Pages

ವ್ಯಕ್ತಿ ಪರಿಚಯ - ಎಂ.ಎಲ್.ವಸಂತಕುಮಾರಿ



ಸಂಗೀತತ್ರಯರಲ್ಲಿ ಒಬ್ಬರಾದ ಎಂ.ಎಲ್.ವಸಂತಕುಮಾರಿಯವರು ಜನಿಸಿದ್ದು ಜುಲೈ 3, 1928 ರಂದು. ತಂದೆ ತಂಜಾವೂರು ಜಿಲ್ಲೆಯ ಕೊತನೂರಿನ ಅಯ್ಯಾಸ್ವಾಮಿ ಅಯ್ಯರ್. ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾಗಿದ್ದರು. ತಾಯಿ ಲಲಿತಾಂಗಿಯನ್ನು ಸಾಕಿದವರು ಕಲೆಗೆ ಹೆಸರುವಾಸಿಯಾಗಿದ್ದ ದೇವದಾಸಿ ಕುಟುಂಬದ ಪೆರುಮಾಳ್ ಕೋಯಿಲ್ ನಾರಾಯಣಮ್ಮ. ಲಲಿತಾಂಗಿಯವರು ಸಹ ಸಂಗೀತವನ್ನು ‌ಕಲಿತಿದ್ದರು. ಸಾಮಾಜಿಕ ಬದಲಾವಣೆಗಳಿಂದ ದೇವದಾಸಿ ಹಿನ್ನೆಲೆಯಿಂದ ಬಂದ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿರಲಿಲ್ಲ. ಇಂತಹ ಸಮಯದಲ್ಲಿ ಆಗ ತಾನೇ ನಮ್ಮಲ್ಲಿಗೆ ಕಾಲಿಟ್ಟಿದ್ದ ಗ್ರಾಮಫೋನ್ ಕಂಪನಿಗಳು ಇವರುಗಳಿಗೆ ಅವಕಾಶಗಳನ್ನು ಕೊಟ್ಟವು. ಇದರ ಉಪಯೋಗವನ್ನು ಪಡೆದುಕೊಂಡ ಲಲಿತಾಂಗಿಯವರು "ಸುದಾಂತಿರದೀಪಂ" ಎಂಬ ಗೀತೆಯನ್ನು ಹಾಡಿದರು. ಇದು ಗ್ರಾಮಫೋನ್ ಡಿಸ್ಕಿನಲ್ಲಿ ಧ್ವನಿಮುದ್ರಣಗೊಂಡ ಮೊದಲ ದೇಶಭಕ್ತಿಗೀತೆಯಾಗಿದೆ. ಇದಲ್ಲದೆ‌ ಲಲಿತಾಂಗಿಯವರು‌ ನರಸಿಂಹದಾಸರವರ ಹತ್ತಿರ ಪುರಂದರದಾಸರ ಕೃತಿಗಳನ್ನು ಕಲಿತರು. ಇವರು 1940ರಲ್ಲಿ "ಪುರಂದರ ಮಣಿಮಾಲಾ" ಗ್ರಂಥವನ್ನು ಪ್ರಕಟಿಸಿದರು. 

ಇಂತಹ ಸಂಗೀತ ಪರಿಸರದಿಂದ ಬಂದ ವಸಂತಕುಮಾರಿಯವರಿಗೆ ಸಹಜವಾಗಿ ಸಂಗೀತದೆಡೆಗೆ ಒಲವಿತ್ತು. ಆದರೆ ತಂದೆತಾಯಿಗೆ ಇವರನ್ನು ವೈದ್ಯಳಾಗಿ ಮಾಡಬೇಕೆಂಬ‌ ಆಸೆಯಿತ್ತು. ಮಗಳನ್ನು ಜಾರ್ಜ್ ಟೌನಿನ ಗುಡ್ ಷೆಪರ್ಡ್ ಕಾನ್ವೆಂಟಿಗೆ ಸೇರಿಸಿದರು. ಅಲ್ಲಿ ಸೀನಿಯರ್ ಬ್ರಿಡ್ಜ್ ವರೆಗೆ ಓದಿದರು. ಇದರಿಂದ ವಸಂತರವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ಒಳ್ಳೆಯ ಹಿಡಿತವಿತ್ತು. 
ವಸಂತರವರು ತಾಯಿಯೊಡನೆ ಹಾಡಲು ಹೋಗುತ್ತಿದ್ದರು. 1940 ರ ಜುಲೈ 27 ರಂದು ತಾಯಿಯೊಡನೆ ತಮ್ಮ ಮೊದಲ ಕಾರ್ಯಕ್ರಮವನ್ನು ನೀಡಿದರು. ಇದಾದ ನಂತರ 1940 ಆಗಸ್ಟ್‌ 3 ರಂದು ನವದೆಹಲಿಯಲ್ಲಿ ತಾಯಿಯ ಅನಾರೋಗ್ಯದ ಕಾರಣ ಇವರೇ ಕಾರ್ಯಕ್ರಮ ನೀಡಿದರು. ಈ ಕಾರ್ಯಕ್ರಮದಲ್ಲಿ  ಮದ್ರಾಸ್ ಲಲಿತಾಂಗಿ ವಸಂತಕುಮಾರಿ ಎಂಬ ಹೆಸರಿನಿಂದ ಹಾಡಿದರು. ಈ ಕಾರ್ಯಕ್ರಮದಲ್ಲಿ ಅಪಾರ ಮೆಚ್ಚುಗೆಯನ್ನು ಪಡೆದರು. ಅಂದಿನಿಂದ ಎಂ.ಎಲ್.ವಿ ಎಂದೇ ಪರಿಚಿತರಾದರು. 
ಮಗಳ ಸಂಗೀತಾಸಕ್ತಿಯನ್ನು ಕಂಡ ತಂದೆ ತಾಯಿಯೇ ಮೊದಲು ಸಂಗೀತ ಅಭ್ಯಾಸವನ್ನು ಮಾಡಿಸಿದರು. ಸಾಮಾನ್ಯವಾಗಿ ಗುರುಗಳನ್ನು ಅರಸಿ ಶಿಷ್ಯರು ಹೋಗುತ್ತಾರೆ. ಆದರೆ ಎಂ ಎಲ್ ವಿ ರವರ ವಿಷಯದಲ್ಲಿ ಗುರುವೇ ಇವರನ್ನು ಕರೆಸಿಕೊಂಡರು. ಸುಪ್ರಸಿದ್ದ ಜೆ ಎನ್ ಬಾಲಸುಬ್ರಹ್ಮಣ್ಯಂರವರು ವಸಂತರವರು ಹಾಡುವುದನ್ನು ಕೇಳಿ ಸ್ವತಃ ತಾವೇ ಅವರನ್ನು ಕರೆದು ಸಂಗೀತವನ್ನು ಕಲಿಸಿದರು. ಹೀಗೆ ಜೆಎನ್ ಬಿ ರವರ ಶಿಷ್ಯರಾದ ಎಂಎಲ್ ವಿ ಸುಮಾರು ಹತ್ತು ವರ್ಷಗಳ ಕಾಲ ಅವರ ಬಳಿ ಅಭ್ಯಾಸ ಮಾಡಿದರೂ ಅವರ ಉಸಿರಿರುವವರೆಗೂ ಅವರ ಶಿಷ್ಯೆಯಾಗಿಯೇ ನಡೆದುಕೊಂಡರು. 
ಹೀಗಿರುವಾಗ ತಾಯಿಯ ಆರೋಗ್ಯ ಹದಗೆಟ್ಟಿತು. ಮನೆಯ ಎಲ್ಲಾ ಜವಾಬ್ದಾರಿಯೂ ಇವರಿಗೇ ಸೇರಿತು.‌  ಸಂಗೀತ ಕಾರ್ಯಕ್ರಮ ನೀಡಿ ಹಣ ಸಂಪಾದಿಸುವುದು ಇವರಿಗೆ ಅನಿವಾರ್ಯವಾಯಿತು. ನಂತರ ಇವರು ಸಿನಿಮಾ ಕ್ಷೇತ್ರಕ್ಕೂ ಹಿನ್ನೆಲೆ ಗಾಯಕಿಯಾಗಿ ಕಾಲಿರಿಸಿದರು. ಕನ್ನಡದ ಹಂಸಗೀತೆ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.
ಸದ್ಗುರು ಸಂಗೀತಾ ಸಭೆಯ ಸಂಘಟಕರಾಗಿದ್ದ ಆರ್ ಕೃಷ್ಣಮೂರ್ತಿಯವರೊಂದಿಗೆ ವಸಂತರವರ ವಿವಾಹ‌ ನಡೆಯಿತು. ವಿವಾಹದ ನಂತರ ಇವರ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಪತಿ ಕೃಷ್ಣಮೂರ್ತಿಯವರು ಯಾವ ವ್ಯವಹಾರದಲ್ಲೂ ಪ್ರಗತಿ ಕಾಣದೆ ಇಸ್ಪೀಟು ಮೊದಲಾದ ಹವ್ಯಾಸಗಳಲ್ಲಿ ಮುಳುಗಿಹೋದರು‌. ಮಗಳು ಶ್ರೀವಿದ್ಯಾ ಮತ್ತು ಮಗ ಶಂಕರರಾಮನ್ ಇವರನ್ನು ಬೆಳೆಸುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡರು. ಮಗಳ ಭರತನಾಟ್ಯಕ್ಕೆ ಇವರೇ ಪದಂಗಳನ್ನು ಹಾಡುತ್ತಿದ್ದರು.  ಇವೆಲ್ಲಾ ಜವಾಬ್ದಾರಿಗಳ ನಡುವೆಯೂ ಇವರು ಧೃತಿಗೆಡದೆ ತಮ್ಮ ಗಾಯನವನ್ನು ಮುಂದುವರಿಸಿದರು.
ಪ್ರಾರಂಭದಲ್ಲಿ ಇವರ ಸಂಗೀತ ತಾಯಿ ಲಲಿತಾಂಗಿ ಮತ್ತು ಗುರು ಜೆ ಎನ್ ಬಿರವರ ಸಂಗೀತದ ಮಿಶ್ರಣದಂತ್ತಿದ್ದರೂ ಕ್ರಮೇಣ ತಮ್ಮದೇ ಆದ ಶೈಲಿಯಲ್ಲಿ ಹಾಡಲಾರಂಭಿಸಿದರು. ಇವರಿಗಿಂತ ಮೊದಲೇ ಬಂದ  ಎಂ ಎಸ್ ಸುಬ್ಬುಲಕ್ಷ್ಮಿ ಮತ್ತು ಪಟ್ಟಮ್ಮಾಳ್ ರವರು ಇವರ ಹಾದಿಯನ್ನು ಸುಗಮಗೊಳಿಸಿದ್ದರು‌. ಇವರನ್ನು ಅವರಿಬ್ಬರೂ ಪ್ರತಿಸ್ಪರ್ಧಿ ಎನ್ನದೆ ಪ್ರೀತಿ ವಿಶ್ವಾಸದಿಂದಲೇ ಕಾಣುತ್ತಿದ್ದರು. ಇವರು ಕರ್ನಾಟಕ ಸಂಗೀತದ ಜೊತೆಗೆ ಅನ್ಯ ಭಾಷೆಗಳ ಕಡೆಗೂ ತಮ್ಮ ಗಮನ ಹರಿಸಿದರು. ಸಂಸ್ಕೃತ, ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲೂ ಹಾಡುತ್ತಿದ್ದರು. ತಾಯಿಯಂತೆ ದಾಸರ ಕೃತಿಗಳನ್ನು ಕಲಿತರು. ಅಲ್ಲದೆ ತಮ್ಮ ಸಂಗೀತ ಕಛೇರಿಗಳಲ್ಲಿ ಕರ್ನಾಟಕ ಸಂಗೀತದ ಜೊತೆಗೆ ಪುರಂದರ ಕೃತಿಗಳನ್ನು ಹಾಡುತ್ತಿದ್ದರು. ಅಲ್ಲದೆ ವಚನಗಳ ಅಧ್ಯಯನ ಮಾಡಿ ಅವುಗಳಿಗೆ ರಾಗಸಂಯೋಜನೆಯನ್ನು ಮಾಡಿ ಹಾಡುತ್ತಿದ್ದರು. ದಾಸರ ಪದಗಳನ್ನು ಕರ್ನಾಟಕ ಸಂಗಿತದ ಜೊತೆಗೆ ಪರಿಚಯಿಸುವುದರಲ್ಲಿ ಇವರ ಪಾಲು ದೊಡ್ಡದು. ತಾಯಿಯ ನಿಧನಾನಂತರ ಅವರ ಸ್ಮರಣಾರ್ಥ 1955 ರಲ್ಲಿ ಪುರಂದರ ಮಣಿಮಾಲಾದ ಎರಡನೇ ಆವೃತ್ತಿಯನ್ನು ಹೊರ ತಂದರು‌.
ಎಂ ಎಲ್ ವಿ ರವರು ತಮ್ಮ  ಗುರುಗಳಂತೆ ಸಹವಾದಕರನ್ನು ಪ್ರೋತ್ಸಾಹಿಸುತ್ತಿದ್ದರು. ಇವರ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಇವರು ಯಾರೇ ಆಗಲಿ ಸಹಾಯ ಕೇಳಿಕೊಂಡು ಬಂದರೆ ಇಲ್ಲವೆನ್ನುತ್ತಿರಲಿಲ್ಲ.  ಇವರಿಗೆ ಸಂಗೀತ ಕಲಿಸುವುದೆಂದರೆ ಬಲು ಪ್ರೀತಿ. ಇವರು ಹೆಚ್ಚಿನ ಶಿಷ್ಯರನ್ನು ಹೊಂದಿದ್ದ ಗುರು ಎಂದೇ ಹೆಸರುವಾಸಿಯಾಗಿದ್ದರು. ಅವರಲ್ಲಿ ಸರಸ್ವತಿ ಶ್ರೀನೀವಾಸನ್, ಟಿ. ಎಂ. ಪ್ರಭಾವತಿ, ಚಾರುಮತಿ ರಾಮಚಂದ್ರನ್, ಕನ್ಯಾಕುಮಾರಿ, ಸುಧಾ ರಘುನಾಥನ್, ಯೋಗ ಸಂತಾನಂ ಪ್ರಮುಖರು.
ಇಷ್ಟೆಲ್ಲಾ ಸಂಗೀತ ಸೇವೆ ಮಾಡಿದ ಇವರಿಗೆ ದೊರೆತ ಪ್ರಶಸ್ತಿಗಳು ಹಲವಾರು. ಇವರು ತಮ್ಮ 26 ನೇ ವಯಸ್ಸಿನಲ್ಲಿ "ಸಂಗೀತವಾಣಿ" ಎಂಬ ಬಿರುದನ್ನು ಪಡೆದರು‌. ಪುರಂದರದಾಸರ ಕೃತಿಗಳನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಪುರಂದರದಾಸ ಸಮಿತಿಯವರು "ಸಂಗೀತ ರತ್ನಾಕರ" ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ತಿರುಪ್ಪಾವೈ ಕೃತಿಗಳನ್ನು ಧ್ವನಿ ಮುದ್ರಿಸಿದ್ದಕ್ಕಾಗಿ "ತಿರುಪ್ಪಾವೈ ಮಣಿ" ಪ್ರಶಸ್ತಿಯನ್ನು ಪಡೆದರು. 1967 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. 1970 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ 1977 ರಲ್ಲಿ ಸಂಗೀತ ಕಲಾನಿಧಿ ಪ್ರಶಸ್ತಿಯನ್ನು ಪಡೆದರು. 1978 ರಲ್ಲಿ ಇಸೈ ಪೆರಿಜ್ಞಾರ್ ಪ್ರಶಸ್ತಿಯನ್ನು, ಇಸೈ ಚೆಲ್ವಂ‌ ಪ್ರಶಸ್ತಿಯನ್ನು ಪಡೆದರು. ತಿರುಪತಿ ತ್ಯಾಗರಾಜಸ್ವಾಮಿ ಟ್ರಸ್ಟ್ ನಿಂದ "ಸಪ್ತಗಿರಿ ವಿದ್ವಾನ್" ಪ್ರಶಸ್ತಿ, 1985 ರಲ್ಲಿ 'ಸಂಗೀತ ಕಲಾಶಿಖಾಮಣಿ' ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದರು.

ಇಷ್ಟೆಲ್ಲಾ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಇವರು ತಮ್ಮ ಕೊನೆಯ ದಿನಗಳನ್ನು ರಿಷಿ ವ್ಯಾಲಿಯಲ್ಲಿ ಮಕ್ಕಳಿಗೆ ಸಂಗೀತ ಕಲಿಸುತ್ತಾ ಕಳೆದಿದ್ದರು. ಸಂಗೀತ ಕಲಿಸುತ್ತಾ ತಮ್ಮ  ನೋವನ್ನು ಮರೆಯುತ್ತಿದ್ದರು. ಎಂ ಎಂದರೆ ಮಾಧುರ್ಯ, ಎಲ್ ಎಂದರೆ ಲಯ, ವಿ ಎಂದರೆ ವಿದ್ವತ್ ಎಂದೇ ಖ್ಯಾತರಾಗಿದ್ದ ಇವರು  ಅಕ್ಟೋಬರ್ 31, 1990 ರಂದು ಕೊನೆಯುಸಿರೆಳೆದರು. ಯಾರೂ ಮರೆಯದ ವಸಂತಗಾನದಿಂದ ಈಗಲೂ ಎಲ್ಲರ ಮನದಲ್ಲೂ  ಉಳಿದಿದ್ದಾರೆ ಎಂ ಎಲ್ ವಸಂತಕುಮಾರಿಯವರು.

ವಿಜಯಲಕ್ಷ್ಮಿ ಎಂ ಎಸ್   


ಕಾಮೆಂಟ್‌ಗಳಿಲ್ಲ: