Pages

ಪ್ರಚಲಿತ : "ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?"



 "ವರದಕ್ಷಿಣೆ ಎಂದರೆ ಮದುವೆಯ ಸಮಯದಲ್ಲಿ ವಧುವಿನ ಜೊತೆ ಕೊಡುವ ಹಣ ಅಥವಾ ಒಡವೆ ಅಥವಾ ಉಡುಗೊರೆ ಮೊದಲಾದವು." ಇದು ವೇದಗಳ ಕಾಲದಲ್ಲಿ ಬಂದುದಾಗಿದೆ. ವೇದಗಳ ಕಾಲಕ್ಕೂ ಮೊದಲು ಸಮಾಜದಲ್ಲಿ ಸ್ತ್ರೀಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ಸ್ಥಾನವಿತ್ತು.ಹಾಗು ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿತ್ತು. ವೇದಗಳ ಆರಂಭದ ಕಾಲದಲ್ಲೂ ಸಹ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನತೆಯಿತ್ತು ಸ್ತ್ರೀಯರಿಗೆ ಶಿಕ್ಷಣವನ್ನು ನೀಡುತ್ತಿದ್ದರು.ಹಾಗೆ ಎಲ್ಲಾ ಧಾರ್ಮಿಕ ಆಚರಣೆಗಳಲ್ಲೂ ಭಾಗವಹಿಸುತ್ತಿದ್ದರು. ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಸಂಪೂರ್ಣವಾಗಿ ಬೆಳವಣಿಗೆಯಾದ ನಂತರವೆ ವಿವಾಹ ಮಾಡುತ್ತಿದ್ದರು.ಮುಖ್ಯವಾಗಿ ವಿವಾಹದ ಬಗ್ಗೆ ನಿರ್ಧಾರವನ್ನು ಸ್ವತಃ ಅವರೆ ತೆಗೆದುಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಹಲವು ಕಡೆ "ವಧುದಕ್ಷಿಣೆ"ಯನ್ನು ಅಂದರೆ ಹುಡುಗನ ತಂದೆ ಹುಡುಗಿಯ ತಂದೆಗೆ ಹಣ ನೀಡಿ ಮಗನಿಗೆ ವಿವಾಹ ಮಾಡಿಕೊಳ್ಳುತ್ತಿದ್ದರು ವೇದಗಳ ಕಾಲದ ಕೊನೆಯ ಭಾಗದಲ್ಲಿ ಸಮಾಜದಲ್ಲಿ ಸ್ತ್ರೀಯರ ಸ್ಥಾನ ಕಡಿಮೆಯಾಗತೊಡಗಿತು.ಶಿಕ್ಷಣ ಸೌಲಭ್ಯ ಮರೆಯಾಯಿತು. ಅವರ ವಿವಾಹದ ವಯಸ್ಸು ಕಡಿಮೆಯಾಯಿತು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ. ಹಾಗು ಹೆಣ್ಣುಮಕ್ಕಳು ರಜಸ್ವಲೆಯಾಗುವ ಮೊದಲೆ ಅವಳ ವಿವಾಹವನ್ನು ಮಾಡುತ್ತಿದ್ದರು. "ಕನ್ಯಾದಾನ"ದ ಮೂಲಕ ಮಗಳನ್ನು ಗಂಡಿಗೆ ದಾನ ಕೊಡುವ ಪದ್ಧತಿ ಆರಂಭವಾಯಿತು. ಹೆಣ್ಣುಮಗಳ ತಂದೆ ಮಗಳಿಗೆ ವಿವಾಹ ಮಾಡದೆ ಮರಣ ಹೊಂದಿದರೆ ಅಂತವರಿಗೆ ಸ್ವರ್ಗಪ್ರಾಪ್ತಿಯಿಲ್ಲ ಎಂಬ ಹಲವಾರು ನಂಬಿಕೆಗಳಿಂದ ಎಷ್ಟೇ ಕಷ್ಟವಾದರು ಹಣವನ್ನೂ ಕೊಟ್ಟಾದರೂ ವಿವಾಹ ಮಾಡುತ್ತಿದ್ದರು. ಆಗ ರೂಢಿಗೆ ಬಂದುದೆ ವರದಕ್ಷಿಣೆ. ಯಾವುದೇ ದಾನವನ್ನು ನೀಡಬೇಕಾದರೆ ದಾನದ ಜೊತೆ ದಕ್ಷಿಣೆಯನ್ನು ಕೊಡಬೇಕಾಗಿತ್ತು. ಹಾಗೆ ಕನ್ಯಾದಾನವೆಂದರೆ "ಹುಡುಗಿಯ ತಂದೆ ಮಗಳನ್ನು ಹುಡುಗನಿಗೆ ವಿವಾಹ ಮಾಡಿಕೊಡುವಾಗ ಮಗಳ ಜೊತೆಗೆ ದಕ್ಷಿಣೆಯನ್ನು ಕೊಡುವುದು." ಹೀಗೆ ರೂಢಿಗೆ ಬಂದ ಕನ್ಯಾದಾನದ ಜೊತೆಗಿನ ದಕ್ಷಿಣೆ ಮುಂದೆ "ವರದಕ್ಷಿಣೆ "ಯ ರೂಪವನ್ನು ತಾಳಿತು. ಹೀಗೆ ಕ್ರಮೇಣ ಸ್ತ್ರೀಯರ ಸ್ಥಾನವನ್ನು ಪುರುಷರು ಅವನತಗೊಳಿಸಿದರು. ಸಮಾಜ ಪುರುಷಪ್ರಧಾನ ಸಮಾಜವಾಗಿ ರೂಪುಗೊಂಡಿತು. ಇಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕು ಇರಲಿಲ್ಲ.ರಾಜರುಗಳು ಮತ್ತು ದೊಡ್ಡ ದೊಡ್ಡ ಶ್ರೀಮಂತರುಗಳು ತಮ್ಮ ಮಗಳನ್ನು ವಿವಾಹ ಮಾಡಿಕೊಡುವಾಗ ಜೊತೆಯಲ್ಲಿ ಹಣವನ್ನಾಗಲಿ ಅಥವಾ ಒಡವೆಯನ್ನಾಗಲಿ ಬಳುವಳಿಯಾಗಿ ಕೊಡುತ್ತಿದ್ದರು. ಮುಂದೆ ತಮ್ಮ ಮಗಳು ಸುಖವಾಗಿರಲಿ ಎಂಬುದೆ ಇದರ ಹಿಂದಿನ ಉದ್ದೇಶವಾಗಿತ್ತು. ಕಾಲಕ್ರಮೇಣ ಇದೊಂದು ರೂಢಿಯಾಗಿ ಬದಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಸತಿಪದ್ಧತಿ, ಬಾಲ್ಯವಿವಾಹ ಮೊದಲಾದ ಸಮಸ್ಯಗಳಂತೆ ಈ ವರದಕ್ಷಿಣೆ ಎಂಬುದು ದೊಡ್ಡ ಪಿಡುಗಾಗಿ ಕಾಡತೊಡಗಿತು. ರಾಜರು ಮತ್ತು ಶ್ರೀಮಂತರಲ್ಲದೆ ಮಧ್ಯಮ ವರ್ಗದವರು ಸಹ ಇದನ್ನು ಅನುಸರಿಸತೊಡಗಿದರು. ನಂತರ ಬ್ರಿಟಿಷರ ಕಾಲದಲ್ಲೂ ಇದು ಮುಂದುವರಿಯಿತು. ಶಿಕ್ಷಣ ಸೌಲಭ್ಯ ಉತ್ತಮಗೊಂಡಿದ್ದರಿಂದ ಬಹಳಷ್ಟು ಜನ ವಿದ್ಯಾವಂತರಾದರು ಮತ್ತು ಸಾಮಾಜಿಕವಾಗಿ ಆರ್ಥಿಕವಾಗಿ ಅವರ ಸ್ಥಿತಿ ಉತ್ತಮಗೊಂಡಿತು. ವಿದ್ಯಾವಂತರಾದವರು ಈ ಸಮಸ್ಯೆಯನ್ನು ಹೋಗಲಾಡಿಸುವ ಬದಲಾಗಿ ಹೆಚ್ಚಲು ಕಾರಣರಾದರು. ಓದಿ ವಿದ್ಯಾವಂತರಾದಂತೆ ಹುಡುಗರಿಗೆ ಬೇಡಿಕೆ ಹೆಚ್ಚಾಯಿತು. ಎಷ್ಟು ಹಣವನ್ನು ಕೊಟ್ಟಾದರೂ ತಮ್ಮ ಮಗಳ ಮದುವೆಯನ್ನು ಮಾಡಲು ಹೆಣ್ಣುಮಕ್ಕಳ ಪೋಷಕರು ಸಿದ್ಧರಾದರು. ಹೀಗೆ ಸ್ವಾತಂತ್ರ್ಯ ಪೂರ್ವದಲ್ಲಿ ಕಂಡು ಬಂದ ಈ ಪಿಡುಗು ಸ್ವಾತಂತ್ರ್ಯ ನಂತರವೂ ಮುಂದುವರಿದು ಈಗಲೂ ಸಹ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ಗಂಡು ಮತ್ತು ಹೆಣ್ಣಿನ ಕಡೆಯವರಿಬ್ಬರಿಗೂ ಇದೊಂದು ಪ್ರತಿಷ್ಠೆಯ ಕುರುಹಾಗಿದೆ. ಗಂಡು ಹಡೆದವರಿಗಂತು ಇದು ಸುಲಭವಾಗಿ ಹಣ ಸಂಪಾದಿಸುವ ಮಾರ್ಗವಾಗಿದೆ. ಅದರಲ್ಲೂ ಹುಡುಗ ಉನ್ನತ ಹುದ್ದೆಯಲ್ಲಿದ್ದರೆ ಅವರ ಬೇಡಿಕೆ ಹೆಚ್ಚಾಗಿರುತ್ತದೆ. ಹಾಗೆ ಹುಡುಗ ಡಾಕ್ಟರ್ , ಇಂಜನಿಯರ್ ಅಥವಾ ಸರ್ಕಾರಿ ನೌಕರನಾಗಿದ್ದರೆ ಹೆತ್ತವರೆ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ತಮ್ಮ ಮಕ್ಕಳ ಬೆಲೆಯನ್ನು ಅವರೆ ನಿರ್ಧರಿಸುತ್ತಾರೆ.ಇನ್ನು ಹೆಣ್ಣು ಹಡೆದವರು ಸಹ ಡಾಕ್ಟರ್, ಇಂಜಿನಿಯರ್ ವರಗಳನ್ನೆ ಹುಡುಕಿ ಸಾಲ ಮಾಡಿಯಾದರೂ ವರದಕ್ಷಿಣೆ ಕೊಟ್ಡು ಮದುವೆ ಮಾಡುತ್ತಾರೆ. ಕೆಲವರು ವರದಕ್ಷಿಣೆ ಜೊತೆಗೆ ಮನೆ, ವಾಹನ, ಒಡವೆ ಮೊದಲಾದವುಗಳನ್ನು ಕೊಡಬೇಕೆಂದು ಒತ್ತಾಯಿಸುತ್ತಾರೆ. ಮಗಳ ಸುಖವಾಗಿರುತ್ತಾಳೆ ಎಂಬ ನಂಬಿಕೆಯಿಂದ ಮತ್ತಷ್ಟು ಸಾಲ ಮಾಡಿ ಕೊಡಲು ಒಪ್ಪುತ್ತಾರೆ. ಆದರೆ ಈ ಪರಿಸ್ಥಿತಿಯಲ್ಲಿ ಆ ಹೆಣ್ಣು ಮಗಳು ಸುಖವಾಗಿರುತ್ತಾಳಾ ಎಂಬುವುದು ಪ್ರಶ್ನಾರ್ಹ. ಹೀಗೆ ಮದುವೆ ಎಂಬುವುದು ಒಂದು ವ್ಯಾಪಾರದಂತಾಗಿದೆ. ಪರಿಣಾಮಗಳು ಸಂಸಾರ ಸಮಾಜದ ಒಂದು ಅಂಗ .ಈ ಸಂಸಾರದಲ್ಲೆ ಹೆಣ್ಣು ಮತ್ತು ಗಂಡು ಎಂದು ತಾರತಮ್ಯ ಮಾಡುತ್ತಿರುವುದರಿಂದ ಸಮಾಜದಲ್ಲೂ ಸಹ ಸ್ತ್ರೀಯರ ಸ್ಥಾನ ಕಡಿಮೆಯಾಗುತ್ತಿದೆ. ವರದಕ್ಷಿಣೆಗಾಗಿ ಹೆಣ್ಣುಮಕ್ಕಳ ಮೇಲೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಡಲಾಗುತ್ತಿದೆ. ವರದಕ್ಷಿಣೆಯ ಆಸೆಯಿಂದ ಕಿರುಕುಳ ನೀಡಿ ಎಷ್ಟೋ ಹೆಣ್ಣುಮಕ್ಕಳ ಕೊಲೆಯನ್ನು ಮಾಡಲಾಗುತ್ತಿದೆ. ಎಷ್ಟೋ ಹೆಣ್ಣುಮಕ್ಕಳು ಕಿರುಕುಳ ತಡೆಯಲಾರದೆ ತಾವೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಹೆಣ್ಣುಮಕ್ಕಳು ಪೋಷಕರಿಗೆ ಕಷ್ಟವೆಂದು ಮದುವೆಯನ್ನೆ ಮಾಡಿಕೊಳ್ಳುವುದಿಲ್ಲ. ವಿಚ್ಛೇದನೆಗಳು ಹೆಚ್ಚುತ್ತಿವೆ. ಇದರಿಂದ ವಿಚ್ಛೇದಿತರ ಮಕ್ಕಳು ಮಾನಸಿಕವಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಂದುವರಿದ ತಂತ್ರಜ್ಞಾನದಿಂದ ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣುಭ್ರೂಣವನ್ನು ಹತ್ಯೆ ಮಾಡಲಾಗುತಿದೆ. ಇದರಿಂದ ಹೆಣ್ಣುಮಕ್ಕಳ ಜನನದ ಪ್ರಮಾಣ ಇಳಿಮುಖವಾಗುತ್ತಿದೆ. ಇಷ್ಟೆಲ್ಲಾ ದುಷ್ಪರಿಣಾಮ ಬೀರುವ ಈ ವರದಕ್ಷಿಣೆ ಎಂಬ ಪಿಡುಗನ್ನು ನಿರ್ಮೂಲನ ಮಾಡಲು ಆಗಿನಿಂದಲು ಪ್ರಯತ್ನಗಳು ನಡೆಯುತ್ತಲೆಯಿದೆ. ಅನೇಕ ಸಮಾಜ ಸುಧಾರಕರು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದರಾದರೂ ಸಾಧ್ಯವಾಗುತ್ತಿಲ್ಲ. ಸರ್ಕಾರ ವರದಕ್ಷಿಣೆ ನಿಷೇಧ ಕಾಯಿದೆ ತಂದಿದ್ದರೂ ಸಹ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತಿಲ್ಲ. ವರದಕ್ಷಿಣೆ ಕಾನೂನುಬಾಹಿರ ಎಂದು ಸರ್ಕಾರ ಅನುಮೋದಿಸುವುದರಿಂದ ಇದು ಉಡುಗೊರೆ ಎಂಬ ಇನ್ನೊಂದು ರೂಪವನ್ನು ತಾಳಿದೆ. ಹೀಗೆ ಈ ಅನಿಷ್ಟ ಪಿಡುಗನ್ನು ಹೋಗಲಾಡಿಸಲು ಏನೆಲ್ಲಾ ಪ್ರಯತ್ನ ಮಾಡಿದರು, ಏನೆಲ್ಲಾ ಕಾನೂನುಗಳನ್ನು ಜಾರಿಗೆ ತಂದರೂ ಸಹ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇಂದಿನ ಯುವಶಕ್ತಿ ಎಚ್ಚೆತ್ತುಕೊಂಡು ವರದಕ್ಷಿಣೆಯನ್ನು ತೆಗೆದುಕೊಳ್ಳುವುದನ್ನು ಮತ್ತು ಕೊಡುವುದನ್ನು ಪ್ರತಿಭಟಿಸದಲ್ಲಿ ಮಾತ್ರ ಈ ಸಾಮಾಜಿಕ ಪಿಡುಗನ್ನು ನಿರ್ಮೂಲನ ಮಾಡಬಹುದು. ವರದಕ್ಷಿಣೆಯನ್ನು ಕೇಳುವುದು ಎಷ್ಟು ಶಿಕ್ಷಾರ್ಹವೊ ಕೊಡುವುದು ಅಷ್ಟೇ ಶಿಕ್ಷಾರ್ಹವೆಂದು ಪೋಷಕರು ಅರಿಯಬೇಕು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಿ ಅವರಲ್ಲಿ ಜಾಗೃತಿಯನ್ನು ಮೂಡಿಸಬೇಕು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಡುವುದರಿಂದ ಉದ್ಯೋಗವನ್ನು ಮಾಡಲು ಮುಂದಾಗುವಳು ಹಾಗೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ವರದಕ್ಷಿಣೆ ಕೊಟ್ಟು ವಿವಾಹವಾಗಲು ಪ್ರತಿಭಟಿಸುವಳು ಸರ್ಕಾರ ಕಾನೂನುಗಳನ್ನು ಜಾರಿಗೆ ತರುವುದರೊಂದಿಗೆ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಸರ್ಕಾರದ ಜೊತೆಜೊತೆಯಲ್ಲಿ ಅನೇಕ ಸಂಘ,ಸಂಸ್ಥೆಗಳು ಕೈ ಜೋಡಿಸಿ ಜನರಲ್ಲಿ ಅರಿವು ಮೂಡಿಸಬೇಕು. ಮಾಧ್ಯಮಗಳು ಸಹಾ ಜಾಹೀರಾತಿನ ಮೂಲಕ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಹೀಗೆ ಸರ್ಕಾರದ ಜೊತೆ ಎಲ್ಲರು ಕೈ ಜೋಡಿಸಿದಾಗ ಈ " ವರದಕ್ಷಿಣೆ " ಎಂಬ ದೊಡ್ಡ ಪಿಡುಗನ್ನು ನಿರ್ಮೂಲನೆ ಮಾಡಬಹುದು. 

- ವಿಜಯಲಕ್ಷ್ಮಿ ಎಂ. ಎಸ್

ಕಾಮೆಂಟ್‌ಗಳಿಲ್ಲ: