ಹಾಲ್ ನಲ್ಲಿ ಟಿವಿ ನೋಡುತ್ತ ಕುಳಿತಿದ್ದ ಪವಿತ್ರ ಭಾವಿ ಪತಿ ಗಿರೀಶ್ ಬಂದದ್ದನ್ನು ಕಂಡು
"ಬನ್ನಿ, ಬನ್ನಿ" ಎಂದು ಒಳಗೆ ಕರೆದು, "ಅಮ್ಮಾ ಗಿರೀಶ್ ಬಂದಿದ್ದಾರೆ" ಎಂದು
ಕೂಗಿಕೊಂಡಳು.
ಹೊರಗೆ ಬಂದ ಮೀನಾಕ್ಷಿ "ಬಾಪ್ಪ, ಚೆನ್ನಾಗಿದ್ದೀಯ? ಕುಳಿತುಕೊ, ಜ್ಯೂಸ್ ತರುತ್ತೇನೆ"
ಎಂದು ಒಳ ನಡೆದರು.
ಗಿರೀಶ್ ಪವಿತ್ರಳಿಗೆ "ನಾನು ನಿಮ್ಮ ಜೊತೆ ಮಾತನಾಡಬೇಕು" ಎಂದ.
"ಏನು ಗಿರೀಶ್ ಏನು ವಿಷಯ? ಹೇಳಿ" ಎಂದಳು.
"ನನಗೆ ಹೇಗೆ ಹೇಳಬೇಕು ಅಂತ ಗೊತ್ತಾಗ್ತಾಯಿಲ್ಲ" ಎಂದು ತಡವರಿಸಿದಾಗ ಪವಿತ್ರ
"ಪರವಾಗಿಲ್ಲ ಹೇಳಿ" ಎಂದಳು.
"ತಪ್ಪು ತಿಳಿಯಬೇಡಿ. ನನಗೆ ಈ ಮದುವೆ ಇಷ್ಟವಿಲ್ಲ" ಎಂದ.
ಕೇಳಿದ ಪವಿತ್ರ ಶಾಕ್ ಆಗಿ ಕುಳಿತಳು. ಸಾವರಿಸಿಕೊಂಡು "ಏಕೆ? ಏನಾಯಿತು?" ಎಂದು
ಕೇಳಿದಳು.
ಗಿರೀಶ್ ತನ್ನ ಪ್ರೀತಿಯ ವಿಷಯವನ್ನು ಹೇಳುತ್ತಿದ್ದಾಗ ಜ್ಯೂಸ್ ತಂದ ಮೀನಾಕ್ಷಿಯವರು
ಕೇಳಿಸಿಕೊಂಡು, "ಏನಪ್ಪ ಮದುವೆಯೆಂದರೆ ಹುಡುಗರಾಟನಾ? ನಿಶ್ಚಿತಾರ್ಥವಾಗುವಾಗ
ಸುಮ್ಮನಿದ್ದು ಈವಾಗ ಹೇಳುತ್ತಿರುವೆಯಲ್ಲ" ಎಂದು ಕೋಪದಿಂದ ಕೇಳಿದರು.
"ಹೇಳಬೇಕು ಅಂತಾನೆಯಿದ್ದೆ, ಆದರೆ ಅಪ್ಪ,ಅಮ್ಮ ತಾವಿಬ್ಬರು ಸಾಯುತ್ತೇವೆಂದು ನನ್ನ
ಬಾಯಿಮುಚ್ಚಿಸಿದರು. ಆದರೂ ಮನಸ್ಸಿಗೆ ವಿರುದ್ಧವಾಗಿ ನಡೆಯಲು ಸಾಧ್ಯವಾಗಲಿಲ್ಲ,
ನಮ್ಮೆಲ್ಲರ ಬದುಕು ಹಾಳಾಗುತ್ತದೆಂದು ನನಗೆ ಈಗ ಬಲವಾಗಿ ಅನಿಸುತ್ತಿದೆ. ಹಾಗಾಗಿ ಈಗ
ಹೇಳುತ್ತಿದ್ದೇನೆ. ನನ್ನನ್ನ ಕ್ಷಮಿಸಿ" ಎಂದು ತಲೆತಗ್ಗಿಸಿದ.
"ನಿನ್ನನ್ನು ಅಂದು ಪ್ರಯೋಜನವೇನು? ನಿನ್ನ ಅಪ್ಪ ಅಮ್ಮನನ್ನ ಕರೆಯಿಸಿ ಮಾತನಾಡಬೇಕು"
ಎನ್ನುತ್ತಾ ಪತಿಗೆ ಫೋನು ಮಾಡಿದರು.
ನಂತರ ಬೀಗರಿಗೂ ಫೋನ್ ಮಾಡಿ "ಏನು,ಬೀಗರೆ ಮದುವೆಯೆಂದರೆ ತಮಾಷೆನಾ? ಇನ್ನೊಂದು
ವಾರವಿರಬೇಕಾದರೆ ಈಗ ನಿಮ್ಮಗ ಬಂದು ಮದುವೆಯಾಗಲ್ಲ ಎಂದರೆ ಹೇಗೆ? ನಿಮ್ಮ ಮಗ
ನಮ್ಮನೆಯಲ್ಲೆ ಇದ್ದಾನೆ. ಮನೆಗೆ ಬನ್ನಿ ಮಾತಾಡೋಣ" ಎಂದು ಫೋನ್ ಇಟ್ಟರು.
ಮನೆಗೆ ಬಂದವರೆ ಮೂರ್ತಿಗಳು ಗಿರೀಶನನ್ನು ಹೀಗೇಕೆ ಮಾಡಿದನೆಂದು ಕೋಪದಿಂದ
ಕೇಳುತ್ತಿರುವಾಗಲೆ ಗಿರೀಶನ ಅಪ್ಪ,ಅಮ್ಮ ಬಂದರು.
ಎಲ್ಲರೂ ಜೋರು ದನಿಯಲ್ಲಿ ಕೂಗಾಡುತ್ತಿರುವಾಗಲೆ ಅಲ್ಲಿಗೆ ಬಂದ ಪವಿತ್ರ "ದಯವಿಟ್ಟು ಒಂದು
ನಿಮಿಷ ಎಲ್ಲರೂ ಮಾತು ನಿಲ್ಲಿಸಿ, ನನ್ನ ಮಾತನ್ನು ಕೇಳಿ" ಎಂದಳು. ಮೌನವಾದರು ಎಲ್ಲರು.
"ಗಿರೀಶ್ ಗೆ ನಾನು ಧನ್ಯವಾದಗಳನ್ನು ತಿಳಿಸಲಿಚ್ಛಿಸುತ್ತೇನೆ. ಏಕೆಂದರೆ, ನನಗೆ ಮೊದಲೇ
ವಿಷಯ ತಿಳಿಸಿ ಒಳ್ಳೆಯದನ್ನೆ ಮಾಡಿದ್ದಾರೆ. ಒಂದು ವೇಳೆ ಮದುವೆಯಾದ ಮೇಲೆ ತಿಳಿಸಿದ್ದರೆ
ನನ್ನ ಬದುಕು ಹಾಳಾಗುತ್ತಿತ್ತು. ಅಪ್ಪ ಅಮ್ಮನಿಗೆ ಶಾಶ್ವತ ನೋವು ಕಾಡುತ್ತಿರುತ್ತಿತ್ತು.
ನನ್ನ ಬದುಕೇನೂ ಇಲ್ಲಿಗೆ ನಿಂತುಹೋಗುವುದಿಲ್ಲ. ಪ್ರೀತಿಯಿಲ್ಲದ ಸಂಬಂಧದಿಂದ
ಎಲ್ಲರಿಗೂ ನೋವಷ್ಟೇ ಉಳಿಯುವುದು. ಗಿರೀಶ್ ನೀವೇಕೆ ಇದೇ ಮುಹೂರ್ತದಲ್ಲಿ ನಿಮ್ಮ
ಹುಡುಗಿಯನ್ನು ಮದುವೆಯಾಗಬಾರದು. ನಾನೂ ಬರುತ್ತೇನೆ. ಆಗ ನಿಮಗೆ ಎಲ್ಲರಿಗೂ ಉತ್ತರ ಹೇಳುವ
ತಲೆನೋವೂ ಸಹ ಇರುವುದಿಲ್ಲ." ಎಲ್ಲರೂ ಸ್ಥಂಭಿಭೂತರಾದರು.
ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರವಾಗುತ್ತದೆ ಎಂದು ಯಾರಿಗೂ ಅನಿಸಿರಲಿಲ್ಲ.
"ಆದರೆ ಗಿರೀಶ್ ನನ್ನದೊಂದು ಶರತ್ತಿದೆ" ಎಂದಳು. ಪ್ರಶ್ನಾರ್ಥಕವಾಗಿ ನೋಡಿದ ಅವನಿಗೆ
"ನಮ್ಮ ತಂದೆ ಖರ್ಚು ಮಾಡಿರುವ ಅಷ್ಟೂ ಹಣವನ್ನು ಹಿಂತಿರುಗಿಸಬೇಕಷ್ಟೇ" ಎಂದಳು.
ಬೆಟ್ಟದಂತೆ ಕಾಣಿಸಿದ ಸಮಸ್ಯೆ ಮಂಜಿನಂತೆ ಕರಗಿದ್ದು ಕಂಡು ಗಿರೀಶ ಖುಷಿಯಿಂದ
ತಲೆಯಾಡಿಸಿ, ಪವಿತ್ರಳಿಗೆ ಎರಡೂ ಕೈಜೋಡಿಸಿ ನಮಸ್ಕರಿಸಿದ!!
- ವಿಜಯಲಕ್ಷ್ಮಿ ಎಂ ಎಸ್