Pages

ಅನುವಾದಿತ ಕವಿತೆ - ನನ್ನಮ್ಮನಿಗೊಂದು ಕಡೆಯ ಪತ್ರ

2014ನೆ ಇಸವಿಯಲ್ಲಿ  ಇರಾನಿಯನ್ ಅತ್ಯಾಚಾರ ಸಂತ್ರಸ್ತೆಯೊಬ್ಬರು ಅತ್ಯಾಚಾರಿಯನ್ನು ಕೊಂದ ಆರೋಪದ ಮೇಲೆ ಬಂದನಕ್ಕೆ ಒಳಪಟ್ಟು ಕೊನೆಗೆ ಗಲ್ಲು ಶಿಕ್ಷೆಗೆ ಗುರಿಯಾಗುವಳು.
ಶಿಕ್ಷೆ ಪ್ರಕಟವಾದ ಸಂಧರ್ಭದಲ್ಲಿ ಆಕೆ ತನ್ನ ತಾಯಿಗೆ ಬರೆದ ಪತ್ರದ ಸಾರಾಂಶ)


ಅಮ್ಮ, ನನ್ನಮ್ಮ, ನನ್ಪ ಪ್ರೀತಿಯ ಅಮ್ಮ
ನಾ ಇಂದು ಈ ಪತ್ರ ಬರೆಯುವ ಹೊತ್ತು
ಸರಪಳಿಗಳ ಹಿಂದೆ ಕುಳಿತಿಹೆನು
ಒಬ್ಬೊಂಟಿಯಾಗಿ ಸಾವನು ಎದುರು ನೋಡುತ್ತಾ

ನಾ ಪ್ರೀತಿಸಿದ ನನ್ನಮ್ಮನಿಗೆ
ಈ ಜಗವ ತೊರೆವ ಕೊನೆಯ ಕ್ಷಣದಲ್ಲಿ ಬರೆವ ಪತ್ರ
ನನ್ನ ಮನದಾಳದ ಇಂಗಿತವನ್ನು ಹೇಳುವುದೇ ಆದರೆ, 
ಈ ಹೊತ್ತು ನಿನ್ನೊಂದಿಗೆ ಕಳೆಯಬೇಕೆಂದಿದೆ ಮನ

ಕೈ ಹಿಡಿದು ಮುನ್ನಡೆಸಿ, ಕುಗ್ಗದೆ ಜಗವ ನೋಡುವ ಪರಿ ಹೇಗೆಂದು ಕಲಿಸಿದೆ ನೀನಂದು
ಮುಗ್ಗರಿಸಿ ಎಡವಿದಾಗ ಎಚ್ಚರಿಸಿ ದಾರಿ ತೋರಿ ಬದುಕುವುದ ಕಲಿಸಿದಾಕೆ ನೀ
ಇಂದು, ಈ ನಿನ್ನ ಮಗಳಾದರು ಜಗದ ಮುಂದೆ ಅಪರಾಧಿಯಾಗಿ ನಿಂತಿರುವಳು

ನನ್ನ ಮೇಲೆಗರಿದ ಕಾಮುಕನ ನಾ ಕೊಂದೆ ಎಂದು, 
ಎಲ್ಲರೆದುರು ನನ್ನ ಬೆತ್ತಲಾಗಿಸಿ, 
ನನ್ನ ಕಣ್ಣೀರನ್ನೂ ಲೆಕ್ಕಿಸದೆ ಅಪರಾಧಿಯೆಂದು ಜರಿದು
ನೀಡಿರುವರು ಮರಣದಂಡನೆಯ ಶಿಕ್ಷೆ

ನಾ ಬೇಡಿದೆ, ಕಾಡಿದೆ, 
ಕಾಲು ಹಿಡಿದು ಕಣ್ಣೀರಿಟ್ಟೆ, 
ಕೋಪೋದ್ರಿಕ್ತಳಾದೆ, 
ಕಾರಣ ಕೇಳಿದೆ, ನ್ಯಾಯ ಒದಗಿಸರೆಂದು

ಆದರೆ
ಕಣ್ಣಿಲ್ಲದ, ಕಿವಿಯಿಲ್ಲದ
ಮನವಿಲ್ಲದ ಜನರೆಂದರು
ನಾ ಬದುಕಬಾರದೆಂದು

ನಾ ಜಗದ ನಿಯಮ ಪಾಲಿಸದವಳೆಂದು
ಬದುಕಲು ಅರ್ಹಳಲ್ಲವೆಂದು

ಆದರೆ ಅಮ್ಮ, ನಾ ಕೇಳುವೆ
ನನ್ನ ರಕ್ಷಣೆಗೆ ನಾ ಕಾಮುಕನ ಕೊಂದದ್ದು ತಪ್ಪೆ, 
ಅದಕೆ ಈ ಶಿಕ್ಷೆಯೆ

ನನ್ನ ನೋವು, ಯಾತನೆ, ಕೂಗು ಯಾಕೆ ಕೇಳಿಸಲಿಲ್ಲ ಆ ಮಂದಿಗೆ
ನಾ ಹೆಣ್ಣಲ್ಲವೇ, ನಾ ಮನುಜಳಲ್ಲವೇ 
ನನಗೆ ಬೇಡವೇ ನ್ಯಾಯ
ನನಗಿಲ್ಲವೇ ಜೀವನ
ನನಗಿಲ್ಲವೇ ಆತ್ಮ ಗೌರವ

ನಾ ಮಾಡಿರುವುದು ತಪ್ಪಲ್ಲವೆಂದು ಹೇಳುವೆಯಲ್ಲವೇ ಈ ಜಗಕೆ, 
ಕ್ಷಮಿಸಿವೆಯಾ ಈ ನಿನ್ನ ಮಗಳ ಕೊನೆಯ ಬಾರಿಗೆ
ಕ್ಷಮಿಸುವೆಯಾ 

ಗಿರಿಜಾ ಕೆ ಎಸ್

ಅಮ್ಮ ಜೀವೂಬಾಯಿ ಲಕ್ಷ್ಮಣ ರಾವ್



ಅನಿರೀಕ್ಷಿತವಾಗಿ ನಮ್ಮನ್ನಗಲಿದ ಅಮ್ಮ ಜೀವೂಬಾಯಿ ಲಕ್ಷ್ಮಣ ರಾವ್


ನಮ್ಮ ತಂದೆ ಪ್ರೊ.ಜೆ.ಆರ್.ಲಕ್ಷ್ಮಣ ರಾವ್ ಅವರು ನಿಧನರಾದಾಗ  ಈ ಅಂಕಣದಲ್ಲಿ ಬರೆದಿದ್ದೆ. ಇದಾದ ಕೇವಲ ಏಳೇ ತಿಂಗಳ ನಂತರ ನಮ್ಮ ತಾಯಿಯ ಬಗ್ಗೆಯೂ ಇದೇ ಕಾರಣಕ್ಕೆ ಬರೆಯಬೇಕಾಗಿ ಬಂದದ್ದು ನನ್ನ ದುರಾದೃಷ್ಟ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿಯುತವಾಗಿದ್ದ ಅಮ್ಮನನ್ನು ಮಾತ್ರ ನನ್ನ ಬಾಲ್ಯದಿಂದಲೂ  ನಾನು ಬಲ್ಲೆ. ಇತ್ತೀಚೆಗೆ, ಅಂದರೆ ಎರಡು ಮೂರು ವರ್ಷಗಳಿಂದ ಕೊಂಚ ಬಳಲಿದ್ದರಷ್ಟೆ. ಅವರ ವಯಸ್ಸಿಗೆ ಅದು ಸ್ವಾಭಾವಿಕವೇ. ಅಂದ ಮಾತ್ರಕ್ಕೆ ಹೀಗೆ ದಿಢೀರನೆ ನಮ್ಮನ್ನು ಬಿಟ್ಟು ಹೋಗಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ.

ಅಮ್ಮ ಜನಿಸಿದ್ದು ೧೯೨೭ರ ಜನವರಿ ಒಂದನೆಯ ತಾರೀಕಿನಂದು. ನಮ್ಮ ತಂದೆಯೊಡನೆ ವಿವಾಹವಾದದ್ದು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ. ಅಮ್ಮ ಆಗಷ್ಟೇ ‘ಜ್ಯೂನಿಯರ್ ಬಿ.ಎ.’ ಮುಗಿಸಿದ್ದರು. ಡಿಗ್ರಿ ಪಡೆದುಕೊಳ್ಳಲು ಇನ್ನೊಂದು ವರ್ಷ ‘ಸೀನಿಯರ್ ಬಿ.ಎ.’ ಮಾಡಬೇಕಾಗಿತ್ತು.  ಆದ್ದರಿಂದ ಒಂದು ವರ್ಷ ತಾಯಿಯ ಮನೆಯಲ್ಲಿಯೇ ಇದ್ದುಕೊಂಡು ಕಾಲೇಜಿಗೆ ಹೋಗಿ ೧೯೪೮ ರಲ್ಲಿ ಬಿ.ಎ.ಡಿಗ್ರಿ ಪಡೆದುಕೊಂಡರು. ಬಹುತೇಕ ಹೆಣ್ಣು ಮಕ್ಕಳು ಶಾಲೆಯ ಮೆಟ್ಟಲನ್ನು ಹತ್ತುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಅಮ್ಮ ಕಾಲೇಜು ಮೆಟ್ಟಲು ಹತ್ತಿದ್ದಷ್ಟೇ ಅಲ್ಲ, ವಿವಾಹಾನಂತರವೂ ಕಾಲೇಜಿಗೆ ಹೋಗಿ ಡಿಗ್ರಿ ಪಡೆದುಕೊಂಡು ತಮ್ಮ ಆಸೆ ಪೂರೈಸಿಕೊಳ್ಳುವಂತಾಗಿದ್ದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಹೀಗಾಗಿ ಅಮ್ಮ ಕುಟುಂಬದ ಮೊತ್ತ ಮೊದಲ ಪದವೀಧರರಾದರು.

ಅಮ್ಮ ಓದಿನಲ್ಲಿ ಮಾತ್ರ ಮುಂದಲ್ಲ. ಆಟದಲ್ಲೂ ಮುಂದು. ತಾವು ಓದಿದ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಶಾಟ್ ಪುಟ್, ಜ್ಯಾವಲಿನ್ ಥ್ರೋಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದರು. ವಾಲಿಬಾಲ್, ಬಾಸ್ಕೆಟ್ಬಾಲ್ ಆಡುತ್ತಿದ್ದರು! ಆಡುವಾಗ ಕೈಗೆ ತೊಟ್ಟಿದ್ದ ಗಾಜಿನ ಬಳೆಗಳು ಒಡೆದು ಹೋಗುತ್ತಿದ್ದವಂತೆ.  ಹೆಣ್ಣು ಮಕ್ಕಳ ಕೈ ಎಲ್ಲಾದರೂ ಬೋಳಾಗುವುದುಂಟೆ? ಅದನ್ನು ನೋಡಿದರೆ ಮನೆಯಲ್ಲಿದ್ದ ಇಬ್ಬರು ಅಜ್ಜಿಯರು ಬಯ್ಯುವರೆಂದು ಅದನ್ನು ತಪ್ಪಿಸಿಕೊಳ್ಳಲು ಒಳಗೆ ಓಡಿ ಹೋಗಿ ಬೇರೆ ಬಳೆಗಳನ್ನು ಧರಿಸಿ ಅವರ ಮುಂದೆ ಬರುತ್ತಿದ್ದರಂತೆ. ಇದಲ್ಲದೆ ಅಣ್ಣ ತಮ್ಮಂದಿರೊಡನೆ, ದಾಯಾದಿಗಳೊಡನೆ ಗೋಲಿ, ಬುಗರಿ, ಚಿನ್ನಿ ದಾಂಡುಗಳನ್ನೂ ಆಡುತ್ತಿದ್ದರಂತೆ. ಇವನ್ನೆಲ್ಲ ಅಮ್ಮ ನಮಗೆ ಬಹಳ ಉತ್ಸಾಹದಿಂದ ಹೇಳುತ್ತಿದ್ದರು.

ಚಿಕ್ಕಂದಿನಿಂದಲೂ ಅಮ್ಮನದು ಒಂದು ತರಹ ಸಾಹಸ ಮನೋಭಾವ. ಉದಾಹರಣೆಗೆ ಹೆಣ್ಣು ಮಕ್ಕಳು ‘ಹೊರಗೆ ಕೂಡುವ’ ಅರ್ಥಹೀನ ಪದ್ಧತಿಯ ಕಟ್ಟಾ ವಿರೋಧಿ ಅಮ್ಮ. ಈ ಆಚರಣೆಯನ್ನು ತಮ್ಮ ಮಟ್ಟಿಗೆ ಐವತ್ತರ ದಶಕದಲ್ಲಿಯೇ ನಿಲ್ಲಿಸಿದ ಧೈರ್ಯಸ್ಥೆ ಆಕೆ. ಅಷ್ಟೇ ಅಲ್ಲ, ತಮಗಿಂತ ಕಿರಿಯರಾದ ಹಲವಾರು ಹೆಣ್ಣು ಮಕ್ಕಳಿಗೆ ಧೈರ್ಯ ನೀಡಿ ಅವರೂ ಅದನ್ನು ಕೈ ಬಿಡುವಂತೆ ಮಾಡಿದರು. ಮಡಿ, ಮೈಲಿಗೆ, ಮುಸುರೆ ಎಂಬ ಆಚಾರಗಳೂ ಅಮ್ಮನಿಂದ ದೂರ. ಆದರೆ ಎಲ್ಲ ವಿಷಯಗಳಲ್ಲೂ  ನೈರ್ಮಲ್ಯಕ್ಕೆ ಸಂಬಂಧಿಸಿದಂತೆ  ಮಾತ್ರ ಬಹಳ ಕಟ್ಟುನಿಟ್ಟು. ಅಡುಗೆ ಮನೆ, ಬಚ್ಚಲು ಮನೆಗಳೆಲ್ಲ ಬಹಳ ಸ್ವಚ್ಛವಾಗಿಟ್ಟಿರುತ್ತಿದ್ದರು. ಮನೆಯ ಇತರ ಭಾಗಗಳನ್ನೂ ಒಪ್ಪವಾಗಿಟ್ಟಿರುತ್ತಿದ್ದರು. ಎಲ್ಲ ವಿಷಯಗಳಲ್ಲೂ ಬಹಳ ಅಚ್ಚುಕಟ್ಟು.

ಅತಿಥಿ ಸತ್ಕಾರದಲ್ಲಂತೂ ಅಮ್ಮನದು ಎತ್ತಿದ ಕೈ. ನಮ್ಮ ತಂದೆಯ ಅಸಂಖ್ಯಾತ ಸ್ನೇಹಿತರಿಗೆ ಸ್ವತಃ ಅಡುಗೆ ಮಾಡಿ ಔತಣ ನೀಡಿದ್ದು ಅದೆಷ್ಟು ಬಾರಿಯೋ. ಒಮ್ಮೆ ಸ್ನೇಹಿತರೊಬ್ಬರ ಮನೆಯಲ್ಲಿ ಸುಮಾರು ಮೂವತ್ತು ಜನರನ್ನ ಊಟಕ್ಕೆ ಕರೆದಿದ್ದು, ಬೆಳಿಗ್ಗೆ ಅಡುಗೆಯವರು ಕೈ ಕೊಟ್ಟಾಗ ಅಮ್ಮ ಅವರಿಗೆ ಧೈರ್ಯ ಹೇಳಿ ಅವರ ನೆರವು ಪಡೆದು ತಾವೇ ಅಷ್ಟು ಜನಕ್ಕೆ ಅಡುಗೆ ಮಾಡಿದ್ದರು. ಅಮ್ಮನ ಕೈಯ ಅಡುಗೆ ಅದರಲ್ಲೂ ಹೋಳಿಗೆ, ಚಕ್ಕುಲಿಗಳ ರುಚಿಯನ್ನು ಸವಿದವರು ಮಾತ್ರವೇ ಬಲ್ಲರು. ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಸಹ ನಮ್ಮೆಲ್ಲರ ಸಹಪಾಠಿಗಳ ದೊಡ್ಡ ದಂಡನ್ನೇ ಆಹ್ವಾನಿಸಿ ಎಲ್ಲರಿಗೂ ಬಗೆ ಬಗೆಯ ಊಟ ತಿಂಡಿಗಳ ಸತ್ಕಾರ ಮಾಡಿದ್ದುಂಟು. ಹಾಸ್ಟೆಲ್ಲಿನಲ್ಲಿದ್ದ ನನ್ನ ಸ್ನೇಹಿತೆಯರ ಬಗ್ಗೆ ಕಾಳಜಿ ಪಟ್ಟು ಮನೆಯಲ್ಲಿ ಮಾಡಿದ ತಿಂಡಿಗಳನ್ನು ಸರಬರಾಜು ಮಾಡಿದ ಸಂದರ್ಭಗಳಿಗೆ ಲೆಕ್ಕವೇ ಇಲ್ಲ. ತಮ್ಮ ಮಕ್ಕಳ  ಹಳೆಯ ಸ್ನೇಹಿತರು ಮನೆಗೆ ಬಂದರೆ, ನೆನಪಿಟ್ಟುಕೊಂಡು ಅವರಿಗೆ ಯಾವ ತಿಂಡಿ ಪ್ರಿಯವೋ ಅದನ್ನು ಮಾಡಿ ಕೊಡುತ್ತಿದ್ದರು.  ಮಾನಸ ಗಂಗೋತ್ರಿಯ ಗೆಸ್ಟ್ ಹೌಸಿನಲ್ಲಿ ಇಳಿದುಕೊಂಡಿದ್ದ ನನ್ನ ರಷ್ಯನ್ ಭಾಷೆಯ ಉಪಾಧ್ಯಾಯಿನಿ ಲಿದಿಯ ದುಬಿನ ಅವರಿಗೆ ಅಮ್ಮ ಮಾಡಿದ ಇಡ್ಲಿ, ದೋಸೆ ಬಹಳ ಪ್ರಿಯವಾಗಿದ್ದು, ಅಮ್ಮ ಅವನ್ನು ಮಾಡಿದಾಗಲೆಲ್ಲ ಅವರನ್ನು ಮನೆಗೆ ಕರೆದು ಸತ್ಕರಿಸುತ್ತಿದ್ದರು. ಅಮ್ಮ ಅವರಿಗಾಗಿ ಮೆಣಸಿನ ಕಾಯಿ ಹಾಕದೆ ವಿಶೇಷವಾಗಿ ಬೇರೆಯೇ ಚಟ್ನಿ ಮಾಡುತ್ತಿದ್ದುದು ಅವರಿಗೆ ಬಹಳ ಮೆಚ್ಚುಗೆಯಾಗುತ್ತಿತ್ತು.

ಕೇವಲ ‘ಗಂಡಸರ ಕೆಲಸ’ ಎಂದು ಇಂದಿಗೂ ಜನ ಬಗೆಯುವ ಕೆಲಸಗಳನ್ನೆಲ್ಲ ಅಮ್ಮ ಮಾಡುತ್ತಿದ್ದರು. ಫ಼್ಯೂಸ್ ಹೋದರೆ ಅದನ್ನು ಹಾಕುವುದು, ನಲ್ಲಿ ರಿಪೇ‍ರಿ, ಇಸ್ತ್ರಿ ಪೆಟ್ಟಿಗೆ ರಿಪೇರಿ- ಎಲ್ಲವನ್ನೂ ಅವರೇ ಮಾಡುತ್ತಿದ್ದುದು.  ತಮ್ಮ ಬಟ್ಟೆ ಹೊಲಿಯುವ ಯಂತ್ರವನ್ನು ಅವರೇ ಬಿಚ್ಚಿ ರಿಪೇರಿ ಮಾಡಿಟ್ಟುಕೊಳ್ಳುತ್ತಿದ್ದರು. ಒಮ್ಮೆಯಾದರೂ ಅದನ್ನು ರಿಪೇರಿಗಾಗಿ ಕೊಟ್ಟಿದ್ದಿಲ್ಲ. ಎಲ್ಲ ಬಗೆಯ ತಂತ್ರಜ್ಞಾನಗಳ ಬಗ್ಗೆ ಅಮ್ಮನಿಗೆ ಆಸಕ್ತಿ ಇತ್ತು. ಅಮ್ಮ ಚಿಕ್ಕ ಹುಡುಗಿಯಾಗಿದ್ದಾಗ ಅವರ ತಂದೆಯ ಕಾರ್ಯಾಗಾರದ ಲೇತ್ ನಲ್ಲಿ ತಮ್ಮ ಬುಗುರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದರಂತೆ! ನನ್ನ ತಮ್ಮ ಕೆಲವು ವರ್ಷಗಳ ಹಿಂದೆ ಅಮ್ಮನ ಹುಟ್ಟುಹಬ್ಬಕ್ಕೆ ಸ್ಕ್ರೂ ಡ್ರೈವರ್ ಸೆಟ್ಟನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದು ನೋಡಿದವರಿಗೆಲ್ಲ ತಮಾಷೆ, ವಿಚಿತ್ರ ಎನಿಸಿತ್ತು. ‘ಅಮ್ಮನಿಗೆ ಸೀರೆ ಇತ್ಯಾದಿ ಕೊಡುವುದು ಗೊತ್ತು, ಆದರೆ ಹೀಗೂ ಉಂಟೆ?‘ ಎಂದು! ಅಮ್ಮನಿಗಾದರೋ ಬಹಳ ಸಂತೋಷವಾಗಿಬಿಟ್ಟಿತ್ತು. ಅಣ್ಣ ಎಂದಾದರೂ ಸ್ಕ್ರೂ ಡ್ರೈವರ್ ಹಿಡಿದು ಏನನ್ನಾದರೂ ಮಾಡಹೊರಟರೆ ನಾವು ಮಕ್ಕಳೆಲ್ಲ ಅವರನ್ನು ಹಾಸ್ಯ ಮಾಡುತ್ತಿದ್ದೆವು, "ನಿಮ್ಮ ಕೈಲಿ ಇದು ಸರಿ ಕಾಣುವುದಿಲ್ಲ, ಬಿಡಿ. ಈ ಕೆಲಸ ಅಮ್ಮನಿಗೇ ಸರಿ. ನೀವು ಸ್ಕ್ರೂ ಡ್ರೈವರನ್ನೂ ಪೆನ್ ಹಿಡಿದ ಹಾಗೆ ಹಿಡಿಯುತ್ತೀರಿ" ಎಂದು!

ಅಮ್ಮನಿಗೆ ಓದುವ ಅಭ್ಯಾಸ ಬಹಳವಾಗಿತ್ತು. ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯಗಳನ್ನು ಬಹಳವಾಗಿ ಓದಿಕೊಂಡಿದ್ದರು. ಕನ್ನಡ, ಇಂಗ್ಲಿಷ್ ವ್ಯಾಕರಣಗಳನ್ನು ನನಗೆ ಹೇಳಿಕೊಟ್ಟಿದ್ದೇ ಅಮ್ಮ. ತಾವು ಓದಿದ ಪುಸ್ತಕಗಳಲ್ಲಿನ ವಿಷಯ ಅಥವಾ ಕತೆಗಳನ್ನಾಗಲೀ, ಪತ್ರಿಕೆಯಲ್ಲಿನ ವಾರ್ತೆಗಳನ್ನಾಗಲೀ ಇತರರಿಗೆ ಹೇಳುವುದೆಂದರೆ ಅವರಿಗೆ ಬಹಳ ಪ್ರೀತಿ. ನಾವು ಓದದೆಯೇ ಎಷ್ಟೋ ಪುಸ್ತಕಗಳ ಬಗ್ಗೆ ನಮಗೆ ಗೊತ್ತಾಗಿಬಿಟ್ಟಿರುತ್ತಿತ್ತು.

ತಮ್ಮ ಮನೆಗೆಲಸ, ಜವಾಬ್ದಾರಿಗಳೊಡನೆಯೇ ಅಮ್ಮ ಹಿಂದಿ ‘ವಿಶಾರದ’ ಮಾಡಿಕೊಂಡರು. ಕಾವ್ಯ ವಾಚನ ಕಲಿತು, ಕುಮಾರವ್ಯಾಸ ಭಾರತ ಮುಂತಾದವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು, ಕೆಲವು ಸಭೆಗಳಲ್ಲಿಯೂ ಹಾಡಿದ್ದುಂಟು.  ಕಸೂತಿ, ಸ್ವೆಟರ್ ಹೆಣೆಯುವುದರಲ್ಲೂ ಅಮ್ಮನದು ಎತ್ತಿದ ಕೈ. ತಮ್ಮ ಹೆಣ್ಣು ಮಕ್ಕಳ ಬಟ್ಟೆಗಳನ್ನೆಲ್ಲ ಅಮ್ಮನೇ ಹೊಲಿಯುತ್ತಿದ್ದುದು ಅಷ್ಟೇ ಅಲ್ಲ,  ನಮ್ಮೆಲ್ಲರಿಗೂ ಅವನ್ನು ಕಲಿಯಲು ಉತ್ತೇಜನ ನೀಡಿ, ಅದಕ್ಕೆ ಅವಶ್ಯಕವಾದ ವಸ್ತುಗಳನ್ನೆಲ್ಲ ತಂದುಕೊಡುತ್ತಿದ್ದರು. ಅಷ್ಟೇ ಅಲ್ಲದೆ, ಸುಮಾರು ೭೦ ವರ್ಷ ವಯಸ್ಸಿನಲ್ಲಿ ಫ಼ೆವಿಕ್ರಿಲ್ ಕಂಪನಿಯವರು ನಡೆಸುತ್ತಿದ್ದ ಪೇಂಟಿಗ್ ತರಗತಿಗಳಿಗೆ ಹೋಗಿ ಪೇಂಟಿಂಗ್ ಕಲಿತು, ಮನೆಯಲ್ಲಿ ಬೆಡ್ಶೀಟುಗಳಿಗೆ ಪೇಂಟ್ ಮಾಡಿದ್ದರು.

ಬಡವರ ವಿಷಯದಲ್ಲಿ ಅಮ್ಮನಿಗೆ ಬಹಳ ಕಳಕಳಿ. ಮನೆ ಕೆಲಸದವರಿಗಾಗಲೀ, ಹಾಲಿನವರಿಗಾಗಲೀ, ತಮ್ಮ ಸಂಪಾದನೆಯಲ್ಲಿ ಉಳಿತಾಯ ಮಾಡಲು ಉತ್ತೇಜನ ನೀಡಿ, ಪೋಸ್ಟ್ ಆಫ಼ೀಸ್, ಬ್ಯಾಂಕುಗಳಲ್ಲಿ ಖಾತೆ ತೆಗೆಸಿಕೊಡುತ್ತಿದ್ದರು.  ಬ್ಯಾಂಕಿಗೆ ತಾವು ‘ಗ್ಯಾರಂಟಿ‘ ನಿಂತು ಸಾಲ ಕೊಡಿಸುತ್ತಿದ್ದರು. ಬ್ಯಾಂಕಿನಲ್ಲಿ ಸಾಲಕ್ಕೆ ಬಡ್ಡಿ ಕೊಡಬೇಕಾಗುತ್ತದೆಂದು ಎಷ್ಟೋ ಬಾರಿ ತಾವೇ ಬಡ್ಡಿ ರಹಿತ ಸಾಲ ಕೊಟ್ಟಿದ್ದೂ ಉಂಟು.  ಆರ್ಥಿಕವಾಗಿ ಯಾರೇ ಯಾರನ್ನೂ ಅವಲಂಬಿಸುವಂತಾಗಬಾರದು ಎಂಬುದು ಅವರ ಸ್ಪಷ್ಟ ನಿಲುವು.

ಆಧುನಿಕ ತಂತ್ರಜ್ಞಾನದಿಂದಲೂ ಅಮ್ಮ ದೂರವಿರಲಿಲ್ಲ. ತಮ್ಮ ಎಂಭತೈದನೆಯ ವಯಸ್ಸಿನಲ್ಲಿ iPad ಬಳಸುವುದನ್ನು ಕಲಿತು, ದೂರದಲ್ಲಿರುವ ಮೊಮ್ಮಕ್ಕಳೊಡನೆ ಅಗಾಗ್ಗೆ ಇಮೇಲ್ ವಿನಿಮಯ ಮಾಡಿಕೊಳ್ಳುತ್ತಿದ್ದರು. ಫ಼ೇಸ್ ಬುಕ್ ಗೆ ಹೋಗಿ ಅವರ ಚಟುವಟಿಕೆಗಳನ್ನು ನೋಡಿ ಆನಂದಿಸುತ್ತಿದ್ದರು, ಹೆಮ್ಮೆ ಪಡುತ್ತಿದ್ದರು. ಯೂಟ್ಯೂಬ್ ನಲ್ಲಿ ತಮಗಿಷ್ಟವಾದ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದರು. ತಮ್ಮ ೯೦ನೆಯ ವಯಸ್ಸಿನಲ್ಲಿ ಸಹ ಗೂಗಲ್ ನಿಂದ ಹೊಸ ರೆಸಿಪಿ ನೋಡುತ್ತಿದ್ದರು. ಒಮ್ಮೆ "ಅದೇನೋ ‘ಮೆಕ್ಸಿಕನ್ ರೈಸ್‘ ಅಂತೆ ಗೂಗಲ್ ನಲ್ಲಿ ನೋಡಿ ಮಾಡಿದೆ ಚೆನ್ನಾಗಿತ್ತು" ಎಂದು ಫ಼ೋನಿನಲ್ಲಿ ಹೇಳಿದಾಗ ನನಗೆ ಆಶ್ಚರ್ಯ ಆನಂದ ಹೆಮ್ಮೆಗಳಲ್ಲ ಒಮ್ಮೆಯೇ ಉಂಟಾಗಿದ್ದವು.

ಅಮ್ಮನ ಕೈ ಬಲು ಧಾರಾಳ. ಹಣ ಕಾಸಾಗಲೀ, ಮಾಡಿದ ಅಡುಗೆಯನ್ನಾಗಲೀ ಅವಶ್ಯಕತೆ ಇದ್ದವರಿಗೆ ಉದಾರ ಮನಸ್ಸಿನಿಂದ ಹಂಚುತ್ತಿದ್ದರು. ಹಾಗೆಂದ ಮಾತ್ರಕ್ಕೆ ತೋರಿಕೆಗಾಗಿ ಅಥವಾ ಆಡಂಬರಕ್ಕಾಗಿ ಎಂದೂ ಖರ್ಚು ಮಾಡುತ್ತಿರಲಿಲ್ಲ. ಸೀರೆ ಒಡವೆಗಳ ಹುಚ್ಚು ಅವರಿಗಿರಲಿಲ್ಲ.  ಅಣ್ಣನ ಪ್ರಕಾರ ಅಮ್ಮನ ಈ ಮನೋಭಾವದಿಂದಲೇ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಲು ಸಾಧ್ಯವಾಗಿದ್ದು.

ಅಮ್ಮ ಅಣ್ಣನದು ಆದರ್ಶ ದಾಂಪತ್ಯ. ಇವರದು ಮಾದರಿ ಜೀವನ. ಎಂದೆಂದೂ ಯಾವ ಕಾರಣಕ್ಕೂ ಪರಸ್ಪರ ಮುನಿಸಿಕೊಂಡಿದ್ದಿಲ್ಲ, ಧ್ವನಿ ಏರಿಸಿದ್ದಿಲ್ಲ. ಅಣ್ಣನ ಎಲ್ಲ ಚಟುವಟಿಕೆಗಳಿಗೂ ಅಮ್ಮ ಬೆನ್ನೆಲುಬಾಗಿದ್ದರು. ಅಂತೆಯೇ ಅಣ್ಣ ಸಹ ಅಮ್ಮನ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ಸೂಸುತ್ತಿದ್ದರು, ಬೆಂಬಲಿಸುತ್ತಿದ್ದರು. ಅಮ್ಮನ ಕೈಬರಹ ಬಹು ಸುಂದರವಾಗಿದ್ದು, ಅಣ್ಣನ ಬರಹಗಳನ್ನು ಮುದ್ರಣಕ್ಕೆ ಕಳಿಸಲು ಹಸ್ತಪ್ರತಿಯನ್ನು ನಕಲು ಮಾಡಿಕೊಡುತ್ತಿದ್ದುದುಂಟು. ಅಣ್ಣನ ಉತ್ತೇಜನದಿಂದ ಅಮ್ಮ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಪುಸ್ತಕಗಳು ಎರಡು: ಲಿಯೊಪಾಲ್ಡ್ ಇನ್ಫ಼ೆಲ್ಡ್ ಅವರ ಪುಸ್ತಕ Quest ನ ಅನುವಾದ ‘ಶೋಧ‘ ಹಾಗೂ The autobiography of Charles Darwin ನ ಕನ್ನಡ ಅನುವಾದ ‘ಚಾರ್ಲ್ಸ್ ಡಾರ್ವಿನ್ ಅವರ ಆತ್ಮಕತೆ’. ಇದಲ್ಲದೆ ಅಣ್ಣನೊಂದಿಗೆ ಮಾಡಿದ ಆರ್ನಾಲ್ಡ್ ಕೆಟ್ಲ್ ಅವರ Karl Marx: The founder of modern communismನ ಅನುವಾದ "ಕಾರ್ಲ್ ಮಾರ್ಕ್ಸ್: ಆಧುನಿಕ ಕಮ್ಯುನಿಸಂನ ಸ್ಥಾಪಕ"

ಅಮ್ಮ ಇದೇ ಜುಲೈ ಇಪ್ಪತ್ತಾರರಂದು ನಮ್ಮನ್ನಗಲಿದರು. ವಯಸ್ಸು ತೊಂಭತ್ತೊಂದಾದರೂ ಅವರಿಗೆ ಜೀವನದಲ್ಲಿದ್ದ ಆಸಕ್ತಿ ಹುಮ್ಮಸ್ಸುಗಳು ಯಾವ ರೀತಿಯಲ್ಲಿಯೂ ಕಡಿಮೆಯಾಗಿರಲಿಲ್ಲ. ಯುವಜನರು ಸಹ ನಾಚುವಂತಿತ್ತು. ಈಗ ಎರಡು ತಿಂಗಳ ಮುಂಚೆಯೂ ಸ್ವಲ್ಪ ಸುಸ್ತು ಕಡಿಮೆಯಾದ ನಂತರ ಮೊಮ್ಮಕ್ಕಳಿಗೆ ಹೋಳಿಗೆ ಮಾಡುತ್ತೇನೆ ಎಂದೇ ನಂಬಿದ್ದರು. ಅವರಿಗಿದ್ದ ಭಾವಾತ್ಮಕ ಮನೋಭಾವ, ಮನೋಸ್ಥೈರ್ಯ, ಉತ್ಸಾಹ, ಹುಮ್ಮಸ್ಸು, ಹಲವಾರು ವಿಷಯಗಳ ಬಗ್ಗೆ ಆಸಕ್ತಿ, ಹಾಸ್ಯಪ್ರಜ್ಞೆ ಎಲ್ಲವೂ ಈಗಿನ ಪೀಳಿಗೆಯವರಿಗೆ ಆದರ್ಶಪ್ರಾಯವಾದಂತಹವು


ಅಮ್ಮನ ನೆನಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ 
- ಬೃಂದಾ ಎನ್. ರಾವ್








ಶಾಲಾ ಡೈರಿ - ಅಬ್ರಹಾಂ ಲಿಂಕನ್‌ರವರ ಬರೆದಿದ್ದರೆನ್ನಲಾದ ಪತ್ರ

{ಶಿಕ್ಷಕರೆಲ್ಲರಿಗೂ ಶಿಕ್ಷಕರ ದಿನದ ಶುಭಾಶಯ ಕೋರುತ್ತಾ, ಸಮಾಜ ನಮ್ಮಿಂದ ಏನನ್ನು ಆಶಿಸುತ್ತದೆ ಎಂಬುದನ್ನು ತೋರಿಸುವ ಈ ಕವನವನ್ನು ಕಳಿಸುತ್ತಿದ್ದೇವೆ.}

ತಮ್ಮ ಮಗನ ಶಾಲಾ ಮುಖ್ಯೋಪಾಧ್ಯಾಯರಿಗೆ
ಅಮೇರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ರವರ ಬರೆದಿದ್ದರೆನ್ನಲಾದ ಪತ್ರ


ಗೌರವನೀಯ ಗುರುಗಳೇ,
ನನಗೆ ಗೊತ್ತು, ನನ್ನ ಮಗ ಇದನು ಕಲಿಯಬೇಕೆಂದು -
ಎಲ್ಲರೂ ಸತ್ಯವಂತರಲ್ಲವೆಂದು,
ಎಲ್ಲರೂ ಪ್ರಾಮಾಣಿಕರಲ್ಲವೆಂದು;
ಆದರೆ ಅವನಿಗಿದನೂ ಕಲಿಸಿಕೊಡಿ -
ಪ್ರತಿ ಠಕ್ಕನಿಗೋರ್ವ ಧೀರನಿರುವನೆಂದು,
ಪ್ರತಿ ಸ್ವಾರ್ಥ ರಾಜಕಾರಣಿಗೋರ್ವ
ನಿಸ್ವಾರ್ಥ ನಾಯಕನಿರುವನೆಂದು.

ನನಗೆ ಗೊತ್ತು, ಇದಕೆ ಹೆಚ್ಚು ಸಮಯ ಬೇಕೆಂದು,
ಆದರೂ ಕಲಿಸಿ ಅವನಿಗೆ - ದುಡಿದೊಂದು
ರೂಪಾಯಿ, ದೊರೆತ ಐದಕ್ಕಿಂತ ಮಿಗಿಲೆಂದು.
ಕಲಿಸಿ ಅವನಿಗೆ ಸೋಲುವುದನು,
ಜೊತೆಗೆ ಜಯದಲಿ ಸುಖಿಸುವುದನು.

ಸಾಧ್ಯವಾದರೆ ಕಲಿಸಿ ಅವನಿಗೆ
ದೂರವಿರಿಸಲು ಅಸೂಯೆಯನು.
ಸಾಧ್ಯವಾದರೆ ಕಲಿಸಿ ಅವನಿಗೆ
ಮಂದಹಾಸದ ಮಹತ್ವವನು.
ಕಲಿಯಲತಿ ಬೇಗ - ಪೀಡಕರನು
ಸದೆಬಡಿವುದು ಸುಲಭವೆಂಬುದನು.

ತಿಳಿಸಿರಿ ಅವನಿಗೆ, ಪುಸ್ತಕಲೋಕದ ವಿಸ್ಮಯವನು;
ಜೊತೆಗೆ, ಅರಿಯಲು ಕೊಡಿ ಸಮಯವನು -
ಬಾನಂಗಳದ ಹಕ್ಕಿಗಳನು, ಹಗಲಿನ ದುಂಬಿಗಳನು,
ಹಸಿರು ಬೆಟ್ಟದ ಸುಮಗಳ ನಿತ್ಯನೂತನ ಮರ್ಮವನು.

ಕಲಿಸಿರಿ ಅವನಿಗೆ ಶಾಲೆಯಲಿ
ವಂಚನೆಗಿಂತ ಫೇಲಾಗುವುದೇ ಮೇಲೆಂದು.
ಎಲ್ಲರೂ ತಪ್ಪೆಂದರೂ, ತನ್ನ ವಿಚಾರಗಳಲಿ
ದೃಢ ನಂಬಿಕೆ ಇಡಲೇಬೇಕೆಂದು.

ಕಲಿಸಿರವನಿಗೆ, ಮೃದುಜನರಲಿ ಹಿತವಾಗಿರಬೇಕೆಂದು,
ನಿಷ್ಠುರರಲಿ, ದೃಢತೆ ಬೇಕೆಂದು.
ಕೊಡಿರಿ, ಗೆದ್ದೆತ್ತಿನ ಬಾಲವ ಹಿಡಿವವರನ್ನು
ಹಿಂಬಾಲಿಸದಿರುವ ಅದಮ್ಯ ಶಕ್ತಿಯನು,
ಕಲಿಸಿರಿ ಎಲ್ಲರ ಮಾತನಾಲಿಸುವುದನು;
ಆದರೆ, ಸೋಸಿ ಸತ್ಯದ ಜಾಲರಿಯಲ್ಲದನು,
ಸರಿಯಾದುದನೇ ಸ್ವೀಕರಿಸುವುದನು.

ಕಲಿಸಿರಿ ಅವನಿಗೆ, ನೋವಲೂ ನಗಬೇಕೆಂದೂ,
ಕಣ್ಣೀರಿನಲಿ ಅವಮಾನವಿಲ್ಲೆಂದು.
ಸಿನಿಕರನು ಧಿಕ್ಕರಿಸಬೇಕೆಂದು,
ಅತಿ ಸಿಹಿಮಾತಲಿ ಎಚ್ಚರಿರಬೇಕೆಂದು.
ಕಲಿಸಿರವನಿಗೆ, ಹೆಚ್ಚು ಹಣಕೆ
ಶಕ್ತಿ-ಬುದ್ಧಿ ಬಲ ಮಾರಿಕೊಳಬಹುದೆಂದು,
ಆದರೆ, ತನ್ನಾತ್ಮ - ಹೃದಯಗಳಿಗೆ ಬೆಲೆ ಕಟ್ಟಬಾರದೆಂದು.
ಊಳಿಡುವ ಗುಂಪಿಗೆ ಕಿವಿಗೊಡಬಾರದೆಂದು,
ತನ್ನದು ಸರಿಯಿದ್ದಾಗ, ಎದ್ದು ಹೋರಾಡಬೇಕೆಂದು.

ಕಲಿಸಿರವನಿಗೆ ಮೃದುವಾಗಿ,
ಆದರೆ, ಅತೀ ಮುದ್ದಿಸಬೇಡಿ.
ಬೆಂಕಿಯಲಿ ಕಾಯುತ್ತಾ ನಿಧಾನವಾಗಿ
ಉತ್ಕೃಷ್ಟ ಉಕ್ಕಾಗಲು ಬಿಡಿ.
ಮುನ್ನುಗುವ ಧೈರ್ಯ ಬರಲಿ,
ಸಾಹಸಿಯಾಗುವ ಸ್ಥೈರ್ಯವಿರಲಿ.

ಕಲಿಸಿರಿ ನೀವವನಿಗೆ,
ಅಗಾಧ ಭರವಸೆಯಿಡಲು ತನ್ನಲ್ಲಿ,
ಆಗಲೇ ಸಾಧ್ಯ ಅವನಿಗೆ
ಪ್ರಗಾಢ ನಂಬಿಕೆಯಿಡಲು ಮನುಕುಲದಲ್ಲಿ.

ಬಹುದೊಡ್ಡ ಆದೇಶವಿದು;
ನೋಡಿ, ಏನು ಮಾಡಬಹುದೆಂದು. . . . .
ಕೋಮಲ ಮನದ ಪೋರನವನು,
ಕಿಶೋರ ನನ್ನವನು.


- ಅನುವಾದ - ಸುಧಾ ಜಿ ಮತ್ತು ಉಷಾಗಂಗೆ

ಅನುಭವ - ಎಚ್ ಡಿ ಕೋಟೆಯಲ್ಲಿನ ಉಚಿತ ವೈದ್ಯಕೀಯ ಶಿಬಿರ


  

ಕಬಿನಿ ನದಿ (ಹೊಳೆ ದಾಟಿದರೆ ಕೇರಳ)

ಮೇಲೆ ಆಟೋ ಕಾಣಿಸುವವರೆಗೆ ನೀರು ಬಂದಿತ್ತಂತೆ 
 ಕಬಿನಿ ನದಿ ಉಕ್ಕಿ ಹರಿದಿದ್ದರಿಂದ ಎಚ್ ಡಿ ಕೋಟೆಯ ಕೆಲವು ಹಳ್ಳಿಗಳು ನೀರಿನಿಂದ ತುಂಬಿದ್ದವು, ಮನೆಗಳಿಗೆ ನೀರು ನುಗ್ಗಿತ್ತು, ಹೊಲ ಗದ್ದೆಗಳು ಹಾಳಾಗಿದ್ದವು. ನೀರು ಕಡಿಮೆಯಾದ ನಂತರ ಇತರೆ ಸಮಸ್ಯೆಗಳು ಕಂಡುಬಂದಿದ್ದವು. ಜನ ತಮ್ಮ ಮನೆಗಳನ್ನು ಹೊಲಗದ್ದೆಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅಲ್ಲಿನ ಕೂಲಿಕಾರ್ಮಿಕರಿಗೆ ಕೂಲಿ ಕೆಲಸ ಸಿಗದಂತಾಗಿತ್ತು. ಹಾಗೆಯೇ ಅಲ್ಲಿ ಹಾಡಿಗಳಲ್ಲಿ ಬುಡಕಟ್ಟು ಜನಾಂಗದವರಿದ್ದರು. 
ಎಚ್ ಡಿ ಕೋಟೆಯತ್ತ ಪಯಣ - ಇಡೀ ಶಿಬಿರದ ಜವಾಬ್ದಾರಿ ಹೊತ್ತ ತಮ್ಮ ರವಿಯೊಂದಿಗೆ 
ಮೂರು ಕಡೆಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಿ ಆಹಾರಪದಾರ್ಥಗಳನ್ನು, ಬಟ್ಟೆಯನ್ನು, ಇತರೆ ಅವಶ್ಯಕ ವಸ್ತುಗಳನ್ನು ಹಂಚುವುದೆಂದು ನಿರ್ಧರಿಸಲಾಗಿತ್ತು. ಬಳ್ಳೆ, ಮಚ್ಚೂರು ಮತ್ತು ಡಿ ಬಿ ಕುಪ್ಪೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು, ಬಳ್ಳಾರಿ, ಮೈಸೂರಿನ ಮೆಡಿಕಲ್ ಸರ್ವೀಸ್ ಸೆಂಟರ್ ನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಬಂದಿದ್ದರು. 
ಮೆಡಿಕಲ್ ಸರ್ವೀಸ್ ಸೇಂಟರ್ ನ ಡಾ. ರಾಜಶೇಖರ್ 




ಔಷಧಿ ವಿತರಣೆಯಲ್ಲಿ ನಿರತರಾದ ಗೆಳತಿ ಶೀಬಾ 
ಹಾಗೆಯೇ ಸುಮಾರು 40ಕ್ಕೂ ಹೆಚ್ಚು ಯುವಕ-ಯುವತಿಯರು ಸ್ವಯಂಸೇವಕರಾಗಿ ಬಂದಿದ್ದರು. ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿಯಿಂದ ನಾನು ಮತ್ತು ಬಿಂದು ಹೋಗಿದ್ದೆವು. 
ಬಿಂದು ಮತ್ತು ನಾನು
ಮೂರು ಕಡೆಗಳಲ್ಲಿ ಸುಮಾರು 650 ಜನರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು, ಔಷಧಿಗಳನ್ನು ವಿತರಿಸಲಾಯಿತು. ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ಹಂಚಲಾಯಿತು. 
ವೈದ್ಯರ ಒಂದು ತಂಡ 
ಆಶಾ ಕಾರ್ಯಕರ್ತೆ ಲಕ್ಷ್ಮಿ ಮತ್ತು ನನ್ನ ಸ್ನೇಹಿತೆಯ ಗೆಳತಿಯಾದ ಶೈಲಜಾ ಮತ್ತು ಅವರ ಮಗ ನಂದೀಶ್ ಬಹಳ ಸಹಾಯ ಮಾಡಿದರು
ಆಶಾ ಕಾರ್ಯಕರ್ತೆ ಲಕ್ಷ್ಮಿಯೊಂದಿಗೆ 
ಆಧುನಿಕ ಭಾರತದಲ್ಲಿಯೂ ಇಂತಹ ಅಮಾಯಕ ಜನರಿದ್ದಾರಾ ಎನ್ನುವಂತಿದ್ದರು ಕೆಲವರು. ಹೆಣ್ಣುಮಕ್ಕಳ ಶಿಕ್ಷಣ ಕೇವಲ 10ನೇ ತರಗತಿಯವರೆಗೆ ಮಾತ್ರ. ಬಡತನ, ದಾರಿದ್ರ್ಯ ಎತ್ತಿ ಕಾಣುತ್ತಿತ್ತು. ಅಷ್ಟಾದರೂ ಅವರಲ್ಲಿ ಅತಿಯಾಸೆಯನ್ನು ಕಾಣಲಿಲ್ಲ. ಎಲ್ಲಾ ಮಕ್ಕಳಿಗೆ ನಾನು ಡಿಬಿ ಕುಪ್ಪಯಲ್ಲಿ ಬಿಸ್ಕತ್ ಪ್ಯಾಕೆಟ್ ಕೊಡುತ್ತಿದ್ದೆ. ಅದರಲ್ಲಿ ಒಬ್ಬನನ್ನು ಕರೆದು ನೀನು ತೆಗೆದುಕೊಂಡಿಲ್ಲವೇನೊ ಎಂದು ಕೇಳಿದೆ. ಅವನು, “ನಾನು ಈಗಾಗಲೇ ತೆಗೆದುಕೊಂಡಿದ್ದೀನಕ್ಕ, ಇಲ್ಲಿ ನೋಡು” ಎಂದು ಜೇಬಿನಲ್ಲಿದ್ದ ಪ್ಯಾಕೆಟ್ ಅನ್ನು ತೋರಿಸಿದ. ಅದನ್ನು ಮುಚ್ಚಿಟ್ಟು ನನ್ನಿಂದ ಇನ್ನೊಂದು ಪ್ಯಾಕೆಟ್ ಪಡೆಯಬಹುದಾಗಿದ್ದರೂ ಅವನಾ ರೀತಿ ಮಾಡದ ಮನಸ್ಸನ್ನು ಕಂಡು ಆಶ್ಚರ್ಯವಾಯಿತು. ತಮಗೆ ಬಟ್ಟೆ ಸಿಕ್ಕ ಮೇಲೆ ಬೇರೆಯವರನ್ನು ಕರೆತಂದರು ಆ ಮಕ್ಕಳು, ಇವರಿಗೂ ಕೊಡಿ ಎಂಬಂತೆ. 
ಆದರೆ ವಿಷಾದಕರವೇನೆಂದರೆ, ಅಲ್ಲಿನ ಬಹುತೇಕ ಗಂಡಸರ ವಯಸ್ಸಿನ ಭೇದವಿಲ್ಲದೆ ಹಾಡುಹಗಲಲ್ಲೇ ಹೆಂಡ ಕುಡಿಯುತ್ತಿರುವುದು ಕಂಡು ಬಂದಿತು. ವಿಚಾರಿಸಿದಾಗ ಹೆಣ್ಣುಮಕ್ಕಳು ಕೂಲಿಗೆ ಹೋಗಿ ಮನೆಯನ್ನು, ಇವರನ್ನು ನೋಡಿಕೊಳ್ಳುತ್ತಾರೆ ಎಂದು ಗೊತ್ತಾಯಿತು. ಈ ಸಮಸ್ಯೆಗೆ ಪರಿಹಾರ ಏನು?
ಎಲ್ಲಿಯವರೆಗೆ ಸರ್ಕಾರಗಳು ಎಲ್ಲಾ ವ್ಯಕ್ತಿಗಳ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವುದಿಲ್ಲವೊ ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದೇ? ಎಲ್ಲಿಯವರೆಗೂ ಜನಪರ ಸರ್ಕಾರಗಳು ಅಧಿಕಾರಕ್ಕೆ ಬರುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಜನರ ಪರಿಸ್ಥಿತಿ ಹೀಗೆಯೇ ಉಳಿಯುವುದೇ? ಇದು ಕೇವಲ ಸರ್ಕಾರಗಳ ವೈಫಲ್ಯವೇ ಅಥವಾ ನಮ್ಮ ವಿಪಲತೆಯೇ? ನಾವೇನೂ ಮಾಡಲಾಗದ ಅಸಹಾಯಕತೆಯೇ? ಇಡೀ ವ್ಯವಸ್ಥೆ ಬದಲಾಗಬೇಕೇ? ಆ ವ್ಯವಸ್ಥೆಯನ್ನು ಬದಲಾಯಿಸಲು ನಾವು ಜನರಲ್ಲಿ ಅರಿವನ್ನು ಮೂಡಿಸಬೇಕೆ? ಈ ಪ್ರಶ್ನೆಗಳು ಎಲ್ಲಾ ಸ್ವಯಂಸೇವಕರ ಮನದಲ್ಲೂ ಮೂಡಿದ್ದವು.  ವ್ಯವಸ್ಥೆ ಎಂದು ಬದಲಾಗುವುದೊ ಗೊತ್ತಿಲ್ಲ ಆದರೆ ಅಲ್ಲಿಯವರೆಗೂ ಹಾಗೆಯೇ ಸುಮ್ಮನೆ ಕೈಕಟ್ಟಿ ಕೂರದೆ ಜನರಿಗೆ ನಮ್ಮ ಕೈಲಾದಷ್ಟು ನೆರವು ನೀಡೋಣ ಎಂಬ ಭಾವ ಮಾತ್ರ ಎಲ್ಲಾ ಕಾರ್ಯಕರ್ತರಲ್ಲೂ ಮೂಡಿತ್ತು. 
ಹಿಂದಿರುಗಿ ಬರುವಾಗ ಎಲ್ಲೆಡೆ ಹಚ್ಚ ಹಸುರನ್ನು ಕಂಡು ಒಂದು ಪ್ರಶ್ನೆ ಮೂಡಿತು – “ನಮ್ಮ ದೇಶದಲ್ಲಿ ಇಷ್ಟು ಸಂಪನ್ಮೂಲಗಳಿದ್ದರೂ ಜನ ಇಷ್ಟು ಬಡತನದಲ್ಲಿ ನರಳಬೇಕೆ?” ಇದಕ್ಕೆ ಉತ್ತರವನ್ನು ನೀಡುವವರಾರು?
ಕಬಿನಿ ನದಿಯ ಹತ್ತಿರದಲ್ಲಿ ಹಿಂದಿರುಗಿ ಬರುವಾಗ 

- ಸುಧಾ ಜಿ 

ಅನುಭವ - ಕೊಡಗು ಮಳೆಸಂತ್ರಸ್ತರ ನೆರವಿಗಾಗಿ


ಚಿಕ್ಕಂದಿನಿಂದಲೂ ಯಾರಿಗೋ ಸಮಸ್ಯೆ ಬಂದಾಗ ನೆರವು ನೀಡಬೇಕೆಂದು ಅಪ್ಪ, ಅಮ್ಮ, ಅಜ್ಜಿ ಹೇಳಿಕೊಟ್ಟಿದ್ದುಂಟು. ಅವರು ಮಾಡಿ ತೋರಿಸಿದ್ದನ್ನು ಕಲಿತದ್ದುಂಟು. ನಂತರ ಶಾಲೆಯಲ್ಲಿಯೂ ಸಹ ಶಿಕ್ಷಕರು ಅದನ್ನೇ ಹೇಳಿಕೊಟ್ಟರು ಮತ್ತು ಸ್ವತಃ ಮಾಡಿ ತೋರಿಸುತ್ತಿದ್ದರು. ಪ್ರಾಥಮಿಕ ಶಾಲೆಯಿಂದಲೇ ನಮ್ಮ ಶಾಲೆಯ ಸಿಸ್ಟರ್ಸ್ ಹೇಳಿದರೆಂದು ಅಂಧ ಮಕ್ಕಳಿಗಾಗಿ ಅಕ್ಕಪಕ್ಕದ ಮನೆಗಳಲ್ಲಿ, ನೆಂಟರಿಷ್ಟರಲ್ಲಿ ಚಂದಾ ಕೇಳಿದ್ದುಂಟು, ಬೆನಿಫಿಟ್ ಶೋಗಳಿಗೆ ಟಿಕೆಟ್ ಗಳನ್ನು ಮಾರಿದ್ದುಂಟು. ಈ ಅಭ್ಯಾಸ ಹಾಗೆಯೇ ಮುಂದುವರೆಯಿತು.
ನಂತರ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆ ಸೇರಿದಾಗಲೂ ಭೂಕಂಪ ಸಂತ್ರಸ್ತರಿಗೆ, ನೆರೆಸಂತ್ರಸ್ತರಿಗೆ, ಹೀಗೆ ಹಲವಾರು ಸಂದರ್ಭಗಳಲ್ಲಿ ಹಣ ಕೊಟ್ಟದ್ದುಂಟು, ಬೇರೆಯವರಿಂದ ಸಂಗ್ರಹಿಸಿದ್ದುಂಟು. ನಂತರ ಶಿಕ್ಷಕಿಯಾದಾಗಲೂ ಇಂತಹುದೇ ಸಮಯಗಳಲ್ಲಿ ನೆರವು ಕೊಟ್ಟಿದ್ದಿದೆ. ಸುಮಾರು 20ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳನ್ನು ಸಂಘಟಿಸಿದ್ದುಂಟು, ಭಾಗವಹಿಸಿದ್ದುಂಟು.
ನಮ್ಮನ್ನು ಸೋಮವಾರಪೇಟೆಗೆ ಕರೆದೊಯ್ದ ತಮ್ಮ ದೀಪು , ಇಡೀ ಶಿಬಿರದ ಜವಾಬ್ದಾರಿ ಹೊತ್ತ ತಮ್ಮ ರವಿ 
ಆದರೆ ಮೊದಲನೇ ಬಾರಿಗೆ ಸಂತ್ರಸ್ಥರ ಬಳಿ ನೇರವಾಗಿ ಹೋಗಿ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಅವರಿಗೆ ನೆರವನ್ನು ನೀಡುವ ಅವಕಾಶ ಇತ್ತೀಚೆಗಷ್ಟೇ ಬಂತು. ದಿನಾಂಕ 26/8/18 ರಿಂದ 28/8/18ರವರೆಗೆ ಕೊಡಗಿನಲ್ಲಿನ ಮಳೆಸಂತ್ರಸ್ತರಿಗೆ ಮತ್ತು 2/9/18ರಂದು ಎಚ್ ಡಿ ಕೋಟೆಯ ಕೆಲವು ಹಳ್ಳಿಗಳಿಗೆ ಹೋಗುವ ಅವಕಾಶ ಸಿಕ್ಕಿತು.
ಕೊಳ್ಳೇಗಾಲದ ಮುಕ್ತ ಸಾಹಿತ್ಯ ವೇದಿಕೆಯ ಸದಸ್ಯರು ಧನಸಹಾಯ ಮಾಡಿದರು 
26/8/2018ರಂದು ನಾನು ಕೆಲಸ ಮಾಡುತ್ತಿರುವ ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿಯ ಪರವಾಗಿ ಕೊಡಗಿನ ಸೋಮವಾರಪೇಟೆಗೆ ನನ್ನ ಕೆಲವು ಸ್ನೇಹಿತರೊಂದಿಗೆ ಹೋದೆ. ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿರುವ ಆ ಸ್ನೇಹಿತರು ಮುಂಚೆಯೇ ಅಲ್ಲಿ ಕೆಲವೆಡೆಗಳಿಗೆ ಭೇಟಿ ನೀಡಿ ಜನರ ಅವಶ್ಯಕತೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ನಾನು ಹೊರಡುವ ಮುನ್ನ ವಾಟ್ಸಪ್ ಮೂಲಕ ಮಳೆಸಂತ್ರಸ್ಥರಿಗೆ ನೆರವು ನೀಡಿ ಎಂದು ನನ್ನ ಸ್ನೇಹಿತರಿಗೆ ಮನವಿ ಮಾಡಿಕೊಂಡಿದ್ದೆ. ಈಗಾಗಲೇ ಬೇರೆಬೇರೆ ಕಡೆಗಳಲ್ಲಿ ಸಹಾಯ ಮಾಡಿದ್ದರು, ನಾನೇ ಹೋಗುತ್ತಿದ್ದೇನೆ, ಅದು ನೇರವಾಗಿ ಅವಶ್ಯಕತೆ ಇರುವವರಿಗೆ ತಲುಪುತ್ತದೆ ಎಂದು ಬಹಳಷ್ಟು ಜನ ಹಣ ಕಳಿಸಿದರು.




 ಮಡಿಕೇರಿ 

ಲೈಟ್ ಕಂಬದ ಸುಮಾರು ೪೦-೪೫ರಷ್ಟು ನೀರಿನಲ್ಲಿ ಮುಳುಗಿತ್ತಂತೆ, ಕಂಬದ ಬಣ್ಣದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ 

 ಮಣ್ಣಿನ ಕಲೆ ಕಾಣಿಸುವ ಮಟ್ಟದವರೆಗೆ ನೀರು ಒಂದು ವಾರದ ಕಾಲ ನಿಂತಿತ್ತು ಸುಮಾರು ೩-೪ ಕಿಮೀ ಉದ್ದಕ್ಕೂ (ಮಾದಾಪುರ)
ಕೊಡಗಿನ ಕೆಲಭಾಗಗಳು ನೀರಲ್ಲಿ ಮುಳುಗಿ, ಹಾನಿಗೊಳಗಾಗಿದ್ದವು. ಕೆಲವರು ಮನೆಮಠ ಎಲ್ಲವನ್ನೂ ಕಳೆದುಕೊಂಡಿದ್ದರು, ಜೀವಹಾನಿಯಾಗಿತ್ತು. ಇನ್ನೂ ಕೆಲವೆಡೆಗಳಲ್ಲಿ ಮನೆ ಕುಸಿಯದಿದ್ದರೂ, ಜೀವ ಹಾನಿಯಾಗದಿದ್ದರೂ ಎಸ್ಟೇಟ್ ಗಳ ಹಾನಿಯಿಂದಾಗಿ ಕೆಲಸವನ್ನು ಕಳೆದುಕೊಂಡ ನೂರಾರು ಕಾರ್ಮಿಕರನ್ನು ನೋಡಿದೆವು. ಸರ್ಕಾರದ ನೆರವು ಕೆಲವರಿಗೆ ಸಿಕ್ಕಿತ್ತು, ಕೆಲವರಿಗೆ ಸಿಕ್ಕಿರಲಿಲ್ಲ. ಮಳೆ, ಗಾಳಿ, ಚಳಿಯಿಂದ ಜನರ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತ್ತು. ಅವರಿಗೆ ವೈದ್ಯಕೀಯ ನೆರವು ದೊರೆತಿರಲಿಲ್ಲ.
ಬಜೆಗುಂಡಿಯಲ್ಲಿ (ಕೆಳಭಾಗದಲ್ಲಿ ಗುಡ್ಡ ಕುಸಿದು ಸುಮಾರು ಮನೆಗಳು ಹಾಳಾಗಿದ್ದವು, ಜೀವ ಹಾನಿಯಾಗಿತ್ತು )

ನನ್ನ ಸ್ನೇಹಿತರು ಸೋಮವಾರಪೇಟೆ ತಾಲ್ಲೂಕಿನ ಮೂರು ಗ್ರಾಮಗಳನ್ನು ಮತ್ತು ಮಾದಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲ್ಕೊರೆ ಮತ್ತು ಮೀನಕೊಲ್ಲಿಯನ್ನು ಗುರುತಿಸಿ ಅಲ್ಲಿ ವೈದ್ಯಕೀಯ ಶಿಬಿರಗಳನ್ನು ಸಂಘಟಿಸುವುದು ಮತ್ತು ಆಹಾರ ಪದಾರ್ಥಗಳನ್ನು, ಇತರೆ ಸಾಮಗ್ರಿಗಳನ್ನು ಹಂಚುವುದೆಂದು ತೀರ್ಮಾನಿಸಿದ್ದರು. ಸಂಘಟನೆಯ ಸ್ನೇಹಿತರು ರಾಜ್ಯದ ಬೇರೆಬೇರೆ ಭಾಗಗಳಿಂದ ಹಣ ಸಂಗ್ರಹಿಸಿ, ಆಹಾರ ಪದಾರ್ಥಗಳನ್ನು ಖರೀದಿಸಿ (ಅಕ್ಕಿ ಮತ್ತು ಬೇಳೆಯನ್ನು ರಾಯಚೂರು, ಗುಲ್ಬರ್ಗಾದ ಕೆಲವು ಮಿಲ್ ಮಾಲೀಕರು ಕಡಿಮೆ ಬೆಲೆಗೆ ನೀಡಿದ್ದರು) ಮೈಸೂರಿಗೆ ಕಳಿಸಿದ್ದರು. 
ತನ್ನ ತಂದೆಯ ಎಸ್ಟೇಟ್ ನಲ್ಲಿ ನಾವೆಲ್ಲಾ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ ತಮ್ಮ ವಿನಯ್ 
ನನ್ನಂತೆ ಸ್ವಯಂಸೇವಕರಾಗಲು ಬಯಸಿದ್ದವರು ಗುಲ್ಬರ್ಗಾ, ರಾಯಚೂರು, ಬಿಜಾಪುರ, ಬೆಂಗಳೂರಿಂದಲೂ ಸಹ ಬಂದು ಮೈಸೂರಿನ ಸ್ನೇಹಿತರನ್ನು ಸೇರಿದ್ದರು. ಅದರಲ್ಲಿ ಹಲವರು  ಎಸ್‍ಯುಸಿಐನ ಕಾರ್ಯಕರ್ತರಾಗಿದ್ದರು. 

ಸಿದ್ಧತೆ ಮಾಡಿಕೊಳ್ಳಲು ಜನರನ್ನು ಭೇಟಿಮಾಡಲು ಹೋಗಬೇಕಾದಾಗ ಕೊಡಗಿನಲ್ಲಿ ಆದ ಹಾನಿಯ ಒಂದು ಚಿತ್ರಣ ಸಿಕ್ಕಿತು. ಎಲ್ಲೆಡೆಯಲ್ಲೂ ಗುಡ್ಡ ಕುಸಿತ, ರಸ್ತೆಯ ಮಧ್ಯೆ ಬಿದ್ದಿದ್ದ ಮರಗಳನ್ನು, ಮಣ್ಣನ್ನು ತೆಗೆಯಲು ಕಾರ್ಮಿಕರು ಶ್ರಮಿಸುತ್ತಿದ್ದರು, ಕೆಲವೆಡೆಗಳಲ್ಲಿ ರಸ್ತೆ ಎಷ್ಟರ ಮಟ್ಟಿಗೆ ಹಾಳಾಗಿತ್ತೆಂದರೆ ಮುಂದೆ ಹೋಗಲು ಧೈರ್ಯ ಬಾರದಿರುವಷ್ಟು. ಕೆಲವು ರಸ್ತೆಗಳಲ್ಲಿ ಸಾಗುತ್ತಿದ್ದಾಗ ಮಳೆ ಬೀಳುತ್ತಲೇ ಇದ್ದು ಮತ್ತೆ ಎಲ್ಲಿ ಮಣ್ಣು ಸಡಿಲವಾಗಿ ಗುಡ್ಡ ಕುಸಿಯುತ್ತದೊ, ಮರ ಬೀಳುತ್ತದೊ ಎಂಬ ಭಯ ಉಂಟುಮಾಡಿತ್ತು. ಹಟ್ಟಿಹೊಳೆ ಮತ್ತು ಕಾವೇರಿ ಭಯಾನಕವಾಗಿ ಹರಿಯುತ್ತಿರುವಂತೆನಿಸಿತ್ತು.

ಸಮಸ್ಯೆ ತಹಬಂದಿಗೆ ಬಂದಿದೆ ಎನ್ನಲಾದ ಈ ಪರಿಸ್ಥಿತಿಯಲ್ಲಿಯೇ ಹೀಗಿದ್ದರೆ ಆಗ ಹೇಗಿದ್ದಿರಬಹುದೆಂದು ಊಹಿಸಿಕೊಂಡೆವು, ಟಿವಿಯಲ್ಲಿ ನೋಡಿದ್ದ ಚಿತ್ರಗಳು ಕಣ್ಣಮುಂದೆ ಬಂದು ನಿಂತವು. 


26ನೇ ತಾರೀಖು ಆ ಎಲ್ಲಾ ಸ್ಥಳಗಳ ಆಶಾ ಕಾರ್ಯಕರ್ತೆಯರನ್ನು, ಗ್ರಾಮಪಂಚಾಯತ್ ಸದಸ್ಯರನ್ನು ಭೇಟಿ ಮಾಡಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. 26ನೇ ತಾರೀಖು ಮಧ್ಯರಾತ್ರಿ ದಾವಣಗೆರೆಯಿಂದ ಮೆಡಿಕಲ್ ಸರ್ವೀಸ್ ಸೆಂಟರ್ ನ ರಾಜ್ಯ ಅಧ್ಯಕ್ಷರಾದ ಡಾ. ವಸುಧೇಂದ್ರರವರ ನೇತೃತ್ವದಲ್ಲಿ ವೈದ್ಯರ ತಂಡ ಬಂದಿಳಿಯಿತು. 
27/8/2018ರಂದು ಬಜೆಗುಂಡಿಯಲ್ಲಿ, 28/8/2018ರಂದು ಕಲ್ಕೊರೆಯಲ್ಲಿ ಮತ್ತು ಕೆಂಚಮ್ಮನ ಬಾಣೆಯಲ್ಲಿ ಮೂರು ಕಡೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಯಿತು. ಒಟ್ಟು 700ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಿ ಉಚಿತವಾಗಿ ಔಷಧಿಗಳನ್ನೂ ನೀಡಲಾಯಿತು. ಕೆಂಚಮ್ಮನ ಬಾಣೆಯಲ್ಲಿ ವೈದ್ಯರಿಗೆ ತೋರಿಸಲು ಬಂದ ಒಬ್ಬಾಕೆ, “ಮೇಡಮ್ ನಿಮಗೆಲ್ಲಾ ತುಂಬಾ ಧನ್ಯವಾದಗಳು. ಕೆಲಸವೂ ಇರಲಿಲ್ಲ, ಆರೋಗ್ಯ ಚೆನ್ನಾಗಿಲ್ಲ. ವೈದ್ಯರ ಬಳಿ ತೋರಿಸಲು ಹಣವಿರಲಿಲ್ಲ. ನಿಮ್ಮ ಈ ಶಿಬಿರದಿಂದ ತುಂಬಾ ಉಪಕಾರವಾಯಿತು” ಎಂದು ವೈದ್ಯರಿಗೆ ಕೈಮುಗಿದರು.



ಅದೇ ಸಮಯದಲ್ಲಿ ಅಲ್ಲಿ ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ನಿರ್ಧರಿಸಲಾಯಿತು. ಎಲ್ಲರಿಗೂ ಸಿಗಬೇಕೆಂಬ ಕಾರಣದಿಂದ ಮೆಡಿಕಲ್ ಸರ್ವೀಸ್ ಸೆಂಟರ್ ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಅಂಶುಮಾನ್ ಮಿತ್ರರವರು ಎಲ್ಲರಿಗೂ ಮೊದಲೇ ಕೂಪನ್ ಕೊಟ್ಟುಬಿಡಿ ಎಂಬ ಸಲಹೆ ನೀಡಿದ್ದರು. ಅದರಂತೆ ಸ್ವಯಂಸೇವಕರ ಒಂದು ತಂಡ ಕೂಪನ್ ಕೊಟ್ಟುಬಂದಿತು. ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಊರಿನ ಕೆಲವು ಯುವಜನರ ಮೂಲಕ ಎಲ್ಲರಿಗೂ ವಸ್ತುಗಳನ್ನು ವಿತರಿಸಲಾಯಿತು. 


ನಾವು ಕೊಟ್ಟ ವಸ್ತುಗಳು ಅವರಿಗೆ ಒಂದು ವಾರ ಕಾಲ ಬರಬಹುದೇನೊ. ಆದರೆ ಅಂತಹ ಸಮಯದಲ್ಲೂ ಶಿಸ್ತಿನಿಂದ ಕ್ಯೂನಲ್ಲಿ ಬಂದು ನೂಕುನುಗ್ಗಲಿಲ್ಲದೆ ತೆಗೆದುಕೊಂಡ ಹೋದ ಆ ಜನರನ್ನು ನೋಡಿ ಗೌರವವೇ ಮೂಡಿತು. ತಮಗೇ ಆಹಾರವಿಲ್ಲದ ಪರಿಸ್ಥಿತಿಯಲ್ಲೂ ಅವರ ಮನೆಗಳಿಗೆ ಕೂಪನ್ ಕೊಟ್ಟುಬರಲು ಹೋದ ಸ್ವಯಂಸೇವಕರಿಗೆ ಟೀ, ಬಿಸ್ಕತ್, ಊಟ ನೀಡಿದ ಆ ಆತ್ಮೀಯತೆಯನ್ನು ಮರೆಯಲಾಗದು. ಕೆಂಚಮ್ಮನ ಬಾಣೆಯಲ್ಲಿ ನಮ್ಮ ಹತ್ತಾರು ಕಾರ್ಯಕರ್ತರಿಗೆ ಊಟ ನೀಡಿದಾಕೆಗೆ ನಾವು ಇನ್ನೊಂದು ಪ್ಯಾಕೆಟ್ ಅಕ್ಕಿ, ಬೇಳೆ ನೀಡಲು ಹೋದಾಗ ನಿರಾಕರಿಸಿದರು. ನಂತರ ನಾವು ಅವರಿಗೆ, “ನೀವೀಗ ಸಂಕಷ್ಟದಲ್ಲಿದ್ದೀರಿ, ಆದ್ದರಿಂದ ಇದನ್ನು ತೆಗೆದುಕೊಳ್ಳಿ, ಇನ್ನೊಮ್ಮೆ ನೀವು ಚೆನ್ನಾಗಿರುವ ಸಮಯದಲ್ಲಿ ಬಂದು ಊಟ ಮಾಡಿ ಹೋಗುತ್ತೇವೆ” ಎಂದು ಹೇಳಿ ಒಪ್ಪಿಸಿದೆವು. ಇನ್ನೊಂದೆಡೆ ಅಜ್ಜಿ, ಹುಷಾರಿಲ್ಲದ ಮಗಳು ಇರುವ ಮನೆಯಲ್ಲಿ ಬಲವಂತ ಮಾಡಿ ಟೀ, ಬಿಸ್ಕತ್ ಕೊಟ್ಟಾಗ ಕಷ್ಟಪಟ್ಟು ಕಣ್ಣೀರನ್ನು ತಡೆದುಕೊಳ್ಳಬೇಕಾಯಿತು. 
ಟೀ ಬಿಸ್ಕತ್ ನೀಡಿದ ಅಜ್ಜಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದರು 
ತಾವೇ ಕಷ್ಟದಲ್ಲಿದ್ದರೂ ಆಶಾ ಕಾರ್ಯಕರ್ತೆಯರು ನಮ್ಮೊಂದಿಗೆ ಮೂರು ದಿನಗಳೂ ಜೊತೆಯಿದ್ದರು. ಎಲ್ಲರಿಗೂ ಕೊಟ್ಟ ಮೇಲೆ ತಾವು ವಸ್ತುಗಳನ್ನು ತೆಗೆದುಕೊಂಡರು. ಒಬ್ಬ ಯುವಕ “ಮೇಡಮ್ ನಾವು ಸರ್ಕಾರವನ್ನು ಪರಿಹಾರ ಕೇಳುತ್ತಿಲ್ಲ, ನಾವೀಗಲೂ ಬದುಕನ್ನು ಕಟ್ಟಿಕೊಳ್ಳುತ್ತೇವೆ. ನಮಗೆ ಕೂಲಿ ಕೆಲಸ ಸಿಗಬೇಕಷ್ಟೇ” ಎಂದಾಗ ಯುವಕರು ಸೋಮಾರಿಗಳು ಎಂದು ಹೇಳುವ ಜನರಿಗೆ ಅದೊಂದು ಹೊಡೆತದಂತಿತ್ತು. ಕೂಪನ್ ಹಂಚಲು ಹೋದಾಗ ಇನ್ನೋರ್ವ ಯುವಕ, “ಮೇಡಮ್ ನನಗೆ ಟೆಂಪೊ ಓಡಿಸಲು ಅವಕಾಶ ಸಿಕ್ಕಿದೆ, ಕೂಲಿಯೂ ಸಿಕ್ಕಿದೆ. ಪಕ್ಕದ ಮನೆಯವರಿಗೆ ಅದರ ಅವಶ್ಯಕತೆ ಹೆಚ್ಚಿದೆ, ಅವರಿಗೆ ಕೊಡಿ” ಎಂದಾಗ ಭಾವುಕರಾದರು ನಮ್ಮ ಸ್ನೇಹಿತರು. ಹೀಗೆಯೇ ಹೇಳುತ್ತಾ ಹೋದರೆ ಬಹಳಷ್ಟು ಪುಟಗಳನ್ನು ಬರೆಯಬೇಕಾಗುತ್ತದೆ. 
ಮತ್ತೆ ಅವರಿಗೆ ನೆರವು ನೀಡುವ ಭರವಸೆ ನೀಡಿ ಭಾರವಾದ ಮನದಿಂದ ಹಿಂದಿರುಗಿದೆವು. ಆ ಜನರಿಗೆ ಪುನಃ ಬದುಕನ್ನು ಕಟ್ಟಿಕೊಳ್ಳಲು ಎಷ್ಟು ವರ್ಷಗಳು ಬೇಕಾಗುತ್ತದೊ ಎಂದುಕೊಂಡೆವು. ಆದರೆ ಆ ಜನರ ಧೈರ್ಯವನ್ನು ಕಂಡಾಗ ನಿಜಕ್ಕೂ ಆಶ್ಚರ್ಯವೆನಿಸಿತು. ಬಹುಬೇಗ ಎಲ್ಲವನ್ನೂ ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಲಿ ಎಂದು ಹಾರೈಸುತ್ತಾ ಹಿಂದಿರುಗಿದೆವು.
ಅಲ್ಲಿ ನನ್ನ ಜೊತೆ ಇದ್ದ ಬೇರೆಬೇರೆ ಕಡೆಗಳಿಂದ ಬಂದ ಯುವ ಸ್ವಯಂಸೇವಕರನ್ನು, ವೈದ್ಯರನ್ನು, ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ಜನ ಆಶ್ಚರ್ಯಪಟ್ಟರು. ಸರಿಯಾಗಿ ಊಟವಿಲ್ಲದೆ, ನಿದ್ರೆಯಿಲ್ಲದೆ ಇತರರಿಗೋಸ್ಕರ ದುಡಿದ ಅವರನ್ನು ಕಂಡು ಅಲ್ಲಿನವರೆಲ್ಲ ಬಾಯಿತುಂಬಾ ಹರಸಿದರು, “ನಿಮ್ಮಂಥವರ ಪೀಳಿಗೆ ಹೆಚ್ಚಾಗಲಿ, ನೀವು ನೂರ್ಕಾಲ ತಣ್ಣಗಿರಿ!!” 
ಅಲ್ಲಿ ಮತ್ತೆ ಜನ ಬದುಕು ಕಟ್ಟಿಕೊಳ್ಳಲಿ, ಹೂವು ಅರಳಲಿ ಎಂದಷ್ಟೇ ಆಶಿಸಬಲ್ಲೆ!!


ಅಲ್ಲಿಯೇ ಅರಳಿದ್ದ ಹೂವು 


- ಸುಧಾ ಜಿ 

ಕವನ - ಗಣೇಶನ ಹಬ್ಬದ ಸಡಗರ

 
ಪುಡಿಗಾಸಿಗಾಗಿ ಕೈಚಾಚುತಿದ್ದ 
ಪುಟ್ಟ ಪುಟ್ಟ ಮಕ್ಕಳಿಂದು,
ಗಣೇಶನನ್ನು ಕೂರಿಸಲು 
ಹಣಕ್ಕಾಗಿ ಕೈಚಾಚುತಿದ್ದರು,
ಕೆದರಿದ ಕೂದಲು, ಹರಿದ ಬಟ್ಟೆ, 
ಕೊಳಕಾದ ಪುಟ್ಟ ಕೈಗಳು, 
ಕಂಗಳಲಿ ಮಾತ್ರ ಹೊಳಪು,
ಅವರ ಹೊಳೆಯುವ ಕಣ್ಗಳಲಿ 
ದೇವರನೇ ಕಂಡ ಅನುಭವ,
ಇವರಿಗೇಕೆ ಮತ್ತೊಬ್ಬ ದೇವರ ಹುಸಾಬರಿ,
ಚಿಂದಿ ಬಟ್ಟೆಯುಟ್ಟಿದ್ದರು
ಗಣೇಶನನ್ನ ಕರೆತರುವ ಸಡಗರ,
ಹೊಟ್ಟೆ ತುಂಬಿಸಿಕೊಳ್ಳಬಹುದಾದ ಹಣದಲ್ಲಿ 
ಸಂಕಷ್ಟಹರನನ್ನ ಕೂರಿಸುವ ಆತುರ,
ಸಂಕಷ್ಟವನು ಪರಿಹರಿಸಿಕೊಳ್ಳಲು ಅಲ್ಲಾ,
ಅವನ ಕೂರಿಸಿ ತಮ್ಮ ಖುಷಿಯ ಇತರರಿಗೆ ಹಂಚಲು.........
 - ಹರ್ಷಿತ 

ಕವನ - ಝಾನ್ಸಿ ರಾಣಿ



ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರದ್ದು ಎನ್ನಲಾದ ಚಿತ್ರ 


{ಈ ಚಿತ್ರವನ್ನು ನೋಡಿ ಬರೆದ ಕವನ}

ಒಳ ದುಮ್ಮಾನಕೊ  ರೋಷಕೊ  
ಪೂರ್ಣೇಂದು ವದನ ರುದ್ರ ಮೌನ 
ಬೇಗುದಿಯ ಸಂವಹನಕೆ
ಊಧ್ರ್ವ ದೃಷ್ಟಿ ಅನತಿ ದೂರಕೆ 

ಹಣೆಬಟ್ಟನಿಟ್ಟು ಓಲೆ ಮೂಬಟ್ಟು  
ತೊಟ್ಟು  ನೋವ ಅದುಮಿಟ್ಟರೂ  
ಮೂಗತುದಿ ತುಟಿಯಂಚಿನಲ್ಲಿ  
ದುಗುಡ  ಸೂಸಿಹ  ಮೊಗವೆನ್ನಲೆ?

ದೋಚಿ ಧೂಳಾಗಿಸಿದ ದಾಳಿಗೆ 
ತನ್ನತನವ ಕಸಿದ ದಾಸ್ಯಕೆ
ಕುದಿವ ಅಂತರಂಗಕೆ ಮುಸುಕ 
ಹೊದಿಸಿದ ಅಗ್ನಿಪರ್ವತವೆನ್ನಲೆ 

ಕಾಯ ಕಿಂಚಿತ್ತೂ ಕೆಡದಿರೆ 
ಘಾಸಿಗೊಂಡಿಹುದೆ  ಭಾವ 
ಹೃನ್ಮನದ ನಿಜ ನಿಲವ ಗಟ್ಟಿ 
ಗೊಳಿಸಿದೆಯೆ ನೆಟ್ಟ ನೋಟದೆ?

ಹೆರಳ ಕೆದರುತೆ  ಶಾಪ ನೀಡುವೆ  
ಯಾವ  ಧೂರ್ತ  ದುಶ್ಶಾಸನನಿಗೆ?
ಯಾವ ಕುಟಿಲ ಸಂಚಿನ ಕೂಟಕೆ? 
ಪರಕೀಯ ಕುನ್ನಿಯ ಬೊಗಳಿಗೆ 


 - ಕೆ. ಎಸ್. ಮಲ್ಲೇಶ್




ಕಥೆ - ಶಾಲಿನಿ


ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ನಮ್ಮ ಮನೆಯಲ್ಲಿ ನಡೆದ ರೀತಿ ನಿಮ್ಮ ಮನೆಯಲ್ಲಿ ನಡೆದಿರಲಾರದು. ಮದುವೆಯಾದ ಹೊಸತರಲ್ಲಿಯೇ ಅಮ್ಮನ ಮನಸ್ಸಿನಲ್ಲಿದ್ದ ಆಸೆಯನ್ನು ಗುರುತಿಸಿ  “ನೀನು ಹೆಣ್ಣು ಮಗುವನ್ನು ಹಡೆಯುತ್ತೀಯೆ. ಅವಳಿಗೆ ಈಗಲೇ ಹೆಸರನ್ನೂ ಹುಡುಕಿಟ್ಟಿದ್ದೇನೆ, ಶಾಲಿನಿ ಎಂದು” ಹೀಗಂದನಂತೆ ಅಪ್ಪ.  ಅಂದಿನಿಂದ ಅಮ್ಮ ನನ್ನನ್ನು ಹಡೆಯುವ ಕನಸನ್ನು ನನಸಾಗಿಸತೊಡಗಿದಳು. ತಾನು ಹೇಳಿದ್ದಕ್ಕೆ ಸಾಕ್ಷಿಯಾಗಿ ಹುಟ್ಟಿದ್ದರಿಂದ ಅಪ್ಪನಿಗೂ ಸಂತೋಷವಾಗಿ, ಬೆಳೆದು ರೂಪುಗೊಳ್ಳುತ್ತಿದ್ದಂತೆ ನನ್ನನ್ನು ಹೆಚ್ಚೆಚ್ಚು ಹಚ್ಚಿಕೊಳ್ಳುತ್ತಿದ್ದುದು ಇಷ್ಟವಾಗತೊಡಗಿ ಸದಾ ಅವನ ಬಳಿಯೇ ಇರಬೇಕೆನ್ನುವ ಬಯಕೆ ನನ್ನಲ್ಲೂ ಹೆಚ್ಚಾಗತೊಡಗಿತು. ಆದರೇನಂತೆ, ಆಗಿನ ದುಡಿಯುವ ಸಮಾಜದ ರೀತಿನೀತಿಗಳು, ಬದುಕಿನ ಅಗತ್ಯಗಳಿಗಾಗಿ ರೂಪಿತವಾಗಿದ್ದವೇ ವಿನಾ ಹದಿಹರೆಯದ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕಾಗಲೀ ಆಶೋತ್ತರಗಳಿಗೆ ಬೆಂಬಲವಾಗಿಯಾಗಲೀ ಅಲ್ಲ. ಜನರ ಕಷ್ಟನಷ್ಟಗಳು ಎಷ್ಟಿದ್ದವೆಂದರೆ, ಬದುಕಿನ ನಿರ್ವಹಣೆಗಾಗಿ ಬೇರೆ ಯಾವ ದಾರಿಯೂ ತೋರದಿದ್ದಾಗ ತಮ್ಮ ಸಂತಾನಗಳನ್ನೇ ಮಾರಬೇಕಾದ ಅನಿವಾರ್ಯತೆಯಿತ್ತು. ಅಂತಹ ಕಾಲದಲ್ಲೇ ನಾನೂ ಇದ್ದದ್ದು, ಬೆಳೆದದ್ದು. 

ನನ್ನ ತಂದೆ ಆರು ಅಡಿ ಎತ್ತರದ ಸ್ವಲ್ಪ ಒರಟು ಮುಖದ ದಪ್ಪ ವ್ಯಕ್ತಿ. ಆದರೆ ಆ ಎತ್ತರಕ್ಕೆ ತಕ್ಕಂತೆ ಶ್ರೀಮಂತಿಕೆಯಾಗಲೀ ದರ್ಪವಾಗಲೀ ಅವನಲ್ಲಿರಲಿಲ್ಲ. ನನ್ನ ತಾಯಿಯ ಎತ್ತರವೂ ಸ್ವಲ್ಪ ಜಾಸ್ತಿಯೇ. ಅವಳ ನೀಳ ಕೂದಲು, ಹೊಳೆಯುವ ಕಣ್ಗಳು, ಎಣ್ಣೆಗೆಂಪು ಬಣ್ಣದ ದುಂಡುಮುಖ, ಮುಖಕ್ಕೆ ತಕ್ಕಂತೆ ಮೂಗು, ಅಂದವಾದ ತುಟಿಗಳ ಒಳಗೆ ಜೋಡಿಸಿದ ಹಲ್ಲುಗಳ ಸಾಲು. ಯಾರೇ ನೋಡಲಿ, ಇನ್ನಷ್ಟು ಹೊತ್ತು ನೋಡಬೇಕೆನ್ನುವಂತಹ ಸೌಂದರ್ಯ ಅವಳಲ್ಲಿತ್ತು. ಹಾಗೆ ನೋಡಿದರೆ ಸೌಮ್ಯಮುಖಿಯಾದ ಅಮ್ಮ ಒರಟುಮುಖದ ಅಪ್ಪನನ್ನು ಹೇಗೆ ಒಪ್ಪಿಕೊಂಡಳೋ ಗೊತ್ತಿಲ್ಲ (ಅವಳ ಬೇಕು ಬೇಡಗಳಿಗೆ ಕಿಮ್ಮತ್ತೇ ಇರಲಿಲ್ಲವೆನ್ನುವುದು ಬೇರೆ ಮಾತು ಬಿಡಿ). 

ಅಪ್ಪ ಒಳಗೆ ಮೃದು. ಆದರೆ ಅಮ್ಮ ತುಸು ಗಡಸು, ನೇರ ಮಾತಿನವಳು, ಅಪ್ಪನಿಗೆ ಸ್ವಲ್ಪ ತದ್ವಿರುದ್ಧ. ಆದರೂ ಇಬ್ಬರ ಭಾವನೆಗಳಲ್ಲಿ ಬಹಳ ಸಾಮ್ಯ. ಇಬ್ಬರೂ ಕರ್ತವ್ಯಪರರು, ಪ್ರಾಮಾಣಿಕರು, ಬಂದ ಗಳಿಕೆಯಲ್ಲಿ ಸಮಾಜಕ್ಕೂ ಸ್ವಲ್ಪ ಅರ್ಪಿಸಬೇಕೆನ್ನುವ ಮನಸ್ಸಿನವರು, ದೇಹಕ್ಕಿಂತ ದೇಶ ಮುಖ್ಯ ಎನ್ನುವವರು. ಈ ಮುಖ್ಯ ಗುಣಗಳಿಂದಾಗಿಯೇ ಅವರು ಸಮಾನಮನಸ್ಕರು.  ಆದರೇನು, ಮೊದಲೇ ಹೇಳಿದಂತೆ ಹೊಟ್ಟೆಯ ಹಸಿವಿನೆದುರು ನಿಲ್ಲುವ ಧೈರ್ಯ ಯಾವ ತತ್ವ ಅಥವಾ ಸಿದ್ಧಾಂತಕ್ಕಿದೆ, ಹಸಿವನ್ನು ಸಂಪೂರ್ಣ ಹೋಗಲಾಡಿಸಲು ಯಾವ ತಪಸ್ಸಿದೆ ಹೇಳಿ?

ಅಪ್ಪ ಒಂದು ದಿನ ನನ್ನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತೇನೆಂದು ಹೇಳಿದ. ಹಿಂದಿನ ರಾತ್ರಿಯೇ ಅಮ್ಮನೊಡನೆ ಮಾತನಾಡಿದ್ದು ನನಗೆ ಕೇಳಿಸಿತ್ತಾಗಿ, ಅವನ ಉದ್ದೇಶ ನನಗೆ ಗೊತ್ತಾಗಿತ್ತು. ಬೆಳಿಗ್ಗೆ ನನ್ನ ಕೈ ಹಿಡಿದು ಅಪ್ಪ ಹೊರಟು ಬಾಗಿಲ ಬಳಿಗೆ ಬಂದಾಗ, ಅಮ್ಮನನ್ನು ಕೊನೆಯ ಬಾರಿಗೆ ನೋಡಿದೆ. ಅವಳ ನೋಟದಲ್ಲಿ ನನ್ನ ಅಗಲುವಿಕೆಯ ಯಾವ ನೋವಿನ ಛಾಯೆಯೂ ಕಾಣಿಸಲಿಲ್ಲ. ಬದಲಾಗಿ ನವಿಲಿನಂತೆ ಚುರುಕಾಗಿರುವ ನನ್ನನ್ನು ಬಹಳ ಹಣಕೊಟ್ಟು ಪಡೆದುಕೊಳ್ಳುವ ಶ್ರೀಮಂತರು ಸಿಕ್ಕೇ ಸಿಗುತ್ತಾರೆನ್ನುವ ಆಸೆ, ನಂಬಿಕೆ ಆ ನೋಟದಲ್ಲಿತ್ತು. ಇಂತಹ ಅಗಲಿಕೆಗಳು ಅಂದಿನ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿದ್ದರಿಂದ, ಅವಳ ಕಣ್ಣುಗಳಲ್ಲಿ ನನ್ನ ಅಗಲಿಕೆಯ ನೋವನ್ನು ಪ್ರತಿಬಿಂಬಿಸುವ ಭಾವನೆಗಳನ್ನು ಹುಡುಕುವುದು ಸಾಧುವಲ್ಲವೆಂದೂ ಕೂಡ ನನಗೆ ಆ ಕ್ಷಣಕ್ಕೆ ಅನ್ನಿಸತೊಡಗಿತು. ಈ ದುಂಡಾಗಿರುವ ಭೂಮಿಯ ಮೇಲೆ ಮತ್ತೊಮ್ಮೆ ಭೇಟಿಯಾಗುವ ಕನಸು ಹೊತ್ತು ಅವಳ ನೋಟದಿಂದ ವಿಮುಖಳಾಗಿ ಅಪ್ಪನ ಹೆಜ್ಜೆಯ ಗುರುತುಗಳಿಗೆ ನನ್ನ ಹೆಜ್ಜೆಗಳನ್ನು ಸೇರಿಸತೊಡಗಿದೆ. 

ಮನೆಯಿಂದ ಹೊರಡುವಾಗಿದ್ದ ಉತ್ಸಾಹ, ಪಟ್ಟಣಕ್ಕೆ ದಾರಿ ಸವೆಸಿ, ನಡೆಯಲಾರೆನೆಂದಾಗ ನನ್ನನ್ನೂ ಹೊತ್ತು, ಸುಸ್ತಾಗಿ ಬಂದು ತಲುಪಿದ ಅಪ್ಪನಲ್ಲಿ ಹುಡುಕಿದರೂ ಸಿಗಲಿಲ್ಲ. ನನ್ನನ್ನು ಒಳ್ಳೆಯ ಕುಟುಂಬಕ್ಕೆ ಕೊಟ್ಟು ನನ್ನ ಭವಿಷ್ಯ ಉತ್ತಮವಾಗಿರಲೆಂದು ಮೊದಲಿಗೆ  ಆತ ಬಯಸಿದ್ದು ನಿಜ. ಆದರೆ ಅವನ ದುರಾದೃಷ್ಟವೋ ಏನೋ ಅಂತಹವರಾರೂ ಅವನ ಬಳಿ ಸುಳಿಯಲಿಲ್ಲ. ಅಪ್ಪನ ಹಸಿವಿನೆದುರು ನನ್ನ ಬಗೆಗಿದ್ದ ಆತನ ಆಕಾಂಕ್ಷೆ ಪಟ್ಟಣದ ರಣಬಿಸಿಲೇರುತ್ತಿದ್ದಂತೆ ಮಂಜಿನಂತೆ ಕರಗತೊಡಗಿತು. ರಹಸ್ಯವಾಗಿ ಇದನ್ನೇ ಗಮನಿಸುತ್ತಿದ್ದವನೊಬ್ಬ ಸದ್ಗೃಹಸ್ಥನಂತೆ ನಟಿಸಿ ಗಾಳ ಹಾಕಿ ಬೀಸಿದ ಬಲೆಗೆ ನನ್ನಪ್ಪ ಮೀನಾದ. ಅವನಿಗೆ ನನ್ನನ್ನು ಮಾರಿ, ಪಡೆದ ಹಣವನ್ನು ಎಣಿಸುತ್ತ ನನ್ನ ಕಡೆಗೆ ನೋಡಿದ ಅವನ ಕಣ್ಣಂಚಿನಲ್ಲಿ ಹನಿಯೊಂದನ್ನು ಕಂಡಾಗ, ನನ್ನನ್ನು ಕಳೆದುಕೊಂಡದ್ದಕ್ಕೋ ಅಥವಾ ಅಗ್ಗಕ್ಕೆ ಮಾರಿದ್ದಕ್ಕೋ ತಿಳಿಯಲಿಲ್ಲ. 

ಆಪ್ಪ ನನ್ನನ್ನು ಕೈಯಿಂದ ಬರಸೆಳೆದು ಕಣ್ಣಿಗೆ ಒತ್ತಿಕೊಂಡು, “ಶಾಲಿನೀ, ನನ್ನನ್ನು ಕ್ಶಮಿಸು. ಈ ರೀತಿ ಮಾಡದಿದ್ದಲ್ಲಿ, ಮೂವರೂ ಇರುತ್ತಿರಲಿಲ್ಲ. ದುಃಖಿಸಬೇಡ, ನಿನ್ನ ಅಂದಕ್ಕೆ ಹಾಗೂ ಗುಣಕ್ಕೆ ತಕ್ಕಂತಹ ಆಸರೆ ಸಿಕ್ಕೇ ಸಿಗುತ್ತದೆಂಬ ನಂಬಿಕೆ ನನ್ನದು. ಓ ದೇವರೇ, ನನ್ನ ಶಾಲಿನಿಯನ್ನು ಕಾಪಾಡುವ ಭಾರ ನಿನ್ನದು” ಎನ್ನುತ್ತಾ ನನ್ನನ್ನು ಕೊಂಡವನ ಕೈಸೇರಿಸಿ ಭಾರವಾದ ಹೃದಯದೊಡನೆ ನಿಧಾನವಾಗಿ ಹೆಜ್ಜೆಯಿಡುತ್ತ ದೂರವಾದ. ಆ ಜಾಗದಿಂದ ಮರೆಯಾಗಿ, ನನ್ನನ್ನು ಮಾರಿ ಪಡೆದ ಹಣದಿಂದ ತನ್ನ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳುತ್ತಿರಬಹುದಾದ ಸ್ಥಿತಿಯಲ್ಲಿ ಅಪ್ಪ ಯೋಚಿಸುತ್ತಿದ್ದರೆ ಅದು  ನನ್ನ ಬಗೆಗೋ, ಜೇಬಿನಲ್ಲಿದ್ದ ಹಣದ ಬಗೆಗೋ, ಅಮ್ಮನ ಬಗೆಗೋ ಅಥವಾ ಅಮ್ಮನ ಮನಸ್ಸಿನೊಳಗೆ ಭವಿಷ್ಯದಲ್ಲಿ ಹುಟ್ಟಬಹುದಾದ ನನ್ನ ಭಾವೀ ತಂಗಿಯ ಬಗೆಗೋ ತಿಳಿಯುವುದು ಹೇಗೆ? ತಿಳಿಯುವುದಾದರೂ ಏತಕ್ಕೆ?

ಪಟ್ಟಣದ ಭವ್ಯವಾದ ಮಹಲಿನೊಳಗೆ ನನ್ನ ವಾಸ. ಇದು ನನ್ನ ಎರಡನೆಯ ಬದುಕು. ನನ್ನನ್ನು ಕೊಂಡವನೊಬ್ಬ ವ್ಯಾಪಾರಿಯೆಂದು ತಿಳಿಯಲು ಬಹಳ ದಿನ ಹಿಡಿಯಲಿಲ್ಲ. ಅಲ್ಲಿ ನನ್ನಂತೆಯೇ ಇನ್ನೂ ಎಷ್ಟೋ ಜನ ಇದ್ದದ್ದು ನನಗೆ ಕ್ರಮೇಣ ಗೋಚರಿಸಿತು. ನಮ್ಮನ್ನು ಬೇರೆಯವರಿಗೆ ಮಾರಿ ಹೆಚ್ಚು ಲಾಭಗಳಿಸಿಕೊಳ್ಳುವುದು ಅವನ ವೃತ್ತಿ. ಕೊಳ್ಳಲು ಬಂದವರು ನಮ್ಮನ್ನು ಪರೀಕ್ಷೆಮಾಡುವುದು, ನಾವು ಅವರ ಮುಂದೆ ಪ್ರದರ್ಶನ ನೀಡುವುದು ಇದು ಹೀಗೇ ಸಾಗಿತ್ತು. ನನಗೋ ಈ ಜೈಲಿನಿಂದ ಬಿಡುಗಡೆಯೆಂದು ಎನ್ನುವ ಚಿಂತೆ. ಆದರೆ ಮರುಕ್ಷಣದಲ್ಲೇ “ಬಿಡುಗಡೆ ಸಿಕ್ಕಿ, ದುರಾದೃಷ್ಟವಶಾತ್ ಧೂರ್ತನೊಬ್ಬನ ಬಂಧಿಯಾದರೆ ಮುಂದೆ ಗತಿಯೇನು” ಎಂಬ ಭಯ. ನಾನು ನಿಜಕ್ಕೂ ಇಕ್ಕಟ್ಟಿಗೆ ಸಿಕ್ಕಿ ನರಳುತ್ತಿದ್ದೆ. ಒಂದು ಕಡೆ ತಂದೆ ತಾಯಿಯರಿಂದ ದೂರವಾಗಿ ತಬ್ಬಲಿಯಂತಾಗಿರುವ ಸ್ಥಿತಿ, ಇನ್ನೊಂದು ಕಡೆ ಈ ಜೈಲು. ನನ್ನ ಶತ್ರುವಿಗೂ ಇಂತಹ ಕಷ್ಟಬೇಡ ದೇವರೇ ಎಂದು ಆರ್ತನಾದ ಗೈಯುತ್ತಿದ್ದೆ. ಆದರೇನು, ನಮ್ಮನ್ನು ಭದ್ರವಾಗಿ ಕೂಡಿಹಾಕಿ ಜಾಗರೂಕತೆಯಿಂದ ಕಾಯುತ್ತಿದ್ದ ಆ ಭವ್ಯ ಮಹಲಿನೊಳಗೆ ನನ್ನದು ಅರಣ್ಯರೋದನ. 

ಅದೆಷ್ಟೋ ರಾತ್ರಿಗಳ ಗಾಢಾಂಧಕಾರದಲ್ಲಿ ಏನೂ ಕಾಣಿಸದಿದ್ದರೂ, ಆ ನಿಗೂಢದ ಮೂಲದಿಂದಲೇ ಭರವಸೆಯ ಕಿರಣವೊಂದು ನನ್ನೆಡೆಗೆ ಬರಬಹುದೆಂಬ ಆಸೆ ನನ್ನ ಕಣ್ಣುಗಳನ್ನು ಮುಚ್ಚಿಸದೆ ಸದಾ ತೆರೆದಿರಿಸಿತ್ತು. ಒಂದು ಶುಭಗಳಿಗೆಯಲ್ಲಿ ಅದು ಬಂತು ಎಂದರೆ ನೀವು ಆಶ್ಚರ್ಯಪಡುವುದಿಲ್ಲ ತಾನೆ? ಎಲ್ಲದಕ್ಕೂ ಪ್ರತಿಕೂಲವಾಗಿದ್ದಂತಹ ಆ ಕಾರಾಗೃಹದಲ್ಲಿಯೇ ಇದು ಸಾಧ್ಯವಾಯಿತು. “ಶಾಲಿನೀ, ಉಳಿದೆಲ್ಲರಿಗಿಂತ ನೀನು ಚೆನ್ನಾಗಿ ನರ್ತಿಸುತ್ತೀಯೆ. ನವಿಲಿನಂತೆ ವೇಷಧರಿಸಿ ನೀನು ಮಯೂರನರ್ತನ ಮಾಡುವಾಗಲಂತೂ, ನಿನ್ನ ನಾಟ್ಯ ನೋಡಲು ನನ್ನ ಎರಡು ಕಣ್ಣುಗಳು ಸಾಲವು. ನಿನ್ನನ್ನು ನಾನೇ ಕೊಳ್ಳುವಾಸೆ. ಆದರೆ ನನ್ನ ಬಳಿ ನಮ್ಮ ಯಜಮಾನ ಕೇಳುವಷ್ಟು ಹಣವಿಲ್ಲ. ಏನು ಮಾಡಲಿ?” ಎಂದು ಒಂದುದಿನ ನನ್ನನ್ನು ಕಾಯುತ್ತಿದ್ದ, ಕೊಳ್ಳಲು ಬಂದವರಿಗೆ ನಮ್ಮನ್ನು ತೋರಿಸುತ್ತಿದ್ದ ನೌಕರ ಹೇಳಿದ. ನನಗೆ ತಕ್ಷಣ ಏನು ಹೇಳಲೂ ತೋಚಲಿಲ್ಲ. 

ನಾನು ಸೇರಿದಂದಿನಿಂದ ಅವನನ್ನು ಒಂದೆರಡು ಬಾರಿ ಗಮನಿಸಿದ್ದೆ. ಅವನಿಗೆ ನಮ್ಮನ್ನು, ವಿಶೇಷವಾಗಿ ನನ್ನನ್ನು ಕಂಡರೆ ಗೌರವ ಮತ್ತು ಪ್ರೀತಿ. ಬೇರೆಯವರಿಗೆ ತೋರಿಸುವಾಗ ಅವರು ನಮ್ಮೊಡನೆ ಒರಟಾಗಿ ವರ್ತಿಸುವುದಕ್ಕೆ ಅವಕಾಶಕೊಡದೆ ಅತ್ಯಂತ ಜಾಗರೂಕತೆ ವಹಿಸಿ ನಮ್ಮ ರಕ್ಷಣೆಯ ಕಾರ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದ. “ನಾನು ಅನುಭವಿಸುತ್ತಿರುವ ಈ ನರಕದಿಂದ ಪಾರಾಗಲು ನಿಮ್ಮಿಂದೇನಾದರೂ ಸಹಾಯವಾಗಬಹುದೇ” ಎಂದು ಧೈರ್ಯಮಾಡಿ ಕೊನೆಗೆ ಕೇಳಿಯೇಬಿಟ್ಟೆ. “ಇದನ್ನೇಕೆ ನರಕವೆನ್ನುತ್ತೀ, ಇಲ್ಲಿ ನೀನು ಬಂಧನದಲ್ಲಿರಬಹುದು ನಿಜ. ಆದರೆ ನಿನಗೇನೂ ಕೆಡುಕಾಗಿಲ್ಲವಲ್ಲ. ಆಷ್ಟರಮಟ್ಟಿಗೆ  ನೀನು ನಮ್ಮ ಯಜಮಾನನನ್ನು ಒಳ್ಳೆಯವನೆಂದೇ ತಿಳಿಯಬೇಕು. ಇದು ಸ್ವರ್ಗವಿರದಿರಬಹುದು. ಆದರೆ ನೀನು ಹೇಳುವಂತೆ ನರಕವಂತೂ ಅಲ್ಲ. ಇಲ್ಲಿಂದ ಹೊರಗೆ ಹೋದಾಗಲೇ ನಿನಗೆ ಸ್ವರ್ಗ ನರಕಗಳ ದರ್ಶನವಾಗುವುದು” ಎಂದ ಆತ. 

“ನಾನು ನನ್ನ ತಂದೆತಾಯಿಯರ ಬಳಿಯಿದ್ದುದನ್ನು ನೆನೆಸಿಕೊಂಡರೆ ಅದಕ್ಕಿಂತ ಸ್ವರ್ಗ ಬೇರಿಲ್ಲ. ಆ ಸ್ವರ್ಗ ನನಗೆ ಮತ್ತೆ ಸಿಗುವಂತೆ ಮಾಡುವುದಕ್ಕೆ ನಿನ್ನಿಂದ ಸಾಧ್ಯವೇ?” ಎಂದು ದೈನ್ಯತೆಯಿಂದ ಕೇಳಿದೆ. “ಸ್ವಲ್ಪ ತಾಳು, ನನಗೊಂದು ಅವಕಾಶವಿದೆಯೆಂದು ಕಾಣುತ್ತದೆ. ಪ್ರಯತ್ನಪಡುತ್ತೇನೆ. ಆದರೆ ನೀನು ಮಾತ್ರ ಕಳೆಗುಂದಬೇಡ, ಧೃತಿಗೆಡಬೇಡ” ಎಂದು ಆತ ಹೇಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ರಾತ್ರಿ ನಾನು ತೃಪ್ತಿಯಿಂದ ನಿದ್ರೆಗೈದೆ. ಭರವಸೆಯ ಕಿರಣವೊಂದು ನನ್ನ ಕನಸಿನೊಳಗೆ ಬೆಳಗಿದಂತಾಗಿ, ಆ ಮಂದ ಬೆಳಕಿನಲ್ಲಿ ದೂರದಲ್ಲಿ ಯಾರೋ ನನ್ನೆಡೆಗೆ ಬರುತ್ತಿರುವಂತೆ ಕಂಡೆ. ಹತ್ತಿರಕ್ಕೆ ಬರುತ್ತಿದ್ದಂತೆ ನನ್ನ ತಾಯಿಯ ಆಕಾರ ತಳೆದಂತಾಯ್ತು. “ನನ್ನನ್ನು ಮರೆತೆಯಾ ಶಾಲಿನೀ?” ಎಂದು ನನ್ನನ್ನು ಕೇಳಿದಂತಾಗಿ, ನಾನು ಒಡನೆ “ಅಮ್ಮಾ” ಎಂದದ್ದೂ “ಎದುರಿಗೆ ನಿಂತ ನನ್ನ ತಾಯಿಯನ್ನೇಕೆ ಎಷ್ಟು ಪ್ರಯತ್ನಿಸಿದರೂ ಅಪ್ಪಿಕೊಳ್ಳಲಾರೆ?” ಎಂದು ಮನಸ್ಸಿನಲ್ಲಿಯೇ ಪ್ರಶ್ನೆಕೇಳಿದ್ದೂ ಏಕಕಾಲದಲ್ಲಿ ಜರುಗಿ, ಆ ಸ್ವಪ್ನ ಸ್ಥಿತಿಯಲ್ಲಿಯೇ ಆಸೆ ನಿರಾಸೆಗಳೆರಡನ್ನೂ ಹೃದಯ ಒಂದು ಕ್ಷಣ ಅನುಭವಿಸಿ, ಈ ವಿಚಿತ್ರ ಅನುಭವದಿಂದಾಗಿಯೋ ಏನೋ ಕ್ಷಣಾರ್ಧದಲ್ಲಿ ಜಾಗೃತಾವಸ್ಥೆಗೆ ಜಾರಿತು. ಕಂಡದ್ದು ಕನಸಾದರೂ, ಅದು ನನಸಾಗಲೆಂದು ಬಯಸುತ್ತ ಮತ್ತೊಮ್ಮೆ ಕನಸಿನಾಳಕ್ಕಿಳಿಯಲು ನಿದ್ರಾದೇವಿಗೆ ಶರಣಾಗಲೆತ್ನಿಸಿದೆ. ಆದರೆ ಸಂಜೆಯ ಮಾತುಕತೆಯಲ್ಲಿ ಉತ್ಸಾಹಗೊಂಡಿದ್ದ ದೇಹ ಜಾಗೃತಾವಸ್ಥೆಯಿಂದ ಹೊರಳಲೇ ಇಲ್ಲ. ಇದೇಕೆ ಹೀಗೆ ಎಂದು ಯೋಚಿಸುತ್ತಿರುವಂತೆಯೇ, ಸೂರ್ಯನ ಕಿರಣಗಳು ಕಿಟಕಿಯನ್ನು ದಾಟಿ ನನ್ನ ಮೈಯನ್ನು ಸ್ಪರ್ಶಿಸಿ “ಏಳು, ಬೆಳಗಾಯಿತು” ಎಂದು ಕಚಗುಳಿಯಿಡತೊಡಗಿದವು. 

“ಬನ್ನಿಯಮ್ಮಾ, ಹೀಗೆ ಬನ್ನಿ” ಎನ್ನುತ್ತ ನಮ್ಮ ಕೊಟಡಿಯ ನೌಕರ ಬಾಗಿಲ ಬೀಗ ತೆಗೆದು ಒಳಗೆ ಬರುವುದನ್ನು ಕಂಡು “ಇವನು ಯಾರನ್ನು ಕರೆಯುತ್ತಿದ್ದಾನೆ” ಎಂದು ತಿಳಿಯಬಯಸಿ ಕುಳಿತಲ್ಲಿಂದಲೇ ಸ್ವಲ್ಪ ಮುಂದೆ ಬಾಗಿದೆ. “ನನಗೆ ನವಿಲಿನ ಬಣ್ಣ, ಗರಿ, ಕೊಂಕು ನಡೆ, ಅದರ ನಾಟ್ಯ, ಹೀಗೆ ಎಲ್ಲವೂ ಇಷ್ಟ” ಎನ್ನುತ್ತ ಬಾಗಿಲ ಕಡೆಯಿಂದ ಒಬ್ಬಾಕೆ ನಾನಿರುವೆಡೆಗೆ ಸಮೀಪಿಸತೊಡಗಿದರು. ನನ್ನ ಕಿವಿ ಕಣ್ಣುಗಳೆರಡೂ ಏಕಕಾಲದಲ್ಲಿ ಕೆಲಸಮಾಡತೊಡಗಿದವು. ಹೌದು. ಬಂದಾಕೆ ನನ್ನ ಅಮ್ಮನನ್ನು ಸಾಕಷ್ಟು ಹೋಲುತ್ತಿದ್ದಳು. ಅದೇ ಬಣ್ಣ, ಅದೇ ನೀಳ ಕೂದಲು. ಅಷ್ಟೇ ಸೌಂದರ್ಯ. ನನ್ನ ಅಮ್ಮನಂತೆಯೇ ಹರಳು ಉರಿದಂತೆ, ಮಣಿ ಪೋಣಿಸಿದಂತೆ ಮಾತು. ಸೀದಾ ನನ್ನಲ್ಲಿಗೆ ಬಂದಳು. “ನವಿಲಿನಂತಿರುವವಳು ನೀನೇನಾ?” ಎಂದಳು.      “ನಾನು ನವಿಲಿನ ಹಾಗೆ ನಾಟ್ಯ ಮಾಡುತ್ತೇನೆ, ನವಿಲಿನಂತಿಲ್ಲ” ಎಂದೆ ನಾನು. ನನ್ನ ಮೈನೇವರಿಸುತ್ತಾ “ನಾನು ಅಂದುಕೊಂಡದ್ದು ಅದೇ, ಆದರೆ ಕೇಳಿದ ರೀತಿ ಬೇರೆ  ಅಷ್ಟೇ,  ಸರಿ, ಗಂಟು ಮೂಟೆ ಕಟ್ಟು, ನಿನ್ನನ್ನು ಕೊಂಡಿದ್ದೇನೆ, ನನ್ನೊಡನೆ ಬಾ. ಹಾಂ, ನಿನ್ನ ಹೆಸರೇನು? ಕೇಳುವುದನ್ನೇ ಮರೆತಿದ್ದೆ” ಎಂದಳು. ಹೆಸರು ಹೇಳಿದೆ. “ನಿನ್ನ ಮುದ್ದು ಮುಖವನ್ನು ನೋಡಿದರೆ, ನನ್ನ ಹೊಟ್ಟೆಯಲ್ಲೂ ಇಂತಹ ಮಗಳು ಹುಟ್ಟಿದ್ದರೆ ಎಷ್ಟು ಚಂದ ಇತ್ತು ಎನಿಸುತ್ತದೆ. ಅಂತೂ  ನನ್ನ ಮನೆಯ ಬಳಿಯೇ ವಾಸಿಸುವ ಇಲ್ಲಿನ ನೌಕರ ತಿಳಿಸದಿದ್ದರೆ ನಿನ್ನನ್ನು ಕೊಳ್ಳುವುದಿರಲಿ, ನೋಡುವ ಭಾಗ್ಯವೂ ಸಿಗುತ್ತಿರಲಿಲ್ಲ. ಅಲ್ಲವೇನೆ. ಸರಿ, ಇದೇಕೆ ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಿರುವೆ. ಹೊರಡಲು ತಯಾರಾಗು. ಅಯ್ಯಾ, ಬಾ, ನೀನು ಈಕೆಯ ಬಟ್ಟೆ ಬರೆಗಳನ್ನು ಒಪ್ಪವಾಗಿ ಜೋಡಿಸಿ ಬೇಗ ಇವಳನ್ನು ನಾನು ಕರೆದುಕೊಂಡು ಹೋಗಲು ಅಣಿಮಾಡು. ನಾನು ಹೇಳಿದ್ದು ನಿಮಗೆ ಕೇಳಿಸಿತು ತಾನೆ?” ಎಂದು ಒಂದೇ ಉಸಿರಿನಲ್ಲಿ ನನಗೂ ನನ್ನನ್ನು ನೋಡಿಕೊಳ್ಳುತ್ತಿದ್ದ ನೌಕರನಿಗೂ ಪ್ರಶ್ನೆಗಳ ಮಳೆಸುರಿಸಿದಳು. ಅವಳ ಕಣ್ಣುಗಳು ನಮ್ಮ ಉತ್ತರಕ್ಕಿಂತ ನಮ್ಮ ಕ್ರಿಯೆಗಳನ್ನು, ಚಲನವಲನಗಳನ್ನು ಗಮನಿಸುತ್ತಿದ್ದವು.  ನನ್ನ ತಾಯಿಯೇ ನನ್ನ ಮುಂದೆ ನಿಂತು ಹೇಳುತ್ತಿರುವಂತೆ ನನಗೆ ಭಾಸವಾಗತೊಡಗಿತು.  ನನ್ನ ನೋವನ್ನು ದೂರಗೊಳಿಸುವುದರ ಜೊತೆಗೆ ಆ ಮಹಲಿನ ನೌಕರನ ಮೇಲೆ ನನಗಿದ್ದ ಪ್ರೀತಿಗೌರವಗಳನ್ನು ಅವಳ ಮಾತು ಇಮ್ಮಡಿಗೊಳಿಸಿದವು.  ಆತ ನನಗಾಗಿ, ನನ್ನ ಒಳಿತಿಗಾಗಿ ಸ್ಪಂದಿಸಿದ್ದುದು ಆಕೆಯ ಮಾತಿನಿಂದ ತಿಳಿಯಿತು. ಆ ಹಿರಿಯ ಹೃದಯವಂತನಿಗೆ ಮನಸಾರೆ ವಂದಿಸಿ ನಾನು ಆ ಮಹಾತಾಯಿಯ ಹಿಂದೆ ನಡೆದೇ ಬಿಟ್ಟೆ. ಮಹಲಿನ ಮುಂಭಾಗಕ್ಕೆ ಬಂದಾಗ, ಬಾಗಿಲ ಬಳಿ ನಿಂತಿದ್ದ ವ್ಯಾಪಾರಿ ನನ್ನನ್ನೂ ನನ್ನ ಹೊಸ ಒಡತಿಯನ್ನೂ ನೋಡಿ ತಾನು ನಿರೀಕ್ಷಿಸಿದುದಕ್ಕಿಂತಲೂ ಲಾಭವಾಗಿದ್ದಕ್ಕೇನೋ ಅತ್ಯಂತ ಸಂತಸದಿಂದ ನಮ್ಮಿಬ್ಬರನ್ನೂ ಬೀಳ್ಕೊಟ್ಟ. 
ನನ್ನನ್ನು ಕೊಂಡಾಕೆ ಸಾಕಷ್ಟು ಶ್ರೀಮಂತ ಕುಟುಂಬಕ್ಕೆ ಸೇರಿದವಳೆಂದು ಅವಳ ಮಾತಿನಿಂದಲೇ, ಅವಳು ನನ್ನನ್ನೂ ಕರೆದು ಕೂರಿಸಿಕೊಂಡುಹೋದ ವಾಹನದಿಂದಲೇ ತಿಳಿದೆ. ನನ್ನನ್ನು ತನ್ನ  ಮನೆಗೆ ಕರೆದೊಯ್ಯುತ್ತಾಳೆ ಎಂದು ಭಾವಿಸಿದ್ದ ನನಗೆ ಸ್ವಲ್ಪ ನಿರಾಸೆಯಾಯಿತು. ಆತಂಕವೂ ಆಯಿತೆನ್ನಿ. ಮಹಲಿನಿಂದ ಸ್ವಲ್ಪ ದೂರ ಬರುತ್ತಲೇ ಅವಳು ತನ್ನ ವಾಹನ ಚಾಲಕನಿಗೆ ಪಟ್ಟಣದಿಂದ ದೂರವಿದ್ದ ಆಶ್ರಮವೊಂದಕ್ಕೆ ಹೋಗುವಂತೆ ನಿರ್ದೇಶಿಸಿದಳು. ಮಹಲಿನ ನೌಕರ ಈಕೆಯ ಅಂತಃಕರಣದ ಬಗ್ಗೆ ಅಂದು ಹೇಳಿದ್ದ ಮಾತುಗಳು ನನ್ನ ಸ್ಮೃತಿಪಟಲದ ಮೇಲೆ ಮೂಡಿ, ನನ್ನನ್ನು ತನ್ನ ಮನೆಗೆ ಕರೆದೊಯ್ದು  ಸಾಕುತ್ತಾಳೆ ಎಂದುಕೊಂಡಿದ್ದ ನನಗೆ ಒಂದು ರೀತಿಯ ಸಂಕಟವೂ, ದೈತ್ಯ ನಿರಾಶೆಯೂ ಕಾಡತೊಡಗಿದವು. ಮರಳುಗಾಡಿನಲ್ಲಿ ಬಾಯಾರಿ ಅಲೆಯುತ್ತಿರುವ ಯಾತ್ರಿಕನೊಬ್ಬನಿಗೆ ಅಪರೂಪಕ್ಕೆ ಸಿಗುವ ಓಯಸಿಸ್‍ನಂತೆ ಇಂತಹ ಕುಲೀನ ಸ್ತ್ರೀ ನನ್ನಂತಹ ಅಭಾಗಿನಿಗೆ ಸಿಗುವುದಷ್ಟೇ ಅಲ್ಲ ನನ್ನ ತಾಯಿಯ ಪ್ರತಿರೂಪದಂತೆಯೂ ಇದ್ದುದು ನನ್ನ ಪುಣ್ಯವೆಂದೇ ಭಾವಿಸಿ ಕೆಲವೇ ಕ್ಷಣಗಳ ಹಿಂದೆ ಪುಳಕಗೊಂಡಿದ್ದ ನನಗೆ ಏಕೋ ದುಃಖ ಒತ್ತರಿಸಿ ಬಂತು. ನನ್ನನ್ನು ಯಾವುದೋ ಆಶ್ರಮಕ್ಕೆ ಕೊಟ್ಟು ತಾನು ಕೃತಾರ್ಥಳಾಗುವ ಬಯಕೆ ಇವಳದು ಎಂದೆನ್ನಿಸಿ, ನನ್ನ ಒಳಮನಸ್ಸಿನ ಬಯಕೆಯನ್ನು ಅವಳಿಗೆ ಕೂಗಿ ಹೇಳಬೇಕೆಂದುಕೊಂಡೆ. ನಾನಿನ್ನೂ ಹದಿಹರೆಯದವಳು, ತಾಯಿತಂದೆಯರ ಬಳಿಯಿದ್ದು ಆಟವಾಡುವ ವಯಸ್ಸಿನವಳೆಂದು ನಿಮಗೆ ಕಾಣದೇನು. ಈ ವಯಸ್ಸಿನಲ್ಲೇ ಆಶ್ರಮಕ್ಕೆ ಸೇರಿ, ವಯಸ್ಸಿಗೆ ಸಹಜವಾದ ಬಯಕೆ ಆಸೆ ಆಕಾಂಕ್ಷೆಗಳಿಗೆ ತಣ್ಣೀರೆರಚಿ, ಸಾಯುವತನಕ ವೈರಾಗ್ಯದ ಜೀವನವನ್ನೊಪ್ಪಿಕೊಂಡು ಬದುಕಬೇಕೇನು? ಎಂದೆಲ್ಲಾ ಅವಳ ಅಂತರಂಗಕ್ಕೆ ತಿಳಿಯಬಯಸಿದೆ. ಮಹಲಿನಲ್ಲಿ ಬಂಧಿಯಾಗಿದ್ದಾಗ ಕಲ್ಪಿಸಿಕೊಂಡು ಅನುಭವಿಸುತ್ತಿದ್ದ ಭಯದ ಬದುಕು ಸಹಿಸಲು ಎಷ್ಟು ಕಷ್ಟವೋ ಆಶ್ರಮದಲ್ಲಿದ್ದು ಸನ್ಯಾಸಿನಿಯಂತೆ ಬದುಕುವುದೂ ಕೂಡ ನನ್ನ ಪಾಲಿಗಂತೂ ಅಷ್ಟೇ ಕಷ್ಟ ಎಂದು ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಆದರೂ ಒಂದು ಕ್ಷಣ ಯೋಚಿಸಿ ಸ್ವಲ್ಪ ನಿಧಾನಿಸುವುದು ಒಳ್ಳೆಯದು ಎನ್ನಿಸಿತು. ಎಲ್ಲ ಸಮಸ್ಯೆಗೂ ಒಂದಲ್ಲ ಒಂದು ಪರಿಹಾರವಿದೆಯೆಂದು ಹಿಂದೆ ಅಪ್ಪ ಅಮ್ಮನಿಗೆ ಹೇಳುತ್ತಿದ್ದುದು ನೆನಪಿಗೆ ಬಂತು. ದೇವರೇ, ನನ್ನ ಸಮಸ್ಯೆಗಂತೂ ಆ ಪರಿಹಾರ ನನಗಿಷ್ಟವಾಗಿರುವಂತೆ ಮಾಡು ತಂದೆ ಎನ್ನುತ್ತ ಅವನನ್ನೇ ಜಪಿಸತೊಡಗಿದೆ. ಒಡತಿಯ ಮಡಿಲಲ್ಲಿ ಹಾಗೇ ನಿದ್ರೆಗೆ ವಶವಾದದ್ದು ನನ್ನ ಅರಿವಿಗೆ ಬರಲೇ ಇಲ್ಲ.
ಜರ್ರೆಂದು ವಾಹನ ನಿಂತಾಗಲೇ ನನಗೆ ಎಚ್ಚರವಾದದ್ದು. ನನ್ನನ್ನು ಕೈಹಿಡಿದು ಒಡತಿ ಕೆಳಗಿಳಿದು ನಡೆಯುತ್ತಿದ್ದರೆ ನನಗೋ ಎಡ ಬಲ ಹಿಂದೆ ಮುಂದೆ ಹೀಗೆ ಎಲ್ಲ ಕಡೆಯಿಂದಲೂ ಹೇಗೇ ನೋಡಿದರೂ ಕಣ್ಮನ ತುಂಬುವ ಆ ವನಸಿರಿಯ ಸೊಬಗಿನ ರಸದೌತಣ. ಪ್ರಕೃತಿಮಾತೆಯ ಮಡಿಲಲ್ಲಿ ಹೂಗಿಡ ಬಳ್ಳಿಗಳು, ಸಪೋಟ, ಅಡಕೆ ಹಾಗು ತೆಂಗಿನ ತೋಟಗಳು. ಅಲ್ಲಲ್ಲಿ ಆಶ್ರಮದ ಸುಂದರ ಮಂಟಪಗಳು, ಭೋಜನ, ವ್ಯಾಯಾಮ, ಪಾಠಶಾಲೆಗಳು, ಅತಿಥಿಗೃಹಗಳು, ಶಿಸ್ತಾಗಿ ವ್ಯಾಯಾಮ ಮಾಡುತ್ತಿದ್ದ ವಿದ್ಯಾರ್ಥಿಗಳು. ಕಣ್ಣುಗಳಿಗೆ ಈ ಹಬ್ಬವಾದರೆ, ಕಿವಿಗಳಿಗೆ ಹಕ್ಕಿಗಳ ಇಂಚರ,  ವೇದಮಂತ್ರಗಳ ಘೋಷ, ತಂಪಾದ ಗಾಳಿ ಮೈಗೆ ಹಿತ ನೀಡಿದರೆ, ಆ ಗಾಳಿಯೇ ಹೊತ್ತುತಂದ ಸುವಾಸನೆ ಮೂಗನ್ನು ಸೆರೆಹಿಡಿದಿತ್ತು. 
ಅತಿಥಿಗೃಹಕ್ಕೇ ಹೊಂದಿಕೊಂಡಿದ್ದ ಅಡಿಗೆ ಮನೆಯಲ್ಲಿ ಪುಷ್ಕಳ ಊಟದ ರುಚಿ ನಾಲಗೆಗೆ. ಪಂಚೇಂದ್ರಿಯಗಳು ಹೀಗೆ ಅಲ್ಲಿನ ಸೃಷ್ಟಿಸೌಂದರ್ಯವನ್ನೆಲ್ಲ ಐದಾರು ತಾಸು ಮನಸಾರೆ ಹೀರಿ, ದೇಹ ಮನಸ್ಸುಗಳೆರಡೂ ದಣಿದು ಅತಿಥಿಗೃಹದಲ್ಲಿ ವಿರಮಿಸಲು ನಾವು ಮೆಟ್ಟಲೇರುತ್ತಿದ್ದಂತೆ ಸೂರ್ಯ ಹೊಂಬಣ್ಣದೋಕುಳಿಯಲ್ಲಿ ಮಿಂದು ಮುಗುಳ್ನಗೆ ಬೀರುತ್ತ ಪ್ರಕೃತಿಮಾತೆಗೆ ವಂದಿಸಿ ಪಡುವಣ ದಿಗಂತದಲ್ಲಿ ಮರೆಯಾಗತೊಡಗಿದ್ದ. ಆಶ್ರಮಕ್ಕೆ ಬರುವ ದಾರಿಯಲ್ಲಿ ಸ್ವಲ್ಪ ನಿದ್ರೆ ಮಾಡಿದ್ದರೂ, ಆಶ್ರಮದೊಳಗಿನ ಓಡಾಟದಿಂದ ದಣಿದಿದ್ದ ನನಗೆ ಆ ರಾತ್ರಿ ಮಲಗಿದ್ದಷ್ಟೇ ನೆನಪು.
ಮುಂಜಾನೆ ನನಗೆ ಎಚ್ಚರವಾದದ್ದು ಮೊದಲೋ ಅಥವಾ ಯಾರೋ ಹೊರಗಡೆ ಬಾಗಿಲು ತಟ್ಟಿ ಏನೋ ಹೆಸರನ್ನು ಹೇಳಿದ್ದು ಮೊದಲೋ ನೆನಪಾಗುತ್ತಿಲ್ಲ. ನನ್ನ ಸ್ವಭಾವವೇ ಹೀಗೆ. ಯಾವುದನ್ನಾದರೂ ಅಂದುಕೊಂಡರೆ ಅದನ್ನೇ ಹಿಂಬಾಲಿಸುವುದು. 
ಓ ಮರೆತೆ, ನಿಮಗೆ ಏನನ್ನೋ ಹೇಳುತ್ತಾ ಆ ಘಟನೆ ನಡೆದ ಕ್ಷಣದಲ್ಲಿ ನನ್ನ ಕಿವಿಗಳು ಕೇಳಿದ ಹೊರಗಿನಿಂದ ಕೂಗಿದ ಧ್ವನಿಯ ಬಗ್ಗೆ ನಾನು ಹೇಳಲೇ ಇಲ್ಲ. ಅದು ನನ್ನ ಅಪ್ಪನ ಧ್ವನಿಯನ್ನು ಹೋಲುತ್ತಿತ್ತು. ಒಡತಿ ಬಾಗಿಲ ತೆರೆದಾಗ ನಾನು ಕಂಡದ್ದು ಸಾಕಷ್ಟು ಎತ್ತರದ ವ್ಯಕ್ತಿಯೊಬ್ಬನನ್ನು.  ಆವನು ಬಾಗಿಲ ಬಳಿಯೇ ನಿಂತು “ ಹೊರಗೆ ತುಂಬ ಚಳಿ” ಎನ್ನುತ್ತ ನನ್ನ ಒಡತಿಗೆ ಗೌರವಪೂರ್ವಕ ನಮನಗಳನ್ನು ತಿಳಿಸಿದ. ಅವರಿಬ್ಬರನ್ನು ಗಮನಿಸಿದ ನನಗೆ ಅವರು ಈಗಾಗಲೇ ಪರಸ್ಪರ ಪರಿಚಿತರು ಎಂದು ತಿಳಿಯಿತು. ಒಡತಿಯೂ ಆತನಿಗೆ ಪ್ರತಿವಂದಿಸಿ ಒಳಗೆ ಕರೆದಳು. ಸಂಕೋಚದಿಂದ ಒಳಬರಲು ನಿರಾಕರಿಸಿ ಆತ ಬಾಗಿಲಲ್ಲಿಯೇ ನಿಂತ. “ಈ ಆಶ್ರಮಕ್ಕೆ ಬಂದು ಇಲ್ಲಿನ ವಿದ್ಯಾರ್ಥಿಗಳೊಡನೆ ನಿಮ್ಮಲ್ಲಿರುವ ವಿಶೇಷಜ್ಞಾನವನ್ನು ಹಂಚಿಕೊಂಡದ್ದಕ್ಕಾಗಿ ನನ್ನ ಕೃತಜ್ಞತೆಗಳು ನಿಮಗೆ ಸಲ್ಲುತ್ತವೆ” ಎಂದಳು ಒಡತಿ. “ನಿಮ್ಮಲ್ಲಿ ನಾನು ಮೊದಲಿನಿಂದಲೂ ಇಟ್ಟಿರುವ ಭಾವನೆ ನನ್ನನ್ನು ಇಲ್ಲಿಗೆ ಎಳೆತಂದು ನನ್ನ ಕೈಯಲ್ಲಿ ಕಾಯಕ ಮಾಡಿಸಿದೆ. ಆದ್ದರಿಂದ ನನ್ನ ಕಾರ್ಯದಲ್ಲೇನಾದರೂ ಶ್ರೇಯಸ್ಸು ದೊರೆತಿದ್ದರೆ ಅದು ನಿಮಗೇ ಸಲ್ಲಬೇಕು” ಎಂದು ಆತ ವಿನಯಪೂರ್ವಕವಾಗಿ ಹೇಳಿದ. ನನಗರಿವಿಲ್ಲದೆಯೇ ನನ್ನ ಮನಸ್ಸು ಆತನ ಆಸರೆಯನ್ನೂ ವಾತ್ಸಲ್ಯವನ್ನೂ ಬಯಸತೊಡಗಿತು. “ನೀವು ವಿಶ್ವಾಸಾರ್ಹರು. ಈ ಆಶ್ರಮದ ಎಲ್ಲರಿಗೂ ಒಳ್ಳೆಯ ಸ್ನೇಹಿತರು. ಇಲ್ಲಿನ ಮಕ್ಕಳಿಗೆ ಸ್ಫೂರ್ತಿತುಂಬಿದವರು. ನಿಮಗೆ ನಾನು ಸದಾ ಋಣಿ” ಎಂದು ನನ್ನ ಒಡತಿ ಹೇಳುತ್ತ “ನಾನೊಂದು ಉಡುಗೊರೆಯನ್ನು ನಿಮಗೆ ಕೊಡಬೇಕೆಂದಿದ್ದೇನೆ, ದಯಮಾಡಿ ಸ್ವೀಕರಿಸಿ, ಬೇಡವೆನ್ನಬೇಡಿ” ಎನ್ನುತ್ತ ಮರೆಯಲ್ಲಿದ್ದ ನನ್ನನ್ನು ಎದುರಿಗೆ ತಂದು, “ಇವಳು ನಾನು ಮೆಚ್ಚಿಕೊಂಡು ನಿಮಗಾಗಿ ತಂದ ಶಾಲಿನಿ, ಅಲ್ಲ ನನ್ನ ಮೆಚ್ಚಿನ ಶಾಲು, ನೀವೂ ಮಕ್ಕಳೆಂದರೆ ಇಷ್ಟಪಡುತ್ತೀರಿ. ಇವಳಿಗೆ ನಿಮ್ಮ ಆಸರೆ ಸಿಕ್ಕರೆ ಇವಳೂ ಸಾಕುಮಗಳಾಗಿ ನಿಮ್ಮ ಬದುಕಿಗೆ ಬೆಳಕು ಕೊಟ್ಟಾಳು” ಎನ್ನುತ್ತ ನನ್ನನ್ನು ಆತನ ಕೈಗೆ ಒಪ್ಪಿಸಿದಳು.  
ಆನಂದಭರಿತರಾಗಿ ಮೂವರೂ ಪರಸ್ಪರರನ್ನು ಸಂತೃಪ್ತಭಾವದಿಂದ ನೋಡುತ್ತಿದ್ದ ಆ ಕ್ಷಣಗಳಿಗೆ, ಮುಂಜಾನೆಯ ಉದಯರವಿಯ ಕಿರಣಗಳನ್ನು ಮೈತುಂಬಿಕೊಂಡು ಚೆಲುವಿನ ನಂದನವನದಂತಿದ್ದ ಇಡೀ ಆಶ್ರಮ ತಾನೂ ಸಾಕ್ಷಿಯಾಗಿತ್ತು.

- ಕೆ ಎಸ್ ಮಲ್ಲೇಶ್,  
ಮೊಬೈಲ್ 9900598270