ಚಿಕ್ಕಂದಿನಿಂದಲೂ ಯಾರಿಗೋ ಸಮಸ್ಯೆ ಬಂದಾಗ ನೆರವು ನೀಡಬೇಕೆಂದು ಅಪ್ಪ, ಅಮ್ಮ, ಅಜ್ಜಿ ಹೇಳಿಕೊಟ್ಟಿದ್ದುಂಟು. ಅವರು ಮಾಡಿ ತೋರಿಸಿದ್ದನ್ನು ಕಲಿತದ್ದುಂಟು. ನಂತರ ಶಾಲೆಯಲ್ಲಿಯೂ ಸಹ ಶಿಕ್ಷಕರು ಅದನ್ನೇ ಹೇಳಿಕೊಟ್ಟರು ಮತ್ತು ಸ್ವತಃ ಮಾಡಿ ತೋರಿಸುತ್ತಿದ್ದರು. ಪ್ರಾಥಮಿಕ ಶಾಲೆಯಿಂದಲೇ ನಮ್ಮ ಶಾಲೆಯ ಸಿಸ್ಟರ್ಸ್ ಹೇಳಿದರೆಂದು ಅಂಧ ಮಕ್ಕಳಿಗಾಗಿ ಅಕ್ಕಪಕ್ಕದ ಮನೆಗಳಲ್ಲಿ, ನೆಂಟರಿಷ್ಟರಲ್ಲಿ ಚಂದಾ ಕೇಳಿದ್ದುಂಟು, ಬೆನಿಫಿಟ್ ಶೋಗಳಿಗೆ ಟಿಕೆಟ್ ಗಳನ್ನು ಮಾರಿದ್ದುಂಟು. ಈ ಅಭ್ಯಾಸ ಹಾಗೆಯೇ ಮುಂದುವರೆಯಿತು.
ನಂತರ ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆ ಸೇರಿದಾಗಲೂ ಭೂಕಂಪ ಸಂತ್ರಸ್ತರಿಗೆ, ನೆರೆಸಂತ್ರಸ್ತರಿಗೆ, ಹೀಗೆ ಹಲವಾರು ಸಂದರ್ಭಗಳಲ್ಲಿ ಹಣ ಕೊಟ್ಟದ್ದುಂಟು, ಬೇರೆಯವರಿಂದ ಸಂಗ್ರಹಿಸಿದ್ದುಂಟು. ನಂತರ ಶಿಕ್ಷಕಿಯಾದಾಗಲೂ ಇಂತಹುದೇ ಸಮಯಗಳಲ್ಲಿ ನೆರವು ಕೊಟ್ಟಿದ್ದಿದೆ. ಸುಮಾರು 20ಕ್ಕೂ ಹೆಚ್ಚು ಉಚಿತ ವೈದ್ಯಕೀಯ ಶಿಬಿರಗಳನ್ನು ಸಂಘಟಿಸಿದ್ದುಂಟು, ಭಾಗವಹಿಸಿದ್ದುಂಟು.
ನಮ್ಮನ್ನು ಸೋಮವಾರಪೇಟೆಗೆ ಕರೆದೊಯ್ದ ತಮ್ಮ ದೀಪು , ಇಡೀ ಶಿಬಿರದ ಜವಾಬ್ದಾರಿ ಹೊತ್ತ ತಮ್ಮ ರವಿ |
ಆದರೆ ಮೊದಲನೇ ಬಾರಿಗೆ ಸಂತ್ರಸ್ಥರ ಬಳಿ ನೇರವಾಗಿ ಹೋಗಿ, ಅಲ್ಲಿನ ಪರಿಸ್ಥಿತಿಯನ್ನು ಗಮನಿಸಿ, ಅವರಿಗೆ ನೆರವನ್ನು ನೀಡುವ ಅವಕಾಶ ಇತ್ತೀಚೆಗಷ್ಟೇ ಬಂತು. ದಿನಾಂಕ 26/8/18 ರಿಂದ 28/8/18ರವರೆಗೆ ಕೊಡಗಿನಲ್ಲಿನ ಮಳೆಸಂತ್ರಸ್ತರಿಗೆ ಮತ್ತು 2/9/18ರಂದು ಎಚ್ ಡಿ ಕೋಟೆಯ ಕೆಲವು ಹಳ್ಳಿಗಳಿಗೆ ಹೋಗುವ ಅವಕಾಶ ಸಿಕ್ಕಿತು.
26/8/2018ರಂದು ನಾನು ಕೆಲಸ ಮಾಡುತ್ತಿರುವ ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿಯ ಪರವಾಗಿ ಕೊಡಗಿನ ಸೋಮವಾರಪೇಟೆಗೆ ನನ್ನ ಕೆಲವು ಸ್ನೇಹಿತರೊಂದಿಗೆ ಹೋದೆ. ಸಾಮಾಜಿಕ ಚಳುವಳಿಗಳಲ್ಲಿ ತೊಡಗಿಸಿಕೊಂಡಿರುವ ಆ ಸ್ನೇಹಿತರು ಮುಂಚೆಯೇ ಅಲ್ಲಿ ಕೆಲವೆಡೆಗಳಿಗೆ ಭೇಟಿ ನೀಡಿ ಜನರ ಅವಶ್ಯಕತೆಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ನಾನು ಹೊರಡುವ ಮುನ್ನ ವಾಟ್ಸಪ್ ಮೂಲಕ ಮಳೆಸಂತ್ರಸ್ಥರಿಗೆ ನೆರವು ನೀಡಿ ಎಂದು ನನ್ನ ಸ್ನೇಹಿತರಿಗೆ ಮನವಿ ಮಾಡಿಕೊಂಡಿದ್ದೆ. ಈಗಾಗಲೇ ಬೇರೆಬೇರೆ ಕಡೆಗಳಲ್ಲಿ ಸಹಾಯ ಮಾಡಿದ್ದರು, ನಾನೇ ಹೋಗುತ್ತಿದ್ದೇನೆ, ಅದು ನೇರವಾಗಿ ಅವಶ್ಯಕತೆ ಇರುವವರಿಗೆ ತಲುಪುತ್ತದೆ ಎಂದು ಬಹಳಷ್ಟು ಜನ ಹಣ ಕಳಿಸಿದರು.
ಕೊಳ್ಳೇಗಾಲದ ಮುಕ್ತ ಸಾಹಿತ್ಯ ವೇದಿಕೆಯ ಸದಸ್ಯರು ಧನಸಹಾಯ ಮಾಡಿದರು |
ಮಡಿಕೇರಿ |
ಲೈಟ್ ಕಂಬದ ಸುಮಾರು ೪೦-೪೫ರಷ್ಟು ನೀರಿನಲ್ಲಿ ಮುಳುಗಿತ್ತಂತೆ, ಕಂಬದ ಬಣ್ಣದಲ್ಲಿ ವ್ಯತ್ಯಾಸ ಗೊತ್ತಾಗುತ್ತದೆ |
ಮಣ್ಣಿನ ಕಲೆ ಕಾಣಿಸುವ ಮಟ್ಟದವರೆಗೆ ನೀರು ಒಂದು ವಾರದ ಕಾಲ ನಿಂತಿತ್ತು ಸುಮಾರು ೩-೪ ಕಿಮೀ ಉದ್ದಕ್ಕೂ (ಮಾದಾಪುರ) |
ಬಜೆಗುಂಡಿಯಲ್ಲಿ (ಕೆಳಭಾಗದಲ್ಲಿ ಗುಡ್ಡ ಕುಸಿದು ಸುಮಾರು ಮನೆಗಳು ಹಾಳಾಗಿದ್ದವು, ಜೀವ ಹಾನಿಯಾಗಿತ್ತು ) |
ನನ್ನ ಸ್ನೇಹಿತರು ಸೋಮವಾರಪೇಟೆ ತಾಲ್ಲೂಕಿನ ಮೂರು ಗ್ರಾಮಗಳನ್ನು ಮತ್ತು ಮಾದಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಲ್ಕೊರೆ ಮತ್ತು ಮೀನಕೊಲ್ಲಿಯನ್ನು ಗುರುತಿಸಿ ಅಲ್ಲಿ ವೈದ್ಯಕೀಯ ಶಿಬಿರಗಳನ್ನು ಸಂಘಟಿಸುವುದು ಮತ್ತು ಆಹಾರ ಪದಾರ್ಥಗಳನ್ನು, ಇತರೆ ಸಾಮಗ್ರಿಗಳನ್ನು ಹಂಚುವುದೆಂದು ತೀರ್ಮಾನಿಸಿದ್ದರು. ಸಂಘಟನೆಯ ಸ್ನೇಹಿತರು ರಾಜ್ಯದ ಬೇರೆಬೇರೆ ಭಾಗಗಳಿಂದ ಹಣ ಸಂಗ್ರಹಿಸಿ, ಆಹಾರ ಪದಾರ್ಥಗಳನ್ನು ಖರೀದಿಸಿ (ಅಕ್ಕಿ ಮತ್ತು ಬೇಳೆಯನ್ನು ರಾಯಚೂರು, ಗುಲ್ಬರ್ಗಾದ ಕೆಲವು ಮಿಲ್ ಮಾಲೀಕರು ಕಡಿಮೆ ಬೆಲೆಗೆ ನೀಡಿದ್ದರು) ಮೈಸೂರಿಗೆ ಕಳಿಸಿದ್ದರು.
ನನ್ನಂತೆ ಸ್ವಯಂಸೇವಕರಾಗಲು ಬಯಸಿದ್ದವರು ಗುಲ್ಬರ್ಗಾ, ರಾಯಚೂರು, ಬಿಜಾಪುರ, ಬೆಂಗಳೂರಿಂದಲೂ ಸಹ ಬಂದು ಮೈಸೂರಿನ ಸ್ನೇಹಿತರನ್ನು ಸೇರಿದ್ದರು. ಅದರಲ್ಲಿ ಹಲವರು ಎಸ್‍ಯುಸಿಐನ ಕಾರ್ಯಕರ್ತರಾಗಿದ್ದರು.
ತನ್ನ ತಂದೆಯ ಎಸ್ಟೇಟ್ ನಲ್ಲಿ ನಾವೆಲ್ಲಾ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ ತಮ್ಮ ವಿನಯ್ |
ಸಿದ್ಧತೆ ಮಾಡಿಕೊಳ್ಳಲು ಜನರನ್ನು ಭೇಟಿಮಾಡಲು ಹೋಗಬೇಕಾದಾಗ ಕೊಡಗಿನಲ್ಲಿ ಆದ ಹಾನಿಯ ಒಂದು ಚಿತ್ರಣ ಸಿಕ್ಕಿತು. ಎಲ್ಲೆಡೆಯಲ್ಲೂ ಗುಡ್ಡ ಕುಸಿತ, ರಸ್ತೆಯ ಮಧ್ಯೆ ಬಿದ್ದಿದ್ದ ಮರಗಳನ್ನು, ಮಣ್ಣನ್ನು ತೆಗೆಯಲು ಕಾರ್ಮಿಕರು ಶ್ರಮಿಸುತ್ತಿದ್ದರು, ಕೆಲವೆಡೆಗಳಲ್ಲಿ ರಸ್ತೆ ಎಷ್ಟರ ಮಟ್ಟಿಗೆ ಹಾಳಾಗಿತ್ತೆಂದರೆ ಮುಂದೆ ಹೋಗಲು ಧೈರ್ಯ ಬಾರದಿರುವಷ್ಟು. ಕೆಲವು ರಸ್ತೆಗಳಲ್ಲಿ ಸಾಗುತ್ತಿದ್ದಾಗ ಮಳೆ ಬೀಳುತ್ತಲೇ ಇದ್ದು ಮತ್ತೆ ಎಲ್ಲಿ ಮಣ್ಣು ಸಡಿಲವಾಗಿ ಗುಡ್ಡ ಕುಸಿಯುತ್ತದೊ, ಮರ ಬೀಳುತ್ತದೊ ಎಂಬ ಭಯ ಉಂಟುಮಾಡಿತ್ತು. ಹಟ್ಟಿಹೊಳೆ ಮತ್ತು ಕಾವೇರಿ ಭಯಾನಕವಾಗಿ ಹರಿಯುತ್ತಿರುವಂತೆನಿಸಿತ್ತು.
ಸಮಸ್ಯೆ ತಹಬಂದಿಗೆ ಬಂದಿದೆ ಎನ್ನಲಾದ ಈ ಪರಿಸ್ಥಿತಿಯಲ್ಲಿಯೇ ಹೀಗಿದ್ದರೆ ಆಗ ಹೇಗಿದ್ದಿರಬಹುದೆಂದು ಊಹಿಸಿಕೊಂಡೆವು, ಟಿವಿಯಲ್ಲಿ ನೋಡಿದ್ದ ಚಿತ್ರಗಳು ಕಣ್ಣಮುಂದೆ ಬಂದು ನಿಂತವು.
ಸಮಸ್ಯೆ ತಹಬಂದಿಗೆ ಬಂದಿದೆ ಎನ್ನಲಾದ ಈ ಪರಿಸ್ಥಿತಿಯಲ್ಲಿಯೇ ಹೀಗಿದ್ದರೆ ಆಗ ಹೇಗಿದ್ದಿರಬಹುದೆಂದು ಊಹಿಸಿಕೊಂಡೆವು, ಟಿವಿಯಲ್ಲಿ ನೋಡಿದ್ದ ಚಿತ್ರಗಳು ಕಣ್ಣಮುಂದೆ ಬಂದು ನಿಂತವು.
26ನೇ ತಾರೀಖು ಆ ಎಲ್ಲಾ ಸ್ಥಳಗಳ ಆಶಾ ಕಾರ್ಯಕರ್ತೆಯರನ್ನು, ಗ್ರಾಮಪಂಚಾಯತ್ ಸದಸ್ಯರನ್ನು ಭೇಟಿ ಮಾಡಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಯಿತು. 26ನೇ ತಾರೀಖು ಮಧ್ಯರಾತ್ರಿ ದಾವಣಗೆರೆಯಿಂದ ಮೆಡಿಕಲ್ ಸರ್ವೀಸ್ ಸೆಂಟರ್ ನ ರಾಜ್ಯ ಅಧ್ಯಕ್ಷರಾದ ಡಾ. ವಸುಧೇಂದ್ರರವರ ನೇತೃತ್ವದಲ್ಲಿ ವೈದ್ಯರ ತಂಡ ಬಂದಿಳಿಯಿತು.
27/8/2018ರಂದು ಬಜೆಗುಂಡಿಯಲ್ಲಿ, 28/8/2018ರಂದು ಕಲ್ಕೊರೆಯಲ್ಲಿ ಮತ್ತು ಕೆಂಚಮ್ಮನ ಬಾಣೆಯಲ್ಲಿ ಮೂರು ಕಡೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಯಿತು. ಒಟ್ಟು 700ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಿ ಉಚಿತವಾಗಿ ಔಷಧಿಗಳನ್ನೂ ನೀಡಲಾಯಿತು. ಕೆಂಚಮ್ಮನ ಬಾಣೆಯಲ್ಲಿ ವೈದ್ಯರಿಗೆ ತೋರಿಸಲು ಬಂದ ಒಬ್ಬಾಕೆ, “ಮೇಡಮ್ ನಿಮಗೆಲ್ಲಾ ತುಂಬಾ ಧನ್ಯವಾದಗಳು. ಕೆಲಸವೂ ಇರಲಿಲ್ಲ, ಆರೋಗ್ಯ ಚೆನ್ನಾಗಿಲ್ಲ. ವೈದ್ಯರ ಬಳಿ ತೋರಿಸಲು ಹಣವಿರಲಿಲ್ಲ. ನಿಮ್ಮ ಈ ಶಿಬಿರದಿಂದ ತುಂಬಾ ಉಪಕಾರವಾಯಿತು” ಎಂದು ವೈದ್ಯರಿಗೆ ಕೈಮುಗಿದರು.
27/8/2018ರಂದು ಬಜೆಗುಂಡಿಯಲ್ಲಿ, 28/8/2018ರಂದು ಕಲ್ಕೊರೆಯಲ್ಲಿ ಮತ್ತು ಕೆಂಚಮ್ಮನ ಬಾಣೆಯಲ್ಲಿ ಮೂರು ಕಡೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಯಿತು. ಒಟ್ಟು 700ಕ್ಕೂ ಹೆಚ್ಚು ಜನರನ್ನು ಪರಿಶೀಲಿಸಿ ಉಚಿತವಾಗಿ ಔಷಧಿಗಳನ್ನೂ ನೀಡಲಾಯಿತು. ಕೆಂಚಮ್ಮನ ಬಾಣೆಯಲ್ಲಿ ವೈದ್ಯರಿಗೆ ತೋರಿಸಲು ಬಂದ ಒಬ್ಬಾಕೆ, “ಮೇಡಮ್ ನಿಮಗೆಲ್ಲಾ ತುಂಬಾ ಧನ್ಯವಾದಗಳು. ಕೆಲಸವೂ ಇರಲಿಲ್ಲ, ಆರೋಗ್ಯ ಚೆನ್ನಾಗಿಲ್ಲ. ವೈದ್ಯರ ಬಳಿ ತೋರಿಸಲು ಹಣವಿರಲಿಲ್ಲ. ನಿಮ್ಮ ಈ ಶಿಬಿರದಿಂದ ತುಂಬಾ ಉಪಕಾರವಾಯಿತು” ಎಂದು ವೈದ್ಯರಿಗೆ ಕೈಮುಗಿದರು.
ಅದೇ ಸಮಯದಲ್ಲಿ ಅಲ್ಲಿ ಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸಲು ನಿರ್ಧರಿಸಲಾಯಿತು. ಎಲ್ಲರಿಗೂ ಸಿಗಬೇಕೆಂಬ ಕಾರಣದಿಂದ ಮೆಡಿಕಲ್ ಸರ್ವೀಸ್ ಸೆಂಟರ್ ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ. ಅಂಶುಮಾನ್ ಮಿತ್ರರವರು ಎಲ್ಲರಿಗೂ ಮೊದಲೇ ಕೂಪನ್ ಕೊಟ್ಟುಬಿಡಿ ಎಂಬ ಸಲಹೆ ನೀಡಿದ್ದರು. ಅದರಂತೆ ಸ್ವಯಂಸೇವಕರ ಒಂದು ತಂಡ ಕೂಪನ್ ಕೊಟ್ಟುಬಂದಿತು. ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಊರಿನ ಕೆಲವು ಯುವಜನರ ಮೂಲಕ ಎಲ್ಲರಿಗೂ ವಸ್ತುಗಳನ್ನು ವಿತರಿಸಲಾಯಿತು.
ನಾವು ಕೊಟ್ಟ ವಸ್ತುಗಳು ಅವರಿಗೆ ಒಂದು ವಾರ ಕಾಲ ಬರಬಹುದೇನೊ. ಆದರೆ ಅಂತಹ ಸಮಯದಲ್ಲೂ ಶಿಸ್ತಿನಿಂದ ಕ್ಯೂನಲ್ಲಿ ಬಂದು ನೂಕುನುಗ್ಗಲಿಲ್ಲದೆ ತೆಗೆದುಕೊಂಡ ಹೋದ ಆ ಜನರನ್ನು ನೋಡಿ ಗೌರವವೇ ಮೂಡಿತು. ತಮಗೇ ಆಹಾರವಿಲ್ಲದ ಪರಿಸ್ಥಿತಿಯಲ್ಲೂ ಅವರ ಮನೆಗಳಿಗೆ ಕೂಪನ್ ಕೊಟ್ಟುಬರಲು ಹೋದ ಸ್ವಯಂಸೇವಕರಿಗೆ ಟೀ, ಬಿಸ್ಕತ್, ಊಟ ನೀಡಿದ ಆ ಆತ್ಮೀಯತೆಯನ್ನು ಮರೆಯಲಾಗದು. ಕೆಂಚಮ್ಮನ ಬಾಣೆಯಲ್ಲಿ ನಮ್ಮ ಹತ್ತಾರು ಕಾರ್ಯಕರ್ತರಿಗೆ ಊಟ ನೀಡಿದಾಕೆಗೆ ನಾವು ಇನ್ನೊಂದು ಪ್ಯಾಕೆಟ್ ಅಕ್ಕಿ, ಬೇಳೆ ನೀಡಲು ಹೋದಾಗ ನಿರಾಕರಿಸಿದರು. ನಂತರ ನಾವು ಅವರಿಗೆ, “ನೀವೀಗ ಸಂಕಷ್ಟದಲ್ಲಿದ್ದೀರಿ, ಆದ್ದರಿಂದ ಇದನ್ನು ತೆಗೆದುಕೊಳ್ಳಿ, ಇನ್ನೊಮ್ಮೆ ನೀವು ಚೆನ್ನಾಗಿರುವ ಸಮಯದಲ್ಲಿ ಬಂದು ಊಟ ಮಾಡಿ ಹೋಗುತ್ತೇವೆ” ಎಂದು ಹೇಳಿ ಒಪ್ಪಿಸಿದೆವು. ಇನ್ನೊಂದೆಡೆ ಅಜ್ಜಿ, ಹುಷಾರಿಲ್ಲದ ಮಗಳು ಇರುವ ಮನೆಯಲ್ಲಿ ಬಲವಂತ ಮಾಡಿ ಟೀ, ಬಿಸ್ಕತ್ ಕೊಟ್ಟಾಗ ಕಷ್ಟಪಟ್ಟು ಕಣ್ಣೀರನ್ನು ತಡೆದುಕೊಳ್ಳಬೇಕಾಯಿತು.
ತಾವೇ ಕಷ್ಟದಲ್ಲಿದ್ದರೂ ಆಶಾ ಕಾರ್ಯಕರ್ತೆಯರು ನಮ್ಮೊಂದಿಗೆ ಮೂರು ದಿನಗಳೂ ಜೊತೆಯಿದ್ದರು. ಎಲ್ಲರಿಗೂ ಕೊಟ್ಟ ಮೇಲೆ ತಾವು ವಸ್ತುಗಳನ್ನು ತೆಗೆದುಕೊಂಡರು. ಒಬ್ಬ ಯುವಕ “ಮೇಡಮ್ ನಾವು ಸರ್ಕಾರವನ್ನು ಪರಿಹಾರ ಕೇಳುತ್ತಿಲ್ಲ, ನಾವೀಗಲೂ ಬದುಕನ್ನು ಕಟ್ಟಿಕೊಳ್ಳುತ್ತೇವೆ. ನಮಗೆ ಕೂಲಿ ಕೆಲಸ ಸಿಗಬೇಕಷ್ಟೇ” ಎಂದಾಗ ಯುವಕರು ಸೋಮಾರಿಗಳು ಎಂದು ಹೇಳುವ ಜನರಿಗೆ ಅದೊಂದು ಹೊಡೆತದಂತಿತ್ತು. ಕೂಪನ್ ಹಂಚಲು ಹೋದಾಗ ಇನ್ನೋರ್ವ ಯುವಕ, “ಮೇಡಮ್ ನನಗೆ ಟೆಂಪೊ ಓಡಿಸಲು ಅವಕಾಶ ಸಿಕ್ಕಿದೆ, ಕೂಲಿಯೂ ಸಿಕ್ಕಿದೆ. ಪಕ್ಕದ ಮನೆಯವರಿಗೆ ಅದರ ಅವಶ್ಯಕತೆ ಹೆಚ್ಚಿದೆ, ಅವರಿಗೆ ಕೊಡಿ” ಎಂದಾಗ ಭಾವುಕರಾದರು ನಮ್ಮ ಸ್ನೇಹಿತರು. ಹೀಗೆಯೇ ಹೇಳುತ್ತಾ ಹೋದರೆ ಬಹಳಷ್ಟು ಪುಟಗಳನ್ನು ಬರೆಯಬೇಕಾಗುತ್ತದೆ.
ಟೀ ಬಿಸ್ಕತ್ ನೀಡಿದ ಅಜ್ಜಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದರು |
ಮತ್ತೆ ಅವರಿಗೆ ನೆರವು ನೀಡುವ ಭರವಸೆ ನೀಡಿ ಭಾರವಾದ ಮನದಿಂದ ಹಿಂದಿರುಗಿದೆವು. ಆ ಜನರಿಗೆ ಪುನಃ ಬದುಕನ್ನು ಕಟ್ಟಿಕೊಳ್ಳಲು ಎಷ್ಟು ವರ್ಷಗಳು ಬೇಕಾಗುತ್ತದೊ ಎಂದುಕೊಂಡೆವು. ಆದರೆ ಆ ಜನರ ಧೈರ್ಯವನ್ನು ಕಂಡಾಗ ನಿಜಕ್ಕೂ ಆಶ್ಚರ್ಯವೆನಿಸಿತು. ಬಹುಬೇಗ ಎಲ್ಲವನ್ನೂ ಮರೆತು ಹೊಸ ಬದುಕನ್ನು ಕಟ್ಟಿಕೊಳ್ಳಲಿ ಎಂದು ಹಾರೈಸುತ್ತಾ ಹಿಂದಿರುಗಿದೆವು.
ಅಲ್ಲಿ ನನ್ನ ಜೊತೆ ಇದ್ದ ಬೇರೆಬೇರೆ ಕಡೆಗಳಿಂದ ಬಂದ ಯುವ ಸ್ವಯಂಸೇವಕರನ್ನು, ವೈದ್ಯರನ್ನು, ವೈದ್ಯಕೀಯ ವಿದ್ಯಾರ್ಥಿಗಳನ್ನು ಕಂಡು ಜನ ಆಶ್ಚರ್ಯಪಟ್ಟರು. ಸರಿಯಾಗಿ ಊಟವಿಲ್ಲದೆ, ನಿದ್ರೆಯಿಲ್ಲದೆ ಇತರರಿಗೋಸ್ಕರ ದುಡಿದ ಅವರನ್ನು ಕಂಡು ಅಲ್ಲಿನವರೆಲ್ಲ ಬಾಯಿತುಂಬಾ ಹರಸಿದರು, “ನಿಮ್ಮಂಥವರ ಪೀಳಿಗೆ ಹೆಚ್ಚಾಗಲಿ, ನೀವು ನೂರ್ಕಾಲ ತಣ್ಣಗಿರಿ!!”
ಅಲ್ಲಿ ಮತ್ತೆ ಜನ ಬದುಕು ಕಟ್ಟಿಕೊಳ್ಳಲಿ, ಹೂವು ಅರಳಲಿ ಎಂದಷ್ಟೇ ಆಶಿಸಬಲ್ಲೆ!!
ಅಲ್ಲಿ ಮತ್ತೆ ಜನ ಬದುಕು ಕಟ್ಟಿಕೊಳ್ಳಲಿ, ಹೂವು ಅರಳಲಿ ಎಂದಷ್ಟೇ ಆಶಿಸಬಲ್ಲೆ!!
ಅಲ್ಲಿಯೇ ಅರಳಿದ್ದ ಹೂವು |
- - ಸುಧಾ ಜಿ
1 ಕಾಮೆಂಟ್:
ಸಣ್ಣಪುಟ್ಟ ಸಮಸ್ಯೆಗಳಿಗೆ ಒದ್ದಾಡುವ ನಾವು ಇಂತಹ ವೈಪರೀತ್ಯ ಸನ್ನಿವೇಶಗಳನ್ನು ಎದುರಿಸಿದವರ ಆತ್ಮಸ್ಥೈರ್ಯಕ್ಕೆ ನನ್ನಿಂದ ಒಂದು ಜೋಹಾರು. ಅಲ್ಲಿನ ಅನುಭವ ಹಂಚಿದ ಅವರ ನೋವಲ್ಲಿ ಜೊತೆಯಾದ ಪ್ರೀತಿಯ ಮಿಸ್ಸಮ್ಮ ನಿಮಗೊಂದು ದೊಡ್ಡ ಸಲಾಂ
ಕಾಮೆಂಟ್ ಪೋಸ್ಟ್ ಮಾಡಿ