Pages

ಕಥೆ - ಶಾಲಿನಿ


ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ನಮ್ಮ ಮನೆಯಲ್ಲಿ ನಡೆದ ರೀತಿ ನಿಮ್ಮ ಮನೆಯಲ್ಲಿ ನಡೆದಿರಲಾರದು. ಮದುವೆಯಾದ ಹೊಸತರಲ್ಲಿಯೇ ಅಮ್ಮನ ಮನಸ್ಸಿನಲ್ಲಿದ್ದ ಆಸೆಯನ್ನು ಗುರುತಿಸಿ  “ನೀನು ಹೆಣ್ಣು ಮಗುವನ್ನು ಹಡೆಯುತ್ತೀಯೆ. ಅವಳಿಗೆ ಈಗಲೇ ಹೆಸರನ್ನೂ ಹುಡುಕಿಟ್ಟಿದ್ದೇನೆ, ಶಾಲಿನಿ ಎಂದು” ಹೀಗಂದನಂತೆ ಅಪ್ಪ.  ಅಂದಿನಿಂದ ಅಮ್ಮ ನನ್ನನ್ನು ಹಡೆಯುವ ಕನಸನ್ನು ನನಸಾಗಿಸತೊಡಗಿದಳು. ತಾನು ಹೇಳಿದ್ದಕ್ಕೆ ಸಾಕ್ಷಿಯಾಗಿ ಹುಟ್ಟಿದ್ದರಿಂದ ಅಪ್ಪನಿಗೂ ಸಂತೋಷವಾಗಿ, ಬೆಳೆದು ರೂಪುಗೊಳ್ಳುತ್ತಿದ್ದಂತೆ ನನ್ನನ್ನು ಹೆಚ್ಚೆಚ್ಚು ಹಚ್ಚಿಕೊಳ್ಳುತ್ತಿದ್ದುದು ಇಷ್ಟವಾಗತೊಡಗಿ ಸದಾ ಅವನ ಬಳಿಯೇ ಇರಬೇಕೆನ್ನುವ ಬಯಕೆ ನನ್ನಲ್ಲೂ ಹೆಚ್ಚಾಗತೊಡಗಿತು. ಆದರೇನಂತೆ, ಆಗಿನ ದುಡಿಯುವ ಸಮಾಜದ ರೀತಿನೀತಿಗಳು, ಬದುಕಿನ ಅಗತ್ಯಗಳಿಗಾಗಿ ರೂಪಿತವಾಗಿದ್ದವೇ ವಿನಾ ಹದಿಹರೆಯದ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕಾಗಲೀ ಆಶೋತ್ತರಗಳಿಗೆ ಬೆಂಬಲವಾಗಿಯಾಗಲೀ ಅಲ್ಲ. ಜನರ ಕಷ್ಟನಷ್ಟಗಳು ಎಷ್ಟಿದ್ದವೆಂದರೆ, ಬದುಕಿನ ನಿರ್ವಹಣೆಗಾಗಿ ಬೇರೆ ಯಾವ ದಾರಿಯೂ ತೋರದಿದ್ದಾಗ ತಮ್ಮ ಸಂತಾನಗಳನ್ನೇ ಮಾರಬೇಕಾದ ಅನಿವಾರ್ಯತೆಯಿತ್ತು. ಅಂತಹ ಕಾಲದಲ್ಲೇ ನಾನೂ ಇದ್ದದ್ದು, ಬೆಳೆದದ್ದು. 

ನನ್ನ ತಂದೆ ಆರು ಅಡಿ ಎತ್ತರದ ಸ್ವಲ್ಪ ಒರಟು ಮುಖದ ದಪ್ಪ ವ್ಯಕ್ತಿ. ಆದರೆ ಆ ಎತ್ತರಕ್ಕೆ ತಕ್ಕಂತೆ ಶ್ರೀಮಂತಿಕೆಯಾಗಲೀ ದರ್ಪವಾಗಲೀ ಅವನಲ್ಲಿರಲಿಲ್ಲ. ನನ್ನ ತಾಯಿಯ ಎತ್ತರವೂ ಸ್ವಲ್ಪ ಜಾಸ್ತಿಯೇ. ಅವಳ ನೀಳ ಕೂದಲು, ಹೊಳೆಯುವ ಕಣ್ಗಳು, ಎಣ್ಣೆಗೆಂಪು ಬಣ್ಣದ ದುಂಡುಮುಖ, ಮುಖಕ್ಕೆ ತಕ್ಕಂತೆ ಮೂಗು, ಅಂದವಾದ ತುಟಿಗಳ ಒಳಗೆ ಜೋಡಿಸಿದ ಹಲ್ಲುಗಳ ಸಾಲು. ಯಾರೇ ನೋಡಲಿ, ಇನ್ನಷ್ಟು ಹೊತ್ತು ನೋಡಬೇಕೆನ್ನುವಂತಹ ಸೌಂದರ್ಯ ಅವಳಲ್ಲಿತ್ತು. ಹಾಗೆ ನೋಡಿದರೆ ಸೌಮ್ಯಮುಖಿಯಾದ ಅಮ್ಮ ಒರಟುಮುಖದ ಅಪ್ಪನನ್ನು ಹೇಗೆ ಒಪ್ಪಿಕೊಂಡಳೋ ಗೊತ್ತಿಲ್ಲ (ಅವಳ ಬೇಕು ಬೇಡಗಳಿಗೆ ಕಿಮ್ಮತ್ತೇ ಇರಲಿಲ್ಲವೆನ್ನುವುದು ಬೇರೆ ಮಾತು ಬಿಡಿ). 

ಅಪ್ಪ ಒಳಗೆ ಮೃದು. ಆದರೆ ಅಮ್ಮ ತುಸು ಗಡಸು, ನೇರ ಮಾತಿನವಳು, ಅಪ್ಪನಿಗೆ ಸ್ವಲ್ಪ ತದ್ವಿರುದ್ಧ. ಆದರೂ ಇಬ್ಬರ ಭಾವನೆಗಳಲ್ಲಿ ಬಹಳ ಸಾಮ್ಯ. ಇಬ್ಬರೂ ಕರ್ತವ್ಯಪರರು, ಪ್ರಾಮಾಣಿಕರು, ಬಂದ ಗಳಿಕೆಯಲ್ಲಿ ಸಮಾಜಕ್ಕೂ ಸ್ವಲ್ಪ ಅರ್ಪಿಸಬೇಕೆನ್ನುವ ಮನಸ್ಸಿನವರು, ದೇಹಕ್ಕಿಂತ ದೇಶ ಮುಖ್ಯ ಎನ್ನುವವರು. ಈ ಮುಖ್ಯ ಗುಣಗಳಿಂದಾಗಿಯೇ ಅವರು ಸಮಾನಮನಸ್ಕರು.  ಆದರೇನು, ಮೊದಲೇ ಹೇಳಿದಂತೆ ಹೊಟ್ಟೆಯ ಹಸಿವಿನೆದುರು ನಿಲ್ಲುವ ಧೈರ್ಯ ಯಾವ ತತ್ವ ಅಥವಾ ಸಿದ್ಧಾಂತಕ್ಕಿದೆ, ಹಸಿವನ್ನು ಸಂಪೂರ್ಣ ಹೋಗಲಾಡಿಸಲು ಯಾವ ತಪಸ್ಸಿದೆ ಹೇಳಿ?

ಅಪ್ಪ ಒಂದು ದಿನ ನನ್ನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗುತ್ತೇನೆಂದು ಹೇಳಿದ. ಹಿಂದಿನ ರಾತ್ರಿಯೇ ಅಮ್ಮನೊಡನೆ ಮಾತನಾಡಿದ್ದು ನನಗೆ ಕೇಳಿಸಿತ್ತಾಗಿ, ಅವನ ಉದ್ದೇಶ ನನಗೆ ಗೊತ್ತಾಗಿತ್ತು. ಬೆಳಿಗ್ಗೆ ನನ್ನ ಕೈ ಹಿಡಿದು ಅಪ್ಪ ಹೊರಟು ಬಾಗಿಲ ಬಳಿಗೆ ಬಂದಾಗ, ಅಮ್ಮನನ್ನು ಕೊನೆಯ ಬಾರಿಗೆ ನೋಡಿದೆ. ಅವಳ ನೋಟದಲ್ಲಿ ನನ್ನ ಅಗಲುವಿಕೆಯ ಯಾವ ನೋವಿನ ಛಾಯೆಯೂ ಕಾಣಿಸಲಿಲ್ಲ. ಬದಲಾಗಿ ನವಿಲಿನಂತೆ ಚುರುಕಾಗಿರುವ ನನ್ನನ್ನು ಬಹಳ ಹಣಕೊಟ್ಟು ಪಡೆದುಕೊಳ್ಳುವ ಶ್ರೀಮಂತರು ಸಿಕ್ಕೇ ಸಿಗುತ್ತಾರೆನ್ನುವ ಆಸೆ, ನಂಬಿಕೆ ಆ ನೋಟದಲ್ಲಿತ್ತು. ಇಂತಹ ಅಗಲಿಕೆಗಳು ಅಂದಿನ ಸಮಾಜದಲ್ಲಿ ಸರ್ವೇ ಸಾಮಾನ್ಯವಾಗಿದ್ದರಿಂದ, ಅವಳ ಕಣ್ಣುಗಳಲ್ಲಿ ನನ್ನ ಅಗಲಿಕೆಯ ನೋವನ್ನು ಪ್ರತಿಬಿಂಬಿಸುವ ಭಾವನೆಗಳನ್ನು ಹುಡುಕುವುದು ಸಾಧುವಲ್ಲವೆಂದೂ ಕೂಡ ನನಗೆ ಆ ಕ್ಷಣಕ್ಕೆ ಅನ್ನಿಸತೊಡಗಿತು. ಈ ದುಂಡಾಗಿರುವ ಭೂಮಿಯ ಮೇಲೆ ಮತ್ತೊಮ್ಮೆ ಭೇಟಿಯಾಗುವ ಕನಸು ಹೊತ್ತು ಅವಳ ನೋಟದಿಂದ ವಿಮುಖಳಾಗಿ ಅಪ್ಪನ ಹೆಜ್ಜೆಯ ಗುರುತುಗಳಿಗೆ ನನ್ನ ಹೆಜ್ಜೆಗಳನ್ನು ಸೇರಿಸತೊಡಗಿದೆ. 

ಮನೆಯಿಂದ ಹೊರಡುವಾಗಿದ್ದ ಉತ್ಸಾಹ, ಪಟ್ಟಣಕ್ಕೆ ದಾರಿ ಸವೆಸಿ, ನಡೆಯಲಾರೆನೆಂದಾಗ ನನ್ನನ್ನೂ ಹೊತ್ತು, ಸುಸ್ತಾಗಿ ಬಂದು ತಲುಪಿದ ಅಪ್ಪನಲ್ಲಿ ಹುಡುಕಿದರೂ ಸಿಗಲಿಲ್ಲ. ನನ್ನನ್ನು ಒಳ್ಳೆಯ ಕುಟುಂಬಕ್ಕೆ ಕೊಟ್ಟು ನನ್ನ ಭವಿಷ್ಯ ಉತ್ತಮವಾಗಿರಲೆಂದು ಮೊದಲಿಗೆ  ಆತ ಬಯಸಿದ್ದು ನಿಜ. ಆದರೆ ಅವನ ದುರಾದೃಷ್ಟವೋ ಏನೋ ಅಂತಹವರಾರೂ ಅವನ ಬಳಿ ಸುಳಿಯಲಿಲ್ಲ. ಅಪ್ಪನ ಹಸಿವಿನೆದುರು ನನ್ನ ಬಗೆಗಿದ್ದ ಆತನ ಆಕಾಂಕ್ಷೆ ಪಟ್ಟಣದ ರಣಬಿಸಿಲೇರುತ್ತಿದ್ದಂತೆ ಮಂಜಿನಂತೆ ಕರಗತೊಡಗಿತು. ರಹಸ್ಯವಾಗಿ ಇದನ್ನೇ ಗಮನಿಸುತ್ತಿದ್ದವನೊಬ್ಬ ಸದ್ಗೃಹಸ್ಥನಂತೆ ನಟಿಸಿ ಗಾಳ ಹಾಕಿ ಬೀಸಿದ ಬಲೆಗೆ ನನ್ನಪ್ಪ ಮೀನಾದ. ಅವನಿಗೆ ನನ್ನನ್ನು ಮಾರಿ, ಪಡೆದ ಹಣವನ್ನು ಎಣಿಸುತ್ತ ನನ್ನ ಕಡೆಗೆ ನೋಡಿದ ಅವನ ಕಣ್ಣಂಚಿನಲ್ಲಿ ಹನಿಯೊಂದನ್ನು ಕಂಡಾಗ, ನನ್ನನ್ನು ಕಳೆದುಕೊಂಡದ್ದಕ್ಕೋ ಅಥವಾ ಅಗ್ಗಕ್ಕೆ ಮಾರಿದ್ದಕ್ಕೋ ತಿಳಿಯಲಿಲ್ಲ. 

ಆಪ್ಪ ನನ್ನನ್ನು ಕೈಯಿಂದ ಬರಸೆಳೆದು ಕಣ್ಣಿಗೆ ಒತ್ತಿಕೊಂಡು, “ಶಾಲಿನೀ, ನನ್ನನ್ನು ಕ್ಶಮಿಸು. ಈ ರೀತಿ ಮಾಡದಿದ್ದಲ್ಲಿ, ಮೂವರೂ ಇರುತ್ತಿರಲಿಲ್ಲ. ದುಃಖಿಸಬೇಡ, ನಿನ್ನ ಅಂದಕ್ಕೆ ಹಾಗೂ ಗುಣಕ್ಕೆ ತಕ್ಕಂತಹ ಆಸರೆ ಸಿಕ್ಕೇ ಸಿಗುತ್ತದೆಂಬ ನಂಬಿಕೆ ನನ್ನದು. ಓ ದೇವರೇ, ನನ್ನ ಶಾಲಿನಿಯನ್ನು ಕಾಪಾಡುವ ಭಾರ ನಿನ್ನದು” ಎನ್ನುತ್ತಾ ನನ್ನನ್ನು ಕೊಂಡವನ ಕೈಸೇರಿಸಿ ಭಾರವಾದ ಹೃದಯದೊಡನೆ ನಿಧಾನವಾಗಿ ಹೆಜ್ಜೆಯಿಡುತ್ತ ದೂರವಾದ. ಆ ಜಾಗದಿಂದ ಮರೆಯಾಗಿ, ನನ್ನನ್ನು ಮಾರಿ ಪಡೆದ ಹಣದಿಂದ ತನ್ನ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳುತ್ತಿರಬಹುದಾದ ಸ್ಥಿತಿಯಲ್ಲಿ ಅಪ್ಪ ಯೋಚಿಸುತ್ತಿದ್ದರೆ ಅದು  ನನ್ನ ಬಗೆಗೋ, ಜೇಬಿನಲ್ಲಿದ್ದ ಹಣದ ಬಗೆಗೋ, ಅಮ್ಮನ ಬಗೆಗೋ ಅಥವಾ ಅಮ್ಮನ ಮನಸ್ಸಿನೊಳಗೆ ಭವಿಷ್ಯದಲ್ಲಿ ಹುಟ್ಟಬಹುದಾದ ನನ್ನ ಭಾವೀ ತಂಗಿಯ ಬಗೆಗೋ ತಿಳಿಯುವುದು ಹೇಗೆ? ತಿಳಿಯುವುದಾದರೂ ಏತಕ್ಕೆ?

ಪಟ್ಟಣದ ಭವ್ಯವಾದ ಮಹಲಿನೊಳಗೆ ನನ್ನ ವಾಸ. ಇದು ನನ್ನ ಎರಡನೆಯ ಬದುಕು. ನನ್ನನ್ನು ಕೊಂಡವನೊಬ್ಬ ವ್ಯಾಪಾರಿಯೆಂದು ತಿಳಿಯಲು ಬಹಳ ದಿನ ಹಿಡಿಯಲಿಲ್ಲ. ಅಲ್ಲಿ ನನ್ನಂತೆಯೇ ಇನ್ನೂ ಎಷ್ಟೋ ಜನ ಇದ್ದದ್ದು ನನಗೆ ಕ್ರಮೇಣ ಗೋಚರಿಸಿತು. ನಮ್ಮನ್ನು ಬೇರೆಯವರಿಗೆ ಮಾರಿ ಹೆಚ್ಚು ಲಾಭಗಳಿಸಿಕೊಳ್ಳುವುದು ಅವನ ವೃತ್ತಿ. ಕೊಳ್ಳಲು ಬಂದವರು ನಮ್ಮನ್ನು ಪರೀಕ್ಷೆಮಾಡುವುದು, ನಾವು ಅವರ ಮುಂದೆ ಪ್ರದರ್ಶನ ನೀಡುವುದು ಇದು ಹೀಗೇ ಸಾಗಿತ್ತು. ನನಗೋ ಈ ಜೈಲಿನಿಂದ ಬಿಡುಗಡೆಯೆಂದು ಎನ್ನುವ ಚಿಂತೆ. ಆದರೆ ಮರುಕ್ಷಣದಲ್ಲೇ “ಬಿಡುಗಡೆ ಸಿಕ್ಕಿ, ದುರಾದೃಷ್ಟವಶಾತ್ ಧೂರ್ತನೊಬ್ಬನ ಬಂಧಿಯಾದರೆ ಮುಂದೆ ಗತಿಯೇನು” ಎಂಬ ಭಯ. ನಾನು ನಿಜಕ್ಕೂ ಇಕ್ಕಟ್ಟಿಗೆ ಸಿಕ್ಕಿ ನರಳುತ್ತಿದ್ದೆ. ಒಂದು ಕಡೆ ತಂದೆ ತಾಯಿಯರಿಂದ ದೂರವಾಗಿ ತಬ್ಬಲಿಯಂತಾಗಿರುವ ಸ್ಥಿತಿ, ಇನ್ನೊಂದು ಕಡೆ ಈ ಜೈಲು. ನನ್ನ ಶತ್ರುವಿಗೂ ಇಂತಹ ಕಷ್ಟಬೇಡ ದೇವರೇ ಎಂದು ಆರ್ತನಾದ ಗೈಯುತ್ತಿದ್ದೆ. ಆದರೇನು, ನಮ್ಮನ್ನು ಭದ್ರವಾಗಿ ಕೂಡಿಹಾಕಿ ಜಾಗರೂಕತೆಯಿಂದ ಕಾಯುತ್ತಿದ್ದ ಆ ಭವ್ಯ ಮಹಲಿನೊಳಗೆ ನನ್ನದು ಅರಣ್ಯರೋದನ. 

ಅದೆಷ್ಟೋ ರಾತ್ರಿಗಳ ಗಾಢಾಂಧಕಾರದಲ್ಲಿ ಏನೂ ಕಾಣಿಸದಿದ್ದರೂ, ಆ ನಿಗೂಢದ ಮೂಲದಿಂದಲೇ ಭರವಸೆಯ ಕಿರಣವೊಂದು ನನ್ನೆಡೆಗೆ ಬರಬಹುದೆಂಬ ಆಸೆ ನನ್ನ ಕಣ್ಣುಗಳನ್ನು ಮುಚ್ಚಿಸದೆ ಸದಾ ತೆರೆದಿರಿಸಿತ್ತು. ಒಂದು ಶುಭಗಳಿಗೆಯಲ್ಲಿ ಅದು ಬಂತು ಎಂದರೆ ನೀವು ಆಶ್ಚರ್ಯಪಡುವುದಿಲ್ಲ ತಾನೆ? ಎಲ್ಲದಕ್ಕೂ ಪ್ರತಿಕೂಲವಾಗಿದ್ದಂತಹ ಆ ಕಾರಾಗೃಹದಲ್ಲಿಯೇ ಇದು ಸಾಧ್ಯವಾಯಿತು. “ಶಾಲಿನೀ, ಉಳಿದೆಲ್ಲರಿಗಿಂತ ನೀನು ಚೆನ್ನಾಗಿ ನರ್ತಿಸುತ್ತೀಯೆ. ನವಿಲಿನಂತೆ ವೇಷಧರಿಸಿ ನೀನು ಮಯೂರನರ್ತನ ಮಾಡುವಾಗಲಂತೂ, ನಿನ್ನ ನಾಟ್ಯ ನೋಡಲು ನನ್ನ ಎರಡು ಕಣ್ಣುಗಳು ಸಾಲವು. ನಿನ್ನನ್ನು ನಾನೇ ಕೊಳ್ಳುವಾಸೆ. ಆದರೆ ನನ್ನ ಬಳಿ ನಮ್ಮ ಯಜಮಾನ ಕೇಳುವಷ್ಟು ಹಣವಿಲ್ಲ. ಏನು ಮಾಡಲಿ?” ಎಂದು ಒಂದುದಿನ ನನ್ನನ್ನು ಕಾಯುತ್ತಿದ್ದ, ಕೊಳ್ಳಲು ಬಂದವರಿಗೆ ನಮ್ಮನ್ನು ತೋರಿಸುತ್ತಿದ್ದ ನೌಕರ ಹೇಳಿದ. ನನಗೆ ತಕ್ಷಣ ಏನು ಹೇಳಲೂ ತೋಚಲಿಲ್ಲ. 

ನಾನು ಸೇರಿದಂದಿನಿಂದ ಅವನನ್ನು ಒಂದೆರಡು ಬಾರಿ ಗಮನಿಸಿದ್ದೆ. ಅವನಿಗೆ ನಮ್ಮನ್ನು, ವಿಶೇಷವಾಗಿ ನನ್ನನ್ನು ಕಂಡರೆ ಗೌರವ ಮತ್ತು ಪ್ರೀತಿ. ಬೇರೆಯವರಿಗೆ ತೋರಿಸುವಾಗ ಅವರು ನಮ್ಮೊಡನೆ ಒರಟಾಗಿ ವರ್ತಿಸುವುದಕ್ಕೆ ಅವಕಾಶಕೊಡದೆ ಅತ್ಯಂತ ಜಾಗರೂಕತೆ ವಹಿಸಿ ನಮ್ಮ ರಕ್ಷಣೆಯ ಕಾರ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದ. “ನಾನು ಅನುಭವಿಸುತ್ತಿರುವ ಈ ನರಕದಿಂದ ಪಾರಾಗಲು ನಿಮ್ಮಿಂದೇನಾದರೂ ಸಹಾಯವಾಗಬಹುದೇ” ಎಂದು ಧೈರ್ಯಮಾಡಿ ಕೊನೆಗೆ ಕೇಳಿಯೇಬಿಟ್ಟೆ. “ಇದನ್ನೇಕೆ ನರಕವೆನ್ನುತ್ತೀ, ಇಲ್ಲಿ ನೀನು ಬಂಧನದಲ್ಲಿರಬಹುದು ನಿಜ. ಆದರೆ ನಿನಗೇನೂ ಕೆಡುಕಾಗಿಲ್ಲವಲ್ಲ. ಆಷ್ಟರಮಟ್ಟಿಗೆ  ನೀನು ನಮ್ಮ ಯಜಮಾನನನ್ನು ಒಳ್ಳೆಯವನೆಂದೇ ತಿಳಿಯಬೇಕು. ಇದು ಸ್ವರ್ಗವಿರದಿರಬಹುದು. ಆದರೆ ನೀನು ಹೇಳುವಂತೆ ನರಕವಂತೂ ಅಲ್ಲ. ಇಲ್ಲಿಂದ ಹೊರಗೆ ಹೋದಾಗಲೇ ನಿನಗೆ ಸ್ವರ್ಗ ನರಕಗಳ ದರ್ಶನವಾಗುವುದು” ಎಂದ ಆತ. 

“ನಾನು ನನ್ನ ತಂದೆತಾಯಿಯರ ಬಳಿಯಿದ್ದುದನ್ನು ನೆನೆಸಿಕೊಂಡರೆ ಅದಕ್ಕಿಂತ ಸ್ವರ್ಗ ಬೇರಿಲ್ಲ. ಆ ಸ್ವರ್ಗ ನನಗೆ ಮತ್ತೆ ಸಿಗುವಂತೆ ಮಾಡುವುದಕ್ಕೆ ನಿನ್ನಿಂದ ಸಾಧ್ಯವೇ?” ಎಂದು ದೈನ್ಯತೆಯಿಂದ ಕೇಳಿದೆ. “ಸ್ವಲ್ಪ ತಾಳು, ನನಗೊಂದು ಅವಕಾಶವಿದೆಯೆಂದು ಕಾಣುತ್ತದೆ. ಪ್ರಯತ್ನಪಡುತ್ತೇನೆ. ಆದರೆ ನೀನು ಮಾತ್ರ ಕಳೆಗುಂದಬೇಡ, ಧೃತಿಗೆಡಬೇಡ” ಎಂದು ಆತ ಹೇಳಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ರಾತ್ರಿ ನಾನು ತೃಪ್ತಿಯಿಂದ ನಿದ್ರೆಗೈದೆ. ಭರವಸೆಯ ಕಿರಣವೊಂದು ನನ್ನ ಕನಸಿನೊಳಗೆ ಬೆಳಗಿದಂತಾಗಿ, ಆ ಮಂದ ಬೆಳಕಿನಲ್ಲಿ ದೂರದಲ್ಲಿ ಯಾರೋ ನನ್ನೆಡೆಗೆ ಬರುತ್ತಿರುವಂತೆ ಕಂಡೆ. ಹತ್ತಿರಕ್ಕೆ ಬರುತ್ತಿದ್ದಂತೆ ನನ್ನ ತಾಯಿಯ ಆಕಾರ ತಳೆದಂತಾಯ್ತು. “ನನ್ನನ್ನು ಮರೆತೆಯಾ ಶಾಲಿನೀ?” ಎಂದು ನನ್ನನ್ನು ಕೇಳಿದಂತಾಗಿ, ನಾನು ಒಡನೆ “ಅಮ್ಮಾ” ಎಂದದ್ದೂ “ಎದುರಿಗೆ ನಿಂತ ನನ್ನ ತಾಯಿಯನ್ನೇಕೆ ಎಷ್ಟು ಪ್ರಯತ್ನಿಸಿದರೂ ಅಪ್ಪಿಕೊಳ್ಳಲಾರೆ?” ಎಂದು ಮನಸ್ಸಿನಲ್ಲಿಯೇ ಪ್ರಶ್ನೆಕೇಳಿದ್ದೂ ಏಕಕಾಲದಲ್ಲಿ ಜರುಗಿ, ಆ ಸ್ವಪ್ನ ಸ್ಥಿತಿಯಲ್ಲಿಯೇ ಆಸೆ ನಿರಾಸೆಗಳೆರಡನ್ನೂ ಹೃದಯ ಒಂದು ಕ್ಷಣ ಅನುಭವಿಸಿ, ಈ ವಿಚಿತ್ರ ಅನುಭವದಿಂದಾಗಿಯೋ ಏನೋ ಕ್ಷಣಾರ್ಧದಲ್ಲಿ ಜಾಗೃತಾವಸ್ಥೆಗೆ ಜಾರಿತು. ಕಂಡದ್ದು ಕನಸಾದರೂ, ಅದು ನನಸಾಗಲೆಂದು ಬಯಸುತ್ತ ಮತ್ತೊಮ್ಮೆ ಕನಸಿನಾಳಕ್ಕಿಳಿಯಲು ನಿದ್ರಾದೇವಿಗೆ ಶರಣಾಗಲೆತ್ನಿಸಿದೆ. ಆದರೆ ಸಂಜೆಯ ಮಾತುಕತೆಯಲ್ಲಿ ಉತ್ಸಾಹಗೊಂಡಿದ್ದ ದೇಹ ಜಾಗೃತಾವಸ್ಥೆಯಿಂದ ಹೊರಳಲೇ ಇಲ್ಲ. ಇದೇಕೆ ಹೀಗೆ ಎಂದು ಯೋಚಿಸುತ್ತಿರುವಂತೆಯೇ, ಸೂರ್ಯನ ಕಿರಣಗಳು ಕಿಟಕಿಯನ್ನು ದಾಟಿ ನನ್ನ ಮೈಯನ್ನು ಸ್ಪರ್ಶಿಸಿ “ಏಳು, ಬೆಳಗಾಯಿತು” ಎಂದು ಕಚಗುಳಿಯಿಡತೊಡಗಿದವು. 

“ಬನ್ನಿಯಮ್ಮಾ, ಹೀಗೆ ಬನ್ನಿ” ಎನ್ನುತ್ತ ನಮ್ಮ ಕೊಟಡಿಯ ನೌಕರ ಬಾಗಿಲ ಬೀಗ ತೆಗೆದು ಒಳಗೆ ಬರುವುದನ್ನು ಕಂಡು “ಇವನು ಯಾರನ್ನು ಕರೆಯುತ್ತಿದ್ದಾನೆ” ಎಂದು ತಿಳಿಯಬಯಸಿ ಕುಳಿತಲ್ಲಿಂದಲೇ ಸ್ವಲ್ಪ ಮುಂದೆ ಬಾಗಿದೆ. “ನನಗೆ ನವಿಲಿನ ಬಣ್ಣ, ಗರಿ, ಕೊಂಕು ನಡೆ, ಅದರ ನಾಟ್ಯ, ಹೀಗೆ ಎಲ್ಲವೂ ಇಷ್ಟ” ಎನ್ನುತ್ತ ಬಾಗಿಲ ಕಡೆಯಿಂದ ಒಬ್ಬಾಕೆ ನಾನಿರುವೆಡೆಗೆ ಸಮೀಪಿಸತೊಡಗಿದರು. ನನ್ನ ಕಿವಿ ಕಣ್ಣುಗಳೆರಡೂ ಏಕಕಾಲದಲ್ಲಿ ಕೆಲಸಮಾಡತೊಡಗಿದವು. ಹೌದು. ಬಂದಾಕೆ ನನ್ನ ಅಮ್ಮನನ್ನು ಸಾಕಷ್ಟು ಹೋಲುತ್ತಿದ್ದಳು. ಅದೇ ಬಣ್ಣ, ಅದೇ ನೀಳ ಕೂದಲು. ಅಷ್ಟೇ ಸೌಂದರ್ಯ. ನನ್ನ ಅಮ್ಮನಂತೆಯೇ ಹರಳು ಉರಿದಂತೆ, ಮಣಿ ಪೋಣಿಸಿದಂತೆ ಮಾತು. ಸೀದಾ ನನ್ನಲ್ಲಿಗೆ ಬಂದಳು. “ನವಿಲಿನಂತಿರುವವಳು ನೀನೇನಾ?” ಎಂದಳು.      “ನಾನು ನವಿಲಿನ ಹಾಗೆ ನಾಟ್ಯ ಮಾಡುತ್ತೇನೆ, ನವಿಲಿನಂತಿಲ್ಲ” ಎಂದೆ ನಾನು. ನನ್ನ ಮೈನೇವರಿಸುತ್ತಾ “ನಾನು ಅಂದುಕೊಂಡದ್ದು ಅದೇ, ಆದರೆ ಕೇಳಿದ ರೀತಿ ಬೇರೆ  ಅಷ್ಟೇ,  ಸರಿ, ಗಂಟು ಮೂಟೆ ಕಟ್ಟು, ನಿನ್ನನ್ನು ಕೊಂಡಿದ್ದೇನೆ, ನನ್ನೊಡನೆ ಬಾ. ಹಾಂ, ನಿನ್ನ ಹೆಸರೇನು? ಕೇಳುವುದನ್ನೇ ಮರೆತಿದ್ದೆ” ಎಂದಳು. ಹೆಸರು ಹೇಳಿದೆ. “ನಿನ್ನ ಮುದ್ದು ಮುಖವನ್ನು ನೋಡಿದರೆ, ನನ್ನ ಹೊಟ್ಟೆಯಲ್ಲೂ ಇಂತಹ ಮಗಳು ಹುಟ್ಟಿದ್ದರೆ ಎಷ್ಟು ಚಂದ ಇತ್ತು ಎನಿಸುತ್ತದೆ. ಅಂತೂ  ನನ್ನ ಮನೆಯ ಬಳಿಯೇ ವಾಸಿಸುವ ಇಲ್ಲಿನ ನೌಕರ ತಿಳಿಸದಿದ್ದರೆ ನಿನ್ನನ್ನು ಕೊಳ್ಳುವುದಿರಲಿ, ನೋಡುವ ಭಾಗ್ಯವೂ ಸಿಗುತ್ತಿರಲಿಲ್ಲ. ಅಲ್ಲವೇನೆ. ಸರಿ, ಇದೇಕೆ ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಿರುವೆ. ಹೊರಡಲು ತಯಾರಾಗು. ಅಯ್ಯಾ, ಬಾ, ನೀನು ಈಕೆಯ ಬಟ್ಟೆ ಬರೆಗಳನ್ನು ಒಪ್ಪವಾಗಿ ಜೋಡಿಸಿ ಬೇಗ ಇವಳನ್ನು ನಾನು ಕರೆದುಕೊಂಡು ಹೋಗಲು ಅಣಿಮಾಡು. ನಾನು ಹೇಳಿದ್ದು ನಿಮಗೆ ಕೇಳಿಸಿತು ತಾನೆ?” ಎಂದು ಒಂದೇ ಉಸಿರಿನಲ್ಲಿ ನನಗೂ ನನ್ನನ್ನು ನೋಡಿಕೊಳ್ಳುತ್ತಿದ್ದ ನೌಕರನಿಗೂ ಪ್ರಶ್ನೆಗಳ ಮಳೆಸುರಿಸಿದಳು. ಅವಳ ಕಣ್ಣುಗಳು ನಮ್ಮ ಉತ್ತರಕ್ಕಿಂತ ನಮ್ಮ ಕ್ರಿಯೆಗಳನ್ನು, ಚಲನವಲನಗಳನ್ನು ಗಮನಿಸುತ್ತಿದ್ದವು.  ನನ್ನ ತಾಯಿಯೇ ನನ್ನ ಮುಂದೆ ನಿಂತು ಹೇಳುತ್ತಿರುವಂತೆ ನನಗೆ ಭಾಸವಾಗತೊಡಗಿತು.  ನನ್ನ ನೋವನ್ನು ದೂರಗೊಳಿಸುವುದರ ಜೊತೆಗೆ ಆ ಮಹಲಿನ ನೌಕರನ ಮೇಲೆ ನನಗಿದ್ದ ಪ್ರೀತಿಗೌರವಗಳನ್ನು ಅವಳ ಮಾತು ಇಮ್ಮಡಿಗೊಳಿಸಿದವು.  ಆತ ನನಗಾಗಿ, ನನ್ನ ಒಳಿತಿಗಾಗಿ ಸ್ಪಂದಿಸಿದ್ದುದು ಆಕೆಯ ಮಾತಿನಿಂದ ತಿಳಿಯಿತು. ಆ ಹಿರಿಯ ಹೃದಯವಂತನಿಗೆ ಮನಸಾರೆ ವಂದಿಸಿ ನಾನು ಆ ಮಹಾತಾಯಿಯ ಹಿಂದೆ ನಡೆದೇ ಬಿಟ್ಟೆ. ಮಹಲಿನ ಮುಂಭಾಗಕ್ಕೆ ಬಂದಾಗ, ಬಾಗಿಲ ಬಳಿ ನಿಂತಿದ್ದ ವ್ಯಾಪಾರಿ ನನ್ನನ್ನೂ ನನ್ನ ಹೊಸ ಒಡತಿಯನ್ನೂ ನೋಡಿ ತಾನು ನಿರೀಕ್ಷಿಸಿದುದಕ್ಕಿಂತಲೂ ಲಾಭವಾಗಿದ್ದಕ್ಕೇನೋ ಅತ್ಯಂತ ಸಂತಸದಿಂದ ನಮ್ಮಿಬ್ಬರನ್ನೂ ಬೀಳ್ಕೊಟ್ಟ. 
ನನ್ನನ್ನು ಕೊಂಡಾಕೆ ಸಾಕಷ್ಟು ಶ್ರೀಮಂತ ಕುಟುಂಬಕ್ಕೆ ಸೇರಿದವಳೆಂದು ಅವಳ ಮಾತಿನಿಂದಲೇ, ಅವಳು ನನ್ನನ್ನೂ ಕರೆದು ಕೂರಿಸಿಕೊಂಡುಹೋದ ವಾಹನದಿಂದಲೇ ತಿಳಿದೆ. ನನ್ನನ್ನು ತನ್ನ  ಮನೆಗೆ ಕರೆದೊಯ್ಯುತ್ತಾಳೆ ಎಂದು ಭಾವಿಸಿದ್ದ ನನಗೆ ಸ್ವಲ್ಪ ನಿರಾಸೆಯಾಯಿತು. ಆತಂಕವೂ ಆಯಿತೆನ್ನಿ. ಮಹಲಿನಿಂದ ಸ್ವಲ್ಪ ದೂರ ಬರುತ್ತಲೇ ಅವಳು ತನ್ನ ವಾಹನ ಚಾಲಕನಿಗೆ ಪಟ್ಟಣದಿಂದ ದೂರವಿದ್ದ ಆಶ್ರಮವೊಂದಕ್ಕೆ ಹೋಗುವಂತೆ ನಿರ್ದೇಶಿಸಿದಳು. ಮಹಲಿನ ನೌಕರ ಈಕೆಯ ಅಂತಃಕರಣದ ಬಗ್ಗೆ ಅಂದು ಹೇಳಿದ್ದ ಮಾತುಗಳು ನನ್ನ ಸ್ಮೃತಿಪಟಲದ ಮೇಲೆ ಮೂಡಿ, ನನ್ನನ್ನು ತನ್ನ ಮನೆಗೆ ಕರೆದೊಯ್ದು  ಸಾಕುತ್ತಾಳೆ ಎಂದುಕೊಂಡಿದ್ದ ನನಗೆ ಒಂದು ರೀತಿಯ ಸಂಕಟವೂ, ದೈತ್ಯ ನಿರಾಶೆಯೂ ಕಾಡತೊಡಗಿದವು. ಮರಳುಗಾಡಿನಲ್ಲಿ ಬಾಯಾರಿ ಅಲೆಯುತ್ತಿರುವ ಯಾತ್ರಿಕನೊಬ್ಬನಿಗೆ ಅಪರೂಪಕ್ಕೆ ಸಿಗುವ ಓಯಸಿಸ್‍ನಂತೆ ಇಂತಹ ಕುಲೀನ ಸ್ತ್ರೀ ನನ್ನಂತಹ ಅಭಾಗಿನಿಗೆ ಸಿಗುವುದಷ್ಟೇ ಅಲ್ಲ ನನ್ನ ತಾಯಿಯ ಪ್ರತಿರೂಪದಂತೆಯೂ ಇದ್ದುದು ನನ್ನ ಪುಣ್ಯವೆಂದೇ ಭಾವಿಸಿ ಕೆಲವೇ ಕ್ಷಣಗಳ ಹಿಂದೆ ಪುಳಕಗೊಂಡಿದ್ದ ನನಗೆ ಏಕೋ ದುಃಖ ಒತ್ತರಿಸಿ ಬಂತು. ನನ್ನನ್ನು ಯಾವುದೋ ಆಶ್ರಮಕ್ಕೆ ಕೊಟ್ಟು ತಾನು ಕೃತಾರ್ಥಳಾಗುವ ಬಯಕೆ ಇವಳದು ಎಂದೆನ್ನಿಸಿ, ನನ್ನ ಒಳಮನಸ್ಸಿನ ಬಯಕೆಯನ್ನು ಅವಳಿಗೆ ಕೂಗಿ ಹೇಳಬೇಕೆಂದುಕೊಂಡೆ. ನಾನಿನ್ನೂ ಹದಿಹರೆಯದವಳು, ತಾಯಿತಂದೆಯರ ಬಳಿಯಿದ್ದು ಆಟವಾಡುವ ವಯಸ್ಸಿನವಳೆಂದು ನಿಮಗೆ ಕಾಣದೇನು. ಈ ವಯಸ್ಸಿನಲ್ಲೇ ಆಶ್ರಮಕ್ಕೆ ಸೇರಿ, ವಯಸ್ಸಿಗೆ ಸಹಜವಾದ ಬಯಕೆ ಆಸೆ ಆಕಾಂಕ್ಷೆಗಳಿಗೆ ತಣ್ಣೀರೆರಚಿ, ಸಾಯುವತನಕ ವೈರಾಗ್ಯದ ಜೀವನವನ್ನೊಪ್ಪಿಕೊಂಡು ಬದುಕಬೇಕೇನು? ಎಂದೆಲ್ಲಾ ಅವಳ ಅಂತರಂಗಕ್ಕೆ ತಿಳಿಯಬಯಸಿದೆ. ಮಹಲಿನಲ್ಲಿ ಬಂಧಿಯಾಗಿದ್ದಾಗ ಕಲ್ಪಿಸಿಕೊಂಡು ಅನುಭವಿಸುತ್ತಿದ್ದ ಭಯದ ಬದುಕು ಸಹಿಸಲು ಎಷ್ಟು ಕಷ್ಟವೋ ಆಶ್ರಮದಲ್ಲಿದ್ದು ಸನ್ಯಾಸಿನಿಯಂತೆ ಬದುಕುವುದೂ ಕೂಡ ನನ್ನ ಪಾಲಿಗಂತೂ ಅಷ್ಟೇ ಕಷ್ಟ ಎಂದು ನನ್ನ ಮನಸ್ಸು ಸಾರಿ ಸಾರಿ ಹೇಳುತ್ತಿತ್ತು. ಆದರೂ ಒಂದು ಕ್ಷಣ ಯೋಚಿಸಿ ಸ್ವಲ್ಪ ನಿಧಾನಿಸುವುದು ಒಳ್ಳೆಯದು ಎನ್ನಿಸಿತು. ಎಲ್ಲ ಸಮಸ್ಯೆಗೂ ಒಂದಲ್ಲ ಒಂದು ಪರಿಹಾರವಿದೆಯೆಂದು ಹಿಂದೆ ಅಪ್ಪ ಅಮ್ಮನಿಗೆ ಹೇಳುತ್ತಿದ್ದುದು ನೆನಪಿಗೆ ಬಂತು. ದೇವರೇ, ನನ್ನ ಸಮಸ್ಯೆಗಂತೂ ಆ ಪರಿಹಾರ ನನಗಿಷ್ಟವಾಗಿರುವಂತೆ ಮಾಡು ತಂದೆ ಎನ್ನುತ್ತ ಅವನನ್ನೇ ಜಪಿಸತೊಡಗಿದೆ. ಒಡತಿಯ ಮಡಿಲಲ್ಲಿ ಹಾಗೇ ನಿದ್ರೆಗೆ ವಶವಾದದ್ದು ನನ್ನ ಅರಿವಿಗೆ ಬರಲೇ ಇಲ್ಲ.
ಜರ್ರೆಂದು ವಾಹನ ನಿಂತಾಗಲೇ ನನಗೆ ಎಚ್ಚರವಾದದ್ದು. ನನ್ನನ್ನು ಕೈಹಿಡಿದು ಒಡತಿ ಕೆಳಗಿಳಿದು ನಡೆಯುತ್ತಿದ್ದರೆ ನನಗೋ ಎಡ ಬಲ ಹಿಂದೆ ಮುಂದೆ ಹೀಗೆ ಎಲ್ಲ ಕಡೆಯಿಂದಲೂ ಹೇಗೇ ನೋಡಿದರೂ ಕಣ್ಮನ ತುಂಬುವ ಆ ವನಸಿರಿಯ ಸೊಬಗಿನ ರಸದೌತಣ. ಪ್ರಕೃತಿಮಾತೆಯ ಮಡಿಲಲ್ಲಿ ಹೂಗಿಡ ಬಳ್ಳಿಗಳು, ಸಪೋಟ, ಅಡಕೆ ಹಾಗು ತೆಂಗಿನ ತೋಟಗಳು. ಅಲ್ಲಲ್ಲಿ ಆಶ್ರಮದ ಸುಂದರ ಮಂಟಪಗಳು, ಭೋಜನ, ವ್ಯಾಯಾಮ, ಪಾಠಶಾಲೆಗಳು, ಅತಿಥಿಗೃಹಗಳು, ಶಿಸ್ತಾಗಿ ವ್ಯಾಯಾಮ ಮಾಡುತ್ತಿದ್ದ ವಿದ್ಯಾರ್ಥಿಗಳು. ಕಣ್ಣುಗಳಿಗೆ ಈ ಹಬ್ಬವಾದರೆ, ಕಿವಿಗಳಿಗೆ ಹಕ್ಕಿಗಳ ಇಂಚರ,  ವೇದಮಂತ್ರಗಳ ಘೋಷ, ತಂಪಾದ ಗಾಳಿ ಮೈಗೆ ಹಿತ ನೀಡಿದರೆ, ಆ ಗಾಳಿಯೇ ಹೊತ್ತುತಂದ ಸುವಾಸನೆ ಮೂಗನ್ನು ಸೆರೆಹಿಡಿದಿತ್ತು. 
ಅತಿಥಿಗೃಹಕ್ಕೇ ಹೊಂದಿಕೊಂಡಿದ್ದ ಅಡಿಗೆ ಮನೆಯಲ್ಲಿ ಪುಷ್ಕಳ ಊಟದ ರುಚಿ ನಾಲಗೆಗೆ. ಪಂಚೇಂದ್ರಿಯಗಳು ಹೀಗೆ ಅಲ್ಲಿನ ಸೃಷ್ಟಿಸೌಂದರ್ಯವನ್ನೆಲ್ಲ ಐದಾರು ತಾಸು ಮನಸಾರೆ ಹೀರಿ, ದೇಹ ಮನಸ್ಸುಗಳೆರಡೂ ದಣಿದು ಅತಿಥಿಗೃಹದಲ್ಲಿ ವಿರಮಿಸಲು ನಾವು ಮೆಟ್ಟಲೇರುತ್ತಿದ್ದಂತೆ ಸೂರ್ಯ ಹೊಂಬಣ್ಣದೋಕುಳಿಯಲ್ಲಿ ಮಿಂದು ಮುಗುಳ್ನಗೆ ಬೀರುತ್ತ ಪ್ರಕೃತಿಮಾತೆಗೆ ವಂದಿಸಿ ಪಡುವಣ ದಿಗಂತದಲ್ಲಿ ಮರೆಯಾಗತೊಡಗಿದ್ದ. ಆಶ್ರಮಕ್ಕೆ ಬರುವ ದಾರಿಯಲ್ಲಿ ಸ್ವಲ್ಪ ನಿದ್ರೆ ಮಾಡಿದ್ದರೂ, ಆಶ್ರಮದೊಳಗಿನ ಓಡಾಟದಿಂದ ದಣಿದಿದ್ದ ನನಗೆ ಆ ರಾತ್ರಿ ಮಲಗಿದ್ದಷ್ಟೇ ನೆನಪು.
ಮುಂಜಾನೆ ನನಗೆ ಎಚ್ಚರವಾದದ್ದು ಮೊದಲೋ ಅಥವಾ ಯಾರೋ ಹೊರಗಡೆ ಬಾಗಿಲು ತಟ್ಟಿ ಏನೋ ಹೆಸರನ್ನು ಹೇಳಿದ್ದು ಮೊದಲೋ ನೆನಪಾಗುತ್ತಿಲ್ಲ. ನನ್ನ ಸ್ವಭಾವವೇ ಹೀಗೆ. ಯಾವುದನ್ನಾದರೂ ಅಂದುಕೊಂಡರೆ ಅದನ್ನೇ ಹಿಂಬಾಲಿಸುವುದು. 
ಓ ಮರೆತೆ, ನಿಮಗೆ ಏನನ್ನೋ ಹೇಳುತ್ತಾ ಆ ಘಟನೆ ನಡೆದ ಕ್ಷಣದಲ್ಲಿ ನನ್ನ ಕಿವಿಗಳು ಕೇಳಿದ ಹೊರಗಿನಿಂದ ಕೂಗಿದ ಧ್ವನಿಯ ಬಗ್ಗೆ ನಾನು ಹೇಳಲೇ ಇಲ್ಲ. ಅದು ನನ್ನ ಅಪ್ಪನ ಧ್ವನಿಯನ್ನು ಹೋಲುತ್ತಿತ್ತು. ಒಡತಿ ಬಾಗಿಲ ತೆರೆದಾಗ ನಾನು ಕಂಡದ್ದು ಸಾಕಷ್ಟು ಎತ್ತರದ ವ್ಯಕ್ತಿಯೊಬ್ಬನನ್ನು.  ಆವನು ಬಾಗಿಲ ಬಳಿಯೇ ನಿಂತು “ ಹೊರಗೆ ತುಂಬ ಚಳಿ” ಎನ್ನುತ್ತ ನನ್ನ ಒಡತಿಗೆ ಗೌರವಪೂರ್ವಕ ನಮನಗಳನ್ನು ತಿಳಿಸಿದ. ಅವರಿಬ್ಬರನ್ನು ಗಮನಿಸಿದ ನನಗೆ ಅವರು ಈಗಾಗಲೇ ಪರಸ್ಪರ ಪರಿಚಿತರು ಎಂದು ತಿಳಿಯಿತು. ಒಡತಿಯೂ ಆತನಿಗೆ ಪ್ರತಿವಂದಿಸಿ ಒಳಗೆ ಕರೆದಳು. ಸಂಕೋಚದಿಂದ ಒಳಬರಲು ನಿರಾಕರಿಸಿ ಆತ ಬಾಗಿಲಲ್ಲಿಯೇ ನಿಂತ. “ಈ ಆಶ್ರಮಕ್ಕೆ ಬಂದು ಇಲ್ಲಿನ ವಿದ್ಯಾರ್ಥಿಗಳೊಡನೆ ನಿಮ್ಮಲ್ಲಿರುವ ವಿಶೇಷಜ್ಞಾನವನ್ನು ಹಂಚಿಕೊಂಡದ್ದಕ್ಕಾಗಿ ನನ್ನ ಕೃತಜ್ಞತೆಗಳು ನಿಮಗೆ ಸಲ್ಲುತ್ತವೆ” ಎಂದಳು ಒಡತಿ. “ನಿಮ್ಮಲ್ಲಿ ನಾನು ಮೊದಲಿನಿಂದಲೂ ಇಟ್ಟಿರುವ ಭಾವನೆ ನನ್ನನ್ನು ಇಲ್ಲಿಗೆ ಎಳೆತಂದು ನನ್ನ ಕೈಯಲ್ಲಿ ಕಾಯಕ ಮಾಡಿಸಿದೆ. ಆದ್ದರಿಂದ ನನ್ನ ಕಾರ್ಯದಲ್ಲೇನಾದರೂ ಶ್ರೇಯಸ್ಸು ದೊರೆತಿದ್ದರೆ ಅದು ನಿಮಗೇ ಸಲ್ಲಬೇಕು” ಎಂದು ಆತ ವಿನಯಪೂರ್ವಕವಾಗಿ ಹೇಳಿದ. ನನಗರಿವಿಲ್ಲದೆಯೇ ನನ್ನ ಮನಸ್ಸು ಆತನ ಆಸರೆಯನ್ನೂ ವಾತ್ಸಲ್ಯವನ್ನೂ ಬಯಸತೊಡಗಿತು. “ನೀವು ವಿಶ್ವಾಸಾರ್ಹರು. ಈ ಆಶ್ರಮದ ಎಲ್ಲರಿಗೂ ಒಳ್ಳೆಯ ಸ್ನೇಹಿತರು. ಇಲ್ಲಿನ ಮಕ್ಕಳಿಗೆ ಸ್ಫೂರ್ತಿತುಂಬಿದವರು. ನಿಮಗೆ ನಾನು ಸದಾ ಋಣಿ” ಎಂದು ನನ್ನ ಒಡತಿ ಹೇಳುತ್ತ “ನಾನೊಂದು ಉಡುಗೊರೆಯನ್ನು ನಿಮಗೆ ಕೊಡಬೇಕೆಂದಿದ್ದೇನೆ, ದಯಮಾಡಿ ಸ್ವೀಕರಿಸಿ, ಬೇಡವೆನ್ನಬೇಡಿ” ಎನ್ನುತ್ತ ಮರೆಯಲ್ಲಿದ್ದ ನನ್ನನ್ನು ಎದುರಿಗೆ ತಂದು, “ಇವಳು ನಾನು ಮೆಚ್ಚಿಕೊಂಡು ನಿಮಗಾಗಿ ತಂದ ಶಾಲಿನಿ, ಅಲ್ಲ ನನ್ನ ಮೆಚ್ಚಿನ ಶಾಲು, ನೀವೂ ಮಕ್ಕಳೆಂದರೆ ಇಷ್ಟಪಡುತ್ತೀರಿ. ಇವಳಿಗೆ ನಿಮ್ಮ ಆಸರೆ ಸಿಕ್ಕರೆ ಇವಳೂ ಸಾಕುಮಗಳಾಗಿ ನಿಮ್ಮ ಬದುಕಿಗೆ ಬೆಳಕು ಕೊಟ್ಟಾಳು” ಎನ್ನುತ್ತ ನನ್ನನ್ನು ಆತನ ಕೈಗೆ ಒಪ್ಪಿಸಿದಳು.  
ಆನಂದಭರಿತರಾಗಿ ಮೂವರೂ ಪರಸ್ಪರರನ್ನು ಸಂತೃಪ್ತಭಾವದಿಂದ ನೋಡುತ್ತಿದ್ದ ಆ ಕ್ಷಣಗಳಿಗೆ, ಮುಂಜಾನೆಯ ಉದಯರವಿಯ ಕಿರಣಗಳನ್ನು ಮೈತುಂಬಿಕೊಂಡು ಚೆಲುವಿನ ನಂದನವನದಂತಿದ್ದ ಇಡೀ ಆಶ್ರಮ ತಾನೂ ಸಾಕ್ಷಿಯಾಗಿತ್ತು.

- ಕೆ ಎಸ್ ಮಲ್ಲೇಶ್,  
ಮೊಬೈಲ್ 9900598270


ಕಾಮೆಂಟ್‌ಗಳಿಲ್ಲ: