Pages

ಅನುಭವ - ನರಸೀಪುರದೆಡೆಗೆ ಬಸ್ಸಾಯಣ...


ಬೆಳಂಬೆಳಿಗ್ಗೆ 6.30ಕ್ಕೆ ಜಂಗಮವಾಣಿ ಒಂದೇ ಸಮನೆ ಉಲಿಯಲಾರಂಬಿಸಿತು. ಪತಿ ಹಾಗೂ ನನ್ನ ಶೈಕ್ಷಣಿಕ ಕೂಸು ಗುರುವಿನೊಂದಿಗೆ ಕಪ್ಪು ಚಾ ಆಸ್ವಧಿಸುವ ಸಮಯವದು. ಇದ್ಯಾರಿದು? ಎನ್ನುತ್ತಲೇ ಜಂಗಮವಾಣಿಯ ಲಯಬದ್ದ ರಿಂಗಣಿಸುವೆಕೆ ಕೇಳುತ್ತಾ, ಅದರ ಬೆಳಕಿನಾಟ ನೋಡುತ್ತಲೇ ಅಚ್ಚರಿಯಿಂದ ನನ್ನ ಪ್ರೀತಿಯ ಶೈಕ್ಷಣಿಕ ಕೂಸು ಮಹೇಂದ್ರನ ಕರೆ ಸ್ವೀಕರಿಸಿದೆ.

ಅವ ಮಾತಿಗೆ ಮೊದಲೇ ಕ್ಷಮೆ ಯೋಚಿಸುತ್ತಾ ಮಂಡ್ಯದಿಂದ ಆತುರಾತುರವಾಗಿ ಹೊರ್ಟಬಿಟ್ವಿ' ಸಂತೆ ಮರ ಹಳ್ಳಿ' ಗೆ ಅಂದ!. ಇದೇನಿದು!? ಮನೆ ಬಿಟ್ಟು ದಿಕ್ಕು ದೆಸೆ ಇಲ್ದವರು ಓಡೋದಂಗೆ ಹೋಗ್ತಿದ್ದಾರಲ್ಲಾ !ಅನ್ಸಿದ್ರೂ, ವಿಷಯ ಗ್ರಹಿಸ್ದೆ. ನಿತ್ಯ ಬಸ್ಸಿನ ನಿರಂತರ ಓಡಾಟದಿಂದ ಮುಕ್ತಿ ಪಡೆಯಲು ಈ ತರಾತುರಿಯ ಹೊರಡುವಿಕೆ ಅಂತ!.
ಸರಿ ಮಾರಾಯ ಮೊದಲೇ ಹೇಳಿದ್ರೆ ನಾನು ಬರ್ತಿದ್ನಲ್ಲೋ ಇಂದು ನಿರ್ಬಂಧಿತ ರೆಜೆ ಹಾಕಿದ್ದೆ ಅಂದೇ. ಅವ್ನು ಹಿಂದೂ ಮುಂದು ನೋಡ್ದೇ ಬಂದ್ಬಿಡಿ ಮತ್ತೆ ಅಂದ!. ಮಗನ ಬೇಡಿಕೆ ಬಿಡಲಾದೀತೇ? ಹೊರಟೇಬಿಟ್ಟೆ. 10.15ಕ್ಕೆ ನನ್ನ ಮಗ 'ವರು' ದ್ವಿಚಕ್ರ ವಾಹನದಲ್ಲೇರಿಸಿಕೊಂಡು ಬಸ್ಸ ನಿಲ್ದಾಣಕ್ಕೆ ಬಿಟ್ಟು ಹೊರಟ.
ಟಿ ನರಸೀಪುರಕ್ಕೆ ಬಸ್ಸಿನಲ್ಲಿ ನನ್ನ ಮೊದಲ ಪ್ರಯಾಣವಿದು ಏನೋ ಗಲಿಗಲಿ. ಅಲ್ಲಿ ನಿಂತ ಬಸ್ಸು ನಿರ್ವಾಹಕರನ್ನು ಕೇಳಿದೆ ಟಿ ನರಸೀಪುರಕ್ಕೆ ತಡೆ ರಹಿತ/ಸೀಮಿತ ನಿಲುಗಡೆಯ ಬಸ್ಸುಗಳುಂಟೇ? ಅವರುಗಳು ಪ್ರಾಣಿ ನೋಡಿದಂತೆ ನೋಡಿದ್ರು!?. ಇಲ್ಲಿಂದ ಈಗ ಅಲ್ಲಿಗೆ ಎಲ್ಲವೂ 'ಕೈ ತೋರಿದಲ್ಲಿ ನಿಲ್ಲುವ ವಾಹನಗಳೇ' ಮೇಡಂ!. ಏನೋ ಕಳ್ಕೊಂಡ್ಹಾಗೆ ಹೌದಾ...! ರಾಗ ಎಳೆಯುತ್ತಾ ಎಷ್ಟೋತ್ತಿಗೆ ತಲುಪುತ್ತೆ? ನನ್ನ ಈ ಮತ್ತೊಂದು ಪ್ರಶ್ನೆಗೆ ಒಬ್ಬ ನಿರ್ವಾಹಕರು ಕಂಡೂ ಕಾಣದಂತೆ ನಗುತ್ತಾ 'ನಾವೇ ಬರೋದು!(ಮಹಾರಾಜರ ವಂಶಸ್ಥರಂತೆ ಅವರನ್ನವರು ಗೌರವಿಸಿಕೊಳ್ಳುತ್ತಾ!) ಅದೇ ನಮ್ಮ ರಥ ಹೋಗಿ ಮೇಡಂ ಬೇಗ ಹತ್ಕೊಳ್ಳಿ! ಇನ್ನೇನ್ ಬಂದ್ಬಿಟ್ವಿ! ಹನ್ನೆರಡುವರೇಗೆಲ್ಲಾ ಅಲ್ಲಿರ್ತೀವಿ! ಅಂದ್ರು. ಅಯ್ಯಪ್ಪಾ! ಸುಮಾರು ನಲವತ್ತು ಕಿ ಮೀ ದೂರ ಹೋಗೋಕೆ ಹೆಚ್ಚು ಕಮ್ಮಿ ಎರಡು ಕಾಲು ಗಂಟೇನಾ! ಮುಖ ಬಾಡೋಯ್ತು. 
ಅಲ್ಲಿದ್ದ ಬಸ್ಸ ಚಾಲಕರೊಬ್ಬರು ನನ್ನ ಮುಖ ಓದಿದವರಂತೆ ಬಹಳ ಆಪ್ತವಾಗಿ ಮೇಡಂ ಮೈಸೂರಿನ ಮೂಲಕ ಕೂಡ ಹೋಗಬಹುದು ಅಲ್ಲಿ ನೀವು ಕೇಳಿದಂತೆ ಬಸ್ಸುಗಳು ಇರ್ತಾವೆ ಆದರೆ ಇಷ್ಟೇ ಸಮಯ ಆಗುತ್ತೆ ಮತ್ತೆ ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂಗೆ ಆಗುತ್ತೆ ಸುಮ್ನೆ ಅಷ್ಟೆಲ್ಲಾ ಸುತ್ತಾಟ ಯಾಕೆ ಬನ್ನಿ ಹತ್ತಿ ಅಂದ್ರು. ಪ್ರೀತಿಯ ಅಪ್ಪಣೆ ಮೀರುವುದುಂಟೇ ಏರಿಯೇಬಿಟ್ಟೆ ಕೆಂಪು ಬಸ್ಸು. ಒಳಗೆ ಅಲ್ಲಿ ಇಲ್ಲಿ ಸೀಟಿಗೊಂದರಂತೆ ಆಳಿದ್ರು. ಮೂರು ಜನ ಕೂರುವ ಸೀಟಿನಲ್ಲಿ ಬಾಗಿಲ ಎದುರಿಗಿದ್ದ ಆಸನದಲ್ಲಿ ಚಂದದ ಹುಡುಗಿಯೊಬ್ಬಳಿಗೆ ಮುಗುಳುನೆಗೆ ಬೀರುತ್ತಾ ಬರುವರೇ ಎನ್ನುತ್ತಲೇ ಧಸಕ್ಕನೆ ಕುಳಿತೆ. ಇಲ್ಲ ಎಂದು ನಕ್ಕಳು ನಾ ನಗಲಿಲ್ಲ. ಕಾರಿನ ಸೀಟಿನಲ್ಲಿ ಕೂರುವುದು ಅಭ್ಯಾಸವಾಗಿದ್ದುದ್ದು ಇತ್ತೀಚಿನ ವರ್ಷಗಳದ್ದಾದರೂ ವರ್ಷಗಳಿಂದೆಂಬಂತೆ ಒಗ್ಗಿ ಹೋಗಿತ್ತು. ಅದಕ್ಕೆ ಕುಕ್ಕರಿಸಿದಂತೆ ಕುಳಿತು ಸೀಟಿಗೆ ಬಡಿದುಕೊಂಡಿದ್ದೆ ನಚ್ಚಗಾಗಿತ್ತು!!!.
  ಆರಂಭವಾಗಿತ್ತು ನಿಲುಗಡೆ ಬಸ್ಸಿನಲ್ಲಿ ನಿರಂತರ ಪಯಣ. ಕುಲುಕುತ್ತಾ , ನಲಿಯುತ್ತಾ , ಬಳುಕುತ್ತಾ ಹೊರಟ ಬಸ್ಸು ಬರುಬರುತ್ತಾ ಪ್ರಯಾಣಿಕರಿಂದ ತುಂಬಿಕೊಳ್ಳುತ್ತಾ ಗಜ ಗಾಂಭೀರ್ಯದಿಂದ 'ನಿದಾನ ಪ್ರಧಾನ' ಎಂಬಂತೆ ಚಲಿಸಲುಧ್ಯುಕ್ತವಾದದ್ದು ಕಂಡು ಕಂಗಾಲಾದೆ. ಗಾಬರಿಗೆ ನಾ ಓಡಾಡುತ್ತಿದ್ದ ಏರಿಯಾಗಳ ಗುರುತೇ ಸಿಗದಂತಾಯ್ತು!. ನಿರ್ವಾಹಕರು ಕೆಲವು ಪ್ರಯಣಿಕರ ಉಭಯ ಕುಶಲೋಪರಿ ವಿಚಾರಿಸುತ್ತಲೇ ಬಳಿ ಸಾರಿ ಎಲ್ಲಿಗೆ ಮೇಡಂ ಎಂದು ಕೇಳಿದರು ಪರಿಚಯದ ನೆಗೆ ಬೀರುತ್ತಾ!. ನಾನು ಪೆದ್ದು ಪೆದ್ದಾಗಿ ವಿಚಾರಿಸಿದ ಮಾತ್ರಕ್ಕೆ ಇಷ್ಟೋಂದು ಪರಿಚಯದ ನಡವಳಿಕೆಯೇ?! ಎಂದಚ್ಚರಿಗೊಳ್ಳುತ್ತಾ ಮೆಲು ದನಿಯಲ್ಲಿ ಗಿಜಿಗುಟ್ಟುವ ಬಸ್ಸಿನಲ್ಲಿ ಟಿ ನರಸೀಪುರಕ್ಕೆ ಒಂದು ಟಿಕೀಟು ಎನ್ನುತ್ತಾ ನೂರರ ನೋಟು ಚಾಚಿದೆ. ಕೊಡದೇ ಹೋದರೆ ಎಂಬಂತೆ ಎರಡು ಬೆರಳುಗಳಿಂದ ನನ್ನ ಕೈಯಿಂದ ಸರಕ್ಕನೆ ಎಳೆದುಕೊಂಡ ನೊಟನ್ನು ಪುಣ್ಯಾತ್ಮ!. ಚೀಟಿ ಹರಿದು ಅದರ್ಹಿಂದೆ ವೈಧ್ಯರ ಸಹಿಯಂತೆ ಗೀಚಿ ಕೈಗಿತ್ತರು. ನೋಡಿದೆ ಪದೇ ಪದೇ ನೋಡಿದೆ!. ದರ ಅರವತ್ತಾರು!? ಅಲ್ಲಾ ಕೇವಲ ನಲವತ್ತಾರು ಕಿ. ಮೀ ಸಾಗಲು ಅದೂ ಕೈದೋರಿದಲ್ಲಿ ನಿಲ್ಲುವ ಸರ್ಕಾರಿ ಬಸ್ಸಿನಲ್ಲಿ ಇಷ್ಟೋಂದು ದರವೇ!?!. ಏನೋ ತಪ್ಪಾಗಿದೆ ಎಂದು ಮನ ಹೇಳ ಹತ್ತಿತು ಸಾಮಾನ್ಯ ಜ್ಞಾನ ಬಾವುಟ ಹಾರಿಸಿ ಬಿಟ್ಟಿತ್ತು!!!.
  ಕೇಳುವ ಎಂದು ನಿರ್ವಾಹಕರ ಮುಖ ನೋಡಿದೆ ಅವರು ನನ್ನ ಪಕ್ಕದವರನ್ನ ಬಿಟ್ಟು ಅವರ ಪಕ್ಕದವರನ್ನ ಕೇಳ ಹತ್ತಿದ್ರು. ನನ್ನ ಪಕ್ಕದ ಹುಡುಗಿ ಗೊಂದಲಗೊಂಡಂತೆ ಅವಳ ಊರಿಗೆ ಟಿಕೀಟು ಕೇಳಿದ್ಲು ಅಯ್ಯೋ! ನಿಮಗೂ ಸೇರಿಸಿ ಇವರಿಗೆ ಕೊಟ್ಬಿಟ್ನಲ್ಲಾ ಅಂದ್ರು!?. ಇದೊಳ್ಳೆ ಕಥೆ ಆಯ್ತಲ್ಲಾ ಅಂತ ಬೆಸ್ತುಬಿದ್ದು ಮುಖ ನೋಡಿದೆ. ನಿರ್ವಾಹಕರು ಇರಲಿ ಬಿಡಿ ಮೇಡಂ! ಇದು ಮೊದಲ ನಿಲುಗಡೆ ಅಲ್ವಾ ನಾನ್ ಸರಿ ಮಾಡ್ತೀನಿ! ನೀವೇನ್ ಯೋಚ್ನೆ ಮಾಡ್ಬೇಡಿ ಅಂದ್ರು. ಆತ ಹೇಳಿದ ರೀತಿ ಹೇಗಿತ್ತು ಅಂದ್ರೆ ಏನೋ ನಾನೇ ಸರಿಯಾಗಿ ಹೇಳದೇ ತಪ್ಪು ಮಾಡಿ ರಶೀದಿ ಹರಿಸಿರುವಂತೆ. ಮೆಲು ದನಿಯಲ್ಲಿ ನಾನು ಒಂದು ಎಂದು ಹೇಳಿದೆ ಎಂದೆ!. ಆತ ದೊಡ್ಡದಾಗಿ ನಗುತ್ತಾ, ತನ್ನ ತಪ್ಪು ಮುಚ್ಚಿಕೊಳ್ಳುತ್ತಾ ' ಏನಾಗೊಲ್ಲ ಬಿಡಿ! ಹೀಗೆಲ್ಲಾ ಆಗುತ್ತೆ! ಅಂತ ಸಮಾಧಾನ ಮಾಡಿದ್ರು. ಒಳ್ಳೆ ತಪ್ಪು ಮಾಡದೇ ಇದ್ರೂ ಗಾಬರಿಯಾದ ಮಗುವನ್ನ ರಮಿಸಿದಂತೆ!?.
  ಬಸ್ಸು ಉಳ್ಳಾಡುತ್ತಾ, ಅಲ್ಲಲ್ಲೇ ನಿಲ್ಲುತ್ತಾ, ಜಾಗವಿಲ್ಲದಿದ್ರೂ ಒಳಗೆ ತೂರುತ್ತಿದ್ದ ಜನರನ್ನು ಉದರದೊಳಗೆ ತುರುಕಿಸಿಕೊಳ್ಳುತ್ತಾ
'ಭೂಮಿಯ ಭರಿಸುವ ಸಾಮರ್ಥ್ಯ ಮೀರಿದರೂ ತಡೆದುಕೊಳ್ಳುತ್ತಿಲ್ಲವೇ!?' ಹಾಗೆ ತುಂಬಿದ ಬಸುರಿಯಂತೆ ಸಂವೃದ್ಧಿಯ ಸಂಕೇತವಾಗಿತ್ತು. ಆಗಲೇ ಮುಂದಿನ ಸೀಟಿನಲ್ಲಿದ್ದ ಹೆಣ್ಣು ಮಗಳು ಅಣ್ಣ ಒಂದು ಟಿ ನರಸೀಪುರಕ್ಕೆ ಅಂದ್ಲು ಸ್ಪಷ್ಟವಾಗಿ. ಹಾ! ಸಿಕ್ಕಿಬಿಟ್ಟಿತು ನಿಧಿ! ನಿರ್ವಾಹಕರ ಮುಖ ಅರಳಿ ಹೋಯ್ತು. ನೋಡಿದ್ರಾ! ನಾ ಏನ್ ಹೇಳಿದ್ದೆ!? ನೋಡಿ ಅಡ್ಜಸ್ಟ ಆಗೋಯ್ತು ಅಂದ್ರು!? ತನ್ನ ಭವಿಷ್ಯ ಗೊತ್ತಿರದ ಜ್ಯೋತಿಷಿ ಘೋಷಿಸುವಂತೆ!?!. ನನ್ನ ತೋರಿಸಿ, ಅವ್ರಗೆ ಎರಡು ಟಿಕೀಟ್ ಕೊಟ್ಟಿದ್ದೀನಿ ಆಮೇಲೆ ಚಿಲ್ಲರೆ ಕೊಡ್ತೀನಿ ಅಂತ ಮುಂದೋದ್ರು. ಆ ಹೆಣ್ಣು ಮಗಳು ಕಣ್ಣಲ್ಲೇ ಸನ್ನೆ ಮಾಡಿ ಕೊಟ್ಟಿದ್ದಾರ ಅಂತ ಕೇಳಿದ್ರು ನಾನು ಪೆಚ್ಚಾಗಿ ನಗಲಾರದಂತೆ ನಕ್ಕೆ. ಮಾಹಿತಿ ಸಂವಹನ ಪಾಠ ಮಾಡುವ ನಾನು ಸೋತಿದ್ದೆ!?!.
ಬಸ್ಸು ಎಲ್ಲರನ್ನೂ ಎಳೆಯುತ್ತಾ , ಉರುಳುತ್ತಾ ನಿಧಾನವಾಗಿ ಚಲಿಸುತ್ತಿದ್ದರೂ ನನ್ನ ಮನ ಮಾತ್ರ ಎಲ್ಲೆಲ್ಲೋ ಶರವೇಗದಲ್ಲಿ ಓಡಾಡ್ತಾ ದಿಕ್ಕು ದೆಸೆ ಕಳ್ಕೊಂಡಿತ್ತು!?. ಹಳ್ಳಿಗರು ಅವರ ಕಥೆಗಳನ್ನ ಬೇರೆಯವರ ಕಿವಿಗೆ ಅಪ್ಪಳಿಸುವಂತೆ ಬಸ್ಸಿನ ಶಬ್ದಕ್ಕಿಂತಲೂ ಜೋರಾಗಿ ಅರಚುತ್ತಿದ್ದರು!!!. ಅಲ್ಲಿ ರಾಮಾಯಣ, ಮಹಾಭಾರತ , ನೋವಿತ್ತು , ನಲಿವಿತ್ತು , ಕಾಲೇಜು ಲಲನೆಯರ ಕಿಲಕಿಲ ನಗೆ , ಚಿಗುರು ಮೀಸೆ ಹೊತ್ತ ಗಂಡ್ಹೈಳ್ಳ ಕೀಟಲೆಗಳೆಲ್ಲವೂ ಇತ್ತು. ಪ್ರಯಾಣದಲ್ಲಿ ಸದಾ ಮುಖಕ್ಕೆ ಪುಸ್ತಕ ಹಿಡಿವ ನಾನು ಹೊಸ ಜಗತ್ತಿಗೆ ತೆರೆದುಕೊಳ್ಳುತ್ತಾ ಬಿಟ್ಟ ಕಣ್ಣು ಬಿಟ್ಟಂತೆ ಕುಳಿತೆ. ತರಗತಿಯ ಸಿದ್ಧಾಂತದ ಪಾಠಕ್ಕೂ ಇಲ್ಲಿನ ಜೀವನ ದರ್ಶನಕ್ಕೂ ಎಷ್ಟೋಂದು ಅಂತರ! ಬೆರಗಿನಿಂದ ನೋಡ ಹತ್ತಿದೆ.
  ಅಷ್ಟರಲ್ಲೇ ಕಿಟಕಿ ಹಾಕಿ ಕುಳಿತ ಅದರೊಡತಿಗೆ ತೆಗಿಯವ್ವ ಅಂತ ಮನವಿ ಮಾಡಿದೆ. 'ಅವ್ವ ಗಾಳಿ ಶಾನೆ ಬೀಸ್ತದೆ ' ಅಂದ್ರು. ತೆಗೀದಿದ್ರೆ ನಾ ತಿಂದದ್ದೆಲ್ಲಾ ಆಚೆ ಹಾಕ್ಬಿಡ್ತೀನಿ ಅಂದೆ. ಬಿನ್ ಲಾಡೆನ್ ಪೆಂಟಾಗನ್ ಹೊಡೆದುರುಳಿಸ್ತೀನಿ ಅಂದಂಗೆ!?. ' ಅಯ್ಯಾ ತಗವ್ವ ತಾಯಿ' ಅಂತ ಒಂಚೂರು ತೆಗದ್ರು. ಉಫ್ ನಮ್ಮವ್ವ ತಣ್ಗಿರು ಅಂದೆ ಮನದಾಗೆ. ಅದೆಲ್ಲೆಲ್ಲಿದ ಬರ್ತಿತ್ತೋ ಕಾಣೆ!? ಅದೇನು ಬೆವರೋ , ದೇಹ ಓದುತ್ತಿದ್ದ ಪೀಪಿಯೋ!? ಉಸಿರು ಕಟ್ತಿತ್ತು. ಕೋಪ , ಬೇಸರ ಎರಡೂ ಆಯ್ತು. ಅದೇನ್ ಜನಾನೋ ಅಂದ್ಕೊಂಡೆ!?. ಅಷ್ಟರಲ್ಲೇ ಪಕ್ಕದ ದ್ವಿ ಆಸನದಲ್ಲಿದ್ದ ಹಿರಿಯರು ಮುಂದಿನ ಆಸನದಲ್ಲಿದ್ದವರಿಗೆ ಕೂಗಿ ಹೇಳಿದ್ರು " ಗದ್ದೆ ಕಡೀಂದ ಇಂಗೇ ಬಂದ್ಬುಟ್ಟೆ ಕನವ್ವ , ನಮ್ಮ ಚಿಕ್ಕವ್ನ ಮಗಳ ಗಂಡನ ಮಾವನವ ಶವಕ್ಕೆ ಓಗ್ಬೇಕು" . ಹಳ್ಳಿಗರ ಕಮಟು ವಾಸನೆಗೆ ಕಾರಣ ಹೊಳೆದ್ಹೋಯ್ತು!. ಆದ್ರೆ ಮನ ಮುದುಡಿ ತುಲನೆಗೆ ಬಿತ್ತು!?. ಹತ್ತಿರದ ಸಂಬಂಧಿಕರು ವಿಧಿವಶರಾದ ಸುದ್ದಿ ಬಂದ್ರೂ ಕಾರಣ ಮುಂದಿಟ್ಟು ಮುಖ ನೋಡಲು ಹೋಗದೇ ಅನುಕೂಲವಾದಾಗ ಹೋಗುವ  ಅನುಕೂಲ ಸಿಂಧು ಸ್ವಭಾವದ ನಮ್ಮಂಥವರ ಮುಂದೆ ಆ ಹಿರಿಯ ಜೀವ ಬೃಹತ್ತಾಗಿ ಬೆಳೆದಂತೆ ಕಂಡು ಕುಬ್ಜಳಾದೆ!?.
   ಅಂತೂ ಇಂತು ಟಿ... ನರಸೀಪುರ ತಲುಪಿದೆ. ಅಲ್ಲಿಂದ ' ಸಂತೇ ಮರ ಹಳ್ಳಿ'ಗೆ ಹೋಗಬೇಕಿತ್ತು. ಇಳಿದು ಎತ್ತ ಹೋಗುವುದೆಂದು ನೋಡುತ್ತಾ ನಿಂತೆ. ಅದು ಸರ್ಕಾರಿ ಹಾಗೂ ಸಾವಕಾರಿ ಬಸ್ಸುಗಳ ಸಹಕಾರದ ಸಂಗಮದಂತಿತ್ತು. ಬಸ್ಸುಗಳು ರೊಯ್ಯನೆ ಬರುತ್ತಿದ್ದರೂ ಪೈಪೋಟಿ ಇದ್ದರೂ ತೊಂದರೆ ಆಗದಂತೆ ಚಲಿಸುತ್ತಿದ್ದವು. ಆಂಗ್ಲ ಭಾಷಾ ಸಿನಿಮಾಗಳಲ್ಲಿ ಬಾಹ್ಯಾಕಾಶದಲ್ಲಿ ಹಾರುವ ತಟ್ಟೆಗಳು ಡಿಕ್ಕಿ ಹೊಡೆಯುವಂತೆ ಬಂದರೂ ಸರಕ್ಕನೆ ಹಾರಿ ಹೋಗುವಂತೆ ಚತುರತೆಯಿಂದ ಚುರುಕಾಗಿ ಚಲಿಸುತ್ತಿದ್ದುದ ಅಚ್ಚರಿಯಿಂದ ನೋಡುತ್ತಾ ಮೈ ಮರೆತೆ.
  ಮೇಡಂ, ಜಾಮರಾಜ ನಗರಕ್ಕೆ ಹೋಗುವ ಬಸ್ಸ್ ಎಲ್ಲಿ ಬರುತ್ತೆ,? ಅಂತ ಹಿಂದಿನಿಂದ ಹೆಣ್ಣುಮಗಳು ಕೇಳಿದ್ರು. ನಿರ್ವಾಹಕರ ದೆಸೆಯಿಂದ ಒಂದೇ ಟಿಕೀಟಿನಲ್ಲಿ ಪ್ರಯಾಣಿಸಿದ್ದ ಹೆಣ್ಣುಮಗಳು. ನಾನೇ ಏನೂ ಗೊತ್ತಿಲ್ಲದೆ ಅಬ್ಬೇಪ್ಪಾರಿ ನಿಂತಂಗೆ ನಿಂತಿದ್ದೀನಿ ಈಯಮ್ಮ ನನ್ನ ಕೇಳ್ತಾರಲ್ಲ ಅಂತ ಒಳಗೊಳಗೆ ನಕ್ಕೆ!?. ತಕ್ಷಣ ನನ್ನಲ್ಲಿನ ನಾಯಕಿ ಜಾಗೃತವಾಗಿ ಬಿಟ್ಲು!. ಬಹಳ ತಿಳಿದವಳಂತೆ ಬಿನ್ನಿ ಕೇಳುವ ಎಂದು ಪಾದರಸದಂತೆ ಹೊರಟೆ.
ಅಲ್ಲಿ ಇಬ್ಬರು ನಿರ್ವಾಹಕರು ಜೋರು ಧ್ವನಿಯಲ್ಲಿ ಮಾತಾಡ್ತಿದ್ರು. ನಾನೆಂಥ ತಿಕ್ಕಲು ಅಂದ್ರೆ, ಹೋಗಿ ಅವ್ರ ಮುಂದೆ ನಿಂತು ಸರ್ ಸಂತೆ ಮರ ಹಳ್ಳಿಗೆ ಹೋಗುವ ಬಸ್ಸ್ ಯಾವ ಕಡೆ ಬರುತ್ತೆ ಅಂತ ಕೇಳ್ದೆ!?. ನನ್ನ ಹಿಂದೆ ಹಿಂಬಾಲಕಿ ಇದ್ರಲ್ಲಾ ಒಂಥರಾ ಗತ್ತು!. ಆದ್ರೂ ಒಳಗೊಳಗೆ ಅಳುಕು ಅವರಿರೋ ಸ್ಥಿತೀಲಿ ಏನಂತಾರೋ ಅಂತ. ಯಾಕೇಂದ್ರೆ ಇಬ್ಬರ ಮಾತುಕತೆಯಲ್ಲಿ ಕಾವು ಜೋರಾಗೆ ಇತ್ತು!. 
  ಅವ್ರು ಗಲಿಬಲಿಯಾದ್ರು, ಆದ್ರೂ ಇಬ್ಬರೂ ನಿಂತಿದ್ದ ಬಸ್ಸ್ ಬಳಸಿಕೊಂಡು ಬಂದು, ನೋಡಿ ಮೇಡಂ ಅಲ್ಲಿ ಆ ಕಂಬ ಇದ್ಯಲ್ಲಾ ಅಲ್ಲೇ ನಿಂತ್ಕಳಿ ಅಲ್ಲಗೇ ಬಂದು ತುಂಬಿಸ್ಕಂಡ ಹೋಯ್ತಾವೆ! ಅಂದ್ರು. ನಾವೇನ್ ಪ್ರಾಣಿಗಳಾ? ತುಂಬಿಸ್ಕಳಕ್ಕೆ ಅಂತ ಪ್ರಶ್ನೆ ಕಾಡ್ತು ಆದ್ರೆ ಆ ಸ್ಥಿತಿಯಲ್ಲೂ ಸಹಾಯ ಮಾಡಿದ ಅವರ ಸಮಯ ಪ್ರಜ್ಞೆಗೆ ವಂದಿಸಿ ನನ್ನ ಹಿಂಬಾಲಕಿಯೊಂದಿಗೆ ಕಂಬದೆದುರು ಕಂಬವಾದೆ!.
  ಐದು ನಿಮಿಷ ಆಯ್ತು ತರ್ಕ ವಿತರ್ಕ ಆರಂಭ ಆಯ್ತು. ಅಕಸ್ಮಾತ್ ಬಸ್ಸ್ ಬೇರೆ ಕಡೆ ನಿಂತು ಹಂಗೇ ಹೋಗ್ಬಿಟ್ರೆ ಅಥವಾ ಮಾತಿನ ಬಿರುಸಿನಲ್ಲಿ ಅವರು ಸರಿಯಾಗಿ ಹೇಳಿಲ್ದಿದ್ರೆ ಅಂತ ಏನೋ ಅಸ್ಥಿರ ಭಾವ ಕಾಡೋಕೆ ಆರಂಭ ಆಯ್ತು. ತಥ್ ಹಾಳಾದ್ ಅನುಮಾನವೇ ಅಂತ ತಲೆ ಕೊಡವಿ ನಿಂತೆ. ಆದ್ರೆ ಅದು ಗುಂಗಿ ಹುಳ ಕೊರ್ದಂಗೆ ಕೊರೆಯೋದು ತಡ್ಕೊಳ್ಳೊಕೆ ಆಗ್ಲಿಲ್ಲ ಸರಿ  ಒಂದೇ ಪ್ರಶ್ನೆ ಅಕ್ಕ ಪಕ್ಕದವರಿಗೆ ಕೇಳೋಕೆ ಮೊದಲು ಮಾಡಿದೆ!. ಎಲ್ಲಾ ಅದದೇ ಉತ್ತರ ಹೇಳ್ತಿದ್ರು. ನಿಧಾನ ಪ್ರಧಾನ ಎಂದು ತತ್ವ ಹೇಳುವ ನಾನು  ಐದು ನಿಮಿಷದಲ್ಲಿ ತಾಳ್ಮೆ ಕಳೆದುಕೊಂಡಿದ್ದೆ ಹುಚ್ಚು ಅನುಮಾನಗಳಿಂದಾಗಿ.
ಆಗ ನನ್ನ ಗಾಬರಿ ಗಮನಿಸಿದ ದಪ್ಪ ಮೀಸೆಯ ಆಸಾಮಿಗೆ ಇದು ಹೊಸ ಪೂಜಾರಿ ಅಂತ ಗೊತ್ತಾಗಿರ್ಬೇಕು! ಸುಮ್ಕಿರವ್ವಾ ಇಲ್ಲಿಗೇ ಬತ್ತದೆ ಕನಾ! ಅದ್ಯಾಕಾಪಾಟಿ ಕೇಳ್ತೀವ್ರಲ್ಲಾ ಅಂದ್ರು!. ಅದೇನ್ ಸಮಾಧಾನ ಮಾಡಿದ್ರೋ ಆಡ್ಕಂಡ್ರೋ ಗೊತ್ತಾಗ್ಲಿಲ್ಲ ನನ್ನ ತವಕದಲ್ಲಿ ಅದು ಸಹ್ಯವಾಗಿರಲಿಲ್ಲ!. ಆಗ್ಲೇ ಜೆಟ್ ವಿಮಾನ ರನ್ವೇನಲ್ಲಿ ನುಗ್ಗಿದಂಗೆ MPK ಬಸ್ಸು ಜರ್ರಂತ ಗಪ್ಪನೆ ನಿಲ್ತು. ಇದೇಯಾ ಬಂತು ನೋಡ್ರಿ ಓಡ್ರಿ ಅಂದ್ರು ಮೀಸೆ ಮಾಮ. ನಾನು ಒಂದು ಹೆಜ್ಜೆ ಮುಂದಿಡೋವಸ್ಟರಲ್ಲಿ ಹಿಂಬಾಲಕಿ ಬಸ್ ಬಾಗಿಲತ್ರ ನಿತ್ಕೊಂಡು ಬನ್ನಿ ಮೇಡಂ ಅಂದ್ರು. ನಾನು ಕಕ್ಕಾಬಿಕ್ಕಿ ಛೇ ಇವರಿಗಿರುವ ಚುರುಕುತನ ನಂಗಿಲ್ವಲ್ಲಾ!?. ಮತ್ತೊಮ್ಮೆ ಅರಿವಾಯ್ತು ಅನುಭವದ ಪಾಠದ ಮುಂದೆ ಪುಸ್ತಕದ ಪಾಠ ಶರಣು ಶರಣಾರ್ಥಿ ಅಂತ!.
MPK ಏರಿದ್ದಯ್ತು ಅಯ್ಯಯ್ಯೋ ಇಲ್ಲ ಇಲ್ಲ ತೂರ್ಕಂಡಿದ್ದಾಯ್ತು! ಹಿಂಬಾಲಕಿ ಕೈ ತೋರ್ಸಿದ್ರು ಆಸನದ ಕಡೆಗೆ. ಅದೊಳ್ಳೆ ಭಾರತದ ಕ್ರಿಕೆಟ್ ಕ್ಷೇತ್ರ ರಕ್ಷಕ ತಾನು ಆರಾಮ್ವಾಗಿ ನಿಂತು ಮತ್ತೊಬ್ಬರಿಗೆ ಅತ್ತ ಓಡಿ ಹಿಡಿ ಚಂಡು ಅಂದ್ಹಾಗೆ!. ನೋಡ್ದೆ ಎರಡು ಆಸನದ ಮಧ್ಯೆ ಕಡ್ಡಿ ಪೈಲ್ವಾನ್ ವಿರಾಜಮಾನರಾಗಿದ್ದಾರೆ! ಹಿಂದಿನಿಂದ ಯಾರೋ ತಳ್ಳಿದಂಗೆ ಜಬರ್ದಸ್ತು ನುಗ್ಗಿದ್ರು ಮುಗ್ಗರಿಸಿ ಗಾಬರಿಯಲ್ಲಿ ಬರ್ತಾರಾ? ಅಂತ ಮೂರ್ಖ ಪ್ರಶ್ನೆ ನಂದು ತುಂಬೋಗ್ತಿರೋ ಬಸ್ನಲ್ಲಿ!?. ಅವ ಮೇಲಿಂದ ಕೆಳಗೆ ನೋಡಿ ಸರಿದ್ರು ಕಿಟಕಿ ಕಡೆಗೆ. ಮುಜುಗರದಿಂದ ಮುದುಡಿ ಕುಳಿತೆ. ನಿಂತಿರುವ ಪ್ರಯಾಣಿಕರೆಡೆಗೆ ನನ್ನ ಕಾಲುಗಳಿತ್ತು, ಪೈಲ್ವಾನ್ ಮತ್ತು ನನ್ನ ನಡುವೆ ಅಂತರವಿತ್ತು (ಪೂರ್ವಾನುಭವಗಳು ಇತ್ತಲ್ಲಾ ಅದಕ್ಕೆ ಮುನ್ನೆಚ್ಚರಿಕೆ!) ಕಡ್ಡಿ ಪೈಲ್ವಾನ್ ಆಣತಿ ಇತ್ರು, ಕಾಲು ಸೀಟ್ ಒಳೀಕಾಕ್ಕಳಿ ಮೇಡಂ ನಿಲ್ಲೋರ್ಗೆ ಜಾಗ ಆಗ್ಲೀ...! ಅಂದ್ರು. ಅಪ್ಪಣೆ ತಂದೆ! ಅನ್ಕೊಂಡು ಕುಳಿತೆ ಅಂತರ ಮಾತ್ರ ಹಾಗೇ ಇತ್ತು!. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಹೆಂಗಸು ಎನೋ ಹೇಳಿದ್ರು...ಏನು ಅಂತ ಕೇಳೋ ಮುನ್ನ ಅವರ ದಪ್ಪ ಬ್ಯಾಗು ನಾನು ಕುಳಿತ ಆಸನದ ಕೆಳಗಿನ ಭಾಗಕ್ಕೆ ತೂರಿಕೊಂಡಿತ್ತು!?. ಅಬ್ಬಬ್ಬಾ! ನನ್ನ ಅನುಮತಿಯೇ ಬೇಡವಾಯ್ತಲ್ಲಾ? ಅಂತ ಖೇದ ನನಗೆ. ಅಕೆಯ ಮಗ ಪಕ್ಕದಲ್ಲಿ ಹೊರಬರುವ ಸಿಂಬಳ ಆಗಾಗ್ಗೆ ಜೋರಾಗಿ ಒಂದಾದ್ಮೇಲೆ ಒಂದ್ರಂಗೆ ಒಳಗೆಳೀತಿದ್ದಾನೆ!. ಕಾಲು ಕೊಕ್ಕರಿಸಿ ದೇಹ ಮುದುಡಿ ಸಿಂಬಳಕ್ಕೆದರಿದ ನನ್ನ ಆತಂಕ ಯಾರೀಗ್ಹೇಳ್ಲಿ?!. ಈಗಂತೂ ಇಳಿಯೋದು ಯಾವಾಗಪ್ಪಾ ಅನ್ನೋ ಸ್ಥಿತಿಯಾಗೋಯ್ತು!!!...
   ವಿಚಿತ್ರ ಆತಂಕದಲ್ಲಿ ಸಂತೇ ಮರ ಹಳ್ಳಿಯಲ್ಲಿ ಮಹೇಂದ್ರನ ಮನೆ ತಲುಪುವಷ್ಟರಲ್ಲಿ ಹತ್ತು ಜನ್ಮಕ್ಕಾಗುವಷ್ಟು ಅನುಭವವಾಗಿತ್ತು!?. ಅವ ನನ್ ಮುಖ ನೋಡಿ ನಗ್ತ ಹೇಳ್ದಾ ಎಂಗೆ ಮೇಡಂ ನಮ್ಮೂರು...? ಇದೇ ಸ್ವರ್ಗ ನಮಗೀಗ ಗೊತ್ತಾ!? ಅಂತ ಗೇಲಿ ಬೇರೆ ಮಾಡ್ದ!. ಅಯ್ಯೋ! ಸುಮ್ನಿರು ಮಾರಾಯ! ಈಗ ಪುನಃ ಹೇಗೆ ? ಅನ್ನೋ ಚಿಂತೆ?! ಭಯಾನಕವಾಗಿ ಕಾಡ್ತಿದೆ ಅಂದೆ. ಏನೂ ಯೋಚನೆ ಮಾಡ್ಬೇಡಿ ಇಲ್ಲಿಂದ ನೇರ ಟಿ ಎನ್ ಪುರಕ್ಕೆ ನನ್ನ ರಥದಲ್ಲಿ ಕರೆದೊಯ್ತೀನಿ. ಆಗ ಒಂದು ಪ್ರಾಯಾಸದ ಪ್ರಯಾಣ ತಪ್ಪುತ್ತೆ ಅಂದ. ಸಧ್ಯ ಹೋದ ಜೀವ ಬಂದಂತಾಯ್ತು. ಅವರ ಮನೆಗೆ ಹೋಗಿ ಎಲ್ಲರನ್ನೂ ಮಾತಾಡಿಸಿ, ತುಸು ಹೊತ್ತಿದ್ದು, ಅವನ ಕಾಲೇಜಿನವರ ಪ್ರೀತಿ ವಿಶ್ವಾಸ ಅನುಭವಿಸಿ, ದ್ವಿಚಕ್ರ ವಾಹನ ಏರಿ ಹೊರಟ್ವಿ. ದೂರ ಆದ್ರೂ ಪರವಾಗಿಲ್ಲ ಹೀಗೇ ಹೋಗ್ಬಿಬಹುದಿತ್ತು ಅನ್ನಿಸಿದ್ದಂತೂ ಅಕ್ಷರಷಃ ಸತ್ಯ!!!
  ಟಿ ನರಸೀಪುರದ ಖಾನಾವಳಿಯಲ್ಲಿ ಪಟ್ಟಾಗಿ ಮಗ ಊಟ ಮಾಡಿಸಿದ. ನಂತರ ಪುನಃ  ಓಡಿ ಹೋಗುವಂತೆ ಜೀಕುತ್ತಿದ್ದ ಸಾವ್ಕಾರಿ ಬಸ್ಸಿನೋಳಗೆ ತೂರಿದೆ. ಅಭ್ಯಾಸವಾಗಿತ್ತು!?. ನಿರ್ವಾಹಕರು ಎಲ್ಲಿ ಒಬ್ಬ ಗ್ರಾಹಕರು ಇಳಿದು ಬಿಡುವರೋ ಎಂಬಂತೆ ಆಸನದಲ್ಲಿ ಕುಳಿತ ಕಾಲೇಜು ತರುಣಿಯನ್ನು ಮುಂದೆ ಆಸನ ಹಂಚಿಕೊಂಡು ಕೂರುವಂತೆ ಹೇಳಿ ನಂಗೆ ಒಂದು ಪೂರ್ಣ ಆಸನ ಮಂಜೂರು ಮಾಡಿದ್ರು. ಅಧಿಕಾರಿಗಳು ಉಳ್ಳವರಿಗೆ ಕರೆದು ಮಣೆ ಹಾಕುವ ಹಾಗೆ!?.
  ಮತ್ತೊಂದು ಪ್ರಯಾಣ ವಾಪಸ್ ಮಂಡ್ಯಾಕ್ಕೆ! ಖುಷಿ ನನಗೆ ನನ್ನೂರಿಗೆ ಬರ್ತಿದ್ದೀನಲ್ಲ ಅಂತ. ತವರಿಗೆ ಓಡಿ ಬರುವ ಮಗಳಂತಾಗಿದ್ದೆ!. ಕಿಟಕಿ ಪಕ್ಕ ಕುಳಿತಿದ್ದೆ. ಸಂಜೆ ನಾಲ್ಕರಲ್ಲೂ ಸೂರ್ಯನಿಗೆ ಏರು ಯವ್ವನ! ಆಹಹಾ! ಮುಖ ಮೈ ಉರೀತಿತ್ತು. ಪಕ್ಕದಲ್ಲಿದ್ದವರು ಇಳಿದ್ರು. ನಂತರ ಕಣ್ಣು ಅರೆಬರೆ ಬಿಡುತ್ತಿದ್ದ ಹಳ್ಳಿಗ ಕೊಂಚ ದಪ್ಪಗಿದ್ರು. ಹಾಸುಗೆ ಮೇಲೆ ಹಾಸುಗೆ ಹಾಸುವಂತೆ ಕುಳಿತ್ರು!. ತಕ್ಷಣ ನಾನು ಮುದುರಿ ಕುಳಿತೆ. ನನ್ನ ಮನ ಓದಿದವರಂತೆ ಅವರೂ ಕೂಡ ದೂರ ಸರಿದು ಕುಳಿತ್ರು, ನೆಮ್ಮದಿ ಆಯ್ತು!. ಆ ಕ್ಷಣ ಮತ್ತೊಂದು ತಂಗುದಾಣ ಬಂತು. ಒಂದು ಅಜ್ಜಿ ಮೊಮ್ಮಗಳ ಜೊತೆ ನಿಧಾನಕ್ಕೆ ಮುಂದೋಗುತ್ತಿದ್ದ ಬಸ್ಸಿಗೆ ಹತ್ತಿದ್ರು. ಎರಡು ಹಂತ ಹತ್ತಿದರೋ ಇಲ್ಲವೋ ಅಯ್ಯೋ ಕಾಸು ತಂದಿಲ್ಲ ಕನ್ರಣ್ಣ ! ಮಗಾ ಬಂದ್ಬುಡು ಬಿರ್ನೆ ಅಂತ ಮೊಮ್ಮೊಗಳನ್ನ ಕೂಗ್ತಾನೆ ಹಿಂದಕ್ಕೆ ಹೆಜ್ಜೆ ಇಟ್ಟೇ ಬಿಡ್ತು ಬೀಳ್ತೀನಿ ಅನ್ನೋ ಭಯಾನೂ ಇಲ್ಲಂದಂಗೆ.ಹಿಂದ್ಹಿಂದಕ್ಕೆ ರಪ್ಪನೆ ಬಿದ್ಹೋಯ್ತು! ನಾವೆಲ್ಲಾ ಅಯ್ಯೋ ಅಂತ ಚೀರಿದ್ವಿ ಚಾಲಕನ ಸಮಯ ಪ್ರಜ್ಞೆ ಕೊಂಡಾಡ್ಬೇಕು ತಕ್ಷಣ ಗಪ್ಪ ಅಂತ ಬಸ್ ನಿಲ್ಸದ. ಆ ಅಜ್ಜಿ ಪುಟಿದೆದ್ದ ಚಂಡಿನಂಗೆ ಚಂಗನೆದ್ದು ಹೊರ್ಟೇ ಹೋಯ್ತು!. ನಾನಿನ್ನೂ ಆ ಭಯದಿಂದ ಹೊರ್ಗೆ ಬಂದಿರ್ಲಿಲ್ಲ ನಡುಗ್ತಿದ್ದೆ. ಎಷ್ಟು ಗಟ್ಟಿಗಿದ್ದಾರೆ ಹಳ್ಳಿಗರು ಈರ್ಷೆ ಆಯ್ತು. ನಂಗೇನಾದ್ರು ಆ ಅಜ್ಜಿಗೆ ಆದಂಗೆ ಆಗಿದಿದ್ರೆ ನಾಲ್ಕು ಜನ ಹೊತ್ಕೊಂಡು ಹೋಗ್ಬೇಕಿತ್ತೋನೋ ಅಂತ ಅನಿಸಿ ನಕ್ಕೆ!?.
ಅವರುಗಳ ಮುಗ್ಧತೆ, ದೈರ್ಯ, ಸಮಯಸ್ಪೂರ್ತಿ , ಹುಂಬತನ ತುಂಬಾ ಖಷಿಯಾಯ್ತು. ಮುಂದೆ ಒಬ್ಬ ಹೆಣ್ಣು ಮಗಳು ಹತ್ಕೊಂಡ್ಳು.  ಗರ್ಭವತಿ ಇರ್ಬೇಕು ಅನ್ನಿಸಿ ಆಸನ ಬಿಟ್ಟುಕೊಡುವ ಅನ್ನಿಸ್ತು. ಆದ್ರೆ ಕಿಟಕಿಯ ಪಕ್ಕ ಇದ್ದ ನಾನು ಎದ್ದು ಇನ್ನೂ ಇಬ್ಬರನ್ನ ಏಳಿಸಿ ಸೀಟುಕೊಡಬೇಕು ಅನ್ನುವ ಯೋಚನೆಗೆ ಬಿದ್ದೆ. ಆಮೇಲೆ ಇವರಿಗೆ ಹೇಳುವ  ಅಂತ ತಿರುಗಿದೆ ಅಷ್ಟರಲ್ಲಿ ಕಾಲೇಜು ಹುಡುಗ ಆಸನ ಬಿಟ್ಟುಕೊಟ್ಟ ನಂಗೆ ಯಾರೋ ಎನತ್ರಲ್ಲೋ ಹೊಡೆದಂಗ್ಹಾಯ್ತು?.
  ಹೀಗೆ ವಿವಿಧ ಅನುಭವಗಳನ್ನ ತುಂಬಿಸ್ಕೊಡ್ತಾ ಖಾಸಗೀ ಬಸ್ಸು ಅಲ್ಲಲ್ಲಿ ನಿಂತರೂ ಸುಂಟರ ಗಾಳಿಯಂತೆ ಮುನ್ನುಗ್ಗುತ್ತಾ ಮಂಡ್ಯಾ ತಲುಪಿಯೇ ಬಿಟ್ಟಿತು!.ನಿಲ್ದಾಣಕ್ಕೆ ಮೊದಲೇ ಗಣಪತಿ ಉತ್ಸವದಿಂದಾಗಿ ಬಸ್ಸು ಮಂದಗತಿಯಲ್ಲಿ ಚಲಿಸ ಹತ್ತಿತು. ಸರಿ ಮನೆಗೆ ಹತ್ತಿರದಲ್ಲೇ ಇಳಿದು ಬಿಡುವೆ ಎಂದು ನಿರ್ವಾಹಕರಿಗೆ ತಿಳಿಸಿ ಇಳಿಯಲು  ಬಸ್ಸಿನ ಎರಡನೇ ಮೆಟ್ಟಲಿಗಿಳಿದು ಕಾಲು ಇನ್ನೇನು ಕೆಳಗಿಡಬೇಕು ಅಷ್ಟರಲ್ಲೇ ಉತ್ಸವದಲ್ಲಿ ಹುಚ್ಬಂದಂಗೆ ಕುಣೀತಿದ್ದ ಪಡ್ಡೆ ಹುಡುಗ ಯಾಕ್ ಮೇಡಂ ಕೈ ಕಾಲು ನೆಟ್ಗಿರಾದು ಬ್ಯಾಡ್ವಾ? ಇಳಿಬ್ಯಾಡಿ ಸುಮ್ಕಿರಿ ಅಂತ ಗದರ್ದಂಗೆ ವದರ್ದಾ! . ಬೆಪ್ಪಾದೆ. ಅಜ್ಜಿ ನೆನಪಾದ್ಲು! ಕಲ್ಲಾದೆ!?. ಇಪ್ಪನಾಲ್ಕು ವರ್ಷ ಊದಿದ್ದೆಲ್ಲಾ ನನ್ನ ಅಣಕಿಸ್ದಂಗಾಯ್ತು!?. ನಂಗೇ ಗೊತ್ತಿಲ್ದಂಗೆ ಎರ್ಡ ಕಂಬಾನು ಹಿಡಿದು ಕಂಬಕ್ಕಿಂತ ಗಟ್ಟಿಯಾಗಿ ನಿಂತ್ಕೊಂಡೆ!.
  ಮೇಡಂ ಇದ್ಯಾಕೆ ಇಳೀರಿ ಅಂತ ಹಿಂದಿನವರು ಕೂಗಿದಾಗ್ಲೇ ಗೊತ್ತಾಗಿದ್ದು  ಬಸ್ಸು ನಿಲ್ದಾಣ ತಲುಪಿದೆ ಅಂತ. ಅಬ್ಬಬ್ಬಾ! ಟಿ... ನರಸೀಪುರವೇ ಅಂದ್ಕೊಳ್ತಾ ಅದೇನನ್ನಿಸ್ತೋ ಚಂಗನೆ ನೆಗ್ದೆ!.  ಬಸ್ಸಿಗೊಂದು ಸಲಾಮು ಹೊಡೆಯೋವಷ್ಟರಲ್ಲಿ ನನ್ನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ದಂಡು ಓ ಮೇಡಂ ಏನಿಲ್ಲಿ? ಅಂತ ಸುತ್ಕೊಂಡ್ವು . ಸಂಕೋಚ  ಮುಜುಗರ ಎರಡೂ ಒಟ್ಟೋಟ್ಟಿಗೆ ಆಯ್ತು. ನನ್ನ ಶೈಕ್ಷಣಿಕ ಕೂಸುಗಳನ್ನ ಕಂಡಾಕ್ಷಣ ಆಯಾಸ ಎಲ್ಲಾ ಮರ್ತಹೋಯ್ತು! . ಸದಾ ಗರಿಗರಿ ಸುಕ್ಕುಬಾರದ ಹತ್ತಿ ಸೀರೆಯಲ್ಲಿ ಶಿಸ್ತಾಗಿರುವ ನಾನಿಂದು ಕೆದರಿದ ಕೂದಲು, ಮುದುಡಿದ ಸೀರೆಯಲ್ಲಿ ಕಂಗಾಲಾದ ಮುಖ ಭಾವದಲ್ಲಿದ್ದದ್ದಕ್ಕೆ ಒಂಥರಾ ಮುಜುಗರ ಕಾಡ್ತು. ಆದರೆ ಮಕ್ಕಳಿಗೆ ಅದಾವುದರ ಪರಿವೆಯೇ ಇಲ್ಲ. ಅವರುಗಳ ಪ್ರೀತಿಯ ಮಾತಿನಿಂದ ಮುಜುಗರ ಹೆಚ್ಚು ಹೊತ್ತು ಉಳಿಯಲಿಲ್ಲ. ಸುಮ್ನೆ ನಾವೇ ವಿಪರೀತ ಕಲ್ಪನೆ ಮಾಡ್ಕೋತಿವೇನೋ ಅನ್ನಿಸಿ ನಕ್ಕೆ. ಬರ್ತೇವೆ ಮೇಡಂ ಅಂತ ಕೈ ಬೀಸಿ ಬಸ್ಸಿನೊಳಗೆ ತೂರಿಕೊಳ್ಳುತ್ತಿದ್ದ ಆ ಹೆಣ್ಣು ಕೂಸುಗಳನ್ನ ನೋಡಿ ಚಿಂತಿತಳಾದೆ. ಒಂದು ದಿನಕ್ಕೇ ಇಂತಹ ಪ್ರಯಾಣದಿಂದ ನಂಗೀಗತಿ ಇನ್ನು ಈ ಮಕ್ಕಳ ಗತಿಯೇನು ಅಂತ ಪ್ರಶ್ನೆ ಮನಸ್ಸಿಗೆ ಬಂತು. ಥಾರ್ನ ಡೈಕ್ ನ ಅಭ್ಯಾಸ ನಿಯಮ ನೆನಪಾಯ್ತು! ಹಾಗೆಯೇ ಜೀವನದ ಅನಿವಾರ್ಯತೆ ಕಲಿಸುವ  ಪಾಠವೂ ನೆನಪಾಯ್ತು, ನನ್ನ ಪೆದ್ದುತನದ ಪ್ರಶ್ನೆಗೆ ನಕ್ಕು ಚಿಂತೆಗಳನ್ನು ಕೊಡವಿ ಲಗುಬಗನೆ ಮನೆ ಕಡೆ ಹೆಜ್ಜೆ ಹಾಕತೊಡಗಿದೆ....

- ಡಾ. ಸುವರ್ಣ    

ಪುಟ್ಕಥೆಗಳು - 3

   1. ವೃದ್ಧಾಶ್ರಮಕ್ಕೆ ತಾತನನ್ನು ಬಿಟ್ಟು ಬಂದ ಅಪ್ಪನನ್ನು ಅವನ ಪುಟ್ಟ ಮಗ ಕೇಳಿದ "ಅಪ್ಪ, ನಾನು ದೊಡ್ಡವನಾಗುವುದು ಯಾವಾಗ?"

   2. ಆಗ ತಾನೆ ಜನಿಸಿದ ಹೆಣ್ಣುಮಗುವನ್ನು ಕಂಡು ಮುಖ ತಿರುಗಿಸಿದ ಅಪ್ಪನನ್ನು ಕಂಡ ಮಗು, "ನಾನು ಮಾಡದ ತಪ್ಪಿಗೆ ನನಗೆ ಶಿಕ್ಷೆಯೆ?" ಎಂಬಂತೆ ಅಮ್ಮನೆಡೆಗೆ ನೋಡಿತು!!

 3.ಜೀವನದ ಬೇಕುಬೇಡ, ಆಗುಹೋಗುಗಳ  ಬಗ್ಗೆ ತಿಳಿಸುತಿದ್ದವಳಿಗೆ ನಗುತ್ತಾ ಹೇಳಿದಳು ಗೆಳತಿ "ನೀನೊಬ್ಬಳು ನನ್ನ ಜೊತೆಗಿದ್ದರೆ ಸಾಕು!"

 4.ದೇವರಿಗೆಂದು ಬಗೆಬಗೆಯ ತಿನಿಸುಗಳನ್ನು ಮಾಡುತಿದ್ದ ಅಜ್ಜಿಯನ್ನು, ಅಲ್ಲಿಯೆ ಇದ್ದ ಮೊಮ್ಮಗು ಕೇಳಿತು "ಮಕ್ಕಳೆ ದೇವರಲ್ಲವೆ ಅಜ್ಜಿ?!"

 5.ವರದಕ್ಷಿಣೆಯಾಗಿ ತವರಿನಿಂದ ಚಿನ್ನವನ್ನು ತೆಗೆದುಕೊಂಡು ಬರಲು ಹಿಂಸಿಸುತ್ತಿದ್ದ ಗಂಡನ ವರ್ತನೆಯಿಂದ ಬೇಸರಗೊಂಡು ಯೋಚಿಸುತ್ತಿದ್ದವಳಿಗೆ, ಮದುವೆಯ ಮುಂಚಿನ ಅವನ ಮಾತುಗಳಾದ "ನೀನೆ ಚಿನ್ನ,ರನ್ನ" ಎಂಬುದರ ಅರ್ಥ ಆಗ ತಿಳಿಯಿತು

 6. ಪುಣ್ಯಾರ್ಜನೆಗಾಗಿ ತೀರ್ಥಕ್ಷೇತ್ರಗಳಿಗೆ ಹೊರಟ ಮಗ, ಮನೆಯಲ್ಲಿ ಅನಾರೋಗ್ಯಪೀಡಿತ ತಂದೆತಾಯಿಗಳಿಬ್ಬರನ್ನೆ ಬಿಟ್ಟು!!

    7. ಸ್ನೇಹಿತೆಯರೊಂದಿಗೆ 'ಮಹಿಳಾ ಸ್ವಾತಂತ್ರ್ಯದ' ಬಗ್ಗೆ  ಮಾತನಾಡುತ್ತಿದ್ದ ಅತ್ತೆಯನ್ನು "ಎಲ್ಲರಿಗೂ ಕಾಫಿ ಮಾಡಿಕೊಡಲೇ  ಅತ್ತೆ" ಎಂದು ಕೇಳಿದಳು ಸೊಸೆ!!


8. ನನಗೇನು ಆಸ್ತಿ ಮಾಡಿರುವೆ? ಎಂದು ಸಿಟ್ಟಿನಿಂದ ಕೇಳಿದ ಮಗನಿಗೆ ಅಪ್ಪ ಕೇಳಿದ "ಯಾರೂ ಕದಿಯಲಾಗದ ಆಸ್ತಿಯಾದ ವಿದ್ಯೆಯನ್ನೇ ಕೊಟ್ಟಿರುವಾಗ, ಬೇರೆ ಆಸ್ತಿ ಏಕೆ?!!!"

9. "
ನನ್ನನ್ನು ನಂಬು ನಾನು ಏನೂ ತಪ್ಪು  ಮಾಡಿಲ್ಲ" ಎಂದು ಎಷ್ಟು ಹೇಳಿದರೂ ಕೇಳಲಿಲ್ಲ ಅವಳನ್ನು ಮದುವೆಯಾಗಬೇಕಿದ್ದ ಹುಡುಗ
  "ನಂಬಿಕೆಯೇ ಇಲ್ಲ ಎಂದ ಮೇಲೆ ಮದುವೆ ಏಕೆ?" ಅವನನ್ನು ಬಿಟ್ಟು ಹೊರಟಳವಳು!!


10. ಅಂತರ್ಜಾತೀಯ ವಿವಾಹವನ್ನು ಮಾಡಿಕೊಂಡು ಬಂದ ಮಗನನ್ನು ಮನೆಯೊಳಗೆ ಸೇರಿಸಬೇಕೇ ಅಥವಾ ಬೇಡವೇ ಎಂದು ಯೋಚಿಸುತ್ತಿದ್ದ "ಬಸವ ತತ್ವಗಳ ಕಟ್ಟಾಭಿಮಾನಿ!"



- ವಿಜಯಲಕ್ಷ್ಮಿ ಎಂ. ಎಸ್


ವ್ಯಕ್ತಿ ಪರಿಚಯ - ರಾಬರ್ಟ್ ಓವೆನ್



"ಇಂಗ್ಲಿಷ್ ಸಮಾಜವಾದದ ಪಿತಾಮಹ" ಮತ್ತು "ಸಹಕಾರ ಚಳುವಳಿಯ ಪ್ರವರ್ತಕ"ರೆನಿಸಿಕೊಂಡ, ಔದ್ಯೋಗಿಕ ಕ್ರಾಂತಿಯ ಸಮಯದಲ್ಲಿ ಶ್ರಮಿಕವರ್ಗದವರ ಆಶಾಕಿರಣವಾಗಿ ಬಂದ ರಾಬರ್ಟ್ ಓವೆನ್ ವೇಲ್ಸ್ ನ್ಯೂಟೌನ್ ಎಂಬ ಹಳ್ಳಿಯಲ್ಲಿ 1771 ಮೇ 14 ರಂದು ಜನಿಸಿದರು. ತಂದೆ ಕುದುರೆಯ ಜೀನಿನ ಮತ್ತು ಕಬ್ಬಿಣದ ಉಪಕರಣಗಳ ತಯಾರಕನಾಗಿದ್ದರು. ಮಗನ ವಿದ್ಯೆಯಲ್ಲಿನ ಆಸಕ್ತಿಯನ್ನು ಕಂಡು ಶಾಲೆಗೆ ಸೇರಿಸಿದರು. ಮೂರು ವರ್ಷ ಓದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದನು. ಮುಂದೆ ಓದಲು ಅವಕಾಶವಿರಲಿಲ್ಲ. ಆದರೆ ಆತನ ಗ್ರಹಣ ಶಕ್ತಿಯನ್ನು ನೋಡಿದ ಉಪಾಧ್ಯಾಯರು ಅವನನ್ನು ಸಹಾಯಕ ಉಪಾಧ್ಯಾಯನಾಗಿ ಕೆಲಸ ಮಾಡುವಂತೆ ಹೇಳಿದರು. ಓವೆನ್ ತನ್ನ ಬಾಲ್ಯದಲ್ಲೇ ಉಪಾಧ್ಯಾಯನಾಗಿ ಎರಡು ವರ್ಷ ಕೆಲಸ ಮಾಡಿದನು. ಆ ಸಮಯದಲ್ಲಿ ಅನೇಕ ಗ್ರಂಥಗಳನ್ನು ಓದಿ ಜ್ಞಾನವನ್ನು ವೃದ್ಧಿಪಡಿಸಿಕೊಂಡನು. ನಂತರ ತಂದೆ ತಾಯಿಗೆ ನೆರವಾಗಲು ಓವೆನ್ ಕೆಲಸಕ್ಕೆ ಸೇರಿದನು.

ಆದರೆ ಇನ್ನೂ ಹೆಚ್ಚಿನ ವಿಷಯಗಳ ಅರಿವಿಗಾಗಿ ಪುಟ್ಟ ಹಳ್ಳಿಯನ್ನು ಬಿಟ್ಟು ಅಣ್ಣನಿದ್ದ ವಿಶಾಲವಾದ ಲಂಡನ್ ಗೆ ಹೋಗಿ ಜವಳಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದರು. ಅಲ್ಲೂ ಸಹ ವಿರಾಮದ ಸಮಯದಲ್ಲಿ ಮಾಲೀಕನಿಂದ ಗ್ರಂಥಗಳನ್ನು ತೆಗೆದುಕೊಂಡು ಓದುತ್ತಿದ್ದನು. ಆದರೆ ಇಲ್ಲಿಂದಲೂ ಹೆಚ್ಚಿನ ಅವಕಾಶಕ್ಕಾಗಿ ದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ಮ್ಯಾಂಚೆಸ್ಟರ್ ನಗರಕ್ಕೆ ಬಂದರು. ಇಲ್ಲಿ  ಜೋನ್ಸ್ ಎಂಬುವವನ ಪರಿಚಯವಾಯಿತು. ಸ್ವತಂತ್ರ ಜೀವನದ ಕನಸು ಕಾಣುತ್ತಿದ್ದ ಓವೆನ್ ಇವನೊಂದಿಗೆ ಪಾಲಿದಾರನಾಗಿ ಪುಟ್ಟ ಕಾರ್ಖಾನೆಯೊಂದನ್ನು ಪ್ರಾರಂಭಿಸಿ ಔದ್ಯೋಗಿಕ ರಂಗಕ್ಕೆ ಕಾಲಿರಿಸಿದರು. ಆದರೆ ಜೋನ್ಸ್ ನ ದುರಾಸೆಯಿಂದ ಪಾಲುದಾರಿಕೆಯನ್ನು ಬಿಟ್ಟು ತಮ್ಮದೇ ಆದ ಪುಟ್ಟ ಕಾರ್ಖಾನೆಯನ್ನು ಸ್ಥಾಪಿಸಿದರು.

ಫ್ರಾನ್ಸ್ ಕ್ರಾಂತಿಯ ಸಮಯವಾದ್ದರಿಂದ ವ್ಯಾಪಾರಿಗಳು ವಿದೇಶದಲ್ಲಿ  ತಮ್ಮ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಿ ತಮ್ಮ ದೇಶದಲ್ಲೇ ಪ್ರಾರಂಭಿಸಲಾರಂಬಿಸಿದರು. ಈ ಸಮಯದಲ್ಲಿ ಓವೆನ್ ಆಧುನಿಕ ಕಾರ್ಖಾನೆಯೊಂದರ ಮ್ಯಾನೇಜರ್ ಆದರು. ಅಲ್ಲಿ  ಹಲವು ಸುಧಾರಣಿಯೊಂದಿಗೆ ಉತ್ತಮ ನೂಲನ್ನು ತಯಾರಿಸಿದನು. ಇದು ಅಪಾರ ಬೇಡಿಕೆಯೊಂದಿಗೆ ಹೆಚ್ಚಿನ ಲಾಭವನ್ನು ಗಳಿಸಿತು. ಇದರಿಂದ ಸಂತಸಗೊಂಡ ಮಾಲೀಕ ಆ ನೂಲಿಗೆ ಓವೆನ್ ಹೆಸರಿನ ಮುದ್ರೆಯನ್ನು ಹಾಕಲು ಪ್ರಾರಂಭಿಸಿದನು. ನಂತರ ಓವೆನ್ ಚಾರ್ಲ್ಸ್‌ಟನ್ ಟ್ವಿಸ್ಟ್ ಕಂಪನಿ ಪಾಲುದಾರರಾಗಿ ಕೆಲಸ ಪ್ರಾರಂಭಿಸಿದರು. ಈ ಕಂಪನಿಯಿಂದ ಓವೆನ್ ಅದೃಷ್ಟ ಬದಲಾಯಿತು. ಇಲ್ಲಿಯೂ ಸಹ ಮತ್ತೊಂದು ಹೊಸ ನೂಲನ್ನು ಉತ್ಪಾದಿಸಿ ಅಧಿಕ ಲಾಭವನ್ನು ಪಡೆದರು. ತಮ್ಮ ಸಾಮಾಜಿಕ ಸ್ಥಾನಮಾನದ ಬಗ್ಗೆ ಓವೆನ್ ಯಾವತ್ತೂ ಯೋಚಿಸಿರಲಿಲ್ಲ. ಗ್ರಾಮೀಣ ಪ್ರದೇಶದಿಂದ ಬಂದಿದ್ದ ಅವರು ಯಾವಾಗಲೂ ದುಡಿಯುವ ವರ್ಗದವರೊಂದಿಗೆ ಓಡಾಡುತ್ತಿದ್ದರು. ಕ್ರಮೇಣ ಮ್ಯಾಂಚೆಸ್ಟರ್ ನಗರದ " ಲಿಟರರಿ ಅಂಡ್ ಫಿಲಾಸಫಿಕ್ ಸೊಸೈಟಿ" ಯ ಸದಸ್ಯನಾದರು. ಅಲ್ಲಿ ಅನೇಕ ಗಣ್ಯರ ಪರಿಚಯವಾಯಿತು. 
ಚಾರ್ಲ್ಟನ್ ಕಂಪನಿ ಬೆಳೆದಂತೆ ತನ್ನ ವ್ಯಾಪಾರ ಕೇಂದ್ರವನ್ನು ಹೊರಗಡೆಗೂ ವಿಸ್ತರಿಸಲು ಆಲೋಚಿಸುತ್ತಿತ್ತು. ಇದಕ್ಕಾಗಿ ಓವೆನ್  ಗ್ಲಾಸ್ಗೋ ನಗರದ ನ್ಯೂ ಲಾನಾರ್ಕ್ ಹಳ್ಳಿಯಲ್ಲಿನ ಗಿರಣಿಯೊಂದನ್ನು ನೋಡಿದರು. ಚಾರ್ಲ್ಸ್‌ಟನ್ ಕಂಪನಿ ಆ ಗಿರಣಿಯನ್ನು ಕೊಂಡು ನ್ಯೂ ಲಾನಾರ್ಕ್ ಟ್ವಿಸ್ಟ್ ಎಂಬ ಹೆಸರಿನಿಂದ ತನ್ನ ಕೆಲಸವನ್ನು ಆರಂಭಿಸಿತು. ಓವೆನ್ ನ್ನು ರೆಸಿಡೆಂಟ್ ಮ್ಯಾನೇಜರ್ ಆಗಿ ನೇಮಕ ಮಾಡಲಾಯಿತು. ನಂತರ ಓವೆನ್ ಟೇಲ್ ಎಂಬುವವರನ್ನು  ವಿವಾಹವಾದರು.
ಓವೆನ್  ಗಿರಣಿಯಲ್ಲಿ ದುಡಿಯುವ ಶ್ರಮಿಕರ ಸ್ಥಿತಿಯನ್ನು ಆಮೂಲಾಗ್ರವಾಗಿ ಪರಿಶೀಲಿಸಿ  ಹಲವು ಸುಧಾರಣೆಗಳನ್ನು ತರುವುದರ ಮೂಲಕ ಶ್ರಮಿಕರ ಸಾಮಾಜಿಕ ಸ್ಥಿತಿಯನ್ನು ಉತ್ತಮಗೊಳಿಸಿ, ಉತ್ಪಾದನೆಯನ್ನು ಹೆಚ್ಚಿಸಲು ಆಲೋಚಿಸಿದರು. ಮಾಲೀಕರು ಯಂತ್ರಗಳ ಯೋಗಕ್ಷೇಮವನ್ನಷ್ಟೇ ನೋಡುತ್ತಿದ್ದರೆ ವಿನಃ ಜೀವಂತ ಯಂತ್ರಗಳ ಅಂದರೆ ಶ್ರಮಿಕರನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಈ ನಿಟ್ಟಿನಲ್ಲಿ  ಓವೆನ್ ಮೊದಲು ಎಲ್ಲೆಲ್ಲೂ ಸ್ವಚ್ಛತೆ ಮತ್ತು ಸುವ್ಯವಸ್ಥೆಯನ್ನು ಜಾರಿಗೆ ತಂದರು. ನ್ಯಾಯಬೆಲೆ ಅಂಗಡಿಯನ್ನು ಪ್ರಾರಂಭಿಸಿ ಶ್ರಮಿಕರ ಹಣ ಉಳಿತಾಯವಾಗುವಂತೆ ಮಾಡಿದರು. ಅವರ ದುಡಿಮೆಯ ಅವಧಿಯನ್ನು 14 ಘಂಟೆಯಿಂದ 10 ಘಂಟೆಗೆ ಇಳಿಸುವಂತೆ ಮಾಡಿದರು. ಮದ್ಯದಂಗಡಿಯನ್ನು ಮುಚ್ಚಿ  ಆಟದ ಮೈದಾನವನ್ನು ನಿರ್ಮಸಿದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸಿದರು. ಈ ಎಲ್ಲಾ ಸುಧಾರಣೆಗಳಿಂದ ಕಂಪನಿಯ ಉತ್ಪಾದನೆ ಹೆಚ್ಚಾಗಿ ಅಧಿಕ ಲಾಭ ಬಂದಿತು. ಕೆರೆಯ ನೀರನ್ನು ಕೆರೆಗೆ ಚೆಲ್ಲುವಂತೆ ಲಾಭದ ಹಣವನ್ನು ಶ್ರಮಿಕರ ಹಿತಕ್ಕಾಗಿಯೇ  ಬಳಸಿದರು. ಓವೆನ್ ಶ್ರಮಿಕರ  ಸಂಬಳವನ್ನು ಹೆಚ್ಚಿಸಿದರು, ಮಕ್ಕಳಿಗಾಗಿ ಶಾಲೆಗಳನ್ನು ತೆರೆದರು.  ವಯಸ್ಕರಿಗಾಗಿ ರಾತ್ರಿ ಶಾಲೆಗಳನ್ನು, ಆಸ್ಪತ್ರೆಗಳನ್ನು ತೆರೆದರು.
ಈ ರೀತಿ ಓವೆನ್ ಎಲ್ಲವನ್ನೂ ಸುಧಾರಿಸುತ್ತಿರುವಾಗಲೇ 1806 ರಲ್ಲಿ ಅಮೆರಿಕ ಮತ್ತು ಬ್ರಿಟನ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅಮೆರಿಕದ ಹತ್ತಿಗೆ ಬ್ರಿಟನ್ ಆಮದಾಗದಂತೆ ಪ್ರತಿಬಂಧ ಹೇರಿತು. ಇದರಿಂದ ಹತ್ತಿಯ ಬೆಲೆ ದಿಢೀರನೆ ಹೆಚ್ಚಿತು. ಆದರೆ ಓವೆನ್ ತನಗೆ ಕಷ್ಟವಾದರೂ, ಗಿರಣಿಯಲ್ಲಿ ಕೆಲಸವನ್ನು  ನಿಲ್ಲಿಸಿದ್ದರೂ, ಶ್ರಮಿಕರಿಗೆ ಸಂಬಳವನ್ನು  ಕೊಟ್ಟರು. ಇದರಿಂದ ಶ್ರಮಿಕರ ಒಲವು ಓವನ್ ಗೆ ದೊರೆಯಿತು.
ಓವೆನ್ ತನ್ನ ಗಿರಣಿಯೊಂದರ ಶ್ರಮಿಕರ ಸ್ಥಿತಿ  ಸುಧಾರಿಸಿದರೆ ಸಾಲದು, ಇಡೀ ವಿಶ್ವದ ಶ್ರಮಿಕರ ಸ್ಥಿತಿ ಸುಧಾರಿಸಬೇಕು ಎಂಬ ಆಶಯವನ್ನು ಹೊಂದಿದ್ದರು. "ಮಾನವನ ಗುಣಕ್ಕೆ ಹುಟ್ಟು ಕಾರಣವಲ್ಲ, ಅವನ ಬೆಳೆಯುವ, ಜೀವನ ನಡೆಸುವ ವಾತಾವರಣ ಕಾರಣ ಒಳ್ಳೆಯ ವಾತಾವರಣ ಸೃಷ್ಟಿಸುವುದರ ಮೂಲಕ ಇಡೀ ಮಾನವಕುಲವನ್ನು ಉತ್ತಮಗೊಳಿಸಬಹುದು. ಉತ್ತಮ ಜೀವನಕ್ರಮಕ್ಕೆ ಶಿಕ್ಷಣ ಮುಖ್ಯ" ಎಂದು ತಿಳಿದ ಓವೆನ್ ನವೀನ ಮಾದರಿಯ ಶಿಶುವಿಹಾರಗಳನ್ನು ಪ್ರಾರಂಭಿಸಲು ಆಲೋಚಿಸಿದರು. "ಮಕ್ಕಳ ಭಾವನೆ ಮತ್ತು ಅವರಲ್ಲಿರುವ ಪ್ರತಿಭೆಗಳನ್ನು ಕುರಿತು ಅವರಿಗೆ ಶಿಕ್ಷಣ ನೀಡಬೇಕು. ಮಕ್ಕಳಿಗೆ ಹೆದರಿಕೆಯನ್ನುಂಟು ಮಾಡುವ ಶಿಕ್ಷಣಕ್ಕೆ ಬದಲಾಗಿ ಅವರಲ್ಲಿ ಕ್ರಿಯಾಶೀಲತೆ, ನಿರ್ಭಯ, ಆತ್ಮವಿಶ್ವಾಸ ನೀಡುವಂತಹ ಶಿಕ್ಷಣವನ್ನು ಕೊಡಬೇಕು. ಇದರಿಂದ ಮುಂದೆ ಆ ಮಕ್ಕಳು ಉತ್ತಮ ಪ್ರಜೆಯಾಗುತ್ತಾರೆ"  ಎಂಬುದು ಓವೆನ್ ರ ಅಭಿಪ್ರಾಯವಾಗಿತ್ತು. ಓವೆನ್ ತಮ್ಮ ಮಕ್ಕಳಿಗೂ ಇದೇ ರೀತಿಯ ಶಿಕ್ಷಣವನ್ನು ನೀಡುತ್ತಿದ್ದರು. ಅವರನ್ನು ಸ್ನೇಹಿತರಂತೆ ನೋಡುತ್ತಿದ್ದರು.  ಅವರು ಹಠ ಮಾಡಿದರೆ ಪ್ರೀತಿಯಿಂದಲೇ ಅವರು ಮನವನ್ನು ಬದಲಾಯಿಸುತ್ತಿದ್ದರು. ಈ ರೀತಿಯ  ಮನಃಪರಿವರ್ತನಗೆ ವಿದ್ಯೆಯೇ ಪರಿಹಾರ ಎನ್ನುತ್ತಿದ್ದರು. "ವ್ಯಕ್ತಿಯ ವ್ಯಕ್ತಿತ್ವ ಬಾಲ್ಯದಿಂದಲೇ ವಿಕಸನಗೊಳ್ಳುತ್ತದೆ. ಬಾಲ್ಯದಲ್ಲಿ ಮಕ್ಕಳ ಕುತೂಹಲ ಆಸಕ್ತಿ, ಇವುಗಳನ್ನು ಸರಿಯಾದ ಮಾರ್ಗದಲ್ಲಿ ತಣಿಸಬೇಕು.  ಮಕ್ಕಳಿಗೆ ಓದು ಬರಹ ಕಲಿಸಬಹುದು, ಆದರೆ ಅವರ ಮನದಲ್ಲಿ ಮೂಡುವ ಅಸೂಯೆ, ದ್ವೇಷ, ಸುಳ್ಳು ಮೊದಲಾದವು ಹಾಗೆ ಉಳಿಯಬಹುದು. ಇಂತಹ ಗುಣಗಳಿಂದ ಅವರಲ್ಲಿ ಸಮಾಜ ವಿರೋಧಿ ಪ್ರವೃತ್ತಿ ಉಂಟಾಗುತ್ತದೆ. ಶಿಕ್ಷಣ ಕೊಡಿಸುವುದರಿಂದ ಈ ದೋಷವನ್ನು  ಹೋಗಲಾಡಿಸಬಹುದು. ಅವರಲ್ಲಿ ಪ್ರೀತಿ, ಸಹೋದರತೆ,  ಸಹಕಾರ ಮನೋಭಾವನೆಯನ್ನು ರೂಪಿಸಿ ಓರ್ವ ಉತ್ತಮ ಪ್ರಜೆಯನ್ನು ಸಮಾಜಕ್ಕೆ ನೀಡಬಹುದು"
ಎಂಬುದು ಓವೆನ್ ರ ವಿಚಾರಧಾರೆಯಾಗಿತ್ತು. 

ಆದರೆ ಶಿಕ್ಷಣದಲ್ಲಿನ ಈ ಸುಧಾರಣೆಗಳನ್ನು ತರಲು ಕಂಪನಿಯು ಒಪ್ಪಲಿಲ್ಲ. ಇದರಿಂದ ಓವೆನ್ ಆ ಗಿರಣಿಯನ್ನು  ಬೇರೆ ಪಾಲುದಾರರೊಡಗೂಡಿ ಕೊಂಡರು. ಆದರೆ ಅವರು ಸಹ ಇವರ ಕ್ರಾಂತಿಕಾರಿ ಸುಧಾರಣೆಗಳನ್ನು ಒಪ್ಪದೆ, ವಿರೋಧಿಸಿದರು. ಆದರೂ ಧೃತಿಗೆಡದ ಓವೆನ್ "ಗಿರಣಿಯನ್ನು ನೀವೇ ತೆಗೆದುಕೊಳ್ಳಿ ಅಥವಾ ನನಗೆ ಬಿಟ್ಟುಕೊಡಿ" ಎಂದರು. ನಂತರ ಹರಾಜಿನ ಮೂಲಕ ಹೊಸ ಪಾಲುಗಾರರ ಸಹಾಯದಿಂದ ಓವೆನ್ ಗಿರಣಿಯನ್ನು ಪಡೆದುಕೊಂಡರು. 
ಓವೆನ್ ಶಿಶುವಿಹಾರಗಳನ್ನು ಪ್ರಾರಂಭಿಸಿ ಜಾತಿ ಮತ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಪ್ರವೇಶ ಕಲ್ಪಿಸಿಕೊಟ್ಟರು.
ಹೀಗೆ ತಮ್ಮ ಕ್ರಾಂತಿಕಾರಿ ಸುಧಾರಣೆಗಳಿಂದ ಓವೆನ್ ನ್ಯೂಲಾನಾರ್ಕ್ ನ್ನು  ಒಂದು ಮಾದರಿ ಗ್ರಾಮವನ್ನಾಗಿ ಮಾಡಿದರು. ಹೀಗಿರುವಾಗಲೇ 1815 ರಲ್ಲಿ ಐರೋಪ್ಯ ಆಮದುಗಳು ನಿಂತು ಬ್ರಿಟನ್  ನಲ್ಲಿ  ಮತ್ತೆ ಗಿರಣಿಗಳು ಪ್ರಾರಂಭವಾಗಿ, ಎಲ್ಲರಿಗೂ ಉದ್ಯೋಗಾವಕಾಶಗಳು ದೊರಕಿದವು. ಬ್ರಿಟನ್ನಿನ ಉತ್ಪಾದನಾ ಶಕ್ತಿ ಹೆಚ್ಚಿತು. ವ್ಯವಸಾಯ ಪ್ರಧಾನವಾಗಿದ್ದ ಬ್ರಿಟನ್ ಕೈಗಾರಿಕಾ ಪ್ರಧಾನವಾದ ರಾಷ್ಟ್ರವಾಗಿ ರೂಪುಗೊಂಡಿತು. ಪರಿಣಾಮವಾಗಿ ಹಣದುಬ್ಬರ, ಕಾಳಸಂತೆ, ಕೃತಕ ಅಭಾವಗಳ ನಡುವೆ ಶ್ರಮಜೀವಿಗಳು ಸಿಲುಕಿದರು. ತನ್ನ ದೇಶದಲ್ಲಿನ ದುಸ್ಥಿತಿಯನ್ನು ಕಂಡು ಓವೆನ್ "ಸಹಕಾರ ಗ್ರಾಮ" ಎಂಬ ಪರಿಹಾರವನ್ನು  ಸೂಚಿಸಿದರು.
ಓವೆನ್ ರ ಸಹಕಾರ ಗ್ರಾಮದ ಪರಿಕಲ್ಪನೆ ಈ ರೀತಿಯಿದೆ.
"ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಮಾನವ ಜೀವನ. ಎಲ್ಲರ ಅಭಿವೃದ್ಧಿಗಾಗಿ ದುಡಿಮೆ ಅವಶ್ಯಕ. ಯಂತ್ರ ಶಕ್ತಿ ಮಾನವ ಕುಲಕ್ಕೆ ವರವಾಗಬೇಕೆ ಹೊರತು ಶಾಪವಾಗಬಾರದು. ಎರಡರ ನಡುವೆ ಸಾಮರಸ್ಯ ಇರಬೇಕು. ಆದರೆ ಪೈಪೋಟಿಯ ಈ ಜಗತ್ತಿನಲ್ಲಿ ಇದು ಸಾಧ್ಯವಿಲ್ಲ. ಸಂಪತ್ತಿನ ಗಳಿಕೆಯಲ್ಲಿನ ನೀತಿಯನ್ನು ಅದರ ಹಂಚಿಕೆಯಲ್ಲಿ ಅನುಸರಿಸುತ್ತಿಲ್ಲ. ಇದೇ ಸಮಾಜದ ದುಸ್ಥಿತಿಗೆ ಕಾರಣ. ಎಲ್ಲರೂ ಸಹಕಾರ ಮನೋಭಾವನೆಯನ್ನು ತಾಳಬೇಕು. 'ಒಬ್ಬ ಎಲ್ಲರಿಗಾಗಿ,  ಎಲ್ಲರೂ ಒಬ್ಬನಿಗಾಗಿ' ಎಂದು ಸಹೋದರರಂತೆ ಜೀವನ ನಡೆಸಬೇಕು. ದೊಡ್ಡ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬದಲಾಗಿ ಗ್ರಾಮೀಣ ಪ್ರದೇಶದಲ್ಲಿ ಪ್ರಜೆಗಳು ಜೀವನ ನಡೆಸಲು ವ್ಯವಸಾಯ, ಕೈಗಾರಿಕೋದ್ಯಮ, ವಾಣಿಜ್ಯ ಇವುಗಳೆಲ್ಲವನ್ನು ಸಮತೋಲನವಾಗಿ ಒಳಗೊಂಡ ಸಹಕಾರಿ ಗ್ರಾಮಗಳು ನಿರ್ಮಾಣವಾಗಬೇಕು. ಈ ಬಗೆಯ ಗ್ರಾಮಗಳನ್ನು ನಿರ್ಮಿಸಲು ಸರ್ಕಾರ ಮತ್ತು ಸಾರ್ವಜನಿಕರು ನೆರವಾಗಬೇಕು."
ಸರ್ಕಾರದ ಮುಂದೆ ಈ ವಿಚಾರವನ್ನಿಟ್ಟಾಗ,  ಸರ್ಕಾರ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.
ಓವೆನ್ ಸಹಕಾರ ವಿಚಾರವಾಗಿ ಭಾಷಣ ಮಾಡುತ್ತಿರುವಾಗಲೇ ಕುಸಿದು 1858 ನವೆಂಬರ್ 17 ರಂದು ಸಾವನ್ನಪ್ಪಿದರು.
  ಹೀಗೆ ಹಂತಹಂತವಾಗಿ ಮೇಲೇರಿದ ಓವೆನ್ ತಮ್ಮ ಸಹಕಾರಿ ತತ್ವಗಳಿಂದಾಗಿ ಕ್ರಾಂತಿಯನ್ನುಂಟು ಮಾಡಿ ದುರ್ಬಲರ ಭವಿಷ್ಯಜ್ಯೋತಿಯಾಗಿ ಸಹಕಾರಿ ಚಳವಳಿಯ "ಮೊದಲ ಸಹಕಾರಿ ಪುರುಷ" ಎನಿಸಿಕೊಂಡಿದ್ದಾರೆ.
- ವಿಜಯಲಕ್ಷ್ಮಿ ಎಂ. ಎಸ್  

ವಿಶ್ವಮಾನವನಾಗು - 1


[ಒಂದೇ ದೇಶದವರಾದ ನಾವು ಒಂದಾಗಿ ಬದುಕಿ ನಮ್ಮ ನೈಜ ಸಮಸ್ಯೆಗಳಿಗೆ ಉತ್ತರವನ್ನು ಹುಡುಕುವುದನ್ನು ಬಿಟ್ಟು ಜಾತಿ, ಭಾಷೆ, ಧಾರ್ಮ, ಜನಾಂಗ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಹೊಡೆದಾಡುತ್ತಿದ್ದೇವೆ. ಇದರಿಂದ ಸಮೃದ್ಧ ದೇಶದ ಅಭಿವೃದ್ಧಿಗೆ, ಎಲ್ಲ ಸಮುದಾಯದವರ ಬೆಳವಣಿಗೆಗೆ ಹಾನಿಕಾರಕ ಎಂಬುದು ಎಲ್ಲರಿಗೂ ತಿಳಿದಿದೆ. 
ನಮ್ಮ ಸಮಾಜದಲ್ಲಿ ಒಂದೆಡೆ ನಮ್ಮ ಜಾತಿಯೇ ಶ್ರೇಷ್ಠ, ನಮ್ಮ ಧರ್ಮವೇ ಶ್ರೇಷ್ಠ, ನಮ್ಮ ಭಾಷೆಯೇ ಶ್ರೇಷ್ಠ ಎನ್ನುವುದು ಒಂದು ಗುಂಪಾದರೆ, ಇನ್ನೊಂದು ಗುಂಪು "ಮಾನವ ಜಾತಿ ತಾನೊಂದೆ ವಲಂ" ಎಂದು ಪ್ರತಿಪಾದಿಸುತ್ತಿದೆ. ಇಂದು ನಾವು ಎಲ್ಲಾ ವಿಭಜಕ ಗೋಡೆಗಳನ್ನು ಕೆಳಗುರುಳಿಸಿ ಒಟ್ಟಾಗದಿದ್ದರೆ ಬದುಕು ದುರ್ಭರವಾಗುತ್ತದೆ. "ವಿಶ್ವಮಾನವ"ರಾಗಲು ಕರೆಕೊಟ್ಟ ಮಹನೀಯರ ಲೇಖನ, ಕವನ, ಕಥೆಗಳನ್ನು ಇಲ್ಲಿ ಓದುಗರ ಪರಾಮರ್ಶೆಗೆ ನೀಡುತ್ತಿದ್ದೇವೆ. ಈ ಬಾರಿ ಕನ್ನಡದ ಪ್ರಖ್ಯಾತ ಕವಿಗಳಾದ ಸಿದ್ಧಯ್ಯಪುರಾಣಿಕರ ‘ಸಲಾಮ್ ಸಾಬ್’ ಕವಿತೆ. ಅವರಿಗೆ ನಮ್ಮ ತುಂಬುಹೃದಯದ ಧನ್ಯವಾದಗಳು]

‘ಸಲಾಮ್ ಸಾಬ್’ - ಕಾವ್ಯಾನಂದ (ಸಿದ್ಧಯ್ಯ ಪುರಾಣಿಕರು)

ನಡುಹಗಲು! ಕಡುಬೇಸಿಗೆಯ ಸೂರ್ಯ ನಡುನೆತ್ತಿಗೇರಿರಲು
ಪೊಡವಿ ತಲ್ಲಣಿಸುತಿದೆ! ತಿರೆಗೆ ಜ್ವರ ಬಂದಂತೆ
ಬಿರುಬಿಸಿಲ ಉರಿಹೆಚ್ಚಿ ಉಗಿ ಕಾರುತಿದೆ ನೆಲವು!
ತನಗೆ ತಂಪನು ನೀಡೆ ಗಾಳಿಯೂ ಗೋಳಿಟ್ಟು
ತರುಗಳನು ಬೇಡುತಿದೆ ಆಗಾಗ ಕೆಣಕೆಣಕಿ!
ಬಿಸಿಲುಗುದುರೆಗಳೇರಿ ವಸುಧೆಯೊಡಲಿಂದೊಗೆದ
ಬಿಸಿಯುಸಿರು ಓಡುತಿದೆ ಮೋಡಗಳ ಮೊರೆ ಹೋಗಲು!
ಹೊಗೆಬಂಡಿಯೋಡುತಿದೆ ದಿಗಿಲುಗೊಂಡವರಂತೆ
ಉಗಿಯ ಬಿಸುಪಿಮ್ಮಡಿಸೆ ಹಗಲುಗುಳ್ವ ಕಿಚ್ಚಿನಲಿ!
ನಾನಿಳಿದ ನಿಲ್ದಾಣವೊಂದು ಹಂಚಿನ ಕೋಣೆ
ನಾಲ್ಕು ಜನರೊಮ್ಮೆಗೇ ನಿಂತುಕೊಳ್ಳಲು ಬರದು
ಮಗ್ಗಲಿನ ತಗಡುಮನೆಯರೆಗಾವುನೆರಳಿನಲಿ
ಉಸ್ಸೆಂದು ಹೊರಳುತಿವೆ ಜೀವಿಗಳು ನಾಲ್ಕಾರು!
ಸನಿಹದಲ್ಲಿ ಮರವಿಲ್ಲ ನಿಲ್ಲೆ ನೆರಳಿನಿಸಿಲ್ಲ
ಊರಿಹುದು ದೂರದಲಿ ದಾರಿ ತಿಳಿಯದು ನನಗೆ
ಏನು ಮಾಡುವುದೆಂದು ಜಾನಿಸುತ ನಿಂತಿರಲು
ಕಿವಿಯ ಕೊರೆಯುತ ಹೊಕ್ಕು ಎದೆಯನಡುಗಿಸಿತೊಂದು
ಕರುಣಕ್ರಂದನ  - “ಸಲಾಮ್ ಸಾಬ್”!

ಹಿಂತಿರುಗಿ ನೋಡಿದೆನು, ಹೆದರಿ ಹೌಹಾರಿದೆನು!
ದೈನ್ಯತೆಯ ನಿಟ್ಟುಸಿರೆ ನರನಾಗಿ ನಿಂತಂತೆ
ದಾರಿದ್ರ್ಯದುಮ್ಮಳವೆ ಮೈದಾಳಿತೆಂಬಂತೆ
ಅಳಲ ಚೀತ್ಕಾರವೇ ಚರ್ಮ ತೊಟ್ಟಿರುವಂತೆ
ಕನಿಕರದ ಕಣ್ಣೀರೆ ಕೈಕಾಲು ತಳೆದಂತೆ
ಕರುಳುಗಳ ಕಲಮಲವೆ ಕಾಯವನು ಪಡೆದಂತೆ
ಎಲುವು ತೊಗಲುಗಳಲ್ಲಿ ಎಂತೆಂತೊ ಜೀವವನು
ಬಲುಮೆಯಿಂದಲಿ ಹಿಡಿದು ಉಸಿರಬಲೆಯಲಿ ಬಿಗಿದು
ಬಾಯ್ಬಿಡುತ ನಿಂತಿತ್ತು ನರನ ಆಕೃತಿಯೊಂದು!
ನರನೆನಲೊ ನೆರಳೆನೆಲೊ ಅರೆಜೀವ ಹಾರಿರುವ
ಬರಿಕಳೇಬರವೆನಲೊ ನಿಟ್ಟುಸಿರ ತಿದಿಯೆನಲೊ?
ತಳದಿಂದ ತಲೆವರೆಗೆ ಕಣ್ಣಿಟ್ಟು ನೋಡಿದರೆ
ಮಧ್ಯದಲಿ ಕಾಣುವುದು ಛಿದ್ರವಸ್ತದ ತುಂಡು!
ತಲೆಯ ಕಾಯುವರಾರು? ಕರುಣೆ ಬಂದಿತೊ ಏನೊ
ನರೆಗೂದಲೆಂಬುವಕೆ - ಮುಚ್ಚಿಹವು ತಲೆ ಕೆನ್ನೆ!
ಹೆಗಲಿನಲಿ ಹರುಕೊಲ್ಲಿ ಬಗಲಿನಲಿ ಆನುಗೋಲ್
ಎಡಗೈಯೊಳಿದೆ  ಪಾತ್ರೆ ಬಲಗೈಗೆ ಹಣೆಯು -
“ಸಲಾಮ್ ಸಾಬ್, ಸಲಾಮ್ ಸಾಬ್!”    
ಬೆವರು ಬತ್ತಿಹ ಕಾಯ  ಹೊಲಸು ಮೆತ್ತಿಹ ಮೈಯು
ಹಿಂಡಿದಂತಿಹ ಚರ್ಮ ಖಂಡವಂಟದ ಎಲುವು
ಕಾಂತಿಯಿಂಗಿದ ಕಣ್ಣು ಚಿಂತೆಯಡಸಿದ ಹಣೆಯು
ಹಸಿದು ಕುಸಿದಿಹ ಹೊಟ್ಟೆ ಮುರಿದು ಬಾಗಿದ ಬೆನ್ನು
ನರೆತು ನಡುಗುವ ತಲೆಯು ಬರತು ಅಂಟಿಹ ಜಿಹ್ವೆ
ಬಿಸಿಲನಣಕಿಸಿನಿಂತು ನಿರುಕಿಸುತಲಿಹ ಜೀವಿ
ಭಾರತದ ಬಡತನದ ಬಾವುಟದ ಚಿತ್ರದೊಲು!
ಅಳಲು ಕರುಣೆಗೆ ಬರೆದ ಜೀವಂತ ಪತ್ರದೊಲು!
    
ಸಲಾಮ್ ಸಾಬ್ ! ಸಲಾಮ್ ಸಾಬ್!
ಕಂಡೊಡನೆ ಕಲ್ಲೆದೆಯ ಕರಗಿಸುವ ಕನಿಕರವು
ಕಲಕಿದರು ಎದೆಯನ್ನು ಕನಲಿ ನುಡಿಯಿತು ಬುದ್ಧಿ:
“ಇವ ತುರುಕ - ಭಾರತದ ಅರಮನೆಯ ಮುರುಕ!
ಇವ ಮ್ಲೇಂಛ-ಭಾರತದ ಹಂಚೆ ಹೂಡಿಹ ಸಂಚ!
ಹಾವ್ಗೆ ಹಾಲೆರೆಯದಿರು - ಸಾಯಲಿವರೀ ರೀತಿ!”
ಎಂದು ಗುಡುಗಿದ ದನಿಗೆ, “ಕನಲದಿರು ಬುದ್ಧಿಯೇ,
ಭಾರತದ ವೈರಿಗಳು ಬಡ ತುರುಕರಲ್ಲ, ಸಿರಿ
ತಲೆಗೇರಿ ಕುಣಿಯುತಿಹ ಸ್ವಾರ್ಥಿಗಳು ಕೆಲವು ಜನ!
ಕೆಡುಕರವರೀ ಪಾಪ ಬಡ ಜನಕೆ ಮೃತ್ಯುವೆ?”
ಬೆಚ್ಚಿದೆನು ಮನದಲ್ಲಿ! ನಿಶ್ಚಯವು ಈ ಮಾತು-
ಬಡ ತುರುಕ ಬೇಡುವುದು ಅನ್ನ- ಅಲ್ಲ ಪಾಕಿಸ್ತಾನ!
ಇವರೊಡನೆ ದ್ವೇಷವೆ? ನಾಲ್ಕಾಣಿಯನ್ನಿತ್ತೆ.
“ಸಲಾಮ್ ಸಾಬ್!” ಅವನ ಹಿಗ್ಗನು ಕಂಡು
ಹಿಗ್ಗಿತೆನ್ನೆದೆ! ಹೊಟ್ಟೆ ತುಂಬುಣ್ಣುವನು ಹಸಿದ ಜೀವಿ?
ಹುಟ್ಟಿನೊಳಗಿರಬಹುದು ಹಸಿದ ಹೊಟ್ಟೆಯಲಿ ಕುಲವುಂಟೆ?
ವೇಷದೊಳಗಿರಬಹುದು ಹೃದಯಭಾಷೆಯಲಿ ಕುಲವುಂಟೆ?
ಜಡ ತನುವಿಗಿರಬಹುದು ಬಡತನಕೆ ಕುಲವುಂಟೆ?
ಕರಿಬಿಳಿಯ ವರ್ಣವಿರೆ ಕರುಣಕ್ಕೆ ಕುಲವುಂಟೆ?
ಸಲಾಮ್ ಸಾಬ್! ಸಲಾಮ್ ಸಾಬ್!

ಶಾಲಾ ಡೈರಿ - 07

ಹೆಲೆನ್ ಕೆಲ್ಲರ್ ರವರ ಪರೀಕ್ಷಾನುಭವ (ಅವರೇ ಬರೆದಿರುವಂತೆ)

ನನ್ನ ಕಾಲೇಜು ಜೀವನದಲ್ಲಿ ಮುಖ್ಯವಾದ ತೊಡಕೆಂದರೆ ಪರೀಕ್ಷೆಗಳು. ಅವನ್ನು ಹಲವಾರು ಬಾರಿ ಎದುರಿಸಿದ್ದೇನೆ ಮತ್ತು ಅವನ್ನು ಮಟ್ಟ ಹಾಕಿದ್ದೇನೆ. ಆದರೆ ಅವು ಮತ್ತೆ ಮತ್ತೆ ಎದ್ದು ನಿಂತು ಪೇಲವವಾದ ಮುಖದೊಂದಿಗೆ ಪಿಡುಗಾಗಿ ಕಾಡಿದಾಗ ನನ್ನ ಧೈರ್ಯವು ಉಡುಗಿಹೋಗುತ್ತದೆ. 

ಈ ಅಗ್ನಿಪರೀಕ್ಷೆಗಳು ಆರಂಭವಾಗುವ ಮುನ್ನಾ ದಿನಗಳಲ್ಲಿ ನಿಮ್ಮ ತಲೆಯೊಳಗೆ ಫಾರ್ಮುಲಾಗಳನ್ನು, ಅಜೀರ್ಣಯುಕ್ತ ತಾರೀಖುಗಳನ್ನು ತುರುಕಿಕೊಳ್ಳಬೇಕಾಗುತ್ತದೆ. ಎಷ್ಟೆಂದರೆ, ನಿಮಗೆ, ಪುಸ್ತಕಗಳೂ, ವಿಜ್ಞಾನ ಮತ್ತು ನೀವು ಮೂವರು ಸಮುದ್ರದಾಳದಲ್ಲಿ ಮುಳುಗಿಹೋದರೆ ಚೆನ್ನ ಎನಿಸುವಷ್ಟು!


ಕೊನೆಗೂ ಆ ಭಯಾನಕ ಘಳಿಗೆ ಬರುತ್ತದೆ. ನೀವು ಸಿದ್ಧರಾಗಿದ್ದೀರಿ ಎನಿಸಿದರೆ, ನಿಮ್ಮ ಚಿಂತನೆಗಳು ನಿಮ್ಮ ತೀವ್ರ ಪ್ರಯತ್ನದ ಸಮಯದಲ್ಲಿ ನೆರವನ್ನು ನೀಡುತ್ತದೆ ಎನಿಸಿದರೆ ನೀವು ಅದೃಷ್ಟವೆಂತರೆನಿಸುತ್ತದೆ. ಬಹಳಷ್ಟು ಸಾರಿ ನಿಮಗನಿಸುವುದು ನಿಮ್ಮ ಕಹಳೆಯ ಕೂಗು ಉತ್ತರವಿಲ್ಲದೆ ಹೋಗಿಬಿಡುತ್ತದೆ. ನಿಮ್ಮ ನೆನಪು ಮತ್ತು ವಿವೇಚನೆ ನಿಮಗೆ ಅತ್ಯಂತ ಬೇಕೆನಿಸಿದಾಗ, ಅವುಗಳು ರೆಕ್ಕೆ ಕಟ್ಟಿಕೊಂಡು ಹಾರಿಹೋಗಿಬಿಟ್ಟಾಗ, ಅದು ಬಹಳ ಅಘಾತಕಾರಿಯಾಗಿರುತ್ತದೆ, ಶ್ರಮದಾಯಕವಾಗಿರುತ್ತದೆ. ಒಂದು ಘಳಿಗೆಯಲ್ಲಿ ನೀವು ಅನಂತ ಶ್ರಮದೊಂದಿಗೆ ಒಟ್ಟುಗೂಡಿಸಿದ್ದ ಅಂಶಗಳೆಲ್ಲಾ ನಿಮ್ಮನ್ನು ಬಿಟ್ಟುಹೋಗಿಬಿಡುತ್ತದೆ.

“ಹಸ್‍ರ ಬಗ್ಗೆ, ಅವರ ಕಾರ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ.” 
ಹಸ್? ಯಾರವರು? ಏನು ಮಾಡಿದರು? ಹೆಸರೇನೋ ಪರಿಚಿತವೆನಿಸುತ್ತದೆ. ನೀವು ನಿಮ್ಮ ಇತಿಹಾಸದ ವಾಸ್ತವಾಂಶಗಳ ಸಮೂಹವನ್ನೇ ಜಾಲಾಡುತ್ತೀರಿ, ಚಿಂದಿಬಟ್ಟೆಗಳ ಮೂಟೆಯಿಂದ ರೇಷ್ಮೆ ಚೂರನ್ನು ಹುಡುಕಿದಂತೆ. ನಿಮಗೆ ಆ ಹೆಸರು ಇಲ್ಲೇ ಇದೆ ಎನಿಸುತ್ತದೆ, ನೀವು ಅದನ್ನು ಇನ್ನೊಂದು ದಿನ ಸುಧಾರಣಾ ಯುಗದ ಆರಂಭದ ಬಗ್ಗೆ ಓದುತ್ತಿದ್ದಾಗ ಕಾಣಸಿಕ್ಕಿರುತ್ತದೆ. 

ಆದರೆ ಅದು ಈಗೆಲ್ಲಿ? ನೀವು ನಿಮ್ಮ ಇಡೀ ಜ್ಞಾನಭಂಡಾರ – ಕ್ರಾಂತಿಗಳು, ಯೋಜನೆಗಳು, ಹತ್ಯೆಗಳು, ಸರ್ಕಾರದ ಪದ್ಧತಿಗಳು – ಎಲ್ಲದರಲ್ಲಿಯೂ ಹುಡುಕುತ್ತೀರಿ. ಆದರೆ ಹಸ್, ಎಲ್ಲವನು? ಪರೀಕ್ಷಾ ಪತ್ರಿಕೆಯಲ್ಲಿರದ ಎಷ್ಟೊಂದು ವಿಷಯಗಳೂ ನಿಮಗೆ ಗೊತ್ತೆನಿಸುತ್ತದೆ. ಆಗ ನಿಮಗೆ ನಿರಾಶೆಯಲ್ಲಿ ಎಲ್ಲವನ್ನು ಕೊಡವಿಕೊಂಡಾಗ, ಅಲ್ಲಿ ಮೂಲೆಯಲ್ಲಿ ನಿಮಗೆ ಬೇಕಾದ ವ್ಯಕ್ತಿ ಕಾಣಿಸುತ್ತಾನೆ, ತನ್ನದೇ ಚಿಂತೆಯಲ್ಲಿ ಮಗ್ನನಾಗಿ, ನಿಮ್ಮ ಮೇಲೆ ಅವನು ತಂದಿರುವ ಆಪತ್ತಿನ ಅರಿವೇ ಇರದೆ! 


ಅಷ್ಟರಲ್ಲಿ ಕೋಣೆಯ ಮೇಲ್ವಿಚಾರಕರು ಬಂದು “ನಿಮ್ಮ ಸಮಯ ಮುಗಿದಿದೆ” ಎಂದು ತಿಳಿಸುತ್ತಾರೆ. ತೀವ್ರವಾದ ಬೇಸರದಿಂದ ಎಲ್ಲಾ ವಿಚಾರಗಳನ್ನು ಕೊಡವಿಕೊಂಡು ಮನೆಗೆ ಹೋಗುತ್ತೀರಿ. ನಿಮ್ಮ ತಲೆಯ ತುಂಬ ಪರೀಕ್ಷೆಗಳನ್ನು ನಿಷೇಧಿಸುವ, ವಿದ್ಯಾರ್ಥಿಗಳ ಒಪ್ಪಿಗೆ ಇಲ್ಲದೆ ಅವರನ್ನು ಪ್ರಶ್ನಿಸುವ ಪ್ರೊಫೆಸರ್‍ಗಳ ಹಕ್ಕನ್ನು ನಿಷೇಧಿಸುವ ಕ್ರಾಂತಿಕಾರಿ ಯೋಜನೆಗಳು ತುಂಬಿರುತ್ತವೆ!

ಅನುವಾದ - ಸುಧಾ ಜಿ        

ಸಿನಿಮಾ ವಿಮರ್ಶೆ - ಮುನ್ನುಡಿ


ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಬಂಡಾಯ ಸಾಹಿತ್ಯವನ್ನಾಧರಿಸಿ ನಿರ್ಮಿಸಿದ ಅತ್ಯುತ್ತಮವಾದ ಚಲನಚಿತ್ರಗಳಲ್ಲಿ “ಮುನ್ನುಡಿ” ಎಂಬ ಚಲನಚಿತ್ರವೂ ಒಂದು. ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಬಂದಿದೆ. ಈ ಸಿನಿಮಾದಲ್ಲಿನ ರುಖಿಯಾಳ ಪಾತ್ರಕ್ಕಾಗಿ ‘ತಾರ' ರವರಿಗೆ ‘ಅತ್ಯುತ್ತಮ ನಟಿ’ ಎಂದು ರಾಷ್ಟ್ರ ಪ್ರಶಸ್ತಿ ದೊರೆಯಿತು. ಈ ಸಿನಿಮಾದ ನಿರ್ದೇಶಕರು ಪಿ.ಶೇಷಾದ್ರಿ. ಈ ಸಿನಿಮಾ ಕೇರಳದ ಮುತ್ತುಛೇರ ಎಂಬ ಕುಗ್ರಾಮದಲ್ಲಿ ಶೋಷಣೆಗೊಳಗಾದ ಹೆಣ್ಣುಮಕ್ಕಳ ನಿಜಜೀವನದ ಕಥೆಯನ್ನಾಧರಿಸಿದೆ.
ಮುಸ್ಲಿಮರೇ ಪ್ರಮುಖರಾಗಿರುವ ಆ ಹಳ್ಳಿಯಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿರುತ್ತದೆ. ಇಲ್ಲಿ ಒಬ್ಬ ಸಾಹುಕಾರ ಟಿಂಬರ್ ವ್ಯಾಪಾರಿಯಾಗಿದ್ದು ತನ್ನ ಮರದ ದಿಮ್ಮಿಗಳನ್ನು ಅರಬ್ಬೀ ದೇಶಕ್ಕೆ ಸಮುದ್ರದ ಮೂಲಕ ಸಾಗಿಸುತ್ತಾ ಇರುತ್ತಾನೆ. ಅರಬ್ಬಿಯಿಂದ ಬರುವ ವ್ಯಾಪಾರಿಗಳನ್ನು ಆಕರ್ಷಿಸಲು ಆ ಹಳ್ಳಿಯ ಬಡ ಹೆಣ್ಣುಮಕ್ಕಳನ್ನು ಜೀವನವನ್ನೇ ಪಣಕ್ಕಿಡುತ್ತಿರುತ್ತಾನೆ. ವ್ಯಾಪಾರಕ್ಕೆಂದು ಬೇರೆಡೆ ಹೋಗುವ ಮುಸ್ಲಿಮರು ತಾತ್ಕಾಲಿಕ ವಿವಾಹವನ್ನು ಮಾಡಿಕೊಳ್ಳುವ ಪದ್ಧತಿಯನ್ನು, ಅದರಿಂದ ಶೋಷಣೆಗೊಳಗಾಗುವ ಹೆಣ್ಣುಮಕ್ಕಳ ಚಿತ್ರಣವನ್ನು, ಅಂತಿಮವಾಗಿ ಆ ಹೆಣ್ಣುಮಕ್ಕಳೇ ಈ ಪದ್ಧತಿಯ ವಿರುದ್ಧ ಸಿಡಿದೇಳುವುದನ್ನು ಮನಮುಟ್ಟುವಂತೆ ಚಿತ್ರಿಸಲಾಗಿದೆ.
ಬಡತನ ಕಿತ್ತು ತಿನ್ನುತ್ತಿರುವ ಮುಸ್ಲಿಂ ಹೆಣ್ಣುಮಕ್ಕಳಿಗೆ ಬಣ್ಣದ ಮಾತುಗಳನ್ನಾಡಿ ಮದುವೆಯ ಆಸೆ ತೋರಿಸಿ ಅರಬ್ಬಿಯವರೊಂದಿಗೆ ಮದುವೆ ಮಾಡಿಸುತ್ತಾರೆ. ಇಷ್ಟವಿದ್ದರೆ ಹಿಂತಿರುಗುವಾಗ ಅವರನ್ನು ಕೊಂಡೊಯ್ಯುವುದಾಗಿ, ಇಲ್ಲದಿದ್ದರೆ ಅವರಿಗೆ ತಲಾಖ್ ನೀಡಿ ಜೊತೆಗೆ  ಮೆಹರ್‍ನ್ನು ನೀಡಿ ಹೋಗುವರೆಂದು ಹೇಳಿ ಒಪ್ಪಿಸುತ್ತಾರೆ. ಈ ಕಾರ್ಯದಲ್ಲಿ ಹಸನಬ್ಬ ಹೆಣ್ಣುಮಕ್ಕಳನ್ನು ಒಪ್ಪಿಸಿ ಸಾಹುಕಾರನ ಹತ್ತಿರ ಕಮೀಷನ್ ಪಡೆದು ಜೀವನ ನಿರ್ವಹಿಸುತ್ತಿರುತ್ತಾನೆ. ಆದರೆ ಯಾವ ಅರಬ್ಬಿಯೂ ಮದುವೆಯಾದವರನ್ನು ವೀಸಾ ಮಾಡಿಸಿ ಕೊಂಡೊಯ್ಯುವ ಉದ್ದೇಶವಿಟ್ಟುಕೊಳ್ಳದೇ ಅವರನ್ನು 3 ತಿಂಗಳಕಾಲ ಬಳಸಿಕೊಂಡು ನಂತರ ವಿಚ್ಛೇದನ ನೀಡಿ ಅದಕ್ಕೆ ಸ್ವಲ್ಪ ಮೆಹರ್ ಹಣ ನೀಡಿ ಹಿಂತಿರುಗುತ್ತಿದ್ದರು.
ಈ ಅನಿಷ್ಟ ಪದ್ಧತಿಗೆ ರುಖಿಯಾ ಎಂಬಾಕೆ ಬಲಿಯಾಗುತ್ತಾಳೆ. ಆ ಅರಬ್ಬಿ ಆಕೆಯನ್ನು ವಿವಾಹವಾಗಿ, 3 ತಿಂಗಳು ಸಂತೋಷವಾಗಿ ಕಾಲಕಳೆಯುತ್ತಾನೆ. ಸಂತೋಷದ ವಿಷಯವೆಂದರೆ ಎಲ್ಲ ಅರಬ್ಬಿಯವಂತೆ ಹೀನವಾಗಿ ವರ್ತಿಸದೆ, ಬಲಾತ್ಕರಿಸದೆ, ಅವಳನ್ನು ಪ್ರೀತಿಸುತ್ತಾನೆ. ಅವಳ ಮನಸ್ಸನ್ನು ಅರಿತು ಅವಳೊಂದಿಗೆ ಮೃದುವಾಗಿ ವರ್ತಿಸುತ್ತಾನೆ. ರುಖಿಯಾಳು ಸಹ ಅವನ ಪ್ರೀತಿಗೆ ಸೋತು ಅವನೊಂದಿಗೆ ಸಂತೋಷದಿಂದಿರುತ್ತಾಳೆ. ಆ ಅರಬ್ಬಿ ಹಿಂತಿರುಗುವ ಸಮಯ ಬಂದಾಗ ತಲಾಖನ್ನು ನೀಡದೆ, ಮತ್ತೆ ಬಂದು ವೀಸಾ ಮಾಡಿಸಿ ತನ್ನೊಂದಿಗೆ ಕರೆದೊಯ್ಯುತ್ತೇನೆಂದು ಮಾತು ಕೊಟ್ಟು ಹೋಗುತ್ತಾನೆ. ಅವನನ್ನು ನಂಬಿದ್ದ ಗರ್ಭಿಣಿ ರುಖಿಯಾ ಅವನ ಬರುವಿಗಾಗಿ ಕಾದು ಕಾದು ಸೊರಗುತ್ತಾಳೆ. ಪುಟ್ಟ ಮಗುವಾದ ಮೇಲೆ, ಹಸನಬ್ಬ ಮತ್ತೆ ಮದುವೆಯಾಗಲು ಸೂಚಿಸಿದರು, ಅದನ್ನು ಒಪ್ಪದೆ ಆ ಅರಬ್ಬಿಗೆ ಕಾಯುತ್ತಿರುತ್ತಾಳೆ.
ಸಿನಿಮಾ ಆರಂಭವಾದಾಗ ರುಖಿಯಾಳಿಗೆ ಬೆಳೆದ ಮಗಳಿರುತ್ತಾಳೆ. ರುಖಿಯಾ ತನ್ನ ಮಗಳಿಗಾಗಿ ಜೀವನ ಸಾಗಿಸುತ್ತಾ, ಹಸನಬ್ಬನ ಕಣ್ಣುಗಳಿಂದ ಅವಳನ್ನು ಸದಾ ರಕ್ಷಿಸಲು ಹೆಣಗಾಡುತ್ತಿರುತ್ತಾಳೆ.
ಆ ಹಳ್ಳಿಯಲ್ಲಿರುವ ಯುವಕರ ಗುಂಪು ಇಂತಹ ಮದುವೆಗಳನ್ನು ವಿರೋಧಿಸುತ್ತಾ, ಈ ನೀಚ ಪದ್ಧತಿಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುತ್ತದೆ. ಅದರಲ್ಲಿ ಇಂತಹುದೇ ತಾತ್ಕಾಲಿಕ ಮದುವೆಗೆ ಬಲಿಯಾದ ಒಬ್ಬ ಯುವತಿಯ ತಮ್ಮನೂ ಇರುತ್ತಾನೆ. ಉದ್ಯೋಗವಿಲ್ಲದೆ ಮನೆಗೆ ಭಾರವಾಗಿ ಬೇಸತ್ತಿದ್ದ ತಮ್ಮನಿಗೆ ವೀಸಾ ಕೊಡಿಸಿ ದುಬಾಯ್‍ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಬಳಸಿಕೊಂಡಿರುತ್ತಾರೆ. ಮೋಸ ಹೋದ ಅಕ್ಕ - ತಮ್ಮ ಹಸನಬ್ಬನ ವಿರುದ್ಧ ಕಿಡಿಕಾರುತ್ತಿರುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾಹುಕಾರನಿಗೆ ಹೆಣ್ಣುಮಕ್ಕಳೇ ಸಿಗದಂತಾಗುತ್ತಾರೆ. ಆಗ ಒರ್ವ ವ್ಯಕ್ತಿ ಪಕ್ಕದ ಹಳ್ಳಿಯ ತನ್ನ ನಾದಿನಿ ಅಮೀನ ಎಂಬ ಹೆಣ್ಣನ್ನು ಹಣಕ್ಕಾಗಿ ಹಸನಬ್ಬನಿಗೆ ಒಪ್ಪಿಸಿ  ಓರ್ವ ಮುದುಕ ವ್ಯಾಪಾರಿಗೆ ವಿವಾಹ ಮಾಡುತ್ತಾರೆ. ಆ ಮುಗ್ಧ ಹೆಣ್ಣು ಅವನ ಅತ್ಯಾಚಾರಕ್ಕೆ ಬಲಿಯಾಗಿ ರಾತ್ರೋ ರಾತ್ರಿ ಮಾಯವಾಗುತ್ತಾಳೆ. ಮರುದಿನ ಗಲಾಟೆಗೈದ ವ್ಯಾಪಾರಿ ತನ್ನ ಹಣ ವಾಪಸ್ಸು ನೀಡಿರೆಂದು ಸಾಹುಕಾರನ ಮೇಲೆ ಉರಿದು ಬೀಳುತ್ತಾನೆ. ಆಗ ಇವರ ಕೆಟ್ಟ ಕಣ್ಣು ರುಖಿಯಾಳ ಮಗಳ ಮೇಲೆ ಬೀಳುತ್ತದೆ. ರುಖಿಯಾ ಒಪ್ಪದಿದ್ದಾಗ ಸಾಹುಕಾರ ಅವಳನ್ನು ಬೆದರಿಸುತ್ತಾನೆ. ವಧುವಿನ ಒಪ್ಪಿಗೆಯನ್ನು ಪಡೆಯದೆ ಧರ್ಮಕ್ಕೆ ವಿರುದ್ಧವಾಗಿ ನಿಖಾಹ್ ಮಾಡಲು ದಿನವನ್ನು ನಿರ್ಧರಿಸುತ್ತಾರೆ.
ಇತ್ತ ಉದ್ಯೋಗವಿಲ್ಲದೆ ಕೊರಗುತ್ತಿದ್ದ ತಮ್ಮನನ್ನು ಕಂಡು ಹಲಬುತ್ತಿದ್ದ ಅಕ್ಕನಿಗೆ ಹಸನಬ್ಬ ವೀಸಾ ತಂದು ಕೊಡುತ್ತಾನೆ. ತಮ್ಮನ ಭವಿಷ್ಯತ್ತಿಗಾಗಿ ಅಕ್ಕ ಮತ್ತೊಮ್ಮೆ ನಿಖಾಹ್‍ಗೆ ಒಪ್ಪಿಕೊಳ್ಳುತ್ತಾಳೆ. ಈ ಪದ್ಧತಿಯನ್ನು ಕಂಡು ಉರಿದುಬೀಳುತ್ತಿದ್ದ ತಮ್ಮನೂ ಅಸಹಾಯಕತೆಯಿಂದ ತನ್ನ ಅಕ್ಕನ ಈ ನಿರ್ಧಾರವನ್ನು ಸಮ್ಮತಿಸುತ್ತಾನೆ. ಉಳಿದ ಯುವಕರ ಗುಂಪು ರುಖಿಯಾಳಿಗೆ ತನ್ನ ಮಗಳನ್ನು ಮದುವೆ ಮಾಡಿಕೊಡಬೇಡೆಂದು ಸಲಹೆ ನೀಡಲು ಬರುತ್ತಾರೆ. ಅದಕ್ಕೆ ರುಖಿಯಾ ‘ನನ್ನ ಮಗಳನ್ನು ನಿಮ್ಮಲ್ಲಿ ಯಾರದರೊಬ್ಬರು ಮದುವೆಯಾಗುವಿರಾ?’ ಎಂದು ಕೇಳಿದಾಗ ಒಬ್ಬೊಬ್ಬರೇ ಜಾಗ ಖಾಲಿ ಮಾಡುತ್ತಾರೆ. ಆ ಸಮಾಜದಲ್ಲಿ ಅರಬ್ಬಿಯವರೊಂದಿಗೆ ವಿಚ್ಛೇದನ ಪಡೆದ ಹೆಂಗಸರನ್ನು, ಅವರ ಮಕ್ಕಳನ್ನು ಯಾರೂ ಮದುವೆಯಾಗುತ್ತಿರಲಿಲ್ಲ. ಇನ್ನು ದೂರದ ಗಂಡುಗಳಿಗೆ ವರದಕ್ಷಿಣೆ ನೀಡಲು ಇವರ ಬಳಿ ಹಣವಿರುತ್ತಿರಲಿಲ್ಲ. ಈ ಯುವಕರ ನಿಲುವು ನೋಡಿದ ರುಖಿಯಾ ವ್ಯಂಗ್ಯದಿಂದ ನಗೆಯಾಡುತ್ತಾಳೆ. ಈ ಪದ್ಧತಿಯನ್ನು ತೊಡೆದುಹಾಕಲು ನಿಂತವರೇ ಆ ಹೆಣ್ಣುಮಕ್ಕಳಿಗೆ ಬಾಳು ನೀಡುವ ಮನಸ್ಸು ಹೊಂದದಿರುವುದನ್ನು ಮತ್ತು ಸಮಾಜದ ನಿಂದೆಗೆ ಹೆದರುವುದನ್ನು ಕಂಡು ರುಖಿಯಾ ಅಣಕಿಸುತ್ತಾಳೆ.
ರುಖಿಯಾ ಮಗಳ ಮದುವೆ ದಿನ ಬರುತ್ತದೆ. ಮನೆಯಲ್ಲಿ ಇಬ್ಬರೂ ಅಳುತ್ತಾ ಕೂತಿರುವಾಗ ಊರಿನ ಜನರೆಲ್ಲ ನದಿಯ ಕಡೆಗೆ ಓಡುತ್ತಿರುವುದನ್ನು ಕಂಡು ರುಖಿಯಾ ಅವರ ಹಿಂದೆ ಹೋಗಿ ನೋಡಿದಾಗ ಮಾಯವಾಗಿದ್ದ ಅಮೀನಳ ಶವವನ್ನು ತೀರಕ್ಕೆ ಸಾಗಿಸುತ್ತಿರುವುದನ್ನು ಕಂಡು ದಿಗ್ಭ್ರಾಂತಳಾಗುತ್ತಾಳೆ. ಅವಳ ಕೊಳೆತ ಶವವನ್ನು ಕಂಡು ರುಖಿಯಾ ಮಗಳು ಗೆಳತಿಗೆ ಒದಗಿದ ಸ್ಥಿತಿ ಕಂಡು ಚೀರುತ್ತಾ ‘ನನಗೆ ನಿಖಾಹ್ ಬೇಡಮ್ಮ’ ಎಂದು ಗೋಳಾಡುತ್ತಾಳೆ. ಮಗಳನ್ನು ತಬ್ಬಿ ಹಿಡಿದು ರುಖಿಯಾ ಒಂದು ನಿರ್ಧಾರಕ್ಕೆ ಬರುತ್ತಾಳೆ.
ಸೀದ ನಿಖಾಹ್ ನಡೆಯುತ್ತಿದ್ದ ಸಾಹುಕಾರನ ಮನೆಗೆ ಹೋಗಿ ‘ನಿಲ್ಲಿಸಿ’ ಎಂದು ಕೂಗುತ್ತಾಳೆ. ಅವಳನ್ನು ತಡೆಯಲು ಬಂದ ಹಸನಬ್ಬನನ್ನು ದೂರ ತಳ್ಳಿ ಅಲ್ಲೇ ಇದ್ದ ಮಚ್ಚನ್ನು ಕೈಯಲ್ಲಿ ಹಿಡಿದು ಚಂಡಿಯಂತೆ ಅಬ್ಬರಿಸುತ್ತಾ ಅಮೀನಳಿಗೆ ಮಾಡಿದ ಅನ್ಯಾಯಕ್ಕಾಗಿ ಬೈಯುತ್ತಾಳೆ. ಇದನ್ನು ಕೇಳಿದ ಹಸನಬ್ಬ ತಲೆತಗ್ಗಿಸುತ್ತಾನೆ. ‘ಇನ್ನು ಮುಂದೆ ಇಂತಹ ನಿಖಾಗಳನ್ನು ಮಾಡಿದ್ದೀರೆಂದರೆ ನಿಮ್ಮನ್ನು ಕೊಚ್ಚಿ ಹಾಕುತ್ತೇನೆಂದು’ ರುಖಿಯಾ ಎಚ್ಚರಿಸಿದ ರೀತಿಗೆ ಸಾಹುಕಾರನೂ ಸೇರಿದಂತೆ ಎಲ್ಲರೂ ಅವಳ ಆವೇಶವನ್ನು ಕಂಡು ಹೆದರಿ ಸುಮ್ಮನಾಗುತ್ತಾರೆ.
ಯಾವಾಗಲೂ ತೆರೆಯ ಹಿಂದೆ ನಿಂತು ತನ್ನಪ್ಪನ ಪಾಪಕೃತ್ಯವನ್ನು ಕೇಳಿಸಿಕೊಳ್ಳುತ್ತಾ ದುಃಖಿಸುತ್ತಿದ್ದ ಸಾಹುಕಾರನ ಮಗಳು ರುಖಿಯಾಳ ನಿರ್ಧಾರ ಕೇಳಿ ಅತ್ಯಾನಂದದಿಂದ ತೆರೆಯನ್ನು ಸರಿಸಿ ಅವಳಲ್ಲಾದ ಸಂತೋಷವನ್ನು ವ್ಯಕ್ತಪಡಿಸುತ್ತಾಳೆ. ಈ ದೃಶ್ಯವು ಕೊನೆಯಲ್ಲಿ ಅರ್ಥಪೂರ್ಣವಾಗಿದ್ದು ಹೆಣ್ಣು ಮಕ್ಕಳ ಕಷ್ಟಗಳು ಪರಿಹಾರವಾದವೆಂದು ನಮಗೆ ಮನವರಿಕೆಯಾಗುತ್ತದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಹೆಣ್ಣನ್ನು ಭೋಗದ ವಸ್ತುವನ್ನಾಗಿ ಬಳಸಿ ಬಿಸಾಡುವ ಪದ್ಧತಿಯನ್ನು ತೊಲಗಿಸಿ, ಅದಕ್ಕೆ ಅಂತ್ಯ ಹಾಡಿ ಹೊಸ ಜೀವನಕ್ಕೆ ಮುನ್ನುಡಿ ಬರೆಯುತ್ತಾಳೆ ಈ ರುಖಿಯಾ.
ಇಂದಿಗೂ ಧರ್ಮದ ಹೆಸರಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರಗಳು ನೂರಾರು. ಅಮಾಯಕ ಹೆಣ್ಣು ಮಕ್ಕಳ ಬಾಳು ಕಾಮಾಂಧ ಪುರುಷರಿಗೆ ಬಲಿಯಾಗುವುದನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಿದೆ. ಹೆಣ್ಣು ಮಕ್ಕಳು ಸಮಯ ಬಂದಾಗ ಸಮಸ್ಯೆಯನ್ನೆದುರಿಸಲು ಸಿದ್ಧರಾಗಬೇಕೆಂದು ಮನಸ್ಸಿಗೆ ನಾಟುವಂತೆ ಈ ಚಿತ್ರೀಕರಿಸಿದ್ದಾರೆ. ‘ಮುನ್ನುಡಿ’ - ಎಲ್ಲರೂ ಅಗತ್ಯವಾಗಿ ನೋಡಲೇಬೇಕಾದಂತಹ ಸಿನಿಮಾ.

- ಉಷಾಗಂಗೆ     

ಕವನ - ಸೋಲು –ಗೆಲುವು



ದಿನಕರನುದಯದಿ ಹರಿವುದು ತಿಮಿರವು ಭರದೀ
ಭ್ರಮರವು ಬಯಸುತ ಹಾರುವುದಾತುರದೀ|
ಮೊರೆಯುತ ಸ್ವಾಗತ ಗೀತೆಯ ಹಾಡುವ ಪಕ್ಷೀ
ಸಾರುತ ಬರುವುದು ಉದಯದ ರವಿಯಕ್ಷೀ||

ಸಮರವ ಮುಗಿಸುತ ಜಯದಿಂ ಬಂದಾ ರವಿಗೆ
ಜಯಮಾಲೆಯು ಬೆಲ್ವಕ್ಕಿಯು ಹಾರುವ ರೀತಿಗೆ|
ನಲವಿಂ ಕಿರಣದಿ ಹೊಳೆಯುತ ಬರುವಾ ರವಿಗೆ
ಕೆಂಬಣ್ಣವೇ ದಿಗ್ವನಿಯು ಹಿಡಿದಾ ದೀವಿಗೆ||

ಸಮರವು ನಡೆವುದು ತಿಮಿರಕು ರವಿಗೂ ದಿನವೂ
ಸೋಲೊಬ್ಬರಿಗೊಬ್ಬರಿಗಾಗುವುದೂ ಗೆಲುವೂ|
ಏರುವ ರವಿಯೇ ಸಾರುತ ಬರುವನು ಕಿರಿಯಾ
ತೋರಿಸಿ ಜಗಕೆ ಸೋಲಿನ ಬದುಕಿಗೆ ಗೆಲುವಾ ||


- ಗಂಗಾಧರಯ್ಯ ಜಿ    

ಪುಸ್ತಕ ಪ್ರೀತಿ - ವೈಕುಂಠನ ಉಯಿಲು



ಬಂಗಾಳದ ಸುಪ್ರಸಿದ್ಧ ಲೇಖಕರಾದ ಶರತ್ಚಂದ್ರ ಚಟರ್ಜಿಯವರ ಹೆಸರು ಕನ್ನಡಿಗರಿಗೆ ಸುಪರಿಚಿತವಾಗಿದೆ. ಅವರ ಎಲ್ಲಾ ಕಾದಂಬರಿಗಳನ್ನು ಮತ್ತು ಕಥೆಗಳನ್ನು ಕನ್ನಡದ ಬೇರೆ ಬೇರೆ ಬರಹಗಾರರು ಹಲವಾರು ದಶಕಗಳ ಹಿಂದೆಯೇ ಅನುವಾದಿಸಿದ್ದಾರೆ. ಸ್ತ್ರೀಯರ ಸಮಸ್ಯೆಗಳ ಬಗ್ಗೆ ಮಾರ್ಮಿಕವಾಗಿ ಚಿತ್ರಿಸಿರುವ ಶರತ್‍ರನ್ನು ಸ್ತ್ರೀವಾದಿ ಬರಹಗಾರರೆನ್ನಲಾಗಿದೆ. ಬಂಗಾಳದ ಸ್ವಾತಂತ್ರ್ಯಪೂರ್ವ ದಿನಗಳ ಸಾಮಾಜಿಕ ಸಮಸ್ಯೆಗಳ ವಿರುದ್ಧ ಪ್ರತಿಭಟಿಸಲು ತಮ್ಮ ಲೇಖನಿಯನ್ನು ಅತ್ಯಂತ ಯಶಸ್ವಿಯಾಗಿ ಬಳಸಿದ ಶರತ್‍ರು ಭಾರತದ ನವೋದಯ ಚಳುವಳಿಯ ಪ್ರಮುಖ ವ್ಯಕ್ತಿಗಳಲ್ಲೊಬ್ಬರು. ವ್ಯಕ್ತಿಗಳ ಪಾತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಅರ್ಥೈಸಿ, ಅದಕ್ಕೆ ತಕ್ಕಂತೆ ಅದನ್ನು ಚಿತ್ರಿಸುವ ಅವರ ಶೈಲಿ ಅದ್ಭುತವಾದದ್ದು, ಅನನ್ಯವಾದದ್ದು. ಅವರ ಕಾದಂಬರಿಗಳನ್ನು ಒಮ್ಮೆ ಕೈಗೆತ್ತಿಕೊಂಡರೆ ಅದನ್ನು ಮುಗಿಸುವವರೆಗು ಕೆಳಗಿಳಿಸುವ ಮನಸ್ಸಾಗುವುದಿಲ್ಲ. ಜೊತೆಗೆ, ಕಾದಂಬರಿ ಮುಗಿಸಿದ ನಂತರ ವ್ಯಕ್ತಿಯನ್ನು ಅದರ ಬಗ್ಗೆ ವಿಚಾರ ಮಾಡುವಂತೆ, ಅದರಲ್ಲಿ ಬರುವ ಉತ್ಕೃಷ್ಟ ಪಾತ್ರಗಳಲ್ಲಿ ತಾವು ಒಂದಾಗುವಂತೆ ಮಾಡುತ್ತದೆ.
ಪ್ರಸ್ತುತ ಕಾದಂಬರಿ “ವೈಕುಂಠನ ಉಯಿಲು” ವ್ಯಕ್ತಿಗಳ ನಡುವಿನ ಮಧುರ ಸಂಬಂಧಗಳ, ಸರಸ-ವಿರಸಗಳ, ನೋವು-ನಲಿವುಗಳ, ವೇದನೆ-ಸಂವೇದನೆಗಳ, ಅದರಲ್ಲೂ ತಾಯಿ-ಮಗನ, ಮಲತಾಯಿ-ಮಲಮಗನ, ಅಣ್ಣ-ತಮ್ಮನ, ಮತ್ತು ಗಂಡ-ಎರಡನೆಯ ಹೆಂಡತಿಯ ನಡುವಿನ ಆಂತರಿಕ ಭಾವನೆಗಳ ವ್ಯಕ್ತಿಚಿತ್ರಣದ ಪ್ರತಿಬಿಂಬವಾಗಿದೆ.
ಶರತ್‍ರು ಈ ಕಾದಂಬರಿಯಲ್ಲಿ ಬಹಳ ಸೊಗಸಾಗಿ ವೈಕುಂಠ ಮಜುಮದಾರನ ಹಾಗೂ ಆತನ ಸಂಸಾರದ ಎಳೆಎಳೆಯನ್ನು ಬಿಚ್ಚಿಟ್ಟಿದ್ದಾರೆ. ವೈಕುಂಠ ಮಜುಮದಾರನಿಗೆ ಇಬ್ಬರು ಗಂಡುಮಕ್ಕಳು. ಒಬ್ಬ ಗೋಕುಲ, ಮತ್ತೊಬ್ಬ ವಿನೋದ. ಭವಾನಿ ವೈಕುಂಠನಿಗೆ ಎರಡನೆ ಪತ್ನಿಯಾಗಿದ್ದು, ಗೋಕುಲನ ತಾಯಿ ತೀರಿಕೊಂಡಾಗ ಆಕೆಯನ್ನು ಮಗನ ಯೋಗಕ್ಷೇಮಕ್ಕಾಗಿ ವಿವಾಹವಾಗಿದ್ದ. ಅವನು ಯಾವ ಉದ್ದೇಶವಿಟ್ಟುಕೊಂಡು ಮರು ವಿವಾಹವಾಗಿದ್ದನೋ ಅದು ಫಲಿಸಿತ್ತು. ಭವಾನಿ ಎಂದೂ ಗೋಕುಲನಿಗೆ ಮಲತಾಯಿಯ ರೀತಿ ಆರೈಕೆ ಮಾಡಿರಲಿಲ್ಲ.  ತನ್ನ ಮಗನಿಗಿಂತ ಹೆಚ್ಚಾಗಿಯೆ ಪ್ರೀತಿ ವಾತ್ಸಲ್ಯ ತೋರುತ್ತಿದ್ದಳು.
 ಗಂಡ ಬಹಳ ಕಷ್ಟಪಟ್ಟು ಸಾಕಷ್ಟು ಆಸ್ತಿ ಸಂಪಾದಿಸಿದ್ದನು. ಗೋಕುಲ ಓದಿನಲ್ಲಿ ಹಿಂದೆ ಇದ್ದ. ವಿನೋದ ಬಹಳ ಮುಂದೆ. ಹಿರಿಯ ಮಗ ಅನುತ್ತೀರ್ಣನಾದಾಗ ಗೋಕುಲನ ಶಾಲಾ ಮಾಸ್ತರರು ಬಂದು ತಾಯಿಯ ಮುಂದೆ ವಿನೋದನನ್ನು ಹೊಗಳಿ, ಗೋಕುಲನನ್ನು ತೆಗಳುತ್ತಾರೆ. ತಾಯಿ ಗೋಕುಲನನ್ನು ತನ್ನ ಎದೆಗವಚಿಕೊಂಡು ‘ಮುಂದಿನ ವರ್ಷ ಚೆನ್ನಾಗಿ ಓದುತ್ತಾನೆ ಬಿಡಿ,’ ಎನ್ನುತ್ತಾಳೆ. ಮಲತಾಯಿ ಎಲ್ಲಿಯಾದರೂ ಇಷ್ಟೊಂದು ಪ್ರೀತಿಸಲು ಸಾಧ್ಯವೇ ಎಂದುಕೊಂಡ ಮಾಸ್ತರರು, “ಅಲ್ಲಮ್ಮ, ನಿಮ್ಮ ಹುಡುಗ ಎಷ್ಟು ದಡ್ಡ ಎಂದರೆ ಎಲ್ಲರೂ ಕಾಪಿ ಮಾಡುತ್ತಿದ್ದರು. ನಾನು ಸನ್ಹೆ ಮಾಡಿ ಅವನಿಗೆ ಹೇಳಿದೆ. ಆದರೂ ಅವನು ಆ ಕೆಲಸ ಮಾಡಲಿಲ್ಲ, ದಡ್ಡ” ಎಂದರು. ತಾಯಿ ಗೋಕುಲನನ್ನು ಆ ಬಗ್ಗೆ ಕೇಳಿದಾಗ “ಪರೀಕ್ಷೆಯ ಹಿಂದಿನ ದಿನವೇ ಹೆಡ್ ಮಾಸ್ಟರ್ ಬಂದು ಕಾಪಿ ಮಾಡುವುದು ತಪ್ಪು ಎಂದು ಹೇಳಿದ್ದರಮ್ಮ, ಅದಕ್ಕೆ ಮಾಡಲಿಲ್ಲ” ಎಂದು ಮುಗ್ಧವಾಗಿ ಉತ್ತರಿಸಿದ. ಹೊರಗಿನಿಂದಲೇ ತಂದೆ ಇದೆಲ್ಲವನ್ನು ಕೇಳುತ್ತಿದ್ದರು.
ಆ ರಾತ್ರಿಯೇ ವೈಕುಂಠ ತನ್ನ ಹೆಂಡತಿಯ ಹತ್ತಿರ ಮಾರನೆ ದಿನದಿಂದ ಗೋಕುಲನನ್ನು ಅಂಗಡಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ. ಭವಾನಿ “ಇಲ್ಲ ಬಿಡಿ ಈ ಬಾರಿ ಅವನು Sಂಡಿತ ಚೆನ್ನಾಗಿ ಓದಿ ಪಾಸಾಗುತ್ತಾನೆ” ಎಂದಳು. ಅದಕ್ಕೆ ವೈಕುಂಠ “ನಿನ್ನ ಕಿರಿಯ ಮಗ ಚೆನ್ನಾಗಿ ಓದಬಹುದು, ಆದರೆ ಅವನು ನಿನ್ನನ್ನು ನೋಡಿಕೊಳ್ಳುತ್ತಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಇವನಂತೂ ನಿನ್ನನ್ನು, ಅವನ ತಮ್ಮನನ್ನು ಕೈಬಿಡುವುದಿಲ್ಲವೆಂದು ನನಗೆ ಗೊತ್ತಿದೆ” ಎನ್ನುತ್ತಾನೆ. ಭವಾನಿ “ವ್ಯಾಪಾರದಲ್ಲಿ ಮೋಸ ಮಾಡುತ್ತಾರೆ, ಇವನಂತೂ ಮೊದಲೇ ಅಷ್ಟು ಬುದ್ಧಿವಂತನಲ್ಲ, ಹೇಗೋ ಏನೋ” ಎಂದಾಗ, ವೈಕುಂಠ “ನಿನ್ನ ಮಗ ಈ ಚಿಕ್ಕ ವಯಸ್ಸಿನಲ್ಲಿಯೀ ಎಂತಹ ಆಮಿಷದಿಂದ ಪಾರಾಗಿದ್ದಾನೆ ಎಂದು ನಿನಗೆ ತಿಳಿಯದು. ಬೇರೆಯವರು ಮೋಸ ಮಾಡಿದರೆ ಸ್ವಲ್ಪ ನಷ್ಟವಾಗುತ್ತೆ ನಿಜ, ಆದರೆ ಇವನಂತೂ ಯಾರಿಗೂ ಮೋಸ ಮಾಡುವವನಲ್ಲ. ಹಾಗಾಗಿ ವ್ಯಾಪಾರದ 14 ಆಣಿ ಕಲಿತಿದ್ದಾನೆ, ಇನ್ನು ಉಳಿದ 2 ಆಣೆ ನಾನು ಹೇಳಿಕೊಡುತ್ತೇನೆ” ಎಂದು ಅಂಗಡಿಗೆ ಕರೆದುಕೊಂಡು ಹೋದ. ಗೋಕುಲ ಹಿಂದಿನ ರಾತ್ರಿಯೇ ಈ ಬಾರಿ ಚೆನ್ನಾಗಿ ಓದುತ್ತೇನೆಂದು ಪ್ರಮಾಣ ಮಾಡಿಕೊಂಡಿದ್ದ. ಆದರೆ ತಂದೆ ಕರೆದ ತಕ್ಷಣ ಎದುರಾಡದೆ ತಂದೆಯ ಜೊತೆ ಅಂಗಡಿಗೆ ಹೋದ.
ಕೆಲವೇ ವರ್ಷಗಳಲ್ಲಿ ವ್ಯಾಪಾರದಲ್ಲಿ ಪಳಗಿದ ಗೋಕುಲ ಅಂಗಡಿಯನ್ನು ಸುಧಾರಿಸಿದ. ತಮ್ಮ ಎಂ.ಎ ಪದವಿಗೆ ಕಲ್ಕತ್ತಾಗೆ ತೆರಳಿದ. ಗೋಕುಲನ ತಂದೆ ವಯಸ್ಸಾಗಿ ಹಾಸಿಗೆ ಹಿಡಿದರು. ವಿನೋದನಿಗೆ ವಿಚಾರ ಮುಟ್ಟಿದರೂ ಅವನು ಹಿಂತಿರುಗಲಿಲ್ಲ. ಆಗ ಚಿಂತಾಕ್ರಾಂತನಾದ ವೈಕುಂಠ ಹೆಂಡತಿಯನ್ನು ಕುರಿತು ಹಿರಿಯವನಿಗೆ ಸಂಪೂರ್ಣ ಆಸ್ತಿ ನೀಡುವಂತೆ ಉಯಿಲು ಬರೆಯುವ ಉದ್ದೇಶ ತಿಳಿಸಿ, ಮುಂದೆ ತಾನು ಸತ್ತಾಗ ಇವನೇ ನಿನ್ನನ್ನು ಮತ್ತು ತನ್ನ ತಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳುವನು. ವಿನೋದ ಕೆಟ್ಟ ಚಟಗಳಿಗೆ ಬಲಿಯಾಗಿದ್ದು ಆಸ್ತಿಯನ್ನು ಹಾಳು ಮಾಡುತ್ತಾನೆಂದು ಹೇಳಿ, ಆಕೆಯ ಸಾಕ್ಷಿಯೊಂದಿಗೆ ಉಯಿಲು ಬರೆದು ತೀರಿಕೊಂಡನು. 
ಭವಾನಿ ತುಂಬಾ ಸಹೃದಯಿ, ವಾತ್ಸಲ್ಯಮಯಿ, ಶಾಂತಸ್ವಭಾವ ಹಾಗೂ ಸಹನಶೀಲಳು. ಗಂಡನ ಸಾವಿನಿಂದ ಆಘಾತಕ್ಕೊಳಗಾದಳು. ಜೊತೆಗೆ ತನ್ನ ಮಗ ಎಲ್ಲಿ ಹುಡುಕಿದರೂ ಸಿಗ¯ಲ್ಲ ಮತ್ತು ಮನೆಗೂ ಬರಲಿಲ್ಲ ಎಂದು ಚಿಂತಾಕ್ರಾಂತಳಾದಳು. ತಮ್ಮ ಬರಲಿಲ್ಲವೆಂದು ವ್ಯಾಕುಲಗೊಂಡ ಗೋಕುಲ ದಿನೇ ದಿನೇ ಕೋಪಿಷ್ಟನಾಗುತ್ತಾ ಹೋದ. ಊರಿನವರ ಚುಚ್ಚು ಮಾತುಗಳಿಂದ ತಮ್ಮನ ಆಸ್ತಿಯನ್ನು ಕಸಿದುಕೊಂಡ ಕಳ್ಳ, ವಂಚಕನೆಂದು ಬೆರಳು ಮಾಡಿ ತೋರಿಸಿದಾಗ ತಾಯಿಯ ಮೇಲೆ ಎಗರಾಡುತ್ತಿದ್ದನು. “ನೀನೇಕೆ ಉಯಿಲಿಗೆ ಸಹಿ ಮಾಡಿದೆ. ಈಗ ನೋಡು ತಮ್ಮ ಮುನಿಸಿಕೊಂಡು ಅದಕ್ಕಾಗಿಯೇ ಬರುತ್ತಿಲ್ಲ” ಎನ್ನುತ್ತಿದ್ದನು. 
  ಹೇಗೋ ಏನೋ ತಂದೆಯ ಶ್ರಾದ್ಧಕ್ಕೆಂದು ವಿನೋದ ಮನೆಗೆ ಹಿಂದಿರುಗುತ್ತಾನೆ. ಆದರೆ ಮನೆಯಲ್ಲಿ ಆಳುಕಾಳುಗಳು ಬಿಟ್ಟು ಅವನನ್ನು ಯಾರೂ ಮಾತನಾಡಿಸಲಿಲ್ಲ. ತುಂಬಾ ಬೇಸರದಿಂದ ಕೋಣೆಯಲ್ಲಿ ಕುಳಿತಿರುವಾಗ ಗೋಕುಲ ಅವನೆಡೆಗೆ ಬಂದು ಆಳುಗಳಿಗೆ ಹೇಳುತ್ತಾನೆ- “ನನ್ನ ತಮ್ಮ ಯಾರೂ ಓದದ್ದನ್ನು ಓದಿ ಮೆಡಲ್ ಪಡೆದಿದ್ದಾನೆ. ಅವನು ಬರೀ ಇಂಗ್ಲೀಷ್‍ನಲ್ಲೇ ಮಾತನಾಡುತ್ತಾನೆ. ನೋಡು ಅವನು ಓದಿ ಓದಿ ಬಡವನಾಗಿದ್ದಾನೆ ಅವನಿಗೆ ಎಣ್ಣೆ, ನೀರು,  ತುಪ್ಪ  ಬೇಕಾದ ಹಣ್ಣು ಹಂಪಲುಗಳ ಊಟ ಮಾಡಿ ಬಡಿಸು. ನಂತರ ಶ್ರಾದ್ಧಕ್ಕೆ ಬೇಕಾದ ಸಕಲ ಸಿದ್ಧತೆಗಳು ಅವನೇ ನೋಡಿಕೊಳ್ಳಲಿ. ತಗೋ, ಈ ಕಬ್ಬಿಣದ ಪೆಟ್ಟಿಗೆ ಬೀಗದ ಕೈ ಕೊಡು” ಎಂದು ಹೇಳಿ ಕಣ್ಣಲ್ಲಿ ಮಿಂಚಿ ಮರೆಯಾದ ಭಾಷ್ಪದೊಂದಿಗೆ ತೆರಳಿ ಬಿಡುತ್ತಾನೆ. ಇದು ಗೋಕುಲನಿಗೆ ಅವನ ತಮ್ಮನ ಮೇಲೆ ಇದ್ದ ಆಂತರಿಕ ಪ್ರೀತಿಗೆ ಸಾಕ್ಷಿ. 
ಆದರೆ ವಿನೋದ ಆ ಜವಾಬ್ದಾರಿ ವಹಿಸಲು ನಿರಾಕರಿಸಿದಾಗ ಮತ್ತೆ ಗೋಕುಲ ಕೋಪಗೊಳ್ಳುತ್ತಾನೆ. ಹಾಗೆ ದಿನಗಳು ಉರುಳಿದಂತೆ ಶ್ರಾದ್ಧಕ್ಕೆಂದು ಬಂದ ಗೋಕುಲನ ಮಾವ ಹಾಗೂ ವಿನೋದನ ಮೇಷ್ಟ್ರು ದಯಾಳ್ ಬ್ಯಾನರ್ಜಿ ಇಬ್ಬರ ಕಿವಿ ಊದುತ್ತಾರೆ. ಅದರಲ್ಲೂ ವಿನೋದ ಗೋಕುಲನ ಮೇಲೆ ದಾವೆ ಹಾಕಲು ಪ್ರೇರೇಪಿಸುತ್ತಾನೆ. 
ಗೋಕುಲನ ಮಾವ ಅಂಗಡಿಯಲ್ಲಿದ್ದ ಬಹಳ ಹಳೆಯ ನಂಬಿಕಸ್ತ ಆಳನ್ನು ತೆಗೆದುಹಾಕಿ ಅಂಗಡಿಯನ್ನು ಆಕ್ರಮಿಸಿಕೊಳ್ಳುತ್ತಾನೆ. ಆ ಆಳು ತಾಯಿಯ ಬಳಿ ಹೋದಾಗ ತಾಯಿ ಗೋಕುಲನ ಬಳಿ ಬಂದು, “ಆಳು ಚಕ್ರವರ್ತಿ ಅಂಗಡಿಗೆ ಹೋಗಲಿ. ಬೀಗದ ಕೈ ಮತ್ತು ಲೆಕ್ಕದ ಪುಸ್ತಕ ಕೊಡು. ಬೀಗರು ಕಾರ್ಯಕ್ರಮಕ್ಕೆ ಬಂದವರು ಅದನ್ನು ಮುಗಿಸಿಕೊಂಡು ಹೋಗಲಿ, ನಮ್ಮ ವ್ಯವಹಾರದಲ್ಲಿ ತಲೆ ಹಾಕುವುದು ಬೇಡ” ಎಂದು ಹೇಳಿದ ತಕ್ಷಣ ತಾಯಿಯ ಆಜ್ಞೆಯನ್ನು ಪಾಲಿಸುತ್ತಾನೆ. ಹೆಂಡತಿ ಎಷ್ಟೇ ಗೋಳಾಡಿದರೂ ತಾಯಿಯ ಮಾತನ್ನು ಧಿಕ್ಕರಿಸುವುದಿಲ್ಲ. 
ಆದರೆ ಸಂದರ್ಭಗಳು ಬಹಳ ವಿಚಿತ್ರ ರೀತಿಯಲ್ಲಿ ಬೆಳೆದು ಗೋಕುಲನ ಮಾವ ತಾಯಿ ಮಗನನ್ನು ಮನೆಯಿಂದ ಓಡಿಸುವಂತೆ ತಿಳಿಸಿ ಸಫಲನಾಗುತ್ತಾನೆ. ಈ ಮಧ್ಯೆ ವಿನೋದ ತಾಯಿಯನ್ನು ಮನೆ ಮಾಡಿ ಕರೆದೊಯ್ಯುವಾಗ ಗೋಕುಲನ ಹೃದಯ ಹಿಂಡಿ ಹಿಪ್ಪೆಯಾಗಿ ಛಿಧ್ರವಾಗುತ್ತದೆ. ತಾಯಿಯನ್ನು ಕಳುಹಿಸಲಾಗದೆ ಪ್ರತಿದಿನ ಒಂದೊಂದೆ ಕಾರಣ ಒಡ್ಡುತ್ತಾ, ಏಕಾದಶಿ, ದ್ವಾದಶಿ, ತ್ರಯೋದಶಿ, ಎಂದು ಮುಂದೂಡುತ್ತಿರುತ್ತಾನೆ. ಇದೆಲ್ಲಾ ಅವನು ತನ್ನ ತಾಯಿಯ ಮೇಲಿನ ಅಕ್ಕರೆಯಿಂದ ಮಾಡುತ್ತಿದ್ದ ಪರಿ. 
ಆದರೆ ವಿನೋದ ತಾಯಿಯನ್ನು ಕರೆದುಕೊಂಡು ಬೇರೆ ಮನೆಗೆ ಹೋದಾಗ, ಒಂದು ದಿನ ಅಲ್ಲಿಗೆ ಹೋದ ಗೋಕುಲ ತಮ್ಮನಿರುವುದು ಗೊತ್ತಿಲ್ಲದೆ ಕೆಲಸದವಳೊಂದಿಗೆ, “ಅಪ್ಪನ ನಿಜವಾದ ಉಯಿಲು ಅಮ್ಮನನ್ನು ಕೊನೆಯವರೆಗೂ ನಾನು ನೋಡಿಕೊಳ್ಳಬೇಕೆಂದು. ಈ ಆಸ್ತಿಯಲ್ಲ. ನನ್ನ ತಮ್ಮ ಯಾವಾಗ ಸರಿ ಹೋಗುತ್ತಾನೋ, ಯಾವಾಗ ಅವನಿಗೆ ಆಸ್ತಿಯನ್ನು ಕೊಡುತ್ತೇನೋ ಎಂದು ಕಾದಿದ್ದೇನೆ,” ಎನ್ನುತ್ತಾನೆ. 
ಒಮ್ಮೆ ಆಳು ಚಕ್ರವರ್ತಿ ಬಂದಾಗ ವಿನೋದ ಅವನನ್ನು ಗೋಕುಲನ ಮಾವನ ದರ್ಬಾರು ಹೇಗೆ ನಡೆಯುತ್ತಿದೆ ಎಂದು ಕೇಳುತ್ತಾನೆ. ಅದಕ್ಕೆ ಆಳು “ಎಲ್ಲಿ ಚಿಕ್ಕರಾಯರೇ, ಅಮ್ಮಾವ್ರು ಹೇಳಿದ ಮೇಲೆ ಅವರು ಅಂಗಡಿಯ ಕಡೆ ಬರುವಂತಿಲ್ಲ. ಎಲ್ಲಾ ನಾನೇ ನೋಡಿಕೊಳ್ಳುತ್ತಿದ್ದೇನೆ” ಎನ್ನುತ್ತಾನೆ.
ಎಲ್ಲರೂ ಒಂದು ದಿನ ಒಟ್ಟಾಗಿ ಸೇರಿದ್ದಾಗ ಊರಿನ ಕೆಲವು ಹಿರಿಯರೆಲ್ಲಾ ವಿನೋದನನ್ನು ಆಸ್ತಿ ಕೇಳುವಂತೆ ಪ್ರಚೋದಿಸುತ್ತಾರೆ.  ಗೋಕುಲ ಆಸ್ತಿಯನ್ನು ಲಪಟಾಯಿಸಿರುವನೆಂಬ ಊರವರ ಆರೋಪದಿಂದ ವ್ಯಗ್ರಗೊಂಡ ಗೋಕುಲ ಹೀಗೆನ್ನುತ್ತಾನೆ, “ಹೇ! ನೀನು ನನ್ನ ಕಾಲು ಮುಟ್ಟಿ ಪ್ರಮಾಣ ಮಾಡಿ ಹೇಳು, ನಿನಗೆ ನಾನು ಮೋಸ ಮಾಡುತ್ತಿರುವೆನೆಂದು, ನಾನು ಈ ಕ್ಷಣವೇ ಎಲ್ಲಾ ಆಸ್ತಿಯನ್ನು ನಿನಗೊಪ್ಪಿಸುತ್ತೇನೆ.” 
ವಿನೋದ ನಿಧಾನವಾಗಿ ಬಂದು ಅಣ್ಣನ ಕಾಲು ಮುಟ್ಟಿ “ಹೌದಣ್ಣ, ಇಂತಹ ಸಮಯ ಮತ್ತೆ ಬಾರದು. ನಾನು ನಿನ್ನ ಮೇಲೆ ಪ್ರಮಾಣ ಮಾಡಿ ಹೇಳುತ್ತಿದ್ದೇನೆ, ಇನ್ನೆಂದೂ ಮದ್ಯವನ್ನು ಮುಟ್ಟುವುದಿಲ್ಲ” ಎನ್ನುತ್ತಾನೆ.
     ಕೌಟುಂಬಿಕ ಸಂಬಂಧಗಳು ಹಾಳಾಗುತ್ತಿರುವ ಈ ದಿನಗಳಲ್ಲಿ ಈ ಪುಸ್ತಕ ನಮ್ಮ ಕಣ್ಣನ್ನು ತೆರೆಸುತ್ತದೆ. ಅಣ್ಣತಮ್ಮಂದಿರ ಮಧುರ ಸಂಬಂಧ, ಮಲತಾಯಿ - ಮಲಮಗನ ನಡುವೆ ಇರುವ ಪ್ರೀತಿಯನ್ನು ನಮ್ಮ ಮುಂದಿರಿಸುತ್ತದೆ.       
ಕೇವಲ ಪದವಿಗಳನ್ನು ಪಡೆದರೆ ಸಂಸ್ಕೃತಿಯನ್ನು ಪಡೆಯಲಾಗುವುದಿಲ್ಲವೆಂದು ವಿನೋದನ ಪಾತ್ರದ ಮೂಲಕ, ಅವಿದ್ಯಾವಂತನಾದರೂ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬಹುದೆಂಬುದನ್ನು ಗೋಕುಲನ ಮೂಲಕ ಚಿತ್ರಿಸಿದ್ದಾರೆ. ಆದರೆ ವಿದ್ಯೆಯ ಮಹತ್ವವನ್ನು ಎತ್ತಿಹಿಡಿಯಲು ಗೋಕುಲನ ಮೂರ್ಖತನವನ್ನು ತೋರಿಸುತ್ತಾರೆ. 
ಹೆಂಡತಿಗಾಗಿ ತಾಯ್ತಂದೆಯರನ್ನು ದೂರಮಾಡಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಹೆಂಡತಿ, ಮಾವನ ಮಾತನ್ನು ಕೇಳದೆ ತಾಯಿಯ ಮಾತಿಗೆ ಮನ್ನಣೆ ನೀಡುವ ಗೋಕುಲ ನಮ್ಮ ಮುಂದೆ ಆದರ್ಶವಾಗಿ ನಿಲ್ಲುತ್ತಾನೆ. 
ಯಾವತ್ತಿಗೂ ಒಳ್ಳೆಯತನವೇ ರಾರಾಜಿಸುತ್ತದೆ ಎಂಬುದನ್ನು ಅಮೋಘವಾಗಿ ಚಿತ್ರಿಸಿರುವ ಶರತ್‍ರ ಕಾದಂಬರಿಯನ್ನು ನಮಗೆ ಓದಲು ಅವಕಾಶವಾಗುವಂತೆ ಕನ್ನಡಕ್ಕೆ ಅನುವಾದ ಮಾಡಿರುವ ಹೆಚ್.ಕೆ. ವೇದವ್ಯಾಸಾಚಾರ್ಯರವರನ್ನು ನಾವು ಅಭಿನಂದಿಸಲೇಬೇಕು. ಆ ಸವಿಯನ್ನು ಸವಿಯಲು ನಾವೆಲ್ಲರೂ ಒಮ್ಮೆಯಾದರೂ ಆ ಕಾದಂಬರಿಯನ್ನು ಓದಲೇಬೇಕು. 
 ಕಥೆ ಸರಳವಾದರೂ ಅದನ್ನು ಓದುಗರಿಗೆ ಒಂದಷ್ಟು ನಗೆ, ಒಂದಷ್ಟು ನೋವು ದು:ಖಗಳೊಂದಿಗೆ ಲೇಖಕರು ಮೂಡಿಸಿರುವ ರೀತಿ, ಬಳಸಿರುವ ಭಾಷೆಗೆ ನನ್ನ ಮೆಚ್ಚುಗೆ,  ಅಭಿನಂದನೆ ಇದೆ. ನಿಮ್ಮದು .........? ಓದಿ ಉತ್ತರಿಸಿ. 
   
 - ಜಮುನಾ ವಿ