|
ಕಬಿನಿ ನದಿ (ಹೊಳೆ ದಾಟಿದರೆ ಕೇರಳ) |
|
ಮೇಲೆ ಆಟೋ ಕಾಣಿಸುವವರೆಗೆ ನೀರು ಬಂದಿತ್ತಂತೆ |
ಕಬಿನಿ ನದಿ ಉಕ್ಕಿ ಹರಿದಿದ್ದರಿಂದ ಎಚ್ ಡಿ ಕೋಟೆಯ ಕೆಲವು ಹಳ್ಳಿಗಳು ನೀರಿನಿಂದ ತುಂಬಿದ್ದವು, ಮನೆಗಳಿಗೆ ನೀರು ನುಗ್ಗಿತ್ತು, ಹೊಲ ಗದ್ದೆಗಳು ಹಾಳಾಗಿದ್ದವು. ನೀರು ಕಡಿಮೆಯಾದ ನಂತರ ಇತರೆ ಸಮಸ್ಯೆಗಳು ಕಂಡುಬಂದಿದ್ದವು. ಜನ ತಮ್ಮ ಮನೆಗಳನ್ನು ಹೊಲಗದ್ದೆಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಅಲ್ಲಿನ ಕೂಲಿಕಾರ್ಮಿಕರಿಗೆ ಕೂಲಿ ಕೆಲಸ ಸಿಗದಂತಾಗಿತ್ತು. ಹಾಗೆಯೇ ಅಲ್ಲಿ ಹಾಡಿಗಳಲ್ಲಿ ಬುಡಕಟ್ಟು ಜನಾಂಗದವರಿದ್ದರು.
|
ಎಚ್ ಡಿ ಕೋಟೆಯತ್ತ ಪಯಣ - ಇಡೀ ಶಿಬಿರದ ಜವಾಬ್ದಾರಿ ಹೊತ್ತ ತಮ್ಮ ರವಿಯೊಂದಿಗೆ |
ಮೂರು ಕಡೆಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಮಾಡಿ ಆಹಾರಪದಾರ್ಥಗಳನ್ನು, ಬಟ್ಟೆಯನ್ನು, ಇತರೆ ಅವಶ್ಯಕ ವಸ್ತುಗಳನ್ನು ಹಂಚುವುದೆಂದು ನಿರ್ಧರಿಸಲಾಗಿತ್ತು. ಬಳ್ಳೆ, ಮಚ್ಚೂರು ಮತ್ತು ಡಿ ಬಿ ಕುಪ್ಪೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು, ಬಳ್ಳಾರಿ, ಮೈಸೂರಿನ ಮೆಡಿಕಲ್ ಸರ್ವೀಸ್ ಸೆಂಟರ್ ನ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಬಂದಿದ್ದರು.
|
ಮೆಡಿಕಲ್ ಸರ್ವೀಸ್ ಸೇಂಟರ್ ನ ಡಾ. ರಾಜಶೇಖರ್ |
|
ಔಷಧಿ ವಿತರಣೆಯಲ್ಲಿ ನಿರತರಾದ ಗೆಳತಿ ಶೀಬಾ |
ಹಾಗೆಯೇ ಸುಮಾರು 40ಕ್ಕೂ ಹೆಚ್ಚು ಯುವಕ-ಯುವತಿಯರು ಸ್ವಯಂಸೇವಕರಾಗಿ ಬಂದಿದ್ದರು. ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿಯಿಂದ ನಾನು ಮತ್ತು ಬಿಂದು ಹೋಗಿದ್ದೆವು.
|
ಬಿಂದು ಮತ್ತು ನಾನು |
ಮೂರು ಕಡೆಗಳಲ್ಲಿ ಸುಮಾರು 650 ಜನರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು, ಔಷಧಿಗಳನ್ನು ವಿತರಿಸಲಾಯಿತು. ಬಟ್ಟೆ ಮತ್ತು ಆಹಾರ ಪದಾರ್ಥಗಳನ್ನು ಹಂಚಲಾಯಿತು.
|
ವೈದ್ಯರ ಒಂದು ತಂಡ |
ಆಶಾ ಕಾರ್ಯಕರ್ತೆ ಲಕ್ಷ್ಮಿ ಮತ್ತು ನನ್ನ ಸ್ನೇಹಿತೆಯ ಗೆಳತಿಯಾದ ಶೈಲಜಾ ಮತ್ತು ಅವರ ಮಗ ನಂದೀಶ್ ಬಹಳ ಸಹಾಯ ಮಾಡಿದರು
|
ಆಶಾ ಕಾರ್ಯಕರ್ತೆ ಲಕ್ಷ್ಮಿಯೊಂದಿಗೆ |
ಆಧುನಿಕ ಭಾರತದಲ್ಲಿಯೂ ಇಂತಹ ಅಮಾಯಕ ಜನರಿದ್ದಾರಾ ಎನ್ನುವಂತಿದ್ದರು ಕೆಲವರು. ಹೆಣ್ಣುಮಕ್ಕಳ ಶಿಕ್ಷಣ ಕೇವಲ 10ನೇ ತರಗತಿಯವರೆಗೆ ಮಾತ್ರ. ಬಡತನ, ದಾರಿದ್ರ್ಯ ಎತ್ತಿ ಕಾಣುತ್ತಿತ್ತು. ಅಷ್ಟಾದರೂ ಅವರಲ್ಲಿ ಅತಿಯಾಸೆಯನ್ನು ಕಾಣಲಿಲ್ಲ. ಎಲ್ಲಾ ಮಕ್ಕಳಿಗೆ ನಾನು ಡಿಬಿ ಕುಪ್ಪಯಲ್ಲಿ ಬಿಸ್ಕತ್ ಪ್ಯಾಕೆಟ್ ಕೊಡುತ್ತಿದ್ದೆ. ಅದರಲ್ಲಿ ಒಬ್ಬನನ್ನು ಕರೆದು ನೀನು ತೆಗೆದುಕೊಂಡಿಲ್ಲವೇನೊ ಎಂದು ಕೇಳಿದೆ. ಅವನು, “ನಾನು ಈಗಾಗಲೇ ತೆಗೆದುಕೊಂಡಿದ್ದೀನಕ್ಕ, ಇಲ್ಲಿ ನೋಡು” ಎಂದು ಜೇಬಿನಲ್ಲಿದ್ದ ಪ್ಯಾಕೆಟ್ ಅನ್ನು ತೋರಿಸಿದ. ಅದನ್ನು ಮುಚ್ಚಿಟ್ಟು ನನ್ನಿಂದ ಇನ್ನೊಂದು ಪ್ಯಾಕೆಟ್ ಪಡೆಯಬಹುದಾಗಿದ್ದರೂ ಅವನಾ ರೀತಿ ಮಾಡದ ಮನಸ್ಸನ್ನು ಕಂಡು ಆಶ್ಚರ್ಯವಾಯಿತು. ತಮಗೆ ಬಟ್ಟೆ ಸಿಕ್ಕ ಮೇಲೆ ಬೇರೆಯವರನ್ನು ಕರೆತಂದರು ಆ ಮಕ್ಕಳು, ಇವರಿಗೂ ಕೊಡಿ ಎಂಬಂತೆ.
ಆದರೆ ವಿಷಾದಕರವೇನೆಂದರೆ, ಅಲ್ಲಿನ ಬಹುತೇಕ ಗಂಡಸರ ವಯಸ್ಸಿನ ಭೇದವಿಲ್ಲದೆ ಹಾಡುಹಗಲಲ್ಲೇ ಹೆಂಡ ಕುಡಿಯುತ್ತಿರುವುದು ಕಂಡು ಬಂದಿತು. ವಿಚಾರಿಸಿದಾಗ ಹೆಣ್ಣುಮಕ್ಕಳು ಕೂಲಿಗೆ ಹೋಗಿ ಮನೆಯನ್ನು, ಇವರನ್ನು ನೋಡಿಕೊಳ್ಳುತ್ತಾರೆ ಎಂದು ಗೊತ್ತಾಯಿತು. ಈ ಸಮಸ್ಯೆಗೆ ಪರಿಹಾರ ಏನು?
ಎಲ್ಲಿಯವರೆಗೆ ಸರ್ಕಾರಗಳು ಎಲ್ಲಾ ವ್ಯಕ್ತಿಗಳ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವುದಿಲ್ಲವೊ ಅಲ್ಲಿಯವರೆಗೂ ಈ ಪರಿಸ್ಥಿತಿ ಬದಲಾಗುವುದೇ? ಎಲ್ಲಿಯವರೆಗೂ ಜನಪರ ಸರ್ಕಾರಗಳು ಅಧಿಕಾರಕ್ಕೆ ಬರುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಜನರ ಪರಿಸ್ಥಿತಿ ಹೀಗೆಯೇ ಉಳಿಯುವುದೇ? ಇದು ಕೇವಲ ಸರ್ಕಾರಗಳ ವೈಫಲ್ಯವೇ ಅಥವಾ ನಮ್ಮ ವಿಪಲತೆಯೇ? ನಾವೇನೂ ಮಾಡಲಾಗದ ಅಸಹಾಯಕತೆಯೇ? ಇಡೀ ವ್ಯವಸ್ಥೆ ಬದಲಾಗಬೇಕೇ? ಆ ವ್ಯವಸ್ಥೆಯನ್ನು ಬದಲಾಯಿಸಲು ನಾವು ಜನರಲ್ಲಿ ಅರಿವನ್ನು ಮೂಡಿಸಬೇಕೆ? ಈ ಪ್ರಶ್ನೆಗಳು ಎಲ್ಲಾ ಸ್ವಯಂಸೇವಕರ ಮನದಲ್ಲೂ ಮೂಡಿದ್ದವು. ವ್ಯವಸ್ಥೆ ಎಂದು ಬದಲಾಗುವುದೊ ಗೊತ್ತಿಲ್ಲ ಆದರೆ ಅಲ್ಲಿಯವರೆಗೂ ಹಾಗೆಯೇ ಸುಮ್ಮನೆ ಕೈಕಟ್ಟಿ ಕೂರದೆ ಜನರಿಗೆ ನಮ್ಮ ಕೈಲಾದಷ್ಟು ನೆರವು ನೀಡೋಣ ಎಂಬ ಭಾವ ಮಾತ್ರ ಎಲ್ಲಾ ಕಾರ್ಯಕರ್ತರಲ್ಲೂ ಮೂಡಿತ್ತು.
ಹಿಂದಿರುಗಿ ಬರುವಾಗ ಎಲ್ಲೆಡೆ ಹಚ್ಚ ಹಸುರನ್ನು ಕಂಡು ಒಂದು ಪ್ರಶ್ನೆ ಮೂಡಿತು – “ನಮ್ಮ ದೇಶದಲ್ಲಿ ಇಷ್ಟು ಸಂಪನ್ಮೂಲಗಳಿದ್ದರೂ ಜನ ಇಷ್ಟು ಬಡತನದಲ್ಲಿ ನರಳಬೇಕೆ?” ಇದಕ್ಕೆ ಉತ್ತರವನ್ನು ನೀಡುವವರಾರು?
|
ಕಬಿನಿ ನದಿಯ ಹತ್ತಿರದಲ್ಲಿ ಹಿಂದಿರುಗಿ ಬರುವಾಗ |
- ಸುಧಾ ಜಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ