Pages

ಅಮ್ಮ ಜೀವೂಬಾಯಿ ಲಕ್ಷ್ಮಣ ರಾವ್



ಅನಿರೀಕ್ಷಿತವಾಗಿ ನಮ್ಮನ್ನಗಲಿದ ಅಮ್ಮ ಜೀವೂಬಾಯಿ ಲಕ್ಷ್ಮಣ ರಾವ್


ನಮ್ಮ ತಂದೆ ಪ್ರೊ.ಜೆ.ಆರ್.ಲಕ್ಷ್ಮಣ ರಾವ್ ಅವರು ನಿಧನರಾದಾಗ  ಈ ಅಂಕಣದಲ್ಲಿ ಬರೆದಿದ್ದೆ. ಇದಾದ ಕೇವಲ ಏಳೇ ತಿಂಗಳ ನಂತರ ನಮ್ಮ ತಾಯಿಯ ಬಗ್ಗೆಯೂ ಇದೇ ಕಾರಣಕ್ಕೆ ಬರೆಯಬೇಕಾಗಿ ಬಂದದ್ದು ನನ್ನ ದುರಾದೃಷ್ಟ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತಿಯುತವಾಗಿದ್ದ ಅಮ್ಮನನ್ನು ಮಾತ್ರ ನನ್ನ ಬಾಲ್ಯದಿಂದಲೂ  ನಾನು ಬಲ್ಲೆ. ಇತ್ತೀಚೆಗೆ, ಅಂದರೆ ಎರಡು ಮೂರು ವರ್ಷಗಳಿಂದ ಕೊಂಚ ಬಳಲಿದ್ದರಷ್ಟೆ. ಅವರ ವಯಸ್ಸಿಗೆ ಅದು ಸ್ವಾಭಾವಿಕವೇ. ಅಂದ ಮಾತ್ರಕ್ಕೆ ಹೀಗೆ ದಿಢೀರನೆ ನಮ್ಮನ್ನು ಬಿಟ್ಟು ಹೋಗಬಹುದೆಂದು ಕನಸಿನಲ್ಲೂ ಎಣಿಸಿರಲಿಲ್ಲ.

ಅಮ್ಮ ಜನಿಸಿದ್ದು ೧೯೨೭ರ ಜನವರಿ ಒಂದನೆಯ ತಾರೀಕಿನಂದು. ನಮ್ಮ ತಂದೆಯೊಡನೆ ವಿವಾಹವಾದದ್ದು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ. ಅಮ್ಮ ಆಗಷ್ಟೇ ‘ಜ್ಯೂನಿಯರ್ ಬಿ.ಎ.’ ಮುಗಿಸಿದ್ದರು. ಡಿಗ್ರಿ ಪಡೆದುಕೊಳ್ಳಲು ಇನ್ನೊಂದು ವರ್ಷ ‘ಸೀನಿಯರ್ ಬಿ.ಎ.’ ಮಾಡಬೇಕಾಗಿತ್ತು.  ಆದ್ದರಿಂದ ಒಂದು ವರ್ಷ ತಾಯಿಯ ಮನೆಯಲ್ಲಿಯೇ ಇದ್ದುಕೊಂಡು ಕಾಲೇಜಿಗೆ ಹೋಗಿ ೧೯೪೮ ರಲ್ಲಿ ಬಿ.ಎ.ಡಿಗ್ರಿ ಪಡೆದುಕೊಂಡರು. ಬಹುತೇಕ ಹೆಣ್ಣು ಮಕ್ಕಳು ಶಾಲೆಯ ಮೆಟ್ಟಲನ್ನು ಹತ್ತುವುದೇ ಅಪರೂಪವಾಗಿದ್ದ ಆ ಕಾಲದಲ್ಲಿ ಅಮ್ಮ ಕಾಲೇಜು ಮೆಟ್ಟಲು ಹತ್ತಿದ್ದಷ್ಟೇ ಅಲ್ಲ, ವಿವಾಹಾನಂತರವೂ ಕಾಲೇಜಿಗೆ ಹೋಗಿ ಡಿಗ್ರಿ ಪಡೆದುಕೊಂಡು ತಮ್ಮ ಆಸೆ ಪೂರೈಸಿಕೊಳ್ಳುವಂತಾಗಿದ್ದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಹೀಗಾಗಿ ಅಮ್ಮ ಕುಟುಂಬದ ಮೊತ್ತ ಮೊದಲ ಪದವೀಧರರಾದರು.

ಅಮ್ಮ ಓದಿನಲ್ಲಿ ಮಾತ್ರ ಮುಂದಲ್ಲ. ಆಟದಲ್ಲೂ ಮುಂದು. ತಾವು ಓದಿದ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಶಾಟ್ ಪುಟ್, ಜ್ಯಾವಲಿನ್ ಥ್ರೋಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದರು. ವಾಲಿಬಾಲ್, ಬಾಸ್ಕೆಟ್ಬಾಲ್ ಆಡುತ್ತಿದ್ದರು! ಆಡುವಾಗ ಕೈಗೆ ತೊಟ್ಟಿದ್ದ ಗಾಜಿನ ಬಳೆಗಳು ಒಡೆದು ಹೋಗುತ್ತಿದ್ದವಂತೆ.  ಹೆಣ್ಣು ಮಕ್ಕಳ ಕೈ ಎಲ್ಲಾದರೂ ಬೋಳಾಗುವುದುಂಟೆ? ಅದನ್ನು ನೋಡಿದರೆ ಮನೆಯಲ್ಲಿದ್ದ ಇಬ್ಬರು ಅಜ್ಜಿಯರು ಬಯ್ಯುವರೆಂದು ಅದನ್ನು ತಪ್ಪಿಸಿಕೊಳ್ಳಲು ಒಳಗೆ ಓಡಿ ಹೋಗಿ ಬೇರೆ ಬಳೆಗಳನ್ನು ಧರಿಸಿ ಅವರ ಮುಂದೆ ಬರುತ್ತಿದ್ದರಂತೆ. ಇದಲ್ಲದೆ ಅಣ್ಣ ತಮ್ಮಂದಿರೊಡನೆ, ದಾಯಾದಿಗಳೊಡನೆ ಗೋಲಿ, ಬುಗರಿ, ಚಿನ್ನಿ ದಾಂಡುಗಳನ್ನೂ ಆಡುತ್ತಿದ್ದರಂತೆ. ಇವನ್ನೆಲ್ಲ ಅಮ್ಮ ನಮಗೆ ಬಹಳ ಉತ್ಸಾಹದಿಂದ ಹೇಳುತ್ತಿದ್ದರು.

ಚಿಕ್ಕಂದಿನಿಂದಲೂ ಅಮ್ಮನದು ಒಂದು ತರಹ ಸಾಹಸ ಮನೋಭಾವ. ಉದಾಹರಣೆಗೆ ಹೆಣ್ಣು ಮಕ್ಕಳು ‘ಹೊರಗೆ ಕೂಡುವ’ ಅರ್ಥಹೀನ ಪದ್ಧತಿಯ ಕಟ್ಟಾ ವಿರೋಧಿ ಅಮ್ಮ. ಈ ಆಚರಣೆಯನ್ನು ತಮ್ಮ ಮಟ್ಟಿಗೆ ಐವತ್ತರ ದಶಕದಲ್ಲಿಯೇ ನಿಲ್ಲಿಸಿದ ಧೈರ್ಯಸ್ಥೆ ಆಕೆ. ಅಷ್ಟೇ ಅಲ್ಲ, ತಮಗಿಂತ ಕಿರಿಯರಾದ ಹಲವಾರು ಹೆಣ್ಣು ಮಕ್ಕಳಿಗೆ ಧೈರ್ಯ ನೀಡಿ ಅವರೂ ಅದನ್ನು ಕೈ ಬಿಡುವಂತೆ ಮಾಡಿದರು. ಮಡಿ, ಮೈಲಿಗೆ, ಮುಸುರೆ ಎಂಬ ಆಚಾರಗಳೂ ಅಮ್ಮನಿಂದ ದೂರ. ಆದರೆ ಎಲ್ಲ ವಿಷಯಗಳಲ್ಲೂ  ನೈರ್ಮಲ್ಯಕ್ಕೆ ಸಂಬಂಧಿಸಿದಂತೆ  ಮಾತ್ರ ಬಹಳ ಕಟ್ಟುನಿಟ್ಟು. ಅಡುಗೆ ಮನೆ, ಬಚ್ಚಲು ಮನೆಗಳೆಲ್ಲ ಬಹಳ ಸ್ವಚ್ಛವಾಗಿಟ್ಟಿರುತ್ತಿದ್ದರು. ಮನೆಯ ಇತರ ಭಾಗಗಳನ್ನೂ ಒಪ್ಪವಾಗಿಟ್ಟಿರುತ್ತಿದ್ದರು. ಎಲ್ಲ ವಿಷಯಗಳಲ್ಲೂ ಬಹಳ ಅಚ್ಚುಕಟ್ಟು.

ಅತಿಥಿ ಸತ್ಕಾರದಲ್ಲಂತೂ ಅಮ್ಮನದು ಎತ್ತಿದ ಕೈ. ನಮ್ಮ ತಂದೆಯ ಅಸಂಖ್ಯಾತ ಸ್ನೇಹಿತರಿಗೆ ಸ್ವತಃ ಅಡುಗೆ ಮಾಡಿ ಔತಣ ನೀಡಿದ್ದು ಅದೆಷ್ಟು ಬಾರಿಯೋ. ಒಮ್ಮೆ ಸ್ನೇಹಿತರೊಬ್ಬರ ಮನೆಯಲ್ಲಿ ಸುಮಾರು ಮೂವತ್ತು ಜನರನ್ನ ಊಟಕ್ಕೆ ಕರೆದಿದ್ದು, ಬೆಳಿಗ್ಗೆ ಅಡುಗೆಯವರು ಕೈ ಕೊಟ್ಟಾಗ ಅಮ್ಮ ಅವರಿಗೆ ಧೈರ್ಯ ಹೇಳಿ ಅವರ ನೆರವು ಪಡೆದು ತಾವೇ ಅಷ್ಟು ಜನಕ್ಕೆ ಅಡುಗೆ ಮಾಡಿದ್ದರು. ಅಮ್ಮನ ಕೈಯ ಅಡುಗೆ ಅದರಲ್ಲೂ ಹೋಳಿಗೆ, ಚಕ್ಕುಲಿಗಳ ರುಚಿಯನ್ನು ಸವಿದವರು ಮಾತ್ರವೇ ಬಲ್ಲರು. ನಾವು ಕಾಲೇಜಿನಲ್ಲಿ ಓದುತ್ತಿದ್ದಾಗ ಸಹ ನಮ್ಮೆಲ್ಲರ ಸಹಪಾಠಿಗಳ ದೊಡ್ಡ ದಂಡನ್ನೇ ಆಹ್ವಾನಿಸಿ ಎಲ್ಲರಿಗೂ ಬಗೆ ಬಗೆಯ ಊಟ ತಿಂಡಿಗಳ ಸತ್ಕಾರ ಮಾಡಿದ್ದುಂಟು. ಹಾಸ್ಟೆಲ್ಲಿನಲ್ಲಿದ್ದ ನನ್ನ ಸ್ನೇಹಿತೆಯರ ಬಗ್ಗೆ ಕಾಳಜಿ ಪಟ್ಟು ಮನೆಯಲ್ಲಿ ಮಾಡಿದ ತಿಂಡಿಗಳನ್ನು ಸರಬರಾಜು ಮಾಡಿದ ಸಂದರ್ಭಗಳಿಗೆ ಲೆಕ್ಕವೇ ಇಲ್ಲ. ತಮ್ಮ ಮಕ್ಕಳ  ಹಳೆಯ ಸ್ನೇಹಿತರು ಮನೆಗೆ ಬಂದರೆ, ನೆನಪಿಟ್ಟುಕೊಂಡು ಅವರಿಗೆ ಯಾವ ತಿಂಡಿ ಪ್ರಿಯವೋ ಅದನ್ನು ಮಾಡಿ ಕೊಡುತ್ತಿದ್ದರು.  ಮಾನಸ ಗಂಗೋತ್ರಿಯ ಗೆಸ್ಟ್ ಹೌಸಿನಲ್ಲಿ ಇಳಿದುಕೊಂಡಿದ್ದ ನನ್ನ ರಷ್ಯನ್ ಭಾಷೆಯ ಉಪಾಧ್ಯಾಯಿನಿ ಲಿದಿಯ ದುಬಿನ ಅವರಿಗೆ ಅಮ್ಮ ಮಾಡಿದ ಇಡ್ಲಿ, ದೋಸೆ ಬಹಳ ಪ್ರಿಯವಾಗಿದ್ದು, ಅಮ್ಮ ಅವನ್ನು ಮಾಡಿದಾಗಲೆಲ್ಲ ಅವರನ್ನು ಮನೆಗೆ ಕರೆದು ಸತ್ಕರಿಸುತ್ತಿದ್ದರು. ಅಮ್ಮ ಅವರಿಗಾಗಿ ಮೆಣಸಿನ ಕಾಯಿ ಹಾಕದೆ ವಿಶೇಷವಾಗಿ ಬೇರೆಯೇ ಚಟ್ನಿ ಮಾಡುತ್ತಿದ್ದುದು ಅವರಿಗೆ ಬಹಳ ಮೆಚ್ಚುಗೆಯಾಗುತ್ತಿತ್ತು.

ಕೇವಲ ‘ಗಂಡಸರ ಕೆಲಸ’ ಎಂದು ಇಂದಿಗೂ ಜನ ಬಗೆಯುವ ಕೆಲಸಗಳನ್ನೆಲ್ಲ ಅಮ್ಮ ಮಾಡುತ್ತಿದ್ದರು. ಫ಼್ಯೂಸ್ ಹೋದರೆ ಅದನ್ನು ಹಾಕುವುದು, ನಲ್ಲಿ ರಿಪೇ‍ರಿ, ಇಸ್ತ್ರಿ ಪೆಟ್ಟಿಗೆ ರಿಪೇರಿ- ಎಲ್ಲವನ್ನೂ ಅವರೇ ಮಾಡುತ್ತಿದ್ದುದು.  ತಮ್ಮ ಬಟ್ಟೆ ಹೊಲಿಯುವ ಯಂತ್ರವನ್ನು ಅವರೇ ಬಿಚ್ಚಿ ರಿಪೇರಿ ಮಾಡಿಟ್ಟುಕೊಳ್ಳುತ್ತಿದ್ದರು. ಒಮ್ಮೆಯಾದರೂ ಅದನ್ನು ರಿಪೇರಿಗಾಗಿ ಕೊಟ್ಟಿದ್ದಿಲ್ಲ. ಎಲ್ಲ ಬಗೆಯ ತಂತ್ರಜ್ಞಾನಗಳ ಬಗ್ಗೆ ಅಮ್ಮನಿಗೆ ಆಸಕ್ತಿ ಇತ್ತು. ಅಮ್ಮ ಚಿಕ್ಕ ಹುಡುಗಿಯಾಗಿದ್ದಾಗ ಅವರ ತಂದೆಯ ಕಾರ್ಯಾಗಾರದ ಲೇತ್ ನಲ್ಲಿ ತಮ್ಮ ಬುಗುರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದರಂತೆ! ನನ್ನ ತಮ್ಮ ಕೆಲವು ವರ್ಷಗಳ ಹಿಂದೆ ಅಮ್ಮನ ಹುಟ್ಟುಹಬ್ಬಕ್ಕೆ ಸ್ಕ್ರೂ ಡ್ರೈವರ್ ಸೆಟ್ಟನ್ನು ಉಡುಗೊರೆಯಾಗಿ ತಂದು ಕೊಟ್ಟಿದ್ದು ನೋಡಿದವರಿಗೆಲ್ಲ ತಮಾಷೆ, ವಿಚಿತ್ರ ಎನಿಸಿತ್ತು. ‘ಅಮ್ಮನಿಗೆ ಸೀರೆ ಇತ್ಯಾದಿ ಕೊಡುವುದು ಗೊತ್ತು, ಆದರೆ ಹೀಗೂ ಉಂಟೆ?‘ ಎಂದು! ಅಮ್ಮನಿಗಾದರೋ ಬಹಳ ಸಂತೋಷವಾಗಿಬಿಟ್ಟಿತ್ತು. ಅಣ್ಣ ಎಂದಾದರೂ ಸ್ಕ್ರೂ ಡ್ರೈವರ್ ಹಿಡಿದು ಏನನ್ನಾದರೂ ಮಾಡಹೊರಟರೆ ನಾವು ಮಕ್ಕಳೆಲ್ಲ ಅವರನ್ನು ಹಾಸ್ಯ ಮಾಡುತ್ತಿದ್ದೆವು, "ನಿಮ್ಮ ಕೈಲಿ ಇದು ಸರಿ ಕಾಣುವುದಿಲ್ಲ, ಬಿಡಿ. ಈ ಕೆಲಸ ಅಮ್ಮನಿಗೇ ಸರಿ. ನೀವು ಸ್ಕ್ರೂ ಡ್ರೈವರನ್ನೂ ಪೆನ್ ಹಿಡಿದ ಹಾಗೆ ಹಿಡಿಯುತ್ತೀರಿ" ಎಂದು!

ಅಮ್ಮನಿಗೆ ಓದುವ ಅಭ್ಯಾಸ ಬಹಳವಾಗಿತ್ತು. ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯಗಳನ್ನು ಬಹಳವಾಗಿ ಓದಿಕೊಂಡಿದ್ದರು. ಕನ್ನಡ, ಇಂಗ್ಲಿಷ್ ವ್ಯಾಕರಣಗಳನ್ನು ನನಗೆ ಹೇಳಿಕೊಟ್ಟಿದ್ದೇ ಅಮ್ಮ. ತಾವು ಓದಿದ ಪುಸ್ತಕಗಳಲ್ಲಿನ ವಿಷಯ ಅಥವಾ ಕತೆಗಳನ್ನಾಗಲೀ, ಪತ್ರಿಕೆಯಲ್ಲಿನ ವಾರ್ತೆಗಳನ್ನಾಗಲೀ ಇತರರಿಗೆ ಹೇಳುವುದೆಂದರೆ ಅವರಿಗೆ ಬಹಳ ಪ್ರೀತಿ. ನಾವು ಓದದೆಯೇ ಎಷ್ಟೋ ಪುಸ್ತಕಗಳ ಬಗ್ಗೆ ನಮಗೆ ಗೊತ್ತಾಗಿಬಿಟ್ಟಿರುತ್ತಿತ್ತು.

ತಮ್ಮ ಮನೆಗೆಲಸ, ಜವಾಬ್ದಾರಿಗಳೊಡನೆಯೇ ಅಮ್ಮ ಹಿಂದಿ ‘ವಿಶಾರದ’ ಮಾಡಿಕೊಂಡರು. ಕಾವ್ಯ ವಾಚನ ಕಲಿತು, ಕುಮಾರವ್ಯಾಸ ಭಾರತ ಮುಂತಾದವನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು, ಕೆಲವು ಸಭೆಗಳಲ್ಲಿಯೂ ಹಾಡಿದ್ದುಂಟು.  ಕಸೂತಿ, ಸ್ವೆಟರ್ ಹೆಣೆಯುವುದರಲ್ಲೂ ಅಮ್ಮನದು ಎತ್ತಿದ ಕೈ. ತಮ್ಮ ಹೆಣ್ಣು ಮಕ್ಕಳ ಬಟ್ಟೆಗಳನ್ನೆಲ್ಲ ಅಮ್ಮನೇ ಹೊಲಿಯುತ್ತಿದ್ದುದು ಅಷ್ಟೇ ಅಲ್ಲ,  ನಮ್ಮೆಲ್ಲರಿಗೂ ಅವನ್ನು ಕಲಿಯಲು ಉತ್ತೇಜನ ನೀಡಿ, ಅದಕ್ಕೆ ಅವಶ್ಯಕವಾದ ವಸ್ತುಗಳನ್ನೆಲ್ಲ ತಂದುಕೊಡುತ್ತಿದ್ದರು. ಅಷ್ಟೇ ಅಲ್ಲದೆ, ಸುಮಾರು ೭೦ ವರ್ಷ ವಯಸ್ಸಿನಲ್ಲಿ ಫ಼ೆವಿಕ್ರಿಲ್ ಕಂಪನಿಯವರು ನಡೆಸುತ್ತಿದ್ದ ಪೇಂಟಿಗ್ ತರಗತಿಗಳಿಗೆ ಹೋಗಿ ಪೇಂಟಿಂಗ್ ಕಲಿತು, ಮನೆಯಲ್ಲಿ ಬೆಡ್ಶೀಟುಗಳಿಗೆ ಪೇಂಟ್ ಮಾಡಿದ್ದರು.

ಬಡವರ ವಿಷಯದಲ್ಲಿ ಅಮ್ಮನಿಗೆ ಬಹಳ ಕಳಕಳಿ. ಮನೆ ಕೆಲಸದವರಿಗಾಗಲೀ, ಹಾಲಿನವರಿಗಾಗಲೀ, ತಮ್ಮ ಸಂಪಾದನೆಯಲ್ಲಿ ಉಳಿತಾಯ ಮಾಡಲು ಉತ್ತೇಜನ ನೀಡಿ, ಪೋಸ್ಟ್ ಆಫ಼ೀಸ್, ಬ್ಯಾಂಕುಗಳಲ್ಲಿ ಖಾತೆ ತೆಗೆಸಿಕೊಡುತ್ತಿದ್ದರು.  ಬ್ಯಾಂಕಿಗೆ ತಾವು ‘ಗ್ಯಾರಂಟಿ‘ ನಿಂತು ಸಾಲ ಕೊಡಿಸುತ್ತಿದ್ದರು. ಬ್ಯಾಂಕಿನಲ್ಲಿ ಸಾಲಕ್ಕೆ ಬಡ್ಡಿ ಕೊಡಬೇಕಾಗುತ್ತದೆಂದು ಎಷ್ಟೋ ಬಾರಿ ತಾವೇ ಬಡ್ಡಿ ರಹಿತ ಸಾಲ ಕೊಟ್ಟಿದ್ದೂ ಉಂಟು.  ಆರ್ಥಿಕವಾಗಿ ಯಾರೇ ಯಾರನ್ನೂ ಅವಲಂಬಿಸುವಂತಾಗಬಾರದು ಎಂಬುದು ಅವರ ಸ್ಪಷ್ಟ ನಿಲುವು.

ಆಧುನಿಕ ತಂತ್ರಜ್ಞಾನದಿಂದಲೂ ಅಮ್ಮ ದೂರವಿರಲಿಲ್ಲ. ತಮ್ಮ ಎಂಭತೈದನೆಯ ವಯಸ್ಸಿನಲ್ಲಿ iPad ಬಳಸುವುದನ್ನು ಕಲಿತು, ದೂರದಲ್ಲಿರುವ ಮೊಮ್ಮಕ್ಕಳೊಡನೆ ಅಗಾಗ್ಗೆ ಇಮೇಲ್ ವಿನಿಮಯ ಮಾಡಿಕೊಳ್ಳುತ್ತಿದ್ದರು. ಫ಼ೇಸ್ ಬುಕ್ ಗೆ ಹೋಗಿ ಅವರ ಚಟುವಟಿಕೆಗಳನ್ನು ನೋಡಿ ಆನಂದಿಸುತ್ತಿದ್ದರು, ಹೆಮ್ಮೆ ಪಡುತ್ತಿದ್ದರು. ಯೂಟ್ಯೂಬ್ ನಲ್ಲಿ ತಮಗಿಷ್ಟವಾದ ಶಾಸ್ತ್ರೀಯ ಸಂಗೀತ ಕೇಳುತ್ತಿದ್ದರು. ತಮ್ಮ ೯೦ನೆಯ ವಯಸ್ಸಿನಲ್ಲಿ ಸಹ ಗೂಗಲ್ ನಿಂದ ಹೊಸ ರೆಸಿಪಿ ನೋಡುತ್ತಿದ್ದರು. ಒಮ್ಮೆ "ಅದೇನೋ ‘ಮೆಕ್ಸಿಕನ್ ರೈಸ್‘ ಅಂತೆ ಗೂಗಲ್ ನಲ್ಲಿ ನೋಡಿ ಮಾಡಿದೆ ಚೆನ್ನಾಗಿತ್ತು" ಎಂದು ಫ಼ೋನಿನಲ್ಲಿ ಹೇಳಿದಾಗ ನನಗೆ ಆಶ್ಚರ್ಯ ಆನಂದ ಹೆಮ್ಮೆಗಳಲ್ಲ ಒಮ್ಮೆಯೇ ಉಂಟಾಗಿದ್ದವು.

ಅಮ್ಮನ ಕೈ ಬಲು ಧಾರಾಳ. ಹಣ ಕಾಸಾಗಲೀ, ಮಾಡಿದ ಅಡುಗೆಯನ್ನಾಗಲೀ ಅವಶ್ಯಕತೆ ಇದ್ದವರಿಗೆ ಉದಾರ ಮನಸ್ಸಿನಿಂದ ಹಂಚುತ್ತಿದ್ದರು. ಹಾಗೆಂದ ಮಾತ್ರಕ್ಕೆ ತೋರಿಕೆಗಾಗಿ ಅಥವಾ ಆಡಂಬರಕ್ಕಾಗಿ ಎಂದೂ ಖರ್ಚು ಮಾಡುತ್ತಿರಲಿಲ್ಲ. ಸೀರೆ ಒಡವೆಗಳ ಹುಚ್ಚು ಅವರಿಗಿರಲಿಲ್ಲ.  ಅಣ್ಣನ ಪ್ರಕಾರ ಅಮ್ಮನ ಈ ಮನೋಭಾವದಿಂದಲೇ ಅವರು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಲು ಸಾಧ್ಯವಾಗಿದ್ದು.

ಅಮ್ಮ ಅಣ್ಣನದು ಆದರ್ಶ ದಾಂಪತ್ಯ. ಇವರದು ಮಾದರಿ ಜೀವನ. ಎಂದೆಂದೂ ಯಾವ ಕಾರಣಕ್ಕೂ ಪರಸ್ಪರ ಮುನಿಸಿಕೊಂಡಿದ್ದಿಲ್ಲ, ಧ್ವನಿ ಏರಿಸಿದ್ದಿಲ್ಲ. ಅಣ್ಣನ ಎಲ್ಲ ಚಟುವಟಿಕೆಗಳಿಗೂ ಅಮ್ಮ ಬೆನ್ನೆಲುಬಾಗಿದ್ದರು. ಅಂತೆಯೇ ಅಣ್ಣ ಸಹ ಅಮ್ಮನ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ಸೂಸುತ್ತಿದ್ದರು, ಬೆಂಬಲಿಸುತ್ತಿದ್ದರು. ಅಮ್ಮನ ಕೈಬರಹ ಬಹು ಸುಂದರವಾಗಿದ್ದು, ಅಣ್ಣನ ಬರಹಗಳನ್ನು ಮುದ್ರಣಕ್ಕೆ ಕಳಿಸಲು ಹಸ್ತಪ್ರತಿಯನ್ನು ನಕಲು ಮಾಡಿಕೊಡುತ್ತಿದ್ದುದುಂಟು. ಅಣ್ಣನ ಉತ್ತೇಜನದಿಂದ ಅಮ್ಮ ಇಂಗ್ಲಿಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಪುಸ್ತಕಗಳು ಎರಡು: ಲಿಯೊಪಾಲ್ಡ್ ಇನ್ಫ಼ೆಲ್ಡ್ ಅವರ ಪುಸ್ತಕ Quest ನ ಅನುವಾದ ‘ಶೋಧ‘ ಹಾಗೂ The autobiography of Charles Darwin ನ ಕನ್ನಡ ಅನುವಾದ ‘ಚಾರ್ಲ್ಸ್ ಡಾರ್ವಿನ್ ಅವರ ಆತ್ಮಕತೆ’. ಇದಲ್ಲದೆ ಅಣ್ಣನೊಂದಿಗೆ ಮಾಡಿದ ಆರ್ನಾಲ್ಡ್ ಕೆಟ್ಲ್ ಅವರ Karl Marx: The founder of modern communismನ ಅನುವಾದ "ಕಾರ್ಲ್ ಮಾರ್ಕ್ಸ್: ಆಧುನಿಕ ಕಮ್ಯುನಿಸಂನ ಸ್ಥಾಪಕ"

ಅಮ್ಮ ಇದೇ ಜುಲೈ ಇಪ್ಪತ್ತಾರರಂದು ನಮ್ಮನ್ನಗಲಿದರು. ವಯಸ್ಸು ತೊಂಭತ್ತೊಂದಾದರೂ ಅವರಿಗೆ ಜೀವನದಲ್ಲಿದ್ದ ಆಸಕ್ತಿ ಹುಮ್ಮಸ್ಸುಗಳು ಯಾವ ರೀತಿಯಲ್ಲಿಯೂ ಕಡಿಮೆಯಾಗಿರಲಿಲ್ಲ. ಯುವಜನರು ಸಹ ನಾಚುವಂತಿತ್ತು. ಈಗ ಎರಡು ತಿಂಗಳ ಮುಂಚೆಯೂ ಸ್ವಲ್ಪ ಸುಸ್ತು ಕಡಿಮೆಯಾದ ನಂತರ ಮೊಮ್ಮಕ್ಕಳಿಗೆ ಹೋಳಿಗೆ ಮಾಡುತ್ತೇನೆ ಎಂದೇ ನಂಬಿದ್ದರು. ಅವರಿಗಿದ್ದ ಭಾವಾತ್ಮಕ ಮನೋಭಾವ, ಮನೋಸ್ಥೈರ್ಯ, ಉತ್ಸಾಹ, ಹುಮ್ಮಸ್ಸು, ಹಲವಾರು ವಿಷಯಗಳ ಬಗ್ಗೆ ಆಸಕ್ತಿ, ಹಾಸ್ಯಪ್ರಜ್ಞೆ ಎಲ್ಲವೂ ಈಗಿನ ಪೀಳಿಗೆಯವರಿಗೆ ಆದರ್ಶಪ್ರಾಯವಾದಂತಹವು


ಅಮ್ಮನ ನೆನಪಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ 
- ಬೃಂದಾ ಎನ್. ರಾವ್








3 ಕಾಮೆಂಟ್‌ಗಳು:

Unknown ಹೇಳಿದರು...

A great lady, a progressive thinker, who was way ahead of her times!

Meera Bhakta ಹೇಳಿದರು...

Hi Brindakka,
Write up is very nice....
Any person of any age group would be comfortable in her company. She could speak to all fluently on any topic & engage them.she was always cheerful and hospitable....

Unknown ಹೇಳಿದರು...

Hello Brinda, a lovely write up which gives us a picture of her commendable personality. Learnt many new things about Atthhe's, even though I had known her ever since my childhood! She lead her exemplary life and thereby has set goals for us to aim at.
With affection, Rani