Pages

ಅಭಿವ್ಯಕ್ತಿ


 ಕೆಲವು ಮುಖಗಳು ಎದುರಾದಾಗ ನಾವೂ ಹೂವಾಗುತ್ತೇವೆ... ಹಾಡಾಗುತ್ತೇವೆ! ಮತ್ತೆ ಹಲವು ಮುಖಗಳು ಎದುರಾಗುವುದೇ ಬೇಡವೆನಿಸುತ್ತದೆ. ಹಾಗೂ ಎದುರಾದರೆ ನಮ್ಮ ಮುಖದಲ್ಲು ಸಾವಿರ ಗಂಟುಗಳು! ಅಸಮಾಧಾನದ ವ್ಯಗ್ರತೆಯೊಂದು ಆವರಿಸುತ್ತದೆ. ಮುಷ್ಠಿ ಬಿಗಿಗೊಳ್ಳುತ್ತದೆ. ನಮ್ಮ ನಮ್ಮ ನಂಬಿಕೆಗಳನ್ನು ಹುಸಿಗೊಳಿಸಿದ, ಪ್ರೀತಿಯನ್ನು ನಿಷ್ಕಾರಣವಾಗಿ ಹಿಂಡಿದ, ಅವಮಾನಗಳಿಂದ ನಮ್ಮನ್ನ ಘಾಸಿಗೊಳಿಸಿದ, ಸಿನಿಕತನಗಳಿಂದ ನಮ್ಮ ಸಹಜತೆಗಳನ್ನು ಅಣಕವಾಡಿದ ಈ ಇಂಥವರ ಬಣ್ಣಗಳಿಂದ ಏನನ್ನು, ಯಾರನ್ನೂ ನಂಬಬಾರದು ಅಂತಲೇ ನಾವೂ ಕದವಿಕ್ಕಿಕೊಳ್ಳುತ್ತೇವೆ. ಆರ್ದ್ರತೆಗೆ, ಆರ್ತತೆಗೆ ಕಿವುಡರಾಗಬೇಕು ಅನಿಸುತ್ತದೆ. ಯಾವ ಜೀವದ ಸಂಕಟವೂ ನನ್ನ ಕದಡಬಾರದು, ಎದೆ ಕಲ್ಲಾಗಿಬಿಡಲಿ ಅಂದುಕೊಳ್ಳುತ್ತೇವೆ. ಬದುಕು ನಿಂತ ನೀರಲ್ಲವಲ್ಲ.... ಚಲನಶೀಲತೆ ಅದರ ಗುಣ ತಾನೆ! ಒಂದಷ್ಟು ಜನರಿತ್ತ ಸಂಕಟಗಳಿಗೆ ಮತ್ತಷ್ಟು ಮನುಷ್ಯರ ವಿಶ್ವಾಸವನ್ನು ತೊರೆದುಬಿಡಬಹುದಾ!? ದ್ರೋಹಬಗೆದವರ ಸಣ್ಣತನ ಬಯಲಾಗಲಿ.. ಆದರೆ ನನ್ನ ಅಂತಃಕರಣದ ಸಂಚಿ ಖಾಲಿಯಾಗಬೇಕೆ!? ಮುಚ್ಚಿದ ಬಾಗಿಲ ಹಿಂದಿನ ಕತ್ತಲಲ್ಲಿ ಬದುಕು ಕೊಳೆಯಬಾರದಲ್ಲ! ಓಹ್. ತೆರೆದ ಬಾಗಿಲಲ್ಲಿ ಮತ್ತಷ್ಟು ಮನುಷ್ಯರ ಸಾಲು... ನನ್ನ ಕೈಯ್ಯಲ್ಲೂ ಬೆಳದಿಂಗಳ ಎಷ್ಟೊಂದು ಬೀಜಗಳು..!! ದಾರಿ ದೀರ್ಘವಿದೆ...... ಸಹೃದಯ ಜೀವಗಳ ಸಹಪಯಣವೂ ಸಾಧ್ಯವಿದೆ... ನಮ್ಮ ನಮ್ಮ ನಿಲ್ದಾಣದವರೆಗೆ ಹಿಡಿ ಪ್ರೀತಿ,ಬೊಗಸೆ ನಗು ವನ್ನೇ ವಿನಿಮಯ ಮಾಡಿಕೊಳ್ಳೋಣ. ಅಂತೆಯೇ ದೋಷಪೂರಿತ ಅನ್ನಿಸಿದ್ದರ ಬಗ್ಗೆ "ನಿಗಾ" ಇಡೋಣ.. 

- ರಂಗಮ್ಮ ಹೊದೇಕಲ್

ಕಾಮೆಂಟ್‌ಗಳಿಲ್ಲ: