚಲಿಲ್ಲ!!
ಆಗಲೇ
ಎದೆಯ ಹೊಕ್ಕಿದ್ದು
ಅವಳ ಮಾತು..,
ನನ್ನೆಡೆಗೆ ದೃಷ್ಟಿ ಬೀರಿ
ಹೇಳಿದಳು
ತನ್ನೊಳಗಿದ್ದೆಲ್ಲವನ್ನೂ
ಹೊರ ಹಾಕುವಂತೆ..,
"ಏನ್ ಮಾಡ್ಲಿ ರೀ ಯಪ್ಪಾ,
ಹೊಟ್ಟಿ ಕೇಳ್ಬೇಕಲ್ಲಾ .....??"
- ಮಹಾಂತೇಶ ಬಿ ಬಿ

ಅನುಭವ - ನನ್ನ ಮೊದಲ ಪ್ರೇಮ ಪ್ರಸಂಗ


ಕೆಲ ದಿನಗಳ ಹಿಂದೆ ನಾನು ನನ್ನ ವಿದ್ಯಾರ್ಥಿಗಳಿಗೆ ವಾಟ್ಸ್ ಆಪ್ ಗ್ರೂಪಿನಲ್ಲಿ ಸಂದೇಶ ಕಳಿಸಿದೆ. “ನಾನು ಸಧ್ಯದಲ್ಲೇ ನನ್ನ ನೆನಪಿನಂಗಳದಿಂದ ಆಯ್ದ ಕೆಲವು ಘಟನೆಗಳನ್ನು ಬರೆದು ಪ್ರಕಟಿಸಬೇಕೆಂದಿದ್ದೇನೆ. ನಿಮಗೆ ನನ್ನ ತರಗತಿಯಲ್ಲಿ ನಡೆದ ಅಥವಾ ನಿಮ್ಮನ್ನು ಗಾಢವಾಗಿ ಮುಟ್ಟಿದ ವಿಷಯಗಳನ್ನು ನನಗೆ ಬರೆದು ಕಳುಹಿಸಿ.”
ಅದಕ್ಕೆ ಬಹಳಷ್ಟು ಪ್ರತಿಕ್ರಿಯೆಗಳು ಬಂದವು. ಅದರಲ್ಲಿ ಒಬ್ಬ ಹುಡುಗಿ ಮಾತ್ರ ಸ್ವಲ್ಪ ತರಲೆ ಸ್ವಭಾವದವಳು- “ಮೇಡಂ ನಿಮ್ಮ ಪ್ರೀತಿಯ ಅನುಭವದ ಕುರಿತು ಏನಾದರೂ?” ನಾನು ನಕ್ಕು ಹೇಳಿದೆ “ನಾನು ಸದಾ ಯಾರನ್ನಾದರೂ ಪ್ರೀತಿಸುತ್ತಲೇ ಬಂದಿದ್ದೇನೆ. ನನಗೆ ಐನ್‍ಸ್ಟೀನ್ ಎಂದರೆ ಬಹಳ ಪ್ರೀತಿ, ಚಾರ್ಲಿ ಚಾಪ್ಲಿನ್ ಅಂದರೆ ಜೀವ. ಹೀಗೆ ಈ ಪಟ್ಟಿ ಬಹಳ ದೊಡ್ಡದು. . .” ಎಂದೆ. “ಅಲ್ಲ ಮೇಡಂ, ನೀವು ಸಣ್ಣವರಿದ್ದಾಗ?” ನಾನು ಮತ್ತೆ ನನ್ನ ನೆನಪಿನ ಕಡತಗಳನ್ನು ಹುಡುಕಿದಾಗ ಸಿಕ್ಕದ್ದು ಅವಳಿಗೆ ಬರೆದು ಕಳುಹಿಸಿದೆ. ಅದು ಹೀಗಿದೆ:

ಆತನನ್ನು ಮೊದಲು ಭೇಟಿಯಾದಾಗ ನನಗಿನ್ನೂ 11 ವರ್ಷ. ಆತ ಕಪ್ಪಗಿದ್ದ. ಮಾಟವಾದ ಎದೆ, ಚೂಪಾದ ಕಣ್ಣುಗಳು, ಕೇವಲ ಒಂದು ಬಿಳಿ ಪಂಚೆ ಉಟ್ಟಿದ್ದ ಆತ ಒಂದು ಆನೆಯ ಮೇಲೆ ಕುಳಿತು ಹತ್ತಿರ ಬರುತ್ತಿದ್ದರೆ, ನಾನು ಪರವಶಳಾಗಿ ಹೋಗಿದ್ದೆ. ದೂರದಲ್ಲಿ ಯಾರದೋ ದನಿ ಆತನ ಕುರಿತು ವಿವರಣೆ ನೀಡುತ್ತಿದ್ದರೆ, “ಬೆಳ್ಳಗಿರುವುದೇ ಚಂದ” ಎಂಬ ಮಾತುಗಳ ನಡುವೆ ಬೆಳೆದಿದ್ದ ನನಗೆ, ಕಪ್ಪಗಿರುವವರು ಇಷ್ಟೊಂದು ಸುಂದರವಾಗಿರಬಹುದೆಂದು ಕಲ್ಪಿಸಿಕೊಳ್ಳುವುದರಲ್ಲೇ ಪುಳಕ ಮೂಡಿತ್ತು. ಆತ ಆನೆಯಿಂದ ಇಳಿದ, ಯಾರೋ ಆನೆಗೆ ಕಬ್ಬು ತಂದು ಕೊಟ್ಟರು, ಆ ನಂತರ ಆತ ಆನೆಯ ಮೇಲೇರಿ ಮತ್ತೆ ಮುಂದೆ ಹೋದ. ಮಕ್ಕಳೆಲ್ಲಾ ಹಾಗೇ ನೋಡುತ್ತಾ ನಿಂತೇ ಇದ್ದರು. ಆ ಮಕ್ಕಳೊಂದಿಗೆ ನಾನೂ ಕೂಡ ಒಬ್ಬಳಾಗಿದ್ದೆ. ನನಗೆ ಅವನ ಮೇಲಿನ ಮನಸ್ಸು ಕೀಳಲಾಗಲಿಲ್ಲ. ಮುಂದೆ ನಾನು ನಿರ್ಧರಿಸಿದೆ - ನಾನೇನಾದರೂ ಮುಂದೆ ಮದುವೆಯಾಗುವುದಿದ್ದರೆ, ಇವನನ್ನೇ, ಅಥವಾ ಇಂತಹವನನ್ನೆ. ವರ್ಷಗಟ್ಟಲೇ ಅವನಿಗಾಗಿ ಹುಡುಕಾಡಿದ್ದೇನೆ. ಆತ ಮತ್ತೆ ಅದೇ ಆನೆಯ ಮೇಲೆ ಕೂತು ಬರುತ್ತಾನೆ, ಆ ನಂತರ ಮರೆಯಾಗುತ್ತಾನೆ. ಹೀಗೆ ನಲವತ್ತು ವರ್ಷಗಳು ಕಳೆದಿವೆಯಾದರೂ ನನಗಾತ ಮಾತನಾಡಲು ಸಿಕ್ಕಿಲ್ಲ. ಸಿಕ್ಕುವನೆಂಬ ಭರವಸೆಯೂ ಇಲ್ಲ. 
ಆತ ಯಾರೆಂದು ನಿಮಗೆ ಕುತೂಹಲವಿರಬಹುದು. ನನ್ನ ವಯಸ್ಸಿನ ಎಲ್ಲರಿಗೂ ಈತನ ಪರಿಚಯವಿದ್ದೇ ಇರುತ್ತದೆ. ನನಗಂತೂ ಈತನ ಪರಿಚಯವಾದದ್ದು ನನ್ನ ಕನ್ನಡ ಮೇಡಂ ಸಾವಿತ್ರಮ್ಮನ ಮೂಲಕ. ಆಗ ನಾನು ಏಳನೇ ತರಗತಿಯಲ್ಲಿದ್ದೆ. ನಮ್ಮ ಮೇಡಂ ನಮ್ಮ ಕನ್ನಡ ಪಠ್ಯದಲ್ಲಿದ್ದ ಮಾವುತನ ಬಗ್ಗೆ ವಿವರಿಸಿ ಹೇಳುತ್ತಿದ್ದರೆ, ಅವರು ಸವಿದಷ್ಟೇ ಚೆನ್ನಾಗಿ ಆ ವಿವರಣೆಯನ್ನು ಸವಿದ ನನಗೆ ಇಂದಿಗೂ ಅವರ ದನಿ ಕೇಳಿಸುತ್ತಿದೆ. ಪ್ರತಿ ಬಾರಿ ನಾನು ಆನೆ ಮೇಲೆ ಕುಳಿತ ಯಾರೇ ಮಾವುತನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ನೋಡಿದಾಗ ನಾನು ಮತ್ತೆ ಅವರ ತರಗತಿಯಲ್ಲಿ ಕೂತು ಅವರ ದನಿಯೊಂದಿಗೆ ದೂರಲೋಕಕ್ಕೆ ತೇಲುತ್ತಾ ಹೋಗುತ್ತೇನೆ. 
ಮಾತೃಭಾಷೆ ಕೊಂಕಣಿ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಮೀಡಿಯಂನಲ್ಲಿ ಕಲಿಯುತ್ತಾ ಬೆಳೆದದ್ದು ಮುಂಬೈ, ಆ ನಂತರ ಕರ್ನಾಟಕಕ್ಕೆ ಬಂದಿದ್ದ ನನಗೆ ಕನ್ನಡವೆಂದರೆ ಇಷ್ಟು ರುಚಿಕರ ಎಂದು ತೋರಿಸಿಕೊಟ್ಟ ಆ ನನ್ನ ಗುರುಗಳನ್ನು ನಾನು ಎಂದಿಗೂ ಮರೆಯಲಾರೆ. ಇಂದಿಗೂ ನನಗೆ ಕನ್ನಡ ಚೆನ್ನಾಗಿ ಬರುತ್ತದೆಯೆಂದಾದರೆ, ಅದಕ್ಕೆ ನಾನು ನನ್ನ ಕನ್ನಡ ಟೀಚರ್ ಸಾವಿತ್ರಮ್ಮ ಮೇಡಂಗೆ ಋಣಿ.
ಅವರು ನನ್ನಲ್ಲಿ ಕನ್ನಡ ಭಾಷೆ, ಸಾಹಿತ್ಯದ ಕುರಿತು ಪ್ರೀತಿ ಬೆಳೆಸಿದರು. ವ್ಯಾಕರಣವೆಂದರೇನೆಂದು ತಿಳಿಯದಿದ್ದ ನನಗೆ ಸಂಧಿ, ಸಮಾಸಗಳನ್ನು ಪರಿಚಯಿಸಿದರು, ಭೂತ, ಭವಿಷ್ಯ ಕಾಲ, ವಿಭಕ್ತಿ ಪ್ರತ್ಯಯ- ಇವೆಲ್ಲಾ ಏನೆಂದು ಅರ್ಥ ಮಾಡಿಸಿದವರು ಅವರೇ. ಪ್ರೇಮದ ಮೊದಲ ಪಾಠ ಕಲಿಸಿಕೊಟ್ಟ ಅವರು ನನ್ನಲ್ಲಿ ಮುಂದೆಯೂ ಕೂಡ ಆ ಸಾಹಿತ್ಯ ಪ್ರೀತಿ ಹಾಗೇ ಉಳಿಯುವಂತೆ ಮಾಡಿದವರು. 
ಈಗ ಶಿಕ್ಷಕಿಯಾಗಿ ನಾನು ಕೂಡ ನನ್ನ ವಿದ್ಯಾರ್ಥಿಗಳಿಗೆ ಇಂತಹುದೇ ಪ್ರೀತಿ ಹಂಚುತ್ತಿದ್ದೇನೆ. ಸಾವಿತ್ರಮ್ಮ ಮೇಡಂ ಅವರ ಪರಂಪರೆಯನ್ನು ಹಾಗೇ ಮುಂದುವರೆಸುತ್ತಿದ್ದೇನೆ. 

- ಡಾ.ಸುಚೇತಾ ಪೈ



ಶಾಲಾ ಡೈರಿ 8 -

ಪರೀಕ್ಷೆಗಳ ಬಗ್ಗೆ
[ಅಮೇರಿಕಾದ ಇಂಗ್ಲಿಷ್ ಭಾಷಾತಜ್ಞರಾದ ನಾರ್ಮನ್ ಲೂಯಿಸ್  ರವರ ಲೇಖನದ ಅನುವಾದ]


ಪರೀಕ್ಷೆಗಳು ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸಬಹುದಾಗಿದೆ. ಯಾವಾಗ ನೀವು ಒಂದು ಪರೀಕ್ಷೆಯನ್ನು ನಿಮ್ಮ ಮೌಲ್ಯವನ್ನು ನಿರ್ಧರಿಸುವ, ನಿಮ್ಮ ಗುಣಗಳನ್ನು ತೀರ್ಮಾನಿಸುವ ಅಥವಾ ನಿಮ್ಮ ಬುದ್ಧಿಶಕ್ತಿಯನ್ನು ಅಳೆಯುವ ಸಾಧನವೆಂದು ಭಾವಿಸುವಿರೊ, ಆಗ ನೀವು ಪರೀಕ್ಷೆಯನ್ನು ವೇದನಾದಾಯಕ ಅನುಭವವಾಗಿ, ಉದ್ವೇಗ ಸೃಷ್ಟಿಸುವ ಉಗ್ರಪರೀಕ್ಷೆ ಎಂದು ಪರಿಗಣಿಸುವಿರಿ.
ಒಂದು ವಿವೇಚನಾಯುಕ್ತ ಸಮಾಜದಲ್ಲಿ ಪರೀಕ್ಷೆಯೆಂದರೆ ಮೇಲೆ ಹೇಳಿದ ಯಾವ ವಿಷಯವೂ ಅಲ್ಲ. ನೀವು ಎಷ್ಟರ ಮಟ್ಟಿಗೆ ಕಲಿತಿದ್ದೀರೆಂದು ಅಳೆಯುವ ಸಾಧನವಷ್ಟೇ. ನೀವು ಪರೀಕ್ಷೆಯಲ್ಲಿ ಪಾಸು ಅಥವಾ ನಪಾಸು ಆಗುವುದಿಲ್ಲ. ಪಾಸು ಮತ್ತು ನಪಾಸು ಎಂಬ ಪದಗಳು ಎರಡು ಕೊನೆಗಳನ್ನು ತೋರಿಸುತ್ತವೆ. ನಿಮ್ಮ ಇಡೀ ಜೀವನವನ್ನು ದಾಳದ ಒಂದು ಎಸೆತದಲ್ಲಿ ತೀರ್ಮಾನಿಸಲಾಗದು.
ವಾಸ್ತವವಾಗಿ, ಪರೀಕ್ಷೆ ಎಂದರೆ ಒಂದು ಅಳೆಯುವ ಸಾಧನ. ಒಂದು ಕಾರಿನಲ್ಲಿ ಸೂಚಕವಿದ್ದಂತೆ. ಆ ಸೂಚಕದಲ್ಲಿ ನಿಮ್ಮ ಪೆಟ್ರೋಲ್ ಟ್ಯಾಂಕ್‍ನಲ್ಲಿ ಪೆಟ್ರೋಲ್ ಇದೆಯಾ, ನೀವೆಷ್ಟು ಕಿಲೋಮೀಟರ್ ಚಲಿಸಿದ್ದೀರಾ, ಬ್ಯಾಟರಿ ಸರಿಯಿದೆಯೇ ಇತ್ಯಾದಿಗಳನ್ನು ತೋರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆ ಸೂಚಕ ಇನ್ನಷ್ಟು ಸಾಮರ್ಥ್ಯದಿಂದ ಚಲಿಸಬಹುದೆಂಬುದನ್ನು ಸೂಚಿಸುತ್ತದೆಯೇ ಹೊರತು ನಿಮ್ಮನ್ನು ಓರ್ವ ವ್ಯಕ್ತಿಯಾಗಿ ನಿಮ್ಮ ಮೌಲ್ಯವನ್ನು ಅಳೆಯುವುದಿಲ್ಲ.
ವಿವಿಧ ಪರೀಕ್ಷೆಗಳೂ ಸಹ ಅಷ್ಟೆಯೇ. ನಿಮಗೆ ಕೆಲವು ಮಾಹಿತಿಗಳನ್ನು ನೀಡಿ ಇನ್ನೂ ಹೆಚ್ಚು ಸಾಮರ್ಥ್ಯ ಬೆಳೆಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ –
1.      ನೀವು ಈಗಾಗಲೇ ಕಲಿತಿರುವುದನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಇಲ್ಲಿ ನಿಮಗೆ ನೀವು ಕಲಿತಿರುವುದನ್ನು ನೆನಪಿಸಿಕೊಂಡು ಬರೆಯಲು ಅವಕಾಶವಿದೆ.
2.      ಯಶಸ್ವಿ ಓದುವಿಕೆಗೆ ಒಂದು ಮುಖ್ಯ ಸಾಧನ ಪರೀಕ್ಷೆ. ನಾನು ಇನ್ನೆಷ್ಟು ಕಲಿಯಬೇಕೆಂಬುದನ್ನು ಸೂಚಿಸುತ್ತದೆ.
3.      ಪರೀಕ್ಷೆಗಳು ನಮ್ಮ ತಪ್ಪನ್ನು ತೋರಿಸುವುದರಿಂದ ಹೋಲಿಕಾ ದೃಷ್ಟಿಯಲ್ಲಿ ನಾವು ಯಾವ ವಿಷಯದಲ್ಲಿ ಕಡಿಮೆ ತಿಳಿದಿದ್ದೇವೆಂದು ಸೂಚಿಸುವುದರಿಂದ ಅವು ನಮ್ಮ ಕಲಿಕಾ ಸಾಮರ್ಥ್ಯವನ್ನು ಸೂಚಿಸುತ್ತವೆ. ಈ ಪ್ರಪಂಚದಲ್ಲಿ ಯಾವುದೂ ಮತ್ತು ಯಾರೂ ಶೇಕಡ 100ರಷ್ಟು ಸಾಮರ್ಥ್ಯವನ್ನು ಹೊಂದಿಲ್ಲ. ಆದರೆ ಬಹಳಷ್ಟು ಜನರಿಗೆ ತಮ್ಮ ಬಲಹೀನತೆ ಎಲ್ಲಿದೆ ಎಂದು ತಿಳಿದರೆ ತಮ್ಮನ್ನೆ ಉತ್ತಮಗೊಳಿಸಲು ಅವಕಾಶವಿದೆ. ಒಂದು ವೇಳೆ ಈ ಪರೀಕ್ಷೆಯಲ್ಲಿ ನೀವು ಕಡಿಮೆ ಅಂಕ ಗಳಿಸಿದರೆ, ನೀವು ಎಲ್ಲಿ ತಪ್ಪು ಮಾಡುತ್ತಿದ್ದೀರಾ, ಹೆಚ್ಚಿನ ಅಂಕ ಗಳಿಸಲು ಎಲ್ಲಿ ನೀವು ಹೆಚ್ಚು ಶ್ರಮಿಸಬೇಕು ಎಂಬುದನ್ನು ಮಾತ್ರ ಅದು ಸೂಚಿಸುತ್ತದೆ.
4.      ಪರೀಕ್ಷೆಗಳಿಂದಾಗುವ ಇನ್ನೊಂದು ಸಹಾಯವೆಂದರೆ ‘ಸಾಧಿಸಿದ ಸಂತೋಷ’. ನಿಮ್ಮ ಅಂಕಗಳು ಎಷ್ಟೇ ಆಗಲಿ, ಅದೇ ನಿಮ್ಮ ಸಾಧನೆ. ಏನೂ ತಿಳಿಯದೆ ಇರುವಂತಹ ಪರಿಸ್ಥಿತಿಯಿಂದ ಇಲ್ಲಿಯವರೆಗೂ ಬಂದಿದ್ದೀರಿ ಎಂದರ್ಥ. ಈಗ ಇದರ ಆಧಾರದ ಮೇಲೆ ಇನ್ನಷ್ಟು ಪರಿಶ್ರಮದಿಂದ ಇನ್ನೂ ಉತ್ತಮವಾಗಿ ಕಲಿಯಲು ಸಾಧ್ಯ.
- ಅನುವಾದ - ಸುಧಾ ಜಿ 


ಅನುವಾದಿತ ಕವಿತೆ - ತಾಜಮಹಲು



ಪ್ರೀತಿಯ ಪ್ರತೀಕ ತಾಜಮಹಲದು ನಿನಗೆ, ನಿಜ
ಮಧುರ ವಚನಕೆ ಸಾಕ್ಷಿ ನಿನಗದು, ಅದೂ ನಿಜ. ||

ಆದರೆ ಪ್ರಿಯೆ, ನನ್ನನ್ನು ಬೇರೆಲ್ಲಾದರೂ ಭೇಟಿಯಾಗು
ನವಾಬನ ಆಸ್ಥಾನದಲಿ ಗರೀಬನ ತಿರುಗಾಟವೇ ಹೇಳು,
ರಾಜ ವೈಭವ ಮೆರೆದಾಡುವ ರಾಜಬೀದಿ ರಸ್ತೆಯಿದು,
ಅದರೊಳು ಪ್ರೀತಿಸಿದ ಪ್ರೇಮಿಗಳ ಪಯಣವೇ ಹೇಳು ||

ಜಗಕೆ ಸಾರುವ ಪ್ರೇಮ ನಿಷ್ಠೆಯ ಹಿಂದೆ, ನಲ್ಲೆ ನೀ
ವೈಭವದ ಪತಾಕೆ ಹಾರಾಡುವುದ ನೋಡಬೇಕಿತ್ತು
ನವಾಬರ ಬೆಳಗುವ ಸಮಾಧಿಗಳ ಸೆಳೆತಕೆ ಸಿಲುಕಿದಾಕೆ
ಕತ್ತಲು ಕವಿದ ನಮ್ಮ ಮನೆಗಳ ನೆನಪಿಸಿಕೊಳ್ಳಬೇಕಿತ್ತು ||

ಲೆಕ್ಕವಿರದಷ್ಟು ಜನ ಪ್ರೀತಿಸಿಹರು ಜಗದೊಳಗಿಂದು
ಅವರ ಪ್ರೀತಿ ನಿಜವಲ್ಲವೆಂದು ಯಾರು ಹೇಳಬಲ್ಲರು
ಆದರದನು ಜಗಕೆ ಸಾರಲು ಅವರಿಗಿರಲಿಲ್ಲ ಸಾಧನಗಳು
ಏಕೆಂದರೆ ಅವರೂ ಸಹ ನಮ್ಮಂತೆಯೇ ಗರೀಬರು ||

ರಾಜ ವೈಭವದೀ ಸಂಕೇತಗಳು, ಅದರ ಭವ್ಯ ಶೈಲಿ,
ಅರಮನೆಗಳು, ಕೋಟೆ-ಕೊತ್ತಲಗಳು, ಮಹಲುಗಳು
ಭುವನದ ಮೇಲೆ ಬೆಳಗುತಿಹುದು ಅವುಗಳ ರಂಗು
ಅದರಲ್ಲಿಹುದು ನನ್ನ ನಿನ್ನ ಪೂರ್ವಜರ ರಕ್ತಕಲೆಗಳು ||

ಕೇಳು ಗೆಳತಿ, ನಮ್ಮವರೊಳಗೂ ಹುಟ್ಟಿ ಬೆಳೆದಿತ್ತು ಪ್ರೀತಿ
ಮನೋಹರ ಕಲೆಗೆ ರೂಪ ನೀಡಿತ್ತು ಅವರ ಕಲೆಯು;
ಆದರೆ ಬೇನಾಮಿಯಾದವು ಅವರ  ಪ್ರಿಯರ ಗೋರಿಗಳು
ಅವುಗಳ ಮೇಲೆಂದೂ ಬೆಳಗುವುದಿಲ್ಲ ಹಣತೆಗಳು ||

ಈ ಉದ್ಯಾನವನ, ಯಮುನಾ ನದಿಯ ತೀರ, ಮಹಲು,
ಕೆತ್ತನೆ ಕೆಲಸದ ಗೋಡೆ-ಬಾಗಿಲುಗಳು, ಮೆಹ್ರಾಬ್, ಕಿಟಕಿಗಳು;
ಸಂಪತ್ತಿನ ಸಹಾಯದಿಂದ ನವಾಬ ತಾಜಮಹಲನು ಕಟ್ಟಿ
ನಮ್ಮಂತಹ ಗರೀಬರ ಪ್ರೀತಿಯನ್ನು ಅಣಕಿಸಿಬಿಟ್ಟ ||

ಪ್ರಿಯೆ ನನ್ನನ್ನು ಬೇರೆಲ್ಲಾದರೂ ಭೇಟಿಯಾಗು ||


- ಎಸ್.ಎನ್.ಸ್ವಾಮಿ (02.12.2017)
ಮೂಲ: ಸಾಹಿರ್ ಲೂಧಿಯಾನ್ವಿ


ಸಾಹಿರ್ ಲೂಧಿಯಾನ್ವಿ


ಕಥೆ - ಕರುಳಿನ ಸಂಬಂಧ ಕಡಿಯಲಾದೀತೇ?




ಭಾರವಾದ ಮನದಿಂದ ಬರೆಯುತ್ತಿದ್ದ ಪೆನ್ನನ್ನು ಬಿಟ್ಟು ಕುರ್ಚಿಗೆ ಹಿಂದಕ್ಕೆ ಒರಗಿದಳು ಭಾರತಿ. ಭಾರವಾದ ನಿಟ್ಟುಸಿರೊಂದನ್ನು ಬಿಟ್ಟು ಮತ್ತೆ ತಾನು ಬರೆಯುತ್ತಿದ್ದ ಹಾಳೆಯನ್ನು ಕೈಗೆತ್ತಿಕೊಂಡಳು. 
ಮತ್ತೊಮ್ಮೆ ಅದನ್ನು ಓದತೊಡಗಿದಳು.
“ಮೈತ್ರಿ, ಇಲ್ಲಿ ಪ್ರೀತಿಯ ಮಗಳೆ ಎಂದು ಸಂಬೋಧಿಸುತ್ತಿಲ್ಲ ಏಕೆಂದರೆ ಆ ಪ್ರೀತಿ ಕಳೆದುಹೋಗಿದೆ ಎನಿಸುತ್ತಿದೆ. ನಮ್ಮಿಬ್ಬರ ಬಾಂಧವ್ಯ ಚಿರಕಾಲ ಎಂದು ನಂಬಿದ್ದೆ. ಆದರೆ ಅದು ಸುಳ್ಳು ಎಂದು ನೀ ಸಾಬೀತು ಮಾಡಿಬಿಟ್ಟೆ. ಪ್ರೀತಿ ಇದ್ದೆಡೆ ನಂಬಿಕೆ ಇರುತ್ತದೆ ಎನ್ನುತ್ತಾರೆ. ಆದರೆ ನೀ ನಂಬಿಕೆಗೆ ದ್ರೋಹ ಮಾಡಿದ ಮೇಲೆ ಪ್ರೀತಿ ಇನ್ನೆಲ್ಲಿರಲು ಸಾಧ್ಯ?"
"ಹೇಗಿದ್ದೀಯಾ ಎಂದು ಕೇಳುವ ಪದ್ಧತಿ ಇದೆ. ಆದರೆ ನಾನದನ್ನೂ ಕೇಳುವುದಿಲ್ಲ. ಏಕೆಂದರೆ ತನ್ನ ಸುಖವೇ ಸರ್ವಸ್ವ ಎಂದುಕೊಂಡವಳು ತನ್ನ ಯೋಗಕ್ಷೇಮ ನೋಡಿಕೊಳ್ಳಲಾರಳೇ?
ನಾವೆಲ್ಲರೂ ಕ್ಷೇಮ ಎಂದೂ ಸಹ ಬರೆಯುವುದಿಲ್ಲ. ನಾವು ಕ್ಷೇಮವಾಗಿಲ್ಲ ಎಂದರ್ಥವಲ್ಲ, ನಮ್ಮ ಕ್ಷೇಮದ ಬಗ್ಗೆ ಯೋಚಿಸದೆ ನಿರ್ಧಾರ ತೆಗೆದುಕೊಂಡಿರುವವಳಿಗೆ ಏನು ಕ್ಷೇಮ ಸಮಾಚಾರ ಹೇಳುವುದು?"
"ಹಾಗಿದ್ದರೆ ಮತ್ತೇಕೆ ಈ ಪತ್ರ ಎಂದುಕೊಳ್ಳುತ್ತಿದ್ದೀಯ? ಹೆಣ್ಣಾಗಿ ನೀ  ನಮ್ಮ ಮನೆಗಷ್ಟೇ ಅಲ್ಲ ಸ್ತ್ರೀಕುಲಕ್ಕೇ ಮಾಡಿದ ದ್ರೋಹದ ಬಗ್ಗೆ ನಿನಗೆ ಹೇಳದೆ ಹೋದರೆ ತಪ್ಪಾಗುತ್ತದೆ."
"ತಾಯಿಯಾಗಿ ನೀನು ಹುಟ್ಟಿದಂದಿನಿಂದ ನಿನ್ನ ಎಲ್ಲಾ ಬೇಕುಬೇಡಗಳನ್ನು ನಾನು ಸರಿಯಾಗಿಯೇ ನೋಡಿಕೊಂಡಿದ್ದೇನೆ. ಹೆಣ್ಣುಮಗು ಹುಟ್ಟಿತೆಂದು ಎಂದೂ ಬೇಸರಿಸಿಕೊಳ್ಳಲಿಲ್ಲ. ನಿನಗೆ ಖಾಯಿಲೆಯಾದಾಗ, ಆ ಇಡೀ ವರ್ಷ ನಿನ್ನನ್ನು ನೋಡಿಕೊಳ್ಳುವಾಗ ನನ್ನೆಲ್ಲಾ ಸಂತೋಷ ನೀ ಕಸಿದುಕೊಂಡೆ ಎನ್ನಲಿಲ್ಲ, ಸಂಕಟಪಡಲಿಲ್ಲ."
"ನಿನಗೆ ಅಕ್ಷರಾಭ್ಯಾಸ ಮಾಡಿಸಿದ ಮೊದಲನೇ ದಿನದಿಂದಲೇ ನಿನ್ನ ಶಿಕ್ಷಣದ ಬಗ್ಗೆ ಗಮನಕೊಟ್ಟೆ. ಇತರೆ ಎಷ್ವೋ ಹೆಣ್ಣುಮಕ್ಕಳಿಗೆ ಸಿಗದ ಸ್ವಾತಂತ್ರ್ಯ ಕೊಟ್ಟೆ. ಸಂಗೀತ, ಕರಾಟೆ – ಯಾವುದನ್ನೂ ಬೇಡವೆನಲಿಲ್ಲ. ನೀನು ಸ್ವಚ್ಛಂದವಾಗಿ ಹಾರಾಡಲು ಅನುವು ಮಾಡಿಕೊಟ್ಟೆ."
"ಹೆಚ್ಚು ಓದಬೇಕೆಂದಾಗ, ಬೇರೆ ಕಡೆ ಹಾಸ್ಟೆಲ್ಲಿನಲ್ಲಿ ಇದ್ದು ಓದಬೇಕೆಂದಾಗ, ನಿನ್ನ ಅಪ್ಪ, ಅಜ್ಜಿ, ತಾತ ಎಲ್ಲರನ್ನೂ ನಾನು ಒಪ್ಪಿಸಿದೆ. ನೆನಪಿದೆಯಾ, ಆಗಲೂ ನಿನ್ನ ತಾತ, 'ಯಾಕಮ್ಮಾ ಇದೆಲ್ಲಾ? ಹೆಣ್ಣುಮಕ್ಕಳನ್ನು ಹೊರಗೆ ಕಳಿಸಿದರೆ ಹೇಗೋ ಏನೋ ಎಂದು.' ಆಗಲೂ ನಾ ನಿನ್ನ ಪರವಾಗಿಯೇ ಮಾತನಾಡಿದೆ. ನನ್ನ ಮಗಳು ಎಂದೂ ತಪ್ಪು ಮಾಡುವುದಿಲ್ಲ ಎಂದು. ನಾನು ಬೆಳೆಸಿದ ರೀತಿಯ ಬಗ್ಗೆ, ನನ್ನ ತಾಯ್ತನದ ಬಗ್ಗೆ ಅಷ್ಟು ನಂಬಿಕೆಯಿತ್ತು. ಎಲ್ಲವನ್ನೂ ಒಂದೇ ಏಟಿಗೆ ನುಚ್ಚುನೂರುಮಾಡಿಬಿಟ್ಟೆಯಲ್ಲ?"
"ಅಷ್ಟು ನಂಬಿಕೆಯಿಂದ ನಿನ್ನನ್ನು ಹಾಸ್ಟೆಲ್ ನಲ್ಲಿ ಬಿಟ್ಟಾಗ ನೀನು ಓದುವ ಬದಲು ಪ್ರೇಮದಲ್ಲಿ ಮುಳುಗಿದೆ. ಪ್ರೇಮ ತಪ್ಪೆಂದು ನನ್ನ ವಾದವಲ್ಲ, ಆದರೆ ಓದುವುದನ್ನು ಮರೆತು….. ಇದು ತಪ್ಪಲ್ಲವೇ?
ಈ ವಿಷಯ ನಿನ್ನಪ್ಪನಿಗೆ ಗೊತ್ತಾಗಿ ಅವರು ಕೂಗಾಡಿದ್ದು, ನಿಜ. ಅದು ಅವರ ಧೋರಣೆ. ಆದರೆ ನಾನು ನಿನಗೆ ಏನು ಹೇಳಿದೆ. ಈ ಪ್ರೀತಿ - ಪ್ರೇಮ ಬಿಟ್ಟುಬಿಡು. ಇದು ಓದುವ ವಿದ್ಯಾರ್ಥಿಗಳಿಗಲ್ಲ. ಓದು ಮುಗಿಸಿ, ಉದ್ಯೋಗ ಸಂಪಾದಿಸಿಕೊ, ನಂತರ ನೋಡೋಣ ಎಂದಿರಲಿಲ್ಲವೇ?"
"ನಿನ್ನಪ್ಪ ಮುಂದೆ ಓದಲು ಕಳಿಸುವುದು ಬೇಡ ಎಂದಾಗ, “ಅಮ್ಮನ ಮೇಲಾಣೆ ನಾನು ತಪ್ಪು ಹೆಜ್ಜೆ ಇಡುವುದಿಲ್ಲ. ಓದಿನ ಬಗ್ಗೆ ಗಮನ ಹರಿಸುತ್ತೇನೆ” ಎಂದಿರಲಿಲ್ಲವೇ? ಮತ್ತೀಗ ಏನು ಮಾಡಿರುವೆ?
ಮೊನ್ನೆ ನಿನ್ನ ಚಿಕ್ಕಪ್ಪ ನಿನ್ನನ್ನು ಹೋಟೆಲ್ ನಲ್ಲಿ ಆ ಹುಡುಗನ ಜೊತೆ ನೋಡಿದಾಗಿನಿಂದ ಮನೆಯಲ್ಲಿ ರಾದ್ಧಾಂತವೋ ರಾದ್ಧಾಂತ. ಈಗ ನಿನ್ನಿಂದ ನಿನ್ನ ತಂಗಿಯನ್ನು ಓದಲು ಬೇರೆಡೆ ಕಳಿಸುವುದಿರಲಿ, ಇದೇ ಊರಿನಲ್ಲಿಯೂ ಕಾಲೇಜಿಗೆ ಬೇಡ ಎನ್ನುತ್ತಿದ್ದಾರೆ. ಅವಳು ನೆನ್ನೆಯಿಂದಲೂ ಏನನ್ನೂ ತಿಂದಿಲ್ಲ. ರೂಮ್ ಬಿಟ್ಟು ಹೊರಬಂದಿಲ್ಲ, ಅಳುವುದನ್ನು ನಿಲ್ಲಿಸಿಲ್ಲ."
"ಮೈತ್ರಿ, ನಿನ್ನನ್ನು ಹಾಸ್ಟೆಲ್ಲಿಗೆ ಬಿಟ್ಟು ನಾವು ಹಿಂತಿರುಗುವ ಮುನ್ನ ನಿನಗೊಂದು ಮಾತು ಹೇಳಿದ್ದೆ, ನೆನಪಿದೆಯಾ? ನೀನು ಚೆನ್ನಾಗಿ ಓದದಿದ್ದರೂ ಪರವಾಗಿಲ್ಲ, ನಮಗೆ, ನಿನಗೆ ಅವಮಾನವಾಗುವಂತಹ ಕೆಲಸ ಮಾಡಬೇಡವೆಂದು. ಎಲ್ಲಕ್ಕೂ ಮಿಗಿಲಾಗಿ, ನಮ್ಮ ಚಿಕ್ಕ ಊರಿನಿಂದ ಹೊರಗಡೆ ಬಂದು ಓದುತ್ತಿರುವ ಮೊದಲ ಹೆಣ್ಣುಮಗಳು ನೀನು, ನಿನ್ನ ಮೇಲೆ ನಮ್ಮೂರಿನ ಇತರ ಹೆಣ್ಣುಮಕ್ಕಳ ಭವಿಷ್ಯ ನಿಂತಿದೆ ಎಂದು. ಈಗ ನೋಡು, ನೀ ಮಾಡಿರುವ ತಪ್ಪಿಗೆ ನಿನ್ನ ತಂಗಿ ಮೊದಲ ಬಲಿಪಶು. ಇನ್ನೆಷ್ಟು ಹೆಣ್ಣುಮಕ್ಕಳ ಪರಿಸ್ಥಿತಿ ಹೀಗಾಗುತ್ತೋ?"
ಓದುವುದನ್ನು ನಿಲ್ಲಿಸಿದ ಭಾರತಿಗೆ, ಒಂದು ಘಟನೆ ಮನಸ್ಸಿನಲ್ಲಿ ಎಷ್ಟು ಕಹಿ ತುಂಬಿಸಿದೆಯಲ್ಲ ಎನಿಸಿತು. ಒಟ್ಟಿನಲ್ಲಿ ಮನದಲ್ಲಿ ಇರುವುದನ್ನೆಲ್ಲ ಹೊರ ಉಗುಳಲು ಸಿದ್ಧವಾದಳು. ಮೈತ್ರಿ ಎಂದೂ ಭಾರತಿಗೆ ಕೇವಲ ಮಗಳೆನಿಸಿರಲಿಲ್ಲ. ಇಬ್ಬರೂ ಸ್ನೇಹಿತರಂತಿದ್ದರು. ಎಲ್ಲಾ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಮೈತ್ರಿ ಇದುವರೆವಿಗೂ ಯಾವುದೇ ನಿರ್ಧಾರವನ್ನು ತಾನೇ ತೆಗೆದುಕೊಂಡಿರಲಿಲ್ಲ, ಭಾರತಿಗೆ ಹೇಳದೆ. 
ಅಂತಾದ್ದರಲ್ಲಿ, ಮೈತ್ರಿಗೆ ಈಗ ಏನಾಯಿತು? ಮಗಳು ಬದಲಾಗಿಬಿಟ್ಟಳೇ? ನನ್ನ ಪ್ರೀತಿಯಲ್ಲಿ, ಬೆಳೆಸುವುದರಲ್ಲಿ ಏನಾದರೂ ತಪ್ಪಾಯಿತೇ ಎನ್ನುವುದು ಕೊರೆಯತೊಡಗಿತ್ತು.
ಒಟ್ಟಿನಲ್ಲಿ ಈ ಪತ್ರ ಮುಗಿಸಿ ಇಂದೇ ಪೋಸ್ಟ್ ಮಾಡಬೇಕು ಎಂದು ನಿರ್ಧರಿಸಿ ಮತ್ತೆ ಬರೆಯತೊಡಗಿದಳು.
ಅಷ್ಟರಲ್ಲಿ ಹೊರಗಡೆ ಪೋಸ್ಟ್ ಎನ್ನುವ ಶಬ್ದ ಕೇಳಿಸಿತು. ಹೊರಗಡೆ ಹೋದಾಗ ಪತ್ರ ನೋಡಿದಾಗ ಶಾಕ್ ಆಯಿತು. ಕವರ್ ಮೇಲೆ ಮೈತ್ರಿಯ ಬರವಣಿಗೆ ಕಾಣಿಸಿತು. ಯಾವತ್ತೂ ಪತ್ರ ಬರೆಯದ ಮಗಳು ಏನು ಬರೆದಿರಬಹುದೆಂದು ಕಾತರದಿಂದ ಒಡೆದು ಒಳಹೋಗುತ್ತಲೇ ಓದಲಾರಂಭಿಸಿದಳು.
---*----


ಪ್ರೀತಿಯ ಅಮ್ಮನಿಗೆ
"ಅಮ್ಮ, ನೇರವಾಗಿ ವಿಷಯಕ್ಕೆ ಬರುತ್ತಿದ್ದೇನೆ. ಅಪ್ಪ ಚಿಕ್ಕಪ್ಪ -ಚಿಕ್ಕಮ್ಮನೆದುರು, ನಾನು ಹುಟ್ಟಿದ್ದೇ ತಪ್ಪು, ನಾನು ನಿಮಗೆಲ್ಲ ಅವಮಾನ ಮಾಡಿದ್ದೀನಿ ಇತ್ಯಾದಿ, ಇತ್ಯಾದಿ ಮಾತನಾಡಿದ್ದಾರೆ ಎಂದು ತಿಳಿಯಿತು. ನೀವು ಮೌನವಾಗಿ ಕುಳಿತ್ತಿದ್ದೀರಿ ಎಂದೂ ಸಹ ತಿಳಿಯಿತು."
"ಯಾಕೆ ಆ ರೀತಿ ಮಾತನಾಡಿದಿರಿ ಎಂದು ನಾನು ಕೇಳುವುದಿಲ್ಲ. ಆ ಹಕ್ಕು ನಿಮಗಿದೆ. ನನಗೆ ಮಾತ್ರ ನಿಮ್ಮ ಮಗಳಾಗಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ. ಕಾರಣ ಏನು ಗೊತ್ತಾ, ನೀವು ಹೆಚ್ಚು ಓದದಿದ್ದರೂ ನನ್ನನ್ನು ಎಂ ಟೆಕ್ ವರೆಗೂ ಓದಿಸಿದಿರಿ. ನೀವು ಪಡೆಯಲು ಸಾಧ್ಯವಾಗದ್ದನ್ನೆಲ್ಲಾ ನನಗೆ ಪಡೆಯಲು ದಾರಿ ಮಾಡಿಕೊಟ್ಟಿದ್ದೀರಿ.
ಭಾರತಿಗೆ ಮಗಳ ಬಗ್ಗೆ ಒಂದು ಘಳಿಗೆ ಮನಸ್ಸು ಮೃದುವಾಯಿತು. ಆದರೆ ಅಷ್ಟರಲ್ಲೇ ಆದ ಅವಮಾನ ಕಣ್ಣೆದುರಿಗೆ ಬಂದು ಮತ್ತೆ ಮನ ಕಠಿಣವಾಯಿತು. ಓದುವುದನ್ನು ಮುಂದುವರೆಸಿದಳು."
"ಅಮ್ಮ, ನಾನೇನು ತಪ್ಪು ಮಾಡಿದೆ ಎಂದು ಅಪ್ಪ ಆ ರೀತಿ ಮಾತನಾಡಿದರು? ಅದರ ಬದಲು ನನ್ನನ್ನೇ ಕರೆದು ಕೇಳಬಹುದಿತ್ತಲ್ಲ. ನಾನೇ ನಿಮ್ಮೆದುರು ವಿಷಯ ಪ್ರಸ್ತಾಪಿಸುವಷ್ಟರಲ್ಲಿ ಇಷ್ಟೆಲ್ಲಾ ನಡೆದುಹೋಗಿದೆ."
"ಅಮ್ಮ ಒಂದು ಮಾತು ಮಾತ್ರ ನಿಜ, ಯಾವ ಕಾರಣಕ್ಕೂ ನಿಮಗಿಂತ ನನಗೆ ಯಾರೂ ಹೆಚ್ಚಲ್ಲ. ಕೇವಲ ತಾಯಿಯಾಗಿ ಜನ್ಮ ಕೊಟ್ಟಿದ್ದೀರಿ ಎಂದಲ್ಲ. ಇಂದು ನಾನು ಏನೇ ಸಾಧಿಸಿದ್ದರೂ ಅದಕ್ಕೇ ನೀವೇ ಕಾರಣವಲ್ಲವೇ?"
"ಮದುವೆ ಅವಶ್ಯಕ ಮಾತ್ರವಲ್ಲ ಅನಿವಾರ್ಯ ಎಂಬ ಭಾವನೆಯನ್ನು ಮನೆಯವರೆಲ್ಲಾ ತುಂಬಿದ್ದೀರಿ. ನಾವು ಹೋದ ಮೇಲೆ ನಿನ್ಗ್ಯಾರು ಆಗುತ್ತಾರೆ ಎಂದು. ಹಾಗಿದ್ದರೆ ನಾನು ನನ್ನ ಮನಸ್ಸಿಗೆ ಸರಿ ಹೋಗುವಂಥವನನ್ನು ತಾನೇ ಆರಿಸಿಕೊಳ್ಳಬೇಕು, ನನ್ನ ಜೊತೆ ಹೊಂದಿಕೊಂಡು ಹೋಗುವಂಥವನನ್ನು ತಾನೇ ಹುಡುಕಿಕೊಳ್ಳಬೇಕು. ನೀವು ಅಂತಹವನನ್ನು ಹುಡುಕುತ್ತಿರಲಿಲ್ಲ ಎಂದಲ್ಲ. ಆದರೆ ಅಷ್ಟರಲ್ಲಿ ಇವನನ್ನು ನಾ ನೋಡಿ ಅವನ ಒಳ್ಳೆಯತನದಿಂದ ಆಕರ್ಷಿತಳಾದೆ. ನನಗೆ ಹೊಂದಿಕೊಳ್ಳುತ್ತಾನೆಂದು ಆಯ್ಕೆ ಮಾಡಿಕೊಂಡೆ. ನಿಮ್ಮ ಮಗಳ ಆಯ್ಕೆಯ ಬಗ್ಗೆ ನಿಮಗೆ ಸಂದೇಹವೇ? ನಿಮ್ಮ ಲಾಲನೆಪಾಲನೆ ಬಗ್ಗೆ ನಿಮಗೇ ಅನುಮಾನವೇ? ಇದು ಸರಿಯೇ?"
"ನಿಮ್ಮ ಒಪ್ಪಿಗೆ ಇಲ್ಲದೆ ನಾನಂತೂ ಮದುವೆಯಾಗುವುದಿಲ್ಲ. ನಿಮ್ಮನ್ನು ಬಿಟ್ಟು ಬಾಳುವ ಶಕ್ತಿ ನನಗಿಲ್ಲ. ನೀವು ಆ ಹುಡುಗನನ್ನು ಒಮ್ಮೆ ನೋಡಿ. ನಂತರವೂ ನಿಮಗೆ ಸರಿ ಎನಿಸದಿದ್ದರೆ ನಾನು ಮದುವೆಯಾಗುವುದಿಲ್ಲ. ಆದರೆ ಇನ್ನೊಬ್ಬನನ್ನು ಮದುವೆಯಾಗು ಎಂದು ಒತ್ತಾಯಿಸಬಾರದು. ನಿಮ್ಮ ಭಾವನೆಗೆ ನಾನು ಧಕ್ಕೆ ತರಲು ಇಚ್ಛಿಸುವುದಿಲ್ಲ, ಹಾಗೇ ನೀವು ಸಹ ತರಬಾರದು."
"3 ವರ್ಷಗಳಿಂದಲೂ ಪ್ರೀತಿಸುತ್ತಿದ್ದೆ ನಿಜ, ಆದರೆ ನಿಮಗೆ ಹೇಳಿಲ್ಲ. ನೀವು ಓದಲು ಹಣ ಕಳಿಸುವುದಿಲ್ಲ ಎಂಬ ಭಯದಿಂದಲ್ಲ. ಸಂಜೆ ಎಲ್ಲಾದರೂ 2 ಘಂಟೆ ಪಾರ್ಟ್ ಟೈಮ್ ಕೆಲಸ ಮಾಡಿದ್ದರೆ ನನ್ನ ಖರ್ಚು ಕಳೆದುಹೋಗುತ್ತಿತ್ತು. ಇಲ್ಲ ಕೇಳಿದ್ದರೆ, ಆ ಹುಡುಗನೇ ಕೊಡುತ್ತಿದ್ದ. ಆದರೆ ನನ್ನ ಕಾಲ ಮೇಲೆ ನಾನು ನಿಂತುಕೊಂಡ ಮೇಲೆ ಈ ವಿಚಾರ ನಿಮಗೆ ತಿಳಿಸೋಣ ಎಂದುಕೊಂಡೆ. ಅಷ್ಟರಲ್ಲಿ ಯೋಚಿಸುವ ಸಮಯವೂ ಸಿಗುತ್ತದೆ, ಸಂಬಂಧ ಜೊಳ್ಳಾಗಿದ್ದರೆ ಕಳಚಿಹೋಗಲಿ, ಕಾಳಾಗಿದ್ದರೆ ಉಳಿಯಲಿ ಎಂಬ ಭಾವನೆಯೂ ಇತ್ತು. ಈಗ ನನ್ನ ಕೈಲಿ ಉದ್ಯೋಗ ಇದೆ ಎಂದಲ್ಲ."
"ಆಸ್ತಿ ಕೊಡುವುದಿಲ್ಲ ಎಂದೂ ಸಹ ಅಪ್ಪ ಹೇಳಿದರಂತೆ. ನಿಮ್ಮಿಂದ ನಾನ್ಯಾವತ್ತೂ ಬಯಸಿದ್ದು ಪ್ರೀತಿಯೊಂದನ್ನೇ. ಅದು ನಾನು ಬಯಸಿದ್ದಕ್ಕಿಂತ ಹೆಚ್ಚೇ ಸಿಕ್ಕಿದೆ. ಜೊತೆಗೆ ನೀವು ಯಾರೂ ಕಸಿಯಲಾಗದ ಆಸ್ತಿ – ವಿದ್ಯೆಯನ್ನು ಕೊಟ್ಟಿದ್ದೀರಿ. ಅದಕ್ಕಿಂತ ನನಗಿನ್ನೇನು ಬೇಕು?"
ಭಾರತಿಗೆ ತನ್ನ ಮಗಳು ಎತ್ತರಕ್ಕೆ ಬೆಳೆಯುತ್ತಿದ್ದಾಳೆ ಎನಿಸಿತು, ಹೆಮ್ಮೆಯಾಯಿತು. ತಾನಷ್ಟೊಂದು ಬೇಜಾರು ಮಾಡಿಕೊಳ್ಳಬೇಕಿರಲಿಲ್ಲ ಎನಿಸಿತು. ಮುಂದೆ ಏನು ಬರೆದಿದ್ದಾಳೆ ಎಂದು ತಿಳಿದುಕೊಳ್ಳುವ ಕುತೂಹಲ ಹೆಚ್ಚಾಯಿತು.
“ಅಮ್ಮ ನಿಮ್ಮನ್ನು ನೋವಿಗೆ ಅವಮಾನಕ್ಕೆ ನೂಕಿ ನಾನು ಸಂತೋಷವಾಗಿರುತ್ತೇನೆ ಎಂದು ಹೇಗೆ ಭಾವಿಸಿದಿರಿ? ನಾನೇನೂ ತಪ್ಪು ಮಾಡಿಲ್ಲಮ್ಮ. ಪ್ರೀತಿಸುವುದೇ ತಪ್ಪಾದರೆ ಚಿಕ್ಕಪ್ಪ ಚಿಕ್ಕಮ್ಮ ಸಹ ಪ್ರೀತಿಸಿ ಮದುವೆಯಾದವರಲ್ಲವೇ? ಅಜ್ಜಿ ತಾತನಿಗೆ ಇಷ್ಟವಿಲ್ಲದಿದ್ದರೂ, ಕೊನೆಗೆ ವಿಧಿಯಿಲ್ಲದೆ ಒಪ್ಪಿಕೊಳ್ಳಲಿಲ್ಲವೇ? ಒಂದೇ ಜಾತಿಯಾದರೆ ಸಮಸ್ಯೆ ಇರುವುದಿಲ್ಲವೇ? ಚಿಕ್ಕಮ್ಮ ತಮ್ಮ ಅಮ್ಮ ಅಪ್ಪನ ಮಾತನ್ನು ಧಿಕ್ಕರಿಸಲಿಲ್ಲವೇ? ನಂತರ ತಾನೇ ಅವರ ಅಪ್ಪ ಅಮ್ಮ ಒಪ್ಪಿಕೊಂಡದ್ದು. ನಾನು ಅವರ ತಪ್ಪನ್ನು ಎತ್ತಿ ತೋರಿಸುತ್ತಿಲ್ಲ. ಅವರು ತಮಗಿಷ್ಟ ಬಂದವರನ್ನು ಆರಿಸಿಕೊಳ್ಳುವಾಗ ಅಜ್ಜಿ ತಾತನನ್ನು ಕಡೆಗಣಿಸಿದರೂ, ಈಗ ಅವರೇ ಮಾತನಾಡುತ್ತಿದ್ದಾರಲ್ಲ, ಅದನ್ನು ಕೇಳಿ ನೀವು ಬೇಜಾರು ಮಾಡಿಕೊಳ್ಳುತ್ತೀರಲ್ಲ? ಸರಿಯೇ? ಅವರು ಯಾರೂ ಒಪ್ಪಿಕೊಳ್ಳದಿದ್ದರೂ ತಾವು ಮದುವೆ ಆಗಿಯೇ ತೀರುತ್ತೇವೆಂದರು. ನಾನು ಆ ಮಟ್ಟಕ್ಕೆ ಇಳಿಯುತ್ತಿಲ್ಲ." 
"ಅಮ್ಮ ನನಗೆ ಗೊತ್ತು. ನೀವು ಅರ್ಥ ಮಾಡಿಕೊಳ್ಳುತ್ತೀರಿ. ನಾನು ತಪ್ಪು ಮಾಡಿದರೆ ತಿದ್ದುತ್ತೀರಿ ಎಂದು. ಸಮಾಜದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಾವೇನು ಮಾಡಿದರೂ ಟೀಕಾಚಾರ್ಯರು ಟೀಕೆ ಮಾಡುತ್ತಲೇ ಇರುತ್ತಾರೆ."
"ಅಮ್ಮ ಬೇರೆ ಹೆಣ್ಣುಮಕ್ಕಳಿಗೆ ತೊಂದರೆಯಾಗುವಂತಹ ಕೆಲಸ ನಾ ಮಾಡಿಲ್ಲಮ್ಮ. ನಿಮಗೇ ಗೊತ್ತು, ಪ್ರೀತಿ ಎಂದೂ ನನ್ನ ಗುರಿಗೆ ಅಡ್ಡಿಯಾಗಿಲ್ಲ. ನಾನೆಂದೂ ಕೆಟ್ಟದಾಗಿ ನಡೆದುಕೊಂಡಿಲ್ಲ. ಆಯ್ಕೆಯ ಹಕ್ಕನ್ನು ಚಲಾಯಿಸಿದ್ದೇನೆಯೇ ಹೊರತು ಅವಮಾನದ ಕೆಲಸ ಮಾಡಿಲ್ಲವಮ್ಮ. ಎಂಟೆಕ್ ಸೀಟು ಮೆರಿಟ್ ಸೀಟು ಎಂದು ಎಲ್ಲರಿಗೂ ಗೊತ್ತು. ಜೊತೆಗೆ ನಾ ಓಡಿಹೋಗುತ್ತಿಲ್ಲಮ್ಮ. ನಿಮ್ಮಗಳ ಆಶೀರ್ವಾದ ಪಡೆದು, ನಿಮ್ಮ ಸಮ್ಮುಖದಲ್ಲಿಯೇ ನನ್ನ ವಿವಾಹ, ಅದೂ ನೀವು ಒಪ್ಪಿ ಮಾಡಿದರೆ. ಈಗಲೂ ಅನಿಸುತ್ತಾ ಅಮ್ಮ, ನಾನು ದ್ರೋಹ ಮಾಡಿದೆ ಎಂದು?"
ಭಾರತಿಗೆ ತನ್ನ ಮನದಲ್ಲಿದ್ದ ಪ್ರಶ್ನೆಗಳೆಲ್ಲ ಮಗಳಿಗೆ ಹೇಗೆ ಗೊತ್ತಾಯಿತು ಎಂದು ವಿಸ್ಮಯಗೊಂಡಳು.
"ಕೊನೆಯದಾಗಿ ಅಮ್ಮ, ನನ್ನ ನಿರ್ಧಾರ ತಪ್ಪಾಗಿಯೂ ಇರಬಹುದು. ನನ್ನ ಮೇಲಿನ ಪ್ರೀತಿಗೆ ನೀವು ಒಪ್ಪಿದ ಮೇಲೂ ನನ್ನ ಬದುಕು ಸಮಸ್ಯೆಯಲ್ಲಿ ಸಿಲುಕಬಹುದು. ದೊಡ್ಡವರು ನೋಡಿ ಮಾಡುವ ಎಲ್ಲಾ ಮದುವೆಗಳೂ ಚೆನ್ನಾಗಿಯೇ ಇರುತ್ತವೆ ಎಂದು ಏನು ಗ್ಯಾರಂಟಿ? ಈಗ ರಾಣಿ ಆಂಟಿ ಮಗಳು ಡೈವೋರ್ಸ್ ತೆಗೆದುಕೊಳ್ಳುತ್ತಿಲ್ಲವೇ? ಜೀವನದಲ್ಲಿ ಆ ರೀತಿ ಸಮಸ್ಯೆ ಬಂದರೂ ನಗುನಗುತ್ತಲೇ ಎದುರಿಸುತ್ತೀನಿ, ಸಾಯುವುದಿಲ್ಲ - ನೀವು ಜೊತೆಗಿದ್ದರೆ, ನೀವು ಖಂಡಿತ ಜೊತೆಗಿರುತ್ತೀರ ಎಂದು ನನಗೆ ಗೊತ್ತು. ಬದುಕೇನೂ ಅಲ್ಲಿಗೆ ಮುಗಿಯುವುದಿಲ್ಲ ಅಲ್ಲವೇ?"
"ನೀವು ಸಂಬಂಧ ಬೇಡವೆಂದು ಕೋಪದಲ್ಲಿ ಹೇಳಿದರೂ ಅದು ಸತ್ಯಕ್ಕೆ ದೂರ ಎಂದು ನನಗೆ ಗೊತ್ತು. ಅಪ್ಪ ಕೋಪ ಮಾಡಿಕೊಳ್ಳಬಹುದು, ಸಂಬಂಧ ಕಡಿದುಕೊಳ್ಳಬಹುದು. ನೀವು ಆ ರೀತಿ ಮಾಡಲು ಸಾಧ್ಯವೇ? ಕರುಳಿನ ಬಳ್ಳಿಯ ಸಂಬಂಧ ಕಡಿಯಲಾದೀತೇ?"
ಭಾರತಿಗೆ ಮುಂದೆ ಓದಲಾಗಲಿಲ್ಲ. ಎಷ್ಟು ಅಪಾರ್ಥ ಮಾಡಿಕೊಂಡೆ ಮಗಳನ್ನು ಎನಿಸಿತು. ತಪ್ಪಿತಸ್ಥ ಭಾವನೆ ಕಾಡತೊಡಗಿತು. ಮನದಲ್ಲಿದ್ದ ಕಹಿ ಕರಗಿಹೋಯಿತು. ಸಧ್ಯ ಪತ್ರ ಪೋಸ್ಟ್  ಮಾಡಲಿಲ್ಲವಲ್ಲ ಎಂದುಕೊಂಡಳು.
ಅಷ್ಟರಲ್ಲಿ ಫೋನ್ ರಿಂಗಣಿಸತೊಡಗಿತು.
ಫೋನ್ ಎತ್ತಿದರೆ ಆಕಡೆ ಮೈತ್ರಿಯ ಮಾತು ಕೇಳಿಸಿತು. “ಅಮ್ಮ ನಾಳೆಯೇ ಬರುತ್ತಿದ್ದೇನೆ. ಅಮ್ಮನ ಮಡಿಲು ಬೇಕೆನಿಸುತ್ತಿದೆ.”
ಆನಂದಭಾಷ್ಪವೇ ಭಾರತಿಯ ಉತ್ತರವಾಯಿತು!
  - ಸುಧಾ ಜಿ

ಅನುವಾದಿತ ಕಥೆ - ಸ್ಥೈರ್ಯ

 [ಇಂಗ್ಲಿಷ್ ನಲ್ಲಿ ಎ.ಹಮದನ್ ಬರೆದಿರುವ 
ಗ್ರಿಟ್  ಕಥೆಯ ಕನ್ನಡ ಅನುವಾದ]


ಕೆಲವೊಂದು ಕಾರ್ಯಗಳು ಅವುಗಳ ಧೀರೋದಾತ್ತತೆಯಿಂದಾಗಿ ಆಶ್ಚರ್ಯದಾಯಕವಾಗಿರುತ್ತವೆ. ಅನಾಸ್ತಾಸೀಯಾ ಚೌಸ್‍ಳ ಕಥೆಯೂ ಹಾಗೆಯೇ ಇದೆ. ಅವಳ ಸ್ನೇಹಿತೆಯರೆಲ್ಲ ಅವಳನ್ನು ನಾಸ್ತ್ಯಾ ಎಂದು ಚಿಕ್ಕದಾಗಿ ಕರೆಯುತ್ತಿದ್ದರು. ಆಕೆ ಓರ್ವ ಸಾಧಾರಣ ಕಾರ್ಮಿಕಳು. ಅವಳು ದ್ವಿತೀಯ ಜಾಗತಿಕ ಯುದ್ಧದ ಸಮಯದಲ್ಲಿ ಸೆವಾಸ್ತಪೋಲ್‍ನಲ್ಲಿ ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು.
ಆ ಜಾಗದಲ್ಲಿ ಬಾಂಬ್‍ಗಳು ಭಯವನ್ನುಂಟುಮಾಡುವ ಶಬ್ದದೊಂದಿಗೆ ಸತತವಾಗಿ ಬೀಳುತ್ತಿದ್ದವು. ಅವುಗಳ ಸ್ಫೋಟದಿಂದಾಗಿ ಭೂಮಿ ನಡುಗುತ್ತಿತ್ತು. ನಾಸ್ತ್ಯಾ ಭಯದಿಂದ ನಡುಗುತ್ತಿದ್ದ ಹೃದಯದೊಂದಿಗೆ ತನ್ನ ಯಂತ್ರದ ಮುಂದೆ ಕುಳಿತಿದ್ದಳು. ಉಸಿರಾಡುವುದೂ ಕಷ್ಟವಾಗಿತ್ತು. ಹತ್ತಿರದಲ್ಲಿಯೇ ಬಾಂಬ್ ದಾಳಿಯಿಂದ ಸುರಕ್ಷಿತವಾಗಿರುವ ತಾಣವಿತ್ತು. ಅವಳು ಅಲ್ಲಿ ಹೋಗಿ ದಾಳಿ ಮುಗಿಯುವವರೆಗೂ ಕುಳಿತುಕೊಳ್ಳಬಹುದಿತ್ತು. ಆದರೆ ಅವಳು ಅಲ್ಲಿ ಪೇರಿಸಿಟ್ಟಿದ್ದ ಬಿಡಿ ಭಾಗಗಳನ್ನು ನೋಡಿದಳು. ಅವು ತಕ್ಷಣವೇ ರಣಾಂಗಣದಲ್ಲಿ ಬೇಕಾಗಿದ್ದವು.
“ಕಡಿಮೆ, ಇದು ಬಹಳ ಕಡಿಮೆ” ತನಗೆ ತಾನೇ ಹೇಳಿಕೊಂಡಳು. “ನಾನು ಇಲ್ಲಿಯೇ ಇದ್ದು ಕೆಲಸ ಮಾಡುತ್ತಾ ಹೋಗಬೇಕು. ನಮ್ಮ ಹುಡುಗರು ಮಾತ್ರ ಶತ್ರುಗಳು ದಾಳಿ ಮಾಡಿದಾಗ ಅವರ ಸ್ಥಾನಗಳನ್ನು ಬಿಟ್ಟು ಓಡಿ ಹೋಗುವುದಿಲ್ಲವಲ್ಲ” ಎಂದುಕೊಂಡು ತನ್ನ ಕೆಲಸ ಮುಂದುವರೆಸಿದಳು. ಅವಳ ಪಕ್ಕದಲ್ಲಿ ನೆಲದ ಮೇಲಿದ್ದ ರಾಶಿ ಎತ್ತರೆತ್ತರಕ್ಕೆ ಏರುತ್ತಲೇ ಹೋಯಿತು.
ಪ್ರತಿನಿತ್ಯ ಈ ಹುಡುಗಿ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ತನ್ನ ಕೆಲಸದ ಅವಧಿಯುದ್ದಕ್ಕೂ ದುಡಿಯುತ್ತಿದ್ದಳು. ಅವಳಿಗೆ ವಿಶ್ರಾಂತಿ ಬೇಕಿರಲಿಲ್ಲ. ನಗರವನ್ನು ಆಕ್ರಮಿಸಲಾಗಿತ್ತು, ದೇಶ ಅಪಾಯದಲ್ಲಿತ್ತು. ಇದು ವಿಶ್ರಾಂತಿಯ ಸಮಯವಾಗಿರಲಿಲ್ಲ. ಅವಳಿಗೆ ಭಯ ಹೊರಟುಹೋಯಿತು. ಅವಳು ಎಚ್ಚರಿಕೆಯ ಘಂಟೆಗಳಿಗೆ, ಬಾಂಬ್‍ನ ಆರ್ಭಟ, ಸ್ಫೋಟಕ್ಕೆ, ಚೀತ್ಕಾರಕ್ಕೆ, ಗುಂಡಿನ ಚಕಮಕಿಯ ಸದ್ದಿಗೆ ಒಗ್ಗಿಹೋದಳು. ಇವು ಯಾವುದೂ ಅವಳನ್ನು ಅವಳ ಕೆಲಸದಿಂದ ಬೇರೆ ಮಾಡಲು ಸಾಧ್ಯವಾಗಲಿಲ್ಲ. ಅವಳ ಮನಸ್ಸು ಅವಳ ಕೆಲಸದಲ್ಲಿ ಲೀನವಾಗಿತ್ತು. ಬಿಡಿಭಾಗಗಳು ಪರಿಪೂರ್ಣವಾಗಿರಬೇಕಿತ್ತು, ಅವಳು ಒಂದನ್ನೂ ಕೂಡ ಹಾಳು ಮಾಡುವಂತಿರಲಿಲ್ಲ.
ಆದರೆ ಒಂದು ದಿನ ನಾಸ್ತ್ಯಾ ಬಾಂಬ್ ಸ್ಫೋಟಕ್ಕೆ ಬಲಿಯಾದಳು ಮತ್ತು ಅದರಿಂದಾಗಿ ಅವಳ ಎಡಗೈಯನ್ನು ಕತ್ತರಿಸಬೇಕಾಯಿತು. ಅದು ಅವಳಿಗೆ ತೀವ್ರ ಹೊಡೆತವಾಗಿತ್ತು. ಅವಳು ಬಹಳಷ್ಟು ಅತ್ತಳು. ಒಂದೇ ಕೈಯಿಂದ ಯಾರು ಏನನ್ನು ಮಾಡಲು ಸಾಧ್ಯ? ಆಸ್ಪತ್ರೆಯಿಂದ ಅವಳನ್ನು ಕಳಿಸಿದಾಗ, ಅವಳಿಗೆ ಸೆವಾಸ್ತಪೋಲ್‍ಅನ್ನು ಬಿಡುವಂತೆ ಸಲಹೆ ನೀಡಲಾಯಿತು. ಆದರಳವಳು ಅದನ್ನು ನಿರಾಕರಿಸಿದಳು.
ಅದೇ ದಿನ ಅವಳು ತಾನು ಹಿಂದೆ ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಛೇರ್ಮನ್‍ನನ್ನು ನೋಡಲು ಹೋದಳು. ಪುನಃ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಳು. ಕೆಲಸಗಾರರ ತೀವ್ರ ಅವಶ್ಯಕತೆ ಇದ್ದುದ್ದರಿಂದ, ಜೊತೆಗೆ ಈ ಹುಡುಗಿಯ ದೃಢಸಂಕಲ್ಪವನ್ನು ಗೌರವಿಸುತ್ತಾ ಆ ಹುಡುಗಿಗೆ ಕೆಲಸ ಮಾಡಲು ಆತ ಅವಕಾಶ ಮಾಡಿಕೊಟ್ಟನು.
ಆರಂಭದಲ್ಲಿ ಒಂದೇ ಕೈಯಿಂದ ಕೆಲಸವನ್ನು ಮಾಡುವುದು ಅವಳಿಗೆ ಬಹಳ ಕಷ್ಟವಾಯಿತು. ಆದರೆ ವೈಮಾನಿಕ ದಾಳಿ ಮತ್ತು ಬಾಂಬ್ ದಾಳಿಯ ಮಧ್ಯದಲ್ಲಿಯೇ ಕೆಲಸ ಮಾಡುತ್ತಿದ್ದದ್ದು ಅವಳನ್ನು ಸದೃಢಗೊಳಿಸಿತ್ತು. ಹಲ್ಲು ಕಚ್ಚುತ್ತಾ, ಕೆಲಸವನ್ನು ತಾಳ್ಮೆಯಿಂದ ಮುಂದುವರೆಸಿದಳು. ಕ್ರಮೇಣವಾಗಿ ಅವಳ ಉತ್ಪಾದನೆ ಹೆಚ್ಚಾಗತೊಡಗಿತು. ಸಾಮಾನ್ಯ ಉತ್ಪಾದನೆಯಲ್ಲಿ ಶೇಕಡ 30, ನಂತರ 40, 50, ಕೊನೆಗೆ ಮೊದಲು ಮಾಡುತ್ತಿದ್ದಷ್ಟನ್ನೆ ಮಾಡಲಾರಂಭಿಸಿದಳು. ಆ ದಿನ ಅವಳಿಗೆ ಅತ್ಯಂತ ಸಂತೋಷದಾಯಕವಾಗಿತ್ತು. ಅವಳೊಂದಿಗೆ ಇಡೀ ಫ್ಯಾಕ್ಟರಿ ಸಂತೋಷದಲ್ಲಿ ಭಾಗಿಯಾಯಿತು.
ಆದರೆ ಅವಳಿಗೆ ಇಷ್ಟರಿಂದಲೇ ತೃಪ್ತಿಯಾಗಲಿಲ್ಲ. ಅವಳಿಗೆ ತನ್ನ ಜವಾಬ್ದಾರಿ ದ್ವಿಗುಣಗೊಂಡಿದೆ ಎನಿಸಿತ್ತು. ರಣಾಂಗಣದಲ್ಲಿದ್ದ ಕೆಂಪು ಸೈನ್ಯಕ್ಕೆ ಹೆಚ್ಚುಹೆಚ್ಚು ಶಸ್ತ್ರಾಸ್ತ್ರಗಳು ಬೇಕಿದ್ದವು. ಕ್ರಮೇಣವಾಗಿ ಅವಳು ಎಂದಿಗಿಂತ ಹೆಚ್ಚಾಗಿ ತಯಾರು ಮಾಡತೊಡಗಿದಳು. 
ಅಂದಿನ ಕಟು ದಿನಗಳ ಜೀವನದ ಶ್ರಮ ಮತ್ತು ಹೋರಾಟದ ತಾಳಕ್ಕನುಗುಣವಾಗಿ ಈ ಅಂಗವಿಕಲ ಮಹಿಳೆಯ ಪ್ರಯತ್ನಗಳನ್ನು ಇಡೀ ಫ್ಯಾಕ್ಟರಿ ಗಮನಿಸಿ ಆಶ್ಚರ್ಯಗೊಂಡಿತು ಮತ್ತು ಅವಳ ಯಶಸ್ಸಿನಿಂದ ಸಂತಸಗೊಂಡಿತು.
ನಾಸ್ತ್ಯಾ ತನ್ನ ಕೆಲಸದ ಪ್ರತಿ ಚಲನೆಯನ್ನು ಲೆಕ್ಕ ಹಾಕುತ್ತಿದ್ದಳು, ಉಪಕರಣಗಳು ತನ್ನ ಕೈಗೆಟಕುವಂತೆ ಹತ್ತಿರದಲ್ಲಿ ಇಟ್ಟುಕೊಳ್ಳುತ್ತಿದ್ದಳು ಮತ್ತು ಯಂತ್ರಕ್ಕೆ ತ್ವರಿತವಾಗಿ ಅದನ್ನು ಇಡುತ್ತಿದ್ದಳು. ಅದೇನು ಸುಲಭವಾಗಿರಲಿಲ್ಲ, ಆದರೆ ಅದನ್ನವಳು ಸಾಧಿಸಿದಳು. ಅವಳ ಉತ್ಪಾದನೆ ಶೇಕಡ 150, ನಂತರ 200, 250ಕ್ಕೆ ಏರಿ, ಅಂತಿಮವಾಗಿ ಶೇಕಡ 350ಕ್ಕೆ ಬಂದು ನಿಂತಿತು!!
ಅವಳ ಜೊತೆಗಾರರು ಹೇಳಿದರು: “ಅದು ಕೇವಲ ಎದೆಗಾರಿಕೆ. ನಾಸ್ತ್ಯಾ ಛಲವಾದಿ ಹುಡುಗಿ. ಅವಳ ಸ್ಥೈರ್ಯದಿಂದಾಗಿಯೇ ಅವಳು ಇಷ್ಟನ್ನು ಮಾಡಲು ಸಾಧ್ಯವಾಯಿತು” ಎಂದರು.
ಆಗಾಗ್ಗೆ ವೈಮಾನಿಕ ದಾಳಿ ಮಾಡುವುದರಿಂದ ಸೆವಾಸ್ತಪೋಲ್‍ನ ರಕ್ಷಣಾಕಾರರ ನೈತಿಕತೆಯನ್ನು ಮುರಿಯಬಹುದೆಂದು ಶತ್ರು ಭಾವಿಸಿದ್ದ. ಒಂದೇ ಕೈಯಿದ್ದ ನಾಸ್ತ್ಯಾ ಅವನ ಲೆಕ್ಕಾಚಾರ ತಪ್ಪೆಂದು ಸಾಬೀತುಪಡಿಸಿದಳು. ಅವಳ ಉದಾಹರಣೆ ನೂರಾರು ಕಾರ್ಮಿಕರಿಗೆ ಸ್ಫೂರ್ತಿ ನೀಡಿತು. ಇಡೀ ನಗರದಲ್ಲವಳು ಮನೆಮಾತಾದಳು. ಅವಳು ಓವರ್‍ಕೋಟ್ ಮತ್ತು ರೇಷ್ಮೆ ಫ್ರಾಕ್‍ನೊಂದಿಗೆ ತ್ವರಿತವಾಗಿ ನಡೆಯುತ್ತಿದ್ದರೆ ಬಹಳಷ್ಟು ಜನ ಸ್ನೇಹಪೂರ್ವಕವಾಗಿ ಅವಳಿಗೆ ವಂದಿಸುತ್ತಿದ್ದರು.
ಒಂದು ದಿನ ನಗರದಲ್ಲಿ ಸೆವಾಸ್ತಪೋಲ್‍ನ ಮಹಿಳಾ ರಕ್ಷಣಾಕಾರರ ಸಮ್ಮೇಳನ ನಡೆಯಿತು. ಅಲ್ಲಿ ನರ್ಸ್‍ಗಳು, ಮೆಷಿನ್ ಗನ್ನರ್ಸ್, ಸಿಗ್ನಲ್ ಕೊಡುವವರು, ಸರ್ಜನ್ನರು, ಯಂತ್ರ ಕಾರ್ಮಿಕರು ಮೆಕಾನಿಕ್‍ಗಳು, ಬಟ್ಟೆ ಕಾರ್ಮಿಕರು, ವೈದ್ಯರು, ಶಿಕ್ಷಕರು, ಟ್ರಕ್ ಡ್ರೈವರ್‍ಗಳು, ಇಲೆಕ್ಟ್ರಿಶಿಯನ್‍ಗಳು ಮತ್ತು ಇತರ ವೃತ್ತಿಯ ಮತ್ತು ಕಸುಬಿನ ಮಹಿಳೆಯರಿದ್ದರು. ಸಭಾಂಗಣ ತುಂಬಿಹೋಗಿತ್ತು. ನಾಸ್ತ್ಯಾಳು ಮುಖ ಕೆಂಪಗೆ ಮಾಡಿಕೊಳ್ಳುತ್ತಾ, ಸಂಕೋಚದಿಂದ ವೇದಿಕೆಯ ಮೇಲಿನ ಗೌರವದ ಸ್ಥಾನವನ್ನು ಅಲಂಕರಿಸಿದಳು. ಸೆವಾಸ್ತಪೋಲ್‍ಅನ್ನು ರಕ್ಷಿಸುತ್ತಿದ್ದ ಕೆಂಪು ಸೈನ್ಯದ ಜನರಲ್ ಇಡೀ ಸಭಾಸದರ ಕರತಾಡನದ ಮಧ್ಯದಲ್ಲಿ ನಾಸ್ತ್ಯಾಳ ಕೈಕುಲುಕಿ “ಆರ್ಡರ್ ಆಫ್ ದಿ ರೆಡ್ ಸ್ಟಾರ್” (ಕೆಂಪು ನಕ್ಷತ್ರದ) ಪದಕವನ್ನು ನೀಡಿ ಗೌರವಿಸಿದರು. 
- ಸುಧಾ ಜಿ   

ಅನುಭವ



ಸಹಜ ಅನುಕಂಪಗಳಿಲ್ಲದ ಸಾಮಾಜಿಕ ವಲಯ ಸೃಷ್ಟಿಯಾಗುತ್ತಿರುವುದು ಮುಂದಿನ ಬದುಕಿಗೆ ಎಚ್ಚರದ ಗಂಟೆ ಆತಂಕದ ಸೂಚನೆ ಎನಿಸುತ್ತಿದೆ. ನಮ್ಮ ಮೆಟ್ರೋ ಪ್ರಯಾಣಿಕಳಾದ ನನಗೆ ಮನೆಕೆಲಸ ಮುಗಿಸಿ ಓಲೋ ಆಟೋದಲ್ಲಿ ಹಾರುತ್ತ, ಅಂತರಿಕ್ಷದಲ್ಲಿ ಸಾಗುವ ಅವಕಾಶ.  ಧೂಳು, ಶಬ್ದಮಾಲಿನ್ಯಗಳಿಲ್ಲದೆ ಕಾಲೇಜು ಸೇರುವ ಧಾವಂತ. 
ನೂರಾರು ಪ್ರಯಾಣಿಕರು ನೂರಾರು ವಯೋಮಾನದವರು. ಸಿಕ್ಕೋರಿಗೆ ಸೀರುಂಡೆ ಅಲ್ಲಿನ ಸೀಟುಗಳು. ನನಗೋ ವಾರದಲ್ಲಿ ೯, ೧೦ ಬಾರಿಯಾದರು ನಿಲ್ಲುವ ಅನಿವಾರ್ಯದ ಅವಕಾಶ. ತರುಣ ತರುಣಿಯರಿಗೆ, ಪ್ರೌಢಾವಸ್ಥೆಯ ನಾಗರೀಕರಿಗೆ ಕನಿಷ್ಟ ವ್ಯವಧಾನ, ವಿವೇಕ ಕಾಣದ ಸ್ಥಿತಿ ಕಾಣುತ್ತಿದೆ. ಮೆಟ್ರೋಗೆ ಮಕ್ಕಳೊಂದಿಗಿನ ಪೋಷಕರು ಹಾಗು ವಯಸ್ಸಾದವರು ಕಡಿಮೆಪ್ರಮಾಣದಲ್ಲಿ ಬರುತ್ತಾರೆ.  ಬಂದಾಗ ಕೂರಲು ಅವಕಾಶ ನೀಡಬೇಕೆಂಬ ಅಲ್ಪಪ್ರಜ್ಞೆ ಇಂದಿನ ತಲೆಮಾರಿನಲ್ಲಿ ಕ್ಷೀಣಿಸುತ್ತಿರುವುದು ಕಾಣುತ್ತಿದೆ.  ಸಹಜ ಜೀವನದ ಲಯ ಬದಲಾಗುತ್ತಿದೆ ಎನಿಸುತ್ತಿದೆ. ಸಮರ್ಥನಿಗೆ ಮಾತ್ರ ಬದುಕಲು ಭೂಮಿ ಎಂಬ ತತ್ವ ಹೆಚ್ಚು ಸಾಕ್ಷಾತ್ಕಾರವಾಗುತ್ತಿದೆ. ೩೦ ರಿಂದ ೫೦ ನಿಮಿಷದ ಹಾದಿಯ  ಮೆಟ್ರೊವನ್ನ ಹಂಚಿಕೊಳ್ಳಲಾಗದ ಯುವಜನ ಯಾವುದನ್ನ ಮುಪ್ಪಲ್ಲಿ ಇರುವವರೊಂದಿಗೆ, ಮಕ್ಕಳೊಂದಿಗೆ ಹಂಚಿಕೊಂಡಾರು ಎಂಬ ಭಾವ ಬೇಸರ ಮೂಡಿಸುತ್ತಿದೆ. ಮೌಲ್ಯಗಳನ್ನ ಬದುಕಿನಲ್ಲಿ ಸಾಧಿಸಿ, ಉಳಿಸಿ, ಬೆಳಸಿಕೊಳ್ಳಬೇಕೇ ಹೊರತು ಸಹಜವಾಗಿ  ಬರುವಂಥದ್ದಲ್ಲ ಎನಿಸಿದ್ದು ನಿಜ. ಕೈ ನಡುಗುವ ಅಜ್ಜ, ಅಸಹಾಯಕ ಅಮ್ಮಂದಿರು ನಿಮ್ಮತ್ತ ದೃಷ್ಟಿ ಹರಿಸಿದರೆ ಅವರ ಕೂಗಿಗೆ ದನಿಯಾಗಿ, ಆಸರೆಯಾಗಿ ಕೆಲವು ಕ್ಷಣಗಳಿಗೆ. ಎಂಥ ಸುಖ ಮನಸಿಗೆ ಸಿಗುವುದು ಅನುಭವಿಸಿ ನೋಡಿ. ದೇಹಕ್ಕೆ ಕೆಲವು ನಿಮಿಷ ಕಿರಿಕಿರಿ ಎನಿಸಬಹುದು ಆದರೆ ಅವರ ಸಮಾಧಾನ ನಮ್ಮಲ್ಲಿ ಒಂದು ನಿರಾಳತೆ ತರುತ್ತದೆ ಅಲ್ಲವೆ?
- ಸವಿತಾ 

ಸರಣಿ ಲೇಖನ - 2 - ನಾನೇಕೆ ನಾಸ್ತಿಕ

[ಭಗತ್ ಸಿಂಗ್ ರವರ ನಾನೇಕೆ ನಾಸ್ತಿಕ  ಅನುವಾದವಿದು]
(ಕಳೆದ ಸಂಚಿಕೆಯಿಂದ ಮುಂದುವರೆದಿದೆ)

ಆನಂತರ ನಾನು ಕ್ರಾಂತಿಕಾರಿ ಪಕ್ಷವನ್ನು ಸೇರಿಕೊಂಡೆ. ನನಗೆ ಆರಂಭದಲ್ಲಿ ಪರಿಚಯವಾದ ನಾಯಕರು, ತಮಗೆ ನಂಬಿಕೆಯಿರದಿದ್ದರೂ ದೇವರ ಅಸ್ತಿತ್ವವನ್ನು ನಿರಾಕರಿಸುವ ಧೈರ್ಯ ಮಾಡಲಿಲ್ಲ. ನನ್ನ ಪಟ್ಟು ಬಿಡದ ಪ್ರಶ್ನೆಗಳಿಗೆ ಅವರು ಹೀಗೆ ಹೇಳುತ್ತಿದ್ದರು: “ನಿಮಗೆ ಬೇಕೆನಿಸಿದಾಗ ಪ್ರಾರ್ಥಿಸಿ.” ಇದೊಂದು ನಾಸ್ತಿಕತೆ – ಆ ಪಂಥವನ್ನು ಅಂಗೀಕರಿಸಲು ಕಡಿಮೆ ಧೈರ್ಯ ಸಾಕು. 

ನನಗೆ ನಂತರದಲ್ಲಿ ಪರಿಚಯವಾದ ನಾಯಕರು ದೃಢಚಿತ್ತದ ದೈವಭಕ್ತರು. ಅವರ ಹೆಸರನ್ನು ಹೇಳುತ್ತೇನೆ – ಕಾಕೋರಿ ಪಿತೂರಿ ಮೊಕದ್ದಮೆಗೆ ಸಂಬಂಧಿಸಿದಂತೆ ಈಗ ಕರಿನೀರಿನ (life transportation) ಶಿಕ್ಷೆಯನ್ನು ಅನುಭವಿಸುತ್ತಿರುವ ಗೌರವಾನ್ವಿತ ಕಾಮ್ರೇಡ್ ಸಚಿಂದ್ರನಾಥ್ ಸನ್ಯಾಲ್. ಅವರ ಏಕೈಕ ಪ್ರಸಿದ್ಧ ಕೃತಿ ‘ಬಂಧಿ ಜೀವನ’ದಲ್ಲಿ ಪ್ರಥಮ ಪುಟದಿಂದಲೇ ದೇವರ ಮಹಿಮೆಯನ್ನು ಹಾಡಿಹೊಗಳಿದ್ದಾರೆ. ವೇದಾಂತದ ಪ್ರಭಾವದಿಂದಾಗಿ, ಆ ಸುಂದರ ಪುಸ್ತಕದ ಎರಡನೆಯ ಭಾಗದ ಕೊನೆಯ ಪುಟದಲ್ಲಿ ದೇವರ ಮೇಲೆ ಸ್ತುತಿಗಳ ಮಳೆಗರೆದಿದ್ದಾರೆ; ಇದು ಅವರ ಚಿಂತನೆಗಳ ಸುವ್ಯಕ್ತ ಭಾಗವನ್ನು ರೂಪಿಸುತ್ತದೆ. ಫಿರ್ಯಾದಿನ ಪ್ರಕಾರ, 1925ರ ಜನವರಿ 28ರಂದು ಭಾರತದಾದ್ಯಂತ ಹಂಚಿದ ‘ಕ್ರಾಂತಿಕಾರಿ ಕರಪತ್ರ’ವು ಅವರ ಬೌದ್ಧಿಕ ಶ್ರಮದ ಫಲ. ಈಗ ಗುಪ್ತ ಬರಹಗಳಲ್ಲಿ ಅನಿವಾರ್ಯವಾಗಿರುವಂತೆ, ಪ್ರಮುಖ ನಾಯಕ ತನಗೆ ಪ್ರಿಯವಾದ ಸ್ವಂತ ವಿಚಾರಗಳನ್ನು ವ್ಯಕ್ತಪಡಿಸುತ್ತಾನೆ; ಇನ್ನಿತರ ಕಾರ್ಯಕರ್ತರು, ಅವರಿಗೆ ಭಿನ್ನಾಭಿಪ್ರಾಯಗಳಿದ್ದರೂ ಸಹ ಅದಕ್ಕೆ ಮೌನವಾಗಿ ಸಮ್ಮತಿಸಬೇಕು. ಆ ಕರಪತ್ರದಲ್ಲಿ ದೇವರನ್ನು, ಅವನ ಆನಂದಗಳನ್ನು ಮತ್ತು ಲೀಲೆಗಳನ್ನು ಸ್ತುತಿಸುವುದಕ್ಕೇ ಒಂದು ಪ್ಯಾರಾ ಪೂರ್ತಿ ಮೀಸಲಿಡಲಾಗಿದೆ. ಅದೆಲ್ಲವೂ ನಿಗೂಢವಾದ (mysticism). 

ನಾನು ಹೇಳಬಯಸುವುದೇನೆಂದರೆ, ನಾಸ್ತಿಕತೆಯ ವಿಚಾರವು ಕ್ರಾಂತಿಕಾರಿ ಪಕ್ಷದಲ್ಲೂ ಸಹ ಹುಟ್ಟಿರಲಿಲ್ಲ. ಪ್ರಖ್ಯಾತ ಕಾಕೋರಿ ಹುತಾತ್ಮರು – ಆ ನಾಲ್ವರೆಲ್ಲರೂ ತಮ್ಮ ಕೊನೆಯ ದಿನಗಳನ್ನು ಪ್ರಾರ್ಥನೆಗಳಲ್ಲಿ ಕಳೆದರು. ರಾಮ್ ಪ್ರಸಾದ್ ಬಿಸ್ಮಿಲ್ ಸಂಪ್ರದಾಯಸ್ಥ ಆರ್ಯಸಮಾಜಿಯಾಗಿದ್ದರು. ಸಮಾಜವಾದ ಮತ್ತು ಕಮ್ಯುನಿಸಮ್ ಕ್ಷೇತ್ರಗಳಲ್ಲಿ ವಿಫುಲವಾದ ಅಧ್ಯಯನ ನಡೆಸಿದ್ದರೂ ಸಹ, ರಾಜೇಂದ್ರ ಲಾಹಿರಿಗೆ ಉಪನಿಷತ್ ಮತ್ತು ಗೀತಾಗಳ ಶ್ಲೋಕಗಳನ್ನು ಪಠಿಸುವ ಬಯಕೆಯನ್ನು ಹತ್ತಿಕ್ಕಲಾಗಲಿಲ್ಲ. ಅವರಲ್ಲೆಲ್ಲಾ ಪ್ರಾರ್ಥನೆಯನ್ನು ಮಾಡದ ಒಬ್ಬ ವ್ಯಕ್ತಿಯನ್ನು ನೋಡಿದ್ದೇನೆ. ಅವರು ಹೇಳುತ್ತಿದ್ದರು: “ತತ್ವಶಾಸ್ತ್ರವು ಮಾನವನ ದೌರ್ಬಲ್ಯ ಅಥವಾ ಜ್ಞಾನದ ಕೊರತೆಯ ಫಲ.” ಅವರೂ ಸಹ ಕರಿನೀರಿನ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆದರೆ ಅವರೂ ಕೂಡ ದೇವರ ಅಸ್ತಿತ್ವವನ್ನು ನಿರಾಕರಿಸುವ ಧೈರ್ಯ ಮಾಡಲೇ ಇಲ್ಲ.

ಅಲ್ಲಿಯ ತನಕ ನಾನೊಬ್ಬ ಕೇವಲ ರಮ್ಯ (romantic) ಭಾವನಾವಾದಿ ಕ್ರಾಂತಿಕಾರಿಯಾಗಿದ್ದೆ. ಅಲ್ಲಿಯವರೆಗೂ ನಾವು (ನಾಯಕರನ್ನು -ಸಂ.) ಅನುಸರಿಸಬೇಕಿತ್ತು. ಇದೀಗ ಸಂಪೂರ್ಣ ಜವಾಬ್ದಾರಿಯನ್ನು ಹೊರುವ ಕಾಲ ಬಂದಿದೆ. ಅನಿವಾರ್ಯ ಹಿನ್ನಡೆಯಿಂದಾಗಿ ಸ್ವಲ್ಪಕಾಲ ಪಕ್ಷದ ಅಸ್ತಿತ್ವವೇ ಅಸಾಧ್ಯವೇನೋ ಎನ್ನುವಂತೆ ತೋರುತ್ತಿತ್ತು. ಉತ್ಸಾಹಿ ಕಾಮ್ರೇಡರು – ಅಲ್ಲ, ನಾಯಕರು ನಮ್ಮನ್ನು ಅಪಹಾಸ್ಯ ಮಾಡಲಾರಂಭಿಸಿದರು. ಒಂದು ದಿನ ನಮ್ಮ ಸ್ವಂತ ಕಾರ್ಯಕ್ರಮವು ನಿಷ್ಪಲವೆಂಬ ನಂಬಿಕೆ ಬಂದುಬಿಡಬಹುದೇನೋ ಎಂದು ಸ್ವಲ್ಪಕಾಲ ಭಯಪಟ್ಟಿದ್ದೆ. ಅಲ್ಲೇ ನನ್ನ ಕ್ರಾಂತಿಕಾರಿ ಜೀವನ ತಿರುವು ಕಂಡಿದ್ದು. 

‘ಅಧ್ಯಯನ’ ಎನ್ನುವುದು ನನ್ನ ಮನದಂಗಳದಲ್ಲಿ ಪ್ರತಿಧ್ವನಿತವಾದ ಕೂಗು. ವಿರೋಧಿಗಳು ಮುಂದಿರಿಸಿದ ವಾದಗಳನ್ನು ಎದುರಿಸಲು ನನ್ನನ್ನು ಸಿದ್ಧಗೊಳಿಸಿಕೊಳ್ಳಲು ಅಧ್ಯಯನ ಮಾಡಬೇಕು. ನನ್ನ ಪಂಥದ ಪರವಾಗಿ ವಾದ ಮಾಡಲು ಆರಂಭಿಸಿದೆ. ನನ್ನ ಹಿಂದಿನ ಶ್ರದ್ಧೆ ಮತ್ತು ನಂಬಿಕೆಗಳು ಗಣನೀಯವಾಗಿ ಮಾರ್ಪಾಡಾದವು. ನಮ್ಮ ಹಿಂದಿನವರ ನಡುವೆ ಎದ್ದು ಕಾಣುತ್ತಿದ್ದ ಬರಿಯ ಹಿಂಸಾತ್ಮಕ ವಿಧಾನಗಳ ರಮ್ಯತೆಯ ಜಾಗದಲ್ಲಿ ಗಂಭೀರ ವಿಚಾರಗಳು ಬಂದವು. ಇನ್ನು ಆಧ್ಯಾತ್ಮಿಕತೆಯಿಲ್ಲ. ಭಯಂಕರ ಅವಶ್ಯಕತೆಯ ವಿಷಯದಲ್ಲಿ ಮಾತ್ರ ಬಲಪ್ರಯೋಗವನ್ನು ಸಮರ್ಥಿಸಿಕೊಳ್ಳಬಹುದು; ಒಂದು ನೀತಿಯಾಗಿ ಅಹಿಂಸೆಯು ಎಲ್ಲಾ ಸಮೂಹ ಚಳುವಳಿಗೆ ಅನಿವಾರ್ಯ. ಇದಿಷ್ಟು ವಿಧಾನಗಳ ಬಗ್ಗೆ. ನಾವು ಹೋರಾಡಬೇಕಾದ ಆದರ್ಶದ ಸ್ಪಷ್ಟ ಪರಿಕಲ್ಪನೆಯು ಬಹಳ ಮುಖ್ಯವಾದ ವಿಷಯವಾಗಿತ್ತು. 

ಕಾರ್ಯಕ್ಷೇತ್ರದಲ್ಲಿ ಬಹಳ ಮುಖ್ಯವಾದ ಚಟುವಟಿಕೆಗಳು ಇಲ್ಲದ್ದರಿಂದ, ವಿಶ್ವಕ್ರಾಂತಿಯ ವಿವಿಧ ಆದರ್ಶಗಳನ್ನು ಅಧ್ಯಯನ ಮಾಡಲು ನನಗೆ ವಿಫುಲ ಅವಕಾಶ ದೊರಕಿತು. ಅರಾಜಕತಾವಾದಿ ನಾಯಕ ಬಕುನಿನ್ ಬಗ್ಗೆ, ಕಮ್ಯುನಿಸಮ್‍ನ ಪಿತಾಮಹ ಕಾರ್ಲ್ ಮಾರ್ಕ್ಸ್ ರ ಕೆಲವು ಬರಹಗಳನ್ನು, ಹೆಚ್ಚಾಗಿ ತಮ್ಮ ದೇಶದಲ್ಲಿ ಕ್ರಾಂತಿಯನ್ನು ಯಶಸ್ವಿಯಾಗಿ ನಡೆಸಿದ ಲೆನಿನ್, ಟ್ರಾಟ್‍ಸ್ಕಿ ಮತ್ತು ಇನ್ನಿತರರ ಬರಹಗಳನ್ನು ಅಧ್ಯಯನ ಮಾಡಿದೆ. ಅವರೆಲ್ಲರೂ ನಾಸ್ತಿಕರಾಗಿದ್ದರು. ಬಕುನಿನ್‍ರವರ ‘ದೇವರು ಮತ್ತು ರಾಜ್ಯ’ವು ಸಮಗ್ರವಲ್ಲದಿದ್ದರೂ, ವಿಷಯದ ಬಗ್ಗೆ ಕುತೂಹಲಕಾರಿ ಅಧ್ಯಯನ. 

ನಂತರ ನಿರಾಲಂಭಸ್ವಾಮಿಯವರ ‘ಸಾಮಾನ್ಯ ಪ್ರಜ್ಞೆ’ (common sense) ಪುಸ್ತಕ ದೊರಕಿತು. ಅದು ಕೇವಲ ಒಂದು ರೀತಿಯ ನಿಗೂಢ ಆಸ್ತಿಕವಾದ. ಇದು ನನಗೆ ಅತ್ಯಂತ ಆಸಕ್ತಿದಾಯಕ ವಿಷಯವಾಯಿತು. ಸುಮಾರು 1926ರ ಕೊನೆಯಲ್ಲಿ, ವಿಶ್ವವನ್ನು ಸೃಷ್ಟಿಸಿದ, ಅದಕ್ಕೆ ಮಾರ್ಗದರ್ಶನವಿತ್ತ, ಅದನ್ನು ನಿಯಂತ್ರಿಸಿದ ಸರ್ವಶಕ್ತ ಪರಮ ಪುರುಷನ ಅಸ್ತಿತ್ವದ ಸಿದ್ಧಾಂತ ತಳವಿಲ್ಲದ್ದು ಎಂದು ಮನವರಿಕೆಯಾಗುತ್ತಿತ್ತು. ನನ್ನ ಈ ಅಪನಂಬಿಕೆಯನ್ನು ಬಹಿರಂಗಪಡಿಸಿದೆ. ಈ ವಿಷಯಗಳ ಬಗ್ಗೆ ನನ್ನ ಸ್ನೇಹಿತರೊಡನೆ ಚರ್ಚಿಸಲು ಆರಂಭಿಸಿದೆ. ನಾನು ಎಲ್ಲರಿಗೂ ಘೋಷಿತ ನಾಸ್ತಿಕನಾದೆ. ಆದರೆ ಅದರ ಅರ್ಥವನ್ನು ಈಗ ಚರ್ಚಿಸುತ್ತೇನೆ.
1927ನೇ ಮೇ ತಿಂಗಳಲ್ಲಿ ನನ್ನನ್ನು ಲಾಹೋರಿನಲ್ಲಿ ಬಂಧಿಸಿದರು. ಬಂಧನವು ಅನಿರೀಕ್ಷಿತವಾಗಿತ್ತು. ಪೊಲೀಸರಿಗೆ ನಾನು ಬೇಕಾದವನೆಂಬ ವಿಷಯವೇ ನನಗೆ ಗೊತ್ತಿರಲಿಲ್ಲ. ನಾನು ತೋಟವನ್ನು ಹಾದುಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಪೊಲೀಸರಿಂದ ಸುತ್ತುವರಿಯಲ್ಪಟ್ಟಿದ್ದೆ. ನನಗೇ ಆಶ್ಚರ್ಯವಾಗುವಂತೆ ಆಗ ಬಹಳ ಶಾಂತನಾಗಿದ್ದೆ. ನನಗೆ ಯಾವುದೇ ರೀತಿಯ ತಳಮಳ ಉಂಟಾಗಲಿಲ್ಲ ಅಥವಾ ಉದ್ರೇಕದ ಅನುಭವವೂ ಆಗಲಿಲ್ಲ. ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ನಂತರ ನನ್ನನ್ನು ರೈಲ್ವೆ ಪೊಲೀಸ್ ಲಾಕಪ್‍ಗೆ ಕರೆದೊಯ್ದರು; ಒಂದು ತಿಂಗಳು ಪೂರ್ತಿ ಅಲ್ಲಿದ್ದೆ. ಪೊಲೀಸ್ ಅಧಿಕಾರಿಗಳ ಜೊತೆ ನಡೆದ ನಡೆದ ಹಲವಾರು ದಿನಗಳ ಮಾತುಕತೆಯ ನಂತರ, ಕಾಕೋರಿ ತಂಡದೊಂದಿಗೆ ನನಗಿದ್ದ ಸಂಬಂಧ ಮತ್ತು ಕ್ರಾಂತಿಕಾರಿ ಚಳುವಳಿಗೆ ಸಂಬಂಧಿಸಿದಂತೆ ನನ್ನ ಇನ್ನಿತರ ಚಟುವಟಿಕೆಗಳ ಬಗ್ಗೆ ಅವರಿಗೆ ಕೆಲವು ಮಾಹಿತಿಗಳು ದೊರಕಿಬಹುದೆಂದು ಊಹಿಸಿದೆ. ನನಗೆ ಪೊಲೀಸರು ಹೇಳಿದ್ದೇನೆಂದರೆ, ಅಲ್ಲಿ ವಿಚಾರಣೆ ನಡೆಯುತ್ತಿದ್ದಾಗ (ಕಾಕೋರಿ ಮೊಕದ್ದಮೆಗೆ ಸಂಬಂಧಪಟ್ಟಿದ್ದು -ಸಂ) ನಾನು ಲಕ್ನೋದಲ್ಲಿದ್ದೆ; ಅವರನ್ನು (ಕಾಕೋರಿ ತಂಡದವರನ್ನು -ಸಂ.) ಬಿಡಿಸಲು ಸಂಚು ಮಾಡುತ್ತಿದ್ದೆ; ಅವರ ಒಪ್ಪಿಗೆ ಪಡೆದ ನಂತರ ಸ್ವಲ್ಪ ಬಾಂಬುಗಳನ್ನು ಶೇಖರಿಸಿಕೊಂಡಿದ್ದೆವು ಮತ್ತು ಅದನ್ನು ಪರೀಕ್ಷಿಸಲು 1926ರ ದಸರಾ ಹಬ್ಬದ ಸಂದರ್ಭದಲ್ಲಿ ಬಾಂಬೊದನ್ನು ಜನಸಂದಣಿಯ ಮೇಲೆ ಬಾಂಬ್ ಎಸೆದೆವು  - ಇದೆಲ್ಲವನ್ನೂ ನನ್ನ ಹಿತದೃಷ್ಟಿಯಿಂದ, ಕ್ರಾಂತಿಕಾರಿ ಪಕ್ಷದ ಚಟುವಟಿಕೆಗಳ ಮೆಲೆ ಬೆಳಕು ಚೆಲ್ಲುವ ಯಾವುದಾದರೂ ಹೇಳಿಕೆಯನ್ನು ನೀಡುವುದಾದರೆ, ನನ್ನನ್ನು ಬಂಧಿಸದಿರುವುದಷ್ಟೇ ಅಲ್ಲ, ನ್ಯಾಯಾಲಯದಲ್ಲಿ ಮಾಫಿ ಸಾಕ್ಷಿಯಾಗಿ (approver) ಹಾಜರುಪಡಿಸದೇ ಬಂಧಮುಕ್ತಗೊಳಿಸಿ, ಬಹುಮಾನವನ್ನೂ ಕೊಡುತ್ತೇವೆಂದು ಅವರು ಮುಂದುವರೆಸಿ ಹೇಳಿದರು. ಅವರ ಪ್ರಸ್ತಾಪ ಕೇಳಿ ನಕ್ಕುಬಿಟ್ಟೆ. ಅದೆಲ್ಲವೂ ಮೋಸ. ನಮ್ಮಂಥ ವಿಚಾರಗಳಿರುವ ಜನರು ತಮ್ಮ ಸ್ವಂತ ಮುಗ್ಧ ಜನತೆಯ ಮೇಲೆ ಬಾಂಬು ಎಸೆಯುವುದಿಲ್ಲ. 

ಒಂದು ದಿನ ಬೆಳಿಗ್ಗೆ, ಅಂದಿನ ಸಿಐಡಿ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ನ್ಯೂಮನ್ ನನ್ನಲ್ಲಿಗೆ ಬಂದರು. ಬಹಳಷ್ಟು ಅನುಕಂಪದ ಮಾತುಕತೆಯಾದ ನಂತರ, ಅವರು ಕೇಳಿದ ಯಾವುದಾದರೊಂದು ಹೇಳಿಕೆಯನ್ನು ಕೊಡದಿದ್ದರೆ, ಕಾಕೋರಿ ಕೇಸಿಗೆ ಸಂಬಂಧಪಟ್ಟಂತೆ ಯುದ್ಧಸಾರುವ ಪಿತೂರಿಯ ಮತ್ತು ದಸರಾ ಬಾಂಬ್ ದಾಳಿಗೆ ಸಂಬಂಧಪಟ್ಟಂತೆ ಭಯಾನಕ ಕೊಲೆಗಳ ಆಪಾದನೆಯ ಮೇಲೆ ವಿಚಾರಣೆಗೆ ನನ್ನನ್ನು ಕಳುಹಿಸಬೇಕಾಗುತ್ತದೆಯೆಂಬ - ಅವರಿಗೆ ಬಹಳ ದುಃಖದ – ವಿಷಯವನ್ನು ತಿಳಿಸಿದರು. ಜೊತೆಗೆ ನನ್ನನ್ನು ಅಪರಾಧಿಯನ್ನಾಗಿ ಮಾಡಲು ಮತ್ತು ನೇಣಿಗೆ ಹಾಕಲು ಅವರಲ್ಲಿ ಸಾಕಷ್ಟು ಸಾಕ್ಷ್ಯಗಳಿವೆಯೆಂದು ಹೇಳಿದರು. ಆ ದಿನಗಳಲ್ಲಿ - ಸ್ವಲ್ಪ ಮುಗ್ಧನಾಗಿದ್ದೆ - ಪೊಲೀಸರ ತಮಗೆ ಬೇಕಾದ್ದನ್ನು ಮಾಡಬಹುದೆಂದು ನಂಬಿದ್ದೆ. ಆ ದಿನವೇ ಕೆಲವು ಪೊಲೀಸ್ ಅಧಿಕಾರಿಗಳು, ನಾನು ಎರಡೂ ಸಾರಿ ನಿಯತವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕೆಂದು ಮನವೊಲಿಸಲು ಆರಂಭಿಸಿದರು. ಆಗ ನಾನು ನಾಸ್ತಿಕನಾಗಿದ್ದೆ. ಶಾಂತಿ ಮತ್ತು ಸಂತೋಷದ ದಿನಗಳಲ್ಲಿ ಮಾತ್ರವೇ ನಾಸ್ತಿಕನೆಂದು ಜಂಭಪಡಬಹುದೋ ಅಥವಾ ಅಂತಹ ಕಠಿಣ ಸಮಯದಲ್ಲೂ ಸಹ ನನ್ನ ತತ್ವಗಳಿಗೆ ಬದ್ಧನಾಗಿರಬಹುದೋ ಎಂಬುದನ್ನು ಬಗೆಹರಿಸಿಕೊಳ್ಳಬೇಕಾಗಿತ್ತು. ಬಹಳ ಆಲೋಚನೆಯ ನಂತರ ದೇವರನ್ನು ನಂಬುವುದಾಗಲೀ ಅಥವಾ ಪ್ರಾರ್ಥನೆ ಸಲ್ಲಿಸುವುದಾಗಲೀ ನನ್ನಿಂದ ಸಾಧ್ಯವಿಲ್ಲವೆಂದು ನಿರ್ಧರಿಸಿದೆ. ಇಲ್ಲ ನಾನು ಪ್ರಾರ್ಥನೆ ಮಾಡಲೇ ಇಲ್ಲ. ಅದು ನನ್ನ ಸತ್ವಪರೀಕ್ಷೆಯಾಗಿತ್ತು ಮತ್ತು ಅದರಲ್ಲಿ ಯಶಸ್ವಿಯಾದೆ. ಬೇರೆ ಕೆಲವು ವಿಷಯಗಳನ್ನು ಬಲಿಕೊಟ್ಟು ನನ್ನ ಜೀವ ಉಳಿಸಿಕೊಳ್ಳಬೇಕೆಂದು ನಾನು ಯಾವತ್ತೂ, ಒಂದರೆಕ್ಷಣವೂ ಬಯಸಲಿಲ್ಲ. ಹೀಗೆ ನಾನು ದೃಢನಿಷ್ಠೆಯ ನಾಸ್ತಿಕನಾದೆ, ಅಂದಿನಿಂದಲೂ ನಾಸ್ತಿಕನಾಗಿಯೇ ಉಳಿದಿದ್ದೇನೆ. ಅಂತಹ ಪರೀಕ್ಷೆಯನ್ನು ಎದುರಿಸಿ ನಿಲ್ಲುವುದು ಸುಲಭದ ಕೆಲಸವಾಗಿರಲಿಲ್ಲ. (ದೇವರಲ್ಲಿ -ಸಂ.) 

‘ನಂಬಿಕೆ’ಯು ಕಷ್ಟಕಾರ್ಪಣ್ಯಗಳನ್ನು ಹಗುರಗೊಳಿಸುತ್ತದೆ, ಅವುಗಳನ್ನು ಸಂತಸಮಯವನ್ನಾಗಿಯೂ ಮಾಡುತ್ತದೆ. ಮನುಷ್ಯನು ದೇವರಲ್ಲಿ ಬಹಳ ಬಲವಾದ ಸಮಾಧಾನ ಮತ್ತು ಸಹಾಯವನ್ನೂ ಕಂಡುಕೊಳ್ಳುತ್ತಾನೆ. ಅವನಿಲ್ಲದೆ ಹೋದರೆ ಮಾನವನು ತನ್ನ ಮೇಲೆಯೇ ಅವಲಂಬಿತನಾಗಿರಬೇಕು. ಪ್ರವಾಹ ಮತ್ತು ಬಿರುಗಾಳಿಗಳ ಮಧ್ಯೆ ತನ್ನ ಕಾಲ ಮೇಲೆ ತಾನು ನಿಲ್ಲುವುದು ಹುಡುಗಾಟಿಕೆಯಲ್ಲ. ಅಂತಹ ಪರೀಕ್ಷೆಯ ಸಮಯದಲ್ಲಿ ಜಂಭವಿದ್ದರೆ, ಅದು ಆವಿಯಾಗಿ ಹೋಗುತ್ತದೆ ಮತ್ತು ವ್ಯಕ್ತಿಯು ಸಾಮಾನ್ಯ ನಂಬಿಕೆಗಳನ್ನು ನಿರಾಕರಿಸುವ ಧೈರ್ಯ ಮಾಡಲಾರ. ಅವನು ಹಾಗೇನಾದರೂ ಮಾಡಿದರೆ, ಆಗ ಅವನಿಗೆ ಕೇವಲ ಜಂಭವಲ್ಲದೆ ಬೇರೆ ಯಾವುದೋ ಬಲವಿರಬೇಕೆಂಬ ನಿರ್ಧಾರಕ್ಕೆ ನಾವು ಬರಲೇಬೇಕು. ಈಗಿರುವ ಪರಿಸ್ಥಿತಿಯು ಸ್ಪಷ್ಟವಾಗಿ ಇದೇ ಆಗಿದೆ. ತೀರ್ಪು ಏನೆಂಬುದು ಈಗಾಗಲೇ ತುಂಬಾ ಚೆನ್ನಾಗಿ ಗೊತ್ತಿದೆ. ಅದನ್ನು ಒಂದು ವಾರದೊಳಗೆ ತಿಳಿಸುತ್ತಾರೆ. ನನಗೆ ಒಂದು ಧ್ಯೇಯಕ್ಕೋಸ್ಕರ ಪ್ರಾಣಾರ್ಪಣೆ ಮಾಡುತ್ತಿದ್ದೇನೆಂಬ ವಿಚಾರವನ್ನು ಬಿಟ್ಟು ಇನ್ನಾವ ಸಮಾಧಾನವಿದೆ? ದೇವರಲ್ಲಿ ನಂಬಿಕೆಯಿಟ್ಟಿರುವ ಒಬ್ಬ ಹಿಂದೂ, ತಾನು ರಾಜನಾಗಿ ಪುನರ್ಜನ್ಮವೆತ್ತುವುದನ್ನು ನಿರೀಕ್ಷಿಸಬಹುದು, ಮುಸ್ಲಿಮ್ ಅಥವಾ ಕ್ರಿಶ್ಚಿಯನ್ ಆದವನು ತಾನು ಸ್ವರ್ಗದಲ್ಲಿ ಅನುಭವಿಸುವ ಸುಖ ಮತ್ತು ತನ್ನ ನೋವು ಹಾಗೂ ಬಲಿದಾನಗಳಿಗಾಗಿ ದೊರಕುವ ಪುರಸ್ಕಾರಗಳ ಬಗ್ಗೆ ಕನಸು ಕಾಣಬಹುದು. ಆದರೆ ನಾನೇನನ್ನು ಬಯಸಲಿ? ನನ್ನ ಕೊರಳಿನ ಸುತ್ತ ಹಗ್ಗವನ್ನು ಸುತ್ತಿ ಕಾಲಕೆಳಗಿನ ಹಲಗೆಯನ್ನು ಎಳೆದ ಕ್ಷಣವೇ ಕೊನೆಯ ಕ್ಷಣ – ಅದೇ ನನ್ನ ಕಟ್ಟಕಡೆಯ ಕ್ಷಣವಾಗುತ್ತದೆ ಎಂದು ನನಗೆ ಗೊತ್ತು. ನಾನು ಅಥವಾ ಇನ್ನೂ ಸ್ಪಷ್ಟವಾಗಿ ಆಧ್ಯಾತ್ಮಿಕ ಭಾಷೆಯಲ್ಲಿ ವ್ಯಾಖ್ಯಾನಿಸಿರುವಂತೆ ಹೇಳುವುದಾದರೆ, ನನ್ನ ಆತ್ಮವು ಅಲ್ಲಿಗೆ ಅಂತ್ಯವಾಗುತ್ತದೆ. ಅದಕ್ಕಿಂತ ಹೆಚ್ಚೇನೂ ಇಲ್ಲ. ಅಂತಹ ಅಮೋಘವಾದ ಅಂತ್ಯವನ್ನು ಕಾಣದ ಕ್ಷಣಕಾಲದ ಹೋರಾಟದ ಬದುಕು - ಸ್ವತಃ ಆ ಬದುಕೇ ಪುರಸ್ಕಾರವಾಗುತ್ತದೆ. ನನಗೆ ಆ ಅರ್ಥದಲ್ಲಿ ಅದನ್ನು ತೆಗೆದುಕೊಳ್ಳುವ ಧೈರ್ಯವಿದ್ದರೆ ಮಾತ್ರ. ಇಹದಲ್ಲಾಗಲಿ ಅಥವಾ ಪರದಲ್ಲಾಗಲಿ ಪುರಸ್ಕಾರ ಸಿಗಬಹುದೆಂದು ಸ್ವಾರ್ಥದ ಉದ್ದೇಶ ಮತ್ತು ಬಯಕೆಗಳಿಲ್ಲದೆ, ಸ್ವಲ್ಪ ನಿಷ್ಕಾಮದಿಂದಲೇ ನನ್ನ ಜೀವನವನ್ನು ಸ್ವಾತಂತ್ರ್ಯ ಹಿತಾಸಕ್ತಿಗಾಗಿ ಮುಡಿಪಾಗಿಟ್ಟೆ; ಏಕೆಂದರೆ ನನಗೆ ಬೇರೆ ರೀತಿ ಮಾಡಲು ಸಾಧ್ಯವಿರಲಿಲ್ಲ.

ಮನುಕುಲದ ಸೇವೆಗಾಗಿ ಮತ್ತು ನೊಂದ ಜನತೆಯ ವಿಮುಕ್ತಿಯನ್ನು ಬಿಟ್ಟು ಬೇರಾವುದಕ್ಕೂ ತಮ್ಮನ್ನು ಮುಡಿಪಾಗಿಡಲು ಸಾಧ್ಯವಿಲ್ಲವೆಂಬ ಮನೋಭಾವವಿರುವ ಬಹುದೊಡ್ಡ ಸಂಖ್ಯೆಯ ಪುರುಷರು ಮತ್ತು ಮಹಿಳೆಯರನ್ನು ಕಾಣುವ ದಿನ ಸ್ವಾತಂತ್ರ್ಯದ ಯುಗ ಆರಂಭವಾಗುತ್ತದೆ. ದಮನಕಾರರನ್ನು, ಶೋಷಕರನ್ನು ಮತ್ತು ನಿರಂಕುಶ ಪ್ರಭುಗಳನ್ನು ಎದುರಿಸಿ ನಿಲ್ಲಲು ರಾಜನಾಗುವ, ಇಂದಿನ ಅಥವಾ ಮುಂದಿನ ಜನ್ಮದಲ್ಲಿ ಅಥವಾ ಸ್ವರ್ಗದಲ್ಲಿ ಯಾವುದಾದರೂ ಪುರಸ್ಕಾರ ಪಡೆಯುವ ಆಸೆಗಳು ಸ್ಫೂರ್ತಿ ತುಂಬಬಾರದು; ಬದಲಿಗೆ ಮನುಕುಲದ ಕೊರಳಿನಿಂದ ದಾಸ್ಯದ ನೊಗವನ್ನು ಕಿತ್ತೊಗೆದು, ಸ್ವಾತಂತ್ರ್ಯ ಮತ್ತು ಶಾಂತಿಯನ್ನು ಸ್ಥಾಪಿಸುವ ದಾರಿ ಅವರಿಗೆ ವೈಯಕ್ತಿಕವಾಗಿ ಅಪಾಯಕಾರಿಯಾದ ಮತ್ತು ಅವರ ಉದಾತ್ತ ಸ್ವಭಾವವಾದ ಕಲ್ಪನೆಗೆ ನಿಲುಕುವ ಏಕೈಕ ಮಹೋನ್ನತ ದಾರಿಯನ್ನು ಹಿಡಿಯಬೇಕು. ಅವರ ಉದಾತ್ತ ಧ್ಯೇಯದ ಬಗ್ಗೆ ಅವರಿಗಿರುವ ಹೆಮ್ಮೆಯನ್ನು ಜಂಭವೆಂದು ತಪ್ಪಾಗಿ ವ್ಯಾಖ್ಯಾನ ಮಾಡಬಹುದೆ? ಅಂತಹ ಅಸಹ್ಯಕರ ವಿಶೇಷಣಗಳನ್ನು ಹೇಳುವ ಧೈರ್ಯ ಯಾರಿಗಿದೆ? ನಾನು ಅವನನ್ನು ಮೂರ್ಖ ಅಥವಾ ನೀಚ ಎನ್ನುತ್ತೇನೆ. ಅವನಿಗೆ ಅಂತಹದೊಂದು ಹೃದಯದಲ್ಲಿ ಉಕ್ಕಿ ಹರಿಯುವ ಭಾವೋದ್ರೇಕಗಳನ್ನು ಮತ್ತು ಉದಾತ್ತ ಭಾವನೆಗಳನ್ನು, ಅದರ ಆಳ, ಭಾವುಕತೆಗಳನ್ನು ಅರಿಯಲು ಅಸಾಧ್ಯವಾಗಿರುವುದರಿಂದ ಅವನನ್ನು ಕ್ಷಮಿಸಿಬಿಡೋಣ. ಅವನ ಹೃದಯ ಮಾಂಸದ ಮುದ್ದೆಯಂತೆ ಸತ್ತುಹೋಗಿರುತ್ತದೆ, ಇತರ ಆಸಕ್ತಿಗಳ ನೀಚತನಗಳು ಆವರಿಸಿರುವ ಅವನ ಕಣ್ಣುಗಳು ದುರ್ಬಲವಾಗಿರುತ್ತವೆ. ಯಾವಾಗಲೂ ಸ್ವಾವಲಂಬನೆಯು ಜಂಭವೆಂಬ ವ್ಯಾಖ್ಯಾನಕ್ಕೆ ಗುರಿಯಾಗುತ್ತದೆ. ಅದು ದುಃಖಕರ ಮತ್ತು ಶೋಚನೀಯ. ಆದರೆ ಏನೂ ಮಾಡಲು ಸಾಧ್ಯವಿಲ್ಲ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
ಎಸ್.ಎನ್.ಸ್ವಾಮಿ

ವ್ಯಕ್ತಿ ಪರಿಚಯ - ಆಲೂರು ವೆಂಕಟರಾಯರು



ಆಲೂರು ವೆಂಕಟರಾಯರು
ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಒಗ್ಗೂಡಿಸಿ,ಕನ್ನಡಿಗರನ್ನು ಜಾಗೃತಗೊಳಿಸಿ ಭವ್ಯ ಕರ್ನಾಟಕದ ಕನಸ್ಸನ್ನು ಕಂಡು ಸಾಕಾರಗೊಳಿಸಿದ ಆಲೂರು ವೆಂಕಟರಾಯರು 1880 ಜುಲೈ 12 ರಂದು ಬಿಜಾಪುರದಲ್ಲಿ ಜನಿಸಿದರು.
ತಂದೆ ಭೀಮರಾವ್ ಮತ್ತು ತಾಯಿ ಭಾಗೀರಥಮ್ಮ. ಇವರ ವಂಶಜರಿಗೆ ಆಲೂರು ಜಹಗೀರಾಗಿ ಬಂದಿದ್ದರಿಂದ ಆಲೂರು ಎಂಬುದು ಇವರ ಮನೆತನದ ಹೆಸರಾಗಿದೆ. ಇವರ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣ ಧಾರವಾಡದಲ್ಲಿ ನಡೆಯಿತು. ಈ ಸಮಯದಲ್ಲಿ ಹಲವು ಚಳವಳಿಗಳಲ್ಲಿಯೂ ಭಾಗವಹಿಸಿದ್ದರು ಹಾಗೂ ಶಾಲಾ ಶಿಕ್ಷಕರುಗಳಿಂದ ಪ್ರಭಾವಿತಗೊಂಡಿದ್ದರು. ಇದೇ ಅವರ ಮುಂದಿನ ಹೋರಾಟಕ್ಕೆ ನಾಂದಿಯಾಯಿತು. ನಂತರ ಇವರು ಪುಣೆಯ ಫರ್ಗ್ಯೂಸನ್ ಕಾಲೇಜಿಗೆ ಸೇರಿದರು. ಸಹಪಾಠಿ ವಿನಾಯಕ ದಾಮೋದರ ಸಾವರಕರ ಮತ್ತು ಅವರ ಸ್ವಾತಂತ್ರ್ಯ ಹೋರಾಟಗಾರ ಸ್ನೇಹಿತರ ಒಡನಾಟದಿಂದ ಇವರಲ್ಲಿ ರಾಷ್ಟ್ರಾಭಿಮಾನ ಜಾಗೃತಗೊಂಡಿತು. ಅಲ್ಲದೆ ಗೋಖಲೆ,ರಾಜವಾಡ, ಮೊದಲಾದವರುಗಳಿಂದ ಸ್ಫೂರ್ತಿಗೊಂಡಿದ್ದರು. ತಿಲಕರ ಒಡನಾಟ ಮತ್ತು ಅವರ ಉಗ್ರಲೇಖನಗಳು ಇವರ ಮೇಲೆ ತುಂಬಾ ಪ್ರಭಾವ ಬೀರಿತು. ಆ ಸಮಯದಲ್ಲಿ ವೆಂಕಟರಾಯರಿಗೆ ಕರ್ನಾಟಕತ್ವದ ಕಲ್ಪನೆ ಇನ್ನೂ ಬಂದಿರಲಿಲ್ಲ. ಆದರೂ ಅವರಲ್ಲಿ ಕನ್ನಡಾಭಿಮಾನವಿತ್ತು. ಅಂದು ಕರ್ನಾಟಕವು ಮಹಾರಾಷ್ಟ್ರದ ಒಂದು ಅಂಗವಾಗಿತ್ತು. ಅವರು ಓದುತ್ತಿದ್ದ ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ ಪುಸ್ತಕಗಳು ಇರಲಿಲ್ಲ. ಇದಕ್ಕಾಗಿ ಪ್ರತಿಭಟನೆ ನಡೆಸಿದರು. ಪರಿಣಾಮವಾಗಿ ಧಾರವಾಡದಿಂದ ಕನ್ನಡ ಪುಸ್ತಕಗಳನ್ನು ತರಿಸಲಾಯಿತು. 1903 ರಲ್ಲಿ  ಬಿ.ಎ ಪದವಿ ಮುಗಿಸಿದರು.
ಕಾಲೇಜು ಶಿಕ್ಷಣ ಮುಗಿಸಿದ ವೆಂಕಟರಾಯರು ಒಮ್ಮೆ ಹಂಪೆಗೆ ಹೋಗಿದ್ದರು. ಅಲ್ಲಿನ ಅವಶೇಷಗಳು ಅವರ ಮೇಲೆ ತುಂಬಾ ಪರಿಣಾಮ ಬೀರಿದವು. " ಆ ದಿವಸ ನನ್ನ ಮನದಲ್ಲಿ ವಿದ್ಯುತ್ ಸಂಚಾರ ಮೂಡಿಸಿತು ಚಲನಚಿತ್ರ ಪಟದಲ್ಲಿ ವಿದ್ಯುತ್ ದೀಪದ ಬಲದಿಂದ ಮೂರ್ತಿಗಳು ಮೂಡುವಂತೆ ನನ್ನ ಹೃದಯದಲ್ಲಿ ಕರ್ನಾಟಕ ದೇವಿಯ ಸುಂದರ ಮೂರ್ತಿಯು ಒಡಮೂಡ ಹತ್ತಿತು.ಆ ದರ್ಶನವು ನನ್ನ ತಲೆಯಲ್ಲಿ ನಾನಾ ವಿಧದ ತರಂಗಗಳಿಗೆ ಇಂಬುಕೊಟ್ಟಿತು.ಹೃದಯ ಸಮುದ್ರವು ಅಲ್ಲೋಲಕಲ್ಲೋಲವಾಯಿತು.ಆ ದಿವಸವು ನನ್ನ ಜೀವನಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು." ಎಂದು ತಮ್ಮ ಅಂದಿನ ಅನುಭವವನ್ನು ಸ್ವತಃ ಅವರೇ ಹೇಳಿದ್ದಾರೆ. ಅಂದಿನಿಂದ ಅವರ ಕನ್ನಡಾಭಿಮಾನ ಹೆಚ್ಚಾಗಿ, ಕರ್ನಾಟಕದ ಗತವೈಭವವನ್ನು ಕನ್ನಡಿಗರ ಮುಂದಿಟ್ಟು ಅವರನ್ನು ಎಚ್ಚರಗೊಳಿಸಬೇಕೆಂದು ದೃಢಸಂಕಲ್ಪ ಮಾಡಿದರು. ನಂತರ ಕಾನೂನು ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ 1905 ರಲ್ಲಿ ಮುಗಿಸಿದರು. ನಂತರದಲ್ಲಿ ತಮ್ಮ ವಕೀಲಿ ವೃತ್ತಿಯನ್ನು ಧಾರವಾಡದಲ್ಲಿ ಪ್ರಾರಂಭಿಸಿದರು. ಇಟಲಿಯ ಮ್ಯಾಝಿನಿಯಿಂದ ಪ್ರಭಾವಿತರಾದ ಇವರು ಅವನ ಜೀವನಚರಿತ್ರೆಯನ್ನು ಕನ್ನಡಕ್ಕೆ ಅನುವಾದಿಸಿದರು. ಅದರಲ್ಲಿನ " ಇಟಲಿಯು ಪರದಾಸ್ಯದಲ್ಲಿ ತೊಳಲುತ್ತ ಸೂತಕಾವಸ್ಥೆಯಲ್ಲಿರುವಾಗ ತರುಣರು ನಗು ಮೊಗದಿಂದ ನಲಿದಾಡುವುದೆಂದರೇನು?"  ಎಂಬ ವಾಕ್ಯದಿಂದ ಪ್ರಚೋದನೆಗೊಂಡ ವೆಂಕಟರಾಯರು ತಮ್ಮ ವಕೀಲಿವೃತ್ತಿಯನ್ನು ಬಿಟ್ಟು ಸಾರ್ವಜನಿಕ ಸೇವೆಯನ್ನು ಪ್ರಾರಂಭಿಸಿದರು. 
ಅಂದು ಜನರಲ್ಲಿ ರಾಷ್ಟ್ರೀಯತೆ,ರಾಷ್ಟ್ರಾಭಿಮಾನಗಳನ್ನು ಮೂಡಿಸಲು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿತ್ತು. ಅಂತಯೇ ವೆಂಕಟರಾಯರು ಸಹ ಧಾರವಾಡದಲ್ಲಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಇಲ್ಲಿ ರಾಷ್ಟ್ರಾಭಿಮಾನದ ಜೊತೆಗೆ ಇಂಗ್ಲಿಷ್ ರ ಗುಲಾಮಗಿರಿಯಿಂದ ಹೊರಬರಲು  ಸ್ವಾವಲಂಬನೆಯನ್ನು ಕಲಿಸಲಾಗುತ್ತಿತ್ತು. ಈ ಶಾಲೆಯಲ್ಲಿ ದೀಪದಕಡ್ಡಿ ತಯಾರಿಕೆ,ಗೇಣಿಗೆ,ಚಿತ್ರಕಲೆ,ಮರಗೆಲಸ, ಮುದ್ರಣಕಲೆ ಮೊದಲಾದ ಸ್ವಯಂ ಉದ್ಯೋಗ ತರಬೇತಿಯನ್ನು ಕೊಡಲಾಗುತ್ತಿತ್ತು. ಆದರೆ ಸರ್ಕಾರದ ನೀತಿ ಮತ್ತು ಹಣದ ಅಭಾವದಿಂದ ಈ ಶಾಲೆ ಹೆಚ್ಚು ದಿನ ನಡೆಯಲಿಲ್ಲ. ವೆಂಕಟರಾಯರು ರಾಷ್ಟ್ರೀಯ ಚಳವಳಿಯ ಜೊತೆಯಲ್ಲೇ ಕನ್ನಡಭಾಷೆ, ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟವನ್ನು ಮಾಡುತ್ತಿದ್ದರು. ವೆಂಕಟರಾಯರು ನೇತೃತ್ವದಲ್ಲಿ 1936 ಡಿಸೆಂಬರ್ ನಲ್ಲಿ ನಾಲ್ಕು ದಿನಗಳ ಕಾಲ ವಿಜಯನಗರ ಸ್ಥಾಪನೆ ಷಡಶತಮಾನೋತ್ಸವವು ಹಂಪೆಯಲ್ಲಿ ನಡೆಯಿತು. ಇದರಲ್ಲಿ ಐತಿಹಾಸಿಕ ಸಮ್ಮೇಳನ, ವಸ್ತು ಪ್ರದರ್ಶನ, ಸಂಗೀತಕಛೇರಿಗಳು,ನಾಟಕ ಪ್ರದರ್ಶನಗಳು ಮೊದಲಾದ ಕಾರ್ಯಕ್ರಮಗಳು ನಡೆದವು.
ಕರ್ನಾಟಕದಲ್ಲಿ ಒಂದೇ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕೆಂಬುದು ವೆಂಕಟರಾಯರು ಕನಸ್ಸಾಗಿತ್ತು. ಆದರೆ ಅದು ನೆರವೇರದೆ 1914 ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.
ಕರ್ನಾಟಕತ್ವದ ಪರಿಕಲ್ಪನೆ ಹೊಂದಿದ್ದ ವೆಂಕಟರಾಯರಿಗೆ  ಕರ್ನಾಟಕಕ್ಕೆ ತನ್ನದೇ ಆದ ರಾಜಕೀಯ ಪರಿಷತ್ತು ಇರಬೇಕೆಂದು ಅವರ ನಿಲುವಾಗಿತ್ತು. ಅದುವರೆವಿಗೂ ಕರ್ನಾಟಕದ ಉತ್ತರ ಭಾಗ ದಕ್ಷಿಣ ಮಹಾರಾಷ್ಟ್ರವಾಗಿತ್ತು ,ದಕ್ಷಿಣ ಭಾಗ ಮೈಸೂರಾಗಿತ್ತು. ಹೀಗಾಗಿ ಕರ್ನಾಟಕಕ್ಕೆ ಪ್ರತ್ಯೇಕ ಪರಿಷತ್ತು ಬೇಕೆಂದು ಇವರು ವಾದಿಸುತ್ತಿದ್ದರು. ಪರಿಣಾಮವಾಗಿ 1920 ರಲ್ಲಿ  ಧಾರವಾಡದಲ್ಲಿ ವಿ಼. ಪಿ. ಮಾಧವರಾಯರ ಅಧ್ಯಕ್ಷತೆಯಲ್ಲಿ ಪ್ರಥಮ ಕರ್ನಾಟಕ ಪರಿಷತ್ತಿನ ಅಧಿವೇಶನ ನಡೆಯಿತು. ಇದೇ ಇಂದಿನ ಕೆ.ಪಿ.ಸಿ.ಸಿ.
ಯಾವುದೇ ರಾಜ್ಯದ ಅಥವಾ ರಾಷ್ಟ್ರದ ಇತಿಹಾಸವನ್ನು ತಿಳಿಯಬೇಕಾದರೆ ಒಂದು ಪ್ರತ್ಯೇಕ ಸಂಶೋಧನ ಮಂಡಳಿಯ ಅವಶ್ಯಕತೆಯಿದೆ ಎಂದ ವೆಂಕಟರಾಯರು 1914 ರಲ್ಲಿ ಮಂಡಳಿಯೊಂದನ್ನು ಸ್ಥಾಪಿಸಿದರು. ಜೊತೆಗೆ ಎಲ್ಲೆಡೆ ಕಾಣ ಬರುತ್ತಿದ್ದ ಶಿಲಾಶಾಸನಗಳಲ್ಲಿನ ಲಿಪಿಗಳಿಂದಲೂ ಸಹ ಇತಿಹಾಸವನ್ನು ತಿಳಿಯಬಹುದೆಂದು ಮನಗಂಡ ವೆಂಕಟರಾಯರು ಅವುಗಳ ಅಧ್ಯಯನಕ್ಕಾಗಿ " ಸರ್ವೇಕ್ಷಣ ಯೋಜನೆ" ಯನ್ನು ಪ್ರಾರಂಭಿಸಿದರು.
ಕನ್ನಡದಲ್ಲಿ ಉತ್ತಮ ಗ್ರಂಥಗಳ ಕೊರತೆಯಿರುವುದನ್ನು ಅರಿತ ವೆಂಕಟರಾಯರು ಧಾರವಾಡದಲ್ಲಿ ಕನ್ನಡ ಗ್ರಂಥಕರ್ತರ ಸಮ್ಮೇಳನವನ್ನು ಆಯೋಜಿಸಿದರು. ಅದರಲ್ಲಿ  ಎಲ್ಲರೂ ' ಕರ್ನಾಟಕ ಗ್ರಂಥಮಾಲೆ ' ಎಂಬ ಹೆಸರಿನಿಂದ ಪ್ರಕಟಿಸಬೇಕೆಂದು ಅಂಗೀಕರಿಸಲಾಯಿತು. ಎರಡನೇ ಸಮ್ಮೇಳನವು ಧಾರವಾಡದಲ್ಲಿ ನಡೆಯಿತು. ಮೂರನೇ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಿತು. ಇದರ ಫಲವಾಗಿ 1915 ರಲ್ಲಿ " ಕರ್ನಾಟಕ ಸಾಹಿತ್ಯ ಪರಿಷತ್ತು " ಸ್ಥಾಪನೆಯಾಯಿತು.ಇದು ವೆಂಕಟರಾಯರ ಮಹತ್ಕಾರ್ಯಗಳಲ್ಲಿ ಒಂದಾಗಿದೆ. ಇದೇ ಈಗಿನ ಕನ್ನಡ ಸಾಹಿತ್ಯ ಪರಿಷತ್ತು.
1905 ರಲ್ಲಿ " ವಿದ್ಯಾವರ್ಧಕ ಸಂಘ" ಕ್ಕೆ ಸೇರಿ, ಮೂಲಕ ವೆಂಕಟರಾಯರು ಕನ್ನಡದ ಅಭ್ಯಾಸವನ್ನು  ಪ್ರಾರಂಭಿಸುವುದರ ಮೂಲಕ ಕನ್ನಡ ಸಾಹಿತ್ಯ ಕೃಷಿಯನ್ನು ಆರಂಭಿಸಿದರು.
" ವಾಗ್ಭೂಷಣ " ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡು ಅದಕ್ಕೆ ಹೊಸ ರೂಪವನ್ನು ನೀಡಿದರು. ಇವರ ಮೊದಲ ಕೃತಿ " ಕರ್ನಾಟಕ ಸಿಂಹಾಸನ ಸ್ಥಾಪನಾಚಾರ್ಯ ಶ್ರೀ ವಿದ್ಯಾರಣ್ಯರು" ಇದರಿಂದ ಪ್ರೇರಣೆಗೊಂಡ ಶಾಂತಕವಿ ವಿಜಯ ವಿದ್ಯರಣ್ಯ ಕೀರ್ತನೆಯನ್ನು ಬರೆದರು. 
1912 ರಲ್ಲಿ ವೆಂಕಟರಾಯರು " ಕರ್ನಾಟಕದ ಗತವೈಭವ " ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ ಕನ್ನಡಿಗರ ಪ್ರಾಚೀನ ಇತಿಹಾಸವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ. " ನಿಮ್ಮ ನಿರಭಿಮಾನದ ಮುಸುಕನ್ನು ಹಾರ ಹಿಡೆಯಲಿಕ್ಕೆ ನೀವು ಇತಿಹಾಸದ ಶರಣು ಹೋಗಿರಿ " ಎಂದು ಕನ್ನಡಿಗರಿಗೆ ಇತಿಹಾಸವನ್ನು  ತಿಳಿಸುವ ಉದ್ದೇಶದಿಂದಲೇ ಈ ಕೃತಿಯನ್ನು ಬರೆದಿರುವುದಾಗಿ ಸ್ವತಃ ವೆಂಕಟರಾಯರೇ ಹೇಳಿದ್ದಾರೆ. ಇದಲ್ಲದೆ " ಕರ್ನಾಟಕದ ವೀರರತ್ನಗಳು" "ಕರ್ನಾಟಕದ ಸೂತ್ರಗಳು" ಮತ್ತು " ಕರ್ನಾಟಕತ್ವದ ವಿಕಾಸ" ಗ್ರಂಥಗಳನ್ನು ಬರೆದು ಕನ್ನಡಿಗರು ಸ್ಫೂರ್ತಿಗೊಳ್ಳುವಂತೆ ಮಾಡಿದರು.
ಇಂಗ್ಲಿಷ್ ನ ಸ್ಪೆನ್ಸರನ Education ಮತ್ತು ಅರಿಸ್ಟಾಟಲ್‌ನ Data of ethics, J.S. ಮಿಲ್ ನ Liberty ಮೊದಲಾದ ಕೃತಿಗಳನ್ನು  ಕನ್ನಡಕ್ಕೆ ಅನುವಾದಿಸಿದರು. 
ಗಾಂಧಿಚರಿತೆ,ಮ್ಯಾಝಿನಿ ಚರಿತೆ, ಅರವಿಂದರ ಪತ್ರ, ಅರವಿಂದರ ರಾಜಕಾರಣ, ಚಳವಳಿಗಳ ಆತ್ಮ ಇವುಗಳನ್ನು ಭಾಷಾಂತರಿಸಿದರು.ಹಾಗು ವಿವೇಕಾನಂದರ " ಪೂರ್ವ ಮತ್ತು ಪಶ್ಚಿಮ, ಭಕ್ತಿಯೋಗವನ್ನು ಭಾಷಾಂತರಿಸಿದರು.
ರಾಷ್ಟ್ರೀಯತ್ವದ ಅರಿವು ಮೂಡಿಸಲು " ರಾಷ್ಟ್ರೀಯತ್ವದ ಮೀಮಾಂಸೆ" ಯನ್ನು ಬರೆದರು.ಇದಲ್ಲದೆ ' ನವಜೀವನ ಗ್ರಂಥಮಾಲೆ' ಯನ್ನು ಆರಂಭಿಸಿದರು. ಕನ್ನಡಿಗರ ಪರಭಾಷಾ ವ್ಯಾಮೋಹವನ್ನು ಹೋಗಲಾಡಿಸಲು " ಕನ್ನಡಿಗರ ಭ್ರಮನಿರಸನ" ಎಂಬ ನಾಟಕವನ್ನು ಬರೆದರು. ತಿಲಕರ " ಗೀತಾರಹಸ್ಯ" ವನ್ನು ಕನ್ನಡಕ್ಕೆ  ಭಾಷಾಂತರಿಸಿದರು. ಅಲ್ಲದೆ ಗೀತಾಪ್ರಕಾಶ,ಗೀತಾಸಂದೇಶ,ಗೀತಾಪ್ರಭಾವ ಭಾಗ 1,2 ನ್ನು ಬರೆದರು. ದ.ರಾ.ಬೇಂದ್ರೆಯವರ " ಕೃಷ್ಣಕುಮಾರಿ" ಕವನ ಸಂಕಲನವನ್ನು ಪ್ರಕಟಿಸಿದರು.
ಕರ್ನಾಟಕದ ಏಕೀಕರಣವೇ ಇವರ ಗುರಿಯಾಗಿದ್ದು,1922 ರಲ್ಲಿ "ಜಯಕರ್ನಾಟಕವೇ ನಮ್ಮ ಮಂತ್ರಘೋಷ" ಎಂಬ ಘೋಷಣೆಯೊಂದಿಗೆ "ಜಯ ಕರ್ನಾಟಕ " ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಸಾಹಿತ್ಯ, ಕಲೆ,ವಿಮರ್ಶೆ, ಧರ್ಮ,ತತ್ವಜ್ಞಾನ,ವಿಜ್ಞಾನ, ರಾಜಕಾರಣ,ಸಣ್ಣಕತೆ, ಕವಿತೆ ಮತ್ತು ಆರ್ಥಿಕ ಸಾಮಾಜಿಕ ಸಮಸ್ಯೆಗಳನ್ನು ಕುರಿತ ಲೇಖನಗಳು ಪ್ರಕಟವಾಗುತ್ತಿದ್ದವು. ಇದಲ್ಲದೆ ವೆಂಕಟರಾಯರು ಹಲವು ಪತ್ರಿಕೆಗಳೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದ್ದರು. ಕರ್ನಾಟಕ ಪತ್ರ,ಕರ್ನಾಟಕ ವೃತ್ತ,ಕನ್ನಡ ಕೇಸರಿ ಪತ್ರಿಕೆಗಳಿಗೆ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಸ್ವಲ್ಪದಿನ ಕರ್ಮವೀರ ಪತ್ರಿಕೆಯನ್ನು ನಡೆಸಿದರು.
ವೆಂಕಟರಾಯರು ತಮ್ಮ ಜೀವನದ ಅನುಭವಗಳ ಬಗ್ಗೆ " ಜೀವನ ಸ್ಮೃತಿ ಗಳು " ಎಂಬ ಆತ್ಮಚರಿತೆಯನ್ನು ಬರೆದಿದ್ದಾರೆ.
ವೆಂಕಟರಾಯರು ಕರ್ನಾಟಕತ್ವದ ಪರಿಕಲ್ಪನೆಯೊಂದಿಗೆ ರಾಷ್ಟ್ರಾಭಿಮಾನವೂ ಮಿಳಿತವಾಗಿತ್ತು." ಕರ್ನಾಟಕ್ಕಾಗಿ ಕೆಲಸ ಮಾಡುವಾಗ ನಾನು ರಾಷ್ಟ್ರೀಯತ್ವವನ್ನೆಂದೂ ಕಣ್ಮರೆ ಮಾಡಿಲ್ಲ.ನನಗೆ ಅವೆರಡರಲ್ಲಿ ವಿರೋಧವೇ ಕಾಣುವುದಿಲ್ಲ. ನನಗೆ ಕರ್ನಾಟಕ ಎಂದರೆ ಅದೊಂದು ಕಿರಣ ಕಾಜು (focusing lens) ಅದರೊಳಗಿನಿಂದ ನನಗೆ ಭರತಭೂಮಿಯೇ ಏಕೆ ಇಡೀ ವಿಶ್ವವೇ ಕಾಣುತ್ತದೆ.ವಿಶ್ವದ ಕಿರಣಗಳು ನನ್ನ ಕರ್ನಾಟಕದಲ್ಲಿ ಕೇಂದ್ರೀಕೃತವಾಗಿವೆ,ಅಂತರ್ಯಾಮಿಯಾಗಿವೆ" ಎಂದು ಹೇಳಿರುವುದರಲ್ಲಿ ಅವರ ರಾಷ್ಟ್ರಾಭಿಮಾನವನ್ನು ಕಾಣಬಹುದು. ಕನ್ನಡಿಗರಲ್ಲಿ ಸ್ಫೂರ್ತಿ ತರಲು ಹಲವಾರು ಉತ್ಸವಗಳನ್ನು ನಡೆಸಿ ಕನ್ನಡ ಪ್ರಚಾರವನ್ನು ಮಾಡುತ್ತಿದ್ದರು.
ಹೀಗೆ ಕನ್ನಡ ನಾಡು ನುಡಿಗಾಗಿ ಇವರ ಆರು ದಶಕಗಳ ಹೋರಾಟದ ಫಲವಾಗಿ 1956 ನವೆಂಬರ್  1ರಂದು ಏಕೀಕೃತ ಕರ್ನಾಟಕ ಉದಯವಾಯಿತು. ವೆಂಕಟರಾಯರ ಕನಸು ನನಸಾಯಿತಾದರೂ ಕರ್ನಾಟಕ ಎಂದು ಕರೆಯಲಿಲ್ಲವೆಂದು ಬೇಸರವೂ ಆಯಿತು. ಆದರೂ " ಈಗ ಮೈಸೂರು ರಾಜ್ಯವೆಂದು ತಪ್ಪಾಗಿ ಹೆಸರಿಡಲ್ಪಟ್ಟ ಕರ್ನಾಟಕ ರಾಜ್ಯವು ಆಯುಷ್ಮಂತವಾಗಲಿ,ಆರೋಗ್ಯವಂತವಾಗಲಿ ಮತ್ತು ಭಾಗ್ಯವಂತವಾಗಲಿ ಎಂದು ಹರಸುತ್ತೇನೆ" ಎನ್ನುವುದನ್ನು  ನೋಡಿದರೆ ಅವರ ಕರ್ನಾಟಕದ ಮೇಲಿನ ಅಭಿಮಾನ ತಿಳಿಯುತ್ತದೆ.
ಕನ್ನಡ ನಾಡು ನುಡಿಗಾಗಿ ಅವಿರತವಾಗಿ ಸೇವೆ ಸಲ್ಲಿಸಿದ ವೆಂಕಟರಾಯರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ,ಗೌರವಿಸಿದವು.
1921 ರಲ್ಲಿ ಅಲಸೂರು ಪೇಟೆಯಲ್ಲಿ ಮಾನಪತ್ರದೊಂದಿಗೆ " ದೇಶಸೇವಾ ಧುರೀಣ ಮತ್ತು ಸ್ವಭಾಷಾ ರಕ್ಷಕ " ಎಂಬ ಬಿರುದನ್ನು ನೀಡಲಾಯಿತು.
1930 ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರನ್ನಾಗಿ ಮಾಡುವುದರ ಮೂಲಕ ಅವರ ಹೋರಾಟಕ್ಕೆ ಗೌರವ ತೋರಿಸಿದರು.
1941 ರಲ್ಲಿ ಹೈದರಾಬಾದಿನ ಕನ್ನಡಿಗರು " ಕರ್ನಾಟಕ ಕುಲ ಪುರೋಹಿತರು " ಎಂಬ ಬಿರುದು ನೀಡಿ ಸನ್ಮಾನಿಸಿದರು.
1961 ರಲ್ಲಿ ಬೆಂಗಳೂರು ನಗರಸಭೆ ಮಾನಪತ್ರ ನೀಡಿ ಸನ್ಮಾನಿಸಿತು.
ಹೀಗೆ ನಾಡಸೇವೆಯೊಂದಿಗೆ ದೇಶಸೇವೆಯನ್ನು ಮಾಡುತ್ತಾ ತಮ್ಮ ಜೀವಮಾನವಿಡೀ ಹೋರಾಡಿ ತನು ಮನ ಧನವನ್ನು ಅರ್ಪಿಸಿದ. ವೆಂಕಟರಾಯರು 1964 ಫೆಬ್ರವರಿ 25 ರಂದು ನಿಧನರಾದರು. " ಕರ್ನಾಟಕ ದೇವಿಯ ಮಂದಿರದಲ್ಲಿ ಉರಿಯುತ್ತಿರುವ ಹೂ ಬತ್ತಿ" ಎಂದ ವೆಂಕಟರಾಯರು ತಮ್ಮ ಅವಿರತ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರ ಮನದಲ್ಲಿ ನಂದಾದೀಪವಾಗಿದ್ದಾರೆ. ಕರ್ನಾಟಕ ಏಕೀಕರಣಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ವೆಂಕಟರಾಯರು " ಕನ್ನಡ ಕುಲದ ಪುರೋಹಿತ" ರೇ ಹೌದು.
- ವಿಜಯಲಕ್ಷ್ಮಿ  ಎಂ ಎಸ್

ಲಘುಬರಹ - 'ಗೊಮಟಗಿರಿಯೂ..... ಲವಿಂಗ್ ಹ್ಯಾಟೂ.....'



 ಬಂಧುಗಳ ಮನೆಯಿಂದ ಹೊರಡುವ ಹೊತ್ತಾಯ್ತು... ನಮ್ಮನ್ನು ಬೀಳ್ಗೊಡಲು ಎಲ್ಲರೂ ಮುಂಬಾಗಿಲೆಡೆಗೆ ಬಂದ್ರು... ಅಷ್ಟೇ! ಅಲ್ಲಿನ ದೃಶ್ಯ ನೋಡಿ ನನ್ನೆದೆ ಧಸಕ್ಕನೆ ಕುಸಿಯಿತು. ಅವ್ಯಕ್ತ ಬೇಸರ ಹಾಗೂ ಅದ ವ್ಯಕ್ತಪಡಿಸಲಾಗದ ಅನಿವಾರ್ಯತೆಯ ತೊಳಲಾಟದಿಂದ ಮುಖ ಕಪ್ಪಿಟ್ಟು ಹೋಯ್ತು....!???. ಒಂದು ಕ್ಷಣ ಹೇಗೆ ಪ್ರತಿಕ್ರಯಿಸಬೇಕು ಅಲ್ಲಲ್ಲಾ!... ಸ್ಪಂಧಿಸುವುದೆಂದು ತಿಳಿಯದೇ ಪತಿರಾಯನ ಮುಖ ನೋಡಿದೆ. ನನ್ನ ದುಗುಡ, ದುಮ್ಮಾನ ಮನದ ಹೋಯ್ದಾಟ, ಇನ್ನೂ ಏನೇನೋ...?ಗ್ರಹಿಸಿದ ಅವರು ಕೂಡ ' ಏನು ಮಾಡಲಿ ನಾನೂ... ಏನು ಹೇಳಲಿ...' ಎಂದು ವರನಟನಷ್ಠೇ ಭಾವುಕರಾಗಿ ಮೌನವಾಗಿ ಹಾಡುತ್ತಿರುವಂತೆ ಭಾಸವಾಗುತ್ತಿತ್ತು.

"ಪ್ರತಿಕ್ರಯಿಸುವುದಕ್ಕಿಂತ ಸ್ಪಂಧಿಸುವುದನ್ನು ಕಲಿಯಿರಿ" ಎಂದು ಆಗಾಗ್ಗೆ ಪುಕ್ಕಟೆಯಾಗಿ ಸಲಹೆ ಕೊಡುವ ನನಗೆ ಸ್ಪಂಧಿಸುವುದು ಭಾಷಣ ಬಿಗಿಯುವಷ್ಟು ಸುಲಭವಲ್ಲ ಎಂಬುದು ನಿಜ ಅರ್ಥದಲ್ಲಿ ವೇದ್ಯವಾಗಿ ಹೋಯ್ತು... ಮತ್ತೇನು ಮಾಡುವುದು ಕೂಡ ಸಾಧ್ಯವಿರದಂತಹ ಇಕ್ಕಟ್ಟಿನ ಸಂದರ್ಭವದು... ಮನ ಒಪ್ಪದ ನೋವಿನ ಸಂಗತಿಯಾದರೂ ಒಪ್ಪಲೇ ಬೇಕಾದ, ಒಪ್ಪಿ ಜೀರ್ಣಿಸಿಕೊಳ್ಳಲೇ ಬೇಕಾದ ಅನಿವಾರ್ಯ ಸಂಗತಿಯದು... ನಿಜಕ್ಕೂ ಹೇಳುವೆ ದೇಹಕ್ಕೆ ಆಗುವ ಪೆಟ್ಟು ಮನಕ್ಕೇನೂ ಘಾಸಿ ಮಾಡದು ಎಂಬ ಮಾತು ಅನುಭವಕ್ಕೆ ದಕ್ಕಿತು. ಜೊತೆಗೆ ನನ್ನ ಉಪದೇಶಗಳು ನನ್ನನ್ನೇ ಈಟಿ, ಭರ್ಜಿ...ಇನ್ನೂ ಯಾವ್ಯಾವುದರಲ್ಲಿ ಸಾಧ್ಯವೋ ಅದರಲ್ಲೆಲ್ಲಾ ಇರಿದಂತಾಗಲಾರಂಭಿಸಿತು....!?

ಮನ ಚೀರಿ ರಂಪಾಟ ಮಾಡುತ್ತಿತ್ತು. ಮನದ ಹೋಯ್ದಾಟ ನಿಯಂತ್ರಿಸಲು ಹೆಣಗಾಡುತ್ತಿದ್ದೆ. ಸತ್ಯವಾಗಿಯೂ ಆ ದೃಶ್ಯ ಅಷ್ಟು ತಟ್ಟಿತ್ತು ಮನವನ್ನು. ಇಷ್ಟವಾಗುವ ಮೊದಲ ನೋಟ, ಮೊದಲ ಪ್ರೀತಿ, ಮೊದಲ ವಸ್ತು ಯಾರಾದರೂ ಏಕಾಏಕಿ ಕಸಿದುಕೊಂಡರೆ/ ನಮ್ಮೆದುರೇ ಅಂಕೆಗೆ ನಿಲುಕುವ ಮೊದಲೇ ಬೇರೆಯವರ ಪಾಲಾದರೆ ಸಹಿಸಲಸಾಧ್ಯ...!!!
ನನಗಂತೂ ನೇರವಾಗಿ ಎದೆಗೆ ಮೊಂಡು ಭರ್ಜಿಯನ್ನು ಬಲವಂತವಾಗಿ, ಬಲವಾಗಿ ತೂರಿಸಿದರೆ ಹೇಗಾಗಬಹುದೋ ಅಷ್ಟು ನೋವಾಗುತ್ತಿತ್ತು ಮನಕ್ಕೆ. ರಕ್ತವಿಲ್ಲ, ಕಣ್ಣೀರಿಲ್ಲ ಆದರೂ ಮನದ ಹೋಯ್ದಾಟ, ಒತ್ತಡ, ಕಸಿವಿಸಿ... ಹೇಳತೀರದು. ಅಯ್ಯೋ...! 'ಮೂಕ ಹಕ್ಕಿಯು ಹಾಡುತಿದೆ... ಹಾಡುತಿದೆ... ಭಾಷೆಗು ನಿಲುಕದ... ಭಾವ ಗೀತೆಯ ಹಾಡುತಿದೆ.. ಹಾ....ಡಿ ಹಾ...ಡಿ...' ಮನದಲ್ಲಿ ಹಾಡುತ್ತಾ, ರೋಧಿಸುತ್ತಾ ಮೌನಕ್ಕೆ ಶರಣು ಹೊಡೆದು ಮೌನದರಸಿಯಾದೆ...ದುಗುಡದಿಂದಲೇ ಅದರೊಂದಿಗೆ ಬೆಸೆದ ಸವಿ ನೆನಪುಗಳಿಗೆ ಮನ ಜಾರಿತು...

ಅಂದು ಭಾನುವಾರ 22/10/17 ಬಂಧುವಿನ ಸೀಮಂತ ಕಾರ್ಯದಲ್ಲಿ ಪಾಲ್ಗೊಳ್ಳಲು ಹೊರಟಿದ್ದೆವು. ಹೇಗೂ ಹೋಗ್ತಾ ಇರೋದು ಶ್ರವಣಬೆಳಗೊಳಕ್ಕೆ ಹಾಗೆ ಗೊಮ್ಮಟ ಗಿರಿಯ   ಶ್ರವಣಪ್ಪನಿಗೊಂದು ನಮಸ್ಕಾರ ಹಾಕಿಯೇ ಬಿಡುವ ಎಂದು ಏಕಪಕ್ಷೀಯವಾಗಿ ನಿರ್ಧರಿಸಿ ಬಿಟ್ಟಿದ್ದೆ....!? ಇಂದು ಗೊಮ್ಮಟ ಗಿರಿ ಹತ್ತುವ, ದೇಹಕ್ಕೆ ವ್ಯಾಯಾಮ ಆಗುತ್ತೆ ಅನ್ನೋ ನಯವಾದ ವಿವರಣೆಯೊಂದಿಗೆ ಪೀಠಿಕೆ ಹಾಕಿದೆ. ಪಾಪ! ಪತಿರಾಯ ಇಲ್ಲವೆನ್ನಲಾದೀತೇ...!? 'ಸರಿ' ಎಂದರು. ಏನೋ ಒಂಥರಾ ಖುಷಿ ನನಗೆ. ಬಾಲ್ಯದಲ್ಲಿ , ಬಹುಷಃ ಎಂಟನೆಯ ತರಗತಿ ಇರಬಹುದು ಅಪ್ಪ, ಅಮ್ಮ , ತಂಗಿ ಹಾಗೂ ಸಹೋದರರೊಂದಿಗೆ ಹಾಸನದಲ್ಲಿದ್ದಾಗ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಹೋದದ್ದು. ಇನ್ನೂ ನೆನಪು ಬಹಳ ತಾಜ ತಾಜ ಇದೆ. ಬೆಳಿಗ್ಗೆ 9 ರ ಸಮಯದಲ್ಲಿ ಕೋತಿಗಳಿಗಿಂತ ಒಂದು ಕೈ ಮುಂದಾಗಿ ಸರಸರನೆ ಚಂಗನೆ ಎರಡೆರಡು, ಕೆಲವೊಮ್ಮೆ ಮೂರ್ಮೂರು ಮೆಟ್ಟಿಲುಗಳನ್ನು ಹಾರುತ್ತಾ, ಆಗಾಗ್ಗೆ ಎಡುವುತ್ತಿದ್ದರೂ ನಾ ಮುಂದು ತಾ ಮುಂದು ಎಂದು ಓಡೋಡುತ್ತಾ ಮೆಟ್ಟಿಲುಗಳನ್ನು ಏರಿದ್ದು...., ತುದಿ ತಲುಪಿ ಹೋ...! ಎಂದು ಚೀರುತ್ತಾ ಹಿಂದೆ ತಿರುಗಿ ನೋಡಿ ತಲೆ ಗಿರ್ರೆಂದದ್ದು... ಆಮೇಲೆ ಎಲ್ಲಿ ಸೋದರರಿಗೆ ತಿಳಿದು ಅಣಕಿಸುವರೋ ಎಂದು ಕಂಬ ಹಿಡಿದು ತೀವ್ರ ವೇಗವಾಗಿ ಡವಗುಟ್ಟುವ ಹೃದಯ ಬಡಿತ ಮರೆ ಮಾಚುತ್ತಾ, ಥರಗುಟ್ಟುತ್ತಿದ್ದ ಕಾಲುಗಳನ್ನು ಗೊಮ್ಮಟ ಗಿರಿಯನ್ನೇ ಅದುಮಿ ಬಿಡುವಂತೆ ಮೆಟ್ಟಿ ನಿಂತದ್ದು.... ಎಲ್ಲವೂ ಕಾರಿನಲ್ಲಿ ಹೋಗುತ್ತಲೇ ಮೆಲುಕು ಹಾಕಿ ರಸಾಸ್ವಾಧನೆ ಮಾಡುತ್ತಿದ್ದಾಗಲೇ ಪತಿರಾಯನ ಮಾತಿನಿಂದ ಎದೆಯೊಡೆಯುವಂತಾಗಿ ಇಹಕ್ಕೆ ಎಳೆದು...ಇಲ್ಲ... ದೂಡಿಬಿಟ್ಟಿತು ನನ್ನ ಪ್ರಪಾತಕ್ಕೆ...

ಬಹುಷಃ ನಾವು ಶ್ರವಣಬೆಳಗೊಳ ತಲುಪುವ ವೇಳೆಗೆ ಬಿಸಿಲೇರಿರುತ್ತೆ! ಒಂದು ಕೆಲಸ ಮಾಡುವ ಮೇಲುಕೋಟೆ ನೋಡಿ ಹೋಗುವ ಎಂದು ಬಹಳ ಗಂಭೀರವಾದ ದೃಢ ಧ್ವನಿಯಲ್ಲಿ ಕಾರು ಚಾಲನೆ ಮಾಡುತ್ತಲೇ ಘೋಷಣೆ ಮಾಡಿಬಿಟ್ಟರು. ಆಗ ಕಾರು ಮೇಲುಕೋಟೆಯ ಬೆಟ್ಟದಡಿಯಲ್ಲಿ ಹಾವಿನಂತೆ ಸುರುಳಿ ಸುರುಳಿಯಂತೆ ಬಳಸುವ ಸೂಕ್ಷ್ಮ ತಿರುವುಗಳಲ್ಲಿ ನುಸುಳುತ್ತಿತ್ತು. 'ನಿನ್ನ ಇತ್ತೀಚೆಗೆ ನೋಡಿದ್ನಲ್ಲ ತಂದೆ ಇಷ್ಟು ಶೀಘ್ರವಾಗಿ ಯಾಕಯ್ಯ ಕರೆಸ್ಕೋತಿದ್ದೀಯಾ' ಅಂದ್ಕೋತಾ ಕಿಟಕಿಯಿಂದ ನೋಡಿದೆ....ಚೆಲುವ ನಾರಾಯಣ ಸ್ವಾಮಿ ಕೈ ಬೀಸಿ 'ಬಾ ಇಂದು ನನ್ನ ಸನ್ನಿಧಾನವೇ ಗತಿ' ಎಂದು ಅಣಕಿಸಿದಂತಾಯ್ತು...!

ಅವರ ಮಾತಿನಲ್ಲಿ ತರ್ಕವಿತ್ತು, ಅರ್ಥವೂ ಇತ್ತು... ಇವರು ಯಾವಾಗಲೂ ಹೀಗೆ ಏನೇ ಹೇಳಿದರೂ ಒಪ್ಪಿಕೊಳ್ಳಲೇ ಬೇಕು ಹಾಗೆ ಸಕಾರಣದೊಂದಿಗೆ ಹೇಳುತ್ತಾರೆ. ಆದರೀಗ ಮೆಚ್ಚಿಕೊಳ್ಳಲೋ ಗುದ್ದಾಡಲೋ ಗೊತ್ತಾಗಲಿಲ್ಲ... ಕ್ಷಣ ಮಾತ್ರದಲ್ಲಿ ಮನದಲ್ಲಿ ನೆಡೆಯುತ್ತಿದ್ದ ಯುದ್ಧ ನಿಗ್ರಹಿಸಿ 'ಸರಿ' ಎಂದುಸುರಿ ಬರುತ್ತಿದ್ದ ನಿರಾಸೆಯ ನಿಟ್ಟುಸಿರನ್ನು ನಿಧಾನವಾಗಿ ಹೊರಹಾಕಿದೆ... 'ಮಾನವನೊಂದು ಬಗೆದರೆ ದೈವವೊಂದು ಬಗೆವುದೆಂಬ' ಮಾತು ನೆನಪಾಗಿ ' ಇಂದು ಎನಗೆ ಗೋವಿಂದ... ನಿನ್ನಯ ಪಾದ...' ಎಂದು ಗುನುಗ ತೊಡಗಿದೆ...

ಅರೇ... ಏನಿದು? ಏನಚ್ಚರಿ!? ಕಾರು ಮೇಲುಕೋಟೆ ಹಾದಿಗೆ ತಿರುಗದೆ ಬಲ ಮಗ್ಗುಲಿಗೆ ತಿರುಗಿತು... ಆಹಹಾ...! ಎಂಥಾ ಮಜ... ಏಳನೇ ತರಗತಿಯಲ್ಲಿ ಕಾಲಿಗೆ ತೊಡರುತ್ತಿದ್ದ ಉದ್ದನ್ನ ಲಂಗ ಎತ್ತಿ ಹಿಡಿದು ಗೆಳೆಯನ ಕೈ ಹಿಡಿದು ನರ್ತನ ಮಾಡಿದಷ್ಟು ಖುಷಿಯಾಗಿ, ಮನಕ್ಕೆ ರಂಗೆರಚಿದಂತಾಯ್ತು...! ಗಂಡನಿಗಷ್ಟು ತಿಳಿಯದೇ 'ಸರಿ' ಎಂದುಸುರಿದ ರೀತಿಯಲ್ಲಿರುವ ಭಾವ ಯಾವುದೆಂದು...!? ಹಾಗೇ ಒಂದೆರಡು ಮುತ್ತುಗಳನ್ನು ಹಾರಿಸಿ ಬಿಟ್ಟೆ... ಹೊರಗೆ ಹೋಗುವ ಸಾಧ್ಯತೆ ಇರಲಿಲ್ಲ ಕಿಟಕಿ ಗಾಜುಗಳು ಮುಚ್ಚಿದ್ದು 'ಎಸಿ' ಚಾಲನೆಯಲ್ಲಿತ್ತು...!
ಅವರಿಗರಿವಿಲ್ಲದೇ ಅವು ಅವರ ಸ್ಪರ್ಶಿಸುವುದ ನೋಡುತ್ತಾ ಹವಾನಿಯಂತ್ರಿತ ವಾಹನದಲ್ಲೂ ಬೆಚ್ಚಗಿನ ಸುಖಾನುಭವದಿಂದ ಪುಳಕಿತಳಾದೆ... 'ಸ್ವರ್ಗಕ್ಕೆ ಮೂರೇ ಗೇಣು' ಎಂದಾಗ ಆಗುವ ಅನುಭವ ಇದೇ ಏನೋ...!...?

ಶ್ರವಣಪ್ಪನ ಪುರ ಕ್ಷಣ ಮಾತ್ರದಲ್ಲಿ ತಲುಪಿದಷ್ಟು ಸುಖವಾದ ಪ್ರಯಾಣ ಆಯ್ತೀಗ ಮನ ಹಗುರವಾಗಿದ್ದದ್ದಕ್ಕೆ...! ಗೋಮಟಗಿರಿ ಏರುವುದು, ಅದೂ ಮನದರಸನೊಡನೆ... ಯಾರ, ಯಾವ ಅಡೆತಡೆಯೂ ಇರದೇ...! ಓಹ್! ಎಂಥಾ ಮಧುರ ಅನುಭವ. ಎಲ್ಲವೂ ಹೊಸತರಂತೆ ಭಾಸವಾಗ ತೊಡಗಿತು. ಬೆಟ್ಟದ ತಪ್ಪಲಿನಲ್ಲಿ ಸುತ್ತಲೂ ನೂರಾರು ಜನರಿದ್ದರೂ ನಾವಿಬ್ಬರೇ ಇರುವ ಭಾವ ಬಹು ಸೊಗಸಾಗಿತ್ತು. 'ಮನ ಮಂಡಿಗೆ ಮೆಲ್ಲುತ್ತಿತ್ತು' ನಾವು ಹೇಗೆ ಹತ್ತಬಹುದು ಮೆಟ್ಟಿಲುಗಳನ್ನು ಎಂದು ಕಲ್ಪನೆ ಮಾಡಿಕೊಳ್ಳುತ್ತಾ... ಮದುವೆಯಾದ ಹೊಸತರಲ್ಲೂ ಹೀಗೆ ಅನಿಸಿರಲಿಲ್ಲವಲ್ಲಾ ಎಂದಚ್ಚರಿಯಾಯಿತು... ಅಥವಾ ಕಳೆದು ಹೋಗುತ್ತಿರುವ ವಯಸ್ಸಿನ ಪ್ರಭಾವವೇ ಎಂಬ ಭಾವ ಮನದಲ್ಲಿ ಸುಳಿ ಸುಳಿದು ಕಾಡತೊಡಗಿತು... ಛೇ...ಇಲ್ಲ ...ಇಲ್ಲ... ನಮಗೇನಂಥಾ ವಯಸ್ಸಾಗಿರುವುದು ಎಂದುಕೊಳ್ಳುತ್ತಾ ಸತ್ಯ ಮರೆ ಮಾಡುತ್ತಾ ಮನ ಹಗುರವಾಗಿಸುತಾ ಸಂತೈಸಿಕೊಳ್ಳುತ್ತಾ ಕಟು ಸತ್ಯಕ್ಕೆ ಮಿಂಚಿನಂತೆ ತೆರೆ ಎಳೆದು ಗೆಲುವಿನ ಹುಸಿ ನಗೆ ಸೂಸಿದೆ...

ಗೊಮ್ಮಟ ಗಿರಿ ಹತ್ತುವ ಮುನ್ನ ನೀ ತಲೆ ಎತ್ತುವುದಸಾಧ್ಯ ಎಂಬಂತೆ ಭಾಸ್ಕರ ಜವ್ವನಿಗನಾಗಿ ಮೆರೆಯುತ್ತಿದ್ದ! ನೇರವಾಗಿ ಕಿರಣಗಳನ್ನು ಪ್ರಕರವಾಗಿ ಹೊರ ಹೊಮ್ಮಿಸುತ್ತಾ ಗಹಗಹಿಸುತ್ತಿದ್ದ. ನಾ ಮೂತಿ ಊದಿಸುತ್ತಾ... ಓಹೋ!... ಇರು ತಡೆಯುವೆ ನಿನ್ನ! ನಾನೇನು ಕಡಿಮೆಯೇ? ಎಂದು ಅವನ ವಿರಾಟ ರೂಪಕ್ಕೆ ಸವಾಲು ಹಾಕಲು ಸಜ್ಜಾದೆ!. ಪತಿರಾಯನೆಡೆಗೆ ತಿರುಗಿ ' ಟೋಪಿ ಹಾಕಿಕೊಳ್ಳುವ ಎಂದೆ '. ಸರಿಯಾಗಿ ಕೇಳಿಸಿಕೊಳ್ಳದ ಇವರು ಮಖವನ್ನು ಏನು ಹೇಳಿದೆ ಎಂಬ ಭಾವದಲಿ ನಿರುಕಿಸಿದರು. ಅಯ್ಯೋ...! ನಮಗೆ ನಾವೇ ಟೋಪಿ ಹಾಕಿಕೊಳ್ಳುವುದೇ...!? ಎಂದುಕೊಳ್ಳುತ್ತಾ...ನನ್ನ ಮಾತಿಗೆ ನಾನೇ ನಗುತ್ತಾ 'ಹ್ಯಾಟು' ತೆಗೆದುಕೊಳ್ಳುವ ಎಂದೆ. ಏನನ್ನುವರು ಎಂದುಕೊಳ್ಳುವ ಮೊದಲೇ 'ಸರಿ' ಎಂದು ಅಂಗಡಿಯೆಡೆಗೆ ಮುಖ ಮಾಡಿದರು. ನಾ ಬಾಲಂಗೋಚಿಯಾದೆ!..
ಈ 'ಹ್ಯಾಟು' ಪದ ಬಲು ಪ್ರಿಯವಾಯ್ತು. ಟೋಪಿ ಕೂಡ ಸುಂದರವಾದ ಪದ. ಆದರೆ ಜನ ಅದನ್ನ ಹೇಗ್ಹೇಗೋ ಬಳಸಿ ಇಂದು ಟೋಪಿ ಹಾಕುವುದು, ಹಾಕಿಸಿಕೊಳ್ಳುವುದು, ಕೊಳ್ಳುವುದು ಪರಿಹಾಸ್ಯದ ಹಾಗೂ ಮುಜುಗರ ತರುವ ಸಂಗತಿಯಾಯ್ತಲ್ಲಾ ಎಂದು ಮುಲುಕಿದೆ....

ಅಂಗಡಿ ಮುಂದೆ ಬರ್ತಿದ್ದಂತೆ ಒಂದು ಪ್ರಕಾರದ 'ಟೋಪಿ' ಅಯ್ಯಯ್ಯೋ... ಅಲ್ಲ...! 'ಹ್ಯಾಟು' ಹೌದು ನನ್ನ ಪ್ರೀತಿಯ ಹ್ಯಾಟೊಂದು ಮನ ಸೆಳೆಯಿತು. 'ಹ್ಯಾಟು' ಎಂದು ಹೇಳುವುದೇ ಎಷ್ಟು ಸುಖವಾಗಿದೆ ಎಂದುಕೊಳ್ಳುತ್ತಲೇ ಮನ ಸೆಳೆದ ಹ್ಯಾಟನ್ನು ಕೈ ಚಾಚಿ ಎತ್ತಿಕೊಂಡೇಬಿಟ್ಟೆ! ಬೆಲೆ ಕೇಳುವ ವ್ಯವಧಾನವೂ ಇಲ್ಲ! ? ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರು ಕಿರೀಟಧಾರಣೆ ಆಗುವಾಗ ಜವಾಬ್ದಾರಿಯ ಒತ್ತಡಕ್ಕೆ ಎದೆ ಗಟ್ಟಿ ಮಾಡಿಕೊಂಡಿದ್ದಿರಬಹುದು ಆದರೆ ನಾನು ಮಾತ್ರ ಮಹದಾನಂದದಿಂದ ಕಿರೀಟ ಧರಿಸಿಯೇ ಬಿಟ್ಟಿದ್ದೆ...!

ಅಳ್ಳಕವಾದ ಬುರುಡೆ ಹಿಡಿಸುವ ಭಾಗ ಪುಟ್ಟದೊಂದು ಗುಂಡಿಯಂತೆ ಕಾಣ್ತು...! ನನ್ನ ಬುರುಡೆಯೇನು ಪುಟ್ಟದೇ...? ತಕ್ಕುದಾಗೆ ಇದೆ... ಏ... ಇಲ್ಲ... ನನಗಾಗೆ ಹೇಳಿ ಮಾಡಿಸಿದಂತೆ ಇದೆ...ಬೀಗಿದೆ...! ಖುಷಿಯಿಂದ ಉಬ್ಬಿದೆ!...ಅದರ ಸುತ್ತಲೂ ಇದ್ದ ಬುರುಡೆಯಂತಹ ವೃತ್ತಾಕಾರದ ಹರವು ಮತ್ತೂ ಚೆಂದವಾಗಿ ಹ್ಯಾಟಿಗೆ ಮೆರುಗು ನೀಡಿತ್ತು. ಕಮಲದ ಹೂವಿನ ಸುತ್ತಾ ಹಾಸಿ ನಿಂತಂತಿರುವ ಎಲೆಗಳರಡಿದ ಮೋಹಕ ದೃಶ್ಯ ನೆನಪಾಗಿ ಮನಕ್ಕೆ ಮುದ ನೀಡಿತು. ಮನ ಮೆಚ್ಚಿತ್ತು. ಅಳ್ಳಕವಾದ ಹ್ಯಾಟಿನ ಭಾಗ ಸುತ್ತಾ ಆವರಿಸಿರುವ ಭಾಗವೀಗ ಶನಿಗ್ರಹದ ಸುತ್ತಲಿನ ಗ್ರಹದ ಸುತ್ತಲಿನ ಉಂಗುರದಂತೆ ಕಂಡು ಒಮ್ಮೆಲೇ ನಭಕ್ಕೆ ಜಿಗಿದುಬಿಟ್ಟೆ. ಇದರ ನಯವಾದ ಸ್ಪರ್ಶ, ತೆಳು ಸಿಮೆಂಟ್ ಬಣ್ಣಕ್ಕೆ ತುಸು ಹೆಚ್ಚು ಬಿಳುಪೆನುವ ನೈಲಾನ್ ದಾರಗಳನ್ನು ಹೊಂದಿಸಿ ಹೆಣೆದ ಶೈಲಿ ಚಿತ್ತಾಕರ್ಷಕವಾಗಿತ್ತು. ತುಂಬಾ ಸುಂದರವಾದ ಹ್ಯಾಟೇ ಇದು ಅನಮಾನವೇ ಇಲ್ಲ! ಮನ ಸೋತು ಶರಣಾಯ್ತು... ಕೆನ್ನೆಗೆ ಮುತ್ತಿಡುವಂತೆ ಹಾಗೂ ಹ್ಯಾಟು ಶಿರದಿಂದ ಜಾರದಂತೆ ಬಂಧಿಸುವ ಚಪ್ಪಟೆಯಾಕಾರದ ರಬ್ಬರ್ ದಾರವನ್ನು ಪದೇ ಪದೇ ಮುಟ್ಟಿ ನೋಡಿದೆ!... ಚಿಕ್ಕ ವಯಸ್ಸಿನಲ್ಲಿ ರಬ್ಬರ ಎಷ್ಟು ಹಿಗ್ಗುವುದೆಂದು ಎಳೆದೆಳೆದು ಒಮ್ಮೆಲೆ ಬಿಟ್ಟು ಚುರ್ ಚುರ್ರೆನ್ನುವಂತ ಉರಿ ಅನುಭವಿಸಿದ ನೆನಪು ನುಗ್ಗಿ ಬಂತು... ಎಲ್ಲದರೂ ಉಂಟೇ!? ಈಗ ಹಾಗೆ ಮಾಡುವುದುಂಟೆ!? ಇನಿಯನ ಕರಗಳು ಕೆನ್ನೆ ಬಳಸಿ ಹಿಡಿದಂತೆ ಕಪೋಲಗಳನ್ನು ಅಪ್ಪಿಬಿಟ್ಟಿತ್ತು ರಬ್ಬರ್ ಪಟ್ಟಿ!...ಹಾಗೇ ಜಂಗಮವಾಣಿಯನ್ನೇ ದರ್ಪಣವಾಗಿಸಿ 'ದರ್ಪಣ  ಸುಂದರಿಯಾದೆ'...! 

ಅರೇ!...ಏನಿದು? ಶಿರದ ಬಲಭಾಗದಲ್ಲಿ ಅಳ್ಳಕವಾದ ಬುರುಡೆಯ ಪಾತ್ರೆಯ ಪಕ್ಕದಲ್ಲಿ ಹರಡಿದ ಭಾಗದಲ್ಲಿಯೇ ತುಸು ಕೆಳಗೆ ನೇತಾಡುವಂತೆ ಎರಡು ಬಲು ಚಂದದ ಟೇಪುಗಳು... ಚೆಲುವೆಯ ಮುಂಗುರುಳು ಅಂಕೆಯಿರದೆ ಹಾರಾಡುತ್ತ ಪಡ್ಡೆಗಳ ಚಿತ್ತ ಸ್ವಾಸ್ಥ್ಯ ಕೆಡಿಸುವಂತೆ ನನ್ನ ಮನ ಕೆಣಕಿದವು...!? ಏನು ಸೊಗಸು!? ಚಿಕ್ಕವಳಿದ್ದಾಗ ಅಮ್ಮ ಕಟ್ಟಿದ ಟೇಪು ಉದ್ದಕ್ಕೆ ಇದ್ದು ಹಾರಾಡುತ್ತಿದ್ದುದು ನೆನೆದು ಕಣ್ಣಾಲಿ ತುಂಬಿತು... ಮನದಲ್ಲೇಳುತ್ತಿದ್ದ ಭಾವಾಲಾವಕ್ಕೆ ತಂಪೆರೆಯುವಂತೆ ಟೇಪಿನ ಇನ್ನೊಂದು ತುದಿಗೆ ಮೆತ್ತಿಸಿದ್ದ ಗುಲಾಬಿ ಬಣ್ಣದ ಹತ್ತಿಯಂತೆ ಮೃದುವಾದ ' ಹೂ ' ನಿಂದ ಹ್ಯಾಟು ಮತ್ತಷ್ಟು ಆಕರ್ಷಕವಾಗಿ ಕಂಡು ಮನ ಮರುಳಾಗಿ ಮಂತ್ರಮುಗ್ದವಾಯ್ತು. ನಾನು ನನ್ನ ಹ್ಯಾಟಿನ ಮೋಹದಲ್ಲಿ ಪ್ರಮಪಾಶಕ್ಕೆ ಸಿಲುಕಿದ ಪ್ರೇಮಿಯಂತೆ ಪ್ರೇಮಾಯಣದಲ್ಲಿ ವಿಹರಿಸುತ್ತಿದ್ದಾಗ, ಪತಿರಾಯ 'ಏನು ಇದಕ್ಕೆ ನೂರು ರೂ ನಾ!? ಎಂದದ್ದು ಕರ್ಕಶವಾಗಿ ಕಿವಿ ತೂರಿ ಭೂಮಿಗಿಳಿದು ಹೋದೆ. ಹ್ಯಾಟು ಮಾತ್ರ ಶಿರವನ್ನಲಂಕರಿಸಿಯೇ ಇತ್ತು. ಕರಗಳು ಮೃದುವಾಗಿ ಸ್ಪರ್ಶಿಸುತ್ತಿದ್ದವು. ಒಮ್ಮೆಲೇ ತನಗಿಷ್ಟವಾದ ಗೊಂಬೆ ಕಳೆದುಕೊಳ್ಳುವ ಭೀತಿಯಿಂದ ನರಳುವ ಮಗುವಿನಂತಾದೆ!...

ಚೌಕಾಸಿ ನೆಡೆದಂತೆಲ್ಲಾ ನನ್ನ ಆತಂಕ ಹೆಚ್ಚಾಗ್ತಿತ್ತು. ನನ್ನ   'ಲವಿಂಗ್  ಹ್ಯಾಟು' ಅಂಗಡಿಯವನಿಗೆ ಕೊಡಬೇಕೆ ವಾಪಸ್ಸು!? ಊಹು...! ಸುತ್ರಾಮ್ ಸಾಧ್ಯವಿಲ್ಲ!... ಯಾವುದೇ ಕಾರಣಕ್ಕೂ ಇಲ್ಲ...! ನನಗಂತೂ  'ಲವ್ ಅಟ್ ಫಸ್ಟ್ ಸೈಟು ' ಅಂದ್ಹಾಗೆ ಆಗ್ಬಿಟ್ಟಿದೆ...! ನಿಜ ಹೇಳ್ತೀದ್ದೀನಿ ನನ್ನ ಪತಿರಾಯ ನನ್ನ ನೋಡೋಕೆ ಮೊದಲ ಸಲ ಬಂದಾಗಲೂ 'ಲವ್ ಅಟ್ ಫಸ್ಟ್ ಸೈಟ್' ಅಂತ ಏನೂ ಆಗಿರ್ಲಿಲ್ಲ...!? ಯಾಕೇಂದ್ರೆ ನೋಡೋಕೆ ಬಂದಾಕ್ಷಣ ಮದುವೆ ಆಗುತ್ತೆ ಅಂತ ಏನು ಗ್ಯಾರಂಟಿ ಇಲ್ವಲ್ಲಾ...!?...
ಅಂಗಡಿಯವ ಅಳೆದು ಸುರಿದು ಹತ್ತು ರೂ ಬಿಟ್ಟ ಅಬ್ಬಬ್ಬಾ ! ' ಫುಲ್ ನೈಂಟೀಗೆ ' ಹ್ಯಾಟು ನನ್ನ ಒಡೆತನಕ್ಕೆ ಬಂತು!. ಮದುವೆ ಆದಾಗ ನನ್ನ ಪತಿಯ ಮೇಲಾದ ಲವ್ವಿಗಿಂತ ದುಪ್ಪಟ್ಟು ಲವ್ವಾಗೋಯ್ತು ನಂಗೀಗ ಅವರ ಮೇಲೆ...! ಅಯ್ಯೋ ! ಇದೇನಿದು!? ಇವರು ತಮಗೆ ಹ್ಯಾಟು ಕೊಳ್ಳದೇ ಹಾಗೇ ಹೊರಟ್ರು?  ಪತಿ ಕಡೆ ನೋಡಿ ಯಾಕೆ ಅಂದೆ? 'ಏ ನಂಗ್ಯಾಕೆ ಬೇಡ ಅಂದ್ರು' ತಣ್ಣಗೆ... ಥೇಟ್ ಮಕ್ಕಳಿಗೆ ಕೇಳಿದ್ದು ಕೊಡಿಸಿ ತನಗಾಸೆ ಇದ್ದರೂ ತನ್ನವರ ಸುಖ ನೋಡಿ ತನ್ನಿರವ ಮರೆವ ಅಪ್ಪನಂತೆ ಕಂಡ್ರು ನಂಗೆ. ಮನ ತುಂಬಿ ಬಂದು ಗಂಟಲುಬ್ಬಿ ಹೋಯ್ತು... ಮನದಲ್ಲೇ ಅಪ್ಪಿ ಮುದ್ದಾಡಿದೆ. ಅಯ್ಯೋ... ನನ್ ಲವ್ವೇ...ಎಂಥಾ ತ್ಯಾಗ...

ಮೆಟ್ಟಿಲು ಹತ್ತಲು ಮೊದಲು ಮಾಡಿದಾಗ ತಲೆಯ ಮೇಲಿದ್ದ ಹ್ಯಾಟು ಕೇವಲ ಹ್ಯಾಟಾಗಿರಲಿಲ್ಲ...! ನನ್ನೊಲುಮೆಯ ಪತಿಯ ಪ್ರೀತಿಯ ಸಂಕೇತವಾಗಿತ್ತು!. ಈಗಂತೂ ಮೃದುವಾಗಿ ಎಚ್ಚರಿಕೆಯಿಂದ ಸವರುತ್ತಾ ಸರಿಯಿದ್ದರೂ ಮತ್ತೊಮ್ಮೆ ಮಗದೊಮ್ಮೆ ಸರಪಡಿಸಿಕೊಂಡೆ...!? ಗೊಮ್ಮಟ ಗಿರಿಯ ಮೆಟ್ಟಿ ನಿಲ್ಲುವ ತವಕದಿಂದ ಹತ್ತಲಾರಂಭಿಸಿದೆ. ಏಳೆಂಟು ಮೆಟ್ಟಿಲು ಹತ್ತಿದ್ದೆನೋ ಇಲ್ಲವೋ ಕಾಲಿನ ರಕ್ಷಾ ಕವಚವಾದ ಕಾಲು ಚೀಲದಿಂದಾಗಿ ಹಿಡಿತ ಸಿಗದೆ ಜಾರುವಂತೆ ಭಾಸವಾಯಿತು. ಅಯ್ಯೋ...! ಇದು ಬೇರೆ ಜಾರುತ್ತಲ್ಲಪ್ಪಾ ಎಂದು ಮೆಲುವಾಗಿ ಗೊಣಗಿದೆ. ' ಬಿಚ್ಚಿಬಿಡು' ಎಂದರವರು ಮಹದಾಜ್ಞೆ ಎಂದು ಬಿಚ್ಚಿದೆ!. ಎಲ್ಲಿರಿಸುವುದು ಎಂದು ನಾ ಯೋಚಿಸುವ ಮೊದಲೇ ಕೈ ಚಾಚಿ ತೆಗೆದುಕೊಂಡು ಪ್ಯಾಂಟಿನ ಜೇಬಿಗಿಳಿಸಿಯೇ ಬಿಟ್ಟರು!.?. ಲವ್ವಂತೂ ಪ್ರೇಮ ಗಂಗೆಯಂತೆ ಪ್ರವಹಿಸಿ ಉಕ್ಕುಕ್ಕಿ ಹರಿಯಿತು... ಸಾರ್ವಜನಿಕ ಸ್ಥಳವಾದ್ದರಿಂದ ಕತ್ತಿಗೆ ಜೋತು ಬೀಳಲಿಲ್ಲ ಅಷ್ಟೇ....

ಉತ್ಸಾಹದ ಚಿಲುಮೆಯಂತೆ ಮೆಟ್ಟಿಲೇರತೊಡಗಿದೆ ವಯಸ್ಸಿನ ಪ್ರಭಾವ ಚೆನ್ನಾಗಿಯೇ ಆಗ ಹತ್ತಿತು. ಆಧುನಿಕ ತಂತ್ರಗಳಿಂದ ಎಷ್ಟು ಮುಚ್ಚಿಟ್ಟರೇನಂತೆ ಅಸಲಿಯತ್ತು ಹಣಕಿ ಹಾಕಹತ್ತಿತೀಗ... ಒಪ್ಪದ ಮನ ಗಿಂಜಾಡುತ್ತಿತ್ತು...! ಪತಿರಾಯ ಅಭಯ ಹಸ್ತ ಚಾಚಿ ಕೈ ಹಿಡಿದಾಗ ಉರಿ ಬಿಸಿಲಿನಲ್ಲೂ ಕರ ಸ್ಪರ್ಶ ಎಲ್ಲವ ಮರೆಸಿತ್ತು!. ಸುಧಾರಿಸುತ್ತಾ, ಆಗಾಗ್ಗೆ ನಿಲ್ಲುತ್ತಾ, ಏದುಸಿರು ಬಿಡುತ್ತಲೇ ಏರ ತೊಡಗಿದೆ. ಧಾರಾಕಾರವಾಗಿ ಕಾವೇರಿ ತಲಕಾವೇರಿಯ ಪುಷ್ಕರಣಿಯಲ್ಲಿ ಬುಳುಬುಳನೆ ಮೇಲೆದ್ದು ಉಕ್ಕಿ ಹರಿವಂತೆ ದೇಹದಾದ್ಯಂತ ಬೆವರು ನಿಯಂತ್ರಣವಿಲ್ಲದೇ ಪ್ರವಹಿಸುತ್ತಾ, ಉಟ್ಟ ಬಟ್ಟೆ ಬಿಗಿದಪ್ಪತೊಡಗಿತು!. ಕೈ ಹಿಡಿದು ಬಹು ಎಚ್ಚರಿಕೆಯಿಂದ ಆರೋಹಣ ಮಾಡಿಸುತ್ತಿದ್ದ ಪತಿಯೆಡೆಗೆ ಅಬಿಮಾನದಿಂದ ನೋಡಿದೆ!. ಕ್ಷಣವಷ್ಟೇ ಆ ಭಾವ...! ಮರುಕ್ಷಣವೇ ಹೊಟ್ಟೆ ಕಿಚ್ಚಿನ ನಂಜು ತಾಗಿ ಬಿಟ್ಟಿತು...! ಮನದ ವಿಕೃತಿ ನೆನೆದು ಅಚ್ಚರಿ ಕೂಡ ಆಯ್ತು...!? 

ಸಪೂರ ದೇಹ, ಸೂರ್ಯ ಅಷ್ಟು ಪ್ರಖರವಾಗಿದ್ದರೂ ಹನಿ ಬೆವರೂ ಕೂಡ ಬಾರದೆ ಅತಿ ಸಹಜವಾಗಿ ಮೆಟ್ಟಿಲೇರುತ್ತಾ ಕೆಂಪಗೆ ಹೊಳೆಯುತ್ತಿದ್ದರವರು!!!!??... ನಾನೋ ಸುಟ್ಟ ಬದನೆ ಕಾಯಿಯಂತಾಗಿದ್ದೆ!  ಮೊದಲೇ ಎಣೆಗೆಂಪು ಮುಖ ಈಗ ಮತ್ತೂ ಕಪ್ಪಾಗತೊಡಗಿತು ಹಾಟಿನಿಂದ ತೂರಿ ಬರುತ್ತಿದ್ದ ಶಾಖಕ್ಕೆ....

ಏರಿದೆವು , ಏರಿದೆವು... ಏರಿಯೇ ಬಿಟ್ಟೆವು...! ಗೊಮ್ಮಟ ಗಿರಿ ಮೆಟ್ಟಿ ನಿಂತು ತಲೆ ನೋಡಿದರೂ ತುದಿ ತೋರದ ಆಜಾನುಬಾಹು, ಸುಂದರ ಪುರುಷ ಸಿಂಹ  ಸ್ಥಿರವಾಗಿ ನೆಲೆ ನಿಂತ ಭಂಗಿ ಕಂಡು 'ಮಗುವಿನ ಮೊಗ ಕಂಡೊಡನೆ ಎಲ್ಲ ಮರೆತು ಖುಷಿಯ ಪುತ್ಥಳಿಯಾಗುವ ತಾಯಂತಾದೆ' ಸಾರ್ಥಕವಾಯಿತು ಕೆಲ ಹೊತ್ತಿನ ಹಿಂದಿನ ಪ್ರಾಯಾಸದ  ಪಯಣದ ಆಯಾಸವೆಲ್ಲಾ ಕ್ಷಣದಲ್ಲಿ   ಮರೆಯಾಗಿ ಹೊಯ್ತು...!

ಕಣ್ತುಂಬಿಕೊಂಡು ಮನದಲ್ಲೇ ವಂದಿಸಿ, ಒಂದಿಷ್ಟು ವಿರಮಿಸಿ, ಅಭ್ಯಾಸ ಬಲದಿಂದಾಗಿ ಒಂದೆರಡು ನಿಮಿಷ ಧ್ಯಾನಿಸಿ ಅವರೋಹಣಕ್ಕೆ ಅಣಿಯಾದೆವು. ' ಬರೀ ಸಪ್ತಪದಿ ಏಕೆ ಶತಪದಿ ತುಳಿವ ಇಂದು' ಎಂದು ಕಿರು ನಗೆ ತುಳುಕಿಸುತ್ತಾ ಪತಿ ಬಿಟ್ಟ  ಬಾಣಕ್ಕೆ ಮಾರುತ್ತರವೆಂಬಂತೆ ನಸು ನಕ್ಕು ಕರ ಹಿಡಿದು  ಮತ್ತೊಮ್ಮೆ ಒಟ್ಟೊಟ್ಟಿಗೆ ಹೆಜ್ಜೆ ಹಾಕತೊಡಗಿದೆವು!. ಪೌರೋಹಿತ್ಯವಿಲ್ಲದ ಶತಪದಿ ಆರಂಭವಾಯ್ತು. ತಪ್ಹೆಜ್ಜೆ ಇರಿಸಿದ ನನಗೆ ಥಾರ್ನಡೈಕ್ನ 'ಪ್ರಯತ್ನ ದೋಷ ಕಲಿಕೆ' ನೆನಪಾಗಿ ತಪ್ಹೆಜ್ಜೆ ಸರಿಪಡಿಸಿ ಸಾಫಲ್ಯ ಕಲಿಕೆ ಕರಗತಮಾಡಿಕೊಂಡು ಅಡೆತಡೆಗಳ ನಿವಾರಿಸುತ್ತಾ ಮುಂದುವರೆದೆವು. ಪ್ರೌಢ ಪ್ರಣಯ ಸೊಗಸಾಗಿ ನೆಡೆಯಿತು. ಹತ್ತುವಾಗಿನ ಪ್ರಾಯಾಸ ಕಾಡಲೇ ಇಲ್ಲ!!!. ಧುಮ್ಮಕ್ಕಿ ಹರಿಯುವ ಜಲದಾರೆಯಂತೆ ದುಡುದುಡು ಓಡೋಡುತ್ತಲೇ ಇಳಿಯುತ್ತಿದ್ದೆವು. ನನ್ನ ಪ್ರಥಮ ಪ್ರೇಮ ಪುತ್ಥಳಿಯನ್ನು ಆಗಾಗ್ಗೆ ಸವರಿ ಸಂಭ್ರಮಿಸುವುದನ್ನು ಮಾತ್ರ ಮರೆಯಲಿಲ್ಲ. ಮನೋ ವಿಜ್ಞಾನಿ ಜೆರೂಮ್ ಎಸ್. ಬ್ರೂನರ್ ಮಾತು ಅಕ್ಷರಶಃ ನಿಜವಾಗಿತ್ತು!!!. ನನ್ನ ಹ್ಯಾಟು ಕ್ರಿಯಾತ್ಮಕ ಹಂತ ದಾಟಿ ಬಿಂಬವಾಗಿ ಪ್ರೇಮ ಸಂಕೇತವಾಗಿ ಶಿರವೇರಿ ಕುಳಿತಿತ್ತು...

ಬೆಟ್ಟವಿಳಿದು ಗೊಮ್ಮಟ ಗಿರಿಯ ಪಾದದಿಂದಲೇ ಮತ್ತೊಮ್ಮೆ ಕಾಣದ ಗೊಮ್ಮಟನನ್ನು ತಿರುತಿರುಗಿ ನೋಡುತ್ತಲೇ ಸೊಗಸಾದ,ರುಚಿಯಾದ ಒಣ ಹಣ್ಣುಗಳಿಂದ ಅಲಂಕೃತವಾದ ಕೋನ್ ಐಸ್ ಕ್ರೀಮ್ ಮೆಲ್ಲುತ್ತಾ ಗೊಮ್ಮಟ ಗಿರಿಗೆ ವಿದಾಯ ಹೇಳಿ ಕಾರೇರಿ, ಬಹು ಅಕ್ಕರೆಯಿಂದ ಮೂರು ಜನ ಆಸೀನರಾಗುವ ಹಿಂಬದಿ ಆಸನದಲ್ಲಿ ನನ್ನ ಹ್ಯಾಟನ್ನು ಬಹು ಕಕ್ಕುಲತೆಯಿಂದ ಇರಿಸಿದೆ. ನಂತರ ಬಂಧುಗಳ ಮನೆಗೆ ಹೋಗಿ ಅಲ್ಲಿನ ಕಾರ್ಯಕ್ರಮ ಮುಗಿಸಿ ಅವರ ಮನೆಯಿಂದ ಹೊರಡುವಾಗ ಈ ಅಚಾತುರ್ಯ ಕೈ ಮೀರಿ ನೆಡೆದು ಹೋಗಿತ್ತು....

ಏನೆಂದು ಬಣ್ಣಿಸಲಿ!?!... ನನ್ನ ಮನ ಸೆಳೆದು ಒಂದಷ್ಟು ಸಮಯ ನನ್ನನ್ನಗಲದಂತೆ ಒಡನಾಡಿಯಾಗಿ ಶಿರವೇರಿ ನಾ ನಲುಗದಂತೆ ಕಾಪಾಡಿದ್ದ ನನ್ನ ಪ್ರೇಮ ಪುತ್ಥಳಿ ಬಂಧುಗಳ ಮಗುವಿನ ಪಾಲಾಗಿತ್ತು...!!!...??? ಏನು ಮಾಡುವುದು? ಹೇಗೆ ಸಹಿಸಲಿ ವೇದನೆಯನ್ನು? ಏಕೆ ಹೀಗಾಯ್ತು?...ಒಂದು ಮಗುವಿನಿಂದ ಪ್ರೇಮ ಭಂಗ! ಅದೂ ಅದರ ಸಹಜ ಆಸೆಯಿಂದ ಆಗಬೇಕೆ? ಅಯ್ಯೋ...! ದುರ್ವಿಧಿಯೇ ನೀನೇಕೆ ಇಷ್ಟು ಕ್ರೂರಿಯಾದೆ? ನಿನಗದು ಕೇವಲ ಹ್ಯಾಟಿರಬಹುದು !!!? ನನಗೆ ಮೊದಲ ಪ್ರೇಮ, ಪತಿಯ ತ್ಯಾಗದ ಸಂಕೇತ...! ಈಗಂತೂ ನನ್ನಲ್ಲಿನ 'ಇದ್' ಸಿಗ್ಮಂಡ ಫ್ರಾಯ್ಡ್ ಹೇಳಿದ್ದಕ್ಕಿಂತ ಭಯಂಕರವಾಗಿ ರುದ್ರ ನರ್ತನ ಮಾಡತೊಡಗಿತು... ಆದರೂ ನಾನು 'ಪ್ರತಿಕ್ರಿಯಿಸಲಿಲ್ಲ ಸ್ಪಂಧಿಸಿದೆ'... ಮಗುವಿನ ಕೆನ್ನೆ ಸವರುವಂತೆ 'ಹ್ಯಾಟು' ಸವರಿದೆ... ದೂರ ಸರಿವ ಪ್ರೇಮಿಯನ್ನು ಕಣ್ತುಂಬಿಕೊಂಡೆ... ಮಗುವಿನ ಕೈ ಸೇರಿ ಅದಕಾಗುವ ಸ್ಥಿತಿ ನೆನೆದು ಪರಿತಪಿಸಿ, ನಿಟ್ಟುಸಿರಿಟ್ಟು ಕಾರಿನೊಳಗೆ ತೂರಿಕೊಂಡೆ... ಬಂಧುಗಳಿಗೆ ಕೈ ಬೀಸಿ ಭಾರವಾದ ಹೃದಯ ಹೊತ್ತು ನಮ್ಮೂರಿನೆಡೆಗೆ ಪಯಣಿಸುವಾಗ ಹೀಗಾಗುವುದೆಂದು ಗೊತ್ತಿದ್ದರೆ ಹಾಗೆ ಮಾಡಬಹುದಿತ್ತು, ಹೀಗೆ ಮಾಡಬಹುದಿತ್ತು... ಎಂದು ಗೊಣಗೊಣ ಶೋಕಾಚರಣೆ ಮಾಡುತ್ತಲೇ ಮನೆ ಸೇರಿ ಮನೆ ಮಂದಿಗೆಲ್ಲಾ ನನ್ನ ದುಗುಡ ಹಂಚಿ ಸುದ್ದಿ ಮಾಡುತ್ತಲೇ ಹಗುರಾಗಲು ಯತ್ನಿಸ ಹತ್ತಿದೆ....!....?....!.... 


  - ಡಾ. ಸುವರ್ಣ 

ಸರಣಿ ಲೇಖನ - 1 - ನಾನೇಕೆ ನಾಸ್ತಿಕ




[1930-31ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಬಾ ರಣಧೀರ್ ಸಿಂಗ್‍ರವರು ಲಾಹೋರ್ ಸೆಂಟ್ರಲ್ ಜೈಲಿನಲ್ಲಿದ್ದರು. ಅವರು ದೇವರಲ್ಲಿ ನಂಬಿಕೆಯಿದ್ದ ಧರ್ಮನಿಷ್ಠ ವ್ಯಕ್ತಿ. ಭಗತ್‍ಸಿಂಗ್ ನಾಸ್ತಿಕರು ಎಂದು ತಿಳಿದಾಗ ಅವರಿಗೆ ತುಂಬಾ ನೋವಾಯಿತು. ಅವರು ಮರಣದಂಡನೆಯ ಸೆಲ್ (condemned cell) ನಲ್ಲಿ ಹೇಗೋ ಭಗತ್‍ಸಿಂಗ್‍ರನ್ನು ಭೇಟಿ ಮಾಡುವುದರಲ್ಲಿ ಯಶಸ್ವಿಯಾದರು. ದೇವರ ಅಸ್ತಿತ್ವದ ಬಗ್ಗೆ ನಂಬಿಕೆ ತರಲು ಪ್ರಯತ್ನಿಸಿ ವಿಫಲರಾದರು. ಬಾಬಾ ರಣಧೀರ್ ಸಿಂಗ್ ಕೋಪವನ್ನು ತಡೆದುಕೊಳ್ಳಲಾಗದೆ ಮೂದಲಿಸುತ್ತಾ ಹೇಳಿದರು: “ನಿಮಗೆ ಖ್ಯಾತಿಯಿಂದ ತಲೆ ತಿರುಗಿದೆ, ಅಹಂಕಾರ ಬಂದಿದೆ; ಅದು ನಿಮ್ಮ ಮತ್ತು ದೇವರ ನಡುವೆ ಕಪ್ಪು ತೆರೆಯನ್ನು ಎಳೆದಿದೆ.” ಆ ಮಾತಿಗೆ ಉತ್ತರಿಸುತ್ತಾ ಭಗತ್‍ಸಿಂಗ್ ಈ ಉತ್ತರವನ್ನು ಬರೆದರು. ಅದನ್ನು ನಾವು ಇಲ್ಲಿ ಸರಣಿ ಲೇಖನವಾಗಿ ಪ್ರಕಟಿಸುತ್ತಿದ್ದೇವೆ]

ನಾನೇಕೆ ನಾಸ್ತಿಕ
ಹೊಸ ಪ್ರಶ್ನೆಯೊಂದು ಉದ್ಭವವಾಗಿದೆ. ಒಬ್ಬ ಸರ್ವಶಕ್ತ, ಸರ್ವಂತರ್ಯಾಮಿ ಮತ್ತು ಸರ್ವಜ್ಞನಾದ ದೇವರ ಅಸ್ತಿತ್ವದಲ್ಲಿ ನನಗೆ ನಂಬಿಕೆಯಿಲ್ಲದಿರುವುದಕ್ಕೆ ಜಂಭ ಕಾರಣವೇ? ಅಂತಹದೊಂದು ಪ್ರಶ್ನೆಯನ್ನು ಎಂದಾದರೂ ಎದುರಿಸಬಹುದೆಂಬ ಕಲ್ಪನೆಯೂ ನನಗಿರಲಿಲ್ಲ. ಆದರೆ ನನ್ನ ಕೆಲವು ಸ್ನೇಹಿತರು – ಅವರನ್ನು ಸ್ನೇಹಿತರೆಂದು ಕರೆಯುವುದು ಅತಿಯಾಗದಿದ್ದರೆ - ನನ್ನ ಜೊತೆಯಿದ್ದ ಸ್ವಲ್ಪಕಾಲದ ಸಂಪರ್ಕದಿಂದ, ನಾನು ದೇವರ ಅಸ್ತಿತ್ವವನ್ನು ನಿರಾಕರಿಸುವುದು ಅತಿಯಾಯಿತು ಮತ್ತು ನನ್ನ ಅಪನಂಬಿಕೆಯು ಸ್ವಲ್ಪಮಟ್ಟಿಗೆ ಒಣಜಂಭದಿಂದ ಬಂದಿದೆಯೆಂದು ನಿರ್ಧರಿಸುತ್ತಿದ್ದಾರೆ. 

ಹೌದು, ಇದೊಂದು ಗಂಭೀರವಾದ ಸಮಸ್ಯೆ. ನಾನು ಮಾನವ ಸಹಜ ಸ್ವಭಾವಗಳನ್ನು ಮೀರಿದವನೆಂದು ಬಡಾಯಿ ಕೊಚ್ಚುವುದಿಲ್ಲ. ಅದಕ್ಕಿಂತ ಹೆಚ್ಚೇನೂ ಅಲ್ಲ. ಅದಕ್ಕಿಂತ ಹೆಚ್ಚಿನವನೆಂದು ಯಾರೂ ಹೇಳಿಕೊಳ್ಳಲಾರರು. ಈ ದೌರ್ಬಲ್ಯ ನನ್ನಲ್ಲೂ ಇದೆ. ಜಂಭವು ನನ್ನ ಸ್ವಭಾವದ ಒಂದು ಭಾಗ. ನನ್ನ ಕಾಮ್ರೇಡರ ನಡುವೆ ನನ್ನನ್ನು ನಿರಂಕುಶಾಧಿಕಾರಿಯೆಂದೂ ದೂಷಿಸಿದ್ದಾರೆ. ನಾನು ನನಗೇ ತಿಳಿಯದಂತೆ ನನ್ನ ಅಭಿಪ್ರಾಯಗಳನ್ನು ಇತರರ ಮೇಲೆ ಬಲವಂತವಾಗಿ ಹೇರಿ, ನನ್ನ ಪ್ರಸ್ತಾವನೆಗಳಿಗೆ ಒಪ್ಪಿಗೆ ಪಡೆಯುತ್ತೇನೆಂದು ಕೆಲವು ಸ್ನೇಹಿತರು ಆರೋಪಿಸಿದ್ದಾರೆ; ಅದೂ ಬಹಳ ಗಂಭೀರವಾಗಿ. ಅದು ಸ್ವಲ್ಪಮಟ್ಟಿಗೆ ಸತ್ಯ. ಅದನ್ನು ನಿರಾಕರಿಸುವುದಿಲ್ಲ. ಇದು ಅಹಂಕಾರಕ್ಕೆ ಎಡೆಮಾಡಿಕೊಡಬಹುದು. 

ಇತರ ಜನಪ್ರಿಯ ಪಂಥಗಳಿಗೆ ವಿರುದ್ಧವಾಗಿರುವ ನಮ್ಮ ಪಂಥದ ಬಗ್ಗೆ ನನಗೆ ಅಷ್ಟರಮಟ್ಟಿಗೆ ಜಂಭವಿದೆ. ಆದರೆ ಅದು ವೈಯಕ್ತಿಕವಲ್ಲ. ಅದು ನಮ್ಮ ಪಂಥದ ಬಗ್ಗೆಯಿರುವ ನ್ಯಾಯಬದ್ಧ ಹೆಮ್ಮೆ ಮಾತ್ರ, ಅದು ಜಂಭ ಅಲ್ಲ. ಜಂಭ ಅಥವಾ ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ‘ಅಹಂಕಾರ’ವೆಂದರೆ ಯೋಗ್ಯತೆಯಿಲ್ಲದಿದ್ದರೂ ತನ್ನ ಬಗ್ಗೆ ತನಗೇ ಅತಿಯಾದ ಹೆಮ್ಮೆ. ಅಂತಹ ಯೋಗ್ಯತೆಯಿಲ್ಲದ ಹೆಮ್ಮೆ ನನ್ನನ್ನು ನಾಸ್ತಿಕತೆಗೆ ತಳ್ಳಿದೆಯೋ ಅಥವಾ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ನಂತರ ಹಾಗೂ ಸಾಕಷ್ಟು ಆಲೋಚನೆ ಮಾಡಿದ ಮೇಲೆ ದೇವರಲ್ಲಿ ಅಪನಂಬಿಕೆ ಬಂದಿತೋ, ಈ ಪ್ರಶ್ನೆಯನ್ನೇ ನಾನಿಲ್ಲಿ ಚರ್ಚಿಸಲು ಬಯಸುವುದು. ಮೊದಲಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ; ಅಹಂಭಾವ ಮತ್ತು ಜಂಭ – ಇವೆರೆಡೂ ವಿಭಿನ್ನ ವಿಷಯಗಳು.

ಮೊದಲನೆಯದಾಗಿ, ಅನುಚಿತವಾದ ಹೆಮ್ಮೆ ಅಥವಾ ಒಣಜಂಭವು ಒಬ್ಬ ವ್ಯಕ್ತಿ ದೇವರಲ್ಲಿ ನಂಬಿಕೆಯಿಡುವುದಕ್ಕೆ ಹೇಗೆ ಅಡ್ಡಿಯಾಗುತ್ತದೆಯೆಂದು ಅರ್ಥಮಾಡಿಕೊಳ್ಳಲು ಸಂಪೂರ್ಣವಾಗಿ ವಿಫಲನಾಗಿದ್ದೇನೆ. ಮಹಾನ್ ವ್ಯಕ್ತಿಯಾಗುವುದಕ್ಕೆ ನಿಜಕ್ಕೂ ಅತ್ಯಗತ್ಯವಾದ ಅಥವಾ ಅನಿವಾರ್ಯವಾದ ಗುಣಗಳನ್ನು ಹೊಂದಿರದಿದ್ದರೂ ಅಥವಾ ಅರ್ಹತೆಯಿಲ್ಲದಿದ್ದರೂ ಸ್ವಲ್ಪಮಟ್ಟಿಗೆ ಜನಪ್ರಿಯತೆಯನ್ನು ಗಳಿಸಿದ್ದರೆ, ಆಗ ನಾನು ನಿಜವಾದ ಮಹಾನ್ ವ್ಯಕ್ತಿಯ ಮಹಾನತೆಯನ್ನು ಗುರುತಿಸುವುದಕ್ಕೆ ನಿರಾಕರಿಸಬಹುದು. ಅದಷ್ಟನ್ನು ಅರ್ಥಮಾಡಿಕೊಳ್ಳಬಹುದು. ಆದರೆ ದೇವರಲ್ಲಿ ನಂಬಿಕೆಯನ್ನು ಕಳೆದುಕೊಳ್ಳಲು ಹೇಗೆ ಸಾಧ್ಯ? ಅದು ಎರಡು ರೀತಿಯಲ್ಲಿ ಸಾಧ್ಯವಿದೆ. 

ಒಂದೋ ಆತ ತನ್ನನ್ನು ದೇವರ ಶತ್ರುವೆಂದು ಯೋಚಿಸಲು ಶುರುಮಾಡಿರಬೇಕು ಅಥವಾ ತಾನೇ ದೇವರೆಂದು ನಂಬಲಾರಂಭಿಸಿರಬೇಕು. ಅವೆರಡೂ ಸಂದರ್ಭಗಳಲ್ಲೂ ನಿಜವಾದ ನಾಸ್ತಿಕನಾಗಲು ಸಾಧ್ಯವಿಲ್ಲ. ಅವನು ಮೊದಲನೆಯ ಸಂದರ್ಭದಲ್ಲಿ ತನ್ನ ಶತ್ರುವಿನ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಎರಡನೆಯ ಸಂದರ್ಭದಲ್ಲೂ ಸಹ, ಪ್ರಕೃತಿಯ ಚಲನವಲನಗಳನ್ನು ‘ತೆರೆಯ ಹಿಂದೆ’ ನಿರ್ದೇಶಿಸುವ ಪ್ರಜ್ಞಾವಂತ ಶಕ್ತಿಯ (conscious being) ಅಸ್ತಿತ್ವವನ್ನು ಒಪ್ಪಿಕೊಳ್ಳುತ್ತಾನೆ. ಸ್ವತಃ ತನ್ನನ್ನೇ ಆ ಪರಮ ಪುರುಷ (supreme being) ಎಂದು ಭಾವಿಸುತ್ತಾನೋ ಅಥವಾ ಪ್ರಜ್ಞಾವಂತ ಪರಮ ಪುರುಷನು ತಾನಲ್ಲದೆ ಬೇರಾರೋ ಎಂದು ಆಲೋಚಿಸುತ್ತಾನೋ ಎನ್ನುವುದು ನಮಗೆ ಅಷ್ಟು ಮುಖ್ಯವಲ್ಲ. ಆದರೆ ಅದರ ಮೂಲವಿರುವುದೇ ಅಲ್ಲಿ. ಅದರಲ್ಲಿ ಆತನ ನಂಬಿಕೆಯಿದೆ. ಅವನು ಯಾವ ರೀತಿಯಲ್ಲೂ ನಾಸ್ತಿಕನಾಗಲು ಸಾಧ್ಯವಿಲ್ಲ. ಇದು ನನ್ನ ಅಭಿಪ್ರಾಯ. 

ನಾನು ಮೊದಲ ಗುಂಪಿಗಾಗಲಿ ಅಥವಾ ಎರಡನೆಯದಕ್ಕಾಗಲಿ ಸೇರಿದವನಲ್ಲ. ನಾನು ಆ ಸರ್ವಶಕ್ತ, ಪರಮ ಪುರುಷನ ಅಸ್ತಿತ್ವನ್ನೇ ನಿರಾಕರಿಸುತ್ತೇನೆ. ನಾನು ನಿರಾಕರಿಸುವುದೇಕೆ ಎಂಬುದನ್ನು ಆನಂತರ ಚರ್ಚಿಸುತ್ತೇನೆ. ಇಲ್ಲಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ - ನಾನು ನಾಸ್ತಿಕತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಲು ‘ಜಂಭ’ ಪ್ರಚೋದನೆ ನೀಡಲಿಲ್ಲ. ನಾನು ಅವನ ಶತ್ರುವೂ ಅಲ್ಲ, ಅವತಾರವೂ ಅಲ್ಲ ಅಥವಾ ಸ್ವತಃ ನಾನೇ ಪರಮ ಪುರುಷನೂ ಅಲ್ಲ. ನನ್ನ ಈ ರೀತಿಯ ಚಿಂತನೆಗೆ ಜಂಭವು ಕಾರಣವಲ್ಲ ಎಂಬುದಂತೂ ನಿರ್ಧಾರವಾಯಿತು. ಈ ಆಪಾದನೆಯನ್ನು ತಪ್ಪೆಂದು ತೋರಿಸಲು ಸತ್ಯ ಸಂಗತಿಗಳನ್ನು ಪರಿಶಿಲಿಸೋಣ. 

ಈ ಸ್ನೇಹಿತರ ಪ್ರಕಾರ, ದೆಹಲಿ ಬಾಂಬ್ ಮತ್ತು ಲಾಹೋರ್ ಪಿತೂರಿ – ಇವೆರೆಡೂ ಪ್ರಕರಣಗಳ ವಿಚಾರಣೆಯ ಸಂದರ್ಭದಲ್ಲಿ ಬಹುಶಃ ಅರ್ಹವಲ್ಲದಷ್ಟು ಜನಪ್ರಿಯತೆ ಗಳಿಸಿಕೊಂಡಿದ್ದರಿಂದ ನನ್ನಲ್ಲಿ ಒಣಜಂಭ ಬೆಳೆದುಬಿಟ್ಟಿದೆ. ಸರಿ, ಅವರ ಅಭಿಪ್ರಾಯಗಳು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಪರಿಶೀಲಿಸೋಣ. ನನ್ನ ನಾಸ್ತಿಕತೆ ಇತ್ತೀಚೆಗೆ ಹುಟ್ಟಿದ್ದಲ್ಲ. ನಾನು ಮೇಲೆ ತಿಳಿಸದ ಸ್ನೇಹಿತರಿಗೂ ಗೊತ್ತಿರದ, ಯಾರ ಗಮನಕ್ಕೂ ಬಾರದ ಯುವಕನಾಗಿದ್ದಾಗಲೇ ದೇವರಲ್ಲಿ ನಂಬಿಕೆಯಿಡುವುದನ್ನು ನಿಲ್ಲಿಸಿಬಿಟ್ಟಿದ್ದೆ. ನಾಸ್ತಿಕತೆಗೆ ಕೊಂಡೊಯ್ಯುವ ಯಾವುದೇ ರೀತಿಯ ಅರ್ಹವಲ್ಲದ ಹೆಮ್ಮೆಯನ್ನು, ಕಡೇ ಪಕ್ಷ ಒಬ್ಬ ಕಾಲೇಜು ವಿದ್ಯಾರ್ಥಿ ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಪ್ರೊಫೆಸರ್‍ಗಳಿಗೆ ಪ್ರಿಯನಾದ, ಇನ್ನು ಕೆಲವರು ಇಷ್ಟಪಡದ ವಿದ್ಯಾರ್ಥಿಯಾಗಿದ್ದರೂ ಸಹ, ನಾನು ಶ್ರಮಪಟ್ಟು ಓದುವ ಅಥವಾ ವ್ಯಾಸಂಗನಿಷ್ಠ ವಿದ್ಯಾರ್ಥಿಯಾಗಿರಲಿಲ್ಲ. ನನಗೆ ಜಂಭದಂತಹ ಭಾವನೆಗಳಲ್ಲಿ ತೊಡಗುವುದಕ್ಕೆ ಯಾವ ಅವಕಾಶಗಳೂ ಸಿಗಲಿಲ್ಲ. ನಿಜ ಹೇಳಬೇಕೆಂದರೆ, ಮುಂದಿನ ಕೆರಿಯರ್ (career) ಬಗ್ಗೆ ಕೆಲವು ನಿರಾಶೆಯ ಸ್ವಭಾವಗಳಿದ್ದ, ಬಹಳ ಸಂಕೋಚದ ವಿದ್ಯಾರ್ಥಿಯಾಗಿದ್ದೆ. 

ಆ ದಿನಗಳಲ್ಲಿ ನಾನು ಪಕ್ಕಾ ನಾಸ್ತಿಕನಾಗಿರಲಿಲ್ಲ. ನಾನು ಯಾರ ಪ್ರಭಾವದಲ್ಲಿ ಬೆಳೆದನೋ ಆ ನನ್ನಜ್ಜ, ಸಂಪ್ರದಾಯಸ್ಥ ಆರ್ಯಸಮಾಜಿಯಾಗಿದ್ದರು. ಆರ್ಯಸಮಾಜಿಯಾದವರು ಏನಾದರೂ ಆಗಬಹುದು, ಆದರೆ ನಾಸ್ತಿಕರಾಗುವುದಿಲ್ಲ. ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಲಾಹೋರಿನ ಡಿಎವಿ ಶಾಲೆಗೆ ಸೇರಿದೆ ಮತ್ತು ಒಂದು ವರ್ಷ ಪೂರ್ತಿ ಅದರ ವಿದ್ಯಾರ್ಥಿ ನಿಲಯದಲ್ಲಿ ವಾಸ ಮಾಡಿದೆ. ಅಲ್ಲಿ ಬೆಳಗಿನ ಮತ್ತು ಸಂಜೆಯ ಪ್ರಾರ್ಥನೆಗಳ ಜೊತೆಗೆ ಗಂಟೆಗಟ್ಟಲೆ ಗಾಯತ್ರಿ ಮಂತ್ರ ಪಠಿಸುತ್ತಿದ್ದೆ. 

ಆ ದಿನಗಳಲ್ಲಿ ನಾನು ನನ್ನ ತಂದೆಯೊಡನೆ ವಾಸ ಮಾಡಿದೆ. ಧರ್ಮಗಳ ಸಂಪ್ರದಾಯ ಬದ್ಧತೆಗೆ ಹೋಲಿಸಿದರೆ ಅವರೊಬ್ಬ ಉದಾರವಾದಿ. ಅವರ ಬೋಧನೆಗಳಿಂದಲೇ ನಾನು ನನ್ನ ಜೀವನವನ್ನು ಸ್ವಾತಂತ್ರ್ಯಕ್ಕೋಸ್ಕರ ಮುಡಿಪಾಗಿಡಬೇಕೆಂದು ಬಯಸಿದ್ದು. ಆದರೆ ಅವರು ನಾಸ್ತಿಕರಲ್ಲ. ಅವರು ಅಚಲ ದೈವಭಕ್ತರು. ನಾನು ಪ್ರತಿದಿನವೂ ಪ್ರಾರ್ಥನೆ ಸಲ್ಲಿಸುವಂತೆ ನನ್ನನ್ನು ಉತ್ತೇಜಿಸುತ್ತಿದ್ದರು. ಇದು ನಾನು ಬೆಳೆದು ಬಂದ ರೀತಿ. ‘ಅಸಹಕಾರ ಚಳುವಳಿ’ಯ ದಿನಗಳಲ್ಲಿ ನ್ಯಾಷನಲ್ ಕಾಲೇಜಿಗೆ ಸೇರಿದೆ. ಅಲ್ಲಿಯೇ ನಾನು ಉದಾರವಾಗಿ ಆಲೋಚಿಸಲು ಮತ್ತು ಧರ್ಮಗಳ ಸಮಸ್ಯೆಗಳ ಬಗ್ಗೆ, ದೇವರ ಬಗ್ಗೆಯೂ ಸಹ ಚರ್ಚಿಸಲು, ಟೀಕಿಸಲು ಆರಂಭಿಸಿದೆ. ಆದರೂ ನಾನು ನಿಷ್ಠಾವಂತ ದೈವಭಕ್ತನಾಗಿದ್ದೆ. ಉದ್ದ ಕೂದಲನ್ನು ಕತ್ತರಿಸದೆ, ಗಂಟುಕಟ್ಟದೆ ಕಾಪಾಡಿಕೊಂಡಿರಲು ಆರಂಭಿಸಿದ್ದೆ; ಆದರೆ ಸಿಖ್ ಧರ್ಮದ ಅಥವಾ ಬೇರಾವುದೇ ಧರ್ಮದ ಪುರಾಣ ಮತ್ತು ಸಿದ್ಧಾಂತಗಳಲ್ಲಿ ಯಾವತ್ತೂ ನಂಬಿಕೆಯಿರಲಿಲ್ಲ. ಆದರೆ ದೇವರ ಅಸ್ತಿತ್ವದಲ್ಲಿ ಗಾಢವಾದ ನಂಬಿಕೆಯಿತ್ತು.
(ಮುಂದುವರೆಯುತ್ತದೆ)  

-  ಎಸ್.ಎನ್.ಸ್ವಾಮಿ