ಮಗಳು ಕೈಗೊಂಡ ಮೂರ್ಖ ನಿರ್ಧಾರಕ್ಕೆ ಗಂಗಾ ನೆಮ್ಮದಿಯಿಂದ ದೂರಾಗಿದ್ದಳು. ಎರಡನೇ ಮಗುವೂ ಹೆಣ್ಣೆಂದು ಗೊತ್ತಾಗಿ ಅದನ್ನ ತೆಗೆಸಲು ಮುಂದಾಗಿದ್ದಳು ವನಜ ಕೇಳಿದರೆ, ತನ ಗಂಡನಿಗೆ ಎರಡನೇದು ವಾರಸುದಾರನೇ ಆಗಬೇಕೆಂದು ಪೀಡಿಸ್ತಾ ಇರ್ತಾನೆ ಜೊತೆಗೆ ಹೆಣ್ಣಿಗೆ ನರಕದಂತಿರುವ ಈ ಕಾಲದಲ್ಲಿ ಇನ್ನೊಂದು ಹೆಣ್ಣನ್ನು ಸಾಕುವ ಧೈರ್ಯ ನನಗೂ ಇಲ್ಲ ಎಂದು ಅಬಾರ್ಷನ್ ಗೆ ಧೈರ್ಯ ಮಾಡಿಬಿಟ್ಟಿದ್ದಳು ಅವಳು ಅದೂ ಐದನೇ ತಿಂಗಳಲ್ಲಿ. ಇವಳಿಗೆ ಒಂದೇ ಚಡಪಡಿಕೆ. ಓದಿದ ಮಗಳು ಎಂಥಾ ಅನಾಹುತಕ್ಕೆ ಕೈ ಹಾಕಿದ್ದಾಳೆ ,ತನ್ನ ಕರುಳ ಕುಡಿಯನ್ನು ನಿರ್ದಯೆಯಿಂದ ಕೊಂದು ಹಾಕಲು ಮುನ್ನುಗ್ಗಿದ್ದಾಳಲ್ಲ. ಆ ಮಹಾ ಪಾಪ ಜನ್ಮದುದ್ದಕ್ಕೂ ಬೆಂಬೂತವಾಗಿ ಕಾಡುತ್ತದಲ್ವ ಆ ಗೋಳನ್ನು ನಾನೇ ನೋಡಬೇಕಲ್ವ ಎಂದು ಎಷ್ಟು ಒಪ್ಪಿಸಿದರೂ ಮಗಳು ಕೇಳಲಿಲ್ಲ. ಪಾಪಕ್ಕೆ ಗುಡಿ ಗೋಪುರ ತಿರುಗಿ ಹೋಮ ನೇಮ ಮಾಡಿ ಶಾಂತಿ ಮಾಡಿಸುವೆ ಎಂದು ಪಟ್ಟು ಹಿಡಿದಳು ಮಗಳು. ಅವಳ ಬಂಡ ಧೈರ್ಯ ಬಿಸಿರಕ್ತದ ಉನ್ಮಾದ ನೋಡಿ ತಣ್ಣಗೆ ನಡುಗಿದಳು ಗಂಗಾ. ಗರ್ಭಪಾತ ಪಿಂಡ ರಕ್ತ ಇವೆಲ್ಲ ನೆನಪಾಗಿ ಅವಳ ಕರುಳಿಗೆ ಕೊಳ್ಳಿಯಿಂದ ಚುಚ್ಚಿದಂತಾಗಿ ಸೋತು ಕುಸಿದಳು. ಮುಚ್ಚಿದ ಕಣ್ಣೆವೆಗಳಿಂದ ನೀರು ಮೆಲ್ಲ ಇಳಿಯತೊಡಗಿದಂತೆ ಹಿಂದೆ ಪಟ್ಟಿದ್ದ ವೇದನೆಯ ಕರಾಳ ನೆರಳು ಅವಳ ಮುಖದ ಮೇಲೆ ಹಾದುಹೋಗತೊಡಗಿದವು. ಮದುವೆಯಾಗಿ ಗಂಡನ ಮನೆ ಸೇರಿದ ಗಂಗಾ ಹೊಸ ಸಂಸಾರದ ಸಂತೋಷದ ಅಣು ಅಣುವನ್ನು ಆಸ್ವಾದಿಸುತ್ತಿರುವಾಗಲೇ ಮೂರುತಿಂಗಳಿಗೆ ನೀರು ಹಾಕಿಕೊಂಡ ಮತ್ತೊಂದು ಸಂತಸದ ಸುದ್ದಿ. ಎಲ್ಲರೂ ಸಂತಸದಿಂದಿರುವಾಗ ಅವಳ ಸಂಸಾರದಲ್ಲಿ ಒಂದು ಬಿರುಗಾಳಿಯೆದ್ದಿತು. ತನ್ನ ವಂಶದಲ್ಲಿ ದೊಡ್ಡ ಮಗನಿಗೆ ಮೊದಲ ಮಗು ಗಂಡೇ ಆಗುವುದೆಂದು ಕೊಚ್ಚುತ್ತಿದ್ದ ಗಂಡನಿಗೆ ಒಂದು ಅನುಮಾನ ಸುರುವಾಯಿತು . ಗಂಡೋ ಹೆಣ್ಣೋ ಎಂದು ತಿಳಿಯಲು ಉತ್ಸುಕನಾದನು. ಪ್ರತಿದಿನ ಗಂಗಾಳೊಂದಿಗೆ ಈ ವಿಷಯದಲ್ಲಿ ತಗಾದೆ ತೆಗೆದು ಉಣ್ಣದೆ ಮಲಗಿ ಇವಳನ್ನು ಅಳಿಸುತ್ತಿದ್ದನು. ಬರುಬರುತ್ತಾ ಮಾತನ್ನೆ ಬಿಟ್ಟನು. ಅವನ ಹಟಕ್ಕೆ ಗಂಗಾ ಭಯಗೊಂಡು ಕೊನೆಗೂ ಭ್ರೂಣಲಿಂಗ ಪತ್ತೆಗೆ ಸಿದ್ಧಳಾದಳು. ದುಡ್ಡು ಸುರಿದು ಪತ್ತೆ ಮಾಡಿದಾಗ ಬಂದ ಫಲಿತಾಂಶ ಆ ಮಗು ಹೆಣ್ಣೆಂದು. ಅಂದಿನಿಂದ ಅವಳ ಗಂಡನ ಹುಚ್ಚು ಹೆಚ್ಚಾಯಿತು. ವಂಶದ ಮರ್ಯಾದೆ ಕಳೆದೆನೆಂದು ಏನೇನೊ ತಡಬಡಿಸತೊಡಗಿದನು. ಕ್ರಮೇಣ ಕುಡಿತಕ್ಕೆ ದಾಸನಾದನು. ಅವಳ ಜೀವನ ಇಷ್ಟು ಬೇಗ ಬರಡಾಗುವುದೆಂದು ಅವಳು ಕನಸಲೂ ಎಣಿಸಿರಲಿಲ್ಲ. ಇವಳನ್ನು ಕಂಡರೆ ಉರಿದುರಿದು ಬೀಳುತ್ತಿದ್ದ ಗಂಡನಿಂದ ಸೊರಗಿ ಸುಣ್ಣವಾದಳು. ಗಂಡನೇ ಸರ್ವಸ್ವ ವೆಂದು ನಂಬಿದ್ದ ಇವಳು ಅಂತಿಮವಾಗಿ ಒಂದು ಕಟು ನಿರ್ಧಾರಕ್ಕೆ ಬರುವಳು. ಅದನ್ನು ಗಂಡನಿಗೂ ಹೇಳಿದಳು. ರೋಗಿ ಬಯಸಿದ್ದು ಹಾಲನ್ನ ಎಂಬಂತೆ ಅವನೂ ತಕ್ಷಣವೇ ಸಿದ್ಧನಾದನು ಮನುಷ್ಯತ್ವವನ್ನೆ ಮರೆತುಹೋಗಿದ್ದನು. ದುಡ್ಡು ಸುರಿದು ಆ ಸಣ್ಣ ಪಾಪುವಿನ ಬಲಿಯನ್ನು ಪಡೆದೇ ಬಿಟ್ಟರು. ಇವನ ಮೊಗದಲ್ಲಿ ನಿರಾಳ ಕಳೆ. ಅವಳಲ್ಲಿ ಪಾಪ ಪ್ರಜ್ಞೆ. ಹೀಗೆ ಎರಡು ತಿಂಗಳಾದವು. ಮತ್ತೆ ಮುಟ್ಟು ನಿಂತಿತು. ಇವಳಿಗೆ ಸಮಾಧಾನ ಅವನಿಗೆ ಸಂತಸ. ಅದು ಎರಡೇ ತಿಂಗಳು ಮಾತ್ರ. ಗರ್ಭ ಕರಗಿ ಹೋಯಿತು. ಆರು ತಿಂಗಳ ನಂತರ ಮತ್ತೆ ನಿಂತಿತು ಅದು ನಾಲ್ಕು ತಿಂಗಳಲ್ಲಿ ಪಾತವಾಯಿತು. ಸುಸ್ತಾಗಿ ಹೋದರು. ಗುಡಿ ದೇವರುಗಳಿಗೆ ಅಲೆದರು. ಹೋಮ ವ್ರತಗಳ ಮಾಡಿದರು. ನಾಟಿ ಔಷಧವಾಯಿತು ಎಲ್ಲ ವೈದ್ಯರುಗಳ ಭೇಟಿಯೂ ಆಯಿತು. ಹತ್ತು ವರ್ಷಗಳ ಕಾಲ ಮಾಡಿದ ಪಾಪಕ್ಕೆ ಕೊರಗಿ ಕೊರಗಿ ಅವಳ ಪತಿ ಕಾಲವಾದನು. ಕಂಗೆಟ್ಟ ಗಂಗಾ ಪಾಪಕ್ಕೆ ಪ್ತಾಯಶ್ಚಿತ್ತ ಮಾಡಿಕೊಳ್ಳಬಯಸಿದಳು. ಅನಾಥ ಹೆಣ್ಣು ಮಗುವನ್ನು ತಂದು ಮಗಳೆಂದು ಬೆಳೆಸಿದಳು ಚೆನ್ನಾಗಿ ಓದಿಸಿದಳು. ಮದುವೆಮಾಡಿದಳು. ಈಗ......ಅದೇ ಮಗಳು ಅಮ್ಮಾ ಅಮ್ಮಾ ಎಂದು ಅಲುಗಿಸಿದಳು. ಕಣ್ಣೀರ ತೇವ ಆರಿರಲಿಲ್ಲ. ಈ ಕಥೆಯನ್ನು ಹೇಳುವಿದೊಂದೆ ದಾರಿ ಎಂದು ಬಾಯ್ತೆರೆದಾಗ ವನಜಳ ಕಣ್ಣಲ್ಲೂ ನೀರು ಧಾರಾಕಾರ ಹರಿಯುತ್ತಿತ್ತು. ಅವಳ ಕೈಲಿ ಗಂಗಾಳ ಡೈರಿ ಇರುವುದನ್ನು ಕಂಡು ನಿಟ್ಟುಸಿರಿಟ್ಟಳು.
- ಉಷಾಗಂಗೆ.ವಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ